Friday, July 20, 2018

ಬಾಡುಟವೊಂದರ ಐತಿಹ್ಯ - II

ಭಯದ ತೀಕ್ಷ್ಣತೆಗೆ ಇಟ್ಟ ಕಾಲನ್ನು ಎತ್ತಿ ಮೇಲಿಡಲೂ ಆಗುತ್ತಿಲ್ಲ. ಇನ್ನೇನು ಪ್ರೇತಾತ್ಮವೊಂದು ನನ್ನ ಬಂದು ಅವರಿಸಿಬಿಟ್ಟಿತು ಎಂದು ಗಡಗಡ ನಡುಗುತ್ತಿರುವಾಗಲೇ ಅತ್ತ ಕಡೆಯಿಂದ ಸೈನಿಕನೊಬ್ಬ ಕಾಡುಕೋಳಿಯ ಕಾಲುಗಳೆರಡನ್ನು ಇಡಿದುಕೊಂಡು ಖುಷಿಯಿಂದ ಡೇರೆಯ ಕಡೆ ಓಡಿ ಬರುತ್ತಿದ್ದಾನೆ. ಕೋಳಿಯ ಕತ್ತು ಅದಾಗಲೇ ಜೋತುಬಿದ್ದು ನೇತಾಡುತಿದ್ದರಿಂದ ರಾತ್ರಿಗೆ ಕೋಳಿಮಾಂಸದ ಏನಾದರೊಂದನ್ನು ಮಾಡಲೇಬೇಕಾದ ಅನಿವಾರ್ಯತೆ ಬಂದೊದಗಿತು ಎಂದುಕೊಂಡೆ. ಓಡೋಡಿ ಬರುತ್ತಿದ್ದ ಆತ ನನ್ನ ನೋಡಿ ಒಮ್ಮೆಲೇ ಅವಕ್ಕಾಗಿ ನಿಂತುಬಿಟ್ಟ. ಬಹುಷಃ ಭಯದ ಸ್ಫೋಟ ಗರಬಡಿದವನಂತೆ ನಿಂತ ನನ್ನನು ಕಂಡು ಆತನೊಳಗೂ ಆಗ ಜರುಗಿರಬೇಕು! ಕೆಲಕಾಲ ದೂರದಲ್ಲೇ ಅಲುಗಾಡದೆ ನಿಂತು 'ಯಾರದು' ಎಂದು ಕಾತ್ರಿಪಡಿಸಿಕೊಂಡು, ನಿಂತಿರುವುದು ನಾನೆಂದು ತಿಳಿದ ಮೇಲೆ ಖುಷಿಯಿಂದ ನನ್ನೆಡೆಗೆ ಕೋಳಿಯನ್ನು ತಂದು ನೀಡಿದ. ನೆನ್ನೆ ಬಲೆಯನ್ನು ಹಾಕುವಾಗ ನನ್ನೊಟ್ಟಿಗೆ ಬಂದು ನೋಡಿದ ಆತ ಇಂದು ಅದೇ ದಿಕ್ಕಿನಿಂದ ರೆಕ್ಕೆಗಳ ಶಬ್ದ ಬಂದಕೂಡಲೇ ನನಗಿಂತ ಮೊದಲೇ ಓಡೋಡಿ ಹೋಗಿ ಕೋಳಿಯನ್ನು ಹಿಡಿದು ಸಂಹರಿಸಿ ತಂದಿದ್ದ.

ಡೇರೆಯ ಬಳಿಗೆ ಬರುವಷ್ಟರಲ್ಲೇ ವಾಯುದೇವ ಹಚ್ಚಿಬಂದಿದ್ದ ಎರಡೂ ಒಲೆಗಳನ್ನು 'ಕೆಡಿಸಿ' ತನ್ನ ಅಧಿಪತ್ಯವನ್ನು ಸಾಬೀತುಪಡಿಸಿದ್ದ! ಮೊದಲು ಹೋಗಿ ಅನ್ನದ ಅಗುಳುಗಳನ್ನು ಹಿಸುಕಿ ನೋಡಿದೆ. ಅರೆಬರೆ ಬೆಂದಂತಿದ್ದ ಅಗುಳುಗಳು ಇನ್ನೂ ಸಹ ಪಾತ್ರೆಯ ತಳದಲ್ಲೇ ಉಳಿದಿದ್ದವು. ಕೆಟ್ಟು ಬಿದ್ದಿದ ಓಲೆ, ಅರೆಬರೆ ಹೆಚ್ಚಿದ್ದ ತರಕಾರಿಗಳು, ಅಲ್ಲಲ್ಲಿ ಚದುರಿಕೊಂಡಿದ್ದ ಮಸಾಲಾ ಪದಾರ್ಥಗಳನ್ನು ಕಂಡ ಸೈನಿಕ ಆತನ ಖಡ್ಗವೊಂದನ್ನು ತಂದು ತಾನಾಗಿಯೇ ಕೋಳಿಯನ್ನು 'ಶುಚಿ'ಗೊಳಿಸಿ ತರುವೆ ಎನುತ ಝರಿಯ ಬಳಿಗೆ ಹೋಗುತ್ತಾನೆ. ಕೊಂಚ ನಿರಾಳನಾದ ನಾನು ಪುನಃ ಬೆಂಕಿಯನ್ನು ಹಚ್ಚುವ ಮುನ್ನ ಬೇಕಾದ ಎಲ್ಲ ಪದಾರ್ಥಗಳನ್ನು ಜೋಡಿಸಿಕೊಳ್ಳತೊಡಗಿದೆ.