Thursday, May 25, 2017

ಆಸ್ಕರ್ ನಾಮಾಂಕಿತ ಇವನ ಚಿತ್ರಗಳನ್ನು ವಿದೇಶಗಳಲ್ಲಿ ತೋರಿಸಿ ನಮ್ಮ ಮಾನ ಕಳೆಯಬೇಡಿ ಎಂದಿದ್ದರು...!!

ಇಂದಿಗೆ ಸುಮಾರು 65 ವರ್ಷಗಳ ಹಿಂದೆ ಮೂವತ್ತು ವರ್ಷದ ಯುವಕನೊಬ್ಬ ಬಂಗಾಳಿ ಬರಹಗಾರರಾದ ಭೀಹುತಿ ಭೂಷಣ್ ಬಂಡೋಪಾಧ್ಯಾಯ್ ಅವರ ಕಾದಂಬರಿಯನ್ನು ಆಧರಿಸಿ ಚಿತ್ರವೊಂದನ್ನು ನಿರ್ದೇಶಿಸುವ ಕನಸನ್ನು ಕಟ್ಟಿಕೊಳ್ಳತೊಡಗುತ್ತಾನೆ. ಚಿತ್ರಕಥೆ ಬರೆಯುವುದು ಆತನ ಫ್ಯಾಂಟಸಿ ಎನ್ನುವುದಾದರೆ ಚಿತ್ರನಿರ್ದೇಶನ ಅವನ ಬಹು ಕಾಲದ ಕನಸು. ಕನಸೇನೋ ಸರಿ, ಸಾಧಿಸುವುದೂ ಬಲು ದಿಟ, ಆದರೆ ತನ್ನ ಮೊದಲ ಆರಂಭಕ್ಕೆ ಬೇರೊಬ್ಬರ ಕೃತಿಯೇ ಏಕಾಗಬೇಕು? ಸ್ವಂತ ಕಲ್ಪನೆ ಹಾಗು ಸೃಜನಶೀಲತೆಯಿಂದ ಒಂದೊಳ್ಳೆ ಕಥೆಯನ್ನು ಕಟ್ಟಲು ನಿನಗೆ ಸಾಧ್ಯವಿಲ್ಲವೇ? ಒಂದು ಪಕ್ಷ ಚಿತ್ರ ಗೆದ್ದರೂ ಅದರ ಬಹುಪಾಲು ಶ್ರೇಯ ಮೂಲ ಕತೆಗಾರನಿಗೆ ಹೋಗುತ್ತದೆ. ಎಂಬೆಲ್ಲ ಪ್ರೆಶ್ನೆ, ಸಲಹೆಗಳನ್ನು ಎಳೆದುಕೊಂಡು ಮುನ್ನೆಡೆದ ಆತ ಯಾವುದೇ ಅನ್ಯ ಕಾರಣಗಳಿಗೂ ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ಚಿತ್ರ ಸೆಟ್ಟೇರಿತು. ಅಲ್ಲಿನ ರಾಜ್ಯಸರ್ಕಾರವೇ ಅಂದು ಚಿತ್ರ ನಿರ್ಮಾಣದ ಹೊಣೆಯನ್ನು ಹೊತ್ತಿತು! ಆದರೇನಂತೆ, ಚಿತ್ರ ಶುರುವಾದ ಕೆಲವೇ ದಿನಗಳಲ್ಲಿ ಹಣಕಾಸಿನ ಸಮಸ್ಯೆ ಚಿತ್ರದ ಬಗ್ಗೆ ಹಲವರಿಗಿದ್ದ ನಿರುತ್ಸಾಹಗಳಿಗಿಂತ ಹೆಚ್ಚಾಯಿತು. ಆದರೆ ದೃತಿಗೆಡದ ಆತ ತಂಡವನ್ನು ಮುನ್ನೆಡೆಸಿ ಚಿತ್ರವನ್ನು ಪೂರ್ಣಗೊಳಿಸಿಯೇ ತೀರುತ್ತಾನೆ. ಅಂತೂ ಆಗಸ್ಟ್ 25, 1955 ಕ್ಕೆ ಚಿತ್ರ ಬಿಡುಗಡೆಗೆ ಸಿದ್ಧಗೊಂಡಿತು. ದೇಶದ ಪ್ರಧಾನಿ ನೆಹರು ಹಾಗು ಪಶ್ಚಿಮ ಬಂಗಾಳದ ಅಂದಿನ ಮುಖ್ಯಮಂತ್ರಿ ಬಿಧಾನ್ ಚಂದ್ರ ರಾಯ್ ಅವರು ಖುದ್ದಾಗಿ ಚಿತ್ರವನ್ನು ವೀಕ್ಷಿಸಲು ಬಂದಿದ್ದರು. ಇಷ್ಟೆಲ್ಲಾ ಸವಾಲುಗಳನ್ನು ಜಹಿಸಿ ಜೀವಪಡೆದ ಚಿತ್ರವೊಂದು ಜನಮಾನಸದಲ್ಲಿ ಬದುಕುತ್ತದೆಯೇ ಎಂಬ ಪ್ರೆಶ್ನೆ ಒಂದೆಡೆಯಾದರೆ, ಹಾಕಿರುವ ದುಡ್ಡು ವಾಪಾಸ್ ಬಂದರೆ ಸಾಕಪ್ಪ ಎಂಬುದು ಅದೆಷ್ಟೋ ಸರ್ಕಾರೀ ಅಧಿಕಾರಿಗಳ ಹರಕೆ. ಆಗಿನ ಮೇನ್ ಸ್ಟ್ರೀಮ್ ಚಿತ್ರಗಳಿಗೆ ಹೋಲಿಸಿದರೆ ತೀರಾ ಬಿನ್ನವಾಗಿದ್ದ ಚಿತ್ರ ಗೆಲ್ಲುವುದು ಕಷ್ಟ-ಕಷ್ಟ ಎಂಬುದು ಅಂದಿನ ಕೆಲ ವಿಮರ್ಶಕರ ಅಭಿಪ್ರಾಯವಾಗಿದ್ದಿತು. ಆದರೆ ದೇಶದ ಚಿತ್ರರಂಗಕ್ಕೇ ಒಂದು ಗಟ್ಟಿ ಬುನಾದಿಯನ್ನು ಹಾಕಲು ಆ ಚಿತ್ರ ಹೊರಟಿದೆಯೆಂದು ಅಂದು ಯಾರೊಬ್ಬರೂ ಊಹಿಸಲೂ ಸಾದ್ಯವಿರಲಿಲ್ಲ. ನಿರೀಕ್ಷೆಗೂ ಮೀರಿ ಚಿತ್ರ ಗೆದ್ದಿತು! ರಾಷ್ಟ ಮಟ್ಟದಲ್ಲಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚನ್ನು ಹರಿಸಿತು. ಫ್ಯಾನ್ಸ್, ಇಟಲಿ, ಸ್ಕಾಟ್ಲೆಂಡ್, ಮನಿಲಾ, ಬರ್ಲಿನ್, ಕೆನೆಡಾ, ಅಮೇರಿಕ, ಜಪಾನ್ ಹೀಗೆ ಹೊದಡೆಯಲ್ಲ (ಫಿಲಂ ಫೆಸ್ಟಿವಲ್ನ) ಒಂದಲ್ಲೊಂದು ಪ್ರಶಸ್ತಿಯನ್ನು ಗೆದ್ದೇ ಬರುತ್ತಿತ್ತು. ಸ್ವಾತಂತ್ರ್ಯ ದಕ್ಕಿದ ದಶಕದೊಳಗೇ ಭಾರತದ ಚಿತ್ರರಂಗವನ್ನು ವಿಶ್ವದ ಎಲ್ಲೆಡೆಗೂ ಪಸರಿಸಿದ ಖ್ಯಾತಿ ಈ ಚಿತ್ರಕ್ಕೆ ಸಲ್ಲಬೇಕು. ಅಂದು ಮೂವತ್ತು ವರ್ಷದ ಆ ಯುವಕನ ಕನಸು, ನಿರ್ದೇಶನ, ಚಿತ್ರಕಥೆ ಎಲ್ಲಕ್ಕೂ ಮಿಗಿಲಾಗಿ ಆತನ ಆಯ್ಕೆ ನಿಜವಾಗಿಯೂ 'ಎಕ್ಸಲೆಂಟ್' ಎಂದು ಜನರು ಕೊಂಡಾಡಿದರು. ಆ ಲೆಜೆಂಡರಿ ಚಿತ್ರದ ಹೆಸರೇ 'ಪಥೇರ್ ಪಾಂಚಾಲಿ'. ನಿರ್ದೇಶಕ, ಮುಂದೆ ಭಾರತದಲ್ಲೇಕೆ  ವಿಶ್ವದಲ್ಲೇ ಮಹಾನ್ ನಿರ್ದೇಶಕರಲೊಬ್ಬನೆನಿಸಿಕೊಂಡ ಸತ್ಯಜಿತ್ ರೇ ಅಥವಾ ಬೆಂಗಾಲಿಗರ ನೆಚ್ಚಿನ ಮಾಣಿಕ್ -ದಾ.

ಸತ್ಯಜತ್ ಹುಟ್ಟಿ (1921) ಬೆಳೆದದ್ದೆಲ್ಲ ಬಂಗಾಳದ ನೆಲದಲ್ಲೇ. ಸಣ್ಣವನಿದ್ದಾಗಲೇ ತಂದೆಯ ಅಕಾಲಿಕ ಮೃತ್ಯು. ತಾಯಿಯ ಪ್ರೋತ್ಸಾಹದ ಮೇರೆಗೆ ಹೆಚ್ಚಿನ ವಿದ್ಯಾಭ್ಯಾಸ. ಅದೂ ಸಹ ‘ಗೀತಾಂಜಲಿ ಕವಿ’ ರವೀಂದ್ರನಾಥ್ ಠಾಗೂರರ ಶಾಂತಿನಿಕೇತನದಲ್ಲಿ. ಬತ್ತಿದ ಕೆರೆಯಲ್ಲಿ ವಿಲ-ವಿಲ ಹೊದ್ದಾಡುತ್ತಿದ್ದ ಜೀವಕ್ಕೆ ಚೈತನ್ಯದ ಮಳೆ ಸುರಿದ ಅನುಭವ. ಚಿಗುರೊಡೆಯುತ್ತಿದ್ದ ಹಸಿರಿಗೆ ಹೆಮ್ಮರವಾಗುವ ಕನಸ್ಸನ್ನು ಸತ್ಯಜಿತ್ ಕಂಡಿದ್ದೆ ಶಾಂತಿನಿಕೇತನದಲ್ಲಿ. ಕಲೆ ಹಾಗು ಸಾಹಿತ್ಯದ ಆಳವಾದ ಅಧ್ಯಯನ, ಚಿತ್ರಕಲೆ ಹಾಗು ಸಂಗೀತವನ್ನೂ ಕಲಿಯುವಂತೆ ಪ್ರೇರೇಪಿಸಿತು. 1942 ರ ಸುಮಾರಿಗೆ ಯುವ ಸತ್ಯಜಿತ್ ಕ್ರಿಯಾಶೀಲ ಕಲೆಗಾರನಾಗಿ ಅಲ್ಲಿಂದ ಹೊರಬರುತ್ತಾನೆ. ಚಿತ್ರಕಥೆ, ಚಿತ್ರ ನಿರ್ದೇಶನ ಎಂಬುದು ಆತನ ನಾಡಿ-ನಾಡಿಗಳಲ್ಲಿ ಸಂಚರಿಸಲ್ಪಡುತ್ತಿರುತ್ತದೆ. ಅಷ್ಟರಲ್ಲಾಗಲೇ ಬಂಗಾಳದಲ್ಲಿ ತನ್ನ ಸ್ನೇಹಿತರೊಳಗೂಡಿ ನಗರದಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸುವುದು, ಚಿತ್ರಗಳನ್ನು ವಿಮರ್ಶಿಸುವುದು ಹಾಗು ಅವುಗಳ ಬಗ್ಗೆ ಸಾಧ್ಯವಾದಷ್ಟು ಮಟ್ಟಿನ ಅದ್ಯಯನವನ್ನು ಮಾಡುವುದನ್ನೂ ಬೆಳೆಸಿಕೊಂಡಿರುತ್ತಾನೆ. ಮುಂದೆ ಖಾಸಗಿ ಕಂಪನಿಯೊಂದರಲ್ಲಿ ‘ಗ್ರಾಫಿಕ್ ಡಿಸೈನರ್' ಆಗಿ ಕೆಲಸ. ಅದು ಮೂಲತಃ ಬ್ರಿಟನ್ ದೇಶಕ್ಕೆ ಸೇರಿದ ಕಂಪೆನಿಯಾದ್ದರಿಂದ ಇದೆ ಕಂಪನಿ ಮುಂದೆ ಸತ್ಯಜಿತ್ ಅವರನ್ನು ಕೆಲಕಾಲಕ್ಕೆ ಬ್ರಿಟನ್ ಗೂ ಕಳುಹಿಸುತ್ತದೆ. ಬ್ರಿಟನ್ನಿನ ಐಷಾರಾಮತೆಯ ಸುಯೋಗದಲ್ಲಿ ಈತ ಮಾಡಿದ್ದು ಕೇವಲ ಚಲನ ಚಿತ್ರ ವೀಕ್ಷಣೆ. ಅದೂ ವಿವಿಧ ದೇಶಗಳ ಸುಮಾರು ನೂರು ಚಿತ್ರಗಳು! ಪಾಶ್ಚಾತ್ಯ ಚಿತ್ರ ನಿರ್ಮಾಣದದಿಂದ ಪ್ರಭಾವಿತನಾಗಲು ಮುಂದೆ ಹೆಚ್ಚೇನೂ ಈತನಿಗೆ ಬೇಕಾಗಲಿಲ್ಲ. ಏತನ್ಮದ್ಯೆ ಫ್ರಾನ್ಸ್ ನ ಪ್ರಸಿದ್ಧ ಚಿತ್ರ ನಿರ್ದೇಶಕ ಜೀನ್ ರೆನೊಯ್ರ್ ಅವರ ಪರಿಚಯ ಹಾಗು ಪ್ರೋತ್ಸಾಹ ಇವನ್ನಲ್ಲಿ ಚಿತ್ರ ನಿರ್ಮಾಣದದ ಬೆಗ್ಗೆ ಇನ್ನಷ್ಟು ಒಲವನ್ನು ಮೂಡಿಸುತ್ತದೆ. ನಂತರದ ಕೆಲವೇ ವರ್ಷಗಳಲ್ಲಿ ಎಳೆ ಹುಡುಗರ ತಂಡವೊಂದನ್ನು ಕಟ್ಟಿ 1952 ರ ಚಳಿಗಾಲದಲ್ಲಿ ತನ್ನ ಮೊದಲ ಚಿತ್ರದ ಚಿತ್ರೀಕರಣಕ್ಕೆ ಆರಂಭವನ್ನು ಹಾಡುತ್ತಾನೆ. 'ಪಥೇರ್ ಪಾಂಚಾಲಿ' ಚಿತ್ರ ನಿರ್ಮಾಣಕ್ಕೆ ತಗುಲಿದ ಸಮಯ ಬರೋಬ್ಬರಿ ಮೂರು ವರ್ಷ. ಚಿತ್ರದ ವೆಚ್ಚ ಲಕ್ಷದ ಗಡಿ ದಾಟಲಿಲ್ಲ.

ಪಥೇರ್ ಪಾಂಚಾಲಿ ಚಿತ್ರವನ್ನು ಬೆಂಗಾಲ ಸರ್ಕಾರ ನಿರ್ಮಿಸಲು ಒಪ್ಪುವುದಕ್ಕೂ ಮುನ್ನ ಸತ್ಯಜಿತ್ ನ ಚಿತ್ರಕ್ಕೆ ಹಣ ಸುರಿಯಲು ಒಂದು ನರಪಿಳ್ಳೆಯೂ ಮುಂದೆ ಬಂದಿರಲಿಲ್ಲ. ಬಂದರೂ ಒಂದಲ್ಲೊಂದು ನೆಪವನ್ನು ಹೇಳಿ ಜಾರಿಕೊಳ್ಳುತ್ತಿದ್ದರು. ಹೆಂಡತಿಯ ಒಡವೆ, ತನ್ನ ನೆಚ್ಚಿನ ಗ್ರಾಮಫೋನ್ ಗಳು ಹಾಗು ಮನೆಯ ಇನ್ನೂ ಹಲವು ವಸ್ತುಗಳನ್ನು ಸತ್ಯಜಿತ್ ಮಾರತೊಡಗಿದರು. ಆದರೆ ಅದರಿಂದ ಬಂದ ಹಣ ಮಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿರುತ್ತಿತ್ತು. ಚಿತ್ರ ಕೀಲು ತಪ್ಪಿದ ಗಾಲಿಯಂತೆ ಅದ್ರಂಬರ್ದ ಮೂಡತೊಡಗಿತು. ಆದ ಕಾರಣ ಆತ ತನ್ನ ಗ್ರಾಫಿಕ್ ಡಿಸೈನರ್ ವೃತ್ತಿಯನ್ನು ಬಿಡಲಾಗಲಿಲ್ಲ. ವರ್ಷಾನುಗಟ್ಟಲೆ ಕುಂಟತೊಡಗಿದ ಚಿತ್ರಕ್ಕೆ ತಗುಲಿದ ಮತ್ತೊಂದು ಸಮಸ್ಯೆ ಅದರಲ್ಲಿನ ಮೂರು ಪಾತ್ರಗಳದ್ದು. ಒಂದು ಪುಟ್ಟ ಬಾಲಕ ಅಪ್ಪು, ಮತ್ತೊಂದು ಎಳೆಯ ವಯಸ್ಸಿನ ಹುಡುಗಿ ದುರ್ಗಾ ಹಾಗು ಅಜ್ಜಿ ಇಂದಿರ್ ಠಾಕುರನ್. ಬೆಳೆಯುವ ಅಪ್ಪುವಿನ ಧ್ವನಿ ಈ ಮೂರು ವರ್ಷದಲ್ಲಿ ಒಡೆದಿದ್ದರೆ ಬೇರೊಂದು ಧ್ವನಿಯನ್ನು ಚಿತ್ರಕ್ಕೆ ಅಳವಡಿಸುವುದು ಆಗಿನ ಕಾಲಕ್ಕಂತೂ ಅಸಾಧ್ಯವಾದ ಕೆಲಸವಾಗಿದ್ದಿತು. ಅಂತೆಯೇ ದುರ್ಗಾಳ ಹರೆಯ ಮೈ ನೆರೆಯುವಿನ ಆಸುಪಾಸು. ಇದೂ ಸಹ ಚಿತ್ರದ ಕಥೆಯ ಕೋರಿಕೆ. ಆದರೆ ವಯಸ್ಸಿನಲ್ಲಿ ಎಂಬತ್ತರ ಆಸುಪಾಸಿನಲ್ಲಿದ್ದ ಅಜ್ಜಿ ಇಂದಿರ್ ಠಾಕುರನ್ ಮಾತ್ರ ಒಮ್ಮೆ ಕೆಮ್ಮಿದರೂ  ಚಿತ್ರ ತಂಡದ ಜೀವವೇ ಹಾರಿಹೋದಂತಾಗುತ್ತಿತ್ತು! ಅದೃಷ್ಟವಶಾತ್ ಎಲ್ಲವೂ ನಿರ್ದೇಶಕ ಬಯಸಿದಂತೆ ನೆಡೆದವು.

ಸತ್ಯಜಿತ್ ತಮ್ಮ ಜೀವನದ ಸುಮಾರು ನಾಲ್ಕು ದಶಕಗಳನ್ನು ಚಿತ್ರ ನಿರ್ಮಾಣಕ್ಕಾಗಿಯೇ ಮೀಸಲಿಟ್ಟರು. ಪ್ರತೀ ಚಿತ್ರವೂ ಮತ್ತೊಂದಕ್ಕಿಂತ ತೀರಾ ಭಿನ್ನ ಹಾಗು ಅಷ್ಟೇ ಆಳವಾಗಿರುತ್ತಿದ್ದವು ಹಾಗು ಸಾಮಾನ್ಯನ ಮನ ಕುಲುಕುವಂತಿರುತ್ತಿದ್ದವು. ದಿ ಗೋಲ್ಡನ್ ಫೋರ್ಟ್ರೆಸ್, ಪಥೇರ್ ಪಾಂಚಾಲಿ, ದಿ ಬಿಗ್ ಸಿಟಿ, ಅಭಿಜಾನ್, ದ ವರ್ಲ್ಡ್ ಆಫ್ ಅಪು, ಚಾರುಲತಾ, ಅಪರಾಜಿತೋ ಇನ್ನು ಹಲವು ಚಿತ್ರಗಳು ಈ ಮಾತಿಗೆ ಕೆಲ ಉದಾಹರಣೆಗಳು. ಕಥೆ ಹಾಗು ಪಾತ್ರದ ಆಳವನ್ನು ಅರಿಯಬಲ್ಲವನಾಗಿದ್ದ ಅಂದಿನ ಬಂಗಾಲಿ ಪ್ರೇಕ್ಷಕ ಸತ್ಯಜಿತ್ ರ ಮೊದಲ ಕ್ರಿಯಾಕ್ಷೇತ್ರ. ತಾನು ಮಾಡುವ ಚಿತ್ರಗಳು ಅತಿ ನಿಧಾನ ಹಾಗು ನೋಡುಗರ ತಾಳ್ಮೆಯನ್ನು ಪರೀಕ್ಷಸಿಸುತ್ತದೆ ಎಂಬ ವಾದ ಒಂದೆಡೆಯಾದರೆ, ಪ್ರತೀ ಚಿತ್ರಗಳು ದೇಶವಿದೇಶಗಳಲ್ಲಿ ಪ್ರಶಸ್ತಿಗಳನ್ನು ಗೆದ್ದು ತರುತ್ತಿದ್ದದ್ದು ರಾಜಕೀಯ ನಾಯಕರಿಗೆ, ನಟರಿಗೆ ನಾಚಿಕೆಯನ್ನು ತರುತ್ತಿದ್ದದ್ದು ಮತ್ತೊಂದೆಡೆ. ಕಾರಣ ಈತ ದೇಶದ ಬಡ ಪರಿಸ್ಥಿಯನ್ನು, ಅಂದಿನ ಒಬ್ಬ ಸಾಮನ್ಯನ ಜೀವನದ ವೇತನೆಯನ್ನು ಅದ್ಯಾವ ಪರಿಗೆ ಚಿತ್ರದಲ್ಲಿ ಕಟ್ಟುತ್ತಿದ್ದನೆಂದರೆ ತಂಪು ಕೋಣೆಯಲ್ಲಿ ಪಾನೀಯಗಳೊಟ್ಟಿಗೆ ಸೂಟು ಬೂಟುಗಳಲ್ಲಿ ಚಿತ್ರವನ್ನು ನೋಡುವ ವಿದೇಶಿ ಪ್ರೇಕ್ಷಕನಿಗೆ ಕಡುಗಷ್ಟವೆಂದರೆ ಇದೇನಾ? ಭಾರತವೆಂದರೆ ಇಷ್ಟೇನಾ? ಎಂಬೊಂದು ಕೀಳರಿಮೆಯನ್ನು ತಂದಿಡುತ್ತಿತ್ತು. ಇದನ್ನು ಎದುರಿಸಲಾಗದೆ ನಮ್ಮ ಅಂದಿನ ಕೆಲನಟ ಮಣಿಯರು, ಘನ ರಾಜಕಾರಣಿಗಳು  ತಮ್ಮ ಸ್ಥಾನ , ಮಾನಕ್ಕೆ ಎಲ್ಲಿ ಕುತ್ತು ಬಂದಿತೆಂದು ಚಿತ್ರವನ್ನು ಬೇರ್ಯಾವ ದೇಶದಲ್ಲೂ ತೋರಿಸಬಾರದೆಂದು ಬೊಬ್ಬೆಯೊಡೆಯುತ್ತಿದ್ದರು. ಆದರೆ ಕಲೆಗೆ ಯಾವ ತಡೆ? ಜಗತ್ತು ಸತ್ಯಜಿತ್ ಅವರ ಕಲೆಯನ್ನು ಗುರುತಿಸಲು ಹೆಚ್ಚೇನು ಸಮಯ ತೆಗೆದುಕೊಳ್ಳಲಿಲ್ಲ. ತಮ್ಮ ಗ್ರಾಫಿಕ್ ಡಿಸೈನರ್ ವೃತ್ತಿಯ ತಂತ್ರಗಾರಿಕೆ, ಪಾಶ್ಚಾತ್ಯ ಚಿತ್ರ ನಿರ್ಮಾಣದ ಪ್ರಭಾವಳಿ ಹಾಗು ಅದಕ್ಕೆ ಪೂರಕವಾದ ಓದು, ಸಂಗೀತ ಹಾಗು ಬರವಣಿಗೆ ಸತ್ಯಜಿತ್ ರನ್ನು ನಿರ್ದೇಶಕರ ಸಾಲಿನಲ್ಲಿ ತೀರಾ ಭಿನ್ನವಾಗಿಸಿತು. ಸತ್ಯದ ನೆರಳಿನಲ್ಲಿ, ಯಾವುದೇ ಕಪೋಕಲ್ಪಿತ ಅವೈಜ್ಞಾನಿಕ ಕತೆಗಳಿಗೆ ಜೋತುಬೀಳದೆ ಸತ್ಯಜಿತ್ ಒಬ್ಬ ಜನಸಾಮನ್ಯನ ನೈಜ ದೃಷ್ಟಿಕೋನದಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದರು.

ಟ್ರೈಲಾಜಿ ( ಕ್ರಮಾನುಗತ ತ್ರಿವಳಿ ಕಥೆಗಳು / ಚಿತ್ರಗಳು ) ಇಂದಿನ ಕಾಲದ ಪುಸ್ತಕ ಬರಹಗಾರರ ಟ್ರೆಂಡ್ ಎನ್ನಬಹುದು. ಆದರೆ ಆಗಿನ ಕಾಲಕ್ಕೆ ಅದನ್ನು ಚಿತ್ರದ ಮೂಲಕ ಸಾಧಿಸಿ ತೋರಿಸಿದವರು ಸತ್ಯಜಿತ್. 'ಪಥೇರ್-ಪಾಂಚಾಲಿ', 'ಅಪಾರ್ಜಿತೋ' ಹಾಗು 'ಅಪುರ್-ಸಂಸಾರ್' ಎಂಬ ಟ್ರೈಲಾಜಿ ಚಿತ್ರಗಳು ಕೇವಲ ಚಿತ್ರಗಳಾಗಿರದೆ ಬಂಗಾಳಿ ಹಾಗು ಭಾರತೀಯ ಸಿನಿಮಾಗಳ ದಂತಕಥೆಗಳೆನಿಸಿದವು. ಮೊದಲೇ ಹೇಳಿದಂತೆ ಕೇವಲ ಒಂದೇ ಕಥೆಗೆ ಅಥವಾ ವರ್ಗಕ್ಕೆ ಸೇರದ ವರ್ಸಾಟೈಲಿಟಿ ಸತ್ಯಜಿತ್ ರ ವ್ಯಕ್ತಿತ್ವದಾಗಿದ್ದಿತು.. ಅರ್ವತ್ತರ ದಶಕದಲ್ಲಿ ಬಂಗಾಲದ ಪೋರರ ಹರಟೆಗಳಲ್ಲಿ ಹಾಗು ಓದುಗಳಲ್ಲಿ ಹೆಚ್ಚಾಗಿ ಇರುತ್ತಿದ್ದದ್ದು ಪ್ರೊಫೆಸರ್ ಶೊನ್ಕು, ಫೆಲ್ಯೂಡ ಎಂಬ ಹಲವು ಪತ್ತೇದಾರಿ ಪಾತ್ರಗಳು ಹಾಗು ಅವುಗಳನ್ನು ಆಧರಿಸಿದ ಕಥೆಗಳು. ಆ ಕಥೆಗಳು ಅಂದಿನ ಕಾಲದ ಓದುಗರ ಕಲ್ಪನೆಗೂ ಮೀರಿದ ಧಾಟಿಯಲ್ಲಿ ಹಣೆಯಲ್ಪಡುತ್ತಿದ್ದವು ಹಾಗು ಅಷ್ಟೇ ಕುತೂಹಲಭರಿತವಾಗಿದ್ದವು. ಹಾಗಾಗಿ ಆ ಪಾತ್ರಗಳು ಇಂದಿಗೂ ಬಂಗಾಳದಲ್ಲಿ ಚಿರಪರಿಚಿತ. ಒಂತರ ಕನ್ನಡಿಗರಿಗೆ ಮಾಲ್ಗುಡಿ ಡೇಸ್ ಇದ್ದ ಹಾಗೆ. ಅಂತಹ ಪಾತ್ರಗಳ ಸೂತ್ರದಾರಿಯೇ ಈ ಸತ್ಯಜಿತ್. ಇವರ ಈ ಮಟ್ಟಿನ ಬಹುಮುಖ ಪ್ರತಿಭೆಗೆ 1967 ರಲ್ಲೇ ' ದಿ ಏಲಿಯನ್' ಎಂಬ ಇಂಡೋ -ಅಮೆರಿಕನ್ ಸೈನ್ಸ್-ಫಿಕ್ಷನ್ ಚಿತ್ರವೊಂದು ಸಟ್ಟೇರಲು ರೆಡಿಯಾಗಿತ್ತು. ಅದರ ಚಿತ್ರಕಥೆಯನ್ನೂ ಸತ್ಯಜಿತ್ ಬರೆದು ಮುಗಿಸಿದ್ದರು. ಆದರೆ ಕಾರಣಾಂತರಗಳಿಂದ ಚಿತ್ರ ನಿರ್ಮಾಣ ನಿಂತರೂ ಮುಂದೆ ಬಂದ ಸ್ಟೀವನ್ ಸ್ಪಿಲ್ ಬರ್ಗ್ ರವರ ‘ಈ.ಟಿ’ (The Extra Terrestrial ) ಚಿತ್ರಕ್ಕೆ ಬಳಕೆಯಾಗಿದ್ದು ಸತ್ಯಜಿತ್ ರವರ ಅದೇ ಚಿತ್ರಕಥೆಯೇ ಎಂಬ ವಾದ ಇಂದಿಗೂ ಕೇಳಿಬರುತ್ತದೆ!

