Sunday, October 1, 2017

ಕುಸ್ತಿ ಪಂದ್ಯದ ದಂತಕಥೆ : ದಿ ಗ್ರೇಟ್ ಗಾಮ!

ಕುಸ್ತಿ ಪಂದ್ಯದ ಇತಿಹಾಸದಲ್ಲಿ ಸೋಲಿಲ್ಲದ ಸರದಾರನೊಬ್ಬನಿದ್ದ. ಭಾರತ, ಇಂಗ್ಲೆಂಡ್, ಫ್ರಾನ್ಸ್ ನಷ್ಟೇ ಅಲ್ಲದೆ ಇಡೀ ಭೂ ಮಂಡಲದಲ್ಲೇ ಆತ ಒಮ್ಮೆಯೂ ಸೋತ ಪುರಾವೆಗಳಿಲ್ಲ! ಬರೋಬ್ಬರಿ 50 ವರ್ಷಗಳಗಾಲ ಅಜೇಯನಾಗಿ ವಿಶ್ವದೆಲ್ಲೆಡೆ ರಾರಾಜಿಸಿದ್ದ ಆ ಕುಸ್ತಿಪಟು ಸ್ವಾತಂತ್ರ್ಯಪೂರ್ವ ಭಾರತದ ಹೆಮ್ಮೆಯ ಹೆಸರು. ಒಮ್ಮೆ ಬರೋಬ್ಬರಿ 20 ಕುಸ್ತಿಪಟುಗಳನ್ನು ಒಮ್ಮೆಲೇ ಎದುರಿಸಬಲ್ಲೆ ಎಂದು ಹೇಳಿದರೂ ಒಬ್ಬನೂ ಆತನ ಬಳಿಗೆ ಸುಳಿದಿರಲಿಲ್ಲ!! ಅಂತಹ ಒಂದು ಭಯಂಕರ ಭಯವನ್ನು ಹೊತ್ತಿಸಿ ತಿರುಗುತ್ತಿದ್ದ ಆ ವ್ಯಕ್ತಿಯ ಹೆಸರೇ 'ದಿ ಗ್ರೇಟ್ ಗಾಮ' ಅಥವಾ ಕುಸ್ತಿ ಇತಿಹಾಸದ ದಂತಕತೆ ಗುಲಾಮ್ ಮೊಹಮ್ಮೆದ್ ಬಕ್ಷ್.

