Friday, February 23, 2018

ನಂಬುಗೆಯೆಂಬ ಪಾತ್ರೆಯ ಒಳಗೆ ಸುಳ್ಳುಸುದ್ದಿಗಳ ಜಾತ್ರೆ!

ಇಲ್ಲಿ ಸರ್ವವೂ ಇಂಟರ್ನೆಟ್ಮಯ. ಇಲ್ಲಿ ಕ್ಷಣಮಾತ್ರದಲ್ಲಿ ಕಣ್ಣೊಡೆದು ಕೋಟಿ ಜನರ ಕನಸಿನ ರಾಣಿಯಾಗಲೂಬಹುದು ಅಂತೆಯೇ ಸುಳ್ಳಿನ ಕಂತೆಯಿಂದ ಕಟ್ಟಿರುವ ರಾಜಪಟ್ಟದ ಉತ್ತುಂಗದಿಂದ ಕಣ್ಮುಚ್ಚಿ ಬಿಡುವಷ್ಟರಲ್ಲಿ ನೆಲದ ಮೇಲೆ ವಿವಸ್ತ್ರನಾಗಿ ಬೀಳಲೂಬಹುದು. ಇಲ್ಲಿ ಸತ್ಯ, ಮಿಥ್ಯ, ಸರಿ, ತಪ್ಪು, ಅಂತೆ, ಕಂತೆ ಎಂಬೆಲ್ಲಾ ಗ್ರಹಿಕೆಗಳು ನಿಂತಿರುವುದು ಕೇವಲ ಒಂದು ಮಾತ್ರದ ಅಂಶದ ಮೇಲೆ. ಅದು ಪ್ರಸ್ತುತ ಇಂಟರ್ನೆಟ್ ಬಳಕೆದಾರನ ಬಳಿಯಿರುವ ಏಕೈಕ ಮಾಪನ. ಹೆಸರು ನಂಬುಗೆ. ಇಂದಿನ ಸಾಮಾಜಿಕ ಜಾಲತಾಣಗಳ ಸರೋವರದಲ್ಲಿ ಕಾಣಸಿಗುವ ಪ್ರತಿಯೊಂದು ಸುದ್ದಿಯನ್ನು ಹಿಂದೂ-ಮುಂದೂ ನೋಡದೆ ಅವುಗಳ ಅಳೆತ್ತರವನ್ನೂ ಅರಿಯದೆ ಕಾದ ಎಣ್ಣೆಗೆ ಬಿದ್ದ ಒಣ ಹಪ್ಪಳದಂತೆ ಹಿರಿ ಹಿರಿ ಹಿಗ್ಗುವ ಜನಕೋಟಿಯ ವಿಚಾರಗ್ರಹಿಕೆ ತಾವು ಕಂಡ ಸುದ್ದಿಯನ್ನು ಒರೆಹಚ್ಚಿ ಪರೀಕ್ಷಿಸಿಕೊಳ್ಳುವುದು ಈ ನಂಬುಗೆ ಎಂಬ ಸೂಕ್ಷ್ಮ ಎಳೆಯ ಮೇಲೆಯೇ.

