Thursday, November 9, 2017

ಸಮಾಜಸೇವೆ ಮಾಡಲು ರಾಜಕಾರಣವೆಂಬ ಅಸ್ತ್ರವೇ ಬೇಕೇ ಅಥವಾ ಮನೆಯಲ್ಲಿನ ಗಂಟು ಮೂಟೆಗಳ ಸಂಪತ್ತೇ ಸಾಕೆ?

ಸಮಾಜಸೇವೆ. ಅದೇನೇ ಹೇಳಿದರೂ ಈ ಪದವನ್ನು ಕೇಳಿದಾಗ ಮೊದಲಿಗೆ ಕಣ್ಣ ಮುಂದೆ ಬರುವವರಂತೂ ರಾಜಕಾರಣಿಗಳೆ! ಒಪ್ಪಿಕೊಳ್ಳಿ. ದೇಶದ ರಾಜಕೀಯ ಹಾಗು ಸಮಾಜಸೇವೆ ಎನ್ನುವ ಪದಗಳಿಗೆ ಅವಿನಾಭಾವ ಸಂಬಂಧ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಚುನಾವಣೆಯ ಘಳಿಗೆ ಸಮೀಪಿಸುತ್ತಿದಂತೆ, ನಾಟಕದಲ್ಲಿ ತನ್ನ ಪಾತ್ರ ಬಂದಾಗ ಮಾತ್ರ ವೇದಿಕೆಯ ಮೇಲೆ ಬಂದು ನಂತರ ಮಾಯವಾಗುವ ನಟ ನಟಿಯರಂತೆ ರಾಜಕಾರಣಿಗಳು ಚುನಾವಣೆಯ ಸುಮೂಹರ್ತದಲ್ಲಿ ತಮ್ಮ ದಂಡಿನ ಮೂಲಕ ಮನೆ ಮೆನೆಯ ಮುಂದೆ ಪ್ರತ್ಯಕ್ಷರಾಗಿಬಿಡುತ್ತಾರೆ. ಕಳೆದ ಬಾರಿಯ ಚುನಾವಣೆಯ ಪುಳ್ಳಂಗೋವಿಯನ್ನೇ ಈ ಬರಿ ಕೊಂಚ ಅಪ್-ಗ್ರಡೆಡ್ ಪದಗಳಲ್ಲಿ ಉಚ್ಚರಿಸಿ, ಬಡವರ ಮನೆಯ ಉಪ್ಪು ಉಪ್ಪಿನಕಾಯಿಯನ್ನು ಚಪ್ಪರಿಸಿ, ತಮ್ಮ ಗುಡಾಣದ ಹೊಟ್ಟೆಯನ್ನು ಪ್ರದರ್ಶನ್ನಕ್ಕಿಟ್ಟಿರುವಂತೆ ತೂಗುತ್ತ-ವಾಲುತ್ತಾ ಸಾಗುವ ಇವರನ್ನು ಯಾರೋ ಒಂದಿಬ್ಬರು ಬಿಸಿ ರಕ್ತದ ಯುವಕರು 'ಯಾಕ್ರೀ ನಿಮ್ಗೆ ರಾಜಕಾರಣ? ಒಂದು ಹುಲ್ಲುಕಡ್ಡಿಯನ್ನ ಇಲ್ಲಿಂದ ಎತ್ತಿ ಅಲ್ಲಿಗೆ ಇಡಿಸೋ ತಾಕತ್ ಇಲ್ಲ ಅಂದ್ಮೇಲೆ ನಿಮ್ಗೆ ಯಾಕ್ ಬೇಕು ರಾಜಕೀಯ?' ಎಂದು ಕೇಳಿದರೆ ಬರುವ ಏಕೈಕ ಉತ್ತರ, 'ಸಮಾಜಸೇವೆ'

