Friday, July 20, 2018

ಬಾಡುಟವೊಂದರ ಐತಿಹ್ಯ - II

ಭಯದ ತೀಕ್ಷ್ಣತೆಗೆ ಇಟ್ಟ ಕಾಲನ್ನು ಎತ್ತಿ ಮೇಲಿಡಲೂ ಆಗುತ್ತಿಲ್ಲ. ಇನ್ನೇನು ಪ್ರೇತಾತ್ಮವೊಂದು ನನ್ನ ಬಂದು ಅವರಿಸಿಬಿಟ್ಟಿತು ಎಂದು ಗಡಗಡ ನಡುಗುತ್ತಿರುವಾಗಲೇ ಅತ್ತ ಕಡೆಯಿಂದ ಸೈನಿಕನೊಬ್ಬ ಕಾಡುಕೋಳಿಯ ಕಾಲುಗಳೆರಡನ್ನು ಇಡಿದುಕೊಂಡು ಖುಷಿಯಿಂದ ಡೇರೆಯ ಕಡೆ ಓಡಿ ಬರುತ್ತಿದ್ದಾನೆ. ಕೋಳಿಯ ಕತ್ತು ಅದಾಗಲೇ ಜೋತುಬಿದ್ದು ನೇತಾಡುತಿದ್ದರಿಂದ ರಾತ್ರಿಗೆ ಕೋಳಿಮಾಂಸದ ಏನಾದರೊಂದನ್ನು ಮಾಡಲೇಬೇಕಾದ ಅನಿವಾರ್ಯತೆ ಬಂದೊದಗಿತು ಎಂದುಕೊಂಡೆ. ಓಡೋಡಿ ಬರುತ್ತಿದ್ದ ಆತ ನನ್ನ ನೋಡಿ ಒಮ್ಮೆಲೇ ಅವಕ್ಕಾಗಿ ನಿಂತುಬಿಟ್ಟ. ಬಹುಷಃ ಭಯದ ಸ್ಫೋಟ ಗರಬಡಿದವನಂತೆ ನಿಂತ ನನ್ನನು ಕಂಡು ಆತನೊಳಗೂ ಆಗ ಜರುಗಿರಬೇಕು! ಕೆಲಕಾಲ ದೂರದಲ್ಲೇ ಅಲುಗಾಡದೆ ನಿಂತು 'ಯಾರದು' ಎಂದು ಕಾತ್ರಿಪಡಿಸಿಕೊಂಡು, ನಿಂತಿರುವುದು ನಾನೆಂದು ತಿಳಿದ ಮೇಲೆ ಖುಷಿಯಿಂದ ನನ್ನೆಡೆಗೆ ಕೋಳಿಯನ್ನು ತಂದು ನೀಡಿದ. ನೆನ್ನೆ ಬಲೆಯನ್ನು ಹಾಕುವಾಗ ನನ್ನೊಟ್ಟಿಗೆ ಬಂದು ನೋಡಿದ ಆತ ಇಂದು ಅದೇ ದಿಕ್ಕಿನಿಂದ ರೆಕ್ಕೆಗಳ ಶಬ್ದ ಬಂದಕೂಡಲೇ ನನಗಿಂತ ಮೊದಲೇ ಓಡೋಡಿ ಹೋಗಿ ಕೋಳಿಯನ್ನು ಹಿಡಿದು ಸಂಹರಿಸಿ ತಂದಿದ್ದ.

ಡೇರೆಯ ಬಳಿಗೆ ಬರುವಷ್ಟರಲ್ಲೇ ವಾಯುದೇವ ಹಚ್ಚಿಬಂದಿದ್ದ ಎರಡೂ ಒಲೆಗಳನ್ನು 'ಕೆಡಿಸಿ' ತನ್ನ ಅಧಿಪತ್ಯವನ್ನು ಸಾಬೀತುಪಡಿಸಿದ್ದ! ಮೊದಲು ಹೋಗಿ ಅನ್ನದ ಅಗುಳುಗಳನ್ನು ಹಿಸುಕಿ ನೋಡಿದೆ. ಅರೆಬರೆ ಬೆಂದಂತಿದ್ದ ಅಗುಳುಗಳು ಇನ್ನೂ ಸಹ ಪಾತ್ರೆಯ ತಳದಲ್ಲೇ ಉಳಿದಿದ್ದವು. ಕೆಟ್ಟು ಬಿದ್ದಿದ ಓಲೆ, ಅರೆಬರೆ ಹೆಚ್ಚಿದ್ದ ತರಕಾರಿಗಳು, ಅಲ್ಲಲ್ಲಿ ಚದುರಿಕೊಂಡಿದ್ದ ಮಸಾಲಾ ಪದಾರ್ಥಗಳನ್ನು ಕಂಡ ಸೈನಿಕ ಆತನ ಖಡ್ಗವೊಂದನ್ನು ತಂದು ತಾನಾಗಿಯೇ ಕೋಳಿಯನ್ನು 'ಶುಚಿ'ಗೊಳಿಸಿ ತರುವೆ ಎನುತ ಝರಿಯ ಬಳಿಗೆ ಹೋಗುತ್ತಾನೆ. ಕೊಂಚ ನಿರಾಳನಾದ ನಾನು ಪುನಃ ಬೆಂಕಿಯನ್ನು ಹಚ್ಚುವ ಮುನ್ನ ಬೇಕಾದ ಎಲ್ಲ ಪದಾರ್ಥಗಳನ್ನು ಜೋಡಿಸಿಕೊಳ್ಳತೊಡಗಿದೆ.ಸೊಂಟಕ್ಕೆ ಕಟ್ಟಿಕೊಂಡಿದ್ದ ಬಟ್ಟೆಯನ್ನು ನೆಲದ ಮೇಲೆ ಹರವಿ ಚೆಕ್ಕೆ, ಲವಂಗ, ಏಲಕ್ಕಿಗಳನ್ನು ನಾಲ್ಕೈದರಂತೆ ಒಂದೊಂದು ಗುಂಪಾಗಿ ಮಾಡಿ ಇಟ್ಟೆ. ಕೊಯ್ದುಕೊಂಡಿದ್ದ ಈರುಳ್ಳಿ ಹಾಗು ಹುಳಿಹಣ್ಣುಗಳನ್ನು ಒಂದು ಗಂಗಾಳದಲ್ಲಿ ಹಾಕಿ ಬದಿಗೆ ಇರಿಸಿಕೊಂಡೆ. ಕೆಂಪು ಕೆಂಪಾದ ತ್ರಿಕೋನಾಕಾರದ ಹುಳಿಹಣ್ಣಿನ ಹೋಳುಗಳು, ಕಾಮನಬಿಲ್ಲಿನಂತೆ ಬಾಡಿಕೊಂಡಿರುವ ಈರುಳ್ಳಿಯ ಎಸಳುಗಳು ಹಾಗು ಅವುಗಳ ಸುಂದರ ಮೈಬಣ್ಣ ಏನೋ ಒಂದು ಬಗೆಯ ಖುಷಿಯ ಸೆಲೆಯನ್ನು ತಾವಿರುವಲ್ಲಿ ಸೃಷ್ಟಿಸಿಕೊಂಡಿದ್ದವು. ಬರುವಾಗ ಡೇರೆಯ ಪಕ್ಕಕೆ ಬೆಳೆದು ನಿಂತಿದ್ದ ಹಸಿರುಮೆಣಸಿನ ಗಿಡದಿಂದ ಏಳೆಂಟು ಕಾಯಿಗಳನ್ನು ಕಿತ್ತು ತರಲು ಮರೆತಿರಲಿಲ್ಲ. ಇನ್ನೇನು ಎಲ್ಲವು ಸಿದ್ದವಾದವು ಎನ್ನುವಷ್ಟರಲ್ಲೇ ಕೋಳಿಯನ್ನು ಶುಚಿಗೊಳಿಸಲು ಹೋಗಿದ್ದ ಸೈನಿಕ ದೊಡ್ಡದೊಂದು ಎಲೆಯಲ್ಲಿ ಮಾಂಸದ ತುಂಡುಗಳನ್ನು ತುಂಬಿಕೊಂಡು ನಾಟಕದ ಯಾವುದೊ ಒಂದು ಸಂಭಾಷಣೆಯನ್ನು ಹೇಳಿಕೊಳ್ಳುತ್ತಾ ಪ್ರಶಾಂತ ರಾತ್ರಿಯ ಘಾಡಮೌನವನ್ನು ಸೀಳಿಕೊಳ್ಳುತ್ತಾ ಡೇರೆಯ ಬಳಿಗೆ ಬರತೊಡಗಿದ.

ನಾಲ್ಕೈದು ಪಾವು ಅಕ್ಕಿ ಹಿಡಿಯುವಷ್ಟು ದೊಡ್ಡದಾದ ಪಾತ್ರೆಯೊಂದನ್ನು ತೆಗೆದುಕೊಂಡು ಹೊಸದಾಗಿ ಪಕ್ಕದಲ್ಲಿ ನಿರ್ಮಿಸಿದ ಒಲೆಯನ್ನು ಹಚ್ಚಿಸಿ ಇಟ್ಟೆ. ಚೊರ್ರ್...ಎಂಬ ಸದ್ದಿನೊಂದಿಗೆ ನೀರು ಆವಿಯಾಗುವುದನ್ನು ಖಾತ್ರಿಪಡಿಸಿಕೊಂಡು ಮಡಿಕೆಯಲ್ಲಿ ಕಾಯಿಸಿದ್ದ ತುಪ್ಪವನ್ನು ಒಂದು ಸೌಟಿನ ತುಂಬ ಬರುವಷ್ಟು ಹಾಕಿದೆ. ಹಿತವಾದ ತುಪ್ಪದ ಕನುವು ಮೂಗಿಗೆ ಬಂದು ಬಡಿಯುವಷ್ಟರಲ್ಲೇ ಹೆಚ್ಚಿದ ಈರುಳ್ಳಿಗಳ ಅಷ್ಟೂ ರಾಶಿಯನ್ನು ಅದರ ಮೇಲೆ ಸುರಿದೆ. ಕಾದ ಖಡ್ಗವನ್ನು ಶಾಂತ ನೀರಿನೊಳಗೆ ಅದ್ದಿದಂತೆ ವಿಪರೀತ ಪ್ರತಿರೋಧ ಒಡ್ಡಿದ ತುಪ್ಪ ಕ್ಷಣಕ್ಷಣಕ್ಕೂ ಸದ್ದನ್ನು ಕಡಿಮೆಗೊಳಿಸುತಾ ಕ್ರಮೇಣ ಈರುಳ್ಳಿಯ ರಾಶಿಯನ್ನು ತನ್ನೊಳಗೆ ಬೆರೆಸಿಕೊಂಡಿತು. ನಂತರ ಏನನ್ನು ಹಾಕುವುದು ಎಂದು ಯೋಚಿಸುತ್ತಿರುವಾಗಲೇ ಡೇರೆಯಿಂದ ತುಸು ದೂರದಿಂದ ಏನೋ ಓಡಿದ ಸದ್ದು ಕೇಳಿಸಿತು! ಹಿತವಾಗ ಗಾಳಿಯ ಅಲೆಗಳನ್ನು ಬೀಸುತ್ತಿದ್ದ ಶಾಂತ ರಾತ್ರಿಗೆ ಆ ಹೆಜ್ಜೆಗಳ ಸದ್ದು ಒಮ್ಮೆಲೇ ನನ್ನ ಎದೆಯನ್ನು ಝಲ್ಲೆನಿಸಿತು! ಅಷ್ಟರಲ್ಲಾಗಲೇ ಸ್ನಾನವನ್ನು ಮುಗಿಸಿಕೊಂಡು ಬಂದು ಊಟಕ್ಕೆ ಅಣಿಯಾಗುತ್ತಿದ್ದ ಸೈನಿಕರೂ ಸಹ ಸದ್ದನ್ನು ಕೇಳಿ ಕೂಡಲೇ ಡೇರೆಯಿಂದ ಹೊರಬಂದರು. ಎಲ್ಲರು ಸದ್ದು ಬಂದ ಕಡೆಗೆ ಕಿವಿನಿಮಿರಿಸಿ ಆಲಿಸತೊಡಗಿದರು. ಶತ್ರು ಸೈನಿಕರು ಹೀಗೆಯೇ ರಾತ್ರೋ ರಾತ್ರಿ ನಾಲ್ಕೈದು ಸೈನಿಕರಿರುವ ಡೇರೆಗಳ ಮೇಲೆ ಧಾಳಿ ನೆಡೆಸಿ ಧವಸ ದಾನ್ಯಗಳನ್ನು ಲೂಟಿಮಾಡುವುದಲ್ಲದೆ ಹಿಂದಿನಿಂದ ಬಂದು ಚಾಕು ಚೂರಿಯಿಂದ ತಿವಿದು ಸಾಯಿಸುವುದೂ ಉಂಟು ಎಂಬುದನ್ನು ಕೇಳಿದ್ದೆ. ಹಾಗಾದ ಕಾರಣ ಇಂತಹ ಸದ್ದುಗಳನ್ನು ಅಷ್ಟಾಗಿ ನಿರ್ಲಕ್ಷಿಸಲು ಸಾಧ್ಯವಿಲ್ಲ. ಎಲ್ಲರೂ ಕೆಲನಿಮಿಷಗಳ ಕಾಲ ನಿಂತ ಜಾಗದಿಂದ ಅಲುಗಾಡಲಿಲ್ಲ. ಸೈನಿಕರ ಕೈಗಳಲ್ಲಾಗಲೆ ಖಡ್ಗಗಳು ಬಡಿದಾಟಕ್ಕೆ ಅಣಿಯಾಗಿದ್ದವು. ಕೆಲಸಮಯದ ನಂತರ ಒಬ್ಬ ಸೈನಿಕ ತುಸುದೂರ ಹೋಗಿ ವಾಪಸ್ಸು ಬಂದ. ತಾನು ಕಂಡ ಹಂದಿಗಳ ಗುಂಪನ್ನು ವರ್ಣಿಸುತ್ತಾ ಮರಿದಡ್ಡೆಯೊಂದು ತನ್ನ ಮರಿಗಳ ಸಮೇತ ಮರದ ಬುಡವೊಂದನ್ನು ಕೊರೆದು ತಿನ್ನುತ್ತಿದ್ದದ್ದನು ಹೇಳಿದ. ಹಂದಿಯ ಹೆಸರನ್ನು ಕೇಳಿ ನಾವೆಲ್ಲ ಒಮ್ಮೆಲೇ ನಿಟ್ಟುಸಿರು ಬಿಟ್ಟೆವು.

ಸೈನಿಕರು ಅಡುಗೆ ನೆಡೆಯುತ್ತಿರುವುದು ‘ಇಂದಿಗೂ ಅಥವಾ ನಾಳೆಗೂ’ ಎಂದಾಗಲೇ ಒಲೆಯ ಮೇಲೆ ತುಪ್ಪಕ್ಕೆ ಈರುಳ್ಳಿಯನ್ನು ಸುರಿದ ನೆನಪಾಯಿತು. ಚಂಗನೆ ಒಲೆಯ ಬಳಿಗೆ ನೆಗೆದು ನೋಡುತ್ತೀನಿ, ಕೆಂಬಿಳುಪು ಬಣ್ಣದ ಈರುಳ್ಳಿಯ ಎಸಳುಗಳು ಚಿನ್ನದ ಬಣ್ಣಕ್ಕೆ ತಿರುಗಿ ಇನ್ನೇನು ಸುಟ್ಟು ಕರಕಲಾಗಿ ಹೋಗಲು ಅಣಿಯಾಗಿದ್ದವು! ನನ್ನ ಮಂಕುಬುದ್ಧಿಗೆ ಶಪಿಸಿಕೊಳ್ಳುತ್ತ, ಕೂಡಲೇ ಕರಿದಂತೆ ಕಾಣುತ್ತಿದ್ದ ಅಷ್ಟೂ ಈರುಳ್ಳಿಗಳನ್ನು ಒಂದು ಪಾತ್ರೆಗೆ ಸುರಿದುಕೊಂಡು ಪುನ್ಹ ಮತ್ತೊಂದು ಸೌಟು ತುಪ್ಪವನ್ನು ಅದೇ ಪಾತ್ರೆಗೆ ಹಾಕಿದೆ. ಕೆಲಕ್ಷಣಗಳ ನಂತರ ಅಷ್ಟೂ ಮಸಾಲಾ ಪದಾರ್ಥಗಳನ್ನು ತುಪ್ಪದ ಮೇಲೆ ಸುರಿದದ್ದೇ ತಡ , ಸುಗಂಧ ಭರಿತ ಕಾಡುಗಳ ಕಿಕ್ಕಿರಿದ ಪೊದೆಗಳೊಳಗೆ ಹೊಕ್ಕ ಅನುಭವ! ಘಮಘಮಿಸುವ ಮತ್ತಿನಲ್ಲೇ ಕೆಲಕ್ಷಣ ಕಳೆದ ಮೇಲೆ ಮತ್ತೊಂದು ಹಸಿ ಈರುಳ್ಳಿಯನ್ನು ಹೆಚ್ಚಿ ಹಾಕಿದೆ. ಮಸಾಲ ಪದಾರ್ಥಗಳ ಪ್ರವೇಶದಿಂದ ಮುನಿಸಿಕೊಂಡು ಸಿಡಿಮಿಡಿಗೊಳ್ಳುತ್ತಿರುವಂತೆ ಆಡುತ್ತಿದ್ದ ತುಪ್ಪದ ಮತ್ತೊಮ್ಮೆ ಎಲ್ಲವನ್ನು ಬೆರೆಸಿಕೊಂಡು ವಟಗುಡತೊಡಗಿತು.

ಅಷ್ಟರಲ್ಲಾಗಲೇ ಸೈನಿಕರು ಎರೆಡೆರೆಡು ಬಾರಿ ಬಂದು ನಾನು ಏನು ಮಾಡುತ್ತಿರುವೆನೆಂದು ಕೇಳಿಕೊಂಡು ಹೋದರು. ನಾ ಮಾಡುತ್ತಿರುವ ಬಾಡೂಟದ ಹೆಸರಾದರೂ ಏನು? ಉತ್ತರ ದೊರೆಯಲಿಲ್ಲ. ಮೊದಲು ತಯಾರಿಸಿ ನಂತರ ಹೆಸರಿಡುವ ಕಾರ್ಯಕ್ರಮವನ್ನು ಮಾಡುವ ಎಂದುಕೊಂಡು ಹಸಿರುಮೆಣಸಿನ ಕಾಯಿ ಹಾಗು ಹುಳಿಹಣ್ಣುಗಳ ಕೆಂಪುರಾಶಿಯನ್ನು ಪಾತ್ರೆಗೆ ಸುರಿದೆ. ಕಾದ ತುಪ್ಪದ ಸಿಟ್ಟು ತನ್ನ ಎಲ್ಲ ಎಲ್ಲೆಯನ್ನು ಮೀರಿ ನನ್ನನೇ ಸುಡುವ ಮಟ್ಟಕ್ಕೆ ಹೋಯಿತು. ಆದದರಿಂದಲೋ ಏನೋ ಒಂದೆರೆಡು ಹನಿಗಳು ಕೈಮೇಲೆ ಹಾರಾರಿ ಬಿದ್ದವು! ಕಾದ ತುಪ್ಪದ ಸಿಟ್ಟಿನ ಭಯ ಕ್ಕೆ ಎನ್ನುವಂತೆ ಹುಳಿಹಣ್ಣುಗಳು ಶರವೇಗದಲ್ಲಿ ಕರಗತೊಡಗಿದವು. ಇವುಗಳ ಮದ್ಯೆ ಕೆಂಪು ಮೆಣಸಿನ ಕಾಯಿ, ಶುಂಠಿ, ಬೆಳ್ಳುಳ್ಳಿ, ಹರಿಶಿಣದ ಕೊಂಬು ಹಾಗು ಸಂಬಾರ ಬೀಜಗಳನ್ನು ಪುಡಿಮಾಡಲು ಬದಿಗೆ ಇರಿಸಿಕೊಂದ್ದ ನೆನಪಾಗಿ, ಎಲ್ಲ ದೋಷವನ್ನು ಮತ್ತೊಮ್ಮೆ ನನ್ನ ಬುದ್ದಿಯ ಮೇಲೆಯೇ ಹೊರಿಸಿ, ಕುಟ್ಟುವ ಕಲ್ಲನ್ನು ಬಳಿಗೆ ತಂದು, ನೋಡಿದರೇನೇ ಕರುಣೆ ಬರುವಂತೆ ಒಣಗಿ ಬೆಂಡಾಗಿದ್ದ ಕೆಂಪು ಮೆಣಸಿನಕಾಯಿ, ವಕ್ರ ವಕ್ರವಾಗಿ ನಾನಿರುವುದೇ ಹೀಗೆ ಎಂಬಂತೆ ಬೆಳೆದುಕೊಂಡಿದ್ದ ಹರಿಶಿಣದ ಕೊಂಬು ಹಾಗು ಗಂಡು ಹೆಣ್ಣು, ಮೇಲು ಕೀಳು, ಬಡವ ಬಲ್ಲಿದನೆಂಬ ಯಾವೊಂದು ತಾರತಮ್ಯವಿಲ್ಲದೆ ಎಲ್ಲವೂ ಒಂದೇ ಎಂಬಂತೆ ಕಾಣುತ್ತಿದ್ದ ಸಂಬಾರ ಬೀಜಗಳನ್ನು ಒಟ್ಟಿಗೆ ಬೆರೆಸಿ ಕುಟ್ಟತೊಡಗಿದೆ. ಒಂದೆಡೆ ಹಸಿ ಕೋಳಿಮಾಂಸದ ರಾಶಿ, ಪಕ್ಕದಲ್ಲಿ ಅರೆಬರೆ ಬೆಂದ ಅಕ್ಕಿಯ ಕಾಳುಗಳು, ಇತ್ತಕಡೆ ಬೆಂಕಿಯ ಹಾಗು ತುಪ್ಪದ ಶಾಖದಲ್ಲಿ ವಿಲೀನರಾಗಿ ಸುತ್ತಲ ಪರಿಸರವನ್ನು ಘಮಮಯವಾಗಿಸಿರುವ ಮಸಾಲಾ ಪದಾರ್ಥಗಳು.... ಸಮುದ್ರದ ಮರಳಿಗಿಂತಲೂ ನಯವಾದ ಮೆಣಸು, ಹರಿಶಿಣದ ಕೊಂಬು ಹಾಗು ಸಂಬಾರಬೀಜಗಳ ಪುಡಿಯನ್ನು ಒಲೆಯ ಮೇಲೆ ಬೇಯುತ್ತಿದ್ದ ಮಸಾಲಾ ಪದಾರ್ಥಗಳ ಮೇಲೆ ಸುರಿದೆ. ತದಾನಂತರ ಶುಂಠಿ ಬೆಳ್ಳುಳ್ಳಿಗಳನ್ನು ಒಟ್ಟಿಗೆ ಜಜ್ಜಿ ಬೆರೆಸಿದಾಗ ಬಂದ ಘಮ ನನ್ನ ನಾಲಿಗೆಯನ್ನು ಒದ್ದೆ ಮಾಡಿದಂತೂ ಸುಳ್ಳಲ್ಲ! ಕೂಡಲೇ ಅಷ್ಟೂ ಮಾಂಸದ ಚೂರುಗಳನ್ನು ಹಾಕಿ ಹುರಿದು ಜೊತೆಗೆ ಒಂದು ಹಿಡಿಯಷ್ಟು ಉಪ್ಪನ್ನು ಹುದುರಿಸಿ ಕೊನೆಗೆ ಎಂಟತ್ತು ಪಾವು ನೀರನ್ನು ಹಾಕಿ ಎಲ್ಲವನ್ನು ಬೆರೆಸಿದೆ. ಗಡಿಬಿಡಿಯಲ್ಲಿ ಅಚಾತುರ್ಯವೊಂದು ನೆಡೆದದ್ದು ನನ್ನ ಅರಿವಿಗೆ ಬಂದದ್ದು ತುಸು ಸಮಯದ ನಂತರವೇ! ಮಸಾಲೆ ಪದಾರ್ಥಗಳನ್ನು ಹಾಕುವ ಭರದಲ್ಲಿ ಸಣ್ಣ ಮಡಕೆಯಲ್ಲಿ ಊಟದ ಕೊನೆಗೆ ಬಡಿಸಲು ಇಟ್ಟುಕೊಂಡಿದ್ದ ಗಟ್ಟಿ ಮೊಸರನ್ನೂ ಅದರೊಳಗೆ ಸುರಿದಿದ್ದೆ. ಅಡಿಗೆ ಕೆಟ್ಟಿತು ಎನುತ ಕೆಲ ಕ್ಷಣಗಳ ಕಾಲ ಅವಕ್ಕಾಗಿ ನಿಂತ ನನ್ನಲ್ಲಿ ಆತ್ಮವಿಶ್ವಾಸ ಮಾತ್ರ ಒಂದಿನಿತು ಕ್ಷೀಣಿಸಲಿಲ್ಲ. ಆದದ್ದು ಆಗಲಿ ಎನುತ ಸುಮ್ಮನಿದ್ದೆ. ಕೆಲನಿಮಿಷಗಳಲ್ಲಿಯೇ ಕುದಿಯತೊಡಗಿದ ಕಡುಕೆಂಪುಬಣ್ಣದ ಮಸಾಲಾನೀರಿಗೆ ಅರೆಬರೆ ಬೆಂದ ಅಕ್ಕಿಯನ್ನು ಬಸಿದು ಸುರಿಯತೊಡಗಿದೆ. ಅರ್ಧದಷ್ಟು ಅಕ್ಕಿಯನ್ನು ಸುರಿಯುವಷ್ಟರಲ್ಲಿ ತುಪ್ಪದಲ್ಲಿ ಬೆಂದು ಕರಕಲಾದ ಈರುಳ್ಳಿಗಳ ರಾಶಿಗಳು ನೆನಪಾಗಿ, ಸುರಿಯುವ ಕಾಯಕವನ್ನು ಅಲ್ಲಿಗೆ ನಿಲ್ಲಿಸಿ, ಅವುಗಳನ್ನು ಬಳಿಗೆ ತಂದು ಒಂದೆರೆಡು ಎಸಳುಗಳನ್ನು ಬಾಯಲ್ಲಿ ಇರಿಸಿದೆ. ಕರಕಲಾಗದರೂ ಏನೋ ಒಂದು ಬೇಗೆಯ ರುಚಿ ಅವುಗಳಲ್ಲಿ ಕಾಣಿಸಿತು. ಅದಾದ್ದಾಗಲಿ ಎನುತ ಬೆಳ್ಳನೆ ಹರಡಿಕೊಂಡಿದ್ದ ಅನ್ನದ ರಾಶಿಯ ಮೇಲೆ ಒಂದೇ ಸಮನಾಗಿ ಅವುಗಳನ್ನು ಹುದುರಿಸಿ ಉಳಿದ ಅನ್ನವನ್ನೂ ಅದರ ಮೇಲೆ ಪದರವಾಗಿ ಹರಡಿದೆ.

ಅಷ್ಟರಲ್ಲಾಗಲೇ ಸೈನಿಕರ ಕೋಪ ಅವರ ನತ್ತಿಯನ್ನು ಮುಟ್ಟಿರಬೇಕು. ಒಬ್ಬರಿಂದೊಬ್ಬರು ಬಂದು ನನ್ನ ಹೆಸರನ್ನು ಹಿಡಿದು ಅರಚತೊಡಗಿದರು. ದಿನಗಳ ಕಾಲ ಹಸುವೆಯನ್ನು ಬೇಕಾದರೆ ನೀಗಿಕೊಂಡು ಬದುಕಬಹುದು ಆದರೆ ಹಸಿವಿನಿಂದ ಕೆಂಗೆಟ್ಟ ಸೈನಿಕನ ಕೋಪವನ್ನು ಕ್ಷಣಮಾತ್ರವೂ ಸಹಿಸಲು ಆಗದು. ಅನ್ನವನ್ನು ಬೇಗ ಹರಳಿಸಬೇಕು ಎಂದುಕೊಂಡು ಪಾತ್ರೆಗೆಂದೇ ಮಾಡಿದ್ದ ಮಣ್ಣಿನ ಮುಚ್ಚನ್ನು ತಂದು ಮುಚ್ಚಿ ಅದರ ಮೇಲೆ ಒಂತಿಷ್ಟು ಕೆಂಡವನ್ನೂ ಸುರಿದೆ! ಇಲ್ಲೇ ನಿಂತರೆ ಬೈಗುಳದಲ್ಲೇ ನನ್ನ ಜೀವವನ್ನು ತೆಗೆದಾರು ಎಂದುಕೊಂಡು ಒಂತಿಷ್ಟು ಬಾಳೆಯ ಎಲೆಗಳನ್ನು ಕೊಯ್ದು ತರಲು ಹೊರಟೆ. ಅಲ್ಲೊಂದು ಇಲ್ಲೊಂದು ಬೆಳೆದ ಬಾಳೆಗಿಡಗಳನ್ನು ಹುಡುಕಿ ಎಲೆಗಳನ್ನು ಕೊಯ್ದು ಬಂದು ನೋಡುತ್ತೇನೆ, ನಾಲ್ವರು ಸೈನಿಕರು ಅದಾಗಲೇ ಒಲೆಯ ಮೇಲಿಟ್ಟಿದ್ದ ಪಾತ್ರೆಯನ್ನು ನೆಲದ ಮೇಲಿರಿಸಿ, ಪಾತ್ರೆಯ ತಳ ಸೇರಿದ್ದ ಮಸಾಲಾಪದಾರ್ಥಗಳನ್ನು ಹದವಾಗುವಂತೆ ಮಿಶ್ರಿಸಿ, ಒಂದೊಂದು ಹಿಡಿ ಅನ್ನವನ್ನೂ ಬಾಯೊಳಗೆ ಹಾಕಿಕೊಂಡು 'ಇಂಶಾಲ್ಲ...!' ಎನುತ ಕಣ್ಣು ಮುಚ್ಚಿ ರುಚಿಯನ್ನು ಆಸ್ವಾದಿಸುತ್ತಿದ್ದರು. ನನ್ನನು ಕಂಡ ಕೂಡಲೇ 'ಶಹಭಾಷ್ ಮೇರೇ ಶೇರ್..' ಎನುತ ನನ್ನನು ಮುತ್ತುವರೆದು ಕೈಲಿದ್ದ ಬಾಳೆಯ ಎಲೆಗಳನ್ನು ಕಸಿದುಕೊಂಡು ಅನ್ನ ಹಾಗು ಕೋಳಿಯ ಚೂರುಗಳನ್ನು ಒಟ್ಟಿಗೆ ಹಾಕಿಕೊಂಡು ಗಬಗಬನೆ ತಿನ್ನತೊಡಗಿದರು. ಅಡುಗೆ ಅಷ್ಟು ಚೆನ್ನಾಗಿದಿರುವುದರ ಬಗ್ಗೆ ನನಗೆ ನಂಬಿಕೆಯೇ ಬರಲಿಲ್ಲ.

