Wednesday, September 19, 2018

ಕೊಡುವ ಮೂರಾಣೆಗೇನು ಇವನ ಹೆಗಲ ಮೇಲೊತ್ತು ಸುತ್ತಬೇಕೇನು?

ಜಾಗತಿಕ ಮಟ್ಟದಲ್ಲಿ ಇಂದು ನಾಲ್ಕು ರೀತಿಯ ದೇಶಗಳನ್ನು ಕಾಣುತ್ತೇವೆ. ಅವುಗಳಲ್ಲಿ ಮೊದಲನೆಯವು ಇತರೆ ದೇಶಗಳ ಸಂಕಷ್ಟಗಳಿಗೆ ಸ್ಪಂಧಿಸಿ ಅಲ್ಪವೋ ಅಪಾರವೋ ತಮ್ಮ ಕೈಲಾದ ನೆರವನ್ನು ನೀಡುವ ದೇಶಗಳು, ಕೆಲವು ಕೊಡುವವರಿಗೆ ನಮ್ರತೆಯಿಂದಲೇ ಬೇಡವೆಂದು ಕಷ್ಟಗಾಲದಲ್ಲಿ ತಮಗೆ ತಾವೇ ನೆರವಾಗುವ ದೇಶಗಳು, ನಂತರದವು ಸ್ವಪ್ರತಿಷ್ಠೆ, ಆತ್ಮಗೌರವ ಎಂಬುದನ್ನೆಲ್ಲವನ್ನು ಬಿಟ್ಟು ಎಷ್ಟೂ ಕೊಟ್ಟರೂ ಸಾಲದೆನುತ ಕೈಚಾಚುವು, ಮತ್ತುಳಿದವು ನೆರವನ್ನು ಕೊಟ್ಟೂ, ಮೂರನ್ನು ಬಿಟ್ಟು ಅಯ್ಯೋ ಕೊಟ್ಟೆನೆಲ್ಲಾ ಎಂಬ ಸಣ್ಣತನವನ್ನು ತೋರಿಸುವ ದೇಶಗಳು. ತಿಳಿದೋ ತಿಳಿಯದೆಯೋ ಯಾವೊಂದು ದೇಶವೂ ಸಹ ಈ ನಾಲ್ಕನೇ ಕೆಟಗರಿಗೆ ಬರಲಿಚ್ಚಿಸುವುದಿಲ್ಲ. ಅದು ಒಂತರ ಭಂಡತನದ ಪರಮಾವಧಿ ಎನ್ನುತ್ತಾರಲ್ಲ ಹಾಗೆ. ಮೇಲುಕೀಳೆಂಬ ಅಸಹನೆ, ನಾನು ನಾನೆಂಬ ಆಹಂ, ಕುತಂತ್ರಿ ತಂತ್ರಗಳೇ ತುಂಬಿ ತುಳುಕಾಡುವ ದೇಶವೊಂದು ಮಾತ್ರ ಈ ಬಗೆಯ ಕೊಟ್ಟು ಕೈ-ಕೈ ಹಿಸುಕುಕಿಕೊಳ್ಳುವ ಗುಂಪಿಗೆ ಸೇರುತ್ತದೆ.

