Friday, October 23, 2020

ಪಯಣ - 17

ಬಹುಷಃ ನನಗಾಗಿಯೇ ಎಂಬಂತೆ ಮೂರ್ನಾಲ್ಕು ಬಗೆಯ ರುಚಿಕಟ್ಟಾದ ಸಸ್ಯಾಹಾರಿ ಭಕ್ಷ್ಯಗಳನ್ನು ತಯಾರಿಸಿದ್ದ ಅವರು ನನ್ನ ಹೊಟ್ಟೆಯ ಕಟ್ಟೆ ಹೊಡೆಯುವಷ್ಟು ತಿನಿಸಿದರು. ನಂತರ ಅವರ ಮನೆಯ ಚಡಿಯ ಮೇಲೆ ಬಂದು ಕೂತು ಮಾತಿಗಿಳಿದು ನನ್ನ ಬಗೆಗೆ ಕೇಳಿ ತಿಳಿದುಕೊಂಡು ಈ ವಯಸ್ಸಿನಲ್ಲಿಯೇ ಅಧ್ಯಾತ್ಮದ ಬಗೆಗಿನ ನನ್ನ ಒಲವಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

'ಆದ್ರೆ ಬಾಯಿಜಾನ್ ಒಂದು ಪ್ರೆಶ್ನೆ..' ಎಂದು ನನ್ನ ಮುಖವೆನ್ನೇ ಅವರು ನೋಡತೊಡಗಿದರು. ಆ ನೋಟದಲ್ಲಿ ಒಂದು ಬಗೆಯ ದ್ವಂದ್ವ ಹಾಗು ಕೊಂಚ ಕಾಳಜಿಯೂ ತುಂಬಿಕೊಂಡಿತ್ತು.

'ನೀವ್ ಹುಡುಕಿಕೊಂಡು ಹೋಗ್ತಿರೋ ಆ ಭಗವಂತ ನಿಮ್ಗೆ ಖಂಡಿತವಾಗಿಯೂ ಸಿಗ್ತಾನ?' ಎಂದು ಕೇಳಿದರು.

ಕೊಂಚ ಮುಗುಳ್ ನಕ್ಕ ನಾನು 'ಭಾಯಿ, ನಾನು ಯಾವ ಭಗವಂತನನ್ನೂ ಹುಡುಕಿಕೊಂಡು ಹೋಗ್ತಾ ಇಲ್ಲ.. ಆತ ಇಲ್ಲಿ , ಅಲ್ಲಿ , ಎಲ್ಲೆಲ್ಲಿಯೂ ಇದ್ದಾನೆ. ಗುರುತು ಪರಿಚಯ ಇಲ್ಲದ ನನ್ನನ್ನು ನಿಮ್ಮ ಮನೆಗೆ ಕರೆದು ತಂದು ಸತ್ಕರಿಸಿದಿರಿ .. ಆತ ನಿಮ್ಮ ರೂಪದಲ್ಲೂ ಇದ್ದಾನೆ .. ಆದರೆ ನಾನು ಹೋಗ್ತಾ ಇರೋದು ಮನಸ್ಸು ಸೆಳೆದ ಕಡೆಗೆ .. ಆ ಅಪೂರ್ವ ಬೆಳಕಿನ ಬಳಿಗೆ '

'ಅಪೂರ್ವ ಬೆಳಕು..' ಎಂದು ಪುನಃ ಕೊಂಚ ದಿಗ್ಬ್ರಾಂತರಾದ ಅವರನ್ನು ಕಂಡು,

'ಜಾಸ್ತಿ ಯೋಚಿಸಬೇಡಿ .. ನಾನು ವಾಪಸ್ಸು ಬರುವಾಗ ಪುನಃ ನಿಮ್ಮಲಿಗೆ ಬಂದು ಅದರ ಬಗ್ಗೆ ವಿವರಿಸುತ್ತೀನಿ' ಎಂದೆ.

ಬೇರೇನು ಕೇಳದೆ ಅವರೂ ಸುಮ್ಮನಾದರು. ಕಲ್ಪನೆಗೂ ಮೀರಿದ ನಮ್ಮ ಸಂಭಾಷಣೆಗಳನ್ನು ತನ್ನ ಪುಟ್ಟ ಕಣ್ಣುಗಳನ್ನು ಅರಳಿಸಿ ಅಲಿ ನಮ್ಮನ್ನೇ ನೋಡತೊಡಗಿದ್ದ.

ನಂತರ ಕೊಂಚ ಲೋಕಾರೂಡಿಯ ಮಾತನಾಡಿ ನಾನು ಇನ್ನೇನು ಹೋರಡುತ್ತೀನಿ ಎಂದು ಹೇಳಿದಾಗ ಬಿಡದೆ ಇನ್ನೂ ಒಂದು ದಿನ ಅಲ್ಲಿಯೇ ಇರುವಂತೆ ಒತ್ತಾಯಿಸಿದರು. ಅಲ್ಲದೆ ಮಾರನೆ ದಿನ ಅವರೇ ನೆಡೆಸುವ ಮೋಟಾರು ರಿಪೇರಿ ಅಂಗಡಿಗೆ ಕರೆದುಕೊಂಡು ಹೋಗಿ ದೂಳುಗಟ್ಟಿದ ನನ್ನ ಗಾಡಿಯನ್ನು ಸಂಪೂರ್ಣವಾಗಿ ಸರ್ವಿಸ್ ಮಾಡಿ ಹಣಕೊಡಲು ಮುಂದಾದರೂ ತೆಗೆದುಕೊಳ್ಳದೆ ನನ್ನನ್ನು ತಬ್ಬಿಕೊಂಡು ಬೆನ್ನು ತಟ್ಟಿ ಅಲ್ಲಿಂದ ಬೀಳ್ಕೊಟ್ಟರು.

