Saturday, April 29, 2017

ನಮ್ಮೂರ ಜಾತ್ರೆ


ಕಾಲ ವಸಂತವನ್ನು ಕಳೆದು ಉರಿ ಬೇಸಿಗೆಗೆ ಒಗ್ಗತೊಡಗಿತ್ತು. ರೆನೊಲ್ಡ್ಸ್ ಹಾಗು ‘ಟಿಕ್- ಟಿಕ್ ಪೆನ್ನುಗಳೊಟ್ಟಿಗೆ ಗಾಜಿನ ದೇಹದಂತಹ ಪ್ಲಾಸ್ಟಿಕ್ನ ಪೆನ್ನುಗಳೂ ಮಕ್ಕಳ ಕೈಸೇರತೊಡಗಿದ್ದವು. TVS ಹಾಗು ಬಜಾಜ್ ಬೈಕುಗಳೊಟ್ಟಿಗೆ ಓತಿಕ್ಯಾತದ ಮುಖಕ್ಕೆ ಹೋಲುವ ಹೆಡ್ಲೈಟ್ ನ ನವ ಮಾದರಿಯ ಬೈಕುಗಳು ರಸ್ತೆಯ ಮೇಲೆ ಕಾಣತೊಡಗಿದ್ದವು. ಫೋನೆಂದರೆ ರಸ್ತೆ ಬದಿಯ ಬೋರ್ ವೆಲ್ಲಿನ ಕುತ್ತಿಗೆಯನ್ನು ಸಾಧ್ಯವಾದಷ್ಟು ಮೇಲಕ್ಕೆಳೆದು ನಿಲ್ಲಿಸಿರಿವ ಕಂಬಗಳು ಹಾಗು ಅವುಗಳ ಬುಡದಲ್ಲಿ ಶಾವಿಗೆ ಪಾಯಸದ ಶಾವಿಗೆಗಳಂತೆ ನುಲಿದುಕೊಂಡಿರುವ ರಾಶಿ ರಾಶಿ ವೈರುಗಳು ಎಂದರಿತ್ತದ್ದ ಎಷ್ಟೋ ಜನರಿಗೆ ಇವುಗಳ್ಯಾವುದರ ಕಿರಿ- ಕಿರಿ ಇಲ್ಲದೆ ಜೇಬಿನ ಒಳಗಿರಿಸಿ ಎಲ್ಲೆಂದರಲ್ಲಿಗೆ ಕೊಡೊಯ್ಯಬಲ್ಲ ಫೋನುಗಳು ಬರುತ್ತಿದೆ ಎಂದು ಕೇಳಿ ಆಶ್ಚರ್ಯ ಚಕಿತವಾಗುತ್ತಿದ್ದ ಕಾಲವದು. ಅಲ್ಲದೆ ಪ್ರಪಂಚದ ಯಾವುದೇ ಸಮಸ್ಯೆಗಳಿಗೂ ಒಂದಿಲ್ಲೊಂದು ಉತ್ತರವನ್ನು ಕೊಡಬಲ್ಲ 'ಗೂಗಲ್' ಎಂಬೊಂದು ಯಂತ್ರವಿದೆ ಎಂದರೆ ಕೇಳಿದವರು ಗಹಗಹನೇ ನಕ್ಕಿ ಹಾಗೆಂದವನನ್ನೊಮ್ಮೆ ಮೇಲಕ್ಕೂ ಕೆಳಕ್ಕೂ ಅನುಮಾನಾಸ್ಪದವಾಗಿ ನೋಡಿ ಸುಮ್ಮನಾಗಿಬಿಡುತ್ತಿದ್ದರು. ಒಟ್ಟಿನಲ್ಲಿ ಕಾಲ ವಸಂತವನ್ನು ಕಳೆದು ಉರಿ ಬೇಸಿಗೆಗೆ ಒಗ್ಗತೊಡಗಿತ್ತು.

ಅಪ್ಪ ಊರು ಬಿಟ್ಟು ಸಿಟಿ ಸೇರಿ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನದಲ್ಲಿರುವಾಗ ಸಹಜವಾಗಿಯೇ ಮಗನಿಗೆ ಹತ್ತಿರವಾದದ್ದು ಸಿಟಿಗೆ ಸಮೀಪದಲ್ಲಿದ್ದ ಅಮ್ಮನ ತವರು ಮೆನೆ. ಜೊತೆಗೆ ಅಲ್ಲಿನ ಸೀಬೆ ಹಲಸು ಹಾಗು ಕಿತ್ತಳೆ. ಪ್ರತಿ ಸೀಸನ್ ಗೆ ತಕ್ಕಂತೆ ಕರಾರುವಕ್ಕಾಗಿ ಹಾಜರಾಗುತಿದ್ದ ಈ ಹಣ್ಣುಗಳು ಮಗನನ್ನೂ ಅವುಗಳ ಆಗಮನಕ್ಕೆ ತಕ್ಕಂತೆ ಆ ಊರಿಗೆ ಬರಮಾಡಿಕೊಳ್ಳುತ್ತಿದ್ದವು. ಸೀಬೆ ಹಾಗು ಕಿತ್ತಳೆಗಳು ಮಳೆಗಾಲ ಹಾಗು ಬೇಸಿಗೆಗೊಮ್ಮೆ ಹಾಜರಾದರೆ ಹಲಸು ವರ್ಷಕೊಮ್ಮೆ ಮಾತ್ರ. ಅದೂ ಬೇಸಿಗೆ ಕಳೆದು ಮೆಳೆಗಾಲ ಶುರುವಾದ ಕೆಲ ತಿಂಗಳುಗಳ ನಡುವೆ ತನ್ನ ಕಾಲಘಟ್ಟವನ್ನು ಸೃಷ್ಟಿಸಿಕೊಂಡಿತ್ತು. ಬೇಸಿಗೆಯ ಶಾಲಾ ರಜ ದಿನಗಳೆಂದರೆ ಅಜ್ಜನ ಮನೆಯೆಂದು ಸ್ವಯಂ ಘೋಷಿಸಿಕೊಂಡಿದ್ದ ಮಗ ಮುಂದಿನ ಎರಡು ತಿಂಗಳು ಅಲ್ಲಿ ರಾಜನಂತೆ. ಬೇಸಿಗೆಯ ಹಣ್ಣುಗಳು ಮಳೆಗಾಲದ ಹಣ್ಣುಗಳಂತೆ ಎಲ್ಲೆಂದರಲ್ಲಿ ಸಮೃದ್ದವಾಗಿರದೆ ಅಲ್ಲೊಂದು ಇಲ್ಲೊಂದು ಎಂಬಂತೆ ಚದುರಿಕೊಂಡಿರುತಿದ್ದವು. ಆದರೇನಂತೆ, ಮೂರಡಿಯಂತಿದ್ದ ಮಗನ ದೇಹ ಯಾವ ಬೇಲಿಯ ಕನಿಷ್ಠ ಸಂಧಿಯನ್ನೂ ಸಲೀಸಾಗಿ ನುಸುಳಿ ಯಾರ ಮನೆಯ ತೋಟಕ್ಕಾದರೂ ಲಗ್ಗೆ ಹಿಟ್ಟುಬಿಡುತ್ತಿತ್ತು. ಹೀಗೆ ಕದ್ದು ಮುಚ್ಚಿ ತಿಂದ ಹಣ್ಣುಗಳು ಅದೆಷ್ಟೋ. ಈ ಮೂರೂ ಹಣ್ಣಿನಲ್ಲಿ ಯಾವುದೂ ಸಹ ಕದ್ದವ ಕಳ್ಳನೆಂದು ಗುರುತು ಮಾಡುವುದು ತುಸು ಕಷ್ಟವಾದರಿಂದ (ತಿಂದ ನಂತರ ಕೆಲ ಸಮಯದ ಮಟ್ಟಿಗೆ ಬರುವ ಹಣ್ಣಿನ ಘಮವನ್ನು ಹೊರತುಪಡಿಸಿ) ಇವುಗಳ ಕಳ್ಳಸಾಗಣೆ ತುಸು ಸರಳವೇ.

ಇವುಗಳೊಟ್ಟಿಗೆ ಮತ್ತೊಂದು ಹಣ್ಣಿತ್ತು. ಅದನ್ನು ತಿನ್ನಲು ಅತಿ ಇಷ್ಟ ಆದರೆ ಕದ್ದು ತಿಂದರೆ ಕಳ್ಳತನದ ಹಣೆಪಟ್ಟಿಯಿಂದ ಕಾಪಾಡಿಕೊಳ್ಳುವುದು ಬಲುಕಷ್ಟ. ಅಲ್ಲದೆ ಈ ಹಣ್ಣನು ತಿನ್ನಲು ಮನೆಯಿಂದ ತುಸು ದೂರವೂ ಹೋಗಬೇಕಿತ್ತು, ಅದೂ ಊರಿನ ಜಾತ್ರೆಗೆ ನೆಡೆದುಕೊಂಡು ಹೋಗುವ ಹಾದಿಯಲ್ಲಿ. ಆದರೆ ತೋಳಗಳ ಕಾಟ ಅಲ್ಲಿಯವರೆಗೂ ಹೋಗಲು ಬೇಕಿದ್ದ ಧೈರ್ಯವನ್ನು ಊರಿನ ಮಕ್ಕಳಿಗೆ ಅರಿಯದಂತೆಯೇ ಕಸಿದುಕೊಂಡುಬಿಟ್ಟಿತ್ತು. ಕದ್ದು ತಿಂದವ ತಾನು ಕಳ್ಳನಲ್ಲ ಎಂದು ಸುಳ್ಳಿನ ಬಾಯಿಂದ ಹೇಳಿದರೂ ಈ ಹಣ್ಣಿನ ಕಲೆ ನಾಲಿಗೆಯ ಮೇಲೆ ಸತ್ಯದ ಅಚ್ಚಿನಂತೆ ಕೂತುಬಿಡುತಿತ್ತು! ಯಸ್, ನೇರಳೆ ಹಣ್ಣು. ಭತ್ತದ ಗದ್ದೆಯ ಬದುಗಳಲ್ಲಿ ಅಥವಾ ಕಾಫೀ ತೋಟದ ಮದ್ಯೆ ಅಲ್ಲೊಂದೂ ಇಲ್ಲೊಂದೂ ಇರುತಿದ್ದ ಈ ಹಣ್ಣಿನ ಸ್ವಾದ ತಿಂದವನಿಗಷ್ಟೇ ಗೊತ್ತಿತ್ತು.

