Friday, August 10, 2018

ಬಾಡದ ಹೂವು...

ಹತ್ತು ವರ್ಷದ ಮೊಮ್ಮಗನಿಂದ ಇಂದು ಬೆಳ್ಳಂಬೆಳಗ್ಗೆ ಬಂದ ಸುದ್ದಿಯನ್ನು ಕೇಳಿ ಜೀವ ಹಿಂಡಿಹೋದಂತಾಯಿತು. ಹಿಡಿದಾದ ಒಂದು ನಿಟ್ಟಿಸಿರು. ಆ ಉಸಿರಿನಲ್ಲಿ ದಶಕಗಳ ಕಾಲ ಎದೆಯಾಳದಲ್ಲಿ ಅವಿತು ಕಲೆತು ಪಳೆಯುಳಿಕೆಯಾದಂತಹ ಪ್ರೀತಿ, ಸಿಟ್ಟು, ಕೋಪ, ದುಃಖ ದುಮ್ಮಾನಗಳು ಒಮ್ಮೆಲೇ ಒಟ್ಟೊಟ್ಟಿಗೆ ಮೂಡಿದ್ದವು. ಕೆಲಕಾಲ ಕಣ್ಣು ಮುಚ್ಚಿ ಮೌನಿಯಾದೆ. ಮನವನ್ನೂ ಮಾತಾಡಲು ಬಿಡದೆ ಸುಮ್ಮನಿರಿಸಿದೆ.

ಜೀವನ. ಎಪ್ಪತ್ತೇಳು ವರ್ಷಗಳ ಈ ಜೀವನ ಮೊದಲು ಏಳು ವರ್ಷಗಳಷ್ಟೇ ಆಕೆಯನ್ನು ಗುರುತಿಸದು. ಅದು ಮೂರನೇ ತರಗತಿಯ ಮೊದಲ ಸಾಲ ಕೊನೆಯ ಸೀಟು. ಎಣ್ಣೆಯಚ್ಚಿದ ಕೂದಲ ನೀಳವಾದ ಜಡೆಯೆರಡನ್ನು ಅಂದವಾಗಿ ಕಟ್ಟಿ, ಹಿಂದಿನ ದಿನವೇಳಿದ ಮನೆಗೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಬಂದಿರುವಳೋ ಎಂಬ ಧಾಟಿಯಲ್ಲಿ ಕಿಟಕಿಯ ಪಕ್ಕಕ್ಕೆ ಆಕೆ ಕುಳಿತಿದ್ದಾಳೆ. ಮೊಣಕೈಯೆರಡು ಆಕೆಯ ಮಂಡಿಗಳ ಮೇಲೆ, ಕೈಯ ಅಸ್ತಗಳೆರೆಡು ಎಳೆಯ ಕೆನ್ನೆಗಳ ಮೇಲೆ. ಯಾರೊಟ್ಟಿಗೂ ತುಟಿಕ್ ಪಿಟಿಕ್ ಅನ್ನದೆ ಏನೋ ಒಂದು ಆಲೋಚನೆಯಲ್ಲಿ ಮಗ್ನಳಾಗಲಿದ್ದಾಳೆ. ತರಗತಿಯ ಮಕ್ಕಳೆಲ್ಲ ಜೀವವನ್ನೇ ಪಣಕ್ಕಿಟ್ಟು ಅರಚಿ ಗುಂಡಾಂತರ ಮಾಡುತ್ತಿರುವಾಗ ಈಕೆ ಮೌನಗೌರಿಯ ಮುಖವಾಡವನ್ನು ಹಾಕಿಕೊಂಡಿದ್ದಾಳೆ. ಚೋಟುದ್ದದ ಕಾಲುಗಳ್ನು ನಿಧಾನವಾಗಿ ಇಡುತ್ತಾ ಆಕೆಯ ಹಿಂಬದಿಗೆ ಬಂದು 'ಹೂ...' ಎಂದು ಕೂಗಿದ ಸದ್ದಿಗೆ ಆಕೆ ತನ್ನ ಕೈಗಳೆರಡನ್ನು ಕಿವಿಯ ಮೇಲಿರಿಸಿ ಭಯದಿಂದ ನನ್ನ ಮೊದಲ ಬಾರಿಗೆ ನೋಡಿದ್ದನ್ನ ನಾನು ಇಂದಿಗೂ ಮರೆತಿಲ್ಲ. ಎಂದೆಂದಿಗೂ ಮರೆಯುವುದಿಲ್ಲ.

'ತಾತ, ಅಪ್ಪ ತಿಂಡಿಗೆ ಆನ್ಲೈನ್ ಆರ್ಡರ್ ಮಾಡಿ ಆಗಿದೆ ಅಂತೇ. ಪಾಸ್ತಾ.. ಬೇಗ ತಿನ್ನು, ನಾನು ಲಂಚ್ ಬ್ರೇಕ್ ಗೆ ವಿಡಿಯೋ ಕಾಲ್ ಮಾಡ್ತೀನಿ' ಎಂದ ಮೊಮ್ಮಗನ ಮೆಸೇಜುಗಳು ಗೋಡೆಯ ಮೇಲೆ ಒಂದೊಂದಾಗೆ ಮೂಡತೊಡಗಿದವು.ಎಲ್ಲರೂ ಇದ್ದೂ ಯಾರೂ ಇಲ್ಲದ ಇಂದಿನ ಮುದಿ ಜೀವಗಳಿಗೆ ಓಲ್ಡ್ ಏಜ್ ಹೋಮುಗಳೇ ಜೀವನದ ಕೊನೆಯ ಛಾವಣಿ. ನಾನಿಲ್ಲಿಗೆ ಬಂದು ಅದಾಗಲೇ ಏಳು ವರ್ಷಗಳಾಗಿವೆ. ಇನ್ನೆಷ್ಟು ದಿವಸ ಈ ಜೀವನದ ಬಂಡಿಯನ್ನು ಸವೆಸಬೇಕೋ. ಆಕೆಯೊಟ್ಟಿಗೆ ನಾನೂ ಹೊರಟಿದ್ದರೆ? ಆ ಮಧುರ ಯಾನದಲ್ಲಿ ನಾನು ಹಾಗು ಆಕೆ. ಇಬ್ಬರೇ. ಸೂರ್ಯ. ಚಂದ್ರ, ನಕ್ಷತ್ರಾದಿಗಳಾಚೆಗೆ ಚಲಿಸುತ್ತ ಗೊತ್ತಿರದ ಗುರಿಯನ್ನು ಅನ್ವೇಷಿಸುತ್ತಾ ಆ ಅನಂತ ನಡಿಗೆಯಲ್ಲಿ.. ನಾನು ಹಾಗು ಅವಳು….

ಕಲ್ಲಾಟ. ಬಿಡುವು ಸಿಕ್ಕಾಗೆಲ್ಲ ಆಕೆ, ನಾನು ಜೊತೆಗೆ ಹತ್ತಾರು ಕಲ್ಲುಗಳು. ಕರ ಕರ ಸದ್ದನ್ನು ಮಾಡುತ್ತಾ, ಒಂದೊಂದೇ ಕಲ್ಲನ್ನು ಗಾಳಿಗೆ ಎಸೆಯುತ್ತಾ, ಕೈ ಬೆವತು ನೆಲದ ಮೇಲಿದ್ದ ದೂಳೆಲ್ಲ ಸೇರಿ ಕೊಳಕು ಕೊಳಕುಗೊಂಡ ಕೈಗಳಲ್ಲೇ ಆಡಿದ ಆಟಗಳು ಅದೆಷ್ಟೋ! ಅಂದಿನ ಒಂದೆರೆಡು ಕಲ್ಲುಗಳನ್ನು ನಾನು ಇಂದಿಗೂ ಕಾಪಾಡಿಕೊಂಡು ಬರಬೇಕಿತ್ತು. ಆಕೆಯ ನೆನಪಿಗೆ. ಅಲ್ಲ, ಅಲ್ಲ, ಆ ನೆನಪಿನ ಬಯಕೆಗೆ….

