Saturday, April 28, 2018

ಗ್ರೇಟ್ ವಾರ್ : ಏಕಮಾತ್ರ ಗುಂಡಿನಿಂದ ನೆಡೆದ ಕೋಟಿ ಜನರ ಹರಣ.

ಜುಲೈ 28, 1914. ನೋಡನೋಡುತ್ತಲೇ ಲಾಂಗ್ ರೇಂಜ್ ಯುದ್ಧ ಟ್ಯಾಂಕರ್ ನಿಂದ ಪುಟಿದೆದ್ದ ಸಿಡಿಮದ್ದೊಂದು ಸೆರ್ಬಿಯಾ ದೇಶದೆಡೆ ಶರವೇಗದಲ್ಲಿ ಚಿಮ್ಮಿತು. ನಂತರದ ಕೆಲವೇ ಕೆಲವು ದಿನಗಳಲ್ಲಿ 28 ದೇಶಗಳ ಸುಮಾರು ಎರಡು ಕೋಟಿ ಜನರ ಜೀವವನ್ನು ಭಸ್ಮಿಸಿ ಇಡೀ ಭೂಖಂಡವನ್ನೇ ತಾನು ಅಲ್ಲೊಲ್ಲ ಕಲ್ಲೊಲ್ಲ ಮಾಡಬಲ್ಲನೆಂಬ ಒಂದಿನಿತು ಸುಳಿವು ಆ ಸಿಡಿಮದ್ದಿಗೆ ಇದ್ದಿರಲಾರದು! ಕರ್ತವ್ಯ ನಿರತ ಸೈನಿಕನಂತೆ ದೇಶಗಳೆರಡರ ಗಡಿರೇಖೆಯನ್ನು ತನ್ನ ಪಾಡಿಗೆ ತಾನು ದಾಟಿ ಹಾರಿಹೋಯಿತು. ಅದು ಹಾರಿದ್ದು ಅಂದಿನ ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯದ ನೆಲದಿಂದ. ಅಶಾಂತಿಯ ಬೆಂಕಿಯನ್ನು ವಿಶ್ವದೆಲ್ಲೆಡೆದೆ ಪಸರಿಸಿದ ಶಾಂತ ಭೂಮಿಯಿಂದ.

ಜುಲೈ 23, 1914. ಹೆಚ್ಚು ಕಡಿಮೆ ಗುಲಾಮಗಿರಿಯ ಘೋಷಣೆಗಳೇನೋ ಎಂಬಂತಿದ್ದ ಒಟ್ಟು 10 ಬೇಡಿಕೆಗಳನೊತ್ತ ಪ್ರತಿಯೊಂದು ಸೆರ್ಬಿಯಾ ದೇಶದ ರಾಜ ಪೀಟರ್ನ ಕೈ ಸೇರಿತು. ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯದ ಚಕ್ರವರ್ತಿ ಫ್ರಾನ್ಸ್ ಜೋಸೆಫ್ ಕಳುಹಿಸಿದ ಈ ಬೇಡಿಕೆಗಳು ಬೇಡಿಕೆಗಳೆನ್ನುವುದಕ್ಕಿಂತ ಹೆಚ್ಚಾಗಿ ಯುದ್ಧಕ್ಕೆ ಪ್ರೇರೇಪಿಸುವ ಚುಚ್ಚುಮದ್ದುಗಳೇನೋ ಎಂಬಂತ್ತಿದ್ದವು! ಆದರೂ ಸೆರ್ಬಿಯಾ ಆ ಒಟ್ಟು ಹತ್ತು ಅಂಶಗಳಲ್ಲಿ ಎಂಟಕ್ಕೆ ಅಸ್ತು ಎಂದಿತು. ಎಷ್ಟಾದರೂ ಆ ದೇಶದ ರಾಜಕುಮಾರನೊಬ್ಬನನ್ನು ತನ್ನ ದೇಶದ ಜನರಿಂದ ಸಾಯಿಸಲ್ಪಟ್ಟ ಅಪವಾದವನ್ನು ಹಣೆಯಮೇಲೆ ಕಟ್ಟಿಕೊಂಡಿರುವಾಗ ಇಲ್ಲ ಎನ್ನಲು ಸಾಧ್ಯವುಂಟೆ!? ಆ ಎಂಟು ಅಂಶಗಳನ್ನು ಒಪ್ಪಿಕೊಂಡಿದ್ದರ ಪರಿಣಾಮ ಹೆಚ್ಚು ಕಡಿಮೆ ತನ್ನ ಜುಟ್ಟನೆಲ್ಲ ಆಸ್ಟ್ರಿಯಾ-ಹಂಗೇರಿಯ ಕೈಗೆ ಕೊಟ್ಟಂತೆಯೇ ಇದ್ದಿತು. ಆದರೆ ಯುದ್ದಮಾಡಲೇ ಕಾಲುಕೆರೆದುಕೊಂಡು ಕೂತಂತಿದ್ದ ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯ ಮಾತ್ರ ಆ ಎರಡು ಬೇಡಿಕೆಗಳ ನಕಾರಣೆಗೋಸ್ಕರ ಕೂಡಲೇ ಸೆರ್ಬಿಯಾದ ವಿರುದ್ಧ ಯುದ್ಧ ಸಾರಿತು! ಅಲ್ಲಿಗೆ ಆಗಿನ ಕಾಲಕ್ಕೆ ದಿ ಗ್ರೇಟ್ ವಾರ್ ಎಂದು ಕರೆಸಿಕೊಂಡ ಯುದ್ಧವೊಂದು ಅಧಿಕೃತವಾಗಿ ಘೋಷಣೆಯಾಯಿತು. ಸುಖಾಸುಮ್ಮನೆ ರಷ್ಯಾ, ಜರ್ಮನಿ, ಫ್ರಾನ್ಸ್ ಹಾಗು ಬ್ರಿಟನ್ ದೇಶಗಳನ್ನು ಯುದ್ಧಕ್ಕೆ ಎಳೆತರಲಾಯಿತು.