ಫೇಸ್ಬುಕ್, ಟ್ವಿಟ್ಟರ್, ವಾಟ್ಸ್ಅಪ್ ಅಥವಾ ಇನ್ನ್ಯಾವುದೇ ಸಾಮಾಜಿಕ ಜಾಲತಾಣಗಳಾಗಿರಲಿ ಇಂದು ಅವುಗಳಲ್ಲಿ ಕಾಣಬೇಕಿದ್ದ ಸುಂದರ ಸಂವಹನ, ಒಂದಿಷ್ಟು ಸಾಂದರ್ಭಿಕ ಮಾತುಕತೆಗಳಿಗಿಂತ ಹೆಚ್ಚಾಗಿ ಇಂದು ಬ್ರೆಕಿಂಗ್ ನ್ಯೂಸ್ಗಳು, ಸಿಕ್ಕ ಸಿಕ್ಕ ವ್ಯಕ್ತಿತ್ವಗಳ ಕಾಲೆಳೆತಗಳು, ಬೈಗುಳಗಳು, ಬೆದರಿಕೆಗಳೇ ಕಾಣಸಿಗುತ್ತವೆ. ಅಲ್ಲದೆ ಹಿತ್ತಾಳೆ ಕಿವಿಯ ಬಯಕೆಯಂತೆ ಸುಳ್ಳು ಸುದ್ದಿಗಳ (Hoax) ಉಗಮವಾಗುವಿಕೆಗೂ ಇಲ್ಲಿ ಕೊನೆಯಿಲ್ಲ. ಈ ಸುಳ್ಳು ಸುದ್ದಿಗಳ ಜಾತ್ರೆಯಲ್ಲಿ ಹೆಚ್ಚಾಗಿ ಸಿಲುಕಿ ಗೋಳಾಡುವವರು ಮಾತ್ರ ಜನಮಾನಸದಲ್ಲಿ ಪ್ರಸಿದ್ದಿ ಹೊಂದಿ ಎಲ್ಲರಿಂದ ಸೆಲೆಬ್ರಿಟಿ ಎಂದು ಕರೆಸಿಕೊಳ್ಳುವವರು. ಇಲ್ಲಿ ಆತ ಬಿದ್ದು, ಎದ್ದು, ಸತ್ತು, ಅತ್ತು, ಸನ್ಯಾಸಿಯಾಗಿ, ಯೋಗಿಯಾಗಿ ದಿನಕೊಂದು ಹೊಸ ಸ್ಥಿತಿಯನ್ನು ರೂಪವನ್ನು ಪಡೆಯುತ್ತಿರುತ್ತಾನೆ.ಅಸಲಿಗೆ ಆತ AC ಕೋಣೆಯೊಳಗೆ ಬೆಚ್ಚಗೆ ಸುಖನಿದ್ರೆಯನು ಸವಿಯುತ್ತಿರುತ್ತಾನೆ! ಎದ್ದು ಒಮ್ಮೆ ಇಂತಹ ಸುದ್ದಿಯೇನಾದರೂ ನೋಡಿದರೆ ಆತ/ಅವಳು ನಿಜವಾಗಿಯೂ ಎದೆಹೊಡೆದುಕೊಂಡು ಪ್ರಾಣಬಿಡಬಹುದೇನೋ!

ಈ ಪಟ್ಟಿಗೆ ತೀರಾ ಇತ್ತೀಚಿನ ಸೇರ್ಪಡೆ ನಟ, ನಿರ್ದೇಶಕ, ಕತೆಗಾರ, ಛಲಗಾರ, ದಿ ಲೆಜೆಂಡ್ ಸಿಲ್ವಿಸ್ಟರ್ ಸ್ಟ್ಯಾಲಿನ್. 'ಯೊ ಅಡ್ರಿಯನ್..' ಎನ್ನುತ್ತಾ ತೆರೆಯ ಮೇಲೆ ಕಾಲಿಟ್ಟು ನೋಡುಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ಅಮೇರಿಕಾದ ಈ ನಟಭೂಪ ಕೆಲದಿನಗಳ ಹಿಂದಷ್ಟೇ ಪ್ರೊಸ್ಟೇಟ್ ಕ್ಯಾನ್ಸರ್ ನಿಂದ ವಿಧಿವಶನಾಗಿದ್ದಾನೆ ಎಂಬೊಂದು ಸುದ್ದಿ ರಾತ್ರಿ ಕಳೆದು ಹಗಲು ಮೂಡುವುದರೊಳಗೆ ಜಾಲತಾಣಗಳೆಲ್ಲಡೆ ಲೀಲಾಜಾಲವಾಗಿ ಹರಿದಾಡತೊಡಗಿತು. ಸುದ್ದಿಗಳನ್ನು ನೋಡಿ (ಸುದ್ದಿಯೊಟ್ಟಿಗೆ ಆತನ ಎಲ್ಲಿಂದಲೋ ಸಂಗ್ರಹಿಸಿದ ಒಂದೆರೆಡು ಫೋಟೋಗಳನ್ನೂ ಕೊಂಚ ಎಡಿಟ್ ಮಾಡಿ ಬಳಲುತ್ತಿರುವಂತೆ ತೋರಿಸಿ ಹಾಕಲಾಗಿದ್ದಿತು.) ಆತನ ಕೋಟ್ಯಾನುಕೋಟಿ ಅನುಯಾಯಿಗಳು ದುಃಖಿಸತೊಡಗಿದರು. ತಮ್ಮ ತಮ್ಮ ಪೇಜ್ಗಳ ಮೇಲೂ ಸುದ್ದಿಯನ್ನು ಷೆರ್ ಮಾಡತೊಡಗಿದರು. ಕೆಲತಿಂಗಳ ಹಿಂದಷ್ಟೇ ‘ಗಾರ್ಡಿಯನ್ ಆಫ್ ಗ್ಯಾಲಕ್ಸಿ Vol.2’ ಎಂಬ ಚಿತ್ರದಲ್ಲಿ ನಟಿಸಿದ್ದ ವ್ಯಕ್ತಿ ಅದೇಗೆ ಕೆಲವೇ ತಿಂಗಳಲ್ಲಿ ಕ್ಯಾನ್ಸರ್ ನಿಂದ ಕೃಶನಾಗಿ ತೀರಿಕೊಂಡ ಎಂಬೊಂದು ಸಾಮಾನ್ಯ ಪ್ರೆಶ್ನೆಯನ್ನೂ ಕೇಳಿಕೊಳ್ಳದೆ ಸುದ್ದಿಯನ್ನು ಜನ ನಂಬಿಬಿಟ್ಟರು. ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಸಿಲ್ವೆಸ್ಟರ್ ಬೆಳಗೆದ್ದು ನೋಡಿದಾಗಲೇ ತಿಳಿದದ್ದು ಆತನನ್ನು ಇಂಟೆಟ್ನೆಟ್ ಲೋಕ ಪರಲೋಕಕ್ಕೆ ತಳ್ಳಿಬಿಟ್ಟಿದೆ ಎಂದು! ಕೂಡಲೇ ಟ್ವಿಟ್ಟರ್ ಮೂಲಕ ತನ್ನ ಇರುವಿಕೆಯ ಸಂದೇಶವನ್ನು ಹರಿಬಿಟ್ಟ ಆತ ಅಲ್ಲಿಯವರೆಗೂ ಅರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದುಬಿಟ್ಟ.

