Friday, May 25, 2018

ಮರುಭೂಮಿಯ ಸೆರೆವಾಸ

'ನಿನ್ನ್ ಆ ರಾಶಿ ಕೂದ್ಲು ನೋಡಕ್ ಆಗಲ್ಲ ಮಹರಾಯ, ಸೆಲೂನ್ ಶಾಪಿಗೆ ತಿಂಗ್ಳಿಗೆ ಒಮ್ಮೆ ಆದ್ರೂ ಹೋಗೋದಲ್ವ' ಎಂಬ ಮಾತನ್ನು ಕಳೆದ ಕೆಲ ತಿಂಗಳಿಂದ ಕೇಳಿ ಕೇಳಿ ಕೊನೆಗೂ ಏಕೋ ಆ ದಡೂತಿ ಬಂಗಾಳಿಯ ಶಾಪಿಗೆ ಹೋಗುವ ಮನಸ್ಸಾಯಿತು. ರೂಮಿನಲ್ಲಿದ್ದ ಹೂವಿನ ಗಿಡಕ್ಕಿಂತಲೂ ಕಾಳಜಿ ವಹಿಸಿ ಬೆಳೆಸಿದ್ದ ಕೇಶರಾಶಿಯನ್ನು ಹೀಗೆ 'ನೋಡಕ್ ಆಗಲ್ಲ ಮಹರಾಯ' ಎಂಬ ಗವಾರರ ಮಾತುಗಳಿಗೆ ಕೊಂಚ ಸಿಟ್ಟು ಬಂದರೂ ಆ ಬಂಗಾಳಿಯ ಗಜಗಾತ್ರದ ಹಸ್ತಗಳಿಂದ ತಲೆಗೂ ಹಾಗು ಬೆನ್ನಿಗೂ ಪಟಪಟನೆ ಬಡಿಸಿಕೊಳ್ಳುವ ಸುಖಕ್ಕಾದರೂ ಇಂದು ಸೆಲೂನಿನೆಡೆ ಹೋಗಬೇಕೆನಿಸಿತು. ಬಂಗಾಳಿ, ಅಂದರೆ ನಮ್ಮ ಪಚ್ಚಿಮ ಬಂಗಾಳದವನಲ್ಲ. ಅದಕ್ಕೂ ಕೊಂಚ ಎಡಕ್ಕಿರುವ ಬಾಂಗ್ಲಾ ದೇಶದವ. ಮೀಸೆ ಚಿಗುರುವ ವಯಸ್ಸಿನಲ್ಲಿ ತನ್ನೂರಿನ ಯಾರೊ ಒಬ್ಬನನ್ನು ಕಾಡಿ ಬೇಡಿ ಇಲ್ಲಿಗೆ ಬಂದು ಪರಿಚಯಸ್ತರೊಬ್ಬರ ಬಳಿ ಕೆಲಸ ಕಲಿತು ಇಂದು ತನ್ನದೇ ಆದೊಂದು ಸೆಲೂನ್ ಶಾಪ್ ತೆರೆದು ಎರಡು ಹುಡುಗರನ್ನು ಕೆಲಸಕ್ಕೂ ಇಟ್ಟುಕೊಂಡಿದ್ದಾನೆ. ಕಾರ್ಪೊರೇಟ್ ಪದದಲ್ಲಿ ಏಳುವುದಾದರೆ ಏಕ್ದಂ 'ವರ್ಟಿಕಲ್ ಗ್ರೂಥ್ '! ಕೆಲವರುಷಗಳ ಪರಿಚಯ. ಪ್ರತಿಬಾರಿಯೂ ರೂಮಿನಿಂದ ಹೊರಗಿಳಿದರೆ 'ಸಲಾಂ ಸಾಬ್' ಎನುತ್ತಾ ಆತ್ಮೀಯವಾದೊಂದು ನಗುವನ್ನು ಚೆಲ್ಲಿದರೂ ಆತನ ದೃಷ್ಟಿ ಮಾತ್ರ ಗ್ರಾಹಕನ ಕೇಶರಾಶಿಯ ಉದ್ದಳತೆಯ ಮೇಲೆಯೇ ಇದ್ದಿರುತ್ತದೆ. ಬೇಕಂತೆಲೆ ಏನೋ ಎಂಬಂತೆ 'ಸಾಬ್, ಛೋಟೆ ಬಾಲ್ ಆಪ್ಕೋ ಸಹಿ ನಹಿ ದಿಕ್ತ' ಎನ್ನುತ್ತಾ ಪ್ರತಿಬಾರಿಯೂ ಎರಡಿಂಚಿನ ಕೂದಲಿನ ಉದ್ದವನ್ನು ಕನಿಷ್ಠ ಹತ್ತು ಪರ್-ಸೆಂಟ್ಟೂ ತಗ್ಗಿಸದೆ ತನ್ನ ಮುಂದಿನ ತಿಂಗಳ ಬಿಸಿನೆಸ್ ಗೂ ಅಂದೇ ಇನ್ವೆಸ್ಟ್ಮೆಂಟ್ ಮಾಡಿಕೊಳ್ಳುತ್ತಿದ್ದ.