ಜೂನ್ 18, 1914. ಆಸ್ಟ್ರಿಯಾ-ಹಂಗೇರಿಯ ಉತ್ತರಾಧಿಕಾರಿ ಆರ್ಚ್ ಡ್ಯೂಕ್ ಆತನ ಪತ್ನಿ ಸಮೇತವಾಗಿ ಸೇನಾವೀಕ್ಷಣೆಗೆಂದು ದೇಶದ ಸರಾಜೇವೊ ನಗರಕ್ಕೆ ಪ್ರವಾಸವನ್ನು ಕೈಗೊಳ್ಳುತ್ತಾನೆ. ಅದು ಮಳೆಗಾಲದ ಹಣಬೆಗಳಂತೆ ದೇಶಗಳು ಉಗಮಗೊಳ್ಳುತ್ತಿದ್ದ ಪರ್ವಕಾಲ. ಧರ್ಮ, ರೀತಿ, ಆಚರಣೆಯ ಮೇರೆಗೆ ಪ್ರತಿಯೊಂದು ಗುಂಪುಗಳೂ ತನಗೊಂದಿರಲಿ ಎಂದು ದೇಶಗಳನ್ನು ಕಟ್ಟಲು ಹೊರಟ್ಟಿದ್ದ ಸಮಯ. ಸಣ್ಣಪುಟ್ಟ ದೇಶಗಳಾದರೆ ಒಡೆದಾಡಿ ಬಡಿದಾಡಿ ತಮಗೆ ಬೇಕಾದ ನೆಲವನ್ನು ತಮ್ಮದಾಗಿಸಿಕೊಳ್ಳಬಹುದಾಗಿತ್ತು ಆದರೆ ಅದೇ ಬೇಡಿಕೆ ಘಟಾನುಘಟಿ ಸಾಮ್ರಾಜ್ಯಗಳೊಟ್ಟಿಗಾದರೆ ದಶಕಗಳ ಕಾಲ ಸೇಡಿನ ಕಿಡಿಯನ್ನು ಬಚ್ಚಿಟ್ಟುಕೊಂಡೇ ಬದುಕಬೇಕಿದ್ದಿತ್ತು. ಅದೇ ಬಗೆಯ ಸೇಡಿನ, ರೋಷದ ಕಿಡಿಯೊಂದು ಅಂದು ಸ್ಲಾವಿಕ್ ಜನಗಳೆಂದು ಕರೆಯಲ್ಪಡುತ್ತಿದ್ದ ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯದ ಗುಂಪೊಂದರಲ್ಲಿ ಅಡಗಿತ್ತು. ಆ ಗುಂಪು ತಮಗೊಂದು ತುಂಡು ಜಾಗವನ್ನು ಬಿಟ್ಟುಕೊಟ್ಟರೆ ತಾವೊ ಒಂದು ದೇಶವನ್ನು ಕಟ್ಟಿ ಮೆರೆಯಬಹುದೆಂಬ ಕನಸ್ಸನ್ನು ಕಟ್ಟಿತ್ತು. ಆದರೆ ಸ್ಲಾವಿಕ್ ಜನರ ಈ ಬೇಡಿಕೆಗಳಿಗೆ ಕ್ಯಾರೇ ಎನ್ನದ ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯ ಅವರನ್ನು ಆಟಕುಂಟು ಲೆಕ್ಕಕ್ಕಿಲ್ಲದವರಂತೆ ಮಾಡಿಬಿಟ್ಟಿತ್ತು. ಅಲ್ಲದೆ ನೆರೆಯ ಸೆರ್ಬಿಯ ದೇಶವೇ ಇವರಿಗೆಲ್ಲ ಕುಮಕ್ಕು ನೀಡಿ ಕುಣಿಸುತ್ತಿದೆ ಎಂಬುದೂ ತಿಳಿದಿದ್ದಿತು. ಆದ ಕಾರಣ ಸ್ಲಾವಿಕ್ ಜನರ ಗುಂಪಿಗೆ ಅಲ್ಲಿನ ರಾಜಮನೆತನದ ಕುಟುಂಬಗಳ ಮೇಲೆ ಹದ್ದಿನ ಕಣ್ಣೊಂದು ಮೊದಲಿನಿಂದಲೇ ಇದ್ದಿತು. ಅಂದು ಆರ್ಚ್ ಡ್ಯೂಕ್ ಹಾಗು ಆತನ ಪತ್ನಿ ಪ್ರವಾಸವನ್ನು ಕೈಗೊಂಡಾಗ ಆತನ ಗುಪ್ತಚರ ಇಲಾಖೆ ಅಲ್ಲಿ ಅವರಿಗೆ ಬಂದೆರಗುವ ಅಪಾಯದ ಬಗ್ಗೆ ಸುಳಿವನ್ನು ನೀಡಿತ್ತಾದರೂ ಆತ ಅಷ್ಟೇನೂ ತಲೆಕೆಡಿಸಿಕೊಳ್ಳದೆ ಗ್ರಾಫ್ಟ್ & ಸ್ಟಿಫ್ ಕಂಪನಿಯ ತನ್ನ ಐಷಾರಾಮಿ ಕಾರನ್ನು ಏರುತ್ತಾನೆ. ಶಾಂತ ಸಂಡೇಯ ಹಗಲನ್ನು ಸವಿಯುತ್ತಾ ಸರಾಜೇವೊ ನಗರದ ಗಡಿಯನ್ನು ಪ್ರವೇಶಿಸುತ್ತಾನೆ. ಅಂದೇನಾದರೂ ರಾಜಕುಮಾರ ತನ್ನ ಗುಪ್ತಚರ ಇಲಾಖೆಯ ಮಾತನ್ನು ನಂಬಿದ್ದರೆ, ಸರಜೇವೊ ನಗರದ ಪ್ರವಾಸವನ್ನೇದರೂ ಮೊಟಕುಗೊಳಿಸಿದ್ದರೆ ಇಂದು ವಿಶ್ವದ ಪ್ರಸ್ತುತ ಚಿತ್ರಣವೇ ಬದಲಾಗಿರುತ್ತಿತ್ತೇನೋ ಎಂದರೆ ನಾವು ನಂಬಲೇಬೇಕು!!!

ಸರಾಜೇವೊ ನಗರಕ್ಕೆ ರಾಜಕುಮಾರ ಬರುತ್ತಾನೆಂದು ತಿಳಿದಿದ್ದ ಹತ್ಯೆಗಾರರ ಗುಂಪು ಕಳೆದ ಕೆಲದಿನಗಳಿಂದಲೇ ಅಲ್ಲಿ ಭಾರಿ ತಯಾರಿಯನ್ನು ಮಾಡಿರುತ್ತಾರೆ. ಮೇಲಾಗಿ ಈ ಹತ್ಯೆಯ ಮಾಸ್ಟರ್ ಮೈಂಡ್ ಗಳು ಸೆರ್ಬಿಯ ದೇಶದ ಸೈನ್ಯಾಧಿಕಾರಿಗಳೇ ಆಗಿದ್ದರಿಂದ ರಾಜನನ್ನು ಮುಗಿಸಲು ಬೇಕಾಗಿದ್ದ ಬಾಂಬು ಗನ್ನುಗಳ ಕೊರತೆ ಅವುಗಳಿಗೆ ಕಾಣುವುದಿಲ್ಲ. ಬರೋಬ್ಬರಿ ಆರು ಜನರ ಗುಂಪೊಂದನ್ನು ಕಟ್ಟಿ, ಅವಸರವಸರವಾಗಿ ತರಬೇತಿಯನ್ನು ನೀಡಿ, ರಾಜಕುಮಾರ ಆರ್ಚ್ ಡ್ಯೂಕ್ನ ಕಾರು ಅಂದು ಸಾಗುವ ಹಾದಿಯಲ್ಲಿ ದಾರಿಗೊಬೊಬ್ಬರಂತೆ ನಿಲ್ಲಿಸಲಾಯಿತು. ಸಮಯ ಬೆಳಗಿನ ಹತ್ತು ಘಂಟೆ. ಸರಾಜೇವೊ ನಗರದ ರಸ್ತೆಯನ್ನು ಪ್ರವೇಶಿಸಿದ ಕಾರು ಮೊದಲನೇ ಶೂಟರ್ ನನ್ನು ಕೂದಲೆಳೆಯಲ್ಲಿ ಹಾದುಹೋಗುತ್ತದೆ. ಮತ್ತೊಂದು ಗಲ್ಲಿಯಲ್ಲಿದ್ದ ಎರಡನೇ ಶೂಟರ್ ಸಹ ತನ್ನ ಸಣ್ಣಪುಟ್ಟ ಎಡವಟ್ಟುಗಳಿಂದ ಗನ್ನಿನಿಂದ ಗುಂಡನ್ನಾಗಲಿ ಅಥವಾ ಜೇಬಿನಲ್ಲಿದ್ದ ಬಾಂಬನ್ನಗಲಿ ಎಸೆಯಲಾಗಲಿಲ್ಲ. ಆದರೆ ನಗರದ ಮತ್ತೊಂದು ಮೂಲೆಯಲ್ಲಿದ್ದ ಮೂರನೇ ಶೂಟರ್ ಮಾತ್ರ ಸಿಕ್ಕ ಅವಕಾಶವನ್ನು ಕಳೆದುಕೊಳ್ಳಲಿಲ್ಲ. ರಾಜದಂಪತಿಗಳ ಮೇಲೆ ಗುಂಡಿನ ಸುರಿಮಳೆಗೈಯ್ಯದ್ದಿದ್ದರೂ ಕೈಯಲ್ಲಿದ್ದ ಬಾಂಬನ್ನು ಗುರಿಯಿಟ್ಟು ಅವರು ಚಲಿಸುತ್ತಿದ್ದ ಕಾರಿನ ಮೇಲೆ ಎಸೆದ. ಆದರೆ ವಿಧಿಯಾಟ ಬೇರೆಯೇ ಇದ್ದಿತು ನೋಡಿ. ಗಾಳಿಯಲ್ಲಿ ತೇಲಿಬಂದ ಬಾಂಬು ಕಾರಿನ ಹಿಂಬದಿಗೆ ತಗುಲಿ ರಸ್ತೆಯ ಮೇಲೆ ಬಿದ್ದಿತು. ಪರಿಣಾಮ ರಾಜದಂಪತಿಗಳನ್ನು ಹಿಂಬಾಲಿಸುತ್ತಿದ್ದ ಮತ್ತೊಂದು ಕಾರಿನಡಿ ಅದು ಸಿಡಿದು ಹಲವರನ್ನು ಗಾಯಗೊಳಿಸಿತು. ಎಲ್ಲೆಡೆಯೂ ಕೂಗು ಚೀತ್ಕಾರದ ಅಲ್ಲೊಲ್ಲ ಕಲ್ಲೊಲ್ಲವುಂಟಾಯಿತು. ಕೂಡಲೇ ರಾಜನ ಅಂಗರಕ್ಷಕರು ಆತನನ್ನು ಸುತ್ತುವರೆದು ಕಾರನ್ನು ಸುರಕ್ಷಿತವಾಗಿ ಅಲ್ಲಿಂದ ಮುನ್ನೆಡೆಸುತ್ತಾರೆ. ಇತ್ತ ಕಡೆ ತನ್ನ ವ್ಯರ್ಥ ಪ್ರಯತ್ನದಿಂದ ಕಕ್ಕಾಬಿಕ್ಕಿಯಾದ ಶೂಟರ್ ಸಿಟಿಯ ಜನತೆ ತನ್ನನ್ನು ಮುಗಿಸುವ ಮೊದಲೇ ಸೈನೇಡ್ ನ ಗುಳಿಗೆಯೊಂದನ್ನು ನುಂಗಿ ಪಕ್ಕದಲ್ಲಿದ್ದ ನದಿಗೆ ಹಾರುತ್ತಾನೆ. 'ಅಯ್ಯೋ ವಿಧಿಯೇ...!’ ಎಂಬಂತೆ ಪುಣ್ಯಾತ್ಮ ನುಂಗಿದ ವಿಷಗುಳಿಗೆಯೂ ತನ್ನ ಕೆಲಸವನ್ನು ಸರಿಯಾಗಿ ಮಾಡಲಿಲ್ಲ. ಅಲ್ಲದೆ ನದಿಯೂ ಸಹ ಬೇಸಿಗೆಯ ಒಣಬಿಸಿಲಿಗೆ ಮೊಣಕಾಲುದ್ದ ನೀರನ್ನೂ ಉಳಿಸಿಕೊಂಡಿರಲಿಲ್ಲ. ಸುತ್ತಲೂ ರಾಜನನ್ನು ಪ್ರೀತಿಸುವ ಜನರ ಉಗ್ರರೂಪ. ಪಿತೂರಿ ನೆಡೆಸಿದವನಿಗೇ ಪಿತೂರಿ ನೆಡೆಸಿದವೇನೋ ಎಂಬಂತಿದ್ದ ಸೈನೇಡ್ ಹಾಗು ಮೊಣಕಾಲುದ್ದ ನದಿಯ ಹಣೆಬರಹ. ಬೇಕಾದಾಗ ಸಾವು ಕೂಡ ಸಮುದ್ರದ ಮುತ್ತಿನಂತಾಗುವುದು ಎನ್ನುವುದು ಇದಕ್ಕಾಗಿಯೇ.

