Friday, December 9, 2016

ಪ್ರಸ್ತುತ : ಎಕ್ಸ್ ಬಾಕ್ಸ್, ಪ್ಲೇ ಸ್ಟೇಷನ್ಗಳ ಯುಗದಲ್ಲಿ ಮೂಡಬಲ್ಲರೇ ನಾಳಿನ ನಮ್ಮ ನಾಯಕರು?

ಬೆಳೆಯುವ ಸಸಿ ಮೊಳಕೆಯಲ್ಲಿ. ನಾಳಿನ ನಾವು ಇಂದಿನ ಗ್ರಹಿಕೆಯಲ್ಲಿ!

ಕೆಲ ತಿಂಗಳ ಹಿಂದಷ್ಟೇ ಅಮೇರಿಕಾದ ಒರ್ಲ್ಯಾಂಡೊದಲ್ಲಿ ನೆಡೆದ ಶೂಟೌಟ್ ಗೆ ಕಾರಣೀಕರ್ತನಾದ ಯುವಕನಾಗಲಿ ಅಥವಾ ಶಾಲೆಯೊಳಗೆ ಗನ್ ಅನ್ನು ತಂದು ತನ್ನ ಸಹಪಾಠಿಗಳ ಮೇಲೇ ಗುಂಡಿನ ಸುರಿಮಳೆಗೈದ ಹುಡುಗನೇ ಆಗಲಿ ಅಥವಾ ಪ್ರಪಂಚದ ಮತ್ಯಾವುದೇ ಮೂಲೆಯಲ್ಲಿ ಹಿಂಸಾತ್ಮಕ ಕೃತ್ಯಗಳು ಜರುಗಿದಾಗ ಖೇದನೀಯವೆಂಬಂತೆ ಯುವಕರ ಹೆಸರುಗಳೇ ಹೆಚ್ಚಾಗಿ ಕೇಳಿ ಬಂದಾಗಲೆಲ್ಲ ಮೇಲಿನ ವಾಕ್ಯ ಚಿತ್ತದ ಸುತ್ತ ಸುತ್ತುತ್ತದೆ. ಉಜ್ವಲ ಭವಿಷ್ಯದ ಕನಸನ್ನು ಹೊತ್ತು ಬದುಕನ್ನು ಕಟ್ಟಿಕೊಳ್ಳಬೇಕಾದ ಕಾಲದಲ್ಲಿ ಇಂತಹ ವಿದ್ವಂಸಕ ಕೃತ್ಯಗಳನ್ನು ಮಾಡಹೊರಟಿರುವ ಯುವಕರ ಮನಸ್ಥಿತಿಯು ಅದೆಷ್ಟರ ಮಟ್ಟಿಗೆ ಅಲ್ಲೊಲ್ಲ ಕಲ್ಲೋಲವಾಗಿರಬಹುದು ಎಂದನಿಸುತ್ತದೆ. ಜೀವನವೇ ಏನೆಂದು ಪಕ್ವವಾಗಿ ಅರಿತಿರದ ವಯಸ್ಸಿನಲ್ಲಿ ಇನ್ನೊಂದು ಜೀವವನ್ನು/ಜೀವಗಳನ್ನು ಕಡ್ಡಿ ಮುರಿದಂತೆ ಮುರಿದು ಬಿಸಾಡುವ ಮನೋಭಾವನೆ ಯುವಕರಲ್ಲಿ ಅದೇಗೆ ಮೂಡುತ್ತದೆ? ಆಧುನಿಕ ಜೀವನ ಶೈಲಿಯೇ ಇದಕ್ಕೆ ಪ್ರತ್ಯಕ್ಷ ಕಾರಣವೆ?
ಇಂದಿನ ಯುವಕರೇ ನಾಳಿನ ನಾಯಕರು. ದೇಶ ಕಟ್ಟುವವರು. ದಿನದ ಇಪ್ಪತ್ನಾಲ್ಕೂ ಘಂಟೆಯೂ ಬಾಂಬು ಮಚ್ಚುಗಳಿಂದ ಆವಿಷ್ಕರಿಸಿದ ಆನ್ಲೈನ್ ಆಟಗಳನ್ನೇ ಆಡುತ್ತಾ ಕೂರುವ ನಾವುಗಳು (ಯುವಕರು) ನಾಳಿನ ದೇಶವನ್ನು ಕಟ್ಟುವ ಜವಾಬ್ದಾರಿಯನ್ನು ಹೊರಬಲ್ಲೆವಾ? ನಾಯಕರಿಗಿರಬೇಕಾದ ಅಂತಹ ಶಾಂತಿ, ತಾಳ್ಮೆ, ಸಂಯಮ ಇಂತದ ವಾತಾವರದಲ್ಲಿ ಬೆಳೆಯುವ ನಮ್ಮಲ್ಲಿ ಮೂಡಬಲ್ಲದೆ?