ಪ್ರಸ್ತುತ ಟ್ರಂಪ್ ಮಹಾಶಯ ದಿ ಗ್ರೇಟ್ ಎಂದು ಕರೆಸಿಕೊಳ್ಳುವ ಅಮೇರಿಕವನ್ನು ಈ ನಾಲ್ಕನೇ ಕೆಟಗರಿಯ ದೇಶದ ಪಟ್ಟಿಯಲ್ಲಿ ತಂದು ನಿಲ್ಲಿಸಿದ್ದಾನೆ. ಕೊಟ್ಟ ಮೂರಾಣೆ ದುಡ್ಡಿನ ಗರ್ವದಿಂದ ನಾವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹಣದ ನೆರವನ್ನು ನೀಡುತ್ತಾ ತಪ್ಪುಮಾಡುತ್ತಿದ್ದೇವೆ ಎನುತ ಸಣ್ಣತನದ ಮಾತನಾಡುತ್ತಾನೆ. ತಾನೇ ರಾಜನೆಂಬಂತೆ ಸಿಕ್ಕ ಸಿಕ್ಕ ಅಂತಾರಾಷ್ಟ್ರೀಯ ವಾಗ್ವಾದಗಳಿಗೆ ಮೂಗನ್ನು ತೂರಿಸುತ್ತಾ, ದ್ವೇಷದ ಜ್ವಾಲೆಯನ್ನು ಹೊತ್ತಿಸುತ್ತಾ, ತನ್ನ ಕಳ್ಳತನವನ್ನು ಮರೆಮಾಚಿಕೊಳ್ಳಲು ಇತರ ದೇಶಗಳ ಮೇಲೆ ಗೂಬೆಯನ್ನು ಕೂರಿಸುತ್ತಾ, ಅರಚುತ್ತಾ, ಬೆದರಿಸುತ್ತ, ಶ್ರೀಮಂತ ಅಪ್ಪನ ಪುಡಾರಿ ಮಗನಂತನಾಗಿದೆ ಇಂದು ಟ್ರಂಪ್ ಆಡಳಿತ. ಇಡೀ ಭೂಮಂಡಲವನ್ನೇ ತನ್ನ ನೌಕಾನೆಲೆಯ ತುಣುಕುಗಳನ್ನಾಗಿ ಮಾಡಿಕೊಳ್ಳುವ ಸಲುವಾಗಿಯೂ, ತನ್ನ ದೇಶದ ತೈಲಕ್ಕೆ ಅಂತರಾಷ್ಟ್ರಿಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿಸಿಕೊಳ್ಳಲೋ, ನಾನಿದ್ದರೆ ಮಾತ್ರ ಇಂದು ವಿಶ್ವಮಾರುಕಟ್ಟೆ ನೆಡೆಯುವುದು ಎಂಬ ಭ್ರಮೆಯನ್ನು ಹುಟ್ಟುಹಾಕಲು ಅವಣಿಸುತ್ತಿರುವ ಈ ಆಸಾಮಿ ಕೊನೆಗೆ ಇದು ಸಾಧ್ಯವಿಲ್ಲ ಎಂಬುದನ್ನು ಮನಗಂಡಾಗ ಬಳಸುತ್ತಿರುವ ಕೊನೆಯ ಅಸ್ತ್ರಗಳೇ 'ಆರ್ಥಿಕ ದಿಗ್ಬಂಧನ' ಹಾಗು 'ಆರ್ಥಿಕ ನೆರವಿನ ಮೊಟಕುಗೊಳಿಸುವಿಕೆ'. ಅದರಲ್ಲೂ ಆರ್ಥಿಕ ನೆರವಿನ ಮೊಟಕುಗೊಳಿಸುವಿಕೆಯನ್ನು ಆತ ಹೇಳುವ ರೀತಿಯನ್ನು ನೋಡಿದರೆ ಇಂದು ವಿಶ್ವದ ಬಡದೇಶಗಳಿಗೆಲ್ಲವೂ ಈತನೊಬ್ಬನೇ ಅನ್ನಧಾತನೇನೋ ಎನ್ನುವ ಧಾಟಿಯದ್ದಾಗಿರುತ್ತದೆ. ಅಷ್ಟಾಗಿಯೂ ಇಂದು ಅಮೇರಿಕ ವಿದೇಶಗಳಿಗೆ ಕೊಡುವ ಆರ್ಥಿಕ ನೆರವು