ಅಲ್ಲಿಂದ ಮುನ್ನೆಡೆದ ರಾಜಕುಮಾರ ಹಾಗು ಆತನ ಪತ್ನಿ ನೇರವಾಗಿ ಸಿಟಿಯ ಟೌನ್ ಹಾಲಿಗೆ ನೆಡೆಯುತ್ತಾರೆ. ಪೂರ್ವಸಿದ್ದತೆಯಂತೆ ಅಲ್ಲಿನ ಅಧಿಕಾರಿಗಳೆಲ್ಲ ರಾಜನ ಆಗಮನದ ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರೂ ದಾರಿಯಲ್ಲಿ ಅವರ ಮೇಲೆ ನೆಡೆದ ಆತ್ಮಹತ್ಯಾ ಧಾಳಿಯ ನಂತರ ಏನುಮಾಡಬೇಕೆಂದು ತಿಳಿಯದೆ ಹೆದರುತ್ತಲೇ ಕಾರ್ಯಕ್ರಮವನ್ನು ನೆಡೆಸುತ್ತಾರೆ. ಆದರೆ ಬಾಂಬಿನ ಸಿಡಿತದಿಂದ ಗಾಯಗೊಂಡ ಜನರ ಆರ್ತನಾದವೇ ರಾಜನನ್ನು ಕಾಡುತ್ತಿದ್ದರಿಂದ ಆತ ಕೂಡಲೇ ಅವರನ್ನು ಸೇರಿಸಿದ ಆಸ್ಪತ್ರೆಗೆ ಹೋಗಲು ಬಯಸುತ್ತಾನೆ. ಕೆಲಸಮಯದ ಮುಂಚಷ್ಟೇ ತಮ್ಮ ಮೇಲೆ ಆತ್ಮಹತ್ಯಾ ಸಂಚು ನೆಡೆದಿದ್ದೂ ಕೂಡಲೇ ಹೊರಬರುವುದು ಸುರಕ್ಷಿತವಲ್ಲ ಎಂದರೂ ಕೇಳದೆ ಪತ್ನಿಸಮೇತವಾಗಿ ಆತ ಕಾರಿನಲ್ಲಿ ಕುಳಿತು ಆಸ್ಪತ್ರೆಯ ಹಾದಿಯನ್ನು ಹಿಡಿಯುತ್ತಾನೆ. ಬಹುಶ ಅದು ತನ್ನ ಅತಿಕೊನೆಯ ಅತಿದೊಡ್ಡ ತಪ್ಪೆಂದು ಆತನಿಗೆ ತಿಳಿಯುವುದಿಲ್ಲ.