****



'ಒಹ್..' ಎಂದಷ್ಟೇ ಹೇಳಲು ಶಕ್ತನಾದ ಲೋಕೇಶ ಮುಂದೇನು ಕೇಳಬೇಕೆಂದು ತೋಚದೆ ಸುಮ್ಮನಾದ. ಮೊದಲ ಬಾರಿ ಎಂಬಂತೆ ಆದಿ ಖುಷಿಯ ಕುರಿತು ಲೊಕೇಶನ ಬಳಿ ಮನಸ್ಸು ಬಿಚ್ಚಿ ಮಾತನಾಡತೊಡಗಿದ. ತನ್ನ ಜೀವನದಲ್ಲಿ ಮೂಡಿದ ಕೆಲವೇ ಕೆಲವು ಸಂತೋಷದ ಕಿರಣಗಳಿಗೆ ಕಾರಣಳಾಗಿದ್ದ ಖುಷಿ ಬೇರೊಬ್ಬನನ್ನು ಇಷ್ಟಪಡುತ್ತಿರುವುದಾಗಿ ಹೇಳಿದಳಂತೆ. ಆಕೆಯ ಕುಟುಂಬ ತುಂಬಾನೇ ಆತ್ಮೀಯವಾಗಿ ಬಲ್ಲ ಆ ಹುಡುಗನ ಕುಟುಂಬವನ್ನು ನೋಡಿದರೆ ಮುಂದೆ ಯಾವುದೇ ವಿಘ್ನಗಳು ಎದುರು ಕಾಣುವುದಿಲ್ಲವಂತೆ. ಅದನ್ನು ಕೇಳಿದ ಆದಿಯ ಮನಸ್ಸು ಭಾರವಾಯಿತು. ಅಲ್ಲಿಯವರೆಗಿದ್ದ ಆತನ ಏಕೈಕ ನಂಬಿಕೆಯ ಕೋಟೆ ಛಿದ್ರವಾಯಿತು. ಎದೆ ವಿಪರೀತವಾಗಿ ನೋಯತೊಡಗಿತು. ಕೊನೆಗೆ ಆತ ಕಾಲೇಜಿನ ಕರಿಡಾರಿನ ನೆಲದ ಮೇಲೆಯೇ ಕುಸಿದುಬಿಟ್ಟ. ದುಃಖ ತುಂಬಿದ ಆತನ ಮನಸ್ಸು ಒಮ್ಮೆಲೇ ಅತ್ತುಬಿಡಬೇಕೆಂದು ಅವಣಿಸುತ್ತಿದ್ದರೂ ಆತ ತಡೆದುಕೊಂಡಿದ್ದ. ಕೂಡಲೇ ಲೊಕೇಶನನ್ನು ನೆನಪಿಸಿಕೊಂಡು ಆತನಿರುವಲ್ಲಿಗೆ ಬಂದು ಒಂದೇ ಸಮನೆ ಚಿಕ್ಕ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅಳತೊಡಗಿದ. ತನ್ನ ಬಾಲ್ಯದಿಂದ ಇಂದಿನವರೆಗಿನ ಆಕೆಯ ಒಡನಾಟ, ಗೆಳೆತನ ಎಲ್ಲವನ್ನು ಆದಿ ವಿವರಿಸಿದ.

'ಇಷ್ಟೊಂದು ನಿನ್ನ ಹಚ್ಚ್ಕೊಂಡವಳು ಸಡನ್ ಆಗಿ ಬೇರೆಯವರ್ನ ಅದೇಗೆ ಇಷ್ಟ ಪಡ್ತಾಳೋ' ಲೋಕೇಶ ಕೇಳಿದ.

'ಅದ್ರಲ್ಲಿ ಏನ್ ತಪ್ಪಿದೆ ಲೋಕಿ? That's fine.. ಅವ್ಳು ಬೇರೆ ಯಾರನ್ನೂ ಇಷ್ಟ ಪಡ್ದಲೇ ಇರ್ಬಾರ್ದು ಅಂತ ಏನ್ ಇಲ್ವಲ್ಲ. Infact I respect her feelings towards someone.. let her be happy .. ಆದ್ರೆ..' ಎಂದ ಮರು ಸೆಕೆಂಡಿನಲ್ಲೇ ಮತ್ತೊಂದು ಸುತ್ತಿನ ಅಳುವನ್ನು ಶುರುಮಾಡಿದ.

ಲೋಕೇಶ ಆತನನ್ನೇ ತೀಕ್ಷ್ಣ ಕಣ್ಣುಗಳಿಂದ ನೋಡತೊಡಗಿದ.

