Wednesday, February 20, 2019

ಸಿಂಪಲ್ಲಾಗೊಂದು ಕಪೂರ್ ಸ್ಟೋರಿ..!

ವಾವ್, ಏನ್ ಸೀನ್ ಸರ್ ಅದು. ಸಿಟ್ಟು, ಮದ, ಮತ್ಸರದಿಂದ ಕೂಡಿದ ಆರಡಿ ಉದ್ದದ ಕ್ಯಾರೆಕ್ಟರ್ ಒಂದೆಡೆಯಾದರೆ, ನ್ಯಾಯ, ನೀತಿ ಹಾಗು ಘನತೆಯನೊತ್ತ ಕೀರ್ತಿಪುರುಷ ಇನ್ನೊಂದೆಡೆ. ಸುಳ್ಳು ಸತ್ಯಗಳ ಈ ಎರಡು ವ್ಯಕ್ತಿತ್ವಗಳ ತಿಕ್ಕಾಟದಲ್ಲಿ ನರಳುತಿರುವಾಕೆ ಎರಡಕ್ಕೂ ಜನ್ಮವಿತ್ತ ಮಹಾಮಾತೆ. ನಶ್ವರ ಜಗತ್ತಿನ ನೋಟಿನ ಮೂಲಕ ತನ್ನ ಹೆತ್ತ ತಾಯಿಗೆ ಬೆಲೆಕಟ್ಟಲೋಗಿ ಮುಂದಿದ್ದ ತನ್ನ ತಮ್ಮನ ಬಳಿ 'ತೇರೇ ಪಾಸ್ ಕ್ಯಾ ಹೈ 'ಎಂದಾಗ ಇಡೀ ಚಿತ್ರಮಂದಿರವೇ ಕುಣಿದು ಕುಪ್ಪಳಿಸುವಂತೆ ಆಡುವ 'ಮೇರೇ ಪಾಸ್ ಮಾ ಹೈ' ಎಂಬ ಆ ಡೈಲೌಗ್ ಕೇವಲ ಡೈಲೌಗ್ ಆಗಿರದೆ ಆಧುನಿಕ ಜಗತ್ತಿನ ಇಡೀ ಮಾನವ ಕುಲಕ್ಕೇ ಇಡಿದ ಕೈಗನ್ನಡಿಯಂತಿತ್ತು. ಜಗತ್ತಿನ ಸರ್ವ ಐಶ್ವರ್ಯವೆಲ್ಲವೂ ತಾಯಿಯೆಂಬ ಅಘಾಧತೆಯ ಮುಂದೆ ಅದೆಷ್ಟು ಕನಿಷ್ಠವಾಗುತ್ತದೆ ಎಂಬುದನ್ನು ನಾಲ್ಕೇ ಪದಗಳ ವಾಕ್ಯದಲ್ಲಿ ತೋರಿಸಿಕೊಟ್ಟ ಚತುರತೆಯಂತೂ ಫೆಂಟಾಸ್ಟಿಕ್! ಆಗ ಮಾತುಬಾರದ ಕಲ್ಲಿನಂತಾದ ಅಮಿತಾಬ್ ತನ್ನ ಸಣ್ಣ ತಮ್ಮನ ಮುಂದೆ ಮತ್ತೂ ಸಣ್ಣವನಾಗುತ್ತಾನೆ.