ಒಟ್ಟಿನಲ್ಲಿ ವಾರ್ಷಿಕ ರಜೆಯ ಎರಡು ತಿಂಗಳೂ ಅಜ್ಜನ ಮನೆಯಲ್ಲಿ ಚಿಂದಿ ಊಡಹಿಸುವ ಸಂಭ್ರಮಕ್ಕೆ ನೇರಳೆ ಹಣ್ಣಿನ ಆಸೆಯೂ ಕಾರಣವಾಗಿತ್ತು. ಆದರೆ ಈ ಹಣ್ಣನು ತಿನ್ನಲು ಎದುರಾಗುತ್ತಿದ್ದ ದ್ವಂದ್ವದ ಸ್ಥಿತಿ ಮಾತ್ರ ಅನುಭವಿಸಿದ ಚಡ್ಡಿ ಚಿಕ್ಕಣ್ಣಗಳಿಗಷ್ಟೇ ಗೊತ್ತು. ವಿಷಯವಿಷ್ಟೇ. ಜಾತ್ರೆ ಗೊತ್ತಾದ ಸುಮಾರು ಒಂದು ತಿಂಗಳ ಮೊದಲೇ ಹಳ್ಳಿಯ ಮನೆಗಳ ಪ್ರತಿ ವಸ್ತುವನ್ನೂ ಶುಚಿಮಾಡಿ ಹಾಗು ಹದಿನೈದು ದಿನದ ಮೊದಲು 'ಚೌತ' ಎಂಬ ನಿಯಮ/ವ್ರತ ಊರಿನ ಎಲ್ಲೆಲ್ಲೂ ಶುರುವಾಗುತ್ತಿತ್ತು. ಈ ಚೌತದಲ್ಲಿ ಮನೆಯವರ್ಯಾರು ಮಾಂಸಾಹಾರವಾಗಲಿ, ಅಂಗಡಿಯ ತಿಂಡಿ ತಿನಿಸುಗಳಾಗಲಿ, ತಲೆಯನ್ನು ಕ್ಷೌರ ಮಾಡಿಸಿಕೊಳ್ಳುವುದಾಗಲಿ ಕಡೆ ಪಕ್ಷ ಗಂಜಿ ಬಸಿದ ಅನ್ನವನ್ನೂ ಮಾಡುವಂತಿರಲಿಲ್ಲ (ಗಂಜಿ ಹಿಂಗಿಸಿದ ಅನ್ನವಾದರೆ ಓಕೆ). ಹೀಗೆ ಹದಿನೈದು ದಿವಸ ಯಾರು ಶ್ರದ್ದಾಭಕ್ತಿಯಿಂದ ನಿಯಮವನ್ನು ಪಾಲಿಸಿಕೊಂಡು ಇರುತ್ತಾರೋ ಅವರುಗಳು ಮಾತ್ರ ಊರಿನ ಜಾತ್ರೆಗೆ ಹೋಗಲು ಅರ್ಹರು.

ಮಕ್ಕಳಿಗಾದರೆ ದೊಡ್ಡವರೊಟ್ಟಿಗೆ ಊರ ಜಾತ್ರೆಯ ಹಾದಿಯಲ್ಲಿ ಹೋಗುವ ಅವಕಾಶ ಹಾಗು ನೇರಳೆ ಹಣ್ಣನು ಸವಿಯುವ ಭಾಗ್ಯ. ಹೀಗೆ ಹಬ್ಬದ ರಜೆಗೆ ಅಜ್ಜನ ಮನೆಗೆ ಬಂದು ಹದಿನೈದು ದಿವಸ ಅಂಗಡಿಯ ತಿಂಡಿಗಳೊಟ್ಟಿಗೆ ತಾತ್ಕಾಲಿಕ ವಿಚ್ಛೇದನವೋ ಅಥವಾ ಒಂದು ದಿವಸ ನೇರಳೆ ಹಣ್ಣನ್ನು ಸವಿಯುವ ಮಜವೋ ಎಂಬ ಸಂಕಷ್ಟದಲ್ಲಿ ಮಗ ಆರಿಸಿಕೊಳ್ಳುತಿದ್ದದು ಕೊನೆಗೆ ಊರ ಜಾತ್ರೆಯ ಚೌತವನ್ನೇ.

ಹೀಗೆ ಚೌತವೆಂಬ ವ್ರತಕ್ಕೆ ಸೇರಿ ‘ಛೆ! ಒಂದು ಪೆಪ್ಪೆರ್ಮೆಂಟಿನ ಗಾತ್ರಕ್ಕಿಂತಲೂ ಸಣ್ಣದಾದಾ ಹಣ್ಣನು ತಿನ್ನುವ ಆಸೆಯಲ್ಲಿ ಅಂಗಡಿ ತಿಂಡಿಗಳನ್ನು ಸವಿಯುವ ಸುಖವೇ ಇಲ್ಲವಾಹಿತೆ ಎಂದು ಮರುಗಿ ಧುಗುಡವೊಂದು ಮಗನ ಮನದೊಳಗೆ ಮನೆಮಾಡುತಿತ್ತು. ಆಗ ಸೋತು ಬಿದ್ದ ಮೊಗವನ್ನು ಕಂಡು ಅಜ್ಜಿ, ಸಂಜೆಯ ವೇಳೆಗೆ ಮನೆಯ ಹಿಂಬದಿಯ ಗೋಣಿಮರದ ಮೇಲೆ ಹಬ್ಬಿಕೊಂಡಿದ್ದ ವೀಳೇದೆಲೆಯ ಬಳ್ಳಿಯಿಂದ ಒಂದು ಎಲೆಯನ್ನು ಕಿತ್ತು ತಂದು ಅದರ ಮೇಲೆಲ್ಲಾ ಸಣ್ಣ ಸಣ್ಣ ತೂತುಗಳನ್ನು ಮಾಡಿ, ಒಲೆಯ ಮುಂದೆ ಮುದುಡಿ ಕೂತಿದ್ದ ಮೊಮ್ಮಗನ ಬಳಿಗೆ ಬಂದು, ಕೈಯಲ್ಲಿ ಹಿಡಿದ ಎಲೆಯನ್ನು ತಲೆಯಿಂದ ಪಾದದವರೆಗೂ ನೀಳಿಸುತ್ತಾ 'ಹೋದೋರ್ ಕಣ್ಣ್ , ಬಂದೋರ್ ಕಣ್ಣ್, ,' ಎಂದು ಶುರುಮಾಡಿದರೆ ಅದು 'ನರಿ ಕಣ್ಣ್ , ಕೋಳಿ ಕಣ್ಣ್' ಎಂದು ಪ್ರಾಣಿಗಳವೆರೆಗೂ ಬಂದು ನಿಲ್ಲುತಿತ್ತು. ಮಜವೆನ್ನಿಸುತಿದ್ದದ್ದು ಮಾತ್ರ ಆಕೆ ಅದ್ಯಾವ ಯಾವ ಕಣ್ಣುಗಳ ದೃಷ್ಟಿ ತೆಗೆಯುತ್ತಾಳೆ ಎಂಬ ಕುತೂಹಲದಲ್ಲೇ. ಅಲ್ಲದೆ ಮೊಮ್ಮಗನೂ ಸಹ ಮದ್ಯದಲ್ಲಿ ತನ್ನ ಇಚ್ಛೆಯ ಇಂಗಿತವನ್ನು ವ್ಯಕ್ತಪಡಿಸಿ 'ಗಿರೀಶನ ಕಣ್ಣ್, ಕಾರ್ತಿಕನ ಕಣ್ಣ್ , ಸಂದೀಪನ ಕಣ್ಣ್' ಎಂಬ ತನ್ನ ಸ್ನೇಹಿತರ ಕಣ್ಣುಗಳನ್ನೂ ಸೇರಿಸಿ ಆಕೆಯ ಕಣ್ಣಿನ ಪದ್ಯವನ್ನು ಸಾಧ್ಯವಾದಷ್ಟು ಹಿಗ್ಗಿಸುತ್ತಿದ್ದೆ. ನಂತರ ನೀಳಿಸಿದ ಎಲೆಯನ್ನು ಒಲೆಯ ಕೆಂಡದ ಮೇಲೆ ಹಾಕಿ ಅದು ಚಟ ಪಟನೆ ಸುಟ್ಟು ಸದ್ದುಮಾಡುತ್ತಿದ್ದಾಗ ಅಜ್ಜಿ ತನ್ನ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾ 'ಎಷ್ಟ್ ಕಣ್ಣ್ ಬಿದ್ದಿದಾವೆ ನೋಡು' ಎನ್ನುತ ಸುಟ್ಟು ಕರಕಲಾದ ಎಲೆಯ ಅಸ್ತಿಯ ತುದಿಯ ಕಪ್ಪು ಮಸಿಯನ್ನು ಒತ್ತಿ ಮೊಮ್ಮಗನ ಹಣೆಯ ಹಾಗು ಕಾಲಿನ ಪಾದದ ಮೇಲೂ ಒಂದೊಂದು ಚುಕ್ಕೆಯನ್ನು ಹಿಡುತಿದ್ದಳು. ಅದು ಹೆಗಲೇರಿದ ದೃಷ್ಟಿ ಕೆಳಗೆ ಬಿದ್ದ ಕಾರಣವೋ ಅಥವಾ ಆಕೆಯ ಪದ್ಯದ ಖುಷಿಯೋ ಏನೋ ಮಂದಹಾಸವೊಂದು ಮೊಮ್ಮಗನ ಮುಖದ ಮೇಲೆ ಮೂಡುತಿತ್ತು. ಹೀಗೆ ಹದಿನೈದು ದಿನಗಳಲ್ಲಿ ನನಗಾಗಿ ಕನಿಷ್ಠಪಕ್ಷ ಏಳೆಂಟು ವೀಳೇದೆಲೆಗಳ ದೇಹತ್ಯಾಗವಾದರೂ ಮೊಮ್ಮಗನಿಗಾಗಿ ಆಗುತ್ತಿತ್ತು. ಹೀಗೆ ಅಂಗಡಿ ತಿಂಡಿಗಳ ಪೋಷಣೆ ಇಲ್ಲದೆ ಕಷ್ಟಪಟ್ಟು ತಳ್ಳುತ್ತಿದ್ದ ದಿನಗಳಲ್ಲಿ ಕೊನೆಕೊನೆಗೆ ಕುಂತರೆ, ನಿಂತರೆ, ಅಲ್ಲದೆ ಮಲಗಿದರೆ ಕನಸ್ಸಿನಲ್ಲಿಯೂ ಸಹ ತಿಂಡಿಗಳೇ ಕಾಣುವಂತಾದ ಮೇಲೆ ಒಮ್ಮೊಮ್ಮೆ ಆದದ್ದು ಆಗಲಿ ಅಜ್ಜನ ಖಾಕಿ ಚಡ್ಡಿಯ ಜೇಬಿನಿಂದ ಚಿಲ್ಲರೆಯನ್ನು ಲಪಟಾಯಿಸಿ ಶುಂಠಿ ಪೆಪೆರ್ಮೆನ್ಟ್, ಬಾದಾಮಿ ಚಾಕಲೇಟು ಹಾಗು ಬಿಗ್ ಬಬೂಲ್ ಚೀವಿಂಗ್ ಗಮ್ ಗಳನ್ನು ಒಂದೇ ಬಾರಿಗೆ ಬಾಯಿಯೊಳಗೆ ತೂರಿಕೊಂಡು ನುಂಗಿಬಿಡಬೇಕೆಂಬ ಆರ್ತನಾದ ಒಳಗೊಳಗೇ ಮೂಡುತಿದ್ದರೂ 'ಅಂಗಡಿ ತಿಂಡಿ ತಿಂದು ಜಾತ್ರೆಗೆ ಬಂದ್ರೆ ದೇವಸ್ಥಾನದ ಜೇನುಗಳು ಅಟ್ಟಾಡಿಸ್ಕೊಂಡು ಕಚ್ಚುತ್ತವೆ' ಎಂಬ ಭಯಹುಟ್ಟಿಸುವ ಮಾತುಗಳನ್ನು ಕೇಳಿ ಅಂಗಡಿಗೆ ಹೋಗಬೇಕೋ ಅಥವಾ ತೆಪ್ಪಗೆ ಮನೆಯ ಊಟವನ್ನು ತಿಂದು ಇರಬೇಕೋ ಎಂಬ ಪೀಕಲಾಟ ಶುರುವಾಗುತ್ತಿತ್ತು. ಅಂತೂ ಇಂತೂ ದಿನಗಳು ಯುಗಗಳಂತೆ ಕಳೆದು ಹದಿನೈದು ದಿನದ ಚೌತ ಮುಗಿದು ಜಾತ್ರೆಯ ದಿನ ಬಂದೆ ಬಿಡುತಿತ್ತು. ರಾವಣನ ಕಠೋರ ತಪಸ್ಸಿಗೆ ಶಿವ ಪ್ರತ್ಯಕ್ಷನಾದದಂತೆ.