ಎಳೆಯ ವಯಸ್ಸಿನ ಗೆಳೆತನವೇ ಹಾಗೆ. ಹುಡುಗಿ ಅಂದವಾಗಿದ್ದು ಹಲವು ವರ್ಷಗಳ ನಂತರ ಕಾಲೇಜಿನಲ್ಲೋ, ಆಫೀಸಿನಲ್ಲೋ ಮಗದೊಮ್ಮೆ ಸಿಕ್ಕರೆ ಮುಗ್ದ ಗೆಳೆತನದ ನೆನಪಿನ ಗೂಡು ಪ್ರೀತಿ ಪ್ರೇಮ ಎಂಬ ಹಲವಾರು ಸಂಬಂಧಗಳಿಗೆ ದಾರಿಮಾಡಿಕೊಡುತ್ತದೆ. ಅದು ವಯಸ್ಸಿನ ಮಾಹೆಯೋ ಅಥವಾ ತಿಳಿದೇ ಜರುಗುವ ತಪ್ಪೋ ಗೊತ್ತಿಲ್ಲ. ಆದರೆ ಪ್ರಾಥಮಿಕ ಶಾಲೆಯ ನಂತರ ಆಕೆಯ ನೆನಪು ಅದೆಷ್ಟು ಕಾಡಿತು ನನಗೆ. ಆಕೆಯೆಲ್ಲೋ, ನಾನೆಲ್ಲೋ. ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯ ನಂತರ ಮಾರ್ಕ್ಸ್ ಶೀಟ್ಗಳನ್ನು ತೆಗೆದುಕೊಳ್ಳಲು ಕೊನೆಯಬಾರಿ ಹೋದಾಗ ಕಾಕತಾಳೀಯವೆಂಬಂತೆ ಆಕೆಯೂ ಅದೇ ಸಮಯಕ್ಕೆ ಬಂದಿದ್ದಳು. ಕಪ್ಪು ಬಣ್ಣದ ಬಟ್ಟೆಯ ಮೇಲೆ ಹರಿಶಿನ ಬಣ್ಣದ ನಕ್ಷತ್ರಗಳೂ ಅಥವಾ ಹರಿಶಿನ ಬಣ್ಣದ ಬಟ್ಟೆಯ ಮೇಲೆ ಕಪ್ಪು ಬಣ್ಣದ ಚಿಟ್ಟೆಗಳೋ ನೆನಪಿಗೆ ಬರುತ್ತಿಲ್ಲ. ಆದರೆ ಆ ಕೊನೆ ಕ್ಷಣವನ್ನು ಮುಂದೆ ನಾನು ಪ್ರತಿದಿನ ನೆನೆದುಕೊಳ್ಳುತ್ತಿದ್ದೆ. ಆದದ್ದಾಗಲಿ ಆಕೆ ಇರುವ ಶಾಲೆ ಯಾವುದೆಂದು ತಿಳಿದು ನಾನೂ ಅಲ್ಲಿಗೆ ಸೇರಿಕೊಂಡರೆ? ಆಕೆ ಎಲ್ಲಿದ್ದಾಳೆ? ಆಕೆ ಸಿಕ್ಕರೂ ಶಾಲೆಗೆ ಸೇರಿಸಲು ಮನೆಯವರು ಒಪ್ಪುವರೇ? ಗೊತ್ತಿರಲಿಲ್ಲ. ಆದರೂ ಹುಡುಕಿದೆ! ಸ್ಥಳಗುರುತ್ತಿದ್ದ ಆಕೆಯ ಮನೆಯನ್ನು ಹುಡುಕಿ ಹೋಗಿ ಕೇಳಿದರೆ ಅಂದು ಆಕೆ ಮನೆಯಲ್ಲಿರಲಿಲ್ಲ. ಮತ್ತೊಮೆ ಹೋಗಲು ಧೈರ್ಯವೇ ಸಾಲಿರಲಿಲ್ಲ! ನೆನಪುಗಳು ಚಟಪಟಗುಡುತ್ತಿದ್ದವು. ಕಾಲ ಓಡತೊಡಗಿತ್ತು. ಮಾರ್ಕ್ ಝುಕರ್ಬರ್ಗ್ ಕೂಡ ಕೊಂಚ ಲೇಟಾಗೆ ಫೇಸ್ಬುಕ್ಕನ್ನು ಅನ್ವೇಷಿಸಿದ. ಅದೆಷ್ಟು ಬೇಗ ಆತನೂ ಮುದುಕನಾದ! ಕಲಿಯುಗದ ಪ್ರೇಮದೇವತೆಗಳ ಸಾಲಿಗೆ ಸೇರುವ ಆತನ ಅನ್ವೇಷಣೆಯ ಐದಾರು ವರ್ಷಗಳ ನಂತರ ಆಕೆ ಮತ್ತೊಮೆ ನನಗೆ ಸಿಕ್ಕಳು ಅಥವಾ ನಾನು ಆಕೆಗೆ ಸಿಕ್ಕನೆ? ಇಲ್ಲ, ಆಕೆಯೇ ನನಗೆ ಸಿಕ್ಕಳು. ಅದೆಂತಹ ಆನಂದ! ಸಣ್ಣವನಿದ್ದಾಗ ಕಳೆದುಕೊಂಡ ಆಟಿಕೆಯೊಂದು ಪುನ್ಹ ಸಿಕ್ಕಂಥ, ಅಂಗನವಾಡಿಗೆ ಸೇರಿಸಿದ ಮೊದಲನೇ ದಿನ ಅಮ್ಮನ ದಾರಿಯನ್ನೇ ವರುಷಗಳಂತೆ ಕಾದು, ಅತ್ತು, ಬೇಸತ್ತು ಕೊನೆಗೆ ದೂರದಿಂದ ಆಕೆ ಬರವುದ ಕಂಡಾಗ ಮೂಡುತ್ತಿದ್ದ ಸಂತೋಷದ ಬುಗ್ಗೆಗಳ ಅನುಭವದಂತೆ ಅಂದು ಈಕೆಯೊಟ್ಟಿಗೆ ಮೊದಲ ಬಾರಿಗೆ ಫೋನಿನಲ್ಲಿ 'ಹಲೋ' ಎಂದಾಗ ಆಗಿದ್ದಿತು.

ವರುಷಗಳ ತಪ್ಪಸ್ಸಿಗೆ ಏನೋ ಎಂಬಂತೆ ದೊರೆತ ಆಕೆಯ ಮಾತುಗಳ ಮುಂದೆ ಏನೇನೂ ಬೇಡವಾಯಿತು. ಸ್ಕೂಲು, ಕಾಲೇಜು, ಪ್ರೀತಿ, ಗೆಳೆತನ, ಇಷ್ಟ ಕಷ್ಟಗಳಿಂದಿಡಿದು, ಸಾವು, ನೋವು, ಜೀವ ಜನ್ಮಜನ್ಮಾಂತರಗಳವರಗೆ ಘಂಟೆಗಟ್ಟಲೆ ಮಾತು, ನೂರಾರು ಮೆಸೇಜುಗಳು, ಆಗೊಮ್ಮೆ ಈಗೊಮ್ಮೆ ವಿನಿಮಯ ಮಾಡಿಕೊಳ್ಳುತ್ತಿದ್ದ ಗಿಫ್ಟುಗಳು ಏನೋ ಒಂದು ಅಕಲ್ಪಿತ ಲೋಕವನ್ನೇ ನನ್ನಲ್ಲಿ ಸೃಷ್ಟಿಸಿಬಿಟ್ಟಿದ್ದವು. ಕೆಲವೊಮ್ಮೆ ಪ್ರತಿಭಾರಿಯ ಕನಸ್ಸಿನಂತೆ ಇದೂ ಕೂಡ ಕನಸ್ಸಿರಬಹುದೇ ಎಂದನಿಸಿದ್ದು ಮಾತ್ರ ಸುಳ್ಳಲ್ಲ. ಆದರೂ ಅದೆಷ್ಟೋ ಭಾರಿ ಅದು ನಿಜವಾಗದಿರಲೆಂದು ಬೇಡಿಕೊಂಡು ಪರಿತಪಿಸುತ್ತಿದ್ದೆ. ಎಲ್ಲಿಯೂ ತೋರ್ಪಡಿಕೆಗೆ ಅವಕಾಶವಿಯಲಿಲ್ಲ. ನಟಿಸಿ ಭ್ರಮಿಸಿ ಗಳಿಸುವ ಜರೂರು ನನಗೆ ಅಂದಿಗೂ ಇರಲಿಲ್ಲ. ಇಂದೂ ಬೇಕಿಲ್ಲ! ಹೆಚ್ಚು ಕಡಿಮೆ ನನ್ನ ಗುಣಸ್ವಭಾವ ಅಂದು ಹೇಗಿದ್ದಿತೋ ದಶಕಗಳ ನಂತರ ಇಂದಿಗೂ ಹಾಗೆಯೇ ಇದೆ. ಮಾತಿನ ವಕ್ಕಣಿಯಲ್ಲೋ, ಮುಖಪುಟಗಳಲ್ಲೋ ಮತ್ತೆಲ್ಲೋ ತಾನೊಬ್ಬ ಸುಂದರಾಂಗ, ಸಾತ್ವಿಕ, ಸ್ನೇಹಿತರಿಂದ ಸುತ್ತುವರೆದ ಸೊಗಸುಗಾರನೆಂದು ತೋರ್ಪಡಿಸಿಕೊಂಡು ಪ್ರೀತಿಯನ್ನು ಗಿಟ್ಟಿಸಿಕೊಳ್ಳುವುದು ಕಷ್ಟದ ವಿಚಾರವಾಗಿರಲಿಲ್ಲ. ಆದರೆ ನಾನೆಂದೂ ಆ ಹಾದಿಯನ್ನು ಹಿಡಿಯಲಿಲ್ಲ. ಹಾಗಂತ ನನ್ನಲ್ಲಿ ನ್ಯೂನ್ಯತೆಗಳೇನು ಇರಲಿಲ್ಲ ಎಂದಲ್ಲ. ಆದರೆ ಪಡೆದುಕೊಳ್ಳುವ ಆಸೆಗೆ ಬಲಿಯಾಗಿ ನಾನೆಂದು ಅವುಗಳನ್ನು ಬಚ್ಚಿಡಲಿಲ್ಲ. ಹೀಗೆ ತಂತ್ರಜ್ಞಾನದ ನೆರಳಲ್ಲೇ ಅರಳಿದ ನಮ್ಮಿಬ್ಬರ ಸಂವಹನ ಕೇವಲ ಕಾಣದೆ ಆಡದ ಮಾತುಗಳು ಹಾಗು ಟಕಟಕ ಕುಟ್ಟುವ ಮೆಸೇಜುಗಳಿಗೆ ಸೀಮಿತವಾಗಿದ್ದವು. ಪ್ರತಿದಿನ ರಾತ್ರಿ ಹತ್ತರ ಸುಮಾರಿಗೆ ಶಬರಿಯಂತೆ ಕಾದು ಮನೆಯ ಮೇಲ್ಚಾವಣಿಯ ಮೇಲೆ ತಂಪಾದ ಗಾಳಿಗೆ ಮುಖವೊಡ್ಡಿ ಆಕೆಯ ನಂಬರಿಗೆ ರಿಂಗಾಯಿಸಿದಾಗ ನನ್ನ ಮನದಲ್ಲಿ ಮೂಡುತ್ತಿದ್ದ ಸಂತೋಷದ ಅಲೆಗಳನ್ನಾಗಲಿ, ನಂತರ ಆಕೆಯ 'ಹಲೋ' ಎಂಬ ಉದ್ವೇಗಭರಿತ ಎರಡಕ್ಷರವನ್ನು ಕೇಳಿ ದಿನದ ಜಂಜಾಟವೆಲ್ಲ ಮರೆಯಾಗಿ ಮಂದಹಾಸದಿಂದ ಅರಳುತ್ತಿದ್ದ ನನ್ನ ಮುಖಭಾವವನ್ನಾಗಲಿ ಆಕೆ ಕಾಣಲಿಲ್ಲ. ಆಕೆಯ ಮಾತುಗಳನ್ನು ಅರೆಕಿವುಡನಿಗೆ ಕೇಳುವ ಅಮೂಲ್ಯ ಪದಗಳಂತೆ ಅಷ್ಟನ್ನೂ ನನ್ನ ಮನದೊಳಗೆ ಇಳಿಸಿ ರಾಶಿಯಾಕಿಕೊಳ್ಳುತ್ತಿದ್ದೆ. ಆ ಮಾತುಗಳ ರಾಶಿ ಇಂದಿಗೂ ಹಾಗೆಯೆ ಇವೆ. ಆಗೊಮ್ಮೆ ಈಗೊಮ್ಮೆ ತೀರಾ ಒಬ್ಬಂಟಿ ಎನಿಸಿದಾಗ ಬಂದು ಮಾತಾಡಿಸುತ್ತವೆ. ಭಾರವಾದ ಎದೆಯನ್ನು ಹಗುರಾಗಿಸುತ್ತವೆ. ನನ್ನನು ಆಕೆ ಹೆಚ್ಚಾಗಿ ಇತ್ಯರ್ಥಿಸಿದ್ದು ಈ ತಂತ್ರಜ್ಞಾನದ ಕೊಂಡಿಗಳಲ್ಲಿಯೇ. ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸಲಾಗದ, ಹಾಗೆ ವ್ಯಕ್ತಪಡಿಸಲೊಗಿ ದ್ವಂದ್ವರ್ಥವನ್ನು ಹುಟ್ಟು ಹಾಕಿಕೊಂಡು ಪೇಚಾಡುತ್ತಿದ್ದ ನನ್ನನ್ನು ಆಕೆ ಬಹುವಾಗಿಯೇ ತಪ್ಪು ತಿಳಿದಳು.