ಆ ಡೈಲೌಗಿಗೆ ಜೀವ ಬರಲು/ತರಲು ಚಿತ್ರಕತೆಗಾರರಾದ ಸಲೀಮ್-ಜಾವೇದ್ರ ಕ್ರಿಯೇಟಿವಿಟಿಯೊಟ್ಟಿಗೆ ಎದೆಯುಬ್ಬಿಸಿಕೊಂಡು ಆತ್ಮವಿಶ್ವಾಸದಿಂದ ಆಡಿದ ಆ ಮುಗ್ದ ಮಾತುಗಳೂ ಕಾರಣವಾಗಿರುತ್ತವೆ. ಅಂದಿಂಗೂ, ಇಂದಿಗೂ. ಕಣ್ಣುಗಳಲ್ಲಿನ ಆ ದೃಢತೆಯ ಜೊತೆಗೆ ಮುಖದ ಮೇಲೆ ಆ ಗಾಂಭೀರ್ಯತೆಯನ್ನೊತ್ತು ಸಂಭಾಷಣೆಯನ್ನು ಹೇಳಿದ ಆ ವ್ಯಕ್ತಿಯ ಹೆಸರೇ ದ ಒನ್ & ಓನ್ಲಿ Mr.ಶಶಿ ಕಪೂರ್. ಒಂದು ಕಾಲಕ್ಕೆ ಕಪೂರ್ ಮನೆತನದಲ್ಲಿ ಹ್ಯಾಂಡ್ಸಮ್ ಕಪೂರ್ ಎಂದು ಕರೆಯಲಾಗುತ್ತಿದ್ದ ಈತ ಇತರೆ ಬಹಳಷ್ಟು ನಟ ನಟಿಯರಂತೆ ಇಲ್ಲ ಸಲ್ಲದ ಕಾರಣಗಳಿಂದಾಗಿ ಪ್ರಸಿದ್ದಿ ಹೊಂದಲಿಲ್ಲ. ತಾನು ಹಾಗು ಸಿನಿಮಾ ಎಂದುಕೊಂಡು ಬದುಕಿದ ಈ ಜೀವ ಹೂವರಳಿ ಕೊನೆಯಾಗುವಂತೆ ಸದ್ದಿಲ್ಲದೆ ಮರೆಯಾಯಿತು. ಬಹುಷಃ ಆದರಿಂದಲೇನೋ ಪ್ರಶಸ್ತಿ ಪುರಸ್ಕಾರಗಳೂ ಸಹ ಈತನ ಮನೆಯ ಹಾದಿಯನ್ನು ಮರೆತವು.