ಜಾತ್ರೆಯ ದಿನದಂದು ಪ್ಯಾಂಟು ಶರ್ಟು ಧರಿಸಿದ ಗಂಡಸರು ಉಸ್ತುವಾರಿಯನ್ನು ನೋಡಿಕೊಳ್ಳಲು ಬೇಗನೆ ಮನೆಯಿಂದ ಹೊರಟರೆ ಅವರ ಮಕ್ಕಳು ಚಡ್ಡಿಯನ್ನು ಹಾಗು ಅಪ್ಪಂದಿರು ಪಂಚೆಯನ್ನು ಉಟ್ಟು ಸೂರ್ಯ ಆಳೆತ್ತರಕ್ಕೆ ಬಂದ ಮೇಲೆ ಹೊರಡುತ್ತಿದ್ದರು. ಅಜ್ಜಂದಿರೊಟ್ಟಿಗೆ ಹೋದರೆ ನೇರಳೆಹಣ್ಣನ್ನು ಕಿತ್ತು ಕೊಡುವುದಲ್ಲದೆ ಸಾವಕಾಶವಾಗಿ ಹೊಟ್ಟೆ ಬಿರಿಯುವಂತೆ ತಿನ್ನಲು ಅನುವು ಮಾಡಿಕೊಡುತಿದ್ದರು ಎಂಬುದು ಮಕ್ಕಳು ಗಳಿಕೊಂಡಿದ್ದ ತರ್ಕ. ಎಲ್ಲರು ಹೊರಟ ಮೇಲೆ ಕೊನೆಯದಾಗಿ ಊರ ಹುಡುಗಿಯರು, ಹೆಂಗಸರು ಹಾಗು ಅಜ್ಜಿಯಂದಿರು ಓಟ್ಟಾಗಿ ಗುಸು ಗುಸು ಗುಡುತ್ತಾ ದಾರಿಯಲ್ಲಿ ಸಿಗುವ ಮನೆಗಳ ಮುಂದೆ ಅರಳಿರುವ ವಿಧ ವಿಧವಾದ ಹೂವುಗಳನ್ನು ಕೂಯ್ದು ತಲೆಗೆ ಮುಡಿದುಕೊಳ್ಳುತ್ತಾ, ಹಾದಿಯಲ್ಲಿ ಅವರಿಗಾಗೇ ಕಾಯುತ್ತಿದ್ದ ಇತರ ಹೆಂಗಸರನ್ನೂ ತಮ್ಮ ಗುಂಪಿನೊಳಗೆ ಸೇರಿಸಿಕೊಂಡು ಸಾಗುತಿದ್ದರು. ಇತ್ತ ಕಡೆ ಅಪ್ಪಂದಿರು ಹೋದ ನಂತರ ಅಜ್ಜಂದಿರೊಟ್ಟಿಗೆ ಹೊರಟ ಮೊಮ್ಮಕಳ ಪಡೆ ಅಕ್ಷರ ಸಹ ವಾನರರಂತೆ ಕುಣಿಯುತ್ತಾ, ಕೂಗುತ್ತ, ಹೊಟ್ಟೆಗೆ ವಾರದಿಂದ ಹಿಟ್ಟೇ ಸಿಕ್ಕಿಲ್ಲವೇನೋ ಎಂಬಂತೆ ನೇರಳೆ ಮರದ ರೆಂಬೆ ಕೊಂಬೆ ಗಳಲ್ಲಿ ಜೋತುಬಿದ್ದು ಹಣ್ಣು, ಕಾಯಿ ಎನ್ನದೆ ಸಿಕ್ಕ ಸಿಕ್ಕ ಗೊಂಚಲನ್ನು ಹಾಗೆಯೆ ಬಾಯಿಯ ಒಳಗೆ ಗಿಡುಗಿಕೊಂಡುಬಿಡುತ್ತಿದ್ದರು. ಹತ್ತಾರು ಹಣ್ಣಿನ ರಸ ಒಮ್ಮೆಲೇ ಬಾಯೊಳಗೆ ಕರಗಿ ಗಂಟಲಿನ ಒಳಗೆ ಇಳಿದರೆ, ಆಹಾ..! ಎಂದನಿಸಿ ಹಾಗೆಯೆ ಕಣ್ಣು ಮುಚ್ಚಿಕೊಂಡು ಕೆಲ ಕ್ಷಣ ತಮ್ಮನ್ನೇ ತಾವು ಮರೆತುಬಿಡುತ್ತಿದ್ದರು. 'ಕಸ-ಕಡ್ಡಿ, ಉಳ-ಗಿಳ ನೋಡ್ಕಂಡ್ ತಿನ್ನಿ' ಎಂದನ್ನುತಿದ್ದ ಅಜ್ಜನ ಮಾತಿಗೆ ಬೆಲೆಕೊಟ್ಟು ನಂತರದ ಗೊಂಚಲನ್ನು ಬಾಯಿಯ ಒಳಗೆ ಹಾಕಿಕೊಳ್ಳುವ ಮೊದಲು ಕಾಟಾಚಾರಕ್ಕೊಮ್ಮೆ 'ಊಫ್' ಎಂದರೆ ಬಾಯೊಳಗಿದ್ದ ಮೊದಲಿನ ಗೊಂಚಲಿನ ಹಣ್ಣಿನ ಬೀಜಗಳು ಪಟಪಟನೆ ಹೊರಗೆ ಉದುರುತಿದ್ದವು. ಅಷ್ಟರಲ್ಲಿ ಊರ ಹೆಂಗಳೆಯರ ಗುಂಪು ಮಕ್ಕಳಿದ್ದ ಸ್ಥಳದಲ್ಲಿಗೆ ಬಂದು ಕಡುನೀಲಿಯ ನಾಲಗೆ ಹಾಗು ಕಲೆ ಕಲೆಯಾದ ಬಟ್ಟೆಯನ್ನು ಕಂಡು ಕೆಂಡಾಮಂಡಲವಾಗಿ ಕೈಗೆ ಸಿಕ್ಕ ಕೋಲು ತಡಿಕೆಯನ್ನು ಅವರವರ ಮಕ್ಕಳ ಮೇಲೆ ಬೀಸತೊಡಗಿದರೆ ಮಕ್ಕಳು ಇದ್ದೆನೋ ಬಿದ್ದೆನೋ ಎಂಬಂತೆ ಮರದದಿಂದ ಜಿಗಿದು ಓಡುತಿದ್ದರು. ಅಂತೂ ದಾರಿಯ ನೇರಳೆ ಹಣ್ಣುಗಳ ಸೇವನೆಯ ನಂತರ ಬಹು ನಿರೀಕ್ಷಿತ ಜಾತ್ರೆ ಬಂದೆ ಬಿಡುತಿತ್ತು. ಅಲ್ಲಿಯವರೆಗೂ ಅಜ್ಜಂದಿರ ಕೈಯನ್ನು ಹಿಡಿದು ಬರುತಿದ್ದ ಮೊಮ್ಮಕ್ಕಳು ಜಾತ್ರೆಯ ಆವರಣದೊಳಗೆ ಕಾಲಿಡುತ್ತಿದ್ದಂತೆ ಕಾಣೆಯಾಗಿಬಿಡುತಿದ್ದವು. ಕಾರಣ ಜಾತ್ರೆಗಾಗೇ ಅಜ್ಜ, ಅಜ್ಜಿ, ಅತ್ತೆ ಮಾವ ಅಲ್ಲದೆ ಜಾತ್ರೆಗೆ ಬಂದ ನೆಂಟರಿಷ್ಟರ ಮುಂದೆಲ್ಲ ಕೈ ಒಡ್ಡಿ, ಪುಸಲಾಯಿಸಿ ಕಾಸನ್ನು ಪೀಕಿ, ಜೇಬನ್ನು ತುಂಬಿಸಿಕೊಂಡು ಬಂದ ಯಶಸ್ಸನ್ನು ಜಾತ್ರೆಯೊಳಗೆ ಉಡಾಯಿಸುವ ನಶೆಯಲ್ಲಿ. ಇತ್ತ ಕಡೆಯಿಂದ ಹೊರಟು ದೇವಾಲಯದ ಸುತ್ತ ಸುತ್ತಿ ಅತ್ತ ಕಡೆಯಿಂದ ಬಂದರೆ ಜೇಬಿನಲ್ಲಿದ್ದ ದುಡ್ಡು ಮಾಯವಾಗಿ, ಹದಿನೈದು ದಿವಸಗಳ ಕಾಲ ಅನುಭವಿಸಿದ ವನವಾಸಕ್ಕೆ ಚಾಕಲೇಟು, ಐಸ್ ಕ್ರೀಮ್, ಕಬ್ಬಿನ ಹಾಲು, ಬೋಂಡಾ ಪಕೋಡಗಳ ಮಿಶ್ರಣ ಹೊಟ್ಟೆಯೊಳಗಿನ ನೇರಳೆ ಹಣ್ಣಿನ ಪದರದ ಮೇಲೆ ಕೂತು ಗರಗುಡುವ ತೇಗು ಒಂದೆರೆಡು ಬಾರಿ ಬರುತ್ತಿತ್ತು.