ರಾಜಕುಮಾರನನ್ನು ಮುಗಿಸುವ ವ್ಯರ್ಥ ಪ್ರಯತ್ನದಿಂದ ಕಂಗೆಟ್ಟುಹೋಗಿದ್ದ ನಾಲ್ಕನೆಯ ಶೂಟರ್ ಅದೇನೇ ಆಗಲಿ ಈ ಬಾರಿ ಶತಾಯ-ಗತಾಯ ರಾಜಕುಮಾರರನ್ನು ಮುಗಿಸಲೇಬೇಕೆಂಬ ಹೊಂಚುಹಾಕಿರುತ್ತಾನೆ. ಹೆಸರು ಗ್ಯಾವ್ರಿಲೋ ಪ್ರಿನ್ಸಿಪ್. ವಯಸ್ಸು ಕೇವಲ ಹತ್ತೊಂಬತ್ತು ವರ್ಷ. ಕಾರ್ಯಕ್ರಮಗಳೆಲ್ಲ ಮುಗಿದು ರಾಜಕುಮಾರ ವಾಪಸ್ಸು ಹೊರಡುವ ದಿನ ಹಾದಿಯಲ್ಲಿ ಆತನನ್ನು ಮುಗಿಸಬೇಕೆಂಬ ಸಂಚನ್ನು ರೂಪಿಸಿದ್ದ ಗ್ಯಾವ್ರಿಲೋ ಅಚಾನಕ್ಕಾಗಿ ರಾಜಕುಮಾರ ಆತನ ಪತ್ನಿ ಸಮೇತವಾಗಿ ಆಸ್ಪತ್ರೆಯ ಹಾದಿಯಲ್ಲಿ ಎದುರಾದಾಗ ಕೊಂಚ ದಿಗ್ಬ್ರಮೆಯಾಗುತ್ತಾನೆ. ಸಿಕ್ಕ ಸುವರ್ಣಾವಕಾಶ ಕೈತಪ್ಪುವ ಮೊದಲೇ ಆತ ತನ್ನ ಜೇಬಿನಲ್ಲಿದ್ದ ಪಿಸ್ತೂಲನ್ನು ಹೊರಗೆಳೆದು ರಾಜಕುಮಾರ ಹಾಗು ಆತನ ಪತ್ನಿಯ ಮೇಲೆ ಗುಂಡಿನ ಸುರಿಮಳೆಗೈಯುತ್ತಾನೆ. FN ಮಾಡೆಲ್ ೧೯೧೦ ಪಿಸ್ತೂಲಿನಿಂದ ಹೊರಟ ಗುಂಡೊಂದು ರಾಜನ ಕತ್ತನ್ನು ಸೀಳಿ ಹೊರಹಾರಿತು! ಗಾಯಗೊಂಡ ಪ್ರಜೆಗಳ ಯುಗಕ್ಷೇಮವನ್ನು ವಿಚಾರಿಸಲು ಹೊರಟಿದ್ದ ಜೋಡಿ ಮತ್ತೆಂದೂ ಹಿಂಬರದಿರುವ ಲೋಕಕ್ಕೆ ಪ್ರಯಾಣಿಸುತ್ತಾರೆ. ವಿಪರ್ಯಾಸವೆಂಬಂತೆ ಅಂದು ಅವರ ವಿವಾಹ ವಾರ್ಷಿಕೋತ್ಸವವೂ ಆಗಿದ್ದಿತು! ಸರೆಜಾವೋ ಅಧಿಕಾರಿಗಳಿಗೆ ಜೀವಂತವಾಗಿ ಸೆರೆಸಿಕ್ಕ ಇವನಿಂದ ನಂತರದ ಕೆಲವೇ ದಿನಗಳಲ್ಲಿ ಸೆರ್ಬಿಯ ದೇಶದ ಅಧಿಕಾರಿಗಳ ಕೈವಾಡವಿರುವ ಗುಟ್ಟು ಹೊರಹಾಕಲ್ಪಡುತ್ತದೆ. ಆದರೆ ಸೆರ್ಬಿಯ ಸರ್ಕಾರ ಈ ಸಾವಿಗೂ, ತನಗೂ ಹಾಗು ಅಧಿಕಾರಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಕೈತೊಳೆದುಕೊಳ್ಳುವ ಹಾದಿಯನ್ನು ಹಿಡಿದರೂ ತನ್ನ ರಾಜಕುಮಾರನನ್ನು ಕಳೆದುಕೊಂಡು ಬೆಂಕಿಯ ಚಂಡಾಗಿದ್ದ ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯ ಸೆರ್ಬಿಯ ದೇಶಕೊಂದು ಕೊನೆಯನ್ನು ಕಾಣಿಸಬೇಕೆಂದೇ ನಿಶ್ಚಯಿಸಿತು.

