Friday, February 24, 2017

ಜೀವನ ಕಟ್ಟಿದ ಸಮಾಜಕ್ಕಿಂದು ನೀಡಬೇಕಿದೆ ನಿನ್ನ ಕೊಡುಗೆಯೊಂದು…


ಅದು 1988 ರ ಮಳೆಗಾಲ. ಮುಂಬೈ ನ ಮೆಡಿಕಲ್ ಶಾಪೊಂದರ ಗೋಡೆಯ ಮೇಲೆ ಟಿವಿ ಸೀರಿಯಲ್ ಒಂದರ ಪೋಸ್ಟರ್ ಚಿಟ-ಪಟ ಮಳೆಗೆ ನೆನೆದು ಕರಗುತ್ತಿರುತ್ತದೆ. ‘FAUJI’ ಎಂಬ ಶೀರ್ಷಿಕೆಯ ಆ ಪೋಸ್ಟರ್ನಲ್ಲಿ ಎಣ್ಣೆ ಮೆತ್ತಿದ್ದ ಮುಖ, ಗೇರಣ್ಣಿನ ಆಕೃತಿಯ ಮೂಗು, ಹಾಗು ಹುಬ್ಬಿದ ತುಟಿಗಳೊಟ್ಟಿಗೆ ಮಿಲಿಟರಿ ಸಮವಸ್ತ್ರ ಧರಿಸಿ ನಿಂತಿದ್ದ ನಾಯಕನನ್ನು ಕಂಡು ಅಲ್ಲಿ ನೆರೆದಿದ್ದ ಜನ ಗೇಲಿಮಾಡುತ್ತಿದ್ದರೆ ಇತ್ತ ಕಡೆ ಯುವಕನೊಬ್ಬ ಸುರಿಯುತ್ತಿದ್ದ ಮಳೆಯಲ್ಲಿಯೇ ಓಡಿಬಂದು ಏದುಸಿರು ಬಿಡುತ್ತಾ ಮೆಡಿಕಲ್ ನ ಒಳಗೆ ನುಗ್ಗುತ್ತಾನೆ. ದುಃಖದ ಛಾಯೆ ಅವನ ಮುಖದಲ್ಲಿ ಎದ್ದು ಕಾಣುತ್ತಿದ್ದರೆ ಅತ್ತು ಬೇಸತ್ತ ಕಣ್ಣುಗಳಿಂದ ಕಣ್ಣೀರು ಮಳೆಯಂತೆಯೇ ನಿಧಾನವಾಗಿ ಜಿನುಗುತ್ತಿರುತ್ತವೆ. ಆತ ಬಂದವನೇ ಅವಸರವಸರದಲ್ಲಿ ಔಷದವನ್ನು ಪಡೆದು ತನ್ನ ಲೋಳಕು ಪ್ಯಾಂಟಿನ ನಾಲ್ಕೂ ಜೇಬುಗಳಿಂದ ಒಂದೊಂದೇ ನೋಟುಗಳನ್ನು ಎಳೆದು ಕೊಡುತ್ತಿದ್ದರೆ ಆತನ ಕೈ ಗಡಗಡನೆ ನಡುಗುತ್ತಿರುತ್ತದೆ. ಇತ್ತಕಡೆ ಪೋಸ್ಟರ್ ನನ್ನುನೋಡಿ ಗೇಲಿಮಾಡುತ್ತಿದ್ದ ಗುಂಪಿನ ಮಾತುಗಳು ಅವನ ಕಿವಿಗಳಿಗೆ ಸ್ಪಷ್ಟವಾಗಿ ಕೇಳುತ್ತಿದ್ದರೂ ಆತ ಮರುಮಾತನಾಡದೆ ಔಷದವನ್ನು ಪಡೆದು ಮತ್ತದೇ ಮಳೆಯಲ್ಲಿ ಓಡಿ ಮರೆಯಾಗುತ್ತಾನೆ. ಚಿತ್ರದ ಪೋಸ್ಟರ್ ನನ್ನು ನೋಡಿ ಗೇಲಿ ಮಾಡುತ್ತಿದ್ದವನೊಬ್ಬ ಇವನನ್ನು ನೋಡಿ ಒಮ್ಮೆಲೇ ಮಾತು ಬಾರದ ಕಲ್ಲಿನಂತಾಗಿಬಿಡುತ್ತಾನೆ. ಕರಗುತ್ತಿದ್ದ ಪೋಸ್ಟರ್ ನ ಇನ್ನೂ ಸಮೀಪಕ್ಕೆ ಹೋಗಿ ಪರೀಕ್ಷಿಸುತ್ತಾನೆ….ಅಲ್ಲಿಂದ ಓಡಿದ ಆ ಯುವಕ ನೇರವಾಗಿ ದೆಹಲಿಗೆ ಹೊರಡುತ್ತಿದ್ದ ತನ್ನ ಗೆಳೆಯನ ಮನೆಗೆ ಬಂದು, ತಂದಿದ್ದ ಔಷದವನ್ನು ಅವನ ಕೈಲಿತ್ತು ಆದಷ್ಟು ಬೇಗ ತನ್ನ ಅಮ್ಮನಿಗೆ ತಲುಪಿಸಬೇಕೆಂದು ಕೇಳಿಕೊಳ್ಳುತ್ತಾನೆ. ಕಾಯಿಲೆಯಿಂದ ನರಳುತ್ತಿರುವ ಅಮ್ಮ ಬೇಗ ಗುಣವಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾನೆ. ಅಶ್ರುಧಾರೆಗಳು ಒಮ್ಮೆಲೇ ಭೋರ್ಗರೆದು ಕೆನ್ನೆಗಳ ಮೇಲೆ ಹರಿಯತೊಡಗುತ್ತವೆ.

ಇಂದು ಆತ ಬೆಳೆದು ದೊಡ್ಡವನಾಗಿದ್ದಾನೆ. ಅದು ಯಾವ ಪರಿಯೆಂದರೆ ಈತನ ಒಂದು ನೋಟವನ್ನು ಕಣ್ತುಂಬಿಕೊಳ್ಳಲು ಹಗಲು ರಾತ್ರಿಯೆನ್ನದೆ ಘಂಟೆಗಳ ಕಾಲ ಗೋಡೆಯ ಮೇಲೆ ತಟಸ್ಥವಾಗುವ ಹಲ್ಲಿಗಳಂತೆ ಈತನ ಮನೆಯ ಹೊರಗೆ ಕಾದು ನಿಲ್ಲುವ ಲಕ್ಷ ಲಕ್ಷ ಯುವಕ ಯುವತಿಯರಿದ್ದಾರೆ. ಜಾಹಿರಾತು ಕಂಪನಿಗಳೂ ಸಹ ಈತನ ಒಂದು ಸಹಿಗೆ ಸಿಹಿಯನ್ನು ಹೊತ್ತೊಯ್ಯುವ ಇರುವೆಗಳಂತೆ ಸಾಲುಗಟ್ಟಿ ನಿಂತುಕೊಳ್ಳುತ್ತವೆ. ಚಿತ್ರದ ನಿರ್ದೇಶಕ ನಿರ್ಮಾಪಕರಿಗಂತೂ ಈತ ಕೈಗೆಟುಕದ ಕೊಹಿನೂರ್ ವಜ್ರ ವೇ ಸರಿ. ಅಂದು ಚಿತ್ರಗಳಲ್ಲಿ ಒಂದು ಸಣ್ಣ ಅವಕಾಶಕ್ಕಾಗಿ ಹವಣಿಸುತ್ತಿದ್ದ ಆತ ಇಂದು ತನ್ನ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಯನ್ನೇ ಸ್ಥಾಪಿಸಿ ಅಂತಹ ಸಾವಿರಾರು ಯುವಕರಿಗೆ ಅವಕಾಶವನ್ನು ನೀಡುವ ಮಟ್ಟಕೆ ಬೆಳೆದಿದ್ದಾನೆ! ಪರದೆಯ ಮೇಲಿನ ಗುಣಗಳಷ್ಟೇ ಗಮನಿಸುವ ಸಿನಿಪ್ರಿಯರಿಗಂತೂ ಈತನೇ ಆರಾಧ್ಯ ದೈವ. ಈತನ ನಟನೆಯೇ ಅಂಥಹದ್ದು. ಕಣ್ಣುಗಳನ್ನೇ ಮಾತಿಗಿಳಿಸಿದಂತೆ ಮಾಡುವ ನಟನೆ, ಪಾತ್ರಗಳಿಗೆ ನೈಜ ಜೀವ ತುಂಬುವ ಕಲೆ, ಕೇಳಿದಷ್ಟು ಸಾಕೆನಿಸದ ಮಾತಿನ ಶೈಲಿ ಹಾಗು ಅದಕ್ಕೆ ಪೂರಕವಾದ ನವಿರಾದ ಧ್ವನಿ ಅಲ್ಲದೆ ಇವೆಲ್ಲ ಗುಣಗಳಿಗೂ ಕಿರೀಟಪ್ರಾಯವಾಗಿರುವ ಈತನ ಪ್ರಬುದ್ಧವಾದ ಹಾಸ್ಯಪ್ರಜ್ಞೆ ಇಂದು ಈತನನ್ನು ದೇಶದ ಅತಿ ಉನ್ನತ ನಾಯಕ ನಟರಲೊಬ್ಬನನ್ನಾಗಿ ಮಾಡಿದೆ. ಕಿಂಗ್ ಖಾನ್, ಬಾದ್ ಷ ಆಫ್ ಬಾಲಿವುಡ್, ದಿ ಕಿಂಗ್ ಆಫ್ ರೋಮ್ಯಾನ್ಸ್ ಎಂಬೆಲ್ಲ ಹೆಸರುಗಳಿಂದ ಪ್ರಸಿದ್ದಿ ಹೊಂದಿರುವ ಈತ ಅಂದು ಮಲಗಲು ಒಂದು ಸೂರಿಲ್ಲದೆ ಮುಂಬೈ ಎಂಬ ಮಾಯಾನಗರಿಗೆ ಬಂದು, ರೈಲ್ವೆ ನಿಲ್ದಾಣಗಳಲ್ಲಿ ಮಲಗೆದ್ದು, ಸಿನಿಮಾ ಲೋಕದಲ್ಲಿ ಅವಕಾಶವನ್ನು ಪಡೆದು, ಸಿಕ್ಕ ಸಿಕ್ಕ ಪಾತ್ರಗಳನ್ನೆಲ್ಲ ಮಾಡುತ್ತಾ ತನ್ನ ನೆಲೆಯನ್ನು ಗಟ್ಟಿಗೊಳಿಸಿಗೊಂಡು ಇಂದು ತಾನೇ ಒಂದು ‘ಬ್ರಾಂಡ್’ ಎನ್ನಿಸಿಕೊಳ್ಳುವ ಮಟ್ಟಕ್ಕೆ ಬೆಳೆದ ಪರಿಯಂತೂ ಯಾವ ಚಿತ್ರಕಥೆಗೂ ಕಮ್ಮಿಯಿಲ್ಲ. ಈತ ಬೆಳೆದು ಬಂದ ಹಾದಿಯಲ್ಲಿ ಪ್ರತಿ ಹೆಜ್ಜೆಗೂ ಸವಾಲುಗಳು ಜೊತೆಗೆ ಕಷ್ಟಗಳು ಒಂದರಿಂದೊಂದು ಪುಟಿದೆದ್ದು ನಿಲ್ಲುತ್ತಿದ್ದವು. ಅದು ತನ್ನ ಹದಿನೈದನೇ ವಯಸ್ಸಿಗೆ ತಾನು ಅತಿಯಾಗಿ ಪ್ರೀತಿಸುತಿದ್ದ ತಂದೆಯನ್ನು ಕಳೆದುಕೊಂಡದ್ದಾಗಿರಬಹುದು ಅಥವಾ ಕೆಲವರ್ಷಗಳಲ್ಲೇ ತಾಯಿಯನ್ನೂ ಕಳೆದುಕೊಂಡು ಮತ್ತಷ್ಟು ಸೊರಗಿದ ದಿನಗಳಾಗಿರಬಹುದು ಅಥವಾ ಸಿನಿಮಾಗಳಲ್ಲಿ ಕೊಂಚ ಉತ್ತಮ ಪಾತ್ರಗಳು ಸಿಗತೊಡಗಿದಾದ ತನ್ನ ಗೇಲಿಮಾಡಿ ಅವಮಾನವನ್ನು ಮಾಡಲೆತ್ನಿಸುತ್ತಿದ್ದ ಸಹನಟರಾಗಿರಬಹುದು ಅಥವಾ ಹಸಿದ ಹೊಟ್ಟೆಗೆ ಕನಿಷ್ಠ ಹಿಟ್ಟಿಲ್ಲದೆ ಸೊರಗಿದ ಘಳಿಗೆಯಾಗಿರಬಹುದು ಒಟ್ಟಿನಲ್ಲಿ ಈತ ಕಷ್ಟದ ದಿನಗಳನ್ನು ಮುಷ್ಠಿ ಕಟ್ಟಿ ಸೋಲಿಸಿ ಬೆಳೆದ ಛಲಗಾರ. ಈತನ ಸಿನಿಮಾಗಳು ಅದೆಷ್ಟೇ ಪ್ರಸಿದ್ದಿ ಹೊಂದಿದರೂ ಈತ ಇಷ್ಟವಾಗುವುದು ಇಂತಹ ಎಲ್ಲ ಅಡೆತಡೆಗಳನ್ನು ಮೆಟ್ಟಿ ಬೆಳೆದು ಬದುಕನ್ನು ಕಟ್ಟಿಕೊಂಡ ಪರಿಯಿಂದ. ಗಾಡ್ ಫಾದರ್ ಗಳೆಂಬ ಆಧಾರಗಳಿಲ್ಲದೆ ಚಿತ್ರರಂಗದಲ್ಲಿ ಇಂದು ಸೂಪರ್ ಸ್ಟಾರ್ ಗಳೆನ್ನಿಸಿಕೊಂಡಿರುವ ಕೆಲವೇ ಕೆಲವು ನಟರಲ್ಲಿ ಈತನೂ ಒಬ್ಬ.

ತನ್ನ ಬುದ್ದಿ ಬಲಿತ ಮೇಲೆ ಕೆಲವೇ ವರ್ಷಗಳು ತಂದೆಯೊಟ್ಟಿಗಿದ್ದರೂ ಆ ಕೊಂಚ ಸಮಯದಲ್ಲೇ ಸಾಕಷ್ಟು ವಿಚಾರಗಳನ್ನು ಅವರಿಂದ ಕಲಿಯುತ್ತಾನೆ. ಇಂದಿನ ಈತನ ‘ಡೌನ್ ಟು ಅರ್ಥ್’ ಗುಣಕ್ಕೆ ಅಂದು ತಂದೆಯೊಟ್ಟಿಗಿನ ವಿಚಾರಪೂರ್ವಕ ಒಡನಾಟ ಹಾಗು ಅವರಿಂದ ಕಲಿತ ನಮ್ರತೆಯ ಗುಣಗಳೇ ಹೆಚ್ಚಾಗಿ ಕಾರಣವಾಗಿರುತ್ತದೆ. ಅಲ್ಲದೆ ಈತನಿಗೆ ಒಮ್ಮೆ ಯಾವುದಾದರೊಂದು ವಿಷಯದಲ್ಲಿ ಗೀಳು ಹತ್ತಿಕೊಂಡರೆ ಆ ವಿಷಯದಲ್ಲಿ ಏನಾದರೊಂದು ಸಾಧಿಸಿದ ನಂತರವೇ ನೆಮ್ಮದಿಯ ನಿಟ್ಟುಸಿರು. ಉದಾಹರಣೆಗೆ ತನ್ನ ಕಾಲೇಜು ದಿನಗಳಲ್ಲಿ ಕ್ರಿಕೆಟ್, ಫುಟ್ ಬಾಲ್ ಹಾಗು ಹಾಕಿಯಲ್ಲಿ ಆಸಕ್ತಿಯನ್ನು ಮೂಡಿಸಿಕೊಂಡ ಈತ, ತದಾ ನಂತರ ತನ್ನನ್ನು ಅದೆಷ್ಟರ ಮಟ್ಟಿಗೆ ಈ ಆಟಗಳಲ್ಲಿ ತೊಡಗಿಸಿಕೊಂಡನೆಂದರೆ ಶಾಲಾ ಕಾಲೇಜುಗಳಲ್ಲಿ ಪಠ್ಯ ಹಾಗು ಪಠ್ಯೇತರ ವಿಷಯಗಳಲ್ಲಿ ಅವಿರತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವರ್ಷದ ಕೊನೆಯಲ್ಲಿ ಕೊಡುವ 'ಸ್ವಾರ್ಡ್ ಆಫ್ ಹಾನರ್' ಪ್ರಶಸ್ತಿಯನ್ನು ಪಡೆಯುತ್ತಾನೆ. ಫುಟ್ ಬಾಲ್ ಹಾಗು ಕ್ರಿಕೆಟ್ ನಲ್ಲಿ ಕಾಲೇಜು ತಂಡದ ನಾಯಕನೂ ಆಗುತ್ತಾನೆ.

ಇಂದು ನಡುರಾತ್ರಿಯಲ್ಲಿ ತನಗರಿಯದಂತೆ ಒದಗಿ ಬರುವ ಸ್ಟಾರ್ಡಮ್ ಎಂಬ ಹುಚ್ಚು ಹಸಿವಿನಿಂದ ಕಂಗೆಟ್ಟು, ಜೊತೆಗಿದ್ದವರ ಮರೆತೇ ಬಿಟ್ಟು, ವರ್ಷಕೊಂದರಂತೆ ಬದಲಾಹಿಸಿಕೊಳ್ಳುವ ವಸ್ತುಗಳಂತೆ ಆಗಿರುವ ಅದೆಷ್ಟೋ ಚಿತ್ರರಂಗದ ನಟ ನಟಿಯರ ದಾಂಪತ್ಯ ಹಾಗು ಸಾಮಾಜಿಕ ಜೀವನಗಳಲ್ಲಿ ಇಂದು ಇವನದು ಅಕ್ಷರ ಸಹ ಬೌಧಿಕ ನಡತೆ. ಅದು ತನ್ನ ಕಷ್ಟಗಾಲದಲ್ಲಿ ಜೊತೆಗಿದ್ದು ಕೈ ಹಿಡಿದು ನೆಡೆದು ಬಂದ ಮಡದಿಯಾಗಲಿ ಅಥವಾ ಜೇಬು ತೂತುಬಿದ್ದ ಮಡಕೆಯಾದಾಗಲೂ ಬೆನ್ನ ಹಿಂದಿದ್ದು ನೆಡೆಸಿ ದಡವನ್ನು ತಲುಪಿಸಿದ ಸ್ನೇಹಿತರಾಗಲಿ ಯಾರನ್ನೂ ಸಹ ಈತ ಮರೆತಿಲ್ಲ. ಅಲ್ಲದೆ ಜಾತಿ, ಮತ ಅಂದ ಚೆಂದದ ಹಿಂದಿರುವ ಪ್ರೀತಿಯನ್ನೆಂದೂ ನಂಬದ ಈತ ತನ್ನ ಮಕ್ಕಳಲ್ಲೂ ಆ ಗುಣಗಳು ಬರಲಿ ಎಂದು ಬಯಸುತ್ತಾನೆ. ಮನೆಯಲ್ಲಿ ಕುರಾನ್ ಹಾಗು ಭಗವತ್ಗೀತೆಯನ್ನು ಒಟ್ಟೊಟ್ಟಿಗೆ ತನ್ನ ಮಕ್ಕಳಿಗೆ ಕಲಿಯಲು ಅನುವುಮಾಡಿಕೊಡುತ್ತಾನೆ. ಈತ ಸಮಾಜಕ್ಕೆ ಮಾದರಿಯಾಗುವುದು ಇವೇ ಕೆಲವು ಗುಣಗಳಿಂದ ಹಾಗು ಜೊತೆಗೆ ತನ್ನ ಅಭೂತಪೂರ್ವ ಚಿತ್ರಗಳಿಂದ ಹಾಗು ಅವುಗಳಿಗೆ ಜೀವ ತುಂಬುವ ತನ್ನ ಅಮೋಘ ನಟನೆಯಿಂದ. ದಿಲ್ ಸೆ, ಹೇ ರಾಮ್, ಅಶೋಕ, ಕಲ್ ಹೊ ನ ಹೊ, ಸ್ವದೇಶ್, ಚಕ್ ದೇ, ಮೈ ನೇಮ್ ಈಸ್ ಖಾನ್, ಹೀಗೆ ಹಲವು ಚಿತ್ರಗಳು ಕೇವಲ ಚಿತ್ರಗಳಾಗಿರದೆ ಹಲವರ ಜೀವನವನ್ನು ರೂಪಿಸಿರುವ ಪಠ್ಯಗಳಾಗಿವೆ. ಪ್ರೀತಿ, ಸ್ನೇಹ, ಛಲ, ವಿನಯತೆ, ಗಾಂಭೀರ್ಯತೆ ಎನ್ನುವ ಹಲವಾರು ಭಾವಗಳನ್ನು ಒಟ್ಟೊಟ್ಟಿಗೆ ಮೂಡಿಸಬಲ್ಲ ಈತನ ಉತ್ಕೃಷ್ಟ ನಟನೆ ನಿರ್ದೇಶಕರ ಕನಸ್ಸನ್ನು ನನಸಾಗುವಂತೆ ಪರದೆಯ ಮೇಲೆ ಮೂಡಿಸಿ ತನ್ನ ಹಾಗು ಚಿತ್ರದ ಹೆಸರನ್ನೂ ನೋಡುಗರಲ್ಲಿ ಅಮರವಾಗಿಸಿದ್ದಾನೆ. ಜನರ ಮನೆಮಾತಾಗಿದ್ದಾನೆ.

ಆದರೆ,

ಒಬ್ಬ ನಟ ಆತ ಯಾವುದೇ ಸ್ಥರದಲ್ಲಿರಲಿ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿಯಾದರೂ ನೋಡುಗರ ಮೇಲೆ ತನ್ನ ಪ್ರಭಾವವನ್ನು ಬೀರುತ್ತಿರುತ್ತಾನೆ. ತನಗರಿಯದಂತೆ ಸಾಮಾಜಿಕ ಜವಾಬ್ದಾರಿ ಎಂಬ ಕಾಣದ ಬೇತಾಳವನ್ನು ಹೆಗಲೇರಿಸಿಕೊಂಡಿರುತ್ತಾನೆ. ಭಾರತದಂತಹ ಮುಗ್ದ ದೇಶದ ಎಳೆಯ ಮನಗಳ ಮೇಲೆ, ಅದೂ ಪ್ರಸ್ತುತ ಸಿನಿಮೀಯ ಜಗತ್ತಿನಲ್ಲಿ ಇಂತಹ ನಟರ ಪ್ರತಿ ನಡೆಯೂ ವಿಪರ್ಯಾಸವೆನಿಸಿದರೂ ಹಲವರಿಗೆ ದಾರಿದೀಪಗಳಾಗಿರುವುದು ಸುಳ್ಳೇನೂ ಅಲ್ಲ. ನಟರೇನೋ ಚಿತ್ರದ ಮಟ್ಟಿಗೆ ತಮ್ಮನ್ನು ಹುಚ್ಚರನ್ನಾಗಿ, ರೌಡಿಗಳಾಗಿ, ಮಾದಕ ವ್ಯಸನಿಗಳಾಗಿ, ಕಳ್ಳರಾಗಿ, ಸುಳ್ಳರಾಗಿ ತಮಗೆ ಬಂದ ಯಾವುದೇ ಪಾತ್ರವಾದರೂ ಅದಕೊಂದ್ದು ಜೀವ ತುಂಬಿ, ನಟಿಸಿ, ಪ್ರೇಕ್ಷಕರನ್ನು ರಮಿಸಿ ನಂತರ ಆ ಪಾತ್ರವನ್ನು ಮರೆತು ಬೇರೊಂದು ಪಾತ್ರವನ್ನು ಹಿಡಿಯತೊಡಗುತ್ತಾರೆ. ಆದರೆ ಪ್ರೇಕ್ಷಕ? ಆ ಚಿತ್ರ ಹಾಗು ಅದರೊಳಗಿನ ಪಾತ್ರವನ್ನು ಜೀವನೋಪಾಯಕ್ಕೆ ಕೂಡಿಡುವ ಆಸ್ತಿಯಂತೆ ತನ್ನೊಳಗೆ ಬೆಳೆಸಿಕೊಳ್ಳುತ್ತಾನೆ. ಕೆಲವರಂತೂ ಪ್ರತಿ ದಿನವೂ ಆ ಪಾತ್ರಗಳ ಮಂತ್ರವನ್ನೇ ಜಪಿಸುತ್ತಿರುತ್ತಾರೆ. ತಾನು ಆ ಪಾತ್ರಗಳಂತೆ ಮಾರ್ಪಾಡಾಗಲು ಪ್ರಯತ್ನಿಸುತ್ತಾರೆ.
ಅಲ್ಲದೆ ಇಂದು ಲಕ್ಷಾಂತರ ಜನರನ್ನು ಕೇವಲ ಒಂದಿಷ್ಟು ಪದಗಳಲ್ಲೇ (ಡೈಲಾಗ್) ಪರಿವರ್ತಿಸಬಲ್ಲ ದೊಡ್ಡ ನಟಿಮಣಿಗಳು ನಿಜಜಗತ್ತಿನಲ್ಲಿ ಕ್ಯಾಮೆರಗಳೆಂಬ ಕಪ್ಪು ಡಬ್ಬದ ಮುಂದೆ ಬಂದರಂತೂ ಅವಕ್ಕೆ ಜಗತ್ತೇ ಮರೆಯಾಗಿಬಿಡುತ್ತದೆ. ಬೇಡವೆಂದೆಡೆಯಲ್ಲ ಹರಿದು ಬರಿದಾಗುವ ವಸ್ತ್ರಗಳು, ಹೊಲಸು ಮಾತುಗಳನ್ನೇ ಹಾಸ್ಯ ಪ್ರಜ್ನೆಗಳೆಂದು ನಂಬಿ ಹಲ್ಲು ಕಿರಿಯುವ ಕಿರುತೆರೆ ನಟರು, ಇಂತಿಷ್ಟೂ ಸಾಮನ್ಯಜ್ಞಾನವಿಲ್ಲದಿದ್ದರೂ ಇತರರನ್ನು ಅರ್ಥವಾರಿಯದ ತರ್ಕದ ಆಧಾರದ ಮೇಲೆ ಮನಬಂದಂತೆ ಜರಿಯುವ (ಟ್ವಿಟ್ಟರ್ ಮೂಲಕ) ಮೀಸೆ ಚಿಗುರದ ನಟರು, ನಿಜ ಜಗತ್ತಿನಲ್ಲೇ ನಟಿಸಿ, ನಟಿಸಬೇಕಾದ ಕಡೆ ತಿಣುಕಾಡಿ ಹಣ ಸುರಿದಾದರೂ ಸರಿ ಪ್ರಶಸ್ತಿ ಎಂಬ ಗರಿಯನ್ನು ಮುಡಿಗೇರಿಸಿಕೊಳ್ಳಲು ಆವಣಿಸುವ ನಟ ನಟಿಯರು ಇಂದು ಕೋಟಿ ಕೋಟಿ ಜನರ ಹಾಟ್ ಫೆವೋರೆಟ್. ಪ್ರತಿಭೆಗಿಂತಲೂ ಹೆಚ್ಚಾಗಿ ಪ್ರಸಿದ್ಧಿಯೇ ಇವರನ್ನು ಈ ಮಟ್ಟಕ್ಕೆ ತಂದಿರುತ್ತದೆ ಎಂದರೆ ಸುಳ್ಳಾಗಲಾರದು. ಇಂಥವರನ್ನು ತದೇಕಚಿತ್ತವಾಗಿ ಅನುಸರಿಸುವ ಹಾಗು ಆದರ್ಶ ವ್ಯಕ್ತಿಗಳನ್ನಾಗಿ ಮಾಡಿಕೊಳ್ಳುವ ನೋಡುಗ ಅದೆಷ್ಟರ ಮಟ್ಟಿಗೆ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂಬುದೇ ಇಲ್ಲಿನ ಪ್ರೆಶ್ನೆ.