ದೇಶವನ್ನು ಅತಿ ಹೆಚ್ಚು ಬಾರಿ ಆಸ್ಕರ್ ನಲ್ಲಿ ಪ್ರತಿನಿಧಿಸಿದ ಖ್ಯಾತಿ, ಜೀವಮಾನದ ಸಾಧನೆಗೆ ಆಸ್ಕರ್ ಅನ್ನು ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ, ಫ್ರಾನ್ಸ್ ದೇಶದ ಗೌರವ ಲೀಜನ್, ಭಾರತ ರತ್ನ, ಪದ್ಮಶ್ರೀ, ಪದ್ಮಭೂಷಣ ಅಲ್ಲದೆ ಮೊನ್ನೆಯಷ್ಟೇ ನಮ್ಮ ದೊರೆ ಭಗವಾನ್ ರಿಗೆ ಕೊಡಲ್ಪಟ್ಟ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಇನ್ನೂ ಹಲವಾರು ಪ್ರಶಸ್ತಿಗಳಿಗೆ ಭಾಜನರರಾಗಿರುವ ಇವರು ಬಂಗಾಲ ಚಿತ್ರ ಪ್ರೇಮಿಗಳಿಗೆ ಅಕ್ಷರ ಸಹ ದೇವತಾಮನುಷ್ಯರಂತೆ ಭಾಸವಾಗುತ್ತಾರೆ. ನಮ್ಮ ನಿಮ್ಮ ನಡುವಿನ ಹುಡುಗನೊಬ್ಬ ಬೆಳೆದು ವಿಶ್ವದಲ್ಲೇ ಅಗ್ರಮಾನ್ಯ ನಿರ್ದೇಶಕನೆನಿಸಿಕೊಂಡರೆ ಇರಬೇಕಾದ ಸಹಜ ಅಭಿಮಾನ ಬಂಗಾಳದವರಿಗೂ ಇದೆ ಅಷ್ಟೇ. ಮಾಣಿಕ್-ದಾ ಎಂದರೆ ಬಂಗಾಳ. ಬಂಗಾಳದ ಕಲೆ, ಸಾಹಿತ್ಯ ಹಾಗು ಸೃಜನಶೀಲತೆಯನ್ನು ದೇಶಕ್ಕೆ ವಿಶ್ವಕ್ಕೆ ಪರಿಚಯಿಸಿಕೊಟ್ಟ ಮೂರ್ತ ರೂಪ. ದೇಶ ಹಸಿವು ಬರಗಾಲವೆಂಬ ಬೆಂಕಿಯಲ್ಲಿ ಬೇಯುತ್ತಿದ್ದಾಗಲೇ ಪಥೇರ್ ಪಾಂಚಾಲಿಯಂತ ಚಿತ್ರವನ್ನು ಮಾಡಿ ಚಿತ್ರನಿರ್ಮಾಣದಲ್ಲಿ ನಾವೇನು ಕಡಿಮೆ ಎಂಬೊಂದು ಧಿಟ್ಟ ಸವಾಲನ್ನು ಜಗತ್ತಿನ ಮುಂದಿಟ್ಟ ಪ್ರತಿಭೆ. ಕಡು ಬಿಳಿ ಬಣ್ಣದ ಜುಬ್ಬಾ ಹಾಗು ಧೋತಿಯನ್ನು ತೊಟ್ಟು, ಘಾಡವಾದ ಕಣ್ಣುಗಳೊಳಗೆ ಆತ್ಮಾಭಿಮಾನದ ದೃಷ್ಟಿಯನ್ನು ನೆಟ್ಟು ಬಂಗಾಳದ ಬೀದಿಗಿಳಿದರೆ ಇಡೀ ಊರಿಗೆ ಊರೇ ಅವರ ಮುಂದೆ ತಲೆಬಾಗುತಿತ್ತು. ವಿಪರ್ಯಾಸವೆಂಬಂತೆ ಈ ಅಭಿಮಾನ, ಗೌರವ ಹಾಗು ಕಾಳಜಿಗಳು ಕೇವಲ ಬೆಂಗಾಲಕ್ಕೆ ಮಾತ್ರ ಸೀಮಿತವಾದವು. ವಿಶ್ವವನ್ನೇ ತನ್ನೆಡೆಗೆ ಮುಖ ಮಾಡುವಂತೆ ಮಾಡಿದ ಇವರ ಚಿತ್ರಗಳಾಗಲಿ, ಅವುಗಳು ದೇಶಕ್ಕೆ ತಂದ ಕೀರ್ತಿಯನ್ನಾಗಲಿ ಅಥವಾ ಅಂತಹ ಚಿತ್ರಗಳಿಂದ ಪ್ರೇರಿತರಾಗಿ 'ಕ್ವಾಲಿಟಿ' ಚಿತ್ರಗಳನ್ನು ತೆಗೆಯುವ ಮನೋಭಾವವಾಗಲಿ ನಮ್ಮ ದೇಶದ ಇತರ ನಿರ್ಮಾಪಕ ನಿರ್ದೇಶಕರಲ್ಲಿ ಹೆಚ್ಚಾಗಿ ಮೂಡಲಿಲ್ಲ. 'ಅಂಡ್ರೆಡ್ ಕ್ರೋರ್ ಬಾಕ್ಸ್ ಆಫೀಸ್', 'ಐಟಂ ಸಾಂಗ್' 'ರಾಪ್ ಸಾಂಗ್ಸ್' ಎಂಬ ಕಪೋಕಲ್ಪಿತ ಪದಗಳು, ಅರ್ಥಹೀನ ಬಿರುದುಗಳು ಹಾಗು ನಾಯಕನೇ ಚಿತ್ರದ ಮೂಲಸ್ತಂಭ ಎಂದಾಗಿಸಿರುವ ಇಂದಿನ ಕಾಲದಲ್ಲಿ ಸಾಮಾಜಿಕ ಕಳಕಳಿಯೊಟ್ಟಿಗೆ ಅಪ್ಪಟ ಸಾಹಿತ್ಯ ಹಾಗು ಸಂಗೀತದಿಂದ ಮೂಡುವ ಚಿತ್ರಗಳು ಮೂಡುವ ಕಾಲ ಮುಗಿದು ದಶಕಗಳೇ ಆಗಿವೆಯೋ ಎಂಬಂತಿದೆ. ಇಂತಹ ಸ್ಥಿತ್ಯಂತರದ ಕಾಲದಲ್ಲಿ ದೇಶೀ ಸಿನಿಮಾ ಇತಿಹಾಸದ ಪುಟಗಳಲ್ಲಿ ಸತ್ಯಜಿತ್ ಎಂಬ ಹೆಸರು ಧ್ರುವತಾರೆಯಂತೆ ಕಂಗೊಳಿಸುತ್ತಿದೆ. ಇಂತಹ ಧ್ರುವತಾರೆ ಜನಿಸಿ ಕಳೆದ ಮೇ 2ಕ್ಕೆ ಬರೋಬ್ಬರಿ ತೊಂಬಾತ್ತರು ವರ್ಷ. ರಾಜಕೀಯವೆಂಬ ಬಿಸಿನೆಸ್ನ ನಾಟಕದಾರಿಗಳನ್ನು ಅಥವಾ ಮಾಡಿರುವ ಮೂರು ಮುಕ್ಕಾಲು ಚಿತ್ರಕ್ಕೇ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿ ಸಾಧನೆಗೈದ ನಟಿಯೇನೋ ಎಂಬ ರೇಂಜಿನಲ್ಲಿ ದಿನ ಪೂರ್ತಿ ನೆಡೆಯುವ ಅವರ ಆಡಂಬರದ ಮದುವೆಯ ತುಣುಕುಗಳನ್ನು ವೈಭವೀಕರಿಸಿ ತೋರಿಸುವ ನಮ್ಮ ಮಾಧ್ಯಮಗಳು, ದೇಶದ ಹೆಸರನ್ನು ವಿದೇಶಿ ನೆಲಗಳಲ್ಲಿ ಮೊಳಗಿಸಿದ ಸತ್ಯಜಿತ್ ರಂತಹ ಧೀಮಂತರ ಹೆಸರನ್ನೇ ಅರಿಯದಿರುವುದು ಇತ್ತೀಚಿನ ದಿನಗಳ ನಮ್ಮ ವಿಪರ್ಯಾಸ.

Friday, May 12, 2017

ಇವರು ನೋವುಗಳ ಹತ್ತಿಕ್ಕಿ ನಗುವನ್ನು ಹೊತ್ತಿಸುವ ಅದೃಷ್ಯವಾಣಿಗಳು..!!


ಮಹಾನಗರಿಗಳ ಟ್ರಾಫಿಕ್ ಜಾಮ್ ಗಳೆಂಬ ಕಿರಿಕಿರಿ ಯಾರಿಗೆ ತಾನೇ ಇಷ್ಟ? ಇಳಿ ವಯಸ್ಸಿನಲ್ಲೂ ತನ್ನ ಮಾಲೀಕನ ಜಿಪುಣುತನಕ್ಕೆ ಮಣಿದು ಸಾಯುವವರೆಗೂ ಗೇಯುವ ಎಂಜಿನ್ ಗಳ ಆಕ್ರಂದನದ ದಟ್ಟ ಹೊಗೆಯಾಗಲಿ, ಪಕ್ಕದಲ್ಲೆಲ್ಲೋ ಮರಳುಗಾಡಿನ ಬೆಟ್ಟವೇ ಎದ್ದು ಕೂತಿರುವಂತೆ ಕಣ್ಣು ಕಿವಿ ಮೂಗು ಬಾಯಿ ಎಲ್ಲೆಂದರಲ್ಲಿ ಹೊಕ್ಕು ಉಪದ್ರವ ಮಾಡುವ ಧೂಳಾಗಲಿ, ಹುಚ್ಚು ನಾಯಿಗಳ ಸಂತೆಯೇ ತಮ್ಮನ್ನು ಅಟ್ಟಾಡಿಸಿಕೊಂಡು ಬಂದವೇನೋ ಎಂಬಂತೆ ಹೆದರಿ ಬೊಬ್ಬಿಕ್ಕುವ ವಾಹನಗಳ ರಣಕಹಳೆ ಅಥವಾ ತಲೆಗೆದರಿ ಚಿಂದಿ ಬಟ್ಟೆಯನ್ನುಟ್ಟು ಅನುಕಂಪದ ಕಂಗಳಿಂದ ಕೈಯಲ್ಲಿರುವ ಹೂವನ್ನೋ, ದಿನಪತ್ರಿಕೆಗಳನ್ನೋ ಅಥವಾ ಮತ್ಯಾವುದೋ ಮಕ್ಕಳನ್ನು ಸೆಳೆಯುವ ಅಂದದ ಗೊಂಬೆಯನ್ನೂ ಹಿಡಿದು ಬೇಡವೆಂದರೂ ಕೊಂಡುಕೊಳ್ಳುವಂತೆ ಪೀಡಿಸುವ ಎಳೆವಯಸ್ಸಿನ ಹುಡುಗರ ಉಪಟಳ, ಇವೆಲ್ಲವನ್ನು ಘಂಟೆಗಳ ಕಾಲ ಅನುಭವಿಸಲು ಋಷಿಮುನಿಗಳ ತಾಳ್ಮೆ ಯೂ ಕೆಲವೊಮ್ಮೆ ಸಾಲದು.

ಸಾಕಪ್ಪ ಸಾಕು ಎನ್ನುತ ನೀಲಕಂಠನ ಕತ್ತಿನ ಹಾವಿನಂತಿರುವ 'ಹ್ಯಾಂಡ್ಸ್ -ಫ್ರೀ' ಗಳನ್ನು ಎಳೆದು ಕಿವಿಯೊಳಗೆ ತೂರಿಸಿಕೊಂಡು, ಮೊಬೈಲ್ ನಿಂದ FM ನ ಬಟನ್ ಅನ್ನು ಒಮ್ಮೆ ಒತ್ತಿದರೆ ಅಲ್ಲೂ ಸಹ ‘ಹಾಡ್’ ಗಳಿಗಿಂತ ಜಾಸ್ತಿ ತಲೆ ಚಿಟ್ಟಿಡಿಸುವ 'ಆಡ್’ ( Ad ) ಗಳ ಸಂತೆಯೇ! ಕೆಲವೊಮ್ಮೆ ಬೇರೆ ದಾರಿಯಿಲ್ಲದೆ ಈ Ad ಗಳ ಸಂಗೀತವನ್ನೇ ಚಿತ್ರಗೀತೆಗಳಂತೆ ಭಾವಿಸಿ ತೃಪ್ತರಾಗಬೇಕಾಗುತ್ತದೆ. ಸಾಲದಕ್ಕೆ ರೇಡಿಯೋ ಜಾಕಿಗಳು. ಮಾತಿನ ಯಂತ್ರದಂತೆ ಬಡಬಡಿಸುವ ಅವರ ಚೀರಾಟ. ಹಲವು ಬಾರಿ ಇವರುಗಳ ಬಣ್ಣಬರಿತ ಆ ಅದೃಶ್ಯ ನಟನೆಗೆ ಕೇಳುಗ ಕುಪಿತಗೊಂಡರೆ, ಕೆಲವೊಮ್ಮೆ ಈ ಚೀರಾಟಗಳೇ ತುಂಟಾಟಗಳಗಿ ಅವುಗಳಲ್ಲೇ ಮರೆತುಬಿಡುತ್ತಾನೆ. ಕೆಲವರಿಗಂತೂ ಸಂಜೆ ಸರಿಯಾಗಿ ಇದೆ ಸಮಯಕ್ಕೆ, ಇದೆ ಸಿಗ್ನಲ್ ನ ದಟ್ಟ ಸದ್ದಿನಲ್ಲಿ ತನಗರಿಯದಂತೆ ಕೈಗಳು FM ಅನ್ನು ಹೊತ್ತಿಸಿಬಿಡುತ್ತವೆ, ಇಂತಹ ಕೆಲವು RJ ಗಳ ಮಾತಿನ ಪುಳಕ ತಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯಲು ತವಕಿಸುತ್ತಿರುವಂತೆ! ಆ ಮುದ್ದು ಮುದ್ದಾದ ಮಾತುಗಳು, ನೊಂದ ಮನಸ್ಸುಗಳಿಗೆ ಸಾಧ್ಯವಾದಷ್ಟೂ ಸಾಂತ್ವನ ತುಂಬುವ ಕಲೆ, ನಗಲು ಹಾಗು ನಗಿಸಲು ಪ್ರಯತ್ನಿಸುವ ಜೋಕುಗಳು ಹಾಗು ಅದಕ್ಕೆ ತಕ್ಕ ಮಟ್ಟಿನ ‘ಸೆನ್ಸ್ ಆಫ್ ಹ್ಯುಮರ್’ ಸಾಲದಕ್ಕೆ ಫೋನ್ ಹಾಯಿಸಿ ಆಕಡೆಯಿಂದ ಮನಬಂದಂತೆ ಉಗಿಸಿಕೊಂಡರೂ ಮನ ಕುಗ್ಗದ ಕ್ಯಾರೆಕ್ಟರ್ ಈ RJ ಗಳದ್ದು.

ಕೋಳಿಯೂ ತನ್ನ ಕೊನೆ ಗೊರಕೆಯನ್ನು ಹೊಡೆಯುವ ಮುನ್ನವೇ, ದೂರದಲ್ಲೆಲ್ಲೋ ಸ್ವಯಂಘೋಷಿತ ನಗರಪಾಲಕ (ಗೂರ್ಖಾ) ತನ್ನ ಸೀಟಿಯನ್ನು ಊದುತ್ತಿರುವಾಗಲೇ, ಅರ್ದನ್ಬರ್ದ ನಿದ್ರೆಯಲ್ಲೇ ಎದ್ದು, ಚುಮು ಚುಮು ಚಳಿಗೆ ಒಂದು ಲೀಟರ್ ನಷ್ಟು ದೊಡ್ಡ ಲೋಟದಲ್ಲಿ ಕಾಫಿಯನ್ನೂ, ಟೀ ಯನ್ನೂ ಹಿಡಿದು ಮೈಕ್ನ ಮುಂದೆ ಕೂತು 'ಶುಬೋಧಯ' ಎಂದು ದೀರ್ಘವಾಗಿ ಹೇಳಿದರೆ ಅದೇನೋ ಒಂದು ಬೆಳಗಿನ ಉಲ್ಲಾಸ ಪೇಪರ್ ಹಾಕುವ, ಹಾಲನ್ನು ಮಾರುವ ಹಾಗು ಹೂವನ್ನು ಪೋಣಿಸುವ ಸಾವಿರಾರು ವರ್ತಕರಿಗೆ. ಆ ಕ್ಷಣದಿಂದ ಶುರುವಾಗಿ ನಂತರದ ಮೂರೋ ನಾಲ್ಕೋ ಘಂಟೆಯೊ ಒಂದೇ ಸಮನೆ ಮುಂಗಾರಿನ ಮಳೆಯಂತೆ RJ ತನ್ನ ಮಾತುಗಳನ್ನು ಸುರಿಸಿದರೆ ಇತ್ತಕಡೆ ಅದೆಷ್ಟೋ ಲಕ್ಷ ಜನರಿಗೆ ಸೂರ್ಯ ಆಳೆತ್ತರಕ್ಕೆ ಬಂದಿರಬಹುದು ಎಂಬುದರ ಸಂದೇಶ ರವಾನೆಯಾಗುತ್ತದೆ. ಅದೇ ತುಸು ಒಳಗೆ ಹಳ್ಳಿಗಳಾದರೆ ಚಿಂತನ-ಮಂಥನ, ಕೃಷಿವಾರ್ತೆ, ಪ್ರದೇಶ ಸಮಾಚಾರ, ಹಿತವಚನ ಎಂಬ ಉದ್ದುದ್ದದ ಕಾರ್ಯಕ್ರಮಗಳು. ಎಲ್ಲದರಲ್ಲೂ ನಯವಾಗಿ, ವಿನಯದಿಂದ, ಕೇಳಿದರೆ ಮತ್ತೂ ಕೇಳಬೇಕೆನಿಸುವ ವಾಚಕರ ಮಧುರ ಧ್ವನಿ. ಸಿಟಿಯಲ್ಲಿ ಬೆಳಂಬೆಳ್ಳಗೆ ತ್ರಾಸನ್ನು ಕೊಡುವ ಪಟ್ ಪಟಾಕಿ, ಕಿರಿಕ್ ಹುಡ್ಗ, ತರ್ಲೆ ರಾಮ ಎಂಬ ಏನೇನೋ ಬಿರುದುಗಳನ್ನು ಹೆಣೆದುಕೊಂಡಿರುವ ಹುಡುಗ ಹುಡುಗಿಯರ ಸದ್ದು. ಅದೇನೇ ಆದರೂ ಬಹಳಷ್ಟು ಮಂದಿಗೆ ಒಂದು ದಿನ ಇವರುಗಳ ಸದ್ದೆನಾದರೂ ಕಿವಿಗೆ ಬೀಳದಿದ್ದರೆ ದಿನವೇ 'ಕೋಯಾ ಕೋಯಾ ಚಾಂದ್, ಖುಲಾ ಆಸಮನ್' ಎಂಬ ಹಾಡಿನಂತಾಗಿಬಿಡುತ್ತದೆ.

ಇವೆಲ್ಲವನ್ನು ಗಮನಿಸಿದರೆ, RJ ಗಳ ಮಾತನ್ನು ಕೇಳುತ್ತಿದ್ದರೆ, ಇವರಿಗೇನು ನಿಜ ಜೀವನದಲ್ಲಿ ದುಃಖ, ಸಿಟ್ಟು, ನೋವು, ಚಿಂತೆ, ಎಂಬೆಲ್ಲ ಫ್ಯಾಕ್ಟರ್ ಗಳು ಸತಾಯಿಸುವುದಿಲ್ಲವೋ ಎಂದು ಅನ್ನಿಸದೆ ಇರುವುದಿಲ್ಲ. ಒಂದು ಪಕ್ಷ ಇದ್ದರೂ ಅವರು ತೋರಿಸಿಕೊಳ್ಳುವುದಿಲ್ಲ ಎಂಬೊಂದು ಲೋಕಾರೂಢದ ಮಾತು ನಮ್ಮನ್ನು ಸುಮ್ಮನಾಗಿಸುತ್ತದೆ. ಆದರೆ ತಕ್ಷಣ ಮತ್ತೊಂದು ಪ್ರೆಶ್ನೆ ನಮ್ಮನ್ನು ಬಹುವಾಗಿ ಕಾಡದೇ ಇರುವುದಿಲ್ಲ. ಅದೇನೇ ದುಃಖವಿದ್ದರೂ, ನೋವುಗಳ ಸರಮಾಲೆಯನ್ನು ಹೊತ್ತಿದರೂ ಅವೆಲ್ಲವುಗಳಿಗೆ ಕೆಲಕಾಲ ಬ್ರೇಕ್ ಹಾಕಿ ನಗುವೆಂಬ ಕಳಸವನ್ನು ಮುಖದ ಮೇಲೆ ತೊಡುವ ಕಲೆಯನ್ನು ಇವರುಗಳು ಕಲಿತಿದ್ದಾದರೂ ಹೇಗೆ? ಈ ಕೆಲೆ ಯಾವುದೇ ಆಸ್ಕರ್ ವಿಜೇತ ನಟ ಅಥವಾ ನಟಿಗೂ ಕಡಿಮೆ ಇರುವುದಿಲ್ಲ. ಇದೊಂದು ನಟಿಸುವ ಕಲೆಯೋ ಅಥವಾ ಸಂತೋಷದ ಜೀವನವನ್ನು ನೆಡೆಸಲು ಇರುವ ಸ್ಪೂರ್ತಿಯ ಸೆಲೆಯೋ? RJ ಗಳೇ ಬಲ್ಲರು!

ಆದರೆ,

ಎದ್ದೂ ಬಿದ್ದೂ ಮನೋರಂಜನೆಯನ್ನೇ ಮನೋಕಾಮನೆಯಾಗಿಸಿಕೊಂಡಿರುವ ಇಂದಿನ RJ ಗಳಿಗೂ, ಮನೆಯ ಒಬ್ಬ ಅದೃಶ್ಯ ಸದಸ್ಯನಂತೆ ಜೊತೆಗೆ ಇರುತ್ತಿದ್ದ ಅಂದಿನ ರೇಡಿಯೋ ವಾಚಕರಿಗೂ ಅಜಗಜಾಂತರ ವ್ಯತ್ಯಾಸವಿರುವುದು ತಿಳಿದವರು ಬಲ್ಲ ವಿಷಯ. ಹೆಚ್ಚಾದ ರೇಡಿಯೋ ಕೇಂದ್ರಗಳ ಸ್ಪರ್ಧೆಯಲ್ಲಿ ನಾ ಮುಂದು ತಾ ಮುಂದು ಎನ್ನುತಾ ತಿಳಿದೋ ತಿಳಿಯದೆಯೋ ಸಿಕ್ಕ ಸಿಕ್ಕವರಿಗೆಲ್ಲ ಫೋನಾಯಿಸಿ, ಕಿಚಾಯಿಸಿ , ಸತಾಯಿಸಿ, ಕೊನೆಗೆ 'ನಾವು ಮಾಡಿದೆಲ್ಲ ತಮಾಷೆಗಾಗಿ’ ಎಂದು ನಯವಾಗಿ ಚಾಪೆಯ ಅಡಿ ತೂರಿಕೊಂಡಂತೆ ನಟಿಸಿದರೆ ಮೌಂಟ್ ಎವರೆಸ್ಟ್ ನನ್ನು ಒಂದೇ ಉಸಿರಿನಲ್ಲಿ ಹತ್ತಿದ ಸಾಧಕರಂತೆ ಅವರನ್ನು ಕಾಣಲಾಗುತ್ತದೆ. ಅಲ್ಲಿ 'ಕುರಿ' ಎನಿಸಿಕೊಂಡವನು ಪಡುವ ವೇದನೆಗಿಂತ, ಕೇಳುಗನಿಗಿಂತಲೂ ಹೆಚ್ಚಾಗಿ ನಗುವ RJ ಮಹಾರಾಜನೇ ಸರ್ವರಿಗೂ ಹಿತವಾಗುತ್ತಾನೆ. ಹಲವು ಬಾರಿ ಇಂತಹ ಎಡಬಿಡಂಗಿ ಕಾರ್ಯಕ್ರಮಗಳೇ ಅದೆಷ್ಟೋ ಜನರ ಪ್ರಾಣಕ್ಕೆ ಕುತ್ತು ತರುವುದು ಉಂಟು. ತಂದಿರುವುದೂ ಉಂಟು! ಪ್ರೀತಿಸುವ ಹುಡುಗಿಯ ಅಪ್ಪನಾಗಿ, ಏರ್ಪೋರ್ಟ್ನ ಕಸ್ಟಮ್ಸ್ ಅಧಿಕಾರಿಯಾಗಿ, ಪಕ್ಕದ ಗಲ್ಲಿಯ ಪೊರ್ಕಿ ನಾಗರಾಜನಾಗಿ ಅಥವಾ ಯಾವುದಾದರೊಂದು ಆಸ್ಪತ್ರೆಯ ಡಾಕ್ಟರ್ ನಂತೆ ಬೆಳ್ಳಂಬೆಳಗ್ಗೆ ಅಮಾಯಕರನ್ನು ಸತಾಯಿಸುವ ಜರೂರತ್ತಾದರೂ ಯಾರಿಗಿದೆ? ಜರೂರತ್ತಿರುವುದು ನಿಜವೇ ಆದರೆ ಅದು ಇವೇ ರೇಡಿಯೋ ಚಾನೆಲ್ ಗಳಿಗೆ. ನಾನೇ ನಂಬರ್ ಒನ್ ಆಗಬೇಕೆಂಬ ಅತಿಆಸೆಯ ಮನಸ್ಸುಗಳಿಗೆ. ಒಂದೊಳ್ಳೆ ಕಾರ್ಯಕ್ರಮವನ್ನು ನೀಡಿ ರಂಜಿಸಲಾಗದ ರಂಜನಾಕಾರರಿಗೆ, ಇಂತಹ ಕಳಪೆ ಕಾರ್ಯಕ್ರಮಗಳೇ ಮಹಾಧಾರ.

ಒಟ್ಟಿನಲ್ಲಿ ಮನೆಯೆಂಬ ಗುರಿಯನ್ನು ತಲುಪಲು ಎದುರಾಗುವ ಟ್ರಾಫಿಕ್ ಜಾಮ್ ಗಳೆಂಬ ಕಿರಿಕಿರಿಗಳ ಮದ್ಯೆ ಯಾವುದೊ ಲೋಕದಲ್ಲಿ ಕಳೆದು ಹೋಗುವ ಕೇಳುಗನ ಚಿತ್ತಕ್ಕೆ RJ ಗಳ ಬಗ್ಗೆ ಇಷ್ಟೆಲ್ಲಾ ವಿಶ್ಲೇಷಣೆ ಮಾಡುವ ಸಂಯಮವಿರುವುದಿಲ್ಲ. 'ಎಂಥ ಸೂಪರ್ ವಾಯ್ಸು ಮಗ' ಎನ್ನುತ್ತಾ ಕಲ್ಪಿತ ಲೋಕದಲ್ಲೊಂದು ಅಂದವಾದ ಚಹರೆಯನ್ನಿಟ್ಟುಕೊಂಡು ತನ್ನಲ್ಲೇ ತಾನು ಕಳೆದು ಹೋಗುವ ಅನೇಕರಿಗೆ ಇಹಲೋಕದ ಪ್ರಜ್ಞೆ ಬರುವುದು ಹಿಂದಿರುವ ಗಾಡಿಯ ರಣಚಂಡಿಯ ಕಹಳೆಯ ಜೊತೆಗೆ ಬೈಗುಳದ ಪದಗಳೂ ಕೇಳತೊಡಗಿದಾಗ. ಅಲ್ಲಿಂದ ಕೊಂಚ ದೂರದಲ್ಲಿ ಸಿಗುವ ಮತ್ತ್ತೊಂದು ಸಿಗ್ನಲ್ಲಲ್ಲಿ ಮತ್ತದೇ ಭಾವಲೋಕ! ಹೀಗೆ ಹ್ಯಾಂಡ್ಸ್ ಫ್ರೀ ಗಳನ್ನು ಹಾಕಿಕೊಂಡು RJ ಗಳ ಮಾತುಗಳಿಗೆ ತನ್ನಲ್ಲೇ ತಾನು ನಗುವುದ ಕಂಡು ಪಕ್ಕದ ಆಂಟಿ ಅಂಕಲ್ ಗಳು ಮುಖ ಮುರಿದುಕೊಳ್ಳುವುದೂ ಉಂಟು.
ಒಟ್ಟಿನಲ್ಲಿ ಹೆಸರಿಗೆ ತಕ್ಕಂತೆ ಆಕಾಶದಿಂದ ಬರುವ ಈ ವಾಣಿಗಳು ಕೇಳುಗರನ್ನು ನಗಿಸಿ, ನಲಿಸಿ, ಆಡಿಸಿ, ಹಾಡಿಸಿ, ಸತಾಯಿಸಿ, ಸಾಕು ಸಾಕಾಗಿಸಿ, ಬೇಕು ಬೇಡವಾಗಿಸಿ, ಚರ್ಚಿಸಿ, ಚಿಂತನೆಗೊಳಪಡಿಸಿ, ಕೊನೆಗೆ ಮಲಗುವ ಜೋಗುಳವೂ ಆಗುವುದುಂಟು. ಅಲ್ಲದೆ ಹಲವು ಬಾರಿ ಯಾರೊಟ್ಟಿಗೂ ಹೇಳಿಕೊಳ್ಳಲಾಗದ ನೋವು ನಲಿವುಗಳನ್ನು ಬಹಳಷ್ಟು ಜನರು RJಗಳೊಟ್ಟಿಗೆ ತೋಡಿಕೊಳ್ಳುವುದನ್ನು ಕೇಳಬಹುದು. ಯಾವುದೊ ಒಂದು ಅತಿಮಾನುಷ ಶಕ್ತಿಯಂತೆ ಅವರ ಮಾತುಗಳು ನೊಂದವರನ್ನು ಸಂತೈಸಿ ಕೊಂಚ ಮಟ್ಟಿನ ಜೀವನ ಪ್ರೀತಿಯನ್ನಾದರೂ ಅವರಲ್ಲಿ ಜಾಗೃತಗೊಳಿಸುತ್ತದೆ. ಹೀಗೆ ವರ್ಷವಿಡೀ ಅದೇ ಸಮಯಕ್ಕೆ ಅದೇ ಜಾಗದಲ್ಲಿ ಅದೇ ಜೀವನೋತ್ಸಾಹವನ್ನು ಬೀರುವ ಅವರ ಅವಿರತ ಮಾತುಗಳು ಕೇಳುಗನಲ್ಲಿ ತಾವೂ ಸಹ ಅಂತಹ ವ್ಯಕ್ತಿತ್ವಧಾರಿಗಳಂತಾಗಲು ಪ್ರೇರೇಪಿಸದಿರವು.