1878 ಮೇ 22 ರಲ್ಲಿ ಪಂಜಾಬಿನ ಅಮೃತಸರದಲ್ಲಿ ಜನಿಸಿದ 5 ಅಡಿ 7 ಅಂಗುಲ ಉದ್ದದ ಗಾಮ ಬೆಳಕಿಗೆ ಬಂದದ್ದು ಅಂದಿನ ಕುಸ್ತಿ ಚಾಂಪಿಯನ್ ಎನಿಸಿದ್ದ 7 ಅಡಿ ಉದ್ದದ ರಹೀಮ್ ಬಕ್ಷ್ ಎಂಬ ಕುಸ್ತಿಪಟುವಿಗೆ ಸವಾಲೆಸೆದಾಗ. ಪ್ರಸ್ತುತ ಟೀಮ್ ಇಂಡಿಯ ಕ್ರಿಕೆಟ್ ತಂಡವನ್ನು ಚೀನೀ ತಂಡವೊಂದು ಕೆದಕಿದಂತೆ. ತನ್ನ ಹತ್ತನೇ ವಯಸ್ಸಿಗಾಗಲೇ ಕುಸ್ತಿಯ ಅಖಾಡಕ್ಕಿಳಿದು ಕೊಂಚ ಮಟ್ಟಿನ ಹೆಸರನ್ನು ಗಳಿಸಿದ್ದ ಗಾಮ, ರಹೀಮ್ ಬಕ್ಷ್ ಎಂಬ ದೈತ್ಯನನ್ನು ಎದುರಾಕಿಕೊಂಡದ್ದು ಅಂದು ಹಲವರಿಗೆ ತಮಾಷೆಯ ವಿಚಾರವಾಗಿದ್ದಿತು. ಅಲ್ಲದೆ ಆಗ ಗಾಮನ ವಯಸ್ಸೂ ಕೇವಲ 17 ವರ್ಷಗಳು! ಆದರೆ ಮೀಸೆ ಚಿಗುರದ ಪೋರನೊಬ್ಬ ದೇಶೀ ಕುಸ್ತಿ ಚಾಂಪಿಯನ್ ಒಬ್ಬನೊಟ್ಟಿಗೆ ಸೆಣೆಸುವುದೇ ಅಂದು ಮಹಾ ಸುದ್ದಿಯಾಗಿದ್ದಿತು. ಅಲ್ಲದೆ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡ ಸುದ್ದಿಯಂತೂ ಕೆಲವರಿಗೆ ತಮ್ಮ ಕಿವಿಯನ್ನೇ ನಂಬದಂತೆ ಮಾಡಿತ್ತು. ಹೌದು, ಅಂದು ಗಾಮ ರಹೀಮ್ ಬಕ್ಷ್ ನನ್ನು ಸೋಲಿಸಲಾಗದಿದ್ದರೂ ಆತನ ಎದಿರು ಸೋಲೊಪ್ಪಿಕೊಳ್ಳಲಿಲ್ಲ! ಇಷ್ಟೇ ಸಾಕಾಗಿತ್ತು ಅಂದು ಗಾಮ ದೇಶದ ಕುಸ್ತಿ ವಲಯದಲ್ಲಿ ಹೆಸರು ಗಳಿಸಿಕೊಳ್ಳಲು. ಅಲ್ಲಿಂದ ಮುಂದೆ ದೇಶದ ದೊಡ್ಡ ದೊಡ್ಡ ಕಲಿಗಳನ್ನು ಅಡ್ಡಡ್ಡ ಮಲಗಿಸತೊಡಗಿದ ಈ ಭೂಪ ಮುಂದೊಂದು ದಿನ ಅದೇ ಏಳು ಅಡಿಯ ರಹೀಮ್ ಬಕ್ಷ್ ನನ್ನೂ ಸೋಲಿಸಿಯೇ ತೀರುತ್ತಾನೆ. ಅಲ್ಲಿಂದ ಮುಂದೆ ಅಖಂಡ ಭಾರತದಲ್ಲಿ ಗಾಮನನ್ನು ಸೋಲಿಸುವ ಮತ್ತೊಬ್ಬ ಕಾಣಲಿಲ್ಲ. ಮುಂದೆ ಗಾಮನ ಪಯಣ ದೂರದ ಇಂಗ್ಲೆಂಡ್ ಕಡೆಗೆ. ಬಿಳಿಯರ ಶಕ್ತಿ ಹಾಗು ಸೊಕ್ಕನ್ನೂ ನೆಲಕುರುಳಿಸುವ ಎಡೆಗೆ.