ಇತ್ತೀಚಿಗೆ ಸಮಾಜಸೇವೆ ಎಂಬುದು ಆಪತ್ಕಾಲದ ಆಕ್ಸಿಜೆನ್ ನಂತೆ ರಾಜಕಾರಣಿಗಳಿಗೆ ತನ್ನ ತಪ್ಪನೆಲ್ಲ ಮುಚ್ಚಿ ಮರೆಮಾಡುವ ಏಕೈಕ ಸಾಧನದಂತೆ ಆಗಿರುವುದಂತೂ ಸುಳ್ಳಲ್ಲ. ಕಳ್ಳಕಾಕರಿಂದ ಇಡಿದು ರೌಡಿ ಶೀಟರ್ಗಳೂ ಇಂದು ರಾಜಕಾರಣಕ್ಕೆ ಧುಮುಕಬೇಕಾದರೆ ಅವರಿಗಿರುವ ಏಕೈಕ ಅರ್ಹತೆಯಂದರೆ ಅದು ಸಮಾಜಸೇವೆಯ ಹೊರೆ. ಇದು ಒಂತರ ಗಬ್ಬು ನಾರುವ ಕಾರ್ಪೊರೇಟ್ ತೊಟ್ಟಿಯ ಮುಂದೆಯೆ ನಿಂತು ಶುಚಿತ್ವದ ಬಗ್ಗೆ ಭಾಷಣ ಬಿಗಿದಂತೆ. ತಮಾಷೆ ಎಂದರೆ ಇಂದು ಹುಟ್ಟುವಾಗಲೇ ಚಿನ್ನದ ತಟ್ಟೆಯೊಟ್ಟಿಗೆ ಆಡಿ ಬೆಳೆಯುವ ರಾಜಕಾಣಿಗಳ ಮಕ್ಕಳು ಮೊದಲ ಇಪ್ಪತ್ತು ಇಪ್ಪತೈದು ವರ್ಷ ತನ್ನ 'ಸಮಾಜಸೇವಕ' ತಂದೆಯ ‘ಸೇವೆ’ಯ ಹಣವನ್ನು ಯದ್ವಾ ತದ್ವಾ ಉಡಾಯಿಸಿ, ಓದು ಬರಹ ಗಳಿಗೂ ಒಬ್ಬ ಸಹಾಯಕನನ್ನು ಇರಿಸಿ (!), ಒಂದಿಷ್ಟು ಕೇಸು ಹಗರಣಗಳನ್ನು ಸೃಷ್ಟಿಸಿ, ಮುಚ್ಚಿಸಿ, ಕೊನೆಗೆ ಈತನಿಂದ ಮತ್ತೇನೂ ಆಗುವುದಿಲ್ಲ ಎಂದರಿತ ಅವನ/ಅವಳ, ಅಪ್ಪ/ಅಮ್ಮ, ಸ್ನಾನ-ಗೀನ ಮಾಡಿಸಿ, ಗಡ್ಡ-ಪಡ್ಡವನ್ನೆಲ್ಲ ನೀಟಾಗಿ ಬೋಳಿಸಿ, ಬಿಳಿಯ ಬಟ್ಟೆಗಳನ್ನು ತೊಡಿಸಿ, ಬಾಲದಂತೆ ಹೊಡದೆಯಲ್ಲ ಎಳೆದುಕೊಂಡು ಹೋಗಿ ಸಾವಿರಾರು ಜನರ ಮುಂದೆ ಅವನನ್ನೂ ಪ್ರತಿಷ್ಠಾಪಿಸಿ ಬಿಡುತ್ತಾರೆ, 'ಜೂನಿಯರ್ ಸಮಾಜ ಸೇವಕ’ ಎಂಬ ಅಂಕಿತ ನಾಮದೊಟ್ಟಿಗೆ! ಅಲ್ಲ, ಸಮಾಜ ಏನೆಂಬುದರ ಕಲ್ಪನೆಯೇ ಇಲ್ಲದ, ಹಸಿವು ಎಂಬುದೇನೆಂದೇ ಅರಿಯದ, ಅಪ್ಪನ ಮಕ್ಕಳನ್ನು ಸಮಾಜಸೇವೆಯ ಹೆಸರಲ್ಲಿ ದೇಶದ ನಾಳಿನ ನಾಯಕರನ್ನಾಗಿ 'ಮಾಡಲು' ಹೊರಟಿರುವ ಇಂದಿನ ಅದೆಷ್ಟೋ ರಾಜಕಾರಣಿಗಳನ್ನು ಸಮಾಜಸೇವೆಯನ್ನು ಫ್ಯಾಮಿಲಿ ಬಿಸಿನೆಸ್ ನನ್ನಾಗಿ ಯಾಕೆ ಮಾಡಿಕೊಂಡಿದ್ದೀರಿ ಸಾರ್ ಅಂದರೆ ಮಾತ್ರ ಉರಿದುಬೀಳುತ್ತಾರೆ. ಓದು ವಿದೇಶ, ಕಾರು ವಿದೇಶದ್ದು, ತೊಡುವ ಬಟ್ಟೆಯಿಂದಿಡಿದು ತಿನ್ನುವ ಊಟವೂ ವಿದೇಶದ್ದೇ ಆಗಿರುವ ಮಕ್ಕಳಿಗೆ ರಾಜಕೀಯ ಮಾತ್ರ ದೇಶದ್ದೇ ಯಾಕೆ ಬೇಕು? ಸಮಾಜ ಎಂಬುದು ವಿದೇಶದ್ಲಲೂ ಇದೆಯಲ್ಲ, ಅಲ್ಲಿನ ಸಮಾಜಸೇವೆ ಸಮಾಜಸೇವೆಯೆನಿಸಿಕೊಳ್ಳುವುದಿಲ್ಲವೇ? ಉತ್ತರ ಇಲ್ಲೇ ಇದೆ ನೋಡಿ. ಇಂದಿನ ಅದೆಷ್ಟೋ ರಾಜಕಾರಣಿಗಳ ಮಕ್ಕಳು ಒಂದೋ ಅಪ್ಪನ/ಅಮ್ಮನ ಒತ್ತಾಯದ ಮೇರೆಗೆ ಬೇಡ ಬೇಡವೆನ್ನುತ್ತಲೇ ಈ ಅಖಾಡಕ್ಕೆ ಧುಮುಕುತ್ತಾರೆ, ಇಲ್ಲವೇ ನಿರಾಯಾಸವಾಗಿ ಹೆಸರು ಹಾಗು ಹಸಿರನ್ನು ಗಳಿಸಿಕೊಳ್ಳಬಹುದಾದ ಏಕೈಕ ಸಾಧನವಾದ ತಮ್ಮ ರಾಜಕೀಯ ಫ್ಯಾಮಿಲಿ ಬಿಸಿನೆಸ್ ಅನ್ನು ಸೇರುತ್ತಾರೆ, ಇಲ್ಲವೇ ತಲೆಯನ್ನು ಸೀಳಿದರೂ ಒಂದೆರಡು ವಿಚಾರಯುತ ಪದಗಳನ್ನು ಕಲಿತಿರದಿದ್ದಾಗ ಅಪ್ಪನ ಮಗನಾಗಿ ಏನೇ ಏಳಿದರೂ ಕೈಕಟ್ಟಿ ಪಾಲಿಸುವ ಪಾರ್ಟಿಯ ಸೇವಕರ ಸೇವೆಯ ಭಾಗ್ಯವನ್ನು ಸವಿಯುವ ಆಸೆಯಲ್ಲಿ ರಾಜಕಾರಣವನ್ನು ಧುಮುಕುತ್ತಾರೆ. ದೇಶವನ್ನು ಉದ್ಧರಿಸುವ ಕನಸ್ಸಲ್ಲಿ. ಇಂಥವರಿಂದ ಅದ್ಯಾವ ಮಟ್ಟಿನ ಸಮಾಜಸೇವೆ ಸಾಧ್ಯವುಂಟು ನೀವೇ ಹೇಳಿ.