ಹಳೆಯ ಹಿಂದಿ ಹಾಡುಗಳೊಟ್ಟಿಗೆ ವೀಕೆಂಡಲೊಂದು ಬಿಯರು, ಮುಂಜಾವಿನ ಅಥವಾ ಇಳಿಸಂಜೆಯಲ್ಲೊಂದು ವಾಕು, ಅಲ್ಲೆಲ್ಲೋ ದೂರದ ಮರದ ಕೆಳಗೆ ಅಂಗಾತ ಮಲಗಿ ಒಂದೆರೆಡು ಪುಸ್ತಕಗಳ ಓದು, ಪಾಕಕ್ರಾಂತಿಯ ಮೋಜು... ಹೀಗೆ ವಾರಕ್ಕೊಂದು ಸಿಗುವ ರಜೆಯ ಟೈಮ್ ಟೇಬಲ್ಲಿಗೆ ಇತ್ತೀಚಿಗೆ ಈ ಭೀಮಗಾತ್ರ ಬೆಂಗಾಲಿಯ ಮಾಸ್ಸಾಜು ಕೂಡ ಸೇರಿಕೊಂಡಿದೆ. ಕನಿಷ್ಠ ಎರಡು ತಿಂಗಳಿಗೊಮ್ಮೆಯಾದರು ಅತ್ತ ಕಡೆ ಹೋಗೆ ಬರಬೇಕು. ಇಲ್ಲವಾದಲ್ಲಿ ಕೂತೇ ಕೈಲಾಸ ಸೇರುವಂತಹ ಪ್ರಸ್ತುತ ಕೆಲಸದಲ್ಲಿ ಜಡಗಟ್ಟಿದ ಬೆನ್ನುಮೂಳೆಗಳನ್ನು ಬಾಗಿ ಬೆಂಡಾಗಿಸುವವರ್ಯಾರು? ತಲೆಯ ಕೂದಲನ್ನು ಹಿಡಿದೆಳೆದು ಅದರ ಭಾರವನ್ನು ಇಳಿಸುವವರ್ಯಾರು? ಈ ಮಸ್ಸಾಜು ಕೆಜಿಗಟ್ಟಲೆ ತೂಕದ ಕೇಶರಾಶಿಯ ಗಾತ್ರವನ್ನು ಕಡಿಮೆಗೊಳಿಸುವುದಷ್ಟೇ ಅಲ್ಲದೆ ಅದರ ತುಸು ಕೆಳಗೆ ತುಂಬಿರುವ ಅಗಣಿತ ಸಂಖ್ಯೆಯ ನೋವು, ಹತಾಶೆ ಹಾಗು ಏಕಾಂತವನ್ನು ಕರಗಿಸಿಕೊಳ್ಳುವ ಪ್ರಕ್ರಿಯೆಯೇ ಆಗಿತ್ತೆಂದು ಹೇಳಬಹುದು.