ಅದೇನೇ ಕಷ್ಟ ನೋವುಗಳಿದ್ದರೂ ಎಲ್ಲವನ್ನು ಮರೆತು ಕೆಲಕಾಲಕ್ಕಾದರೂ ಬೇರೆಯವರ ನಗುವಿಗಾಗಿ ತಮ್ಮನ್ನು ಮುಡಿಪಿಡುವ ಇವರ ಆ ಡೆಡಿಕೇಶನ್ ನೂರಕ್ಕೆ ನೂರು ಅನುಕರಣೆಗ್ಯೂಗ್ಯ. ದಿನವಿಡೀ ಮುಖವನ್ನು ಗಂಟ್ಟಿಕ್ಕಿಕೊಂಡು, ಚಿಟಿಕೆಯಷ್ಟು ಕಷ್ಟವನ್ನೇ ಬೆಟ್ಟದಷ್ಟು ಮಾಡಿ ಕೊರಗುವ ಹಲವರಿಗೆ ಇಂತಹ ಅದೃಶ್ಯ ವ್ಯಕ್ತಿತ್ವಗಳು ಸ್ಪೂರ್ತಿಯ ದೀಪಗಳಾಗಬಹುದು. 'ನಗು ನಗುತ ನಲಿ ನಲಿ ಏನೇ ಆಗಲಿ' ಎಂಬ ಹಾಡಿನಂತೆ ನಗುವೆಂಬ ಟಾನಿಕ್ ನನ್ನು ಆಗಾಗ ಸೇವಿಸುತ್ತಿದ್ದರೆ ಬದುಕಿನ ಬಂಡಿಗೆ ಅಗತ್ಯವಾದ ಕೀಲೆಣ್ಣೆಯ ಅಭಾವವನ್ನು ಇದು ಬರಿಸಬಲ್ಲದು.. ಮಗುವಿನ ನಗುವಿನ ಅಪ್ಪಟ ಒಳಪಿನಂತೆ ನಲಿಯುವ ಇವರುಗಳೂ ಸಹ ಇಂತಹ ಟಾನಿಕ್ನ ಸಣ್ಣ ಸಣ್ಣ ಫ್ಯಾಕ್ಟರಿಗಳಂತೆ! ಆದರೆ 'ತಮಾಸೆ ಹೋಗಿ ಅಮಾಸೆ ಆಗ್ಬಾರ್ದು' ಎಂಬ ಮಾತಿನಂತೆ ಕನಿಷ್ಠದ ಸಾಮಾಜಿಕ ಕಾಳಜಿಯೊದಿಂಗೆ ಜನಮಾನಸದಲ್ಲಿ ಬೆರೆಯುವ ಹಂಬಲವಿದ್ದರೆ ಇವರು ಯಾವ ದೊಡ್ಡ ಆದರ್ಶ ವ್ಯಕ್ತಿಗಳಿಗೂ ಕಡಿಮೆಯಲ್ಲ.

Friday, May 5, 2017

ವಿಂಡೀಸ್ ಕ್ರಿಕೆಟ್ : ಹಣವೆಂಬ ಸುಳಿಯಲ್ಲಿ ಪ್ರತಿಭೆಯ ಹುಡುಕಾಟ !!

ವಿಶ್ವ ಕ್ರಿಕೆಟ್ ನನ್ನೇ ದಶಕಗಳ ಕಾಲ ನಲುಗಾಡಿಸಿಬಿಟ್ಟಿದ್ದ ತಂಡವದು. ಆಡುವುದು ದೂರದ ಮಾತು, ಆ ತಂಡದ ಆಟಗಾರರನ್ನು ನೋಡಿಯೇ ಎದುರಾಳಿಯ ಮುಖದ ಬೇವಳಿಯುತಿತ್ತು. ಬ್ಯಾಟ್ ಹಿಡಿದು ಪಿಚ್ ಗೆ ಬಂದವನಿಗೆ ರನ್ ಗಳಿಸುವುದಕಿಂತ ಹೆಚ್ಚಾಗಿ ಜಿಂಕೆಯಂತೆ ಜಿಗಿಸಲ್ಪಡುತ್ತಿದ್ದ ಗುಂಡಿನ ವೇಗದ ಬೌಲ್ ಗಳಿಂದ ತಪ್ಪಿಸಿಕೊಳ್ಳುವುದೇ ಒಂದು ದೊಡ್ಡ ಸವಾಲು. ಆ ತಂಡದ ವಿರುದ್ಧ ಪಂದ್ಯ ಡ್ರಾ ಆದರೂ ಎದುರಾಳಿ ತಂಡಕ್ಕೆ ಗೆದ್ದಷ್ಟೇ ಸಂಭ್ರಮ! ಬೇರೆ ತಂಡಗಳಿಂದ ರಚಿಸಲ್ಪಟ್ಟರೆ ಮುನಿಸಿಕೊಳ್ಳುವಂತೆ ದಾಖಲೆಗಳು ಅಂದು ಈ ತಂಡದಿಂದಲೇ ಮೂಡುತಿದ್ದವು. ಎಪ್ಪತ್ತರ ನಂತರದ ಎರಡು ದಶಕಗಳಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ತಂಡವೆಂಬ ದಾಖಲೆಯಾಗಲಿ, ವಿಶ್ವಕಪ್ ನ ಮೊದಲ ಮೂರು ಆವೃತಿಯಲ್ಲಿ ಸತತವಾಗಿ ಫೈನಲ್ನ ವರೆಗೂ ಬಂದು ಎರಡು ಬಾರಿ ವಿಶ್ವಕಪ್ ಅನ್ನು ಗೆದ್ದ ಮೊದಲ ತಂಡವೆಂಬ ದಾಖಲೆ, 1980 ರಿಂದ 95 ನಡುವೆ ಒಂದೂ ಟೆಸ್ಟ್ ಸರಣಿಯನ್ನು ಸೋಲದ ಹೆಗ್ಗಳಿಕೆ, ಅತಿ ಹೆಚ್ಚಿನ ರನ್ ಗಳಿಕೆ, ಮಹೋತ್ತಮವಾದ ಬೌಲಿಂಗ್ ಏಕಾನಮಿ ಹಾಗು ಸರಾಸರಿಯನ್ನು ಹೊಂದಿದ್ದ ಆ ತಂಡ ಆಡುತಿದ್ದ ಭಾಗಶಃ ಪಂದ್ಯಗಳ ಫಲಿತಾಂಶ ವಿಶ್ವಕಪ್ ನಲ್ಲಿ ಭಾರತ ಹಾಗು ಪಾಕಿಸ್ತಾನದ ನಡುವಿನ ಫಲಿತಾಂಶದಂತೆ 'ಪಾರದರ್ಶಕ'ವಾಗಿರುತ್ತಿತ್ತು! ಎಪ್ಪತ್ತರ ದಶಕದ ಆ ತಂಡವನ್ನು ಒಮ್ಮೆ ನೆನೆಸಿಕೊಂಡರೆ ಯು-ಟ್ಯೂಬಿನಲ್ಲಿ ತಕ್ಷಣ ಅಂದಿನ ಒಂದೆರೆಡು ಪಂದ್ಯಗಳನ್ನು ನೋಡಬೇಕೆಂಬ ಬಯಕೆ ಮೂಡದೇ ಇರುವುದಿಲ್ಲ.

ಇಂದು ಹೇಳ ಹೊರಟಿರುವುದು ಒಂದು ಕಾಲಕ್ಕೆ ಬೆಟ್ಟದಷ್ಟು ಪ್ರಸಿದ್ದಿಯನ್ನು ಹೊಂದಿ ಇಂದು ಆಟಕುಂಟು ಲೆಕ್ಕಕಿರದಂತೆ ಮೂಲೆಗುಂಪಾಗಿರುವ ಕ್ರಿಕೆಟ್ ತಂಡದ ಬಗ್ಗೆ. ವೆಸ್ಟ್ ಇಂಡೀಸ್ ಅಥವಾ ವಿಂಡೀಸ್. ಮೊದಲು ಹೇಳಿದಂತೆ ಅಂದು ಯಶಸ್ಸಿನ ಶಿಖರದಲ್ಲಿದ್ದ ಈ ತಂಡ ಗೆದ್ದು ತೋರಿಸದ ಸರಣಿಗಳಿಲ್ಲ ಮಾಡದೆ ಇರುವ ದಾಖಲೆಗಳಿಲ್ಲ. ಸರ್ ಗಾರ್-ಫೀಲ್ಡ್ ಸೋಬರ್ಸ್, ಜಾರ್ಜ್ ಹೆಡ್ಲಿ, ಕ್ಲೆಯ್ವ್ ಲಾಯ್ಡ್, ವಿವ್ ರಿಚರ್ಡ್ಸ್, ಮೈಕಲ್ ಹೋಲ್ಡಿಂಗ್ ಹೀಗೆ ಹೇಳುತ್ತಾ ಹೋದರೆ ವಿಂಡೀಸ್ ಎಂಬ ತಂಡವನ್ನು ವಿಶ್ವಕ್ಕೆ ಪರಿಚಯಿಸಿಕೊಟ್ಟ ದಂತಕಥೆಗಳಂತೆ ಅಂದಿನ ಒಬ್ಬೊಬ್ಬ ಆಟಗಾರನೂ ಪರಿಚಯವಾಗುತ್ತಾನೆ.

ಅಂತಹ ತಂಡವೊಂದು ಇಂದು ಏನಾಗಿದೆ? ನೀರು ಕುಡಿದಷ್ಟೇ ಸರಾಗವಾಗಿ ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ತಂಡವಿಂದು ನಕ್ಷತ್ರಗಳಿರದ ಆಗಸದಂತಾಗಿರುವು ಎಲ್ಲರಿಗೂ ಸ್ಪಷ್ಟ. (1976 ರಿಂದ 2000 ನೇ ಇಸವಿಯವರೆಗೂ ಆಡಿದ ಟೆಸ್ಟ್ ಪಂದ್ಯಗಳಲ್ಲಿ 71 ನ್ನು ಗೆದ್ದು 20 ಪಂದ್ಯಗಳನ್ನು ಸೋತರೆ ಅದೇ 2000 ದಿಂದ ಈಚೆ ಮುಂದಿನ ಹದಿನೈದು ವರ್ಷಗಳಲ್ಲಿ ಆಡಿದ ಪಂದ್ಯಗಳಲ್ಲಿ 78 ಅನ್ನು ಸೋತು ಗೆದ್ದಿರುವುದು ಕೇವಲ 17 ಪಂದ್ಯಗ ಳು!!) ಈ ಮಟ್ಟಿನ ಭಾರಿ ಮುಗ್ಗರಿಸುವಿಕೆಗೆ ನಿಜವಾಗ ಕಾರಣವೇನು? ಅಂದಿನ ವಿಂಡೀಸ್ ಆಟಗಾರರಿಗೂ, ಇಂದಿನ 'ಪಾರ್ಟಿ ಡ್ಯೂಡ್ಸ್' ಗಳಿಗೂ ಆಟದಲ್ಲಿ ಕೊಂಚ ಅಂತರವಿರುವು ನಿಜವಾದರೂ ಈ ರೀತಿಯ ಮೂಲೆಗುಂಪಾಗುವಿಕೆ ಮೊಘಲ್ ಸಾಮ್ರಾಜ್ಯದಂತೆ ಎಲ್ಲವನ್ನು ಗೆದ್ದು ಮದ, ಅಸೂಯೆ, ಒಳಜಗಳ ಗಳೆಂಬ ಕಾರಣಗಳಿಂದ ಹೇಳಹೆಸರಿಲ್ಲದಂತಾದ ಸಾಮ್ರಾಜ್ಯದಂತೆ ಈ ತಂಡ ಗೋಚರಿಸುತ್ತದೆ. . ಇದರ ಶ್ರೇಯ ಆಟಗಾರಿಗೆ ಕೊಡಬೇಕೋ ಅಥವಾ ವಿಂಡೀಸ್ ಕ್ರಿಕೆಟ್ ಮಂಡಳಿಯ ಮುಡಿಗೆ ಅರ್ಪಿಸಬೇಕೋ ಎರಡೂ ಗೋಜಲು.

ಈ ವಿಷಯವನ್ನು ಹೆಚ್ಚು ಹೆಚ್ಚು ಕೆದಕುತ್ತಾ ಹೋದಷ್ಟೂ ಬೆಳಕಿಗೆ ಬರುವುದು ಕ್ರಿಕೆಟ್ ಮಂಡಳಿ ಹಾಗು ಆಟಗಾರರ ನಡುವೆ ಇರುವ ಸಂಘರ್ಷ. ಇದು ವಿಶ್ವದ ಬಾಗಶಃ ದೇಶಗಳ ಕತೆಯೇ ಆದರೂ ಯಾವ ಮಂಡಳಿಗಳೂ ಸಹ ದೇಶವನ್ನು ಪ್ರತಿನಿಧಿಸುವ ತಂಡವನ್ನು/ಆಟಗಾರರನ್ನು ಇಂತಹ ಅಧೋಗತಿಗೆ ತಂದು ನಿಲ್ಲಿಸುವುದಿಲ್ಲ. ಅಲ್ಲಿ ಮೊದಲ ಬಾರಿಗೆ ವಿವಾದ ಬುಗಿಲ್ಲೆದ್ದಿದ್ದು 2005 ರಲ್ಲಿ, ಸೌತ್ ಆಫ್ರಿಕಾದ ವಿರುದ್ಧದ ಪಂದ್ಯಕ್ಕೆ ಏಳು ಜನ ಆಟಗಾರರು ಗೈರಾಗಲು ತೀರ್ಮಾನಿಸಿದಾಗ. ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಕೂಡ ಅವರಲ್ಲಿ ಒಬ್ಬರಾಗಿದ್ದರು. ಕ್ರಿಕೆಟ್ ನ ದಂತಕಥೆಯೇ ಅಂದು ಮಂಡಳಿಯ ವಿರುದ್ಧ ಸಿಡಿದೆದ್ದರೆ ಯಾರಿಗೆ ತಾನೇ ಸಂಶಯ ಮೂಡುವುದಿಲ್ಲ? ಅದು ಒಂತರಾ ಗ್ರೇಗ್ ಚಾಪೆಲ್ ನ ನಿಜ ಬಣ್ಣವನ್ನು ಬಯಲು ಮಾಡಲು ಅಂದು ಸಚಿನ್ ಪ್ರೆಸ್ ನ ಮುಂದೆ ಬಂದಂತಿತ್ತು. ಒಟ್ಟಿನಲ್ಲಿ ಬೆಳೆಯಬೇಕಿದ್ದ ಎರಡನೆಯ ತಲೆಮಾರಿನ ವಿಂಡೀಸ್ ಆಟಗಾರಿಗೆ ಅಂದು ತಮ್ಮ ಅಧಿಕಾರಿಗಳ ಜೊತೆಯೇ ಬಿರುಕು ಮೂಡಿತ್ತು. ಈ ಬಿರಕು ಮಾತ್ರ ಮುಂದೆಂದೂ ಮುಚ್ಚದ ರೀತಿ ಬೆಳೆಯ ತೊಡಗಿತು. ಅಂದೊಮ್ಮೆ ವಿಂಡೀಸ್ ಕ್ರಿಕೆಟ್ ನ ದಂತಕಥೆ ಕಾರ್ಟ್ಲಿ ಆಂಬ್ರೋಸ್ ನ ಮನೆ ಸೈಕ್ಲೋನ್ ನಿಂದ ನುಚ್ಚು ನೂರಾದಾಗ ಆತ ವಿದೇಶದ ಪ್ರವಾಸದಲ್ಲಿದ್ದ. ವಿಷಯ ತಿಳಿದವನೇ ತಕ್ಷಣ ವಿಂಡೀಸ್ ಕ್ರಿಕೆಟ್ ಮಂಡಳಿ ಗೆ ಫೋನಾಯಿಸಿ ತನ್ನ ಕುಟುಂಬಕ್ಕೆ ತಾತ್ಕಾಲಿಕವಾಗಾದರೂ ಏನಾದರೂ ವ್ಯವಸ್ಥೆಯನ್ನು ಮಾಡಿಕೊಡಿ ಎಂದು ಬೇಡಿಕೊಂಡ. ಮಂಡಳಿ ಮಾತ್ರ ಮಾನವೀಯತೆಯ ದೃಷ್ಟಿಯಿಂದಲೂ ಸಹ ಒಂದಿಷ್ಟೂ ಸ್ಪಂಧಿಸಲಿಲ್ಲ. ಬೇರೆ ದಾರಿ ಕಾಣದೆ ಆತ ಕ್ರಿಕೆಟ್ ಪ್ರವಾಸವನ್ನು ಅರ್ಧಕ್ಕೆ ಬಿಟ್ಟು ಅಂದು ಮನೆಯ ದುರಸ್ತಿಗೆಂದು ವಾಪಾಸ್ ಬರುತ್ತಾನೆ. ಇಂತಹ ಹಲವಾರು ಘಟನೆಗಳು ವಿಂಡೀಸ್ ಆಟಗಾರರಲ್ಲಿ ಮಂಡಳಿಯ ವಿರುದ್ಧವಾಗಿ ದಟ್ಟ ಅಲೆಗಳನ್ನು ಒಳಗೊಳಗೇ ಸೃಷ್ಟಿಸತೊಡಗಿರುತ್ತವೆ. ಹೊರಬರಲು ಅವಕಾಶನಷ್ಟೇ ಇದಿರು ನೋಡುತ್ತಿರುತ್ತವೆ. ಹೀಗೆ ಇಪ್ಪತ್ತೊಂದನೇ ಶತಮಾನದ ಆದಿಯಲ್ಲಿ ಶುರುವಾದ ವಿಂಡೀಸ್ ತಂಡದ ಬೀಳುವಿಕೆ ಇಂದು ಪಾತಾಳವನ್ನು ಮುಟ್ಟುವ ಸನಿಹದಲ್ಲಿದೆ.

ಆ ಕದಂಬ ಬಾಹುಗಳು, ಚಚ್ಚಿದರೆ ಚೆಂಡೆ ಚೂರಾಗುವುದೇನೋ ಎಂಬ ಹೊಡೆತಗಳು, ಮುಡಿಯೆತ್ತರಕ್ಕೆ ಜಿಗಿಯುವ ಬೌಲಿಂಗ್ ದಾಳಿ, ಹೀಗೆ ನೋಡುಗ ಜಿಗಿದು ಕುಣಿಯುವಂತೆ ಮಾಡುವ ವಿಶ್ವಪ್ರಸಿದ್ಧ ಆಟಗಾರರಿದ್ದರೂ ನಷ್ಟದ ನೆಪಹೂಡ್ದಿ ತಂಡವನ್ನು ಹೀಗೆ ಸತಾಯಿಸುವುದು ಎಷ್ಟರ ಮಟ್ಟಿಗೆ ಸರಿ?

ಇಂದಿಗೆ ಸರಿಯಾಗಿ ಒಂದು ದಶಕದ ಹಿಂದೆ ಶುರುವಾದ ಟಿ-ಟ್ವೆಂಟಿ ಕ್ರಿಕೆಟ್ ಉಸಿರುಗಟ್ಟಿದ ಈ ತಂಡಕ್ಕೆ ಆಕ್ಸಿಜೆನ್ ನಂತೆ ಪರಿಣಮಿಸಿತ್ತು. ನವ ಮಾದರಿಯ ಈ ಹೊಡಿ ಬಡಿ ಆಟದಲ್ಲಿ ಮೆರೆಯತೊಡಗಿದ್ದು ಹೆಚ್ಚಾಗಿ ಇಲ್ಲಿನ ದೈತ್ಯರೇ! ಡ್ಯಾರೆನ್ ಸ್ಯಾಮಿ, ಕ್ರೈಸ್ ಗೈಲ್, ಮರ್ಲೊನ್ ಸ್ಯಾಮ್ಯುಲ್ಸ್, ಡೇವೆನ್ ಸ್ಮಿಥ್, ಆಂಡ್ರೇ ರುಸ್ಸೇಲ್, ಸುನಿಲ್ ನಾರೈನ್, Dwayne ಬ್ರಾವೊ, ಕೆರಿನ್ ಪೊಲ್ಲಾರ್ಡ್ ಹೀಗೆ ಕಟ್ಟಿಕೊಂಡ ವಿಂಡೀಸ್ ಪಡೆ ಶರವೇಗದಲ್ಲಿ ವಿಶ್ವ ಕ್ರಿಕೆಟ್ ನಲ್ಲಿ ಮೇಲೇರತೊಡಗಿತ್ತು. ಕೇವಲ ಒಂದೇ ದಶಕದೊಳಗೆ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿ ಮೆರೆಯಿತು. ಗತಿಸಿದ ವಿಂಡೀಸ್ ನ ಇತಿಹಾಸ ಇನ್ನೇನೂ ಮರುಕಳಿಸಬೇಕು ಎನ್ನುವಷ್ಟರಲ್ಲಿ ಮತ್ತದೇ ಅಸಮಾಧಾನದ ಹೊಗೆ ತಂಡವನ್ನು ಉಸಿರುಗಟ್ಟಿಸಿತು. ಒಗ್ಗಟ್ಟಾಗಿ ಸಾಗುವ ಕಾಡುಕೋಣಗಳ ಗುಂಪು ನರಭಕ್ಷಕನೊಂದನ್ನು ಕಂಡು ದಿಕ್ಕಾಪಾಲಾಗಿ ಓಡಿ ಕಣ್ಮರೆಯಾಗುವಂತೆ ಆಯಿತು. ಸದೃಢವಾಗಿ ಕಟ್ಟಲ್ಪಡುತ್ತಿದ್ದ ಗೋಡೆಯೊಂದು ಉರುಳಲು ಶುರುವಾಯಿತು.

ಇಂದು ಆಟವಾಡು, ನಾಳೆ ಪಾರ್ಟಿ ಮಾಡು, ನಾಡಿದ್ದು ನಿದ್ದೆ ಮಾಡು ನಂತರ ಮತ್ತೆ ಆಟವಾಡು ಎಂಬಂತೆ ತಂಡ ಮೋಜಿನ ಅಡ್ಡವನ್ನಾಗಿ ಟಿ-ಟ್ವೆಂಟಿ ಪಂದ್ಯಗಳನ್ನು ಪರಿಗಣಿಸಿತು.ದುಡ್ಡಿನ್ನ ಸಾಗರವೇ ಇಲ್ಲಿ ಈಜಲು ಸಿಗುವಾಗ ಊರಿನ ಹೊಲಸು ಕೆರೆಗೆ ನೆಗೆದು ಮೈಯನ್ನೇಕೆ ಕೊಳಕು ಮಾಡಿಕೊಂಡಾರು? ಪರಿಣಾಮ ವಿಶ್ವದ ಯಾವುದೇ ಮೂಲೆಯಲ್ಲಿಯಾದರು ಸರಿ, ಟಿ-ಟ್ವೆಂಟಿ ಪಂದ್ಯಗಳೆಂದರೆ ಇರುವೆಗಳಂತೆ ಈ ಆಟಗಾರರು ಮುತ್ತಿಕೊಳ್ಳುತ್ತಾರೆ. ಪಂದ್ಯಗಳನ್ನು ನೆಡೆಸುವ ಫ್ರಾಂಚೈಸಿಗಳಿಗೂ ಬೇಕಿರುವುದು ಅಬ್ಬರಿಸಿ ಬೊಬ್ಬಿಕ್ಕುವ ಇಂತಹ ಆಟಗಾರರೇ. ಹಣ ಹಾಗು ಮೋಜಿನ ರಂಗಿನಲ್ಲಿ ದೇಶ, ದೇಶದ ಕೀರ್ತಿ, ದೇಶದ ಭವಿಷ್ಯ ಎಂಬೆಲ್ಲ ಜವಾಬ್ದಾರಿಗಳನ್ನು ಕಾಲ ದೂಳಿನಂತೆ ಕೊಡವಿ ನೆಡೆಯುವ ಇಂತಹ ಆಟಗಾರರೇನು ಮುಗ್ದರೇನಲ್ಲ. ಮನೆಯಲ್ಲಿ ಕಷ್ಟವಿದ್ದ ಮಾತ್ರಕ್ಕೆ ಪೋಷಕರನ್ನೇ ಧಿಕ್ಕರಿಸಿ ಹೊರಬರುವುದು ಎಷ್ಟರ ಮಟ್ಟಿಗೆ ಸರಿ? ಅಂದೊಮ್ಮೆ ಜಮೈಕಾದ ವೇಗಿ ಮೈಕಲ್ ಹೋಲ್ಡಿಂಗ್ 'ನನ್ನ ದೇಶದ 5 ಮಿಲಿಯನ್ ಕ್ರೀಡಾಪ್ರೇಮಿಗಳಿಗೆ ನಾನು ಉತ್ತಮವಾಗಿ ಆಡುವುದು ಬಹು ಮುಖ್ಯ, ಏಕೆಂದರೆ ನಾಳೆ ಅವರು ಹೊಡೆದೆಯಲ್ಲ ತಲೆಯೆತ್ತಿ ಗರ್ವದಿಂದ ನೆಡೆಯಬೇಕು' ಎಂದಿದ್ದ. ಇಡೀ ವಿಶ್ವವನ್ನೇ ತನ್ನ ಮಾರಕ ಬೌಲಿಂಗ್ ನಿಂದ ಚೆಂಡಾಡಿಬಿಟ್ಟಿದ್ದ ಆತನ ಮಾತುಗಳು ಮುಂಬಂದ ಅದೆಷ್ಟೋ ಆಟಗಾರರಿಗೆ ಪ್ರೇರಣೆಯಾಯಿತು. ಆದರೆ ಒಬ್ಬರನ್ನೊಬ್ಬರು ದೋಷಿಸುವ ಕಿಚ್ಚಿನಲ್ಲಿ ಮಂಡಳಿ ಹಾಗು ಆಟಗಾರ ಮಾನವೆಂಬುದು ಇಂದು ಸಂತೆಯಲ್ಲಿ ಮಾರುವ ಕೊಳೆತ ತರಕಾರಿ ಯಂತಾಗಿದೆ. ಇನ್ನು ಇಂತಹ ದೇಶಪ್ರೇಮದ ಮಾತುಗಳೆಲ್ಲ ಇವರನ್ನು ಒಟ್ಟುಗೂಡಿಸಬಲ್ಲವೆಂಬ ಆಶಾವಾದ ಒಂದು ಮೂರ್ಖತನವೇ ಸರಿ.

ತೊಂಬತ್ತರ ದಶಕದ ಲೆಜೆಂಡರಿ ಆಟಗರೆಲ್ಲ ನಿವೃತ್ತಿ ಹೊಂದಿದಾಗ ಆಸ್ಟ್ರೇಲಿಯಾದ ತಂಡವೂ ಸಹ ಹೀಗೆ ಮೂಲೆ ಸರಿಯುತ್ತದೆ ಎಂದುಕೊಂಡಿದ್ದ ಕ್ರೀಡಾಸಕ್ತರ ಲೆಕ್ಕಾಚಾರವನ್ನೆಲ್ಲ 2015 ರ ವಿಶ್ವಕಪ್ ನಲ್ಲಿ ಮೈಕಲ್ ಕ್ಲಾರ್ಕ್ ಹಾಗು ಆತನ ಪಡೆ ಪಡೆ ಸುಳ್ಳಾಹಿಸಿತು. ತಂಡದ ಆಟಗಾರ ಮದ್ಯೆ, ತಂಡ ಹಾಗು ಮಂಡಳಿಯ ಮದ್ಯೆ ತಿಳಿಯಾದ ಸಂಬಧವಿದ್ದರೆ ಜಗತ್ತನ್ನು ಗೆಲ್ಲಲು ಮೀಸೆ ಚಿಗುರದ ಹುಡುಗರೂ ಸಾಕು ಎಂಬುದನ್ನು ಅದು ಸಾಧಿಸಿ ತೋರಿಸಿತು. ಈ ನಿಟ್ಟಿನಲ್ಲಿ ವಿಂಡೀಸ್ ನ ಆಟಗಾರರು ಹಾಗು ಮಂಡಳಿ ಇಬ್ಬರಿಗೂ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸೂಕ್ತ ಸಮಯ. ಕಾಲ ಕೈ ಜಾರುವ ಮುನ್ನ ಹೆಚ್ಚೆತ್ತುಕೊಳ್ಳಲು ಇನ್ನು ಸಮಯವಿದೆ.