ಈ ಜನ್ಮಕ್ಕಿಷ್ಟು ಸಾಕು.. ಎಂಬ ಆತ್ಮತೃಪ್ತಿಯಿಂದ ಸೈನಿಕರು ನಾ ಮಾಡಿರುವ ಅಡುಗೆಯನ್ನು ತಿನ್ನುವುದನ್ನೇ ನೋಡತೊಡಗಿದೆ. ಏನೋ ಒಂದು ಹೊಸದಾದ ಖಾದ್ಯವನ್ನು ಪರಿಚಯಿಸಿದ ಹೆಮ್ಮೆ. ಅಡುಗೆಯ ರುಚಿಯೋ ಅಥವಾ ಹಸಿವಿನ ವೇದನೆಯೋ ಸೈನಿಕರಂತೂ ನಿಂತೇ ತಿನ್ನತೊಡಗಿದರು. ಸ್ವಲ್ಪ ಅತ್ತ ಕಡೆ ಕಣ್ಣೊರಳಿಸಿ ನೋಡುತ್ತನೆ, ನಮ್ಮ ಸೈನಿಕರು ನಿಂತ ಸ್ಥಳದಿಂದ ತುಸುದೂರದಲ್ಲಿ ಇನ್ನೂ ನಾಲ್ಕು ಸೈನಿಕರ ಗುಂಪು ಕೈಕಟ್ಟಿ ಊಟವನ್ನು ತಿನ್ನುತ್ತಿದ್ದ ಸೈನಿಕರನ್ನೇ ನೋಡುತ್ತಾ ನಿಂತಿದೆ. ಕೆಲಕ್ಷಣದಲ್ಲೇ ಅವರನ್ನು ನೋಡಿದ ನಮ್ಮ ಸೈನಿಕರು ಅವರ ವೇಷಭೂಷಣಗಳಿಂದ ಅದು ವೈರಿಪಡೆಯೆಂದು ಖಾತ್ರಿಪಡಿಸಿಕೊಂಡು ಕೂಡಲೇ ತಮ್ಮ ತಮ್ಮ ಖಡ್ಗಗಳನ್ನು ತಂದು ಕಾದಾಡಲು ಅಣಿಯಾಗಿ ನಿಂತರು. ಕೂಡಲೇ ಆ ಗುಂಪಿನ ಒಬ್ಬ ಸೈನಿಕ ಮಾತನಾಡಿ 'ಸಾಹೇಬ್, ತಾಳ್ಮೆ ತಂದುಕೊಳ್ಳಿ. ನಿಮ್ಮ ಡೇರೆಯನ್ನು ನಾಶಮಾಡಿ ನಿಮ್ಮ ಒಬ್ಬೊಬ್ಬರನ್ನು ಕೊಂದು ಬನ್ನಿ ಎಂಬ ಆಜ್ಞೆ ನಮ್ಮ ಸೈನ್ಯಾಧಿಪತಿಯಿಂದ ಆಗಿರುವುದೇನೋ ನಿಜ. ಆದರಂತೆ ನಾವುಗಳು ಸರ್ವಸನ್ನದ್ಧರಾಗಿ ನಿಮ್ಮ ಮೇಲೆ ಆಕ್ರಮಣ ಮಾಡಲು ಬಂದೆವು. ನಮ್ಮ ಸದ್ದನ್ನು ಕೇಳಿ ನೀವುಗಳು ಹೊರಬಂದು ದೂರದಲ್ಲೆಲೋ ಇದ್ದ ಹಂದಿಯ ಸದ್ದೆಂದು ಸುಮ್ಮನಾದಿರಿ. ಅದೇ ಸುಸಮಯವೆಂದು ಇನ್ನೇನು ನಾವುಗಳು ನಿಮ್ಮ ಹಿಂದಿನಿಂದ ಬಂದು ಆಕ್ರಮಣ ಮಾಡಬೇಕು ಎನ್ನುವಷ್ಟರಲ್ಲಿ ಹಿಂದೆಂದೂ ಆಸ್ವಾದಿಸಿರದ ಸುವಾಸನೆಯೊಂದು ನಮ್ಮ ಮೂಗನ್ನು ಬಂದು ಬಡಿಯಿತು. ಎಷ್ಟೇ ಪ್ರಯತ್ನ ಪಟ್ಟರೂ ನಮ್ಮನು ನಾವು ನಿಯಂತ್ರಿಸಲೇ ಆಗಲಿಲ್ಲ. ಪರಿಣಾಮವಾಗಿ ಅಡುಗೆ ಪೂರ್ತಿಯಾಗಲು ಕಾಯತೊಡಗಿದೆವು. ಗಂಟಲಲ್ಲಿ ಅನ್ನ ಇಳಿಯುತ್ತಿರುವಾಗ ನಿಮ್ಮ ಮೇಲೆ ಆಕ್ರಮಣ ಮಾಡಿ ಆಹಾರವನ್ನು ಕಸಿದು ತಿನ್ನುವುದು ಪಾಪದ ಕಾರ್ಯ. ಅಲ್ಲಾವು ಅದನ್ನು ಮೆಚ್ಚನು. ಆದರಿಂದ ನಿಮ್ಮಿಂದ ಬೇಡಿಯೇ ಸರಿ, ಆ ಅಮೂಲ್ಯ ಭಕ್ಶ್ಯದ ಸವಿಯನ್ನು ಸವಿಯಬೇಕೆಂದು ನಿಮ್ಮೆದುರಿಗೆ ಬಂದೆವು. ನೀವಿಲ್ಲಿರುವುದಾಗಲಿ, ನಿಮ್ಮ ಅಸ್ತ್ರ ಶಸ್ತ್ರಗಳ ಬಗೆಯಾಗಲಿ ನಾವುಗಳು ಯಾರಿಗೂ ತಿಳಿಸೆವು. ದಯೆಮಾಡಿ ನಮ್ಮ ಹೊಟ್ಟೆಗೊಂದಿಷ್ಟು ಆ ಅನ್ನವನ್ನು ಕೊಟ್ಟು ಕರುಣಿಸಿ' ಎಂಬ ಮಾತನ್ನು ಕೇಳಿದ ನಮ್ಮ ಸೈನಿಕರು ತೆರದ ಬಾಯನ್ನು ಮುಚ್ಚದೆಯೇ ನನ್ನೆಡೆ ತಿರುಗಿದರು. ಖಡ್ಗ ಚೂರಿಗಳಿಲ್ಲದೆಯೇ ಕೇವಲ ಅಡುಗೆಯೆಂಬ ಅಸ್ತ್ರದಿಂದ ವಿರೋಧಿ ಸೈನಿಕರನ್ನು ಕೆಡವಿದ ಗರ್ವದ ನೋಟದಿಂದ ನಾನೂ ಕೂಡ ಅವರನ್ನು ಧಿಟ್ಟಿಸತೊಡಗಿದೆ.....!

(ಇಂದು ವಿಶ್ವದೆಲ್ಲೆಡೆ ಸುಪ್ರಸಿದ್ಧವಾಗಿರುವ ಬಿರಿಯಾನಿಯ 'ಐತಿಹ್ಯ'ವಿದು . ಬಿರಿಯಾನಿಯ ಉಗಮಕ್ಕೆ ಇಂತಹ ಹಲವಾರು ಐತಿಹ್ಯ/ಕತೆಗಳಿವೆ. ಆದರೆ ಹೆಚ್ಚು ಕಡಿಮೆ ಎಲ್ಲವೂ ಬಿರಿಯಾನಿಯ ಉಗಮ ಭಾರತದ ಉತ್ತರ ಭಾಗ ಅಥವ ಮದ್ಯಪ್ರಾಚ್ಯ ದೇಶಗಳೆಂದೇ ಹೇಳುತ್ತವೆ. ಈ ಕತೆಯನ್ನೂ ಸುಮಾರು ಸಾವಿರ ವರ್ಷಗಳ ಕಾಲ ಹಿಂದೆ ಜರುಗಿರಬಹುದಾದ ಘಟನೆಯೆಂದು ಕಲ್ಪಿಸಿ ಹೆಣೆಯಲಾಗಿದೆ. ಟೊಮೊಟೊ ಹಣ್ಣುಗಳು ಆಗಷ್ಟೇ ಜನರಿಗೆ ಪರಿಚಯವಾಗುತ್ತಿದ್ದರಿಂದ ಅವುಗಳನ್ನು ಹುಳಿಹಣ್ಣುಗಳೆಂದು ಹೇಳಲಾಗಿದೆ. ಹಾಗು ಪುದೀನ ಹಾಗು ಕೊತ್ತಂಬರಿ ಸೂಪ್ಪುಗಳು ನಂತರದ ಕಾಲಘಟ್ಟದಲ್ಲಿ ಬಿರಿಯಾನಿ ತಯಾರಿಯಲಿ ಅಳವಡಿಸಿಕೊಂಡಿರಬಹುದಾದರಿಂದ ಅವುಗಳನ್ನು ಇಲ್ಲಿ ಕೈಬಿಡಲಾಗಿದೆ. ಇದು ಮೊದಲ ಬಾರಿಗೆ ಮಾಡಿರಬಹುದಾದ ಬಿರಿಯಾನಿಯಾದರಿಂದ ಬಾದಾಮಿ, ಕೇಸರಿ ಹಾಗು ಇನ್ನೂ ಹಲವು ಪದಾರ್ಥಗಳನ್ನು ಇಲ್ಲಿ ಸೇರಿಸಲಾಗಿಲ್ಲ. ಒಂದು ವೇಳೆ ಇದೇ ರೀತಿಯೇ ಬಿರಿಯಾನಿಯನ್ನು ಮಾಡಲೋಗಿ ವಾರಾಂತ್ಯವೇನಾದರೂ ಕೆಟ್ಟರೆ ಅದಕ್ಕೆ ಅವರವರೇ ನೇರ ಹೊಣೆಯಾಗುತ್ತಾರೆ! :)... )

ಬಾಡುಟವೊಂದರ ಐತಿಹ್ಯ - I

ಹೊತ್ತು ಮುಳುಗಿ ಅದಾಗಲೇ ಕಪ್ಪು ಆಗಸದಲ್ಲಿ ತುಂತುರು ಚುಕ್ಕಿಗಳು ಮಿನುಗತೊಡಗಿವೆ. ತನ್ನೊಟ್ಟಿಗಿದ್ದ ನಾಲ್ವರು ಸೈನಿಕರು ತಮ್ಮ ತಮ್ಮ ಖಡ್ಗಗಳಿಂದ ಖಣಖಣ ಶಬ್ದವನ್ನು ಹೊಮ್ಮಿಸುತ್ತಾ ಯುದ್ಧಕ್ಕೆ ತಯಾರಿ ನೆಡೆಸುತ್ತಿದ್ದಾರೆ. ಯುದ್ಧದ ಸ್ಥಳ ತಾನಿರುವ ಜಾಗದಿಂದ ಸುಮಾರು ಐವತ್ತು ಕ್ರೋಶ ದೂರದ್ಲಲಿದೆ. ಆನೆ, ಕುದುರೆ, ಒಂಟೆಗಳ ಜೊತೆಗೆ ಎರಡೂ ಕಡೆಯ ಲಕ್ಷಾಂತರ ಸೈನಿಕರ ರೋಷ, ಭಯ, ಧೈರ್ಯ, ಚೀರುವಿಕೆ, ರೋಧನೆ, ರಕ್ತ, ಬಳಲಿಕೆ, ದುಃಖ, ಸಾವು.. ಅಬ್ಬಬ್ಬಾ ಎಷ್ಟೆಲ್ಲಾ ಭಾವಸ್ಥಿತಿಗಳುಗಳು! ನಾನೊಬ್ಬ ಅಡುಗೆಯವ. ಡೇರೆಯಲ್ಲಿರುವ ದಿನಸಿಗಳನ್ನು ಕಾಪಾಡುವ ಸಲುವಾಗಿ ಇರುವ ಈ ನಾಲ್ಕು ಸೈನಿಕರ ರಣೋನ್ಮಾದ ಭಾವಗಳನ್ನು ಕಂಡೇ ಮೈಕೈಗಳೆಲ್ಲ ನಡುಗುತ್ತಿವೆ, ಇನ್ನು ಯುದ್ಧವನ್ನು ಸಾಕ್ಷಾತ್ ಕಣ್ಣುಗಳಿಂದ ನೋಡುವ ಧೈರ್ಯವಿದೆಯೇ? ಯಾ ಅಲ್ಲಾ… ನನ್ನನು ಜೀವಮಾನವಿಡೀ ಒಬ್ಬ ಅಡುಗೆಯುವನಾಗಿಯೇ ಇರಿಸು. ಯುದ್ಧದಲ್ಲಿ ಸಾಧ್ಯವಾಗದ್ದನ್ನು ನನ್ನೀ ಪಾಕಜ್ಞಾನದಲ್ಲಿ ಗಳಿಸಿಕೊಳ್ಳುವೆ. ಸಾಧಿಸುವೆ. ಮರುಭೂಮಿಯ ನೆಲಕ್ಕೆ ನೀರನ್ನು ಸುರಿದಂತೆ ಕಣ್ಮುಚ್ಚಿ ಬಿಡುವಷ್ಟರಲ್ಲಿ ತಟ್ಟೆಯನ್ನೇ ಖಾಲಿ ಮಾಡುವ ದೇಹಗಳಿಗೆ ರುಚಿಕಟ್ಟಾದ ಊಟವನ್ನು ಮಾಡಿ ತಣಿಸುವುದು ಸಹ ಏನು ಸುಲಭದ ಕೆಲಸವೇ? ಅದೇನೇ ಆಗಲಿ. ನನ್ನ ಅಡುಗೆಯ ಕೈಚಳಕದಿಂದ ಸೈನಿಕರೆಲ್ಲರ ವಿಶ್ವಾಸವನ್ನು ಗಳಿಸಕೊಳ್ಳಬೇಕು. ಮುಂದೊಂದು ದಿನ ರಾಜರಮನೆಯ ಮುಖ್ಯ ಅಡುಗೆಯ ಭಟ್ಟನಾಗಿ ನಾಲ್ಕಾರು ಜನರಿಂದ ಸಲಾಂಗಳನ್ನು ಗಿಟ್ಟಿಸಿಕೊಳ್ಳಬೇಕು ಎನ್ನುತ್ತಿರುವಾಗಲೇ ಒಬ್ಬ ಸೈನಿಕ ಏದುಸಿರು ಬಿಡುತ್ತ ನಾನಿರುವಲ್ಲಿಗೆ ಓಡಿ ಬಂದು 'ರಣರಂಗದಲ್ಲಿ ಯುದ್ಧ ತೀವ್ರಗೊಂಡಿದ್ದು ಅದು ಬೇಗನೆ ಮುಗಿಯುವ ಹಾಗೆ ಕಾಣುತ್ತಿಲ್ಲವಂತೆ. ನಾಳೆಯ ಅಪರಾಹ್ನದ ಹೊತ್ತಿಗೆ ಗಾಯಗೊಂಡ ಹತ್ತಿಪ್ಪತ್ತು ಸೈನಿಕರು ನಮ್ಮ ಡೇರೆಗೆ ವಿಶ್ರಾಂತಿಗೆ ಬರಲಿದ್ದಾರಂತೆ.ಅತಿ ರುಚಿಕಟ್ಟಾದ ಮಾಂಸದ ಊಟವನ್ನು ಮಾಡಿ ಬಡಿಸಿ ಅವರ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಜ್ಞೆ ಸ್ವತಃ ಶೆಹನ್ ಶಾ ರಿಂದ ಬಂದಿದೆ..' ಪಾರಿವಾಳದ ಕಾಲಿಗೆ ಕಟ್ಟಿದ್ದ ಬಟ್ಟೆಯ ಮೇಲೆ ಬರೆದಿದ್ದ ಅಕ್ಷರಗಳನ್ನು ಓದುತ್ತಾ ನನಗೆ ಕೇಳುವಂತೆ ಹೇಳಿದನಾತ.

ಶೆಹನ್ ಶಾರ ಹೆಸರು ಕೇಳಿಯೇ ಅರ್ಧ ಅಧೀರನಾದ ನಾನು ಮುಂದೇನು ಮಾಡಬೇಕೆಂದು ತೋಚಲಿಲ್ಲ. ಗೋಧಾಮಿನಲ್ಲಿ ಹೇಳಿಕೊಳ್ಳುವಂತಹ ವಿಶಿಷ್ಟ ಪದಾರ್ಥಗಳೇನೂ ಇರಲಿಲ್ಲ. ದೇಶದ ಉತ್ತರ ಪ್ರಾಂತ್ಯದಿಂದ ತರಿಸಿರುವ, ರಾಜಮನೆಯಲ್ಲಿ ಮಾಡುವ ವಿಶಿಷ್ಟವಾದ ಅಕ್ಕಿಯೇನೋ ಇದೆ. ಜೊತೆಗೆ ಒಂತಿಷ್ಟು ಈರುಳ್ಳಿ, ಶುಂಠಿ, ಕೆಂಪುಮೆಣಸು, ತುಪ್ಪ, ಸಂಬಾರ, ಹಸಿರುಮೆಣಸು, ಬೆಳ್ಳುಳ್ಳಿ, ಚಕ್ಕೆ, ಲವಂಗಗಳಿಂದ ಹಾಗು ಇತರೆ ಮಸಾಲ ಪದಾರ್ಥಗಳಿಂದ ಕೂಡಿದ ಒಂದೆರೆಡು ಗಂಟುಗಳಿವೆ. ತುಸು ಹೊತ್ತು ಸುಮ್ಮನಾದ ನಾನು ನನ್ನೊಳಗೆ ಜರುಗುತ್ತಿದ್ದ ಗೊಂದಲದ ಅಲೆಗಳನ್ನು ಮುಖದ ಮೇಲೆ ವ್ಯಕ್ತಪಡಿಸಲಾಗದೆ ಕೂತೆ. ಸೈನಿಕ ಅತ್ತ ಹೋದಮೇಲೆ ಮತ್ತದೇ ಚಿಂತೆ ಕಾಡತೊಡಗಿತು. ಹಸಿರು ಬಾಳೆಎಲೆಯ ಮೇಲೆ ಅಚ್ಚಬಿಳಿಯ ಹಬೆಯಾರುವ ಬಿಸಿಬಿಸಿಯಾದ ಅನ್ನದ ರಾಶಿಯೊಂದಿದ್ದರೆ ಒಂದಿನಿತು ಉಪ್ಪಿನ ಕಾಯಿಯೂ ಮುಷ್ಟಾನ್ನ ಭೋಜನದ ಸವಿಯನ್ನು ಒದಗೀಸಿತು. ಜೊತೆಗೆ ಮಡಕೆಯಲ್ಲಿ ತುಂಬಿ ಹಸಿ ಮಣ್ಣಿನಲ್ಲಿ ಹುದುಗಿಸಿರುವ ಮೊಸರೆನೋ ಇದೆ. ಒಂದೆರೆಡು ಸೌಟು ಗಟ್ಟಿ ಮೊಸರು, ಬೆಂಕಿಯ ಕೆಂಡಕ್ಕೆ ಒಡ್ಡಿ ಬಾಡಿಸಿದ ಒಂದು ಸಣ್ಣ ಗಾತ್ರದ ಈರುಳ್ಳಿ, ಒಂದೆರೆಡು ಎಳೆಯ ಹಸಿರುಮೆಣಸಿನ ಕಾಯಿ ಜೊತೆಗೆ ತುರಿತುರಿಯಾದ ಬಿಸಿಮಾಡಿದ ತುಪ್ಪ... ಇಷ್ಟು ಸಾಕು ಸೈನಿಕರ ನಾಲಿಗೆಯನ್ನು ತಣಿಸಲು. ಮೇಲಾಗಿ ಸೈನಿಕರು ಪೆಟ್ಟು ತಿಂದು ಧಣಿದು ಬಂದವರು. ಹಸಿದು ಬರಬಿದ್ದ ಹೊಟ್ಟೆಗೆ ಏನಾದರೇನು? ಎಂದು ಸಮಾಧಾನ ತಂದುಕೊಳ್ಳಲು ಪ್ರಯತ್ನಿಸಿದರೂ ರಾಜನ ಕಟ್ಟಾಜ್ಞೆಯನ್ನು ಅಷ್ಟು ಹಗುರವಾಗಿ ಪರಿಗಣಿಸಲು ಸಾಧ್ಯವಾಗಲಿಲ್ಲ. ತುಸು ಹೊತ್ತು ಆಕಾಶವನ್ನು ಧಿಟ್ಟಿಸತೊಡಗಿದೆ. ಕೂಡಲೇ ಉಪಾಯವೊಂದು ಹೊಳೆಯಿತು. ಪರಿಣಾಮ ರಾತ್ರಿಯ ಊಟಕ್ಕೆ ಮಾಡುವ ಅಡುಗೆಯಲ್ಲಿ ಆ ಪ್ರಯೋಗವನ್ನು ಮಾಡಬಯಸಿದೆ. ಆದರೆ ಗುರಿ ಗೊತ್ತಿಲ್ಲದ ಕವಲೊಡೆದ ಹಲವು ದಾರಿಗಳ ಕೇಂದ್ರಬಿಂದುವಿನಲ್ಲಿ ನಿಂತಂತಾಯಿತು. ಊಟ ರುಚಿಯಾಗದಿದ್ದರೆ ನಾಲ್ವರು ಸೈನಿಕರನ್ನು ಹೇಗೋ ಸಂಭಾಳಿಸಬಹುದು. ಆದರೆ ಹತ್ತಾರು ಗಜಕಾಯದ ದಾಂಡಿಗರ ಮುನಿಸು ನನ್ನ ಪ್ರ್ರಾಣಕ್ಕೇ ಕುತ್ತು ತರುವುದಂತೂ ಸುಳ್ಳಲ್ಲ!

ನಾವುಗಳು ಜನ ಐದಾದ್ದರಿಂದ ರಾತ್ರಿಯ ಊಟಕ್ಕೆ ಪದಾರ್ಥದ ಪರಿಮಾಣವೂ ಅಷ್ಟೇನೂ ಹೆಚ್ಚಾಗಿ ಬೇಕಾಗಿರಲಿಲ್ಲ. ಯೋಚನೆಯಲ್ಲೇ ಮುಳುಗಿದ್ದ ನನಗೆ ಸೈನಿಕರು ನಾನಿದ್ದಲಿಗೆ ಬಂದ ಸದ್ದು ಅರಿವಿಗೆ ಬಾರದಾಯಿತು. ಒಂದರ ಮೇಲೊಂದು ಖಡ್ಗವನ್ನು ಎಸೆದ ಅವರು ‘ಊಟಕ್ಕೆಟಕ್ಕೆ ಏನು ತಯಾರಿ?' ಎಂಬಂತೆ ನನ್ನನ್ನೇ ಗುರಾಹಿಸತೊಡಗಿದರು! ಕೂಡಲೇ ಎಚ್ಚೆತ್ತುಕೊಂಡ ನಾನು ಏನನ್ನೂ ಉತ್ತರಿಸಲಾಗದೆ ಅವಸರವಸರವಾಗಿ ಕಾರ್ಯೋನ್ಮುಖನಾದೆ. ಹಿಂದೆಂದೂ ಈ ಬಗೆಯ ಮೈಮರೆಯುವಿಕೆ ಬಂದಿರಲಿಲ್ಲ. ರಾಜರ ಕಟ್ಟಪ್ಪಣೆಯೋ ಏನೋ ಇಂದು ಮನಸ್ಸು ಬಹಳಾನೇ ಬೆದರಿದೆ. ಆದರೆ ಈ ಕ್ಷಣಕ್ಕೆ ನನಗೆ ಬಂದೊದಗಿರುವ ಸವಾಲೆಂದರೆ ಮಧವೇರಿದ ಆನೆಗಳಂತೆ ಘೀಳಿಡುವ ನಾಲ್ವರು ಸೈನಿಕರ ಹಸಿವನ್ನು ನೀಗಿಸುವುದು. ಇನ್ನೇನು ಇವರು ತುಸು ಹೊತ್ತಿನಲ್ಲಿ ಪಕ್ಕದಲ್ಲೇ ಇರುವ ಕೆರೆಗೆ ಹೋಗಿ ಸ್ನಾನಾದಿಗಳನ್ನು ಮಾಡಿ ವಾಪಸ್ಸಾಗುತ್ತಾರೆ. ಬೆವತು ದಣಿದ ದೇಹ ಬಯಸಿದರೆ ಒಂದಷ್ಟು ಕಾಲ ಈಜಾಡುವುದೂ ಉಂಟು. ಆದರೆ ಬಂದ ಕೂಡಲೇ ಘಮಘಮಿಸುವ ಭೀಮಹಾರವೊಂದು ಸಿದ್ಧವಿರಬೇಕು. ಇಂದು ಯಾವುದೇ ಶಿಕಾರಿಯಾಗದಿದ್ದ ಕಾರಣ ಮಾಂಸದ ಅಡಿಗೆ ಇರುವುದಿಲ್ಲವೆಂಬುದು ಅವರುಗಳಿಗೆ ತಿಳಿದಿರುತ್ತದೆ. ಸಮಯ ಓಡತೊಡಗಿತು.

ಅಲ್ಲಿಯವರೆಗೂ ಒಂದೇ ಒಲೆಯಲ್ಲಿ ಅಡುಗೆಯನ್ನು ಮಾಡುತ್ತಿದ್ದ ನಾನು ಸಮಯ ಸಾಧನೆಗಾಗಿ ಎಂಬಂತೆ ತುಸು ಪಕ್ಕದಲ್ಲಿಯೇ ಮೂರು ಕಲ್ಲುಗಳಿಂದ ಮತ್ತೊಂದು ಒಲೆಯನ್ನು ಮಾಡಿಕೊಂಡೆ. ಅಡುಗೆ ಏನೇ ಆದರೂ ಅನ್ನವೆಂಬ ಮೂಲಧಾತು ಅದರಲ್ಲಿ ಇದ್ದಿರಲೇಬೇಕು. ಹಾಗಾಗಿ ಎಲ್ಲಕಿಂತ ಮೊದಲು ಅನ್ನವನ್ನು ಮಾಡೋಣವೆಂದು ನಾಲ್ಕು ಪಾವು ಅಕ್ಕಿಯನ್ನು ಮಡಿಕೆಯ ಪಾತ್ರೆಯೊಂದಕ್ಕೆ ಸುರಿದು ಪಕ್ಕದಲ್ಲೇ ಇದ್ದ ಸಣ್ಣ ಝರಿಯ ಬಳಿಹೋಗಿ ತೊಳೆದು, ಜಾಲಾಡಿಸಿ, ನೀರನ್ನು ತುಂಬಿಕೊಂಡು ತಂದೆ. ಹಳೆಯ ಒಲೆಯ ಮೇಲೆ ಮಣ್ಣಿನ ಮಡಕೆಯನ್ನು ಆಸೀನಪಡಿಸಿ ಬೆಂಕಿಯೊತ್ತಿಸಿದ ಮೇಲೆ ಅರ್ಧ ಕೆಲಸವೇ ಮುಗಿಯಿತು ಎನ್ನುವಷ್ಟು ನೀರಾಳಭಾವ ಮನಸ್ಸನ್ನು ತುಂಬಿತು. ಬೆಂಕಿಯ ಕಾವು ಹಸಿವನ್ನು ನೀಗಿಸುವ ಪುಣ್ಯಕಾರ್ಯಕ್ಕೆ ಎಡೆಬಿಡದೆ ದುಡಿಯುವಂತೆ ಹುರಿಯತೊಡಗಿತು. ತಾನು ಸುಟ್ಟು ಇತರರ ಹೊಟ್ಟೆಯನ್ನು ತುಂಬುವ ತ್ಯಾಗಮಯಿ ಜೇವವೇನೋ ಅದು ಎಂಬಂತೆ ಅದು ನನಗೆ ಭಾಸವಾಹಿತು.ಲೋಕಾರೂಢ ಚಿಂತನೆಗೆ ಅದು ಸಮಯವಲ್ಲ. ಅನ್ನವೇನೋ ಇನ್ನು ಕೆಲನಿಮಿಷಗಳಲ್ಲಿಯೇ ಆಗಿಬಿಡುತ್ತದೆ. ರಾಜಧಾನಿಯಿಂದ ಸೊಪ್ಪು ತರಕಾರಿಗಳನ್ನೊತ್ತು ಬರುವ ಒಂಟೆಗಳ ಸಾಲು ಬೇರೆ ವಿಳಂಬವಾಗಿದೆ.