ಬೆಳಗಿನ ಹತ್ತುಘಂಟೆಗೇ ಭಿಕೋ ಎನ್ನುತ್ತಿದ್ದ ಸೆಲೂನಿನ ಒಳಹೊಕ್ಕು ನೋಡಿದಾಗ ಅಲ್ಲಿ ಕೆಲಸಕ್ಕಿದ್ದ ಹುಡುಗರಿಬ್ಬರನ್ನು ಬಿಟ್ಟರೆ ಬಂಗಾಳಿ ಮಾತ್ರ ಕಾಣಲೇ ಇಲ್ಲ. 'ಎಲ್ಲಿ ನಿಮ್ಮ ಒಡೆಯ' ಎಂದು ಕೇಳಿದಾಗ ಆತ ಊರಿಗೆ ಹೋಗಿದ್ದಾನೆಂದು ಬರುವುದು ಇನ್ನೆರೆಡು ದಿನಗಳಾಗುತ್ತವೆ ಎಂಬ ಉತ್ತರ ದೊರೆತಿತು. ಬಂಗಾಳಿಯ ವಿನಃ ಈ ಎರೆಡು ಚಿಳ್ಳೆ ಪಿಳ್ಳೆ ಗಳಿಂದ ಆಗದ ಕೆಲಸವಲ್ಲ. ಆತ ಬರುವವರೆಗೂ ಕಾಯಬಹುದಿತ್ತು. ಆದರೆ ಮ್ಯಾಸ್ಸಜಿನ ತುಡಿತ ಅಷ್ಟೊಂದು ಶಾಂತವಾಗಿಬೇಕಲ್ಲ. 'ಅದು ಎಲ್ಲಿಯಾದರೂ ಸರಿಯೇ' ಎಂಬ ಮಕ್ಕಳ ಹಠಹಿಡಿಯತೊಡಗಿತು. ಮೊದಲಬಾರಿಗೆ ಅಕ್ಕಪಕ್ಕದ ಇತರೆ ಸೆಲೂನ್ ಶಾಪಿನ ಒಳಗೆ ಇಣುಕಿದೆ. ತುಸುದೂರದಲ್ಲಿದ್ದ ಇನ್ನೊಂದು ಶಾಪಿನ ಒಳಗೆ ಹೊಕ್ಕು ನೋಡಿದರೆ ಬಿಳಿಯ ಅಂಗಿಯನ್ನು ಧರಿಸಿ ತೆಳ್ಳಗೆ ಬೆಳ್ಳಗೆ ಇದ್ದೊಬ್ಬ ವ್ಯಕ್ತಿಯೊಬ್ಬ ಗಾಢ ಮೌನದ ಮುಖವಾಡವನ್ನೊತ್ತು ಇತ್ತಲೇ ನೋಡುತ್ತಿದ್ದ. ಸುಸ್ತು ಹತಾಶೆಗಳನ್ನೊಳಗೊಂಡ ಆ ನೋಟ ಒಂದು ಬಗೆಯ ಕಿಚ್ಚಿನ ನೋಟದಂತೆಯೂ ಕಾಣುತಿದ್ದಿತು. ‘ತತ್.. ಈ ನನ್ನ್ ಮಗ ನೋಡೋ ನೋಟಾನೆ ಹೀಗಿರ್ಬೇಕಾದ್ರೆ ಇನ್ ಮಸಾಜ್ ಮಾಡಿ ಅಂತಾ ಕೇಳೋಕ್ಕಾಗುತ್ತ?’ ಆದರೆ ಕೂದಲು ಬೇರೆ ಜಡೆ ಹಾಕೋವಷ್ಟು ಬೆಳೆದಿದೆ. ಶಾಪಿನ ಒಳಗೆ ಬಂದು ಹಾಗೆಯೆ ಹೊರಗೆ ಹೋಗಲು ಆಗಲಿಲ್ಲ. Infact ಧೈರ್ಯ ಸಾಲಲಿಲ್ಲ! ಬೇಕೋ ಬೇಡವೋ ಎನುತ ನನ್ನ ಪಾಡಿಗೆ ನಾನು ಹಾಯಾಗಿ ಚಾಚಿಕೊಂಡಿದ್ದ ಕುರ್ಚಿಯ ಮೆಲೋಗಿ ಕುಳಿತೆ. ಕೂಡಲೇ ತನ್ನ ಹಿಂಬದಿಗೆ ಸಣ್ಣದೊಂದು ಕುರ್ಚಿಯ ಮೇಲೆ ಕೂತಿದ್ದ ಆತ ಎದ್ದು ಬಿಳಿಯ ಬಟ್ಟೆಯೊಂದನ್ನು ಎದೆ ಹಾಗು ಹೊಟ್ಟೆಯ ಸುತ್ತಲೂ ಹೊದಿಸಿ ಕುತ್ತಿಗೆಗೊಂದು ಬಿಳಿಯ ಪೇಪರಿನ ಬಟ್ಟೆಯೊಂದನ್ನು ಕಟ್ಟಿದ. ಕೈಲಿದ್ದ ಮೊಬೈಲು ಹಾಗು ಕನ್ನಡಕವನ್ನು ಮುಂದಿದ್ದ ಮೇಜಿನ ಮೇಲೆ ಇಡುವಂತೆ ಕಣ್ಸನ್ನೆ ಮಾಡಿ, ಸರ್ವದಿಕ್ಕುಗಳಿಗೂ ಏಕರೂಪವಾಗಿ ಬೆಳೆದಿದ್ದ ಕೂದಲಿನ ಮೇಲೊಮ್ಮೆ ಕೈಯಾಡಿಸಿ 'ಏನಯ್ಯ ಇದು' ಎಂಬಂತೆ ತನ್ನ ಅಸ್ತವನ್ನು ಅರಳಿಸಿದ. ಬಾಯ್ಬಿಟ್ಟೂ ಕೇಳಲಾಗದ ಆ ಸಿಡುಕು ಮುಸುಡಿಯನ್ನು ಕಂಡು ಮಯ್ಯಲ್ಲ ಕೆಂಡಸುರಿದಂತಾಗಿ ಸಿಟ್ಟನ್ನು ಅದುಮಿಟ್ಟುಕೊಂಡ ನಾನು 'ನೋಡೇಬಿಡುವ' ಎನುತ ಸುಮ್ಮನೆ ಕುಳಿತೆ. ಮುಂದಿದ್ದ ಬೃಹತ್ ಕನ್ನಡಿಯ ಮೂಲಕ ನನ್ನನ್ನೇ ಕೆಲಕಾಲ ಗುರಾಹಿಸಿದ ಆ ಮೊರೆ ಮುಂದಿದ್ದ ನೀರಿನ ಬಾಟಲಿಯನ್ನು ತೆಗೆದು ಇಂಚಿಚ್ಛೇ ನೀರನ್ನು ಕೂದಲ ಮೇಲೆ ಚಿಮುಕಿಸತೊಡಗಿತು. ನರನಾಡಿಯಲ್ಲಿದ್ದ ರಕ್ತವನ್ನೆಲ್ಲ ಬಸಿದುಬಿಟ್ಟ ದೇಹಕ್ಕೆ ಕೆಲಸ ಕೊಟ್ಟಂತೆ ಆ ಸ್ಪ್ರೇ ಬಾಟಲಿನಿಂದ ಚಿಮುಕುತಿದ್ದ ನೀರು ಪ್ರತಿ ಬಾರಿಗೆ ಒಂದೋ ಅಥವಾ ಎರಡೂ ಕೂದಲೆಳೆಗಳನ್ನು ಮಾತ್ರವಷ್ಟೇ ನೆನೆಸುತಿದ್ದಿತು. ಕೋಪ ತಡೆಯಲಾಗಲಿಲ್ಲ. 'ಭಾಯ್, ಹೇರ್ ಕಟಿಂಗ್ ಮಾಡಿ, ಹೂವಿನ ಗಿಡ ಬೆಳೆಸ್ಬೇಡಿ ತಲೆ ಮೇಲೆ' ಎಂಬಂತೆ ಜೋರಾಗೆ ಹಿಂದಿಯಲ್ಲೇ ಅರಚಿದೆ. ಅಲ್ಲಿಯವರೆಗೂ ತನಗೂ ಆ ಕಾಯಕ್ಕಕ್ಕೂ ಸಂಭಂಧವಿಲ್ಲವೇನೋ ಎಂಬಂತಿದ್ದ ಆ ವ್ಯಕ್ತಿ ಕೂಡಲೇ ಗಂಟಲನ್ನು ಸರಿಪಡಿಸಿಕೊಳ್ಳುತ್ತ 'ಫಾಸ್ಟಿಂಗ್ ಸಾಬ್' ಎನ್ನುತ್ತಾ ಸುಮ್ಮನಾದ. ಮುಸ್ಲಿಮರ ಪವಿತ್ರ ಮಾಸವದು ಎಂಬುದ ಮರೆತೇಬಿಟ್ಟಿದ್ದ ನಾನು ಕೆಲಕಾಲ ಸುಮ್ಮನಾದೆ. ದಿನಪೂರ್ತಿ ಒಂದುಹನಿ ನೀರೂ ಇಲ್ಲದೆ ಹೀಗೆ ಬೆಳಗಿನಿಂದ ಸಂಜೆಯ ತನಕ ಉಪವಾಸವಿರುವುದನ್ನು ನೆನೆದೇ ಮೈ ಜುಮ್ಮೆನ್ನುವ ನನಗೆ ಆತನ ಆ ಸಿಡುಕು ಮೊರೆಯಲ್ಲೂ ಎಲ್ಲೋ ಒಂದೆಡೆ ಕರುಣಾಭಾವ ಕಂಡಿತು. ನಂತರ ಆತನ ಪಾಡಿಗೆ ಕೆಲಸದಲ್ಲಿ ಮಗ್ನನಾದ.