ತುಸು ಸಮಯದ ನಂತರ ಅತಂತ್ರವಾಗಿ ಅಲೆಯುತ್ತಾ ಪ್ಲಾಸ್ಟಿಕ್ ಗೊಂಬೆಗಳು,ಪೀಪಿಗಳು ಹಾಗು ಕಂಪನಿಗಳೇ ನಾಚಿ ನೀರಾಗುವಂತ ಏರೋಪ್ಲೇನ್ ಹಾಗು ಹೆಲಿಕ್ಯಾಪ್ಟಾರ್ ಗಳನ್ನು ನೋಡಿ, ಕೆಲ ನಿಮಿಷಗಳ ಹಿಂದಷ್ಟೇ ಇದ್ದ ದುಡ್ಡನ್ನು ಎದ್ವಾ-ತದ್ವಾ ತಿಂದು ಖರ್ಚು ಮಾಡಿದಕ್ಕಾಗಿ ಕೊಂಚ ಪಶ್ಚಾತಾಪ ಪಟ್ಟು, ತಕ್ಷಣ ಅಜ್ಜನ ನೆನಪಾಗಿ, ಆ ಸಾವಿರ ಜನರ ಮದ್ಯೆ ಅಲೆಮಾರಿಯಂತೆ ಹುಡುಕಿ ಕೊನೆಗೆ ಬಿಳಿ ಪಂಚೆಯುಟ್ಟು, ಮೋಟು ಬೀಡಿಯನ್ನು ಎಳೆಯುತಿದ್ದ ಅಜ್ಜಂದಿರ ಗುಂಪಿನೊಳಗೆ ನುಗ್ಗಿ ಮೊದಲ ಬಾರಿಗೆ ಅಜ್ಜನನ್ನು ನೋಡುತ್ತಿರುವೆನೇನೋ ಎಂಬಂತೆ ಅವರ ಕಾಲಿನ ಬಳಿ ನಾಯಿಮರಿಗಳು ತಮ್ಮ ಮಾಲೀಕನ ಕಾಲಿಗೆ ಬೆನ್ನು ಉಜ್ಜುವಂತೆ ನುಲಿಯುತ್ತ ನಿಂತರೆ ಜೇಬಿನಲ್ಲಿದ್ದ ದುಡ್ಡನ್ನು ಗುಳುಂ ಮಾಡಿಹಾಗಿದೆ ಎಂಬ ಸೂಚನೆ ಅಜ್ಜನಿಗೆ ರವಾನೆಯಾಗಿಬಿಡುತ್ತಿತ್ತು. ಆದರೂ ಅವರು ತಮಗೇನು ತಿಳಿಯದೆಂಬಂತೆ 'ಇವತ್ತು ಗ್ಯಾರಂಟಿ ಮಳೆಯಾಗುತ್ತೆ.. ಊರ್ ಜಾತ್ರೆ ಅಂದ್ರೆ ಸುಮ್ನೇನಾ' ಎಂದು ಜಾತ್ರೆಯ ಬಗ್ಗೆ ಹಾಗು ದೇವರ ಬಗ್ಗೆ ಅಧಮ್ಯ ಭಕ್ತಿಯಿದ್ದ ಯಾರೋ ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದರು. ಮೊಮ್ಮಗ ಸಾಧ್ಯವಾದಷ್ಟು ಅಜ್ಜನ ಪ್ರದಕ್ಷಿಣೆ ಮಾಡಿದ ಮೇಲೆ ಅತಿ ಸಣ್ಣ ಧ್ವನಿಯಲ್ಲಿ 'ಅಜ್ಜಾ....' ಎಂದು ಶುರು ಮಾಡಿದರೆ 'ತೇರ್ ಎಳಿಯೋ ಟೈಮ್ ಆಯಿತು.. ಸುಮ್ನೆ ಇಲ್ಲೇ ಇದ್ರೆ ವಾಪಾಸ್ ಹೋಗಾಗ ಏನಾದ್ರು ಕೊಡುಸ್ತೀನಿ' ಎಂದು ಕೊನೆಯವರೆಗೂ ಅಜ್ಜಂದಿರ ದುಂಡುಕಲ್ಲಿನ ಸಭೆಯಲ್ಲಿಯೇ ಕೂರಬೇಕಾದ ಇಕ್ಕಟಿನ ಸ್ಥಿತಿಯಲ್ಲಿ ಮೊಮ್ಮಗನನ್ನು ಸಿಲುಕಿಸಿ ಬಿಡುತ್ತಿದ್ದರು ಅವನ ಅಜ್ಜ. ಮೊಮ್ಮಗ ಅವರುಗಳು ಎಳೆಯುವ ಮೋಟು ಬೀಡಿಯ ಕೆಂಪನೆಯ ತುದಿಯನ್ನೇ ತದೇಕಚಿತ್ತದಿಂದ ನೋಡಿ ಕುಳಿತು ಬಿಡುತ್ತಿದ್ದ, ಹತ್ತು ರೂಪಾಯಿಯ ಪ್ಲಾಸ್ಟಿಕ್ ಕಾರನ್ನು ಪಡೆಯುವ ಆಸೆಯಲ್ಲಿ.