ಮಾನವ ಸಂಪೂರ್ಣ ಯಾಂತ್ರಿಕತೆಯ ಜಗತ್ತನ್ನು ಸೃಷ್ಟಿಸುವ ಸನ್ನಿಹದಲ್ಲಿದ್ದಾನೆ. ಆಟ-ಪಾಠಗಳಿಂದಿಡಿದು ಊಟ-ನಿದ್ರೆಗಳಿಗೂ ಇಂದು ಯಂತ್ರಗಳು ಬಂದಿವೆ. ಕೆಸರುಗದ್ದೆಯಲ್ಲಿ ಕುಣಿದು ಕುಪ್ಪಳಿಸಿ ಬಂದು, ಅಮ್ಮನ ಕೈತುತ್ತು ತಿಂದು, ಮನೆಯ ಮಾಳಿಗೆಯ ಮೇಲೆ ಚಂದಮಾಮನನ್ನು ನೋಡುತ್ತಾ ತಂಪಾದ ರಾತ್ರಿಯಲ್ಲಿ ಮಲಗುವ ದಿನಗಳು ಮುಗಿದು ಅದೆಷ್ಟೋ ದಿನಗಳಾಗಿವೆ. ಅದ್ಯಾವುದೋ ದೇಶದಲ್ಲಿ ಅದೆಷ್ಟೋ ದಿನಗಳ ಹಿಂದೆ ಸುತ್ತಿ ಕೊಟ್ಟ ಒಣ ರೊಟ್ಟಿಯನ್ನು ಖರೀದಿಸಿ ತಂದು, ಓವನ್ನಲ್ಲಿ ಇಟ್ಟು ಹೊಟ್ಟೆ ಕೆಟ್ಟು, ನಾಳೆ ಅದನ್ನು ಬಿಟ್ಟು ಮತ್ತೊಂದು ದೇಶದ ಮತ್ಯಾವುದೋ ರೊಟ್ಟಿಗೆ ಹಣವನ್ನು ಹೆಚ್ಚಾಗಿ ಕೊಟ್ಟು ಎಸಿ ರೂಮುಗಳಲ್ಲಿ ಜೀವನ ತಳ್ಳುವ ಮಂದಿಗಳು ಇಂದು ಹೇರಳವಾಗುತ್ತಿದ್ದಾರೆ. ಕೆಲಸದ ಕಾರಣಕ್ಕಾಗಿ ಹೆಚ್ಚಾಗಿ ಮನೆಯಿಂದ ದೂರವಿದ್ದು ನಗರಗಳಲ್ಲಿ ಬದುಕುವ ಇಂದಿನ ಯುವಜನತೆ ಅಮ್ಮನ ತುತ್ತಾಗಲಿ ಅಥವಾ ತುಂಬು ಕುಟುಂಬದ ಪರಿಸರವನ್ನಾಗಲಿ ಆಸ್ವಾದಿಸದೆ ಬೆಳೆಯುತ್ತಿದ್ದಾರೆ. ಹೆಚ್ಚೆಂದರೆ ವರ್ಷಕ್ಕೆ ಒಮ್ಮೆಯೊ ಅಥವಾ ಎರಡು ಬಾರಿ ಊರಿಗೆ ಹೋಗಿಬಂದರೆ ಸಾಕೆನ್ನುವ ಮನೋಭಾವ. ಬಂದರೂ ಊರಿನ ಸಮಸ್ಯೆಗಳಿಗೆ ಬೇಸತ್ತು ಆದಷ್ಟು ಬೇಗ ಕಾಲು ಕೀಳುವ ಹುನ್ನಾರದಲ್ಲಿರುತ್ತಾರೆ. ಒಮ್ಮೆ ಊರು ಬಿಟ್ಟು ನಗರ ಸೇರಿದರೆ ಮುಂದಿನ ಆರು ತಿಂಗಳೋ ಅಥವಾ ವರ್ಷವೋ ಊರ ಕಡೆ ತಲೆ ಹಾಕರು. 'ಬೇಕಾದ್ರೆ ನೀವೇ ಬನ್ನಿ ಎನ್ನುತ' ಪೋಷಕರನ್ನು ಕೆಲದಿನಗಳ ಮಟ್ಟಿಗೆ ನಗರಕ್ಕೆ ಕರೆಸಿಕೊಳ್ಳುತ್ತಾರೆ. ಹೀಗೆ ನಗರವಾಸಿಯಾಗಿ ಕೆಲದಿನಗಳಲ್ಲೇ ಮದುವೆ. ಮದುವೆಯ ಕೆಲ ವರ್ಷಗಳಲ್ಲೇ ಮಗು ಅಥವಾ ಮಕ್ಕಳು.

ಈ ಮಕ್ಕಳೇ ಯಾಂತ್ರಿಕತೆಯ ಲೋಕಕ್ಕೆ ತಮ್ಮನ್ನು ದಬ್ಬಿಸಿಕೊಳ್ಳುವ ನಾಳಿನ ಪ್ರಜೆಗಳು!

ಒಂದು ಜೀವಕ್ಕೆ ಜನ್ಮವಿತ್ತ ಮಾತ್ರಕ್ಕೆ ಪೋಷಕರಿಗೆ ಮಕ್ಕಳ ಮೇಲೆ, ಅವರ ಭವಿಷ್ಯದ ಮೇಲೆ ಮೂಡುವ ಕಾಳಜಿ ಅತಿಸಹಜ. ಆದರೆ ಇದು ಇತ್ತೀಚಿನ ದಿನಗಳಲ್ಲಿ ತೀರಾ ಅತಿರೇಕವಾಗಿದೆ. 'ಅಮ್ಮಾ ' ಎಂಬ ಪದವನ್ನೇ ಸರಿಯಾಗಿ ಉಚ್ಚರಿಸಲಾಗದ ವಯಸ್ಸಿಗೆ ಬೇಬಿ ಸಿಟ್ಟಿಂಗ್ಸ್ ಎಂಬ ಕೊಪಕ್ಕೆ ಕಳುಹಿಸಿ ತೂಕಡಿಸುವ ತಲೆಯೊಳಗೆ ನೂರಾರು ಹೊಸ ಪದಗಳನ್ನು ತುಂಬಲು ಹೇಳಿ ಆಫೀಸಿಗೆ ಹೊರಟರೆ ಪೋಷಕರ ಕರ್ತ್ಯವ ಮುಗಿದಂತೆ. ಸುಖಾ-ಸುಮ್ಮನೆ ದುಂದುವೆಚ್ಚಗಳನ್ನು ಹೆಚ್ಚಾಗಿಸಿಕೊಂಡಿರುವ ಇಂದಿನ ಪೋಷಕರು ‘ಅನಿವಾರ್ಯತೆ’ಯ ನೆಪವೊಡ್ಡಿ ಮಕ್ಕಳಿಂದ ದೂರ ಉಳಿಯುತ್ತಾರೆ. ಹೊಸಲೋಕವನ್ನು ವಿಸ್ಮಯ ಕಣ್ಣುಗಳಿಂದ ನೋಡುವ ಆ ಕಂದಮ್ಮಗಳು ಇನ್ಯಾರದ್ದೋ ತೊಡೆಯ ಮೇಲೆ ಆಡಿ ಬೆಳೆಯುತ್ತವೆ. ಅಮ್ಮನ ಸೀರೆಯ ಸೆರಗನ್ನು ಬಾಯೊಳಗೆ ತೂರಿಕೊಂಡು ಮೆನೆಯ ಸುತ್ತೆಲ್ಲ ಆಕೆಯ ಹಿಂದೆ ಓಡುತ್ತಾ, ಬಿದ್ದು ಎದ್ದು, ಮತ್ತು ಹೆದರಿ ಅತ್ತರೆ, ಅಮ್ಮ ಮಗುವನ್ನು ಎದೆಗವುಚಿಕೊಂಡು ಸಮಾಧಾನ ಮಾಡಿದರೆ, ಆಹಾ..ಮಗುವಿಗೆ ಅಲ್ಲೇ ಒಂದು ಧೈರ್ಯ. ಮನದೊಳಗಿನ ಅಂಜಿಕೆ ಭಯವೆಲ್ಲ ಮಾಯಾ! ಆದರೆ ಅದು ಇಂದಿನ ಎಳೆಯ ಕಂದಮ್ಮಗಳಿಗೆ ಸಿಗದಾಗುತ್ತಿದೆ. ಮುಕ್ತವಾಗಿ ಅಳಲೂ ಅವಕ್ಕೆ ಭಯ. ಎಳೆಯ ವಯಸ್ಸಿನಲ್ಲಿ ಮೂಡುವ ಎಳೆಯ ಭಾವನೆಗಳಿಗೆ ಇನ್ಯಾರೋ ಒಬ್ಬರು ಬ್ರೇಕ್ ಹಾಕುತ್ತಾರೆ. ಡಿಸಿಪ್ಲಿನ್ನನ್ನ ಕಲಿಸುವ ಸಾಹಸದಲ್ಲಿ ಹೀಗೆ ದಿನವೆಲ್ಲಾ ಹೊರಗಿಟ್ಟು ಮಕ್ಕಳನ್ನು ಒಳಗೊಳಗೇ ಒಂಟಿಗಾರನನ್ನಾಗಿ ಮಾಡುತ್ತಿದ್ದಾರೆ ಆಧುನಿಕ ಪೋಷಕರು. ಒಂದು ತುಂಬು ಸಂಸಾರವಾದರೆ ಮಕ್ಕಳಿಗೆ ಅಜ್ಜಿಯ ಕಥೆಯೋ ಅಥವಾ ಅಜ್ಜನ ಅಂಬಾರಿಯೋ ಮನರಂಜನೆಯನ್ನು ನೀಡುತ್ತದೆ. ಹಿರಿಯ ಮನಗಳ ಹಾರೈಕೆ ಮಕ್ಕಳಿಗೆ ನೀತಿ ಪಾಠಗಳೊಟ್ಟಿಗೆ ಕೂಡಿ ಬಾಳುವುದನ್ನೂ ಹೇಳಿಕೊಡುತ್ತದೆ. ಆದರೆ ಆಧುನಿಕ ಜೀವನ ಶೈಲಿ ಇಂದಿನ ಮಕ್ಕಳಿಗೆ ಇವೆಲ್ಲವನ್ನೂ ಮರೀಚಿಕೆಯನ್ನಾಗಿಸಿದೆ.

ಇಂತಹ ಸಮಯದಲ್ಲಿ ಮಕ್ಕಳಿಗೆ ಪ್ರಿಯವಾಗಿ ಕಾಣುವುದು ಅಪ್ಪನ ಅಥವಾ ಅಮ್ಮನ ಮೊಬೈಲ್ ಫೋನುಗಳು. ಸಂಜೆ ಮನೆಗೆ ಬಂದು ಮೊಬೈಲ್ ಫೋನ್ ಅನ್ನು ಕೈಯಲ್ಲಿಟ್ಟುಕೊಂಡರೆ ಅವಕ್ಕೆ ಜಗತ್ತೇ ಬೇಡವಾಗುತ್ತದೆ. 'ನನ್ನ್ ಮಗು ಇಷ್ಟ್ ವಯಸ್ಸಿಗೆ ಫೋನ್ ಹೇಗೆ ಆಪರೇಟ್ ಮಾಡುತ್ತೆ ನೋಡಿ' ಎಂದು ಕೆಲವರು ಹುಬ್ಬಿದರೆ, ಇನ್ನೂ ಕೆಲವರು ಅದರ ಕೈಯಿಂದ ಫೋನ್ ಅನ್ನು ಕಸಿದುಕೊಂಡರೆ ಎಲ್ಲಿ ಅತ್ತು ಬಿಡುವುದೋ ಎಂದು ಅಂಜಿ ಅದರ ಪಾಡಿಗೆ ಅದನ್ನು ಬಿಡುತ್ತಾರೆ. ಸಂಜೆ ಶಾಲೆಯಿಂದ ಮನೆಗೆ ಬಂದು ಆಟೋಟದಲ್ಲಿ ಬಾಗಿಯಾಗುವ ಬದಲು ಮಗು ಮೊಬೈಲ್ ಫೋನು, ವಿಡಿಯೋ ಗೇಮ್ ಗಳಲ್ಲಿ ಮಗ್ನವಾಗುತ್ತದೆ. ಆ ಗೇಮ್ ಗಳೋ, ಕ್ರೌರ್ಯತೆಯ ಉತ್ತುಂಗದಲ್ಲಿರುತ್ತವೆ. ಬಾಂಬು, ಮಚ್ಚು, ಗನ್ ಗಳೇ ಹೆಚ್ಚಿನ ಗೇಮ್ಗಳ ಸಾಧನಗಳಾಗಿರುತ್ತವೆ. ಒಂದು ಸಿಟಿಯೊಳಗೆ ಜಿಗಿಯುವುದು, ಅಲ್ಲಿ ಕೆಲವರನ್ನು ಕೊಲ್ಲುವುದು, ಕೊಂದು ಪೋಲಿಸರಿಂದ ತಪ್ಪಿಸಿಕೊಂಡು ಓಡುವುದು. ಹೀಗೆ ಬೆಳೆಯುವ ಮನಗಳು ವಿಕೃತ ಕೃತ್ಯಗಳನ್ನು ಅತಿ ಸಾಮನ್ಯವಂತೆ ಗ್ರಹಿಸುತ್ತವೆ. ಎಲ್ಲಿಂದಲೋ ನಿಜವಾದ ಗನ್ ಗಳನ್ನು ತಂದು ಮೀನಾ-ಮೇಷ ಎಣಿಸದೆ ಜನರ ಮೇಲೆ ಗುಂಡಿನ ಸುರಿಮಳೆಗೈಯುವ ಎಳೆಯ ಮನಗಳ ತರಬೇತಿ ಇಲ್ಲಿಂದಲೇ ಶುರುವಾಗುವುದೆ!? ಇದು ಯೋಚಿಸಬೇಕಾದ ವಿಷಯ. ಅಲ್ಲದೆ ಇದು ದೈಹಿಕ ಅಸಮತೋಲನವಲ್ಲದೆ ಮಾನಸಿಕ ಅಸ್ವಸ್ಥೆಯ ಉಗಮಕ್ಕೂ ನಾಂದಿಯಾಗುತ್ತವೆ. ವಿಪರ್ಯಾಸವೆಂದರೆ ಈ ‘ಚಟ’ ಇತ್ತೀಚಿನ ದಿನಗಲ್ಲಿ ವಯಸ್ಸಿಗೆ ಮೀಸಲಾಗದಿರುವುದು! ವಯಸ್ಸು ಮೂವತ್ತಾದರೂ ತಲೆ ಕೂದಲು ಗಡ್ಡವನ್ನು ಮಾನಸಿಕ ರೋಗಿಗಳಂತೆ ವಿಕೃತ ವಾಗಿ ಬಿಟ್ಟು Xbox, PS4 ಹಾಗು ಇನ್ನಿತರ ಗೇಮಿಂಗ್ ಉಪಕರಣಗಳ ಮುಂದೆ ಸಿಕ್ಕ ಕಾಲವನ್ನೆಲ್ಲಾ ಹರಣ ಮಾಡುವ ಯುವಜನತೆ ಹೆಚ್ಚಾಗುತ್ತಿದೆ. ತಮ್ಮ ತಿಂಗಳ ದುಡಿಮೆಯನ್ನೆಲ್ಲವನ್ನೂ ಕೇವಲ ಒಂದು ವಿಡಿಯೋ ಗೇಮ್ಗೆ ಸುರಿಯುವರೂ ಇದ್ದಾರೆ! ಹೀಗೆ ಒಂದು ಭಯಾನಕವಾದ ವರ್ಚುಯಲ್ ಲೋಕವೊಂದು ಅರಿಯದಂತೆ ಮಕ್ಕಳು ಹಾಗು ಯುವಕರರನ್ನು ತನ್ನ ಬಿಗಿದಾದ ತೆಕ್ಕೆಗೆ ಹಾಕಿಕೊಂಡಿದೆ.