**

ಆದರೆ ಅಂದಿನಿಂದ ಆದಿ ತೀರಾನೇ ಮಂಕಾದ. ಓಟ ಪಾಠಗಳೆಲ್ಲ ದೂರದ ಮಾತು ಪ್ರತಿನಿತ್ಯ ಕನಿಷ್ಠ ಒಂದು ಹೊತ್ತು ಊಟವನ್ನೂ ಮಾಡುವುದ ನಿಲ್ಲಿಸಿದ. ಆತನ ಅಮ್ಮನ ಫೋನುಗಳು ಒಂದರಿಂದೊಂದು ದಿನವಿಡಿ ಬಂದರೂ ಯಾವಾಗಲಾದರೊಮ್ಮೆಯಷ್ಟೇ ಆತ ಅವುಗಳಿಗೆ ಉತ್ತರಿಸತೊಡಗಿದ. ಪ್ರತಿದಿನ ಬೆಳಗ್ಗೆ ಲೋಕೇಶ ಆತನನ್ನು ರನ್ನಿಂಗ್ ಟ್ರ್ಯಾಕ್ ನಲ್ಲಿ ಓಡಿಸುವುದಕ್ಕೆ ಹಲವು ಬಗೆಯ ಹರಸಾಹಸ ಮಾಡಿದರೂ ಬೆಡ್ಡಿನಿಂದ ಒಂದಿಚೂ ಆತನನ್ನು ಕದಲಿಸಲಾಗುತ್ತಿರಲಿಲ್ಲ. ಕಾಲೇಜಿನ ಶಿಕ್ಷಕರೂ ಈಗ ಆದಿಯನ್ನು ವಿಚಾರಿಸತೊಡಗಿದರು. ಕೆಲವರು ಫೋನು ಮಾಡಲು ಪ್ರಯತ್ನಿಸಿದರೂ ಆತ ಉತ್ತರಿಸುತ್ತಿರಲಿಲ್ಲ.

ಲೋಕೇಶ ತನ್ನ ಕೈಲಾದ ಪ್ರಯತ್ನವನ್ನು ಮಾಡಿ ಸುಸ್ತಾದ. ಕೆಲವೊಮ್ಮೆ ಖುಷಿಗೆ ತಾನೇ ಖುದ್ದಾಗಿ ಫೋನಾಯಿಸಬೇಕೆಂಬ ಮನಸ್ಸಾದರೂ ಒಮ್ಮೆಯೂ ಮಾತನಾಡಿರದ ಆಕೆಯೊಟ್ಟಿಗೆ ಏನು ಮಾತಾಡಬೇಕೆಂದು ತೋಚದೆ ಸುಮ್ಮನಾಗುತ್ತಿದ್ದ. ಆದಿ ಗುರುತು ಹಿಡಿಯದಷ್ಟು ಸಣಕಲಾಗತೊಡಗಿದ. ಲೋಕೇಶ ಪ್ರತಿದಿನ ಆತನ ಕಾಲುಗಳಿಗೆ ಬಗೆಬಗೆಯ ಎಣ್ಣೆಗಳನ್ನು ತಿಕ್ಕುತ್ತಾ ಕನಿಷ್ಠ ಕಾಲಿನ ಸ್ನಾಯುಗಳಾದರೂ ಸಣಕಲಾಗದಿರಲಿ ಎಂದು ಪ್ರಯತ್ನಿಸತೊಡಗಿದ. ಅದೆಷ್ಟೇ ಒತ್ತಾಯ ಮಾಡಿದರು ಬಿಯರ್ ಅನ್ನು ಸಹ ಮುಟ್ಟುವುದನ್ನು ಬಿಟ್ಟುಬಿಟ್ಟ ಆದಿ. ಕೆಲವೊಮ್ಮೆ ಹಿಂದೂಸ್ತಾನಿ ಸಂಗೀತವನ್ನು ಹಾಕುವಂತೆ ಕೇಳಿದರೂ ಕೊಂಚ ಸಮಯದಲ್ಲೇ ಬೇಡವೆಂದು ನಿಲ್ಲಿಸಿಬಿಡುತ್ತಿದ್ದ. ವಸಂತಕಾಲವನ್ನು ಕಳೆದ ಮರದಂತೆ ಬರಡಾಯಿತು ಆದಿಯ ಮನಸ್ಸು. ತಾನೆಂದು ಅಂದುಕೊಂಡಿರದ, ಕೇವಲ ಕನಸ್ಸಿನಲ್ಲಿಯೇ ಮಾತ್ರ ಸಾಧ್ಯವಾಗಬಹುದಿದ್ದ ಖುಷಿಯ ಸಾಂಗತ್ಯ ಈ ಬಗೆಯಲ್ಲಿ ಮುರಿದುಬೀಳುತ್ತದೆ ಎಂದು ಬಹುಶಃ ಆತನಿಗೆ ತಿಳಿದಿರಲಿಲ್ಲ. ಹಸಿದ ಕರುವಿಗೆ ಅಮ್ಮನ ಘಂಟೆಯ ಸದ್ದಿನ ಮುದ್ದು ನಾದವಾಗಿದ್ದ, ಜ್ವಾಲಾಮುಖಿಯೇ ಎದುರಾದರೂ ಧೈರ್ಯದಿಂದ ಎದುರಿಸಬಲ್ಲ ಶಕ್ತಿಯಾಗಿದ್ದ ಖುಷಿ ಆದಿಯನ್ನು ಒಂಟಿಯಾಗಿಸಿದಳು.