ಎಷ್ಟಂತೀರಾ, ಅದು ತನ್ನ ಒಟ್ಟು ಜಿಡಿಪಿಯ 0.7% ಮಾತ್ರ! ಇದು ಆರ್ಥಿಕವಾಗಿ ಸಣ್ಣವರಾದರೂ ಮನಸ್ಸಿನಿಂದ ದೊಡ್ಡವರಾದ ಸ್ವೀಡನ್, ನಾರ್ವೆಯ ಶೇಕಾಡುವರುವಿಗೆ ಹೋಲಿಸಿದರೆ ತೀರಾನೇ ಕಡಿಮೆ ಎಂಬುದು ಅಮೇರಿಕಾದ ಅಧ್ಯಕ್ಷನಿಗೇನು ತಿಳಿಯದ ವಿಚಾರವಲ್ಲ. ಅಷ್ಟಾಗಿಯೂ ಈತ ಸಾಕು ಮಕ್ಕಳಿಗೆ ಆಸ್ತಿಯ ಹಕ್ಕಿಲ್ಲವೇನೋ ಎಂಬಂತೆ ಅಭಿವೃದ್ದಿಶೀಲ ರಾಷ್ಟ್ರಗಳಿಗೆ ನಮ್ಮ ಆರ್ಥಿಕ ನೆರವನ್ನು ಮೊಟಕುಗೊಳಿಸಬೇಕು ಎಂಬಂತಹ ಬಾಲಿಶ ಹೇಳಿಕೆಗಳನ್ನು ಕೊಡುವಾಗ ಈತನ ಬೆಂಬಲಿಗರು ಕುಡಿದು ಕುಪ್ಪಳಿಸಲು ಖರ್ಚು ಮಾಡುವ ಒಟ್ಟು ಹಣದಿಂದಲೇ ಆಫ್ರಿಕಾದ ಯಾವುದಾದರೊಂದು ಜಿಲ್ಲೆಯನ್ನು ವರ್ಷವಿಡೀ ಬೆಳಗಬಹುದೇನೋ?!

ಅದು ಹಾಗಿರಲಿ. ಇಂದು ಜಾಗತಿಕವಾಗಿ ಜರುಗುತ್ತಿರುವ ವಿಶ್ವದ ಹತ್ತಾರು ಯುದ್ಧಗಳಲ್ಲಿ ಕನಿಷ್ಠ ಒಂದರಲ್ಲಿಯೂ ಅಮೇರಿಕಾದ ಪಾತ್ರ ಇಲ್ಲದಂತಿಲ್ಲ. ಅಲ್ಲದೆ ಕೈಕುಲುಕಿ ಚರ್ಚಿಸಿ ಕೊನೆಗೊಳ್ಳಬಹುದಾದ ಅದೆಷ್ಟೋ ವಿವಾದಗಳಿಗೆ ಈ ದೇಶ ಬೆಂಕಿ ಹಚ್ಚಿ ಕಾಲುಕಿತ್ತಿರುವ ಹತ್ತಾರು ನಿದರ್ಶನಗಳು ಇಂದು ನಮ್ಮ ಮುಂದಿವೆ. ಒಂದೆಡೆ ಯುದ್ದಗುಂಡುಗಳ ಸುರಿಮಳೆಯನ್ನು ಸುರಿಸುತ್ತಾ ತಕಥೈ ಕುಣಿಯುವ ದೇಶದಿಂದ ಶಾಂತಿ ನೆಮ್ಮದಿಯ ಮಾತುಗಳು ದುಸ್ವಪ್ನವೇ ಸರಿ. ಇಂತಹ ಯುದ್ಧಪ್ರಿಯ ನಾಯಕನ ಆಡಳಿತದ ಪ್ರಸ್ತುತ ಅಮೇರಿಕ, ತಾನು ಹೋದಲೆಲ್ಲ ಗುಡುಗಿ ಗುಂಡಾಂತರ ಮಾಡಿ ಅಲ್ಲಿನ ಜನಜೀವನವೆನ್ನಲ್ಲದೆ ಸಸ್ಯ ಸಂಕುಲವನ್ನೂ ಕಪ್ಪು ಹೊಗೆಯೊಳಗೆ ತಳ್ಳಿ ಬರುವುದು ಸಾಮನ್ಯವಾದ ಸಂಗತಿಯಾಗಿದೆ. ಈ ದೇಶ ಅಂತಹ ದೇಶಗಳ ಅಭಿವೃದ್ಧಿಗೆ ಅದೆಷ್ಟೇ ಪರಿಹಾರವನ್ನು ಕೊಟ್ಟರು ಸಾಲದು. 