Monday, October 12, 2020

ಪಯಣ - 16


ತನ್ನ ಪ್ರೆಶ್ನೆಗೆ ಉತ್ತರಿಸದನ್ನು ಕಂಡು ಕೋಪಗೊಂಡ ಶಶಿ ಅಜ್ಜಿಯ ಬೆಳಿಗೆ ಬಂದು,

'ಅಜ್ಜಿ .. ನೀವಾದ್ರೂ ಹೇಳ್ಬಾರ್ದ .. ಕಾಲೇಜಿಗೆ ಬರದೆ ಒಂದ್ ತಿಂಗ್ಳ್ ಆಯ್ತು .. ಹೀಗೆ ಇನ್ ಸ್ವಲ್ಪ ದಿನ ಹೋದ್ರೆ ಈ ವರ್ಷ ಪೂರ್ತಿ ಹಾಳಾಗುತ್ತೆ..'

'ಮಗ , ಈಗಿನ್ ಕಾಲ್ದಾಗೆ ಇಂತ ಹುಡುಗ್ರು ಕೋಟಿಗೂ ಒಬ್ರು ಸಿಗಾಕಿಲ್ಲ .. ನಿನ್ ಆ ಕಾಲೇಜು ಗೀಲೇಜು ಎಲ್ಲ ಹಸಿದವ್ನ ಹೊಟ್ಟೆ ತುಂಬಿಸಾಕಿಲ್ಲ. ಹಾಳ್ ಬಿದ್ದಿರೋ ನೆಲ್ದಲ್ಲಿ ಬಿತ್ತೋ ಇಂತ ಮಗಿಂಗೆ ಯಾವ್ ವರ್ಷನೂ ಹಾಳಾಗಾಕಿಲ್ಲ ಬುಡು..' ಎಂದು ಅಜ್ಜಿ ಹೇಳಿದಾಗ ಶಶಿಯ ಕೋಪ ಇನ್ನೂ ವಿಪರೀತವಾಯಿತು. ಆಕೆ ಅವರಿಬ್ಬರನ್ನು ಅಲ್ಲಿಯೇ ಬಿಟ್ಟು ತುಸು ದೂರದ ಗದ್ದೆಯ ಬದುವಿನ ಮೇಲೆ ಹೋಗಿ ಕೂತಳು. ಅದು ಆ ಸ್ಥಳದ ಮಹಿಮೆಯೋ ಏನೋ, ಸ್ವಲ್ಪ ಹೊತ್ತು ಶಾಂತವಾಗಿ ಕೂತ ನಂತರ ಆಕೆಯ ಮನಸ್ಸು ಹಗುರಾಯಿತು. ಬಿಸಿಲು ಅದಾಗಲೇ ನತ್ತಿಯ ಮೇಲೆ ಬಂದಿದ್ದರಿಂದ ಲೋಕೇಶ ಉಳುತ್ತಿದ್ದ ಎತ್ತುಗಳನ್ನು ಹಳ್ಳದ ಬದಿಗೆ ಕಟ್ಟಿ, ಅವುಗಳಿಗೆ ನೀರನ್ನು ಕುಡಿಯಲು ಬಿಟ್ಟು, ತನ್ನ ಕೈಕಾಲುಗಳನ್ನುತೊಳೆದುಕೊಂಡು ಶಶಿಯ ಬಳಿಗೆ ಬಂದ. ಅಜ್ಜಿ ಎತ್ತುಗಳಿಗೆ ಬೆಳಗೆಯೇ ಕೊಯ್ದಿರಿಸಿದ ಹಸಿರು ಹುಲ್ಲನ್ನು ಹಾಕತೊಡಗಿದಳು. ಹಚ್ಚ ಹಸಿರೇ ಎಲ್ಲೆಲ್ಲೂ ಪಸರಿಸಿದ್ದ ಅಲ್ಲಿ ಕಡುಬಿಸಿಲೂ ತಂಪಾಗಿಯೇ ಪಸರಿಸಿಕೊಂಡಿತ್ತು. ಶಶಿಯ ಬಳಿಗೆ ಬಂದು ಕೂತವನೇ,

'ಕೃಷಿ ಒಂತರ ಧ್ಯಾನ ಮಾಡಿದಹಾಗೆ ಶಶಿ. ಧ್ಯಾನ ಮಾಡುವಾಗ ಡಿಸ್ಟ್ರೆಬ್ ಮಾಡ್ಬಾರ್ದು ಅಂತ ಗೊತ್ತಿಲ್ವ' ಎಂದು ಆಕೆಯನ್ನು ಛೇಡಿಸಿದ.