ಇನ್ನು ನಮ್ಮ ನಾಯಕನ ವಿಷಯಕ್ಕೆ ಬಂದರೆ ಆತನಿಗಿಂದು 50 ವಸಂತಗಳೇ ಕಳೆದಿವೆ. ಈತ ಚಿತ್ರರಂಗದಲ್ಲಿ ಈಗಲೂ ಸಹ ಅತಿ ಬೇಡಿಕೆಯ ನಟ. ಪರಿಣಾಮ ಆತ ತನ್ನ ಕೇಶರಾಶಿಯನ್ನು ಮುದುಡಿ ಜುಟ್ಟೊಂದನ್ನು ಕಟ್ಟಿದ್ದರೆ ದೇಶದಲ್ಲಿ ಕೋಟಿ ಕೋಟಿ ಜುಟ್ಟುಗಳು ಮಿರ-ಮಿರನೆ ಮೂಡುತ್ತವೆ. ಆತ ಬಿದ್ದು ಮೂಳೆ ಮುರಿದುಕೊಂಡು ಕೈಗೆ ಬ್ಯಾಂಡೇಜ್ ಒಂದನ್ನು ಕಟ್ಟಿಕೊಂಡರೆ ಇತ್ತ ನೂರಾರು ಜನ ಕ್ಲಿನಿಕ್ ಗಳ ಮುಂದೆ ಸಾಲು ಗಟ್ಟಿ ನಿಲ್ಲುತ್ತಾರೆ, ತಾವೂ ಅವನಂತೆ ಕೈಗೆ ಬಿಳಿಯ ಬ್ಯಾಂಡೇಜ್ ಅನ್ನು ಕಟ್ಟಿ ಬೀಗಲು ಹವಣಿಸುವ ಹುಚ್ಚು ಅಭಿಮಾನಿಗಳು. ಇಷ್ಟೆಲ್ಲಾ ಬಗೆಯಲ್ಲಿ ತನ್ನನು ಅನುಸರಿಸುವ ದೊಡ್ಡ ಬಳಗವನ್ನೇ ಹೊಂದಿರುವ ಈತ ಸಾರ್ವಜನಿಕ ಮಟ್ಟದಲ್ಲಿ ಎಷ್ಟರ ಮಟ್ಟಿಗೆ ಪ್ರಭುದ್ಧನಾಗಿರಬೇಕೆಂದು ತಿಳಿಹೇಳುವವರ್ಯಾರು? ದೇಶದ ಪ್ರಧಾನಿ ಹಾಗು ರಾಷ್ಟ್ರಪತಿಗಳು ಒಂದೇ ವೇದಿಕೆಯ ಮೇಲೆ ಆಸೀನವಾಗಿರುವಾಗ ಮೊದಲ ಸಂಬೋಧನೆ ಎಂದಿಗೂ ರಾಷ್ಟ್ರಪತಿಯನ್ನು ಕುರಿತು ಆಗಿರಬೇಕೆಂದು, ತನಗೆ ನೀಲಿ ಚಿತ್ರಗಳ ನಾಯಕನಾಗಬೆನೆಂಬ ಆಸೆ ಅದು ಸ್ವಂತದ ವಿಷಯ, ಆದರೆ ಅದನ್ನು ಸಾರ್ವಜನಿಕವಾಗಿ ಹೇಳಿ ಅಭಿಮಾನಿಗಳಲ್ಲಿ/ದೇಶವಾಸಿಗಳಲ್ಲಿ ಗೊಂದಲವನ್ನುಂಟುಮಾಡುವ ಅವಶ್ಯಕತೆಯಾದರೂ ಏನಿದೆ ಎಂದು ಈತನಿಗೆ ಬಿಡಿಸಿ ಹೇಳುವವರ್ಯಾರು? ಸಾವಿರಾರು ಜನರು ಸೇರಿರುವಾಗ, ಮೈಕೆಂಬ ಮಹಾ ಅಸ್ತ್ರ ಕೈಯ್ಲಲಿರುವಾಗ, ಇಂತಹ ದೊಡ್ಡ ನಟರ ಬಾಯಿಯಿಂದ ಹೊರಡುವ ಪ್ರತಿ ಮಾತುಗಳು ಮುತ್ತುಗಳಂತೆ, ನೆಡೆಯುವ ಪ್ರತಿ ಹೆಜ್ಜೆಯೂ ಮೈಲಿಗಲ್ಲಿನಂತೆ ಎಂಬ ಜವಾಬ್ದಾರಿ ಇನ್ನೂ ಹೆಚ್ಚಾಗಿ ಈತನಲ್ಲಿ ಮೂಡಬೇಕಿದೆ.

ಈತನ ಚಿತ್ರಗಳ ವಿಷಯದಲ್ಲೂ ಬದಲಾಗಬೇಕಾದ ಅಂಶಗಳು ಬಹಳಷ್ಟಿವೆ. ಡಾನ್ ಗಳನ್ನು, ಕಳ್ಳ ಕಾಕರನ್ನು, ಸಾರಾಯಿ ದಂಧೆಯನ್ನು ಮಾಡುವ ದರೋಡೆಕೋರರನ್ನು ಹಿರಿ ಹಿರಿ ಹಿಗ್ಗಿಸಿ ತೋರುವ ಚಿತ್ರಗಳಿಗೆ ಈತನಂತಹ ನಟರು ನಾಯಕನಾಗುತ್ತಿರುವು ದೇಶೀ ಚಿತ್ರರಂಗಕ್ಕೆ ಬರಬಡಿದ ಸೂಚನೆ! ಇವುಗಳೇನಿದ್ದರೂ ಬುದ್ದಿ ಚಿಗುರೊಡೆಯದ ಅಥವಾ ಸಾಮಾಜಿಕ ಕಳಕಳಿಇಲ್ಲದ ಅಥವಾ ಚಿತ್ರನಿರ್ಮಾಣವನ್ನೇ ‘ದಂಧೆ’ಯಾಗಿಸಿಕೊಂಡಿರುವ ಚಿತ್ರ ‘ವಿ’ರಚನಾಕಾರರಿಗೆ ಮಾತ್ರ ಸೀಮಿತ. ಇಂತಹ ಪಾತ್ರಗಳು ಹಾಗು ಚಿತ್ರಗಳು ಕಷ್ಟದ ಎಲ್ಲ ಮಜಲುಗಳನ್ನು ಜಡಿದು ಮೇಲೆ ಬಂದು ಜೀವನಸ್ಪೂರ್ತಿದಾಯಕವಾಗುವ ನಮ್ಮ ನಾಯಕನ ವ್ಯಕ್ತಿತ್ವದವರಂತವರಿಗಲ್ಲ. ಕಳೆದ ಏಳೆಂಟು ವರ್ಷಗಳಿಂದ ಈತನ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ಸ್ಪಷ್ಟವಾಗಿ ಅರಿವಿಗೆ ಬರುತ್ತದೆ. 'ಮೈ ನೇಮ್ ಇಸ್ ಖಾನ್' ಚಿತ್ರದ ನಂತರ ಈತನ ಯಾವ ಚಿತ್ರವೂ ಇಂದು ನೋಡಿ ಮುಂದೊಂದು ದಿನ ನೆನಪಿನಲ್ಲುಳಿಯುವ ಮಟ್ಟಕ್ಕಿಲ್ಲ. ಕಾರಣ ಹಲವು. ಪ್ರಮುಖವಾಗಿ ಇಂದಿಗೂ ಸಹ ಕೇವಲ ವ್ಯಕ್ತಿ ಕೇಂದ್ರಿತ ಪಾತ್ರಗಳನ್ನೇ ಅರಸಿ ಹೋಗುತ್ತಿರುವುದು ಅಲ್ಲದೆ ಸಮಾಜಮುಖಿ ಹಾಗು ಅರ್ಥಪೂರ್ಣ ಲೊ ಬಜೆಟ್ ಚಿತ್ರಗಳಿಂದ ವಿಮುಖನಾಗಿರುವುದು.

ವಯಸ್ಸಿಗೆ ತಕ್ಕಂತೆ ಪಾತ್ರಗಳನ್ನು ಮಾಡಬೇಕೆಂಬ ಯಾವುದೇ ಬೇಲಿಗಳು ನಟನ ಪ್ರಪಂಚದಲ್ಲಿಲ್ಲದಿದ್ದರೂ, ಹಣದ ಆಸೆಯನ್ನು ತೊರೆದು ಇಲ್ಲಿಯವರೆಗೂ ತನ್ನನು ನಂಬರ್ ಒನ್ ನಟನನ್ನಾಗಿ ಮಾಡಿದ ಆತನ ಹುಚ್ಚು ಅಭಿಮಾನಿಗಳ ಹಿತದೃಷ್ಟಿಯಿಂದಲಾದರೂ ಚಿತ್ರಗಳನ್ನು ಆರಿಸಿಕೊಳ್ಳುವಾಗ ಈತ ಯೋಚಿಸಬೇಕಾಗಿದೆ. ಅಮಿರ್ ನ ದಂಗಲ್, ತಾರೆ ಝಮೀನ್ ಪರ್, ಲಗಾನ್, ಸರ್ಫಾರೋಶ್ ಚಿತ್ರಗಳಾಗಿರಬಹುದು ಅಥವಾ ಏರ್ ಲಿಫ್ಟ್, ಸ್ಪೆಷಲ್ 26, ಹಾಲಿಡೇ ಗಳಂತಹ ಅಕ್ಷಯ್ ಕುಮಾರ್ ನ ಚಿತ್ರಗಳಾಗಿರಬಹುದು ಇವುಗಳು ನೋಡುಗರಲ್ಲಿ ಒಂದು ಹೊಸ ವಿಚಾರಧಾರೆಯನ್ನು ಪುಟಿದೇಳಿಸುತ್ತವೆ. ದೇಶದ ಬಗ್ಗೆ ಅಲ್ಲದೆ ಸಾಮಾಜಿಕ ಕಳಂಕಗಳ ಬಗ್ಗೆ ಅರಿವು ಮೂಡಿಸುತ್ತವೆ. ಇಲ್ಲಿ ನಿರ್ದೇಶಕ ಹಾಗು ಕಥೆಗಾರರ ಕೊಡುಗೆ ಬಹಳಷ್ಟು ಇದ್ದರೂ ಅವುಗಳು ಹೆಚ್ಚಾಗಿ ಪರಿಣಾಮ ಬೀರುವುದು ಇಂತಹ ಅಗ್ರ ನಟರು ಅವುಗಳಿಗೊಂದು ಜೀವವನ್ನು ತುಂಬಿದಾಗ. ದೇಶ, ನಾಡು ಹಾಗು ಸಂಸ್ಕೃತಿಯ ಪ್ರತೀಕವಾದಂತಹ ಚಿತ್ರಗಳು ಇಂದು ಹೆಚ್ಚಾಗಿ ಮೂಡಬೇಕಿದೆ. 'ಸ್ವದೇಶ್' ಚಿತ್ರದ ನಾಯಕ ಮೋಹನ್ ತನ್ನ ಐಶಾರಾಮಿ ಕೆಲಸವನ್ನು ಬಿಟ್ಟು ದೇಶದ ಉನ್ನತಿಗೆ ಮರಳಿ ತಾಯ್ನಾಡಿಗೆ ಬಂದಂತೆ ಇಂದು ಜನರ ಜೇವನವನ್ನು ಮಾರ್ಪಡಿಸಬಲ್ಲ ಚಿತ್ರಮಾಧ್ಯಮವೆಂಬ ಮಹಾ ಅಸ್ತ್ರದ ಮೂಲಕ ಮತ್ತೊಮ್ಮೆ ನೈತಿಕ ಹಾಗು ಸಾಮಾಜಿಕ ಕಳಕಳಿಯ ಚಿತ್ರಗಳನ್ನು ನಮ್ಮ ನಾಯಕ ನೀಡಬೇಕಿದೆ. 'ಕಿಂಗ್ ಆಫ್ ರೋಮ್ಯಾನ್ಸ್' ಇಂದು 'ಕಿಂಗ್ ಆಫ್ ಗುಡ್ ಥಿಂಗ್ಸ್' ಸಹ ಆಗಬೇಕಿದೆ.

Thursday, February 16, 2017

ಸ್ಪೇಸ್ ಜನರೇಟರ್ :ಇದು ನಾಳೆಗಳ ವಿದ್ಯುತ್ತ್ ಸಮಸ್ಯೆಗಳಿಗೆ ಸೂಕ್ತ ಪರಿಹಾರವಾಗಬಲ್ಲದೇ?

ಆಧುನಿಕ ಜಗತ್ತೆಂದು ಕರೆಯಲ್ಪಡುವ ಪ್ರಸ್ತುತ ಕಾಲವನ್ನು ನಾವು ಒಮ್ಮೆ ಕಣ್ಣು ಮುಚ್ಚಿ ಕಲ್ಪಿಸಿಕೊಂಡರೆ ಹೆಚ್ಚಾಗಿ ಕಾಣಸಿಗುವುದು ಝಗಝಗಿಸುವ ರಂಗು ರಂಗಿನ ಬೆಳಕು ಅಥವ ಅದರ ಮೂಲವಾದ ವಿದ್ಯುತ್ತು ಎನ್ನಬಹುದು. ಆಧುನಿಕ ಜಗತ್ತು ನಿಂತಿರುವ ಅತ್ಯವಶ್ಯಕ ಆಧಾರ ಸ್ತಂಭಗಳಲ್ಲಿ ಈ ವಿದ್ಯುತ್ತ್ ಕೂಡ ಒಂದು. ಇಂದು ಆಹಾರವನ್ನು ಬೇಯಿಸುವುದರಿಂದ ಹಿಡಿದು ಹಾಯಾಗಿ ಮಲಗುವವರೆಗೂ ಇದರ ಅವಶ್ಯಕೆತೆ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರವೆ. ನವೀಕರಿಸಲಾಗದ ಶಕ್ತಿಯ ರೂಪಗಳಲ್ಲಿ ಒಂದಾಗಿರುವ ವಿದ್ಯುತ್ತಿನ ಕೊರತೆ ದಿನಕಳೆದಂತೆ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಇದರ ಮಿತ ಬಳಕೆಗೆ ಏನೆಲ್ಲಾ ಸಂಶೋಧನಾ ಸರ್ಕಸ್ ಗಳನ್ನೂ ಮಾಡಿದರೂ ರಕ್ಕಸ ಬಾಯಿಯ ಮಾನವನನ್ನು ತೃಪ್ತಿಪಡಿಸಲ್ಲಲಾಗುತ್ತಿಲ್ಲ ಎನ್ನುವುದು ಸುಪರಿಚಿತವಾಗಿರುವ ವಿಷಯ. ಕಲ್ಲಿದ್ದಲು, ಜಲ, ಪವನ ಶಕ್ತಿ ಹಾಗು ಪರಮಾಣು ಮೂಲಗಳು ಮುಂದೊಂದು ದಿನ ಬರಿದಾದ ಮೇಲೆ ಏನೆಂಬ ಪ್ರೆಶ್ನೆ ದಶಕಗಳಿಂದ ನಮ್ಮೆಲ್ಲರ ಮುಂದಿದ್ದರೂ, ಇನ್ನೂ ಸಹ ಇದಕ್ಕೊಂದು ಸಮರ್ಪಕ ಉತ್ತರವನ್ನು ನಮಗೆ ಹುಡುಕಿಕೊಳ್ಳಲಾಗಿಲ್ಲ.

ಹೀಗೆಯೇ ಈ ವಿಷಯದ ಬಗ್ಗೆ ಅಂತರ್ಜಾಲದಲ್ಲಿ ತಡಕಾಡುವಾಗ ಪರಮಹಂಸ ತಿವಾರಿ ಎಂಬ NPCI ಯ (ನ್ಯಾಷನಲ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ) ನಿವೃತ್ತ ಡೈರೆಕ್ಟರ್ ಅವರ ಸಂಶೋಧನೆಯ ಬಗ್ಗೆ ತಿಳಿಯಲ್ಪಟ್ಟಿತ್ತು. ಮೂಲತಃ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿರುವ ತಿವಾರಿಯವರು ದೇಶದ ಅಣು ವಿಜ್ಞಾನದ ಕ್ಷೇತ್ರದಲ್ಲಿ ಬಹಳಷ್ಟು ಉನ್ನತ ಹುದ್ದೆಗಳನ್ನು ಅಲಂಕರಿಸಿರುತ್ತಾರೆ. ತಮ್ಮ ವೃತ್ತಿಯ ಉದ್ದಕ್ಕೂ ದೇಶದ ಮಹತ್ವದ ಪ್ರಾಜೆಕ್ಟ್ ಗಳನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾದ ಇವರು ನಿವೃತ್ತಿಯ ನಂತರ 'ಬ್ಯಾಕ್ ಟು ಬೇಸಿಕ್ಸ್' ಎಂಬುವಂತೆ ತಮ್ಮ ಜೀವನದುದ್ದಕ್ಕೂ ಕಾಡುತ್ತಿದ್ದ ವೈಜ್ಞಾನಿಕ ಹಾಗು ತಾಂತ್ರಿಕ ಪ್ರೆಶ್ನೆಗಳಿಗೆ ಉತ್ತರವನ್ನು ಹುಡುಕಹೊರಟರು. ಹೀಗೆ ಸಂಶೋಧನೆಯನ್ನು ನೆಡೆಸುತ್ತಾ ಹೊರಟವರಿಗೆ ಹೊಳೆದದ್ದೇ ನಾಳಿನ ವಿದ್ಯುತ್ತ್ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕೊಡಬಲ್ಲ ‘ರಿಯಾಕ್ಷನ್ ಲೆಸ್ AC ಸಿನ್ಕ್ರೋನಸ್ ಜನರೇಟರ್' (RLG) ಅಥವಾ ಸರಳವಾಗಿ ಹೇಳುವುದಾದರೆ ನಿರ್ವಾತ(Vaccum)ದಿಂದ ಶಕ್ತಿಯನ್ನು ಪಡೆದು ಚಲಿಸುವ ಜನರೇಟರ್! ಅಂದರೆ ಇದರ ಚಲನೆಗೆ ಯಾವುದೇ ಬಗೆಯ ಇಂಧನ ಮೂಲಗಳಾಗಲಿ (ಡೀಸೆಲ್, ಪೆಟ್ರೋಲ್ ಇತ್ಯಾದಿ )ಬೇಡ. ಯಸ್, ನಂಬಲಸಾದ್ಯವಾದರೂ ಒಮ್ಮೆ ತಿಳಿಯಲೇ ಬೇಕಾದ ವಿಷಯವಿದು.

1831 ರಲ್ಲಿ ಮೈಕಲ್ ಫ್ಯಾರಡೆ ಎಲೆಕ್ಟ್ರಿಕ್ ಜನರೇಟರ್ ನನ್ನು ರೂಪಿಸಿದ ಮಾದರಿ/ನಿಯಮ ಶತಕಗಳ ನಂತರವೂ ಹಾಗೆಯೇ ಇದೆ. ಈ ವಿಷಯದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಮಾಡಲಾಗುವುದಿಲ್ಲ ಎಂದೇನಲ್ಲ, ಆದರೆ ವಿದ್ಯುತ್ತನ್ನು ಉತ್ಪಾದಿಸುವ ಈ ಮಾದರಿ/ನಿಯಮ ಒಂಥರಾ ಜಗತ್ತನೇ ಅಳೆಯುವ ನ್ಯೂಟನ್ನಿನ ಸೂತ್ರಗಳಂತೆ. ಅವುಗಳನ್ನು ಬದಲಾಹಿಸುವುದು ಅಥವಾ ಮಾರ್ಪಾಡು ಮಾಡಲು ಹೋಗುವುದು ಒಂದು ಬಗೆಯ ಮೂರ್ಖತನದ ಕೆಲಸ. ಪರಿಣಾಮ ಜನರೇಟರ್ ಎಂದರೆ ಎರಡು ಅಯಸ್ಕಾಂತ ಹಾಗು ಒಂದು ವಾಹಕದ(Conductor) ಸುರಳಿ, ವಾಹಕದ ಸುರಳಿ ಅಯಸ್ಕಾಂತದ ನಡುವೆ ಸುತ್ತಿದ್ದಷ್ಟೂ ಅದಕ್ಕೆ ಪೂರಕವಾಗಿ ವಿದ್ಯುತ್ತ್ ಉತ್ಪತಿಯಾಗುತ್ತದೆಯೆಂದು ನಾವು ತಿಳಿದು ಬೆಳೆದಿರುವವರು. ಹೀಗೆ ವಿದ್ಯುತ್ತನ್ನು ಉತ್ಪಾದಿಸುವ ಹಿಂದಿರುವ ಅತಿ ದೊಡ್ಡ ಸವಾಲು ವಾಹಕದ ಸುರಳಿಯನ್ನು ಯಾವ ವಿಧದಲ್ಲಿ, ಎಷ್ಟು ವೇಗವಾಗಿ ಸುತ್ತಿಸಬಹುದು ಎಂಬುವುದರಲ್ಲಿರುತ್ತದೆ. ಇದಕ್ಕಾಗಿಯೇ ಕಲ್ಲಿದ್ದಲು, ಜಲ, ಪವನ ಶಕ್ತಿ, ಪರಮಾಣು ಹಾಗು ಇನ್ನಿತರೆ ಶಕ್ತಿಯ ಮೂಲಗಳು ಬಳಕೆಯಾಗುವುದು. ಆದರೆ ಪರಮಹಂಸ ತಿವಾರಿಯವರು ಈ ಮೂಲ ವಿಧಾನವನ್ನೇ ಪ್ರೆಶ್ನಿಸತೊಡಗುತ್ತಾರೆ! ವಿದ್ಯುತ್ತ್ ಉತ್ಪತಿಯಾಗಲು ವಾಹಕದ ಸುರಳಿ ಸುತ್ತಲೇಬೇಕೆ? ಎಂಬ ಸವಾಲನ್ನು ಕೇಳಿಕೊಳ್ಳುತ್ತಾರೆ. ಹೀಗೆ ಯೋಚಿಸುತ್ತಿರುವಾಗಲೇ ನಮ್ಮ ಉಪನಿಷತ್ತಿನ ಕೆಲವು ಬರಹಗಳು ಅವರ ಕಲ್ಪನೆಗೆ ತಕ್ಕ ಪುಷ್ಟಿಯನ್ನು ಕೊಡುತ್ತವೆ. ಅವುಗಳ ಪ್ರಕಾರ ಆಕಾಶ/ನಿರ್ವಾತವೇ ಸರ್ವ ವಿಶ್ವದ ಉಗಮಕ್ಕೆ ಕಾರಣವೆಂದೂ ಆಕಾಶ/ನಿರ್ವಾತ ಎಂದಾಗ ಅದು ಕೇವಲ ಖಾಲಿಯಿರುವ ಜಾಗವೆನ್ನುವುದಂತೂ ನೂರಕ್ಕೆ ನೂರರಷ್ಟು ಸುಳ್ಳು ಎಂಬುದನ್ನು ಅವಲಂಬಿಸಿ, ಜಗತ್ತನೇ ಸೃಷ್ಟಿಸಿರುವ ಆಕಾಶವನ್ನು ಈ ಜನರೇಟರ್ ನ ಶಕ್ತಿಯ ಮೂಲವಾಗಿ ಪರಿಗಣಿಸುತ್ತಾರೆ. ಈ ಸೂತ್ರವನ್ನು ವಸ್ತುಗಳ ಅಣು ಹಾಗು ಪರಮಾಣುಗಳಿಗೂ ಅನ್ವಹಿಸುತ್ತಾರೆ. ಮಹಾವಿಜ್ಞಾನಿ ಐನ್ಸ್ಟೈನ್ ನ 'ಥಿಯರಿ ಆಫ್ ರಿಲೇಟಿವಿಟಿ'ಯೂ ಸಹ ಇದಕ್ಕೆ ಪೂರಕವಾಗಿರುತ್ತದೆ. ವಾಹಕ, ಅಯಸ್ಕಾಂತಗಳ ಸ್ಥಾನಪಲ್ಲಟ ಹಾಗು ಅವುಗಳ ಅಣು ಹಾಗು ಪರಮಾಣುಗಳ ನಡುವಿನ ವಿಶಿಷ್ಟ ಅಧ್ಯಯನದಿಂದ ತಿವಾರಿಯವರು ಈ ಪಾತ್ ಬ್ರೇಕಿಂಗ್ ಸಂಶೋದನೆಯಲ್ಲಿ ಯಶಸ್ವಿಯಾದರು. ಪರಿಣಾಮ, ಸಹಜವಾಗಿ ಬಳಸುವ ಇಂಧನದ ಮೂಲಗಳ (ಪೆಟ್ರೋಲ್, ಡೀಸೆಲ್, ಕಲ್ಲಿದ್ದಲು ಇತ್ಯಾದಿ) ಬಳಕೆಯಿಲ್ಲದೆಯೇ ಈ ಜನರೇಟರ್ ಕಾರ್ಯ ನಿರ್ವಹಿಸತೊಡಗಿತು! 'ಶಕ್ತಿಯನ್ನು ಸೃಷ್ಟಿಸಲು ಹಾಗು ನಾಶಪಡಿಸಲು ಸಾಧ್ಯವಿಲ್ಲ, ಅದನ್ನು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಮಾತ್ರ ಬದಲಾಹಿಸಬಹುದು' ಎಂಬ ನಮ್ಮ ಬಾಲ್ಯದ ವಿಜ್ಞಾನದ ಪಾಠದ ‘ಶಕ್ತಿ ನಿತ್ಯತೆಯ ನಿಯಮ’ವನ್ನು ಅಲುಗಾಡಿಸಿತು. ಏಕೆಂದರೆ ಈ ಸಂಶೋದನೆಯಲ್ಲಿ ವಿದ್ಯುತ್ತ್ ಶಕ್ತಿಯನ್ನು ಯಾವುದೇ ಇತರ ಶಕ್ತಿಯ ಮೂಲಗಳಿಲ್ಲದೆ ಉತ್ಪದಿಸಬಹುದಾಗಿದೆ! ಅರ್ಥಾತ್ ಶಕ್ತಿಯ ಒಂದು ರೂಪವನ್ನು ಸೃಷ್ಟಿಸಬಹುದಾಗಿದೆ!!