60ರ ದಶಕದ ವಿಯೆಟ್ನಾಂ ಯುದ್ಧದಲ್ಲಿ ಸ್ಥಳೀಯ ಪಡೆಗಳ ಹಲವು ಬಗೆಗಳ ಕಾಡಿನ ಯುದ್ಧವನ್ನು ಎದುರಿಸಲಾಗದೆ ನರಿಬುದ್ದಿಯನ್ನು ಅನುಸರಿಸಿದ ಅಮೇರಿಕ ವಿಯೆಟ್ನಾಂ ಸೈನಿಕರು ಅಡಗಿ ಕುಳಿತಿದ್ದ ಕಾಡಿನ ಮೇಲೆಲ್ಲಾ ‘ಏಜೆಂಟ್ ಆರೆಂಜ್’ ಎಂಬ ರಾಸಾಯನಿಕವನ್ನು ಸುರಿದು ಮಾಡಿರುವ ಅನಾಹುತವನ್ನು ಕಲ್ಪಿಸಲು ಸಾಧ್ಯವಲ್ಲ. ಆ ರಾಸಾಯನಿಕ ಅಂದು ಸಾವಿರಾರು ವಿಯೆಟ್ನಿಗರ ಜೀವ ಬಲಿಯನ್ನು ಪಡೆದುಕೊಂಡಿತಲ್ಲದೆ ಲಕ್ಷಾಂತರ ಜನರನ್ನು ಕ್ಯಾನ್ಸರ್ ಹಾಗು ಚರ್ಮದ ಖಾಯಿಲೆಗಳೊಟ್ಟಿಗೆ ಮಾನಸಿಕವಾಗಿಯೂ ಹಿಂಸಿಸಿತು. ಅದಕ್ಕಿಂತ ಮಿಗಿಲಾಗಿ ಅಂದು ಈ ರಾಸಾಯನಿಕದಿಂದ ಹೇಳಹೆಸರಿಲ್ಲದೆ ಮರೆಯದ ಹಸಿರುಗಾಡಿನ ಪ್ರದೇಶ ಬರೋಬ್ಬರಿ 31 ಲಕ್ಷ ಹೆಕ್ಟರ್!! ಅಲ್ಲದೆ ಎರಡನೇ ಮಹಾಯುದ್ಧದಲ್ಲಿ ಜಪಾನಿನ ಹಿರೋಷಿಮಾ ಹಾಗು ನಾಗಸಾಕಿ ನಗರಗಳ ಮೇಲೆ ಮಾನವೀಯತೆಯ ಎಲ್ಲ ಎಲ್ಲೆಯನ್ನು ಮೀರಿ ಅಣುಬಾಂಬನ್ನು ಎಸೆದು ನೆಡೆಸಿದ ಮಿಲಿಯನ್ಗಟ್ಟಲೆ ಜೀವಹಾನಿಗಳನ್ನು ಮುಂದೆ ಸಾವಿರವರ್ಷಗಳ ನಂತರವೂ ಖಂಡಿಸಲಾಗುತ್ತದೆ. ಇನ್ನು ಅಫ್ಘಾನಿಸ್ಥಾನ, ಸಿರಿಯಾ ಹಾಗು ಮಧ್ಯಪ್ರಾಚ್ಯದ ಹಲವೆಡೆ ಅಮೇರಿಕಾದ ಸೇನೆಗಳು ನೆಡೆಸಿರುವ ಧಾಂದಲೆಯ ಪುರಾವೆಗಳು ಒಂದೇ ಎರಡೇ. ಇಂತಹ ಅಮೆರಿಕವನ್ನು 'MAKE AMERICA GREAT AGAIN! ' ಎಂಬ ಸ್ಲೋಗನ್ನಿನೊಟ್ಟಿಗೆ ಗೆದ್ದ ಟ್ರಂಪ್ ನ ಪ್ರಕಾರ ರಾಶಿ ಕೋಟಿ ಜೀವಗಳನ್ನು ಬಲಿಪಡೆದು ದೊಡ್ಡವನು ಎನಿಸಿಕೊಂಡ ಹಾಗೆ ಮತ್ತದೇ ನರಯಜ್ಞವನ್ನು ಮಾಡಿ ಮಗದೊಮ್ಮೆ ಗ್ರೇಟ್ ಎಂದು ಕರೆಸಿಕೊಳ್ಳುದಾಗಿದೆ ಎನಿಸುತ್ತದೆ. ಇಂತಹ ನಿರ್ಧಯಿ ದೇಶದಿಂದ ಇಂದು ವಿಶ್ವದ ಮೂಲೆ ಮೂಲೆಗಳಲ್ಲಿಯೂ ಜರುಗಿದ ಅನಾಹುತಗಳಿಗೆ ಪರಿಹಾರವನ್ನು ಪರಿಹಾರವಲ್ಲದೆ ದಂಡದ ರೂಪದಲ್ಲಿ ಪಡೆಯಬೇಕು. ಕೊಡದಿದ್ದರೆ ಕೊಬ್ಬಿರುವ ದೇಹದಿಂದ ಕಕ್ಕಿಸಬೇಕು!