ಆದರೆ ಬಂದ ಕೆಲಸವನ್ನು ಮಾಡಿಸಿಕೊಂಡು ಹೋಗದೆ ಆದೀತೆ? ಆದರೆ ಮಸಾಜ್ ಮಾಡಲು ಬೇಕಾದ ಶಕ್ತಿಯಾಗಲಿ, ಗೆಲುವಾಗಲಿ ಒಂದಿನಿತೂ ಆತನಲ್ಲಿ ಇದ್ದಂತೆ ಕಾಣಲಿಲ್ಲ. ಆದರೆ ಪುಸಲಾಯಿಸಿಯಾದರೂ ಸರಿಯೇ ತಿಂಗಳು ಬಿಟ್ಟು ಬಂದವನಿಗೆ ಒಂದೆರೆಡು ಗುದ್ದನ್ನು ಗುದ್ದಿಸಿಕೊಂಡು ಹೋಗದಿರಲಾಗುತ್ತದೆಯೇ? ನಾನೇ ಮೊದಲು ಮಾಡಿ 'ಕಿದರ್ ಸೆ ಹೊ' ಎನ್ನುತ ಮಾತು ಶುರುಮಾಡಿದೆ.

ಕೆಲ ಕ್ಷಣ ಸುಮ್ಮನಿದ್ದು 'ಪಾಕಿಸ್ತಾನ್…' ಎಂದ ಆತನ ಧ್ವನಿಯಲ್ಲಿ ಮೂಡಿದ ಏಕರೂಪೇನ ದ್ವಂದ್ವವು ನನ್ನ ಮುಖದ ಮೇಲೆಯೂ ಮೂಡಿತು. ನಂತರ ಕತ್ತರಿಯ ಚಟ್ ಪಟ್ ಸದ್ದು ತಲೆಯ ಹಿಂಭಾಗದಿಂದ ಮುಂಬದಿಗೆ ಬಂದಿತ್ತು.

'ಆಪ್ ಕಿದರ್ ಸೆ ಹೊ ' ಎಂದ ಆತನ ಪ್ರೆಶ್ನೆಗೆ ಅಳುಕುತ್ತಲೇ ನಾನು 'ಇಂಡಿಯಾ' ಎಂದೆ.

ಪುನ್ಹ ಒಂತಿಷ್ಟು ಮೌನ. ತದನಂತರ ಆತ ನಾನೇನು ಮಾಡುತ್ತಿರುವೆನೆಂದು ಕೇಳಿ ತಿಳಿದು, ಇದ್ದಕ್ಕಿದಂತೆ ತನಗೂ ನಾನಿರುವ ಕಡೆ ಯಾವುದಾದರೊಂದು ಕೆಲಸವನ್ನು ಹುಡುಕಿ ಕೊಡುವಂತೆ ಕೇಳಿಕೊಂಡ!

'ಅರ್ರೆ, ತನ್ನ ಕಾಯಕವೇ ಬಂಡವಾಳವಾಗಿರುವ, ತುಸುಮಟ್ಟಿಗೆ ಹಾಯಾದ ಕೆಲಸವೆನ್ನಬಹುದಾದ ಕೆಲಸವನ್ನು ಬಿಟ್ಟು ಈತ ಮಾಡುವುದಾದರೂ ಏನುಂಟು?!' ಎಂಬ ಪ್ರೆಶ್ನೆಯೊಂದು ಮನದೊಳಗೆ ಮೂಡಿತು.

ಕೂತೂಹಲದಿಂದ ಏಕೆ, ಏನೆಂದು ವಿಚಾರಿಸಿದೆ.