‘ಸ್ಪೇಸ್’ ಜನರೇಟರ್ ಎಂದೇ ಪ್ರಸಿದ್ದಿ ಪಡೆಯುತ್ತಿರುವ ಇದರ ಕಾರ್ಯ ಪ್ರವೃತ್ತಿಗೆ ಹಾಗು ದಕ್ಷತೆಯ (Efficiency) ವಿಷಯಕ್ಕೆ ಬಂದರೆ ಇದು ಒಮ್ಮೆ ಶುರುವಾಗಲು ಅತ್ಯಲ್ಪ ಪ್ರಮಾಣಾದ ಶಕ್ತಿಯ ಅವಶ್ಯಕತೆ (Initial Power) ಬೇಕಾಗುತ್ತದೆ. ಅಂದರೆ ಒಮ್ಮೆ ವಾಹಕವನ್ನು ಕೆಲವು ಸುತ್ತುಗಳನ್ನು ಸುತ್ತಲು ಬೇಕಾಗುವ ಶಕ್ತಿ ಮಾತ್ರ. ನಂತರ ಇದರ ಓಟದ ಹಾದಿ ತೀರಾ ಸುಲಭ. ಈ ಜನರೇಟರ್ ನ ಇಂಟರಸ್ಟಿಂಗ್ ವಿಚಾರವಿರುವುದು ಇಲ್ಲೆಯೇ. ಬೌತಶಾಸ್ತ್ರದ ‘ಲೆನ್ಸ್’ ನ ನಿಯಮದ (Lens Law) ಪ್ರಕಾರ ಯಾವುದೇ ಒಂದು ಯಂತ್ರ ಹೆಚ್ಚೆಂದರೆ ಪ್ರತಿಶತ 90-95% ರಷ್ಟು ದಕ್ಷತೆಯನ್ನು ಗಳಿಸಬಹುದು. ಅಥವಾ ಯಾವುದೇ ಯಂತ್ರಕ್ಕೆ 100% ಗಿಂತ ಹೆಚ್ಚಿನ ಧಕ್ಷತೆ ಗಳಿಸಲು ಸಾಧ್ಯವಿಲ್ಲ ಎನ್ನುವುದಾಗಿದೆ. ಸರಳವಾಗಿ ಹೇಳುವುದಾದರೆ ಒಬ್ಬ ವ್ಯಕ್ತಿಗೆ ನಾವು ಹತ್ತು ಗುದ್ದನ್ನು ಕೊಟ್ಟರೆ ಆತ ತನ್ನ ನಂತರದವನಿಗೆ ಒಂಬತ್ತೇ ಅಥವಾ ಹೆಚ್ಚೆಂದರೆ ಹತ್ತು ಗುದ್ದನ್ನು ಕೊಡಬಲ್ಲ ಸಾಮರ್ಥ್ಯ ಮಾತ್ರ ಗಳಿಸಬಹುದು. ಆದರೆ ತಿವಾರಿಯವರ ಸಂಶೋಧನೆ ಈ ನಿಯಮವನ್ನೇ ತಲೆಗೆಳಗಾಗಿ ಮಾಡುತ್ತದೆ. ಜನರೇಟರ್ ಶುರುವಾಗಲು ಕೊಡುವ Initial Power ನ 2.38 ರಷ್ಟು ಅಂದರೆ, 238% ರಷ್ಟು ದಕ್ಷತೆಯನ್ನು ಈ ಜನರೇಟರ್ ಗಳಿಸುತ್ತದೆ! ಲೆನ್ಸ್ ನ ನಿಯಮಕ್ಕೆ ವಿರುದ್ಧವಾದ ಕಾರಣ ಇಲ್ಲಿ ನಮಗೆ ಕೊಂಚ ಅನುಮಾನ ಮೂಡಿದರೂ, ಸಾಲು ಸಾಲು ನಿಖರ ಫಲಿತಾಂಶಗಳು ಆ ಎಲ್ಲ ಅನುಮಾನಗಳಿಗೆ ತಣ್ಣೀರನ್ನು ಎರಚುತ್ತಿವೆ. ಅಲ್ಲದೆ ಈ ಅಂಕಿ ಅಂಶಗಳನ್ನು ದೇಶ ವಿದೇಶದ ಹಲವಾರು ಖ್ಯಾತ ವಿಜ್ಞಾನಿಗಳೇ ಪರೀಕ್ಷಿಸಿ ಒಪ್ಪಿಕೊಂಡಿದ್ದಾರೆ.

ನಾವು ನಿತ್ಯ ಮನೆಯಲ್ಲಿ ಬಳಸುವ 40 ವ್ಯಾಟ್ ಬಲ್ಬ್ ಅನ್ನು ಒಂದೇ ಸಮನೆ 25 ಘಂಟೆಗಳ ಉರಿಸಲು ಬೇಕಾಗುವ ಶಕ್ತಿಯ ಪ್ರಮಾಣ 1 ಕಿಲೋ ವ್ಯಾಟ್ ಹವರ್ ( 40Watt x 25 Hour). ಸಮೀಕ್ಷೆಗಳ ಪ್ರಕಾರ ನಮ್ಮ ದೇಶದ ಪ್ರತಿ ಮನೆಯ ವರ್ಷದ ವಿದ್ಯುತ್ತ್ ಬೇಡಿಕೆಯ ಸರಾಸರಿ ಪ್ರಮಾಣ ಸುಮಾರು 900 ರಿಂದ 1000 kWH. ಇಷ್ಟೊಂದು ವಿದ್ಯುತ್ತ್ ಬೇಡಿಕೆಯಿರುವ ದೇಶಕ್ಕೆ ಪೂರ್ಣ ಪ್ರಮಾಣದ ಪರಿಹಾರವನ್ನು ಒದಗಿಸಲಾಗದಿದ್ದರೂ ಬಹುಮಟ್ಟಿನ ಯಶಸ್ಸನ್ನು ತಿವಾರಿಯವರ ಸಂಶೋಧನೆಯಿಂದ ನಿರೀಕ್ಷಿಲಾಗಿದೆ. ಅದಾಗಲೇ 10kWH ಹಾಗು 25kWH ಸಾಮರ್ಥ್ಯದ ಜನರೇಟರ್ ಗಳನ್ನು ರೂಪಿಸುವಲ್ಲಿ ತಂಡ ಸಫಲವಾಗಿದೆ. ಅಲ್ಲದೆ ನಮ್ಮ ‘ಕರ್ನಾಟಕ ಪವರ್ ಕಾರ್ಪೋರೇಶನ್ ಲಿಮಿಟೆಡ್’ (KPCL) ಒಂದೆರೆಡು ಪ್ರದೇಶಗಳಲ್ಲಿ ಇವುಗಳನ್ನು ಅಳವಡಿಸಿ ಯಶಸ್ವಿಯಾಗಿರುವುದೂ ಉಂಟು. ಮುಂದೆ ಈ ಅಭೂತಪೂರ್ವ ಸ್ಪೇಸ್ ಜನರೇಟರ್ ನ ಪೇಟೆಂಟ್ ಅನ್ನು ತಿವಾರಿಯವರು ಯಾವಾಗ ಪಡೆದುಕೊಂಡರೋ ಆಗಲೇ ನೋಡಿ ಜಗತ್ತಿಗೆ ಇಂಧನವಿಲ್ಲದೆ ಚಲಿಸಬಲ್ಲ ಜನರೇಟರ್ ನ ಬಗ್ಗೆ ಹಂತ ಹಂತವಾಗಿ ತಿಳಿಯಲ್ಪಟ್ಟಿದ್ದು. ನಿರೀಕ್ಷೆಯಂತೆ ಸೌಧಿ ಅರೇಬಿಯಾ, ಬ್ರಿಟನ್, ಅಮೇರಿಕದಂತಹ ಹಲವಾರು ತೈಲಭರಿತ ದೈತ್ಯ ರಾಷ್ಟ್ರಗಳು ಈ ಸಂಶೋಧನೆಯ ವಿರುದ್ಧ ಚಕಾರವೆತ್ತಿವೆ. ಪೆಟ್ರೋಲ್ ಡಿಸೇಲ್ ಗಳೆಂಬ ಪಲ್ಯ ಉಪ್ಪಿನಕಾಯಿಗಳಿದೆ ಊಟವನ್ನು ಹೇಗೆ ಮಾಡಿಯಾರು ಎಂಬ ಭ್ರಮಲೋಕದ ನಾಯಕರುಗಳು! ಅದೇನೇ ಇರಲಿ, ತಿವಾರಿಯವರ ಈ ಯಂತ್ರದ ಬಗ್ಗೆ ಸರ್ಕಾರದ ವಿಶ್ವಾಸಭರಿತ ಪ್ರೋತ್ಸಹ ಹಾಗು ಭದ್ರತೆ ಮುಂದೊಂದು ದಿನ ಜಗತ್ತೆ ಭಾರತವನ್ನು ಬೆರಗು ಕಣ್ಣಿನಿಂದ ನೋಡುವಂತೆ ಮಾಡಬಹುದು ಅಲ್ಲದೆ ನಶಿಸಿಹೋಗುತ್ತಿರುವ ಇಂಧನಗಳು ನಾಳೆ ನಮ್ಮ ಕಣ್ಣ ಮುಂದೆಯೇ ಬರಿದಾದಾಗ ಏನೆಂಬ ಪ್ರೆಶ್ನೆಗೆ ಈ ಸಂಶೋಧನೆ ಸೂಕ್ತ ಪರಿಹಾರವನ್ನು ನೀಡಬಲ್ಲದು. ಸದ್ಯಕ್ಕೆ ಹೆಚ್ಚಿನ ಸಾಮರ್ಥ್ಯದ ಜನರೇಟರ್ ಗಳನ್ನು ರೂಪಿಸುವತ್ತ ಈ ತಂಡದ ಗಮನ ಕೇಂದ್ರೀಕೃತವಾಗಿದೆ. ಈಗ ಏನಿದ್ದರೂ ತಿವಾರಿಯವರ ಹಾಗು ಸರ್ಕಾರದ ಮುಂದಿನ ನಡೆಯ ಮೇಲೆಯೇ ಎಲ್ಲರ ಗಮನ. ಅಲ್ಲಿಯವರೆಗೂ Just Wait & Watch!

ಹೆಚ್ಚಿನ ಮಾಹಿತಿಗೆ :

http://www.tewari.org/

http://www.rexresearch.com/tewari/tewari.htm

http://economictimes.indiatimes.com/news/science/bengaluru-innovator-creates-super-high-efficiency-machine-that-produces-power-from-vacuum/articleshow/46832793.cms

Thursday, February 9, 2017

ದಕ್ಷಿಣದಲ್ಲೊಂದು ದಿನ...


ಸ್ವಾರ್ಥತೆಯಂಬ ಕಾಮಾಲೆ ಕಣ್ಣಿನ ಮೇಲೆ ಹಳದಿ ಬಣ್ಣದ ಕನ್ನಡಕವನ್ನು ಧರಿಸಿರಿವ ಜಗತ್ತಿನ ಯಾವುದೋ ಮೂಲೆಯಿಂದ ದೂರದ ಜಾತ್ರೆಗೆ ಹೊರಟ್ಟಿದ್ದ ಅಣ್ಣ ತಮ್ಮರ ಜೋಡಿ ಮನೆ ಬಿಟ್ಟು ಆಗಲೇ ನಾಲ್ಕು ತಾಸಾಗಿ, ಉರಿ ಬಿಸಿಲು ರಣವಾಗಿ, ಗಂಟಲು ಒಣಗಿ, ಕುಡಿಯಲು ನೀರು ಸಿಗದೇ, ಪರಿತಪಿಸುತ್ತಿದ್ದಿತು. ಅಣ್ಣ ಅತ್ತಿತ್ತ ಅಲೆದಾಡಿ ನೀರಿರುವ ಒಂದು ಕರೆಯನ್ನು ಹುಡುಕಿ ತನ್ನ ಸಣ್ಣ ತಮ್ಮನನ್ನು ಅಲ್ಲಿಗೆ ಕರೆದೊಯ್ದ. ಇಬ್ಬರು ಸಾಧ್ಯವಾದಷ್ಟು ನೀರನ್ನು ಹೀರಿ ಪಯಣವನ್ನು ಮುಂದುವರೆಸಿದರು. ಮೊದಲ ಬಾರಿಗೆ ಜಾತ್ರೆಗೆ ಹೋಗುತ್ತಿರುವ ತಮ್ಮ, ಜಾತ್ರೆಯ ನೋಡುವ ಮೊದಲೇ ಅಣ್ಣನ ವರ್ಣನೆಯಿಂದ ಒಮ್ಮೆ ಅದನ್ನು ಕಲ್ಪಿಸಿಕೊಳ್ಳುವ ತವಕದಲ್ಲಿರುತ್ತಾನೆ. ತಂಪು ನೀರಿನ ಸಾಂತ್ವನ ಹಿತವೆನಿಸಿದ ಮೇಲೆ ಒಂದರಿಂದೊಂದು ಮೂಡುತ್ತಿದ್ದ ಪ್ರೆಶ್ನೆಗಳ ಉಪಟಳಕ್ಕೆ ಸುಮ್ಮನಿರದೆ ಯಾರೋ ಒಡೆದುಕೊಂಡು ಹೋಗುತ್ತಿದ್ದ ಹೋರಿಯನ್ನು ಕಂಡು 'ಅಣ್ಣ, ಆ ಹೋರಿಯ ಕೊಂಬು ಹಾಗು ಮೈಯ ಮೇಲೆ ಬಣ್ಣವನ್ನೇಕೆ ಮೆತ್ತಿದ್ದಾರೆ?' ಎಂದು ಕೇಳುತ್ತಾನೆ. ಅದಕ್ಕೆ ಅಣ್ಣನು ಅದು ಜಾತ್ರೆಯಲ್ಲಿ ಓಡುವ ಹೋರಿಯೆಂದು, ಅದನ್ನು ಹಿಡಿದು ನಿಲ್ಲಿಸಿದ ವ್ಯಕ್ತಿ ವಿಜಯಶಾಲಿಯೆಂದೂ, ಅಲ್ಲದೆ ಇದೇ ರೀತಿ ಹಲವು ಹೋರಿಗಳು ಬೇರೆ ಬೇರೆ ಊರುಗಳಿಂದ ಬರುತ್ತಿವೆ ಎನ್ನುತ್ತಾನೆ. ತುಸು ಹೊತ್ತು ಸುಮ್ಮನಿದ್ದ ತಮ್ಮ 'ಓಡುವ ಹೋರಿಯನ್ನ ಹಿಡಿಯುವುದರಿಂದ ಏನು ಸಿಗುತ್ತದೆ?' ಎಂಬ ಪ್ರೆಶ್ನೆಯ ಕೊನೆಯಲ್ಲಿ ಅವನ ಮುಖದ ಮೇಲೆ ಮೂಡಿದ ಗೊಂದಲದ ಭಾವವನ್ನು ಕಂಡು ಒಳಗೊಳಗೇ ನಕ್ಕ ಅಣ್ಣ ತನಗೆ ಗೊತ್ತಿಲ್ಲವೆನ್ನುತ್ತಾ ಸುಮ್ಮನಾಗುತ್ತಾನೆ. ಗೊತ್ತಿದ್ದರೂ ಏನೆಂದು ಹೇಳುವುದು? ಜಾತ್ರೆಗೆ ಹೋದಮೇಲೆ ಅವನೇ ನೋಡಿ ತಿಳಿಯಲಿ ಎಂದುಕೊಳ್ಳುತ್ತಾನೆ.

ಉರಿ ಬಿಸಿಲಿನ ಧಗೆಗೆ ದಣಿದು ದಾರಿಯ ಪಕ್ಕದಲ್ಲಿದ್ದ ಹಲಸಿನ ಮರದ ಕೆಳಗೆ ಇಬ್ಬರು ತುಸು ಹೊತ್ತು ನಿಲ್ಲುತ್ತಾರೆ. ‘ಬಾಯಾರಿಕೆಯಾಗಿದೆಯಾ ?’ ಎಂದು ತಮ್ಮನನ್ನು ಮತ್ತೊಮ್ಮೆ ವಿಚಾರಿಸಿದಾಗ ಉತ್ತರವಾಗಿ 'ಅಣ್ಣ, ನಿಜ ಹೇಳು.. ಓಡುವ ಹೋರಿಗಳನ್ನ ಹಿಡಿಯುವುದರಿಂದ ಅವರಿಗೆ ಏನು ಸಿಗುತ್ತೆ' ಎಂಬ ಪ್ರೆಶ್ನೆಯನ್ನೇ ತಮ್ಮ ಹರಿಬಿಡುತ್ತಾನೆ. ಹೇಳಬಾರದೆಂದುಕೊಂಡಿದ್ದ ಅಣ್ಣ ಕೊನೆಗೆ, ಇದು ಒಂದು ಬಗೆಯ ಕ್ರೀಡೆಯೆಂದೂ, ಸುಗ್ಗಿ ಹಬ್ಬದ ನಂತರ ಹಳ್ಳಿಗರ ಮನೋರಂಜನೆಗಾಗಿ, ಕೆಲವೆಡೆ ಸಂಪ್ರದಾಯವಾಗಿ ಇನ್ನೂ ಕೆಲವೆಡೆ ಹಬ್ಬವಾಗಿಯೂ ಆಚರಿಸುತ್ತಾರೆ, ಗಟ್ಟಿಮುಟ್ಟಾದ ಎತ್ತುಗಳನ್ನ ಇದಕ್ಕೆಂದೇ ತಯಾರು ಮಾಡುತ್ತಾರೆ ಎಂದು ಸುಮ್ಮನಾಗುತ್ತಾನೆ. ಅಷ್ಟರಲ್ಲಾಗಲೇ ಪಯಣ ಮತ್ತೆ ಮುಂದುವರೆದಿರುತ್ತದೆ. ಅಣ್ಣ ಮುಂದುವರೆಸಿ, ‘ಅದು ಬಹಳ ಒಳ್ಳೆ ತಯಾರಿಯೇ, ಆದರೆ, ಅದರಿಂದ ಪ್ರತಿಫಲವನ್ನು ಪಡೆಯಬೇಕು ಎಂಬುದೇ ಅದರ ಹಿಂದಿನ ಕಾಣದ ನೆರಳಾಗಿರುತ್ತದೆ .ತನ್ನ ಹೋರಿ ಗೆಲ್ಲಲಿ ಎಂಬ ಆಸೆಗೆ ಇಷ್ಟೆಲ್ಲಾ. ಅಲ್ಲಿ ಒಂದು ಸಣಕಲು ಹೋರಿ ದಿನವಿಡೀ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರೆ, ಇಲ್ಲಿ ಈ ಗಡುಸು ಹೋರಿಗೆ ರಾಜ ಮರ್ಯಾದೆ! ಅಲ್ಲಿ ಅದಕ್ಕೆ ಒಣಹುಲ್ಲಿನ ಭಕ್ಷ್ಯವಾದರೆ ಇಲ್ಲಿ ಇದಕ್ಕೆ ಬೇಯಿಸಿದ ಹುರುಳಿ ಕಾಳುಗಳ ಸವಿಯುವ ಸುಖ. ಒಮ್ಮೆ ಈ ಹೋರಿಗೆ ವಯಸ್ಸಾಯಿತೋ, ಇದಕ್ಕೂ ಅದೇ ಗತಿ. ನಂತರ ಮತ್ತೊಂದು ಎಳೆಮರಿ ಆಟಕ್ಕಾಗಿ ತಯಾರಾಗುತ್ತದೆ’ ಎಂದು ಸುಮ್ಮನಾಗುತ್ತಾನೆ.
‘ಅಷ್ಟೆಲ್ಲ ಖರ್ಚು ಮಾಡಿ, ನಿಗಾ ಮಾಡಿ, ಪ್ರೀತಿಯಿಂದ ಸಾಕುವುದು ಒಳ್ಳೆಯದೇ ಅಲ್ವ? ಕೊನೆಪಕ್ಷ ಅದು ಪ್ರಾಣಿ, ಗೇಯುವುದು ಹಾಗು ಮಲಗುವುದಷ್ಟೇ ಅದರ ಕಾಯಕ ಎಂಬ ಹೀನ ಮನಸ್ಥಿತಿಯಿಂದಾದರೂ ಜನರು ಹೊರ ಬರುತ್ತಾರಲ್ಲ’ ಎಂದ ತಮ್ಮನಿಗೆ, 'ಗೆಲ್ಲಬೇಕೆಂಬ ಸ್ವಾರ್ಥತೆಯೇ ಮನದೊಳಗೆ ತುಂಬಿಕೊಂಡಿರುವಾಗ ಎಲ್ಲಿಯ ಪ್ರೀತಿ, ಎಲ್ಲಿಯ ನಿಗಾ ತಮ್ಮ?' ಎಂದು ಸುಮ್ಮನಾಗುತ್ತಾನೆ. ತಮ್ಮ ಮರು ಪ್ರೆಶ್ನೆ ಹಾಕುವುದಿಲ್ಲ. ಜಾತ್ರೆ ತಲುಪಲು ಇನ್ನು ಕೆಲ ತಾಸು ನೆಡೆಯಬೇಕು ಎಂದು ಯಾರೋ ಹೇಳಿದನ್ನು ಕೇಳಿದಂತಾಯಿತು. ಸ್ವಲ್ಪ ಸಮಯದ ನಂತರ ತಮ್ಮ ಮುಂದುವರೆಸಿ 'ಈ ಕ್ರೀಡೆ ಹೇಗಿರುತ್ತದೆ, ಗೆಲ್ಲುವುದು ಅಂದರೆ ಏನು? ಸೋಲುವುದು ಹೇಗಿರುತ್ತದೆ??' ಎಂದು ಕೇಳುತ್ತಾನೆ. ಆದರೆ ಉತ್ತರ ಹೇಳಲು ಅಣ್ಣ ನಿರಾಕರಿಸಿ ಮಾತನಾಡದೆ ಬೇಗ ಬೇಗ ನೆಡೆಯಬೇಕೆಂದು ಹೇಳುತ್ತಾನೆ. ತಕ್ಷಣ ಇಳಿಬಿದ್ದ ಮುದ್ದು ತಮ್ಮನ ಮುಖವನ್ನು ಗಮನಿಸಿ ' ಅದು ಸಾವಿರಾರು ಜನರು ಗುಂಪುಗೊಂಡಿರುವ ಸಾಗರ. ಎಲ್ಲರೂ ಕತ್ತಲು ಕೋಣೆಯೊಳಗಿಂದ ಹೊರಬರುವ ಹೋರಿಯನ್ನು ಜಿಗಿದು ಹಿಡಿಯುವ ತವಕದಲ್ಲಿರುತ್ತಾರೆ. ತೊಡೆಯನ್ನು ತಟ್ಟಿಕೊಳ್ಳುತ್ತಿರುತ್ತಾರೆ' ಎಂದಾಗ ತಮ್ಮನ ಕಿವಿ ನಿಮಿರುತ್ತದೆ.

'ಆಮೇಲೆ?'

'ಅವರಿಗೆ ಕೋಣವನ್ನು ತಬ್ಬಿ ಹಿಡಿದು, ಗೆದ್ದು ಬೀಗುವ ಚಟವಾದರೆ, ಕೋಣಕ್ಕೆ ಇದ್ದೆನೋ ಬಿದ್ದೆನೋ ಎಂದು ತಪ್ಪಿಸಿಕೊಂಡು ಓಡುವ ಬವಣೆ! ಬೆಕ್ಕಿಗೆ ಚಿನ್ನಾಟ ಆದರೆ ಇಲಿಗೆ ಪ್ರಾಣ ಸಂಕಟ ಅಂತಾರಲ್ಲ ಹಾಗೆ' ಎನ್ನುತ್ತಾನೆ.

'ಆದ್ರೆ, ಆ ಕೋಣ ಯಾಕೆ ಓಡಬೇಕು, ಸುಮ್ನೆ ಅದ್ರ ಪಾಡಿಗೆ ಅದು ನಿಂತಲ್ಲೇ ನಿಂತ್ರೆ ಯಾರಿಗ್ ಏನ್ ಮಾಡೋಕ್ ಆಗುತ್ತೆ ?' ಎಂದ ತಮ್ಮನ ಮುಗ್ದ ಪ್ರೆಶ್ನೆಯ ದ್ವಂದ್ವವನ್ನು ಅರಿತ ಅಣ್ಣ, ‘ಹೋರಿಗಳು ಓಡ್ಲಿಲ್ಲ ಅಂದ್ರೆ, ಅದರ ಬಾಲವನ್ನು ಹಿಡಿದು ಬಾಯಿಂದ ಕಚ್ಚುವುದಾಗಿಯೂ, ಚೂಪಾದ ಅಸ್ತ್ರಗಳಿಂದ ತಿವಿಯುವುದಾಗಿಯೂ, ಮದಬಂದಂತೆ ಓಡಲು ಕಣ್ಣಿಗೆ ಮೆಣಸಿನಕಾಯಿಯನ್ನು ತುರುಕುವುಗಾಗಿಯೂ, ಕೆಲವೆಡೆ ಕುಡಿದು ತುದಿ ಮುರಿದ ಬುಗುರಿಯಂತೆ ಕುಣಿಯುತ್ತ ಜನರು ಹೋರಿಯ ಬಾಯೊಳಕ್ಕೂ 'ಎಣ್ಣೆ'ಯ ಸ್ವಾಹಾವನ್ನು ಮಾಡಲಾಗುವುದು ಎಂದು ಕೇಳಿದ್ದೀನಿ’ ಎಂದಾಗ ತಮ್ಮ ತನ್ನ ಬೆರಗು ಕಣ್ಣುಗಳಿಂದ ಅಣ್ಣನನ್ನೇ ನೋಡುತ್ತಿರುತ್ತಾನೆ. ಅಣ್ಣ ಮುಂದುವರೆಸಿ, ‘ಇಲ್ಲಿಯಾದರು ಪರವಾಗಿಲ್ಲ ತಮ್ಮ, ಹೊರದೇಶಗಳಲ್ಲಿ ಈ ಆಟ ಇನ್ನೂ ವಿಚಿತ್ರ. ಅಲ್ಲಿ ಆಟದ ಮೈದಾನದ ಒಳಗೆ ಹೋರಿಗಳನ್ನು ಬಿಟ್ಟು, ಕೆಂಪು ಬಟ್ಟೆಗಳನ್ನೇ ಬಂಡವಾಳವಾಗಿಸಿಕೊಂಡು, ಚೂರಿಗಳಿಂದ ಹತ್ತಾರು ಜನ ಕೋಣವನ್ನು ತಿವಿದು ತಿವಿದು ಸಾಯಿಸುವುದೇ ಒಂದು ಆಟವಂತೆ! ಅಲ್ಲಿ ಜೀವವೊಂದು ರಕ್ತ ಕಾರಿ ಸಾಯಿತ್ತಿದ್ದಾರೆ ಇತ್ತ ಜನರ ಗುಂಪು ಪ್ರತಿ ಚೂರಿಯ ಇರಿತಕ್ಕೂ ಕೇಕೆ ಹಾಗುತ್ತ ಕುಣಿಯುತ್ತಿರುತ್ತದೆ ಎಂದು ಕೇಳಿರುವೆ ಎನ್ನುತ್ತಾನೆ. ಆ ಆಟಗಳಿಗೆ ಹೋಲಿಸಿದರೆ ಈ ಆಟಗಳೇ ಕೋಣಗಳಿಗೆ ಸುಖದ ಸುಪ್ಪತ್ತಿಗೆ ಎನ್ನುತ್ತಾನೆ. ಕೊನೆ ಪಕ್ಷ ಹೋರಿಯ ಬಾಲವನ್ನು ಹುಚ್ಚು ನಾಯಿಗಳಂತೆ ಕಚ್ಚುವ ಮುನ್ನ ಒಮ್ಮೆಯಾದರೂ ಕಾಯಿ ಒಡೆದು, ಕುಂಕುಮವನ್ನಿಟ್ಟು ಕೈ ಮುಗಿಯುತ್ತಾರೆ ಇವರು ಎನ್ನುತಾನೆ.