ತನ್ನ ಮುಷ್ಟಿಗಟ್ಟಿದ ಕೈಗಳಿಂದ ಆತನ ಬೆನ್ನಿನ ಮೇಲೆ ಗುದ್ದಿದ ಆಕೆ,

'ಹೌದು ಸಾರ್ .. ನೀವು ಇಲ್ಲಿ ಕೃಷಿ ಧ್ಯಾನ ಮಾಡ್ತಾ ಇರಿ .. ನಿಮ್ ಸೆಮಿಸ್ಟರ್ ಎಕ್ಸಾಮ್ಸ್ನ ಯಾರಾದ್ರೂ ಧ್ಯಾನಗುರು ಬಂದು ಬರೀತಾರೆ'

'ನನ್ನ್ ಮುಂದೆ ಇರೋ ಒಂದೇ ಎಕ್ಸಾಮ್ ಅಂದ್ರೆ ಈ ಸರಿ ಭತ್ತ ಬೆಳೆಯೋದು ಶಶಿ .. ಕರೆಕ್ಟ್ ಟೈಮಿಗೆ ಮಳೆರಾಯ ಬಂದು ಈ ಎಕ್ಸಾಮ್ಸ್ ಅಲ್ಲಿ ಕಾಪಾಡಿದ್ರೆ ಸಾಕು'

'ಲೋಕೆಶ್ .. Are you serious ..? ಭತ್ತ ಬೆಳೆಯೋ ಆಸೆಗೆ ನಿನ್ ಮೂರ್ ವರ್ಷದ ಓದನ್ನು ಬಲಿಕೊಡೋದು ಎಷ್ಟ್ ಸರಿ? ಮೇಲಾಗಿ ಕೃಷಿ ಮಾಡೋಕ್ಕೆ 24X7 ಗದ್ದೆಲೇ ಇರ್ಬೇಕು ಅಂತ ಏನಿಲ್ಲ ಅಂತ ನೀನೆ ಹೇಳ್ತಿದ್ದೆ.. ಹೀಗೆನಾಯ್ತು..’ ಅಧಿಕಾರವಾಣಿಯಲ್ಲಿ ಆಕೆ ಕೇಳಿದಳು.

'ಶಶಿ .. ನಿಂಗೆ ಹೇಗ್ Explain ಮಾಡ್ಲಿ..? ಪ್ಲೀಸ್ ಅರ್ತ ಮಾಡ್ಕೋ. ನಂಗೆ ಸದ್ಯಕ್ಕೆ ಕೃಷಿ ಬಿಟ್ಟು ಬೇರೇನೂ ತಿಳಿತಿಲ್ಲ.. ಅದೆಷ್ಟೇ ಕೆಲ್ಸ ಮಾಡಿದ್ರೂ ಸಾಲ್ತ ಇಲ್ಲ.. ಅಟ್ ದಿಸ್ ಪಾಯಿಂಟ್ ಇಫ್ ಯು ಆಸ್ಕ್ ಮಿ , ನನಗೆ ಇಲ್ಲೇ ಇದೆ ಜಾಗದಲ್ಲಿ ಜೀವನ ಪರ್ಯಂತ ಇರ್ಬೇಕು ಅನ್ನಿಸ್ತಾ ಇದೆ. ಮನೆ, ಓದು, ಹಾಡು, ಪಾಠ, ಹಣ , ಆಸೆ ಯಾವುದೂ ಬೇಡ. ನೆಲವೊಂದು ಸಾಕು. ನೆಲದ ಮಣ್ಣಿದ್ದರೆ ಸಾಕು. ಅಲ್ಲಿ ಒಂದಿಷ್ಟು ಹಸಿರು ಜೀವಗಳಿಗೆ ಬದುಕನ್ನು ಕಟ್ಟಿಕೊಡಬೇಕು. ಅವುಗಳನ್ನು ಪೋಷಿಸಬೇಕು. ಸಾಕಿ ಸಲಹಬೇಕು. ಅಲ್ಲದೆ..' ಎಂದು ಏನೋ ಹೇಳಲು ಮುಂದಾಗಿ 'ಶಶಿ , ಡೋಂಟ್ ವರಿ .. ನಂಗೆ ನಿನ್ನ ಕನ್ಸರ್ನ್ ಅರ್ಥ ಆಗುತ್ತೆ ..ನೀನ್ ಅನ್ಕೋಳ್ಳೋ ಹಾಗೆ ಏನೂ ಆಗಲ್ಲ.. ಟ್ರಸ್ಟ್ ಮಿ' ಎಂದು ಆಕೆಯ ಮೃದು ಕೈಯನ್ನು ತನ್ನ ಒರಟು ಅಸ್ತಗಳಿಂದ ಅದುಮುತ್ತಾನೆ.