ಇದು ಅಂದಿಗೆ ದಿ ಗ್ರೇಟ್ ವಾರ್ ಅಥವ ಇಂದಿಗೆ ಮೊದಲ ವಿಶ್ವಯುದ್ಧವೆಂದು ಕರೆಸಿಕೊಂಡ ಪ್ರಪಂಚದ ಭೀಕರ ರಕ್ತಸಿಕ್ತ ಅಧ್ಯಾಯ ಒಂದಕ್ಕೆ ಮುನ್ನುಡಿಯಾದ ಘಟನಾವಳಿಗಳು.ಒಂದು ಪಕ್ಷ ಅಂದು ಸೆರ್ಬಿಯ ದೇಶ ಆಸ್ಟ್ರಿಯಾ-ಹಂಗೇರಿಯ ಅಷ್ಟೂ ಬೇಡಿಕೆಗಳಿಗೆ ಅಸ್ತು ಎಂದಿದ್ದರೆ ಅಥವಾ ರಾಜಕುಮಾರನೊಬ್ಬ ಗುಪ್ತಚರ ಸಿಬ್ಬಂದಿಯ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ ಅಥವಾ ಟೌನ್ ಹಾಲಿನಿಂದ ಕೂಡಲೇ ವಾಪಸ್ಸು ಬರುವ ಮನಸ್ಸನ್ನು ಮಾಡದಿದ್ದರೆ ಬಹುಷಃ ಇಂದು ನಮ್ಮೆಲ್ಲರ ಸುತ್ತ ಬೇರೆಯೇ ದಿನಗಳು ಇರುತ್ತಿದ್ದವೇನೋ? ದೇಶಗಳೆರಡರ ಕಚ್ಚಾಟ ಅಂದು ಮಹಾಯುದ್ದವಾಗಿ ಪರಿಣಮಿಸಿದ್ದೂ ಸಹ ಕಾಕತಾಳೀಯಎನ್ನಬಹುದು. ಎಂದು ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯ ಸೆರ್ಬಿಯ ದ ಮೇಲೆ ಯುದ್ಧವನ್ನು ಕಾರಿದ ಸುದ್ದಿ ರಷ್ಯಾದೇಶದ ಕಿವಿಗೆ ಬಿದ್ದಿತೋ ಅಂದೇ ಅದು ಸೆರ್ಬಿಯಾದ ಸಹಾಯಕ್ಕಾಗಿ ಸೇನೆಯನ್ನು ಕಳಿಸಲು ತೀರ್ಮಾನಿಸಿತು. ಆದರೆ ಸೆರ್ಬಿಯ ದೇಶವನ್ನು ದ್ವೇಷಿಸುತ್ತಿದ ಹಾಗು ತನ್ನ ಮಿತ್ರ ರಾಷ್ಟ್ರ ಆಸ್ಟ್ರಿಯಾ-ಹಂಗೇರಿಯ ಪರವಾಗಿ ಜರ್ಮನಿ, ರಷ್ಯಾ ದೇಶದ ಈ ನಡೆಯನ್ನು ವಿರೋಧಿಸಿ ಅದರ ವಿರುದ್ಧ ಯುದ್ಧ ಕಾರಿತು. ಅಲ್ಲದೆ ಸೆರ್ಬಿಯ ದೇಶಕ್ಕೆ ಯಾವುದೇ ಬಗೆಯ ಸಹಾಯವನ್ನು ಮಾಡಬಾರದೆಂದು ಫ್ರಾನ್ಸ್ ದೇಶಕ್ಕೆ ಖಡಕ್ ಸಂದೇಶವನ್ನು ರವಾನಿಸಿತು. ಹೀಗೆ ತಣ್ಣಗಿದ್ದ ಫ್ರಾನ್ಸ್ ದೇಶವನ್ನೂ ಒಂದಿಲ್ಲೊಂದು ಬಗೆಯಲ್ಲಿ ಯುದ್ಧಕ್ಕೆ ಎಳೆತಂದಿತು. ಫ್ರಾನ್ಸ್ ನ ಮೇಲೆ ಜರ್ಮನಿಯ ದಾಳಿಗೆ ಬ್ರಿಟನ್ ಮುನಿಸಿಕೊಂಡು ಅದೂ ಕೂಡ ಜರ್ಮನಿಯ ವಿರುದ್ಧ ಯುದ್ಧ ಸಾರಿತು. ಮತ್ತೊಂದೆಡೆ ಇದೆ ಬಗೆಯ ತನ್ನ ಹುಚ್ಚಾಟಗಳಿದ ಬೆಲ್ಜಿಯಂ ಹಾಗು ದೂರದ ಅಮೆರಿಕ ದೇಶಗಳನ್ನೂಯುದ್ಧಕ್ಕೆ ಎಳೆತಂದು ಅವುಗಳ ವಿರುದ್ಧ ಸೆಣೆಸಾಡ ತೊಡಗಿತು. ಒಟ್ಟಿನಲ್ಲಿ ಹನುಮನ ಬಾಲಕ್ಕೆ ಬೆಂಕಿಯನ್ನು ಕೊಟ್ಟಂತೆ ಅಂದಿನ ಜರ್ಮನಿ ಎಂಬ ಅರೆಹುಚ್ಚು ದೇಶಕ್ಕೆ ಯುದ್ಧವನ್ನು ಎಲ್ಲೆಡೆ ಪಸರಿಸಲು ಸೆರ್ಬಿಯ ಹಾಗು ಆಸ್ಟ್ರಿಯಾ-ಹಂಗೇರಿಯ ಜಗಳವೊಂದು ಸಾಕಾಗಿದ್ದಿತು. ಅಂದು ಇದೇ ಯುದ್ಧ ನಂತರ ಹಲವು ವರ್ಷಗಳ ನಂತರ ಮರುಕಳಿಸಿದ ಎರಡನೇ ವಿಶ್ವಯುದ್ದಕೂ ನಾಂಧಿಯಾಯಿತು.