ಕೆಲವೊಮ್ಮೆ ಇದೆಲ್ಲ ಕನಸ್ಸಾಗಿ ನಾಳೆ ಪುನ್ಹ ನಾನು ಖುಷಿಗೆ ಫೋನಾಯಿಸಬಾರದೇಕೆ? 'ಹಲೋ..' ಎಂಬ ಉದ್ವೇಗಭರಿತ ಆಕೆಯ ಮಾತುಗಳು ನನ್ನನ್ನು ಮತ್ತೊಮ್ಮೆ ಸಂತೈಸಬಾರದೇಕೆ? ಆಕೆಯನ್ನು ನಾನು ಇನ್ನೂ ಆಳವಾಗಿ ಅರಿಯಬಾರದೇಕೆ? ನನ್ನೊಳಗಿನ ತುಮುಲಗಳನ್ನೆಲ್ಲ ಎಳೆಎಳೆಯಾಗಿ ಆಕೆಯೊಟ್ಟಿಗೆ ಹಂಚಿಕೊಳ್ಳಬಾರದೇಕೆ? ಎಂದು ಯೋಚಿಸಿದಾಗಲೆಲ್ಲ ಆದಿಯ ಕಣ್ಣಂಚುಗಳು ಒದ್ದೆಯಾಗುತ್ತಿದ್ದವು. ಕನಿಷ್ಠ ಪಕ್ಷ ಆಕೆ ದಿನಕೊಮ್ಮೆಯಾದರೂ ನನಗೆ ಫೋನನ್ನು ಮಾಡುತ್ತಿರಲಿ. ನನ್ನೊಟ್ಟಿಗೆ ಮನಸ್ಸು ಬಿಚ್ಚಿ ಮಾತಾಡುತ್ತಿರಲಿ. ಕೊನೆಯ ಪಕ್ಷ ಗೆಳೆಯರಾಗಿಯಾದರೂ ಸರಿಯೇ, ಆಕೆ ನನ್ನೊಂದಿಗೆ ಎಂದೆಂದಿಗೂ ಇರಲಿ. ಆಕೆ ಯಾರನನ್ನಾದರೂ ಮದುವೆಯಾಗಲಿ. ಆಕೆಯ ಪ್ರೀತಿಯೂ ಒಂದು ಪ್ರೀತಿಯಲ್ಲವೇ? ಕೂಡಲೇ ಆತನಿಗೆ ಏನೋ ಅನಿಸಿತು. ಅದು ಆತನನ್ನು ಸಟೆದು ಕೂರುವಂತೆ ಮಾಡಿತು.

'ಪ್ರೀತಿ?! ಮೊದಲ ಬಾರಿಗೆ ನನ್ನ ಮನಸ್ಸು ಪ್ರೀತಿ ಎಂಬ ಪದವನ್ನು ಎತ್ತಿದೆ. ಇಷ್ಟೆಲ್ಲಾ ಆದರೂ ಪ್ರಸ್ತುತ ಘಳಿಗೆಯವರೆಗೂ ಆಕೆಯನ್ನು ನಾನು ಪ್ರೀತಿಯೆಂಬ ಕಣ್ಣಿನಿಂದ ನೋಡುತ್ತಿದ್ದೇನೆ ಎಂದು ಅಂದುಕೊಂಡಿರಲೇ ಇಲ್ಲ.. ಇದೇಗೆ ಸಾಧ್ಯ?! ನನ್ನ ಹಾಗು ಆಕೆಯ ಆ ಅತ್ಯಾಪ್ತ ಸಂಬಂಧ ಪ್ರೀತಿಯ ಸಂಕೇತವೇ? ಪ್ರೀತಿ ಎಂದರೆ ಹೀಗೆಯೇ. ಇದು ಪ್ರೀತಿಯೇ?'



**

ಕನ್ನಡಿಯ ಮುಂದೆ ಆದಿಯನ್ನು ತರತನೇ ಎಳೆದು ತಂದ ಲೋಕೇಶ ಛಟಾರನೆ ಆತನ ಕೆನ್ನೆಗೆ ಭಾರಿಸಿದ. ಆದಿ ಏನೂ ಮಾತನಾಡದೆ ತಲೆ ಕೆಳಹಾಕಿಕೊಂಡು ನಿಂತ. ಒಂದರಿಂದೊಂದಂತೆ ನಾಲ್ಕು ಭಾರಿ ಪುನಃ ಭಾರಿಸಿದ. ಲೊಕೇಶನ ಮುಖ ಕೆಂಪೇರಿದರೂ ಆದಿಯ ಮುಖಭಾವದಲ್ಲಿ ಯಾವುದೇ ಬದಲಾವಣೆಗಳು ಕಾಣಲಿಲ್ಲ.