ಅಷ್ಟರಲ್ಲಾಗಲೇ ಗಿರ್ರನೆ ತೇಲಿಬಂದ ಜೇಡದ ದೇಹದಂತಿದ್ದ ಡ್ರೋನ್ ಒಂದು ಕಾಗದದ ಪೊಟ್ಟಣವನ್ನು ಹಿಡಿದು ತಂದಿತು. ಅದರ ಕೈಯಿಂದ ಪಡೆದ ಪಾಸ್ತಾವನ್ನು ಪ್ಲೇಟೊಂದಕ್ಕೆ ಸುರಿದುಕೊಂಡೆ. ತಿನ್ನಲ್ಲು ಮಾತ್ರ ಮನಸ್ಸಾಗಲ್ಲಿಲ್ಲ. ಸಣ್ಣವನಿದ್ದಾಗ ದಿನಕ್ಕೆ ನಾಲ್ಕು ಅಕ್ಕಿರೊಟ್ಟಿ, ತುಪ್ಪ ಹಾಗು ಸಾರನ್ನು ಕಲಸಿ ಭಾರಿಸುತ್ತಿದ್ದ ನನಗೆ ಇಂದು ಒಂದು ಗುಕ್ಕೂ ಒಳಗೆ ಸೇರಿಸಲು ಹೆಣಗಾಡುವಂತಾಗಿದೆ. ಇಂದು ಅಂತಹ ಅಕ್ಕಿರೊಟ್ಟಿಯನ್ನು ಮಾಡಿ ಮುದ್ದಿಸಿ ತುಪ್ಪವನ್ನು ಸುರಿದುಕೊಡುವವರ್ಯಾರು. ನನ್ನವರು ಯಾರು. ಕಾಲ ಎಲ್ಲರನ್ನು ಏಕೆ ಅನಂತವಾಗಿಸಲಿಲ್ಲ. ಏಕೆ ಹುಟ್ಟು, ಅದ್ಯಾಕೆ ಸಾವು?

ಆಕೆ ನನ್ನೋಟ್ಟಿಗೆ ಮುನಿಸಿಕೊಳ್ಳತೊಡಗಿದ್ದು ಏಕಿರಬಹದು? ಇಂದಿಗೂ ಉತ್ತರ ತಿಳಿದಿಲ್ಲ. ನನ್ನ ತಳಬುಡ ಇಲ್ಲದ ಮಾತಿಗೂ ಅಥವ ವಿಪರೀತ ಸಲುಗೆಗೋ, (ಸ್ನೇಹದಲ್ಲಿ ಕಡಿಮೆ ವಿಪರೀತ ಎಂಬುವ ಮಾತೆಲ್ಲಿ, ನಾನು ಇದನ್ನು ಒಪ್ಪೆನು), ಅಥವ ನನ್ನ ಜಾತಿಗೋ ಅಥವ ಏಳಿಗೆಗೂ. ಗೊತ್ತಿಲ್ಲ! ಆದರೆ ನನ್ನ ಮೇಲಿನ ಆಕೆಯ ಮುನಿಸು ತಿಳಿಯದಂತೆ ಬೆಳೆಯಿತು. ಅದೊಂದು ದಿನ ತಲೆಗೆಟ್ಟವನಂತೆ ಮೊದಲ ಬಾರಿಗೆ ಆಕೆಯ ಪರೀಕ್ಷಾದಿನವೆಂದೂ ತಿಳಿಯದೆ ತಡರಾತ್ರಿ ಪ್ರೀತಿಯ ನಿವೇಧನೆಯನ್ನು ಮಾಡಿದೆ. ಪಾಪದ ಜೀವಕ್ಕೆ ಸಿಡಿಲು ಬಂದೆರಗಿದ ಅನುಭವವಾಗಿರಬೇಕು! ಅಲ್ಲಿಯವರೆಗೂ ಒಬ್ಬ ಅತ್ಯಾಪ್ತ ಗೆಳೆಯನೆಂಬ ಸಲುಗೆಯಿಂದಿದ್ದ ಆಕೆ ನನ್ನಿಂದ ಇಂತಹ ಕೀಳುಮಟ್ಟದ ಭಾವನೆಯನ್ನು ನಿರೀಕ್ಷಿಸಿರುವುದಕ್ಕೆ ಸಾಧ್ಯವಿಲ್ಲ (ಆದರೆ ನನ್ನ ಮನಮಾತ್ರ ಆ ಮಧುರ ಭಾವನೆಯನ್ನು ಕೀಳುಮಟ್ಟದ್ದು ಎಂದು ಇಂದಿಗೂ ಒಪ್ಪಿಕೊಂಡಿಲ್ಲ, ಅದೆಷ್ಟೇ ಪ್ರಯತ್ನಪಟ್ಟರೂ!) ಆ ಸಂಧಿಘ್ನ ಘಳಿಗೆಯಲ್ಲೂ ಆಕೆ ಕೋಪಗೊಳ್ಳದೆ ನನ್ನನ್ನು ನಯವಾಗಿ ಸಮಾಧಾನಪಡಿಸಿದಳು. ಎದೆಯೊಳಗೆ ನೋವಿನ ಜ್ವಾಲಾಮುಖಿಯೇ ಸ್ಪೋಟಿಸುತ್ತಿದ್ದಾರೂ ನಾನು ಸುಮ್ಮನೆ ಆಕೆಯ ಮಾತನ್ನು ಆಲಿಸತೊಡಗಿದೆ. ಆದರೆ ಯಾವೊಂದು ಮಾತುಗಳೂ ನನಗೆ ಸಾಂತ್ವನವನ್ನು ನೀಡಲಿಲ್ಲ. ಕೊನೆಗೆ 'ಗೆಳೆಯರಾಗಿರುವ' ಎಂಬ ಮಾತನ್ನು ಹೇಳಿ ಫೋನನ್ನು ತುಂಡರಿಸಿದಳು! ಆಕೆ ಒಪ್ಪಿಕೊಳ್ಳದಿದ್ದರೂ ಸರಿ ಆಕೆಯ ಮಾತುಗಳು ಹೀಗೆಯೇ ನನ್ನ ಕಿವಿಯ ಮೇಲೆ ಬೀಳುತ್ತಿರಲಿ ಎಂದು ಮನವು ಚೀರಾಡತೊಡಗಿತು. ಆ ನಡುರಾತ್ರಿಯಲ್ಲೂ ನಾ ಇತ್ತಕಡೆಯಿಂದ ಫೋನಾಯಿಸಿದೆ. ಆಕೆ ಉತ್ತರಿಸಲಿಲ್ಲ. ಅಲ್ಲಿನ ನಂತರದ ಮೂರುದಿನಗಳ ಕಾಲ ಆ ಚಿಗುರು ಜೀವನದ ಮೊಮ್ಮೊದಲ ನೋವಿನ ದಿನಗಳನ್ನು ಕಂಡೆ. ಅಲ್ಲಿಯವರೆಗೂ ಪರೀಕ್ಷೆಯಲ್ಲಿ ಕಡಿಮೆ ಅಂಕವನ್ನು ಪಡೆಯುವುದು ಅಥವ ಕ್ರಿಕೆಟ್ ಆಡುವಾಗ ಶೂನ್ಯ ರನ್ನಿಗೆ ಔಟ್ ಆಗುವುದು ಅಥವಾ ಹಣದ ಅಭಾವದಿಂದ ಸ್ನೇಹಿತರೊಟ್ಟಿಗೆ ಪ್ರವಾಸಕ್ಕೆ ಹೋಗಲಾಗದಿರುವುದೇ ದುಃಖವೆಂದು ತಿಳಿದವನಿಗೆ ತೀರಾ ಹಚ್ಚಿಕೊಂಡ ವ್ಯಕ್ತಿಯೊಬ್ಬರ ದೂರಾಗುವಿಕೆ ಈ ಮಟ್ಟಿನ ನೋವನ್ನು ತಂದುಕೊಡುತ್ತದೆ ಎಂದು ತಿಳಿದಿರಲಿಲ್ಲ. ಎದೆಯ ಮಧ್ಯಭಾಗದಲ್ಲಿ ಮೂಡುತ್ತಿದ್ದ ಆ ಸಂಕಟ ಎಳೆಯ ವಯಸ್ಸಿಗೆ ಸಾಕು ಸಾಕಾಗಿದ್ದಿತು. ಎಣಿಸಿದಂತೆ ಕೆಲದಿನಗಳ ನಂತರ ಆಕೆಯ ಮೆಸ್ಸೇಜು ಬಂದಿತು. 'ಹೇಗಿದ್ದೀಯ' ಎಂಬ ಆ ನಾಲ್ಕಕ್ಷರದ ಪದಗಳನ್ನು ಕಂಡು ಕಣ್ಣು ತುಂಬಿ ಬಂದಿತು. ಅದ್ಯಾವ ಜನ್ಮದ ಮೈತ್ರಿಯೋ ಕಾಣೆ, ಆಕೆಯೆಂದರೆ ಅದೇನೋ ಒಂದು ವರ್ಣಿಸಲಾಗದ ನವಿರಾದ ಅನುಭವ.