ಹುಟ್ಟುವಾಗಲೇ ಮುಖದ ಒಂದು ಬದಿ ಪಾರ್ಶ್ವವಾಯುವಿನಿಂದ ಸಟೆದುಕೊಂಡು, ಧ್ವನಿಯೂ ಕೊಂಚ ವಿಲಕ್ಷಣಗೊಂಡು, ಇರಲು ನೆಲೆಯಿಲ್ಲದೆ ದಾರಿಬದಿಯಲ್ಲೂ ಮಲಗೆದ್ದು, ಹೊಟ್ಟೆಪಾಡಿಗಾಗಿ ನೀಲಿಚಿತ್ರಗಳಲ್ಲೂ ಅಭಿನಯಿಸಿ ಅಲೆದಾಡುತ್ತಿದ್ದ ಯುವಕನೊಬ್ಬ ಕೆಲವೇ ತಿಂಗಳುಗಳಲ್ಲಿ ಕೋಟಿ ಜನರ ಸ್ಪೂರ್ತಿಯ ವ್ಯಕ್ತಿತ್ವವೆನಿಸಿಕೊಳ್ಳುವ ಮಟ್ಟಿಗೆ ಬೆಳೆದ ಪರಿಯೇ ಆತನಿಗೆ ಕೋಟ್ಯಾನುಕೋಟಿ ಅಭಿಮಾನಿಗಳನ್ನು ವಿಶ್ವದೆಲ್ಲೆಡೆ ಸೃಷ್ಟಿಕೊಟ್ಟಿತು. ಅದಕ್ಕೆ ಇಂಬುಕೊಡುವ ಆತನ ಚಿತ್ರಗಳು, ರಾಕಿ ಬಾಲ್ಬೋಹ, ರಾಂಬೊವಿನಂತಹ ಪಾತ್ರಗಳು ಕಳೆದ ಐದು ದಶಕಗಳಿಂದ ಅಭಿಮಾನಿಗಳ ಮನದಲ್ಲಿ ಮನೆಮಾಡಿಕೊಂಡಿವೆ. ಇಂತಹ ಒಂದು ವ್ಯಕ್ತಿತ್ವ ಇದ್ದಕ್ಕಿದಂತೆ ಕಾಣೆಯಾಯಿತು ಎಂದರೆ ಸೃಷ್ಟಿಯಾಗುವ ಅಲ್ಲೊಲ್ಲ ಕಲ್ಲೋಲಗಳು ತೀರ ಸಹಜವೇ.

