Wednesday, July 26, 2017

ಸಿ.ಎ.ಜಿ ಯ ಈ ರಿಪೋರ್ಟ್ ದೇಶಕ್ಯಾವ ಬಗೆಯಲ್ಲಿ ಸಪೋರ್ಟ್!

ಕೆಲದಿನಗಳ ಹಿಂದೆಯಷ್ಟೇ ಮಹಾಲೆಕ್ಕಪರಿಶೋಧಕರ (CAG) ವರದಿ ಭಾರತದ ಶಸ್ತ್ರಾಗಾರದ ಬತ್ತಳಿಕೆಯ ನಗ್ನ ಸತ್ಯವನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿತು. ಬೂದಿ ಮುಸುಕಿದ ಕೆಂಡದಂತಿದ್ದ ಸಮಸ್ಯೆಯೊಂದನ್ನು ನಾಜೂಕಾಗಿ ಬಿಡಿಸಿ ಸಂಸ್ಥೆ ಸಂಸತ್ತಿನ ಮುಂದಿರಿಸಿತು. ಯುದ್ಧವೆಂಬುದರ ಕನಿಷ್ಠ ಅರಿವೂ ಇರದ ಅದೆಷ್ಟೋ ವಾಗ್ಮಿಗಳು ಮೊನ್ನೆಯವರೆಗೂ ಸೈನ್ಯದಲ್ಲಿನ ಯೋಧರ ಸಂಖ್ಯೆಯನ್ನೇ ಬಂಡವಾಳವಾಗಿಸಿಕೊಂಡು ಸಿಕ್ಕ ಸಿಕ್ಕಲೆಲ್ಲ ವಾದಕ್ಕಿಳಿದು ಮುಂದಿರುವವರನ್ನು ತಿವಿಯಲು ಯತ್ನಿಸುತ್ತಿದ್ದರೇ ವಿನಃ ಸೈನಿಕರ ಬತ್ತಳಿಕೆಗೆ ಬಂದು ಸೇರುವ ಯುದ್ದೋಪಕರಣಗಳ ಸಂಖ್ಯೆಯ ಅರಿವನ್ನು ಅರಿಯದೆ ಹೋಗಿದ್ದರು. ದೃಶ್ಯ ಮಾಧ್ಯಮಗಳಿಗೂ ಈ ಒಂದು ಸುದ್ದಿ ಆಹಾರವಾಗಿ ದೊರೆತದ್ದು CAG ಯ ವರದಿ ಬಂದ ನಂತರವೇ ಆದದ್ದರಿಂದ ಅವುಗಳೂ ಸಹ ಈ ವಿಷಯವನ್ನು ಚೀವಿಂಗ್ ಗಮ್ನ ಗುಳ್ಳೆಗಳಂತೆ ಮಾಡಿ ನೋಡುಗನ ಅಮಾಯಕ ಜ್ಞಾನವನ್ನು ಹೆಚ್ಚಿಸುವಲ್ಲಿ ವಿಫಲವಾಗಿದ್ದವು.


ಅದೇನೆಯಿರಲಿ, ಸದ್ಯಕ್ಕೆ CAG ಯು ಕೊಟ್ಟಿರುವ ವರದಿ ದೇಶಕ್ಕೆ ವರದಾನವಾಗಿ ಪರಿಣಮಿಸಿತೋ ಅಥವಾ ಪ್ರಸ್ತುತ ಯುದ್ಧಸನ್ನದ್ಧ ಪರಿಸ್ಥಿತಿಯಲ್ಲಿ ರಾಜತಾಂತ್ರಿಕವಾಗಿ ಇತರೆ ದೇಶಗಳ ಮುಂದೆ ತನ್ನ ಬಲಾಡ್ಯತೆಯ ಮೇಲೆಯೇ ಸವಾಲೆಸಿದುಕೊಂಡಿತೋ ಅಥವಾ ಸರ್ಕಾರ ಅತಿ ಬೇಗನೆ ಕಾರ್ಯಪ್ರವೃತವಾಗಲು ಸಣ್ಣದಾದ ಚುರುಕೊಂದನ್ನು ಮುಟ್ಟಿಸಿತೋ ಎಲ್ಲವೂ ಗೋಜಲು. ಆದರೆ ಇದಕ್ಕಿಂತಲೂ ಮಹತ್ವದ ಪ್ರೆಶ್ನೆಯಂದರೆ ವೈರಿ ಪಡೆಯು ಅತ್ತಕಡೆಯಿಂದ ಬಾಂಬೊಂದನ್ನು ಎಸೆದ ಮೇಲೆಯೇ ನಮ್ಮ ಬತ್ತಳಿಕೆಯ ನಿಜಸ್ಥಿತಿ CAGಯವರಿಗೆ ಅರಿವಾಗಿದ್ದು ಏತಕ್ಕೆ? ಇಲ್ಲಿಯವರೆಗೂ ಈವೊಂದು ವರದಿ ಸದ್ದಿಲ್ಲದೇ ಅಡಗಿ ಕುಳಿತ್ತಿದ್ದಾದರೂ ಎಲ್ಲಿ? ಅಥವಾ ಸಂಸ್ಥೆಯ ಹಿಂದಿನ ಅದೆಷ್ಟೋ ವರದಿಗಳ ಹಾಗೆಯೆ ಈ ವರದಿಯೂ ಸರ್ಕಾರೀ ಕೋಣೆಯೊಂದರಲ್ಲಿ ಸುಖನಿದ್ರೆಗೆ ಜಾರಿದ್ದಿತೇ?

