Sunday, October 8, 2017

ಹಣಕಾಸು ಮಸೂದೆ 2017 : ಬವಣೆಯೊ ಅಥವಾ ಬದಲಾವಣೆಯೂ .. ?

ನೀವು ಸರ್ಕಾರೀ ಅಧಿಕಾರಿಗಳಾಗಿದ್ದರೆ, ಲಂಚಬಾಕರಾಗಲಿದ್ದರೆ, ಅಕ್ರಮ ಆಸ್ತಿಯನ್ನು ಸಂಪಾದಿಸಿಕೊಂಡಿದ್ದರೆ ಸ್ವಲ್ಪ ಜೋಕೆ! ಈ ಎಚ್ಚರಿಕೆಯನ್ನು ಸುಮಾರು ಅರ್ದ ವರ್ಷಗಳ ಮೊದಲೇ ಕೊಡಬೇಕಾಗಿಡಿತು, ಕ್ಷಮೆಯಿರಲಿ! ಇನ್ನು ಮುಂದೆ ಅಕ್ರಮ ಸಂಪಾದನೆಗಳ ಮೇಲೆ ದಾಳಿ ಮಾಡುವ IT ಅಧಿಕಾರಿಗಳು ಮೀನಾ ಮೇಷ ಎಣಿಸದೆ, ಕನಿಷ್ಠ ಒಂದಿಷ್ಟೂ ಸುಳಿವನ್ನೂ ನೀಡದೆ ಯಾವುದೇ ಸಮಯದಲ್ಲಾದರೂ ಮನೆಗೆ ನುಗ್ಗಬಹುದು ಅಲ್ಲದೆ ಇನ್ನು ಮುಂದೆಲ್ಲ ಹಿಂದಿನಂತೆ ಇತ್ತ IT ಅಧಿಕಾರಿಗಳು ಮನೆಯನ್ನು ಜಾಲಾಡುತ್ತಿದ್ದರೆ ಗೊತ್ತಿಲ್ಲದಂತೆ ತನ್ನ ಲಾಯರಿನ ಮೂಲಕ ಕೋರ್ಟಿನ ಬಾಗಿಲು ತಟ್ಟುವ ಅವಕಾಶವೂ ಆ ವ್ಯಕ್ತಿಗೆ ಇರುವುದಿಲ್ಲ. ಈ ವಿಷಯ ಅದೆಷ್ಟು ಜನರಿಗೆ ಸಂತಸವನ್ನು ತರುತ್ತದೋ ಅಥವಾ ಆಕಾಶವೇ ತಲೆ ಮೇಲೆ ಬಿದಂತೆ ಮಾಡುತ್ತದೋ ಅದು ಅವರವರ ನಾಮಕ್ಕೆ ಹಾಗು ಬಕುತಿಗೆ ಬಿಟ್ಟದು. ಒಟ್ಟಿನಲ್ಲಿ ಇಂತಹ ಹಲವಾರು ಬದಲಾವಣೆಯೊಂದಿಗೆ ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಫೈನಾನ್ಸ್ ಬಿಲ್ (ಹಣಕಾಸು ಮಸೂದೆ) ಜಾರಿಗೊಂಡಿದೆ. ಮಾಧ್ಯಮಗಳಲ್ಲಿ ಅಷ್ಟೇನೂ ಚರ್ಚೆಗೆ ಗ್ರಾಸವಾಗಾದ ಅಥವಾ ನಿಜವಾಗಿಯೂ ಅಂತಹ ಮಹಾ ಬದಲಾವಣೆಗಳೇನೂ ಇಲ್ಲದ ಕಾರಣಕ್ಕೋ ಏನೋ(!) ಈ ಮಸೂದೆ ಅತ್ತ ಕಿವಿಯಿಂದ ಒಳನುಸುಳಿ ಇತ್ತ ಕಿವಿಯಿಂದ ಮರೆಯಾಯಿತು. ಆದರೂ ಇಷ್ಟು ತಿಂಗಳುಗಳ ನಂತರ ಈ ಬಿಲ್ಲಿನಲ್ಲಿರುವ ಕೆಲವು ಮಹತ್ವದ ಅಂಶಗಳನ್ನು ಅವುಗಳನ್ನು ನಾವು ಮರೆಸಿಕೊಳ್ಳುವ ಮುನ್ನ ಕೆದಕುವ ಮನಸ್ಸಾಯಿತು.