ಮೌನದ ಕಟ್ಟೆಯೊಡೆದಂತೆ ಒಂದೇ ಉಸಿರಿನಲ್ಲಿ ಆತ ತನ್ನ ಬವಣೆಯನ್ನೆಲ್ಲವನ್ನು ಹೊರಹಾಕತೊಡಗಿದ. ಪಾಕಿಸ್ತಾನದ ಇಸ್ಲಾಮಾಬಾದ್ ನಿಂದ ಬಂದು ಇಂದಿಗೆ ಸುಮಾರು ಆರು ತಿಂಗಳಾಯಿತಂತೆ. ಊರಿನಲ್ಲೊಂದು ತನ್ನದೇ ಆದ ಪುಟ್ಟ ಸೆಲೂನ್ ಶಾಪನ್ನು ನೆಡೆಸುತ್ತಿದ್ದ ಈತ ತಾನೊಬ್ಬ ಸುಖೀಜೀವಿಯಾಗಿದ್ದೆ ಎಂಬುದನ್ನು ಇಲ್ಲಿಗೆ ಬಂದಮೇಲೆಯೇ ಮನಗಂಡನಂತೆ! ಮಳಿಗೆಯ ಖರ್ಚುವೆಚ್ಚಗಳೆಲ್ಲವನ್ನು ಕಳೆದು ಕಮ್ಮಿ ಎಂದರೂ ದಿನಕ್ಕೆ ಐನೂರರಿಂದ ಸಾವಿರ ರೂಪಾಯಿಗಳನ್ನು ಉಳಿಸುತ್ತಿದ್ದ ಈತನಿಗೆ ತನ್ನ ಗಳಿಕೆ ಬಹಳ ಕಡಿಮೆಯಾಯಿತೆಂದೋ ಅಥವ ಹೊರದೇಶಕ್ಕೆ ಹೋದರೆ ನಿಮಿಷ ಮಾತ್ರದಲ್ಲಿ ಕುಭೇರನಾಗಬಹುದೆಂಬ ಕನಸನ್ನು ಕಂಡೊ ಏನೋ, ಹೊರದೇಶದಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪರಿಚಯ ಮಾಡಿಕೊಂಡು ಕೆಲಸವನ್ನು ಹೊಂದಿಸುವಂತೆ ಕೇಳಿಕೊಳ್ಳುತ್ತಾನೆ. ಆತನೋ ಹೀಗೆ ರಾಶಿ ರಾಶಿ ಅಮಾಯಕರನ್ನು ತುಂಬಿ ತಂದು ಇಲ್ಲಿಗೆ ಸುರಿಯುವವ. ಶಿಕಾರಿ ತಾನಾಗಿಯೇ ಬಲೆಗೆ ಬೀಳಲು ಬಂದರೆ ಬಿಟ್ಟನೇ. ವೀಸಾ, ಪಾಸ್ಪೋರ್ಟ್, ಟಿಕೆಟ್ಟು, ಕಮಿಷನ್ ಮಣ್ಣು ಮಸಿ ಎನುತ್ತಾ ಸಾವಿರಾರು ರೂಪಾಯಿಗಳನ್ನು ಆತನಿಂದ ಕಸಿದುಕೊಂಡು ನಂತರದ ಕೆಲವೇ ದಿನಗಳಲ್ಲಿ ಮರಳುಗಾಡಿನ ಕಾನನದೊಳಗೆ ಆತನನ್ನು ತಂದು ಬಿಡುತ್ತಾನೆ. ಎಲ್ಲೆಡೆ ವಿಚಾರಿಸಿ ಕೊನೆಗೆ ಕೆಲಸ ಸಿಗದಿರುವಾಗ ಆತನನ್ನು ದೇಶಾಂತರ ಹೊತ್ತು ತಂದ ವ್ಯಕ್ತಿಯೇ ಇಲ್ಲಿಯ ಸೆಲೂನ್ ಶಾಪಿನಲ್ಲಿ ಕೆಲಸವನ್ನು ಹುಡುಕಿ ಕಳುಹಿಸುತ್ತಾನೆ. ಆದರೆ ಪ್ರತಿ ತಿಂಗಳ ಆತನ ಸಂಬಳದಲ್ಲಿ ಕನಿಷ್ಠವೆಂದರೂ 10 ಪ್ರಸೆಂಟ್ ನಷ್ಟು ಹಣ ಆ ದಳ್ಳಾಳಿಯ ಜೇಬನು ಸೇರಬೇಕೆಂಬ ಕಾರಾರಿನೊಂದಿಗೆ! ಇರಲು ಮೂರಡಿಯ ಒಂದಿಷ್ಟು ಜಾಗ ಹಾಗು ದಿನಕ್ಕೆ ಮೂರು ಬಾರಿ ರೋಟಿ ಹಾಗು ಇಂತಿಷ್ಟು ಬಾಜಿಯನ್ನು ಬಿಟ್ಟರೆ ಈತನಿಗೆ ಬರುತ್ತಿದ್ದ ಸಂಬಳ ತಾನು ಊರಿನಲ್ಲಿ ಗಳಿಸುತ್ತಿದ್ದ ಅರ್ಧದಷ್ಟೂ ಸಮನಿರಲಿಲ್ಲ. ಬೆಳಗ್ಗಿನಿಂದ ದುಃಖ, ಕೋಪ, ಹಸಿವನ್ನು ತಡೆದುಕೊಂಡು, ಬಂದುಹೋಗುವ ಗ್ರಾಹಕರ ಇಚ್ಛೆಗನುಗುಣವಾಗಿ ಅವರ ಕೇಶರಾಶಿಯನ್ನು ವಿನ್ಯಾಸಗೊಳಿಸಿ, ತಲೆಯನ್ನು ತೀಡಿ ತಿವಿದು ಅವರ ಚಿಂತೆಯನ್ನು ದೂರಾಗಿಸುವ ಈತ ಹಲವು ಬಾರಿ ತನ್ನ ತಾಯ್ನಾಡಿಗೆ ಹಿಂದಿರುಗಲು ಆವಣಿಸಿದರೂ ತಾನು ಕೆಲಸ ಮಾಡುತಿದ್ದ ಮಾಲೀಕನೊಟ್ಟಿಗೆ ಎರಡು ವರ್ಷದ ಕರಾರಿದ್ದ ಕಾರಣ ಅದು ಸಾಧ್ಯವಾಗದೆ ಸುಮ್ಮನಾಗಿದ್ದಾನೆ.