ಸದ್ಯಕ್ಕೆ ಮಧ್ಯಂತರ ಬಿಸಿಸಿಐ ಅಧ್ಯಕ್ಷರಾಗಿರುವ ಹಾಲಿ CAG ಅಧ್ಯಕ್ಷರಾಗಿದ್ದ ವಿನೋದ್ ರಾಯ್ ಅವರು 2008 ರಲ್ಲಿ ಮಹಾಲೆಕ್ಕಪರಿಶೋಧಕರಾಗಿ ಅಧಿಕಾರ ವಹಿಸಕೊಳ್ಳುವ ವರೆಗೂ CAG ಎಂದರೆ ಆಟಕುಂಟು ಲೆಕ್ಕಕಿಲ್ಲದ ಸಂಸ್ಥೆಯಂತೆ ಕಾಣುತಿತ್ತು. ಮನೆಯೊಳಗೆ ಅಡಗಿರುವ ಒಂದೊಂದೇ ವಿಷ ಜಂತುಗಳನ್ನು ಹೆಕ್ಕಿ ಎಳೆದು ಬೀದಿಗೆ ಹಾಕುವಂತೆ ವಿನೋದ್ ಅಂದು ವ್ಯವಸ್ಥೆಯ ಒಳಗಿದ್ದ ಅವ್ಯವಸ್ಥೆ ಹಾಗು ಅದರ ಮೂಲ ವ್ಯಕ್ತಿಗಳನ್ನು ದೇಶದ ಜನತೆಯ ಮುಂದೆ ಎಳೆದು ನಿಲ್ಲಿಸತೊಡಗಿದರು. ಕೂಡಲೇ ಬಾಲಕ್ಕೆ ಬೆಂಕಿಬಿದ್ದ ಬೆಕ್ಕಿನಂತದಾದ ಅದೆಷ್ಟೋ ರಾಜಕಾರಣಿಗಳು ಒಬ್ಬರಿಂದೊಬ್ಬರಂತೆ ಇವರ ವಿರುದ್ಧ ಮುಗಿಬಿದ್ದರು. ಆದರೆ ಯಾವುದೇ ಬೆದರಿಕೆ, ಚೀರಾಟಗಳಿಗೆ ಕ್ಯಾರೇ ಎನ್ನದ್ದ ರಾಯ್ ಕಳಂಕಿತ ವ್ಯವಸ್ಥೆಯಲ್ಲಿ ಆನೆಯ ನೆಡೆಯನ್ನು ನೆಡೆಯತೊಡಗಿದರು. ಇವರ ಈ ನಡೆಯಿಂದಲೆ CAG ಎಂಬೊಂದು ಸಂಸ್ಥೆ ದೇಶದಲ್ಲಿ ಇದೆ ಎಂಬುದರ ಅರಿವು ಜನರಲ್ಲಿ ಮೂಡತೊಡಗಿತು. ಅಲ್ಲದೆ ನೆನಗುದಿಗೆ ಬಿದ್ದಿದ್ದ ಅದೆಷ್ಟೋ ಅಧಿಕಾರಯುಕ್ತ ಕಾನೂನುಗಳಿಗೆ ಜೀವವನ್ನು ನೀಡಿ ಅವುಗಳನ್ನು ಚಲಾಯಿಸಿಯೂ ತೋರಿಸಿದರು. ತಮಾಷೆಯ ವಿಷಯವೆಂದರೆ ರಾಜಕಾರಣಿಗಳು ಅಂದು ತಳ ಬುಡ ಇರದ ಸವಾಲುಗಳನ್ನು ಸಂಸ್ಥೆಯ ವಿರುದ್ಧ ಎಸೆಯುತ್ತಾ ಮಾಧ್ಯಮಗಳ ಮುಂದೆ ನಟಿಸುತ್ತಿದ್ದರೆ ಅತ್ತ ಕಡೆ ಸಂವಿಧಾನಿಕವಾಗಿ CAG ಗಿರುವ ಅಧಿಕಾರಗಳನ್ನು ರಾಯ್ ಎಳೆ ಎಳೆಯಾಗಿ ಬಿಚ್ಚಿಟ್ಟು ಎಲ್ಲರ ಬಾಯನ್ನು ಮುಚ್ಚಿಸುತ್ತಿದ್ದರು! ದೇಶವೇ ಬೆಚ್ಚಿ ಬಿದ್ದ 2ಜಿ ಸ್ಪೆಕ್ಟ್ರಮ್ ಹಗರಣ, ಕಲ್ಲಿದ್ದಲು ಹಗರಣದಂತಹ ಮಹತ್ವದ ಹಗರಣಗಳನ್ನು ಬಯಲಾದದ್ದು ವಿನೋದ್ ಅವರ ಅಧಿಕಾರವಾದಿಯಲ್ಲೇ.ಇಂತಹ ಅದೆಷ್ಟೋ ಹಗರಣಗಳ ನಡುವಿನ ಸೆಣೆಸಾಟ ಸಂಸ್ಥೆಯ ಆತ್ಮ ಸ್ತಯ್ರ್ಯವನ್ನು ಸಾವಿರ ಪಟ್ಟು ಹೆಚ್ಚಿಸಿತು ಎಂದರೆ ಸುಳ್ಳಾಗದು.