'ಲೋಕೇಶ್ .. ಬಿ ಲಾಜಿಕಲ್ .. ನೀನ್ ಹೇಳೋದು ಕತೆ ರೂಪದಲ್ಲಿ ಕೇಳೋಕ್ಕೆ ಚೆನ್ನಾಗಿರುತ್ತೆ.. ಪ್ಲೀಸ್ ಅಂಡರ್ಸ್ಟ್ಯಾಂಡ್ .. ಅಟ್ ಲೀಸ್ಟ್ ಸೆಮಿಸ್ಟರ್ ಎಕ್ಸಾಮ್ಸ್ಗೆ ಆದ್ರೂ ಎನ್ರೋಲ್ ಮಾಡ್ಕೋ .. ನಾನ್ ನಿಂಗೆ ಹೇಳ್ ಕೊಡ್ತೀನಿ ' ಎಂದಳು. ಲೋಕೇಶ ಅವಳ ಕಳವಳಗೊಂಡ ಮುಖವನ್ನು ನೋಡಿ ಮಂದಹಾಸವನ್ನು ಬೀರತೊಡಗಿದ. ಅಜ್ಜಿ ಅದಾಗಲೇ ಊಟವನ್ನು ಇವರು ಇರುವಲ್ಲಿಗೇ ತಂದಳು. ಬಾಳೆದೆಲೆಯ ಮೇಲೆ ಮೂಡಿದ ಹಬೆಯಾರುತ್ತಿದ್ದ ಕೆಂಪಕ್ಕಿಯ ಅನ್ನ , ಬೇಳೆ ಸಾರು , ಮಜ್ಜಿಗೆ ಹಾಗು ಉಪ್ಪಿನಕಾಯಿಯನ್ನು ಕಂಡು ಲೋಕೇಶನ ಮನಸ್ಸು ಪ್ರಸನ್ನವಾಯಿತು. ಒಂದು ಮುಡಿ ಅನ್ನದ ತುತ್ತನ್ನು ಕಟ್ಟಿ ಅಜ್ಜಿಯ ಜೊತೆಗಿರುತ್ತಿದ್ದ ನಾಯಿಗೆಂದು ತೆಗೆದಿಟ್ಟ ಹಾಗು ಮತ್ತೊಂದು ಮುಡಿ ಅನ್ನವನ್ನು ಪಕ್ಕದಲ್ಲಿ ಚಿಲಿಪಿಲಿಗುಡುತ್ತಿದ್ದ ಹಕ್ಕಿಗಳೆಡೆಗೆ ಎಸೆದ. ಕೂಡಲೇ ಹಕ್ಕಿಗಳು ಪುರ್ರನೆ ಅಲ್ಲಿಂದ ಹಾರಿದರೂ ಕೆಲನಿಮಿಷದ ನಂತರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಾಪಸ್ಸು ಹಾರಿಬಂದವು. ಲೋಕೇಶ ಒಂದೊಂದೇ ಮುಡಿಯಷ್ಟು ಅನ್ನವನ್ನು ಅವುಗಳಿಗೆ ಎಸೆಯುತ್ತಿದ್ದರೆ ಅವುಗಳು ಧೈರ್ಯ ಮಾಡಿ ಒಂದೊಂದೇ ಹೆಜ್ಜೆಯನ್ನು ಮುಂದಿಡತೊಡಗಿದವು. ಯಾವಾಗ ಲೋಕೇಶ ಅವುಗಳಿಗೆ ಅಪಾಯಕಾರಿಯಂತೆ ಕಾಣಲಿಲ್ಲವೋ ಕೂಡಲೇ ಅಷ್ಟೂ ಹಕ್ಕಿಗಳು ಆತನ ಊಟ ಮಾಡುತ್ತಿದ್ದ ಎಡೆಗೇ ಮುತ್ತಿಗೆಯನ್ನು ಹಾಕಿದವು. ಮೊದಲ ಬಾರಿ ಎಂಬಂತೆ ಅವುಗಳನ್ನು ನೋಡುತ್ತಾ ಲೋಕೇಶ ಗಳಗಳನೆ ಅಳತೊಡಗಿದ.