ಅವತಾರ ಪುರುಷರಂತೆ ನಟರನ್ನು ಬಿಂಬಿಸಿ ಅವರ ಸುತ್ತಲೇ ಸುತ್ತುವಂತಹಃ, ನಿಜಜೀವನಕ್ಕೆ Infinity ಕಿಲೋಮೀಟರ್ಗಳಷ್ಟು ದೂರದಂತಹ ಕ್ಯಾರೆಕ್ಟರ್ ಹಾಗು ಕತೆಯನ್ನು ನೋಡುಗರಿಗೆ ನೀಡುತ್ತಿದ್ದ ಕಾಲದಲ್ಲಿ ಪಕ್ಕಾ ಕ್ಲಾಸಿಕ್ ಸಿನಿಮಾಗಳನ್ನು ಒಂದರಿಂದೊಂದರಂತೆ ನೀಡುತ್ತಾ, ಬೆರಳೆಣಿಕೆಯ ಪ್ರೇಕ್ಷಕರಾದರೂ ದೃತಿಗೆಡದೆ ಮತ್ತದೇ ಅರ್ಥಪೂರ್ಣ ಚಿತ್ರಗಳನ್ನು ಮಾಡುತ್ತ ಕಣ್ಣು ಮುಚ್ಚಿ ನೆಡೆಯುವ ಸಾಲಿನಲ್ಲಿ ವಿಭಿನ್ನರಾಗಿ ಕಾಣಿಸಿಕೊಳ್ಳತೊಡಗಿದ ವ್ಯಕ್ತಿ ಈ ಶಶಿ ಕಪೂರ್. ಭಾರತೀಯ ಸಿನಿಮಾವನ್ನು ಒಂದು ಮಜಲು ಎತ್ತರಕ್ಕೆ ಕೊಂಡೊಯ್ದ ಹಲವಾರು ಸೈಲೆಂಟ್ ಪೆರ್ಸನಾಲಿಟಿಗಳಲ್ಲಿ ಒಬ್ಬರು ಈ ಶಶಿ ಕಪೂರ್.. ಇವೆಲ್ಲ ಅಂಶಗಳ ಹೊರತಾಗಿ ಶಶಿ ಕಪೂರ್ ಎಂಬ ದಿಗ್ಗಜ ಹಲವರಿಗೆ ಇಷ್ಟವಾಗುವುದು ತನ್ನ ಆಫ್ ಸ್ಕ್ರೀನ್ ಪ್ರೇಮ ಕತೆಯಿಂದ. ಆಫ್ ಸ್ಕ್ರೀನ್ ಎಂದ ಮಾತ್ರಕ್ಕೆ ಯಾರೋ ಬೇರೊಬ್ಬ ವ್ಯಕ್ತಿ ಅಂದುಕೊಳ್ಳಬೇಡಿ. ಅದು ಸ್ವತಃ ಅವರ ಪತ್ನಿ ಜೆನ್ನಿಫರ್. ಮೀಸೆ ಚಿಗುರುವ ವಯಸ್ಸಿಗೆ ತನಗಿಂತಲೂ ಮೂರು ವರ್ಷ ದೊಡ್ಡವಳಾದ ಈಕೆಯನ್ನು ಭೇಟಿಯಾಗಿ ಮದುವೆಯ ಪ್ರಸ್ತಾಪ ವನಿಟ್ಟು, ವಿದೇಶಿ ಮಾವ ಹಾಗು ದೇಶೀ ಅಪ್ಪ(ಪೃಥ್ವಿರಾಜ್ ಕಪೂರ್) ನೊಟ್ಟಿಗೆ ಹೋರಾಡಿ, ಪ್ರೀತಿಗಾಗಿ ಸಿಂಗಾಪೂರದವರೆಗೂ ಹೋಗಿ ಕೊನೆಗೆ ಅಂದಿನ ಕಾಲಕ್ಕೆ ಬಹುಪಾಲು ಮಂದಿಗೆ ಅರಗಿಸಿಕೊಳ್ಳಲಾಗದಂತಹ ಜೋಡಿಯಾಗಿ ಹೊರಹೊಮ್ಮಿದರು ಇವರು. ಆದರೆ ವಿದೇಶಿ ಲವ್ ಸ್ಟೋರಿ ಹೆಚ್ಚು ದಿನ ನಡೆಯಲ್ಲ ಬಿಡಿ ಅಂದುಕೊಂಡವರಿಗೆ ಇವರ ಜೀವನ ಮಾತ್ರ ಒಂದು ನೀತಿಪಾಠವಾಯಿತು. ಮನಸ್ಸು ಮಾಡಿದ್ದರೆ ತನಗೆ ಸಿಗದ ತ್ರಿಪುರ ಸುಂದರಿ ಯಾರು ಎಂಬಂತಿದ್ದ ಕಾಲದಲ್ಲಿ ಶಶಿ ಎಲ್ಲಿಯೂ ತನ್ನ ಹಾಗು ಜೆನ್ನಿಫರ್ ನ ಸಂಬಂಧಕ್ಕೆ ಧಕ್ಕೆ ಬಾರದಂತೆ ನೋಡಿಕೊಂಡರು. ಹಾಗೊಮ್ಮೆ ಈಗೊಮ್ಮೆ ತಮ್ಮ ಹಾಗು ಇತರ ನಟಿಯರ ಬಗ್ಗೆ ಕಲ್ಪಿಸಿ ಮೂಡುವ ಕತೆಗಳೂ ಇವರ ಗಟ್ಟಿ ಸಂಬಂಧದ ಮುಂದೆ ಕ್ಷೀಣಿಸಿಹೋದವು. ಶಶಿ ತನ್ನಾಕೆಯನ್ನು ಅದೆಷ್ಟು ಇಷ್ಟಪಟ್ಟಿದ್ದರೆಂದರೆ ಅಂದು (1984) ರಲ್ಲಿ ಆಕೆ ಕ್ಯಾನ್ಸರ್ ನಿಂದ ಕಾಲವಾದ ನಂತರವೂ ಇವರು ಯಾರೊಬ್ಬರ ಸಂಗಡವನ್ನು ಬಯಸದೆ ತಮ್ಮ ಕೊನೆಯುಸಿರಿರುವರೆಗೂ ಏಕಾಂಗಿಯಾಗಿಯೇ ಆಕೆಯ ನೆನಪಲ್ಲೇ ಜೀವನ ಕಳೆದರು. ಬಹುಷಃ ಆ ಸ್ಥಾನವನ್ನು ತುಂಬುವ ಬೇರ್ಯಾರು ಇಲ್ಲಿ ಸಿಗಲಿಲ್ಲವೇನೋ? ಒಂದು ಪಕ್ಷ ಸಿಕ್ಕರೂ ಅದು ಬಹುಷಃ ಆ ಹೊಸ ವ್ಯಕ್ತಿಗೆ ಉಳಿದುಕೊಳ್ಳಲು ಶಶಿಯ ಹೃದಯದಲ್ಲಿ ಜಾಗವಿರಲಿಲ್ಲವೇನೋ?!