ಸೊಂಟಕ್ಕೆ ಕಟ್ಟಿಕೊಂಡಿದ್ದ ಬಟ್ಟೆಯನ್ನು ನೆಲದ ಮೇಲೆ ಹರವಿ ಚೆಕ್ಕೆ, ಲವಂಗ, ಏಲಕ್ಕಿಗಳನ್ನು ನಾಲ್ಕೈದರಂತೆ ಒಂದೊಂದು ಗುಂಪಾಗಿ ಮಾಡಿ ಇಟ್ಟೆ. ಕೊಯ್ದುಕೊಂಡಿದ್ದ ಈರುಳ್ಳಿ ಹಾಗು ಹುಳಿಹಣ್ಣುಗಳನ್ನು ಒಂದು ಗಂಗಾಳದಲ್ಲಿ ಹಾಕಿ ಬದಿಗೆ ಇರಿಸಿಕೊಂಡೆ. ಕೆಂಪು ಕೆಂಪಾದ ತ್ರಿಕೋನಾಕಾರದ ಹುಳಿಹಣ್ಣಿನ ಹೋಳುಗಳು, ಕಾಮನಬಿಲ್ಲಿನಂತೆ ಬಾಡಿಕೊಂಡಿರುವ ಈರುಳ್ಳಿಯ ಎಸಳುಗಳು ಹಾಗು ಅವುಗಳ ಸುಂದರ ಮೈಬಣ್ಣ ಏನೋ ಒಂದು ಬಗೆಯ ಖುಷಿಯ ಸೆಲೆಯನ್ನು ತಾವಿರುವಲ್ಲಿ ಸೃಷ್ಟಿಸಿಕೊಂಡಿದ್ದವು. ಬರುವಾಗ ಡೇರೆಯ ಪಕ್ಕಕೆ ಬೆಳೆದು ನಿಂತಿದ್ದ ಹಸಿರುಮೆಣಸಿನ ಗಿಡದಿಂದ ಏಳೆಂಟು ಕಾಯಿಗಳನ್ನು ಕಿತ್ತು ತರಲು ಮರೆತಿರಲಿಲ್ಲ. ಇನ್ನೇನು ಎಲ್ಲವು ಸಿದ್ದವಾದವು ಎನ್ನುವಷ್ಟರಲ್ಲೇ ಕೋಳಿಯನ್ನು ಶುಚಿಗೊಳಿಸಲು ಹೋಗಿದ್ದ ಸೈನಿಕ ದೊಡ್ಡದೊಂದು ಎಲೆಯಲ್ಲಿ ಮಾಂಸದ ತುಂಡುಗಳನ್ನು ತುಂಬಿಕೊಂಡು ನಾಟಕದ ಯಾವುದೊ ಒಂದು ಸಂಭಾಷಣೆಯನ್ನು ಹೇಳಿಕೊಳ್ಳುತ್ತಾ ಪ್ರಶಾಂತ ರಾತ್ರಿಯ ಘಾಡಮೌನವನ್ನು ಸೀಳಿಕೊಳ್ಳುತ್ತಾ ಡೇರೆಯ ಬಳಿಗೆ ಬರತೊಡಗಿದ.

ನಾಲ್ಕೈದು ಪಾವು ಅಕ್ಕಿ ಹಿಡಿಯುವಷ್ಟು ದೊಡ್ಡದಾದ ಪಾತ್ರೆಯೊಂದನ್ನು ತೆಗೆದುಕೊಂಡು ಹೊಸದಾಗಿ ಪಕ್ಕದಲ್ಲಿ ನಿರ್ಮಿಸಿದ ಒಲೆಯನ್ನು ಹಚ್ಚಿಸಿ ಇಟ್ಟೆ. ಚೊರ್ರ್...