****

ಅದೇನೋ ಒಂದು ಬೆಳಕು ನನನ್ನು ಹತ್ತಿರಕ್ಕೆ ಎಳೆಯುತ್ತಿದೆ. ಅದರಲ್ಲಿ ವಿಪರೀತವಾದೊಂದು ಸಂತೋಷವಿದೆ. ಸತ್ಯವಿದೆ. ಶಾಂತಿಯಿದೆ. ಇತ್ತೀಚೆಗೆ ಗುರುತು ಮಾಡಿಕೊಂಡು ನಾನು ದೇವಾಲಯಗಳಿಗೆ ಹೋಗುತ್ತಿಲ್ಲ. ಒಂದೆಡೆ ಹೋಗಿ ಅಲ್ಲಿಯೇ ಜನರು ಮಾತಾಡುವ, ವರ್ಣಿಸುವ ದೇವಾಲಯಗಳ ಪರಿಚಯವನ್ನು ಮಾಡಿಕೊಂಡು ಮುನ್ನಡೆಯತೊಡಗಿದೆ. ಊರು ಕೇರಿಗಳು ಈಗ ಬೇಡವಾದವು. ಪ್ರತಿ ದೇವಾಲಯಗಳೂ ನನನ್ನು ಆ ಬೆಳಕಿನ ಇನ್ನೂ ಹತ್ತಿರಕ್ಕೆ ಕೊಂಡೊಯ್ಯುತ್ತಿವೆ ಎಂದೆನಿಸುತ್ತಿದೆ. ಅಲ್ಲದೆ ಈಗ ಬೆಳಗಿರಲಿ,ಸಂಜೆಯಾಗಲಿ ಅಥವಾ ಸೂರ್ಯ ನತ್ತಿಗೇರಿರುವ ಸಮಯವಾದರೂ ಸರಿಯೇ ದೇವಾಲಯವನ್ನು ಪ್ರವೇಶಿಸುತ್ತಿದ್ದೆ. ಜನರ ಆ ಚೀರಾಟಗಳ ಸಂತೆಯ ನಡುವೆಯೂ ಮನಸ್ಸು ಧ್ಯಾನ ಮಾಡುವುದನ್ನು ಕಲಿಯಿತು. ಅದು ಯಾವ ಊರು ಎನ್ನುವುದಕ್ಕಿಂತ ಹೆಚ್ಚಾಗಿ ಅದು ಯಾವ ದೇವಾಲಯವೆಂದೆಷ್ಟೇ ಮನದಲ್ಲಿ ಉಳಿಯತೊಡಗಿತು.

ಮನೆಯಿಂದ ಈಗ ಹೆಚ್ಚುಕಡಿಮೆ ಸಾವಿರ ಕಿಲೋಮೀಟರ್ ದೂರ ಪ್ರಯಾಣಿಸಿರಬಹುದು. ಇಂದು ಬೆಳಗಿನ ಸೂರ್ಯನ ಕಿರಣಗಳು ದೇವಾಲಯದ ತುತ್ತತುದಿಯನ್ನು ತಲುಪುವ ಮೊದಲೇ ಅಲ್ಲಿಗೆ ಹೋದ ನಾನು ಕುತೂಹಲಕಾರಿ ಆ ಕೆತ್ತನೆಗಳನ್ನು ಘಂಟೆಗಳ ತನಕ ನೋಡುತ್ತಾ ನಿಂತೆ. ತಮ್ಮ ಎಲ್ಲವನ್ನೂ ಬದಿಗಿಟ್ಟು ಅವನಲ್ಲಿ ಒಂದಾಗಲು ಬರುವ ಅದು ಜಗತ್ ಪ್ರಸಿದ್ಧ ದೇವಾಲಯ. ಅಂತೆಯೇ ವಿಶ್ವದ ಮೂಲೆ ಮೂಲೆಗಳಿಂದ ಜನರನ್ನು ಆಕರ್ಷಿಸುವ ಆ ದೇವಾಲಯದ ಸುತ್ತ ಮೂಡಿರುವ ಕೆತ್ತನೆಗಳು ನೋಡುಗನ ಮನದೊಳಗೆ ಹಲವಾರು ಪ್ರೆಶ್ನೆಗಳನ್ನು ಹುಟ್ಟುಹಾಕುವುದಂತೂ ಸುಳ್ಳಲ್ಲ. ನೋಡಿದವನ ಕಣ್ಣು ಕೊರೆಯುವಂತಹ ಕಾಮೋತ್ತೇಜಕ ಕೆತ್ತನೆಗಳು ಅವು. ಎಲ್ಲಿಯೂ ಕಂಡರಿಯದ ಬಗೆಯ ಈ ಕೆತ್ತನೆಗಳನ್ನು ಅರ್ಥಯಿಸಿಕೊಳ್ಳಬೇಕೇ ಎಂದು ಮೊದಲಿಗೆ ಅನಿಸಿದರೂ ಒಳಗಿರುವ ಅವನಿಗೂ ಇಲ್ಲಿರುವ ಇವುಗಳಿಗೂ ಏನೋ ಒಂದು ಎಳೆ ಮಾರ್ಪಟ್ಟಂತಿದೆ ಎನಿಸಿತು.

ದೇವರ ಆಸ್ಥಾನ ಹಾಗು ಸಂಭೋಗದ ರಚನೆ? ಇದು ಹೇಗೆ ಸಾಧ್ಯ? ದೇಶದ ಬಹುತೇಕ ದೇವಾಲಯಗಳಲ್ಲೂ ಈ ಬಗೆಯ ಕೆತ್ತನೆಗಳಿವೆ. ಚಿತ್ತದ ಎಲ್ಲವನ್ನೂ ಬದಿಗಿಟ್ಟು ಒಳಗಿರುವ ಅವನಲ್ಲಿ ಒಂದಾಗಲು ಬರುವ ಜನರಿಗೆ ಈ ರೀತಿಯ ಕೆತ್ತನೆಗಳು ಅವರ ಚಿತ್ತಗಳನ್ನು ಕಲಕದೆಯೇ ಇರುತ್ತದೆಯೇ? ಚಿತ್ರ ವಿಚಿತ್ರ ಬಗೆಯ ಈ ಭಂಗಿಗಳನ್ನು ಕಲ್ಪಿಸಿಕೊಳ್ಳುವುದೇ ಅಸಾಧ್ಯ. ಮೇಲಾಗಿ ಪ್ರಾಣಿಗಳು?! ಪ್ರಾಣಿಗಳೊಟ್ಟಿಗಿನ ಸಂಭೋಗ? ಆಧುನಿಕ ಜಗತ್ತಿನ ಕೋರ್ಟು ಕಚೇರಿಗಳು ಇಂತಹ ಕ್ರಿಯೆಗಳನ್ನು ದಂಡನಾರ್ಹ ತಪ್ಪುಗಳೆಂದು ಘೋಷಿಸಿವೆ. ಇಲ್ಲ ಇದು ನೋಡಿದಷ್ಟು ಸುಲಭವಲ್ಲ. ಬಹುಷಃ ನಮ್ಮಂತಹ ಅಲ್ಪಮತಿಗಳಾದವರಿಗೆ ಇದು ಅರಿಯದ ವಿಷಯವಿರಬಹುದು. ಮೊದಲನೆಯದಾಗಿ ಎಂತವರ ಮನದಲ್ಲೂ ಕಾಮಭಾವನೆಗಳನ್ನು ಕೆರಳಿಸುವ ಈ ಅಮೋಘ ಕೆತ್ತನೆಯ ಕುಶಲತೆಗೆ ತಲೆದೂಗಲೇಬೇಕು. ಮಾನವನ ದೇಹದ ಅಂಗಾಗಗಳಿಗೆ ಎಲ್ಲಿಲ್ಲದ ಜೀವತುಂಬಿ ಕೆತ್ತಿರುವ ಆ ಮಹಾನ್ ಶಿಲ್ಪಿಗಳು ಅಸಾಮಾನ್ಯದವರೆಂದರೆ ಸುಳ್ಳಲ್ಲ. ಎರಡನೆಯದಾಗಿ ಇಲ್ಲಿ ಹೆಣ್ಣೇ ಎಲ್ಲ ಕೆತ್ತನೆಗಳ ಕೇಂದ್ರಬಿಂದು.