'ಬಡ್ಡಿ ಮಗ್ನೆ.. ಅಮ್ಮ ನೋಡಿದ್ರೆ ಅಲ್ಲಿ ಅಪ್ಪ ಇಲ್ಲ ಅಂತ ಒಬ್ರೇ ನರಳ್ತಾ ಇದ್ದಾರೆ..ಆರೋಗ್ಯ ಹದಗೆಟ್ಟಿ ಸಣಕಲಾಗಿ ಹೋಗಿದ್ದಾರೆ.. ನಿನ್ಗೆ ಮಾತ್ರ ಅದ್ಯಾರೋ ಶೂರ್ಪನಖಿ ಸಿಗ್ಲಿಲ್ಲ ಅಂತ ಸಾಯ್ತಾ ಇದ್ದೀಯ.. ಥು .. ನಿಂದೂ ಒಂದ್ ಜನ್ಮನ .. ನಿನ್ನಂತ ಮಕ್ಳು ಇದ್ರೆಷ್ಟು ಸತ್ರೇಷ್ಟು .. ಜೀವಕೊಟ್ಟ ಪೇರೆಂಟ್ಸ್ ಗಿಂತ ನಿಮ್ಮಂತವರಿಗೆ ದಾರೀಲಿ ಸತ್ರೂ ತಿರಿಗ್ ನೋಡ್ದೆ ಇರೋ ಜನರೇ ಇಷ್ಟ ಆಗ್ತಾರೆ .. ಇನ್ಫ್ಯಾಕ್ಟ್ ಅದು ಅವ್ರ್ ತಪ್ಪಲ್ಲಪ್ಪ .. ನಿನ್ನಂತ ಮೂರ್ ಕಾಸಿನ ಜನ್ರ ತಪ್ಪು .. ಯಾರಲೇ ಅದು .. ಅಪ್ಪ ಅಮ್ಮನಿಗಿಂತಾನೂ ಜಾಸ್ತಿ ಆಗೋರು.. ಹೊಟ್ಟೆ ಬಟ್ಟೆ ಕಟ್ಟಿ ಬೆಳ್ಸೋಕೆ ಮಾತ್ರ ಅವ್ರ್ ಬೇಕು .. ಸೀಮೆಗಿಲ್ದಿರೋ ತುಕಾಲಿ ಮಾತಿಗೆ ನಿಂಗೆ ಬೇರ್ಯವಳ್ ಯಾರೋ ಬೇಕು .. '

ತನ್ನೊಳಗೆ ನೆಡೆಯುತಿದ್ದ ಆಂತರಿಕ ತೊಳಲಾಟಗಳಲ್ಲಿ ಅಮ್ಮನೂ ಅಪ್ಪನೂ ಹಾಗು ಖುಷಿಯೂ ಇದ್ದರೂ ಯಾರೊಟ್ಟಿಗೂ ಆ ಬಗ್ಗೆ ಹೇಳಿಕೊಳ್ಳದ ಆದಿಗೆ ಕೂಡಲೇ ಸಂಕಟದ ಅಲೆಗಳು ಒಳಗಿನಿಂದ ತೋಯಿಸಿ ಬಂದಂತಾಯಿತು. ಆದರೆ ಆತ ಅಳಲಿಲ್ಲ.

'ನೋಡಪ್ಪ ಗುರು .. ನೀನ್ ಯಾವ್ ರೀತಿಯ ಆಶಿಕ್ ಅಂತ ಗೊತ್ತಿಲ್ಲ .. ಅದ್ರೊಟ್ಟಿಗೆ ಏನ್ ಮಾಡ್ಕೊಂಡ್ ಆದ್ರೂ ಸಾಯಿ .. ಆದ್ರೆ ಈಗ ಇಮ್ಮಿಡಿಯೇಟ್ ಆಗಿ ಮನೆಗ್ ಹೋಗು .. ಅಮ್ಮನೊಟ್ಟಿಗೆ ಸ್ವಲ್ಪ ದಿನ ಇರು.. ಮಗ ಅನ್ನೋ ಕಿಂಚಿತ್ತು ಬೆಲೆಯನ್ನಾದರೂ ತೋರ್ಸು ಮಾರಾಯ ... '

ಆದಿ ಆಗಲೂ ಸುಮ್ಮನಿದ್ದ.

'ಇಂಟರ್ನಲ್ಸ್ ಇಲ್ಲ .. ಅಟೆಂಡ್ಎನ್ಸ್ ಇಲ್ಲ .. ಅಟ್ ಲೀಸ್ಟ್ ರನ್ನಿಂಗ್ ಅಲ್ಲಿ ಏನಾದ್ರೂ ಮಾಡಿದ್ರೆ ಸ್ಪೋರ್ಟ್ ಕೋಟದಲ್ಲಿ ಆದ್ರೂ ಎಕ್ಸಾಮ್ಸ್ ಸ್ಕಿಪ್ ಮಾಡಬಹುದಿತ್ತು .. ಕರ್ಮಕ್ಕೆ ಆದೂ ಹಾಳಾಗಿ ಹೋಯ್ತು .. ಇನ್ ಇಲ್ಲಿ ಟೈಮ್ ವೇಸ್ಟ್ ಮಾಡೋಕಿಂತ ಅಮ್ಮನೊಟ್ಟಿಗಾದ್ರೂ ಇರು ಗುರು'

ಎಲ್ಲವನ್ನು ಕೇಳಿ ಆದಿ ಪುನಃ ತನ್ನ ಬೆಡ್ಡಿನ ಮೇಲೆ ಹೋಗಿ ಸುಮ್ಮನೆ ಮಲಗಿದ. ಲೋಕೇಶನಿಗೆ ತನ್ನ ಮುಂದಿದ್ದ ಕನ್ನಡಿಯನ್ನು ಬರಿಗೈಯಿಂದಲೇ ಪುಡಿಮಾಡಬೇಕೆಂಬ ಮನಸ್ಸಾದರೂ ಶಾಂತನಾದ.