ಆಸೆಗೆ ಪ್ರೇಮವೆಂಬ ಹೆಸರು ಕಟ್ಟಿ, ಮೂರು ಗಂಟಿನ ಸಂಬಂಧಕ್ಕೆ ಮೂರುಕಾಸಿನ ಬೆಲೆಯನ್ನೂ ಕೊಡದೆ ಎಡಕ್ಕೂ ಬಲಕ್ಕೂ Swipe ಮಾಡುತ್ತ ಜೀವನದ ಸಾತಿಯ(ರ)ನ್ನು ಅರಸುವ ಈ ಕಾಲದಲ್ಲಿ ಶಶಿ ಕಪೂರ್ ತೀರಾ ಭಿನ್ನವಾಗಿ ಹಾಗು ಮಾದರಿಯಾಗಿ ಕಾಣುತ್ತಾರೆ. That's it.

'ಮೇರೇ ಪಾಸ್ ಮಾ ಹೈ' ಎಂದ ಗುಳಿಕೆನ್ನೆಯ ಆ ಲೆಜೆಂಡರಿ ವ್ಯಕ್ತಿ ಮೊನ್ನೆ ಡಿಸೆಂಬರ್ ಗೆ ಇಹಲೋಕ ತ್ಯೆಜಿಸಿ ಆಗಲೇ ಒಂದು ವರ್ಷವೇ ಸಂದಿದೆ. ನಗುಮೊಗದ ಯುವ ಚೆಲುವನಾಗಿ ನೋಡುಗರನ್ನು ರಂಜಿಸಿದ ಆ ಶಶಿಗೂ, ಬಾಡಿದ ಹಣ್ಣಿನಂತಾಗಿ ನೆಡೆಯಲೂ ಶಕ್ತನಿರದೆ ವೀಲ್ ಚೇರಿನ ಮೇಲೆಯೇ ತನ್ನ ಕೊನೆದಿನಗಳನ್ನು ತಳ್ಳಿದ ಶಶಿಯನ್ನು ನೋಡಿದರೆ ಕಾಲದ ಮೇಲೆ ಸಿಟ್ಟು ಬರುವುದಂತೂ ಸುಳ್ಳಲ್ಲ. ಏನಿಲ್ಲವಾದರೂ ಏನೊಂದಕ್ಕಾದರೂ ಇಂತಹ ವ್ಯಕ್ತಿಗಳು ಆಗೊಮ್ಮೆ ಈಗೊಮ್ಮೆ ನೆನಪಾಗುತ್ತಲೇ ಇರಬೇಕು. ಆದರೆ ಆ ಏನೊಂದು ಏನೆಂಬುದು ಮಾತ್ರ ನಮ್ಮ ನಿಮ್ಮ ವಿವೇಕ ಹಾಗು ವಿವೇಚನೆಗೆ ಬಿಟ್ಟ ವಿಷಯ.

No comments:

Post a Comment