ತನ್ನ ವಿವಿಧ ಭಂಗಿಗಳಿಂದ ಪುರುಷನನ್ನು ಸೆಳೆಯುವ ಆಕೆಯನ್ನು ಈ ಒಂದು ಕೆತ್ತನೆ ಅದೆಷ್ಟು ಅರ್ಥಪೂರ್ಣವಾಗಿ ಹೇಳುತ್ತಿದೆ. ಇಲ್ಲಿ ಅರೆನಗ್ನಳಾಗಿರುವ ಹೆಣ್ಣೊಬ್ಬಳು ಭೀಮಗಾತ್ರದ ಹುಲಿಯಂತಹ ಪ್ರಾಣಿಯೊಟ್ಟಿಗೆ ಸೆಣೆಸುತ್ತಿದ್ದಾಳೆ. ವ್ಯಾಘ್ರವಾಗಿರುವ ಆ ಪ್ರಾಣಿ ಅವಳ ಮೇಲೆ ಧಾಳಿ ನೆಡೆಸುತ್ತಿದ್ದರೆ ಆಕೆ ಅದನ್ನು ತನ್ನ ಕೈಗಳಿಂದಲೇ ತಡೆದು ನಿಲಿಸಿದ್ದಾಳೆ. ಕಾಮವೆಂಬ ವ್ಯಾಘ್ರತೆಗೆ ಬಲಿಯಾಗಿ ಮದವೇರಿದ ಗಜದಂತಾಗುವ ಚಿತ್ತದ ಸ್ಥಾನದಲ್ಲಿ ಆ ಪ್ರಾಣಿ ನಿಂತಿರಬಹುದೇ? ಪ್ರತಿಬಾರಿ ಹೀಗೆ ಅನಿಸಿದಾಗಲೆಲ್ಲ ದೇಹವನ್ನು ನಿಯಂತ್ರಿಸಲು ಪ್ರಯತ್ನಿಸುವ ಮನಸ್ಸೇ ಆ ಹೆಣ್ಣಿನ ಪ್ರತಿರೋಪವಾಗಿರಬಹುದೇ? ಹಾಗಾದರೆ ಇಂತಹ ಕೆತ್ತನೆಗಳ ಅರ್ಥವೇನು? ಮನಸ್ಸನು ನಿಗ್ರಹಿಸಿ ದೇವಾಲಯದೊಳಗೆ ಪ್ರವೇಶಿಸು ಎಂದೇ?

ಹಾಗಾದರೆ ಜೀವನದಲ್ಲಿ ಕಾಮದ ನಿಜವಾದ ಪಾತ್ರವೇನು? ಜೀವನದ ಅರ್ಥ ಅಥವಾ ಗುರಿ ಈ ಕಾಮವೆಂಬ ಆಸೆಯೊಳಗೆ ಅದೆಷ್ಟರ ಮಟ್ಟಿಗೆ ಹುದುಗಿದೆ? ಅದು ತಪ್ಪೇ? ತಪ್ಪಾದರೆ ಅದು ನಮ್ಮೊಳಗೇ ಇರುವುದಾದರೂ ಏತಕ್ಕೆ? ಮನಸ್ಸಿಗೆ ಸಿಗುವ ಆ ಮಹಾಸುಖ ಧ್ಯಾನದಲ್ಲಿ ಅಡಗಿರುವಂತೆ ದೇಹಕ್ಕೆ ಬೇಕಾಗಿರುವ ಸುಖದ ಹಾದಿಯೇ ಇದು? ಹಾಗಾದರೆ ಮನಸ್ಸಿಗೆ ಖುಷಿಯನ್ನು ನೀಡುವುದರಲ್ಲಿ ತಪ್ಪಿಲ್ಲದಿದ್ದರೆ ದೇಹಕ್ಕೆ ಖುಷಿಯನ್ನು ಎರೆಯುವುದರಲ್ಲಿ ತಪ್ಪೇನಿದೆ?

ಎಲ್ಲವನ್ನು ಮರೆತು ಧ್ಯಾನದಲ್ಲಿ ಮಗ್ನನಾಗಿ ಶಾಂತಿಯನ್ನು ಅರಸುವ ಆಸೆಯೂ ಒಂದು ಕಾಮನೆಯಲ್ಲವೇ?