ದೇವಾಲಯದ ಸುತ್ತಲೂ ಹತ್ತಾರು ಊರುಗಳ ಸಾವಿರಾರು ಜನರು ಸೇರಿದ್ದ ಆ ಜಾತ್ರೆಯನ್ನು ಎತ್ತರದ ಸ್ಥಳದಿಂದ ನೋಡುವ ಖುಷಿಯೇ ವಿಭಿನ್ನ. ದೇವಾಲಯದ ಒಂದು ಮೂಲೆಯಲ್ಲಿ ಕಟ್ಟಿ ನಿಲ್ಲಿಸಿದ್ದ ದೇವರ ತೇರು ಬಣ್ಣ ಬಣ್ಣದ ಹೂವು, ಕಾಗದ ಹಾಗು ಬಾಳೆಯ ಎಲೆಗಳಿಂದ ಶೃಂಗರಿಸಲ್ಪಟ್ಟಿರುತ್ತಿತು. ಅದರ ಮುಂದೆ ಊರ ಗಂಡಸರೆಲ್ಲರು ಕೋಲಾಟವಾಡಲು ಎರೆಡೆರೆಡು ಅಡಿಯ ರಾಶಿ ಕೋಲುಗಳನ್ನು ತುಂಡರಿಸಿ ಇಡಲಾಗಿರುತ್ತಿತು. ತೇರನ್ನು ಎಳೆಯಲು ಬಿಟ್ಟಿದ್ದ ದೊಡ್ಡ ಹಗ್ಗವನ್ನು ನೋಡಿ ತಾನೂ ಎಳೆಯಬೇಕೆಂಬ ಆಸೆ ಚಿಗುರೊಡೆದರೂ, ‘ನಾಟ್-ಎಲಿಜಿಬಲ್ ಹಿರಿಯರ ಕೆಟಗೆರಿ’ಯ ಒಳಗೆ ಮಕ್ಕಳನ್ನೂ ಸೇರಿಸಲಾಗಿದ್ದರಿಂದ ನಿಯಮಗಳ ಪ್ರಕಾರ ಮಕ್ಕಳು ಆ ಕಾರ್ಯಕ್ಕೆ ಅನರ್ಹರಾಗಿದ್ದವು.ಆದರೂ ಒಂದೆರೆಡು ಮಕ್ಕಳು ಮಾತ್ರ ಚಡ್ಡಿ ಜಾರಿದರೂ ಸರಿಯೇ ನಾವು ಎಳೆದು ತೋರಿಸುವೆವೆಂದು ಎದೆಯುಬ್ಬಿಸಿಕೊಂಡು ಹೋಗಿ ತೇರಿನ ಗಾಲಿ ಒಂದೆರೆಡು ಸುತ್ತು ಸುತ್ತುವುದರೊಳಗೆ ಎಳೆತದ ರಭಸಕ್ಕೆ ದೊಡ್ಡ ಪಾದಗಳ ಕೆಳಗೆ ಸಿಕ್ಕಿ ಅಪ್ಪಚ್ಚಿ ಆಗುವ ಮೊದಲೇ ಇದ್ದೆನೋ ಬಿದ್ದೆನೋ ಎಂದು ನುಸುಳಿ ಹೊರಬಂದುಬಿಡುತ್ತಿದ್ದರು.

ಹಳೆಕಾಲದ ಹಂಚಿನ ಮನೆಯಂತ್ತಿದ್ದ ಆ ದೇವಾಲಯದ ಒಳಗೆ ಬಲಕ್ಕೂ ಹಾಗು ಎಡಕ್ಕೂ ದೇವರುಗಳ ವಿಗ್ರಹಗಳು. ಹೆಚ್ಚಿನದವು ಈಶ್ವರನ ನಾಮಾಂಕಿತದ ದೇವರುಗಳೇ ಎಂಬ ನೆನಪು. ಈ ಊರು ಸಿಟಿಯಿಂದ ಹೆಚ್ಚೇನೂ ದೂರದಲ್ಲಿಲ್ಲದಿದ್ದರೂ ಸಿಟಿಯಲ್ಲಿರದ ಜಾತೀಯತೆ ಇಲ್ಲಿ ಮಾತ್ರ ಎದ್ದು ಕಾಣುತಿತ್ತು. ಗೌಡ, ಶೆಟ್ಟಿ, ಆಚಾರಿಗಳ ಮನೆ ಒಂದೆಡೆಯಾದರೆ ಹರಿಜನರ ಕೇರಿ ಮೂರ್ನಾಲ್ಕು ಕಿಲೋಮೀಟರ್ನ ಆಚೆ. ಆದರೆ ಗೌಡರ ಮನೆಯ ಕಾಫಿ ತೋಟದ ಚಿಗುರು ತೆಗೆಯುವುದು, ಗಿಡಗಳ ಬಡ್ಡೆ ಬಿಡಿಸಿ ಗೊಬ್ಬರ ಹಾಕುವುದು, ಹಣ್ಣು ಕುಯ್ಯುವುದು ಅಲ್ಲದೆ ಗದ್ದೆ ಕೆಲಸದ ನಾಟಿ, ಕುಯ್ಲು ಹಾಗು ಒಕ್ಕಲಾಟದ ಸಮಯಕ್ಕೂ ಹರಿಜನರ ನಿಂಗಿ, ಸಿದ್ದ, ಕೆಂಚ ಎನ್ನುವ ಎರಡಕ್ಷರದ ಮಾನವರೇ ಯಂತ್ರಗಳು. ಬೆಳಗಿನ ಜಾವ ಏಳಕ್ಕೆ ಸರಿಯಾಗಿ ಬಂದು ಅಕ್ಕಿ ರೊಟ್ಟಿ ಹಾಗು ಯಾವುದೊ ಒಂದು ಸಾರನ್ನು ಗಂಗಾಳದಲ್ಲಿ (ಅವರಿಗಾಗೇ ಮನೆಯೋರಗೆ ಒಂದು ಜೊತೆ ಇರುತ್ತಿದ್ದ ಗಂಗಾಳ ಹಾಗು ಲೋಟದಲ್ಲಿ ) ಹಾಕಿ ತರುತ್ತಿದ್ದ ಮನೆಯ ಅಮ್ಮನಿಂದ ಕಾಫಿಯನ್ನು ಕೇಳಿ ಕುಡಿದು, ವೀಳೇದೆಲೆ, ಅಡಿಕೆ, ಸುಣ್ಣ ಹಾಗು ಕಡ್ಡಿಪುಡಿಯನ್ನು ಬಾಯಿಗೆ ಹಾಕಿಕೊಂಡು ತೋಟ ಅಥವಾ ಗದ್ದೆಯ ಒಳಗೆ ಒಕ್ಕರೆ ಜೀವ ಪಣವಿಟ್ಟು ಗೇಯುತಿದ್ದರು, 'ಅಯ್ಯರ್ ಮನೆ ಚೆನ್ನಾಗಿದ್ರೆ ನಾವೂ ವೈನಾಗಿರ್ತಿವಿ' ಎಂದು ಹೇಳುತ್ತಾ. ಆದರೆ ಊರ ಜಾತ್ರೆಯಲ್ಲಿ ದೇವರ ಪೂಜೆ ಹಾಗು ಹಣ್ಣುಕಾಯಿಯ ಜವಾಬ್ದಾರಿ ಮಾತ್ರ ಹರಿಜನರದ್ದೇ. ಎಲ್ಲ ಜಾತಿಯ ಜನರು ತಂದು ಕೊಡುತ್ತಿದ್ದ ಹಣ್ಣು ಕಾಯಿಯನ್ನು ಹರಿಜನ ಪೂಜಾರಿಯೇ ತೆಗೆದುಕೊಂಡು, ಪೂಜೆ ಹಾಗು ಮಂಗಳಾರತಿಯನ್ನು ಮಾಡಿ ತೀರ್ಥವನ್ನು ಕೊಡುತ್ತಿದ್ದರು. ಎಲ್ಲರೂ ಧನ್ಯತೆಯಿಂದ ದೇವರ ಮುಂದೆ ಕೈಮುಗಿದು ತಲೆಬಾಗುತ್ತಿದ್ದರು.