ಕೆಲಕಾಲ ಸುಮ್ಮನಾಗಿ ಪುನ್ಹ ಮಾತು ಶುರುವಿಟ್ಟಾಗ ಆತನ ಧ್ವನಿ ಏಕೋ ಗದ್ಗದಿಸತೊಡಗಿತ್ತು. ಹೀಗೆ ಕೆಲದಿನಗಳ ಹಿಂದೆ ತನ್ನ ತಾಯಿ ತೀರಿಕೊಂಡಳೆಂಬ ವಿಷಯ ತಿಳಿದು ಕೂಡಲೇ ಹೋಗಬೇಕೆಂದಾಗ ಮಾಲೀಕ ಹಣವಿಲ್ಲವೆಂದು ನಿರಾಕರಿಸಿದನೆಂದು ಹೇಳುತ್ತಾನೆ. ಪಾಸ್ಪೋರ್ಟ್ ಹಾಗು ಒಂತಿಷ್ಟು ಹಣ ನನ್ನ ಕೈಲಿದ್ದರೆ ನಾನೇ ಹೇಗಾದರೂ ಮಾಡಿ ಹೋಗಿಬಿಡುತ್ತಿದ್ದೆ ಸಾಬ್ ಎಂದನಾತ. ಈಗ ತಾನು ಏನೇ ಮಾತಾಡಿದರೂ ಆತ ಅತ್ತುಬಿಡುವುದಂತು ಗ್ಯಾರೆಂಟಿ. ಆತನ ಬಿಳಿಯ ಮುಖವೆಲ್ಲ ಕೆಂಪಾಗಿ ಹೊಳೆಯತೊಡಗಿತ್ತು. ಸಿಟ್ಟು, ಕೋಪ, ಹತಾಶೆ ಎಲ್ಲವೂ ಒಮ್ಮೆಲೇ ಹೊರಬರಲು ಹವಣಿಸುತ್ತಿವೆಯೇನೋ ಎಂಬಂತೆ ಭಾಸವಾಗತೊಡಗಿತು. ಕೊನೆಯ ಭಾರಿಗೆ ತನ್ನ ತಾಯಿಯ ಮುಖವನ್ನೂ ನೋಡಲಾಗದ ಆತ ತನ್ನನ್ನು ತಾನೇ ಶಪಿಸಿಕೊಳ್ಳುತ್ತಿರವಂತೆ ಅನಿಸಿತು. ಆತನ ಮುಖಚಹರೆ ಮಾತಾಡತೊಡಗಿತು. ನಾವೋಬ್ಬ ಮುಖ ಪ್ರೇಕ್ಷಕನಾಗಿ ಕನ್ನಡಿಯ ಪ್ರತಿಬಿಂಬದಲ್ಲಿ ಆತನನ್ನು ಆಲಿಸತೊಡಗಿದ್ದೆ.

'ಏನಾದರು ಸರಿಯೇ, ಸಣ್ಣದೊಂದು ಕೆಲಸ ಕೊಡಿಸಿ ಬಾಯ್. ಇಲ್ಲಂತೂ ನಾನಿರಲಾರೆ' ಎನ್ನತೊಡಗಿದ. ತನಗಿಷ್ಟವಿಲ್ಲದ ಬೋರ್ಡಿಂಗ್ ಸ್ಕೂಲಿಗೆ ಹಾಕದಂತೆ ಮಕ್ಕಳು ಪೋಷಕರನ್ನು ಕಾಡುವಂತೆ. ಏನೋ ಒಂದು ಬಗೆಯ ಆತ್ಮಿಯತೆಯೊಂದು ಆತನಿಗೆ ಆತನನ್ನು ಕೇಳುವವರಲ್ಲಿ ಮೂಡುತ್ತಿತ್ತೇನೋ. ಆ ಸಾಲಿಗೆ ನಾನೇ ಮೊದಲಿಗನಿರಬೇಕು. ಏಕೋ ಪೇಚಿಗೆ ಸಿಕ್ಕ ಅನುಭವವಾಗತೊಡಗಿತು. ಕತ್ತಿನ ಸುತ್ತ ನನ್ನ ಪ್ರೀತಿಪಾತ್ರವಾದ ಕೂದಲುಗಳು ರಣರಂಗದಲ್ಲಿ ಹೋರಾಡಿ ಅಸುನೀಗಿದಂತೆ ಹಿಡಿಹಿಡಿಯಾಗಿ ಬಿದ್ದಿದ್ದವು. ಮತ್ತೆಂದೂ ಆ ಸ್ವಸ್ಥಾನಕ್ಕೆ ಹಿಂದಿರುಗದ ಅವುಗಳ ರೋಧನೆಯೂ ಅವುಗಳಲ್ಲಿ ಕಾಣಬಹುದಾಗಿದ್ದಿತು. ತಾನು ಸಹ ಅವುಗಳಂತೆಯೇ ಏನೋ ಎಂಬಂತೆ ಆ ರಾಶಿಯನ್ನೆಲ್ಲ ಹೆಕ್ಕಿ ಮೂಲೆಯಲ್ಲಿ ಒಂದೆಡೆ ಸುರಿದ ಆತ. ಒಂತಿಷ್ಟು ಹಣವನ್ನು ಗಳಿಸುವ ಆಸೆಯಲ್ಲಿ ದೇಶಾಂತರ ಬರುವ ಇಂತವರು ಕೊರಗಿ ದಣಿದು ಸಾಕು ಸಾಕಾಗಿ ಪುನ್ಹ ತಮ್ಮ ಸ್ವಸ್ಥಾನವನ್ನು ಸೇರುವಾಗ ಬದುಕಿನ ಬಾಗಿಲೇ ಮುಚ್ಚತೊಡಗಿರುತ್ತದೆ. ಅಂತಹ ಲಕ್ಷಾಂತರ ಬಡಪಾಯಿಗಳು ಇಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹುಡುಕಿದರೂ ಸಿಗುವರು! ಹುಟ್ಟೂರಿನ ಗಂಜಿ ಅನ್ನವೂ ಅಮೃತಕ್ಕೆ ಸಮವೆಂಬುದ ವಿಪರ್ಯಾಸವೆಂಬಂತೆ ಪರದೇಶಗಳಿಗೆ ಬಂದೇ ಕಲಿಯುವವರು. ಆದರೆ ಈ ಮಾತು ಎಲ್ಲರಿಗೂ ಅನ್ವಯವಾಗಬಲ್ಲದೇ? ಕೊಂಚ ದೂರದಲ್ಲಿದ್ದ ಬಂಗಾಳಿಯೂ ಹೀಗೆ ಹಲವು ವರ್ಷಗಳಿಂದೆ ಇಲ್ಲಿಗೆ ಬಂದು ಇದೆ ನೋವು ಹತಾಷೆಗಳನು ಅದೆಷ್ಟು ಅನುಭವಿಸಿರಬಹುದು? ಅದೆಂಥಹ ಹಸಿವುಗಳನ್ನು ನೀಗಿಕೊಂಡಿರಬಹುದು? ಅವುಗಳೆಲ್ಲದರ ಪರಿಣಾಮವಾಗಿಯೇ ಏನೋ ಇಂದು ಆತ ತನ್ನ ಸ್ವಂತ ಕಾಲಮೇಲೆ ನಿಂತಿದ್ದಾನೆ. ಸುಖೀಯಾಗಿದ್ದಾನೆ. ಕಷ್ಟಗಳು ಬರುವುದೇ ಮನಸ್ಸನ್ನು ಕಲ್ಲಾಗಿಸಲು. ಒಂತಿಷ್ಟು ಪೆಟ್ಟನ್ನು ತಿಂದು ನೆಮ್ಮದಿಯ ಜೀವನವನ್ನು ಕಾಣಲು.