ಆದರೆ ಲಂಡನ್ ನಗರಿಯಲ್ಲಿ ಕುಸ್ತಿಯ ಅಖಾಕ್ಕಿಳಿಯುವುದು ಅಷ್ಟೇನೂ ಸುಲಭವಾಗಿರಲಿಲ್ಲ. ಪರಿಣಾಮ ಗಾಮ ತನ್ನೊಡನೆ ಸೆಣೆಸಲು ಸುತ್ತೋಲೆಯೊಂದನ್ನು ಹೊರಡಿಸಬೇಕಾಯಿತು. ಆದರೆ ಸುಖಾಸುಮ್ಮನೆ ಕುಸ್ತಿ ಪಂದ್ಯಕ್ಕೆ ಬಾ ಎಂದರೆ ಬಂದುಬಿಡುವರಾಗಿರಲಿಲ್ಲ ಬಿಳಿಯ ದೈತ್ಯರು. ಹಾಗಾಗಿ ಗಾಮ ಅವರುಗಳೆಲ್ಲರಿಗೂ ಒಂದು ಸವಾಲನ್ನೆಸೆಯುವ ಸುತ್ತೋಲೆಯನ್ನು ಹೊರಡಿಸುತ್ತಾನೆ. 'ಎಷ್ಟೇ ತೂಕದ, ಯಾವುದೇ ವರ್ಗದ ಯಾವ ಕುಸ್ತಿಪಟುವೆ ಆಗಲಿ, ಅವರನ್ನು ಕೇವಲ ಮೂವತ್ತು ನಿಮಿಷದೊಳಗೆ ಅಂತಹ ಮೂವರು ಪಟುಗಳನ್ನು ಸೋಲಿಸುವುದಾಗಿ' ಹೇಳುತ್ತಾನೆ. ಅಷ್ಟೆಲ್ಲಾ ಸಾಮರ್ಥ್ಯದ ಜೀವವೊಂದು ಬದುಕಿರಲೇ ಸಾಧ್ಯವಲ್ಲ ಎಂದರಿತಿದ್ದ ಅಲ್ಲಿನ ಕುಸ್ತಿಪಟುಗಳು ಈ ಘೋಷಣೆಯನ್ನು ಸುಳ್ಳುವಾರ್ತೆ ಎಂಬಂತೆ ಅಲ್ಲಗೆಳೆಯುತ್ತಾರೆ! ಆದರೆ ಕಳೆಗುಂದದ ಗಾಮ ಈ ಬಾರಿ ನೇರವಾಗಿ ಒಂದೆರೆಡು ಕುಸ್ತಿ ಪಟುಗಳನ್ನೇ ಆರಿಸಿಕೊಂಡು ಸವಾಲನ್ನೆಸೆಯುತ್ತಾನೆ. ಅವರನ್ನು ಈತ ಸೋಲಿಸುವುದಾಗಿಯೂ ಇಲ್ಲವೇ ಈತನೇ ಖುದ್ದಾಗಿ ಪ್ರಶಸ್ತಿಯ ಮೊತ್ತದಷ್ಟೇ ಹಣವನ್ನು ಅವರಿಗೆ ನೀಡುವುದಾಗಿ ತಿಳಿಸುತ್ತಾನೆ. ಇಂತಹ ನೇರ ಸವಾಲಿಗೆ ಅಣಿಯಾದ ಮೊದಲ ಕುಸ್ತಿಪಟು ಬೆಂಜಮಿನ್ ರೋಲರ್. ಅಂದು ನೆಡೆದ ಕಾಳಗದಲ್ಲಿ ಕೇವಲ 100 ಸೆಕೆಂಡ್ ನೊಳಗೆ ಬೆಂಜಮಿನ್ ರೋಲರ್ ಗಾಮ ನ ವಿರುದ್ಧ ಸೋಲನೊಪ್ಪಿಕೊಂಡಿರುತ್ತಾನೆ! ಕೂಡಲೇ ಸುದ್ದಿ ನಗರದ ಎಲ್ಲಡೆ ಹಬ್ಬಿದ್ದರಿಂದ ಉತ್ಸಾಹಗೊಂಡ ಇತರ ಕುಸ್ತಿಪಟುಗಳು ಮಾರನೇ ದಿನ ಇವನ ವಿರುದ್ಧ ಸೆಣೆಸಲು ಅಣಿಯಾಗುತ್ತಾರೆ. ಅಂದು ಗಾಮ ಅಲ್ಲಿಗೆ ಬಂದಿದ್ದ ಅಷ್ಟೂ ಜನ ಕುಸ್ತಿಪಟುಗಳನ್ನು ಒಂದೇ ದಿನದಲ್ಲಿ ಸದೆಬಡಿದಿರುತ್ತಾನೆ. ಅವರುಗಳ ಸಂಖ್ಯೆ ಬರೋಬ್ಬರಿ 12!!

ಅಲ್ಲಿಂದ ಮುಂದೆ ಗಾಮನ ನೆಡೆ ಆನೆಯ ನೆಡೆಯಾಗಿ ಸಾಗುತ್ತದೆ. ವಿಶ್ವದ ಯಾವುದೇ ಮೂಲೆಯಿಂದಲೂ ಯಾರೊಬ್ಬ ಕುಸ್ತಿಪಟುವೂ ಈತನನ್ನು ಸೋಲಿಸುವುದು ಇರಲಿ ಎದುರು ಹಾಕಿಕೊಳ್ಳಲೂ ಅಂಜುತ್ತಿದ್ದರು. ಅಂದಿನ ವಿಶ್ವ ಚಾಂಪಿಯನ್ ಆಗಿದ್ದ ಸ್ಟ್ಯಾನಿಸ್ಲಾಸ್ಸ್ ಜ್ಬೈಸ್ಕೊ ನನ್ನು ಗಾಮ ಎರಡು ಘಂಟೆ ಮುವ್ವತೈದು ನಿಮಿಷಗಳ ಕಾಲ ಮಕಾಡೆ ಮಲಗಿಸಿದ್ದು ಇಂದಿಗೂ ಕೇಳುಗರ ಎದೆಯನ್ನು ನಡುಗಿಸದಿರದು.