ಇತ್ತಕಡೆ ಹರಿಜನರ ಕೇರಿಯಿಂದ ಬೂತಪ್ಪನ ಅಡ್ಡೆ ತಳಿರು ತೋರಣಗಳಿಂದ ಶೃಂಗಾರಗೊಂಡು ನಾಲ್ಕು ಜನರ ಹೆಗಲೇರಿ ನೆಡೆದರೆ ಅದರ ಮುಂದೆ ಡೊಳ್ಳು, ತಮಟೆ ಹಾಗು ತುತ್ತೂರಿಗಳ ಸದ್ದು ಜೊತೆಗೆ ಮಕ್ಕಳ ಕುಣಿತ. ವಯಸ್ಸು ಇನ್ನೂ ಹತ್ತು ದಾಟದಿದ್ದರೂ ತಮಟೆಯ ಸದ್ದಿಗೆ ಹಳ್ಳಿಯ ಮಟ್ಟಿಗೆ ಮೈಕಲ್ ಜ್ಯಾಕ್ಸನ್ ಅಂತೆಯೇ ಕುಣಿಯುವ ಮಕ್ಕಳನ್ನು ಅಜ್ಜನ ಪಂಜೆಯ ಹಿಂದೆ ಸರಿದು ಕದ್ದು ಮುಚ್ಚಿ ನೋಡುತಿದ್ದ ಮೊಮ್ಮಕಳಿಗೆ ನಾಚಿಕೆಯಾದಂತಾಗಿ ತಲೆ ತಗ್ಗುತ್ತಿತ್ತು. 'ನೋಡ್ರ ಹೆಂಗ್ ಕುಣಿತವೇ ಆ ಹುಡುಗ್ರು.. ನೀವು ಇದ್ದೀರಾ' ಎಂದ ಮತ್ತೊಬ್ಬ ಅಜ್ಜನನ್ನು ಮೊಮ್ಮಗ ಗುರಾಹಿಸಿ ಸುಮ್ಮನಾಗಿ ಬಿಡುತ್ತಿದ್ದ. ಆದರೂ ಒಳಗೊಳಗೇ ಅನ್ಯಾಯವಾಗಿ ಎಲ್ಲರ ಮುಂದೆ ಹೀರೋಗಿರಿಯ ಪಟ್ಟವನ್ನು ಅಲಂಕರಿಕೊಂಡ ಆ ಹುಡುಗರ ವಿರುದ್ಧವಾಗಿ ಎದ್ದ ಕಿಚ್ಚು ಮಾತ್ರ ಕಡಿಮೆಯಾಗುತ್ತಿರಲಿಲ್ಲ. ಬೂತಪ್ಪನ ಅಡ್ಡೆ ಕುಣಿಯುತ್ತಾ, ವಾಲುತ್ತಾ ದೇವಸ್ಥಾನದ ಮುಂಬದಿಗೆ ಬಂದು ಒಳಗಿರುವ ದೇವನಿಗೆ ನಮನ ಸಲ್ಲಿಸುವಂತೆ ಮೇಲಿಂದ ಕೆಳಕ್ಕೂ, ಕೆಳಗಿನಿಂದ ಮೇಲಕ್ಕೂ ತೂಗಿ ದೇವಸ್ಥಾನದ ಬಲದಿಂದ ಎಡಕ್ಕೆ ಮೂರು ಸುತ್ತುಗಳನ್ನು ಸುತ್ತಿ ಅದಕ್ಕಾಗೇ ಮಾಡಿದ ಮಂಟಪದಲ್ಲಿ ಕೂತುಬಿಡುತ್ತಿತ್ತು. ನೆರೆದವರೆಲ್ಲರೂ ಬೂತಪ್ಪನಿಗೂ ತಂದಿದ್ದ ಹಣ್ಣು ಕಾಯಿಯನ್ನು ಕೊಟ್ಟು ಪೂಜೆ ಮಾಡಿಸಿ ತಮ್ಮ ತಮ್ಮ ಸ್ಥಳಕ್ಕೆ ಬಂದು ಕೂತುಬಿಡುತ್ತಿದ್ದರು. ಅಷ್ಟರಲ್ಲಿ ಬೂತದ ಅಡ್ಡೆಯ ಪೂಜೆಯನ್ನು ಮಾಡುತ್ತಿದ್ದ ಪೂಜಾರಿ ಬಾಳೆಹಣ್ಣಿನ ಮೇಲೆ ಚುಚ್ಚಿದ ಗಂಧದ ಕಡ್ಡಿಯನ್ನು ಕಿತ್ತು ಅಡ್ಡೆಯ ಬೆಳ್ಳಿಯ ಭೂತಪ್ಪನ ಮುಖದ ಬಳಿಗೆ ತಂದು, ಭಕ್ತಿಯಿಂದ ನೀಳಿಸಿ, ಪುನ್ಹ ಮತ್ತದೇ ಬಾಳೆಹಣ್ಣುಗಳಿಗೆ ಚುಚ್ಚಿ ಪಕ್ಕದಲ್ಲಿದ್ದ ಚಾಟಿಯನು ಕೈಗೆ ತೆಗೆದುಕೊಂಡು ಅಡ್ಡೆಯ ಮುಂದೆ ನಿಲ್ಲುತ್ತಾನೆ. ನಿಂತಲ್ಲೇ ಕಾಲನ್ನು ಅದುರಿಸುತ್ತಾ ನಿಧಾನವಾಗಿ ಕಣ್ಣನು ಮುಚ್ಚುತ್ತಾನೆ. ಒಮ್ಮೆಲೇ ಬೂತಪ್ಪ ಆ ಪೂಜಾರಿಯ ಮೇಲೆ ಆಗಮನಗೊಂಡು ತನ್ನ ಕೈಯಲ್ಲಿದ್ದ ಚಾಟಿಯಿಂದ ರಪಾರನೆ ಮೈಯ ಮೇಲೆ ಹೋಡೆದುಕೊಳ್ಳುತ್ತದೆ ಹಾಗು ಒಂದೇ ಸಮನೆ ಕಿರುಚತೊಡಗುತ್ತದೆ. ಅಲ್ಲಿಯವರೆಗೂ ಮೈಕಲ್ ಜ್ಯಾಕ್ಸನ್ ರಂತೆ ಕುಣಿದು ಕುಪ್ಪಳಿಸುತ್ತಿದ್ದ ಗುಂಪು ಚಾಟಿಯ ಸದ್ದಿಗೆ ದಿಕ್ಕಾ ಪಾಲಾಗಿ ಹೆದರಿ ಓಡುವುದ ನೋಡಿ ನನಗೆ ಎಲ್ಲಿಲ್ಲದ ಸಂತೋಷ. ಹೊಟ್ಟೆಯೊಳಗಿನ ಕಿಚ್ಚಿನ ಜ್ವಾಲೆ ನಂದಿಹೋಗುತ್ತಿದ್ದ ನೆಮ್ಮದಿ. ಭೂತದ ಸದ್ದಿಗೆ ಒಂದು ನಿಮಿಷ ಸುತ್ತಲಿನ ಪರಿಸರ ತಣ್ಣಗಾಗುತ್ತದೆ. ನಂತರ ಒಬ್ಬೊರಾಗೆ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಬೂತಪ್ಪನ ಮುಂದೆ ಸಾಲಾಗಿ ನಿಂತುಕೊಳ್ಳುತ್ತಾರೆ.



ಅದು ಪೇಟೆಯ ವೈದ್ಯರು ಗುಣಪಡಿಸಲಾಗದ ಕಾಯಿಲೆಯಾಗಲಿ, ಮನೆಯ ಯಜಮಾನ ಹೆಂಡದ ಹೊಂಡಕ್ಕೆ ಬಿದ್ದು ಸಂಸಾರ ನರಕವಾದ ಗೋಳನ್ನು, ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿ ಫಸಲು ಕೈಕೊಡುವ ಆತಂಕವನ್ನು ಅಥವಾ ಮನೆಯ ಹಿರಿಯ ಮಗಳಿಗೊಂದು ತಕ್ಕ ವರ ಸಿಗದಿರುವುದನ್ನು ಊರ ಜನರು ಎಳೆ ಎಳೆಯಾಗಿ ಹೇಳುವುದನ್ನ ಗುಟುರುತ್ತಾ ಕೇಳುವ ಬೂತಪ್ಪ ಯಾವುದಾದರೊಂದು ಸಮಾಧಾನದ ಪರಿಹಾರವನ್ನು ಕರುಣಿಸಿ ಮಂತ್ರಿಸಿದ ನಿಂಬೆಹಣ್ಣನ್ನು ಕೈಗಿಡುತ್ತಿತ್ತು. ಈಗೆ ಕೊಡಲ್ಪಟ್ಟ ನಿಂಬೆಹಣ್ಣು ರೋಗವನ್ನು ವಾಸಿಪಡಿಸುವ ಔಷಧದಿಂದಿಡಿದು ಮನೆಗೆ ವರವನ್ನು ತರುವ ಜೋಯೀಸನಾಗಿಯೂ ಕಾರ್ಯ ನಿರ್ವಹಿಸುತ್ತಿತ್ತು. ಅಂತೂ ಊರ ಜನರ ಸಮಸ್ಯೆಗೆ 'ನಾನಿದ್ದೀನಿ, ಹೆದ್ರಬ್ಯಾಡ' ಎನ್ನುತ್ತಾ ಹೇಳಿ ಜನರಲ್ಲಿ ನೆಮ್ಮದಿಯ ನಿಟ್ಟುಸಿರೊಂದನ್ನು ಬಿಡಿಸುತ್ತಿದ್ದ, ಆ ಪುಟ್ಟ ಊರ ರಕ್ಷಕ ಬೂತಪ್ಪ. ಬೂತಪ್ಪ ಬರುವುದು ಹರಿಜನರ ಕೇರಿಯಿಂದ, ಆ ಕೇರಿಯ ಒಬ್ಬರನ್ನೂ ಮನೆಯ ಒಳಗೆ ಸೇರಿಸದ ನಮ್ಮವರು ಆ ದೇವರ ಮುಂದೆ ಮಾತ್ರ ಏತಕ್ಕೆ ಕೈ ಮುಗಿದು ನಡುಗುತ್ತಾ ನಿಲ್ಲುತ್ತಾರೆ ಎಂಬ ಅರೆದ್ವಂದ್ವದ ಪ್ರೆಶ್ನೆಯೊಂದು ಪ್ರತಿಬಾರಿಯೂ ಮೊಮ್ಮಗನಲ್ಲಿ ಮೂಡಿ ಮರೆಯಾಗುತ್ತಿತು.

ಊರ ಜನರೆಲ್ಲರಿಗೂ ತನ್ನ ಅಭಯದ ಹಸ್ತವಿರುವುದನ್ನು ನೆನಪಿಸಿ ಕೊನೆಗೆ ದೇವಾಲಯದ ಬಾಗಿಲ ಮುಂದೆ ಕೂಗುತ್ತಾ, ಚಾಟಿಯಲ್ಲಿ ಹೊಡೆದುಕೊಳ್ಳುತ್ತಾ ಬೂತಪ್ಪ ಹೊರಟುಬಿಡುತ್ತಿದ್ದ. ಅವನು ಹೋದ ಕೂಡಲೇ ತಮಟೆಯ ಸದ್ದುಗಳು ಮತ್ತೊಮೆ ಜೋರಾಗಿ ಮಾರ್ದನಿಸತೊಡಗಿ ಮಹಾ ಮಂಗಳಾರತಿಯಾಗುತಿತ್ತು. ತದಾನಂತರ ದೇವಾಲಯದ ಒಳಗಿರುವ ಉತ್ಸವ ಮೂರ್ತಿಯನ್ನು ಜನರು ಹೊತ್ತು ತಂದು ತೇರಿನ ಮೇಲಿ ಕೂರಿಸಿ, ಸಿಂಗರಿಸಿ, ನೂರಾರು ಕಾಯಿಗಳನ್ನು ಪಟ ಪಟನೆ ತೇರಿನ ಮುಂದೆ ಹೊಡೆದ ನಂತರ ಡೊಳ್ಳು ಮೇಳಗಳೊಟ್ಟಿಗೆ ಮೆರವಣಿಗೆ ಶುರುವಾಗಿ ಬಿಡುತ್ತಿತ್ತು. ಅಷ್ಟರಲ್ಲಿ ನಿಂತು ನಿಂತು ಸುಸ್ತಾಗಿ ಹೈರಾಣಾಗಿದ್ದ ಮೊಮ್ಮಗನನ್ನು ಅಜ್ಜ ಎತ್ತಿಕೊಂಡು ಹೆಗಲಮೇಲೆ ಕೂರಿಸಿ ದೇವರನ್ನು ನೋಡುವಂತೆ ಹೇಳುತ್ತಿದ್ದರು. ಯುವಕರೆಲ್ಲ 'ಹೈಸ, ಹೈಸ ' ಎಂದು ಏದುಸಿರಿನ ಧ್ವನಿಯಲ್ಲಿ ತಮ್ಮ ಶಕ್ತಿಯನ್ನೆಲ್ಲ ಮೀರಿ ಎಳೆಯುತಿದ್ದ ಮಕ್ಕಳ ತೊಡೆ ಗಾತ್ರದ ಹಗ್ಗವನ್ನು ಹಾಗು ಭೀಮಗಾತ್ರದ ತೇರಿನ ಗಾಲಿಗಳನ್ನೂ ನೋಡುತ್ತಾ ಮೊಮ್ಮಗ ನಿಲ್ಲುತ್ತಿದ್ದ. ತೇರು ತಮ್ಮ ಬಳಿಗೆ ಬರುವವರೆಗೂ ಕಾದು, ಅದು ಹತ್ತಿರ-ಹತ್ತಿರವಾಗುತ್ತಿದ್ದಂತೆ ಜನರೆಲ್ಲ ತಮ್ಮ ಕೈಯಲ್ಲಿದ್ದ ಮಂಡಕ್ಕಿ, ಬಾಳೆಹಣ್ಣುಗಳನ್ನು ದೇವರ ಮೂರ್ತಿಗೆ ಬೀಳುವಂತೆ ಎಸೆಯುತ್ತಿದ್ದರೆ ಅದು ಹೆಚ್ಚಾಗಿ ಹೋಗಿ ಬೀಳುತಿದ್ದದ್ದು ಮೂರ್ತಿಯ ಪಕ್ಕದ ಪೂಜಾರಿಯ ಬೆತ್ತಲೆ ಬೆನ್ನಿನ ಮೇಲೆಯೇ. ಆತ ಬಾಳೆಹಣ್ಣುಗಳಿಂದ ಅದೆಷ್ಟೇ ಏಟನ್ನು ತಿಂದರೂ ಒಂದೇ ಸಮನಾದ ಶ್ರದ್ದಾ ಭಕ್ತಿಯಿಂದ ದೇವರ ಪೂಜೆಯಲ್ಲಿ ನಿರತನಾಗಿರುತಿದ್ದ.