ಮುಂದಿನ ಕೆಲಸನಿಮಿಷಗಳಲ್ಲಿ ಭಾಗಶಃ ಕೇಶರಾಶಿಯ ಹತ್ಯಾಕಾಂಡವೇನೋ ಮುಗಿಯಿತು. ಬಹುದಿನಗಳಿಂದಲೇನೋ ಎಂಬಂತೆ ಆತನ ದುಃಖವೂ ಕರಗಿ ನಿರಾಳತೆಯ ಭಾವವೊಂದು ಆತನಲ್ಲಿ ಮೂಡಿದಂತಿತ್ತು. ಈಗ ನನ್ನ ಮುಂದಿದ್ದ ಪ್ರೆಶ್ನೆಗಳು ಎರಡೇ. ಕೆಲಸವೊಂದರ ದೃಡೀಕರಣವನ್ನು ಆತನಿಗೆ ನೀಡುವುದು. ಎರಡು, ಒಂತಿಷ್ಟು ಪೆಟ್ಟನ್ನು ತಲೆಗೂ ಬೆನ್ನಿಗೂ ತಿಂದು ಹಿತಭಾವವನ್ನು ಅನುಭವಿಸುವುದು! ಆದರೆ ಅದ್ಯಾವ ಬಾಯಿ ಬಿಟ್ಟು ಆತನಲ್ಲಿ ಮಸಾಜ್ ಮಾಡಯ್ಯ ಎಂದು ಕೇಳಲಿ? ದುಃಖದಿಂದ ಬಾತಿದ್ದ ಆತನ ಮುಖವನ್ನು ನೋಡಿದರೆ ಇನ್ನೇನೂ ಹೆಚ್ಚನ್ನು ಹೇಳುವ ಅಥವ ಕೇಳುವ ಹಾಗಿರಲಿಲ್ಲ. ಮೇಲಾಗಿ ಆತ ಉಪವಾಸನಿರತ. ಬೇಕೋ ಬೇಡವೋ ಎನ್ನುತ್ತಲೇ ಮೇಲೇಳತೊಡಗಿದೆ. ಕೂಡಲೇ ನನ್ನ ಬುಜದಮೇಲೆ ಬಿದ್ದ ಆತನ ಎರಡು ಕೈಗಳು 'ಏಕ್ ಮಿನಿಟ್ ಸಾಬ್, ಮಸ್ಸಾಜ್ ಕರ್ತ ಹೂ' ಎನ್ನುತ್ತಾ ಏಳುತ್ತಿದ್ದವನನ್ನು ಪುನ್ಹ ಕುರ್ಚಿಯ ಮೇಲೆ ಕೂರಿಸಿದವು. ಬಾಯಿಬಿಟ್ಟು ಕೇಳದಿದ್ದರೂ ನನ್ನ ಮುಖಭಾವದಿಂದಲೇ ಏನೋ ನನ್ನನು ಆತ ಅರಿತಿದ್ದ! ನಂತರ ಗೋಡೆಗೆ ನೇತಾಕಿದ್ದ ದಪ್ಪದಾದೊಂದು ಟವೆಲ್ ಅನ್ನು ಬೆನ್ನ ಸುತ್ತಲೂ ಹೊದಿಸಿ, ಒಂತಿಷ್ಟು ನೀರನ್ನು ತಲೆಕೂದಲಿಗೆ ಚಿಮುಕಿಸಿ ತಲೆಯ ಸುತ್ತ ಹಾವುಗಳು ಹೊರಳಾಡಿಸಿದಂತೆ ಕೈಬೆರಳುಗಳನ್ನು ಆಡಿಸತೊಡಗಿದ. ಕಣ್ಣನ್ನು ಮುಚ್ಚಿ ನನ್ನ ಇಡೀ ತಲೆಯ ಅಧಿಕಾರವನ್ನು ಆತನಿಗೆ ಒಪ್ಪಿಸಿದೆ. ಅದು ಆಟಿಕೆಯ ಗೊಂಬೆಯಂತೆ ಆತ ಆಡಿಸಿದಂತೆ ಅಷ್ಟ ದಿಕ್ಕುಗಳಿಗೂ ತಿರುಗತೊಡಗಿತು. ಹೆಚ್ಚು ಕಡಿಮೆ ಆತನಷ್ಟೇ ಅಥವಾ ಕೊಂಚ ಹೆಚ್ಚೆಂದೇ ಹೇಳಬಹುದಾದ ಜಂಜಾಟಗಳನ್ನು ಹೊತ್ತಿದ ಹೊರೆಯನ್ನು ಕಳೆದುಕೊಳ್ಳತೊಡಗಿತು. ಆಗೊಂದು ಹೀಗೊಂದು ಬೆನ್ನಿಗೆ ಬೀಳುತಿದ್ದ ಗುದ್ದುಗಳು ಜಡಗಟ್ಟಿದ ಹುರುಪನ್ನು ಪುನಃ ಜಾಗೃತ ಗೊಳಿಸಿದವು. ಬದ್ದ ವೈರಿದೇಶದ ಪ್ರಜೆಯೊಬ್ಬ ಹೀಗೆ ಮತ್ತೊಬ್ಬನ ನೋವು ಹತಾಶೆಗಳ ಹೊರೆಯನ್ನು ತನ್ನ ಶಕ್ತಿಹೀನ ಸ್ಥಿತಿಯಲ್ಲೂ ಕಡಿಮೆಗೊಳಿಸತೊಡಗಿದ. ಎಲ್ಲಿಯ ದೇಶ ಅದೆಲ್ಲಿಯ ದ್ವೇಷ? ಕಷ್ಟ ಸುಖಗಳಿಗೆ ಸ್ಪಂದಿಸಬಲ್ಲ ಆತ್ಮಗಳೇ ಇಲ್ಲದ ಮೇಲೆ ದೇಶಕ್ಕೊಂದು ಬೇಲಿಯನ್ನು ಹಾಕಿ ಏನು ಪ್ರಯೋಜನ?