ಆದರೆ ಇಲ್ಲಿ ಕೇಳಿಕೊಳ್ಳಬೇಕಾದ ಪ್ರೆಶ್ನೆ, ಒಣಸೀಗೆಯಂತೆ ಎಲ್ಲೆಡೆ ಹಬ್ಬಿಕೊಂಡಿರುವ ಇಂದಿನ ಇಂಟರ್ನೆಟ್ ಯುಗದಲ್ಲಿ ನಂಬಬಾರದ ಹಾಗು ನಂಬಲೇಬೇಕಾದ ಸುದ್ದಿಗಾಳವುವು ಎಂಬುದು. ಯಾವುದೇ ಅಡೆತಡೆಗಳಿಲ್ಲದೆ ಬೇಕಾಬಿಟ್ಟಿ ಸೃಷ್ಟಿಸಿ ತೇಲಿಬಿಡುವ ಸುದ್ದಿಗಳನ್ನು ಇಲ್ಲಿ ಅಳೆದು ತೂಗುವುದಾದರೂ ಹೇಗೆ? ಅದಕ್ಕೂ ಮೊದಲು ನಾವುಗಳು ಕೇಳಿಕೊಳ್ಳಬೇಕಾದ ಮತ್ತೊಂದು ಅತಿಮುಖ್ಯ ಪ್ರೆಶ್ನೆಯೆಂದರೆ ಜಾಲತಾಣಗಳ ಸುದ್ದಿ ಅದೇನೇ ಇರಲಿ ಕನಿಷ್ಠ ಒಮ್ಮೆಯಾದರೂ ಅಂತಹ ವಿಷಯಗಳನ್ನು ಬೇರೊಂದೆಡೆ ದೃಢಪಡಿಸಿಕೊಳ್ಳಬೇಡವೇ ಎಂಬುದು. ಇಲ್ಲದೆ ಹೋದರೆ ನಂಬುಗೆ ಎಂಬ ನೋಟವನ್ನು ನಾವುಗಳೇ ಕಿತ್ತು ಬದಿಗಿಟ್ಟಂತೆ! ಮೇಲಾಗಿ ಇದು ಸಾವು ಬದುಕಿನ ಸುದ್ದಿಗಳು. ನಮ್ಮವರಲ್ಲೇ ಒಬ್ಬ ಅತ್ಯಾಪ್ತರನ್ನು ಅಥವಾ ಯಾರೋ ನಮ್ಮ ಸಾವನ್ನೇ ಸುದ್ದಿಯಾಗಿ ಹಬ್ಬಿಸಿ ಎಲ್ಲೆಡೆ ಹರಿಯಬಿಟ್ಟರೇ ನಮಗೆ ಏನನಿಸಬಹುದು? ಅದೆಂತಹ ವಿಧ -ವಿಧವಾದ ದುಃಖಭಾವಗಳು ಮನದಲ್ಲಿ ಮೂಡಬಹುದು? ಸೆಲೆಬ್ರಿಟಿಗಳೇನು ಮನುಷ್ಯರಲ್ಲವೇ? ಜನರು ಒಬ್ಬ ವ್ಯಕ್ತಿಯನ್ನು ಎನ್ನುವುದಕ್ಕಿಂತ ಹೆಚ್ಚಾಗಿ ಒಂದು ವ್ಯಕ್ತಿತ್ವವನ್ನು ಸಾಯಿಸಿ ಅಂತಹ ಒಂದು ಸುದ್ದಿಯನ್ನು ಹರಿಬಿಟ್ಟು ಫೇಮಸ್ ಆಗಬಯಸುತ್ತಾರೆ ಎಂದರೆ ಹೆಸರು ಗಳಿಕೊಳ್ಳಬೇಕು ಎಂಬ ಗೀಳು ಹಾಗು ಅಂತಹ ಗೀಳಿಗೆ ತುಳಿಯುವ ಹಾದಿ ಇಂದು ಅದೆಂಥಹ ಮಟ್ಟತಲುಪಿದೆ ಎಂಬುದು ತಿಳಿದುಬರುತ್ತದೆ. ಇದು ಕೇವಲ ಸುಳ್ಳು ಸುದ್ದಿಯನ್ನು ಹರಡುವುದಷ್ಟೇ ಅಲ್ಲದೆ ಒಂದು ವಿಡಿಯೋ ತುಣುಕಿನ ಸಂಭಾಷಣೆಯನ್ನೇ ತಿರುಚುಚುವುದು, ಇತಿಹಾಸ ಪ್ರಸಿದ್ಧ ಫೋಟೋಗಳನ್ನು ಮನಬಂದಂತೆ ಕಲಸಿ ನೋಡುಗರ ಮುಂದೆ ಇರಿಸುವುದು, ಪಕ್ಷಪಾತೀಯ ಸಮೀಕ್ಷೆಗಳನ್ನು ನೆಡೆಸಿ ಜನರ ಹಾದಿತಪ್ಪಿಸುವುದು ಅತಿ ಸಾಮಾನ್ಯವಾಗಿಬಿಟ್ಟಿದೆ. ಒಟ್ಟಿನಲ್ಲಿ ಸರ್ವವೂ ಇಂಟರ್ನೆಟ್ಮಾಯವಾಗಿರುವ ಕಾಲದಲ್ಲಿ ಜರುಗುವ ಇಂತಹ ಹಲವು ವಿಕೃತಿಗಳಿಗೆ ಪ್ರೆಶ್ನೆ ಹಾಕುವವರೇ ಇಲ್ಲದಂತಾಗಿದೆ.