ತೇರು ದೇವಾಲಯವನ್ನು ಮೂರು ಸುತ್ತು ಸುತ್ತುವುದನ್ನೇ ಅಲ್ಲಿಯವರೆಗೂ ಕಾಯುತ್ತ ಕುಳಿತ್ತಿದ್ದವೇನೋ ಎಂಬಂತೆ ಮೋಡಗಳು ಒಂದರಿಂದೊಂದಂತೆ ಮೇಲೇರ ತೊಡಗುತ್ತವೆ. ಇನ್ನೇನು ದೇವರು ದೇವಾಲಯದ ಒಳಗೆ ಸೇರುತ್ತಿದೆ ಎಂಬುವುದರೊಳಗೆ ವಿಪರೀತವಾದ ಗಾಳಿಯ ಮಾರುತಗಳು ಬೀಸುತ್ತಾ ತಮ್ಮೊಟ್ಟಿಗೆ ಮಳೆಯ ಹನಿಗಳನ್ನೂ ಹೊತ್ತು ತರುತ್ತಿದ್ದವು. ನೋಡ ನೋಡುತ್ತಲೇ ಜಬಜಬನೆ ಮಳೆರಾಯ ಆಗಮಿಸಿಬಿಡುತ್ತಾನೆ. 'ನೋಡಿದ್ರ, ಆ ದ್ಯಾವ್ರು ಅಂದ್ರೆ ಸುಮ್ಕೆಯ.. ಮಳೆ ಬರುತ್ತೆ ಅಂದ್ರೆ ಬರುತ್ತೆ' ಕೊಂಚ ಸಮಯದ ಮೊದಲು ತಾನಾಡಿದ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತ ಆ ವ್ಯಕ್ತಿ, ಕಾಫಿ, ಟೀ ಹಾಗು ಬಜ್ಜಿಗಳನ್ನು ಮಾರುತಿದ್ದ ಅಂಗಡಿಯೊಳಗೆ ಓಡತೊಡಗುತ್ತಾನೆ. ಅಜ್ಜ ಮೊಮ್ಮಗನನ್ನು ಹೆಗಲಮೇಲೆ ಹೊತ್ತುಕೊಂಡು ದೇವಾಲಯದ ಒಳಗೆ ಓಡುತ್ತಿದ್ದರು. ಕನಿಷ್ಠ ಪಕ್ಷವೆಂದರೂ ಎರಡು ಘಂಟೆಗಳ ಕಾಲ ಒಂದೇ ಸಮನೆ ಸುರಿಯುತ್ತಿದ್ದ ಮಳೆಯ ರಭಸಕ್ಕೆ ಮಾರಾಟಕ್ಕಿಟ್ಟಿದ್ದ ಪುಟ್ಟ ಪುಟ್ಟ ಗೊಂಬೆಗಳೆಲ್ಲ ನೀರಿನಲ್ಲಿ ತೊಯ್ದು ಹೋಗುತ್ತಿದ್ದವು. ಸಮಯವನ್ನು ನೋಡಿ ಮತ್ತೊಮ್ಮೆ ಅಜ್ಜನಲ್ಲಿ ಆಟಿಕೆಯನ್ನು ಕೊಡಿಸಲು ಮೊಮ್ಮಗ ಕುಯ್ಗುಡುತ್ತಿದ್ದ. ಅಜ್ಜ ಸುಮ್ಮನಿರಬೇಕೆಂದೂ, ಮಳೆ ನಿಂತ ಮೇಲೆ ಗುರಿ ಹೊಡೆಯುತ್ತಾರೆಂದೂ ಹೇಳಿ ಊರಿನ ಯುವಕರು ಹೊತ್ತು ತಂದಿದ್ದ ಕೋವಿಯನ್ನು ತೋರಿಸುತ್ತಿದ್ದರು. ದೇವಾಲಯದ ಆವರಣದಲ್ಲಿ, ದೂರ ದೂರಕ್ಕೂ ಯಾವುದೇ ಊರುಗಳಿರದ ದಿಕ್ಕಿನಲ್ಲಿ ಸುಮಾರು ಹತ್ತಡಿಯ ಎರಡು ಕಂಬಗಳನ್ನು ನೆಟ್ಟು ಅವುಗಳ ನಡುವೆ ಹಗ್ಗವೊಂದನ್ನು ಕಟ್ಟಿ ಅದಕ್ಕೆ ಹಲಸು, ಚಕ್ಕೋತ, ಕುಂಬಳಕಾಯಿ ಹಾಗು ಇನ್ನಿತರೇ ಹಣ್ಣುಗಳನ್ನು ಇಳಿಬಿಡಲಾಗುತ್ತಿತ್ತು. ಆ ಕಂಬಗಳಿಂದ ಸುಮಾರು ಮೂವತ್ತರಿಂದ ನಲ್ವತ್ತು ಮೀಟರ್ ದೂರದಲ್ಲಿ ನಿಂತು ಕೋವಿಗಳಿಂದ ಆ ಹಣ್ಣುಗಳಿಗೆ ಗುರಿಯಿಟ್ಟು ಹೊಡೆಯಬೇಕಿತ್ತು. ಅದಕ್ಕಾಗೇ ಸುಮಾರು ಹತ್ತರಿಂದ ಹದಿನೈದು ಪರವಾನಿಗೆ ಪಡೆದ ಕೋವಿಗಳು ಹಾಗು ಅದರ ಮಾಲೀಕರು ತಯಾರಾಗಿರುತ್ತಿದರು. ಮಳೆ ನಿಂತು ಗುರಿಹೊಡೆಯಲು ಶುರುವಾದರೆ ಮೊಮ್ಮಗನ ಕೈಯ ಬೆರಳುಗಳು ಮಾತ್ರ ಕಿವಿಯ ಒಳಗೆ ಸೇರಿರುತ್ತಿದ್ದವು! ಪ್ರತಿ ನಿಖರವಾದ ಗುಂಡಿಗೆ ಎಲ್ಲರೂ ಚಪ್ಪಾಳೆ ಹೊಡೆಯುವುದನ್ನು ಕಂಡು ಅವುಗಳೂ ಹೊರಬಂದು ಒಂದೆರೆಡು ಚಪ್ಪಾಳೆಯನ್ನು ಬಾರಿಸಿ ನಂತರದ ಗುಂಡು ಹಾರುವ ಮೊದಲೇ ಮತ್ತದೇ ಕಿವಿಗಳನ್ನು ಸೇರಿಬಿಡುತ್ತಿದ್ದವು. ಹೀಗೆ ಸುಮಾರು ಹತ್ತಿಪ್ಪತ್ತು ಒಡೆತಗಳಲ್ಲಿ ಗುರಿಗಳು ಛಿದ್ರಗೊಂಡು ಕೆಳಗೆ ಬಿದ್ದು ಬಿಡುತ್ತಿದ್ದವು. ಅದಾದ ನಂತರ ಇತರ ದೇವರುಗಳ ಉತ್ಸವಮೂರ್ತಿಗಳನ್ನು ಹೊರತಂದು ಸಣ್ಣ ಸಣ್ಣ ಅಡ್ಡೆಯಲ್ಲಿ ಕಟ್ಟಿ (ಒಬ್ಬ ವ್ಯಕ್ತಿ ಒರುವಂತೆ) ದೇವಾಲಯದ ಸುತ್ತ ಸುತ್ತುವ ಪ್ರತೀತಿ. ಗುಂಡಿನ ಸದ್ದಿಗೆ ಕಾಣೆಯಾಗಿದ್ದ ಮೈಕಲ್ ಜಾಕ್ಸನ್ ರ ಗುಂಪು ಮತ್ತೊಮ್ಮೆ ಮೂಡುತ್ತಿದ್ದ ತಮಟೆಯ ಸದ್ದಿಗೆ ಪ್ರತ್ಯಕ್ಷವಾಗಿಬಿಡುತಿತ್ತು. ದೇವರ ಅಡ್ಡೆಗಳು ದೇವಾಲಯದ ಸುತ್ತ ಪ್ರದಕ್ಷಿಣೆ ಮುಗಿಸಿ ಅವುಗಳನ್ನು ಪುನ್ಹ ಸ್ವಸ್ಥಾನಕ್ಕೆ ಮರಳಿಸಿದ ಮೇಲೆ ಕೋಲುಗಳ ರಾಶಿಯಿಂದ ಜೋಡಿ ಕೋಲುಗಲು ಊರ ಗಂಡಸರುಗಳ ಕೈ ಸೇರುತ್ತಿದ್ದವು. ಸುಮಾರು ಇಪ್ಪತ್ತರಿಂದ ಇಪ್ಪತೈದು ಅಡಿಯ ವೃತ್ತವನ್ನು ನಿರ್ಮಿಸಿ ಅತಿ ಸರಳ ಹೆಜ್ಜೆಗಳನ್ನು ಹಾಕುತ್ತ ತಮಟೆಯ ಸದ್ದಿಗೆ ವೃತ್ತವು ನಿಧಾನವಾಗಿ ಸುತ್ತುವುದನ್ನು ನೋಡುವದೇ ಕಣ್ಣಿಗೊಂಡು ಹಬ್ಬ. ಕೊನೆಯದಾಗಿ ಎಲ್ಲ ವಾದ್ಯಗಳಿಂದ ಮೂಡುವ ಸದ್ದಿಗೆ ಗೌಡ, ಆಚಾರಿ, ಶೆಟ್ಟಿ ಎನ್ನದೆ ಹರಿಜನರೂ ಸಹ ಒಟ್ಟಾಗಿ ಕುಣಿದು ಕುಪ್ಪಳಿಸುತ್ತಿದ್ದರು.