ಮೇಲಾಗಿ ಇಂದು ತಾಲೂಕಿಗೆ ಒಬ್ಬ MLA ಹಾಗು ಜಿಲ್ಲೆಗೊಬ್ಬ MP ಯ ಸ್ಥಾನವನ್ನೂ ಇಂತಹ ಹಾಲಿ ರಾಜಕಾರಣಿಗಳ ಮಕ್ಕಳೇ ಪ್ರತಿನಿಧಿಸುವಂತಾದರೆ, ಬಡವರ ನಡುವೆ ಬೆಳೆದು, ಕಷ್ಟ ಕಾರ್ಪಣ್ಯಗಳೇನು ಎಂದು ಅರೆದು ಕುಡಿದಿರುವ ಜನನಾಯಕನೊಬ್ಬ ಆ ಇಡೀ ತಾಲೂಕು ಅಥವಾ ಜಿಲ್ಲೆಯಲ್ಲೇ ಇಲ್ಲವೆಂದೇ ಅರ್ಥವೇ? ಸಮಾಜಸೇವೆ ಎಂಬುದು ಕೇವಲ ರಾಜಕಾರಣಿಗಳ ರಕ್ತದಲ್ಲಿ ಮಾತ್ರವೇ ಕಾಣಸಿಗುತ್ತದೆಯೇ? ಅಥವಾ ಇಂತಹ ಕುಟುಂಬರಾಜಕಾರಣದಿಂದ ಜನಸಾಮನ್ಯರಲ್ಲಿ ಮೂಡಬೇಕಾದ ನಾಯಕರುಗಳು ಅರಳುವ ಮುನ್ನವೇ ಚಿವುಟಿಹೋಗುತ್ತಾರೆಯೇ? ಹಾಗಾದರೆ ಇಂತಹ ರಾಜಕಾರಣ ಪ್ರಜಾತಂತ್ರ ವ್ಯವಸ್ಥೆಯ ಮೂಲ ಉದ್ದೇಶವನ್ನು ಈಡೇರಿಸಬಲ್ಲುದೆ? ಲಕ್ಷಾಂತರ, ಕೋಟ್ಯಂತರ ಜನರನ್ನು ಪ್ರತಿನಿಧಿಸುವ ಇಂತಹ ವ್ಯಕ್ತಿಗೆ ಕನಿಷ್ಠ ವಿದ್ಯಾರ್ಹತೆ, ಕ್ಲೀನ್ ಹಿಸ್ಟರಿಗಳೆಂಬ ಒಂತಿಷ್ಟು ಮಾನದಂಡಗಳೂ ಬೇಕಲ್ಲವೇ?


ಪ್ರಸ್ತುತ 'ಮುಷ್ಠಿಯೊಳಗಿನ ಪ್ರಪಂಚ'ದ ಜೀವನದಲ್ಲಿ ರಾಜಕಾರಣ ಎಂಬುದು ಪ್ರತಿಯೊಬ್ಬರಲ್ಲೂ ಅದೆಷ್ಟರ ಮಟ್ಟಿಗೆ ಹಾಸುಹೊಕ್ಕಿದೆ ಎಂದರೆ ಪ್ರತಿಯೊಬ್ಬ ಪ್ರಜೆಯೂ ತನ್ನದೊಂದಿರಲಿ ಎಂದು ಅಭಿಪ್ರಾಯ ಮೂಡಿಸುವ, ಮೊಳಗಿಸುವ ಮೇಧಾವಿಗಳೇ. ಒಂದು ಸರ್ಕಾರ ಜಾರಿಗೊಳಿಸುವ ಕಾನೂನು ಇಂದು ಹೆಚ್ಚಾಗಿ ವ್ಯಕ್ತಿನಿಷ್ಠವವಾಗಿಯೇ ಸ್ವೀಕರಿಸಲಾಗುತ್ತದೆಯೇ ವಿನಃ ವಸ್ತುನಿಷ್ಠವಾಗಿ ಅಲ್ಲ. ಇಂತಹ ವ್ಯಕ್ತಿನಿಷ್ಠ ಸರ್ಕಾರಗಳ ಯೋಜನೆಗಳನ್ನು ಕಣ್ಮುಚ್ಚಿ, ಕೈಚಾಚಿ ತಬ್ಬಿಕೊಳ್ಳುವವರು ಒಬ್ಬರಾದರೆ, ಮುಟ್ಟಿದರೆ ಮುನಿ ಸಸ್ಯದಂತೆ ಆಡುವವರು