ನಂತರದ ಆಕೆಯ ಮಾತಿನ ವರಸೆ ಬಹುವಾಗಿಯೇ ಬದಲಾಗಿದ್ದಿತು. ಗೆಳೆಯನೆಂಬ ಆಪ್ತತೆ ಮಾತ್ರ ಎಂದಿನಂತೆಯೇ ಇದ್ದರೂ ಆಕೆ ನಮ್ಮ ಸಂಭದಕ್ಕೆ ಇಂತಿಷ್ಟೇ ಎಂಬೊಂದು ಬೇಲಿಯನ್ನು ಹಾಕಲು ಬಯಸಿದಂತೆ ಕಾಣುತ್ತಿದ್ದಳು. ನಾನು ಅವಳನ್ನು ಇಷ್ಟಪಟ್ಟಂತೆ ಆಕೆಯೂ ಒಬ್ಬನನ್ನು ಇಷ್ಟ ಪಡುತ್ತಿರುವಳೆಂದೂ ಹೇಳತೊಡಗಿದಳು. 'ನಿನ್ನನು ಪ್ರೀತಿಸೆನು' ಎಂದಾಗ ಆದ ದುಃಖಕ್ಕಿಂತ 'ನಾನು ಇನ್ನೊಬ್ಬನ್ನನ್ನು ಇಷ್ಟಪಡುತ್ತಿರುವೆ' ಎಂಬ ಮಾತಿನಿಂದ ಆದ ನೋವು ಮಾತ್ರ ಚೂರಿಯಿಂದ ಎದೆಗೆ ಚುಚ್ಚಿದಂತಿತ್ತು. ಆದರೂ ಸಂಬಾಳಿಕೊಂಡೇ. ನನ್ನ ಪ್ರೀತಿಯಷ್ಟೇ ಆಕೆಯದೂ ಅಮೂಲ್ಯವಾದದು. ಮಧುರವಾದುದು. ಆತ ಆಕೆಗೆ ಸಿಕ್ಕಿ ಇಬ್ಬರು ಸಂತೋಷವಾಗಿರಲಿ ಎಂದುಕೊಂಡು ಸಮಾಧಾನ ತಂದುಕೊಂಡೆ. ಆದರೆ ಆಕೆಯದೂ ನನ್ನ ಪಾಡೇ! ಅವಳಿಷ್ಟ ಪಡುವ ಹುಡುಗನೂ ಬೇರೊಬ್ಬಳನ್ನು ಇಷ್ಟ ಪಡುತ್ತಿರುವನೆಂದು ಆಕೆ ನೊಂದಿದ್ದಳು. ಜಾತಿಯಲ್ಲಿ ಆಕೆಯದೇ ಆದ ಅವನನ್ನು ಆಕೆ ಇಷ್ಟ ಪಟ್ಟಿದ್ದೇ ಯಾಕೋ ನನಗೆ ಒಂದು ಆಶ್ಚರ್ಯಕರ ಸಂಗತಿ. 'ನಿಜವಾದ ಪ್ರೀತಿ ಎಂದೂ ಸೋಲದು, ಸಮಾಧಾನ ತಂದುಕೊ' ಎಂದು ತಿಳಿಹೇಳತೊಡಗಿದೆ. ಆಕೆಯ ನೋವಿನಲ್ಲಿ ಭಾಗಿಯಾಗಲು ಪ್ರಯತ್ನಿಸಿದೆ. ಅಳುತ್ತಲೇ ನಗತೊಡಗಿದೆ. ಆದರೆ ಮೊದಲ ಬಾರಿಗೆ ನನಗೆ ಆಕೆಯ ಮೇಲೆ ಮುನಿಸು ಬರತೊಡಗಿದ್ದು ಕೆಲತಿಂಗಳ ಅಂತರದಲ್ಲಿಯೇ ಆಕೆ ಈತನನ್ನು ಮರೆತು ಮತ್ತೊಬ್ಬನ್ನನ್ನು ಇಷ್ಟಪಡುತ್ತಿರುವೆನೆಂದು ಹೇಳಿದಾಗ! ತನ್ನ ಮೊದಲ ಪ್ರೀತಿಯನ್ನು ಇಷ್ಟು ಬೇಗ ಮರೆತು ಮತೊಬ್ಬ ತನ್ನನು ಪ್ರಪೋಸ್ ಮಾಡಿದ ಎಂದಾಗ ನನ್ನ ಮೈಯೆಲ್ಲ ಹುರಿದುಹೋಯಿತು. ಸಿಕ್ಕರೂ ಸಿಗದಿದ್ದರೂ ತಾವು ಮೊದಲ ಪ್ರೀತಿಯನ್ನು ಅಷ್ಟು ಸುಲಭವಾಗಿ ಬಿಟ್ಟುಗೂಡಕೂಡದು ಎಂಬ ನನ್ನ ತರ್ಕರಹಿತ ನೀತಿಗೆ ಅವಳನ್ನೂ ಒಳಪಡಿಸಿದೆ. ಸಿಟ್ಟು ಜಗಳಕ್ಕೆ ಹಾದಿಯಾಯಿತು. ಮನಸ್ತಾಪ ವಿಪರೀತವಾಯಿತು. ಅಷ್ಟಾದರೂ ನಾನೇ ಆಕೆಯ ಹಿಂದೋಗಿ ಕ್ಷಮೆಯಾಚಿಸುತ್ತಿದ್ದೆ. ಹಲವು ಭಾರಿಯ ನಂತರ ಅದು ನನ್ನ ಸ್ವಾಭಿಮಾನಕ್ಕೆ ಧಕ್ಕೆ ತರುವಂತಿತ್ತು. ಮುಂಗಾರು ಮಳೆಯಂತೆ ಬಿಡದಂತೆ ಉದುರುತ್ತಿದ್ದ ನಮ್ಮ ಮಾತುಗಳು ಕ್ಷೀಣಿಸತೊಡಗಿದವು.