ಕಳೆದ ಕೆಲದಿನಗಳಿಂದ ಇಲ್ಲಿಯೇ ತಂಗಿ ಸ್ಥಳಪರಿಚವಿದ್ದ ನಾನು ಕಾಡಿನ ಅಲ್ಲಲಿ ಬೆಳೆದ್ದಿದ್ದ ಭಕ್ಷಿಸಲು ಯೋಗ್ಯವಾದ ಹಸಿರು ತರಕಾರಿ, ಸೊಪ್ಪು ಹಾಗು ಗೆಡ್ಡೆ ಗೆಣೆಸುಗಳನ್ನು ಗಮನಿಸಿದ್ದೆ. ಅನಿವಾರ್ಯವಿದ್ದ ಕಾರಣ ಒಂದು ಅಂದಾಜಿನ ಮೇಲೆ ತಿಂಗಳಬೆಳಕಿನ ಮಬ್ಬಿನಲ್ಲಿಯೇ ಕಟ್ಟಿಗೆಯ ಬೆಳಕೊಂದನ್ನು ಹಿಡಿದು ಸ್ಥಳವನ್ನು ಗುರುತುಮಾಡಿಕೊಂಡು ಹೆಜ್ಜೆ ಹಾಕಿದೆ. ಡೇರೆಯಿಂದ ಹೆಚ್ಚು ದೂರಹೋಗಬಾರದೆಂಬ ಹೆಚ್ಚರಿಕೆಯ ಕರೆಘಂಟೆ ತಲೆಯೊಳಗೆ ಸದ್ದುಮಾಡುತ್ತಲೇ ಇದ್ದಿತು. ದೇಶದ ಅಲ್ಲಲಿ ಇತ್ತೀಚಿಗೆ ಚಾಲ್ತಿಯಲ್ಲಿ ಬಂದಿರುವ ಹಸಿರಾದ ಹುಳಿಹಣ್ಣನ್ನು ಹಲವೆಡೆ ಅಡುಗೆಗೆ ಬಳಸುವುದನ್ನು ನೋಡಿದ್ದೇನೆ. ಹಸಿರಿರುವ ಇದನ್ನು ಕಿತ್ತು ಇಟ್ಟರೆ ಕೆಲದಿನಗಳಲ್ಲೇ ಕಡುಕೆಂಪುಬಣ್ಣಕ್ಕೆ ತಿರುಗುತ್ತದೆ. ಮೃದುವಾಗುತ್ತದೆ. ಊರಿನ ಗಲ್ಲಿಯ ಮಕ್ಕಳಂತೂ ಹೊಟ್ಟೆ ಬಿರಿಯುವಂತೆ ಇದನ್ನು ಕಾಪುತ್ತ ತಿಂದು ಹೊಟ್ಟೆ ನೋವೆನುತ ಬಿದ್ದು ಹೊರಳಾಡುವುದುಂಟು. ಈಗ ಅದೇ ಹಣ್ಣಿನ ಗಿಡವನ್ನು ನನ್ನ ಕಾಲ ಬಳಿಯೇ ಕಂಡೆ. ಎರಡಡಿ ಉದ್ದದ ಗಿಡದ ಎಲೆಗಳು ತುಂಬೆ ಗಿಡಗಳ ಎಲೆಗಳಂತೆಯೇ ಕಾಣುತ್ತವೆ. ಹೆಸರಿಡದ ಆ ಹಸಿರು ಗಿಡಗಳು ಹಣ್ಣುಗಟ್ಟಿವೆಯೇ ಎಂದು ಪರೀಕ್ಷಿಸಿದರೆ ಅದಾಗಲೇ ಕಾಡ ಇಲಿ ಅಳಿಲುಗಳು ಕಾಯಿಯ ತೊಟ್ಟಷ್ಟನ್ನೇ ಬಿಟ್ಟು ಪೂರಾ ಗೊಂಚಲ್ಲನ್ನು ತಿಂದು ಜಾಗ ಕಿತ್ತಿವೆ. ಆದರೆ ಛಲ ಬಿಡಲಿಲ್ಲ. ಈ ಜಾತಿಯ ಕಾಯಿ ಒಂದೋ ಎರಡು ಮಾತ್ರವಷ್ಟೇ ಬೆಳೆಯವು. ತಮ್ಮ ಸಂಸಾರದ ಕನಿಷ್ಠ ಹತ್ತಿಪ್ಪತ್ತು ಇತರೆ ಗಿಡಗಳಿಗೆ ಜೊತೆಗೆ ಜನ್ಮನೀಡುವವು. ಕೊಂಚ ಅತ್ತಿಂದಿತ್ತ ಅಲೆದಾಡಿದ ಮೇಲೆ ಮುಳ್ಳು ಆವರಿಸಿದ ಪೊದೆಗಳ ಹಿಂದೆ ಇಂಥದ್ದೇ ಮತ್ತೊಂದು ಗಿಡ ಕಂಡಿತು. ಹಣ್ಣು ಹಣ್ಣಾಗಿದ್ದ ಆ ಗಿಡದ ತುಂಬೆಲ್ಲ ಕೆಂಪು ಕಾಯಿಗಳ ರಾಶಿ ರಾಶಿ ಗೊಂಚಲುಗಳು! ಕೂಡಲೇ ಕವಚದಂತೆ ಆವರಿಸಿದ ಪೊದೆಯನ್ನು ಪಕ್ಕಕ್ಕೆ ಸರಿಸಿ ಕಳೆತ ಮಾವಿನಹಣ್ಣುಗಳಂತೆ ಬಾಡಿ ಬತ್ತಿದ ಹಣ್ಣುಗಳನ್ನು ಒಂದೊಂದಾಗಿಯೇ ಕೀಳತೊಡಗಿದೆ. ಪೂರಾ ಕಲೆತಿದ್ದ ಹಣ್ಣೊಂದನ್ನು ಅದರ ಲೋಳೆಯಾದ ಸಣ್ಣ ಸಣ್ಣ ಬೀಜಗಳು ಹೊರಬರುವಂತೆ ಕೈಯಲ್ಲಿ ಹಿಸುಕಿ ಹಾಕಿದೆ. ಆಗೊಮ್ಮೆ ಈಗೊಮ್ಮೆ ಬರುವ ಮಳೆಯ ಮಹಿಮೆಗೆ ಇವುಗಳ ಸಂಸಾರ ಇನ್ನೂ ವೃದ್ಧಿಸಲಿ ಎಂಬ ಆಶಯದೊಂದಿಗೆ..

ಡೇರೆಗೆ ಬಂದವನೇ ಮೀಯಲು ಹೋದ ಸೈನಿಕರು ಇನ್ನು ಬಂದಿರಲಿಲ್ಲವೆಂಬ ಖಾತ್ರಿಯನ್ನು ಮಾಡಿಕೊಂಡು ಬತ್ತಳಿಕೆಯಲ್ಲಿ ತುಂಬಿಕೊಂಡು ಬಂದಿದ್ದ ಕೆಂಪು ಕಾಯಿಗಳನ್ನು ಅಥವಾ ಹಣ್ಣುಗಳನ್ನು ಮತ್ತದೇ ಝರಿಯ ಬಳಿಗೋಗಿ ತೊಳೆದು ತಂದೆ. ಸಾಂಬಾರ ಪದಾರ್ಥಗಳ ಗಂಟುಗಳನ್ನು ಬಿರಬಿರನೆ ತಂದು ಒಂದೊಂದಾಗಿಯೇ ಬಿಚ್ಚತೊಡಗಿದೆ. ಏನು ಮಾಡಹೋಗುತ್ತಿರುವನೆಂದು ತಿಳಿಯುತ್ತಿಲ್ಲ. ಆದರೂ ಯಾರೋ ಅಣಿಮಾಡಿ ಮಾಡಿಸುತ್ತಿರುವಂತೆ ಕೈಗಳು ತಮ್ಮ ಪಾಡಿಗೆ ಬೇಕೆನಿಸಿದ ವಸ್ತುಗಳನ್ನು ಜೋಡಿಸಿಕೊಳ್ಳತೊಡಗಿದವು. ಗಂಟಿನಿಂದ ನಾಲ್ಕೈದು ಈರುಳ್ಳಿಗಳನ್ನು ಹೊರಗೆಳೆದು ಹೆಚ್ಚತೊಡಗಿದೆ. ಕಣ್ಣೀರು ಬಾರದಿರಲಿ ಎನುತ ಅವುಗಳ ಒಂದೆರೆಡು ಸಿಪ್ಪೆಗಳನ್ನು ತಲೆಗೂದಲಿನ ಮದ್ಯಕ್ಕೆ ತುರುಕಿಸಿದರೆ ಕಣ್ಣೀರು ಒಮ್ಮಿಂದೊಮ್ಮೆಗೆ ಮಂಗಮಾಯಾ! ಅರ್ಧಚಂದ್ರಾಕೃತಿಯ ಹತ್ತಾರು ಹೋಳುಗಳ ನಂತರ ತೊಳೆದು ತಂದಿದ್ದ ಕೆಂಪು ತರಕಾರಿಯನ್ನು ಮೃದುವಾಗಿ ತುಂಡರಿಸತೊಡಗಿದೆ. ಹುಳಿಹುಳಿಯಾದ ವಾಸನೆ ಮೂಗನ್ನು ಬಡಿಯುತ್ತಲೇ ಬೇಡವೆನಿಸಿದರೂ ಮೂಗು ಕ್ರಮೇಣ ಅದಕ್ಕೆ ಹೊಗ್ಗಿಕೊಳ್ಳತೊಡಗಿತು. ನಾಲ್ಕೈದು ಕೆಂಪು ಹಣ್ಣುಗಳನ್ನು ಕೊಯ್ದು ಇನ್ನೇನು ಮಸಾಲಾ ಪದಾರ್ಥಗಳಿಗೆ ಕೈಹಾಕಬೇಕು ಎನ್ನುವಷ್ಟರಲ್ಲಿ ಕಾಡುಕೋಳಿಗೆ ಹಾಕಿದ್ದ ಬಲೆಯ ದಿಕ್ಕಿನಿಂದ ಪಟಪಟನೆ ಬಡಿದುಕೊಳ್ಳುತ್ತಿದ್ದ ರೆಕ್ಕೆಗಳ ಸದ್ದು ಕೇಳಿತೊಡಗಿತು….

ಒಣಗಿದ ಬಳ್ಳಿಯೊಂದಕ್ಕೆ ಸರಗುಣಿಕೆಯನ್ನಾಕಿ ಒಂದು ಬದಿಯನ್ನು ಪೊದೆಯೊಂದಕ್ಕೆ ಬಿಗಿದು ಕಟ್ಟಿ ನೆಲದ ಅಲ್ಲಲ್ಲಿ ಅಕ್ಕಿಯ ಕಾಳುಗಳನ್ನು ಚೆಲ್ಲಿ ಬಂದಿದ್ದೆ. ಇಂತಹ ಕನಿಷ್ಠ ಪಂಜರಕ್ಕೆ ಯಾವ ತಲೆಕೆಟ್ಟ ಹಕ್ಕಿಯೂ ಸಹ ಬಂದು ಬೀಳುವುದಿಲ್ಲವೆಂಬುದು ಗೊತ್ತಿದ್ದರೂ ಗ್ರಹಚಾರ ಕೆಟ್ಟ ಜೀವಕ್ಕೆ ಹನಿನೀರೂ ಪ್ರವಾಹವಾಗಬಹುದೆಂದುಕೊಂಡು ಬಂದಿದ್ದೆ. ಈಗ ರೆಕ್ಕೆಗಳ ಚಟಪಟ ಸದ್ದು ಅದೇ ದಿಕ್ಕಿನಿಂದ ಬಂದ ಕಾರಣ ಮಸಾಲೆ ಪದಾರ್ಥಗಳ ಘಂಟನ್ನು ಅಲ್ಲಿಯೇ ಬಿಟ್ಟು ಸದ್ದು ಬರುತ್ತಿದ್ದ ದಿಕ್ಕಿನಲ್ಲಿ ಬಿರಬಿರನೆ ಹೆಜ್ಜೆಹಾಕಿದೆ. ಕೆಲಕ್ಷಣದವರೆಗೂ ಒಂದೇ ಸಮನೆ ಕೇಳುತ್ತಿದ್ದ ರೆಕ್ಕೆಗಳ ಸದ್ದನ್ನು ಇದ್ದಕ್ಕಿದಂತೆ ಯಾರೋ ತಡೆದು ನಿಲ್ಲಿಸಿದಂತಾಯಿತು. ಒಂದಿಷ್ಟು ತಿಂಗಳ ಬೆಳಕು ಆಕಾಶದಲ್ಲಿ ಮಿನುಗುತ್ತಿದ್ದಾರೂ ಅದು ಕರಾಳ ಕಾಡಿನ ಕಪ್ಪು ಧೈತ್ಯವನ್ನು ಕರಗಿಸಲಾಗಿರಲಿಲ್ಲ. ರೆಕ್ಕೆಗಳ ಶಬ್ದ ನಿಂತಕೂಡಲೇ ಮಹಾಮೌನವೊಂದು ನಾನಿಂತಿರುವ ಜಾಗವನ್ನು ಆವರಿಸಿತು. ಏಕೋ ಎದೆ ಒಮ್ಮೆಲೇ ಬಡಿದುಕೊಳ್ಳತೊಡಗಿತು. ಏನಾದರಾಗಲಿ ಹುಳಿಹಣ್ಣು ಹಾಗು ಅನ್ನವನು ಬೆರೆಸಿ ಏನಾದರೊಂದು ಆಹಾರವನ್ನು ಮಾಡಬಹುದು. ಹೇಗೋ ಇಂದು ಮಾಂಸಾಹಾರವಿಲ್ಲವೆಂಬುದು ಸೈನಿಕರಿಗೆ ತಿಳಿದೇ ಇದೆ. ಸುಮ್ಮನೆ ಏಕೆ ಮುನ್ನೆಡೆದು ಅಪಾಯವನ್ನು ಎದೆಯ ಮೇಲೆಳೆದುಕೊಳ್ಳಲಿ? ಜನನಿಬಿಡ ಇಂತಹ ಪ್ರದೇಶಗಳಲ್ಲಿ ಭೂತ ಪ್ರೇತಗಳ ಉಪಟಳವೇನು ಕಡಿಮೆ ಇರುವುದಿಲ್ಲ! ಎಂದುಕೊಂಡು ಇನ್ನೇನು ಹೆಜ್ಜೆಯನ್ನು ಹಿಂದಿಡಬೇಕು ಎನ್ನುವಷ್ಟರಲ್ಲಿ ದಬದಬ ಸದ್ದನ್ನು ಮಾಡುತ್ತಾ ಏನೋ ನನ್ನೆಡೆಗೆ ಓಡಿಬರುವ ಸದ್ದು ಕೇಳಿತು…!

Will be Continued ...

Thursday, July 5, 2018

ನಾಯಕರುಗಳಿಗೇ ಇಲ್ಲದ 'ಮುಲಾಜು' ಇಂಥ ಬಯೋಪಿಕ್ ಗಳನ್ನು ಮಾಡಹೋಗುವ ನಿಮಗ್ಯಾಕೆ ಹಿರಾನಿ?


ಈ ವರ್ಷದ ದಿ ಮೋಸ್ಟ್ ಎಕ್ಸ್ಪೆಕ್ಟೆಡ್ ಚಿತ್ರಗಳಲ್ಲಿ ಒಂದಾದ 'ಸಂಜು' ಕೊನೆಗೂ ತೆರೆಯ ಮೇಲೆ ಬಂದಿದೆ. ಚಿತ್ರ ಜನಮಾನಸದಲ್ಲಿ ಕುತೂಹಲವನ್ನು ಮೂಡಿಸಲು ಹಲವಾರು ಕಾರಣಗಳಿದ್ದಿರಬಹುದು. ಮೊತ್ತಮೊದಲನೆಯದಾಗಿ ನಿರ್ದೇಶಕ ರಾಜ್ಕುಮಾರ್ ಹಿರಾನಿ. ಹಿರಾನಿ ಸದ್ಯಕ್ಕಂತೂ ಬಾಲಿವುಡ್ ನಲ್ಲಿ ಪಕ್ಕ 'ಹೀರಾ' ರೆಂದೇ ಹೇಳಬಹುದು. ತಾನು ನಿರ್ದೇಶನ ಮಾಡಿರುವ ಅಷ್ಟೂ ಚಿತ್ರಗಳು ಸೂಪರ್ ಡೂಪರ್ ಹಿಟ್ ಗಳಾಗಿ ಪ್ರತಿ ಬಾರಿಯೂ ಸೆಂಚೂರಿಯನ್ನು ಭಾರಿಸುತ್ತಿದರೆ ಆತ ಅದ್ಯಾವ ಹೀರೊ ಅಥವಾ ಹೀರೋಯಿನ್ ಗಳಿಗೂ ಕಮ್ಮಿ ಇರುವುದಿಲ್ಲ. ಮೇಲಾಗಿ ಹಿರಾನಿ ಕೇವಲ ನಿರ್ದೇಶನವಲ್ಲದೆ ಕಥೆ, ಚಿತ್ರಕತೆ, ಎಡಿಟಿಂಗ್ ಹಾಗು ಪ್ರೊಡಕ್ಷನ್ ಗಳಲ್ಲೂ ತಮ್ಮ ಕೈಯಾಡಿಸಿದವರು. ಇಂತಹ ಒಬ್ಬ ಕಲಾಸಾಮ್ರಾಟ್ ಬರೆದು, ನಿರ್ದೇಶಿಸಿ ನಿರ್ಮಿಸಿರುವ ಚಿತ್ರವೊಂದು ಬರುತ್ತಿದೆ ಎಂದರೆ ನಿನಿಪ್ರಿಯರ ಹಪಾಹಪಿ ಹೆಚ್ಚಾಗದೇ ಇರದು. ಇದು ಅತಿ ಸಹಜವಾದ ವಿಷಯ. ಆದರೆ ಈ ಬಾರಿ ಸಂಜು ಚಿತ್ರ ಇನ್ನೂ ಹೆಚ್ಚಿನ ಗುಲ್ಲೆಬ್ಬಿಸಲು ಇರುವ ಕಾರಣ ಬೇರೆಯೇ ಇದೆ. ಅದು ಸರಿಸುಮಾರು ಇಪ್ಪತ್ತೈದು ವರ್ಷಗಳ ಕಾಲ ಪ್ರತಿ ದಿನ ಒಂದಿಲ್ಲೊಂದು ಬಗೆಯಲ್ಲಿ ಸುದ್ದಿಯಾಗುತ್ತಿದ್ದ ಸುದ್ದಿಯೊಂದರಿಂದ ಹಾಗು ಆ ಸುದ್ದಿಯ ಕೇಂದ್ರಬಿಂಧುವಾದ ವ್ಯಕ್ತಿಯೊಬ್ಬನಿಂದ. ಸಂಜಯ್ ದತ್ತ್. ದೇಶದಲ್ಲಿ ಇಂದು ಸಿನಿಮಾಗಳನ್ನು ನೋಡದಿರದ ಮಂದಿ ಕೇವಲ ಬೆರಳಣಿಕೆಯಷ್ಟಿರಬಹುದು. ಅಂತಹ ಬೆರಳೆಣಿಕೆಯ ಮಂದಿಗೂ ಈ ಒಂದು ಹೆಸರು ಚಿರಪರಿಚಿತ! ನಟನಾಗಿ, ನಾಯಕನಾಗಿ ಅನ್ನುವುದಕ್ಕಿಂತ ಹೆಚ್ಚಾಗಿ 1993 ರ ಮುಂಬೈ ಸರಣಿ ಬಾಂಬಿನ ವಿಚಾರಣೆಯ ಸಲುವಾಗಿ. 50% ನಷ್ಟು ಚಿತ್ರ ಆತನ ಆತ್ಮಕತೆಯಾದರೆ ಉಳಿದರ್ದ ಭಾಗ ಚಿತ್ರದ ಕಲ್ಪಿತ ಚಿತ್ರಕತೆಯೆಂದೇ ಹೇಳಬಹುದು! ಚಿತ್ರವನ್ನು ಚಿತ್ರಗಳಾಗಿಯೇ ನೋಡಭಯಸುವವರಿಗೆ ಸಿಗುವ ಮತ್ತೊಂದು ರೋಮಾಂಚನಕಾರಿ ವ್ಯಕ್ತಿ ರಣಬೀರ್ ಕಪೂರ್. ನಟನೆಯಲ್ಲೇನಾದರೂ ಭಾರತಕ್ಕೆ ಆಸ್ಕರ್ ತಂದುಕೊಡಬಲ್ಲ ನಟರಿದ್ದಾರೆಂದರೆ ಆದರಲ್ಲಿ ರಣಬೀರ್ ಕಪೂರ್ನ ಹೆಸರು ಇರದಿರಲು ಸಾಧ್ಯವೇ ಇಲ್ಲ, ಈ ಮಾತಿಗೆ ಮತ್ತಷ್ಟು ಪುಷ್ಟಿಕೊಟ್ಟಿದ್ದಾನೆ ಚಿತ್ರದಲ್ಲಿ ಸಂಜಯ್ ದತ್ತ್ ನ ಪಾತ್ರವನ್ನು ಕಣ್ಣಿಗೆ ಕಟ್ಟುವಂತೆ ನಿಭಾಹಿಸಿ. ಈ ಎಲ್ಲ ಕಾರಣಗಳಿಂದ ಚಿತ್ರ ತೆರೆಯಮೇಲೆ ಧೂಳೆಬ್ಬಿಸುತ್ತಿದೆ. ನೋಡುಗರನ್ನು ಎರಡೂವರೆ ಘಂಟೆಗಳ ಕಾಲ ರಂಜಿಸುತ್ತಿದೆ. ಆದರೆ ಚಿತ್ರಕತೆಯ ಸತ್ಯಾಸತ್ಯತೆಯನ್ನುಅರಿಯಬಯಸುವವರಿಗೆ, ಹಿಂದಿನ ಇತಿಹಾಸವನ್ನು ಅರೆಬರೆ ಮರೆತಿರುವವರಿಗೆ ಎರಡೂವರೆ ದಶಕಗಳ ವಿಧ್ಯಮಾನಗಳನ್ನು ಕೇವಲ ಎರಡೂವರೆ ಘಂಟೆಯಷ್ಟೇ ನೋಡಿ ಇದು ಸರಿ ಅದು ತಪ್ಪೆಂದು ಖಡಾಖಂಡಿತವಾಗಿ ನಿರ್ಧರಿಸುವುದು ದುಡುಕುತನವಾದೀತು. ಚಿತ್ರ ಮಾಡಿದ್ದು ನಿಜವನ್ನು ಬಿಚ್ಚಿಡಲೂ ಅಥವಾ ಮುಖ್ಯವಾದ ಸಂಗತಿಯನ್ನು ಮುಚ್ಚಿಡಲೊ ಎಂಬೊಂದು ಪ್ರೆಶ್ನೆ ಮಾತ್ರ ಚಿತ್ರಮಂದಿರದಿಂದ ಹೊರಬರುವ ಒಂದಿಷ್ಟು ಮಂದಿಗಂತೂ ಕಾಡದಿರದು!

1993 ರ ಮುಂಬೈ ಸರಣಿ ಸ್ಫೋಟಗಳ ನೋವು ಆಕ್ರಂಧನಗಳು ಭಾಗಶಃ ಭಾರತೀಯರಿಗೆ ತಿಳಿದಿರುವ ವಿಷಯವೇ. 1992 ರಲ್ಲಿ ಬಾಬ್ರಿ ಮಸೀದಿಯ ಕೆಡಹುವಿಕೆಯಿಂದ ಹುಟ್ಟಿಕೊಂಡ ಸಂಘರ್ಷ ಇಂದಿಗೂ ಒಂದು ತಾರ್ಕಿಕ ನೆಲೆಯನ್ನು ಮುಟ್ಟದಿರುವುದು ನಮ್ಮೆಲ್ಲರ ವಿಪರ್ಯಾಸವೇ ಸರಿ. ಸ್ಪೋಟದಲ್ಲಿ ಪ್ರತ್ಯಕ್ಷವಾಗಿ ಭಾಗಿಗೊಂಡ ಹಲವಾರು ತೆಲೆಮರೆಸಿಕೊಂಡು ಬದುಕುದ್ದಿದ್ದರೆ ಪರೋಕ್ಷವಾಗಿ ಭಾಗಿಗೊಂಡ ಹಲವರು ಇಂದಿಗೂ ಸಾವು ಬದುಕಿನ ಹೋರಾಟವನ್ನು ನೆಡೆಸುತ್ತಿದ್ದಾರೆ. ಈ ಮಾತಿನ ಒಂದಿಷ್ಟು ಪ್ರಭಾವಳಿ ಹಿಂದಿ ಚಿತ್ರರಂಗದ ಖ್ಯಾತ ಜೋಡಿ ಸುನಿಲ್ ದತ್ತ್ ಹಾಗು ನರ್ಗೀಸರ ಮಗನಾದ ಸಂಜಯ್ ದತ್ತ್ ನಿಗೂ ಅನ್ವಹಿಸುತ್ತದೆ. ಹುಟ್ಟಿನಿಂದಲೇ 'ಅಮೀರ್ ಬಾಪ್ ಕ ಬಿಗ್ದಾ ಹೂಹ ಓಲಾತ್' ಎಂಬಂತೆ ಬೆಳೆದ ಸಂಜಯ್ಗೆ ಸಹಜವಾಗಿಯೇ ಚಿತ್ರರಂಗದ ಆಕರ್ಷಣೆ ಮೂಡತೊಡಗಿತು. ಕಾಲೇಜಿನ ವಯಸ್ಸಿನಲ್ಲಿಯೇ ಕುಡಿತ, ಸಿಗರೇಟು ಹಾಗು ವಿಪರೀತವೆಂಬಂತೆ ಡ್ರಗ್ ಸ್ನ ದಾಸನಾಗಿದ್ದ ಈತ ಬಯಸದೆ ಸಿಗುವ ಸ್ಟಾರ್ ಡಮ್ ಅನ್ನು ಜೊತೆಜೊತೆಗೆ ಎಂಜಾಯ್ ಮಾಡುತ್ತಾನೆ. ಚಿತ್ರದ ಸೆಟ್ಟಿಗೂ ಡ್ರಗ್ಸ್ ನ ಮತ್ತಿನಲ್ಲಿ ಬಂದಿರುವುದುಂಟು. ಅಪ್ಪನಿಂದ ಬೈಗುಳ ತಿಂದಿರುವುದುಂಟು. ಸಾಲದಕ್ಕೆ ಸಾಲು ಸಾಲು ಹುಡುಗಿಯರ ನಂಟು. ಒಟ್ಟಿನಲ್ಲಿ ಮೀಸೆಚುಗುರಿವ ವೇಳೆಗಾಗಲೇ ವ್ಯಸನಿ ಎಂಬೊಂದು ಹಣೆಪಟ್ಟಿಯನ್ನು ಕಟ್ಟಿಕೊಂಡು ಅಲೆಯುತ್ತಿರುತ್ತಾನೆ. ಒಂದೆಡೆ ಈತನ ರಂಪಾಟನ್ನು ಹತೋಟಿಗೆ ತರಲಾಗದೆ ಕೊರಗುತ್ತಿದ್ದ ಅಪ್ಪ ಮತ್ತೊಂದೆಡೆ ಇಂದೋ ನಾಳೆಯೋ ಎಂಬಂತೆ ಕಾಲವನ್ನು ತಳ್ಳಿಕೊಂಡು ಕ್ಯಾನ್ಸರಿನೊಟ್ಟಿಗೆ ಬದುಕುತ್ತಿದ್ದ ಅಮ್ಮ. ತಂಗೀಯರಿಬ್ಬರೂ ಅಣ್ಣನ ಪಾಡನ್ನು ಕಂಡು ಸೊರಗಿಕೊಂಡಿದ್ದರು. ಕೆಲದಿಗಳಲ್ಲೇ ನರ್ಗೀಸ್ ಳ ಸಾವು. ತದಾನಂತರ ಕಾಡಿ ಬೇಡಿಯೋ ಅಮೆರಿಕದೊಂದು ರಿಹ್ಯಾಬಿಟೇಷನ್ ಕ್ಯಾಂಪ್ಗೆ ಸೇರ್ಪಡೆ. ಹೀಗೆ ಹೇಗೋ ಒದ್ದಾಡಿ ಗುದ್ದಾಡಿ ತನ್ನ ವ್ಯಸನವನ್ನು ಬಿಟ್ಟು ಬಂದ ಈತನಿಗೆ ಸಿನಿಮಾರಂಗಕ್ಕೆ ಮತ್ತೊಮ್ಮೆ ಎಂಟ್ರಿ ಕೊಡುವುದೇನು ಕಷ್ಟವಿರಲಿಲ್ಲ. ಪೋಷಕರ ಹೆಸರು. ಇನ್ನೇನು ಬೇಕು. ಸರಿ, ಎಲ್ಲ ಆಯಿತು, ಬಿಸಿ ರಕ್ತ. ಚಟಗಳು ಸಾಮಾನ್ಯ. ಇನ್ನು ಮುಂದೆಯಾದರೂ ತಿಳಿದು ಅರಿತು ಹೆಜ್ಜೆಯಿಡಬೇಕು ಎಂಬಂತ ಅರಿವು ಇಪ್ಪತೈದು ವರ್ಷದ ಈತನಿಗೆ ಬಂದಿರಬೇಕಿತ್ತು. ಆದರೆ ಈತ ಮಾಡಿದ್ದೇನು? ಡ್ರಗ್ಸ್ ಎಂಬೊಂದು ಚಟವನ್ನು ಬಿಟ್ಟು ಬೇರೆಲ್ಲ ವ್ಯಸನಗಳು ಮೊದಲಿನಂತೆಯೇ ಸರಾಗವಾಗಿ ಮುಂದುವರೆಸಿದ. ಆದರೆ ಈ ಬಾರಿ ಅವುಗಳೊಟ್ಟಿಗೆ ಮತ್ತೊಂದು ಹೊಸ ಸೇರ್ಪಡೆ. ಅಂಡರ್ ವರ್ಲ್ಡ್! ತೆರೆಯ ಮೇಲಷ್ಟೇ ಅಲ್ಲದೆ ನಿಜಜೀವನದಲ್ಲೂ ಹೀರೋಗಿರಿಯ ಶೋಕಿಗೋ ಅಥವ ತನ್ನ ಅರೆಪುಕ್ಕಲುತನವನ್ನು ಮರೆಮಾಚಿಕೊಳ್ಳಲೋ ಅಥವಾ 'ಸಂಜು ಬಾಬಾ' ಎಂಬ ಬಾಬಾನಾಗುವ ಕನಸಿಗೂ ಅಥವಾ ಚಿತ್ರದಲ್ಲಿ ‘ಮಾರ್ಮಿಕ’ವಾಗಿ ತೋರಿಸಿರುವಂತೆ ತನ್ನ ಹಾಗು ತನ್ನ ಕುಟುಂಬದ ರಕ್ಷಣೆಗೋಸ್ಕರ ಮುಂಬೈ ಅಂಡರ್ ವರ್ಲ್ಡ್ ಡಾನ್ಗಳ ಸಾಂಗತ್ಯ ಈತನಿಗೆ ಹೆಚ್ಚಾಗತೊಡಗಿತು. ಆ ಡಾನ್ ಗಳೋ ಇಂತಹ ಶೋಕಿಲಾಲರನ್ನೇ ಕಾದುಕುಳಿತು ಸಮಯ ಬಂದಾಗ ತಮ್ಮ ಕೈಚಳಕವನ್ನು ತೋರಿಸಿಬಿಡುತ್ತಾರೆ. 93 ರ ಮುಂಬೈ ಅಟ್ಯಾಕ್ ಮಾಡುವ ಸಮಯದಲ್ಲಿ ಮೂರು AK47, ಒಂಬತ್ತು ಮ್ಯಾಗಜಿನ್ಗಳು, ನೂರಾರು ಗುಂಡುಗಳು ಹಾಗು ಹತ್ತಾರು ಹ್ಯಾಂಡ್ ಗ್ರಾನೈಟ್ಗಳನ್ನು ಈತನ ಮನೆಯಲ್ಲಿ ಅಡಗಿಸಿ ಇಟ್ಟಿರುತ್ತಾರೆ. ದಂಗೆಯ ಉತ್ತುಂಗದ ಕಾಲದಲ್ಲಿ ಹೀಗೆ ರಾಶಿಗಟ್ಟಲೆ ಶಸ್ತ್ರಾಸ್ತಗಳನ್ನು ಮನೆಯಲ್ಲಿರಿಸಿಕೊಂಡಿದ್ದ ಏನೂ ಅರಿಯದ ಮುಗ್ದ ಸಂಜು ಕೊನೆಗೂ ಸಿಕ್ಕಿಬೀಳುತ್ತಾನೆ. ಅಷ್ಟೇ. ಅಲ್ಲಿಂದ ಶುರುವಾದ ಆತನ ಜೈಲು, ಕೋರ್ಟು ಕಚೇರಿಗಳ ಪರದಾಟ ತನ್ನ ಮುಪ್ಪಿನ ವಯಸ್ಸಿಗೂ ಮುಂದುವರೆಯಿತು. (ಸಂಜಯ್ ಗೀಗ ಆಲ್ಮೋಸ್ಟ್ 60 ವರ್ಷಗಳು!).