ಕೇವಲ ಗೇಮಿಂಗ್ ಗಳಿಗೆ ಸೀಮಿತವಾಗಿದ್ದ ಮೊಬೈಲ್ ಫೋನುಗಳು, ಇಂಟರ್ನೆಟ್ ನ ಟಚ್ ನಿಂದ ಮಕ್ಕಳಿಗೆ ಇನ್ನೂ ಆತ್ಮೀಯವಾಗುತ್ತದೆ. ಹತ್ತು ತುಂಬುವುದರೊಳಗೆ ಫೇಸ್ಬುಕ್ ಯುಟ್ಯೂಬ್ ಅನ್ನುವ ವಿವಿಧ ಹೊಸ ಲೋಕಗಳು ಮಕ್ಕಳಿಗೆ ತೆರೆಯಲ್ಪಡುತ್ತವೆ. ಒಮ್ಮೆ ಇದರ ರುಚಿ ತಿಳಿದರೆ ಅವರಿದ ಮೊಬೈಲ್ ಫೋನ್ ಗಳನ್ನು ಬೇರ್ಪಡಿಸುವುದು ಆಗದಿರುವ ವಿಷಯ. ಏಕೆಂದರೆ ಈ ಹೊಸ ಲೋಕಗಳು ಎಷ್ಟು ನೋಡಿದರೂ ಮುಗಿಯದವು. ಒಂದು ರೀತಿ ಅನಂತವಾದವು ಎನ್ನಬಹುದು! ವಯಸ್ಸು ಹದಿನೈದು ತುಂಬುವುದರೊಳಗೆ ಪೊರ್ನ್ ವೆಬ್ಸೈಟ್ಗಳಿಂದಿಡಿದು ಡೇಟಿಂಗ್ ಆಪ್ ಗಳ ಸರಮಾಲೆಯನ್ನೇ ಮೊಬೈಲ್ನ ಲೋಕದಲ್ಲಿ ಕಾಣುತ್ತಾರೆ. ವ್ಯಸನಿಗಳಂತೆ ವರ್ತಿಸುತ್ತಾರೆ. ಸದಾ ಕಿವಿಗೊಂದು ಹಿಯರ್ ಫೋನ್ ಅನ್ನು ತೂರಿಸಿ, ಮಿಕ್ಕಿ ಉಳಿಯುವಷ್ಟು ಡೇಟಾ ಪ್ಯಾಕೇಜ್ ಗಳನ್ನು ಅತ್ತು ಕಾದಾಡಿ ಪೋಷಕರಿಂದ ಹಾಕಿಸಿಕೊಂಡು ,ಸರ್ಕಸ್ನ ಜೋಕೆರ್ ಗಳಂತೆ ವೇಷಭೂಷಣಗಳನ್ನು ಮಾಡಿಕೊಂಡು ಹೊರಟರೆ ಜಗತ್ತೇ ಬೇಡವಾಗಿ ಬಿಡುತ್ತದೆ ಇಂದಿನ ಯುವಕರಿಗೆ. ನಾಳಿನ ನಮ್ಮ ನಾಯಕರಿಗೆ!!