ಇಂದು ಕ್ರಿಕೆಟ್ ಎಂದರೆ ಹಣ, ಹಣವೆಂದರೆ ಕ್ರಿಕೆಟ್ ನಂತಾಗಿರುವ ಕಾಲದಲ್ಲಿ ದೇಶದ ಕೀರ್ತಿಯ ಜವಾಬ್ದಾರಿಯನ್ನು ಹೊತ್ತು ಆಡುವ ಆಟಗಾರರು ವಿರಳವಾಗುತ್ತಿದ್ದಾರೆ. ಈ ವಿರಳತೆ ತಂಡ, ಮಂಡಳಿ ಹಾಗು ದೇಶವನ್ನೇ ಹಿಂಬದಿಗೆ ತಳ್ಳುತ್ತಿದೆ ಎಂಬುದು ಸುಳ್ಳಲ್ಲ. ಇವರುಗಳ ಕಚ್ಚಾಟ ಹಾಗು ಕೆಸರಾಟದಲ್ಲಿ ದೇಶದ ಕ್ರೀಡಾ ಪ್ರೇಮಿ ನಷ್ಟ ಅನುಭುವಿಸುತ್ತಿರು ವುದು ಸಹ ದಿಟ. ಮಂಡಳಿ ಹಾಗು ಆಟಗಾರರ ನಡುವಿನ ಹೊಂದಾಣಿಗೆ ಸರಿಹೊಂದದಿದ್ದಾಗ ಆಗುವ ಅನಾಹುತಕ್ಕೆ ವೆಸ್ಟ್ ಇಂಡೀಸ್ ಒಂದು ಜ್ವಲಂತ ಉದಾಹರಣೆಯಷ್ಟೇ. ಕೊಂಚವೂ ದಾರಾಳವಾಗದ ಮಂಡಳಿ ಹಾಗು ಹಣವನ್ನೇ ಆಟವೆಂದು ಪರಿಗಣಿಸಿರುವ ಆಟಗಾರರು ಇವರಿಬ್ಬರನ್ನೂ ಸಮತಕ್ಕಡಿಯಲ್ಲಿ ಕೂರಿಸುವ ಕೈಗಳು ಬೇಕಾಗಿದೆ. ಮೈಕಲ್ ಹೋಲ್ಡಿಂಗ್ ನ ಮಾತುಗಳು ಮತ್ತೊಮ್ಮೆ ಆಟಗಾರರನ್ನು ಪ್ರೇರೇಪಿಸಬೇಕಿದೆ. ಗತಿಸಿಹೋದ ವಿಂಡೀಸ್ ನ ವೈಭವವನ್ನು ಮಗದೊಮ್ಮೆ ಚಿಗುರೊಡೆಸಬೇಕಿದೆ

Saturday, April 29, 2017

ನಮ್ಮೂರ ಜಾತ್ರೆ


ಕಾಲ ವಸಂತವನ್ನು ಕಳೆದು ಉರಿ ಬೇಸಿಗೆಗೆ ಒಗ್ಗತೊಡಗಿತ್ತು. ರೆನೊಲ್ಡ್ಸ್ ಹಾಗು ‘ಟಿಕ್- ಟಿಕ್ ಪೆನ್ನುಗಳೊಟ್ಟಿಗೆ ಗಾಜಿನ ದೇಹದಂತಹ ಪ್ಲಾಸ್ಟಿಕ್ನ ಪೆನ್ನುಗಳೂ ಮಕ್ಕಳ ಕೈಸೇರತೊಡಗಿದ್ದವು. TVS ಹಾಗು ಬಜಾಜ್ ಬೈಕುಗಳೊಟ್ಟಿಗೆ ಓತಿಕ್ಯಾತದ ಮುಖಕ್ಕೆ ಹೋಲುವ ಹೆಡ್ಲೈಟ್ ನ ನವ ಮಾದರಿಯ ಬೈಕುಗಳು ರಸ್ತೆಯ ಮೇಲೆ ಕಾಣತೊಡಗಿದ್ದವು. ಫೋನೆಂದರೆ ರಸ್ತೆ ಬದಿಯ ಬೋರ್ ವೆಲ್ಲಿನ ಕುತ್ತಿಗೆಯನ್ನು ಸಾಧ್ಯವಾದಷ್ಟು ಮೇಲಕ್ಕೆಳೆದು ನಿಲ್ಲಿಸಿರಿವ ಕಂಬಗಳು ಹಾಗು ಅವುಗಳ ಬುಡದಲ್ಲಿ ಶಾವಿಗೆ ಪಾಯಸದ ಶಾವಿಗೆಗಳಂತೆ ನುಲಿದುಕೊಂಡಿರುವ ರಾಶಿ ರಾಶಿ ವೈರುಗಳು ಎಂದರಿತ್ತದ್ದ ಎಷ್ಟೋ ಜನರಿಗೆ ಇವುಗಳ್ಯಾವುದರ ಕಿರಿ- ಕಿರಿ ಇಲ್ಲದೆ ಜೇಬಿನ ಒಳಗಿರಿಸಿ ಎಲ್ಲೆಂದರಲ್ಲಿಗೆ ಕೊಡೊಯ್ಯಬಲ್ಲ ಫೋನುಗಳು ಬರುತ್ತಿದೆ ಎಂದು ಕೇಳಿ ಆಶ್ಚರ್ಯ ಚಕಿತವಾಗುತ್ತಿದ್ದ ಕಾಲವದು. ಅಲ್ಲದೆ ಪ್ರಪಂಚದ ಯಾವುದೇ ಸಮಸ್ಯೆಗಳಿಗೂ ಒಂದಿಲ್ಲೊಂದು ಉತ್ತರವನ್ನು ಕೊಡಬಲ್ಲ 'ಗೂಗಲ್' ಎಂಬೊಂದು ಯಂತ್ರವಿದೆ ಎಂದರೆ ಕೇಳಿದವರು ಗಹಗಹನೇ ನಕ್ಕಿ ಹಾಗೆಂದವನನ್ನೊಮ್ಮೆ ಮೇಲಕ್ಕೂ ಕೆಳಕ್ಕೂ ಅನುಮಾನಾಸ್ಪದವಾಗಿ ನೋಡಿ ಸುಮ್ಮನಾಗಿಬಿಡುತ್ತಿದ್ದರು. ಒಟ್ಟಿನಲ್ಲಿ ಕಾಲ ವಸಂತವನ್ನು ಕಳೆದು ಉರಿ ಬೇಸಿಗೆಗೆ ಒಗ್ಗತೊಡಗಿತ್ತು.

ಅಪ್ಪ ಊರು ಬಿಟ್ಟು ಸಿಟಿ ಸೇರಿ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನದಲ್ಲಿರುವಾಗ ಸಹಜವಾಗಿಯೇ ಮಗನಿಗೆ ಹತ್ತಿರವಾದದ್ದು ಸಿಟಿಗೆ ಸಮೀಪದಲ್ಲಿದ್ದ ಅಮ್ಮನ ತವರು ಮೆನೆ. ಜೊತೆಗೆ ಅಲ್ಲಿನ ಸೀಬೆ ಹಲಸು ಹಾಗು ಕಿತ್ತಳೆ. ಪ್ರತಿ ಸೀಸನ್ ಗೆ ತಕ್ಕಂತೆ ಕರಾರುವಕ್ಕಾಗಿ ಹಾಜರಾಗುತಿದ್ದ ಈ ಹಣ್ಣುಗಳು ಮಗನನ್ನೂ ಅವುಗಳ ಆಗಮನಕ್ಕೆ ತಕ್ಕಂತೆ ಆ ಊರಿಗೆ ಬರಮಾಡಿಕೊಳ್ಳುತ್ತಿದ್ದವು. ಸೀಬೆ ಹಾಗು ಕಿತ್ತಳೆಗಳು ಮಳೆಗಾಲ ಹಾಗು ಬೇಸಿಗೆಗೊಮ್ಮೆ ಹಾಜರಾದರೆ ಹಲಸು ವರ್ಷಕೊಮ್ಮೆ ಮಾತ್ರ. ಅದೂ ಬೇಸಿಗೆ ಕಳೆದು ಮೆಳೆಗಾಲ ಶುರುವಾದ ಕೆಲ ತಿಂಗಳುಗಳ ನಡುವೆ ತನ್ನ ಕಾಲಘಟ್ಟವನ್ನು ಸೃಷ್ಟಿಸಿಕೊಂಡಿತ್ತು. ಬೇಸಿಗೆಯ ಶಾಲಾ ರಜ ದಿನಗಳೆಂದರೆ ಅಜ್ಜನ ಮನೆಯೆಂದು ಸ್ವಯಂ ಘೋಷಿಸಿಕೊಂಡಿದ್ದ ಮಗ ಮುಂದಿನ ಎರಡು ತಿಂಗಳು ಅಲ್ಲಿ ರಾಜನಂತೆ. ಬೇಸಿಗೆಯ ಹಣ್ಣುಗಳು ಮಳೆಗಾಲದ ಹಣ್ಣುಗಳಂತೆ ಎಲ್ಲೆಂದರಲ್ಲಿ ಸಮೃದ್ದವಾಗಿರದೆ ಅಲ್ಲೊಂದು ಇಲ್ಲೊಂದು ಎಂಬಂತೆ ಚದುರಿಕೊಂಡಿರುತಿದ್ದವು. ಆದರೇನಂತೆ, ಮೂರಡಿಯಂತಿದ್ದ ಮಗನ ದೇಹ ಯಾವ ಬೇಲಿಯ ಕನಿಷ್ಠ ಸಂಧಿಯನ್ನೂ ಸಲೀಸಾಗಿ ನುಸುಳಿ ಯಾರ ಮನೆಯ ತೋಟಕ್ಕಾದರೂ ಲಗ್ಗೆ ಹಿಟ್ಟುಬಿಡುತ್ತಿತ್ತು. ಹೀಗೆ ಕದ್ದು ಮುಚ್ಚಿ ತಿಂದ ಹಣ್ಣುಗಳು ಅದೆಷ್ಟೋ. ಈ ಮೂರೂ ಹಣ್ಣಿನಲ್ಲಿ ಯಾವುದೂ ಸಹ ಕದ್ದವ ಕಳ್ಳನೆಂದು ಗುರುತು ಮಾಡುವುದು ತುಸು ಕಷ್ಟವಾದರಿಂದ (ತಿಂದ ನಂತರ ಕೆಲ ಸಮಯದ ಮಟ್ಟಿಗೆ ಬರುವ ಹಣ್ಣಿನ ಘಮವನ್ನು ಹೊರತುಪಡಿಸಿ) ಇವುಗಳ ಕಳ್ಳಸಾಗಣೆ ತುಸು ಸರಳವೇ.

ಇವುಗಳೊಟ್ಟಿಗೆ ಮತ್ತೊಂದು ಹಣ್ಣಿತ್ತು. ಅದನ್ನು ತಿನ್ನಲು ಅತಿ ಇಷ್ಟ ಆದರೆ ಕದ್ದು ತಿಂದರೆ ಕಳ್ಳತನದ ಹಣೆಪಟ್ಟಿಯಿಂದ ಕಾಪಾಡಿಕೊಳ್ಳುವುದು ಬಲುಕಷ್ಟ. ಅಲ್ಲದೆ ಈ ಹಣ್ಣನು ತಿನ್ನಲು ಮನೆಯಿಂದ ತುಸು ದೂರವೂ ಹೋಗಬೇಕಿತ್ತು, ಅದೂ ಊರಿನ ಜಾತ್ರೆಗೆ ನೆಡೆದುಕೊಂಡು ಹೋಗುವ ಹಾದಿಯಲ್ಲಿ. ಆದರೆ ತೋಳಗಳ ಕಾಟ ಅಲ್ಲಿಯವರೆಗೂ ಹೋಗಲು ಬೇಕಿದ್ದ ಧೈರ್ಯವನ್ನು ಊರಿನ ಮಕ್ಕಳಿಗೆ ಅರಿಯದಂತೆಯೇ ಕಸಿದುಕೊಂಡುಬಿಟ್ಟಿತ್ತು. ಕದ್ದು ತಿಂದವ ತಾನು ಕಳ್ಳನಲ್ಲ ಎಂದು ಸುಳ್ಳಿನ ಬಾಯಿಂದ ಹೇಳಿದರೂ ಈ ಹಣ್ಣಿನ ಕಲೆ ನಾಲಿಗೆಯ ಮೇಲೆ ಸತ್ಯದ ಅಚ್ಚಿನಂತೆ ಕೂತುಬಿಡುತಿತ್ತು! ಯಸ್, ನೇರಳೆ ಹಣ್ಣು. ಭತ್ತದ ಗದ್ದೆಯ ಬದುಗಳಲ್ಲಿ ಅಥವಾ ಕಾಫೀ ತೋಟದ ಮದ್ಯೆ ಅಲ್ಲೊಂದೂ ಇಲ್ಲೊಂದೂ ಇರುತಿದ್ದ ಈ ಹಣ್ಣಿನ ಸ್ವಾದ ತಿಂದವನಿಗಷ್ಟೇ ಗೊತ್ತಿತ್ತು.

ಒಟ್ಟಿನಲ್ಲಿ ವಾರ್ಷಿಕ ರಜೆಯ ಎರಡು ತಿಂಗಳೂ ಅಜ್ಜನ ಮನೆಯಲ್ಲಿ ಚಿಂದಿ ಊಡಹಿಸುವ ಸಂಭ್ರಮಕ್ಕೆ ನೇರಳೆ ಹಣ್ಣಿನ ಆಸೆಯೂ ಕಾರಣವಾಗಿತ್ತು. ಆದರೆ ಈ ಹಣ್ಣನು ತಿನ್ನಲು ಎದುರಾಗುತ್ತಿದ್ದ ದ್ವಂದ್ವದ ಸ್ಥಿತಿ ಮಾತ್ರ ಅನುಭವಿಸಿದ ಚಡ್ಡಿ ಚಿಕ್ಕಣ್ಣಗಳಿಗಷ್ಟೇ ಗೊತ್ತು. ವಿಷಯವಿಷ್ಟೇ. ಜಾತ್ರೆ ಗೊತ್ತಾದ ಸುಮಾರು ಒಂದು ತಿಂಗಳ ಮೊದಲೇ ಹಳ್ಳಿಯ ಮನೆಗಳ ಪ್ರತಿ ವಸ್ತುವನ್ನೂ ಶುಚಿಮಾಡಿ ಹಾಗು ಹದಿನೈದು ದಿನದ ಮೊದಲು 'ಚೌತ' ಎಂಬ ನಿಯಮ/ವ್ರತ ಊರಿನ ಎಲ್ಲೆಲ್ಲೂ ಶುರುವಾಗುತ್ತಿತ್ತು. ಈ ಚೌತದಲ್ಲಿ ಮನೆಯವರ್ಯಾರು ಮಾಂಸಾಹಾರವಾಗಲಿ, ಅಂಗಡಿಯ ತಿಂಡಿ ತಿನಿಸುಗಳಾಗಲಿ, ತಲೆಯನ್ನು ಕ್ಷೌರ ಮಾಡಿಸಿಕೊಳ್ಳುವುದಾಗಲಿ ಕಡೆ ಪಕ್ಷ ಗಂಜಿ ಬಸಿದ ಅನ್ನವನ್ನೂ ಮಾಡುವಂತಿರಲಿಲ್ಲ (ಗಂಜಿ ಹಿಂಗಿಸಿದ ಅನ್ನವಾದರೆ ಓಕೆ). ಹೀಗೆ ಹದಿನೈದು ದಿವಸ ಯಾರು ಶ್ರದ್ದಾಭಕ್ತಿಯಿಂದ ನಿಯಮವನ್ನು ಪಾಲಿಸಿಕೊಂಡು ಇರುತ್ತಾರೋ ಅವರುಗಳು ಮಾತ್ರ ಊರಿನ ಜಾತ್ರೆಗೆ ಹೋಗಲು ಅರ್ಹರು.

ಮಕ್ಕಳಿಗಾದರೆ ದೊಡ್ಡವರೊಟ್ಟಿಗೆ ಊರ ಜಾತ್ರೆಯ ಹಾದಿಯಲ್ಲಿ ಹೋಗುವ ಅವಕಾಶ ಹಾಗು ನೇರಳೆ ಹಣ್ಣನು ಸವಿಯುವ ಭಾಗ್ಯ. ಹೀಗೆ ಹಬ್ಬದ ರಜೆಗೆ ಅಜ್ಜನ ಮನೆಗೆ ಬಂದು ಹದಿನೈದು ದಿವಸ ಅಂಗಡಿಯ ತಿಂಡಿಗಳೊಟ್ಟಿಗೆ ತಾತ್ಕಾಲಿಕ ವಿಚ್ಛೇದನವೋ ಅಥವಾ ಒಂದು ದಿವಸ ನೇರಳೆ ಹಣ್ಣನ್ನು ಸವಿಯುವ ಮಜವೋ ಎಂಬ ಸಂಕಷ್ಟದಲ್ಲಿ ಮಗ ಆರಿಸಿಕೊಳ್ಳುತಿದ್ದದು ಕೊನೆಗೆ ಊರ ಜಾತ್ರೆಯ ಚೌತವನ್ನೇ.

ಹೀಗೆ ಚೌತವೆಂಬ ವ್ರತಕ್ಕೆ ಸೇರಿ ‘ಛೆ! ಒಂದು ಪೆಪ್ಪೆರ್ಮೆಂಟಿನ ಗಾತ್ರಕ್ಕಿಂತಲೂ ಸಣ್ಣದಾದಾ ಹಣ್ಣನು ತಿನ್ನುವ ಆಸೆಯಲ್ಲಿ ಅಂಗಡಿ ತಿಂಡಿಗಳನ್ನು ಸವಿಯುವ ಸುಖವೇ ಇಲ್ಲವಾಹಿತೆ ಎಂದು ಮರುಗಿ ಧುಗುಡವೊಂದು ಮಗನ ಮನದೊಳಗೆ ಮನೆಮಾಡುತಿತ್ತು. ಆಗ ಸೋತು ಬಿದ್ದ ಮೊಗವನ್ನು ಕಂಡು ಅಜ್ಜಿ, ಸಂಜೆಯ ವೇಳೆಗೆ ಮನೆಯ ಹಿಂಬದಿಯ ಗೋಣಿಮರದ ಮೇಲೆ ಹಬ್ಬಿಕೊಂಡಿದ್ದ ವೀಳೇದೆಲೆಯ ಬಳ್ಳಿಯಿಂದ ಒಂದು ಎಲೆಯನ್ನು ಕಿತ್ತು ತಂದು ಅದರ ಮೇಲೆಲ್ಲಾ ಸಣ್ಣ ಸಣ್ಣ ತೂತುಗಳನ್ನು ಮಾಡಿ, ಒಲೆಯ ಮುಂದೆ ಮುದುಡಿ ಕೂತಿದ್ದ ಮೊಮ್ಮಗನ ಬಳಿಗೆ ಬಂದು, ಕೈಯಲ್ಲಿ ಹಿಡಿದ ಎಲೆಯನ್ನು ತಲೆಯಿಂದ ಪಾದದವರೆಗೂ ನೀಳಿಸುತ್ತಾ 'ಹೋದೋರ್ ಕಣ್ಣ್ , ಬಂದೋರ್ ಕಣ್ಣ್, ,' ಎಂದು ಶುರುಮಾಡಿದರೆ ಅದು 'ನರಿ ಕಣ್ಣ್ , ಕೋಳಿ ಕಣ್ಣ್' ಎಂದು ಪ್ರಾಣಿಗಳವೆರೆಗೂ ಬಂದು ನಿಲ್ಲುತಿತ್ತು. ಮಜವೆನ್ನಿಸುತಿದ್ದದ್ದು ಮಾತ್ರ ಆಕೆ ಅದ್ಯಾವ ಯಾವ ಕಣ್ಣುಗಳ ದೃಷ್ಟಿ ತೆಗೆಯುತ್ತಾಳೆ ಎಂಬ ಕುತೂಹಲದಲ್ಲೇ. ಅಲ್ಲದೆ ಮೊಮ್ಮಗನೂ ಸಹ ಮದ್ಯದಲ್ಲಿ ತನ್ನ ಇಚ್ಛೆಯ ಇಂಗಿತವನ್ನು ವ್ಯಕ್ತಪಡಿಸಿ 'ಗಿರೀಶನ ಕಣ್ಣ್, ಕಾರ್ತಿಕನ ಕಣ್ಣ್ , ಸಂದೀಪನ ಕಣ್ಣ್' ಎಂಬ ತನ್ನ ಸ್ನೇಹಿತರ ಕಣ್ಣುಗಳನ್ನೂ ಸೇರಿಸಿ ಆಕೆಯ ಕಣ್ಣಿನ ಪದ್ಯವನ್ನು ಸಾಧ್ಯವಾದಷ್ಟು ಹಿಗ್ಗಿಸುತ್ತಿದ್ದೆ. ನಂತರ ನೀಳಿಸಿದ ಎಲೆಯನ್ನು ಒಲೆಯ ಕೆಂಡದ ಮೇಲೆ ಹಾಕಿ ಅದು ಚಟ ಪಟನೆ ಸುಟ್ಟು ಸದ್ದುಮಾಡುತ್ತಿದ್ದಾಗ ಅಜ್ಜಿ ತನ್ನ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾ 'ಎಷ್ಟ್ ಕಣ್ಣ್ ಬಿದ್ದಿದಾವೆ ನೋಡು' ಎನ್ನುತ ಸುಟ್ಟು ಕರಕಲಾದ ಎಲೆಯ ಅಸ್ತಿಯ ತುದಿಯ ಕಪ್ಪು ಮಸಿಯನ್ನು ಒತ್ತಿ ಮೊಮ್ಮಗನ ಹಣೆಯ ಹಾಗು ಕಾಲಿನ ಪಾದದ ಮೇಲೂ ಒಂದೊಂದು ಚುಕ್ಕೆಯನ್ನು ಹಿಡುತಿದ್ದಳು. ಅದು ಹೆಗಲೇರಿದ ದೃಷ್ಟಿ ಕೆಳಗೆ ಬಿದ್ದ ಕಾರಣವೋ ಅಥವಾ ಆಕೆಯ ಪದ್ಯದ ಖುಷಿಯೋ ಏನೋ ಮಂದಹಾಸವೊಂದು ಮೊಮ್ಮಗನ ಮುಖದ ಮೇಲೆ ಮೂಡುತಿತ್ತು. ಹೀಗೆ ಹದಿನೈದು ದಿನಗಳಲ್ಲಿ ನನಗಾಗಿ ಕನಿಷ್ಠಪಕ್ಷ ಏಳೆಂಟು ವೀಳೇದೆಲೆಗಳ ದೇಹತ್ಯಾಗವಾದರೂ ಮೊಮ್ಮಗನಿಗಾಗಿ ಆಗುತ್ತಿತ್ತು. ಹೀಗೆ ಅಂಗಡಿ ತಿಂಡಿಗಳ ಪೋಷಣೆ ಇಲ್ಲದೆ ಕಷ್ಟಪಟ್ಟು ತಳ್ಳುತ್ತಿದ್ದ ದಿನಗಳಲ್ಲಿ ಕೊನೆಕೊನೆಗೆ ಕುಂತರೆ, ನಿಂತರೆ, ಅಲ್ಲದೆ ಮಲಗಿದರೆ ಕನಸ್ಸಿನಲ್ಲಿಯೂ ಸಹ ತಿಂಡಿಗಳೇ ಕಾಣುವಂತಾದ ಮೇಲೆ ಒಮ್ಮೊಮ್ಮೆ ಆದದ್ದು ಆಗಲಿ ಅಜ್ಜನ ಖಾಕಿ ಚಡ್ಡಿಯ ಜೇಬಿನಿಂದ ಚಿಲ್ಲರೆಯನ್ನು ಲಪಟಾಯಿಸಿ ಶುಂಠಿ ಪೆಪೆರ್ಮೆನ್ಟ್, ಬಾದಾಮಿ ಚಾಕಲೇಟು ಹಾಗು ಬಿಗ್ ಬಬೂಲ್ ಚೀವಿಂಗ್ ಗಮ್ ಗಳನ್ನು ಒಂದೇ ಬಾರಿಗೆ ಬಾಯಿಯೊಳಗೆ ತೂರಿಕೊಂಡು ನುಂಗಿಬಿಡಬೇಕೆಂಬ ಆರ್ತನಾದ ಒಳಗೊಳಗೇ ಮೂಡುತಿದ್ದರೂ 'ಅಂಗಡಿ ತಿಂಡಿ ತಿಂದು ಜಾತ್ರೆಗೆ ಬಂದ್ರೆ ದೇವಸ್ಥಾನದ ಜೇನುಗಳು ಅಟ್ಟಾಡಿಸ್ಕೊಂಡು ಕಚ್ಚುತ್ತವೆ' ಎಂಬ ಭಯಹುಟ್ಟಿಸುವ ಮಾತುಗಳನ್ನು ಕೇಳಿ ಅಂಗಡಿಗೆ ಹೋಗಬೇಕೋ ಅಥವಾ ತೆಪ್ಪಗೆ ಮನೆಯ ಊಟವನ್ನು ತಿಂದು ಇರಬೇಕೋ ಎಂಬ ಪೀಕಲಾಟ ಶುರುವಾಗುತ್ತಿತ್ತು. ಅಂತೂ ಇಂತೂ ದಿನಗಳು ಯುಗಗಳಂತೆ ಕಳೆದು ಹದಿನೈದು ದಿನದ ಚೌತ ಮುಗಿದು ಜಾತ್ರೆಯ ದಿನ ಬಂದೆ ಬಿಡುತಿತ್ತು. ರಾವಣನ ಕಠೋರ ತಪಸ್ಸಿಗೆ ಶಿವ ಪ್ರತ್ಯಕ್ಷನಾದದಂತೆ.