ಎಂಬ ಸದ್ದಿನೊಂದಿಗೆ ನೀರು ಆವಿಯಾಗುವುದನ್ನು ಖಾತ್ರಿಪಡಿಸಿಕೊಂಡು ಮಡಿಕೆಯಲ್ಲಿ ಕಾಯಿಸಿದ್ದ ತುಪ್ಪವನ್ನು ಒಂದು ಸೌಟಿನ ತುಂಬ ಬರುವಷ್ಟು ಹಾಕಿದೆ. ಹಿತವಾದ ತುಪ್ಪದ ಕನುವು ಮೂಗಿಗೆ ಬಂದು ಬಡಿಯುವಷ್ಟರಲ್ಲೇ ಹೆಚ್ಚಿದ ಈರುಳ್ಳಿಗಳ ಅಷ್ಟೂ ರಾಶಿಯನ್ನು ಅದರ ಮೇಲೆ ಸುರಿದೆ. ಕಾದ ಖಡ್ಗವನ್ನು ಶಾಂತ ನೀರಿನೊಳಗೆ ಅದ್ದಿದಂತೆ ವಿಪರೀತ ಪ್ರತಿರೋಧ ಒಡ್ಡಿದ ತುಪ್ಪ ಕ್ಷಣಕ್ಷಣಕ್ಕೂ ಸದ್ದನ್ನು ಕಡಿಮೆಗೊಳಿಸುತಾ ಕ್ರಮೇಣ ಈರುಳ್ಳಿಯ ರಾಶಿಯನ್ನು ತನ್ನೊಳಗೆ ಬೆರೆಸಿಕೊಂಡಿತು. ನಂತರ ಏನನ್ನು ಹಾಕುವುದು ಎಂದು ಯೋಚಿಸುತ್ತಿರುವಾಗಲೇ ಡೇರೆಯಿಂದ ತುಸು ದೂರದಿಂದ ಏನೋ ಓಡಿದ ಸದ್ದು ಕೇಳಿಸಿತು! ಹಿತವಾಗ ಗಾಳಿಯ ಅಲೆಗಳನ್ನು ಬೀಸುತ್ತಿದ್ದ ಶಾಂತ ರಾತ್ರಿಗೆ ಆ ಹೆಜ್ಜೆಗಳ ಸದ್ದು ಒಮ್ಮೆಲೇ ನನ್ನ ಎದೆಯನ್ನು ಝಲ್ಲೆನಿಸಿತು! ಅಷ್ಟರಲ್ಲಾಗಲೇ ಸ್ನಾನವನ್ನು ಮುಗಿಸಿಕೊಂಡು ಬಂದು ಊಟಕ್ಕೆ ಅಣಿಯಾಗುತ್ತಿದ್ದ ಸೈನಿಕರೂ ಸಹ ಸದ್ದನ್ನು ಕೇಳಿ ಕೂಡಲೇ ಡೇರೆಯಿಂದ ಹೊರಬಂದರು. ಎಲ್ಲರು ಸದ್ದು ಬಂದ ಕಡೆಗೆ ಕಿವಿನಿಮಿರಿಸಿ ಆಲಿಸತೊಡಗಿದರು. ಶತ್ರು ಸೈನಿಕರು ಹೀಗೆಯೇ ರಾತ್ರೋ ರಾತ್ರಿ ನಾಲ್ಕೈದು ಸೈನಿಕರಿರುವ ಡೇರೆಗಳ ಮೇಲೆ ಧಾಳಿ ನೆಡೆಸಿ ಧವಸ ದಾನ್ಯಗಳನ್ನು ಲೂಟಿಮಾಡುವುದಲ್ಲದೆ ಹಿಂದಿನಿಂದ ಬಂದು ಚಾಕು ಚೂರಿಯಿಂದ ತಿವಿದು ಸಾಯಿಸುವುದೂ ಉಂಟು ಎಂಬುದನ್ನು ಕೇಳಿದ್ದೆ. ಹಾಗಾದ ಕಾರಣ ಇಂತಹ ಸದ್ದುಗಳನ್ನು ಅಷ್ಟಾಗಿ ನಿರ್ಲಕ್ಷಿಸಲು ಸಾಧ್ಯವಿಲ್ಲ. ಎಲ್ಲರೂ ಕೆಲನಿಮಿಷಗಳ ಕಾಲ ನಿಂತ ಜಾಗದಿಂದ ಅಲುಗಾಡಲಿಲ್ಲ. ಸೈನಿಕರ ಕೈಗಳಲ್ಲಾಗಲೆ ಖಡ್ಗಗಳು ಬಡಿದಾಟಕ್ಕೆ ಅಣಿಯಾಗಿದ್ದವು. ಕೆಲಸಮಯದ ನಂತರ ಒಬ್ಬ ಸೈನಿಕ ತುಸುದೂರ ಹೋಗಿ ವಾಪಸ್ಸು ಬಂದ. ತಾನು ಕಂಡ ಹಂದಿಗಳ ಗುಂಪನ್ನು ವರ್ಣಿಸುತ್ತಾ ಮರಿದಡ್ಡೆಯೊಂದು ತನ್ನ ಮರಿಗಳ ಸಮೇತ ಮರದ ಬುಡವೊಂದನ್ನು ಕೊರೆದು ತಿನ್ನುತ್ತಿದ್ದದ್ದನು ಹೇಳಿದ. ಹಂದಿಯ ಹೆಸರನ್ನು ಕೇಳಿ ನಾವೆಲ್ಲ ಒಮ್ಮೆಲೇ ನಿಟ್ಟುಸಿರು ಬಿಟ್ಟೆವು.