ಇದು ನಿಜಕಥೆ. ಇಂತಹ ವ್ಯಕ್ತಿಯ ಒಬ್ಬ ಆಪ್ತಮಿತ್ರ ಕಮ್ ಡೈರೆಕ್ಟರ್ ಏನಾದರೂ ಈತನ ಜೀವನವನ್ನು ಕುರಿತು ಕತೆಯನ್ನು ಬರೆದರೆ ಅದು ಸಹಜವಾಗಿಯೇ ತನ್ನ ಗೆಳೆಯನ ಪರವಾಗಿಯೇ ವಾಲಿಕೊಂಡಿರುತ್ತದೆ. ಅದು ಗೆಳೆತನಕ್ಕೆ ಕೊಡುವ ಒಂದು ಕಾಣಿಕೆ ಎನ್ನಬಹುದು. ಆದರೆ ಹಿರಾನಿ ಈ ಬಾರಿ ಕೈಗೆತ್ತಿಕೊಂಡ ಕಥೆ ಕೇವಲ ಗೆಳೆತನಕ್ಕೆ ಸಮರ್ಪಿಸಬಹುದಾದ ಕಾಣಿಕೆಯಾಗಿರಲಿಲ್ಲ. ಬದಲಾಗಿ ಅದು ಸಮಾಜದ ಮೂಲ ಅಡಿಪಾಯಕ್ಕೆ ಆನೆಯೊಡೆತವನ್ನು ಕೊಡುವ ಕಾರ್ಯವಾಗಿತ್ತು. ದೇಶದ ಅತ್ಯುನ್ನತ ನಿರ್ದೇಶಕನಾದ ಆತ ಚಿತ್ರವೊಂದರ ಮೂಲಕ ಸಮಾಜಕ್ಕೆ ಹೇಳಹೊರಟಿರುವುದಾದರೂ ಏನನ್ನು? ಮನಸ್ಸು ಮಾಡಿದ್ದರೆ ನೂರಾರು ಜನರ ಜೀವವನ್ನು ರಕ್ಷಿಸಬಲ್ಲ ಅವಕಾಶವನ್ನು ಕೈಚೆಲ್ಲಿ ಬದಲಾಗಿ ಆ ಕುಕೃತ್ಯಕ್ಕೆ ಕಾರಣರಾದ ವ್ಯಕ್ತಿಗಳಿಗೇ ಶಸ್ತ್ರಾಸ್ತಗಳನ್ನು ಬಚ್ಚಿಡಲು ಸಹಕಾರಿಯಾದ ವ್ಯಕ್ತಿಯೊಬ್ಬನನ್ನು ಬಿಂಬಿಸಲು ಹೋಗಿ ಹಿರಾನಿ ಎಲ್ಲೋ ಒಂದೆಡೆ ತಪ್ಪು ಮಾಡಿದ್ದಾರೆ ಎಂದನಿಸದಿರದು. ಮೇಲಾಗಿ ಕೋರ್ಟಿನಲ್ಲಿ ನೆಡೆದ ವಾದವಿವಾದಗಳನ್ನಾಗಲಿ, ಸುಪ್ರೀಂ ಕೋರ್ಟಿನ ತೀರ್ಪಿನ ಪ್ರತಿಯಾಗಲಿ ನೂರಕ್ಕೆ 99 ಜನ ಕಂಡೇ ಇರುವುದಿಲ್ಲ. ಅಂತವರಿಗೆಲ್ಲ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಕತೆ ಹೇಳಿದಂತೆ ಘಟನೆಗಳನ್ನು ಬರೆಯಬಾರದಿತ್ತು. ಟ್ರಿಪಲ್ ಸೆಂಚೂರಿ ಯಷ್ಟು ಹುಡುಗಿಯರ ಸಹವಾಸ ಒಂದುಪಕ್ಷ ಒಂದಿಷ್ಟು ಜಿಗರಿ ದೋಸ್ತಿಗಳು ಸೇರಿದಾಗ ಹೇಳಿ ಕಿಚಾಯಿಸುವ ವಿಷಯವಾಗಬಹುದೇ ವಿನಃ ಕೋಟ್ಯಾನುಕೋಟಿ ಜನಮಾನಸದ ಮುಂದೆ ಹೇಳಿ ನಗಲು ಅಣಿಮಾಡಿಕೊಡುವ ವಿಷಯವಂತು ಅಲ್ಲವೇ ಅಲ್ಲ. 'ಅದು ಹಾಗಲ್ಲ ಸಾರ್, ನಮ್ಮ್ ಸಂಜು ಬಾಬಾ ಎಷ್ಟು ಓಪನ್ ಅಂತ ಅದು ತೋರ್ಸಕೊಡುತ್ತೆ ಆ ಡೈಲಾಗು. ಯಾರ್ ತಾನೇ ಇಷ್ಟೆಲ್ಲಾ ಪ್ರೈವೇಟ್ ವಿಷಯಗಳನ್ನ ಹಿಂಗೇ ಖುಲ್ಲಂ ಖುಲ್ಲಾ ಹೇಳ್ತಾರೆ .. ಹೇಳಿ ನೋಡನ?' ಎಂದು ಅನ್ನುವವರೂ ಇದ್ದಾರೆ. ಅಲ್ಲಾ ಸ್ವಾಮಿ. ಈ ಮಾತನ್ನು ಒಬ್ಬ ಗಂಡಸು ಹೇಳ್ತಾ ಇದ್ದಾನೆ ಅಂತ ಇಷ್ಟೆಲ್ಲಾ ವಾದಮಾಡ್ತಾ ಇದ್ದೀರಾ. ಅವನನ್ನು ಅಪರಂಜಿಯಂತಹ ನಾಯಕನೇನೋ ಎಂಬ ಮಟ್ಟಿಗೆ ಏರಿಸಿ ಕೂರಿಸುತ್ತೀರಾ. ಇದೆ ಕೆಲಸವನ್ನು ಒಬ್ಬ ನಟಿ ಏನಾದರು ಮಾಡಿ ಹೇಳಿದ್ದರೆ ಹೇಗಿರುತ್ತಿತ್ತು? ಆಕೆಯ ಹಿಂದೆ ಮುಂದೆ ಅದೆಷ್ಟು ನೀಚ ಕತೆಗಳು ಹುಟ್ಟಿ ಆ ಹೆಸರನ್ನು ಪಾತಾಳ ಮುಟ್ಟಿಸುತ್ತಿತ್ತು? ಅಲ್ಲವೇ? ಅದನ್ನೇ ಹೇಳೋದು ಪರ್ಸೆಪ್ಷನ್ ! ನಮ್ಮಲ್ಲಿ ‘ಆತ’ನಿಗೊಂದು ನೀತಿ ‘ಈಕೆ’ಗೆ ಬೇರೆಯೇ ರೀತಿ!

ಚಿತ್ರದಲ್ಲಿ ಕಾಣಸಿಗುವ ಮತ್ತೊಂದು ಮಹತ್ವದ ವಿಷಯ ಮಾಧ್ಯಮಗಳ ಬಗೆಗೆ. ಸಹಜವಾಗಿಯೇ ಮಾಧ್ಯಮಗಳನ್ನು ಜರಿಯಬಯಸುವವನಿಗೆ ಅಕ್ಷಯ ಪಾತ್ರೆಯಂತೆ ವಿಷಯಗಳು ಒಂದರಿಂದೊಂದು ಸಿಗುತ್ತವೆ. ಒಬ್ಬ ವ್ಯಕ್ತಿಯ, ವ್ಯಕ್ತಿ ಅನ್ನುವುದಕ್ಕಿಂತ ಸೆಲೆಬ್ರಿಟಿಯ, ಪರ್ಸನಾಲಿಟಿ ಸಮಾಜದಲ್ಲಿ ಹೇಗೆ ನೆಲೆಯುರುತ್ತದೆ ಎಂಬುದರಲ್ಲಿ ಮಾಧ್ಯಮಗಳ ಅಡಿಪಾಯ ಬಹುವಾಗಿಯೇ ಇರುತ್ತದೆ. ಪ್ರಸ್ತುತ ಪೈಡ್ ಮೀಡಿಯಾಗಳಂತೂ ಇಂತಹ ಕಾರ್ಯಗಳಿಗೆ ಹೇಳಿಮಾಡಿಸಿರುವವು. ಸಂಜಯ್ ದತ್ತ್ ನಾದರೂ ತಪ್ಪುಮಾಡಿ ಬೆಪ್ಪಾದವ, ಆದರೆ ಇನ್ನೂ ಅದೆಷ್ಟೋ ವ್ಯಕ್ತಿತ್ವಗಳು ಕಡ್ಡಿಯನ್ನು ಮುರಿಯದೆಯೇ ಮರಕೆಡವಿದ ಅಪಾದನೆಯನ್ನೊರುತ್ತವೆ. ಎಲ್ಲೋ ಕೂತು ಆತ ಹೀಗೆ, ಈಕೆ ಹಾಗೆ ಎಂದು ಬರೆಯುವ, ಅರಚುವ ಮಾಧ್ಯಮಗಳು ಇಂದು ತಮ್ಮ 'ಮೂಲ'ಗಳ ಮಾತಿಗೆ ಬೆಲೆಕಟ್ಟುತ್ತಾವೋ ಅಥವಾ ಧ್ಯಾನಶಕ್ತಿಯಿಂದ ತಾವು ಕಣ್ಣುಮುಚ್ಚಿಯೇ ಎಲ್ಲವನ್ನು ಗ್ರಹಿಸಿ ಬಿತ್ತರಿಸುತ್ತಾವೆಯೋ ತಿಳಿಸಬೇಕು. ಹಾಗಾಗಿ ಇಂದು ಸಂಜಯ್ ದತ್ತ್ ನಮಗೆ ಹೀರೋವಾಗಿ ಅಥವಾ ವಿಲನ್ನಾಗಿ ಕಾಣಲು ಇಂತಹ ಮಾಧ್ಯಮಗಳ ಮಾತುಗಳೇ ಅಡಿಪಾಯವಲ್ಲವೆ? ಹಾಗಾದರೆ ಆ ಅಡಿಪಾಯ ಅದೆಷ್ಟರ ಮಟ್ಟಿಗೆ ದೃಢವಾಗಿದೆ? ಈ ಅಂಕಣವನ್ನು ಬರೆಯುವಾಗಲೂ, ಅಲ್ಲೊಂದು ಇಲ್ಲೊಂದು ವಿಷಯಗಳನ್ನು ಹುಡುಕುವಾಗಲೂ ಇದೇ ಪ್ರೆಶ್ನೆ ಬಹುವಾಗಿ ಕಾಡುತ್ತದೆ! ಸುದ್ದಿ ನಿಜವೋ, ಸುಳ್ಳೋ, ಕಲ್ಪಿತವೋ, ಕುಚೇಷ್ಠೆಯೋ .. ಪರಾಮರ್ಶಿಸಿ ಹೇಳುವವರ್ಯಾರು?! ಹಿರಾನಿ ಚಿತ್ರದಲ್ಲಿ ಈ ಅಂಶವನ್ನು ಬಿತ್ತರಿಸಿರುವ ರೀತಿ ಸರಿಯಾಗಿಯೇ ಇದೆ. ಆದರೆ ಹೀಗೆ ಬಿತ್ತರಪಡಿಸುತ್ತಿರುವ ತನ್ನ ಚಿತ್ರವೂ ಸಹ ಒಂದು ಬಗೆಯ ಮಾಧ್ಯಮದ ಕೆಟಗರಿಗೆ ಬರುತ್ತದೆ, ತಾನು ಬರೆದಿರುವ ಕತೆಯ ಸತ್ಯಾಸತ್ಯತೆಯನ್ನು ನೋಡುಗ ಯಾರಲ್ಲಿ ಕೇಳಿ ಪರಾಮರ್ಶಿಸಿಕೊಳ್ಳಬೇಕು? ಎಂಬೊಂದು ಪ್ರೆಶ್ನೆಯನ್ನೂ ತಾವಾಗಿಯೇ ಕೇಳಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು.

ಅಲ್ಲದೆ ಮುಂಬೈನ ಕಳಪೆ ರೌಡಿಗಳನ್ನು, ಆಟಕುಂಟು ಲೆಕ್ಕಕ್ಕಿಲ್ಲದ ಡಾನ್ ಗಳನ್ನು ಜರಿಯುವುದರಲ್ಲಿ ತೋರಿರುವ ಧೈರ್ಯ ಅದೇ ವಿದೇಶಗಳಲ್ಲಿ ಕೂತು ಬಾಂಬ್ ಬ್ಲಾಸ್ಟ್ನ ಕುಕೃತ್ಯಕ್ಕೆ ನೇರವಾಗಿ ಕಾರಣರಾದ ಹಲವು ಮಾಸ್ಟರ್ಮೈಂಡ್ಗಳ ವಿರುದ್ಧ ತೋರಲು ಹೋಗಿಲ್ಲ. ಧೈರ್ಯ ಸಾಲಲಿಲ್ಲವೋ ಅಥವ ಅವರೂ ಸಹ ಸಂಜೂವಿನತೆ ಮಾಡದ ತಪ್ಪಿಗೆ ಹೊಣೆಯಾಗಿ ಆರೋಪಿಗಳೆಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದಾರೆಯೋ ತಿಳಿಸಿ ಹೇಳಬೇಕು. ಕೆಲ ಸಮುದಾಯಗಳ ಭಾವನೆಗಳಿಗಷ್ಟೇ ಧಕ್ಕೆ ತರುವಂತೆ ಮೂಡುತ್ತಿರುವ ಇತ್ತೀಚಿನ ಇವರ ಕೆಲಚಿತ್ರಗಳೂ ಸಹ ಆತಂಕಕಾರಿಯಾದ ಸಂಗತಿಯೇ. ಸಾಮಾಜಿಕ ಕಾಳಜಿ ಎಂಬ ನೈತಿಕ ಕಲೆ ಪ್ರತಿಯೊಬ್ಬ ಕಲಾಕಾರನಿಗೆ ಇರಲೇಬೇಕಾದದ್ದು. ಮೇಲಾಗಿ ರಾಜ್ಕುಮಾರ್ ಹಿರಾನಿಯಂತಹ ಪ್ರಭುದ್ದ ಕ್ರಿಯಾಶೀಲ ನಿರ್ದೇಶಕರೇ ಹೀಗೆ ಎಡವಿದರೆ ಕಾಲ ಕೆಟ್ಟಂತೆಯೇ ಸರಿ. ಮುನ್ನಾಭಾಯಿ, 3 ಈಡಿಯಟ್ಸ್, ಪಿ.ಕೆ ಯಂತಹ ಮಾಸ್ಟರ್ ಪೀಸ್ ಗಳನ್ನು ಕೊಟ್ಟ ಹಿರಾನಿ ಈ ಬಾರಿ ತನ್ನ ಸ್ನೇಹಿತನ ಎಲ್ಲಾ ಕಾರುಬಾರುಗಳಿಗೂ ಕ್ಲಿನ್ ಚಿಟ್ ಕೊಡಲು ಹೋಗಿ ಮುಜುಗರಕ್ಕೀಡಾಗಿದ್ದರೆ.

ಕಥೆಯೊಂದನ್ನು ಹೊರತುಪಡಿಸಿ ಚಿತ್ರ ಮಾತ್ರ ಎಕ್ಸಲೆಂಟ್ ಎಂಬೊಂದು ಕೆಟಗರಿಗೆ ಸೇರಲ್ಪಡುತ್ತದೆ. ಯಾವ ದೃಶ್ಯವೂ ನೋಡುಗರನ್ನು ಕೂತ ಕುರ್ಚಿಯಿಂದ ಅಲುಗಾಡಿಸುದಿಲ್ಲ. ಒಂದು ಪಕ್ಷ ಖುದ್ದು ಸಂಜಯ್ ದತ್ತೇ ಚಿತ್ರದಲ್ಲಿ ನಟಿಸಿದ್ದರೂ ರಣಬೀರ್ನ ನಟನ ಚಾತುರ್ಯಕ್ಕೆ ಸಮದೂಗಿಸಲಾಗುತ್ತಿರಲಿಲ್ಲ. ಆ ಮಟ್ಟಿನ ನಟನೆಯನ್ನು ಚಿತ್ರದಲ್ಲಿ ನಾವು ಕಾಣಬಹುದು. ಇದು ರಾಜ್ಕುಮಾರ್ ಹಿರಾನಿಯ ಸತತ ಐದನೇ ಸೂಪರ್ಹಿಟ್ ಚಿತ್ರ ಎಂಬುದರಲ್ಲಿ ದೂಸರಾ ಮಾತೆ ಇಲ್ಲ. ಆದರೆ ಮುಂದೆಯಾದರೂ ಇಂತಹ ಒಬ್ಬ ಕ್ರಿಯಾಶೀಲ ನಿರ್ದೇಶಕ ಸಮಾಜಕ್ಕೆ ಮಾದರಿಯಾಗದ್ದಿದರೂ ಸರಿಯೇ ಕನಿಷ್ಠ ಪಕ್ಷ ಒಂದಿಷ್ಟು ಸಾಧನೆಮಾಡಿರುವ ವ್ಯಕ್ತಿತ್ವಗಳನ್ನು ನಮಗೆ ಪರಿಚಯಿಸಲಿ. ನಮ್ಮ ನಾಯಕರುಗಳಿಗೇ ಇಲ್ಲದ 'ಮುಲಾಜು' ಇಂಥ ಬಯೋಪಿಕ್ ಗಳನ್ನು ಮಾಡಹೋಗುವ ನಿಮಗ್ಯಾಕೆ ಹಿರಾನಿ?

Sunday, July 1, 2018

ಮರುಭೂಮಿಯ ಮಲೆನಾಡು…

ರಣಬಿಸಿಲ ಹೊಡೆತಕ್ಕೆ ಇದ್ದೆನೋ ಬಿದ್ದೆನೋ ಎನುತ ಎಲುಬುಗಟ್ಟಿದ ಹಕ್ಕಿಯೊಂದು ಕಷ್ಟಪಟ್ಟು ಹಾರತೊಡಗಿತ್ತು. ಕಾದ ನೀಲಾಕಾಶದಲ್ಲಿ ಜ್ವಲಿಸುತ್ತಿರುವ ಸೂರ್ಯದೇವನ ಶಕ್ತಿ ವಾತಾವರಣದ ತಾಪಮಾನವನ್ನು 50 ಡಿಗ್ರಿಗಳವರೆಗೂ ತಲುಪಿಸಿದೆ! ಕೆಳನೊಡಿದರೆ ಕಾದ ಮರಳ ದೊಡ್ಡ ದೊಡ್ಡ ರಾಶಿಗಳು ಕಳ್ಳ ನೆಪವನ್ನು ವೊಡ್ಡಿ ಶಿಕಾರಿಗೆ ಕದ್ದು ಅಣಿಯಾಗಿವೇಯೇನೋ ಎಂದನಿಸುತ್ತಿದೆ. ಬೀಸುವ ಗಾಳಿಯೂ ಮುನಿಸಿಕೊಂಡೋ ಎಂಬಂತೆ ಬಿಸಿ ಬಿಸಿಯಾಗಿ ಆ ಪುಟ್ಟ ದೇಹಕ್ಕೆ ಬಂದು ಅಪ್ಪಳಿಸಿ ಹಿಂಸಿಸುತ್ತಿದೆ. ಹಕ್ಕಿಗೆ ಯಾವ ದಿಕ್ಕಿನಲ್ಲಿ ಹಾರಬೇಕೆಂದು ತಿಳಿಯಲಿಲ್ಲ. ಗಂಟಲು ಒಣಗಿ ಮರದ ಚಕ್ಕೆಯಂತಾಗಿದೆ. ಕೂಗಿಕೊಳ್ಳಲೂ ಧ್ವನಿಯಲ್ಲಿ ಶಕ್ತಿಯಿಲ್ಲ! ಇನ್ನೇನು ತನ್ನ ಕೊನೆಘಳಿಗೆ ಸಮೀಪಿಸಿತು, ಮರುಭೂಮಿಯ ಕೆನ್ನಾಲಿಗೆಗೆ ತನ್ನೀ ದೇಹ ಸಮರ್ಪಣೆಯಾಯಿತು ಎನ್ನುವಷ್ಟರಲ್ಲಿ ದೂರದಲ್ಲೆಲ್ಲೋ ಮೋಡ ಕವಿದ ಆಕಾಶ ಅದಕ್ಕೆ ಗೋಚರಿಸಿದಂತನಿಸುತ್ತದೆ. ಬರಡುಭೂಮಿಯ ಈ ಕಾನನದಲ್ಲಿ ಮೋಡವೇ? ಕಣ್ಣಿಗೂ ಕೊನೆಗಾಲ ಸಮೀಪಿಸಿರಬಹುದು ಎಂದುಕೊಂಡರೂ, ಪ್ರವಾಹದಲ್ಲಿ ಕರಗುವವನಿಗೆ ಒಂದು ಗರಿಕೆ ಹುಲ್ಲೂ ಆಶ್ರಯವಾದಂತೆ ಹಕ್ಕಿಗೆ ಬತ್ತತೊಡಗಿದ್ದ ಜೀವನೊತ್ಸಾಹ ಒಮ್ಮೆಲೇ ಕಾರಂಜಿಯಂತೆ ಚಿಮ್ಮತೊಡಗಿತು. ಮೋಡಗಳು ಕಂಡ ದಿಕ್ಕಿಗೆ ತನ್ನ ಶಕ್ತಿಯನ್ನೆಲ್ಲ ಬಿಟ್ಟು ಅದು ಹಾರತೊಡಗಿತು. ಕೆಲನಿಮಿಷಗಳ ಕಾಲ ಅದೇ ದಿಕ್ಕಿನಲ್ಲಿ ಹಾರಿದ ಹಕ್ಕಿಗೆ ತನ್ನ ಊಹೆ ಸುಳ್ಳೆನಿಸಲಿಲ್ಲ! ಹಸಿಮಣ್ಣಿನ ಕನುವು ಚೂರು ಚೂರಾಗಿಯೇ ಮುಖಕ್ಕೆ ಬಡಿಯತೊಡಗಿತು. ಜೀವ ಒಮ್ಮೆಲೇ ಖುಷಿಯಿಂದ ಸಂಭ್ರಮಿಸತೊಡಗಿತು. ರೆಕ್ಕೆಗಳ ವೇಗ ತಾನಾಗಿಯೇ ಹೆಚ್ಚಾಯಿತು. ನೂರಾರು ಕಿಲೋಮೀಟರ್ಗಳ ವರೆಗೂ ಮೈಚಾಚಿ ಮಲಗಿರುವ ದೈತ್ಯ ಮರಳುಗಾಡಿನ ಮೂಲೆಯಲ್ಲಿ ವಿಸ್ಮಯವೊಂದು ಎದುರಾಯಿತು ಹಕ್ಕಿಗೆ. ದೂರದಿಂದ ಹಾರಾರಿ ಬಂದ ಅದಕ್ಕೆ ಸಿಕ್ಕ ಹಸಿಮಣ್ಣಿನ ವಾಸನೆಯ ಮೂಲ ಝರಿ ತೊರೆಗಳಿಂದ ಕೂಡಿದ, ಮೋಡಗಳಿಂದ ತುಂತುರುಗೈಯತೊಡಗಿ ಹಸಿರು ಹೊದಿಕೆಯನ್ನು ಹೊದೆದುಕೊಂಡ ಒಂದು ಭಿನ್ನ ಲೋಕವೇ ಎನ್ನಬಹುದಾದ ನೆಲದಿಂದ. ಹಕ್ಕಿಗೆ ಸ್ವರ್ಗದ ಬಾಗಿಲು ತೆರೆದಂತಾಯಿತು. ತಾನು ಕಾಣತೊಡಗಿದ ವಿಸ್ಮಯಕ್ಕೆ ಪ್ರತಿಕ್ರಿಯೆ ನೀಡಲೂ ಶಕ್ತವಿರದ ಅದು ಕೂಡಲೇ ಝರಿಯೊಂದರ ಬಳಿಗೆ ಹೋಗಿ ದೊಪ್ಪನೆ ಬಿದ್ದಿತು.