ಅಷ್ಟರಲ್ಲಾಗಲೇ ಭಯದ ಛಾಯೆ ತಮ್ಮನನ್ನು ಅವನಿಗರಿಯದಂತೆ ಆವರಿಸುತ್ತದೆ. ಮುಂದೇನು ಕೇಳ ಬೇಕೆಂದು ಅರಿಯದೆ ಸುಮ್ಮನಾದ ತಮ್ಮನನ್ನು ‘ಏನಾಯಿತು’ ಎಂದು ಕೇಳಿದಾದ 'ಅಣ್ಣ, ಬಾ ನಾವು ವಾಪಸ್ ಹೋಗೋಣ.. ಈ ಹಿಂಸೆನ ಯಾರಾದರೂ ಆಟ ಅಂತಾರ..?! ಮಾನವರಿಗೆ ಅದು ಆಟವಾದರೆ ಪ್ರಾಣಿಗಳಿಗೆ ಜೀವನ. ಅವರ ಸುಖ ಸಮಾರಂಭಗಳಿಗೆ ಪ್ರಾಣಿಗಳೇಕೆ ಆಟದ ಗಾಳವಾಗಬೇಕು..? ಅವರು ಅಷ್ಟೆಲ್ಲ ಮಾಡುವ ಮೊದಲು ಪ್ರಾಣಿಗಳ ಅಭಿಪ್ರಾಯವನ್ನು ಒಮ್ಮೆ ಕೆಳಬಾರದೇ..?! ಎಲ್ಲ ಮಾನವ ಹೇಳಿದ ಹಾಗೆ ನೆಡೆದರೆ ಆ ಆಟಕ್ಕಾದರೂ ಮರ್ಯಾದೆ ಇರುತ್ತದೆಯೇ? ಪ್ರಾಣಿಗಳ ಅಭಿಪ್ರಾಯವೂ ಅವಶ್ಯವಾಗುವುದಿಲ್ಲವೇ?' ಎನ್ನುತ್ತಾನೆ. ಅಣ್ಣನಿಗೆ ಉತ್ತರಿಸಲು ಪದಗಳ ಕೊರತೆ ಕಾಣುತ್ತದೆ. ನಂತರ ಇಲ್ಲಿಯವರೆಗೂ ಬಂದು ಈಗ ವಾಪಾಸ್ ಹೋದರೆ ಸರಿಯಾಗುವುದಿಲ್ಲ ಬಾ ಇನ್ನೇನು ಜಾತ್ರೆ ಬಂದೇ ಬಿಟ್ಟಿತು ಎಂದು ಮನವೊಲಿಸಿ ಕರೆದುಕೊಂಡು ಹೋಗುತ್ತಾನೆ.

ತಮ್ಮನ ಪ್ರೆಶ್ನೆಯ ಹಿಂದಿದ್ದ ಸಾಮಾನ್ಯವಾದ ಹಾಗು ಅಷ್ಟೇ ಮಹತ್ವವಾದ ಪ್ರೆಶ್ನೆಯ ಬಗ್ಗೆ ಯೋಚಿಸುತ್ತಾ ಅಣ್ಣ ನಿರ್ಲಿಪ್ತ ಭಾವದಿಂದ ಮುಂದುವರೆಯುತ್ತಾನೆ. ನಂತರ ತಮ್ಮನನ್ನು ಉದ್ದೇಶಿಸಿ 'ನಮ್ಮ ದೇಶದಲ್ಲಿ ಸಂವಿಧಾನ ಎಂಬ ಒಂದು ದೊಡ್ಡ ಕಾನೂನು ಇದೆಯೆಂತೆ. ಅದರಲ್ಲಿ ಎಲ್ಲ ಜನರಿಗೂ ಒಂದೇ ನ್ಯಾಯವಂತೆ. ಮೇಲು-ಕೀಳು, ಬಡವ-ಬಲ್ಲಿದ, ಜಾತಿ-ಪಂಥ ಹೀಗೆ ಏನನ್ನೂ ಲೆಕ್ಕಿಸದೆ ಎಲ್ಲರಿಗೂ ಒಂದೇ ಸಮನಾಗಿ ರೂಪಿಸಿರುವ ಕಾನುನಂತೆ ಅದು. ಆದರೆ 'ಮಾನವ-ಅಮಾನವ' ರಲ್ಲಿ ಮಾತ್ರ ಅದರಲ್ಲಿ ತಾರತಮ್ಯ ಇದೆಯಂತೆ. ಅದರಲ್ಲಿ ಮಾನವರಿಗೆ ಇರುವ ಮೂಲಬೂತ ಹಕ್ಕು ಪ್ರಾಣಿಗಳಿಗಿಲ್ಲ! ಅವರಿಗರುವ ವಾಕ್ ಸ್ವಾತಂತ್ರ್ಯ ಇವುಗಳಿಗಿಲ್ಲ, ಮಾತೆ ಬಾರದ ಮೇಲೆ ವಾಕ್ ಸ್ವಾತಂತ್ರ್ಯಕ್ಕೆಲ್ಲಿಂದ ಬೆಲೆ ಬಿಡು. ಆದರೂ ಅದ್ಯಾರೋ ಒಂದಿಷ್ಟು ಜನ ಈ ರೀತಿ ಮಾಡುವುದು ತಪ್ಪು ಎಂದು ಹಠಮಾಡಿ ಅದೇನೋ ಸುಪ್ರೀಂ ಕೋರ್ಟ್ ನಿಂದ ನ್ಯಾಯ ತಂದರಂತೆ. ಆಗ ತಮ್ಮ ಮನೆಯ ಬೆಂಕಿಯನ್ನು ಆರಿಸುವ ಬದಲು ಬೇರ್ಯಾವ ಮನೆಗೆ ಬೆಂಕಿ ಬಿದ್ದಿದೆ ಎಂದು ನೋಡುವ ತೆವಲಿನ ಜನ, ಬೂತ ಬಡಿದವಂತೆ ರೊಚ್ಚಿಗೆದ್ದರಂತೆ! ಜಗತ್ತೇ ಕೊನೆಯಾದಂತೆ ವಿಲ-ವಿಲ ಒದ್ದಾಡಿಕೊಂಡರಂತೆ! ಕೆಲವರು ಇದನ್ನ ನಿಲ್ಲಿಸೋದಾದ್ರೆ ದೇವ್ರ ಹೆಸ್ರಲ್ಲಿ, ಹಬ್ಬದ ನೆಪದಲ್ಲಿ ರಾಶಿ-ರಾಶಿ ಪ್ರಾಣಿಗಳನ್ನೂ ಕಡಿಯೋದ ನಿಲ್ಲಿಸಲಿ ಎಂದು ಒಣ ಸಬೂಬನ್ನು ಕೊಟ್ಟರಂತೆ. ಅದು ದೊಡ್ಡ ಕಳ್ತನ, ಆದ್ರೆ ಇದು ಚಿಕ್ಕ ಕಳ್ತನ. ಅವ್ರ್ ಅಷ್ಟ್ ಕದ್ರೆ, ನಾವ್ ಇಷ್ಟೇ ಕದಿಯೋದು, ಏನಾಗಲ್ಲ ಬಿಡಿ ಅಂದ್ರಂತೆ! ’ ಎಂದು ಸುಮ್ಮನಾಗುತ್ತಾನೆ.

ಅಷ್ಟರಲ್ಲಿ ತಮ್ಮ ತನ್ನ ಅಣ್ಣನ ಮಾತುಗಳಲ್ಲಿ ಕಲ್ಪಿಸಿಕೊಂಡ ಜಾತ್ರೆ ಬಂದೇ ಬಿಡುತ್ತದೆ. ಆದರೆ ಅದು ತಮ್ಮನ ಎಳೆಯ ಕಲ್ಪನೆಗೂ ಮೀರಿ ದೊಡ್ಡಗಾಗಿರುತ್ತದೆ. ಅತಿ ವಿಶಾಲವಾದ ಬಯಲು ಪ್ರದೇಶದಲ್ಲಿ ಎಲ್ಲಿ ನೋಡಿದರೂ ಬಣ್ಣ ಬಣ್ಣದ ವಸ್ತ್ರವನ್ನು ತೊಟ್ಟಿರುವ ವ್ಯಕ್ತಿಗಳೇ. ತಿಂಡಿ ತಿನಿಸುಗಳ ಅಂಗಡಿಗಳು ಇರುವ ಸ್ಥಳದಿಂದ ಘಮ್ ಎಂದು ಕರಿದ ತುಪ್ಪದ ಸುವಾಸನೆ ಒಂದೆಡೆಯಾದರೆ, ಆಗಲೇ ಕುಡಿದು ತೂರಾಡುತ್ತಿರುವ ಹೆಂಡಕುಡುಕರ ಹಾಗು ಸಾರಾಯಿ ಅಂಗಡಿಗಳ ಗುಂಪು ಮತ್ತೊಂದೆಡೆ. ಅಷ್ಟರಲ್ಲಾಗಲೇ ಪಕ್ಕದ ನದಿಯ ದಂಡೆಯ ಮೇಲೆ ಅಣ್ಣ ಹೇಳುತ್ತಿದ್ದ ಹಾಗೆಯೇ ಹೋರಿಗಳನ್ನು ಓಡಿಸುವ ಆಟ ಶುರುವಾಗುವುದರಲಿತ್ತು. ಅಣ್ಣ ಹಾಗು ತಮ್ಮ ಒಂದು ಎತ್ತರದ ಪ್ರದೇಶಕ್ಕೆ ಹೋಗಿ ನಿಂತರು. ಹೋರಿಗಳ ಮಾಲೀಕರು ಒಬ್ಬೊಬ್ಬರಾಗೆ ತಮ್ಮ ಹೋರಿಗಳನ್ನು ತರುತ್ತಿದ್ದರೇ ನೋಡುಗರು ಅವುಗಳ ಕೊಂಬು, ತಲೆ ಹಾಗು ಮೈಯನ್ನು ಮುಟ್ಟಿ ನಮಸ್ಕಾರವನ್ನು ಮಾಡುತ್ತಿದ್ದರು! ಪ್ರತಿಯೊಬ್ಬರ ಸ್ಪರ್ಶಕ್ಕೂ ಕಿವಿ ಚಟ್ಟೆಯನ್ನು ಸರ್ರನೆ ಹಿಂದಕ್ಕೆ ತಿರುಗಿಸಿ ಬಾಲವನ್ನು ಎಡಕ್ಕೂ ಬಲಕ್ಕೂ ಬಡಿಯುತ್ತಿದ್ದರೆ ಆ ಹೋರಿಯ ಕಣ್ಣಗಳಲ್ಲಿ ಅದೆಂಥಹ ಪ್ರೀತಿಯ ಭಾವ! ಇಷ್ಟೊಂದು ಮುಗ್ದ ಹೋರಿಗಳು ಹೇಗೆ ಆ ಪಾಟಿ ಮದವೇರಿ ಓಡುತ್ತವೆ ಎಂಬುದ ನೋಡಬೇಕು ಎಂಬ ಕುತೂಹಲದಿಂದ ತಮ್ಮ ಕಾಯುತ್ತಾನೆ. ಹೋರಿಗಳಿಗೆ ಪೂಜೆಯನ್ನು ಮಾಡಿ, ತಲೆಯ ಮೇಲೆ ಹರಿಶಿನ ಕುಂಕುಮವನ್ನು ಚೆಲ್ಲಿ, ಕೊಂಬಿಗೊಂಡು ಕೆಂಪು ಬಟ್ಟೆಯನ್ನು ಕಟ್ಟಿ ಚೌಕಕಾರದ ಕೋಣೆಯೊಳಗೆ ಅವುಗಳನ್ನು ನೂಕುತ್ತಾರೆ.

ಆ ಕೋಣೆಯೊಳಗೆ ಏನಾಯಿತ್ತೆಂದು ಅರಿಯುವುದರೊಳಗೆ, ಒಳಗೆ ಹೋದ ಹೋರಿ ಒಮ್ಮೆಲೇ ಗುಟುರುತ್ತಾ ಸಿಕ್ಕ ಸಿಕ್ಕವರನ್ನೆಲ್ಲ ಕೊಂಬಿನಲ್ಲಿ ತಿವಿಯುತ್ತಾ ನುಗ್ಗಿ ಓಡುತ್ತದೆ. ಗುಂಪುಕಟ್ಟಿದ್ದ ಜನರಲ್ಲಿ ಒಬ್ಬೊಬ್ಬರೇ ಅದರ ಮೇಲೆ ಹುಲಿಯಂತೆ ನೆಗೆದು, ಕುತ್ತಿಗೆಯ ಮೇಲೋ, ಬುಜದ ಮೇಲೋ, ಕೋತಿಗಂತೆ ಜೋತುಬೀಳತೊಡಗುತ್ತಾರೆ. ತಮ್ಮ ಶಕ್ತಿಯ ಹಿರಿಮೆಯನ್ನು ಮೂಕ ಪ್ರಾಣಿಯೊಂದನ್ನು ಭಯ ಬೀಳಿಸಿ ಓಡಿಸಿ ಅದನ್ನು ತಡೆಯುವುದರ ಮುಖೇನ ವ್ಯಕ್ತಪಡಿಸಲು ಹವಣಿಸುತ್ತಾರೆ. ಆಟವೋ, ಓಟವೋ, ಭಯವೋ, ಭಕ್ತಿಯೋ, ಹೋರಿಯಂತೂ ಇದ್ದೆನೋ ಬಿದ್ದೆನೋ ಎಂದು ಓಡುತ್ತದೆ. ಸಿಕ್ಕ ಸಿಕ್ಕ ಪೊದೆಗಳೊಳಗೆ, ಹಳ್ಳ ಗುಂಡಿಗ ಗಳ್ಯಾವುದನ್ನು ಲೆಕ್ಕಿಸದೆ ಓಡತೊಡಗುತ್ತದೆ. ಹೀಗೆಯೇ ಓಡಿದ ಹೊರಿಯೊಂದು ದೊಡ್ಡ ಗೊಳ್ಳದ ಒಳಗೆ ಬಿದ್ದ ರಭಸಕ್ಕೆ ಅದರ ಕಾಲು ಮುರಿದು ನೇತಾಡತೊಡಗುತ್ತದೆ! ಮುರಿದ ಗೆಣ್ಣಿನ ಸಂದಿಯಿಂದ ರಕ್ತವೂ ಚಿಮ್ಮತೊಡಗುತ್ತದೆ.

ಇತ್ತಕಡೆ ತಮ್ಮ ತೆರೆದ ಬಾಯಿಯನ್ನು ಹಾಗೆಯೇ ಬಿಟ್ಟು, ಕಣ್ಣುಗಳನ್ನು ಸಾಧ್ಯವಾದಷ್ಟು ಹಿಗ್ಗಿಸಿ ನೆಡೆಯುವುದನ್ನೆಲ್ಲ ನೋಡುತ್ತಿರುತ್ತಾನೆ. ಅಣ್ಣನ ಮೈಯಿಗೆ ಅಂಟಿಕೊಂಡು ನಿಂತಿದ್ದ ಆತನ ಎದೆಬಡಿತ ಒಂದೇ ಸಮನೆ ಹೆಚ್ಚತೊಡಗುತ್ತದೆ.

ಕಾಲುಮುರಿದ ಹೋರಿ ಇನ್ನು ಓಡಲಾಗುವುದಿಲ್ಲ ಎಂದರಿತಾಗ ಅದರ ಮಾಲಿಕನಿಗೆ ಎಲ್ಲಿಲ್ಲದ ಕೋಪ ಹಾಗು ದುಃಖ ಒಮ್ಮೆಲೇ ಮೂಡುತ್ತದೆ. ಕೈಲಿದ್ದ ಬೆತ್ತದಿಂದ ರಪರಪನೆ ಹೋರಿಯ ಬೆನ್ನಿನ ಮೇಲೆ ಜಾಡಿಸತೊಡಗುತ್ತಾನೆ. ರಕ್ತದ ಮಡುವುನಲ್ಲಿ ನಿಂತಿದ್ದ ಹೋರಿ ಮುಂದೆ ಕದಲುವುದಿಲ್ಲ. ಸಿಟ್ಟು ಇಳಿಯುವವರೆಗೂ ಬಡಿದ ಮಾಲೀಕ, ಪಂಥ ಕಟ್ಟಿದ ಪರಿಣಾಮವಾಗಿ ಅವನಿಗೆ ಗೆಲ್ಲುವ ಅನಿವಾರ್ಯತೆಯ ನೆನಪಾಗುತ್ತದೆ. ಆತ ತಡಮಾಡದೆ ಎಲ್ಲರ ಬಳಿಗೂ ಹೋಗಿ 'ಯಾವುದಾದರೂ ಒಳ್ಳೆಯ ಹೋರಿ ಇದೆಯಾ' ಎಂದು ಅರೆ ಹುಚ್ಚನಂತೆ ಕೇಳತೊಡಗುತ್ತಾನೆ. ಎಲ್ಲರು ನಿರಾಕರಿಸಿದಾಗ ಅವನ ಕಣ್ಣು ಎತ್ತರದ ಜಾಗದಲ್ಲಿ ನಿಂತಿದ್ದ ಅಣ್ಣ ತಮ್ಮರ ಮೇಲೆ ಬೀಳುತ್ತದೆ! ಆತ ದಾಪುಗಾಲು ಹಾಕುತ್ತಾ ಇತ್ತ ಕಡೆ ಬರುವುದನ್ನು ಕಂಡ ತಮ್ಮ ಅಣ್ಣನಿಗೆ ಓಡಿಹೋಗೋಣವೆಂದು ಹೇಳುತ್ತಾನೆ! ಅಣ್ಣ ಬೇಡವೆನ್ನುತ್ತಾನೆ. ಹತ್ತಿರ ಬಂದ ಅವನ ಮುಖದಿಂದ ಹೆಂಡದ ನಾಥ ದೊಪ್ಪನೆ ಮುಖಕ್ಕೆ ಬಡಿಯುತ್ತಿರುತ್ತದೆ. ಆತ ಹತ್ತಿರಕ್ಕೆ ಬಂದವನೇ ಅಣ್ಣನನ್ನು ದುರುಗುಟ್ಟು ನೋಡಿ, ತುಟಿಯನ್ನು ಹಲ್ಲಿನಿಂದ ಕಚ್ಚಿ, ತಾನು ಹಿಡಿದಿದ್ದ ಕುಣಿಕೆಯ ಹಗ್ಗವನ್ನು ಅಣ್ಣನ ತಲೆಯ ಸುತ್ತ ಹಾಕಿಯೆ ಬಿಡುತ್ತಾನೆ! ಅಣ್ಣ ಒಂದೇ ಸಮನೆ ಕೊಸರಾಡ ತೊಡಗಿದರೆ ತಮ್ಮ 'ಅಂಬಾ' ಎನ್ನುತ ರೋದಿಸತೊಡಗುತ್ತಾನೆ! ಒಲ್ಲದ ಮನಸ್ಸಿನ ಅಣ್ಣನನ್ನು ಮಾಲೀಕ ಆಟದಲ್ಲಿ ಓಡಿಸಲು ಎಳೆದುಕೊಂಡು ಹೋದರೆ ಇತ್ತ ತಮ್ಮನ ರೋದನೆ ಮುಗಿಲು ಮುಟ್ಟುತ್ತದೆ. 'ಅಣ್ಣ ಹೆದರಬೇಡ, ನಾನು ಸಂವಿಧಾನದ ಕಾನೂನನ್ನು ಬಳಸಿ ನಿನ್ನನ ಬಿಡುಸ್ತಿನಿ. ಸುಪ್ರೀಂ ಕೋರ್ಟಿನಿಂದ ಆದೇಶ ತರತೀನಿ' ಎಂದು ಬಿಕ್ಕಳಿಸುತ್ತಿದ್ದ ತಮ್ಮನ ಮಾತನ್ನು ಕೇಳಿದಾಗ ಅಲ್ಲಿದ್ದ ಚಿಳ್ಳೆ-ಪಿಳ್ಳೆ ನಾಟಿ ಹೋರಿಗಳು ಗಹಗಹಿಸಿ ನಗಲಾರಂಭಿಸಿತ್ತವೆ..

Friday, February 3, 2017

ಆತ ಸೋಲಿಗೆ ಹೆದೆರೆನು ಎಂದ, ಈತ ಸಾವನ್ನೇ ಸೋಲಿಸಿ ಬಂದ....!

ಇಬ್ಬರೂ ವಿಶ್ವಪ್ರಸಿದ್ಧ ಎಡೆಗೈ ಬ್ಯಾಟ್ಸಮನ್ ಗಳು. ಒಮ್ಮೆ ಸ್ಕ್ರೀಜ್ ನಲ್ಲಿ ಇನ್ನಿಂಗ್ಸ್ ಕಟ್ಟಲು ಶುರುಮಾಡಿದರೆ ಚೆಂಡನ್ನು ಅನ್ನು ಬೌಂಡರಿಯ ಗೆರೆಯನ್ನು ದಾಟಿಸುತ್ತಾ ಕ್ರೀಡಾಂಗಳದಲ್ಲೇ ರಂಗೋಲಿಯ ಆಟವನ್ನು ಆಡುವವರು. ದೇಶವೇ ಹುಚ್ಚೆದ್ದು ಕುಣಿಯುವಂತೆ ಮಾಡುವರು. ಒಬ್ಬ ಆರು ಚೆಂಡುಗಳಿಗೆ ಆರು ಸಿಕ್ಸರ್ ಗಳನ್ನು ಬಾರಿಸಿದರೆ ಮತ್ತೊಬ್ಬ ಪ್ರತಿ ಚೆಂಡನ್ನು ಕ್ರೀಡಾಂಗಳದ ಹೊರಗೆ ಹೊಡೆಯಬಲ್ಲ ಸಾಮರ್ಥ್ಯದವನು! ಒಬ್ಬ ನಾಯಕನಾಗಿ ತಂಡವನ್ನು ಮುನ್ನೆಡೆಸಿದರೆ ಇನ್ನೊಬ್ಬ ಆ ನಾಯಕನ ತಂಡಕ್ಕೆ ಆಧಾರವಾದವನು. ಒಬ್ಬ ಹುಟ್ಟು ಹೋರಾಟದ ಸ್ವಭಾವದ ಗುರುವಾದರೆ, ಮತ್ತೊಬ್ಬ ಆತನ ನೆಚ್ಚಿನ ಕೆಚ್ಚಿನ ಶಿಷ್ಯ. ಅಲ್ಲದೆ ಈ ಇಬ್ಬರಲ್ಲೂ ಒಂದು ಗುಣ ಮಾತ್ರ ಹುಲಿಯ ಘರ್ಜನೆಯಂತೆ ಒಂದೇ ಸಮನಾಗಿದೆ. ಅಂದಿಗೂ ಹಾಗು ಇಂದಿಗೂ! 'ಕಮ್ ಬ್ಯಾಕ್' ಅಥವಾ ಪ್ರತಿ ಸೋಲಿನಲ್ಲೂ ಕುಗ್ಗದೆ, ನಿಲ್ಲದೆ, ನುಗ್ಗಿ ಮುನ್ನೆಡೆಯುವ ಗುಣ. ಇಬ್ಬರದೂ ಗೆಲ್ಲುವವರೆಗೂ ಸೋಲನೊಪ್ಪಿಕೊಳ್ಳದ ಜಾಯಮಾನದ ಬಣ. ಇಬ್ಬರೂ ಆ ಗುಣವನ್ನು ತಮ್ಮ ರಕ್ತದಲ್ಲೇ ಹೊತ್ತು ತಂದವರು. ಇದೆ ಗುಣದಿಂದ ತಮ್ಮದೇ ಆದ ಒಂದು ವಿಶಿಷ್ಟ ಅಭಿಮಾನಿ ಬಳಗವನ್ನು ಗಳಿಸಿಕೊಂಡವರು. ಇವರಲ್ಲಿ ಒಬ್ಬ ತಂಡದಿಂದ ಅದೆಷ್ಟೇ ಹೊರಗುಳಿದರೂ/ಹೊರಗುಳಿಸಿದರೂ ಛಲದಿಂದ ಹಾಗು ಬಿಡದ ಪ್ರಯತ್ನದಿಂದ ಪುಟಿದೆದ್ದು ಮತ್ತದೇ ತಂಡಕ್ಕೆ ಬಂದು ಸೇರುವವನು. ಮತೊಬ್ಬ ಸಾವೇ ಬಂದು ಜೀವನದ ಆಟವನ್ನೇ ಕೊನೆಗೊಳಿಸುತ್ತೇನೆಂದರೂ, ಸಾವನ್ನೇ ಸೋಲಿಸಿ ಮತೊಮ್ಮೆ ಆಟದ ಅಂಗಳಕ್ಕೆ ಬಂದಿಳಿದವನು! ಒಬ್ಬ ಭಾರತ ಕ್ರಿಕೆಟ್ ತಂಡದ ಹೆಮ್ಮೆಯ ನಾಯಕ ಸೌರವ್ ಗಂಗೂಲಿ ಎನ್ನುವುದಾದರೆ ಮತೊಬ್ಬ ಕೋಟ್ಯಂತರ ಕ್ಯಾನ್ಸರ್ ರೋಗಿಗಳಿಗೆ ಸ್ಪೂರ್ತಿಯಾದ ಯುವರಾಜ್ ಸಿಂಗ್.

ಅದು 1991-92 ರ ಆಸ್ಟ್ರೇಲಿಯ ಪ್ರವಾಸ. ಇಪ್ಪತು ವರ್ಷದ ಚಿಗುರು ಮೀಸೆಯ ಪೋರನೊಬ್ಬ ಭಾರತ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತಾನೆ. ಬೆಟ್ಟದಷ್ಟು ಪ್ರತಿಭೆಯನ್ನು ಹೊಂದಿದ್ದರೂ ಸರಣಿಯುದ್ದಕ್ಕೂ ಆಡಲು ಸಾಧ್ಯವಾದದ್ದು ಕೇವಲ ಒಂದೇ ಏಕದಿನ ಪಂದ್ಯ. ಇದಾದ ನಂತರ ಕಾರಣಾಂತರಗಳಿಂದ ತಂಡದಿಂದ ಹೊರಗುಳಿದ ಗಂಗೂಲಿ ಭಾರತ ತಂಡಕ್ಕೆ ಮತ್ತೊಮ್ಮೆ ಬರುವುದು ಕಷ್ಟ ಸಾಧ್ಯವಾಗಿತ್ತು. ಆದರೆ ಆಸಾಧ್ಯವನ್ನು ಒಪ್ಪಿಕೊಳ್ಳುವ ಜಾಯಮಾನವಲ್ಲದ ಈತ ಪ್ರತಿದಿನ ಆ ಒಂದು ಘಳಿಗೆಗೋಸ್ಕರ ಹೋರಾಡುತ್ತಾನೆ. ದೇಶೀ ರಣಜಿ ಪಂದ್ಯದಲ್ಲಿ ಬೆವರು ಹರಿಸುತ್ತಾನೆ. ದಿನ, ತಿಂಗಳು, ವರ್ಷಗಳು ಕಳೆದವು. 5 ವರ್ಷಗಳ ಸತತ ಪ್ರಯತ್ನದ ಪರಿಣಾಮ 1996 ರ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿ ತಂಡಕ್ಕೆ ಮತೊಮ್ಮೆ ಕಮ್ ಬ್ಯಾಕ್ ಮಾಡುತ್ತಾನೆ. ಅದು ಆತನ ಚೊಚ್ಚಲ ಟೆಸ್ಟ್ ಪಂದ್ಯ. ಸ್ಥಳ ಕ್ರಿಕೆಟ್ ನ ಕಾಶಿ 'ಲಾರ್ಡ್ಸ್' ಕ್ರೀಡಾಂಗಣ. ಆದೇ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಮತ್ತೊಬ್ಬ ಯುವ ಆಟಗಾರ ನಮ್ಮ ರಾಹುಲ್ ದ್ರಾವಿಡ್ ಎಂಬುದು ವಿಶೇಷ. ಪ್ರತಿಭೆ ಅಷ್ಟಿದ್ದರೂ ಕಾರಣವಿಲ್ಲದೆ 5 ವರ್ಷ ತಂಡದಿಂದ ಹೊರಗುಳಿದ ಬರದಿಂದಲೋ ಅಥವಾ ತನ್ನ ಸಹಜ ಬ್ಯಾಟಿಂಗ್ ಕಲೆಯಿಂದಲೋ ಏನೋ ಗಂಗೂಲಿ ತನ್ನ ಮೊದಲ ಪಂದ್ಯದಲ್ಲೇ ಪ್ರಚಂಡ ಶತಕವನ್ನು ಗಳಿಸಿಬಿಡುತ್ತಾನೆ. ಅಲ್ಲದೆ ಇದು ಪದಾರ್ಪಣೆಯ ಪಂದ್ಯದಲ್ಲೇ, ಲಾರ್ಡ್ಸ್ ಅಂಗಳದಲ್ಲಿ ಗಳಿಸಿದ ಗರಿಷ್ಟ ದಾಖಲೆಯಾಗಿಬಿಡುತ್ತದೆ. ಈತನ ಬಗ್ಗೆ ಕೊಂಕು ನುಡಿಯುತ್ತಿದ್ದ ಅದೆಷ್ಟೋ ಜನರ ಬಾಯನ್ನು ಮುಚ್ಚಿಸುತ್ತದೆ. ಸೌರವ್ ಗಂಗೂಲಿ ಎಂಬ ಯುವ ಆಟಗಾರನ ಹೆಸರು ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಕೆತ್ತಲ್ಪಡುತ್ತದೆ. ಅಲ್ಲಿಂದ ಮುಂದೆ ಈ ಬೆಂಗಾಲದ ಹುಲಿಯ ಆಟವನ್ನು ಯಾವ ಬೌಲರ್ ನಿಂದಲೂ ತಡೆಯಲಾಗಲಿಲ್ಲ ನೋಡ ನೋಡುತ್ತಲೇ ಈತ ವಿಶ್ವದ ಅಗ್ರಕ್ರಮಾಂಕದ ಆಟಗಾರರಲ್ಲಿ ಒಬ್ಬನಾಗಿಬಿಡುತ್ತಾನೆ. ಭಾರತ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಬಿಡುತ್ತಾನೆ.