ಕೇಳಿದನ್ನು ಪಡೆಯುವ ತನಕ ಬಿಡದ ಹಠ ಇಂದಿನ ಮಕ್ಕಳಲ್ಲಿ ಕಾಣಬಹುದು. ಕೇಳಿದೆಲ್ಲವನ್ನು ಕೊಡಿಸಲು ಶಕ್ತವಾಗಿರುವ ಪೋಷಕರೂ ಅವರ ಈ ಅಧೋಗತಿಗೆ ಕಾರಣವೆನ್ನಬಹುದು. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ನಾಳೆಗಳನ್ನು ಭಯಸುವುದು ಎಷ್ಟು ಸಹಜವೋ ಹಾಗೆಯೇ ನಾಳಿನ ದಿನಗಳಿಗೆ (ಸಮಾಜಕ್ಕೆ) ತಮ್ಮ ಒಳ್ಳೆಯ ಮಕ್ಕಳನ್ನು ಕೊಡಬೇಕು ಎಂದರಿಯಲು ವಿಫಲರಾಗುತ್ತಿದ್ದಾರೆ. ಒಂದು ಪೆಟ್ಟು ಕೊಟ್ಟು ಸುಮ್ಮನಿರಿಸುವ ಕಾಲವೂ ಈಗಿಲ್ಲ. ಪೆಟ್ಟಿಗೆ ಹೆದರುವ ಮನಸ್ಥಿಯ ಮಕ್ಕಳೂ ಈಗಿನವರಲ್ಲ. ಅಂದೆಲ್ಲ ಅಪ್ಪ ಗದರಿಸಿದರೆ ಓಡಿ ಅಡಗಿ ಕೂರುತ್ತಿದ್ದ ಅಥವಾ ಹೇಳಿದ ಕೆಲಸವನ್ನು ಚಾಚುತಪ್ಪದೆ ಮಾಡುತ್ತಿದ್ದ ಮಕ್ಕಳಿಗೆ ಇಂದು ಅಪ್ಪಂದಿರೇ ಗೋಗರೆದು, ಕಾಡಿ ಬೇಡಿ ಕೆಲಸವನ್ನು ಹೇಳಿ ಮಾಡಿಸಿಕೊಳ್ಳಬೇಕಾಗಿದೆ. ಪೋಷಕರು ಮಕ್ಕಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕಿಂತ ಹೆಚ್ಚಾಗಿ ಮಕ್ಕಳೇ ಪೋಷಕರನ್ನು ನಿಯಂತ್ರಿಸುತ್ತಿದ್ದಾರೆ.

ಅತಿಯಾದ ಇಂಟರ್ನೆಟ್ ಬಳಕೆಯಿಂದ ಬಂದೊದಗುವ ವ್ಯತಿರಿಕ್ತ ಪರಿಣಾಮ ಒಂದೆರಡಲ್ಲ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರೆ ಸಿಗುವ ಮೊಬೈಲ್ಗಾಗಿ ಮಾತ್ರ ಓದುವ ಮಕ್ಕಳು ಗಳಿಸುವ ಜ್ಞಾನ ಕೇವಲ ಕ್ಷಣಿಕವಾಗಿರುತ್ತದೆ. ಅವರ ಆಸಕ್ತಿ ಏನಿದ್ದರೂ ಕೇವಲ ಮೊಬೈಲ್ ಫೋನು ಹಾಗು ಇಂಟರ್ನೆಟ್ನ ಒಳಗಿರುತ್ತದೆ. ಇಂಟರ್ನೆಟ್ನಲ್ಲಿ ಎಲ್ಲವೂ ಕ್ಷಣಮಾತ್ರದಲ್ಲಿ ಕೈಗೆಟಕುವಾಗ ಸಹನೆ ಹಾಗು ತಾಳ್ಮೆಯಿಂದ ಕಾಯುವ ಮನಸ್ಥಿತಿ ಇಂದಿನವರಲ್ಲಿ ಇಲ್ಲವಾಗಿದೆ. ಮಕ್ಕಳ ಕ್ರಿಯಾಶೀಲತೆಯ ಮೇಲೂ ಇದು ದುಷ್ಪರಿಣಾಮವನ್ನು ಬೀರುತ್ತಿದೆ. ಅಲ್ಲದೆ ಶಾರೀರಿಕ ವ್ಯಾಯಾಮಗಳಿಲ್ಲದೆ ದೈಹಿಕವಾಗಿಯೂ ಮಕ್ಕಳು ಕುಂದುತ್ತಾರೆ. ಪರೀಕ್ಷೆಗಳಲ್ಲಿ ನಕಲು ಮಾಡುವುದರಿಂದ ಶುರುವಾಗುವ ಗುಣಗಳು ಸೈಬರ್ ಕ್ರೈಂ ಗಳೆಂಬ ಕುಕೃತ್ಯಗಳ ತನಕ ಬೆಳೆಯುತ್ತವೆ. ನಗಲು, ಅಳಲು, ಪ್ರೀತಿಸಲು ಹಾಗು ಮಾನವನ ಎಲ್ಲ ಸಹಜ ಭಾವನೆಗಳಿಗೂ ಇಂದು ಇಂಟರ್ನೆಟ್ ಅನಿವಾರ್ಯವಾಗಿದೆ. ಅಲ್ಲದೆ ಅಂತರ್ಜಾಲದಲ್ಲಿ ಕಾಣುವ ವಿಷಯಗಳನ್ನೇ ನಿಜವೆಂದು ನಂಬಿ ನಡೆಯುವ ಇಂದಿನ ಯುವಜನತೆ ವಿದ್ಯಾವಂತರೆಂದು ಕರೆಸಿಕೊಳ್ಳಲು ನಿಜವಾಗಿಯೂ ಅರ್ಹರೆ ಎಂಬ ಸಂಶಯ ಮೂಡುತ್ತದೆ. ಪ್ರಚಾರಪ್ರಿಯತೆಯ ಅಮಲಿನಲ್ಲಿ ಪರಾಮರ್ಶಿಸುವ ಗುಣಗಳೂ ಇಲ್ಲವಾಗುತ್ತಿದೆ!