ಅದು ದಿನದ 24 ಘಂಟೆಯೂ ಒಣಗಾಳಿ ಬೀಸುವ ಮರುಭೂಮಿಯ ಸುಡುನಾಡು. ಸರಾಸರಿ ತಾಪಮಾನವೇ ಸುಮಾರು 40 ರಿಂದ 50 ಡಿಗ್ರಿಗಳು!! ಎಸಿ, ಫ್ರಿಜ್ಡ್ ಹಾಗು ಫ್ಯಾನ್ ಗಳೆಂಬ ಆಧುನಿಕ ಆಪತ್ಬಾಂಧವರೇನಾದರು ಇಲ್ಲದೆ ಹೋಗಿದ್ದರೆ ಇಲ್ಲಿನ ದೇಶಗಳು ಇಂದಿಗೂ ಬರಡು ಮರುಭೂಮಿಗಳಾಗಿಯೇ ಉಳಿಯುತ್ತಿದ್ದವೇನೋ? ಇಂತಹ ಬೆಂಕಿಯಂತಹ ಬಿಸಿಲಗೆ ಸವಾಲು ಹಾಕುವಂತೆ ಬೆಳೆದು ಇಂದು ಇಡೀ ವಿಶ್ವದಲ್ಲೇ ಮುಂಚೂಣಿಯಲ್ಲಿವೆ ಇಲ್ಲಿನ ಹತ್ತು ಹಲವು ದೇಶಗಳು. ವರ್ಷಕ್ಕೊಮೆ ಅಥವಾ ಎರಡು ಬಾರಿ ಅಥವಾ ಒಮ್ಮೆಯೂ ಬಾರದ ಮಳೆಯನ್ನಂತು ಇಲ್ಲಿನ ನರಪಿಳ್ಳೆಯೂ ನಂಬಿಕೊಂಡು ಬದುಕುವುದಿಲ್ಲ. ದಿನಬಳಕೆ ಹಾಗು ಇತರೆ ಏನೇ ಕೆಲಸಕ್ಕೂ ಸಮುದ್ರದ ನೀರೇ ಜೀವಾಳ. ಡಿಸಾಲೆನೇಷನ್ (ಸಮುದ್ರದ ನೀರಿನಿಂದ ಉಪ್ಪನ್ನು ಬೇರ್ಪಡಿಸಿ ಕುಡಿಯಲು ಯೋಗ್ಯವಾದ ನೀರನ್ನಾಗಿ ಮಾಡುವ ವಿಧಾನ) ಎಂಬ ಮತ್ತೊಬ್ಬ ಆಪತ್ಬಾಂಧವನೆಂಬ ಪ್ರಕ್ರಿಯೆಯನ್ನು ನಂಬಿ ಬದುಕಲಾಗುತ್ತದೆ ಇಲ್ಲಿನ ಜೀವನ. ಮಧ್ಯಪ್ರಾಚ್ಯ ದೇಶಗಳೆಂದು ಕರೆಯುವ ಇಲ್ಲಿನ ಜನಜೀವನ ಬಿಸಿಲಿನ ರಣಹೊಡೆತಕ್ಕೆ ಮನೆ, ಆಫೀಸ್, ಎಸಿ ತುಂಬಿದ ಕಾರು ಹಾಗು ಶಾಪಿಂಗ್ಮಾಲುಗಳ ಒಳಗೆಯೇ ಕಳೆಯಲ್ಪಡುತ್ತದೆ. ಅದೂ ಸಹ ಸೂರ್ಯ ಮರೆಯಾದ ರಾತ್ರಿಯ ಘಳಿಗೆಯಲ್ಲಿಯೇ! ಒಂದು ತರಹ ನಿಶಾಚರಿಗಳ ಜೀವನವೆಂದೇ ಹೇಳಿದರೂ ತಪ್ಪಾಗಲಾರದು. ಇನ್ನು ಕಾಡು ಮೇಡು ನದಿ ಜಲಪಾತಗಳೆಂದರೆ ಇವರುಗಳಿಗೆ ಕಾಣದ ಸ್ವರ್ಗದ ಕನಸ್ಸೆ ಸರಿ! ಹಸಿರು ಹೊದಿಸಿದಂತಿರುವ ಕೃತಕ ಹುಲ್ಲಿನ ನೆಲ ಹಾಗು ಸಮುದ್ರದ ನೀರನ್ನೇ ಪಂಪು ಮೋಟಾರುಗಳ ಮೂಲಕ ಮೇಲಕ್ಕೂ ಕೆಳಕ್ಕೂ ಹರಿಬಿಟ್ಟು ಗುಡ್ಡಗಾಡು ಹಾಗು ನದಿ ಜಲಪಾತಗಳ ಅನುಭವವನ್ನು ಪಡೆಯಲಾಗುತ್ತದೆ. ಹೀಗೆ ಸಕಲ ನೈಸರ್ಗಿಕ ಜೀವನವನ್ನು ಇಲ್ಲಿನ ಜನತೆ ಟೆಕ್ನಾಲಜಿ ಎಂಬ ನಾಲ್ಕಕ್ಷರದ ಪದವೊಂದರಿಂದಲೇ ಪಡೆದುಕೊಳ್ಳುತ್ತದೆ. ಎಲ್ಲಿಯವರೆಗೂ ಎಂದರೆ ಮಂಜುಗೆಡ್ಡೆಗಳ ಒಂದು ಮಿನಿ ಅಂಟಾರ್ಟಿಕಾವೇ ಇಲ್ಲಿನ ಶಾಪಿಂಗ್ಮಾಲುಗಳ ಒಳಗೆ ಕಾಣಸಿಗುತ್ತದೆ.
ಇಂತಹ ಒಂದು ಕೃತಕ ಕಾಂಕ್ರೀಟು ನಾಡಿನಲ್ಲಿ ಕಿಲೋಮೀಟರು ಗಟ್ಟಲೆ ವಿಸ್ತೀರ್ಣದ ಪ್ರದೇಶವೊಂದು ವರ್ಷಕ್ಕೆ ನಾಲ್ಕು ತಿಂಗಳು ಮಧುವನಗಿತ್ತಿಯ ಹಸಿರು ಸೀರೆಯ ಹೊಳಪನ್ನು ಧರಿಸಿ ನಲಿಯುತ್ತದೆ ಎಂದರೆ ನೀವು ನಂಬಲೇಬೇಕು. ತುಂತುರು ಮಳೆಯ ಚಿಟಪಟ ಸದ್ದು ಹಗಲು ರಾತ್ರಿಯೆನ್ನದೆ ಆಗಲ್ಲಿ ಕಿವಿಯನ್ನು ಬಡಿಯುತ್ತಿರುತ್ತದೆ. ಬೆಟ್ಟದ ಮೇಲಿನಿಂದ ಇಳಿಯುವ ಸಣ್ಣ ಪುಟ್ಟ ಜಲಧಾರೆಗಳೆಲ್ಲ ಒಂದಾಗಿ ಹೆಚ್ಚು ಕಡಿಮೆ ಒಂದು ನದಿಯ ಆಕಾರವನ್ನೇ ಪಡೆದುಕೊಳ್ಳುತ್ತದೆ! ದೂರ ದೂರದ ದೇಶಗಳಿಂದ ಹಕ್ಕಿ ಪಕ್ಷಿಗಳು ಹಾರಾರೀ ಬಂದು ತಮ್ಮ ವಿಧವಿಧವಾದ ರಾಗಗಳಿಂದ ಮೈದುಂಬಿರುವ ಹಸಿರು ಸಿರಿಗೆ ಒಂದು ಹೊಸ ಮೆರುಗನ್ನೇ ಕೊಡುತ್ತವೆ. ತುಸು ದೂರದ ಮರಳುಗಾಡಿನಲ್ಲಿ ಅಡ್ಡಾದಿಡ್ಡಿ ಅಲೆಯುವ ಒಂಟೆಗಳೂ ಈ ಒಂದು ಲೋಕಾತೀತವಾದ ಜಾಗಕ್ಕೆ ಓಡೋಡಿ ಬಂದು ಹಸಿರ ಕಾನನದಲ್ಲಿ ಮಿಂದು ನಲಿದೇಳುವುದುಂಟು! ಸಮುದ್ರದ ನೀರನ್ನು ತಡೆದಿವೆಯೋ ಎಂಬಂತಿರುವ ಎತ್ತರದ ಬೆಟ್ಟಗುಡ್ಡಗಳ ಒಂದುಬದಿಗೆ ಹೀಗೆ ಹೊಗೆಯಂತೆ ಆವರಿಸಿರುವ ಮೋಡಗಳ ಕೆಳಗೆ ಒಂದು ಹಸಿರು ಸ್ವರ್ಗವೇ ಹರವಿಕೊಂಡರೆ ಬೆಟ್ಟದ ಇನ್ನೊಂದು ಬದಿಗೆ ಮರಳುಗಾಡಿನ ದೊಡ್ಡ ದೊಡ್ಡ ಮರಳ ದಿಬ್ಬಗಳು ತಮಗಾದ ಅನ್ಯಾಯವನ್ನು ಚೀರಿ ಚೀರಿ ಹೇಳಿಕೊಳ್ಳುತ್ತಿವೆಯೋ ಎಂಬಂತೆ ಭಾಸವಾಗುತ್ತದೆ. ಅದೊಂದು ಮರುಭೂಮಿಯ ನಿಗೂಢ ವಿಸ್ಮಯ!

ಗಂಟಲು ಒಣಗಿ ಇನ್ನೇನು ಸತ್ತೇ ಹೋದೆನೆಂಬ ಘಳಿಗೆಯಲ್ಲಿ ಕಷ್ಟಪಟ್ಟು ಹಾರಾರೀ ಬಂದ ಹಕ್ಕಿಯೂ ಈಗ ಬಂದು ಬಿದ್ದಿರುವುದು ಇದೇ ಜಾಗಕ್ಕೆ. ಅಲ್ಲೊಂದು ಇಲ್ಲೊಂದು ಮರಗಿಡಗಳನ್ನು ಬಿಟ್ಟರೆ ಹೀಗೆ ಅಷ್ಟದಿಕ್ಕುಗಳಿಗೂ ಒಂದೇ ಸಮನಾದ ಹಸಿರನ್ನು ಅದು ತನ್ನ ಜೀವಮಾನದಲ್ಲೇ ಕಂಡಿರಲು ಸಾಧ್ಯವಿಲ್ಲ.ಹತ್ತಾರು ಜಾತಿಯ ಹಕ್ಕಿ, ಚಿಟ್ಟೆ, ಹುಳ ಹುಪ್ಪಟೆ, ಬಣ್ಣ ಬಣ್ಣದ ಹಣ್ಣುಗಳು, ಸಾಲದಕ್ಕೆ ಕತ್ತುದ್ದದ ಹರೆಬರೆ ನೆನೆದ ಒಂಟೆಗಳು.. ಅಹಃ ಎಂದನಿಸಿರಬೇಕು ಹಕ್ಕಿಗೆ. ಸಾಯುವ ಜೀವಕ್ಕೆ ಒಮ್ಮಿದೊಮ್ಮಲೆ ಜೀವಪ್ರೀತಿ ಉಕ್ಕಿದಂತಹ ಅನುಭವ. ಸರಸರನೆ ಹೊಟ್ಟೆಯ ಕಟ್ಟೆ ಒಡೆಯುವಷ್ಟು ನೀರನ್ನು ಹೀರಿ ಹತ್ತಿರದಲ್ಲಿದ್ದ ಯಾವುದೊ ಮರವೊಂದರ ಮೇಲೆ ಕುಳಿತು ಹಾಯಾಗಿ ಸಿಳ್ಳೆಯಾಕತೊಡಗಿ ನೋಡುತ್ತದೆ, ಎಲ್ಲೆಂದರಲ್ಲಿ ಗಂಡು ಹಕ್ಕಿಗಳು ಹಳ್ಳದಂತಿರುವ ನೀರಿಗೆ ಜೋತುಬಿದ್ದಿರುವ ಬಳ್ಳಿಗಳಿಗೆ ವಿಧವಿಧವಾದ ಗೂಡನ್ನು ಹೆಣೆಯುತ್ತಾ ಹೆಣ್ಣು ಹಕ್ಕಿಗಳನ್ನು ಸೆಳೆಯುವಲ್ಲಿ ಮಗ್ನವಾಗಿವೆ! ದೂರದಲೆಲ್ಲೋ ರಣ ಹದ್ದೊಂದು ಆಹಾರಾನ್ವೇಷಣೆಯಲ್ಲಿ ಭಾರಿ ದೂರದ ನೆಲವನ್ನು ಎಳೆಎಳೆಯಾಗಿ ಪರೀಕ್ಷಿಸುತ್ತಿದ್ದರೆ ಇತ್ತ ಕಡೆ ಅದರ ನಡುಕಹಿಟ್ಟಿಸುವ ಭಯಾನಕ ಸಿಳ್ಳೆಗೆ ಮೊಲ, ಅಳಿಲು, ಇಲಿಗಳು ತಮ್ಮ ತಮ್ಮ ಗೂಡನ್ನು ಸೇರಿ ಮರೆಯಾಗುತ್ತಿವೆ. ನೀರಿನ ಒಳಗೆ ಮರಿಮೀನುಗಳು ಅಡ್ಡಾ ದಿಡ್ಡಿ ಆಟವಾಡುತ್ತಿದ್ದರೆ ಇತ್ತಕಡೆ ಕೊಕ್ಕುದ್ದದ ಹಕ್ಕಿಯೊಂದು ಮಿಂಚಿನ ವೇಗದಲ್ಲಿ ಅತ್ತಕಡೆಗೆ ಚಿಮ್ಮಿ ಮರಿಮೀನೊಂದನು ಕಿಡಿದು ಕ್ಷಣಮಾತ್ರದಲ್ಲಿ ನುಂಗಿಬಿಡುತ್ತದೆ! ಗೊಂದಲಗೊಂಡ ನಮ್ಮ ಹಕ್ಕಿ ಆ ಉದ್ದಕೊಕ್ಕಿನ ಹಕ್ಕಿಯನ್ನೇ ಅರ್ಧಚಂದ್ರಾಕೃತಿಯಲ್ಲಿ ತನ್ನ ತಲೆಯನ್ನು ತಿರುಗಿಸುತ್ತಾ ನೋಡುತ್ತದೆ.

ಸ್ಥಳದ ಹೆಸರು ಸಲಾಲ್ಹ. ಓಮನ್ ದೇಶದ ಧೋಫಾರ್ ಪ್ರಾಂತ್ಯದ ರಾಜಧಾನಿ. ವರ್ಷದ ಉಳಿದಷ್ಟೂ ದಿನಗಳು ಸರ್ವೇಸಾಮಾನ್ಯವಾದ ಬರಡುಭೂಮಿ. ಅಲ್ಲೊಂದು ಇಲ್ಲೊಂದು ಕುರುಚಲು ಮರಗಿಡಗಳನ್ನು ಬಿಟ್ಟರೆ ಉಳಿದೆಲ್ಲ ಜಾಗ ಒಣಗಿ ಕಮರಿದ ನೆಲದಂತೆಯೇ ಸರಿ. ಆದರೆ ವರ್ಷದ ಜೂನ್ ತಿಂಗಳಿಂದ ಸೆಪ್ಟೆಂಬರ್ ವರೆಗೆ ಅರಬ್ಬೀ ಸಮುದ್ರದಿಂದ ಬೀಸುವ ಗಾಳಿ ತನ್ನೊಡಲಲ್ಲಿ ನೀರಿನ ಬುಗ್ಗೆಗಳನ್ನೂ ಹಿಡಿದುಕೊಂಡು ಬರುವುದುಂಟು. ಹೀಗೆ ಬೀಸುವ ಶೀತ ಮಾರುತಗಳೇ ಈ ಒಂದು ಪ್ರಾಂತ್ಯದಲ್ಲಿ ನೀರಿನ ಸಿಂಚನವನ್ನು ಮೂಡಿಸುವ ಕಾಣದ ಕೈಗಳು. ಭಾಗಶಃ ನಮ್ಮ ಉತ್ತರಕನ್ನಡ, ಕೇರಳ ಪ್ರಾಂತ್ಯಗಳಂತೆಯೇ ಮಲೆನಾಡ ಸಿರಿ ಒಮ್ಮೆಲೇ ಅಲ್ಲಿ ಆವರಿಸಿಬಿಡುತ್ತದೆ. ಅಲ್ಲಿಯವರೆಗೂ ಕೇವಲ ಮರಳುಗಾಡಿನ ಸುಡುಬಿಸಿಲಲ್ಲೆ ಕಣ್ತಂಪುಮಾಡಿಕೊಳ್ಳುವ ಇಲ್ಲಿನ ಜನ ಒಮ್ಮೆಲೇ ಶೀತಗಾಳಿ ಹಾಗು ಚಿಗುರೊಡೆಯುವ ಮರಗಿಡಗಳನ್ನು ನೋಡಿ ಮೂಕವಿಸ್ಮಿತರಾಗುತ್ತಾರೆ. ದಂಡುಕಟ್ಟಿಕೊಂಡು ವಾರಗಳ ಕಾಲ ಇಲ್ಲಿಗೆ ಬಂದು ಹಾಯಾಗಿ ಕಳೆಯುತ್ತಾರೆ. ಇತ್ತೀಚಿನ ಕೆಲವರ್ಷಗಳಲಂತೂ ಜೂಲೈ ಹಾಗು ಆಗಸ್ಟ್ ತಿಂಗಳಿನಲ್ಲಿ ಇಲ್ಲಿನ ಸರ್ಕಾರವೇ ಮುಂದಾಗಿ ‘ಸಲಾಲ್ಹ ಫೆಸ್ಟಿವಲ್’ ಎಂಬ ಪ್ರವಾಸಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಂಗೀತ, ನೃತ್ಯ, ಚಿತ್ರಕಲಾ ಪ್ರದರ್ಶನಗಳನ್ನು ಹಮ್ಮಿಕೊಳ್ಳುತ್ತದೆ. ಕೆಂಡದ ಮೇಲಿನ ನಡಿಗೆಯನ್ನು ನೆಡೆದು ಒಮ್ಮೆಲೇ ಮಂಜುಗೆಡ್ಡೆಯ ಹಾಸಿಗೆಯ ಮೇಲೆ ಬೀಳುವ ಅನುಭವದ ಜೊತೆಗೆ ಒಂದು ಮಿನಿ ಹಬ್ಬದ ವಾತಾವರಣವೆನ್ನೆ ಸೃಷ್ಟಿಸುವ ಇಲ್ಲಿನ ಪರಿಸರ ಪ್ರವಾಸಿಗರನ್ನು ಆಕರ್ಷಿಸದೇ ಇರಲಾರದು.

ಮುಂದಿನ ಕೆಲತಿಂಗಳು ನಮ್ಮ ಹಕ್ಕಿಗೂ ಹಬ್ಬದ ವಾತಾವರಣವೇ ಸರಿ. ಹೊಟ್ಟೆಬಿರಿಯುವಷ್ಟು ಆಹಾರ, ಮುಳುಗೆದ್ದು ಬಿದ್ದು ಒದ್ದಾಡುವಷ್ಟು ನೀರಿನ ಝರಿ, ತಂಪಾದ ಹಿತವಾದ ನೆಮ್ಮದಿಯ ವಾತಾವರಣ. ಕೆಲದಿನಗಳಲ್ಲೇ ಹಕ್ಕಿಯೂ ಗೂಡೊಂದನ್ನು ಕಟ್ಟಲು ಕಲಿತಿತು. ಮುಂದೆ ಇನ್ನೇನು, ಗೂಡು ನಿರ್ಮಿಸಿ ಹೆಣ್ಣಕ್ಕಿಯೊಂದನ್ನು ತನ್ನತ್ತ ಸೆಳೆಯುವುದು. ಒಂದಲ್ಲ ಎರಡಲ್ಲ ಸುಮಾರು ಇಪ್ಪತ್ತು ಇಪ್ಪತೈದು ಗೂಡನ್ನು ನಿರ್ಮಿಸಿದ ಹಕ್ಕಿ ತನ್ನ ಒಂದು ಜಂಟಿ ಕುಟುಂಬವನ್ನೇ ಅಲ್ಲಿ ಸ್ಥಾಪಿಸಿತು. ದಿನಕಳೆದಂತೆ ಹಚ್ಚಹರಿದ್ವರ್ಣದ ಕಾಡಿನಂತೆ ಹುಬ್ಬಿಕೊಂಡ ಹಸಿರ ಸಿರಿ ಪಕ್ಕದ ತುಸು ದೂರದಲ್ಲಿಯೇ ಸುಟ್ಟು ಕರಕಲಾಗಿಸುವ ಬಿಸಿಲ ರೌದ್ರತಾಂಡವಾಡುವದನ್ನೇ ಮರೆಸಿಬಿಡುತ್ತದೆ.. ಇತ್ತೀಚಿಗೆ ಕೆಲದಿನಗಳಿಂದ ನೋಡ ನೋಡುತ್ತಲೇ ಚಿತ್ರ ವಿಚಿತ್ರವಾದ ಜನರ ಗುಂಪು ಕಾರು ಜೀಪುಗಳಿಂದ ದಂಡು ದಂಡಾಗಿ ಬಂದು ಅಲ್ಲಲಿ ಬಣ್ಣಬಣ್ಣದ ಗುಡಿಸಲನ್ನು ಹಾಕಿ ಗಿಜಿಗಿಜಿಗುಡುತ್ತಾರೆ. ಅವರುಗಳ ಚೀರಾಟ ಕೂಗಾಟಗಳಿಂದ ಕಂಗಾಲಾದ ಹಕ್ಕಿಗಳು ಎಲ್ಲೆಂದರಲ್ಲಿ ಮನಸ್ಸಾಇಚ್ಛೆ ಹಾರಲೂ ಭಯಪಡುತ್ತಿವೆ. ಸಾಲದಕ್ಕೆ ಅವರು ತಿಂದು ಬಿಸುಟುವ ತಿಂಡಿ ತಿನಿಸುಗಳ ಜೊತೆಗೆ ಪ್ಲಾಸ್ಟಿಕ್ ಪದಾರ್ಥಗಳನ್ನೂ ಸೇವಿಸಿ ಅದಾಗಲೇ ಹತ್ತಾರು ಜೀವಗಳು ಅಸುನೀಗಿವೆ. ದೂರದಲ್ಲಿ ಗಡ್ಡ ಮೀಸೆಯನ್ನು ಉದ್ದುದ್ದ ಬಿಟ್ಟಿದ್ದ ಪ್ರಾಣಿಯಂತಿದ್ದ ಮಾನವನೊಬ್ಬ ಬಾಯಲ್ಲಿ ಸಿಗರೇಟಿನ ತುಂಡೊಂದನ್ನು ತೂರಿಸಿಕೊಂಡು ತನ್ನ ಕೈಲಿದ್ದ ಉದ್ದವಾದ ಕ್ಯಾಮರಾದಿಂದ ನಮ್ಮ ಹಕ್ಕಿಯ ಹಾವಭಾವಗಳನ್ನು ಸೆರೆಯಿಡಿಯುದ್ದಿದ್ದಾನೆ. ಹಕ್ಕಿಯೂ ಈಗ ಗಡತ್ತಾಗಿ ತಿಂದು ಹುಬ್ಬಿಕೊಂಡಿರುವುದಲ್ಲದೆ ಬಣ್ಣ ಬಣ್ಣದ ಪುಕ್ಕಗಳೂ ದೇಹದ ಅಲ್ಲಲಿ ಮೂಡಿರುತ್ತವೆ.

ದಿನಗಳು ಕಳೆದವು...

ಹೊಗೆಯಂತೆ ಆವರಿಸಿದ ಮಂಜಿನ ಕವಚ ಮರೆಯಾಗುವ ಮುನ್ಸೂಚನೆ ಹಕ್ಕಿಗೆ ಸಿಗಲು ಶುರುವಾಗುತ್ತದೆ. ದಂಡುಕಟ್ಟಿಬಂದ ಜನರ ಸಂತೆಯೂ ವಿರಳವಾಗುತ್ತಾ ಒಂದು ದಿನ ಕಣ್ಮರೆಯಾಗಿಬಿಡುತ್ತದೆ. ತಮ್ಮ ಸವಿ ನೆನಪಿಗಾಗಿ ಕೊಟ್ಟ ಕಾಣಿಕೆಯೋ ಎಂಬಂತೆ ಕಸದ ರಾಶಿಯ ಒಂದು ದೊಡ್ಡ ಗುಡ್ಡವನ್ನೇ ನಿರ್ಮಿಸಿ ಹೊರಟಿರುತ್ತಾರೆ! ತಿಂಗಳುಗಳ ಕಾಲ ಕಣ್ಮರೆಯಾಗಿದ್ದ ಸೂರ್ಯದೇವ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಾ ನಮ್ಮ ಹಕ್ಕಿಗೆ ಭಯದ ನಡುಕವನ್ನು ಹುಟ್ಟಿಸುತ್ತಾನೆ. ತಮ್ಮ ಉದ್ದ ಕತ್ತಿನಿಂದ ತುತ್ತತುದಿಯ ಚಿಗುರೆಲೆಗಳನ್ನೇ ಕತ್ತರಿಸಿ ಜಗಿಯುತ್ತಿದ್ದ ಒಂಟೆಗಳೂ ಸಹ ಸಾಲಾಗಿ ಮರುಭೂಮಿಯೆಡೆ ಈಗ ಹೆಜ್ಜೆ ಹಾಕಿವೆ. ತಮ್ಮ ಬುಜದ ಮೇಲಿನ ಕುಂಭದಲ್ಲಿ ಸಾಕಾಗುವಷ್ಟು ನೀರನ್ನು ಸಂಗ್ರಹಿಸಿಟ್ಟಿವೆ. ಅರಬ್ಬೀ ಸಮುದ್ರದಿಂದ ತಣ್ಣನೆಯ ಹನಿಗಳನ್ನು ಹೊತ್ತುತರುತ್ತಿದ್ದ ಗಾಳಿಯೂ ಈಗ ಕಾಣೆಯಾಗತೊಡಗಿದೆ. ಹಸಿರುಗಟ್ಟಿದ್ದ ಮರಗಿಡಗಳು ರೋಗಬಡಿದಂತೆ ಬರಿದುಬರಿದಾಗುತ್ತಿವೆ. ಪರಿಸರದ ಉಷ್ಣಾಂಶ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ತನ್ನದೊಂದು ಸಂಸಾರ ಎಂದುಕೊಂಡು ನಲಿಯುತ್ತಿದ್ದ ಹಕ್ಕಿ, ಮರಿಗಳು ಯಾವಾಗ ರೆಕ್ಕೆ ಬಲಿತು ಹಾರಲು ಶುರುಮಾಡಿದವೋ ಅಂದೇ ಅವುಗಳೆಲ್ಲವೂ ಕಾಣದ ದಿಕ್ಕುಗಳಿಗೆ ಎಲ್ಲ ಬಗೆಯ ಸಂಭಂದಗಳನ್ನು ಕಳೆದು ಕೊಂಡು ಹಾರಿವೆ. ಹಸಿರಿದ್ದಾಗ ಮುತ್ತಿಕೊಳ್ಳುತ್ತಿದ್ದ ಜೀವಗಳು ಇಂದು ಹಸಿರು ಕಳೆದಂತೆ ಬೆನ್ನುಮಾಡಿ ಜಾಗಕಿತ್ತಿವೆ. ಎಲ್ಲರ ಹಸಿವು, ಧಾಹ, ಚಿಂತೆ, ದುಃಖ ದುಮ್ಮಾನಗಳನ್ನು ದೂರವಾಗಿಸಿದ ನೆಲ ಇಂದು ಯಾರಿಗೂ ಬೇಡವಾಗಿದೆ. ನಮ್ಮ ಹಕ್ಕಿಯೊಂದನ್ನು ಬಿಟ್ಟು!!

ಈಗ ಹಕ್ಕಿ ಒಂಟಿಯಾಗಿದೆ. ತನಗೆ ಜೀವಕರುಣಿಸಿದ ನೆಲವನ್ನು ಒಬ್ಬಂಟಿಯಾಗಿ ಬಿಟ್ಟು ಹೊರಡಲು ಅದಕ್ಕೆ ಮನಸ್ಸಿಲ್ಲ. ಬಿಸಿಲಿನ ಪ್ರಖರತೆಗೆ ಝರಿ ತೊರೆಗಳೆಲ್ಲ ಬರಿದಾಗಿವೆ. ಹಕ್ಕಿಯ ಗಂಟಲು ಪುನ್ಹ ಒಣಗತೊಡಗಿದೆ... ಹಕ್ಕಿ ಕಾಯುತ್ತದೆ. ಬರಿದ ನೆಲಕ್ಕೂ ಜೀವಕೊಡುವ ಶೀತಗಾಳಿ ಬೀಸುವವರೆಗೆ. ನಿನ್ನೊಟ್ಟಿಗೆ ನಾನಿರುವೆ ಎಂಬ ಭರವಸೆಯ ಭಾವದೊಂದಿಗೆ...

Friday, June 8, 2018

ಸಾಧು ಆದ್ರೇನ್ ಶಿವ? ಇವ್ನ್ ಸಾದ್ನೆ ಏನ್ ಕಮ್ಮಿನಾ!?

'ಏಯ್.. ಇದು ತೋಳ್ ಅಲ್ಲ ಕಣ್ರೋ.. ತೊಲೆ, ತೊಲೆ! ನನ್ನ ಇಲ್ಲಿವರ್ಗು ಯಾರು ಮುಟ್ಟಿಲ್ಲ, ಮುಂದೆ ಮುಟ್ಟೋದು ಇಲ್ಲ'

'ಹೋದ್ ತಿಂಗ್ಳು ನಾನೇ ತದ್ಕಿದ್ದೆ!?'

'ಅದು ಹೋದ್ ತಿಂಗ್ಳು,,ನಾನ್ ಏಳ್ತಿರೋದು ಈ ತಿಂಗ್ಳು..@'

ರಾಮಕೃಷ್ಣ ಚಿತ್ರದ ಈ ಒಂದು ಸಂಭಾಷಣೆ ಸಾಕು, ಗುಂಗುರು ತಲೆಯ, ಅಚ್ಚಕಪ್ಪಿನ, ತನ್ನ ಡೈಲಾಗ್ ಡೆಲಿವೆರಿಗಳಲ್ಲೇ ಪ್ರೇಕ್ಷಕರ ಹೊಟ್ಟೆಯನ್ನು ಹುಣ್ಣಾಗಿಸಬಲ್ಲ ಹಾಸ್ಯನಟನೊಬ್ಬನನ್ನು ಪರಿಚಯಿಸಲು. ಕೇವಲ ಹಾಸ್ಯನಟ? ಛೆ, ಇದು ಆತನ ಸಾಧನೆಗಳಷ್ಟಕ್ಕೂ ಮಸಿಬಳಿದಂತಾಗುತ್ತದೆ! ಅಲ್ಲದೆ ಮತ್ತೇನು? ಈತ ಒಬ್ಬ ಹಾಸ್ಯನಟನೆಂಬುದು ಬಹುಪಾಲು ಮಂದಿಗೆ ತಿಳಿದಿರುವ ವಿಷಯ ಬಿಟ್ಟರೆ ಈತನೊಳಗಿರುವ ಒಬ್ಬ ಪ್ರತಿಭಾವಂತ ಸಂಗೀತಗಾರ, ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ ಹಾಗು ಸಾಹಿತಿ ಇವರುಗಳೆಲ್ಲರ ಪರಿಚಯ ಬಹಳಷ್ಟು ಮಂದಿಗೆ ಇರುವುದೇ ಇಲ್ಲ. ಹೌದು ಸಾಧು ಮಹಾರಾಜ್ ಅಥವಾ ಸಾಧು ಕೋಕಿಲ ಎಂದು ಪ್ರಸಿದ್ದಿ ಹೊಂದಿ ಬಹುಕೋಟಿ ಕನ್ನಡಿಗರ ನಗುವಿನ ಚಿಲುಮೆಯಾಗಿರುವ ಬೆಂಗಳೂರಿನ 'ಸಹಾಯ ಶಿಲಾನ್ ಶದ್ರಚ್' (ಸಾಧುವಿನ ಅಸಲಿ ಹೆಸರು) ರನ್ನು ಅವರ ಸಾಧನೆಗೆ ಅನುಗುಣವಾಗಿ ನಾವುಗಳು ಗುರುತಿಸುವುದೇ ಕಡಿಮೆ. ಇಡೀ ಭಾರತದಲ್ಲೇ ಅತಿ ವೇಗವಾಗಿ ಕಿಬೋರ್ಡನ್ನು ನುಡಿಸಬಲ್ಲವರಲ್ಲಿ ಒಬ್ಬರಾಗಿರುವ(!) ಸಾಧುವಿನ ಬಗೆಗೆ ಹೆಚ್ಚಾಗಿ ತಿಳಿಯಲು ವೀಕೆಂಡ್ ವಿಥ್ ರಮೇಶ್ರ ಆವೊಂದು ಎಪಿಸೋಡನ್ನೂ ನೋಡಿದರೂ ಸಾಕು. ವಿ ಮನೋಹರ್, ಉಪೇಂದ್ರರಂತಹ ದಿಗ್ಗಜರ ಗರಡಿಯಲ್ಲಿ ಬೆಳೆದು ಕನ್ನಡ ಚಿತ್ರರಂಗದಲ್ಲಿ ನಾಯಕ ನಾಯಕಿಯರ ಮಟ್ಟಕ್ಕೆ ಜನಪ್ರಿಯವಾದದ್ದೇನು ಕಡಿಮೆ ಸಾಧನೆಯಲ್ಲ.