ಸುಪ್ರೀಂ ಕೋರ್ಟ್ ನಿಯೋಜಸಿರುವ ದೇಶದ ಅತಿ ಉನ್ನತ ಸಂಸ್ಥೆಗಳಲೊಂದಾದ ಮಹಾಲೆಕ್ಕಪರಿಶೋಧಕರ ಸಂಸ್ಥೆ ದೇಶದ ಖಜಾನೆಯಿಂದ ಒರಬೀಳುವ ಪ್ರತಿ ನಯಾಪೈಸೆಯ ಹಣವನ್ನು ಪರಿಶೋಧಿಸುವ ಅಧಿಕಾರವನ್ನು ದೇಶದ ಉದ್ದಗಲಕ್ಕೂ ಮುಲಾಜಿಲ್ಲದೆ ಚಲಾಯಿಸಬಹುದಾಗಲಿದೆ. ಅಂತಹ ಕೆಲ ಪರಿಶೋಧನೆಗಳ ಫಲವೇ ಬೊಫೋರ್ಸ್ ಹಗರಣ,ಮೇವು ಹಗರಣ, ಕಲ್ಲಿದ್ದಲ್ಲು ಹಗರಣ ಹಾಗು 2G ಸ್ಪೆಕ್ಟ್ರಮ್ ಹಗರಣಗಳೆಂಬ ಕೂಪದಿಂದ ದೇವತಾಮನುಷ್ಯರಂತೆ ಪೋಸುಕೊಡುತ್ತಿದ್ದ ಅದೆಷ್ಟೋ ಜನರ ನಿಜಬಣ್ಣವನ್ನು ಹೊರಕ್ಕೆ ಎಳೆತರಲು ಸಾಧ್ಯವಾದದ್ದು. CAGಯ ಹಾಲಿ ಅಧ್ಯಕ್ಷರಾಗಿರುವ ಶಶಿಕಾಂತ್ ಶರ್ಮಾರವರು ಸಹ ಇಂತಹ ನೂರಾರು ವರದಿಗಳನ್ನು ಸಿದ್ದಪಡಿಸಿ ಸರ್ಕಾರಗಳ ಪಾರದರ್ಶಕತೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ದೇಶದ ರಾಷ್ಟ್ರಪತಿಗಳಿಗೆ ನೇರವಾಗಿ ವರದಿಯನ್ನು ಒಪ್ಪಿಸಿದ ನಂತರ ಅವರು ವರದಿಯನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ಸರಿಯೆನಿಸಿದವುಗಳನ್ನು ಸಂಸತ್ತಿನಲ್ಲಿ ಚರ್ಚಿಸಲು ರವಾನಿಸುತ್ತಾರೆ. ಮುಂದೆ ಸಂಸತ್ತಿನಲ್ಲಿ ಈ ವಿಚಾರದ ಬಗ್ಗೆ ಆಳವಾದ ಚರ್ಚೆ ಏರ್ಪಡುತ್ತದೆ ಹಾಗು ಸರಿ ತಪ್ಪುಗಳನ್ನು ಮಂಥಿಸುವ ಕಾರ್ಯ ನೆಡೆಯುತ್ತದೆ.