ಕೆಲವರು. ಒಟ್ಟಿನಲ್ಲಿ ಈ ಒಪ್ಪು ತಪ್ಪುಗಳ ಚರ್ಚೆಯೇ ಇಂದಿನ ಮುಷ್ಠಿಯೊಳಗಿನ ಪ್ರಪಂಚದ ಅವಿಬಾಜ್ಯ ಅಂಗ. ವಿಪರ್ಯಾಸವೆಂದರೆ ಇಂತಹ ಚರ್ಚೆಗಳನಷ್ಟನ್ನೇ ಜನರು ರಾಜಕಾರಣವೆಂದು ತಿಳಿದಿರುವದು. ದೇಶದ ಚುಕ್ಕಾಣಿಯನ್ನು ಹಿಡಿದಿರುವವರಿಗೂ ಇದೆ ಬೇಕಾದದ್ದು. ಸರಿಯೋ ತಪ್ಪೋ. ತಮ್ಮ ಒಂದು ವಿಷಯವನ್ನು ವಿರೋಧಿಸುತ್ತಿದ್ದಾರೆ ಎಂದರೆ ಅದರಿಂದ ಕಲಿಯುವ ಬದಲು ಇಂತಹ ಟೀಕೆಗಳನ್ನು ಕೇವಲ ವೈಯಕ್ತಿಕವಿವಾಗಿಸಿಕೊಂಡು ಕಚ್ಚಾಡತೊಡಗುತ್ತಾರೆ. ಮೆನೆಯಲ್ಲಿ ಅಪ್ಪ ತಪ್ಪುಮಾಡಿದರೆ ಅದನ್ನು ತಿದ್ದುವ ಕೆಲಸ ಮನೆಯ ಇತರ ಸದಸ್ಯದ್ದಾಗಿರಬೇಕು. ಕಲಿಯುವ ಮನಸ್ಸೂ ಅಪ್ಪನದ್ದಾಗಿರಬೇಕು. ಆಗಲೇ ಮನೆಎಂಬುದು ನೆಡೆಯುವುದು. ದೇಶವು ಸಹ ಒಂದು ಮೆನೆಯಲಲ್ಲವೇ?! ಇಂತಹ ಮನೆಯ ಸೇವೆ ಸಮಾಜಸೇವೆಯಂತೂ ಖಂಡಿತ ಅಲ್ಲ. ಇದು ದೇಶದ ಪ್ರತಿಯೊಬ್ಬನ ಆದ್ಯ ಕರ್ತವ್ಯ. ಕುಟುಂಬದ ಇತರ ಸದ್ಯರನ್ನು ಹಸಿವಿನಿಂದ, ಅಶಿಕ್ಷಣದಿಂದ, ಅನಾರೋಗ್ಯದಿಂದ ನರಳುವುದ ಕಾಣಲಾಗುತ್ತದೆಯೇ? ಮನೆಯ ನೆಡೆಸುವವನು ಖಂಡಿತವಾಗಿಯೂ ಇಂತಹ ಅಧೋಗತಿಗೆ ಮನೆಯವರನ್ನು ತಂದು ನಿಲ್ಲಿಸುವುದಿಲ್ಲ. ಸಮಾಜಸೇವೆಯ ಹೆಸರಲ್ಲಿ ಜನರ ಕಣ್ಣಿಗೆ ಸುಣ್ಣವನ್ನು ಬಳಿಯುವುದಿಲ್ಲ. ದೇಶವನ್ನು ಮನೆಯೆಂದು ಭಾವಿಸಿರುವ ನಾಯಕರಿಗೆ ಇಲ್ಲಿಯ ಪ್ರತಿಯೊಬ್ಬ ಯುವಕ, ಯುವತಿಯರೂ ಮಕ್ಕಳೆಯೇ. ಹಾಗಾದಾಗ ಮಾತ್ರ ಗಲ್ಲಿ ಗಲ್ಲಿಗೊಬ್ಬ ನಾಯಕ ಮೂಡಬಲ್ಲ. ಇಲ್ಲವಾದರೆ ಗುರಿ ಸ್ಪಷ್ಟವಲ್ಲದೆ ಗುಂಡನ್ನು ಹಾರಿಸಿದಂತಾಗುತ್ತದೆ ಲೋಕಲ್ ನಾಯಕರ ಸಮಾಜಸೇವೆಯ ರಾಜಕೀಯ.