ಏನೋ ಹೊಸತು ಹೊಳೆದಂತಾಗಿ ನಾನು ದೇವಾಲಯದ ಒಳಗೆ ಪ್ರವೇಶಿಸಿದೆ. ಯಾರೋ ನನ್ನನ್ನು ಹತ್ತಿರಕ್ಕೆ ಸೆಳೆದಂತಾಯಿತು. ಮುಂದೇನಾಯಿತು ಎಂದು ಅರಿಯುವುವಷ್ಟರಲ್ಲಿ ನಾನು ಅಲ್ಲಿರುವ ದೇವರ ಗರ್ಭಗುಡಿಯ ಮುಂದೆ ಓಂಕಾರವನ್ನು ಗುನುಗುತ್ತಿದ್ದೇನೆ. ಸಂಜೆಯ ಕೊನೆಯ ಆರತಿ ದೇವರಿಗೆ ಅರ್ಪಿಸಲ್ಪಡುತ್ತಿತ್ತು.

**

'ಅಬ್ಬಾ .. ಅಬ್ಬಾ .. ಆಂಕ್ ಖುಲ್ ಗಯಾ..' ನನ್ನ ಪಕ್ಕದಲ್ಲಿಯೇ ಕೂತಿದ್ದ ಐದಾರು ವರ್ಷದ ಬಾಲಕನೊಬ್ಬ ನಾನು ಕಣ್ಣು ತೆರೆಯುವುದನ್ನು ನೋಡಿದೊಡನೆಯೇ ತನ್ನ ಅಪ್ಪನನ್ನು ಕರೆಯುವಂತೆ ಮನೆಯ ಒಳಗೆ ಓಡಿದ. ಹಣೆಯ ಮೇಲೆ ತಣ್ಣನೆಯ ಬಟ್ಟೆಯನ್ನು ಹೊದಿಸಿದ ನಾನು ಯಾರದೋ ಮನೆಯ ಕೊಣೆಯಲ್ಲಿ ಮಲಗಿದ್ದೆ. ಹಂಚಿನ ಮನೆಯ ಆ ಕೋಣೆಯ ತುಂಬಾ ಸಾಂಬ್ರಾಣಿ ಹೊಗೆಯ ಘಮ. ಏನಾಗಿದೆ ಎಂದು ತಿಳಿದುಕೊಳ್ಳಲು ನಿಧಾನವಾಗಿ ಮೇಲೇಳತೊಡಗಿದರೆ ನಿತ್ರಾಣದಿಂದ ಎಂಬಂತೆ ಪುನ್ಹ ಮಂಚದ ಮೇಲೆಯೇ ಕುಸಿದು ಬಿದ್ದೆ. ಕೂಡಲೇ ಒಳಗಿನಿಂದ ಓಡಿಬಂದ ವ್ಯಕ್ತಿಯೊಬ್ಬರು ತಮ್ಮ ಅಗಲವಾದ ಕೈಗಳಿಂದ ನನ್ನ ಬೆನ್ನಿಗೆ ಆಧಾರವಾಗಿ 'ಸಂಬಾಲ್ಕೆ ಬಾಯಿಜಾನ್ ..' ಎಂದು ಒಂದು ದಿಂಬುವನ್ನು ಅಡ್ಡಲಾಗಿಸಿ ನನನ್ನು ಅದಕ್ಕೆ ಒರಗಿಸಿದರು. ಬಿಳಿಯಾದ ಜುಬ್ಬಾ ಹಾಗು ತಲೆಯ ಮೇಲೊಂದು ಬಿಳಿಯ ಟೋಪಿಯನ್ನು ಧರಿಸಿದ್ದ ಅವರನ್ನು ಕಂಡೊಡನೆಯೇ ಅದು ಮುಸ್ಲಿಂ ಕುಟುಂಬವೊಂದರ ಮನೆಯೆಂದು ತಿಳಿಯಿತು. ನಾನು ಮಾತು ಪ್ರಾರಂಬಿಸುವ ಮೊದಲೇ ಅವರು,