1999 ರಲ್ಲಿ ಸೌತ್ ಆಫ್ರಿಕಾ ವಿರುದ್ದದ ಸರಣಿಯಿಂದ ಭುಗಿಲೆದ್ದ ಮ್ಯಾಚ್ ಫಿಕ್ಸಿಂಗ್ ಎಂಬ ಜ್ವಾಲೆ ಭಾರತ ಕ್ರಿಕೆಟ್ನ ಅತಿರಥ ಮಹಾರಥರ ಆಟವನ್ನೇ ಬಲಿತೆಗೆದುಕೊಳ್ಳುತ್ತದೆ. ಪರಿಣಾಮ ಭಾರತ ಕ್ರಿಕೆಟ್ ತಂಡಕ್ಕೆ ಒಬ್ಬ ಸಮರ್ಥ ನಾಯಕನ ಅವಶ್ಯಕತೆ ಎದುರಾಗುತ್ತದೆ. ಒಮ್ಮೆ ಸೋತು ಕೈಚೆಲ್ಲಿ ಕೂತಿದ್ದ ಸಚಿನ್ ಗೆ ಮತ್ತೊಮ್ಮೆ ನಾಯಕತ್ವದ ಡ್ರೈವಿಂಗ್ ಸೀಟ್ ಅನ್ನು ಕೊಟ್ಟರೂ ಪದೇ ಪದೇ ಸೋಲಿನ ಪಂದ್ಯಗಳು ಆತನನ್ನು ಮತ್ತಷ್ಟು ಕುಗ್ಗಿಸಿದವು. ಅಷ್ಟರಲ್ಲಾಗಲೇ ಗಂಗೂಲಿ ಉಪನಾಯಕನ ಮಟ್ಟಕ್ಕೆ ಬೆಳೆದು ನಿಂತಿರುತ್ತಾನೆ. ಅಲ್ಲದೆ ತನ್ನ ನೇರ ಹಾಗು ದಿಟ್ಟ ನಿರ್ಧಾರಗಳಿದ ತಂಡದಲ್ಲಿ ಹೆಸರನ್ನೂ ಮಾಡಿರುತ್ತಾನೆ. ಅಂತೂ ನಾಯಕತ್ವದ ಸ್ಥಾನದಿಂದ ಸಚಿನ್ ಕೆಳಗಿಳಿದ ಮೇಲೆ ಅದರ ಜವಾಬ್ದಾರಿ ಗಂಗೂಲಿಯ ಮೇಲೆ ಬಂದಿತ್ತು. ಅಂದು ಆತ್ಮಸ್ಥೈರ್ಯ ಕಳೆದುಕೊಂಡ ತಂಡವನ್ನು ಟೊಂಕ ಕಟ್ಟಿ ನಿಲ್ಲಿಸಬೇಕಾದ ಅನಿವಾರ್ಯತೆ ಆತನ ಮುಂದಿತ್ತು. ಅವಮಾನಕ್ಕೊಳಗಾಗಿದ್ದ ಭಾರತ ತಂಡವನ್ನು ವಿಶ್ವ ಕ್ರಿಕೆಟ್ನಲ್ಲಿ ಪುನಶ್ಚೇತನಗೊಳಿಸಬೇಕಿತ್ತು. ಈ ಎಲ್ಲಾ ಸವಾಲನ್ನು ಹೊತ್ತು ಗಂಗೂಲಿ ಅಂದು ತಂಡವನ್ನು ಮುನ್ನೆಡೆಸಿದ. ಅಲ್ಲದೆ ದಕ್ಷಿಣ ಆಫ್ರಿಕಾದ ವಿರುದ್ಧ ನಾಯಕನಾಗಿ ತನ್ನ ಮೊದಲ ಸರಣಿಯನ್ನೂ ಗೆದ್ದು ತೋರಿಸಿದ.

ಫಿಕ್ಸಿಂಗ್ ಮಾಫಿಯಾದಲ್ಲಿ ಕಳೆದುಹೋದ ಭಾರತೀಯ ಕ್ರಿಕೆಟ್ನ ದಿಗ್ಗಜರ ಸ್ಥಾನಕ್ಕೆ ಅಷ್ಟೇ ಬಲಿಷ್ಟವಾದ ಹೊಸ ಮುಖಗಳನ್ನು ನೇಮಿಸಬೇಕಾದ ಜವಾಬ್ದಾರಿ ಗಂಗೂಲಿಯ ಮೇಲಿದ್ದಿತು. ಆದರೆ ಅದು ನೀರು ಕುಡಿದಷ್ಟು ಸುಲಭದ ಕೆಲಸವಾಗಿರಲಿಲ್ಲ. ಅಜರುದ್ದೀನ್, ಜಡೇಜಾ, ಮೊಂಗ್ಯರಂತಹ ಕ್ರಿಕೆಟ್ ದಿಗ್ಗಜರನ್ನು ರೀಪ್ಲೇಸ್ ಮಾಡುವುದು ಏನು ಸುಲಭದ ಮಾತೆ? ಆದರೆ ಅದರ ಅನಿವಾರ್ಯತೆ ಈ ನವ ನಾಯಕನ ಮುಂದಿದ್ದಿತು. ಅಷ್ಟರಲ್ಲಾಗಲೇ ಭಾರತ ಕಿರಿಯರ ತಂಡ 19 ವರ್ಷದೊಳಗಿನ ವಿಶ್ವಕಪ್ ಅನ್ನು ಗೆದ್ದುಕೊಂಡಿರುತ್ತದೆ. ಅಲ್ಲದೆ ಸರಣಿ ಶ್ರೇಷ್ಠ ಹಿರಿಮೆಗೆ ಪಾತ್ರನಾದ ಯುವರಾಜ್ ಸಿಂಗ್ ಎಂಬ ಹುಡುಗನ ಬಗ್ಗೆ ಬಹಳಷ್ಟು ಹೆಗ್ಗಳಿಕೆಯ ಮಾತುಗಳು ಕೇಳತೊಡಗಿದವು. ಆತನ ರಣಜಿ ಪಂದ್ಯಗಳ ಅಂಕಿ ಅಂಶಗಳು ಅದಕ್ಕೆ ಪೂರಕವಾಗಿದ್ದವು. ಅಷ್ಟರಲ್ಲಾಗಲೇ ಗಂಗೂಲಿ ಆತನ ಬಗ್ಗೆ ಡೀಟೈಲ್ಡ್ ವಿಚಾರಗಳನ್ನು ಸಂಪಾದಿಸಿರುತ್ತಾನೆ. ಆಟವನ್ನು ಒಮ್ಮೆ ನೋಡುತ್ತಾನೆ. ಅಷ್ಟೇ. ನಂತರ ICC ನಾಕ್ಔಟ್ ಸರಣಿಗೆ ತಂಡ ಪ್ರಕಟವಾದಾಗ ಯುವಿಯ ಹೆಸರು ಪಟ್ಟಿಯಲ್ಲಿ ಇರುತ್ತದೆ! ಅಂತೂ ಅಕ್ಟೋಬರ್ 3, 2000 ರಂದು ಕೀನ್ಯಾದ ವಿರುದ್ಧ ತನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಯುವಿ ಆಡುತ್ತಾನೆ. ಹೀಗೆ ನಾಯಕನಾಗಿ ಮುಂದಿನ ದಿನಗಳ ಕನಸನ್ನು ಹೊತ್ತು ಹೊಸ ಹೊಸ ಮುಖಗಳನ್ನು ಭಾರತ ತಂಡಕ್ಕೆ ಸೇರಿಸಿದ ಕೀರ್ತಿ ಗಂಗೂಲಿಯದು. ಮುಂದೆ ಮೊಹಮ್ಮೆದ್ ಕೈಫ್,ವಿರೇಂದ್ರ್ ಸೆಹವಾಗ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಅಲ್ಲದೆ ಧೋನಿಯನ್ನೂ ಸಹ ತಂಡಕ್ಕೆ ತರುವಲ್ಲಿ ಈ ಬಂಗಾಲದ ಯುವರಾಜನ ಶ್ರಮ ಮಹತ್ತರವಾದದ್ದು. ಅಲ್ಲದೆ ಈ ಆಯ್ಕೆಗಳು ಕೇವಲ ನಾಮ್ಕಾ-ವಾಸ್ಥೆ ಹೆಸರುಗಳಾಗದೆ, ಮುಂದಿನ ದಿನಗಳ ಕ್ರಿಕೆಟ್ ದಂತಕಥೆಗಳಾದ ವಾಸ್ತವತೆ ನಮ್ಮ ನಿಮ್ಮೆಲ್ಲರ ಮುಂದೆಯೇ ಇದೆ. ಪ್ರತಿಭೆಯನ್ನು ಗುರುತಿಸುವ ಆ ಮಟ್ಟಿನ ಸೂಕ್ಷ್ಮತೆ ಗಂಗೂಲಿಯ ನಾಯಕತ್ವದಲ್ಲಿದ್ದಿತ್ತು.

ಗಂಗೂಲಿ ಯುವ ಆಟಗಾರರೊಟ್ಟಿಗೆ ಸದೃಢ ತಂಡವೊಂದನ್ನು ಕಟ್ಟಿ 2003 ರ ಏಕದಿನ ವಿಶ್ವಕಪ್ ನಲ್ಲಿ ಫೈನಲ್ ನ ಹಂತದ ವರೆಗೂ ತಂಡವನ್ನು ಮುನ್ನೆಡುಸುತ್ತಾನೆ. ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಇಂಗ್ಲೆಂಡ್ ಹಾಗು ಪಾಕಿಸ್ತಾನದಂಥ ಬಲಿಷ್ಟ ತಂಡಗಳ ಆಟಗಾರರ ಮುಂದೆ ತನ್ನ ಚಿಗುರು ಮೀಸೆಯ ಹುಡುಗರನ್ನು ಕಣಕ್ಕಿಳಿಸಿ ಅಂದು ಫೈನಲ್ ನ ವರೆಗೂ ಮುನ್ನೆಡೆಸಿದ್ದು ಅಸಾಧ್ಯದ ವಿಷಯವೇ ಆಗಿದ್ದಿತು! ಭಾರತ ತಂಡ ಅದೆಷ್ಟೇ ಸದೃಢವಾದರೂ ವಿದೇಶಿ ನೆಲದಲ್ಲಿ ಅದರ ಆಟ 'ಠುಸ್' ಎನ್ನುವ ಮಾತಿಗೆ ಗಂಗೂಲಿಯ ತಂಡ ಅಪವಾದವಾಗಿದ್ದಿತು. ವಿದೇಶಿ ನೆಲದಲ್ಲಿ ಗೆಲುವನ್ನು ಗಳಿಸುವ ಚಾಣಾಕ್ಷತನವನ್ನು ತಂಡಕ್ಕೆ ಕಲಿಸಿಕೊಟ್ಟದ್ದು ಈ ನಾಯಕನೇ. ಆದರೆ ಅಷ್ಟರಲ್ಲಾಗಲೇ ಕೃಷ್ಣ-ಅರ್ಜುನರಂತಿದ್ದ ಜಾನ್ ರೈಟ್-ಗಂಗೂಲಿ ಜೋಡಿ ಬೇರ್ಪಡುವುದರಲ್ಲಿತ್ತು. ಕೋಚ್ ಜಾನ್ ಅವರ ತಂಡದೊಟ್ಟಿಗಿನ ಒಪ್ಪಂದ ಮುಗಿಯುವುದರಲಿತ್ತು. ಜಾನ್ ರೈಟ್ ನಂತರ ಬೇರೊಬ್ಬ ಕೋಚ್ ಆಗಲೇಬೇಕು ಎಂದಾಗ ಗ್ರೆಗ್ ಚಾಪೆಲ್ ಎಂಬ ನರಿ ಬುದ್ದಿಯ ಕೋಚ್ ಅನ್ನು ತಂಡಕ್ಕೆ ಸೂಚಿಸಿದ್ದು ಗಂಗೂಲಿಯೇ. ಜನರನ್ನು ಆಯ್ಕೆ ಮಾಡುವಾಗ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದ ಆತ ಈ ಬಾರಿ ಬಹಳವಾಗಿಯೇ ಎಡವಿರುತ್ತಾನೆ. 1981 ರ ನ್ಯೂಜಿಲ್ಯಾಂಡ್ ವಿರುದ್ದದ ಸರಣಿಯಲ್ಲಿ ಕೊನೆಯ ಎಸೆತದ್ದಲ್ಲಿ ಎದುರಾಳಿ ತಂಡಕ್ಕೆ ಆರು ರನ್ನುಗಳ ಅವಶ್ಯಕತೆ ಇದ್ದಾಗಲೂ ತನ್ನ ಬೌಲರ್ಗೆ ಅಂಡರ್ ಆರ್ಮ್ ಎಸೆತವನ್ನು ಎಸೆಯಲು ಹೇಳಿಕೊಟ್ಟು ವಿಶ್ವದ ಎಲ್ಲೆಡೆಯಿಂದ ಛೀಮಾರಿ ಹಾಕಿಸಿಕೊಂಡ ಹೇಡಿ ಸ್ವಭಾವದ ಆಟಗಾರನೇ ಈ ಗ್ರೆಗ್ ಚಾಪೆಲ್! ಅಂತೂ ಚಾಪೆಲ್ ಎಂಬ ಸಿಡುಕು ಮೋರೆಯ ಕೋಚ್ ಒಬ್ಬ ತಂಡಕ್ಕೆ ಬಂದು, ವಿಶ್ವ ಕ್ರಿಕೆಟ್ ನಲ್ಲಿ ಉತ್ತುಂಗದಲ್ಲಿದ್ದ ಭಾರತ ತಂಡವನ್ನು ಕಾಲು ಮುರಿದು ಕೂರಿಸಿದ ನಿದರ್ಶನ ಜಗತ್ತಿನ ಮುಂದೆಯೇ ಇದೆ. ಅಲ್ಲದೆ ತನ್ನನ್ನು ತಂಡಕ್ಕೆ ಬರುವಂತೆ ಸೂಚಿಸಿದ್ದ ಗಂಗೂಲಿಯನ್ನೇ ತಂಡದಿಂದ ಈತ ಹೊರದಬ್ಬುತ್ತಾನೆ! ಆದರೆ ಆತ ಚೆಲ್ಲಾಟವಾಡಿದ್ದು ಸದ್ದು ಮಾಡಿದರೆ ಬಾಲ ಮುದುಡಿಕೊಂಡು ಹೆದರಿ ಓಡಿಹೋಗುವ ಕಾಂಗರೂಗಳೊಟ್ಟಿಗಾಗಿರಲಿಲ್ಲ. ಅವಮಾನಿಸಿದಷ್ಟು ಪುಟಿದೆದ್ದು ನಿಲ್ಲುವ ಹುಲಿಯ ಸ್ವಭಾವದ ಒಬ್ಬ ವ್ಯಕ್ತಿಯೊಟ್ಟಿಗೆ! ಅಷ್ಟಗ್ಯೂ ಅಂದು ಗಂಗೂಲಿ ತನ್ನ ಎಂದಿನ ಉತ್ತಮ ಫಾರ್ಮ್ ನಲ್ಲಿರಲಿಲ್ಲ, ನಿಜ. ಅದನ್ನರಿತ ಆತ ಮತ್ತೊಮ್ಮೆ ತಯಾರಿಯಲ್ಲಿ ತೊಡಗುತ್ತಾನೆ. ತನ್ನ ವೀಕ್ ಪಾಯಿಂಟ್ ಗಳ ಮೇಲೆ ಗಮನ ಹರಿಸುತ್ತಾನೆ. ತಾನೇ ಕಟ್ಟಿದ ತಂಡದಿಂದ ಹೊರಗುಳಿಯುವುದು ಗಂಗೂಲಿಯಿಂದ ಸಹಿಸಲಾಗಲಿಲ್ಲ. ಅಂತೂ ತನ್ನ ಅವಿರತ ಶ್ರಮದಿಂದ ತಂಡಕ್ಕೆ ಮತ್ತೊಮ್ಮೆ ಸೇರಿಕೊಳ್ಳುತ್ತಾನೆ. ಅಲ್ಲದೆ 2007 ರಲ್ಲಿ ಟೆಸ್ಟ್ ಹಾಗು ಏಕದಿನ ಪಂದ್ಯಗಳಲ್ಲಿ ಭಾರತದ ಪರ ಅತಿಹೆಚ್ಚು ರನ್ ಗಳನ್ನೂ ಗಳಿಸುತ್ತಾನೆ. ಹೀಗೆ ಗೆಲ್ಲುವ ವರೆಗೂ ಸೋಲನ್ನು ಒಪ್ಪಿಕೊಳ್ಳಬಾರದು ಎಂಬ ಸಂದೇಶವನ್ನು ಜಗತ್ತಿಗೆ ಸಾರುತ್ತಾನೆ ಈ ಕಮ್ ಬ್ಯಾಕ್ ಕಿಂಗ್!

ಯುವಿ ಮುಂದೆ ಹಂತ ಹಂತವಾಗಿ ತಂಡದಲ್ಲಿ ಬೆಳೆಯತೊಡಗುತ್ತಾನೆ. ತಂಡದ ಅದ್ಭುತ ಕ್ಷೇತ್ರರಕ್ಷಕನಾಗಿ, ಮಧ್ಯಮ ಕ್ರಮಾಂಕದ ಬಲಿಷ್ಟ ಬ್ಯಾಟ್ಸಮನ್ ಆಗಿ ಅಲ್ಲದೆ, ಅವಶ್ಯಕತೆ ಎದುರಾದಾಗ ಭರವಸೆಯ ಬೌಲರ್ ಆಗಿಯೂ ಕೂಡ ಮಿಂಚುತ್ತಾನೆ. ಅಲ್ಲದೆ ತನ್ನ ನೆಚ್ಚಿನ ನಾಯಕನಂತೆ ಪ್ರತಿ ಸೋಲನ್ನೂ ಗೆಲುವಿನ ಮಜಲುಗಳಾಗಿ ಪರಿವರ್ತಿಸಿಕೊಂಡು ನೆಡೆಯುತ್ತಾನೆ. ಇವುಗಳ ಮದ್ಯೆ ಅದೇಷ್ಟೋ ಬಾರಿ ತಂಡದಿಂದ್ದ ಹೊರಗುಳಿದರೂ, ಕುಗ್ಗದೆಯೆ ಸತತ ಪರಿಶ್ರಮದಿಂದ ಪ್ರತಿ ಬಾರಿಯೂ ತಂಡಕ್ಕೆ ಕಮ್ ಬ್ಯಾಕ್ ಮಾಡುತ್ತಿರುತ್ತಾನೆ. ಇತ್ತ ತನ್ನ ನೆಚ್ಚಿನ ನಾಯಕನ ವೃತ್ತಿ ಜೀವನದ ಏರಿಳಿತಗಳನ್ನು ಬೆರಗುಗಣ್ಣಿನಿಂದ ವೀಕ್ಷಿಸುತ್ತಿದ್ದ ಯುವಿ ಅಕ್ಷರ ಸಹ ಗಂಗೂಲಿಯ ಸ್ವಭಾವವನ್ನೇ ಬೆಳೆಸಿಕೊಂಡಿರುತ್ತಾನೆ. ಮಾತಿಗೆ ಮಾತಿನಿಂದ ಉತ್ತವನ್ನು ಕೊಟ್ಟರೆ ಆಟಕ್ಕೆ ಆಟದಿಂದಲ್ಲೇ ಉತ್ತರಿಸುತ್ತಿರುತ್ತಾನೆ. ಆದರೆ 2011 ರ ಶುರುವಿಗಾಗಲೇ ಈತನ ಆರೋಗ್ಯ ಪದೇ ಪದೇ ಹದಗೆಡುತ್ತಿರುತ್ತದೆ. ಉಸಿರಾಟದ ತೊಂದರೆ, ವಾಕರಿಕೆ ಹಾಗು ರಕ್ತವಾಂತಿ ಬಹುವಾಗಿ ಕಾಡುತ್ತಿರುತ್ತದೆ. ಇದು ಆತನ ಶ್ವಾಸಕೋಶದಲ್ಲಿ ಬೆಳೆಯುತ್ತಿದ್ದ ಟ್ಯೂಮರ್ ಎಂದು ಯಾರಿಗೂ ತಿಳಿಯುವುದಿಲ್ಲ! ಅಷ್ಟರಲ್ಲಾಗಲೇ ಏಕದಿನ ವಿಶ್ವಕಪ್ ಸರಣಿಯೂ ಶುರುವಾಗಿರುತ್ತದೆ. ಒಳಗೊಳಗೇ ಬೇಯುತ್ತಿದ್ದ ದೇಹದಲ್ಲೇ ಅಂದು ಯುವಿ ವಿಶ್ವಕಪ್ ನಲ್ಲಿ ಭಾಗವಹಿಸುತ್ತಾನೆ. 362 ರನ್ ಹಾಗು 15 ವಿಕೆಟ್ಗಳ 'ದಾಖಲೆ'ಯೊಂದಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಳ್ಳುತ್ತಾನೆ. ಇನ್ನೊಂದು ವಿಧದಲ್ಲಿ ಹೇಳುವುದಾದರೆ ಒಬ್ಬ ಕ್ಯಾನ್ಸರ್ ರೋಗಿಯಾಗಿ 4 ‘ಮ್ಯಾನ್ ಆಫ್ ದಿ ಮ್ಯಾಚ್’ ಅವಾರ್ಡ್ ಗಳನ್ನ ಅಂದು ಪಡೆದುಕೊಳ್ಳುತ್ತಾನೆ! ನಂತರ ಕೆಲ ದಿನಗಳ ಬಳಿಕ ಶ್ವಾಸಕೋಶದ ಟ್ಯೂಮರ್ ಪತ್ತೆಯಾಗುತ್ತದೆ. ಅಲ್ಲದೆ ಮುಂದಿನ ಒಂದು ವರ್ಷಗಳ ಕಾಲ ಚಿಕಿತ್ಸೆ ಹಾಗು ವಿಶ್ರಾಂತಿಯಲ್ಲೇ ಕಳೆಯಬೇಕಾಗುತ್ತದೆ. ಯುವಿ ಎಂದಾಗಲೇ ಸಿಕ್ಸು ಫೋರುಗಳ ಕನಸ್ಸನ್ನು ಕಾಣುತ್ತಿದ್ದವರು ಅಂದು ಆತ ಬದುಕಿ ಉಳಿದರೆ ಸಾಕು ಎಂದು ದೇವರಲ್ಲಿ ಬೇಡಿ ಕೊಳ್ಳತೊಡಗುತ್ತಾರೆ. ಇನ್ನುಮುಂದೆ ಯುವಿ ಎಂಬ ಶ್ರೇಷ್ಠ ಕ್ರಿಕೆಟಿಗನ ಹೆಸರು ಕ್ರಿಕೆಟ್ ವಲಯದಲ್ಲಿ ಮರೆಯಾಯಿತು ಎನ್ನುವಾಗಲೇ ಅಚ್ಚರಿಯ ಸುದ್ದಿಯೊಂದು ಹೊರಬೀಳುತ್ತದೆ. ಯುವಿ ಕ್ರಿಕೆಟ್ ಆಡಲು ಮತ್ತೊಮ್ಮೆ ಸಜ್ಜಾಗಿದ್ದಾನೆ ಹಾಗು ದೇಶೀ ರಣಜಿ ಪಂದ್ಯದಲ್ಲಿ ಆಡಲು ಅಣಿಯಾಗುತ್ತಿದ್ದಾನೆ ಎಂಬ ಸುದ್ದಿ! ಈ ಸುದ್ದಿಯನ್ನು ಕೇಳಿದ ಜಗತ್ತೇ ಒಂದು ಕ್ಷಣ ನಿಬ್ಬೆರಗಾಯಿತು. ಒಮ್ಮೆ ಯೋಚಿಸಿ ನೋಡಿ. ಕ್ಯಾನ್ಸರ್ ಎಂಬ ಹೆಸರೇ ಅದೆಷ್ಟೋ ಜನರಲ್ಲಿ ಎದೆ ಬಡಿತವನ್ನು ಹೆಚ್ಚುಮಾಡುವ ಈ ಕಾಲದಲ್ಲೂ ಒಬ್ಬ ವ್ಯಕ್ತಿ ಕ್ಯಾನ್ಸರ್ ನೊಟ್ಟಿಗೆ ಹೋರಾಡಿ, ಬದುಕುಳಿದು, ಕೆಲ ದಿನಗಳ ಒಳಗೆ ಬ್ಯಾಟ್ ಹಿಡಿದು ಆಡಲು ಪಿಚ್ ಗೆ ಬರುವುದೆಂದರೆ ಏನು ಸಾಮನ್ಯದ ಮಾತೆ? ಇದು ಕೇವಲ ಯುವಿ ಯಂತಹ ದೃಢ ವ್ಯಕ್ತಿತ್ವದವರು ಮಾಡಬಹುದಾದ ಸಂಕಲ್ಪ. 'Passionate' ಎಂಬ ವಾಕ್ಯಕ್ಕೆ ಹೇಳಿಮಾಡಿಸಿದ ಕ್ಯಾರೆಕ್ಟರ್ ಈತನದು ಎಂಬುದು ಜಗದ್ಜಾಹಿತವಾಯಿತು. ಕ್ಯಾನ್ಸರ್ ನ ನಂತರ ಮೊದಲ ಬಾರಿಗೆ ತಂಡಕ್ಕೆ ಆಯ್ಕೆಯಾಗಿ ನ್ಯೂಜಿಲ್ಯಾಂಡ್ ವಿರುದ್ದದ ಪಂದ್ಯದಲ್ಲಿ 2 ಸಿಕ್ಸರ್ ಗಳನ್ನು ಪ್ರೇಕ್ಷಕರ ಗುಂಪಿನೊಳಕ್ಕೆ ಒಂದರಿಂದೊಂದು ಹೊಡೆದಾಗ ಹಲವರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರೆ ಇನ್ನೂ ಕೆಲವರು ತಮ್ಮ ತೇವವಾದ ಕಣ್ಣುಗಳನ್ನು ನಿಧಾನವಾಗಿ ಒರೆಸಿಕೊಳ್ಳುತ್ತಿದ್ದರು. ಜೀವನ ಅದೆಷ್ಟೇ ಕಾಡಿದರೂ ಸೋಲದಿರು ಎಂಬ ಆತ್ಮವಿಶ್ವಾಸ ವನ್ನು ಸಾರುವ ಬಲಿಷ್ಟ ಸಿಕ್ಸರ್ ಗಳು ಅವಾಗಿದ್ದವು.