ಇದು ಅಮೆರಿಕದಲ್ಲಷ್ಟೇ ಅಲ್ಲದೆ ಭಾರತದಲ್ಲೂ ಲತಾ ಮಂಗೇಶ್ಕರ್, ಅಮಿತಾಬ್ ಬಚ್ಚನ್, ದಿಲೀಪ್ ಕುಮಾರ್ ರಂತಹ ಹಲವು ದಿಗ್ಗಜರ ಸಾವಿನ ಸುದ್ದಿಗಳು ಈಗಾಗಲೇ ಎಲ್ಲೆಡೆ ಹರಿದಾಡಿ ಮರೆಯಾಗಿವೆ. ಸಾವು ಎಲ್ಲರಿಗು ಸಹಜವೇ ಆದರೆ ಹೀಗೆಯೇ ಮುಂದುವರೆದರೆ ಬದುಕಿರುವಾಗಲೇ ಸತ್ತು ಮತ್ತೊಮ್ಮೆ ಆತನೇ ತನ್ನ ಬದುಕಿರುವಿಕೆಗೆ ಕೋರ್ಟ್ಗಳಿಗೆ ಪುರಾವೆಗಳನ್ನು ಒದಗಿಸಬೇಕಾದ ಕಾಲವೊಂದು ಬಂದರೂ ಆಶ್ವರ್ಯ ಪಡಬೇಕಾಗಿಲ್ಲ! ಅಲ್ಲದೆ ಹಲವು ಬಾರಿ ಇಂತಹ ಗಾಳಿಸುದ್ದಿಗಳೇ ಬ್ರೇಕಿಂಗ್ ನ್ಯೂಸ್ಗಳಾಗಿ ಮುಖ್ಯವಾಹಿನಿಗಳಲ್ಲಿ, ಪತ್ರಿಕೆಗಲ್ಲಿ ಪ್ರಸಾರವಾಗಿರುವುದೂ ಉಂಟು. ಈ ನಿಟ್ಟಿನಲ್ಲಿ ಪರ್ತಿಕೆ, ದೂರದರ್ಶನ, ರೇಡಿಯೋ ಹೀಗೆ ಒಂದೊಂದೇ ಸುದ್ದಿಯ ಮೂಲಗಳನ್ನು ಆಕ್ರಮಿಸಕೊಂಡು ಬರುತ್ತಿರುವ ಇಂಟರ್ನೆಟ್ ಎಂಬ ದೈತ್ಯಶಕ್ತಿಯ ಮುಂದೆ ನಿಖರತೆಯ, ಶುದ್ಧ ಸುದ್ದಿ ಸಮಾಚಾರಗಳನ್ನು ಜನಮಾನಸಕ್ಕೆ ಒದಗಿಸುವ ಸವಾಲು ಮಾತ್ರ ಅಳಿದುಳಿದಿರುವ ಸುದ್ದಿ ಮಾಧ್ಯಮಗಳ ಮುಂದಿದೆ.

No comments:

Post a Comment