ಆದರೆ ಈಗ ವಿಷಯ ಅದಲ್ಲ. ವಿಷಯವಿರುವುದು ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಇಂದಿನ ಸಿನಿಪ್ರಪಂಚದ ಬಗ್ಗೆ. ಪ್ರತಿಭೆಗಳನ್ನು ಬೆಳೆಸುವುದಕ್ಕೂ ಈ ನಮ್ಮ ಸಾಧು ಕೋಕಿಲನಿಗೂ ಅದ್ಯಾವ ಸೀಮೆಯ ನಂಟು ಎನ್ನಬಹುದು. ಇಂದು ನಮ್ಮ ಒಂದು ಚಿತ್ರ ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆಯುತ್ತಿದೆ ಎಂದರೆ ಅದು ಒಂದಿಷ್ಟು ಒಳ್ಳೆಯ ಕಥಾಹಂದರಕ್ಕಾಗಿಯೇ ಆಗಿರುತ್ತದೆ ವಿನಃ ನಟನೆ, ನಿರ್ದೇಶನ (ಒಂದೆರೆಡು ಚಿತ್ರಗಳು ಈ ಮಾತಿಗೆ ಅಪವಾದವಿರಬಹುದು), ಸಂಗೀತ ಅಥವಾ ಸಾಹಿತ್ಯದಲ್ಲಂತೂ ಅಲ್ಲ. ದಕ್ಷಿಣ ಭಾರತದ ಇತರೆ ರಾಜ್ಯಗಳ ಚಿತ್ರಗಳು ದೇಶವ್ಯಾಪ್ತಿ ಹುಬ್ಬೇರುವಂತೆ ಹೆಸರು ಮಾಡುತ್ತಿದ್ದದೂ ನಮ್ಮಲ್ಲಿ ಮಾತ್ರ ಆಗೊಂದು ಈಗೊಂದು ಚಿತ್ರವನ್ನು ಬಿಟ್ಟರೆ ಉಳಿದೆಲ್ಲ ಚಿತ್ರಗಳು ಪಲ್ಟಿ ಹೊಡೆಯುತ್ತಿರುವುದೇಕೆ? ಇಂದು ನಮ್ಮ ಕನ್ನಡ ಚಿತ್ರರಂಗ ಅದ್ಯಾವ ಮೇರು ಮಟ್ಟಕ್ಕೆ ಬೆಳೆದಿದೆ ಎಂದು ವಾದಿಸಿದರೂ ರಾಜಕೀಯ ವಲಯದಂತೆ ಇಲ್ಲಿಯೂ ಸಹ ವಂಶವೃಕ್ಷದ ಛಾಪೇ ಎದ್ದು ಕಾಣುತ್ತದೆ. ನಟನೆ, ನಿರ್ದೇಶನ, ಸಾಹಿತ್ಯ ಎಂಬ ಡೆಪಾರ್ಟ್ಮೆಂಟುಗಳು ಬಹುಪಾಲು ಅಪ್ಪ-ಮಕ್ಕಳ ವಲಯದಂತೆಯೇ ಆಗಿವೆ. ಕಷ್ಟಪಟ್ಟು ಜಾಲಾಡಿದರೆ ಅಲ್ಲೊಬ್ಬ ಇಲ್ಲೊಬ್ಬ ಗಾಡ್ ಫಾದರ್ ಗಳಿಲ್ಲದ ಆರ್ಟಿಸ್ಟ್ಗಳು ಸಿಗಬಹುದು. ಅವರಿಗೋ ಹತ್ತಾರು ವರ್ಷಗಳು ಇದೇ ಇಂಡಸ್ಟ್ರಿಯಲ್ಲಿ ಕಳೆದರೂ ಇಂದಿಗೂ ಪ್ರತಿಭೆಗನುಗುಣವಾಗಿ ಒಂದು ಸ್ಥಾನ ಮಾನಗಳೆಂಬುದು ದೊರೆತೇ ಇರುವುದಿಲ್ಲ. ಸಾಧು ಈ ಮಾತಿಗೊಂದು ಉದಾಹರಣೆ. ಕೇವಲ ತನ್ನ ಮುಖಭಾವದಲ್ಲೇ ನೋಡುಗರನ್ನು ನಗೆಯ ಕಡಲಲ್ಲಿ ಮುಳುಗೇಳಿಸಬಲ್ಲ, 'ಹೂವೇ ಹೂವೇ' ಎಂಬ H2O ಚಿತ್ರದ ಮಧುರ ಹಾಡಿನ ಸಂಯೋಜನೆಗೆ ಗಿರಿಶಿಖರವನ್ನೆಲ್ಲ ಅಲೆದಾಡಿ ನಂತರ ಬಾಲಿವುಡ್ ನ ಖ್ಯಾತ ಹಾಡುಗಾರ್ತಿ ಕವಿತಾ ಕೃಷ್ಣಮೂರ್ತಿಯವರನ್ನು ಕರೆತಂದು ಹಾಡಿಸಬಲ್ಲ, 'ರಕ್ತಕಣ್ಣೀರಿ'ನಂತಹ ಸೂಪರ್ಹಿಟ್ ಚಿತ್ರಗಳನ್ನು ನಿರ್ದೇಶಿಸಬಲ್ಲ ಒಬ್ಬ ಕಲಾಕಾರನಿಗೆ ಇಂದೂ ಸಹ ಚಿಂದಿ-ಚಿಂದಿಯಾಗಿರುವ ಬಟ್ಟೆಯನ್ನು ತೊಡಿಸಿ, ಹುಚ್ಚರೂ ಕೂಡ ನೋಡಿ ನಗಲಾಗದಂತಹ ಸಂಭಾಷಣೆಗಳನ್ನು ಕೊಟ್ಟು, ಮೀಸೆ ಚಿಗುರದ ನಾಯಕರ ಮುಂದೆ ತೀರಾ ಕನಿಷ್ಠವಾಗಿ ತೋರ್ಪಡಿಸುವುದು ಮಾತ್ರ ಅವನ ಸೀನಿಯರಿಟಿಗೆ ಮಾಡುವ ಅವಮಾನ ವಷ್ಟೇ ಅಲ್ಲದೆ ಒಬ್ಬ ಬಹುಮುಖ ಪ್ರತಿಭೆಯನ್ನು ಪೋಲಾಗಿಸುವುದೂ ಆಗಿದೆ. ನಟನೆಯಲ್ಲಿ ಮೇಲು ಕೀಳು ಎಂಬುದೆಲ್ಲ ಇದೆಯೇ? ನಟನಿಗೆ ಯಾವ ಪಾತ್ರ ಆದರೇನು? ಎಂದೆಲ್ಲ ಪ್ರೆಶ್ನೆಗಳು ಮೂಡಬಹುದು. ಸಹಜವೇ. ಹಾಗಾದರೆ ರಾಜ್ ಕುಮಾರ್ ಅಥವಾ ವಿಷ್ಣುವರ್ಧನ್ ಅವರೇನಾದರೂ ಬದುಕಿದ್ದರೆ ಇಂದಿಗೂ ಸಹ ಅವರುಗಳು ತಮ್ಮ ಆರಂಭದ ದಿನಗಳಲ್ಲಿ ಮಾಡುತಿದ್ದಂತಹ ಸಣ್ಣ ಪುಟ್ಟ ಅತಿ ಕನಿಷ್ಠವೆಂಬಂತಹ ಪಾತ್ರಗಳನ್ನೇ ಇಂಡಸ್ಟ್ರಿ ಅವರುಗಳಿಗೆ ನೀಡುತ್ತಿದ್ದಿತೇ? ಹರಿದ ಅಂಗಿಯನ್ನು ತೊಡಿಸಿ ಘಂಟೆಗಳ ಚಿತ್ರದಲ್ಲಿ ಕೇವಲ ನಿಮಿಷಗಳಷ್ಟೇ ಪರದೆಯ ಮೇಲೆ ಮೂಡುವಂತೆ ಮಾಡುತ್ತಿದ್ದಿತೇ? ನಟನೆಯಲ್ಲಿ ಎಲ್ಲರೂ ಒಂದೆಯಾದರೆ ಅವರಿಗೂ ಇವನಿಗೂ ಇರುವ ವ್ಯತ್ಯಾಸವಾದರೂ ಏನು? ಮೇಲಾಗಿ ಅವರುಗಳು ಕೇವಲ ನಟನೆಯಲ್ಲಿ ಮಾತ್ರ ದಿಗ್ಗಜರಾಗಿದ್ದರು ಎಂಬುದನ್ನು ಮರೆಯಬಾರದು. ಒಬ್ಬ ಹಿರಿಯ ನಟನ ಹಿರಿತನದ ಕಲೆಯನ್ನು ಕಡೆಗಾಣಿಸುವುದೇ ಹಲವು ಬಾರಿ ಚಿತ್ರದ ಹೊಳಪು ಕಮರಲು ಕಾರಣವಾಗುತ್ತದೆ. ಸಾಧುವಿನಂಥ ಇನ್ನೂ ಹಲವರ ಪಾಡು ಹಾಗೆಯೆ ಇದೆ. ಉದಾಹರಣೆಗೆ ಅಲ್ಲೆಲ್ಲೋ ದೂರದ ಸ್ಪೇನ್ ನಲ್ಲಿ ನೆಡೆದ ಫಿಲಂ ಫೆಸ್ಟಿವಲ್ ನಲ್ಲಿ ಗುರುತಿಸಿಕೊಂಡು 'ಉತ್ತಮ ನಟ' ಎಂಬ ಖ್ಯಾತಿಗೆ ಪಾತ್ರರಾಗಿ ದೇಶವ್ಯಾಪಿ ಪ್ರಸಿದ್ದಿಯನ್ನು ಪಡೆದ ವೈಜನಾಥ್ ಬಿರಾದಾರ್ ಇಂದಿಗೂ ಸಹ ದೊರಕುವ ಸಣ್ಣ ಪುಟ್ಟ ಪಾತ್ರಗಳಲ್ಲೇ ತೃಪ್ತಿಪಡಬೇಕಿದೆ. ಅವರಿಗಾಗಿ, ಅವರ ನಟನ ಹಿರಿಮೆಗೆ ತಕ್ಕನಾದ ಅರ್ಥಪೂರ್ಣ, ಭಾವಭರಿತ ಚಿತ್ರವನ್ನು ಸೃಷಿಸಬಲ್ಲ ಕಲೆಯಾಗಲಿ, 'ಧೈರ್ಯ'ವಾಗಲಿ ನಮ್ಮ ಇಂಡಸ್ಟ್ರಿಯ ಅದೆಷ್ಟು ನಿರ್ಮಾಪಕರಿಗಿದೆ?!

ಒಂದು ಕ್ಷಣ ಎಂಬತ್ತರ ದಶಕದ ಸೂಪರ್ಹಿಟ್ ಹಿಂದಿ ಚಿತ್ರಗಳನ್ನು ಗಮನಿಸೋಣ. ಆಕ್ರೋಶ್, ಅರ್ಧಸತ್ಯ, ಮಾಸೂಮ್, ಬಾಝರ್, ಸ್ಪರ್ಶ್, ಪಾರ್, ಆರೋಹಣ್ ಹೀಗೆ ಉದ್ದದೊಂದು ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇನ್ನು ಈ ಎಲ್ಲ ಚಿತ್ರಗಳಲ್ಲಿ ನಟಿಸಿರುವ ನಾಯಕ ನಾಯಕಿರಂತೂ ಮುಖದ ಮೆಲ್ಲೆಲ ಸಿಡುಬಿನ ಕಲೆಗಳಿಂದ ಭಯ ಹುಟ್ಟಿಸುವ, ಕಪ್ಪು ಮೈಯ್ಯ ಬಣ್ಣದ, ಇವರು ಹೀರೋ ಅಥವಾ ಹೀರೋಯಿನ್ ಮೆಟೀರಿಯಲ್ ಗಳೆ ಎಂದು ಹಂಗಿಸಿಕೊಂಡು ನಗೆಪಾಟಲಿಗೆ ಗುರಿಯಾಗುತಿಯಿದ್ದ ಓಂ ಪೂರಿ, ಅಮರೀಶ್ ಪೂರಿ, ನಾಸಿರುದ್ದೀನ್ ಷಾ, ಅನುಪಂ ಖೇರ್, ಸ್ಮಿತಾ ಪಟೇಲ್, ಶಬನಾ ಆಜ್ಮಿ ಹಾಗು ಪರೇಶ್ ರಾವಲ್ ನಂತವರು. ಅಂದು ಅಮಿತಾಬ್ ಬಚ್ಚನ್, ರಿಷಿ ಕಪೂರ್, ರೇಖಾ, ಶ್ರೀದೇವಿ ರವರಂತಹ ದೇಶವ್ಯಾಪಿ ಬೇಡಿಕೆಯ ಕಲಾಕಾರರ ಪ್ರಭೆಯಲ್ಲಿ ಮೇಲಿನ ಇತರ ನಟ ನಟಿಯರೂ ಸಹ ತಮ್ಮ ಕಲೆಯನ್ನು 'ಕಲೆ'ಯಂತೆಯೇ ಅಚ್ಚೋತ್ತಿದ್ದರು. ತಮ್ಮ ಅವರ್ಣನೀಯ ಅಮೋಘ ನಟನೆಯ ಮೂಲಕ. ಪಕ್ಕಾ ಕ್ಲಾಸಿಕ್ ಚಿತ್ರಗಳೆಂದು ಕರೆಸಿಕೊಂಡ ಇವರುಗಳ ಮೇಲಿನ ಚಿತ್ರಗಳು ಇಂದಿಗೂ ಜನಮಾನಸದಲ್ಲಿ ಮನೆಮಾಡಿಕೊಂಡಿವೆ. ಹಸಿರಾಗಿವೆ. ತೀರಾ ಸಾಧಾರಣ ಮೈಕಟ್ಟು, ವಿಕಾರಕೊಂಡ ಮುಖಚಹರೆಯನ್ನು ಒಳಗೊಂಡಿದ್ದ ಇವರುಗಳೆಲ್ಲಾ ಏನಾಗಿದ್ದಾರೆ? ಅವರಿಂದು ಬಾಲಿವುಡ್ನ ದಂತಕತೆಗಳು. ಇಂದಿಗೂ ಚಿತ್ರಗಳಲ್ಲಿ ತೂಕಭರಿತ / ಬಹುಮುಖ್ಯ ಪಾತ್ರಗಳಲ್ಲೇ ನಟಿಸುವ ಇವರುಗಳಿಗೇನು 6 ಪಾಕ್ಸ್ ಆಬ್ಸ್ ಗಳಾಗಲಿ, ಬಿಸಿರಕ್ತದ ಹರೆಯವಾಗಲಿ, ಜುಟ್ಟುಕಟ್ಟುವಷ್ಟುದ್ದದ ಕೂದಲಾಗಲಿ ಇಲ್ಲ. ದಶಕಗಳ ಮೊದಲೇ ತಮ್ಮ ಉತ್ಕೃಷ್ಟ ಪ್ರತಿಭೆಯನ್ನು ಹೊರಹಾಕಿದ ಮೇಲೆ ಇಂಡಸ್ಟ್ರಿ ಅವರನ್ನು ಕಬ್ಬಿನ ಜಲ್ಲೆಯಂತೆ ಹಿಂಡಿ ಒಂದೆಡೆ ಬಿಸಾಡಲಿಲ್ಲ. ಹಿಡಿದ ಕೈಯನ್ನು ಬಿಡಲಿಲ್ಲ. ಇಂದಿಗೂ ಒಬ್ಬ ನಾಯಕ ಅಥವಾ ನಾಯಕಿಯ ಸರಿಸಮನಾಗಿಯೇ ಅವರುಗಳಿಗೆ ಪಾತ್ರಗಳನ್ನೂ ಕೊಟ್ಟು ಅಂತಹದ್ದೇ ಅನುಭವದ ನಟನೆಯನ್ನು ಪಡೆದುಕೊಳ್ಳಲಾಗುತ್ತದೆ. ಆದರೆ ನಮ್ಮಲ್ಲಿ? ಅನಂತ್ ನಾಗ್ ಹಾಗು ಅಂಬರೀಷ್ ರಂತಹ ಕೇವಲ ಒಂದೆರಡು ಬೆರಳೆಣಿಕೆಯ ನಟರನ್ನು ಬಿಟ್ಟರೆ ಇಂದಿಗೂ ಸಹ ಶಿಳ್ಳೆಯೊಡೆದು ಚಪ್ಪಾಳೆಗಳಿಂದ ಸ್ವಾಗತ ಪಡೆದುಕೊಳ್ಳುವ ನಾಯಕರು ಉಳಿದಿಲ್ಲ, ನಾವು ಉಳಿಸಿಯೂಕೊಂಡಿಲ್ಲ!

ಕಷ್ಟದಲ್ಲಿ ಇಷ್ಟವಾಗೊನೆ ಕಾಮಿಡಿಯನ್. ತನ್ನೊಳಗಿರುವ ನೂರಾರು ನೋವು ಹತಾಶೆಗಳ ಹಸಿವನ್ನು ಹಿಂಗಿಸಿಕೊಂಡು ಮುಂದಿರುವ ಪ್ರೇಕ್ಷಕರ ಮೈಮನಸ್ಸನ್ನು ಹಗುರಾಗಿಸುವ ಈತನಿಗೆ ಅದ್ಯಾವ ಹೀರೊ ಹೀರೋಯಿನ್ ಗಳು ಸಮ? ಒಂದು ವೇಳೆ ಆ ಕಾಮಿಡಿಯನ್ ಏನಾದರೂ ನಮ್ಮ ಸಾಧು ಮಹಾರಾಜ್ ನಂತವರಾಗಿದ್ದರಂತೂ 'ಗುಂಡಿನ ಮತ್ತೇ ಗಮ್ಮತ್ತು, ಅಳತೆ ಮೀರಿದರೆ ಆಪತ್ತು..!' ಎಂಬ ಮಾತುಗಳಲ್ಲೇ ನೋಡುಗರ ಅರ್ಧ ಡಜನ್ ಹಲ್ಲುಗಳು ಹೊರಬಂದಿರುತ್ತವೆ. ಚಿತ್ರ ಬಿಡುಗಡೆಗೊಂಡಾಗ 'ನಮ್ಮ ಚಿತ್ರ ನೋಡಿ, ನಮ್ಮನು ಬೆಳೆಸಿ' ಎಂಬಂತಹ ಸೆಂಟಿಮೆಂಟಲ್ ಮಾತುಗಳನ್ನು ನಂಬುವುದನ್ನು ನಾವುಗಳು ನಿಲ್ಲಸಬೇಕಿದೆ. ಚಿತ್ರ ಚೆನ್ನಾಗಿದ್ದರೆ ಇಂದಲ್ಲ ನಾಳೆ ನಾವುಗಳು ನೋಡಿಯೇ ನೋಡುತ್ತೇವೆ. ಇಂತಹ ಕಳಪೆ ಸ್ಟೇಟ್ಮೆಂಟ್ ಗಳನ್ನು ಕೊಟ್ಟು ಕಳಪೆ ಚಿತ್ರಗಳನ್ನೇ ನೀಡುವ ಬಹುಮಂದಿಯನ್ನು ಬೆಳೆಸುವ ವಿಪರ್ಯಾಸ ನಮಗ್ಯಾಕೆ ಸ್ವಾಮಿ? ಬದಲಿಗೆ ಕನ್ನಡ ಚಿತ್ರರಂಗದ ಅಮೋಘ ರತ್ನಗಳಲ್ಲಿ ಒಬ್ಬನಾಗಿರುವ ಸಾಧುವಿನಂತಹ ಅತಿರಥರಿಗೆ ಅವರ ಪ್ರತಿಭೆಗನುಗುಣವಾಗಿಯಾದರೂ ಪಾತ್ರಗಳನ್ನು ನೀಡಿ. ಕಡೆ ಪಕ್ಷ ಚಿತ್ರ ಚೆನ್ನಾಗಿಲ್ಲದಿದ್ದರೂ ಪಾತ್ರಗಳನ್ನು ಪಾತ್ರಧಾರಿಗಳನ್ನು ದೂರದಿರರು ಪ್ರೇಕ್ಷಕರು.

Friday, May 25, 2018

ಮರುಭೂಮಿಯ ಸೆರೆವಾಸ

'ನಿನ್ನ್ ಆ ರಾಶಿ ಕೂದ್ಲು ನೋಡಕ್ ಆಗಲ್ಲ ಮಹರಾಯ, ಸೆಲೂನ್ ಶಾಪಿಗೆ ತಿಂಗ್ಳಿಗೆ ಒಮ್ಮೆ ಆದ್ರೂ ಹೋಗೋದಲ್ವ' ಎಂಬ ಮಾತನ್ನು ಕಳೆದ ಕೆಲ ತಿಂಗಳಿಂದ ಕೇಳಿ ಕೇಳಿ ಕೊನೆಗೂ ಏಕೋ ಆ ದಡೂತಿ ಬಂಗಾಳಿಯ ಶಾಪಿಗೆ ಹೋಗುವ ಮನಸ್ಸಾಯಿತು. ರೂಮಿನಲ್ಲಿದ್ದ ಹೂವಿನ ಗಿಡಕ್ಕಿಂತಲೂ ಕಾಳಜಿ ವಹಿಸಿ ಬೆಳೆಸಿದ್ದ ಕೇಶರಾಶಿಯನ್ನು ಹೀಗೆ 'ನೋಡಕ್ ಆಗಲ್ಲ ಮಹರಾಯ' ಎಂಬ ಗವಾರರ ಮಾತುಗಳಿಗೆ ಕೊಂಚ ಸಿಟ್ಟು ಬಂದರೂ ಆ ಬಂಗಾಳಿಯ ಗಜಗಾತ್ರದ ಹಸ್ತಗಳಿಂದ ತಲೆಗೂ ಹಾಗು ಬೆನ್ನಿಗೂ ಪಟಪಟನೆ ಬಡಿಸಿಕೊಳ್ಳುವ ಸುಖಕ್ಕಾದರೂ ಇಂದು ಸೆಲೂನಿನೆಡೆ ಹೋಗಬೇಕೆನಿಸಿತು. ಬಂಗಾಳಿ, ಅಂದರೆ ನಮ್ಮ ಪಚ್ಚಿಮ ಬಂಗಾಳದವನಲ್ಲ. ಅದಕ್ಕೂ ಕೊಂಚ ಎಡಕ್ಕಿರುವ ಬಾಂಗ್ಲಾ ದೇಶದವ. ಮೀಸೆ ಚಿಗುರುವ ವಯಸ್ಸಿನಲ್ಲಿ ತನ್ನೂರಿನ ಯಾರೊ ಒಬ್ಬನನ್ನು ಕಾಡಿ ಬೇಡಿ ಇಲ್ಲಿಗೆ ಬಂದು ಪರಿಚಯಸ್ತರೊಬ್ಬರ ಬಳಿ ಕೆಲಸ ಕಲಿತು ಇಂದು ತನ್ನದೇ ಆದೊಂದು ಸೆಲೂನ್ ಶಾಪ್ ತೆರೆದು ಎರಡು ಹುಡುಗರನ್ನು ಕೆಲಸಕ್ಕೂ ಇಟ್ಟುಕೊಂಡಿದ್ದಾನೆ. ಕಾರ್ಪೊರೇಟ್ ಪದದಲ್ಲಿ ಏಳುವುದಾದರೆ ಏಕ್ದಂ 'ವರ್ಟಿಕಲ್ ಗ್ರೂಥ್ '! ಕೆಲವರುಷಗಳ ಪರಿಚಯ. ಪ್ರತಿಬಾರಿಯೂ ರೂಮಿನಿಂದ ಹೊರಗಿಳಿದರೆ 'ಸಲಾಂ ಸಾಬ್' ಎನುತ್ತಾ ಆತ್ಮೀಯವಾದೊಂದು ನಗುವನ್ನು ಚೆಲ್ಲಿದರೂ ಆತನ ದೃಷ್ಟಿ ಮಾತ್ರ ಗ್ರಾಹಕನ ಕೇಶರಾಶಿಯ ಉದ್ದಳತೆಯ ಮೇಲೆಯೇ ಇದ್ದಿರುತ್ತದೆ. ಬೇಕಂತೆಲೆ ಏನೋ ಎಂಬಂತೆ 'ಸಾಬ್, ಛೋಟೆ ಬಾಲ್ ಆಪ್ಕೋ ಸಹಿ ನಹಿ ದಿಕ್ತ' ಎನ್ನುತ್ತಾ ಪ್ರತಿಬಾರಿಯೂ ಎರಡಿಂಚಿನ ಕೂದಲಿನ ಉದ್ದವನ್ನು ಕನಿಷ್ಠ ಹತ್ತು ಪರ್-ಸೆಂಟ್ಟೂ ತಗ್ಗಿಸದೆ ತನ್ನ ಮುಂದಿನ ತಿಂಗಳ ಬಿಸಿನೆಸ್ ಗೂ ಅಂದೇ ಇನ್ವೆಸ್ಟ್ಮೆಂಟ್ ಮಾಡಿಕೊಳ್ಳುತ್ತಿದ್ದ.

ಹಳೆಯ ಹಿಂದಿ ಹಾಡುಗಳೊಟ್ಟಿಗೆ ವೀಕೆಂಡಲೊಂದು ಬಿಯರು, ಮುಂಜಾವಿನ ಅಥವಾ ಇಳಿಸಂಜೆಯಲ್ಲೊಂದು ವಾಕು, ಅಲ್ಲೆಲ್ಲೋ ದೂರದ ಮರದ ಕೆಳಗೆ ಅಂಗಾತ ಮಲಗಿ ಒಂದೆರೆಡು ಪುಸ್ತಕಗಳ ಓದು, ಪಾಕಕ್ರಾಂತಿಯ ಮೋಜು... ಹೀಗೆ ವಾರಕ್ಕೊಂದು ಸಿಗುವ ರಜೆಯ ಟೈಮ್ ಟೇಬಲ್ಲಿಗೆ ಇತ್ತೀಚಿಗೆ ಈ ಭೀಮಗಾತ್ರ ಬೆಂಗಾಲಿಯ ಮಾಸ್ಸಾಜು ಕೂಡ ಸೇರಿಕೊಂಡಿದೆ. ಕನಿಷ್ಠ ಎರಡು ತಿಂಗಳಿಗೊಮ್ಮೆಯಾದರು ಅತ್ತ ಕಡೆ ಹೋಗೆ ಬರಬೇಕು. ಇಲ್ಲವಾದಲ್ಲಿ ಕೂತೇ ಕೈಲಾಸ ಸೇರುವಂತಹ ಪ್ರಸ್ತುತ ಕೆಲಸದಲ್ಲಿ ಜಡಗಟ್ಟಿದ ಬೆನ್ನುಮೂಳೆಗಳನ್ನು ಬಾಗಿ ಬೆಂಡಾಗಿಸುವವರ್ಯಾರು? ತಲೆಯ ಕೂದಲನ್ನು ಹಿಡಿದೆಳೆದು ಅದರ ಭಾರವನ್ನು ಇಳಿಸುವವರ್ಯಾರು? ಈ ಮಸ್ಸಾಜು ಕೆಜಿಗಟ್ಟಲೆ ತೂಕದ ಕೇಶರಾಶಿಯ ಗಾತ್ರವನ್ನು ಕಡಿಮೆಗೊಳಿಸುವುದಷ್ಟೇ ಅಲ್ಲದೆ ಅದರ ತುಸು ಕೆಳಗೆ ತುಂಬಿರುವ ಅಗಣಿತ ಸಂಖ್ಯೆಯ ನೋವು, ಹತಾಶೆ ಹಾಗು ಏಕಾಂತವನ್ನು ಕರಗಿಸಿಕೊಳ್ಳುವ ಪ್ರಕ್ರಿಯೆಯೇ ಆಗಿತ್ತೆಂದು ಹೇಳಬಹುದು.