ಜಾತ್ರೆಯ ದಿನದಂದು ಪ್ಯಾಂಟು ಶರ್ಟು ಧರಿಸಿದ ಗಂಡಸರು ಉಸ್ತುವಾರಿಯನ್ನು ನೋಡಿಕೊಳ್ಳಲು ಬೇಗನೆ ಮನೆಯಿಂದ ಹೊರಟರೆ ಅವರ ಮಕ್ಕಳು ಚಡ್ಡಿಯನ್ನು ಹಾಗು ಅಪ್ಪಂದಿರು ಪಂಚೆಯನ್ನು ಉಟ್ಟು ಸೂರ್ಯ ಆಳೆತ್ತರಕ್ಕೆ ಬಂದ ಮೇಲೆ ಹೊರಡುತ್ತಿದ್ದರು. ಅಜ್ಜಂದಿರೊಟ್ಟಿಗೆ ಹೋದರೆ ನೇರಳೆಹಣ್ಣನ್ನು ಕಿತ್ತು ಕೊಡುವುದಲ್ಲದೆ ಸಾವಕಾಶವಾಗಿ ಹೊಟ್ಟೆ ಬಿರಿಯುವಂತೆ ತಿನ್ನಲು ಅನುವು ಮಾಡಿಕೊಡುತಿದ್ದರು ಎಂಬುದು ಮಕ್ಕಳು ಗಳಿಕೊಂಡಿದ್ದ ತರ್ಕ. ಎಲ್ಲರು ಹೊರಟ ಮೇಲೆ ಕೊನೆಯದಾಗಿ ಊರ ಹುಡುಗಿಯರು, ಹೆಂಗಸರು ಹಾಗು ಅಜ್ಜಿಯಂದಿರು ಓಟ್ಟಾಗಿ ಗುಸು ಗುಸು ಗುಡುತ್ತಾ ದಾರಿಯಲ್ಲಿ ಸಿಗುವ ಮನೆಗಳ ಮುಂದೆ ಅರಳಿರುವ ವಿಧ ವಿಧವಾದ ಹೂವುಗಳನ್ನು ಕೂಯ್ದು ತಲೆಗೆ ಮುಡಿದುಕೊಳ್ಳುತ್ತಾ, ಹಾದಿಯಲ್ಲಿ ಅವರಿಗಾಗೇ ಕಾಯುತ್ತಿದ್ದ ಇತರ ಹೆಂಗಸರನ್ನೂ ತಮ್ಮ ಗುಂಪಿನೊಳಗೆ ಸೇರಿಸಿಕೊಂಡು ಸಾಗುತಿದ್ದರು. ಇತ್ತ ಕಡೆ ಅಪ್ಪಂದಿರು ಹೋದ ನಂತರ ಅಜ್ಜಂದಿರೊಟ್ಟಿಗೆ ಹೊರಟ ಮೊಮ್ಮಕಳ ಪಡೆ ಅಕ್ಷರ ಸಹ ವಾನರರಂತೆ ಕುಣಿಯುತ್ತಾ, ಕೂಗುತ್ತ, ಹೊಟ್ಟೆಗೆ ವಾರದಿಂದ ಹಿಟ್ಟೇ ಸಿಕ್ಕಿಲ್ಲವೇನೋ ಎಂಬಂತೆ ನೇರಳೆ ಮರದ ರೆಂಬೆ ಕೊಂಬೆ ಗಳಲ್ಲಿ ಜೋತುಬಿದ್ದು ಹಣ್ಣು, ಕಾಯಿ ಎನ್ನದೆ ಸಿಕ್ಕ ಸಿಕ್ಕ ಗೊಂಚಲನ್ನು ಹಾಗೆಯೆ ಬಾಯಿಯ ಒಳಗೆ ಗಿಡುಗಿಕೊಂಡುಬಿಡುತ್ತಿದ್ದರು. ಹತ್ತಾರು ಹಣ್ಣಿನ ರಸ ಒಮ್ಮೆಲೇ ಬಾಯೊಳಗೆ ಕರಗಿ ಗಂಟಲಿನ ಒಳಗೆ ಇಳಿದರೆ, ಆಹಾ..! ಎಂದನಿಸಿ ಹಾಗೆಯೆ ಕಣ್ಣು ಮುಚ್ಚಿಕೊಂಡು ಕೆಲ ಕ್ಷಣ ತಮ್ಮನ್ನೇ ತಾವು ಮರೆತುಬಿಡುತ್ತಿದ್ದರು. 'ಕಸ-ಕಡ್ಡಿ, ಉಳ-ಗಿಳ ನೋಡ್ಕಂಡ್ ತಿನ್ನಿ' ಎಂದನ್ನುತಿದ್ದ ಅಜ್ಜನ ಮಾತಿಗೆ ಬೆಲೆಕೊಟ್ಟು ನಂತರದ ಗೊಂಚಲನ್ನು ಬಾಯಿಯ ಒಳಗೆ ಹಾಕಿಕೊಳ್ಳುವ ಮೊದಲು ಕಾಟಾಚಾರಕ್ಕೊಮ್ಮೆ 'ಊಫ್' ಎಂದರೆ ಬಾಯೊಳಗಿದ್ದ ಮೊದಲಿನ ಗೊಂಚಲಿನ ಹಣ್ಣಿನ ಬೀಜಗಳು ಪಟಪಟನೆ ಹೊರಗೆ ಉದುರುತಿದ್ದವು. ಅಷ್ಟರಲ್ಲಿ ಊರ ಹೆಂಗಳೆಯರ ಗುಂಪು ಮಕ್ಕಳಿದ್ದ ಸ್ಥಳದಲ್ಲಿಗೆ ಬಂದು ಕಡುನೀಲಿಯ ನಾಲಗೆ ಹಾಗು ಕಲೆ ಕಲೆಯಾದ ಬಟ್ಟೆಯನ್ನು ಕಂಡು ಕೆಂಡಾಮಂಡಲವಾಗಿ ಕೈಗೆ ಸಿಕ್ಕ ಕೋಲು ತಡಿಕೆಯನ್ನು ಅವರವರ ಮಕ್ಕಳ ಮೇಲೆ ಬೀಸತೊಡಗಿದರೆ ಮಕ್ಕಳು ಇದ್ದೆನೋ ಬಿದ್ದೆನೋ ಎಂಬಂತೆ ಮರದದಿಂದ ಜಿಗಿದು ಓಡುತಿದ್ದರು. ಅಂತೂ ದಾರಿಯ ನೇರಳೆ ಹಣ್ಣುಗಳ ಸೇವನೆಯ ನಂತರ ಬಹು ನಿರೀಕ್ಷಿತ ಜಾತ್ರೆ ಬಂದೆ ಬಿಡುತಿತ್ತು. ಅಲ್ಲಿಯವರೆಗೂ ಅಜ್ಜಂದಿರ ಕೈಯನ್ನು ಹಿಡಿದು ಬರುತಿದ್ದ ಮೊಮ್ಮಕ್ಕಳು ಜಾತ್ರೆಯ ಆವರಣದೊಳಗೆ ಕಾಲಿಡುತ್ತಿದ್ದಂತೆ ಕಾಣೆಯಾಗಿಬಿಡುತಿದ್ದವು. ಕಾರಣ ಜಾತ್ರೆಗಾಗೇ ಅಜ್ಜ, ಅಜ್ಜಿ, ಅತ್ತೆ ಮಾವ ಅಲ್ಲದೆ ಜಾತ್ರೆಗೆ ಬಂದ ನೆಂಟರಿಷ್ಟರ ಮುಂದೆಲ್ಲ ಕೈ ಒಡ್ಡಿ, ಪುಸಲಾಯಿಸಿ ಕಾಸನ್ನು ಪೀಕಿ, ಜೇಬನ್ನು ತುಂಬಿಸಿಕೊಂಡು ಬಂದ ಯಶಸ್ಸನ್ನು ಜಾತ್ರೆಯೊಳಗೆ ಉಡಾಯಿಸುವ ನಶೆಯಲ್ಲಿ. ಇತ್ತ ಕಡೆಯಿಂದ ಹೊರಟು ದೇವಾಲಯದ ಸುತ್ತ ಸುತ್ತಿ ಅತ್ತ ಕಡೆಯಿಂದ ಬಂದರೆ ಜೇಬಿನಲ್ಲಿದ್ದ ದುಡ್ಡು ಮಾಯವಾಗಿ, ಹದಿನೈದು ದಿವಸಗಳ ಕಾಲ ಅನುಭವಿಸಿದ ವನವಾಸಕ್ಕೆ ಚಾಕಲೇಟು, ಐಸ್ ಕ್ರೀಮ್, ಕಬ್ಬಿನ ಹಾಲು, ಬೋಂಡಾ ಪಕೋಡಗಳ ಮಿಶ್ರಣ ಹೊಟ್ಟೆಯೊಳಗಿನ ನೇರಳೆ ಹಣ್ಣಿನ ಪದರದ ಮೇಲೆ ಕೂತು ಗರಗುಡುವ ತೇಗು ಒಂದೆರೆಡು ಬಾರಿ ಬರುತ್ತಿತ್ತು.

ತುಸು ಸಮಯದ ನಂತರ ಅತಂತ್ರವಾಗಿ ಅಲೆಯುತ್ತಾ ಪ್ಲಾಸ್ಟಿಕ್ ಗೊಂಬೆಗಳು,ಪೀಪಿಗಳು ಹಾಗು ಕಂಪನಿಗಳೇ ನಾಚಿ ನೀರಾಗುವಂತ ಏರೋಪ್ಲೇನ್ ಹಾಗು ಹೆಲಿಕ್ಯಾಪ್ಟಾರ್ ಗಳನ್ನು ನೋಡಿ, ಕೆಲ ನಿಮಿಷಗಳ ಹಿಂದಷ್ಟೇ ಇದ್ದ ದುಡ್ಡನ್ನು ಎದ್ವಾ-ತದ್ವಾ ತಿಂದು ಖರ್ಚು ಮಾಡಿದಕ್ಕಾಗಿ ಕೊಂಚ ಪಶ್ಚಾತಾಪ ಪಟ್ಟು, ತಕ್ಷಣ ಅಜ್ಜನ ನೆನಪಾಗಿ, ಆ ಸಾವಿರ ಜನರ ಮದ್ಯೆ ಅಲೆಮಾರಿಯಂತೆ ಹುಡುಕಿ ಕೊನೆಗೆ ಬಿಳಿ ಪಂಚೆಯುಟ್ಟು, ಮೋಟು ಬೀಡಿಯನ್ನು ಎಳೆಯುತಿದ್ದ ಅಜ್ಜಂದಿರ ಗುಂಪಿನೊಳಗೆ ನುಗ್ಗಿ ಮೊದಲ ಬಾರಿಗೆ ಅಜ್ಜನನ್ನು ನೋಡುತ್ತಿರುವೆನೇನೋ ಎಂಬಂತೆ ಅವರ ಕಾಲಿನ ಬಳಿ ನಾಯಿಮರಿಗಳು ತಮ್ಮ ಮಾಲೀಕನ ಕಾಲಿಗೆ ಬೆನ್ನು ಉಜ್ಜುವಂತೆ ನುಲಿಯುತ್ತ ನಿಂತರೆ ಜೇಬಿನಲ್ಲಿದ್ದ ದುಡ್ಡನ್ನು ಗುಳುಂ ಮಾಡಿಹಾಗಿದೆ ಎಂಬ ಸೂಚನೆ ಅಜ್ಜನಿಗೆ ರವಾನೆಯಾಗಿಬಿಡುತ್ತಿತ್ತು. ಆದರೂ ಅವರು ತಮಗೇನು ತಿಳಿಯದೆಂಬಂತೆ 'ಇವತ್ತು ಗ್ಯಾರಂಟಿ ಮಳೆಯಾಗುತ್ತೆ.. ಊರ್ ಜಾತ್ರೆ ಅಂದ್ರೆ ಸುಮ್ನೇನಾ' ಎಂದು ಜಾತ್ರೆಯ ಬಗ್ಗೆ ಹಾಗು ದೇವರ ಬಗ್ಗೆ ಅಧಮ್ಯ ಭಕ್ತಿಯಿದ್ದ ಯಾರೋ ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದರು. ಮೊಮ್ಮಗ ಸಾಧ್ಯವಾದಷ್ಟು ಅಜ್ಜನ ಪ್ರದಕ್ಷಿಣೆ ಮಾಡಿದ ಮೇಲೆ ಅತಿ ಸಣ್ಣ ಧ್ವನಿಯಲ್ಲಿ 'ಅಜ್ಜಾ....' ಎಂದು ಶುರು ಮಾಡಿದರೆ 'ತೇರ್ ಎಳಿಯೋ ಟೈಮ್ ಆಯಿತು.. ಸುಮ್ನೆ ಇಲ್ಲೇ ಇದ್ರೆ ವಾಪಾಸ್ ಹೋಗಾಗ ಏನಾದ್ರು ಕೊಡುಸ್ತೀನಿ' ಎಂದು ಕೊನೆಯವರೆಗೂ ಅಜ್ಜಂದಿರ ದುಂಡುಕಲ್ಲಿನ ಸಭೆಯಲ್ಲಿಯೇ ಕೂರಬೇಕಾದ ಇಕ್ಕಟಿನ ಸ್ಥಿತಿಯಲ್ಲಿ ಮೊಮ್ಮಗನನ್ನು ಸಿಲುಕಿಸಿ ಬಿಡುತ್ತಿದ್ದರು ಅವನ ಅಜ್ಜ. ಮೊಮ್ಮಗ ಅವರುಗಳು ಎಳೆಯುವ ಮೋಟು ಬೀಡಿಯ ಕೆಂಪನೆಯ ತುದಿಯನ್ನೇ ತದೇಕಚಿತ್ತದಿಂದ ನೋಡಿ ಕುಳಿತು ಬಿಡುತ್ತಿದ್ದ, ಹತ್ತು ರೂಪಾಯಿಯ ಪ್ಲಾಸ್ಟಿಕ್ ಕಾರನ್ನು ಪಡೆಯುವ ಆಸೆಯಲ್ಲಿ.


ದೇವಾಲಯದ ಸುತ್ತಲೂ ಹತ್ತಾರು ಊರುಗಳ ಸಾವಿರಾರು ಜನರು ಸೇರಿದ್ದ ಆ ಜಾತ್ರೆಯನ್ನು ಎತ್ತರದ ಸ್ಥಳದಿಂದ ನೋಡುವ ಖುಷಿಯೇ ವಿಭಿನ್ನ. ದೇವಾಲಯದ ಒಂದು ಮೂಲೆಯಲ್ಲಿ ಕಟ್ಟಿ ನಿಲ್ಲಿಸಿದ್ದ ದೇವರ ತೇರು ಬಣ್ಣ ಬಣ್ಣದ ಹೂವು, ಕಾಗದ ಹಾಗು ಬಾಳೆಯ ಎಲೆಗಳಿಂದ ಶೃಂಗರಿಸಲ್ಪಟ್ಟಿರುತ್ತಿತು. ಅದರ ಮುಂದೆ ಊರ ಗಂಡಸರೆಲ್ಲರು ಕೋಲಾಟವಾಡಲು ಎರೆಡೆರೆಡು ಅಡಿಯ ರಾಶಿ ಕೋಲುಗಳನ್ನು ತುಂಡರಿಸಿ ಇಡಲಾಗಿರುತ್ತಿತು. ತೇರನ್ನು ಎಳೆಯಲು ಬಿಟ್ಟಿದ್ದ ದೊಡ್ಡ ಹಗ್ಗವನ್ನು ನೋಡಿ ತಾನೂ ಎಳೆಯಬೇಕೆಂಬ ಆಸೆ ಚಿಗುರೊಡೆದರೂ, ‘ನಾಟ್-ಎಲಿಜಿಬಲ್ ಹಿರಿಯರ ಕೆಟಗೆರಿ’ಯ ಒಳಗೆ ಮಕ್ಕಳನ್ನೂ ಸೇರಿಸಲಾಗಿದ್ದರಿಂದ ನಿಯಮಗಳ ಪ್ರಕಾರ ಮಕ್ಕಳು ಆ ಕಾರ್ಯಕ್ಕೆ ಅನರ್ಹರಾಗಿದ್ದವು.ಆದರೂ ಒಂದೆರೆಡು ಮಕ್ಕಳು ಮಾತ್ರ ಚಡ್ಡಿ ಜಾರಿದರೂ ಸರಿಯೇ ನಾವು ಎಳೆದು ತೋರಿಸುವೆವೆಂದು ಎದೆಯುಬ್ಬಿಸಿಕೊಂಡು ಹೋಗಿ ತೇರಿನ ಗಾಲಿ ಒಂದೆರೆಡು ಸುತ್ತು ಸುತ್ತುವುದರೊಳಗೆ ಎಳೆತದ ರಭಸಕ್ಕೆ ದೊಡ್ಡ ಪಾದಗಳ ಕೆಳಗೆ ಸಿಕ್ಕಿ ಅಪ್ಪಚ್ಚಿ ಆಗುವ ಮೊದಲೇ ಇದ್ದೆನೋ ಬಿದ್ದೆನೋ ಎಂದು ನುಸುಳಿ ಹೊರಬಂದುಬಿಡುತ್ತಿದ್ದರು.

ಹಳೆಕಾಲದ ಹಂಚಿನ ಮನೆಯಂತ್ತಿದ್ದ ಆ ದೇವಾಲಯದ ಒಳಗೆ ಬಲಕ್ಕೂ ಹಾಗು ಎಡಕ್ಕೂ ದೇವರುಗಳ ವಿಗ್ರಹಗಳು. ಹೆಚ್ಚಿನದವು ಈಶ್ವರನ ನಾಮಾಂಕಿತದ ದೇವರುಗಳೇ ಎಂಬ ನೆನಪು. ಈ ಊರು ಸಿಟಿಯಿಂದ ಹೆಚ್ಚೇನೂ ದೂರದಲ್ಲಿಲ್ಲದಿದ್ದರೂ ಸಿಟಿಯಲ್ಲಿರದ ಜಾತೀಯತೆ ಇಲ್ಲಿ ಮಾತ್ರ ಎದ್ದು ಕಾಣುತಿತ್ತು. ಗೌಡ, ಶೆಟ್ಟಿ, ಆಚಾರಿಗಳ ಮನೆ ಒಂದೆಡೆಯಾದರೆ ಹರಿಜನರ ಕೇರಿ ಮೂರ್ನಾಲ್ಕು ಕಿಲೋಮೀಟರ್ನ ಆಚೆ. ಆದರೆ ಗೌಡರ ಮನೆಯ ಕಾಫಿ ತೋಟದ ಚಿಗುರು ತೆಗೆಯುವುದು, ಗಿಡಗಳ ಬಡ್ಡೆ ಬಿಡಿಸಿ ಗೊಬ್ಬರ ಹಾಕುವುದು, ಹಣ್ಣು ಕುಯ್ಯುವುದು ಅಲ್ಲದೆ ಗದ್ದೆ ಕೆಲಸದ ನಾಟಿ, ಕುಯ್ಲು ಹಾಗು ಒಕ್ಕಲಾಟದ ಸಮಯಕ್ಕೂ ಹರಿಜನರ ನಿಂಗಿ, ಸಿದ್ದ, ಕೆಂಚ ಎನ್ನುವ ಎರಡಕ್ಷರದ ಮಾನವರೇ ಯಂತ್ರಗಳು. ಬೆಳಗಿನ ಜಾವ ಏಳಕ್ಕೆ ಸರಿಯಾಗಿ ಬಂದು ಅಕ್ಕಿ ರೊಟ್ಟಿ ಹಾಗು ಯಾವುದೊ ಒಂದು ಸಾರನ್ನು ಗಂಗಾಳದಲ್ಲಿ (ಅವರಿಗಾಗೇ ಮನೆಯೋರಗೆ ಒಂದು ಜೊತೆ ಇರುತ್ತಿದ್ದ ಗಂಗಾಳ ಹಾಗು ಲೋಟದಲ್ಲಿ ) ಹಾಕಿ ತರುತ್ತಿದ್ದ ಮನೆಯ ಅಮ್ಮನಿಂದ ಕಾಫಿಯನ್ನು ಕೇಳಿ ಕುಡಿದು, ವೀಳೇದೆಲೆ, ಅಡಿಕೆ, ಸುಣ್ಣ ಹಾಗು ಕಡ್ಡಿಪುಡಿಯನ್ನು ಬಾಯಿಗೆ ಹಾಕಿಕೊಂಡು ತೋಟ ಅಥವಾ ಗದ್ದೆಯ ಒಳಗೆ ಒಕ್ಕರೆ ಜೀವ ಪಣವಿಟ್ಟು ಗೇಯುತಿದ್ದರು, 'ಅಯ್ಯರ್ ಮನೆ ಚೆನ್ನಾಗಿದ್ರೆ ನಾವೂ ವೈನಾಗಿರ್ತಿವಿ' ಎಂದು ಹೇಳುತ್ತಾ. ಆದರೆ ಊರ ಜಾತ್ರೆಯಲ್ಲಿ ದೇವರ ಪೂಜೆ ಹಾಗು ಹಣ್ಣುಕಾಯಿಯ ಜವಾಬ್ದಾರಿ ಮಾತ್ರ ಹರಿಜನರದ್ದೇ. ಎಲ್ಲ ಜಾತಿಯ ಜನರು ತಂದು ಕೊಡುತ್ತಿದ್ದ ಹಣ್ಣು ಕಾಯಿಯನ್ನು ಹರಿಜನ ಪೂಜಾರಿಯೇ ತೆಗೆದುಕೊಂಡು, ಪೂಜೆ ಹಾಗು ಮಂಗಳಾರತಿಯನ್ನು ಮಾಡಿ ತೀರ್ಥವನ್ನು ಕೊಡುತ್ತಿದ್ದರು. ಎಲ್ಲರೂ ಧನ್ಯತೆಯಿಂದ ದೇವರ ಮುಂದೆ ಕೈಮುಗಿದು ತಲೆಬಾಗುತ್ತಿದ್ದರು.

ಇತ್ತಕಡೆ ಹರಿಜನರ ಕೇರಿಯಿಂದ ಬೂತಪ್ಪನ ಅಡ್ಡೆ ತಳಿರು ತೋರಣಗಳಿಂದ ಶೃಂಗಾರಗೊಂಡು ನಾಲ್ಕು ಜನರ ಹೆಗಲೇರಿ ನೆಡೆದರೆ ಅದರ ಮುಂದೆ ಡೊಳ್ಳು, ತಮಟೆ ಹಾಗು ತುತ್ತೂರಿಗಳ ಸದ್ದು ಜೊತೆಗೆ ಮಕ್ಕಳ ಕುಣಿತ. ವಯಸ್ಸು ಇನ್ನೂ ಹತ್ತು ದಾಟದಿದ್ದರೂ ತಮಟೆಯ ಸದ್ದಿಗೆ ಹಳ್ಳಿಯ ಮಟ್ಟಿಗೆ ಮೈಕಲ್ ಜ್ಯಾಕ್ಸನ್ ಅಂತೆಯೇ ಕುಣಿಯುವ ಮಕ್ಕಳನ್ನು ಅಜ್ಜನ ಪಂಜೆಯ ಹಿಂದೆ ಸರಿದು ಕದ್ದು ಮುಚ್ಚಿ ನೋಡುತಿದ್ದ ಮೊಮ್ಮಕಳಿಗೆ ನಾಚಿಕೆಯಾದಂತಾಗಿ ತಲೆ ತಗ್ಗುತ್ತಿತ್ತು. 'ನೋಡ್ರ ಹೆಂಗ್ ಕುಣಿತವೇ ಆ ಹುಡುಗ್ರು.. ನೀವು ಇದ್ದೀರಾ' ಎಂದ ಮತ್ತೊಬ್ಬ ಅಜ್ಜನನ್ನು ಮೊಮ್ಮಗ ಗುರಾಹಿಸಿ ಸುಮ್ಮನಾಗಿ ಬಿಡುತ್ತಿದ್ದ. ಆದರೂ ಒಳಗೊಳಗೇ ಅನ್ಯಾಯವಾಗಿ ಎಲ್ಲರ ಮುಂದೆ ಹೀರೋಗಿರಿಯ ಪಟ್ಟವನ್ನು ಅಲಂಕರಿಕೊಂಡ ಆ ಹುಡುಗರ ವಿರುದ್ಧವಾಗಿ ಎದ್ದ ಕಿಚ್ಚು ಮಾತ್ರ ಕಡಿಮೆಯಾಗುತ್ತಿರಲಿಲ್ಲ. ಬೂತಪ್ಪನ ಅಡ್ಡೆ ಕುಣಿಯುತ್ತಾ, ವಾಲುತ್ತಾ ದೇವಸ್ಥಾನದ ಮುಂಬದಿಗೆ ಬಂದು ಒಳಗಿರುವ ದೇವನಿಗೆ ನಮನ ಸಲ್ಲಿಸುವಂತೆ ಮೇಲಿಂದ ಕೆಳಕ್ಕೂ, ಕೆಳಗಿನಿಂದ ಮೇಲಕ್ಕೂ ತೂಗಿ ದೇವಸ್ಥಾನದ ಬಲದಿಂದ ಎಡಕ್ಕೆ ಮೂರು ಸುತ್ತುಗಳನ್ನು ಸುತ್ತಿ ಅದಕ್ಕಾಗೇ ಮಾಡಿದ ಮಂಟಪದಲ್ಲಿ ಕೂತುಬಿಡುತ್ತಿತ್ತು. ನೆರೆದವರೆಲ್ಲರೂ ಬೂತಪ್ಪನಿಗೂ ತಂದಿದ್ದ ಹಣ್ಣು ಕಾಯಿಯನ್ನು ಕೊಟ್ಟು ಪೂಜೆ ಮಾಡಿಸಿ ತಮ್ಮ ತಮ್ಮ ಸ್ಥಳಕ್ಕೆ ಬಂದು ಕೂತುಬಿಡುತ್ತಿದ್ದರು. ಅಷ್ಟರಲ್ಲಿ ಬೂತದ ಅಡ್ಡೆಯ ಪೂಜೆಯನ್ನು ಮಾಡುತ್ತಿದ್ದ ಪೂಜಾರಿ ಬಾಳೆಹಣ್ಣಿನ ಮೇಲೆ ಚುಚ್ಚಿದ ಗಂಧದ ಕಡ್ಡಿಯನ್ನು ಕಿತ್ತು ಅಡ್ಡೆಯ ಬೆಳ್ಳಿಯ ಭೂತಪ್ಪನ ಮುಖದ ಬಳಿಗೆ ತಂದು, ಭಕ್ತಿಯಿಂದ ನೀಳಿಸಿ, ಪುನ್ಹ ಮತ್ತದೇ ಬಾಳೆಹಣ್ಣುಗಳಿಗೆ ಚುಚ್ಚಿ ಪಕ್ಕದಲ್ಲಿದ್ದ ಚಾಟಿಯನು ಕೈಗೆ ತೆಗೆದುಕೊಂಡು ಅಡ್ಡೆಯ ಮುಂದೆ ನಿಲ್ಲುತ್ತಾನೆ. ನಿಂತಲ್ಲೇ ಕಾಲನ್ನು ಅದುರಿಸುತ್ತಾ ನಿಧಾನವಾಗಿ ಕಣ್ಣನು ಮುಚ್ಚುತ್ತಾನೆ. ಒಮ್ಮೆಲೇ ಬೂತಪ್ಪ ಆ ಪೂಜಾರಿಯ ಮೇಲೆ ಆಗಮನಗೊಂಡು ತನ್ನ ಕೈಯಲ್ಲಿದ್ದ ಚಾಟಿಯಿಂದ ರಪಾರನೆ ಮೈಯ ಮೇಲೆ ಹೋಡೆದುಕೊಳ್ಳುತ್ತದೆ ಹಾಗು ಒಂದೇ ಸಮನೆ ಕಿರುಚತೊಡಗುತ್ತದೆ. ಅಲ್ಲಿಯವರೆಗೂ ಮೈಕಲ್ ಜ್ಯಾಕ್ಸನ್ ರಂತೆ ಕುಣಿದು ಕುಪ್ಪಳಿಸುತ್ತಿದ್ದ ಗುಂಪು ಚಾಟಿಯ ಸದ್ದಿಗೆ ದಿಕ್ಕಾ ಪಾಲಾಗಿ ಹೆದರಿ ಓಡುವುದ ನೋಡಿ ನನಗೆ ಎಲ್ಲಿಲ್ಲದ ಸಂತೋಷ. ಹೊಟ್ಟೆಯೊಳಗಿನ ಕಿಚ್ಚಿನ ಜ್ವಾಲೆ ನಂದಿಹೋಗುತ್ತಿದ್ದ ನೆಮ್ಮದಿ. ಭೂತದ ಸದ್ದಿಗೆ ಒಂದು ನಿಮಿಷ ಸುತ್ತಲಿನ ಪರಿಸರ ತಣ್ಣಗಾಗುತ್ತದೆ. ನಂತರ ಒಬ್ಬೊರಾಗೆ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಬೂತಪ್ಪನ ಮುಂದೆ ಸಾಲಾಗಿ ನಿಂತುಕೊಳ್ಳುತ್ತಾರೆ.



ಅದು ಪೇಟೆಯ ವೈದ್ಯರು ಗುಣಪಡಿಸಲಾಗದ ಕಾಯಿಲೆಯಾಗಲಿ, ಮನೆಯ ಯಜಮಾನ ಹೆಂಡದ ಹೊಂಡಕ್ಕೆ ಬಿದ್ದು ಸಂಸಾರ ನರಕವಾದ ಗೋಳನ್ನು, ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿ ಫಸಲು ಕೈಕೊಡುವ ಆತಂಕವನ್ನು ಅಥವಾ ಮನೆಯ ಹಿರಿಯ ಮಗಳಿಗೊಂದು ತಕ್ಕ ವರ ಸಿಗದಿರುವುದನ್ನು ಊರ ಜನರು ಎಳೆ ಎಳೆಯಾಗಿ ಹೇಳುವುದನ್ನ ಗುಟುರುತ್ತಾ ಕೇಳುವ ಬೂತಪ್ಪ ಯಾವುದಾದರೊಂದು ಸಮಾಧಾನದ ಪರಿಹಾರವನ್ನು ಕರುಣಿಸಿ ಮಂತ್ರಿಸಿದ ನಿಂಬೆಹಣ್ಣನ್ನು ಕೈಗಿಡುತ್ತಿತ್ತು. ಈಗೆ ಕೊಡಲ್ಪಟ್ಟ ನಿಂಬೆಹಣ್ಣು ರೋಗವನ್ನು ವಾಸಿಪಡಿಸುವ ಔಷಧದಿಂದಿಡಿದು ಮನೆಗೆ ವರವನ್ನು ತರುವ ಜೋಯೀಸನಾಗಿಯೂ ಕಾರ್ಯ ನಿರ್ವಹಿಸುತ್ತಿತ್ತು. ಅಂತೂ ಊರ ಜನರ ಸಮಸ್ಯೆಗೆ 'ನಾನಿದ್ದೀನಿ, ಹೆದ್ರಬ್ಯಾಡ' ಎನ್ನುತ್ತಾ ಹೇಳಿ ಜನರಲ್ಲಿ ನೆಮ್ಮದಿಯ ನಿಟ್ಟುಸಿರೊಂದನ್ನು ಬಿಡಿಸುತ್ತಿದ್ದ, ಆ ಪುಟ್ಟ ಊರ ರಕ್ಷಕ ಬೂತಪ್ಪ. ಬೂತಪ್ಪ ಬರುವುದು ಹರಿಜನರ ಕೇರಿಯಿಂದ, ಆ ಕೇರಿಯ ಒಬ್ಬರನ್ನೂ ಮನೆಯ ಒಳಗೆ ಸೇರಿಸದ ನಮ್ಮವರು ಆ ದೇವರ ಮುಂದೆ ಮಾತ್ರ ಏತಕ್ಕೆ ಕೈ ಮುಗಿದು ನಡುಗುತ್ತಾ ನಿಲ್ಲುತ್ತಾರೆ ಎಂಬ ಅರೆದ್ವಂದ್ವದ ಪ್ರೆಶ್ನೆಯೊಂದು ಪ್ರತಿಬಾರಿಯೂ ಮೊಮ್ಮಗನಲ್ಲಿ ಮೂಡಿ ಮರೆಯಾಗುತ್ತಿತು.