ದೇಶದ ಅಭಿವೃದ್ಧಿಯ ಪ್ರತೀಕವಾಗಿರುವ ಇಂಥಹ ಸಂಸ್ಥೆಯೊಂದು ದೇಶದ ಶಸ್ತ್ರಾಗಾರದ ಕ್ಷಮತೆಯ ಬಗ್ಗೆ ವರದಿ ಮಾಡಿ ಆಡಳಿತ ಸರ್ಕಾರ ಹಾಗು ಜನತೆಯಲ್ಲಿ ಮುಜುಗರವನ್ನು ಉಂಟುಮಾಡಿದಂತೂ ಸುಳ್ಳಲ್ಲ. ಇದೊಂದು ಕಹಿಯಾದ ಸತ್ಯ. ಸತ್ಯ ಮಿತ್ಯದ ಮಾತು ಒಂದೆಡೆಯಿರಲಿ ಅದಕ್ಕಿಂತಲೂ ಮಿಗಿಲಾಗಿ ಇದು ದೇಶದ ರಕ್ಷಣೆಯ ವಿಚಾರ. ಇಂತಹ ಒಂದು ಗಂಭೀರ ವಿಚಾರವನ್ನು ಯುದ್ಧಸನ್ನದ್ಧ ಪರಿಸ್ಥಿಯಲ್ಲಿಯೇ ಸಂಸ್ಥೆ ಏತಕ್ಕೆ ಮೂಡಿಸಿತು, ಇಷ್ಟೆಲ್ಲಾ ಲೋಪದೋಷಗಳು ಇದ್ದರೂ ಇಲ್ಲಿಯವರೆಗೂ ಯಾರೊಬ್ಬ ಅಧಿಕಾರಿಯೂ ಇದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲವೇ ಎಂಬ ಪ್ರೆಶ್ನೆ ನಮ್ಮಲ್ಲಿ ಮೂಡದಿರದು. ಶೆ.40 ರಷ್ಟು ಶಸ್ತ್ರಾಸ್ತ್ರಗಳ ಕೊರತೆ ಹಾಗು ಸರಿಯಾಗಿ ಹತ್ತುದಿನಗಳೂ ಯುದ್ಧ ಮಾಡಲಾಗದ ಸಂಖ್ಯೆಯ ಯುದ್ದೋಪಕರಣಗಳಷ್ಟೇ ನಮ್ಮ ಬತ್ತಳಿಕೆಯಲ್ಲಿವೆ ಎಂದರೆ ಪರಿಸ್ಥಿತಿಯ ಗಂಭೀರತೆ ಅತಿ ಬೇಗನೆ ಅಳುವ ಸರ್ಕಾರಗಳಿಗೆ ಮುಟ್ಟಬೇಕಿದೆ. ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಪ್ರತಿಪಕ್ಷಗಳ ಸಮಯೋಚಿತ ನಡೆಗಳೂ ಸಹ ಅತ್ಯಗತ್ಯ. ಇಲ್ಲದ ವಿಚಾರಗಳಿಗೆ ರಂಪಾಟಗಳನ್ನು ಮಾಡಿ ಸದನವನ್ನು ಬಹಿಷ್ಕರಿಸುವ ಬದಲು ದೇಶದ ಸುರಕ್ಷತೆಯ ಬಗೆಗಿರುವ ಇಂತಹ ಅದೆಷ್ಟೋ ವಿಚಾರಗಳನ್ನು ಆಗಿಂದಾಗೆ ಕೆದಕುತ್ತಿರಬೇಕು. CAG ಯಂತಹ ಹಲವು ಘನ ಸಂಸ್ಥೆಗಳ ವರದಿಗಳನ್ನು ಗಾಳಿಗೆ ತೂರದೆ ಜವಾಬ್ದಾರಿಯುತ ಚರ್ಚೆಗಳು ಆ ವಿಚಾರವಾಗಿ ನೆಡೆದರೆ ಇಂತಹ ವಿಷಮ ಸ್ಥಿತಿಗಳು ಮುಂದೆ ಎದುರಾಗದಿರದು.

No comments:

Post a Comment