ಕೇವಲ ಲೋಕಸಭೆಯ ಸದಸ್ಯರುಗಳ ಅನುಮತಿಯೊಂದಿಗೆ ಜಾರಿಯಾಗಬಲ್ಲ ಮಸೂದೆಗಳಲ್ಲಿ ಹಣಕಾಸು ಮಸೂದೆಯೂ ಒಂದು. ಪ್ರಸ್ತುತ ಅಧಿಕಾರದಲ್ಲಿರುವ ಬಹುಮತ ಸರಕಾರದ ಪರಿಣಾಮ ಇಂತಹ ಹಲವಾರು ಮಸೂದೆಗಳನ್ನು ನೀರು ಕುಡಿದಂತೆ ಸಂಸತ್ತಿನಲ್ಲಿ ಪಾಸುಮಾಡಬಹದುದು. ಉದ್ದೇಶ ಸಾತ್ವಿಕವಾಗಿದ್ದು, ಪಾರದರ್ಶಕವಾಗಿ ಯಾವುದಾದರೊಂದು ಕಾನೂನನ್ನು ಜಾರಿಗೊಳಿಸಲು ಇಂತಹ ಬಹುಮತ ಸರಕಾರಗಳಿಗೆ ಇದು ಸುವರ್ಣಾವಕಾಶ. ಅದೇನೇ ಇರಲಿ ಸದ್ಯಕ್ಕೆ ಜಾರಿಯಾಗಿರುವ ಫೈನಾನ್ಸ್ ಬಿಲ್ ಸಹ ಇಂತಹದ್ದೇ ಒಂದು ಲೋಕಸಭೆಯಬಹುಒಮ್ಮತದ ಕಾನೂನಾಗಿದೆ ಹಾಗು ಸಾಮಾನ್ಯನೆಂಬ ಕುರುಡನಿಗೆ ಆಕಾಶದ ನಕ್ಷತ್ರವನ್ನು ತೋರಿದಂತಿದೆ!

1. ಇನ್ನು ಮುಂದೆ ಖಾಸಗಿ ಕಂಪನಿಗಳು ರಾಜಕೀಯ ಪಕ್ಷಗಳಿಗೆ ನೀಡುವ ಡೊನೇಷನ್ ಮೊತ್ತಕ್ಕೆ ಯಾವುದೇ ಬೇಲಿಯಿಲ್ಲ ಹಾಗು ಅಂತಹ ಕಂಪನಿಗಳಿಗೂ ಈ ರವಾನೆಗಳನ್ನು ‘ನೋಟ್’ಮಾಡಿಕೊಳ್ಳುವ ಅಗತ್ಯತೆ ಇಲ್ಲ! ಹೌದು, ಕಳೆದ ವರ್ಷದವರೆಗೂ ಕೇವಲ 7.5% ನಷ್ಟೇ ಹಣವನ್ನು (ಒಂದು ಕಂಪನಿಯ ಮೂರು ವರ್ಷದ ನಿವ್ವಳ ಲಾಭದ ಸರಾಸರಿಯ 7.5%) ಮಾತ್ರ ಪಕ್ಷವೊಂದಕ್ಕೆ ದೇಣಿಗೆಯ ರೂಪದಲ್ಲಿ ನೀಡಬಹುದಾಗಿದ್ದ ಕಾನೂನಿನ ನಿಯಮವನ್ನು ಗಾಳಿಗೆ ತೂರಿದ ಮಸೂದೆ ಈ ಬಾರಿ ಯಾವುದೇ ಕಂಪನಿಯಾಗಲಿ, ಅದೆಷ್ಟೇ ಹಣವನ್ನು ಆಗಲಿ, ತಮಗೆ ಹತ್ತಿರುವಿರುವ/ಸಹಕರಿಸುವ, ಅಧಿಕಾರದಲ್ಲಿರುವ/ವಿಪಕ್ಷಲ್ಲಿರುವ ಯಾವುದೇ ಪಕ್ಷಕ್ಕಾದರೂ ಸುರಿಯಬಹುದು. IT ಅಧಿಕಾರಿಗಳೂ ಇಲ್ಲಿ ಕಂಪನಿಯನ್ನು