ಊರ ಜನರೆಲ್ಲರಿಗೂ ತನ್ನ ಅಭಯದ ಹಸ್ತವಿರುವುದನ್ನು ನೆನಪಿಸಿ ಕೊನೆಗೆ ದೇವಾಲಯದ ಬಾಗಿಲ ಮುಂದೆ ಕೂಗುತ್ತಾ, ಚಾಟಿಯಲ್ಲಿ ಹೊಡೆದುಕೊಳ್ಳುತ್ತಾ ಬೂತಪ್ಪ ಹೊರಟುಬಿಡುತ್ತಿದ್ದ. ಅವನು ಹೋದ ಕೂಡಲೇ ತಮಟೆಯ ಸದ್ದುಗಳು ಮತ್ತೊಮೆ ಜೋರಾಗಿ ಮಾರ್ದನಿಸತೊಡಗಿ ಮಹಾ ಮಂಗಳಾರತಿಯಾಗುತಿತ್ತು. ತದಾನಂತರ ದೇವಾಲಯದ ಒಳಗಿರುವ ಉತ್ಸವ ಮೂರ್ತಿಯನ್ನು ಜನರು ಹೊತ್ತು ತಂದು ತೇರಿನ ಮೇಲಿ ಕೂರಿಸಿ, ಸಿಂಗರಿಸಿ, ನೂರಾರು ಕಾಯಿಗಳನ್ನು ಪಟ ಪಟನೆ ತೇರಿನ ಮುಂದೆ ಹೊಡೆದ ನಂತರ ಡೊಳ್ಳು ಮೇಳಗಳೊಟ್ಟಿಗೆ ಮೆರವಣಿಗೆ ಶುರುವಾಗಿ ಬಿಡುತ್ತಿತ್ತು. ಅಷ್ಟರಲ್ಲಿ ನಿಂತು ನಿಂತು ಸುಸ್ತಾಗಿ ಹೈರಾಣಾಗಿದ್ದ ಮೊಮ್ಮಗನನ್ನು ಅಜ್ಜ ಎತ್ತಿಕೊಂಡು ಹೆಗಲಮೇಲೆ ಕೂರಿಸಿ ದೇವರನ್ನು ನೋಡುವಂತೆ ಹೇಳುತ್ತಿದ್ದರು. ಯುವಕರೆಲ್ಲ 'ಹೈಸ, ಹೈಸ ' ಎಂದು ಏದುಸಿರಿನ ಧ್ವನಿಯಲ್ಲಿ ತಮ್ಮ ಶಕ್ತಿಯನ್ನೆಲ್ಲ ಮೀರಿ ಎಳೆಯುತಿದ್ದ ಮಕ್ಕಳ ತೊಡೆ ಗಾತ್ರದ ಹಗ್ಗವನ್ನು ಹಾಗು ಭೀಮಗಾತ್ರದ ತೇರಿನ ಗಾಲಿಗಳನ್ನೂ ನೋಡುತ್ತಾ ಮೊಮ್ಮಗ ನಿಲ್ಲುತ್ತಿದ್ದ. ತೇರು ತಮ್ಮ ಬಳಿಗೆ ಬರುವವರೆಗೂ ಕಾದು, ಅದು ಹತ್ತಿರ-ಹತ್ತಿರವಾಗುತ್ತಿದ್ದಂತೆ ಜನರೆಲ್ಲ ತಮ್ಮ ಕೈಯಲ್ಲಿದ್ದ ಮಂಡಕ್ಕಿ, ಬಾಳೆಹಣ್ಣುಗಳನ್ನು ದೇವರ ಮೂರ್ತಿಗೆ ಬೀಳುವಂತೆ ಎಸೆಯುತ್ತಿದ್ದರೆ ಅದು ಹೆಚ್ಚಾಗಿ ಹೋಗಿ ಬೀಳುತಿದ್ದದ್ದು ಮೂರ್ತಿಯ ಪಕ್ಕದ ಪೂಜಾರಿಯ ಬೆತ್ತಲೆ ಬೆನ್ನಿನ ಮೇಲೆಯೇ. ಆತ ಬಾಳೆಹಣ್ಣುಗಳಿಂದ ಅದೆಷ್ಟೇ ಏಟನ್ನು ತಿಂದರೂ ಒಂದೇ ಸಮನಾದ ಶ್ರದ್ದಾ ಭಕ್ತಿಯಿಂದ ದೇವರ ಪೂಜೆಯಲ್ಲಿ ನಿರತನಾಗಿರುತಿದ್ದ.

ತೇರು ದೇವಾಲಯವನ್ನು ಮೂರು ಸುತ್ತು ಸುತ್ತುವುದನ್ನೇ ಅಲ್ಲಿಯವರೆಗೂ ಕಾಯುತ್ತ ಕುಳಿತ್ತಿದ್ದವೇನೋ ಎಂಬಂತೆ ಮೋಡಗಳು ಒಂದರಿಂದೊಂದಂತೆ ಮೇಲೇರ ತೊಡಗುತ್ತವೆ. ಇನ್ನೇನು ದೇವರು ದೇವಾಲಯದ ಒಳಗೆ ಸೇರುತ್ತಿದೆ ಎಂಬುವುದರೊಳಗೆ ವಿಪರೀತವಾದ ಗಾಳಿಯ ಮಾರುತಗಳು ಬೀಸುತ್ತಾ ತಮ್ಮೊಟ್ಟಿಗೆ ಮಳೆಯ ಹನಿಗಳನ್ನೂ ಹೊತ್ತು ತರುತ್ತಿದ್ದವು. ನೋಡ ನೋಡುತ್ತಲೇ ಜಬಜಬನೆ ಮಳೆರಾಯ ಆಗಮಿಸಿಬಿಡುತ್ತಾನೆ. 'ನೋಡಿದ್ರ, ಆ ದ್ಯಾವ್ರು ಅಂದ್ರೆ ಸುಮ್ಕೆಯ.. ಮಳೆ ಬರುತ್ತೆ ಅಂದ್ರೆ ಬರುತ್ತೆ' ಕೊಂಚ ಸಮಯದ ಮೊದಲು ತಾನಾಡಿದ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತ ಆ ವ್ಯಕ್ತಿ, ಕಾಫಿ, ಟೀ ಹಾಗು ಬಜ್ಜಿಗಳನ್ನು ಮಾರುತಿದ್ದ ಅಂಗಡಿಯೊಳಗೆ ಓಡತೊಡಗುತ್ತಾನೆ. ಅಜ್ಜ ಮೊಮ್ಮಗನನ್ನು ಹೆಗಲಮೇಲೆ ಹೊತ್ತುಕೊಂಡು ದೇವಾಲಯದ ಒಳಗೆ ಓಡುತ್ತಿದ್ದರು. ಕನಿಷ್ಠ ಪಕ್ಷವೆಂದರೂ ಎರಡು ಘಂಟೆಗಳ ಕಾಲ ಒಂದೇ ಸಮನೆ ಸುರಿಯುತ್ತಿದ್ದ ಮಳೆಯ ರಭಸಕ್ಕೆ ಮಾರಾಟಕ್ಕಿಟ್ಟಿದ್ದ ಪುಟ್ಟ ಪುಟ್ಟ ಗೊಂಬೆಗಳೆಲ್ಲ ನೀರಿನಲ್ಲಿ ತೊಯ್ದು ಹೋಗುತ್ತಿದ್ದವು. ಸಮಯವನ್ನು ನೋಡಿ ಮತ್ತೊಮ್ಮೆ ಅಜ್ಜನಲ್ಲಿ ಆಟಿಕೆಯನ್ನು ಕೊಡಿಸಲು ಮೊಮ್ಮಗ ಕುಯ್ಗುಡುತ್ತಿದ್ದ. ಅಜ್ಜ ಸುಮ್ಮನಿರಬೇಕೆಂದೂ, ಮಳೆ ನಿಂತ ಮೇಲೆ ಗುರಿ ಹೊಡೆಯುತ್ತಾರೆಂದೂ ಹೇಳಿ ಊರಿನ ಯುವಕರು ಹೊತ್ತು ತಂದಿದ್ದ ಕೋವಿಯನ್ನು ತೋರಿಸುತ್ತಿದ್ದರು. ದೇವಾಲಯದ ಆವರಣದಲ್ಲಿ, ದೂರ ದೂರಕ್ಕೂ ಯಾವುದೇ ಊರುಗಳಿರದ ದಿಕ್ಕಿನಲ್ಲಿ ಸುಮಾರು ಹತ್ತಡಿಯ ಎರಡು ಕಂಬಗಳನ್ನು ನೆಟ್ಟು ಅವುಗಳ ನಡುವೆ ಹಗ್ಗವೊಂದನ್ನು ಕಟ್ಟಿ ಅದಕ್ಕೆ ಹಲಸು, ಚಕ್ಕೋತ, ಕುಂಬಳಕಾಯಿ ಹಾಗು ಇನ್ನಿತರೇ ಹಣ್ಣುಗಳನ್ನು ಇಳಿಬಿಡಲಾಗುತ್ತಿತ್ತು. ಆ ಕಂಬಗಳಿಂದ ಸುಮಾರು ಮೂವತ್ತರಿಂದ ನಲ್ವತ್ತು ಮೀಟರ್ ದೂರದಲ್ಲಿ ನಿಂತು ಕೋವಿಗಳಿಂದ ಆ ಹಣ್ಣುಗಳಿಗೆ ಗುರಿಯಿಟ್ಟು ಹೊಡೆಯಬೇಕಿತ್ತು. ಅದಕ್ಕಾಗೇ ಸುಮಾರು ಹತ್ತರಿಂದ ಹದಿನೈದು ಪರವಾನಿಗೆ ಪಡೆದ ಕೋವಿಗಳು ಹಾಗು ಅದರ ಮಾಲೀಕರು ತಯಾರಾಗಿರುತ್ತಿದರು. ಮಳೆ ನಿಂತು ಗುರಿಹೊಡೆಯಲು ಶುರುವಾದರೆ ಮೊಮ್ಮಗನ ಕೈಯ ಬೆರಳುಗಳು ಮಾತ್ರ ಕಿವಿಯ ಒಳಗೆ ಸೇರಿರುತ್ತಿದ್ದವು! ಪ್ರತಿ ನಿಖರವಾದ ಗುಂಡಿಗೆ ಎಲ್ಲರೂ ಚಪ್ಪಾಳೆ ಹೊಡೆಯುವುದನ್ನು ಕಂಡು ಅವುಗಳೂ ಹೊರಬಂದು ಒಂದೆರೆಡು ಚಪ್ಪಾಳೆಯನ್ನು ಬಾರಿಸಿ ನಂತರದ ಗುಂಡು ಹಾರುವ ಮೊದಲೇ ಮತ್ತದೇ ಕಿವಿಗಳನ್ನು ಸೇರಿಬಿಡುತ್ತಿದ್ದವು. ಹೀಗೆ ಸುಮಾರು ಹತ್ತಿಪ್ಪತ್ತು ಒಡೆತಗಳಲ್ಲಿ ಗುರಿಗಳು ಛಿದ್ರಗೊಂಡು ಕೆಳಗೆ ಬಿದ್ದು ಬಿಡುತ್ತಿದ್ದವು. ಅದಾದ ನಂತರ ಇತರ ದೇವರುಗಳ ಉತ್ಸವಮೂರ್ತಿಗಳನ್ನು ಹೊರತಂದು ಸಣ್ಣ ಸಣ್ಣ ಅಡ್ಡೆಯಲ್ಲಿ ಕಟ್ಟಿ (ಒಬ್ಬ ವ್ಯಕ್ತಿ ಒರುವಂತೆ) ದೇವಾಲಯದ ಸುತ್ತ ಸುತ್ತುವ ಪ್ರತೀತಿ. ಗುಂಡಿನ ಸದ್ದಿಗೆ ಕಾಣೆಯಾಗಿದ್ದ ಮೈಕಲ್ ಜಾಕ್ಸನ್ ರ ಗುಂಪು ಮತ್ತೊಮ್ಮೆ ಮೂಡುತ್ತಿದ್ದ ತಮಟೆಯ ಸದ್ದಿಗೆ ಪ್ರತ್ಯಕ್ಷವಾಗಿಬಿಡುತಿತ್ತು. ದೇವರ ಅಡ್ಡೆಗಳು ದೇವಾಲಯದ ಸುತ್ತ ಪ್ರದಕ್ಷಿಣೆ ಮುಗಿಸಿ ಅವುಗಳನ್ನು ಪುನ್ಹ ಸ್ವಸ್ಥಾನಕ್ಕೆ ಮರಳಿಸಿದ ಮೇಲೆ ಕೋಲುಗಳ ರಾಶಿಯಿಂದ ಜೋಡಿ ಕೋಲುಗಲು ಊರ ಗಂಡಸರುಗಳ ಕೈ ಸೇರುತ್ತಿದ್ದವು. ಸುಮಾರು ಇಪ್ಪತ್ತರಿಂದ ಇಪ್ಪತೈದು ಅಡಿಯ ವೃತ್ತವನ್ನು ನಿರ್ಮಿಸಿ ಅತಿ ಸರಳ ಹೆಜ್ಜೆಗಳನ್ನು ಹಾಕುತ್ತ ತಮಟೆಯ ಸದ್ದಿಗೆ ವೃತ್ತವು ನಿಧಾನವಾಗಿ ಸುತ್ತುವುದನ್ನು ನೋಡುವದೇ ಕಣ್ಣಿಗೊಂಡು ಹಬ್ಬ. ಕೊನೆಯದಾಗಿ ಎಲ್ಲ ವಾದ್ಯಗಳಿಂದ ಮೂಡುವ ಸದ್ದಿಗೆ ಗೌಡ, ಆಚಾರಿ, ಶೆಟ್ಟಿ ಎನ್ನದೆ ಹರಿಜನರೂ ಸಹ ಒಟ್ಟಾಗಿ ಕುಣಿದು ಕುಪ್ಪಳಿಸುತ್ತಿದ್ದರು.



ಹೀಗೆ ಊರ ಹಾದಿಯ ನೇರಳೆ ಮರದಿಂದ ಶುರುವಾದ ಜಾತ್ರೆಯ ಖುಷಿ ಅಜ್ಜನ ಚೆಡ್ಡಿಯ ಜೇಬಿನಿಂದ ನೋಟುಗಳ ಕಂತೆಯನ್ನು ಹೊರತೆಗೆದು ಮೊಮ್ಮಗನಿಗೊಂದು ಆಟಿಕೆಯನ್ನು ಕೊಡಿಸುವ ವರೆಗೂ ಇರುತ್ತಿತ್ತು. ಬಳಿಕ ಮುಂದಿನ ವರ್ಷದ ಜಾತ್ರೆಗೆ ಕಾಲಗಣನೆ ಆರಂಭವಾಗುತ್ತಿತ್ತು.

ಕಾಲ ಉರುಳಿದೆ. ಅಂದಿನ ಮಕ್ಕಳು ಇಂದು ಅಪ್ಪಂದಿರಾಗಿ, ಅಪ್ಪಂದಿರು ಅಜ್ಜಂದಿರಾಗಿ, ಅಜ್ಜಂದಿರು ಮರೆಯಾಗಿ ಕೇವಲ ನೆನಪಾಗಿ ಉಳಿದಿದ್ದಾರೆ. ಅವರೊಟ್ಟಿಗೆ ತಾವು ಉಳಿಸಿ ಬೆಳೆಸಿ ತಂದ ಒಂದು ಆಚರಣೆಗಳನ್ನೂ ಕೊಂಡು ಒಯ್ದಿದ್ದಾರೆ. ಆ ಊರಿನ ಇಂದಿನ ಯುವಕರಲ್ಲಿ ಬೂತಪ್ಪನ ಮೇಲಾಗಲಿ ಅಥವಾ ದೇವಾಲಯದ ದೇವರ ಮೇಲಾಗಲಿ ಇರಬೇಕಾದ ಕನಿಷ್ಠ ಭಯ ಭಕ್ತಿಯೂ ಇರದಂತಾಗಿದೆ. ಅಂದು ಹರಿಜನ ಹಾಗು ಗೌಡರ ನಡುವೆ ಅದೆಷ್ಟೇ ಜಾತೀಯತೆ ಇದ್ದರೂ ತೋಟದ ಕೆಲಸದ ನೆಪದಲ್ಲಿ, ಭತ್ತದ ಒಕ್ಕಲಾಟದ ರೂಪದಲ್ಲಾದರೂ ಎಲ್ಲರೂ ಒಂದಾಗಿರುತ್ತಿದ್ದರು. ಹರಿಜನರು ನೆಟ್ಟಿ ಬಿತ್ತಿದ ಅಕ್ಕಿಯ ಅಗಳುಗಳನ್ನೇ ಮನೆಯ ದೇವರಿಗೆ ಅರ್ಪಿಸುತಿದ್ದ ಇತರೆ ಪಂಗಡದ ಜನರ ಮನದೊಳಗೆ ಕೊಂಚವೂ ಬೇಧ ಭಾವದ ತಾರತಮ್ಯವಿತ್ತೆಂದು ಹೇಳಲಾಗುವುದಿಲ್ಲ. ಹರಿಜನರೂ ತಮ್ಮ ಒಡೆಯನಿಗೆ ಕಾಯಿಲೆ, ರೋಗ ರುಜಿನಗಳು ಬಂದರೆ ಕೂಡಲೇ ಬೂತಪ್ಪನ ಮುಂದೆ ಬಂದು ಅವನನ್ನು ಸಾಧ್ಯವಾದಷ್ಟು ಬೈದು ಬೇಗನೆ ಗುಣಮುಖ ಮಾಡಬೇಕೆಂಬ ಕೋರಿಕೆಯನ್ನು ಇಟ್ಟು ಹರಕೆಯನ್ನು ಹೊರುತ್ತಿದ್ದರು. ಊರ ಜಾತ್ರೆ ಈ ಎಲ್ಲಾ ಜನರನ್ನು ಒಂದಾಗಿಸುತ್ತಿತು. ಇಂದು ಅದೇ ದೇವಾಲಯವನ್ನು ಕೆಡವಿ ಒಂದು ನವ ದೇವಾಲಯವನ್ನು ಕಟ್ಟುವ ಆಲೋಚನೆ ಊರಿನವರಿಗೆ. ಅದಾಗಲೇ ದೇವಾಲಯವನ್ನು ಕೆಡವಿ ಹೊಸದಾದ ಗೋಡೆಗಳೂ ಮೇಲೆದ್ದಿವೆ. ಆ ಕೆಲಸಕ್ಕಾಗೇ ಅಧ್ಯಕ್ಷ ಉಪಾದ್ಯಕ್ಷರನ್ನೂ ಆರಿಸಲಾಗಿದೆ. ಈಗ ಏನಿದ್ದರೂ 'ನೀ ಅಷ್ಟು ಕೊಡು, ಅವ ಅಷ್ಟು ಕೊಡಲಿ' ಎಂಬ ಹಣದ ಮಾತುಗಳೇ ಎಲ್ಲೆಲ್ಲೂ ಹರಿದ್ದಾಡುತ್ತಿವೆ. ಅಲ್ಲದೆ ಹೊಸ ದೇವಾಲಯದ ಒಳಗಿನ ಪೂಜೆ ನಮ್ಮ ಜಾತಿಯವರೇ ಮಾಡಬೇಕೆಂಬ ವಾದಗಳೂ ಮೂಡಿ ವಿಷಯ ಕೋರ್ಟಿನ ಮೆಟ್ಟಿಲನ್ನೂ ಏರಿದೆ.. ಈ ಎಲ್ಲಾ ಬೆಳವಣಿಗೆಗಳಿಂದ ಸುಮಾರು ಏಳೆಂಟು ವರ್ಷಗಳಿಂದ ಆ ಊರಿನ ಜಾತ್ರೆ ಕೇವಲ ನೆನಪಾಗೆ ಉಳಿದಿದೆ. ಬೈಕು ಕಾರುಗಳ ಅಬ್ಬರದಲ್ಲಿ ಊರ ಜಾತ್ರೆಯ ಕಾಲು ದಾರಿಯನ್ನು ಮುಚ್ಚಿ ಈಗ ಅಲ್ಲಿ ಯಾರೋ ತೋಟವನ್ನು ಮಾಡಿಕೊಂಡಿದ್ದಾರೆ. ಮಂಗಗಳ ಕಾಟ ಜಾಸ್ತಿಯಾಗಿದೆ ಎಂದು ಅಳಿದುಳಿದ ಒಂದೆರೆಡು ನೇರಳೆ ಮರಗಳನ್ನೂ ನೆಲಸಮ ಮಾಡಿದ್ದಾರೆ. ಇಂದು ಹಬ್ಬವೆಂದರೆ ಹೆಂಡ ತುಂಡುಗಳೆಂದು ಬೆಳೆಯುತ್ತಿರುವ ದಿನಗಳಲ್ಲಿ ಅಂದು ಚೌತ, ಜಾತ್ರೆಯ ಜೇನು, ಬೂತಪ್ಪ ಎಂಬ ಭಯಹುಟ್ಟಿಸುವ ಕಟ್ಟು ನಿಟ್ಟಿನ ಆಚರಣೆಯೇ ಸುಂದರವಾಗಿದ್ದಿತು ಎಂದನಿಸುತ್ತದೆ. ವಸಂತವನ್ನು ಕಳೆದುಕೊಂಡ ಕಾಲವಿಂದು ಉರಿಬಿಸಿಲ ಧಗೆಯಲ್ಲಿ ಬೇಯತೊಡಗಿದೆ.



Friday, April 28, 2017

ನೆಲದ ನಂಟು…


ಅದು ಮಲೆನಾಡಿನ ಪುಟ್ಟ ಗ್ರಾಮ. ಹೆಚ್ಚೆಂದರೆ ಎಂಟತ್ತು ಮನೆಗಳು, ಒಂದು ಪುಟ್ಟ ದೇವಸ್ಥಾನ, ಹಾಗು ಒಂದು ಹೊಳೆ. ದಿನನಿತ್ಯದ ಬಳಕೆಗೆ, ವ್ಯವಸಾಯಕ್ಕೆ, ಹಸು ಎತ್ತುಗಳಿಗೆ ಆ ಹೊಳೆಯ ನೀರೇ ಆಧಾರ. ಊರಿನ ಹಿರಿಕ ತಿಪ್ಪಜ್ಜ. ಆತನಿಗೆ ತಿಳಿದಿರುವ ಮಟ್ಟಿಗೆ ಒಮ್ಮೆಯೂ ಆ ಹೊಳೆಯ ನೀರು ಬತ್ತಿರುವ ನೆನಪಿಲ್ಲ. ಆದ ಕಾರಣಕ್ಕೆ ಬೇರ್ಯಾವ ಪರ್ಯಾಯ ನೀರಿನ ವ್ಯವಸ್ಥೆಯೂ ಆ ಪುಟ್ಟ ಗ್ರಾಮಕ್ಕೆ ಅವಶ್ಯಕೆತೆಯಿರಲಿಲ್ಲ. ತಿಪ್ಪಜ್ಜನಿಗೆ ಎರಡು ಗಂಡು ಮಕ್ಕಳು. ಅಣ್ಣ ಹರೀಶ ಹಾಗು ತಮ್ಮ ಗಿರೀಶ. ಓದಿನಲ್ಲಿ ಚಿಕ್ಕನಿಂದಲೂ ಮುಂದಿದ್ದ ಗಿರೀಶ ತನ್ನ ಹತ್ತನೇ ತರಗತಿಯ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪಟ್ಟಣಕ್ಕೆ ತೆರಳಿ ಅಲ್ಲಿಯೇ ಡಿಗ್ರಿಯನ್ನು ಪಡೆದು ನೌಕರಿಯನ್ನೂ ಗಿಟ್ಟಿಸಿಕೊಳ್ಳುತ್ತಾನೆ. ಆದರೆ ಸ್ಕೂಲು ಎಂದರೆ ಮೂರು ಮೈಲು ಓಡುತ್ತಿದ್ದ ಹರೀಶನಿಗೆ ಮಾತ್ರ ಪುಸ್ತಕದ ವಿದ್ಯೆಯ ಗಂಧ ಗಾಳಿ ಎಂಬುದು ತಗುಲಲಿಲ್ಲ. ಆದರೆ ವ್ಯವಸಾಯದ ವಿಧ್ಯೆಯನ್ನು ಯಾವುದೇ ಪರಿಣಿತನಿಗೂ ಬಲ್ಲದ ಮಟ್ಟಿಗೆ ಕರಗತ ಮಾಡಿಕೊಂಡಿದ್ದ. ಭೂಮಿಯನ್ನು ತಾಯಿಯಂತೆ ಪ್ರೀತಿಸುತ್ತಿದ್ದ. ದಿನದ ಅಷ್ಟೂ ಸಮಯವನ್ನು ಜಮೀನಿನಲ್ಲೇ ಕಳೆಯುತ್ತಿದ್ದ. ಮಳೆ ಎಂದು ಶುರುವಾಗುತ್ತದೆ, ಎಷ್ಟು ದಿನ ಸುರಿಯುತ್ತದೆ, ಯಾವ ತರಕಾರಿಯನ್ನು ಯಾವ ಕಾಲದಲ್ಲಿ ಬೆಳೆದರೆ ಹೆಚ್ಚು ಲಾಭ ಅನ್ನುವುದಲ್ಲದೆ ಅತಿಯಾದ ಆಸೆಗಾಗಿ ನೆಲವನ್ನು ಹಣವನ್ನು ಸುರಿಯುವ ಯಂತ್ರದಂತೆ ನೋಡಬಾರದೆಂದೂ, ಅದಕ್ಕೂ ಜೀವಿಗಳಂತೆ ನೋವು, ನಲಿವು, ಕೋಪ-ತಾಪಗಳೆಂಬ ಭಾವನೆಗಳು ಇವೆಯೆಂದು ಅರಿತಿದ್ದನು. ಗಿರೀಶ ಯುಗಾದಿ ಹಾಗು ದೀಪಾವಳಿಗೆ ಊರಿಗೆ ಬಂದರೆ ಎರಡು ದಿನವಿದ್ದು ಹೋಗಿಬಿಡುತ್ತಿದ್ದ. ಜಮೀನಿನ ಕತೆ ಹೇಗಿದೆ, ಯಾವ ಬೆಳೆಯನ್ನು ಹಾಕಲಾಗಿದೆ, ದನಗಳು ಹೇಗಿವೆ ಎಂಬ ಯಾವ ಪ್ರೆಶ್ನೆಯೂ ಆತನಿನ ಬರದು. ಒಟ್ಟಿನಲ್ಲಿ ತಿಪ್ಪಜ್ಜನ ಆಷ್ಟೂ ಆಸ್ತಿಯ ಜವಾಬ್ದಾರಿಯು ಅಣ್ಣ ಹರೀಶನ ಹೆಗಲ ಮೇಲಿದ್ದಿತು.

ದಿನಗಳು ಕಳೆದವು. ತಿಪಜ್ಜ ತಾನು ಸಾಯುವ ಮೊದಲು ಮಕ್ಕಳಿಬ್ಬರಿಗೂ ಆಸ್ತಿಯ ಸಮಭಾಗವನ್ನು ಮಾಡಬೇಕೆಂದು ಇಚ್ಛಿಸಿ ಗಿರೀಶನನ್ನು ಊರಿಗೆ ಕರೆಯುತ್ತಾನೆ. ಇಬ್ಬರನ್ನು ಎದುರು ಕೂರಿಸಿಕೊಂಡು ನಾಲ್ಕು ಎಕರೆ ಜಮೀನನ್ನು ತಮ್ಮ ಗಿರೀಶನಿಗೆ, ಊರಿನ ಮನೆ ಹಾಗು ಮೂರು ಎಕರೆ ಜಮೀನನ್ನು ಅಣ್ಣ ಹರೀಶನ ಹೆಸರಿಗೆ ಬರೆದಿರುತ್ತಾನೆ. ವಿಷಯವನ್ನು ಮಕ್ಕಳ ಮುಂದಿಟ್ಟ ತಿಪ್ಪಜ್ಜ ಇಬ್ಬರಿಗೂ ತನ್ನ ತೀರ್ಮಾನದ ಬಗ್ಗೆ ಇರುವ ಸಮ್ಮತಿಯನ್ನು ಗಮನಿಸುತ್ತಾನೆ. ಇದಾದ ಕೆಲದಿನಗಳ ನಂತರ ಹರೀಶ ಅಣ್ಣನನ್ನು ಕಂಡು ತಾನು ಸಿಟಿಯಲ್ಲಿ ಒಂದು  ಹೊಸ ಉದ್ದಿಮೆಯನ್ನು ಪ್ರಾರಂಭಿಸುವುದಾಗಿಯೂ ಅದಕ್ಕಾಗಿ ತನಗೆ ಹೆಚ್ಚಿನ ಹಣದ ಅವಶ್ಯಕೆತೆ ಇರುವುದರಿಂದ ತನ್ನ ಪಾಲಿನ ಜಮೀನನ್ನು ಮಾರಲಿಚ್ಚಿಸುವುದಾಗಿ ತಿಳಿಸುತ್ತಾನೆ. ತಮ್ಮನ ಮಾತನ್ನು ಏಕ್ ದಮ್ ನಿರಾಕರಿಸಿದ ಅಣ್ಣ, ಭೂಮಿ ನಮ್ಮ ತಾಯಿ, ನಮ್ಮ ಹೊಟ್ಟೆಬಟ್ಟೆಗೆ, ನಿನ್ನ ಓದಿಗೂ ಆಕೆಯ ಅನ್ನವೇ ಕಾರಣ. ಊರಿಗೆ ವಾಪಾಸ್ ಬಂದು ಇಲ್ಲೇ ವ್ಯವಸಾಯದೊಟ್ಟಿಗೆ ಡಿಗ್ರೀಗೆ ಪೂರಕವಾದ ಕೆಲಸವನ್ನೇನಾದರೂ ಮಾಡಿದರಾಯಿತು ಎಂದು ಬುದ್ದಿ ಮಾತು ಹೇಳುತ್ತಾನೆ. ಆದರೆ ಹಳ್ಳಿ ಎಂದರೆ ಅವಿಧ್ಯಾವಂತರ ಸಂತೆ ಎಂದುಕೊಂಡಿದ್ದ ಗಿರೀಶ ಮಾತ್ರ ಅಣ್ಣನ ಮಾತನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಜಮೀನನ್ನು ಮಾರೆ ತೀರುತ್ತೇನೆಂಬ ಹಠಕ್ಕೆ ಬಿದ್ದವನಂತೆ ವರ್ತಿಸುತ್ತಾನೆ. ಆದರೆ ತಾನು ಹುತ್ತಿ ಬೆಳೆದ ನೆಲವನ್ನು ಕಂಡವರ ಪಾಲಾಗುವುದನ್ನು ಕಾಣದ ಅಣ್ಣ ಹರೀಶ, ಜಮೀನನ್ನು ಬೇರೆ ಯಾರಿಗೂ ಮಾರಬಾರದೆಂದು ಆತನ ಎಲ್ಲ ಜಮೀನನ್ನು ತಾನೇ ಖರೀದಿಸುವುದಾಗಿ ಹೇಳುತ್ತಾನೆ. ಕೆಲವೇ ದಿನಗಳಲ್ಲಿ ಕಾಗದ ಪತ್ರಗಳೆಲ್ಲ ರೆಡಿಯಾಗಿ ಜಮೀನು ಅಣ್ಣನ ಹೆಸರಿಗೆ ಮಾರಿ ಬಂದ ನಾಲ್ಕು ಲಕ್ಷಗಳಲ್ಲಿ ಉದ್ದಿಮೆಯ ಕನಸನ್ನು ಹೊತ್ತು ಗಿರೀಶ ಸಿಟಿ ಸೇರುತ್ತಾನೆ. ಸಾಕಷ್ಟು ಏಳು ಬೀಳುಗಳ ನಂತರ ಆತ ಉದ್ದಿಮೆಯಲ್ಲಿ ಲಾಭ ಕಾಣತೊಡಗುತ್ತಾನೆ.
ತಿಪ್ಪಜ್ಜನ ಕೊನೆಯ ಆಸೆಯಂತೆ ಹರೀಶ ಊರಿನ ಭಟ್ಟರ ಮಗಳನ್ನು ವರಿಸುತ್ತಾನೆ. ಗಿರೀಶ ಸಿಟಿಯಲ್ಲೇ ಒಬ್ಬ ಹುಡುಗಿಯನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಇಬ್ಬರಿಗೂ ಒಬ್ಬೊಬ್ಬ ಗಂಡು ಮಕ್ಕಳಾಗುತ್ತವೆ. ಹರೀಶನ ಮಗ ತಿಪ್ಪೇಶಿಗೆ ಊರ ಶಾಲಾ ಕಾಲೇಜಿನ ಸರ್ಕಾರಿ ವಿಧ್ಯಾಬ್ಯಾಸವಾದರೆ ಗಿರೀಶನ ಮಗ ಸೈದಾಂತ್ ಗೆ ಸಿಟಿಯ ಅತಿ ಹೆಚ್ಚು ದುಡ್ಡನ್ನು ಕಸಿದು ದೊಡ್ಡ ಶಾಲೆ ಎನಿಸಿಕೊಂಡಿರುವಲ್ಲಿ.