'ಹೆದರಬೇಡಿ ಬಾಯಿ .. ನಿಮ್ಗೆ ಏನೂ ಆಗಿಲ್ಲ. ನಿಮ್ ಊರು ಯಾವುದು ಅಂತ ಗೊತ್ತಿಲ್ಲ .. ಆದ್ರೆ ನೆನ್ನೆ ನಮ್ಮೊರಿನ ದೇವಸ್ಥಾನದಲ್ಲಿ ನೀವು ಧ್ಯಾನ ಮಾಡ್ತಾ ಕೂತಿದ್ರಿ..ಸಂಜೆಯವರೆಗೂ ಹಾಗೆಯೇ ಇದ್ರಿ ಅನ್ಸುತ್ತೆ. ನಾನು ಆ ದಾರೀಲಿ ಬರೋ ಅಷ್ಟ್ರಲ್ಲಿ ನೀವು ನೆಲದ ಮೇಲೆ ಬಿದ್ದಿದ್ರಿ. ನಾನು ಬಂದು ನೋಡಿದ್ರೆ ನಿಮ್ಮ ಮೈ ಬಿಸಿಯಾಗಿತ್ತು. ಅಕ್ಕ ಪಕ್ಕ ಯಾರು ಇರ್ಲಿಲ್ಲ. ಹಾಗಾಗಿ ನಮ್ಮನೆಗೆ ಕರ್ಕೊಂಡು ಬಂದೆ. ಈಗ ಹೇಗಿದ್ದೀರ' ಎಂದ ಅವರು ನನ್ನ ಹಣೆಯನ್ನು ಮುಟ್ಟಿ ಪರೀಕ್ಷಿಸಿದರು.

'ಒಹ್ .. sorry .. ನಿಮ್ಗೆ ದೊಡ್ಡ ತೊಂದ್ರೆ ಆಯಿತು ಅನ್ಸುತ್ತೆ..'

'ಅರ್ರೆ ಬಾಯಿಜಾನ್.. ಹಾಗೇನಿಲ್ಲ..ನಿಮ್ಮಂತ ಧ್ಯಾನಿಗಳಿಗೆ ಸತ್ಕಾರ ಮಾಡೋದೂ ಒಂದ್ ಪುಣ್ಯನೇ ಬಿಡಿ'

'ಇಲ್ಲ ಸಾರ್ ...’ ಎಂದು ಮುಗುಳ್ ನಕ್ಕ ನಾನು ‘ನಾನ್ ಧ್ಯಾನಿ ಏನ್ ಅಲ್ಲ ..ದೇವಸ್ಥಾನಗಳಲ್ಲಿ ಓಂಕಾರ ಗುನುಗುತ್ತಾ ಇತ್ತೇಚೆಗೆ ಅದೇನ್ ಆಗುತ್ತೋ ಗೊತ್ತಿಲ್ಲ..ಒಮ್ಮೆ ಕಣ್ಣ್ ಮುಚ್ಚಿದ್ರೆ ಘಂಟೆಗಳ ತನಕ ತೆರೆಯೋದೆ ಇಲ್ಲ' ಎಂದೆ.

'ಬಹುತ್ ಅಚ್ಚ .. ದೇವರ ಅನುಗ್ರಹ ನಿಮ್ಮೆಲೆ ಹೀಗೆ ಯಾವಾಗಲು ಇರತ್ತೆ ಬಿಡಿ.. ಈಗ ತುಂಬಾನೇ ದಣಿದಿದ್ದಿರ .. ನಿಧಾನವಾಗಿ ಎದ್ದೇಳಿ ಊಟ ಮಾಡುವಿರಂತೆ' ಎಂದು ನನ್ನ ಕೈಗಳನ್ನು ಅವರ ಭುಜದ ಮೇಲೆ ಹಾಕಿಕೊಂಡು ನೆಡೆಯ ತೊಡಗಿದರು. ಅವರ ಆರು ವರ್ಷದ ಆ ಪುಟಾಣಿ ಹುಡುಗನೂ ಸಹಾಯ ಮಾಡುವಂತೆ ನನ್ನ ಕಾಲನ್ನು ತಬ್ಬಿಕೊಂಡು ಸೆಣೆಸತೊಡಗಿದನು. ನಗುತ್ತ ನಾನು ಆತನ ತಲೆಯನ್ನು ಸವರಿದೆ.

'ನಿಮ್ಮ ಮಗನೆ ? ಹೆಸರು..?' ಎಂದು ಕೇಳಿದೆ.

'ಮೊಹಮ್ಮದ್ ಅಲಿ..' ಎಂದು ಅವರು ಹೇಳುವ ಮೊದಲೇ ಆತ ಉತ್ತರಿಸಿದ...

Continues

No comments:

Post a Comment