ಇದು ಭಾರತ ಕ್ರಿಕೆಟ್ ಜಗತ್ತಿಗೆ ಹೇಳಿದ ಧೀರರಿಬ್ಬರ ಕಥೆ. ಧೈರ್ಯ, ಛಲ ಹಾಗು ಸತತ ಪರಿಶ್ರಮದಿಂದ ಎಷ್ಟೆಲ್ಲಾ ಸಾಧಿಸಬಹುದು ಎಂದು ತೋರಿದ ನಾಯಕರಿಬ್ಬರ ಚರಿತೆ. ನಾವುಗಳು ಆಡುವ ಗಲ್ಲಿ ಕ್ರಿಕೆಟ್ನಲ್ಲೆ ಕೆಲವೊಮ್ಮೆ ಕಳಪೆ ಪ್ರದರ್ಶನ ತೋರಿದರೆ ಅದೆಷ್ಟು ನೊಂದುಕೊಳ್ಳುತ್ತೇವೂ. ಅದೆಷ್ಟೋ ಬಾರಿ ವಾರವಿಡೀ ಆ ಆಟದ ಬಗ್ಗೆಯೇ ಚಿಂತಿಸಿ ಮರುಗುತ್ತಿರುತ್ತೇವೆ. ಅಂತಹದರಲ್ಲಿ ಭಾರತದಂತ ದೇಶದ ಸಹಸ್ರ ಸಹಸ್ರ ಕ್ರಿಕೆಟ್ ಅಭಿಮಾನಿಗಳ ಮುಂದೆ, ದೇಶದ ಹೆಸರನ್ನು ಹೊತ್ತು ಆಡಲು ಇಳಿದು ಕಳಪೆ ಪ್ರದರ್ಶನವನ್ನು ತೋರುತ್ತ, ವಿಕೆಟ್ ಅನ್ನು ಕೈ ಚೆಲ್ಲಿ, ಪೆವಿಲಿಯನ್ನ ಹಾದಿ ಹಿಡಿದು ತಂಡದಿಂದ ಹೊರಗುಳಿಯುವುದು ಆ ಆಟಗಾರರಲ್ಲಿ ಅದೆಷ್ಟು ಆಳವಾದ ಖಿನ್ನತೆಯನ್ನು ಮೂಡಿಸಬಹುದು!? ಕ್ರಿಕೆಟ್ಟೇ ಜೀವನವಾಗಿರುವ ಅವರಿಗೆ ಇಂತಹ ಹೀನಾಯ ಪ್ರದರ್ಶನಗಳು ಅದೆಂಥಹ ನೋವಿನ ಕೂಪಕ್ಕೆ ನೂಕಬಹುದು? ಆದರೂ ಸಹ ಇವರುಗಳು ತಮ್ಮ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೆ, ಪ್ರತಿ ಬಾರಿಯೂ ಉತ್ತಮ ಪ್ರದರ್ಶನಗಳನ್ನು ನೀಡುವ ವಿಶ್ವಾಸದೊಂದಿಗೆ ಕಣಕ್ಕಿಳಿಯುವ ಗುಣಕ್ಕೆ ಎಲ್ಲರೂ ತಲೆಬಾಗಲೇಬೇಕು. ಅಂದು ಗಂಗೂಲಿ ಎಲ್ಲರ ಊಹೆಗೂ ಮೀರಿ ತಂಡದಿಂದ ಹೊರಗುಳಿದರೂ, ಛಲ ಬಿಡದೆ ಹೋರಾಡಿ ಮತ್ತೊಮ್ಮೆ ತಂಡಕ್ಕೆ ಸೇರಿಕೊಂಡ ಪರಿಯಾಗಲಿ ಅಥವಾ ಯುವಿ ಎಂಬ ಕೆಚ್ಚೆದೆಯ ಆಟಗಾರ ಕ್ಯಾನ್ಸರ್ ಎಂಬ ಮಹಾ ಮಾರಿಯ ವಿರುದ್ಧವೇ ಸೆಣೆಸಿ ಕ್ರಿಕೆಟ್ ಗೆ ಪುನರಾಗಮನಗೊಂಡು ಜಗತ್ತನೇ ಪುಳಕಗೊಳಿಸಿದ ಬಗೆಯಾಗಲಿ ಅಲ್ಲದೆ ಇನ್ನೂ ಹಲವು ದೃಶ್ಯಾಂತಗಳು ಹಾಗು ಅವುಗಳಿಂದ ದೊರೆತ ಪಾಠಗಳು ಇಂದು ಈ ಕ್ರಿಕೆಟ್ ಜಗತ್ತಿನಲ್ಲಿವೆ. ಗಂಗೂಲಿ ಕ್ರಿಕೆಟ್ ಅಂಗಳದಿಂದ ನಿವೃತ್ತಿಗೊಂಡು ಎಂಟು ವರ್ಷಗಳಾದರೂ ಅವನ ಸೇವೆ ಭಾರತೀಯ ಕ್ರಿಕೆಟ್ಗೆ ಇನ್ನೂ ಸಹ ಲಭ್ಯವಾಗುತ್ತಿದೆ. ಯುವಿ 'YouWeCan' ಎಂಬ ಸಂಸ್ಥೆಯ ಮೂಲಕ ಕ್ಯಾನ್ಸರ್ ರೋಗಿಗಳಿಗೆ ತನ್ನ ಕೈಲಾದ ಮಟ್ಟಿನ ಸೇವೆಯನ್ನು ಮಾಡುತ್ತಿದ್ದಾನೆ. ಮೊನ್ನೆ ಇಂಗ್ಲೆಂಡ್ ವಿರುದ್ದದ ಏಕದಿನ ಸರಣಿಯಲ್ಲಿ ಮತ್ತೊಮ್ಮೆ ಭರ್ಜರಿ ಫಾರ್ಮ್ ಗೆ ಮರಳಿದ ಯುವಿ, ಕೊಲ್ಕತ್ತಾ ಪಂದ್ಯದಲ್ಲಿ ಗಂಗೂಲಿಯೊಟ್ಟಿಗೆ ಹಸ್ತಲಾಘವ ಮಾಡುತ್ತಾ ಅನ್ಯೂನ್ಯವಾಗಿ ಮಾತನಾಡುವಾಗ ದಶಕದ ಹಿಂದಿನ ನೆನಪಿನ ಪುಟಗಳು ಒಂದರಿಂದೊಂದು ಹಾಗೆಯೇ ತೆರೆಯತೊಡಗಿದವು. ಗುರು ಶಿಷ್ಯರ ಜೋಡಿಯ ಮೋಡಿ ಅಲ್ಲಿದ್ದ ಪ್ರೇಕ್ಷಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದವು.

PC : Internet

Friday, January 27, 2017

ನೀಳ್ಗತೆ : ಮರಳು


"ಎಷ್ಟೇ ಮಾಡಿದರೂ ಆಗಿ ಮುಗಿಯದ ಕೆಲಸವಿದು. ನೆಮ್ಮದಿ ಎಂಬುದಿಲ್ಲಿ ಮರೀಚಿಕೆಯಾಗಿಬಿಟ್ಟಿದೆ. ಸಾಧನೆಯೆಂದರೆ ವಿದೇಶದಲ್ಲಿ ಉನ್ನತ ಶಿಕ್ಷಣ ಮುಗಿಸಿ, ಎಲ್ಲರಿಗಿಂತ ಹೆಚ್ಚು ಹಣ ಸಿಗುವ ಉದ್ಯೋಗಕ್ಕೆ ಸೇರಿ ಎದೆಯುಬ್ಬಿಸಿಕೊಂಡು ನೆಡೆಯುವುದು ಎಂದರಿತ್ತಿದ್ದೆ. ನೆನ್ನೆ ಮೊನ್ನೆಯಷ್ಟೇ ಸೇರಿದ ಕೆಲಸವಿದು. ನೋಡ ನೋಡುತ್ತಲೇ ಐದು ವರ್ಷಗಳಾಗಿ ಬಿಟ್ಟಿದೆ! ಇಂದು ನಾನು ಸಾಧಿಸಿರುವುದೇನೆಂದು ಒಮ್ಮೆ ಹಿಂತಿರುಗಿ ನೋಡಿದರೆ ಕೇವಲ ಶೂನ್ಯ. ಸಿಗುವ ಸಂಬಳಕ್ಕೆ ಇನ್ನೂ ಕೆಲ ಶೂನ್ಯಗಳನ್ನು ಸೇರಿಸಿಕೊಳ್ಳುವ ಭರದಲ್ಲಿ ಬದುಕನ್ನೇ ಶೂನ್ಯವಾಗಿಸಿಕೊಂಡುಬಿಟ್ಟೆನೆ? ಸಣ್ಣವನಿದ್ದಾಗ ಒಂದು ರೂಪಾಯಿ ಸಿಕ್ಕಾಗ ಸಿಗುತ್ತಿದ್ದ ಆ ಖುಷಿ ಇಂದು ಲಕ್ಷ ಸಿಕ್ಕರೂ ಕಾಣದು ಏಕೆ? ಅಮ್ಮನ ಸೀರೆಯ ಸೆರಗನ್ನು ಬಾಯಿಯೊಳಗೆ ತೂರಿಕೊಂಡು ಕಾರು ಬಸ್ಸುಗಳಂತೆ ಶಬ್ದವನ್ನು ಮಾಡಿಕೊಂಡು ಆಕೆಯ ಹಿಂದೆಯೆ ಓಡಾಡುತಿದ್ದ ಆ ದಿನಗಳಲ್ಲಿ ಸಿಗುತ್ತಿದ್ದ ಆನಂದ ಇಂದು ಇಷ್ಟು ದುಬಾರಿಯಾದ ಕಾರನ್ನು ಓಡಿಸುವಾಗಲೂ ಸಿಗುತ್ತಿಲ್ಲ. ಜೀವನ ಅರ್ಥಹೀನವಾಗುತ್ತಿದೆ. ಕೇವಲ ಕೆಲಸ ಹಾಗು ಹಣದ ನಡುವೆ ಸುತ್ತುತ್ತಿದೆ. ಏನೋ ಒಂದು ನನ್ನಿಂದ ದೂರವಾಗುತ್ತಿದೆ.ಈ ತಳಮಳ ಇತರರಿಗೂ ಹೀಗೆಯೇ?" ಲ್ಯಾಪ್ಟಾಪ್ನ ಕಪ್ಪು ಪರದೆಯನ್ನು ದಿಟ್ಟಿಸಿ ಯೋಚಿಸುತ್ತಾ ಕುಳಿತ್ತಿದ್ದ ಭರತ. ಸಂಜೆ ಏಳಾದರು ಆಫೀಸ್ಸನ್ನು ಬಿಟ್ಟಿಲ್ಲ. ನಾಳಿನ ಪ್ರೆಸೆಂಟೇಷನ ಚಿಂತೆ ಬೇರೆ ತಲೆಯನ್ನು ಕೊರೆಯುತ್ತಿದೆ. ಅದನ್ನು ಬೇರೆಯವರು ಮಾಡಬಲ್ಲರಾದರೂ ಸುಖಾಸುಮ್ಮನೆ ತನ್ನ ಮೇಲೆ ಎಳೆದುಕೊಂಡಿದ್ದಾನೆ. ಇಂದು ತನ್ನೊಳಗೆ ಮೂಡುತ್ತಿರುವ ತಳಮಳದ ಪ್ರೆಶ್ನೆಗಳಿಗೆ ಮಂಕಾಗಿದ್ದಾನೆ. ನಾಳಿನ ಪ್ರೆಸೆಂಟೇಷನ್ ಮಾಡಬೇಕೋ ಬೇಡವೋ ಎಂಬ ದ್ವಂದ್ವದಲ್ಲಿದ್ದಾನೆ.

‘ಮುಕ್ತವಾಗಿ ಚಿಂತಿಸಲೂ ಬಿಡದು ಈ ಹಾಳು ಕೆಲಸದ ಗೋಳು’ ಎಂದು ಶಪಿಸುತ್ತಾನೆ. ಇತ್ತೀಚೆಗೆ ತನ್ನಿಂದ ನೆಡೆಯುವ ಪ್ರತಿಯೊಂದು ಅಚಾತುರ್ಯಕ್ಕೂ ಕೆಲಸದ ಒತ್ತಡವೇ ಕಾರಣವೆಂದು ಭಾವಿಸುತ್ತಾನೆ. ಆದರೆ ಅದೆಷ್ಟು ಸತ್ಯವೆಂದು ಮಾತ್ರ ಅವನಿಗರಿಯದು.ಮೊದಲೆಲ್ಲ ಸಂಜೆ ಐದಕ್ಕೆ ಆಫೀಸಿನಿಂದ ಹೊರಟು ಹತ್ತಿರದಲ್ಲೇ ಇದ್ದ ಸಂಗೀತ ಶಾಲೆಯಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದ. ದಿನ ಕಳೆದಂತೆ ಕೆಲಸದ ಒತ್ತಡದಲ್ಲಿ ಸಮಯವೇ ಸಾಲುತ್ತಿರಲಿಲ್ಲ. ನಂತರ ವಾರಾಂತ್ಯದಲ್ಲಿ ಹೋಗಲು ಶುರು ಮಾಡಿದ. ಆದರೆ ಇತ್ತೀಚೆಗೆ ವಾರಾಂತ್ಯವೂ ಆಫೀಸ್ಸಿಗೆ ಬರಬೇಕಾಗಿ ಬರುತ್ತಿದೆ. ಕಳೆದ ಮೂರು ವಾರಗಳಿಂದ ಒಂದು ದಿನವೂ ಸಹ ರಜೆಯನ್ನು ತೆಗೆದಿಲ್ಲ.

“ಸಾರ್ ನಿಮ್ಮನ್ನ ಮ್ಯಾನೇಜರ್ ಕರೀತಾ ಇದ್ದಾರೆ.” ಆಫೀಸಿನ ಹುಡುಗ ಬಾಗಿಲ ಬಳಿ ಬಂದು ಹೇಳಿದಾಗ ಭರತನಿಗೆ ಎಚ್ಚರವಾಯಿತು.

ವಾರಾಂತ್ಯದಲ್ಲಿ ಇರುವ ಕ್ಲೈಂಟ್ ಮೀಟಿಂಗ್ಗೆ ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕೆಂದು ಮ್ಯಾನೇಜರ್ ಹೇಳಿದ. ವಯಸ್ಸು ಐವತ್ತರ ಆಸುಪಾಸು, ಭರತನಂತೆ ಶ್ರಮಜೀವಿ. ಕೆಲಸದ ಒತ್ತಡದಲ್ಲಿ ಮಂಕಾಗಿರುವ ಭರತನ ಮನವನ್ನು ಅರಿಯಲು ವಿಫಲನಾಗುತ್ತಾನೆ. ಮಾನವನಿಗಾಗಿ ಕೆಲಸ ಎಂಬುವುದಕ್ಕಿಂತ ಹೆಚ್ಚಾಗಿ ಕೆಲಸಕ್ಕಾಗೇ ಮಾನವನಿರುವುದು ಎಂಬ ಒಂದು ರೀತಿಯ ಭ್ರಮೆಯ ಬದುಕು ಅವನದು. ಹೊರಬರುವ ಮುನ್ನ ಭರತ ಒಮ್ಮೆ ಅವನ ಮುಖವನ್ನು ದಿಟ್ಟಿಸಿ ನೋಡುತ್ತಾನೆ. ಭಾವನೆಗಳೇ ಇಲ್ಲದ ಯಂತ್ರದಂತೆ ಜೀವಿಯೊಂದು ತನ್ನ ಮುಂದೆ ಕೂತಿರುವಂತೆ ಅವನಿಗೆ ಭಾಸವಾಗುತ್ತದೆ.

'ಎನಿಥಿಂಗ್ ಎಲ್ಸ್ Mr.ಭರತ್..?' ಮ್ಯಾನೇಜರ್ ನ ಸದ್ದಿಗೆ ಚಕಿತನಾಗಿ 'ನೋ ಸರ್ ನಥಿಂಗ್....’ ಎನ್ನುತ ಹೊರಬರುತ್ತಾನೆ.

‘ಕೆಲವರ್ಷಗಳ ನಂತರ ನಾನೂ ಹೀಗೆಯೆ ಆಗುವೆನೆ? ಭಾವನೆಗಳೇ ಅರಿಯದ ಯಂತ್ರದಂತೆ!?' ಪ್ರೆಶ್ನೆಗೆ ಉತ್ತರ ಅರಿಯದಾಗುತ್ತಾನೆ.

ಮೊದಲು ಯಾವುದಾದರೊಂದು ಕೆಲಸ. ಆಮೇಲೆ ಬೈಕು. ಆನಂತರ ಕಾರು. ಸಾಲದಕ್ಕೆ ಒಬ್ಬನಿದ್ದರೂ 2BHK ಯ ದುಬಾರಿ ಬಾಡಿಗೆ ಮನೆ. ದುಂದುವೆಚ್ಚಗಳು. ಅವಶ್ಯಕತೆಗಿಂತ ಹೆಚ್ಚಿನ ಬಯಕೆಗಳು. ಬಯಕೆಗಳೇ ಹಾಗೆ, ಒಮ್ಮೆ ಹುಟ್ಟಿದರೆ ಸಾಯವು. ಹಾಗಾಗಿ ಏನೋ ಕೆಲಸಕ್ಕೆ ನಾನು ಹೀಗೆ ಜೋತುಬಿದ್ದುಗೊಂಡಿರುವುದು. ಪ್ರತಿತಿಂಗಳ ಕೊನೆಗೆ ಇವುಗಳಿಗೆಲ್ಲ EMI ಕಟ್ಟಿ ಕೊನೆಗೆ ಉಳಿಯುತ್ತಿದ್ದದು ತಿಂಗಳ ಖರ್ಚಿಗೆ ಸಾಲುತ್ತಿರಲಿಲ್ಲ! ತಾನೇ ತೋಡಿಕೊಂಡ ಗುಂಡಿಯೊಳಗೆ ಬಿದ್ದ ಭರತ ಹೊರಬರಲು ಅವಣಿಸುತ್ತಿದ್ದಾನೆ. ಆದರೆ ಆಗುತ್ತಿಲ್ಲ.


ಈ ವಾರಂತ್ಯವೂ ಕೆಲಸಕ್ಕೆ ಬರಬೇಕೆಂಬುದ ಯೋಚಿಸಿಯೇ ಖಿನ್ನತೆಯಲ್ಲಿ ಮನ ಮುಳುಗುತ್ತದೆ. ಇದು ಎಂದಿಗೂ ಮುಗಿಯದ ವ್ಯಥೆ. ತುಸು ಸಮಯ ಸುಮ್ಮನಿದ್ದ ಭರತ ಎದ್ದು ನಿಲ್ಲುತಾನೆ. ಇಮೇಲ್ ಮೂಲಕ ತನ್ನ ಸಹೋದ್ಯೋಗಿಗೆ ಕೆಲಸವನ್ನು ಒಪ್ಪಿಸಿ, ಮುಂದಿನ 2 ವಾರಕ್ಕೆ ರಜೆಯನ್ನು ಬರೆದು ಹೊರಬರುತ್ತಾನೆ. ಕೆಲಹೊತ್ತು ತಳಮಳಗೊಂಡ ಮನ ಸ್ವಲ್ಪ ಹೊತ್ತಿನ ನಂತರ ಶಾಂತವಾಯಿತು. ಆದರೆ ಈ ಎರಡು ವಾರದಲ್ಲಿ ಏನು ಮಾಡುವುದು, ಎಲ್ಲಿಗೆ ಹೋಗುವುದು ಎಂದು ಯೋಚಿಸುತ್ತಾನೆ. ಮನೆಗೆ ಹೋದರೆ ಇನ್ನೊಂದು ಬಗೆಯ ಚಿಂತೆ, ಒತ್ತಡ. ಇವೆಲ್ಲವನ್ನೂ ಬಿಟ್ಟು ಕೆಲಕಾಲಕ್ಕೆ ಎಲ್ಲಾದರೂ ದೂರಹೋಗಬೇಕೆನಿಸಿತು. ಎಷ್ಟೋ ದಿನಗಳಿಂದ ಸಮುದ್ರದ ಅಲೆಗಳಂತೆ ಅಪ್ಪಳಿಸುತ್ತಿದ್ದ ಅಜ್ಜನ ಮನೆಯ ನೆನಪುಗಳು ನನಪಾದವು. ಅಲ್ಲಿಗೆ ಹೋಗಿ ಅದೆಷ್ಟೋ ವರ್ಷಗಳಾಗಿವೆ. ಇಲ್ಲಿಂದ ನಾಲ್ಕುನೂರು ಕೀಲೊಮೀಟರ್ ದೂರದ ಹಳ್ಳಿ. ಆಧುನಿಕತೆಯ ಪರಿಧಿಯ ಹೊರಗಿರುವ ಪ್ರದೇಶ. ಆದರೆ ಹಸಿರುಸಿರಿಯಿಂದ ಕಂಗೊಳಿಸುವ ಶಾಂತವಾದ ಜಾಗ. ಕೆಲವರ್ಷಗಳ ಹಿಂದೆ ಒಮ್ಮೆ ಹೋಗಿದ್ದಾಗ ವಾಪಾಸ್ಸೆ ಬರಲು ಮನವು ಒಪ್ಪುತ್ತಿರಲಿಲ್ಲ! ಆಧುನಿಕ ಸೌಲಭ್ಯಗಳೆಚ್ಚೇನೂ ಇಲ್ಲದಿದ್ದರೂ ಅದೇನೋ ಒಂದು ಆಕರ್ಷಣೆ ಆ ನೆಲದಲ್ಲಿ. ಅದೇನೋ ಇಂದು ಮತ್ತೊಮ್ಮೆ ಅಲ್ಲಿಗೆ ಹೋಗಲು ಮನ ಬಯಸಿದೆ. ‘ಮನೆಯವರ್ಯಾರು ಬೇಡ. ತಾನೊಬ್ಬನೇ ಹೋಗಿ ಬರುವೆ’ ಎಂದುಕೊಳ್ಳುತ್ತಾನೆ. ಅದೇನೋ ಒಂದು ಬಗೆಯ ಖುಷಿ ಮನದೊಳಗೇ ಮೂಡುತ್ತದೆ. ಅಪ್ಪ ಅಮ್ಮನಿಗೆ ಫೋನ್ ಮಾಡಿ ಹೇಳಿ ಆ ದಿನ ರಾತ್ರಿಯೇ ರೈಲನ್ನು ಹಿಡಿದು ಹೊರಡುತ್ತಾನೆ.

ರೈಲಿನ ದಡಬಡ ಸದ್ದಿನಲ್ಲೂ ದಣಿದ ಕಣ್ಣುಗಳು ನಿದ್ರೆಗೆ ಶರಣಾಗುತ್ತವೆ. ಕೆಲಸಮಯದ ನಂತರ ಕಣ್ಣು ತೆರೆದಾಗ ಮುಂಜಾವಿನ ಮೊಬ್ಬಾದ ಗಿಡ ಮರ ಹಾಗು ಗದ್ದೆಗಳು ಕಾಣತೊಡಗುತ್ತವೆ. ನೋಡ ನೋಡುತ್ತಲೇ ಆಕಾಶ ನಿಧಾನವಾಗಿ ಕೆಂದಾವರೆಯ ಬಣ್ಣ ತಳೆದು ನಿಲ್ಲುತ್ತದೆ. ಕಿಟಕಿಯಿಂದ ತಂಪಾದ ಗಾಳಿ ಮುಖವನ್ನು ಅಪ್ಪಳಿಸಿಗಾದ ಹಿತವೆವೆನಿಸಿ ಕೆಲಹೋತ್ತು ಹಾಗೆ ಕಣ್ಣನು ಮುಚ್ಚಿ ಮುಖವನ್ನು ಗಾಳಿಗೆ ಒಡ್ಡಿಕೊಂಡಿರುತ್ತಾನೆ.
'ಮಗಾ.. ಚಳಿ ತುಂಬಾ ಇದೆ...ಕಿಟಿಕಿ ಹಾಕಪ್ಪ' ಎಂದ ತಾತನ ಸದ್ದಿಗೆ ಒಲ್ಲದ ಮನಸ್ಸಿಂದ ಕಿಟಕಿಯನ್ನ ಕೆಳಗೆ ಎಳೆಯುತ್ತಾನೆ. 'ಯಾವೂರಪ್ಪ ನಿಂದು.?' ಎಂದು ಕೇಳಿದ ತಾತನಿಗೆ, ತಾನು ಹೋಗುತ್ತಿರುವ ಊರು ವಿಳಾಸವನ್ನೆಲ್ಲ ಹೇಳಿದಾದ ಅವರು 'ಅರ್ರೆ... ನೀನು ನಮ್ಮ್ ಪಟೇಲ್ರ ಮೊಮ್ಮಗ...ನಾನು ಅದೇ ಊರು' ಎಂದು ಅವರು ಪರಿಚಯ ಮಾಡಿಕೊಳ್ಳುತ್ತಾರೆ. ಬಿಳಿ ಪಂಚೆ ಹಾಗು ಶರ್ಟನ್ನು ದರಿಸಿದ್ದ ಅವರು ತಲೆಗೊಂದು ಪೇಟವನ್ನು ಸುತ್ತಿದ್ದರು. ತಿಳಿಯಾದ ಮೀಸೆ ಗಡ್ಡವನ್ನು ಬಿಟ್ಟಿದ್ದ ಅವರ ವಯಸ್ಸು ಸುಮಾರು ಎಪ್ಪತ್ತರ ಆಸುಪಾಸು. ಎಲ್ಲೋ ನೋಡಿದ ನೆನಪು. ಆದರೆ ಸರಿಯಾಗಿ ಬಲ್ಲದ ಹೊಸ ವ್ಯಕ್ತಿಯೊಟ್ಟಿಗೆ ಹೆಚ್ಚೇನೂ ಸಂಭಾಷಿಸದೆ ಭರತ ಕಿಟಕಿಯ ಮೂಲಕ ರಮಣೀಯವಾದ ಪರಿಸರವನ್ನು ನೋಡುತ್ತಾ ಕೂರುತ್ತಾನೆ. ಪರಿಸರನ್ನು ನೋಡುತ್ತಾ ಒಂದು ನೆಮ್ಮದಿಯ ನಗೆ ಭರತನಲ್ಲಿ ಮೂಡಿದರೆ, ಆತನನ್ನು ನೋಡಿ ಹಿರಿಯ ಮುಗಳ್ನಗೆಯೊಂದು ತಾತನಲ್ಲಿ ಮೂಡುತ್ತದೆ.

ಕೆಲ ಸಮಯದಲ್ಲೇ ರೈಲು ಊರನ್ನು ತಲುಪುತ್ತದೆ. ಭಾರವಾದ ಬ್ಯಾಗನ್ನು ಹೊರಗೆಳೆಯಲಾಗದೆ ಗೋಳಾಡುತ್ತಿದ್ದ ತಾತನಿಗೆ ಸಹಾಯ ಮಾಡಲು ಹೋಗಿ ಬ್ಯಾಗಿನ ತುಂಬೆಲ್ಲಾ ಪುಸ್ತಕಗಳೇ ಇರುವುದನ್ನು ಕಂಡು ಭರತ ಕೊಂಚ ಆಶ್ಚರ್ಯಚಕಿತನಾಗುತ್ತಾನೆ. ಬ್ಯಾಗನ್ನು ಎಳೆದು ರೈಲಿನಿಂದ ಹೊರತಂದು ತಾತನ ಬಳಿ ಇಟ್ಟ ಭರತ ಊರಿಗೆ ಹೋಗುವ ದಾರಿ ಯಾವುದೆಂದು ಕೇಳಿದಾಗ,
'ಇಲ್ಲಿಂದ ಗದ್ದೆ ಆಸಿ ನೆಡೆದ್ರೆ ಮೂರ್ ಕಿಲೋಮೀಟ್ರು.. ಆಟೋ ಹಿಡ್ದು ಆ ಟಾರ್ ರಸ್ತೆಲಿ ಹೋದ್ರೆ ಒಂದು ವರೆ... ನೀ ಬಾ ನನ್ನೊಟ್ಟಿಗೆ. ನಾನ್ ಹೇಗಿದ್ರು ಆಟೋ ಮಾಡ್ಲೆ ಬೇಕು ' ಎಂದ ಅಜ್ಜನನ್ನು ನೋಡಿದ ಭರತ ಕೆಲಹೊತ್ತು ಸುಮ್ಮನಾದ.
'ನಂಗೊತ್ತಪ್ಪ, ನಿಂಗೆ ಗದ್ದೆ ದಾರೀಲೆ ಹೋಗ್ಬೇಕು ಅಂತ ನಿನ್ ಮನ್ಸ್ ಅಂತಿದೆ. ಸರಿ, ನೀ ಹಾಗೆ ಹೋಗು. ನಾನ್ ಆಟೋ ಇಟ್ಕೊಂಡು ಬರ್ತೀನಿ..ಊರಲ್ ಸಿಗೋಣ' ಎನ್ನುತ ತಾತ ಆಟೋದವನನ್ನು ತನ್ನ ಬಳಿ ಕರೆದ. ತನ್ನ ಮನಸ್ಸಿನಲ್ಲಿ ಏನಿದೆ ಎಂದು ಈ ತಾತನಿಗೇಗೆ ತಿಳಿಯಿತು ಎಂದು ಭರತ ಕಳವಳಗೊಂಡ. ಬ್ಯಾಗಿನ ತುಂಬ ಪುಸ್ತಕ, ಅಲ್ಲದೆ ಆ ತಾತನ ಮಾತಿನ ಉಚ್ಚಾರಣೆಯೂ ಹಳ್ಳಿಯ ಇತರರಿಗಿಂತ ತುಸು ಭಿನ್ನವಾಗಿದ್ದರಿಂದಲೇ ಭರತನಿಗೆ ಅವರ ಮೇಲೆ ಕುತೂಹಲ ಮೂಡಿತು. ಅಲ್ಲದೆ ಅವರನ್ನು ತಾನು ತೀರಾ ಸಮೀಪದಿಂದ ಬಲ್ಲೆನೆಂಬ ಭಾವ. ಆದರೆ ನೆನಪಿಗೆ ಬಾರದು. ಅಷ್ಟರಲ್ಲಿ ಅವರು ಆಟೋವನ್ನೇರಿ ಹೊರಟು ಹೋದರು. ಭರತ ನಿಧಾನವಾಗಿ ಗದ್ದೆಯ ಬದುಗಳನ್ನು ಇಳಿಯುತ್ತಾ ಊರಿನೆಡೆ ಸಾಗಿದ.

ಮುಂಜಾವಿನ ಕಿರಣಗಳು ಮೈ ಮೇಲೆ ಬಿದ್ದಾಗ ಭರತನಿಗೆ ಹಿತವೆನಿಸಿತು. ಹಕ್ಕಿ-ಪಕ್ಷಿಗಳ ಚಿಲಿಪಿಲಿಯ ಮಧುರ ಸ್ವರಗಳನ್ನು ಆಸ್ವಾದಿಸುತ್ತಾ ನಿಧಾನವಾಗಿ ಮುನ್ನೆಡೆದ. ಮುಂಜಾವಿನ 'ಅಸಾವರಿ' ರಾಗವನ್ನು ಮನದೊಳಗೆ ಹಾಗೆ ಹಾಡಿಕೊಳ್ಳಬೇಕೆನಿಸಿತು. ಅದಾಗಲೇ ಮನಸ್ಸು ಕೆಲಸದ ಚಿಂತೆ ಒತ್ತಡಗಳಿಂದ ದೂರವಾಗಿತ್ತು. ಹಸಿರುಸಿರಿಗಳ ನಡುವೆ ನಲಿಯುತ್ತಿತ್ತು. ಮನದೊಳಗೆ ರಾಗವನ್ನು ಗುನುಗತೊಡಗಿದ.

ಅದಾಗಲೇ ಗದ್ದೆಯ ಕೆಲಸಕ್ಕೆ ಹಾಜರಾಗಿದ್ದ ಮಂಜ ಒಬ್ಬ ಪೇಟೆಯ ವ್ಯಕ್ತಿ ಬ್ಯಾಗೊಂದನ್ನು ತಗುಲಾಕಿಕೊಂಡು ತನ್ನ ಪಾಡಿಗೆ ಏನೋ ಗುನುಗಿಕೊಳ್ಳುತ್ತಾ ನೆಡೆಯುತ್ತಿದ್ದದ್ದನು ನೋಡಿ ತನ್ನ ಕೆಲಸವನ್ನು ಬಿಟ್ಟು ಈತನನ್ನೇ ಧಿಟ್ಟಿಸಿ ನೋಡುತ್ತಾನೆ.
ಯಾವೂರಪ್ಪ ನಿಮ್ದು.? ಯಾರ್ ಮನೆ ಕಡಿ ಹೊರಟಿದಿರಿ?' ಎಂಬ ಮಂಜನ ಪ್ರೆಶ್ನೆಗೆ ರೈಲಿನಲ್ಲಿ ಸಿಕ್ಕ ತಾತನಿಗೆ ನೀಡಿದ ಉತ್ತರವನ್ನೇ ನೀಡಿ ಮುನ್ನೆಡೆದ. ಮಂಜ ಖುಷಿಯಿಂದ ಅದೇನೋ ಅಂದಿದ್ದನ್ನೂ ಲೆಕ್ಕಿಸದೆ ರಾಗವನ್ನು ಗುನುಗುತ್ತಾ ಸಾಗಿದ. ಕೆಲ ಹೊತ್ತಿನ ನಂತರ ಗದ್ದೆಯ ಬದುಗಳನ್ನು ಏರಿ ಊರನ್ನು ಪ್ರವೇಶಿಸಿದ.

'ದಿನಕಳೆದಂತೆ ಸಿಟಿಗಳ ರೀತಿ ಹಳ್ಳಿಗಳು ಬದಲಾಗವು. ಹಳ್ಳಿ ಅಂದು ಹೇಗಿತ್ತೋ ಈಗಲೂ ಹಾಗೆಯೇ ಇದೆ. ಸುಂದರವಾಗಿದೆ' ಎಂದುಕೊಳ್ಳುತ್ತಾನೆ. ಅರಳಿಕಟ್ಟೆಯ ಮೇಲೆ ಕೂತಿರುವ ಜನರ ಗುಂಪು, ಊರ ಭಾವಿಯಿಂದ ನೀರನ್ನು ಎಳೆದು ಬಿಂದಿಗೆಯಲ್ಲಿ ಹೊತ್ತೊಯ್ಯುತ್ತಿರುವ ಹೆಂಗೆಳೆಯರು, ಅವರ ಕೈ ಬಳೆಗಳು ಒಂದಕೊಂದು ತಾಗಿ ಮೂಡುವ ಇಂಪಾದ ಸದ್ದು, ಮನೆಯ ಮುಂಬದಿಗೆ ಕಟ್ಟಿರುವ ಹಸು, ಎತ್ತು ಹಾಗು ಆಡು ಗಳು, ಊರ ಶಾಲೆ ಹಾಗು ಅದರ ಮುಂದೆ ಜೀವವೇ ಪಣವಿಟ್ಟಂತೆ ಅರಚಿ ಆಡುತ್ತಿರುವ ಮಕ್ಕಳು. ಭರತನಿಗೆ ಅಪ್ಪನೊಟ್ಟಿಗೆ ಕೊನೆಯ ಬಾರಿ ಬಂದ ದಿನಗಳು ನೆನಪಾದವು. ತುಸು ದೂರ ನಡೆದು ಬಲಕ್ಕೆ ತಿರುಗಿದಾಗ ಊರ ದೊಡ್ಡ ಮೆನೆ, ತನ್ನ ಅಜ್ಜನ ಮನೆ ಕಂಡಿತು. ಚಿಕ್ಕವನಿದ್ದಾಗ ಅತ್ತು ಕಾಡಿ ಇಲ್ಲಿಗೆ ಬರಲು ಅವಣಿಸುತ್ತಿದ್ದ ಭರತ ದೊಡ್ಡವನಾಗುತ್ತಿದ್ದಂತೆ ತನಗರಿವಿಲ್ಲದಂತೆ ಇಲ್ಲಿಂದ ದೂರವಾಗುತ್ತಾನೆ. ಇತ್ತೀಚೆಗೆ ಇಲ್ಲಿನ ಬಾಲ್ಯದ ನೆನಪುಗಳೂ ಮಾಸಿವೆ.

'ಅರ್ರೆ. ರೈಲಿನಲ್ಲಿ ಸಿಕ್ಕ ತಾತ ದೊಡ್ಡೆಗೌಡ್ರಲ್ಲವೇ?!' ಎಂಬ ಪ್ರೆಶ್ನೆ ಅಚಾನಕ್ಕಾಗಿ ಭರತನಲ್ಲಿ ಮೂಡುತ್ತದೆ.

'ನನಗೆ ಗೊತ್ತಿಲ್ಲದಿರಬಹುದು. ಅವರಾದರೂ ನನ್ನ ಗುರುತು ಹಿಡಿಯಬಹುದಿತ್ತಲ್ಲಾ? ಇಲ್ಲಾ, ಅವರಿಗೂ ನಾನು ಮರೆತುಹೋಗಿರಬಹುದೇ? ಅವರ ಮಾತಿನಲ್ಲಿ ನಾನು ಅವರಿಗೆ ಬಲ್ಲೆ ಎಂಬ ಅನ್ಯೂನ್ಯತೆಯಂತು ಇರಲಿಲ್ಲ...' ಎಂದುಕೊಳ್ಳುತ್ತಾನೆ.


ಅಜ್ಜನ ಮನೆಯನ್ನು ಒಮ್ಮೆ ಹಾಗೆಯೇ ನೋಡುತ್ತಾನೆ. ಸುಣ್ಣ-ಬಣ್ಣಗಳು ಕಾಣದಿದ್ದರೂ ಗಟ್ಟಿಮುಟ್ಟಾದ ಮನೆ. ಮನೆಯ ಮುಂದಿನ ಮರದ ಕಂಬಗಳು ಇನ್ನೂ ಹಾಗೆಯೇ ಇವೆ ಎಂದು ನೋಡುತ್ತಿರುವಾಗಲೇ 'ಯಾರದು.?' ಎಂಬ ಹೆಣ್ಣ ದನಿಯೊಂದು ಮೂಡುತ್ತದೆ. ಬಾಗಿಲ ಸಂದಿಯಿಂದ ಬಂದ ಆ ಸದ್ದಿನ ಕಡೆ ಮುಖ ಮಾಡಿ 'ನಾನು ಭರತ... ' ಎಂದು ಕೂಗುತ್ತಾನೆ. ಭರತನ ಹೆಸರನ್ನು ಕೇಳಿದ ಆಕೆ ಜಲ್-ಜಲ್ ಎಂಬ ಗೆಜ್ಜೆಯ ಸದ್ದಿನೊಂದಿಗೆ ಒಳ ಓಡುತ್ತಾಳೆ.

ಮೆಟ್ಟಿಲನ್ನು ಏರಿ, ಶೂಗಳನ್ನು ಬಿಚ್ಚಿಟ್ಟು 'ಅಜ್ಜಾ..' ಎಂದು ಕೂಗುತ್ತಾ ಭರತ ಒಳ ನೆಡೆಯುತ್ತಾನೆ.

'ಅಯ್ಯಾ.. ಭರತ.. ಬಾ.. ಹೆಂಗಿದ್ದೀಯಪ್ಪ.. ಅಪ್ಪ ಹೆಂಗವ್ನೆ.?' ಎಂದು ಕನ್ನಡಕವನ್ನು ಹಾಕಿ ಬಂದ ಅಜ್ಜ, ಭರತನನ್ನು ನೋಡಿ ಆತನ ಮುಖವನ್ನು ತನ್ನ ಕೈಗಳಿಂದ ಎಳೆದು ಕೆನ್ನೆಯ ಮೇಲೆ ಮುತ್ತಿಕ್ಕುತ್ತಾರೆ.

'ಅವೇ ದೊಡ್ಡ ಕೈಗಳು. ಇಂದು ಒಣಗಿ ಸುಕ್ಕಾಗಿವೆ' ಎಂದುಕೊಳ್ಳುತ್ತಾನೆ ಭರತ.

‘ಮರಕೋತಿ ಆಡಲು ಮರವೇರಿ ಹೆದರಿ, ಇಳಿಯಲು ಆಗದೆ ಅಳುತ್ತಾ ಮರದಲ್ಲೇ ಕೂತಿರುವಾಗ, ಅಪ್ಪ-ಅಮ್ಮರಿಬ್ಬರೂ ಮರದ ಕೆಳಗೆ ನಿಂತು ಬಯ್ಯುತಿರುವಾಗ, ಅಜ್ಜ ಮಾತ್ರ ಹೇಗಾದರೂ ಮಾಡಿ ಮರವೇರಿ, ಭರತ ಹೆದರಿ ಅವಿತು ಕೂತಲ್ಲಿಗೆ ಬಂದು ಇವೇ ಕೈಗಳಿಂದ ಮೃದುವಾಗಿ ಎತ್ತಿ ಕೆಳಗೆ ಇಳಿಸುತ್ತಿದ್ದರು. ಜೀವವೇ ಹೋಯಿತೆಂದು ನಡುಗಿ ಹೋಗುತ್ತಿದ್ದ ಭರತನಿಗೆ ಈ ಕೈಗಳು ಬಳಿಗೆ ಬಂದವೆಂದರೆ ಎಲ್ಲಿಲ್ಲದ ಧೈರ್ಯ! ಅಪ್ಪ ಅಮ್ಮರ ಬೈಗುಳದ ಭಯವೆಲ್ಲ ಮಾಯ! ಮರದ ಕೆಳಗೆ ಇಳಿಯುತ್ತಿದ್ದದ್ದನೆ ಕಾಯುತ್ತಿದ್ದ ಅಪ್ಪ, ಕೋಲನ್ನು ಹಿಡಿದು ಹೊಡೆಯಲು ಸಿದ್ದರಾಗಿರುತ್ತಿದ್ದರು. ಇಳಿದೊಡನೆಯೇ ಅಜ್ಜನ ಹಿಂದೆ ಹೋಗಿ ಅವರ ಕಾಲುಗಳನ್ನು ಭರತ ಬಿಗಿಯಾಗಿ ಅಪ್ಪಿಕೊಳ್ಳುತ್ತಿದ್ದೆ. ಹೊಡೆಯಲು ಬರುತ್ತಿದ್ದ ಅಪ್ಪನ ಕೋಲನ್ನು ಕಿತ್ತು ಎಸೆಯುತ್ತಿದ್ದರು ಅಜ್ಜ’ ಎಂಬ ನೆನಪುಗಳು ಅವರ ಹಸ್ತಗಳ ಸ್ಪರ್ಶದಿಂದ ಒಂದರಿಂದೊಂದು ಮೂಡುತ್ತವೆ.

'ಎಲ್ಲ ಚೆನ್ನಾಗಿದ್ದಾರೆ, ನೀನ್ ಹೇಗಿದ್ದೀಯ ಅಜ್ಜ..' ಎಂದು ಕೇಳುತ್ತಾನೆ.

'ನಂದ್ ಬಿಡಪ್ಪ.. ಹಿಂಗ್ ಅವ್ನಿ.. ಯೇಟ್ ದೊಡ್ಡವನಾಗಿದ್ದೀಯಪ್ಪ ನೀನು.. ಬರಿ ಫೋನಲ್ಲಿ ದನಿ ಕೇಳಿ ಕಣ್ಮುಂದೆ ನೋಡಿದ್ರೆ ಗುರ್ತೇ ಸಿಗಾಕಿಲ್ಲ.. ಅದ್ರು ಮ್ಯಾಗೆ ಈ ಮ್ಯಾಕೆ ಗಡ್ಡ ಬೇರೆ ' ಎಂದು ನಗುತ್ತಾ 'ಫ್ರೆಂಚ್ ಕಟ್' ಎಂದು ಬಿಟ್ಟಿದ್ದ ಗಡ್ಡವನ್ನು ಒಮ್ಮೆ ಮುಟ್ಟಿ ನಗುತ್ತಾರೆ.

'ಗೌರಿ.. ಕಾಪಿ ತಾರೆ ಮಗಿಗೆ..' ಎಂದು ಕೂಗಿದ ಅಜ್ಜನನ್ನು ಗೌರಿ ಯಾರೆಂದು ಕೇಳುತ್ತಾನೆ.

'ನಮ್ಮ್ ದೊಡ್ಡೆಗೌಡ್ರ ಮೊಮ್ಮಗ್ಳು .. ಯಾಕ್ ಮರ್ತ್ ಹೋಯಿತೇನ.. ನೀನ್ ಅವಳೊಟ್ಟಿಗೆ ಕುಂಟೆಪಿಲ್ಲೆ ಆಡ್ತಾ ಇದ್ರೆ, ಹಳ್ಳಿ ಹುಡುಗ್ರು ನಿನ್ನ ಹುಡ್ಗಿ ಹುಡ್ಗಿ ಅಂತ ರೇಗುಸ್ತಿದ್ರಲ್ಲ..' ಎಂದು ನಗುತ್ತಾ ಕೇಳಿದಾಗ ಭರತನಿಗೆ ನೆನಪಾಗುತ್ತದೆ. ಹದಿಮೂರು ವರ್ಷಗಳ ಹಿಂದೊಮ್ಮೆ ಅಪ್ಪನೊಟ್ಟಿಗೆ ಬಂದಾಗ ಕೊನೆಯದಾಗಿ ಆಕೆಯನ್ನು ನೋಡಿದ ನೆನೆಪು. ಅದಾದ ನಂತರ ಅಪ್ಪ, ಅಜ್ಜನೊಟ್ಟಿಗೆ ಮುನಿಸಿಕೊಂಡು ಇತ್ತ ಕಡೆ ಬರಲೇ ಇಲ್ಲ. ಭರತನನ್ನೂ ಬರಲು ಬಿಡಲಿಲ್ಲ. ಇಂದೂ ಸಹ ಹೊರಡುವಾಗ ಒಪ್ಪಲಿಲ್ಲ. ನಂತರ ಹಠಕ್ಕೆ ಮಣಿದು ಜಾಸ್ತಿ ದಿನ ಇರಬಾರದು, ಜಾಸ್ತಿ ಜನರೊಟ್ಟಿಗೆ ಬೇರೆಯಬಾರದು, ಅದು,ಇದು ಎಂದು ಫೋನಿನಲ್ಲಿ ಬಹಳ ಹೇಳಿಯೇ ಕಳಿಸಿದ್ದರು. ಆದರೂ ಭರತ ಅದ್ಯಾವುದನ್ನೂ ಲೆಕ್ಕಿಸದೆ ಬಂದಿರುತ್ತಾನೆ.

ಗೌರಿಯನ್ನು ಕಾಣಲು ಭರತನ ಕಣ್ಣುಗಳು ಹಾತೊರೆಯುತ್ತವೆ.

'ನಿಮ್ ಅಜ್ಜಿ ತೀರೋದ್ ಮೇಲೆ ಈಕೇನೇ ಮನಿಗ್ ಬಂದು ಚೂರು-ಪಾರು ಕೆಲ್ಸ ಮಾಡ್ಕೊಡ್ತಾವಳೆ' ಎಂದು ಸುಮ್ಮನಾದರು.

'ಕಾಫಿ...' ಎನ್ನುತಾ ಲೋಟವನ್ನಿಟ್ಟ ತಟ್ಟೆಯನ್ನು ಮುಂದೆ ಹಿಡಿದ ಗೌರಿಯನ್ನು ಒಮ್ಮೆ ಭರತ ನೋಡುತ್ತಾನೆ. ಬಾಲ್ಯದ ಆಕೆಯನ್ನು ಗುರುತಿಡಿಯುವುದು ಕಷ್ಟ ಸಾಧ್ಯವಾಗಿರುತ್ತದೆ. ಬಣ್ಣ ಕೊಂಚ ಮಂದವಾದರೂ ಲಕ್ಷಣವಾಗ ಮೈಕಟ್ಟು. ಮಧುರವಾದ ಧ್ವನಿ. ಸ್ವರಸಾಧನೆಗೆ ಹೇಳಿಮಾಡಿಸಿದ ಹಾಗಿದೆ ಎಂದುಕೊಳ್ಳುತ್ತಾನೆ.

'ಥ್ಯಾಂಕ್ ಯು.. ಇಟ್ಸ್ ರಿಯಲಿ ನೈಸ್' ಎಂದು ಕಾಫಿಯನ್ನು ಕುಡಿದು ಹೇಳಿ, 'ಈ ಹಾಳಾದ್ ಇಂಗ್ಲಿಷ್ ಪದಗಳು ಎಲ್ಲಿ ಹೋದ್ರು ಬಿಡಲ್ಲ' ಎನ್ನುಕೊಳ್ಳುತಿರುವಾಗಲೇ,

'ಇಟ್ಸ್ ಮೈ ಪ್ಲೆಷರ್.. ' ಎಂದು ಗೌರಿ ಮುಗುಳ್ನಗುತ್ತಾಳೆ.

'ನೀವ್ ಈಗ ಏನ್ ಮಾಡ್ಕೊಂಡಿದ್ದೀರಾ.?' ಎಂದು ಕೇಳಿದ ಭರತನ ಪ್ರೆಶ್ನೆಗೆ,

'ನಿನ್ನಷ್ಟೇನ್ ಇಲ್ಲ ಬಿಡಪ್ಪ. TCH ಮಾಡಿ ಇಲ್ಲೇ ಸ್ಕೂಲ್ ಮಕ್ಳಿಗೆ ಟೀಚ್ ಮಾಡ್ತಾ ಇದ್ದೀನಿ' ಎಂದಳು.ತನ್ನ ಬಹುವಚನದ ಪ್ರೆಶ್ನೆಗೆ ಅವಳ ಏಕವಚನ ಉತ್ತರ ತನ್ನ ಬಗ್ಗೆ ಅವಳಿಗಿರುವ ಅನ್ಯೂನ್ಯತೆ ಎಂದು ಖುಷಿಪಡುತ್ತಾನೆ.

ಮದ್ಯಾಹ್ನ ಹೊಟ್ಟೆ ತುಂಬಿದರು ಸಾಕೆನಿಸದಷ್ಟು ರುಚಿಯಾದ ಊಟವನ್ನು ತಿಂದು ವಿಶ್ರಮಿಸಿದ ಭರತ ಮೇಲೆದ್ದಾಗ ಸಂಜೆ ಐದಾಗಿರುತ್ತದೆ. ಭರತ ಎದ್ದು ರೆಡಿಯಾಗಿ ಅಟ್ಟವನ್ನು ಏರುತ್ತಾನೆ. ಅಟ್ಟದ ಮೇಲಿನ ಮರದ ಹಲಗೆಗಳ ಮೇಲೆ ಚೌಕಾಬರೆ ಆಟದ ಮನೆಯ ಹಚ್ಚುಗಳು ಇನ್ನೂ ಹಾಗೆಯೇ ಇರುತ್ತವೆ. ಬಾಲ್ಯದಲ್ಲಿ ಅಜ್ಜನನ್ನು ಕಾಡಿ-ಬೇಡಿ ರಾತ್ರಿಯಿಡಿ ಅಟ್ಟದ ಮೇಲೆ ಚೌಕಬರೇ ಆಡಿದ ನೆನಪುಗಳು ಮರುಕಳಿಸುತ್ತವೆ. ಗೆಲ್ಲುವವರೆಗೂ ಬಿಡದೆ ಆಡುತ್ತಿದ್ದ ಭರತನ ಉಪಟಳಕ್ಕೆ ಸಾಕಾಗಿ ಕೊನೆಗೆ ಅಜ್ಜ ಬೇಕಂತಲೇ ಸೋತುಬಿಡುತ್ತಿದ್ದರು. ನಂತರವೇ ಅವರಿಗೆ ಹೋಗಿ ಮಲಗಲು ಅವಕಾಶ ಎಂದು ನೆನೆಪಾಗಿ ಭರತ ತನ್ನಲ್ಲೇ ನಗುತ್ತಾನೆ. ಅಟ್ಟದ ಸಣ್ಣ ಬಾಗಿಲಿನಿಂದ ಮಾಳಿಗೆಯ ಮೇಲೆ ಬಂದು ಮೂಲೆಯಲ್ಲಿದ್ದ ಬೆತ್ತದ ಕುರ್ಚಿಯನ್ನು ಎಳೆದು ಪಶ್ಚಿಮಕ್ಕೆ ಮುಖಮಾಡಿ ಕೂರುತ್ತಾನೆ. ಮನೆ ಕೊಂಚ ಎತ್ತರದ ಪ್ರದೇಶದಲ್ಲಿದ್ದಿದ್ದರಿಂದ ದೂರ ದೂರದ ಹೊಲ-ಗದ್ದೆ, ಗಿಡ ಮರಗಳು ಸುತ್ತಲೂ ಕಾಣತೊಡಗಿದ್ದವು. ಮನೆಯ ಪಕ್ಕದದಲ್ಲೇ ಬೆಳೆದಿದ್ದ ಹಲಸಿನ ಮರಗಳ ಎಲೆಗಳ ನಡುವೆ ಸೂರ್ಯನ ಸೌಮ್ಯವಾದ ಸಂಜೆಯ ಕಿರಣಗಳು ಹೊರ ಹೊಮ್ಮುತ್ತಿದ್ದವು. ಸಿಟಿಯಲ್ಲೆಂದೂ ಕಾಣದ ಗುಬ್ಬಚ್ಚಿಗಳು, ಅಳಿಲುಗಳು ಹಾಗು ಇನ್ನು ಹಲವು ಬಗೆ ಬಗೆಯ ಹಕ್ಕಿಗಳು ಮರದ ತುಂಬೆಲ್ಲಾ.
'ಅಬ್ಬಾ.. ಅದ್ಭುತ!' ಎಂದುಕೊಂಡು ಮನಸ್ಸಿಗೆ ಹಿತವಾದ ರಾಗವೊಂದನ್ನು ಗುನುಗಿಕೊಳ್ಳುತ್ತಿರುತ್ತಾನೆ. ಅಷ್ಟರಲ್ಲಿ 'ಕಾಫಿ..' ಎಂದು ತಟ್ಟೆಯನ್ನು ಹಿಡಿದು ಭರತನ ಹಿಂದೆ ಗೌರಿ ಬಂದು ನಿಲ್ಲುತ್ತಾಳೆ. ಕಾಫಿಯನ್ನು ಕುಡಿದ ನಂತರ ಮನಸ್ಸಿಗೆ ಇನ್ನೂ ಹಿತವಾಗುತ್ತದೆ.