ಹೀಗೆ ಊರ ಹಾದಿಯ ನೇರಳೆ ಮರದಿಂದ ಶುರುವಾದ ಜಾತ್ರೆಯ ಖುಷಿ ಅಜ್ಜನ ಚೆಡ್ಡಿಯ ಜೇಬಿನಿಂದ ನೋಟುಗಳ ಕಂತೆಯನ್ನು ಹೊರತೆಗೆದು ಮೊಮ್ಮಗನಿಗೊಂದು ಆಟಿಕೆಯನ್ನು ಕೊಡಿಸುವ ವರೆಗೂ ಇರುತ್ತಿತ್ತು. ಬಳಿಕ ಮುಂದಿನ ವರ್ಷದ ಜಾತ್ರೆಗೆ ಕಾಲಗಣನೆ ಆರಂಭವಾಗುತ್ತಿತ್ತು.

ಕಾಲ ಉರುಳಿದೆ. ಅಂದಿನ ಮಕ್ಕಳು ಇಂದು ಅಪ್ಪಂದಿರಾಗಿ, ಅಪ್ಪಂದಿರು ಅಜ್ಜಂದಿರಾಗಿ, ಅಜ್ಜಂದಿರು ಮರೆಯಾಗಿ ಕೇವಲ ನೆನಪಾಗಿ ಉಳಿದಿದ್ದಾರೆ. ಅವರೊಟ್ಟಿಗೆ ತಾವು ಉಳಿಸಿ ಬೆಳೆಸಿ ತಂದ ಒಂದು ಆಚರಣೆಗಳನ್ನೂ ಕೊಂಡು ಒಯ್ದಿದ್ದಾರೆ. ಆ ಊರಿನ ಇಂದಿನ ಯುವಕರಲ್ಲಿ ಬೂತಪ್ಪನ ಮೇಲಾಗಲಿ ಅಥವಾ ದೇವಾಲಯದ ದೇವರ ಮೇಲಾಗಲಿ ಇರಬೇಕಾದ ಕನಿಷ್ಠ ಭಯ ಭಕ್ತಿಯೂ ಇರದಂತಾಗಿದೆ. ಅಂದು ಹರಿಜನ ಹಾಗು ಗೌಡರ ನಡುವೆ ಅದೆಷ್ಟೇ ಜಾತೀಯತೆ ಇದ್ದರೂ ತೋಟದ ಕೆಲಸದ ನೆಪದಲ್ಲಿ, ಭತ್ತದ ಒಕ್ಕಲಾಟದ ರೂಪದಲ್ಲಾದರೂ ಎಲ್ಲರೂ ಒಂದಾಗಿರುತ್ತಿದ್ದರು. ಹರಿಜನರು ನೆಟ್ಟಿ ಬಿತ್ತಿದ ಅಕ್ಕಿಯ ಅಗಳುಗಳನ್ನೇ ಮನೆಯ ದೇವರಿಗೆ ಅರ್ಪಿಸುತಿದ್ದ ಇತರೆ ಪಂಗಡದ ಜನರ ಮನದೊಳಗೆ ಕೊಂಚವೂ ಬೇಧ ಭಾವದ ತಾರತಮ್ಯವಿತ್ತೆಂದು ಹೇಳಲಾಗುವುದಿಲ್ಲ. ಹರಿಜನರೂ ತಮ್ಮ ಒಡೆಯನಿಗೆ ಕಾಯಿಲೆ, ರೋಗ ರುಜಿನಗಳು ಬಂದರೆ ಕೂಡಲೇ ಬೂತಪ್ಪನ ಮುಂದೆ ಬಂದು ಅವನನ್ನು ಸಾಧ್ಯವಾದಷ್ಟು ಬೈದು ಬೇಗನೆ ಗುಣಮುಖ ಮಾಡಬೇಕೆಂಬ ಕೋರಿಕೆಯನ್ನು ಇಟ್ಟು ಹರಕೆಯನ್ನು ಹೊರುತ್ತಿದ್ದರು. ಊರ ಜಾತ್ರೆ ಈ ಎಲ್ಲಾ ಜನರನ್ನು ಒಂದಾಗಿಸುತ್ತಿತು. ಇಂದು ಅದೇ ದೇವಾಲಯವನ್ನು ಕೆಡವಿ ಒಂದು ನವ ದೇವಾಲಯವನ್ನು ಕಟ್ಟುವ ಆಲೋಚನೆ ಊರಿನವರಿಗೆ. ಅದಾಗಲೇ ದೇವಾಲಯವನ್ನು ಕೆಡವಿ ಹೊಸದಾದ ಗೋಡೆಗಳೂ ಮೇಲೆದ್ದಿವೆ. ಆ ಕೆಲಸಕ್ಕಾಗೇ ಅಧ್ಯಕ್ಷ ಉಪಾದ್ಯಕ್ಷರನ್ನೂ ಆರಿಸಲಾಗಿದೆ. ಈಗ ಏನಿದ್ದರೂ 'ನೀ ಅಷ್ಟು ಕೊಡು, ಅವ ಅಷ್ಟು ಕೊಡಲಿ' ಎಂಬ ಹಣದ ಮಾತುಗಳೇ ಎಲ್ಲೆಲ್ಲೂ ಹರಿದ್ದಾಡುತ್ತಿವೆ. ಅಲ್ಲದೆ ಹೊಸ ದೇವಾಲಯದ ಒಳಗಿನ ಪೂಜೆ ನಮ್ಮ ಜಾತಿಯವರೇ ಮಾಡಬೇಕೆಂಬ ವಾದಗಳೂ ಮೂಡಿ ವಿಷಯ ಕೋರ್ಟಿನ ಮೆಟ್ಟಿಲನ್ನೂ ಏರಿದೆ.. ಈ ಎಲ್ಲಾ ಬೆಳವಣಿಗೆಗಳಿಂದ ಸುಮಾರು ಏಳೆಂಟು ವರ್ಷಗಳಿಂದ ಆ ಊರಿನ ಜಾತ್ರೆ ಕೇವಲ ನೆನಪಾಗೆ ಉಳಿದಿದೆ. ಬೈಕು ಕಾರುಗಳ ಅಬ್ಬರದಲ್ಲಿ ಊರ ಜಾತ್ರೆಯ ಕಾಲು ದಾರಿಯನ್ನು ಮುಚ್ಚಿ ಈಗ ಅಲ್ಲಿ ಯಾರೋ ತೋಟವನ್ನು ಮಾಡಿಕೊಂಡಿದ್ದಾರೆ. ಮಂಗಗಳ ಕಾಟ ಜಾಸ್ತಿಯಾಗಿದೆ ಎಂದು ಅಳಿದುಳಿದ ಒಂದೆರೆಡು ನೇರಳೆ ಮರಗಳನ್ನೂ ನೆಲಸಮ ಮಾಡಿದ್ದಾರೆ. ಇಂದು ಹಬ್ಬವೆಂದರೆ ಹೆಂಡ ತುಂಡುಗಳೆಂದು ಬೆಳೆಯುತ್ತಿರುವ ದಿನಗಳಲ್ಲಿ ಅಂದು ಚೌತ, ಜಾತ್ರೆಯ ಜೇನು, ಬೂತಪ್ಪ ಎಂಬ ಭಯಹುಟ್ಟಿಸುವ ಕಟ್ಟು ನಿಟ್ಟಿನ ಆಚರಣೆಯೇ ಸುಂದರವಾಗಿದ್ದಿತು ಎಂದನಿಸುತ್ತದೆ. ವಸಂತವನ್ನು ಕಳೆದುಕೊಂಡ ಕಾಲವಿಂದು ಉರಿಬಿಸಿಲ ಧಗೆಯಲ್ಲಿ ಬೇಯತೊಡಗಿದೆ.



No comments:

Post a Comment