ಸೈನಿಕರು ಅಡುಗೆ ನೆಡೆಯುತ್ತಿರುವುದು ‘ಇಂದಿಗೂ ಅಥವಾ ನಾಳೆಗೂ’ ಎಂದಾಗಲೇ ಒಲೆಯ ಮೇಲೆ ತುಪ್ಪಕ್ಕೆ ಈರುಳ್ಳಿಯನ್ನು ಸುರಿದ ನೆನಪಾಯಿತು. ಚಂಗನೆ ಒಲೆಯ ಬಳಿಗೆ ನೆಗೆದು ನೋಡುತ್ತೀನಿ, ಕೆಂಬಿಳುಪು ಬಣ್ಣದ ಈರುಳ್ಳಿಯ ಎಸಳುಗಳು ಚಿನ್ನದ ಬಣ್ಣಕ್ಕೆ ತಿರುಗಿ ಇನ್ನೇನು ಸುಟ್ಟು ಕರಕಲಾಗಿ ಹೋಗಲು ಅಣಿಯಾಗಿದ್ದವು! ನನ್ನ ಮಂಕುಬುದ್ಧಿಗೆ ಶಪಿಸಿಕೊಳ್ಳುತ್ತ, ಕೂಡಲೇ ಕರಿದಂತೆ ಕಾಣುತ್ತಿದ್ದ ಅಷ್ಟೂ ಈರುಳ್ಳಿಗಳನ್ನು ಒಂದು ಪಾತ್ರೆಗೆ ಸುರಿದುಕೊಂಡು ಪುನ್ಹ ಮತ್ತೊಂದು ಸೌಟು ತುಪ್ಪವನ್ನು ಅದೇ ಪಾತ್ರೆಗೆ ಹಾಕಿದೆ. ಕೆಲಕ್ಷಣಗಳ ನಂತರ ಅಷ್ಟೂ ಮಸಾಲಾ ಪದಾರ್ಥಗಳನ್ನು ತುಪ್ಪದ ಮೇಲೆ ಸುರಿದದ್ದೇ ತಡ , ಸುಗಂಧ ಭರಿತ ಕಾಡುಗಳ ಕಿಕ್ಕಿರಿದ ಪೊದೆಗಳೊಳಗೆ ಹೊಕ್ಕ ಅನುಭವ! ಘಮಘಮಿಸುವ ಮತ್ತಿನಲ್ಲೇ ಕೆಲಕ್ಷಣ ಕಳೆದ ಮೇಲೆ ಮತ್ತೊಂದು ಹಸಿ ಈರುಳ್ಳಿಯನ್ನು ಹೆಚ್ಚಿ ಹಾಕಿದೆ. ಮಸಾಲ ಪದಾರ್ಥಗಳ ಪ್ರವೇಶದಿಂದ ಮುನಿಸಿಕೊಂಡು ಸಿಡಿಮಿಡಿಗೊಳ್ಳುತ್ತಿರುವಂತೆ ಆಡುತ್ತಿದ್ದ ತುಪ್ಪದ ಮತ್ತೊಮ್ಮೆ ಎಲ್ಲವನ್ನು ಬೆರೆಸಿಕೊಂಡು ವಟಗುಡತೊಡಗಿತು.

ಅಷ್ಟರಲ್ಲಾಗಲೇ ಸೈನಿಕರು ಎರೆಡೆರೆಡು ಬಾರಿ ಬಂದು ನಾನು ಏನು ಮಾಡುತ್ತಿರುವೆನೆಂದು ಕೇಳಿಕೊಂಡು ಹೋದರು. ನಾ ಮಾಡುತ್ತಿರುವ ಬಾಡೂಟದ ಹೆಸರಾದರೂ ಏನು? ಉತ್ತರ ದೊರೆಯಲಿಲ್ಲ. ಮೊದಲು ತಯಾರಿಸಿ ನಂತರ ಹೆಸರಿಡುವ ಕಾರ್ಯಕ್ರಮವನ್ನು ಮಾಡುವ ಎಂದುಕೊಂಡು ಹಸಿರುಮೆಣಸಿನ ಕಾಯಿ ಹಾಗು ಹುಳಿಹಣ್ಣುಗಳ ಕೆಂಪುರಾಶಿಯನ್ನು ಪಾತ್ರೆಗೆ ಸುರಿದೆ. ಕಾದ ತುಪ್ಪದ ಸಿಟ್ಟು ತನ್ನ ಎಲ್ಲ ಎಲ್ಲೆಯನ್ನು ಮೀರಿ ನನ್ನನೇ ಸುಡುವ ಮಟ್ಟಕ್ಕೆ ಹೋಯಿತು. ಆದದರಿಂದಲೋ ಏನೋ ಒಂದೆರೆಡು ಹನಿಗಳು ಕೈಮೇಲೆ ಹಾರಾರಿ ಬಿದ್ದವು! ಕಾದ ತುಪ್ಪದ ಸಿಟ್ಟಿನ ಭಯ ಕ್ಕೆ ಎನ್ನುವಂತೆ ಹುಳಿಹಣ್ಣುಗಳು ಶರವೇಗದಲ್ಲಿ ಕರಗತೊಡಗಿದವು. ಇವುಗಳ ಮದ್ಯೆ ಕೆಂಪು ಮೆಣಸಿನ ಕಾಯಿ, ಶುಂಠಿ, ಬೆಳ್ಳುಳ್ಳಿ, ಹರಿಶಿಣದ ಕೊಂಬು ಹಾಗು ಸಂಬಾರ ಬೀಜಗಳನ್ನು ಪುಡಿಮಾಡಲು ಬದಿಗೆ ಇರಿಸಿಕೊಂದ್ದ ನೆನಪಾಗಿ, ಎಲ್ಲ ದೋಷವನ್ನು ಮತ್ತೊಮ್ಮೆ ನನ್ನ ಬುದ್ದಿಯ ಮೇಲೆಯೇ ಹೊರಿಸಿ, ಕುಟ್ಟುವ ಕಲ್ಲನ್ನು ಬಳಿಗೆ ತಂದು, ನೋಡಿದರೇನೇ ಕರುಣೆ ಬರುವಂತೆ ಒಣಗಿ ಬೆಂಡಾಗಿದ್ದ ಕೆಂಪು ಮೆಣಸಿನಕಾಯಿ, ವಕ್ರ ವಕ್ರವಾಗಿ ನಾನಿರುವುದೇ ಹೀಗೆ ಎಂಬಂತೆ ಬೆಳೆದುಕೊಂಡಿದ್ದ ಹರಿಶಿಣದ ಕೊಂಬು ಹಾಗು ಗಂಡು ಹೆಣ್ಣು, ಮೇಲು ಕೀಳು, ಬಡವ ಬಲ್ಲಿದನೆಂಬ ಯಾವೊಂದು ತಾರತಮ್ಯವಿಲ್ಲದೆ ಎಲ್ಲವೂ ಒಂದೇ ಎಂಬಂತೆ ಕಾಣುತ್ತಿದ್ದ ಸಂಬಾರ ಬೀಜಗಳನ್ನು ಒಟ್ಟಿಗೆ ಬೆರೆಸಿ ಕುಟ್ಟತೊಡಗಿದೆ. ಒಂದೆಡೆ ಹಸಿ ಕೋಳಿಮಾಂಸದ ರಾಶಿ, ಪಕ್ಕದಲ್ಲಿ ಅರೆಬರೆ ಬೆಂದ ಅಕ್ಕಿಯ ಕಾಳುಗಳು, ಇತ್ತಕಡೆ ಬೆಂಕಿಯ ಹಾಗು ತುಪ್ಪದ ಶಾಖದಲ್ಲಿ ವಿಲೀನರಾಗಿ ಸುತ್ತಲ ಪರಿಸರವನ್ನು ಘಮಮಯವಾಗಿಸಿರುವ ಮಸಾಲಾ ಪದಾರ್ಥಗಳು.... ಸಮುದ್ರದ ಮರಳಿಗಿಂತಲೂ ನಯವಾದ ಮೆಣಸು, ಹರಿಶಿಣದ ಕೊಂಬು ಹಾಗು ಸಂಬಾರಬೀಜಗಳ ಪುಡಿಯನ್ನು ಒಲೆಯ ಮೇಲೆ ಬೇಯುತ್ತಿದ್ದ ಮಸಾಲಾ ಪದಾರ್ಥಗಳ ಮೇಲೆ ಸುರಿದೆ. ತದಾನಂತರ ಶುಂಠಿ ಬೆಳ್ಳುಳ್ಳಿಗಳನ್ನು ಒಟ್ಟಿಗೆ ಜಜ್ಜಿ ಬೆರೆಸಿದಾಗ ಬಂದ ಘಮ ನನ್ನ ನಾಲಿಗೆಯನ್ನು ಒದ್ದೆ ಮಾಡಿದಂತೂ ಸುಳ್ಳಲ್ಲ! ಕೂಡಲೇ ಅಷ್ಟೂ ಮಾಂಸದ ಚೂರುಗಳನ್ನು ಹಾಕಿ ಹುರಿದು ಜೊತೆಗೆ ಒಂದು ಹಿಡಿಯಷ್ಟು ಉಪ್ಪನ್ನು ಹುದುರಿಸಿ ಕೊನೆಗೆ ಎಂಟತ್ತು ಪಾವು ನೀರನ್ನು ಹಾಕಿ ಎಲ್ಲವನ್ನು ಬೆರೆಸಿದೆ. ಗಡಿಬಿಡಿಯಲ್ಲಿ ಅಚಾತುರ್ಯವೊಂದು ನೆಡೆದದ್ದು ನನ್ನ ಅರಿವಿಗೆ ಬಂದದ್ದು ತುಸು ಸಮಯದ ನಂತರವೇ! ಮಸಾಲೆ ಪದಾರ್ಥಗಳನ್ನು ಹಾಕುವ ಭರದಲ್ಲಿ ಸಣ್ಣ ಮಡಕೆಯಲ್ಲಿ ಊಟದ ಕೊನೆಗೆ ಬಡಿಸಲು ಇಟ್ಟುಕೊಂಡಿದ್ದ ಗಟ್ಟಿ ಮೊಸರನ್ನೂ ಅದರೊಳಗೆ ಸುರಿದಿದ್ದೆ. ಅಡಿಗೆ ಕೆಟ್ಟಿತು ಎನುತ ಕೆಲ ಕ್ಷಣಗಳ ಕಾಲ ಅವಕ್ಕಾಗಿ ನಿಂತ ನನ್ನಲ್ಲಿ ಆತ್ಮವಿಶ್ವಾಸ ಮಾತ್ರ ಒಂದಿನಿತು ಕ್ಷೀಣಿಸಲಿಲ್ಲ. ಆದದ್ದು ಆಗಲಿ ಎನುತ ಸುಮ್ಮನಿದ್ದೆ. ಕೆಲನಿಮಿಷಗಳಲ್ಲಿಯೇ ಕುದಿಯತೊಡಗಿದ ಕಡುಕೆಂಪುಬಣ್ಣದ ಮಸಾಲಾನೀರಿಗೆ ಅರೆಬರೆ ಬೆಂದ ಅಕ್ಕಿಯನ್ನು ಬಸಿದು ಸುರಿಯತೊಡಗಿದೆ. ಅರ್ಧದಷ್ಟು ಅಕ್ಕಿಯನ್ನು ಸುರಿಯುವಷ್ಟರಲ್ಲಿ ತುಪ್ಪದಲ್ಲಿ ಬೆಂದು ಕರಕಲಾದ ಈರುಳ್ಳಿಗಳ ರಾಶಿಗಳು ನೆನಪಾಗಿ, ಸುರಿಯುವ ಕಾಯಕವನ್ನು ಅಲ್ಲಿಗೆ ನಿಲ್ಲಿಸಿ, ಅವುಗಳನ್ನು ಬಳಿಗೆ ತಂದು ಒಂದೆರೆಡು ಎಸಳುಗಳನ್ನು ಬಾಯಲ್ಲಿ ಇರಿಸಿದೆ. ಕರಕಲಾಗದರೂ ಏನೋ ಒಂದು ಬೇಗೆಯ ರುಚಿ ಅವುಗಳಲ್ಲಿ ಕಾಣಿಸಿತು. ಅದಾದ್ದಾಗಲಿ ಎನುತ ಬೆಳ್ಳನೆ ಹರಡಿಕೊಂಡಿದ್ದ ಅನ್ನದ ರಾಶಿಯ ಮೇಲೆ ಒಂದೇ ಸಮನಾಗಿ ಅವುಗಳನ್ನು ಹುದುರಿಸಿ ಉಳಿದ ಅನ್ನವನ್ನೂ ಅದರ ಮೇಲೆ ಪದರವಾಗಿ ಹರಡಿದೆ.