ಬೆಳಗಿನ ಹತ್ತುಘಂಟೆಗೇ ಭಿಕೋ ಎನ್ನುತ್ತಿದ್ದ ಸೆಲೂನಿನ ಒಳಹೊಕ್ಕು ನೋಡಿದಾಗ ಅಲ್ಲಿ ಕೆಲಸಕ್ಕಿದ್ದ ಹುಡುಗರಿಬ್ಬರನ್ನು ಬಿಟ್ಟರೆ ಬಂಗಾಳಿ ಮಾತ್ರ ಕಾಣಲೇ ಇಲ್ಲ. 'ಎಲ್ಲಿ ನಿಮ್ಮ ಒಡೆಯ' ಎಂದು ಕೇಳಿದಾಗ ಆತ ಊರಿಗೆ ಹೋಗಿದ್ದಾನೆಂದು ಬರುವುದು ಇನ್ನೆರೆಡು ದಿನಗಳಾಗುತ್ತವೆ ಎಂಬ ಉತ್ತರ ದೊರೆತಿತು. ಬಂಗಾಳಿಯ ವಿನಃ ಈ ಎರೆಡು ಚಿಳ್ಳೆ ಪಿಳ್ಳೆ ಗಳಿಂದ ಆಗದ ಕೆಲಸವಲ್ಲ. ಆತ ಬರುವವರೆಗೂ ಕಾಯಬಹುದಿತ್ತು. ಆದರೆ ಮ್ಯಾಸ್ಸಜಿನ ತುಡಿತ ಅಷ್ಟೊಂದು ಶಾಂತವಾಗಿಬೇಕಲ್ಲ. 'ಅದು ಎಲ್ಲಿಯಾದರೂ ಸರಿಯೇ' ಎಂಬ ಮಕ್ಕಳ ಹಠಹಿಡಿಯತೊಡಗಿತು. ಮೊದಲಬಾರಿಗೆ ಅಕ್ಕಪಕ್ಕದ ಇತರೆ ಸೆಲೂನ್ ಶಾಪಿನ ಒಳಗೆ ಇಣುಕಿದೆ. ತುಸುದೂರದಲ್ಲಿದ್ದ ಇನ್ನೊಂದು ಶಾಪಿನ ಒಳಗೆ ಹೊಕ್ಕು ನೋಡಿದರೆ ಬಿಳಿಯ ಅಂಗಿಯನ್ನು ಧರಿಸಿ ತೆಳ್ಳಗೆ ಬೆಳ್ಳಗೆ ಇದ್ದೊಬ್ಬ ವ್ಯಕ್ತಿಯೊಬ್ಬ ಗಾಢ ಮೌನದ ಮುಖವಾಡವನ್ನೊತ್ತು ಇತ್ತಲೇ ನೋಡುತ್ತಿದ್ದ. ಸುಸ್ತು ಹತಾಶೆಗಳನ್ನೊಳಗೊಂಡ ಆ ನೋಟ ಒಂದು ಬಗೆಯ ಕಿಚ್ಚಿನ ನೋಟದಂತೆಯೂ ಕಾಣುತಿದ್ದಿತು. ‘ತತ್.. ಈ ನನ್ನ್ ಮಗ ನೋಡೋ ನೋಟಾನೆ ಹೀಗಿರ್ಬೇಕಾದ್ರೆ ಇನ್ ಮಸಾಜ್ ಮಾಡಿ ಅಂತಾ ಕೇಳೋಕ್ಕಾಗುತ್ತ?’ ಆದರೆ ಕೂದಲು ಬೇರೆ ಜಡೆ ಹಾಕೋವಷ್ಟು ಬೆಳೆದಿದೆ. ಶಾಪಿನ ಒಳಗೆ ಬಂದು ಹಾಗೆಯೆ ಹೊರಗೆ ಹೋಗಲು ಆಗಲಿಲ್ಲ. Infact ಧೈರ್ಯ ಸಾಲಲಿಲ್ಲ! ಬೇಕೋ ಬೇಡವೋ ಎನುತ ನನ್ನ ಪಾಡಿಗೆ ನಾನು ಹಾಯಾಗಿ ಚಾಚಿಕೊಂಡಿದ್ದ ಕುರ್ಚಿಯ ಮೆಲೋಗಿ ಕುಳಿತೆ. ಕೂಡಲೇ ತನ್ನ ಹಿಂಬದಿಗೆ ಸಣ್ಣದೊಂದು ಕುರ್ಚಿಯ ಮೇಲೆ ಕೂತಿದ್ದ ಆತ ಎದ್ದು ಬಿಳಿಯ ಬಟ್ಟೆಯೊಂದನ್ನು ಎದೆ ಹಾಗು ಹೊಟ್ಟೆಯ ಸುತ್ತಲೂ ಹೊದಿಸಿ ಕುತ್ತಿಗೆಗೊಂದು ಬಿಳಿಯ ಪೇಪರಿನ ಬಟ್ಟೆಯೊಂದನ್ನು ಕಟ್ಟಿದ. ಕೈಲಿದ್ದ ಮೊಬೈಲು ಹಾಗು ಕನ್ನಡಕವನ್ನು ಮುಂದಿದ್ದ ಮೇಜಿನ ಮೇಲೆ ಇಡುವಂತೆ ಕಣ್ಸನ್ನೆ ಮಾಡಿ, ಸರ್ವದಿಕ್ಕುಗಳಿಗೂ ಏಕರೂಪವಾಗಿ ಬೆಳೆದಿದ್ದ ಕೂದಲಿನ ಮೇಲೊಮ್ಮೆ ಕೈಯಾಡಿಸಿ 'ಏನಯ್ಯ ಇದು' ಎಂಬಂತೆ ತನ್ನ ಅಸ್ತವನ್ನು ಅರಳಿಸಿದ. ಬಾಯ್ಬಿಟ್ಟೂ ಕೇಳಲಾಗದ ಆ ಸಿಡುಕು ಮುಸುಡಿಯನ್ನು ಕಂಡು ಮಯ್ಯಲ್ಲ ಕೆಂಡಸುರಿದಂತಾಗಿ ಸಿಟ್ಟನ್ನು ಅದುಮಿಟ್ಟುಕೊಂಡ ನಾನು 'ನೋಡೇಬಿಡುವ' ಎನುತ ಸುಮ್ಮನೆ ಕುಳಿತೆ. ಮುಂದಿದ್ದ ಬೃಹತ್ ಕನ್ನಡಿಯ ಮೂಲಕ ನನ್ನನ್ನೇ ಕೆಲಕಾಲ ಗುರಾಹಿಸಿದ ಆ ಮೊರೆ ಮುಂದಿದ್ದ ನೀರಿನ ಬಾಟಲಿಯನ್ನು ತೆಗೆದು ಇಂಚಿಚ್ಛೇ ನೀರನ್ನು ಕೂದಲ ಮೇಲೆ ಚಿಮುಕಿಸತೊಡಗಿತು. ನರನಾಡಿಯಲ್ಲಿದ್ದ ರಕ್ತವನ್ನೆಲ್ಲ ಬಸಿದುಬಿಟ್ಟ ದೇಹಕ್ಕೆ ಕೆಲಸ ಕೊಟ್ಟಂತೆ ಆ ಸ್ಪ್ರೇ ಬಾಟಲಿನಿಂದ ಚಿಮುಕುತಿದ್ದ ನೀರು ಪ್ರತಿ ಬಾರಿಗೆ ಒಂದೋ ಅಥವಾ ಎರಡೂ ಕೂದಲೆಳೆಗಳನ್ನು ಮಾತ್ರವಷ್ಟೇ ನೆನೆಸುತಿದ್ದಿತು. ಕೋಪ ತಡೆಯಲಾಗಲಿಲ್ಲ. 'ಭಾಯ್, ಹೇರ್ ಕಟಿಂಗ್ ಮಾಡಿ, ಹೂವಿನ ಗಿಡ ಬೆಳೆಸ್ಬೇಡಿ ತಲೆ ಮೇಲೆ' ಎಂಬಂತೆ ಜೋರಾಗೆ ಹಿಂದಿಯಲ್ಲೇ ಅರಚಿದೆ. ಅಲ್ಲಿಯವರೆಗೂ ತನಗೂ ಆ ಕಾಯಕ್ಕಕ್ಕೂ ಸಂಭಂಧವಿಲ್ಲವೇನೋ ಎಂಬಂತಿದ್ದ ಆ ವ್ಯಕ್ತಿ ಕೂಡಲೇ ಗಂಟಲನ್ನು ಸರಿಪಡಿಸಿಕೊಳ್ಳುತ್ತ 'ಫಾಸ್ಟಿಂಗ್ ಸಾಬ್' ಎನ್ನುತ್ತಾ ಸುಮ್ಮನಾದ. ಮುಸ್ಲಿಮರ ಪವಿತ್ರ ಮಾಸವದು ಎಂಬುದ ಮರೆತೇಬಿಟ್ಟಿದ್ದ ನಾನು ಕೆಲಕಾಲ ಸುಮ್ಮನಾದೆ. ದಿನಪೂರ್ತಿ ಒಂದುಹನಿ ನೀರೂ ಇಲ್ಲದೆ ಹೀಗೆ ಬೆಳಗಿನಿಂದ ಸಂಜೆಯ ತನಕ ಉಪವಾಸವಿರುವುದನ್ನು ನೆನೆದೇ ಮೈ ಜುಮ್ಮೆನ್ನುವ ನನಗೆ ಆತನ ಆ ಸಿಡುಕು ಮೊರೆಯಲ್ಲೂ ಎಲ್ಲೋ ಒಂದೆಡೆ ಕರುಣಾಭಾವ ಕಂಡಿತು. ನಂತರ ಆತನ ಪಾಡಿಗೆ ಕೆಲಸದಲ್ಲಿ ಮಗ್ನನಾದ.

ಆದರೆ ಬಂದ ಕೆಲಸವನ್ನು ಮಾಡಿಸಿಕೊಂಡು ಹೋಗದೆ ಆದೀತೆ? ಆದರೆ ಮಸಾಜ್ ಮಾಡಲು ಬೇಕಾದ ಶಕ್ತಿಯಾಗಲಿ, ಗೆಲುವಾಗಲಿ ಒಂದಿನಿತೂ ಆತನಲ್ಲಿ ಇದ್ದಂತೆ ಕಾಣಲಿಲ್ಲ. ಆದರೆ ಪುಸಲಾಯಿಸಿಯಾದರೂ ಸರಿಯೇ ತಿಂಗಳು ಬಿಟ್ಟು ಬಂದವನಿಗೆ ಒಂದೆರೆಡು ಗುದ್ದನ್ನು ಗುದ್ದಿಸಿಕೊಂಡು ಹೋಗದಿರಲಾಗುತ್ತದೆಯೇ? ನಾನೇ ಮೊದಲು ಮಾಡಿ 'ಕಿದರ್ ಸೆ ಹೊ' ಎನ್ನುತ ಮಾತು ಶುರುಮಾಡಿದೆ.

ಕೆಲ ಕ್ಷಣ ಸುಮ್ಮನಿದ್ದು 'ಪಾಕಿಸ್ತಾನ್…' ಎಂದ ಆತನ ಧ್ವನಿಯಲ್ಲಿ ಮೂಡಿದ ಏಕರೂಪೇನ ದ್ವಂದ್ವವು ನನ್ನ ಮುಖದ ಮೇಲೆಯೂ ಮೂಡಿತು. ನಂತರ ಕತ್ತರಿಯ ಚಟ್ ಪಟ್ ಸದ್ದು ತಲೆಯ ಹಿಂಭಾಗದಿಂದ ಮುಂಬದಿಗೆ ಬಂದಿತ್ತು.

'ಆಪ್ ಕಿದರ್ ಸೆ ಹೊ ' ಎಂದ ಆತನ ಪ್ರೆಶ್ನೆಗೆ ಅಳುಕುತ್ತಲೇ ನಾನು 'ಇಂಡಿಯಾ' ಎಂದೆ.

ಪುನ್ಹ ಒಂತಿಷ್ಟು ಮೌನ. ತದನಂತರ ಆತ ನಾನೇನು ಮಾಡುತ್ತಿರುವೆನೆಂದು ಕೇಳಿ ತಿಳಿದು, ಇದ್ದಕ್ಕಿದಂತೆ ತನಗೂ ನಾನಿರುವ ಕಡೆ ಯಾವುದಾದರೊಂದು ಕೆಲಸವನ್ನು ಹುಡುಕಿ ಕೊಡುವಂತೆ ಕೇಳಿಕೊಂಡ!

'ಅರ್ರೆ, ತನ್ನ ಕಾಯಕವೇ ಬಂಡವಾಳವಾಗಿರುವ, ತುಸುಮಟ್ಟಿಗೆ ಹಾಯಾದ ಕೆಲಸವೆನ್ನಬಹುದಾದ ಕೆಲಸವನ್ನು ಬಿಟ್ಟು ಈತ ಮಾಡುವುದಾದರೂ ಏನುಂಟು?!' ಎಂಬ ಪ್ರೆಶ್ನೆಯೊಂದು ಮನದೊಳಗೆ ಮೂಡಿತು.

ಕೂತೂಹಲದಿಂದ ಏಕೆ, ಏನೆಂದು ವಿಚಾರಿಸಿದೆ.

ಮೌನದ ಕಟ್ಟೆಯೊಡೆದಂತೆ ಒಂದೇ ಉಸಿರಿನಲ್ಲಿ ಆತ ತನ್ನ ಬವಣೆಯನ್ನೆಲ್ಲವನ್ನು ಹೊರಹಾಕತೊಡಗಿದ. ಪಾಕಿಸ್ತಾನದ ಇಸ್ಲಾಮಾಬಾದ್ ನಿಂದ ಬಂದು ಇಂದಿಗೆ ಸುಮಾರು ಆರು ತಿಂಗಳಾಯಿತಂತೆ. ಊರಿನಲ್ಲೊಂದು ತನ್ನದೇ ಆದ ಪುಟ್ಟ ಸೆಲೂನ್ ಶಾಪನ್ನು ನೆಡೆಸುತ್ತಿದ್ದ ಈತ ತಾನೊಬ್ಬ ಸುಖೀಜೀವಿಯಾಗಿದ್ದೆ ಎಂಬುದನ್ನು ಇಲ್ಲಿಗೆ ಬಂದಮೇಲೆಯೇ ಮನಗಂಡನಂತೆ! ಮಳಿಗೆಯ ಖರ್ಚುವೆಚ್ಚಗಳೆಲ್ಲವನ್ನು ಕಳೆದು ಕಮ್ಮಿ ಎಂದರೂ ದಿನಕ್ಕೆ ಐನೂರರಿಂದ ಸಾವಿರ ರೂಪಾಯಿಗಳನ್ನು ಉಳಿಸುತ್ತಿದ್ದ ಈತನಿಗೆ ತನ್ನ ಗಳಿಕೆ ಬಹಳ ಕಡಿಮೆಯಾಯಿತೆಂದೋ ಅಥವ ಹೊರದೇಶಕ್ಕೆ ಹೋದರೆ ನಿಮಿಷ ಮಾತ್ರದಲ್ಲಿ ಕುಭೇರನಾಗಬಹುದೆಂಬ ಕನಸನ್ನು ಕಂಡೊ ಏನೋ, ಹೊರದೇಶದಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪರಿಚಯ ಮಾಡಿಕೊಂಡು ಕೆಲಸವನ್ನು ಹೊಂದಿಸುವಂತೆ ಕೇಳಿಕೊಳ್ಳುತ್ತಾನೆ. ಆತನೋ ಹೀಗೆ ರಾಶಿ ರಾಶಿ ಅಮಾಯಕರನ್ನು ತುಂಬಿ ತಂದು ಇಲ್ಲಿಗೆ ಸುರಿಯುವವ. ಶಿಕಾರಿ ತಾನಾಗಿಯೇ ಬಲೆಗೆ ಬೀಳಲು ಬಂದರೆ ಬಿಟ್ಟನೇ. ವೀಸಾ, ಪಾಸ್ಪೋರ್ಟ್, ಟಿಕೆಟ್ಟು, ಕಮಿಷನ್ ಮಣ್ಣು ಮಸಿ ಎನುತ್ತಾ ಸಾವಿರಾರು ರೂಪಾಯಿಗಳನ್ನು ಆತನಿಂದ ಕಸಿದುಕೊಂಡು ನಂತರದ ಕೆಲವೇ ದಿನಗಳಲ್ಲಿ ಮರಳುಗಾಡಿನ ಕಾನನದೊಳಗೆ ಆತನನ್ನು ತಂದು ಬಿಡುತ್ತಾನೆ. ಎಲ್ಲೆಡೆ ವಿಚಾರಿಸಿ ಕೊನೆಗೆ ಕೆಲಸ ಸಿಗದಿರುವಾಗ ಆತನನ್ನು ದೇಶಾಂತರ ಹೊತ್ತು ತಂದ ವ್ಯಕ್ತಿಯೇ ಇಲ್ಲಿಯ ಸೆಲೂನ್ ಶಾಪಿನಲ್ಲಿ ಕೆಲಸವನ್ನು ಹುಡುಕಿ ಕಳುಹಿಸುತ್ತಾನೆ. ಆದರೆ ಪ್ರತಿ ತಿಂಗಳ ಆತನ ಸಂಬಳದಲ್ಲಿ ಕನಿಷ್ಠವೆಂದರೂ 10 ಪ್ರಸೆಂಟ್ ನಷ್ಟು ಹಣ ಆ ದಳ್ಳಾಳಿಯ ಜೇಬನು ಸೇರಬೇಕೆಂಬ ಕಾರಾರಿನೊಂದಿಗೆ! ಇರಲು ಮೂರಡಿಯ ಒಂದಿಷ್ಟು ಜಾಗ ಹಾಗು ದಿನಕ್ಕೆ ಮೂರು ಬಾರಿ ರೋಟಿ ಹಾಗು ಇಂತಿಷ್ಟು ಬಾಜಿಯನ್ನು ಬಿಟ್ಟರೆ ಈತನಿಗೆ ಬರುತ್ತಿದ್ದ ಸಂಬಳ ತಾನು ಊರಿನಲ್ಲಿ ಗಳಿಸುತ್ತಿದ್ದ ಅರ್ಧದಷ್ಟೂ ಸಮನಿರಲಿಲ್ಲ. ಬೆಳಗ್ಗಿನಿಂದ ದುಃಖ, ಕೋಪ, ಹಸಿವನ್ನು ತಡೆದುಕೊಂಡು, ಬಂದುಹೋಗುವ ಗ್ರಾಹಕರ ಇಚ್ಛೆಗನುಗುಣವಾಗಿ ಅವರ ಕೇಶರಾಶಿಯನ್ನು ವಿನ್ಯಾಸಗೊಳಿಸಿ, ತಲೆಯನ್ನು ತೀಡಿ ತಿವಿದು ಅವರ ಚಿಂತೆಯನ್ನು ದೂರಾಗಿಸುವ ಈತ ಹಲವು ಬಾರಿ ತನ್ನ ತಾಯ್ನಾಡಿಗೆ ಹಿಂದಿರುಗಲು ಆವಣಿಸಿದರೂ ತಾನು ಕೆಲಸ ಮಾಡುತಿದ್ದ ಮಾಲೀಕನೊಟ್ಟಿಗೆ ಎರಡು ವರ್ಷದ ಕರಾರಿದ್ದ ಕಾರಣ ಅದು ಸಾಧ್ಯವಾಗದೆ ಸುಮ್ಮನಾಗಿದ್ದಾನೆ.

ಕೆಲಕಾಲ ಸುಮ್ಮನಾಗಿ ಪುನ್ಹ ಮಾತು ಶುರುವಿಟ್ಟಾಗ ಆತನ ಧ್ವನಿ ಏಕೋ ಗದ್ಗದಿಸತೊಡಗಿತ್ತು. ಹೀಗೆ ಕೆಲದಿನಗಳ ಹಿಂದೆ ತನ್ನ ತಾಯಿ ತೀರಿಕೊಂಡಳೆಂಬ ವಿಷಯ ತಿಳಿದು ಕೂಡಲೇ ಹೋಗಬೇಕೆಂದಾಗ ಮಾಲೀಕ ಹಣವಿಲ್ಲವೆಂದು ನಿರಾಕರಿಸಿದನೆಂದು ಹೇಳುತ್ತಾನೆ. ಪಾಸ್ಪೋರ್ಟ್ ಹಾಗು ಒಂತಿಷ್ಟು ಹಣ ನನ್ನ ಕೈಲಿದ್ದರೆ ನಾನೇ ಹೇಗಾದರೂ ಮಾಡಿ ಹೋಗಿಬಿಡುತ್ತಿದ್ದೆ ಸಾಬ್ ಎಂದನಾತ. ಈಗ ತಾನು ಏನೇ ಮಾತಾಡಿದರೂ ಆತ ಅತ್ತುಬಿಡುವುದಂತು ಗ್ಯಾರೆಂಟಿ. ಆತನ ಬಿಳಿಯ ಮುಖವೆಲ್ಲ ಕೆಂಪಾಗಿ ಹೊಳೆಯತೊಡಗಿತ್ತು. ಸಿಟ್ಟು, ಕೋಪ, ಹತಾಶೆ ಎಲ್ಲವೂ ಒಮ್ಮೆಲೇ ಹೊರಬರಲು ಹವಣಿಸುತ್ತಿವೆಯೇನೋ ಎಂಬಂತೆ ಭಾಸವಾಗತೊಡಗಿತು. ಕೊನೆಯ ಭಾರಿಗೆ ತನ್ನ ತಾಯಿಯ ಮುಖವನ್ನೂ ನೋಡಲಾಗದ ಆತ ತನ್ನನ್ನು ತಾನೇ ಶಪಿಸಿಕೊಳ್ಳುತ್ತಿರವಂತೆ ಅನಿಸಿತು. ಆತನ ಮುಖಚಹರೆ ಮಾತಾಡತೊಡಗಿತು. ನಾವೋಬ್ಬ ಮುಖ ಪ್ರೇಕ್ಷಕನಾಗಿ ಕನ್ನಡಿಯ ಪ್ರತಿಬಿಂಬದಲ್ಲಿ ಆತನನ್ನು ಆಲಿಸತೊಡಗಿದ್ದೆ.

'ಏನಾದರು ಸರಿಯೇ, ಸಣ್ಣದೊಂದು ಕೆಲಸ ಕೊಡಿಸಿ ಬಾಯ್. ಇಲ್ಲಂತೂ ನಾನಿರಲಾರೆ' ಎನ್ನತೊಡಗಿದ. ತನಗಿಷ್ಟವಿಲ್ಲದ ಬೋರ್ಡಿಂಗ್ ಸ್ಕೂಲಿಗೆ ಹಾಕದಂತೆ ಮಕ್ಕಳು ಪೋಷಕರನ್ನು ಕಾಡುವಂತೆ. ಏನೋ ಒಂದು ಬಗೆಯ ಆತ್ಮಿಯತೆಯೊಂದು ಆತನಿಗೆ ಆತನನ್ನು ಕೇಳುವವರಲ್ಲಿ ಮೂಡುತ್ತಿತ್ತೇನೋ. ಆ ಸಾಲಿಗೆ ನಾನೇ ಮೊದಲಿಗನಿರಬೇಕು. ಏಕೋ ಪೇಚಿಗೆ ಸಿಕ್ಕ ಅನುಭವವಾಗತೊಡಗಿತು. ಕತ್ತಿನ ಸುತ್ತ ನನ್ನ ಪ್ರೀತಿಪಾತ್ರವಾದ ಕೂದಲುಗಳು ರಣರಂಗದಲ್ಲಿ ಹೋರಾಡಿ ಅಸುನೀಗಿದಂತೆ ಹಿಡಿಹಿಡಿಯಾಗಿ ಬಿದ್ದಿದ್ದವು. ಮತ್ತೆಂದೂ ಆ ಸ್ವಸ್ಥಾನಕ್ಕೆ ಹಿಂದಿರುಗದ ಅವುಗಳ ರೋಧನೆಯೂ ಅವುಗಳಲ್ಲಿ ಕಾಣಬಹುದಾಗಿದ್ದಿತು. ತಾನು ಸಹ ಅವುಗಳಂತೆಯೇ ಏನೋ ಎಂಬಂತೆ ಆ ರಾಶಿಯನ್ನೆಲ್ಲ ಹೆಕ್ಕಿ ಮೂಲೆಯಲ್ಲಿ ಒಂದೆಡೆ ಸುರಿದ ಆತ. ಒಂತಿಷ್ಟು ಹಣವನ್ನು ಗಳಿಸುವ ಆಸೆಯಲ್ಲಿ ದೇಶಾಂತರ ಬರುವ ಇಂತವರು ಕೊರಗಿ ದಣಿದು ಸಾಕು ಸಾಕಾಗಿ ಪುನ್ಹ ತಮ್ಮ ಸ್ವಸ್ಥಾನವನ್ನು ಸೇರುವಾಗ ಬದುಕಿನ ಬಾಗಿಲೇ ಮುಚ್ಚತೊಡಗಿರುತ್ತದೆ. ಅಂತಹ ಲಕ್ಷಾಂತರ ಬಡಪಾಯಿಗಳು ಇಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹುಡುಕಿದರೂ ಸಿಗುವರು! ಹುಟ್ಟೂರಿನ ಗಂಜಿ ಅನ್ನವೂ ಅಮೃತಕ್ಕೆ ಸಮವೆಂಬುದ ವಿಪರ್ಯಾಸವೆಂಬಂತೆ ಪರದೇಶಗಳಿಗೆ ಬಂದೇ ಕಲಿಯುವವರು. ಆದರೆ ಈ ಮಾತು ಎಲ್ಲರಿಗೂ ಅನ್ವಯವಾಗಬಲ್ಲದೇ? ಕೊಂಚ ದೂರದಲ್ಲಿದ್ದ ಬಂಗಾಳಿಯೂ ಹೀಗೆ ಹಲವು ವರ್ಷಗಳಿಂದೆ ಇಲ್ಲಿಗೆ ಬಂದು ಇದೆ ನೋವು ಹತಾಷೆಗಳನು ಅದೆಷ್ಟು ಅನುಭವಿಸಿರಬಹುದು? ಅದೆಂಥಹ ಹಸಿವುಗಳನ್ನು ನೀಗಿಕೊಂಡಿರಬಹುದು? ಅವುಗಳೆಲ್ಲದರ ಪರಿಣಾಮವಾಗಿಯೇ ಏನೋ ಇಂದು ಆತ ತನ್ನ ಸ್ವಂತ ಕಾಲಮೇಲೆ ನಿಂತಿದ್ದಾನೆ. ಸುಖೀಯಾಗಿದ್ದಾನೆ. ಕಷ್ಟಗಳು ಬರುವುದೇ ಮನಸ್ಸನ್ನು ಕಲ್ಲಾಗಿಸಲು. ಒಂತಿಷ್ಟು ಪೆಟ್ಟನ್ನು ತಿಂದು ನೆಮ್ಮದಿಯ ಜೀವನವನ್ನು ಕಾಣಲು.

ಮುಂದಿನ ಕೆಲಸನಿಮಿಷಗಳಲ್ಲಿ ಭಾಗಶಃ ಕೇಶರಾಶಿಯ ಹತ್ಯಾಕಾಂಡವೇನೋ ಮುಗಿಯಿತು. ಬಹುದಿನಗಳಿಂದಲೇನೋ ಎಂಬಂತೆ ಆತನ ದುಃಖವೂ ಕರಗಿ ನಿರಾಳತೆಯ ಭಾವವೊಂದು ಆತನಲ್ಲಿ ಮೂಡಿದಂತಿತ್ತು. ಈಗ ನನ್ನ ಮುಂದಿದ್ದ ಪ್ರೆಶ್ನೆಗಳು ಎರಡೇ. ಕೆಲಸವೊಂದರ ದೃಡೀಕರಣವನ್ನು ಆತನಿಗೆ ನೀಡುವುದು. ಎರಡು, ಒಂತಿಷ್ಟು ಪೆಟ್ಟನ್ನು ತಲೆಗೂ ಬೆನ್ನಿಗೂ ತಿಂದು ಹಿತಭಾವವನ್ನು ಅನುಭವಿಸುವುದು! ಆದರೆ ಅದ್ಯಾವ ಬಾಯಿ ಬಿಟ್ಟು ಆತನಲ್ಲಿ ಮಸಾಜ್ ಮಾಡಯ್ಯ ಎಂದು ಕೇಳಲಿ? ದುಃಖದಿಂದ ಬಾತಿದ್ದ ಆತನ ಮುಖವನ್ನು ನೋಡಿದರೆ ಇನ್ನೇನೂ ಹೆಚ್ಚನ್ನು ಹೇಳುವ ಅಥವ ಕೇಳುವ ಹಾಗಿರಲಿಲ್ಲ. ಮೇಲಾಗಿ ಆತ ಉಪವಾಸನಿರತ. ಬೇಕೋ ಬೇಡವೋ ಎನ್ನುತ್ತಲೇ ಮೇಲೇಳತೊಡಗಿದೆ. ಕೂಡಲೇ ನನ್ನ ಬುಜದಮೇಲೆ ಬಿದ್ದ ಆತನ ಎರಡು ಕೈಗಳು 'ಏಕ್ ಮಿನಿಟ್ ಸಾಬ್, ಮಸ್ಸಾಜ್ ಕರ್ತ ಹೂ' ಎನ್ನುತ್ತಾ ಏಳುತ್ತಿದ್ದವನನ್ನು ಪುನ್ಹ ಕುರ್ಚಿಯ ಮೇಲೆ ಕೂರಿಸಿದವು. ಬಾಯಿಬಿಟ್ಟು ಕೇಳದಿದ್ದರೂ ನನ್ನ ಮುಖಭಾವದಿಂದಲೇ ಏನೋ ನನ್ನನು ಆತ ಅರಿತಿದ್ದ! ನಂತರ ಗೋಡೆಗೆ ನೇತಾಕಿದ್ದ ದಪ್ಪದಾದೊಂದು ಟವೆಲ್ ಅನ್ನು ಬೆನ್ನ ಸುತ್ತಲೂ ಹೊದಿಸಿ, ಒಂತಿಷ್ಟು ನೀರನ್ನು ತಲೆಕೂದಲಿಗೆ ಚಿಮುಕಿಸಿ ತಲೆಯ ಸುತ್ತ ಹಾವುಗಳು ಹೊರಳಾಡಿಸಿದಂತೆ ಕೈಬೆರಳುಗಳನ್ನು ಆಡಿಸತೊಡಗಿದ. ಕಣ್ಣನ್ನು ಮುಚ್ಚಿ ನನ್ನ ಇಡೀ ತಲೆಯ ಅಧಿಕಾರವನ್ನು ಆತನಿಗೆ ಒಪ್ಪಿಸಿದೆ. ಅದು ಆಟಿಕೆಯ ಗೊಂಬೆಯಂತೆ ಆತ ಆಡಿಸಿದಂತೆ ಅಷ್ಟ ದಿಕ್ಕುಗಳಿಗೂ ತಿರುಗತೊಡಗಿತು. ಹೆಚ್ಚು ಕಡಿಮೆ ಆತನಷ್ಟೇ ಅಥವಾ ಕೊಂಚ ಹೆಚ್ಚೆಂದೇ ಹೇಳಬಹುದಾದ ಜಂಜಾಟಗಳನ್ನು ಹೊತ್ತಿದ ಹೊರೆಯನ್ನು ಕಳೆದುಕೊಳ್ಳತೊಡಗಿತು. ಆಗೊಂದು ಹೀಗೊಂದು ಬೆನ್ನಿಗೆ ಬೀಳುತಿದ್ದ ಗುದ್ದುಗಳು ಜಡಗಟ್ಟಿದ ಹುರುಪನ್ನು ಪುನಃ ಜಾಗೃತ ಗೊಳಿಸಿದವು. ಬದ್ದ ವೈರಿದೇಶದ ಪ್ರಜೆಯೊಬ್ಬ ಹೀಗೆ ಮತ್ತೊಬ್ಬನ ನೋವು ಹತಾಶೆಗಳ ಹೊರೆಯನ್ನು ತನ್ನ ಶಕ್ತಿಹೀನ ಸ್ಥಿತಿಯಲ್ಲೂ ಕಡಿಮೆಗೊಳಿಸತೊಡಗಿದ. ಎಲ್ಲಿಯ ದೇಶ ಅದೆಲ್ಲಿಯ ದ್ವೇಷ? ಕಷ್ಟ ಸುಖಗಳಿಗೆ ಸ್ಪಂದಿಸಬಲ್ಲ ಆತ್ಮಗಳೇ ಇಲ್ಲದ ಮೇಲೆ ದೇಶಕ್ಕೊಂದು ಬೇಲಿಯನ್ನು ಹಾಕಿ ಏನು ಪ್ರಯೋಜನ?