ಬೇಕಂತಲೇ ಏನೋ ಇಂದು ಸೆಕೆ ಕಡಿಮೆಯಾಗಿದೆ. ಮೋಡಗಳೂ ಕನೆ ಮೊಸರಂತೆ ಅಲ್ಲಲಿ ಚಲ್ಲಿವೆ. ಆಕೆಯ ಮನೆಯೂ ನಾನಿರುವ ಜಾಗದಿಂದ ಹೆಚ್ಚೇನು ದೂರವಿರಲಿಲ್ಲ. ಜೀವಮಾನದಲ್ಲೇ ಒಮ್ಮೆಯೂ ಹೋಗದ ಅಲ್ಲಿಗೆ ಇಂದು ಏಕೋ ಹೋಗುವ ಮನಸ್ಸಾಯಿತು. ಸ್ವಯಂಚಾಲಿತ ಕುರ್ಚಿಯಿಂದ ನಿಧಾನವಾಗಿ ಆಕೆಯ ಮನೆಯ ಹಾದಿಯನ್ನಿಡಿದೆ. ಊರಿನಲ್ಲಿದ್ದ ಮನೆಯಿಂದ ಬೈಕಿನಲ್ಲಿ ಪೇಟೆಗೆ ಬಂದರೆ ಸುತ್ತಿ ಬಳಸಿ ಅದೆಷ್ಟು ಸಾರಿ ಈಕೆಯ ಮನೆಯ ಮುಂದೆ ಹಾದು ಹೋಗುತ್ತಿರಲಿಲ್ಲ. ಇಳಿಸಂಜೆಯ ಕಣ್ತುಂಬಿಕೊಳ್ಳಲು ಬೆಟ್ಟದ ಬಳಿಗೆ ಹೋಗುವಾಗ, ಅಲ್ಲಿಂದ ವಾಪಸ್ಸು ಬರುವಾಗ, ಯಾವುದೊ ಮೂಲೆಯಲ್ಲಿರುವ ಮಾರ್ಕೆಟಿನ ಹಾದಿಯನ್ನು ಹಿಡಿದಾಗ, ದೇವಸ್ಥಾನಕ್ಕೆ ಹೋಗುವಾಗ ಅಥವಾ ಆಕೆಯ ನೆನೆಪು ಅತಿಯಾಗಿ ಕಾಡಿದಾಗ ಹೀಗೆ ಇಲ್ಲದ ಸಲ್ಲದ ಕಾರಣಗಳನಿಟ್ಟುಕೊಂಡು ನಾನು ಆಕೆಯ ಮನೆಯ ಮುಂದೆ ಅಗಣಿತ ಸಂಖ್ಯೆಯಲ್ಲಿ ಹಾದುಹೋಗಿರುವೆ. ಬಹುತೇಕ ನನ್ನೊಟ್ಟಿಗೆ ಮಾತನ್ನು ನಿಲ್ಲಿಸೇಬಿಟ್ಟಿದ್ದ ನನ್ನ ಪ್ರಾಣಸ್ನೇಹಿತೆಯನ್ನು ಕಾಣಲು ಕಣ್ಣುಗಳು ಹಾತೊರೆಯುತ್ತಿದ್ದವು. ಆದರೆ ವಿಧಿಯಾಟವೋ ಏನೋ ಒಮ್ಮೆಯೂ ಅದು ಸಾಧ್ಯವಾಗಲ್ಲಿಲ್ಲ. ಅಲ್ಲದೆ ಟ್ರಾಫಿಕ್ ರೂಲ್ಸ್ ಎನ್ನುತ ತಲೆಯ ತುಂಬಾ ISI ಮಾರ್ಕಿನ ಹೆಲ್ಮೇಟುಗಳೇ ಮುಖದ ತುಂಬಾ ಅಂಟಿಸಿಕೊಂಡಿರುವಾಗ ಒಂದು ಪಕ್ಷ ಆಕೆಯೇ ನನ್ನ ಕಂಡರೂ ಗುರುತಿಸಿಲಾರಳು!

ಒಂದೇ ಒಂದು ದಿನವೂ ತಪ್ಪದೆ ವರ್ಷಗಳ ಕಾಲ ಹರಟಿದ್ದ ನಾವುಗಳು ವರ್ಷಕೊಂದು ಹುಟ್ಟುಹಬ್ಬಕ್ಕೆ ಹಾರೈಸುವ ಗೆಳೆಯರೇನೋ ಎಂಬ ಮಟ್ಟಿಗೆ ಬದಲಾದೆವು. ಕಾಲದ ಮಾಹೆಯೇ ಹಾಗೆ! ಯಾರನ್ನು ಎಂತವರನ್ನಾಗಿಯೂ ಬದಲಾಗಿಸುತ್ತದೆ. ಆದರೆ ನನ್ನ ಮನದಲ್ಲಿ ಮೊದಲ ಪ್ರೀತಿಯ ಚಿಗುರು ಕೊನೆಯುಸಿರನ್ನೆಳೆಯದಿದ್ದರೂ ನನ್ನ ಕೆಲವೇ ಕೆಲವು ಅತ್ಯಾಪ್ತ ಸ್ನೇಹಿತರಲ್ಲಿ ಆಕೆಯೂ ಒಬ್ಬಳು ಎಂಬುದ ಅದು ಮರೆತಿರಲಿಲ್ಲ. ನನ್ನ ಕಷ್ಟ ದುಃಖಗಳಿಗೆ ಸಾಂತ್ವನ ಹೇಳಲು, ಸುಖ ಸಂತೋಷಗಳನ್ನು ಹಂಚಿಕೊಳ್ಳಲು, ವಿಪರೀತವಾಗಿ ಕಾಡಿದ ಖಿನ್ನತೆ ಹಾಗು ಆತಂಕವನ್ನು ನಿವಾರಿಸಿಕೊಳ್ಳಲು ನನಗೆ ನನ್ನ ಗೆಳತಿಯ ಜರೂರು ಇದ್ದಿತು. ಪ್ರತಿದಿನ ಬಿಡುವು ದೊರೆತಾಗಲೆಲ್ಲ ಅದು ನೆನೆನೆದು ಮರುಗುತ್ತಿತ್ತು. ತನ್ನ ಪ್ರೀತಿ ಪ್ರೇಮವೆಂಬ ಎಲ್ಲಾ ತರಹದ ಭಾವನೆಗಳನ್ನು ಅತ್ತಿಕ್ಕಿಕೊಂಡು ಕೊನೆಯ ಪಕ್ಷ ಕೇವಲ ಸ್ನೇಹಿತರಾಗಿಯೇ ಇರಲು ಅದು ಬಯಸತೊಡಗಿತು. ಜೀವದ ಗೆಳತಿಯನ್ನು ಅದು ಪರಿತಪಿಸುತ್ತಿತ್ತು. ಆದರೆ ಆಕೆಗೆ ಅದ್ಯಾವುದೂ ಗೊತ್ತಿರಲೇ ಇಲ್ಲ. ಕೊನೆಕೊನೆಗೆ ವರ್ಷಕ್ಕೊಮ್ಮೆ ಬರುವ ನನ್ನ ಹುಟ್ಟುಹಬ್ಬಕ್ಕೂ ಸಂದೇಶವನ್ನು ಕಳಿಸುವುದನ್ನ ನಿಲ್ಲಿಸಿದಳಾಕೆ. ಅಷ್ಟಾಗಿ ಬೇಡವಾದನೆ ಆಕೆಗೆ ನಾನು?