ಅಷ್ಟರಲ್ಲಾಗಲೇ ಸೈನಿಕರ ಕೋಪ ಅವರ ನತ್ತಿಯನ್ನು ಮುಟ್ಟಿರಬೇಕು. ಒಬ್ಬರಿಂದೊಬ್ಬರು ಬಂದು ನನ್ನ ಹೆಸರನ್ನು ಹಿಡಿದು ಅರಚತೊಡಗಿದರು. ದಿನಗಳ ಕಾಲ ಹಸುವೆಯನ್ನು ಬೇಕಾದರೆ ನೀಗಿಕೊಂಡು ಬದುಕಬಹುದು ಆದರೆ ಹಸಿವಿನಿಂದ ಕೆಂಗೆಟ್ಟ ಸೈನಿಕನ ಕೋಪವನ್ನು ಕ್ಷಣಮಾತ್ರವೂ ಸಹಿಸಲು ಆಗದು. ಅನ್ನವನ್ನು ಬೇಗ ಹರಳಿಸಬೇಕು ಎಂದುಕೊಂಡು ಪಾತ್ರೆಗೆಂದೇ ಮಾಡಿದ್ದ ಮಣ್ಣಿನ ಮುಚ್ಚನ್ನು ತಂದು ಮುಚ್ಚಿ ಅದರ ಮೇಲೆ ಒಂತಿಷ್ಟು ಕೆಂಡವನ್ನೂ ಸುರಿದೆ! ಇಲ್ಲೇ ನಿಂತರೆ ಬೈಗುಳದಲ್ಲೇ ನನ್ನ ಜೀವವನ್ನು ತೆಗೆದಾರು ಎಂದುಕೊಂಡು ಒಂತಿಷ್ಟು ಬಾಳೆಯ ಎಲೆಗಳನ್ನು ಕೊಯ್ದು ತರಲು ಹೊರಟೆ. ಅಲ್ಲೊಂದು ಇಲ್ಲೊಂದು ಬೆಳೆದ ಬಾಳೆಗಿಡಗಳನ್ನು ಹುಡುಕಿ ಎಲೆಗಳನ್ನು ಕೊಯ್ದು ಬಂದು ನೋಡುತ್ತೇನೆ, ನಾಲ್ವರು ಸೈನಿಕರು ಅದಾಗಲೇ ಒಲೆಯ ಮೇಲಿಟ್ಟಿದ್ದ ಪಾತ್ರೆಯನ್ನು ನೆಲದ ಮೇಲಿರಿಸಿ, ಪಾತ್ರೆಯ ತಳ ಸೇರಿದ್ದ ಮಸಾಲಾಪದಾರ್ಥಗಳನ್ನು ಹದವಾಗುವಂತೆ ಮಿಶ್ರಿಸಿ, ಒಂದೊಂದು ಹಿಡಿ ಅನ್ನವನ್ನೂ ಬಾಯೊಳಗೆ ಹಾಕಿಕೊಂಡು 'ಇಂಶಾಲ್ಲ...!' ಎನುತ ಕಣ್ಣು ಮುಚ್ಚಿ ರುಚಿಯನ್ನು ಆಸ್ವಾದಿಸುತ್ತಿದ್ದರು. ನನ್ನನು ಕಂಡ ಕೂಡಲೇ 'ಶಹಭಾಷ್ ಮೇರೇ ಶೇರ್..' ಎನುತ ನನ್ನನು ಮುತ್ತುವರೆದು ಕೈಲಿದ್ದ ಬಾಳೆಯ ಎಲೆಗಳನ್ನು ಕಸಿದುಕೊಂಡು ಅನ್ನ ಹಾಗು ಕೋಳಿಯ ಚೂರುಗಳನ್ನು ಒಟ್ಟಿಗೆ ಹಾಕಿಕೊಂಡು ಗಬಗಬನೆ ತಿನ್ನತೊಡಗಿದರು. ಅಡುಗೆ ಅಷ್ಟು ಚೆನ್ನಾಗಿದಿರುವುದರ ಬಗ್ಗೆ ನನಗೆ ನಂಬಿಕೆಯೇ ಬರಲಿಲ್ಲ.