ಇನ್ನು ಇಂತಹ ದೇಶಗಳು ಕೊಡುವ ತೃಣಮಾತ್ರದ ಆರ್ಥಿಕ ಸಹಾಯ ಯಾವ ದೇಶವನ್ನಾಗಲಿ ಇಂದು ಅಭಿವೃದ್ಧಿಯ ಉತ್ತುಂಗಕ್ಕೆ ತಂದು ನಿಲ್ಲಿಸಿದೆ? ಅಭಿವೃದ್ಧಿ ಹೊಂದುತ್ತಿರುವ ದೇಶಗಳೆಂದರೆ ಹೆಚ್ಚಾಗಿ ಅದು ಅಧಿಕಾರಿಗಳ ಮೋಸ, ಕಪಟ, ಲಂಚಗುಳಿತನ ಹಾಗು ಭ್ರಷ್ಟತೆಯ ವಿರುದ್ದದ ಹೋರಾಟವೇ ಆಗಿರುತ್ತದೆ. ಇಂತಹ ದೇಶಗಳಿಗೆ 'ಇಗೋ ತಗೋಳಿ' ಎನುತ ಜಾತ್ರೆಗೆ ಹೊರಡುವ ಹುಡುಗರ ಕೈಗೆ ಚಿಲ್ಲರೆಯನ್ನು ಸುರಿದಂತಹ ನೆರವನ್ನು ಕೊಟ್ಟರೆ ಆದರ ಪೂರ್ಣ ಪ್ರಮಾಣದ ಸದ್ಭಳಕೆಯಾಗದಿರುವುದು ಬೇರೆಯ ವಿಚಾರವೇ. ಆದರೆ ಅಭಿವೃದ್ಧಿ ಹೊಂದಿದ ಬಹಳಷ್ಟು ದೇಶಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೀಗೆ ನೆರವನ್ನು ಕೊಡುವ ಹಿಂದಿರುವ ಚಾಣಾಕ್ಷ ನೀತಿ ಇಂದು ಯಾರಿಗೂ ಗೊತ್ತಿರದ ವಿಷಯವೇನಲ್ಲ. ನನಗೊಂದು ನೌಕಾನೆಲೆ ಆಗಬೇಕು, ಯುದ್ಧ ಸಮಯದಲ್ಲಿ ತುರ್ತು ಸಹಾಯ ಸಿಗಬೇಕು, ವೀಸಾ ನಿಯಮಾವಳಿಗಳಲ್ಲಿ ನಮ್ಮವರಿಗೆ ರಿಯಾಯಿತಿ ದೊರಕಬೇಕು, ಆ ದೇಶದೊಟ್ಟಿಗೆ ವ್ಯಾಪಾರವನ್ನು ಮಾಡಬಾರದು, ಈ ದೇಶದಿಂದ ತೈಲವನ್ನು ಆಮದುಮಾಡಿಕೊಳ್ಳಬಾರದೆಂಬ ಸಾಲು ಸಾಲು ಕಂಡೀಷನ್ಗಳು ಆ ಮುಖೇನ ಉದ್ಭವಿಸುತ್ತವೆ. ಇನ್ನು ಹಣವೆಂದರೆ ಊಟ ಕಾಣದೆ ಎಷ್ಟು ದಿನಗಳಾದವೋ ಎಂಬಂತೆ ಬಾಯಿ ಬಿಡುವ ದೇಶಗಳು ಮುಂದೊಂದು ದಿನ ಬಂದೆರಗುವ ಆಪತ್ತನ್ನೂ ಲೆಕ್ಕಿಸದೆ 'ಜೈ' ಎನುತ ಅಂತಹ ದೇಶಗಳು ವಿಧಿಸುವ ಷರತ್ತುಗಳಿಗೆಲ್ಲಕ್ಕೂ ಒಪ್ಪಿಬಿಡುತ್ತವೆ. ಪರೋಕ್ಷವಾಗಿ ಜಗತ್ತನ್ನು