ತಿಳಿದ ಮಟ್ಟಿಗೆ ಯಾವೊಂದು ಕೆಲಸವೂ ನನ್ನ ತಲೆಗೆ ತಕ್ಷಣ ಹೊಳೆಯಲೇ ಇಲ್ಲ. ಮೇಲಾಗಿ ಆತನಿಗೆ ಗೊತ್ತಿರುವುದು ಈ ಒಂದೇ ಕೆಲಸವಾಗಿರುವುದರಿಂದ ಬೇರ್ಯಾವ ಕೆಲಸವನ್ನು ಹುಡುಕಿಕೊಟ್ಟರೂ ಆತ ಅದನ್ನು ಮೊದಲಿನಿಂದ ಕಲಿಯಬೇಕು. ಕೇವಲ ಹೊಟ್ಟೆಪಾಡಿಗಾಗಿ ತನ್ನ ಕೆಲಸದ ಹಿರಿತನದ ಅನುಭವವನ್ನು ಬದಿಗಿಡಬೇಕು. ಹುಡುಕಿಕೊಟ್ಟರೂ ಅದು ಇದೇ ವಲಯದ ಬೇರೊಂದು ಕೆಲಸವಾಗಬೇಕು ಅಂದುಕೊಂಡೆ. ಗಜಕಾಯದ ಬಂಗಾಳಿ ತನ್ನೂರಿನಿಂದ ಬಂದಾಗ ಭಾರತೀಯನಾಗಿ ನಾನು ಈ ಕುಡಿಮೀಸೆಯ ಪಾಕಿಸ್ತಾನಿಗೆ ಒಂದು ಕೆಲಸವನ್ನು ಹೊಂದಿಸಬೇಕು. ಸಾಧ್ಯವಾದಷ್ಟು ಸಹಾಯವನ್ನು ಮಾಡಬೇಕೆಂದು ಯೋಚಿಸತೊಡಗಿದೆ. 'ಸಾಬ್ ಚಿಂತಾ ಮತ್ ಕರೋ, ಕಾಮ್ ನಹಿ ಮಿಲೇಗ ತೊ ಬಿ ಟೀಕ್ ಹೈ' ಎನ್ನುತ ಆತ ಮುಗುಳ್ನಗೆಯೊಂದು ಬೀರಿದಾಗ ಏಕೋ ಮನದಲ್ಲಿ ತುಂಬಾನೆ ಕಸಿವಿಸಿಯಾಯಿತು. ಜೇಬಿನಲ್ಲಿದ್ದ ಎಲ್ಲವನ್ನು ಕಳೆದುಕೊಂಡು, ಹುಟ್ಟಿಬೆಳೆದ ತನ್ನೂರನ್ನು ಬಿಟ್ಟು, ಅರೆಹೊಟ್ಟೆಯಲ್ಲಿ ಬದುಕುತ್ತಿದ್ದ ವ್ಯಕ್ತಿಯೊಬ್ಬ ನಕ್ಕರೆ ಅದು ಹತಾಶೆಯ ನಗೆಯಲ್ಲದೆ ಮತ್ತೇನು? ಏನು ಹೇಳಬೇಕೆಂದು ತಿಳಿಯದೆ ಕೊಡಬೇಕಾಗಿದ್ದ ಹಣಕ್ಕಿಂತ ಎರಡರಷ್ಟನ್ನು ಕೊಟ್ಟು, ಆತನ ಕೆಲಸಕ್ಕಾಗಿ ಪ್ರಯತ್ನಿಸುವೆ ಎಂದು ಹೇಳಿ ಹೊರಬಂದರೂ ಆತನ ಆ ಅಮಾಯಕ ನಗುವಿನ ದೃಶ್ಯ ಮಾತ್ರ ನನ್ನನ್ನು ಬಹುದಿನಗಳವರೆಗೂ ಕೊರೆಯುತ್ತಲೇ ಇದ್ದಿತು.

No comments:

Post a Comment