ರಾತ್ರಿಯಿಡಿ ಲೋಕೇಶ ಯೋಚಿಸಿದ.

ಆದರೆ ರಾತ್ರಿ ಕಳೆದು ಬೆಳಗಾಗುವುದರೊಳಗೆ ಆದಿ ಊರಿನ ಬಸ್ಸನ್ನು ಹಿಡಿದ.

**

ಹಲವು ತಿಂಗಳುಗಳ ನಂತರ ಮನೆಗೆ ಬಂದ ಆದಿಯನ್ನು ಕಂಡ ಅಮ್ಮ ಬಾಚಿ ತಬ್ಬಿಕೊಂಡು ಅಳತೊಡಗಿದರು. ಎಲುಬುಗಟ್ಟಿದ ಮಗನ ಸ್ಥಿತಿಯನ್ನು ಕಂಡು ಹೌಹಾರಿದ ಅವರು ಕೂಡಲೇ ಎಲ್ಲವನ್ನು ಮರೆತವರಂತೆ ಮಗನ ಶುಶ್ರುಷೆಯಲ್ಲಿ ತೊಡಗಿದರು. ಮಗನಿಗೆ ಮೆಟ್ಟಿದ ಜನರ ಕಣ್ಣನ್ನು ತೆಗೆಯಲು ಹಳದಿ ಕುಂಕುಮ ಬೆರೆಸಿದ್ದ ನೀರಿನ ತಟ್ಟೆಯೊಳಕ್ಕೆ ತೊಟ್ಟು ಮುರಿದ ತೂತು ಮಾಡಿದ ವೀಳೆಯದೆಲೆಯನ್ನು ಅದ್ದಿ ಅದಕೊಂದಿಷ್ಟು 'ಥು ಥು' ಎಂದು ಉಗಿದು ಮಗನ ಮುಖಕ್ಕೆ ನೀಳಿಸಿ, ನಂತರ ಅದ್ದಿದ್ದ ಎಲೆಯನ್ನು ಗ್ಯಾಸ್ ಸ್ಟೋವಿನ ಮೇಲೆ ಸುಟ್ಟು ಕರಕಲಾದ ಅದರ ಮಸಿಯನ್ನು ತಂದು ಮಗನ ಹಣೆಗೆ ಹಚ್ಚಿ ಕೈಯನ್ನು ಮುಖದ ಮೇಲೆ ಸವರಿ ಲಟಲಟನೆ ಲಟಿಗೆಗಳನ್ನು ಮುರಿದು ಜೋರಾಗಿ ನಿಟ್ಟುಸಿರು ಬಿಟ್ಟರು. ನಂತರ ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಲು ಹೇಳಿ , ಬೆನ್ನನ್ನು ಉಜ್ಜಿ ಅವನ ಎಲುಬುಗಟ್ಟಿದ ಬೆನ್ನುಮೂಳೆಗಳನ್ನು ನೋಡುತ್ತಾ 'ಯಾಕ್ ಮಗ ಹೀಗಾಗಿದ್ದೀಯ' ಎಂದು ಕನಿಕರ ಪಟ್ಟರು. ಅಡಿಗೆಮನೆಗೆ ಬಂದವರೇ ಮಗನ ನೆಚ್ಚಿನ ಅಕ್ಕಿ ರೊಟ್ಟಿ ಹಾಗು ಕೋಳಿ ಮಾಂಸದ ಅಡುಗೆಯನ್ನು ಮಾಡತೊಡಗಿದರು. ಬರಗೆಟ್ಟ ಕಟ್ಟೆಯಾಗಿದ್ದ ಆದಿಯ ಹೊಟ್ಟೆಗೆ ಅಮ್ಮನ ಕೈರುಚಿಯ ಮತ್ತು ಎಲ್ಲ ನೋವುಗಳನ್ನು ಮರೆಸಿಹಾಕಿತು. ಲೆಕ್ಕಕ್ಕೆ ಸಿಗದಷ್ಟು ರೊಟ್ಟಿಗಳನ್ನು ತಿಂದು ಮಲಗಿದವನಿಗೆ ಎಚ್ಚರವಾದಾಗ ಸಂಜೆಯ ಕತ್ತಲೆ ಮುಸುಕು ಹಾಕತೊಡಗಿತ್ತು. ಅಮ್ಮ ಕಾದು ಕೂತವಳಂತೆ ಆತ ಕಣ್ಣು ಬಿಡುತ್ತಲೇ ಬಿಸಿಬಿಸಿಯಾದ ಕಾಫಿಯನ್ನು ಮಾಡಿ ತಂದಳು. ಅದೆಷ್ಟೋ ದಿನಗಳಿಂದ ಗಜತೂಕದಂತೆ ಕಲ್ಲಿನಂತಾಗಿದ್ದ ಆತನ ತಲೆಯ ತೂಕ ಮನೆಯ ಘಮಭರಿತ ಕಾಫಿಯನ್ನು ಹೀರುತ್ತಲೇ ಕ್ಷೀಣಿಸತೊಡಗಿತು. ಮನೆಯ ಟೆರೇಸಿನ ಮೇಲತ್ತಿ ಮುಳುಗಿದ ಸೂರ್ಯನ ಹಾದಿಯನ್ನು ಅದೆಷ್ಟೋ ಹೊತ್ತಿನವರೆಗೂ ಹಾಗೆಯೇ ನೋಡುತ್ತಾ ನಿಂತ ಆದಿ. ಸಂಜೆಯ ಹಿತವಾದ ತಂಗಾಳಿ ಆತನ ಮನಸ್ಸಿನ ಭಾರವನ್ನು ತಗ್ಗಿಸಿತು.