ವರುಷಗಳು ಕಳೆದವು. ಆಕೆಯೊಟ್ಟಿಗಿನ ಕೆಲದಿನಗಳ ನೆನಪು ನನ್ನಲ್ಲಿ ಹೆಮ್ಮರವಾಗಿ ಬೆಳೆದು ನಿಂತಿತ್ತು. ಅದೊಂದು ದಿನ ತಟ್ಟನೆ ಬಂದ ಆಕೆಯ ಮೆಸೇಜೊಂದನ್ನು ತೆರೆಯುವ ಮೊದಲೇ ಮನಸ್ಸು ಅದೇನೆಂದು ಊಹಿಸಿತು! ಆಕೆಯ ಮದುವೆಯ ಆಮಂತ್ರಣ ಪ್ರತಿಯ ಫೋಟೋ. ಸಂತೋಷದ ಸಂಗತಿಯೆಂದರೆ ಹುಡುಗ ಆಕೆಯ ಎರಡನೆಯ ಪ್ರೀತಿ. ಯಾವುದೊ ಆನ್ಲೈನ್ ವೆಬ್ಸೈಟಿನಲ್ಲಿ ತಯಾರು ಮಾಡಿ ಕಳಿಸಿದ್ದ ಆ ಫೋಟೋ ನನ್ನ ವರುಷಗಳ ತುಮುಲಗಳಿಗೆ ಕೊನೆಗೂ ಪೂರ್ಣವಿರಾಮವೊಂದನ್ನು ಜಡಿದಿತ್ತು. ಕಡೆ ಪಕ್ಷ ಖುದ್ದಾಗಿಯೇ ಒಂದೆರೆಡು ಪದಗಳನ್ನು ಟೈಪ್ ಮಾಡಿ ಕಳಿಸಲಾಗದ ಆಕೆ ನನ್ನ ಅದೆಷ್ಟು ದೂರವಾಗಿಸಿದ್ದಾಳೆ ಎನ್ನುವುದು ಅರಿವಾಯಿತು. ಅದಾದೆಲ್ಲ ಆಯಿತು, ನನ್ನ ಪರಮಾಪ್ತ ಗೆಳತಿಯವಳು. ಒಂದೆರೆಡು ದಿನ ಮೊದಲೇ ಹೋಗಿ ಮದುವೆಯ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಈ ನೆನಪುಗಳ ಬುತ್ತಿಗೆ ಇನ್ನಷ್ಟು ಸವಿನೆನಪುಗಳ ರಾಶಿಗಳನ್ನು ಸುರಿದುಕೊಳ್ಳಬೇಕೆನ್ನುವ ಆಸೆಗೂ ತಣ್ಣೀರೆರಚಲಾಯಿತು. ಒಂದು ಫೋನಾಯಿಸಿ ಅಥವಾ ತುಸುದೂರದಲ್ಲೇ ಇದ್ದ ಮನೆಗೊ ಬಂದು ಆಮಂತ್ರಣ ಪ್ರತಿಯನ್ನು ಕೊಡಲಾಗದ ಆಕೆಯ ಮದುವೆಗೆ ನಾನ್ಯಾಕೆ ಹೋಗಲಿ!? ಸ್ವಾಭಿಮಾನ ಹೆಚ್ಚೆತ್ತಿತು.

ಸರ್ವವೂ ಯಂತ್ರಮಯವಾಗಿರುವ ಈ ಕಾಲದಲ್ಲಿ ಮೆನೆಯ ವಿಳಾಸವನ್ನು ಹೇಳಿದರೇನೇ ತಂದು ಬಿಡುವ ವೀಲ್ಚೇರು ನನ್ನನ್ನು ಆಕೆಯ ಮನೆಯ ಮುಂದೆ ತಂದು ನಿಲ್ಲಿಸಿದ್ದೆ ತಿಳಿಯಲಿಲ್ಲ. ಮೆನೆಯ ಹೊರಗೊಳಗೆ ಓಡಾಡುತ್ತಿದ್ದ ಅಲ್ಲಿನ ಯಾರೊಬ್ಬರಲ್ಲೂ ದುಃಖದ ಛಾಯೆಯಾಗಲಿ, ಅಗಲಿಕೆಯ ನೋವಾಗಲಿ ಕಾಣುತ್ತಿರಲಿಲ್ಲ. ಬದಲಾಗಿ ಯಾವುದೊ ಕಾರ್ಯಕ್ರಮಕ್ಕೂ ಏನೋ ಎಂಬಂತೆ ಸಂತೋಷದ ತಯಾರಿ ನೆಡೆಯುತ್ತಿತು. ಮಾನವ ಜೀವಿಗಳಿಗಿಂತ ಹೆಚ್ಚಾಗಿ ಡ್ರೋನ್ಗಳೇ ಝುಯಿಂಗುಡುತ್ತಾ ಹಾರಾಡುತ್ತಿದ್ದವು. ಓಲ್ಡ್ ಏಜ್ ಹೋಮಿನಲ್ಲಿದ್ದರೂ ಸಮಾಜದಲ್ಲಿ ತುಸುವಾಗಿ ಗುರುತಿಸಿಕೊಂಡಿದ್ದ ನನ್ನನು ಹೆಣ್ಣುಮಗಳೊಬ್ಬಳು ಮನೆಯೊಳಗೇ ಬರಮಾಡಿಕೊಂಡಳು. ಒಂದೆರೆಡು ಮಾತಿನ ನಂತರ ಈಕೆ ಆಕೆಯ ಮೊಮ್ಮಗಳೆಂಬುದು ತಿಳಿಯಿತು. ತುಸು ಸಮಯದಲ್ಲಿ ಆಕೆ ಬೇರೇನೋ ಕೆಲಸದ ನಿಮಿತ್ತಾ ಅಲ್ಲಿಂದ ಎದ್ದುಹೋದಳು. ನಾನು ನನ್ನ ವೀಲ್ಚೇರಿನಿಂದ ಎದ್ದು ಪಕ್ಕದಲ್ಲಿದ್ದ ಸೋಫಾದ ಮೇಲೆ ಆಸೀನನಾದೆ. ಮೊದಲ ಬಾರಿ ಆಕೆಯ ಮನೆಗೆ ಬಂದರೆ ಇಂದು ಆಕೆಯೇ ಇಲ್ಲ. ಇದ್ದಿದ್ದರೆ ಸಂತೋಷಪಡುತ್ತಿದ್ದಳೋ, ಮುನಿದುಕೊಳ್ಳುತ್ತಿದ್ದಳೋ ಅಥವಾ ಗುರುತೇ ಹಿಡಿಯದಿರುತ್ತಿದ್ದಳೋ ತಿಳಿಯದು. ಹಾಲಿನ ಒಂದು ಮೂಲೆಯಲ್ಲಿದ್ದ ರೂಮಿನ ಬಾಗಿಲಿಗೆ ಒರಗಿ ಐದಾರು ವರ್ಷದ ಹೆಣ್ಣುಮಗುವೊಂದು ನನ್ನನ್ನೇ ನೋಡುತ್ತಾ ನಿಂತಿತ್ತು. ಮೊದಲಬಾರಿಗೆ ಆಕೆಯನ್ನು ಕಂಡ ಚಿತ್ರ ಒಮ್ಮೆಲೇ ನನ್ನ ಕಣ್ಣ ಮುಂದೆ ಹಾದುಹೋದಂತಾಯಿತು. ಅದೇ ಬಣ್ಣ, ಅದೇ ಕಣ್ಣು, ಅದೇ ಮೂಗು, ಅದೇ ಘಾಡ ಕಪ್ಪುಬಣ್ಣದ ಕೂದಲು! ಕೈಬೀಸಿ ಆಕೆಯನ್ನು ನನ್ನ ಬಳಿಗೆ ಬರುವಂತೆ ಕರೆದೆ. ಮೊದಲು ಬರಲೊಲ್ಲೆ ಎಂದು ತಲೆಯಾಡಿಸಿದ ಆಕೆ ನಂತರ ನಿಧಾನವಾಗಿ ಒಂದೊಂದೇ ಹೆಜ್ಜೆಯನ್ನು ಪೋಣಿಸುತ ನನ್ನ ಬಳಿಗೆ ಬಂದಳು. ಆಕೆಯನ್ನು ಬಳಿಗೆ ಕರೆದು ಕೂರಿಸಿಕೊಂಡು ವಿಚಾರಿಸಿದೆ. ಈಕೆ ಆಕೆಯ ಮರಿಮಗಳು! ಕೆಲಕ್ಷಣಗಳ ಮೊದಲು ಮಾತಾಡಿದ ಹೆಣ್ಣುಮಗಳ ಮಗಳಿವಳು. 'ನೀನು ನಿನ್ನ ದೊಡ್ಡಜ್ಜಿಯಂತೆಯೇ ಇದ್ದೀಯ' ಎಂದು ಇಂಗ್ಲೀಷಿನಲ್ಲಿ ಹೇಳಿದಾಗ ನಾಚಿದ ಆಕೆ ನಾನು ಯಾರು, ನನ್ನ ಹೆಸರೇನೆಂದು ಕೇಳಿದಳು.