ಪ್ರೆಶ್ನಿಸಲಾರರು! ಅಲ್ಲದೆ ವಿದೇಶದಿಂದ ರಾಜಕೀಯ ಪಕ್ಷಗಳಿಗೆ ಬರುವ ಚಂದಾವನ್ನೂ ಕಳೆದ ಬಾರಿ 'ಲೀಗಲ್' ಮಾಡಿಯಾಗಿದೆ. ಇಂತಹುಗಳ ಮದ್ಯೆ ದೇಶವನ್ನು ನೆಡೆಸುವುದು ಜನರಿನದ ಆರಿಸಲ್ಪಟ್ಟ ಸರ್ಕಾರವೇ ಅಥವಾ ಈ ರೀತಿ ತೆರೆಮರೆಯ ಚೋರನಂತೆ ಬಿಗಿಹಿಡಿತವನ್ನು ಸಾಧಿಸಬಲ್ಲ ದೇಶೀ ಹಾಗು ವಿದೇಶಿ ಕಂಪನಿಗಳೇ ಎಂಬ ಸಂಶಯ ಇಲ್ಲಿ ಮೂಡದೇ ಇರದು?!

2. IT ACT 1962 ರ ಪ್ರಕಾರ ಯಾವುದೇ IT ದಾಳಿ ನೆಡೆಯುವ ಮುನ್ನ ಅಲ್ಲೊಂದು ಬಲವಾದ ಕಾರಣವಿರಬೇಕು. ಅದನ್ನೇ ಕಾನೂನಿನ ಚೌಕಟ್ಟಿನಲ್ಲಿ ‘Reason to Believe' ಎಂದು ಕರೆಯಲಾಗುತ್ತದೆ. ಇಲ್ಲಿ ಅಕ್ರಮವಾಗಿ ಕೂಡಿಟ್ಟುರುವ/ಗಳಿಸಿಕೊಂಡಿರುವ ಹಣ ಅಥವಾ ಚಿನ್ನ ಅಥವಾ ಆಸ್ತಿ ಅಥವಾ ಇವೆಲ್ಲವೂ ಆದರೂ ಸರಿಯೇ ಒಟ್ಟಿನಲ್ಲಿ ದಾಳಿಯನ್ನು ನೆಡೆಸುವ ಅಧಿಕಾರಿ ತಾನು ದಾಳಿ ನೆಡೆಸುತ್ತಿರುವ ನಿಖರ ವಿಷಯದ ಬಗ್ಗೆ ತನ್ನ ಮೇಲಧಿಕಾರಿಯಲ್ಲ್ಲಿ ಅನುಮತಿಯನ್ನು ಪಡೆದು ತದಾನಂತರ ಭ್ರಷ್ಟರ ಮನೆ ಆಫೀಸುಗಳಿಗೆ ಲಗ್ಗೆ ಇಡಬಹುದಾಗಿತ್ತು. ಪ್ರಸ್ತುತ ಕಾನೂನು ಇಂತಹ ಒಂದು ನಿಯಮವನ್ನು ಇಲ್ಲವಾಗಿಸಿದೆ. ಬಿಕರಿಯಾಗಿರುವ ವ್ಯವಸ್ಥೆಯಲ್ಲಿ IT ಇಲಾಖೆಯ ಮೇಲೆ ಒಂದಿಷ್ಟು ಭಯ ಭಕ್ತಿ ಉಳಿಯಬೇಕು ಎಂದರೆ ಇಂತಹ ನಿರ್ಧಾರಗಳೇನೋ ಅತ್ಯವಶ್ಯಕ. ಆದರೆ ಇದೆ ಕಾನೂನನ್ನು ಅಧಿಕಾರದಲ್ಲಿರುವ ಸರ್ಕಾರಗಳು ತಮ್ಮ ವಿರೋಧಿಗಳನ್ನು ಮಟ್ಟ ಹಾಕಲು ಮಾತ್ರ ಬಳಸಿಕೊಂಡರೆ ಇದಕ್ಕಿಂತ ದುರಂತ ಮತ್ತೊಂದಿರುವುದಿಲ್ಲ.