ಇಂತಹ ವಾತಾವರಣದಲ್ಲಿ ಬೆಳೆಯುವ ಮಗುವೊಂದು ನಾಳಿನ ಮುಖ್ಯಮಂತ್ರಿಯೋ ,ಪ್ರಧಾನಿಯೊ ಅಥವಾ ರಾಷ್ಟಪತಿಯೋ ಆದರೆ ಆ ದೇಶದ ಪ್ರಜೆಗಳ ಗತಿಯೇನು? ದೇಶದ ರಕ್ಷಣಾ ವ್ಯವಸ್ಥೆಯೇ ಇಂತಹ ಒಬ್ಬ ನಾಯಕನ ಕೈಗೆ ಸಿಕ್ಕರೆ ಆ ದೇಶದ ನಾಳೆಗಳನ್ನು ಊಹಿಸಲಾಗುತ್ತದೆಯೇ? ಒಬ್ಬ ನಾಯಕನೆನಿಸಿದವನು ಜನಗಳ ಒಳಗೆ ಅವರ ಕಷ್ಟ ಕಾರ್ಪಣ್ಯಗಳ ಅರಿತು ಬೆಳೆದವನಾಗಿರಬೇಕು. ಬಿದ್ದು ಎದ್ದು ಜೀವನವನ್ನು ಅರಿತವನಾಗಿರಬೇಕು. ಕಷ್ಟಗಳಿಗೆ ಇಂಟರ್ನೆಟ್ ನಲ್ಲದೆ ತಮ್ಮ ಸ್ವಂತ ಜೀವನದಲ್ಲೇ ಉತ್ತರವನ್ನು ಕಾಣಿಸುವನಾಗಬೇಕು. ಇಂತಹ ಒಬ್ಬ ನಾಯಕನನ್ನು ಇಂದಿನ ಆಧುನಿಕ (ಇಂಟರ್ನೆಟ್) ಯುಗ ಗಳಿಸಿಕೊಡಬಲ್ಲದೆ? ಒಂದು ದೇಶ ಬರಿ ಬಾಯಿ ಮಾತಿನಲ್ಲೇ ಪ್ರಚೋದನೆ ಕೊಟ್ಟರೆ ತಾಳ್ಮೆಯಿಂದ ಆಲಿಸಿ ಅದನ್ನು ಅವಲೋಕಿಸುವ ನಾಯಕರು ನಮ್ಮಲ್ಲಿ ಮೂಡುವರೆ? ಅಥವಾ ಆಗಿದ್ದು ಆಗಲಿ.ಆದರೆ ಆದ ಮೇಲೆ ನೋಡಿದರಾಯಿತು ಎಂದು ದೇಶವನ್ನೇ ರಣರಂಗವನ್ನಾಗಿ ಮಾಡಿಬಿಡುವ ಮಂದಿಯೇ ಹೆಚ್ಚಾಗುವರೆ?