ಆಕ್ರಮಿಸುವ ಜಾಣತನ ಇದಕ್ಕಿಂತ ಬೇರೊಂದಿದೆಯೇ? ಒಟ್ಟಿನಲ್ಲಿ ಆರ್ಥಿಕ ನೆರವು ಎಂಬ ಹೆಸರಿನಲ್ಲಿ ತನ್ನ ಇರುವಿಕೆಯನ್ನು ಗಟ್ಟಿಗೊಳಿಸಿಕೊಂಡು ಬೆಳೆಯುತ್ತಿರುವ ಅಮೇರಿಕ ಇಂದು ದೇಶಗಳ ಮೇಲೆ ಮಾಡಿರುವ ಆ ಡಿಪಾಸಿಟ್ ಗಳ ಪೂರ್ಣ ಪ್ರಮಾಣದ ನೆರವನ್ನು ಪಡೆಯುತ್ತಿದೆ ಅಷ್ಟೇ. ಇಂದು ಭಾರತಕ್ಕೆ ಅದು ಕೊಡುತ್ತಿರುವ ಆರ್ಥಿಕ ಸಹಾಯವನ್ನು ಮೊಟಕುಗೊಳಿಸಬೇಕು ಎನ್ನುತ್ತಿದೆ. ಆದರೆ ಸುಮಾರು ಆರೇಳು ವರ್ಷಗಳ ಹಿಂದೆ ಮನಮೋಹನ್ ಸಿಂಗ್ರ ಸರ್ಕಾರವಿದ್ದಾಗ ಕಡ್ಡಿ ಮುರಿದಂತೆ 'ನಿಮ್ಮ ನೆರವು ನಮಗೆ ಬೇಕಾಗಿಲ್ಲ' ಎಂದರೂ ಇಂದಿನವರೆಗೂ ಹಣವನ್ನು ನೀಡುತ್ತಾ ಬಂದಿದೆ ಎಂದರೆ ಈ ಕಪಟ ನೆರವಿನ ಹಿಂದಿರುವ ಸ್ವಹಿತಾಸಕ್ತಿ ಎಷ್ಟಿದೆ ಎಂದು ನಾವು ಅರಿಯಬೇಕು.

ಅಲ್ಲದೆ ಅಮೇರಿಕಾದ ಈ ನೀತಿ ಅಭಿವೃದ್ಧಿಹೊಂದಿದ ದೇಶಗಳೊಟ್ಟಿಗಾದರೆ ಅದೇ ರಷ್ಯಾ, ಚೀನಾ,ಆಸ್ಟ್ರೇಲಿಯಾದಂತಹ ದೇಶಗಳೊಟ್ಟಿಗೆ ಬೇರೇನೇ ತರಹದ್ದಾಗಿರುತ್ತದೆ. ಎಷ್ಟಿದ್ದರೂ ಅವು ಮುಂದುವರೆದ ದೇಶಗಳೆಂದು ಬಲ್ಲ ಅಮೇರಿಕ ಅಂತಹ ದೇಶಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಳಸುವ ಅಸ್ತ್ರ ಅಲ್ಲಿಂದ ಆಮದಾಗುವ ವಸ್ತುಗಳ ಮೇಲೆ ಎರಾಬಿರಿ ಸುಂಕವನ್ನು ಜಡಿಯುವುದು. ಆದರೆ ಆ ಸುಂಕ ಜಡಿದ ಕತೆಯ ಹಿಂದಿನ ಅಸಲಿಯತ್ತು ಬೇರೇನೇ ಇರುತ್ತದೆ. ಎಲ್ಲಿಯವರೆಗೂ ಆ ದೇಶ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವುದಿಲ್ಲವೋ ಅಲ್ಲಿಯವರೆಗೂ ಇಂತಹ ಇತ್ತಲಬಾಗಿಲ ಕೆಲಸವನ್ನೇ ಅಮೇರಿಕ ಅದರಲ್ಲೂ ಟ್ರಂಪ್ ಆಡಳಿತ ಮಾಡಿಕೊಂಡು ಬಂದಿದೆ. ಅಂದರೆ ವಿಶ್ವದ ಯಾವುದೇ ದೇಶವೂ ತನ್ನ ಸಮನಾಗಿ ಬೆಳೆಯಬಾರದು, ನನ್ನ ನೆಡೆಯನ್ನು ಪ್ರೆಶ್ನಿಸಬಾರದು ಎಂಬುದಷ್ಟೇ ಆಗಿದೆ. ಇಲ್ಲವಾದರೆ 'ಆರ್ಥಿಕ ದಿಗ್ಬಂದನ' 'ನೆರವಿನ ಮೊಟಕುಗೊಳಿಸುವಿಕೆ' 'ಸುಂಕ ಏರಿಕೆ' ಎಂಬ ಪೆಟ್ಟುಗಳಲಿಂದ ಅದನ್ನು ಸದೆಬಡಿಯುತ್ತದೆ.

ಇಂತಹ ಕಿರಾತಕ ದೇಶಗಳ ನಡುವೆ ವಿಶ್ವಶಾಂತಿ, ಸಕಲಲೋಕಕಲ್ಯಾಣ ಎನುತ ನೆಡೆಯುತ್ತಿರುವ ಭಾರತದಂತಹ ದೇಶಗಳಿಗೆ ಎದುರಾಗುವ ಸಂದಿಘ್ನ ಸನ್ನಿವೇಶಗಳು ಒಂದೆರಡಲ್ಲ. ಅಸಲಿಯತ್ತು ಹೀಗಿರುವಾಗ ಪ್ರಸ್ತುತ ಕಾಲದಲ್ಲಿ ನಾವುಗಳು ಸ್ವಾವಲಂಬಿಗಳಾಗುವ ಜರೂರು ಅದೆಷ್ಟರಮಟ್ಟಿಗಿದೆ ಎಂಬುದನ್ನು ತಿಳಿಸಿ ಹೇಳಬೇಕಾಗಿಲ್ಲ. ಅತಿವೃಷ್ಟಿ ಹಾಗು ಅನಾವೃಷ್ಟಿಯ ಸಂದರ್ಭದಲ್ಲಷ್ಟೇ ನಾವುಗಳು ಇತರ ದೇಶಗಳ ನೆರವು ಬೇಡವೆಂದರೆ ಸಾಲದು. ಯುದ್ದೋಪಕರಣಗಳಿನಿಂದಿಡಿದು ಒಂದು ಅತ್ಯಾಧುನಿಕ ತಂತ್ರಜ್ಞಾನಗಳಿಗೂ ಇತರೆ ದೇಶಗಳನ್ನು ಅವಲಂಬಿಸುವುದನ್ನೂ ನಾವು ಮೊಟಕುಗೊಳಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ಯಾವುದೇ ಇರಲಿ, ಸ್ವಾವಲಂಬಿ ಯೋಜನೆಗಳಿಗೆ ಚಿಂತಿಸತೊಡಗಿದರೆ ಅವುಗಳನ್ನು ಮುಕ್ತವಾಗಿ ಬೆಂಬಲಿಸಬೇಕು. ಇಲ್ಲವಾದಲ್ಲಿ ಪ್ರಸ್ತುತ ಕಪಟ ದೊಡ್ಡಣ್ಣನ ಜಮಾನದಲ್ಲಿ ನಾವುಗಳು ಮೂರನೇ ಕೆಟಗರಿಯ ದೇಶವಾಗಿ ಪರದಾಡುವ ಸನ್ನಿವೇಶ ಬರಬಾರದಂತೇನಿಲ್ಲ!




No comments:

Post a Comment