ಎಲ್ಲಕ್ಕೂ ಮಿಗಿಲಾಗಿ ಮೂಡುವ ಒಂದು ಪ್ರೆಶ್ನೆಎಂದರೆ ಸಮಾಜಸೇವೆ ಮಾಡಲು ಇವರಿಗೆ ರಾಜಕಾರಣವೆಂಬ ಅಸ್ತ್ರವೇ ಬೇಕೇ ಅಥವಾ ತಮ್ಮ ಮನೆಯಲ್ಲಿನ ಗಂಟು ಮೂಟೆಗಳ ಸಂಪತ್ತೇ ಸಾಕೆ? ನಿಸ್ವಾರ್ಥವಾದ ಸಮಾಜಸೇವಕರಾದರೆ ತಮ್ಮ ಸ್ವಂತದ್ದ ಹಣವನ್ನೇ ಹಂಚಿ ಸಮಾಜದ ಏಳಿಗೆಯನ್ನು ಬಯಸಬವುದಿತ್ತು ಅಲ್ಲವೇ? ದೇಶದ ದುಡ್ಡನ್ನು ದೇಶಕ್ಕೇ ಹಂಚಲು ಇಂತಹ ಅಪ್ಪನ ಮಕ್ಕಳೇ ಬೇಕೇ? ಇಂತಹ ಮಧ್ಯವರ್ತಿ ಪಾಳೇಗಾರರನ್ನು ಮಾತ್ರ ಯಾವೊಬ್ಬ ಪ್ರಜೆಯೂ ನೀ ಬಂದು ನಮ್ಮ ಸಮಾಜಸೇವಕನಾಗು ಎಂದು ಕೇಳಿಕೊಳ್ಳುವುದಿಲ್ಲ. ತಮ್ಮ ತಮ್ಮ ಭಾವಚಿತ್ರದ ದೊಡ್ಡ ದೊಡ್ಡ ಪೋಸ್ಟರ್ಗಳು. 'ಶ್ರೀಯುತ MLA ಅವರ ಅನುಧಾನದಲ್ಲಿ ನಿರ್ಮಿಸಿರುವ ಆಟೋ ನಿಲ್ದಾಣ', 'ಜಿಲ್ಲೆಯ MP ಯವರ ಅನುಧಾನದಲ್ಲಿ ನಿರ್ಮಿಸಿರುವ ಉದ್ಯಾನವನ' ಇಂತಹ ಬೋರ್ಡುಗಳನ್ನು ಗಲ್ಲಿ ಗಲ್ಲಿಗೂ ಹಾಕುತ್ತಾರಲ್ಲ ಸ್ವಾಮಿ, ಏನು ಇವರು ತಮ್ಮ ಜೇಬಿನಿಂದ ತಂದು ಸುರಿಯುವ ಹಣವೇ ಅದು? ದೇಶದ ಪ್ರತಿಯೊಬ್ಬ ಟ್ಯಾಕ್ಸ್ ಪೆಯೆರ್ ಗಳ ಬೆವರಿನ ಹಣವಲ್ಲವೇ ಅದು? ವ್ಯಕ್ತಿಯೊಬ್ಬ ನಮ್ಮ ಮನೆಯ ದುಡ್ಡನ್ನು ಪಡೆದು ತನ್ನ ಹೆಸರಿನ ಬಿಸಿನೆಸ್ ಒಂದನ್ನು ಶುರುಮಾಡಿದರೆ ನಾವು ಸುಮ್ಮನಿರುತ್ತೇವೆಯೇ? ಆತನ ಕುತ್ತಿಗೆ ಪಟ್ಟಿ ಇಡಿದು ಕೇಳುವುದಿಲ್ಲವೇ? ಪ್ರಸ್ತುತ ಸಮಾಜಸೇವೆಯ ಹೆಸರಿನಲ್ಲಿ ರಾಜಕಾರಣಿಗಳು ಹಾಗು ಅವರ ಸುಪುತ್ರರುಗಳು ನೆಡೆಸುವ ಕಳ್ಳಾಟವನ್ನು ಹೀಗೆಯೇ ಕುತ್ತಿಗೆ ಪಟ್ಟಿಯನ್ನು ಹಿಡಿದು ನಾವು ಕೇಳಬಲ್ಲವೇ? ಅದು ಸಾಧ್ಯವಾದರೆ ಮಾತ್ರ ನೋಡಿ ನಮ್ಮ 'ಪ್ರಜಾ''ಪ್ರಭುತ್ವ' ದ ನಿಜವಾದ ಆಶಯ ಈಡೇರುವುದು. ಸಮಾಜಸೇವಕರು ಪ್ರಜಾ ಸೇವಕರಾಗುವುದು. ಆಯ್ಕೆ ನಮ್ಮದು. ಅನುಭವವೂ ನಮ್ಮದೇ!

No comments:

Post a Comment