ಒಟ್ಟಿನಲ್ಲಿ ಪ್ರಸ್ತುತ ಇಂಟರ್ನೆಟ್ನ ಲೋಕವೆಂಬುದು ಒಂದು ಹೊಸ ಪೀಳಿಗೆಯನ್ನೇ ಜಗತ್ತಿಗೆ ಕೊಡುತ್ತಿದೆ ಹಾಗು ಕೊಟ್ಟಿದೆ. ಆದ ಮಾತ್ರಕ್ಕೆ ಇಂಟರ್ನೆಟ್, ಮೊಬೈಲ್ ಫೋನ್ ಹಾಗು ಇನ್ನಿತರ ಆಧುನಿಕ ತಂತ್ರಜ್ಞಾನಗಳು ಕೇವಲ ದುಷ್ಪರಿಣಾಮಗಳನ್ನೇ ಯುವಜನರ ಮೇಲೆ ಬೀರಿದೆ ಎಂದರೆ ಸುಳ್ಳಾಗುತ್ತದೆ. ಆದರೆ ಅರ್ಥವರಿಯದೆ ಬಳಸುವುದಕ್ಕೂ ಹಾಗು ಅರ್ಥವರಿತು ವ್ಯಸನಿಗಳಾಗುವುದಕ್ಕೂ ವ್ಯತ್ಯಾಸವಿದೆ. 'ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು' ಎಂಬುದರಿತು ಇಂದಿನ ಪೋಷಕರು ಜಾಗೃತರಾಗಬೇಕು. ಲಕ್ಷ ಸುರಿದು ಯಾವುದೊ ಒಂದು ಭಾಷೆಯ ಉಚ್ಚಾರವನ್ನು ಕಲಿಸುವ ಬದಲು ಪ್ರೀತಿ ಸುರಿದು ‘ಅಮ್ಮ’ ಎಂಬ ಪದವನ್ನು ಮನೆಯಲ್ಲೇ ಕಲಿಸಿದರೆ ಸಾಕು. ಮಗು ಬಿದ್ದರೆ ಎತ್ತಿ ಅಳುತ್ತಾ ಮುತ್ತಿಕ್ಕುವ ಬದಲು ಅದು ತನಗೆ ತಾನೇ ಎದ್ದು ನಿಲ್ಲಲು ಬಿಡಬೇಕು. ಬರಿ ಸುಖವನ್ನೇ ಧಾರೆ ಎಳೆಯುವ ಬದಲು ಕೆಲ ಕಷ್ಟಗಳಿಗೂ ಮಕ್ಕಳನ್ನು ಸಜ್ಜಾಗಿಸಬೇಕು. 'ಇಲ್ಲ' ಎಂಬುದನ್ನು ಅರಗಿಸಿಕೊಳ್ಳುವ ಮತ್ತು ಅದಕ್ಕೆ ಒಗ್ಗಿಕೊಳ್ಳುವ ಗುಣಗಳನ್ನು ಮಕ್ಕಳಲ್ಲಿ ಬಿತ್ತಬೇಕು. ಇಂಟರ್ನೆಟ್ವನ ಮೂಲಕ ವಯಸ್ಸಿಗೆ ತಕ್ಕ ವಿಷಯಗಳು ಸಿಗುವಂತೆ ಮಾತ್ರ ಮಾಡಬೇಕು. ವಿಷಯಗಳನ್ನು ಅನುಕರಣೆ ಮಾಡುವ ಬದಲು ತನ್ನದೇ ನೆಲೆಗಟ್ಟಿನಲ್ಲಿ ಪರಮಾರ್ಶಿಸುವ ವ್ಯಕಿತ್ವವನ್ನು ಬೆಳೆಸಬೇಕು. ಇಲ್ಲವಾದರೆ ನಾಳಿನ ನಾಯಕರನ್ನು ನೋಡಲು ನಮಗೆ ನಾಳೆಗಳೇ ಉಳಿಯದಾಗಬಹುದು. ಶಾಂತ ನಿರ್ಮಲ ಜಗತ್ತಿನ ನಿರ್ಮಾಣಕ್ಕೆ ಹೆತ್ತವರ ಕೆಲವು ಕಠಿಣ ನಿರ್ಧಾರಗಳೂ ಅತ್ಯವಶ್ಯಕ.

ಹಾಗೆಯೆ ಪೋಷಕರೆನಿಸಿಕೊಂಡವರು ಮಕ್ಕಳಿಗೆ ಕೇವಲ ಬುದ್ದಿವಾದ ಹೇಳದರೆ ಸಾಲದು. ತಾವೂ ಸಹ ಪರಿವರ್ತನೆಗೊಳ್ಳಲು ಇಚ್ಚಿಸಬೇಕು. ಏಕೆಂದರೆ ಇಂದಿನ ಮಕ್ಕಳು ಓದಿ ಅರಿವುದಕ್ಕಿಂತ, ಕೇಳಿ ಕಲಿಯುವದಕ್ಕಿಂತ ಹೆಚ್ಚಾಗಿ ‘ನೋಡಿ’ ಬೆಳೆಯುತ್ತಾರೆ, ಅಲ್ಲವೇ?

Image Credit : Paul Rogers

No comments:

Post a Comment