ಈ ಜನ್ಮಕ್ಕಿಷ್ಟು ಸಾಕು.. ಎಂಬ ಆತ್ಮತೃಪ್ತಿಯಿಂದ ಸೈನಿಕರು ನಾ ಮಾಡಿರುವ ಅಡುಗೆಯನ್ನು ತಿನ್ನುವುದನ್ನೇ ನೋಡತೊಡಗಿದೆ. ಏನೋ ಒಂದು ಹೊಸದಾದ ಖಾದ್ಯವನ್ನು ಪರಿಚಯಿಸಿದ ಹೆಮ್ಮೆ. ಅಡುಗೆಯ ರುಚಿಯೋ ಅಥವಾ ಹಸಿವಿನ ವೇದನೆಯೋ ಸೈನಿಕರಂತೂ ನಿಂತೇ ತಿನ್ನತೊಡಗಿದರು. ಸ್ವಲ್ಪ ಅತ್ತ ಕಡೆ ಕಣ್ಣೊರಳಿಸಿ ನೋಡುತ್ತನೆ, ನಮ್ಮ ಸೈನಿಕರು ನಿಂತ ಸ್ಥಳದಿಂದ ತುಸುದೂರದಲ್ಲಿ ಇನ್ನೂ ನಾಲ್ಕು ಸೈನಿಕರ ಗುಂಪು ಕೈಕಟ್ಟಿ ಊಟವನ್ನು ತಿನ್ನುತ್ತಿದ್ದ ಸೈನಿಕರನ್ನೇ ನೋಡುತ್ತಾ ನಿಂತಿದೆ. ಕೆಲಕ್ಷಣದಲ್ಲೇ ಅವರನ್ನು ನೋಡಿದ ನಮ್ಮ ಸೈನಿಕರು ಅವರ ವೇಷಭೂಷಣಗಳಿಂದ ಅದು ವೈರಿಪಡೆಯೆಂದು ಖಾತ್ರಿಪಡಿಸಿಕೊಂಡು ಕೂಡಲೇ ತಮ್ಮ ತಮ್ಮ ಖಡ್ಗಗಳನ್ನು ತಂದು ಕಾದಾಡಲು ಅಣಿಯಾಗಿ ನಿಂತರು. ಕೂಡಲೇ ಆ ಗುಂಪಿನ ಒಬ್ಬ ಸೈನಿಕ ಮಾತನಾಡಿ 'ಸಾಹೇಬ್, ತಾಳ್ಮೆ ತಂದುಕೊಳ್ಳಿ. ನಿಮ್ಮ ಡೇರೆಯನ್ನು ನಾಶಮಾಡಿ ನಿಮ್ಮ ಒಬ್ಬೊಬ್ಬರನ್ನು ಕೊಂದು ಬನ್ನಿ ಎಂಬ ಆಜ್ಞೆ ನಮ್ಮ ಸೈನ್ಯಾಧಿಪತಿಯಿಂದ ಆಗಿರುವುದೇನೋ ನಿಜ. ಆದರಂತೆ ನಾವುಗಳು ಸರ್ವಸನ್ನದ್ಧರಾಗಿ ನಿಮ್ಮ ಮೇಲೆ ಆಕ್ರಮಣ ಮಾಡಲು ಬಂದೆವು. ನಮ್ಮ ಸದ್ದನ್ನು ಕೇಳಿ ನೀವುಗಳು ಹೊರಬಂದು ದೂರದಲ್ಲೆಲೋ ಇದ್ದ ಹಂದಿಯ ಸದ್ದೆಂದು ಸುಮ್ಮನಾದಿರಿ. ಅದೇ ಸುಸಮಯವೆಂದು ಇನ್ನೇನು ನಾವುಗಳು ನಿಮ್ಮ ಹಿಂದಿನಿಂದ ಬಂದು ಆಕ್ರಮಣ ಮಾಡಬೇಕು ಎನ್ನುವಷ್ಟರಲ್ಲಿ ಹಿಂದೆಂದೂ ಆಸ್ವಾದಿಸಿರದ ಸುವಾಸನೆಯೊಂದು ನಮ್ಮ ಮೂಗನ್ನು ಬಂದು ಬಡಿಯಿತು. ಎಷ್ಟೇ ಪ್ರಯತ್ನ ಪಟ್ಟರೂ ನಮ್ಮನು ನಾವು ನಿಯಂತ್ರಿಸಲೇ ಆಗಲಿಲ್ಲ. ಪರಿಣಾಮವಾಗಿ ಅಡುಗೆ ಪೂರ್ತಿಯಾಗಲು ಕಾಯತೊಡಗಿದೆವು. ಗಂಟಲಲ್ಲಿ ಅನ್ನ ಇಳಿಯುತ್ತಿರುವಾಗ ನಿಮ್ಮ ಮೇಲೆ ಆಕ್ರಮಣ ಮಾಡಿ ಆಹಾರವನ್ನು ಕಸಿದು ತಿನ್ನುವುದು ಪಾಪದ ಕಾರ್ಯ. ಅಲ್ಲಾವು ಅದನ್ನು