ಊರಿನಲ್ಲಿ ಡಿಗ್ರಿ ಮುಗಿಸಿದರೆ ಸಾಕು, ಮಗನನ್ನು ಉತ್ತಮ ರೈತನಾಗಿ ಮಾಡುವುದು ಹರೀಶನ ಕನಸು. ಉತ್ತಮ ಎಂದ ಮಾತ್ರಕ್ಕೆ ಹೆಚ್ಚು ಲಾಭಗಳಿಸುವುದಲ್ಲದೆ ವೈಜ್ಞಾನಿಕ ಮಾಧರಿಯ ಸಾವಯವ ಕೃಷಿ. ಆದರೆ ತಿಪ್ಪೇಶಿಗೆ ಮಾತ್ರ ದೂರದ ಬೆಟ್ಟ ನುಣ್ಣಗೆ ಎಂಬಂತೆ ಸಿಟಿಯ ರಂಗು ರಂಗಿನ ಜೀವನದ್ದೇ ಕನಸು. ವಯಸ್ಸು ಇಪ್ಪತ್ತು ಕಳೆದರೂ ಅಪ್ಪನೊಟ್ಟಿಗೆ ಬೆಳಗೆದ್ದು ಹೊಲದ ಕೆಲಸಕ್ಕೆ ಹೋಗನು. ಏನಿದ್ದರೂ ತಾನಾಯಿತು, ತನ್ನ ಕಾಲೇಜಾಯಿತು ಎಂದುಕೊಂಡಿರುತ್ತಿದ್ದ. ಕಾಟಾಚಾರಕ್ಕೆ ಎಂಬತೆ ವರ್ಷದಲ್ಲಿ ಕೆಲದಿನಗಳು ಮಾತ್ರ ಜಮೀನಿಗೆ ಹೋಗಿ ಕೊಯ್ತ ಪೈರನ್ನು ಸಿಟಿಗೆ ಸಾಗಿಸುವಲ್ಲಿ ಸಹಕರಿಸುತಿದ್ದ. ಮಗನ ಜೀವನದ ಬಗ್ಗೆ ಬಹು ದೊಡ್ಡ ಕನಸು ಕಟ್ಟಿಕೊಂಡಿದ್ದ ಅಪ್ಪ ಹರೀಶನಿಗೆ ತಿಪ್ಪೇಶಿಯ ಈ ನಡವಳಿಕೆ ದೊಡ್ಡ ಪ್ರೆಶ್ನೆಯಾಗಿ ಬಹುದಿನಗಳಿಂದ ಕಾಡುತಿತ್ತು.

ಅಲ್ಲದೆ ಊರ ಹೊಳೆಯೂ ದಿನ ಕಳೆದಂತೆ ಸೊರಗುತ್ತಾ ಹೋಗುತಿದ್ದದ್ದನ್ನು ಕಂಡು ದಿಗಿಲು ಪಡುತಿದ್ದ. ಈಗೆ ಮುಂದುವರೆದರೆ ಹೊಳೆಯ ನೀರನ್ನೇ ನಂಬಿ ಕೃಷಿಯನ್ನು ಮಾಡಬೇಕಿದ್ದ ತನ್ನ ಮಗನ ಕತೆ, ಹಳ್ಳಿಯ ಕಥೆ ಏನೆಂದು ಹಲವು ಬಾರಿ ಕೇಳಿಕೊಳ್ಳುತ್ತಿದ್ದ.

ಸಿಟಿಯಲ್ಲಿದ್ದ ಗಿರೀಶನ ಮಗ ಸೈದಾಂತ್ ನಿಗೆ ಸಣ್ಣವನಿಂದಲೂ ಗಿಡ ಮರಗಳ ಒಡನಾಟ. ಹಲಸಿನ, ಮಾವಿನ ಹಣ್ಣನ್ನು ತಿಂದು ಉಳಿಯುವ ಬೀಜವನ್ನು ಮನೆಯ ಕೈದೋಟದಲ್ಲಿ ಊತು ಅದಕ್ಕೆ ದಿನ ನೀರೆರೆಯುವುದು, ಹೂವಿನ ಗಿಡಗಳನ್ನು ನೆಡುವುದು , ಸಂಬಾರ ಬೀಜಗಳನ್ನು ಉದುರಿಸಿ ಸಂಬಾರಸೊಪ್ಪನು ಬೆಳೆದು ಅಮ್ಮನಿಗೆ ತಂದು ಕೊಡುವುದು ಇವೆಲ್ಲ ಅವನಿಗೆ ಬಲು ಇಷ್ಟವಾದ ಕಾಯಕ. ಕೈ, ಬಟ್ಟೆ ಎಲ್ಲ ಮಣ್ಣಾಗುತ್ತದೆ ಬೇಡವೆಂದರೂ ಕೇಳುತ್ತಿರಲಿಲ್ಲ. ಅಕ್ಕ ಪಕ್ಕದ ಮೆನೆಯ ಮಕ್ಕಳೊಟ್ಟಿಗೆ ಆಟವಾಡುವುದೇ ಬಲು ಅಪೂರ್ವ. ಈ ಗಿಡ ಯಾವುದು?, ಯಾವ ಹೂವು ಅಥವಾ ಹಣ್ಣು ಬಿಡುತ್ತದೆ?, ಯಾವ ಗೊಬ್ಬರ ಹಾಕಬೇಕು? ಎಂಬ ಪ್ರೆಶ್ನೆಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದ. ಇದನೆಲ್ಲ ಕಂಡು ಗಿರೀಶನಿಗೆ ಕಳವಳದ ಜೊತೆಗೆ ತನ್ನ ಅಪ್ಪನ ಮಾತು ಪದೇ ಪದೇ ನೆನಪಾಗುತಿತ್ತು. 

'ನೀನು ಭೂಮ್ ತಾಯಿ ಬಿಟ್ಟು ಅದೆಷ್ಟೇ ದೂರ ಓಡಿದ್ರೂ ಅಷ್ಟೇಯ, ನಿನ್ ರಕ್ತದಾಗೆ ಹರಿತಾ ಇರದು ಅದೇ ಭೂಮ್ ತಾಯಿ ರಕ್ತಾನೆ! ಅದ್ ನಿನ್ನ ಒಂದಲ್ಲೊಂದ್ ದಿನ ಊರಿಗ್ ವಾಪಸ್ ಕರ್ಕಂಡ್ ಬರುತ್ತೆ ನೋಡ್ತಾ ಇರು' ಎಂಬ ತಿಪ್ಪಜ್ಜನ ಮಾತು ಎಲ್ಲಿ ನಿಜವಾಗುತ್ತದೋ ಎಂಬ ಒಂದು ಆತಂಕ ಸೈದಾಂತ್ ನನ್ನು  ಕಂಡು ಗಿರೀಶನಿಗೆ  ಪದೇ ಪದೇ ಕಾಡುತಿತ್ತು. ಅದಕ್ಕೆ ಪೂರಕವಾಗಿ ಆತ ತಾನು ಕಾಲೇಜಿನಲ್ಲಿ ಕೃಷಿ ವಿಜ್ಞಾನ ಪದವಿಯನ್ನೇ ಪಡೆಯಬೇಕು ಅಲ್ಲದೆ ಅದರಲ್ಲಿಯೇ ಉನ್ನತ ಶಿಕ್ಷಣವನ್ನೂ ಮಾಡಬೇಕೆಂದು ಹಠ ಹಿಡಿಯುತ್ತಾನೆ. ಅಪ್ಪ ಮಗನನ್ನು ಮನೆಯಿಂದ ಹೊರದಬ್ಬಿದರೂ ಪಾರ್ಟ್ ಟೈಮ್ ಕೆಲಸ ಮಾಡಿಕೊಂಡು ತಾನು ಓದುವುದಾಗಿ ಹೇಳುತ್ತಾನೆ. ಮಗನ ಹಠಕ್ಕೆ ಅಪ್ಪ ಕೊನೆಗೂ ಮಣಿಯಲೇ ಬೇಕಾಗುತ್ತದೆ! ದೇವರ ಮೇಲೆ ಭಾರ ಹಾಕಿ ಮಗನ ಓದಿಗೆ ಅನುಮತಿ ಕೊಡುತ್ತಾನೆ. ತಾನು ಕಟ್ಟಿ ಬೆಳೆಸಿದ ಉದ್ದಿಮೆಯ ಭವಿಷ್ಯ ಏನಾಗುತ್ತದೆಂದು ಪ್ರತಿದಿನ ಚಿಂತಿಸತೊಡಗುತ್ತಾನೆ.

ಒಂದು ಹೊಸ ತಳಿಯ ಗಿಡವನ್ನು ನೆಟ್ಟು ಬೆಳೆಸಿ ಅದರಿಂದ ಅಂದುಕೊಂಡಿರುವ ಮಟ್ಟಿನ ಫಲಿತಾಂಶವನ್ನು ಪಡೆಯುವವರೆಗೂ ಸೈದಾಂತ್ ಗೆ ನೆಮ್ಮದಿ ಇರುತ್ತಿರಲಿಲ್ಲ. ಅಲ್ಲದೆ ತಾನು ಓದಲೊದ ಊರಿನಲ್ಲಿ ಕೈದೋಟವಿರುವ ಒಂದು ಸಣ್ಣ ಮನೆಯನ್ನು ಬಾಡಿಗೆಗೆ ಪಡೆದುಕೊಂಡು ಅಲ್ಲಿ ತರಕಾರಿಗಳನ್ನು ಬೆಳೆದುಕೊಳ್ಳುತ್ತಿದ್ದ. ತನ್ನ ಓದಿನ ವಿದ್ಯೆಯನ್ನೂ ಅಲ್ಲಿ ಬಳಸಿಕೊಳ್ಳುತ್ತಿದ್ದರಿಂದ ಉತ್ತಮ ಗುಣಮಟ್ಟದ ತರಕಾರಿಗಳೇ ಬೆಳೆಯತೊಡಗಿದವು. ಅಲ್ಲದೆ ತಾನು ರಜೆಗೆ ಮನೆಗೆ ಓದಾಗಲೆಲ್ಲ ವಾರಕ್ಕಾಗುವಷ್ಟು ತರಕಾರಿಗಳನ್ನು ಕೊಂಡೊಯ್ಯುತ್ತಿದ್ದ. ತನ್ನ ಅಮ್ಮನಿಗೂ ಹೊಸ ಬಗೆಯ, ಅಧಿಕ ಇಳುವರಿ ಕೊಡುವ ಗಿಡಗಳನ್ನು ಬೇರು ಸಮೇತ ಕಟ್ಟಿಕೊಂಡು ಕೊಟ್ಟು ಬರುತಿದ್ದ. ಅಲ್ಲದೆ ದಿನದಿಂದ ದಿನಕ್ಕೆ ನೀರಿನ ಅಭಾವ ಎಲ್ಲೆಂದರಲ್ಲಿ ಹೆಚ್ಚುತ್ತಿದನ್ನು ಕಂಡು ಅದಕೊಂಡು ಸೂಕ್ತ ಪರಿಹಾರವನ್ನು ಕಂಡುಹಿಡಿಯುವ ಸನಿಹದಲ್ಲಿದ್ದ.
ಹರೀಶನ ಮಗ ತಿಪ್ಪೇಶಿಗೆ ಸಿಟಿಯ ಹುಚ್ಚು ಕನಸು ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ತಿಂಗಳಿಗೊಮ್ಮೆ ಅಪ್ಪನಿಂದ ನೂರೋ, ಇನ್ನೂರೋ ರೂಪಾಯಿಗಳನ್ನು ಕಸಿದುಕೊಂಡು ಸಿಟಿಯ ಬಸ್ಸು ಹಿಡಿದರೆ ಸಿನಿಮಾ, ಜೂಜು ಎನ್ನುತ ಎರಡು ದಿನಗಳ ನಂತರ ಬರುತಿದ್ದ. ಸದಾ ಮನೆಯಲ್ಲಿ ಒಂದಿಲ್ಲೊಂದು ವಿಷಯಕ್ಕೆ ಜಗಳ ಕಾಯುತಿದ್ದ. ಅಲ್ಲದೆ ತನ್ನ ತಿಪ್ಪೇಶಿ ಎಂಬ ಹೆಸರು  ಅಸಹ್ಯವಾಗಿದೆಯಂದು ಬದಲಾಯಿಸಿಕೊಳ್ಳುತ್ತೆನೆಂದು ಹೋಗಿ ಅಪ್ಪನಿಂದ ಚೆನ್ನಾಗಿ ಗೂಸಾ ತಿಂದಿರುವುದು ಉಂಟು. ಸೈದಾಂತ್ ಹಾಗು ತಿಪ್ಪೇಶಿ ಹೆಸರಿಗೆ ಮಾತ್ರ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳಾಗಿದ್ದರು. ಗಿರೀಶನೂ ಹೊಲ ಗದ್ದೆಗಳನ್ನು ಮಾರಿ ಹೋದ ನಂತರ ಊರ ಕಡೆ ಎಂದಾದರೊಮ್ಮೆ ಹಾಗೆ ಬಂದು ಹೀಗೆ ಹೋಗಿ ಬಿಡುತಿದ್ದ. ಅಲ್ಲದೆ ಸೈದಾಂತ್ ನನ್ನು ಸಾಧ್ಯವಾದಷ್ಟು ಹಳ್ಳಿಯಿಂದ ದೂರವಿರಿಸಿದ್ದ. ಸೈದಾಂತ್ ಗೆ ಅಣ್ಣ ತಿಪ್ಪೇಶಿ ಕಂಡರೆ ಹೆಚ್ಚಿನ ಆತ್ಮೀಯತೆ ಇದ್ದರೂ ತಿಪ್ಪೇಶಿಗೆ ತಮ್ಮನ ಸಿಟಿಯ ಸ್ಕೂಲು, ಅವನ ವೇಷ ಭೂಷಣ, ಬೈಕು ಕಾರುಗಳು ಇವನ್ನೆಲ್ಲ ಕಂಡು ಅಸೂಹೆ. ಹೇಗಾದರೂ ಮಾಡಿ ತಾನೂ ಸಿಟಿಯಲ್ಲಿ ಈ ಬಗೆಯ ಜೀವನವನ್ನು ನೆಡೆಸಬೇಕೆಂಬ ಕನಸು ಆತನಲ್ಲಿ ಹೆಮ್ಮರವಾಗಿ ಬೆಳೆದು ಅದೆಷ್ಟೋ ದಿನಗಳಾಗಿದ್ದವು.

ಬಹಳ ವರ್ಷಗಳ ನಂತರ ಜಾತ್ರೆಗೆಂದು ಊರಿಗೆ ಬಂದಿದ್ದ ಸೈದಾಂತ್ ತನ್ನ ದೊಡ್ಡಪ್ಪನ ಮನೆಯ ಹೊಲ ಗದ್ದೆಯನ್ನು ಕಂಡು ಮೂಕವಿಸ್ಮಿತನಾಗುತ್ತಾನೆ. ಆಧುನಿಕ ಬಗೆಯ ಯಾವುದೇ ತಂತ್ರಜ್ಞಾನವಲ್ಲದೆಯೇ, ಕೇವಲ ಸಗಣಿ ಗೊಬ್ಬರದಲ್ಲೇ ಅಗಾಧವಾದ ಫಸಲನ್ನು ಬೆಳೆಯಬಲ್ಲ  ನೈಪುಣ್ಯತೆಯನ್ನು ಆತ ಬೇರೆಲ್ಲೂ ಕಂಡಿರಲಿಲ್ಲ. ಇದರ ಬಗ್ಗೆ ದೊಡ್ಡಪ್ಪನ್ನು ವಿಚಾರಿಸಿದಾಗ ಆತ 'ನಾನು ಭೂಮಿಯಲ್ಲಿ ಬೆಳೆಯನ್ನು ಬೆಳೆಯುತ್ತೇನೆ ಹಣವನ್ನಲ್ಲ' ಎಂದು ಸುಮ್ಮನಾಗುತ್ತಾನೆ. ಆದರೆ ದೊಡ್ಡಪ್ಪನ ವ್ಯವಸಾಯದ ಬಗೆಯನ್ನು ಪೂರ್ತಿಯಾಗಿ ತಿಳಿಯಲೇ ಬೇಕೆಂಬ ಹಠ ಹಾಗು ಆಸಕ್ತಿ  ಒಳಗೊಳಗೇ ಮೂಡುತ್ತದೆ. ದಿನ ಬೆಳೆಗೆದ್ದು ದೊಡ್ಡಪ್ಪನೊಟ್ಟಿಗೆ ಜಮೀನಿಗೆ ಹೋಗುವುದು, ಅವರು ಮಾಡುವ ಪ್ರತಿಯೊಂದು ಕಾರ್ಯವನ್ನು ತದೇಕಚಿತ್ತದಿಂದ ನೋಡುವುದು, ನೋಟ್ ಬುಕ್ಕಿನಲ್ಲಿ ಗುರುತು ಹಾಕಿಕೊಳ್ಳುವುದು, ಸಾಧ್ಯವಾದಷ್ಟು ತಾನೂ ಕೆಲಸದಲ್ಲಿ ಕೈ ಜೋಡಿಸುವುದು ಮಾಡತೊಡಗಿದ.

ಅತ್ತ ಕಡೆ ತಿಪ್ಪೇಶಿ ಸೂರ್ಯ ಆಳೆತ್ತರಕ್ಕೆ ಬಂದರೂ ಏಳುತ್ತಿರಲಿಲ್ಲ, ಇತ್ತ ಕಡೆ ತನ್ನ ತಮ್ಮನ ಮಗ ಸಿಟಿಯಲ್ಲಿದ್ದುಕೊಂಡು ಬೆಳೆದರೂ ಕೊಂಚವೂ ಅಂಜದೆ ತಮ್ಮೊಟ್ಟಿಗೆ ಹೊಲ ಗದ್ದೆಗಳಿಗೆ ಬಂದು ಕೆಸರಿನಲ್ಲಿ ದುಡಿಯುವುದ ಕಂಡು ಹರೀಶನಿಗೆ ಕಳವಳವಾಗುತ್ತದೆ. ಸೈದಾಂತ್ ನ ನಡವಳಿಕೆ, ಮಾತಿನ ರೀತಿ ಎಲ್ಲವೂ ಅವನಿಗೆ ಅಪ್ಪ ತಿಪ್ಪಜ್ಜ ನನ್ನು ನೆನಪಿಸುತ್ತದೆ. ಒಂದು ದಿನ ಬೆಳಗ್ಗೆ ಮನೆಯಿಂದ ಹೊಲಕ್ಕೆ ನೆಡೆದುಕೊಂಡು ಬರುತ್ತಿರುವಾಗ ಹರೀಶ ಸೈದಾಂತ್ ನನ್ನು ಕುರಿತು ಊರ ಹೊಳೆಯ ನೀರು ಕುಂದುತ್ತಿರುವುದಾಗಿಯೂ, ಹೀಗೆ ಮುಂದುವರೆದರೆ ಇನ್ನೊಂದೆರೆಡು ವರ್ಷಗಳಲ್ಲಿ ಕುಡಿಯಲು ಹಾಗು ಜಮೀನುಗಳಿಗೆ ನೀರಿರದೆ ಊರ ಜನರ ಜೀವನ ಅಸ್ತವ್ಯಸ್ಥವಾಗುತ್ತದೆಯೆಂದೂ ಅಲ್ಲದೆ ಮುಂಬರುವ ನೀರಿನ ಅಭಾವ ತನಗೂ ದಿನೇ ದಿನೇ ಕಾಡುತ್ತಿದೆಯೆಂದು ಹೇಳಿಕೊಳ್ಳುತ್ತಾನೆ.. ಮೊದಲ ಬಾರಿಗೆ ದೊಡ್ಡಪ್ಪ ತನ್ನ ಬಳಿ ಆತನ ಮನದ ತುಮುಲವನ್ನು ಹೇಳತೊಡಗಿದ್ದು ಸೈದಾಂತ್ ನಿಗೆ ಸಂತೋಷವಾಗುತ್ತದೆ. ಕೆಲಹೊತ್ತು ಸುಮ್ಮನಿದ್ದ ಆತ ಊರಿನಲ್ಲಿ ವರ್ಷಕ್ಕೆ ಎಷ್ಟು ಮಳೆಯಾಗುತ್ತದೆ ಎಂದು ಕೇಳುತ್ತಾನೆ. ಮೊದಲೆಲ್ಲ ವರ್ಷಕ್ಕೆ ಸುಮಾರು ಎಂಬತ್ತರಿಂದ ನೂರು ಇಂಚಿನವರೆಗೂ ಆಗುತ್ತಿತೆಂದೂ ಇತ್ತೀಚೆಗೆ ಅದು ನಲ್ವತ್ತು ಇಂಚಿನವರೆಗೆ ಇಳಿದಿದೆಯೆಂದು ಹೇಳುತ್ತಾನೆ. ಸೈದಾಂತ್ ಅದನ್ನು ತನ್ನ ನೋಟ್ ಬುಕ್ಕಿನಲ್ಲಿ ಗುರುತುಹಾಕಿಕೊಳ್ಳುತ್ತಾನೆ.

ಕೆಲದಿನಗಳ ನಂತರ ಹೊಲದ ಹಾದಿಯಲ್ಲಿ ನೆಡೆದು ಬರುವಾಗ ಸೈದಾಂತ್ ದೊಡ್ಡಪ್ಪನ್ನು ಉದ್ದೇಶಿಸಿ ತಾನು ಈ ಊರಿನ ನೀರಿನ ಸಮಸ್ಯೆಗೆ ಒಂದು ಪರಿಹಾರವನ್ನು ಯೋಚಿಸಿರುವುದಾಗಿಯೂ ಅದನ್ನು ಸಾಧಿಸಿ ತೋರಿಸಲು ಅವರ ಸಹಾಯ ಬೇಕೆಂದೂ ಕೇಳಿಕೊಳ್ಳುತ್ತಾನೆ. ಹುಡುಗ ಹುಡುಗಾಟಿಕೆಯ ಮಾತನಾಡುತ್ತಿದ್ದಾನೆ ಎಂದುಕೊಂಡು ಹರೀಶ ಮುಗುಳ್ ನಗುತ್ತ ಮುಂದೆ ಸಾಗುತ್ತಾನೆ. ಅಲ್ಲದೆ ಸೈದಾಂತ್ ಯಾವ ಡಿಗ್ರಿಯನ್ನು ಮಾಡಿದ್ದಾನೆ, ಈಗ ಏನು ಮಾಡುತ್ತಿದ್ದಾನೆ ಎಂಬುದೂ ಅರಿಯದ ಆತನಿಗೆ ತನ್ನ ಮುಗುಳ್ ನಗೆಯೇ ಅವನ ಪ್ರೆಶ್ನೆಗಳಿಗೆ ತಕ್ಕ ಉತ್ತವೆನ್ನುತಾ ಸುಮ್ಮನಾಗುತ್ತಾನೆ. ಆದರೆ ಕಳೆಗುಂದದ ಸೈದಾಂತ್ ತಾನು ಈಗಾಗಲೇ ಊರಿನ ಭಟ್ಟರ ಮೆನೆಯ ಮೇಲ್ಚಾವಡಿಯಲ್ಲಿ ಅದಕ್ಕೆ ಬೇಕಾದ ಸಿದ್ಧತೆಯನು ಮಾಡಿರುವುದಾಗಿಯೂ ಯಥಾವತ್ತಾದ ಸಿದ್ದತೆಯನ್ನು ತಮ್ಮ ಮನೆಯಲ್ಲೂ ಮಾಡುವುಗಾಗಿ ಹೇಳುತ್ತಾನೆ. ಊರ ಭಟ್ಟರು ನನ್ನ ಮಾವ. ಮಾವನ ಮನೆಗೇ ತನಗೆ ತಿಳಿಸದೆ ಹೋಗಿ ಇಷ್ಟೆಲ್ಲಾ ಮಾಡಿರುವುದು ಹರೀಶನಿಗೆ ಕೊಂಚ ಕೋಪವನ್ನು ತಂದರೂ ಈತ ಮಾಡಿರುವ ಆ ವ್ಯವಸ್ಥೆ ಏನಿರಬಹುದೆಂಬ ಕುತೂಹಲ ಮೂಡುತ್ತದೆ. ಸರಿ ಹೋಗಿ ನೋಡೇ ಬಿಡುವ ಎನ್ನುತ್ತಾ ಅಂದು ಇಬ್ಬರೂ ಹೊಲದ ಕೆಲಸವನ್ನು ಆಳುಗಳಿಗೆ ಹೇಳಿ ಭಟ್ಟರ ಮನೆಯ ಹಾದಿಯನ್ನು ತುಳಿಯುತ್ತಾರೆ.
ಭಟ್ಟರ ಮನೆಯ ಮೇಲಿನ ಛಾವಣಿಯ ಪೈಪಿನಿಂದ ಬೀಳುವ ನೀರನ್ನು ಮೊದಲು ಮರಳು ಹಾಗು ಇದ್ದಿಲಿನಿಂದ ಕೂಡಿದ ಒಂದು ಡಬ್ಬದ ಮೂಲಕ ಹಾಯಿಸಿ ಮತ್ತೊಂದು ಪೈಪಿನ ಮೂಲಕ ಒಂದು ಸಣ್ಣ ಹೊಂಡಕ್ಕೆ ಜೋಡಿಸಲಾಗಿದ್ದಿತು. ಸೈದಾಂತ್ ದೊಡ್ಡಪ್ಪನ್ನು ಭಟ್ಟರ ಮನೆಯ ಬಳಿ ಕರೆತಂದು, ಚಾವಣಿಯ ವಿಸ್ತಿರ್ಣ ಐನೂರು ಚದರ ಮೀಟರ್, ಊರಿನಲ್ಲಿ ಬೀಳುವ ಮಳೆಯ ಪ್ರಮಾಣ 40 ಇಂಚು ಅಂದುಕೊಂಡರೂ ಬೀಳುವ ಅಷ್ಟೂ ಮಳೆಯನ್ನು ಶೇಖರಿಸಿದರೆ ಸುಮಾರು 5,00,000 ಲೀಟರ್ ನಷ್ಟು ನೀರನ್ನು ನೀವು ವಾರ್ಷಿಕವಾಗಿ ಶೇಖರಿಸಬಹುದು ಎನ್ನುತ್ತಾನೆ. ನೀರು  ಮರಳು ಹಾಗು ಕಲ್ಲಿದ್ದಲ ಮೂಲಕ ಹರಿಯುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಸೋಸಲ್ಪಟ್ಟಿರುತ್ತದೆ. ದಿನ ಬಳಕೆಗೆ ಹೇಳಿ ಮಾಡಿಸಿದ ಹಾಗಿರುತ್ತದೆ. ಒಂದು ಕುಟುಂಬದ ದಿನನಿತ್ಯದ ಬಳಕೆ ಸಾವಿರ ಲೀಟರ್ ನಷ್ಟಾದರೂ ವರ್ಷ ಪೂರ್ತಿ ಬೇರ್ಯಾವ ನೀರಿನ ಅವಶ್ಯಕತೆ ಇಲ್ಲದೆಯೇ ಜೀವಿಸಬಹುದು ಎನ್ನುತ್ತಾನೆ.