ಸೆಪ್ಟೆಂಬರ್ 28, 1918. ನಾಲ್ಕು ವರ್ಷಗಳ ಯುದ್ಧದಲ್ಲಿ ಜರ್ಜರಿತವಾದ ಜರ್ಮನಿ ಇನ್ನೇನು ರಣರಂಗದಿಂದ ಹಿಂದೆ ಸರಿಯಬೇಕು. ಅಷ್ಟರಲ್ಲಾಗಲೇ ಬ್ರಿಟನ್ ದೇಶದ ಸೇನಾ ತುಕಡಿಗಳು ಯುದ್ಧದಲ್ಲಿ ಸೇರ್ಪಡೆಗೊಂಡು ಜರ್ಮನಿ ಹಾಗು ಅದರ ಮಿತ್ರಪಡೆಗಳ ಸೈನಿಕರ ರುಂಡವನ್ನು ಚೆಂಡಾಡತೊಡಗಿದ್ದವು. ಯುದ್ಧರಂಗದಿಂದ ಕಾಲು ಕೀಳುತಿದ್ದ ಗಾಯಗೊಂಡ ಜರ್ಮನಿಯ ಸೈನಿಕನೊಬ್ಬ ಬ್ರಿಟನ್ ದೇಶದ ಸೈನಿಕನ ಎದುರಿಗೆ ಸಿಕ್ಕಿಬೀಳುತ್ತಾನೆ. ನಿಲ್ಲಲೂ ತ್ರಾಣವಲ್ಲದ ಆತನನ್ನು ಕಂಡು ಮರುಗಿದ ಬ್ರಿಟನ್ ಸೈನಿಕ ಕೆಲಕಾಲ ಆತನನ್ನೇ ನೋಡಿ ಆತನಿಗೆ ಏನನ್ನೂ ಮಾಡದೇ ಅಲ್ಲಿಂದ ಮುನ್ನಡೆಯುತ್ತಾನೆ. ಜೀವಭಿಕ್ಷೆಯನ್ನು ಪಡೆದ ಜರ್ಮನ್ ಸೈನಿಕ ಅಲ್ಲಿನ ಕಾಲುಕೀಳುತ್ತಾನೆ. ಈ ಘಟನೆ ಜರುಗಿದ ಹಲವು ದಶಕಗಳ ಕಾಲ ಬ್ರಿಟನ್ನಿನ ಸೈನಿಕ ತನ್ನನು ತಾನೇ ಶಪಿಸಿಕೊಳ್ಳುತ್ತಿರುತ್ತಾನೆ. ಆತನ ಆ ಒಂದು ಗುಂಡೇಟಿನಿಂದ ಜಗತ್ತಿನ ಕೋಟಿ ಕೋಟಿ ಜನರ ಜೀವವನ್ನು ತಾನು ರಕ್ಷಿಸಬಹುದಾಗಿತ್ತಲ್ಲ ಎಂದು ದುಃಖಿಸುತ್ತಾನೆ! ಏಕೆಂದರೆ ಅಂದು ಆತ ಜೀವಭಿಕ್ಷೆಯನ್ನು ನೀಡಿದ್ದು ಜಗತ್ತಿನ ಇತಿಹಾಸದಲ್ಲೇ ನರರಾಕ್ಷಸನೆಂದೇ ಬಿಂಬಿತವಾಗಿ ಕೋಟಿ ಕೋಟಿ ಜನರ ಮಾರಣಹೋಮಕ್ಕೆ ನೇರವಾಗಿ ಕಾರಣನಾದ ಕುಖ್ಯಾತ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್!!

ಮೊದಲನೇ ಮಹಾಯುದ್ಧ ಕೊನೆಗಂಡು ಇಂದು ಬರೋಬ್ಬರಿ ನೂರು ವರ್ಷಗಳು ಸಂದಿವೆ. ತೀವ್ರಗಾಮಿಯ ಪಿಸ್ತೂಲಿನಿಂದ 'ಸಿಡಿದ ಗುಂಡೊಂದು' ಮೊದಲನೇ ಮಹಾಯುದ್ಧವನ್ನು ಹುಟ್ಟುಹಾಕಿದರೆ, ಸೈನಿಕನ ಪಿಸ್ತೂಲಿನಿಂದ 'ಸಿಡಿಯದ ಗುಂಡೊಂದು' ಎರಡನೇ ಮಹಾಯುದ್ದವನು ಹುಟ್ಟುಹಾಕಿತು.



No comments:

Post a Comment