ಮೆಚ್ಚನು. ಆದರಿಂದ ನಿಮ್ಮಿಂದ ಬೇಡಿಯೇ ಸರಿ, ಆ ಅಮೂಲ್ಯ ಭಕ್ಶ್ಯದ ಸವಿಯನ್ನು ಸವಿಯಬೇಕೆಂದು ನಿಮ್ಮೆದುರಿಗೆ ಬಂದೆವು. ನೀವಿಲ್ಲಿರುವುದಾಗಲಿ, ನಿಮ್ಮ ಅಸ್ತ್ರ ಶಸ್ತ್ರಗಳ ಬಗೆಯಾಗಲಿ ನಾವುಗಳು ಯಾರಿಗೂ ತಿಳಿಸೆವು. ದಯೆಮಾಡಿ ನಮ್ಮ ಹೊಟ್ಟೆಗೊಂದಿಷ್ಟು ಆ ಅನ್ನವನ್ನು ಕೊಟ್ಟು ಕರುಣಿಸಿ' ಎಂಬ ಮಾತನ್ನು ಕೇಳಿದ ನಮ್ಮ ಸೈನಿಕರು ತೆರದ ಬಾಯನ್ನು ಮುಚ್ಚದೆಯೇ ನನ್ನೆಡೆ ತಿರುಗಿದರು. ಖಡ್ಗ ಚೂರಿಗಳಿಲ್ಲದೆಯೇ ಕೇವಲ ಅಡುಗೆಯೆಂಬ ಅಸ್ತ್ರದಿಂದ ವಿರೋಧಿ ಸೈನಿಕರನ್ನು ಕೆಡವಿದ ಗರ್ವದ ನೋಟದಿಂದ ನಾನೂ ಕೂಡ ಅವರನ್ನು ಧಿಟ್ಟಿಸತೊಡಗಿದೆ.....!

(ಇಂದು ವಿಶ್ವದೆಲ್ಲೆಡೆ ಸುಪ್ರಸಿದ್ಧವಾಗಿರುವ ಬಿರಿಯಾನಿಯ 'ಐತಿಹ್ಯ'ವಿದು . ಬಿರಿಯಾನಿಯ ಉಗಮಕ್ಕೆ ಇಂತಹ ಹಲವಾರು ಐತಿಹ್ಯ/ಕತೆಗಳಿವೆ. ಆದರೆ ಹೆಚ್ಚು ಕಡಿಮೆ ಎಲ್ಲವೂ ಬಿರಿಯಾನಿಯ ಉಗಮ ಭಾರತದ ಉತ್ತರ ಭಾಗ ಅಥವ ಮದ್ಯಪ್ರಾಚ್ಯ ದೇಶಗಳೆಂದೇ ಹೇಳುತ್ತವೆ. ಈ ಕತೆಯನ್ನೂ ಸುಮಾರು ಸಾವಿರ ವರ್ಷಗಳ ಕಾಲ ಹಿಂದೆ ಜರುಗಿರಬಹುದಾದ ಘಟನೆಯೆಂದು ಕಲ್ಪಿಸಿ ಹೆಣೆಯಲಾಗಿದೆ. ಟೊಮೊಟೊ ಹಣ್ಣುಗಳು ಆಗಷ್ಟೇ ಜನರಿಗೆ ಪರಿಚಯವಾಗುತ್ತಿದ್ದರಿಂದ ಅವುಗಳನ್ನು ಹುಳಿಹಣ್ಣುಗಳೆಂದು ಹೇಳಲಾಗಿದೆ. ಹಾಗು ಪುದೀನ ಹಾಗು ಕೊತ್ತಂಬರಿ ಸೂಪ್ಪುಗಳು ನಂತರದ ಕಾಲಘಟ್ಟದಲ್ಲಿ ಬಿರಿಯಾನಿ ತಯಾರಿಯಲಿ ಅಳವಡಿಸಿಕೊಂಡಿರಬಹುದಾದರಿಂದ ಅವುಗಳನ್ನು ಇಲ್ಲಿ ಕೈಬಿಡಲಾಗಿದೆ. ಇದು ಮೊದಲ ಬಾರಿಗೆ ಮಾಡಿರಬಹುದಾದ ಬಿರಿಯಾನಿಯಾದರಿಂದ ಬಾದಾಮಿ, ಕೇಸರಿ ಹಾಗು ಇನ್ನೂ ಹಲವು ಪದಾರ್ಥಗಳನ್ನು ಇಲ್ಲಿ ಸೇರಿಸಲಾಗಿಲ್ಲ. ಒಂದು ವೇಳೆ ಇದೇ ರೀತಿಯೇ ಬಿರಿಯಾನಿಯನ್ನು ಮಾಡಲೋಗಿ ವಾರಾಂತ್ಯವೇನಾದರೂ ಕೆಟ್ಟರೆ ಅದಕ್ಕೆ ಅವರವರೇ ನೇರ ಹೊಣೆಯಾಗುತ್ತಾರೆ! :)... )

No comments:

Post a Comment