'ಎಲ್ ಹೋಗಿರ್ಬಹುದೋ ಆದಿ .. ಇವತ್ತಿಗೆ ಆರ್ ತಿಂಗ್ಳ್ ಆಯ್ತಲ್ಲೋ..' ಟಿವಿಯಲ್ಲಿ ಬರುತ್ತಿದ್ದ ಯಾವುದೊ ಕಾರ್ಯಕ್ರಮವನ್ನು ನೆಪಮಾತ್ರಕ್ಕೆ ನೋಡುವಂತೆ ಅಮ್ಮ ಹೇಳಿದರು.

ಕೆಲ ಕಾಲ ಸುಮ್ಮನಿದ್ದ ಆದಿ ಕೊನೆಗೆ ತಾನು ಅಪ್ಪನನ್ನು ಹುಡುಕಿಕೊಂಡು ತಮಿಳುನಾಡಿನ ಬೃಹದೇಶ್ವರ ದೇವಾಲಯದವರೆಗೂ ಹೋಗಿದ್ದಾಗಿ ಹೇಳಿದನು. ಮಗನ ಮಾತುಗಳನ್ನು ಕೇಳಿ ಆಶ್ಚರ್ಯಗೊಂಡ ಅಮ್ಮ ಆ ಶಿವ ಅದ್ಯಾವ ದೇವಸ್ಥಾನಕ್ಕೆ ಅವ್ರುನ್ನ ಕರಿತಾನೋ ಏನೋ ಎಂದು ಗಳಗಳನೆ ಅಳತೊಡಗಿದರು. ನಂತರ ಅವರು ಹೀಗೆ ಮನೆ ಬಿಡಲು ಬಹುಶಃ ನನ್ನ ಕೊಂಕು ಮಾತುಗಳು ಹಾಗು ಜಗಳವೇ ಕಾರಣ ಎಂದೂ ರೋಧಿಸತೊಡಗಿದರು.

'ನಿನ್ ಯಾಕಮ್ಮ ಅಳ್ತಿಯ .. ಯಾರ್ ಮನೇಲಿ ಇಲ್ದೆ ಇರೋದ್ ಏನಲ್ಲ .. ಯಾರೂ ಬೇಡ ಆದವ್ರಿಗೆ ಜಗಳ ಆದ್ರೇನು ಜಾತ್ರೆ ಆದ್ರೇನು'

'ಮೊದ್ಲೆಲ್ಲ ಹೀಗ್ ಇರ್ಲಿಲ್ಲ ಆದಿ .. ಬರಬರುತ್ತಾ ಈ ಜನ , ಮೋಸ , ವಂಚನೆ , ಸುಳ್ಳುತನ ಇಂತಹ ವಿಷ್ಯಗಳಿಗೇ ಜಾಸ್ತಿ ಸಿಟ್ ಮಾಡ್ಕೊಂಡು ಮನೇಲಿ ಅರಚಾಡತೊಡಗಿದರು.. ನಂಗೂ ಕೋಪ ತಡೀಲಾರ್ದೆ ಬೈಯ್ತಾ ಇದ್ದೆ..'

ಆದಿ ಸುಮ್ಮನಾದ. ಅಪ್ಪ ಅಮ್ಮರ ಅರಚಾಟದ ದಿನಗಳನ್ನು ನೆನೆದು ಆದಿಗೆ ಮತ್ತೆ ತಲೆನೋಯತೊಡಗಿತು. ತಂಗಿಯ ನೆನೆಪೂ ಮರುಕಳಿಸತೊಡಗಿತು. ಸೋಫಾದ ಮೇಲೆಯೇ ಆತ ನಿದ್ರೆಗೆ ಜಾರಿದ. ಅಮ್ಮ ಅವನನ್ನು ಎಬ್ಬಿಸಿ ಮಂಚದ ಮೇಲೆ ಮಲಗಿಸಿದರು.