ಒಂದು ನಿಮಿಷ ಯೋಚಿಸುತ್ತ ನಿಂತ ದೊಡ್ಡಪ್ಪ, 'ಅದೆಲ್ಲ ಸರಿ ಮಗ, ನಮಗೆ ಕುಡಿಯೋದಕ್ಕಿಂತ ಹೆಚ್ಚಾಗಿ ನಮ್ಮ ಭೂಮ್ ತಾಯಿ ಕುಡಿಬೇಕು. ಅವ್ಳ ಬಾರ್ಯಾಕೆ ಹೋದ್ರೆ ನಮ್ಮ್ ಹೊಟ್ಟೆ ತುಂಬಿದಾಗೆ' ಎನ್ನುತ್ತಾನೆ.
'ದೊಡ್ಡಪ್ಪ, ಸಾಕು, ಪ್ಲೀಸ್. ನೀವು ನಿಮ್ಮ ಹೊಲ ಗದ್ದೇನ ಮಾತ್ರ ಭೂಮಿ ತಾಯಿ ಅನ್ಕೊಂಡ್ರೆ ಸಾಲಲ್ಲ. ಇಡೀ ನೆಲ ಈ ಊರೇ ಭೂಮಿ ತಾಯಿ. ಅಲ್ಲಿರೋ ಕಾಡು, ಜಿಗ್ಗು, ಹುಲ್ಲು, ಕಳ್ಳಿ ಎಲ್ಲದಕ್ಕೂ ನೀರ್ ಬೇಕು. ಅದ್ರ ಬಗ್ಗೆನೂ ಸ್ವಲ್ಪ ಯೋಚಿಸಿ. ಅವೂ ಇದ್ರೆ ತಾನೇ ಹಸಿರು. ಮೋಡ, ಮಳೆ?' ಎನ್ನುತ್ತಾನೆ.
'ಹುನಪ್ಪ, ನೀನ್ ಹೇಳೋದ್ ನಿಜ. ಆದ್ರೆ ಏನ್ ಮಾಡೋದು. ಈಗ ನೀರಿನ ಸಮಸ್ಯೆಗೆ ಪರಿಹಾರ ಹುಡುಕೋದ ಅತ್ವ ಕಾಡು, ಜಿಗ್ಗು, ಹುಲ್ಲು, ಕಳ್ಳಿ ಗಿಡಗಳನ್ನ ನೆಡುತ್ತಾ  ಕೂರೋದಾ?' ಎಂದು ಮಾರ್ಮಿಕವಾಗಿ ಅಲ್ಲದೆ ಅಷ್ಟೇ ಚಿಂತಾಗ್ರಸ್ತನಾಗಿ ಕೇಳುತ್ತಾನೆ.
'ನೆಡಿ, ಆದ್ರೆ ಕಡಿ ಬೇಡಿ. ಇರೋ ಹಸಿರನ್ನ ಹಾಗೆಯೇ ಉಳಿಸಿಕೊಳ್ಳಿ .ಈಗ ನಿಮ್ಮ ಹೊಲಗದ್ದೆಗಳ ವಿಷಯಕ್ಕೆ ಬಂದ್ರೆ ಇದೆ ಬಗೆಯ ದೊಡ್ಡ ಹೊಂಡವನ್ನ ಹೊಲದ ಸಮೀಪಕ್ಕೆ ಮಾಡಿ, ಒಂದು ದೊಡ್ಡ ಪೈಪನ್ನು ಅದಕ್ಕೆ ಜೋಡಿಸಿ, ಊರಿನ ಮನೆಯ ಛಾವಣಿಗಳ ನೀರನ್ನು ಆ ಪೈಪಿಗೆ ಸೇರುವಂತೆ ಮಾಡಬೇಕು . ಅಲ್ಲದೆ ಹೊಂಡವನ್ನು ತುಸು ಆಳಕ್ಕೆ ತೊಡುವುದರಿಂದ ಅಂತರ್ಜಲವು ಸೇರಿ ವರ್ಷವಿಡೀ ಹೊಲ ಗದ್ದೆಗಳಿಗೆ ನೀರು ಸಿಗುತ್ತದೆ. ಅಲ್ಲದೆ ಈ ಕೂಡಲೇ ಊರಿನ ಎಲ್ಲ ರೈತರು ಹನಿ ನೀರಾವರಿಯನ್ನು ಅಳವಡಿಸಿಕೊಳ್ಳಬೇಕಾಗಿ, ಹನಿ ನೀರಾವರಿ ಸಾಂಪ್ರದಾಯಿಕ ಪದ್ದತಿಯ ನೀರಾವರಿಗಿಂತ ಕೇವಲ ‘ಅರ್ದದಷ್ಟು’ ನೀರಿನಲ್ಲೇ ಉತ್ತಮ ಫಸಲನ್ನು ಬೆಳೆಯಬಹುದಾದ ವಿಧಾನ ಎಂದು ತಿಳಿಸುತ್ತಾನೆ. ಅಷ್ಟರಲ್ಲಾಗಲೇ ಊರಿನ ಹಲವು ಜನರು ಭಟ್ಟರ   ಮನೆಯ ಮುಂದೆ ಸೈದಾಂತ್ ಹೇಳುತ್ತಿದ್ದ ವಿಷಯವನ್ನು ತದೇಕಚಿತ್ತದಿಂದ ಕೇಳಿಸಿಕೊಳುತ್ತಿರುತ್ತಾರೆ. ಸೈದಾಂತ್ ಹೇಳಿ ಮುಗಿಸಿದ ನಂತರ ಕೆಲವರು ಮಳೆ ನೀರಿನ ಸಂರಕ್ಷಣೆಯ ವಿಧಾನವನ್ನು ಮೆಚ್ಚಿದರೆ ಇನ್ನು ಕೆಲವರು ಇದು ಸಾಧ್ಯವೇ ಇಲ್ಲವೆಂದು ನಾನಾ ತರ್ಕಗಳಿಂದ ಈ ವಿಧಾನವನ್ನು ಅಲ್ಲಗೆಳೆಯುತ್ತಾರೆ. ಆದರೆ ನೆಲಕ್ಕಾಗಿ ಯಾವ ಸವಾಲನ್ನೂ ಸ್ವೀಕರಿಸಬಲ್ಲವನಾಗಿದ್ದ ಹರೀಶ, ಸೈದಾಂತ್  ನ ಲೆಕ್ಕಾಚಾರವನ್ನು ಮತ್ತೊಮ್ಮೆ ಕೇಳಿಸಿಕೊಳ್ಳತೊಡಗುತ್ತಾನೆ.

ಮಾರನೇ ದಿನ ಬೆಳಗಾಗುವ ಮೊದಲೇ ಮನೆಯ ಹೊರಗಡೆ ಏನೋ ಸದ್ದನ್ನು ಕೇಳಿ ಹೊರಬಂದ ಸೈದಾಂತ್ ದೊಡ್ಡಪ್ಪ ಹೊಂಡವನ್ನು ಅಗೆಯುವುದನ್ನು ನೋಡುತ್ತಾನೆ. ಅಲ್ಲದೆ ಮನೆಯ ಛಾವಣಿಗೆ ಜೋಡಿಸಲು ಪೈಪುಗಳನ್ನೂ ತಂದು ಇಡಲಾಗಿರುತ್ತದೆ. ಊರಿನ ಬಹುತೇಕ ಮಂದಿ ತನ್ನ ಮಳೆ ನೀರಿನ ಸಂರಕ್ಷಣೆಯ ವಿಷಯವನ್ನು ಕಾಟಾಚಾರವಾಗಿ ತೆಗೆದುಕೊಂಡರು ತನ್ನ ದೊಡ್ಡಪ್ಪ ಮಾತ್ರ ಇಷ್ಟು ಬೇಗ ಅದನ್ನು ಗ್ರಹಿಸಿರುವುದಲ್ಲದೆ, ಅದಕ್ಕಾಗಿ ಕಾರ್ಯೋನ್ಮುಖವಾಗಿದ್ದು ಸೈದಾಂತ್ ಗೆ ಅತೀವ ಸಂತೋಷವನ್ನು ತರುತ್ತದೆ. ತನ್ನ ಅಪ್ಪ ಏನಾದರು ಅವರ ಪಾಲಿನ ಜಮೀನನ್ನು ಮಾರದೆಯೇ ಉಳಿಸಿಕೊಂಡಿದ್ದರೆ ಇಂದು ತಾನು ಇದೆ ಊರಿನಲ್ಲಿ ನೆಲೆಸಿ ಆದರ್ಶ ಕೃಷಿಕನಾಗುತ್ತಿದ್ದೆ ಎಂದುಕೊಳ್ಳುತ್ತಾನೆ.
ನೆಲವನ್ನು ತನಗಿಂತ ಹೆಚ್ಚಾಗಿ ಪ್ರೀತಿಸುವ ದೊಡ್ಡಪ್ಪನನ್ನು ಒಮ್ಮೆ ನೋಡುತ್ತಾನೆ. ವಯಸ್ಸಾಗಲೇ ಅರವತ್ತು ತಲುಪುತ್ತಿದೆ. ಅವರ ಪ್ರತಿ ಗುದ್ದಲಿಯ ಅಗೆತಕ್ಕೂ ಸೈಕಲ್ ಪಂಪಿನಂತೆ ಬರುವ ಏದುಸಿರನ್ನು ಕೇಳಿ ಸೈದಾಂತ್ ಕಳವಳಗೊಳ್ಳುತ್ತಾನೆ. ನೋಡಲಾರದೆ ಅವರ ಬಳಿ ಹೋಗಿ ತಾನು ಅಗೆಯುತ್ತೇನೆಂದು ಕೈಲಿದ್ದ ಗುದ್ದಲಿಯನ್ನು ತೆಗೆದುಕೊಳ್ಳುತ್ತಾನೆ.
'ನನ್ನ ಸೋಂಬೇರಿ ಮಗನಿಗಾದ್ರೂ ಈ ಬುದ್ದಿ ಬರ್ಬರದಿತ್ತಾ!' ಎಂದು ಹೇಳಿದ್ದು ಸೈದಾಂತ್ ನ ಕಿವಿಗೆ ಬೀಳುತ್ತದೆ.
'ಊರಲ್ಲಿ ಯಾರಿಗೂ ಇದು  ಅರ್ಥ ಆಗಿಲ್ಲ ಅನ್ಸುತ್ತೆ ಮಗ.. ನಂಗೆ ಮಾತ್ರ ಏನೋ ನಿನ್ ಮಾತಿನ್ ಮೇಲೆ ತುಂಬ ನಂಬಿಕೆ ಬಂದ್ ಬಿಟ್ಟಿದೆ. ಮೊದ್ಲು ಮನೆ ಹತ್ರ ಮಾಡಿ ಊರೋರಿಗೆ ತೋರ್ಸನ. ಅವುಕ್ಕೆ ಆಮೇಲೆ ಅರ್ಥ ಆದ್ರೂ ಆಗ್ಬಹುದು. ನಿಮ್ಮಜ್ಜ  ತಿಪ್ಪಜ್ಜಂಗೂ ನಿನ್ನ್ ಅಂಗೇ ಏನೋ ಹೊಸದು ಮಾಡ್ಬೇಕು ಅಂತ ಇಷ್ಟ ಇತ್ತು.. ಆಗಿನ್ ಕಾಲ್ದಾಗೆ ಬರಿ ಅರ್ಧ ಎಕ್ರೆ ಹೊಲ ಇಟ್ಕೊಂಡು, ಬೆಳ್ದು, ಉಳ್ಸಿ, ಏಳ್ ಎಕ್ರೆ ತನಕ ಮಾಡಿದ್ರು..ಅವ್ರ್ ಸತ್ಯನೇ ಇವತ್ತಿಗೂ ನಮ್ಮ್ ಮೇಲ್ ಎಲ್ಲ ಇರಾದು' ಎನ್ನುತ್ತಾನೆ. ಸೈದಾಂತ್ ಹೊಂಡವನ್ನು ಅಗೆಯುತ್ತಾ ದೊಡ್ಡಪ್ಪನ ಮಾತನ್ನು ಕೇಳಿಸಿಕೊಳ್ಳುತ್ತಿರುತ್ತಾನೆ.
'ನಾಡಿದ್ದು ಜಾತ್ರೆ ದಿನ ಎರ್ಡ್ ಇಂಚ್ ಮಳೆ ಖಂಡಿತಾ ಬರುತ್ತೆ..ನೋಡಣ ಎಷ್ಟ್ ನೀರ್ ಸಿಗುತ್ತೆ ಅಂತ. ಮತ್ತೆ ಮಗ ಅದೇನೋ ಅಂದಲ್ಲ, ಹನಿ ನೀರಾವರಿ ಅಂತ.. ಅದನ್ನು ಒಂಚೂರು ಅಮ್ಯಾಗೆ ಹೇಳ್ಕೊಡು.. ನೋಡಣ, ಆದ್ರೆ ಅದನ್ನು ಹಾಕೆಬಿಡೋಣ' ಎನ್ನುತ್ತಾ ನಿಧಾನವಾಗಿ ಮನೆಯೊಳಗೆ ನೆಡೆಯುತ್ತಾನೆ. ದೊಡ್ಡಪ್ಪನ ಮಾತುಗಳನ್ನು ಕೇಳಿ ಇನ್ನೂ ಹೆಚ್ಚಿನ ಉತ್ಸಾಹದಿಂದ ಸೈದಾಂತ್ ಹೊಂಡವನ್ನು ತೆಗೆಯತೊಡಗುತ್ತಾನೆ.

ಜಾತ್ರೆಯ ದಿನ ಬೇಗನೆ ಎದ್ದು ಶುಚಿಯಾಗಿ ದೇವಾಲಯದ ಬಳಿ ಹೋದ ಹರೀಶ, ದೇವಾಲಯದ ಕೆಲಸ ಕಾರ್ಯಗಳಲ್ಲಿ ನಿರತನಾಗುತ್ತಾನೆ. ತೋರಣ ಕಟ್ಟುವುದು, ಕೆಂಡಕ್ಕಾಗಿ ಸೌದೆಯ ಉರಿ ಹಚ್ಚುವುದು, ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ನೋಡಿಕೊಳ್ಳುವು ಎನ್ನುತ ಅತ್ತಿತ್ತಾ ಓಡಾಡುತ್ತಿರುತ್ತಾನೆ. ಸಮಯ ಸಿಕ್ಕಾಗೆಲ್ಲ ನೆರಳಲ್ಲಿ ಕೂತು ಧಣಿವಾರಿಸಿಕೊಳ್ಳುತ್ತಿರುತ್ತಾನೆ. ಆದರೆ ಇಂದೇಕೋ ಆತನ ಹೃಧಯ ಒಂದೇ ಸಮನೆ ಬಡಿದುಕೊಳ್ಳುತ್ತಿರುತ್ತದೆ. ಸಮಯ ಕಳೆದಂತೆ ಜನಜಂಗುಳಿ ಹೆಚ್ಚಾಗುತ್ತಾ ತೊಡಗಿತು. ಸೈದಾಂತ್ ದೇವಾಲಯದ ಆಲದ ಮರದ ಬಳಿ ನಿಂತು ಜಾತ್ರೆಯನ್ನು ವೀಕ್ಷಿಸುತ್ತಿರುತ್ತಾನೆ. ಆಗಾಗ ಆಕಾಶವನು ನೋಡುತ್ತಾ ಮಳೆಬರುತ್ತದೆಂದು ದೊಡ್ಡಪ್ಪ ಹೇಳಿದ ಮಾತು ಅದೆಷ್ಟು ನಿಜವಿರಬಹುದೆಂದು ಕಾಯತೊಡಗುತ್ತಾನೆ. ಮೋಡದ ಒಂದು ಚೂರು ಕುರುವಿರದ ಬರಿದಾದ ನೀಲಿ ಆಕಾಶವನ್ನೂ ಲೆಕ್ಕಿಸದೆ ಊರ ಜನ ಮಳೆ ಬರೊದೊಳಗೆ ಕೆಂಡ ಹಾಯಬೇಕು ಎನ್ನುತ ಕೆಂಡದ ಬಳಿಗೆ ಹೋದದ್ದನ್ನು ಕಂಡು ದಿಗ್ಬ್ರಾಥನಾಗುತ್ತಾನೆ. ಇದೆಂತಹ ನಂಬಿಕೆ ಇವರದು ಎನ್ನುತ್ತಾ ತನ್ನ ದೊಡ್ಡಪ್ಪನನ್ನು ಅರಸತೊಡಗುತ್ತಾನೆ.

ದೇವಾಲಯದ ಹಿಂದಿನ ಹಲಸಿನ ಮರದ ಬುಡದಲ್ಲಿ ಕೂತಿದ್ದ ದೊಡಪ್ಪ ಒಂದೇ ಸಮನೆ ತನ್ನ ಎದೆಯನ್ನು ತಿಕ್ಕಿಕೊಳ್ಳುತ್ತಿರುತ್ತಾನೆ. ಕೂಡಲೇ ಅವನ ಬಳಿಗೆ ಧಾವಿಸಿದ ಸೈದಾಂತ್ ಏನಾಯಿತೆಂದು ಕೇಳುತ್ತಾನೆ. ಇದು ತೀರಾ ಸಹಜವೆಂಬಂತೆ ಹರೀಶ ದೇವರ ಕೆಂಡವನ್ನು ಹಾಯ್ದು ಹೋಗು ಎಂದು ಸೈದಾಂತ್ ಗೆ ಹೇಳುತ್ತಾನೆ.  ಅಷ್ಟರಲ್ಲಾಗಲೇ ಬಹುಪಾಲು ಮಂದಿ ಕೆಂಡವನ್ನು ಹಾಯ್ದಿರುತ್ತಾರೆ. ಚಿಕ್ಕವನಿದ್ದಾಗ ಕೆಂಡ ಹಾಯುವುದನ್ನು ಕಂಡಿದ್ದನಾದರೂ ಒಮ್ಮೆಯೂ ಆತ ಹಾಯುವ ರೇಜಿಗೆ ಹೋಗಿರಲಿಲ್ಲ. ಆದ ಕಾರಣ ಕೊಂಚ ಅಳುಕುತ್ತಲೇ ಕೆಂಡದ ರಾಶಿಯ ತುದಿಯಲ್ಲಿ ನಿಂತಿರುತ್ತಾನೆ. ಹಿಂದಿನಿಂದ ಒಮ್ಮೆಲೇ ಬಂದ ದೊಡ್ಡಪ್ಪ 'ಹೇ.. ಬಾ ಮಗ ಏನಾಗಕಿಲ್ಲ' ಎನ್ನುತ್ತಾ ಸೈದಾಂತ್ ನ ಕೈಯನ್ನು ಹಿಡಿದುಕೊಂಡು ಮುನ್ನುಗ್ಗುತ್ತಾನೆ. ಹುಲ್ಲು ಹಾಸಿನ ಮೇಲೆ ನೆಡೆದ ಅನುಭವ ಸೈದಾಂತ್ ನಿಗೆ ಆಗುತ್ತದೆ .ಹೀಗೆ ದೇವಾಲಯದ ಸುತ್ತ ನಾಲ್ಕು ಸುತ್ತನ್ನು ದೊಡ್ಡಪ್ಪನ್ನ ಕೈಯನ್ನು ಹಿಡಿದೇ ನೆಡೆಯುತ್ತಾನೆ. ಅಲ್ಲಿಯವರೆಗೂ ಒಂದೇ ಸಮನೆ ನೆಡಯುತಿದ್ದ ದೊಡಪ್ಪ ಕೊನೆಯ ಸುತ್ತಿನಲ್ಲಿ ಒಂದೇ ಸಮನೆ ಕಂಪಿಸತೊಡಗುತ್ತಾನೆ. ಕೊನೆಯ ಸುತ್ತಿನ ಕೆಂಡದ ಮೇಲೆ ಕಾಲಿಡುತ್ತಿದ್ದಂತೆ ದೊಪ್ಪನೆ ಬಿದ್ದುಬಿಡುತ್ತಾನೆ.

ಸೈದಾಂತ್ ಹಾಗು ಊರಿನ ಜನರೆಲ್ಲರೂ ಸೇರಿ ಹರೀಶನನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ನಾಪತ್ತೆಯಾಗಿದ್ದ ತಿಪ್ಪೇಶಿ ವಿಷಯ ತಿಳಿದು ಸಂಜೆಯ ವೇಳೆಯಷ್ಟೊತ್ತಿಗೆ ಆಸ್ಪತ್ರೆಗೆ ಬರುತ್ತಾನೆ. ದೊಡ್ಡಪ್ಪನ ಮಾತಿನಂತೆ ಆಸ್ಪತ್ರೆಯ ಕಿಟಕಿಯ ಮೂಲಕ ಸೈದಾಂತ್ ಒಂದೇ ಸಮನೆ ಸುರಿಯುತ್ತಿದ್ದ ಮಳೆಯನ್ನು ನೋಡುತ್ತಿರುತ್ತಾನೆ. ಸ್ವಲ್ಪ ಸಮಯದ ನಂತರ ಹೊರ ಬಂದ ಡಾಕ್ಟರ್ ನನ್ನು ಏನಾಯಿತೆಂದು ವಿಚಾರಿಸಿದ ತಿಪ್ಪೇಶಿಗೆ ಡಾಕ್ಟರ್ ಆತನ ಹೆಗಲ ಮೇಲೆ ಕೈ ಹಾಕಿ 'ಸಾರಿ' ಎಂದು ಮುನ್ನೆಡೆಯುತ್ತಾರೆ. ಹೃದಯಘಾತದಿಂದ ಹರೀಶ ಮೃತಪಟ್ಟಿರುತ್ತಾನೆ. ಎಲ್ಲರೂ ಮೌನವಾಗುತ್ತಾರೆ. ಸೈದಾಂತ್ ನಿಂತಲ್ಲೇ ಕುಸಿಯುತ್ತಾನೆ. ತಿಪ್ಪೇಶಿ ಡಾಕ್ಟರ್ ಹಿಂದೆಯೇ ಹೋಗಿ ಮರಣ ದೃಡೀಕರಣ ಪತ್ರಕ್ಕೆ ಸಹಿ ಹಾಕಿ ಕೊಡಬೇಕೆಂದು ಕೇಳಿಕೊಳ್ಳುತ್ತಾನೆ.

ಹರೀಶನ ಅಂತ್ಯಕ್ರಿಯೆಗೆ ತಮ್ಮ ಗಿರೀಶನೂ ಬಂದಿರುತ್ತಾನೆ. ತಿಪ್ಪಜ್ಜನ ಪಕ್ಕದಲ್ಲಿಯೇ ಅಂತ್ಯಕ್ರಿಯೆಗೆ ಜಾಗ ಮಾಡಲಾಗಿರುತ್ತದೆ. ಮಾರನೇ ದಿನ ಗಿರೀಶ  ಮಗನನ್ನು ಊರಿಗೆ ಬರಲು ಹೇಳಿದರೂ ಸೈದಾಂತ್ ನಿರಾಕರಿಸುತ್ತಾನೆ. ಅವರು ಹೊರಡಬೇಕೆಂದು, ತಾನು ಕೆಲವು ದಿನಗಳ ನಂತರ ಫೋನ್ ಮಾಡುವುದಾಗಿ ತಿಳಿಸುತ್ತಾನೆ. ಕೇವಲ ಒಂದು ದಿನ ಬಂದ ಮಳೆಗೆ ಸಾಕಷ್ಟು ಪ್ರಮಾಣದ ತಿಳಿ ನೀರು ತಾನು ಹಾಗು ದೊಡಪ್ಪ ತೋಡಿದ ಹೊಂಡದಲ್ಲಿ ಶೇಕರಿಸಲ್ಪಟ್ಟಿದ್ದನ್ನು ಕಂಡು ಊರ ಜನ ಸೈದಾಂತ್ ನಲ್ಲಿಗೆ ಬಂದು ಅದರ ಬಗ್ಗೆ, ಹನಿ ನೀರಾವರಿಯ ಬಗ್ಗೆ ಹಾಗು ಇನ್ನು ಹಲವು ಕೃಷಿ ವಿಚಾರಗಳ ಬಗ್ಗೆ ತಿಳಿಯತೊಡಗುತ್ತಾರೆ. ಸೈದಾಂತ್ ನಿಗೆ ಈಗ ತಾನು ಊರ ಬಿಡುವುದು ಕಷ್ಟಸಾಧ್ಯವೆಂದೆನಿಸಿರುತ್ತದೆ. ಜೀವನವೆಲ್ಲ ಈ ಊರು ಹಾಗು  ಜಮೀನಿನಲ್ಲೇ ಕಳೆಯಬೇಕೆಂಬ ಉತ್ಕಟ ತವಕ ಆತನ ಮನದೊಳಗೆ ದಿನೇ ದಿನೇ ಮೂಡಿ ಬೆಳೆಯುತ್ತಿರುತ್ತದೆ. ಕೆಲದಿನಗಳಷ್ಟೇ ಆದರೂ ತನ್ನ ದೊಡ್ಡಪೆನೊಟ್ಟಿಗಿನ ಆತ್ಮೀಯ ಒಡನಾಟವೂ ಅದಕ್ಕೆ ಕಾರಣವಾಗಿರುತ್ತದೆ. 

ಕೆಲ ದಿನಗಳ ನಂತರ ತಿಪ್ಪೇಶಿ ಸೈದಾಂತ್ ನಲ್ಲಿಗೆ ಬಂದು ತಾನು ಊರ ಹೊಲವನ್ನೆಲ್ಲ ಮಾರಲು ನಿಶ್ಚಹಿಸಿರುವುದಾಗಿಯೂ ಸಿಟಿಗೆ ಹೋಗಿ ಉದ್ಯಮೆಯೊಂದನ್ನು ಶುರು ಮಾಡುವುದಾಗಿ ತಿಳಿಸುತ್ತಾನೆ. ತಿಪ್ಪೇಶಿಯ ಸಿಟಿಯ ಹುಚ್ಚುಕನಸಿನ ಬಗ್ಗೆ ಚೆನ್ನಾಗಿ ತಿಳಿದಿದ್ದ ಸೈದಾಂತ್ ಏನೇ ಹೇಳಿದರೂ ಕೇಳುವ ಮನಸ್ಥಿತಿಯಲ್ಲಿರದ ತಿಪ್ಪೇಶಿ ಮಾರಲು ಬೇಕಾದ ಕಾಗದ ಪತ್ರವನ್ನೆಲ್ಲ ತಯಾರು ಮಾಡಿಕೊಂಡಿರುತ್ತಾನೆ.

ರಾತ್ರಿಯೆಲ್ಲ ಯೋಚಿಸಿದ ಸೈದಾಂತ್ ಮಾರನೇ  ದಿನ ಅಪ್ಪನಿಗೆ ಫೋನ್ ಮಾಡಿ ತನಗೆ ತಕ್ಷಣ ಇಪ್ಪತ್ತು ಲಕ್ಷ ಬೇಕೆಂದೂ, ಕಾರಣ ಏನೆಂದು ಕೇಳಬಾರದೆಂದು ಹೇಳುತ್ತಾನೆ. ಒಂದೇ ಬಾರಿಗೆ ಮಗ ಇಷ್ಟೊಂದು ಭಾರಿ ಮೊತ್ತದ ಹಣವನ್ನು ಕೇಳುತ್ತಿರುವುದು ಇದೆ ಮೊದಲ ಬಾರಿಯಾದರೂ ಗಿರೀಶನಿಗೆ ತನ್ನ ಮಗನ ಮೇಲೆ ಸಂಪೂರ್ಣ ಭರವಸೆಯಿರುತ್ತದೆ. ಇನ್ನೆರೆಡು ದಿನದಲ್ಲಿ ಹಣವನ್ನು ಹೊಂದಿಸುವುದಾಗಿಯೂ ಮನೆಗೆ ಬಂದು ತೆಗೆದುಕೊಂಡು  ಹೋಗಬೇಕಾಗಿ ಹೇಳುತ್ತಾನೆ. ಅಪ್ಪನಿಂದ ಹಣವನ್ನು ಪಡೆದ ಸೈದ್ದಾತ್ ಹಣವನ್ನು ಇನ್ನು ಕೆಲವೇ ವರ್ಷದಲ್ಲಿ ಹಿಂದಿರುಗಿಸುವುದಾಗಿಯೂ ಹೇಳಿ, ಅಷ್ಟೂ ಹಣವನ್ನು ಹಳ್ಳಿಗೆ ತಂದು ತಿಪ್ಪೇಶಿಯ ಮುಂದಿಡುತ್ತಾನೆ. ಅಲ್ಲದೆ ಆತನ ಅಷ್ಟೂ ಆಸ್ತಿಯನ್ನು ತಾನು ಖರೀದಿಸುವುಗಾಗಿ, ಊರ ಮನೆ ಮಾತ್ರ ಹಾಗೆಯೇ ಇರಲಿ ಎಂದು ಹೇಳುತ್ತಾನೆ. ಸೈದಾಂತ್ ನ ಮಾತನ್ನು ಕೇಳಿ ತಿಪ್ಪೇಶಿಗೆ ಸ್ವರ್ಗವೇ ತನ್ನ ಮುಂದೆ ಬಂದು ನಿಂತ ಅನುಭವವಾಗುತ್ತದೆ. ನಂತರದ ಎರಡೇ ದಿನಗಳಲ್ಲಿ ಕಾಗದ ಪತ್ರವೆಲ್ಲ  ತಯಾರು ಮಾಡಿ ಅಪ್ಪನಿಂದ ಬಂದ ಆಸ್ತಿಯನ್ನು ಸೈದಾಂತ್ ನ ಹೆಸರಿಗೆ ಮಾರಿಬಿಡುತ್ತಾನೆ.

ದಿನಗಳು ಕಳೆದವು..

ನೋಡ ನೋಡುತ್ತಲೇ ತಿಪ್ಪೇಶಿ ಸಿಟಿಯ ಹಾದಿಯನ್ನು ಹಿಡಿದಿರುತ್ತಾನೆ. ನೇಗಿಲ ಹೊತ್ತು, ಎತ್ತುಗಳ ಹಿಂದೆ ಸೈದಾಂತ್ ಹೊಲದ ಕಡೆ ಹೋಗುತ್ತಿರುತ್ತಾನೆ.