ಹಾಗೆಯೆ ಮಾತಾಡುವಾಗ ನನ್ನ ದೃಷ್ಟಿ ಗೋಡೆಯ ಮೇಲೆ ತೂಗುಹಾಕಿದ ಮರದ ಪೇಂಟಿಂಗ್ ಒಂದರ ಮೇಲೆ ಬಿದ್ದಿತು. ಕೆಲಕಾಲ ಅದನ್ನೇ ನೋಡುತ್ತಿದ್ದ ನನ್ನ ಕಣ್ಣುಗಳಲ್ಲಿ ಇದ್ದಕ್ಕಿಂದಂತೆ ನೀರು ಗಳಗಳನೆ ಹರಿಯತೊಡಗಿತು! ಆಕೆಯ ಮರಿಮಗಳ ಪುಟ್ಟ ಕೈಗಳು ನನ್ನ ಕಣ್ಣುಗಳನ್ನು ಒರೆಸತೊಡಗಿದವು. ಆಕೆಯೇ ಬಂದು ನನ್ನ ಸಮಾಧಾನಮಾಡಿದ ಅನುಭವವಾಯಿತು. ಗೋಡೆಯಲ್ಲಿ ನೇತಾಕಿದ್ದ ಪಟ ನಾನು ಆಕೆಗೆ ಕೊನೆಯ ಬಾರಿಗೆ ಕೊಟ್ಟ ಉಡುಗೊರೆಯಾಗಿದ್ದಿತು. ನನ್ನ ಕಂಡರೂ ಗುರುತಿಡಿಯಲಾರಳು ಎಂದುಕೊಂಡಿದ್ದ ನಾನು ಐವತ್ತು ವರ್ಷಗಳಿಗೂ ಮಿಗಿಲಾದ ನನ್ನ ಉಡುಗೊರೆಯನ್ನು ಹಾಗೆಯೆ ಸಂರಕ್ಷಿಸಿಕೊಂಡು ಬಂದಿದ್ದಾಳೆ ಎಂಬುದ ಕಂಡು ದುಃಖ ಉಮ್ಮಳಿಸಿ ಬಂದಿತು. ತಕ್ಷಣ ಏನೋ ನೆನಪಾಗಿ ಆ ಮಗುವಿಗೆ ಪಟವನು ಬಿಚ್ಚಿ ತರಲು ಕೇಳಿದೆ. ದಶಕಗಳ ಹಳೆಯ ಪಟ ನನ್ನ ಕೈಸೇರಿತು. ಅಂದು ಈ ಉಡುಗೊರೆಯನ್ನು ಆಕೆಗೆ ಕೊಡುವ ಮುನ್ನ ಒಂದಿಷ್ಟು ಸಾಲುಗಳನ್ನು ಆಕೆಗಾಗಿ ಬರೆದು ಯಾರಿಗೂ ಕಾಣದಂತೆ ಅದರ ಹಿಂದಕ್ಕೆ ಇರಿಸಿದ್ದೆ. ನಿಧಾನವಾಗಿ ಪಟವನ್ನು ಬಿಚ್ಚಿ, ಮಡಚಿ ಇಟ್ಟಿದ್ದ ಆ ಕಾಗದದ ಚೂರನ್ನು ದಶಗಳಗಳ ನಂತರ ಮೊದಲ ಭಾರಿಗೆ ಹೊರತೆಗೆದೆ. ಅದು ಕಂದು ಬಣ್ಣಕ್ಕೆ ತಿರುಗಿ ಒಣಗಿದ ಹಪ್ಪಳದಂತಾಗಿದ್ದಿತು. ನಿಧಾನವಾಗಿ ಅದನ್ನು ಬಿಡಿಸಿ ಓದ ತೊಡಗಿದೆ...

'ಹಲೋ.. ಎಂಬ ಉದ್ವೆಗಭರಿತ ನಿನ್ನ ಆ ಎರಡಕ್ಷರದ ಛಾಯೆ ನನ್ನ ಮೇಲೆ ಅದೆಷ್ಟಿದೆ ಎಂದರೆ ಇಡೀ ಜೀವಮಾನಪೂರ್ತಿ ನಿನಗೆ ಫೋನಾಯಿಸಬೇಕೆಂಬ ಹೆಬ್ಬಯಕೆ ನನ್ನದು. ನನ್ನ ಸರ್ವ ದುಃಖದುಮ್ಮಾನಗಳಿಗೂ ನಿನ್ನ ಹಲೋ ಎಂಬ ಆ ಎರಡಕ್ಷರದ ಪದವೇ ಔಷಧ ಎಂಬುದು ನಿನಗೆ ತಿಳಿದಿರುವುದಿಲ್ಲ. ಇದು ಉತ್ಪ್ರೇಕ್ಷೆಯಲ್ಲ. ತೋರ್ಪಡಿಕೆಯ ಪ್ರೀತಿಯೂ ಅಲ್ಲ. ಸೂರ್ಯಕಾಂತಿ ಹೂವಿಗೆ ಸೂರ್ಯನ ದರ್ಶನವಾದಂತೆ, ಹಸಿದ ಕರುವಿಗೆ ಅಮ್ಮನ ಕೊರಳಘಂಟೆಯ ಸದ್ದು ಕೇಳಿಸಿದಂತೆ, ಬಿರಿದ ನೆಲಕ್ಕೆ ಮಳೆಯ ಸಿಹಿಸಿಂಚನವಾದಂತೆ, ನೀನು ನನಗೆ. ಇದು ಮಾನವ ಸಂಬಂಧದ ಯಾವ ಕೆಟಗರಿಯೂ ಅಲ್ಲ. ಇದು ಕೇವಲ ಭಾವಸಂಭಂದದ ವರ್ಣನಾತೀತವಾದ ಬೆಸುಗೆ. ಇದು ನಿನಗೆ ಅರಿಯದು. ನಿನ್ನ ಉಪಸ್ಥಿತಿಯಿಂದ ನನ್ನಲ್ಲಿ ಹೀಗೆ ಮೂಡುತಿದ್ದ ಜೀವನೋತ್ಸಹದ ಅಲೆಗಳಿಂದಾಗಿಯೇ ನೀನು ನನಗೆ ಇಷ್ಟವಾಗುತ್ತೀಯ ವಿನಃ ಪ್ರೀತಿ ಪ್ರೇಮ ಅಂದ ಚೆಂದಗಳೆಂಬ ಮಾಹೆಗಳಿಂದಲ್ಲ... ' ಎಂದು ಬರೆದಿದ್ದ ನಾಲ್ಕಾರು ಸಾಲುಗಳನ್ನು ಓದುವಷ್ಟರಲ್ಲಿ ನನ್ನ ಕಪೋಲಗಳೆರಡೂ ಒದ್ದೆಯಾಗಿದ್ದವು.

ಎಲ್ಲಿಂದಲೋ ಬೀಸಿದ ತಂಗಾಳಿ ನನ್ನ ಬಂದು ಅಪ್ಪಳಿಸಿತು. ಆರು ವರ್ಷದ ಆಕೆಯ ಮರಿಮಗಳು ಅಷ್ಟರಲ್ಲಾಗಲೇ ನನ್ನ ಎದೆಯ ಮೇಲೆ ತಲೆಯೊರಗಿ ನಿದ್ರೆಗೆ ಜಾರಿದ್ದಳು.......

No comments:

Post a Comment