3. ಮಾತೆತ್ತಿಯರೇ ಪಾರದರ್ಶಕತೆ ಎನ್ನುವ ನಮ್ಮ ಸರ್ಕಾರಗಳು ಆ ನಿಟ್ಟಿನಲ್ಲಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಮಾತ್ರ ಹಲವರಲ್ಲಿ ದಿಗಿಲನ್ನುಟ್ಟಿಸುತ್ತವೆ. ಪ್ರಸ್ತುತ ಕಾನೂನಿನಲ್ಲಿ ಈ ಪಾರದರ್ಶಕತೆ ಎಂಬ ವಿಶೇಷಣಕ್ಕೆ ಇಂಬು ಕೊಡುವಂತೆ 'ಎಲೆಕ್ಟ್ರೋರಿಯಾಲ್ ಬಾಂಡ್' ಎಂಬೊಂದು ನೀತಿಯನ್ನು ಜಾರಿಗೊಳಿಸಲಾಯಿತು. ಅದೇನೆಂದರೆ ಇನ್ನು ಮುಂದೆ ಯಾವುದೇ ರಾಜಕೀಯ ಪಕ್ಷಗಳಿಗೆ ದೇಣಿಗೆಯ ರೂಪದಲ್ಲಿ ಹಣವನ್ನು ನೀಡಬಯಸಿದರೆ ಅಬ್ಬಬ್ಬಾ ಎಂದರೆ 2000 ರೂಪಾಯಿಗಳನಷ್ಟೇ ನೀಡಬಹುದು. ಒಂದುಪಕ್ಷ ಅದಕ್ಕಿಂತ ಹಚ್ಚಿನ ಹಣವನ್ನು ನೀಡುವ 'ಅಗತ್ಯತೆ' ಏನಾದರು ನಿಮಗೆ ಬಂದರೆ ಆಗ ನೀವು ಎಲೆಕ್ಟ್ರೋರಿಯಾಲ್ ಬಾಂಡ್ ಗಳನ್ನೇ ಖರೀದಿಸಬೇಕು. ನೀವು ಬ್ಯಾಂಕುಗಳಿಗೆ ನೀಡುವ ಹಣದ ಮೊತ್ತದ ಸರಿಸಮನಾಗಿ ಆಯಾ ಬ್ಯಾಂಕುಗಳು ನಿಮಗೆ ಕರಾರುಪತ್ರವೊಂದನ್ನು ನೀಡುತ್ತವೆ. ಇದನ್ನೇ ವಿತ್ತವಲಯಲ್ಲಿ ಎಲೆಕ್ಟ್ರೋರಿಯಾಲ್ ಬಾಂಡ್ ಎಂದು ಕರೆಯಲಾಗುತ್ತದೆ. ಇಂತಹ ಬಾಂಡ್ ಗಳನ್ನು ನೀವು ತಮಗಿಷ್ಟವಾದ ಪಕ್ಷದ ಖಾತೆಗಳೆಗೆ ಮನಃಪೂರ್ವಕವಾಗಿ ಜಮಾವಣೆಮಾಡಬಹುದು. ಆದರೆ ಪಾರದರ್ಶಕತೆಯ ಹಿನ್ನಲೆಯಲ್ಲಿ ಇಂತಹ ಎಲೆಕ್ಟ್ರೋರಿಯಾಲ್ ಬಾಂಡ್ ಗಳು ಅದೆಷ್ಟು ಪ್ರಸ್ತುತ ಎಂಬುದೇ ಪ್ರೆಶ್ನೆ. ಏಕೆಂದರೆ ದೊಡ್ಡ ದೊಡ್ಡ ದೇಣಿಗೆಯನ್ನು ದೇಶದ ಹಿರಿಯ ಕಂಪೆನಿಗಳಿಂದ, ವ್ಯಕ್ತಿಗಳಿಂದ ಸ್ವೀಕರಿಸುವ ರಾಜಕೀಯ ಪಕ್ಷಗಳು ಕೊಟ್ಟವರ ನಾಮವನ್ನು ಅನಾವರಣಗೊಳಿಸದಿದ್ದರೆ ಏನು ಬಂತು? ಯಾವ ಬಗೆಯಿಂದ ಈ ನಿಯಮ ಪಾರದರ್ಶಕತೆಯ ಪರಿಧಿಯೊಳಗೆ ಬರುತ್ತದೆ?