ಮರುದಿನ ಬೆಳಗ್ಗೆ ಬೇಗನೆ ಎದ್ದ ಆದಿ ವಾಕಿಂಗೆಂದು ನೆಡೆಯುತ್ತಾ ಅಪ್ಪ ಪ್ರತಿದಿನ ಬರುತ್ತಿದ್ದ ಊರ ಹೊರವಲಯದ ಸಣ್ಣ ಕಾಡಿನಲ್ಲಿದ್ದ ಬಿಲ್ಲೇಶ್ವರನ ದೇವಾಲಯಕ್ಕೆ ಬಂದನು. ಕಲ್ಲಿನಿಂದ ನಿರ್ಮಾಣಗೊಂಡಿದ್ದ ಆ ದೇವಾಲಯದ ಸುತ್ತಲೂ ಹಚ್ಚ ಹಸಿರ ಪೊದೆಗಳು ಆವರಿಸಿದ್ದವು. ಚಪ್ಪಲಿಯನ್ನು ಬದಿಗಿರಿಸಿ ಕಲ್ಲಿನ ಮೆಟ್ಟಿಲುಗಳಿಗೆ ನಮಸ್ಕರಿಸಿ ಒಳಗೆ ಹೋದರೆ ಅದೇನೋ ಒಂದು ಬಗೆಯ ಶಾಂತತೆ. ಸುಮಾರು ಎಂಟತ್ತು ಶತಮಾನಗಳಿಗೂ ಹಳೆಯದಾದ ಆ ದೇವಾಲಯವನ್ನು ಮೊದಲ ಬಾರಿಗೆ ಆದಿ ಪ್ರವೇಶಿಸಿದ. ಘಾಡ ಕಪ್ಪು ಕಲ್ಲಿನಿಂದ ನಿರ್ಮಾಣಗೊಂಡಿರುವ ಆ ದೇವಾಲಯದ ಮಧ್ಯ ಭಾಗದಲ್ಲಿ ಶಿವನ ಲಿಂಗ ರಾಜಗಾಂಭೀರ್ಯದಿಂದ ನಿಲ್ಲಲ್ಪಟ್ಟಿತು. ಯಾರೋ ಅದೆಷ್ಟೋ ದಿನಗಳ ಹಿಂದೆ ಹಚ್ಚಿದ್ದ ಮಣ್ಣಿನ ದೀಪ ಆದಿಯನ್ನು ಹತ್ತಿರಕ್ಕೆ ಕರೆಯಿತು. ಕೊಡಲೇ ಆದಿ ದೇವಾಲಯದದ ಪಕ್ಕದಲ್ಲಿ ಹರಿಯುತ್ತಿದ್ದ ಸಣ್ಣ ತೊರೆಯಲ್ಲಿ ಕೈಕಾಲುಗಳನ್ನು ತೊಳೆದುಕೊಂಡು, ದೇವಾಲಯಕ್ಕೆ ಅಂಟಿಕೊಂಡಿದ್ದ ದಾಸವಾಳ ಗಿಡದ ಹೂವುಗಳನ್ನು ಕಿತ್ತು ತಂದ. ಗುಡಿಯ ಮೂಲೆಯಲ್ಲಿ ಯಾರೋ ಇಟ್ಟಿದ್ದ ದೀಪದ ಎಣ್ಣೆಯನ್ನು ಕಂಡು ಸುಟ್ಟು ಕರಕಲಾಗಿದ್ದ ದೀಪದ ಬತ್ತಿಯನ್ನು ಸರಿಪಡಿಸಿ ದೀಪವನ್ನು ಹತ್ತಿಸಿದ. ದೀಪದ ಬೆಳಕು ಶಿವಲಿಂಗಕ್ಕೆ ಚಿನ್ನದ ಹೊಳಪನ್ನು ನೀಡಿತು. ಆದಿಯ ಕೈಗಳು ತನ್ನಿಂತ್ತಾನೆ ಒಟ್ಟಾದವು. ಆತ ಅಲ್ಲಿಯೇ ಕಲ್ಲಿನ ನೆಲದ ಮೇಲೆ ಕೂತು ಓಂಕಾರವನ್ನು ಗುನುಗತೊಡಗಿದ. ಸುತ್ತಮುತ್ತಲಿನ ಹಕ್ಕಿಗಳ ಇಂಚರ ಹೆಚ್ಚಾಗತೊಡಗಿತು. ಕೆಲನಿಮಿಷಗಳ ಕಾಲ ಹೀಗೆ ಓಂಕಾರವನ್ನು ಗುನುಗಿದವನಿಗೆ ಕೂಡಲೇ ಎಚ್ಚರವಾಯಿತು.ಶಿವನ ಆ ಲಿಂಗದ ಹಿಂದೆ ಏನೋ ಅಡಗಿ ಕೂತಿರುವಂತೆ ಭಾಸವಾಯಿತು. ಹೋಗಿ ನೋಡಬೇಕೆಂಬ ಕುತೂಹಲವಾದರೂ ಏನೋ ಒಂದು ಬಗೆಯ ಭಯ. ಆದರೂ ಮನಸ್ಸು ಮಾಡಿ ಆತ ಒಳನೆಡೆದ

Continues..

No comments:

Post a Comment