ಗಾಮನ ದಿನನಿತ್ಯದ ಅಭ್ಯಾಸವೇನಾದರೂ ಕೇಳಿದರೆ ಅಬ್ಬಬ್ಬ ಎನಿಸದಿರದು ನಮಗೆ. ಬರೋಬ್ಬರಿ 5000 ಸ್ಸ್ಕ್ವಾಟ್ಸ್ ಹಾಗು 3000 ಪುಷಪ್ಸ್ ದಿನವೊಂದಕ್ಕೆ! ಇನ್ನು 7.5 ಲೀಟರ್ ನಷ್ಟು ಹಾಲು ಹಾಗು 1 ಕೆಜಿಯಷ್ಟು ಬಾದಾಮಿ ಈತನ ಶಕ್ತಿಯನ್ನು ಹೆಚ್ಚಿಸುತ್ತಿದ್ದವು. ಇಂತಹ ಒಬ್ಬ ಮಹಾಕಲಿಯ ಪ್ರಭಾವ ವಿಶ್ವದೆಲ್ಲೆಡೆ ಪಸರಿಸಿತ್ತು ಎಂಬುದ್ದಕ್ಕೆ ಮಾರ್ಷಲ್ ಆರ್ಟ್ಸ್ ಸ್ಪೆಷಲಿಸ್ಟ್ 'ಬ್ರೂಸ್ ಲಿ' ಯೇ ಒಂದು ಉತ್ತಮ ಉದಾಹರಣೆ. ಬ್ರೂಸ್ ಲಿ ಗಾಮನ ತರಬೇತಿಯಿಂದ ಉತ್ತೇಜನಗೊಂಡಿದ್ದನಲ್ಲದೆ ತನ್ನ ತರಬೇತಿಗಳಲ್ಲೂ ಕೆಲವೊಂದನ್ನು ಬೆರೆಸಿಕೊಳ್ಳುತ್ತಿದ.

ಇಂತಹ ಒಬ್ಬ ವ್ಯಕ್ತಿ ಬದುಕಿದ್ದ ಎಂದರೆ ನಂಬುವುದೇ ಅಸಾಧ್ಯ. ಯಾವುದೇ ಕ್ರೀಡೆಯಾಗಲಿ ಅದರಲ್ಲಿ ಯಾರೊಬ್ಬ ಮಹಾನ್ ಎಂದೆನಿಸಿಕೊಂಡಿದ್ದರೂ ತನ್ನ ವೃತ್ತಿಜೀವನದ ಆದಿಯಲ್ಲೋ ಅಥವಾ ಅಂತ್ಯದಲ್ಲೋ ಎಲ್ಲದರೊಮ್ಮೆ ಸೋತೆ ಸೋತಿರುತ್ತಾರೆ. ಸೋಲುವುದು ಅನಿವಾರ್ಯವಿಲ್ಲದಿದ್ದರೂ ನಮಗೆ ಅಂತಹ ಒಂದೂ ಪುರಾವೆಗಳು ಇತರೆ ಕ್ರೀಡೆಗಳಲ್ಲಿ ಕಾಣಲು ಸಿಗದು. ಆದರೆ ಗಾಮ ತಾನು ಆಡಿದ ಅಷ್ಟೂ ವೃತ್ತಿಪರ ಕುಸ್ತಿಯಲ್ಲಿ ಒಮ್ಮೆಯೂ ಸೋಲನ್ನು ಕಾಣದಿರುವುದು ನಿಜವಾಗಿಯೂ ಆಶ್ಚರ್ಯಕರ. 1200 ಕೆಜಿಯ ಕಲ್ಲೊಂದನ್ನು ಎತ್ತಬಲ್ಲ ವ್ಯಕ್ತಿಯೊಬ್ಬನಿದ್ದ ಎಂದರೆ ಅದು ಗಾಮ ಮಾತ್ರ. ಆತ ಎತ್ತಿದ್ದ ಅಷ್ಟು ದೊಡ್ಡ ಕಲ್ಲು ಇಂದಿಗೂ ಬರೋಡ ಮ್ಯೂಸಿಯಂ ನಲ್ಲಿ ಇರಿಸಲಾಗಿದೆ. ವಿಶ್ವವನ್ನೇ ತನ್ನ ಕದಂಭ ಬಾಹುಗಳಿಂದ ಬಗ್ಗು ಬಡಿದ ಗಾಮನ ಇರುವಿಕೆಗೆ ಅದು ಸಾಕ್ಷಿಯಾಗಿದೆ.


No comments:

Post a Comment