ತಿಳಿದ ಮಟ್ಟಿಗೆ ಯಾವೊಂದು ಕೆಲಸವೂ ನನ್ನ ತಲೆಗೆ ತಕ್ಷಣ ಹೊಳೆಯಲೇ ಇಲ್ಲ. ಮೇಲಾಗಿ ಆತನಿಗೆ ಗೊತ್ತಿರುವುದು ಈ ಒಂದೇ ಕೆಲಸವಾಗಿರುವುದರಿಂದ ಬೇರ್ಯಾವ ಕೆಲಸವನ್ನು ಹುಡುಕಿಕೊಟ್ಟರೂ ಆತ ಅದನ್ನು ಮೊದಲಿನಿಂದ ಕಲಿಯಬೇಕು. ಕೇವಲ ಹೊಟ್ಟೆಪಾಡಿಗಾಗಿ ತನ್ನ ಕೆಲಸದ ಹಿರಿತನದ ಅನುಭವವನ್ನು ಬದಿಗಿಡಬೇಕು. ಹುಡುಕಿಕೊಟ್ಟರೂ ಅದು ಇದೇ ವಲಯದ ಬೇರೊಂದು ಕೆಲಸವಾಗಬೇಕು ಅಂದುಕೊಂಡೆ. ಗಜಕಾಯದ ಬಂಗಾಳಿ ತನ್ನೂರಿನಿಂದ ಬಂದಾಗ ಭಾರತೀಯನಾಗಿ ನಾನು ಈ ಕುಡಿಮೀಸೆಯ ಪಾಕಿಸ್ತಾನಿಗೆ ಒಂದು ಕೆಲಸವನ್ನು ಹೊಂದಿಸಬೇಕು. ಸಾಧ್ಯವಾದಷ್ಟು ಸಹಾಯವನ್ನು ಮಾಡಬೇಕೆಂದು ಯೋಚಿಸತೊಡಗಿದೆ. 'ಸಾಬ್ ಚಿಂತಾ ಮತ್ ಕರೋ, ಕಾಮ್ ನಹಿ ಮಿಲೇಗ ತೊ ಬಿ ಟೀಕ್ ಹೈ' ಎನ್ನುತ ಆತ ಮುಗುಳ್ನಗೆಯೊಂದು ಬೀರಿದಾಗ ಏಕೋ ಮನದಲ್ಲಿ ತುಂಬಾನೆ ಕಸಿವಿಸಿಯಾಯಿತು. ಜೇಬಿನಲ್ಲಿದ್ದ ಎಲ್ಲವನ್ನು ಕಳೆದುಕೊಂಡು, ಹುಟ್ಟಿಬೆಳೆದ ತನ್ನೂರನ್ನು ಬಿಟ್ಟು, ಅರೆಹೊಟ್ಟೆಯಲ್ಲಿ ಬದುಕುತ್ತಿದ್ದ ವ್ಯಕ್ತಿಯೊಬ್ಬ ನಕ್ಕರೆ ಅದು ಹತಾಶೆಯ ನಗೆಯಲ್ಲದೆ ಮತ್ತೇನು? ಏನು ಹೇಳಬೇಕೆಂದು ತಿಳಿಯದೆ ಕೊಡಬೇಕಾಗಿದ್ದ ಹಣಕ್ಕಿಂತ ಎರಡರಷ್ಟನ್ನು ಕೊಟ್ಟು, ಆತನ ಕೆಲಸಕ್ಕಾಗಿ ಪ್ರಯತ್ನಿಸುವೆ ಎಂದು ಹೇಳಿ ಹೊರಬಂದರೂ ಆತನ ಆ ಅಮಾಯಕ ನಗುವಿನ ದೃಶ್ಯ ಮಾತ್ರ ನನ್ನನ್ನು ಬಹುದಿನಗಳವರೆಗೂ ಕೊರೆಯುತ್ತಲೇ ಇದ್ದಿತು.

Sunday, May 13, 2018

ಮಾನಹೀನ ಮಾತುಗಳಿಂದ ಬದುಕಬೇಕಿದೆಯೇ ನಮ್ಮ ಡೆಮಾಕ್ರಸಿ...?

ಸಣ್ಣವರಿದ್ದಾಗ ಶಿಕ್ಷಕರು ನಮಗೆ ಕಲಿಸಿದ್ದ ಅಮೋಘ ಶಿಕ್ಷಣಗಳಲ್ಲಿ ಸರಿಯೆನಿಸದ್ದಿದ್ದನ್ನು ಪ್ರೆಶ್ನಿಸುವುದೂ ಒಂದು. ಅದು 'ಏನಲೇ..!?' ಎಂದು ಕೊಳಪ್ಪಟ್ಟಿಯನ್ನು ಹಿಡಿದು ಜಾಡಿಸಿ ಕೇಳುವುದಕ್ಕಿಂತ ಮಿಗಿಲಾಗಿ, ಹರಿತವಾದ ಮಾತಿನಿಂದ ಸತ್ಯವೆಂಬ ಹಿಡಿತದೊಂದಿಗೆ ಮುಂದಿರುವವನ ಕಪಟ ವಂಚಕ ಮನಸ್ಥಿತಿಯನ್ನು ಬೆದರುಗೊಳಿಸುವ ಬಗೆಯಾಗಿದ್ದಿತು. ಅರ್ಥಾತ್ ಅವು ವೈಚಾರಿಕ ಬಗೆಯ ನೇರ ಪ್ರೆಶ್ನೆಗಳಾಗಿದ್ದವು. ಆದರೆ ಅಂದಿನ ಆ ಪಾಠವನ್ನು ಮರೆತ ಬಹುಮಂದಿ ಜನರು ಇಂದು ಕೇಳುವ ಪ್ರೆಶ್ನೆಗಳು ಏಕವಚನ ಪದಗುಚ್ಛಗಳ ಚಪ್ಪಲಿ ಏಟಿನಂತೆ ಮುಂದಿರುವ ವ್ಯಕ್ತಿಯ ಮಾನಹರಣ ಮಾಡುವ ಅಸ್ತ್ರಗಳಾಗಿವೆ. ಪುಕ್ಕಟೆಯಾಗಿ ಸಿಗುವ ಹೊಲಸು ಪದಗಳ ವಿಶೇಷಣಗಳನ್ನು ಬಳಸಿ ಮುಂದಿರುವವರ ಸ್ಥಾನ ಜೊತೆಗೆ ಮಾನವನ್ನೂ ತಿವಿದು ಹಾಕುವ ಇಂದಿನ ದಿನಗಳಲ್ಲಿ ವಿಷಯಕ್ಕೆ ತಕ್ಕನಾದಂತಹ ನೇರವಾದ ಪ್ರೆಶ್ನೆಗಳನ್ನೂ ಕೇಳುವವರ ಸಂಖ್ಯೆ ಕ್ಷೀಣಿಸುತ್ತಿದೆ! ಒಂದೋ ಆತ/ಅವಳು ಸಮಾಜದ ಅತಿ ಪ್ರಭಾವಿ ಗುಂಪಿನ ಇಂಪಾರ್ಟೆಂಟ್ ವ್ಯಕ್ತಿಗಳೆನಿಸಿಕೊಂಡಿರಬೇಕು ಅಥವಾ ಯಾರಿಗೂ ಕ್ಯಾರೇ ಎನ್ನದ ಖಡಕ್ ಅಧಿಕಾರಿಗಳಾಗಿರಬೇಕು. ಅಂತವರಿಗಷ್ಟೇ ಇಂದು ಪ್ರೆಶ್ನೆಗಳನ್ನು ಕೇಳುವ 'ಅಧಿಕಾರ' ಹಾಗು 'ಧೈರ್ಯ' ಸೀಮಿತವಾಗುತ್ತಿದೆ ಎಂದರೆ ಸುಳ್ಳಾಗದು. ಸಾಮಾನ್ಯನೊಬ್ಬನಿಗೆ ಇಂದು ಪ್ರೆಶ್ನಿಸುವ ಧೈರ್ಯವನ್ನು ತುಂಬುವ ಸಮಾಜವೇ ಇಲ್ಲವಾದರೆ ವಿಧ್ಯಾವಂತರಾಗಿಯೂ ಕುರಿಗಳು ಸಾರ್ ಕುರಿಗಳು ಎಂಬಂತೆ ಪ್ರೆಶ್ನಿಸುವ ನರಗಳನ್ನೇ ಕಳೆದುಕೊಂಡು ಒಬ್ಬರ ಬಾಲವನ್ನು ಇನ್ನೊಬ್ಬರು ಮೂಸುತ್ತಾ ಸಾಗುವ ಪಯಣ ಇದಾದಿತು.

ಪೀಠಿಕೆ ಇಷ್ಟಿರಲಿ. ಈಗ ವಿಷಯಕ್ಕೆ ಬರೋಣ. ಅದಕ್ಕೂ ಮೊದಲು ಒಂದೆರೆಡು ನೇರ ನುಡಿ. ಇಲ್ಲಿ ಕೇಳಲಾಗಿರುವ ಪ್ರೆಶ್ನೆಗಳಿಗೆ ಪಕ್ಷ, ಜಾತಿ, ಪಂಥ ಎಂಬ ಯಾವುದೇ ಬಗೆಯ ತುರಿಕೆಗಳಾಗಲಿ, ಖಾಯಿಲೆಯಗಳಾಗಲಿ ಅಂಟಿಕೊಂಡಿಲ್ಲ. ಭಾರತೀಯರಾಗಿ ಅದಕ್ಕಿಂತಲೂ ಹೆಚ್ಚಾಗಿ ಸ್ವಸ್ಥ ಮಾನವರಾಗಿ ಕೇಳಲೇ ಬೇಕಾದ ಪ್ರೆಶ್ನೆಗಳಿವು. ಮುಂದಿರುವ ಇನ್ನೊಬ್ಬರಿಗಲ್ಲದಿದ್ದರೂ ತಮಗೆ ತಾವೇ ಚುಚ್ಚಿಕೊಳ್ಳಬೇಕಾದದ ಸೂಜಿಗಳಿವು!

ಚುನಾವಣೆ. ಸಧ್ಯಕಂತೂ ಆಡುವ ಮಕ್ಕಳ ಬಾಯಲ್ಲೂ ರಾರಾಜಿಸುತ್ತಿರುವ ಏಕಮಾತ್ರ ಪದವಿದು. ಸ್ವಾತಂತ್ರ್ಯೋತ್ತರ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಈ ಮಟ್ಟಿನ ಉತ್ಸುಕತೆ, ಭಾಗವಹಿಸುವಿಕೆ, ಅರಚಾಡುವಿಕೆ ಬಹುಶಃ ಹಿಂದೆಲ್ಲೂ ನಮಗೆ ಸಿಗದು. ಇಂದು ಬದುಕಲು ಬೇಕಾಗಿರುವ ಗಾಳಿ, ನೀರು ಹಾಗು ಆಹಾರದಂತಹ ಕೆಟಗರಿಗಳಿಗೆ ಬಂದು ಸೇರಿರುವ ಇಂಟರ್ನೆಟ್ ಎಂಬ ಮಹಾ ಮಾಯಾವಿಯೇ ಇದಕ್ಕೆಲ್ಲ ಕಾರಣವೆಂಬುದು ಸರ್ವರಿಗೂ ತಿಳಿದಿರುವ ವಿಷಯ. ಇಲ್ಲಿ ಪ್ರತಿಯೊಬ್ಬನೂ ವಾಗ್ಮಿಯೇ. ಟ್ವೀಟು, ಕಾಮೆಂಟು, ಸ್ಟೇಟಸ್ಸು, ಎನ್ನುತ್ತಾ ಡೆಮೋಕ್ರಸಿಯ ಸ್ವಾತಂತ್ರ್ಯವನ್ನು ಅಕ್ಷರ ಸಹ ಪಾಲಿಸುವ ಆತ ತಾನು ಅರಚಿ ವ್ಯಕ್ತ ಪಡಿಸಲಾಗದದನ್ನು ಕೀಬೋರ್ಡಿನ ಕೀಲಿಗಳನ್ನು ಕುಟ್ಟುತ್ತಾ ತೋರ್ಪಡಿಸ ಬಯಸ್ಸುತ್ತಾನೆ. ಪದಗಳಿಗೆ, ಅವುಗಳಿಂದ ಮೂಡುವ ಹೊಲಸು ವಾಕ್ಯಗಳಿಗೆ ಬ್ರೇಕೇ ಇಲ್ಲದ ಇಲ್ಲೂ ಸಹ ಸಿಕ್ಕ ಸಿಕ್ಕವರ ಮಾನಹಾನಿ ಎಂಬುದು ನೀರು ಕುಡಿದಷ್ಟೇ ಸುಲಭ. ಜಾತಿ, ಮತ, ಪಂಥ ಎಂಬ ಅಸ್ತ್ರಗಳು ಯಾವುದೇ ಮುಲಾಜಿಲ್ಲದೆ ಇಲ್ಲಿ ಎಲ್ಲಡೆಯೂ ಬೇರುಬಿಟ್ಟಿವೆ. ಮೊದಲೆಲ್ಲ ಹೆದರಿ ಆಡಲಾಗುತ್ತಿದ್ದ ಮಾತುಗಳಿಗೀಗ ಶಿಳ್ಳೆ ಚಪ್ಪಾಳೆಗಳ ಜೊತೆಗೆ ಲೈಕು ಕಾಮೆಂಟುಗಳ ಪ್ರೋತ್ಸಹಗಳೂ ಸಿಗತೊಡಗಿವೆ. ನೀನು ಸೇರಾದರೆ ನಾನು ಸವಾಸೇರು! ನೀನು ಒಂದೆಂದರೆ ನಾನು ಹತ್ತನ್ನು ‘ಕುಟ್ಟ’ಬಲ್ಲೆ!! ಇಂಥಹ ಮನಸ್ಥಿತಿ ಇಂದು ಎಲ್ಲೆಡೆ ಮೂಡುತ್ತಿದೆ.

ಪ್ರಸ್ತುತ ಚುನಾವಣೆಯಲ್ಲಂತೂ ಇಂತಹ ಕೆಸರೆರಚಾಟಗಳು ಯಾರ ಹಂಗಿಲ್ಲದೆಯೇ ಸಾಗಿವೆ. ಅದು ಪಿಎಂ ನಿಂದಿಡಿದು ಸಿಮ್ ರ ವರೆಗೂ ಪ್ರಸ್ತುತವಾಗಿದೆ. ಇಂಟರ್ನೆಟ್ ಲೋಕದಿಂದಿಡಿದು ಬೆಳಕು ಕಾಣದ ಗುಡಿಸಿಲಿನವರೆಗೂ ಅದು ಹರಡಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಚೆಹರೆಯಾಗಿ, ಕೋಟಿ ಕೋಟಿ ದೇಹಶಾಭಿಮಾನಿಗಳ ಹೆಮ್ಮೆಯ ನಾಯಕನಾಗಿ, ಭಾರತದ ಪ್ರಧಾನಿಯ ಸ್ಥಾನದಲ್ಲಿ ಕೂತು ಚುನಾವಣೆಯ ಪ್ರಚಾರದ ಭರದಲ್ಲಿ ತಮ್ಮದೇ ದೇಶದ ಮುಖ್ಯಮಂತ್ರಿಗಳನ್ನು, ಮಾಜಿ ಪ್ರಧಾನಿಗಳನ್ನು ಸಾಮೂಹಿಕವಾಗಿ ಜರಿಯುವ ಪರಿ ಅದೆಷ್ಟರ ಮಟ್ಟಿಗೆ ಸರಿ? ರಾಜ್ಯದ ಘನವೆತ್ತ ಮುಖ್ಯಮಂತ್ರಿಯಾಗಿ, ಆರು ಕೋಟಿ ಜನರ ಮುಂದಾಳುವಾಗಿ, ಸಮಾಜದ ಅತಿ ಗೌರವಾನ್ವಿತ ಸ್ಥಾನದಲ್ಲಿ ಕೂತಿರುವ ಹಿರಿಯರಾಗಿ, ಸಿಗುವ ಕೇವಲ ಬೆರಳೆಣಿಕೆಯ ಮತಗಳ ಧುರಾಸೆಯಲ್ಲಿ ದೇಶದ ನೂರು ಕೋಟಿ ಜನರ ಪ್ರಧಾನಮಂತ್ರಿಯನ್ನು ತೆಗಳುವನಂತಹ ಮಾತುಗಳು ಆ ಸ್ಥಾನಕ್ಕೆ ಶೋಭೆ ತರುವಂಥಹದ್ದೇ? ಇಂತಹ ವೈಮಸ್ಸಿನಿಂದ, ತಾರತಮ್ಯದಿಂದ, ಸರಿಹೊಂದದ ತಾಳಮೇಳದಿಂದ ಏಕರೂಪವಾದ ದೇಶದ ಅಭಿವೃದ್ಧಿ ನಿಜವಾಗಿಯೂ ಸಾಧ್ಯವವಿದೆಯೇ? ಇನ್ನು ಇವರುಗಳ ಹಿಂದಕ್ಕೂ ಮುಂದಕ್ಕೂ ಅಡ್ಡಾಡಿಕೊಂಡು ಕೈ ಮುಗಿದು ಕಾಲಿಗೆರಗಿ ದೇವತಾಮನುಷ್ಯರ ಸ್ಟೇಟಸ್ ಅನ್ನು ಗಿಟ್ಟಿಸಿಕೊಡಬಲ್ಲ ಇತರೆ ನಾಯಕರುಗಳನಂತೂ ಕೇಳುವುದೇ ಬೇಡ. ಘಂಟೆಗೊಂದು, ನಿಮಿಷಕ್ಕೊಂದರಂತೆ ಫೇಸ್ ಬುಕ್ಕಿನ 'ನೇರಪ್ರಸಾರ'ದ ವಾಚಕರಾಗಿ, ನಾವೇ ಸರಿ, ಉಳಿದೆಲ್ಲವೂ ಸುಳ್ಳು ಎಂಬಂತೆ ಬೊಬ್ಬೆಯೊಡೆದು ಬೀಗುವ ಇವರುಗಳ ಮನಸ್ಥಿತಿಯಿಂದ ಸಮಾಜ ಕಲಿಯುವುದೇನು? ನಾಯಿ, ಸಗಣಿ, ಕಪಿ ಎಂಬ ಮೂಕಪ್ರಾಣಿಗಳಗೆ ಎದುರು ಪಕ್ಷದವರನ್ನು ಹೋಲಿಸಿ ಅವುಗಳ ಮರ್ಯಾದೆಯನ್ನೂ ಹಾಳುಮಾಡುವುದಲ್ಲದೆ ಹುಚ್ಚ, ಅರೆಹುಚ್ಚ, ಪಾಪಿ, ಕಳ್ಳ, ಸುಳ್ಳ ಎಂಬ ಹಣೆಪಟ್ಟಿಯನ್ನು ಮನಬಂದಂತೆ ಮನಬಂದವರಿಗೆ ಕಟ್ಟುವ ನ್ಯಾಯಾಧೀಶರಂತೆ ಆಗಿರುವ ನಾಯಕರನ್ನು ಹದ್ದುಬಸ್ತಿನಲ್ಲಿಡುವವರು ಯಾರು? ಇಂತಹ ಕೀಳುಮಟ್ಟದ ಪ್ರಚಾರದಿಂದ ನಾಗರಿಕತೆಯ ನಮ್ಮ ಪಯಣ ಹಿಮ್ಮುಖವಾಗಿ ಸಾಗುವುದರಲ್ಲಿ ದೂಸರಾ ಮಾತೇ ಇಲ್ಲ ಅಲ್ಲವೇ? ಕೋಟಿ ಕೋಟಿ ಜನರ ಬೆವರ ಹಣವನ್ನು ಕೊಳ್ಳೆಯೊಡೆದು ಸೆರೆವಾಸದ ಸುಖವನ್ನನುಭವಿಸಿ ಬಂದ ಭಂಡ ವ್ಯಕ್ತಿಗಳಿಗೆ ಟಿಕೇಟನ್ನು ನೀಡಿ, ಸಾಲದಕ್ಕೆ ಡೆಲ್ಲಿಯಿಂದ ಹರಾರಿಕೊಂಡು ಬಂದು ಅವರ ಪರವಾಗಿ ಭಾಷಣಯೊಡೆಯುವ ಮುನ್ನ ತಾವು ಮಾಡುತ್ತಿರುವ ಕಾರ್ಯ ಅಕ್ಷರ ಸಹ ತಪ್ಪೆಂದು ಅವರುಗಳಾಗಲಿ ಅಥವಾ ಸತ್ಯವೇ ತನ್ನ ತಾಯಿ ತಂದೆ ಸತ್ಯವೇ ನನ್ನ ಬಂಧು ಬಳಗ ಎನ್ನುತ್ತಾ 'ನೆಟ್ಟಿ'ನಲ್ಲಿ ನಲಿಯುವ ಇತರೆ ನಾಯಕರುಗಳಾಗಲಿ ಉಸಿರೆತ್ತಬಲ್ಲರೇ? ಪ್ರೆಶ್ನಿಸಬಲ್ಲರೇ? ಇಲ್ಲ ಖಂಡಿತವಾಗಿಯೂ ಇಲ್ಲ! ಏಕೆಂದರೆ ತಾವು ಒಂದು ಪಕ್ಷವನ್ನು ಅನುಸರಿಸಿದ ಮಾತ್ರಕ್ಕೆ ಅದರ ನಾಯಕರುಗಳು ಏನೇ ಅಂದರೂ ಅದು ವೇಧವಾಕ್ಯಕ್ಕೆ ಸಮ! ಅವರ ಪ್ರತಿಯೊಂದು ನಡೆಯನ್ನು ಕಣ್ಣು ಕೆಟ್ಟಿ, ಕಿವಿಯ ಮುಚ್ಚಿ ಹಿಂಬಾಲಿಸುವ ಸುಶಿಕ್ಷಿತರ ಗುಂಪೊಂದೇ ಇಂದು ನಿರ್ಮಾಣವಾಗಿದೆ. ಆಧುನಿಕ ಜಗತ್ತಿನ ಹೊಸ ಬಗೆಯ ಗುಲಾಮಗಿರಿ ಇದ್ದಲ್ಲದೆ ಮತ್ತೇನು? ಅಲ್ಲದೆ ಇಂತಹ ಕಪಟ ನಾಯಕರ ದೌಲು, ಹುಂಬುತನ, ಹಗೆ, ದ್ವೇಷ ಹಾಗು ವೈರತ್ವದಿಂದ ಕೂಡಿದ ಮಾತುಗಳಿಗೆ ಮರುಳಾಗಿ ನಾವು ವೋಟನ್ನು ಒತ್ತಬೇಕೆ? ಅಷ್ಟಾಗಿಯೂ ಅಂತವರಿಗೇ ಓಟನ್ನು ಒತ್ತಿ ಸುಶಿಕ್ಷಿತರಾಗಿಯೂ ನಾವು ಅಶಿಕ್ಷಕರಾಗಿದ್ದೀವಿ ಎಂಬುದನ್ನು ಸಾಬೀತುಪಡಿಸಿ ತೋರಿಸಬೇಕಿದೆಯೇ?

ದೇಶದ, ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಾಣದ ಭರಾಟೆಯಲ್ಲಿ ಇಂದು ಚುನಾವಣೆಗಳು ನೆಡೆಯುತ್ತಿವೆ. ಜಾತಿ ಹಾಗು ಧರ್ಮದ ರಾಜಕಾರಣ ಸಮಾಜವನ್ನೇ ಒಡೆದು ಹೋಳಾಗಿಸುವ ಭರದಲ್ಲಿ ಮುನ್ನಿಗ್ಗುತ್ತಿದೆ. ಇಂದಿನ ಯಾವೊಬ್ಬ ರಾಜಕಾರಣಿಯ ಬಾಯಲ್ಲೂ ಏಕತೆ, ಅನ್ಯೂನ್ಯತೆ, ಸಹಬಾಳ್ವೆ ಎಂಬ ಪದಗಳೇ ಮೂಡದಾಗಿವೆ. ಪ್ರತಿಯೊಂದು ಕ್ಷೇತ್ರದ ಟಿಕೆಟ್ಟಿಗೂ ಜಾತಿವಾರು ಸರ್ವೆಗಳೆ ಮೂಲಾಧಾರವಾಗಿರುತ್ತವೆ. ಅಲ್ಲ ಸ್ವಾಮಿ, ನಮ್ಮ ಹಿರೀಕರೇನೋ ತಿಳಿದೋ ತಿಳಿಯದೆಯೋ ನೂರಾರು ಜಾತಿ ಪಂಗಡಗಳನ್ನು ಸೃಷ್ಟಿಸಿ ಮರೆಯಾದರು. ಇಷ್ಟೆಲ್ಲಾ ಜಾತಿಗಳಿರುವುದರಿಂದ ಗುಂಪು ಪಂಗಡಗಳನ್ನು ಲೆಕ್ಕ ಹಾಕುತ್ತೀರಾ. ಒಂದು ಪಕ್ಷ ಇಂತಹ ಜಾತಿ ಧರ್ಮಗಳೇ ಇಲ್ಲದ ನಾಡು ನಮ್ಮದಾಗಿದ್ದರೆ ಯಾವ ಆಧಾರದ ಮೇಲೆ ನಿಮ್ಮ ಟಿಕೇಟುಗಳು ಹಂಚಿಕೆಯಾಗುತ್ತಿದ್ದವು?! ಅದ್ಯಾವ ಬಗೆಯ ಸಮೀಕರಣ ನಿಮ್ಮನ್ನು ಗೆಲ್ಲಿಸುತಿತ್ತು? ಒಂದು ಧರ್ಮವನ್ನು ನಿಂಧಿಸಿ ಮತಯಾಚಿಸುವ ಮನಸ್ಸುಗಳು ಇಂದು ಬದಲಾಗಬೇಕಿದೆ. 'ನಾನು ಸಾಯುತ್ತೀನಿ, ಸಾಯುವ ಮೊದಲೊಮ್ಮೆ ಗೆಲ್ಲಿಸಿ' ಎಂಬ ನಾಟಕೀಯ ಮಾತುಗಳಿಗೆ ಮಣೆಯಾಕುವುದನ್ನು ನಿಲ್ಲಿಸಬೇಕಿದೆ. ಭಾರತ ರತ್ನ ವ್ಯಕ್ತಿಯ ಹೆಸರನ್ನೇ ಕತ್ತರಿಸಿ ಉಚ್ಚರಿಸಬಲ್ಲದ ನಾಯಕರಿಂದ ನಾವುಗಳು ಕಲಿಯಬೇಕೇ? ಹಣಕೊಟ್ಟು ಕಟ್ಟಿದ ಗುಂಪಿನ ಮುಂದೆ ದೇಶಾಭಿಮಾನದ ಮಾತುಗಳನ್ನು ಸುರಿದರೆ ಸಮಾಜ ಉದ್ದಾರವಾದೀತೇ? ಇಂತಹ ಪರಿಸ್ಥಿಯಲ್ಲಿ ಎಲ್ಲೆಲ್ಲಿಯೂ ಅಂಧ ಗುಂಪುಗಾರಿಕೆಯೆ ರಾರಾಜಿಸುತ್ತಿರುವಾಗ ಯಾವ ಗುಂಪನ್ನು ನಾವು ಸೇರಬೇಕು ಅಥವ ಯಾವ ಗುಂಪಿಗೆ ನಮ್ಮ ಬೆಂಬಲ ಮೂಡಬೇಕು? ಈ ಆಯ್ಕೆಯೂ ಬೇಡ ಮುಂದೆ ಅದರಿಂದುಟಾಗುವ ಕಹಿ ಅನುಭವವೂ ಬೇಡವೆಂದನ್ನುತ್ತಿದೆ ಮನದ ಮಾತು!