4. ಇವೆಲ್ಲ ವಿಷಯಗಳಿಗಿಂತ ಮಿಗಿಲಾದ ಹಾಗು ಮಹತ್ವಪೂರ್ಣವಾದ ವಿಚಾರವೆಂದರೆ the way the Bill has been Implemented. ಉದಾಹರಣೆಗೆ ಈಗ ನೀವೊಂದು ಹೊಸ ಕಾನೂನನ್ನುದೇಶದಾದ್ಯಂತ ತರಲು ಇಚ್ಛಿಸುತ್ತೀರ ಎಂದಿಟ್ಟುಕೊಳ್ಳಿ. ಅಂತಹ ಯಾವುದೇ ಕಾನೂನುಗಳು ಮೊದಲು ಲೋಕಸಭೆ ನಂತರ ರಾಜ್ಯಸಭೆಯಲ್ಲಿ ಚರ್ಚೆಗೊಂಡು, ತೇರ್ಗಡೆಗೊಂದು, ರಾಷ್ಟ್ರಪತಿಯವರ ಅಂಕಿತಕ್ಕೆ ಹೋಗಿ ತದನಂತರ ದೇಶದಾದ್ಯಂತ ಕಾನೂನಾಗಿ ಜಾರಿಗೊಳ್ಳುತ್ತದೆ. ಆದರೆ ಕೆಲವು ಮಸೂದೆಗಳು ಕಾನೂನಾಗಿ ಜಾರಿಗೊಳಲು ಕೇವಲ ಲೋಕಸಭೆಯ ಸರ್ವಾನುಮತದ ಒಪ್ಪಿಗೆಯಷ್ಟೇ ಸಾಕು. ಅಂತಹ ಕೆಲವು ಮಸೂದೆಗಳಲಿ ಹಣಕಾಸು ಮಸೂದೆಯೂ ಒಂದು. ಈಗ ನೀವು ಇಚ್ಛಿಸುತ್ತಿರುವ ಕಾನೂನು ಬೇರೆ ಯಾವುದಾದರೊಂದು ಮಸೂದೆಯಾಗಿದ್ದರೆ ಮೇಲ್ಮನೆ (ರಾಜ್ಯಸಭೆ) ಹಾಗು ಕೆಳಮನೆ (ಲೋಕಸಭೆ) ಯ ಅನುಮತಿಗೆ ಕಾದುಕೂರಬೇಕಿತ್ತು. ಆದರೆ ಒಂದು ಪಕ್ಷ ನೀವೇನಾದರೂ ಆ ಮಸೂದೆಯನ್ನು ಹಣಕಾಸು ಮಸೂದೆಯೊಟ್ಟಿಗೆ ಸೇರಿಸಿ ಕೈ ತೊಳೆದುಕೊಂಡು ಕುಳಿತರೆ ನಿಮ್ಮ ಕೆಲಸ ಭಾಗಶಃ ಆದಂತೆಯೇ! ನೀವು ಇಚ್ಛಿಸಿದ ಕಾನೂನು ನಿಜವಾದ ಹಣಕಾಸು ಮಸೂದೆಯೊಟ್ಟಿಗೆ ಸೇರಿ ಕೇವಲ ಲೋಕಸಭೆಯ ಅನುಮತಿಯೊಂದಿಗೇ ಪಾಸಾಗಿಬಿಡುತ್ತದೆ. ಅಲ್ಲದೆ ಮೊದಲೇ ಹೇಳಿದಂತೆ ಲೋಕಸಭೆಯಲ್ಲಿ ಮೆಜಾರಿಟಿ ಸದಸ್ಯರು ಒಂದೇ ಪಕ್ಷದವರಾಗಿದ್ದರೆ (ಪ್ರಸ್ತುತ ಲೋಕಸಭೆಯಂತೆ) ಅವರು ಆಡಿದ್ದೇ ಆಟ, ಹೇಳಿದ್ದೆ ಪಾಠ! ಪ್ರಸ್ತುತ ಫೈನಾನ್ಸ್ ಬಿಲ್ಲಿನಲ್ಲಿ ಇದೇ ರೀತಿ ಐಟಿ ರೇಡ್, ವಿದೇಶಿ ದೇಣಿಗೆ ಎಂಬ ಹಲವಾರು ವಿಷಯಗಳನ್ನು ಸೇರಿಸಿ, ಅವುಗಳಿಗೆ ಹಣಕಾಸು ಮಸೂದೆಎಂಬ ಬಣ್ಣವನ್ನು ಲೇಪಿಸಿ,ದೇಶದ ಎರಡೂ ಸದನಗಳಲ್ಲಿ ಕೂಲಂಕೂಷವಾಗಿ ಚರ್ಚಿಸದೆ ಏಕಮುಖವಾಗಿ ಕಾನೂನನ್ನು ಜಾರಿಗೆ ತರಲಾಗಿದೆ ಹಾಗು ಇದು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಬಹಳ ಆತಂಕದ ವಿಚಾರ ಎಂಬುದು ಹಲವು ವಿತ್ತಪಂಡಿತರ ಅಭಿಪ್ರಾಯ.


ಇವುಗಳನ್ನು ಹೊರತುಪಡಿಸಿ ಕಾರ್ಪೊರೇಟ್ ಟ್ಯಾಕ್ಸ್ ನಲ್ಲಿ ಇಳಿಕೆ, ಸ್ಟಾರ್ಟ್-ಅಪ್ಸ್ ಗಳಿಗೆ ತೆರಿಗೆಯಲ್ಲಿ ವಿನಾಯಿತಿ ಎಂಬ ಕೆಲವು ಬಹುಪಯೋಗಿ ಅಂಶಗಳನ್ನೂ ಈ ಫೈನಾನ್ಸ್ ಬಿಲ್ಲಿನಲ್ಲಿ ಅಳವಡಿಸಲಾಗಿದೆ. ಆದರೆ ಯಾವುದೇ ಕಾನೂನಾಗಲಿ ಅದು ಸಂವಿಧಾನಿಕವಾಗಿ, ಸರ್ವಾನುಮತದ ಅನುಮತಿಯ ವಿನಃ ಜಾರಿಗೊಂಡರೆ/ಜಾರಿಗೊಳಿಸಿದರೆ ಮುಂಬರುವ ಪೀಳಿಗೆಯೂ ಅದೇ ಚಾಳಿಯನ್ನು ಬೆಳಿಸಿಕೊಂಡು ಪ್ರಜಾತಂತ್ರತೆಯಂಬ ಕೋಟೆಯನ್ನು ಅದ್ವಾನವನ್ನಾಗಿ ಮಾಡಿಬಿಡಬಹುದು. ಅಲ್ಲದೆ ದೇಶದ ಜನತೆಯೂ ಜಾರಿಗೊಳ್ಳುವ ಪ್ರತಿ ಕಾನೂನನ್ನೂ ಕೂಲಂಕುಷವಾಗಿ ಅರಿತುಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಪ್ರೆಶ್ನಿಸಬೇಕು. ಪಕ್ಷಾತೀತವಾಗಿ. ಮನೆಯಲ್ಲಿ ಅಪ್ಪ ಜೋಜಾಡಿಕೊಂಡು ಹಣವನ್ನು ಕಳೆದುಕೊಂಡು ಬಂದರೆ ಮನೆಯವರು ಆತನನ್ನು ತಿದ್ದಲು ಪ್ರತ್ನಿಸುತ್ತಾರೆಯೇ ವಿನಃ ಅದನ್ನು ಪಕ್ಕದ ಮನೆಯವರೊಟ್ಟಿಗೆ ಹೇಳಿಕೊಂಡು ವ್ಯಂಗ್ಯಮಾಡುವುದಿಲ್ಲ! ಅಲ್ಲವೇ?

No comments:

Post a Comment