'ಕಾಫಿ ತುಂಬ ಚೆನ್ನಾಗಿದೆ... ಏನ್ ಇವತ್ ಸ್ಕೂಲ್ಗೆ ಹೋಗಿಲ್ವಾ' ಎಂದು ಕೇಳುತ್ತಾನೆ.

'ಇಲ್ವೋ. ಹೋದ್ ವಾರ ಅಷ್ಟೇ ಎಕ್ಸಾಮ್ಸ್ ಮುಗ್ದಿದೆ. ಹಾಗಾಗಿ ಇನ್ನೆರ್ಡ್ ವಾರ ರಜಾ ಹಾಕಿದ್ದೀನಿ' ಎನ್ನುತ್ತಾಳೆ.

ಸ್ವಲ್ಪ ಹೊತ್ತು ಸುಮ್ಮನಿದ್ದ ಗೌರಿ, 'ನಿಮ್ಮ್ ಅಜ್ಜನ್ನ ಹೀಗೆ ಒಬ್ಬರನ್ನೇ ಬಿಟ್ಟ್ ಹೋಗೋಕೆ ಅದೇಗೆ ಮನ್ಸ್ ಬರುತ್ತೆ ನಿಮ್ಗೆ..ಹ?' ಎಂದು ಕೊಂಚ ಏರು ದನಿಯಲ್ಲಿ ಕೇಳುತ್ತಾಳೆ. ಮಿಂಚಿನಂತೆ ಬಂದ ಆಕೆಯ ಅಚಾನಕ್ ಪ್ರೆಶ್ನೆಗೆ ಭರತನಿಗೆ ಏನು ಉತ್ತರಿಸಬೇಕೆಂದು ಅರಿಯುವುದಿಲ್ಲ.

'ದುಡ್ಡು ದುಡ್ಡು. ಅದೆಷ್ಟು ಅಂತ ದುಡ್ಡಿನಿಂದೆ ಓಡ್ತಿರಾ..? ಹೆತ್ತ್ ಅಪ್ಪ ಅಮ್ಮನ್ನೇ ಬಿಟ್ಟು ಅದೇನು ಸಿಗುತ್ತೋ ನಿಮ್ಗೆ ಹಣ ಮಾಡೋದ್ರಲ್ಲಿ' ಎಂದ ಅವಳ ಮಾತಿಗೆ ಕ್ಷಣಮಾತ್ರದಲ್ಲೇ ಕುಪಿತಗೊಂಡ ಭರತ ನಂತರ ‘ಈಕೆ ನನ್ನ ಮನದಾಳದ ಮಾತನ್ನೇ ಆಡುತ್ತಿದ್ದಾಳೆ' ಎಂದುಕೊಂಡು ಸುಮ್ಮನಾಗುತ್ತಾನೆ.

'ಭರತ್, ಐ ಅಮ್ ನಾಟ್ ಬ್ಲೇಮಿಂಗ್ ಯು ಬಟ್, ಇಲ್ಲಿ ಇಷ್ಟ್ ದೊಡ್ಡ ಮನೆ, ಆಸ್ತಿ-ಪಾಸ್ತಿ ಎಲ್ಲ ಬಿಟ್ಟು ಆ ಹಾಳಾದ್ ಸಿಟಿ ಯಾಕ್ ಸೇರ್ಕೊಂಡ್ರು ನಿಮ್ ಅಪ್ಪ ಅಂತ ಗೊತ್ತಿಲ್ಲ' ಎಂದು ಸುಮ್ಮನಾದಳು.

'ಯು ನೊ ವಾಟ್, ನೀವು ನನ್ನ್ ಮನಸ್ಸಲ್ಲಿ ಇರೋದನ್ನೇ ಹೇಳ್ ಬಿಟ್ರಿ. ನನಗೂ ಈ ಕೃತಕ ಸಿಟಿ ಲೈಫ್ ಸಾಕನ್ಸಿಬಿಟ್ಟಿದೆ.. ಆದ್ರೆ ಏನ್ ಮಾಡೋದು' ಎಂದು ಸುಮ್ಮನಾಗುತ್ತಾನೆ.

'ನಮ್ಮ್ ಹಳ್ಳಿಗೆ ಬಂದು ಒಂದೆರ್ಡ್ ದಿನ ಎಲ್ರಿಗೂ ಹಾಗೆ ಅನ್ಸೋದು ಮಿಸ್ಟರ್ ಭರತ್. 3ಜಿ ಸ್ಪೀಡ್ನಲ್ಲಿ ಇಂಟರ್ನೆಟ್ ಯಾವಾಗ್ ಸಿಗಲ್ವೋ ತಕ್ಷಣ ವಾಪಾಸ್ ಓಡೋಗ್ತೀರಾ ನೀವು.. ಕೃತಕ ಸಿಟಿ ಲೈಫ್ ನ ಹುಡ್ಕೊಂಡು' ಎಂದು ನಗಲಾರಂಭಿಸುತ್ತಾಳೆ. ಕ್ಷಣಗಳಿಂದೆಯಷ್ಟೇ ಕುಪಿತಕೊಂಡಂತಿದ್ದ ಆಕೆಯ ಕಣ್ಣುಗಳು ನಗುವಿನ ಕಡಲಲ್ಲಿ ಅರಳಿದ್ದವು. ಭರತ ಆ ಕಣ್ಣುಗಳನ್ನೇ ದಿಟ್ಟಿಸಿ ನೋಡತೊಡಗಿದ. ಕೊಂಚ ಹೊತ್ತು ನಕ್ಕಿ, ಯಾವಾಗ ಭರತನ ಕಣ್ಣುಗಳು ತನ್ನ ಕಣ್ಣುಗಳನ್ನು ಧಿಟ್ಟಿಸುತ್ತಿವೆ ಎಂದರಿತಾಗ ಗೌರಿ ಭರತನ ಬಳಿಯಿದ್ದ ಲೋಟವನ್ನೂ ತೆಗೆದುಕೊಳ್ಳದೆ ಬೇಗನೆ ಅಟ್ಟವನ್ನಿಳಿದು ಒಳ ಹೋಗುತ್ತಾಳೆ.

‘ಭರತ. ಬಾರಪ್ಪ ಕೆಳಗೆ. ದೊಡ್ಡೆಗೌಡ್ರು ನಿನ್ನ ಮಾತಾಡ್ಸಬೇಕಂತೆ' ಎಂದು ಅಜ್ಜ ಕರೆದಾಗ ಭರತ ಅಂಗಳಕ್ಕೆ ಇಳಿದು ಬರುತ್ತಾನೆ. ಅಜ್ಜ ಕೆಲಸದ ಆಳುಗಳೊಡನೆ ಯಾವುದೊ ವಿಷಯದ ಬಗ್ಗೆ ಮಾತನಾಡತೊಡಗುತ್ತಾರೆ. ದೊಡ್ಡೆಗೌಡರ ಬಳಿ ಬಂದು ಕೂತ ಭರತ ಅವರು ತನ್ನನು ಮೊದಲೇ ರೈಲಿನಲ್ಲಿ ಏಕೆ ಗುರುತಿಸಿಲ್ಲವೆಂದು ನೇರವಾಗಿ ಕೇಳುತ್ತಾನೆ.
'ನೀನೆ ನನ್ನ ಗುರ್ತ್ ಹಿಡಿಯದವನು, ಇನ್ ಈ ಮುದುಕಪ್ಪ ನಿನ್ನ ಹೇಗ್ ಗುರ್ತ್ ಹಿಡೀಬಹುದು? ಆದ್ರೂ ನಾನ್ ನಿನ್ನ ಪಕ್ಕಕ್ಕೆ ಬಂದ್ ಕೂತಾಗ್ಲೆ ನಂಗೆ ನೀನು ಪಟೇಲ್ರ ಮೊಮ್ಮಗ ಭರತ ಅಂತ ಗೊತ್ತಾಯಿತ್ತು. ನೀನು ಮಲ್ಗಿ ನಿದ್ರೇಲಿ ಕನವರಿಸೋದ ನೋಡೇ ನೀನು ಯಾವುದೊಂದು ಚಿಂತೆಯಲ್ಲಿದ್ದೀಯ ಅಂತನೂ ತಿಳೀತು. ನನ್ನ್ ಬಗ್ಗೆ ಜಾಸ್ತಿ ಹೇಳಿ ನೀನು ಪರಿಸರನ ಖುಷಿಯಿಂದ ನೋಡ್ತಾ ಇದ್ದ ಭಾವವನ್ನು ಹಾಳ್ ಮಾಡೋದು ಬೇಡೆಂದು ನಿಂಗೆ ಏನು ಹೇಳ್ಲಿಲ್ಲ. ಚಿಂತೆ ಮಾಡ್ಬೇಡ ಮಗ, ಇದು ಹಳ್ಳಿ. ನೀನ್ ಬೇಡ ಅಂದ್ರು ನಿನ್ನ್ ರಕ್ತದಲ್ಲಿ ಇರಾದು ಇದೆ ಮಣ್ಣಿನ್ ಸಾರ. ನಿಂಗೆ ಶಾಂತಿ, ನೆಮ್ಮದಿ ಸಿಗೋದು ಅಂದ್ರೆ ಅದು ಈ ನೆಲದಾಗೆ ಮಾತ್ರ. ಸ್ವಿಟ್ಜರ್ಲ್ಯಾಂಡ್ಗು ಹೋದ್ರು ಸಿಗಾಕಿಲ್ಲ..ನೆನಪಿರ್ಲಿ' ಎಂದು ಸುಮ್ಮನಾಗುತ್ತಾರೆ. ದೊಡ್ಡೆಗೌಡ್ರ ಮಾತು ಭರತನಿಗೆ ಹಿತವೆನಿಸುತ್ತದೆ. ಆತನಿಗೆ ತನ್ನ ಮನದಲ್ಲಿನ ತುಮುಲಗಳನ್ನೆಲಾ ಒಮ್ಮೆಲೇ ಹೇಳಿ ಮನಸ್ಸನ್ನು ಹಗುರಾಗಿಸಿಕೊಳ್ಳಬೇಕೆನಿಸುತ್ತದೆ. ಅಷ್ಟರಲ್ಲೇ ದೂರದಿಂದೆಲ್ಲೋ ಭಜನೆಯ ಸದ್ದು ಶುರುವಾಗುತ್ತದೆ.

'ನಮ್ಮೂರ ದೇವಿಯ ದೇವಸ್ಥಾನದಿಂದ ಬರ್ತಿರೋ ಸದ್ದು...ಬಾ, ನಿಂಗು ಚೆನ್ನಾಗ್ ಅನ್ಸುತ್ತೆ' ಎಂದು ದೊಡ್ಡೇಗೌಡರು ಎದ್ದು ನಿಂತರು.

'ಇವರು ಮಾತಿನಲ್ಲಿ ಎಲ್ಲ ಬಲ್ಲವರಂತಿದ್ದರೂ ಆಚಾರ ವಿಚಾರಗಲ್ಲಿ ಹಳ್ಳಿಗರಂತೆ ಗುಂಪಲ್ಲಿ ಗೋವಿಂದ' ಎನ್ನುವವರು ಅಂದುಕೊಳುತ್ತಾನೆ. ಭಜನೆ, ಪದಗಳೆಂಬುದು ಅರ್ಥವೇ ಗೊತ್ತಿಲ್ಲದೆ ಸುಮ್ಮನೆ ಕಾಲಹರಣ ಮಾಡುವ ಜನರ ಗುಂಪುಗಳ ಹವ್ಯಾಸ ಎಂಬುದು ಭರತನ ಅಭಿಪ್ರಾಯವಾಗಿರುತ್ತದೆ. ಬರಲೊಲ್ಲೆ ಎಂದರೆ ಬೇಜಾರು ಮಾಡಿಕೊಂಡಿಯಾರು ಎನ್ನುತ ಇಲ್ಲದ ಮನಸ್ಸಿನಲ್ಲಿ ಅವರ ಜೊತೆಗೆ ಹೊರಡುತ್ತಾನೆ.

ಊರ ಮಧ್ಯದಲ್ಲಿದ್ದ ದೇವಾಲಯದ ಬಳಿ ಬಂದು, ಪಕ್ಕದ ಕೆರೆಯಲ್ಲಿ ಕೈಕಾಲುಗಳನ್ನು ತೊಳೆದು ಬಂದ ದೊಡ್ಡೆಗೌಡರನ್ನು ಕುರಿತು. ‘ನೀವು ದಿನ ನಿತ್ಯ ಬಳಸೋದು ಇದೆ ನೀರೇ.? ' ಎಂದು ಆಶ್ಚರ್ಯದಿಂದ ಕೇಳುತ್ತಾನೆ.
'ಇಲ್ಲ ಡಿಸಾಲಿನೇಷನ್ ಮಾಡಿರೋ ನೀರನ್ನ ಸಮುದ್ರದಿಂದ ತರಿಸ್ಕೊಂಡು ಉಪಯೋಗಿಸ್ತೀವಿ’ ಎಂದು ಮಾರ್ಮಿಕವಾಗಿ ನಗುತ್ತಾ ಗೌಡರು ದೇವಾಲಯದೊಳಗೆ ಪ್ರವೇಶಿಸುತ್ತಾರೆ. ಗೌಡರ ಬಾಯಿಂದ ವೈಜ್ಞಾನಿಕವಾದ ಇಂಗ್ಲಿಷ್ ಪದವೊಂದು ಇಷ್ಟು ಸರಾಗವಾಗಿ ಮೂಡಿದ್ದು ಭರತನಿಗೆ ಆಶ್ಚರ್ಯವಾಗುತ್ತದೆ. ಅಲ್ಲದೆ ಸಮುದ್ರದ ಉಪ್ಪು ನೀರನ್ನು ಬಳಸಲೋಗ್ಯವಾದ ನೀರನ್ನಾಗಿ ಪರಿವರ್ತಿಸುವ ಕ್ರಿಯೆಗೆ ಡಿಸಾಲಿನೇಷನ್ ಎನ್ನುತ್ತಾರೆ ಎಂಬುದು ಎಷ್ಟೋ ಹೊತ್ತಿನ ನಂತರ ನೆನಪಾಗುತ್ತದೆ. ವಾದ್ಯಗಳನ್ನು ನುಡಿಸುತ್ತಾ, ಪದಗಳನ್ನು ಹಾಡುತ್ತಾ ದೊಡ್ಡೇಗೌಡರು ತಲ್ಲೀನರಾಗುತ್ತಾರೆ. ಭರತ ನೆರೆದಿದ್ದ ಹಳ್ಳಿಯ ಜನರ ವೇಷಭೂಷಣಗಳನ್ನು ನೋಡುತ್ತಾ ಗೌಡರ ಪಕ್ಕದಲ್ಲಿ ಕೂರುತ್ತಾನೆ. ಪೇಟೆಯ ಹುಡುಗನೊಬ್ಬ ಹೀಗೆ ಟಿ-ಶರ್ಟು, ಜೀನ್ಸ್ ಪ್ಯಾಂಟ್ ಅನ್ನು ಧರಿಸಿ ದೇವಸ್ಥಾನಕ್ಕೆ ಬಂದು ಕೂತಿರುವುದ ನೋಡಿ ಕೆಲವರು ನಸು ನಗುತ್ತಿರುತ್ತಾರೆ.

ದುಡಿದುಣ್ಣುವ ರೈತನಿಗೆ ಏನಿಲ್ಲ ರೊಕ್ಕ,

ದುಡಿವ ಬಂಟರಿಗೆ ಬಾರಿ ಬಿಂಕ

ದುಡಿಸಿಕೊಳ್ಳುವ ಜನರಿಗೆ ಬಾರಿ ಸೊಕ್ಕ

ಅಂಥವರೇ ಆಳಕ ಬರತಾರ ದೇಶಾಕ

ಎಂಬ ಪದದ ಮಧ್ಯೆ ಭರತ ದೊಡ್ಡೇಗೌಡರ ಕಿವಿಯ ಬಳಿ ಹೋಗಿ 'ಏನಿದರ ಅರ್ಥ.?' ಎಂದು ಕೇಳುತ್ತಾನೆ. ಅದಕ್ಕೆ ಗೌಡರು ಇದು ಪ್ರಸ್ತುತ ಸಮಾಜದ ವಸ್ತುಸ್ಥಿತಿಯನ್ನು ಬಿಂಬಿಸುವ ಪದವೆಂದೂ, ಇದು ಹಳ್ಳಿಯಲ್ಲದೆ, ದಿಲ್ಲಿಯವರೆಗೂ ಅನ್ವಯಿಸುತ್ತದೆ ಎಂದಾಗ ಭರತನಿಗೆ ತಳಮಳವಾಯಿತು. ಹಳ್ಳಿಗರು ಇಷ್ಟೆಲ್ಲಾ ಯೋಚಿಸಿ ಪದಗಳನ್ನು ರೂಪಿಸುತ್ತಾರೆಯೇ? ಎಂದುಕೊಳ್ಳುತ್ತಾನೆ. ನಂತರ ಪ್ರತಿ ಪದಗಳ ಮದ್ಯೆ ದೊಡ್ಡೇಗೌಡರ ಬಳಿ ಅದರ ಅರ್ಥವನ್ನು ಕೇಳಿ, ಅವುಗಳ ಒಳಾರ್ಥವನ್ನು ಅರಿಯತೊಡಗುತ್ತಾನೆ. ತಾನೂ ಗುನುಗಬೇಕೆನಿಸುತ್ತದೆ. ಗುನುಗತೊಡಗುತ್ತಾನೆ. ಕೆಲಕ್ಷಣದಲ್ಲೇ ಕೈಯಿಂದ ಕೈಯಿಗೆ ವರ್ಗಾಹಿಸಲ್ಪಡುತ್ತಿದ್ದ ತಾಳ ತನ್ನ ಬಳಿ ಬಂದಾಗ ನಿಧಾನವಾಗಿ ಒಂದನೊಂದು ಕುಕ್ಕುತ್ತಾ ಪದಗಳನ್ನು ಹೇಳತೊಡಗುತ್ತಾನೆ. ನೋಡನೋಡುತ್ತಲೇ ನೆರೆದಿದ್ದ ಎಲ್ಲರೊಟ್ಟಿಗೆ ಹಾಡಲಾರಂಭಿಸುತ್ತಾನೆ. ತಾನು ಬಲ್ಲ ಸಂಗೀತ ಜ್ಞಾನದಿಂದ ಪದಗಳು ರಾಗಗಳಾಗಿ ಮೂಡುತ್ತವೆ. ಪದಗಳ ಅರ್ಥಗಳು ತಿಳಿದಾಗ ಭಾವ ಉಕ್ಕಿ ಬರುತ್ತದೆ. ಎಲ್ಲರೂ ಮಂತ್ರಮುಗ್ದರಾಗಿ ಈತನನ್ನೇ ನೋಡುತ್ತಾರೆ. ಸ್ವರವಿಸ್ತಾರವನ್ನು ಮಾಡಿ ಕೊನೆಗೆ ನಿಧಾನಗೊಂಡಾಗ ಪ್ರತಿಯೊಬ್ಬರೂ ಮೌನವಾಗಿರುತ್ತಾರೆ. ಮಕ್ಕಳು ತೆರೆದ ಬಾಯಿಯನ್ನು ಮುಚ್ಚದೇ ಭರತನನ್ನು ನೋಡತೊಡಗುತ್ತಾರೆ. ಭರತನ ಕೆನ್ನೆಗಳ ಮೇಲೆ ಕಣ್ಣೇರು ಹರಿದು ಒಣಗಿರುತ್ತದೆ.

'ಅಪ್ಪ. ಯಸ್ ವೈನಾಗಿ ಹಾಡ್ತಿಯ ಕಂದ..ದೇವಿ ನಿನ್ನ ಚೆನ್ನಗಿಡ್ತಾಳೆ. ದಿನಾ ಬಂದು ಹಿಂಗೆ ಆಡ್ತಿರು.. ನಿನ್ ಕಷ್ಟ ಎಲ್ಲ ದೂರಾಗುತ್ತೆ' ಎಂದು ಹಳ್ಳಿಯ ಹಿರಿಯರೊಬ್ಬರು ಭರತನ ಬಳಿ ಬಂದು ಹೇಳುತ್ತಾರೆ. ಊರ ಜನರ ಅಕ್ಕರೆಯ ಮಾತುಗಳು ಭರತನಲ್ಲಿ ಒಂದು ಹೊಸ ಕಳೆಯನ್ನು ಮೂಡಿಸುತ್ತವೆ.

'ಮಗ ನಿನ್ನ್ ಒಳ್ಗೆ ಏನೋ ಒಂದ್ ಚಿಂತೆ ಇದೆ. ನೀನ್ ಅದ್ ಯಾರೊಟ್ಟಿಗೂ ಹೇಳ್ಕೊಂಡಿಲ್ಲ. ನಾನ್ ಅದ್ ಏನು ಅಂತ ಕೇಳದಿಲ್ಲ, ಆದ್ರೆ ಯಾರೊಟ್ಟಿಗಾದ್ರೂ ಅದನ್ನ ಹೇಳ್ಕ.. ಮನ್ಸು ಹಗುರ ಮಾಡ್ಕ' ಎಂದು ಮನೆಗೆ ಹಿಂದಿರುಗುವಾಗ ದೊಡ್ಡೇಗೌಡರು ಹೇಳಿದರು.
ಅಲ್ಲದೆ 'ಇಂದು ನಮ್ಮನೇಲಿ ಊಟ’ ಎಂದು ದೊಡ್ಡೇಗೌಡರು ಭರತ ಹಾಗು ಪಟೇಲರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಾರೆ.

'ಗೌರಿ. ಭರತಂಗೆ ಸಂಗೀತ ಚೆನ್ನಾಗಿ ಬರುತ್ತೆ ಕಣೆ.. ದೇವಸ್ಥಾನದಲ್ಲಿ ಹೆಂಗ್ ಹಾಡ್ದಾ ಅಂತೀಯಾ' ಎಂದು ದೊಡ್ಡೇಗೌಡರು ಭರತನನ್ನು ಹೊಗಳಿದರು. 'ಹೌದೇ' ಎಂದು ಭರತನ ಅಜ್ಜ ಆಶ್ಚರ್ಯದಿಂದ ಕೇಳಿದರು. ಗೌರಿ ಮುಗುಳ್ನಕ್ಕಳು.

ದೊಡ್ಡೇಗೌಡರ ಅಡುಗೆ ಮನೆ ಹೊಕ್ಕ ಭರತ ತನಗೆ ತಿಳಿದಿದ್ದ ಸೊಪ್ಪಿನ ಸಾರನ್ನು ಮಾಡುತ್ತಾನೆ. ಅದೆಷ್ಟೋ ದಿನಗಳ ನಂತರ ಅಡುಗೆಯನ್ನು ಮಾಡುವಾಗ ಎಲ್ಲಿಲ್ಲದ ಸಂತೋಷ ಭರತನಿಗಾಗುತ್ತದೆ. ಸಾರಿನ ಘಮ ಮನೆಯಲೆಲ್ಲ ಪಸರಿಸುತ್ತದೆ. ಅರ್ಧ ತಾಸಿನೊಳಗೆ ಸಾರನು ಮಾಡಿ ಮುಗಿಸಿದ ಭರತನ ವೇಗಕ್ಕೆ ಗೌರಿ ಬೆರಗಾಗುತ್ತಾಳೆ. ಭರತನ ಕೈರುಚಿಯನ್ನು ಎಲ್ಲರೂ ಮೆಚ್ಚುತ್ತಾರೆ.

'ಗೌಡ್ರೆ ದಿನಾ ನಂಗೆ ಇದೆ ಊಟ ಸಿಕ್ಕಿದ್ರೆ ನಾನ್ ಇಲ್ಲೇ ಇದ್ಬಿಡ್ತಿನಿ ... ನಿಮ್ಗೆ ಏನೂ ತೊಂದ್ರೆ ಇಲ್ಲ ತಾನೆ' ಎಂದು ಭರತ ನಗುತ್ತಾ ಹೇಳಿದಾಗ,

'ಹೇಗೂ ಅಡುಗೆ ಮಾಡೋಕೆ, ಪಾತ್ರೆ ಉಜ್ಜೋಕೇ ಕೆಲ್ಸದವ್ರು ಬೇಕಾಗಿತ್ತು.ಒಳ್ಳೇದೇ ಆಯಿತು' ಎಂದು ಅದಕ್ಕೆ ಮರುತ್ತರವಾಗಿ ಗೌರಿ ಹೇಳುತ್ತಾಳೆ.

'ನಮ್ಮ್ ಪಟೇಲ್ರು ಮನೆ, ನಮ್ಮ್ ಮನೆ ಬೇರೆ ಬೇರೆ ಏನಲ್ಲ ಮಗ. ನಮ್ಮನೆ ಅನ್ನ, ಅವ್ರು ಮನೆ ಸಾರು.. ನಮ್ಮ್ ಗೌರಿ ಇಬ್ರಿಗೂ ಮೊಮ್ಮಗಳು.. ಅಲ್ದೆ ಈ ಹಳ್ಳೀಲಿ ನಾನ್ ನಿಮ್ಮನೆಗೆ ಬರ್ತೀನಿ, ಇರಿ, ಎಲ್ಲೂ ಹೋಗ್ಬೇಡಿ ಅಂತೆಲ್ಲ ನಿಮ್ಮ್ ಸಿಟಿ ರೀತಿ ಅಲ್ಲ ಮಗ... ಇಡೀ ಹಳ್ಳೀನೇ ಒಂದ್ ಮನೆ.. ನಂಗ್ ನೀನಾದ್ರೆ...ನಿಂಗೆ ನಾನು ಅನ್ನೋತರ. ಇಲ್ಲಿ ಯಾರ್ ಮೆನೆಗೂ ಯಾರ್ ಬೇಕಾದ್ರೂ ಹೋಗ್ಬಹುದು.. ಯಾರ್ ಮನೇಲೂ ಬೇಕಾದ್ರು ಮಲಗಬಹುದು' ಎನ್ನುತಾರೆ.
ಕೇವಲ ಪುಸ್ತಕಗಳಲ್ಲಿ ಈ ವಿಷಯಗಳನ್ನೆಲ್ಲ ಓದಿದ್ದ ಅನುಭವವಿದ್ದ ಭರತ ಇಂದು ಹಳ್ಳಿಗರೊಬ್ಬರಿಂದ ಈ ಮಾತನ್ನು ಸ್ವತಃ ಕೇಳುವಾಗ ಖುಷಿಯಾಗುತ್ತದೆ. ಗೌರಿ ಬೇಡವೆಂದರೂ ಭರತನಿಗೆ ಹೆಚ್ಚು ಹೆಚ್ಚು ಅನ್ನವನ್ನು ಹಾಗು ಅದಕ್ಕೆ ತುಪ್ಪವನ್ನು ಹಾಕತೊಡಗುತ್ತಾಳೆ

ಊಟವಾದ ಮೇಲೆ ಎಲ್ಲರು ದೊಡ್ಡೇಗೌಡರ ಚಾವಡಿಯ ಮೇಲೆ ಬಂದು ಕೂತರು. ಗೌರಿ ಮನೆಯೊಳಗಿಂದ ಚೌಕಾಬರೆಯ ಮಣೆಯನ್ನು ತಂದಳು. ಅದೆಷ್ಟೋ ವರ್ಷಗಳ ನಂತರ ಚೌಕಬರೆ ಆಡಲು ಭರತನಿಗೆ ಎಲ್ಲಿಲ್ಲದ ಸಂತೋಷ. 'ಅಪ್ಪಾ. ಸೋತ್ರೆ ಸೋತೆ ಅಂತ ಒಪ್ಕೋ.. ನಂಗೆ ನೀನ್ ಗೆಲ್ಲೊ ತನ್ಕ ಆಡೋಕ್ ಆಗಲ್ಲ...’ ಎಂದು ಅಜ್ಜ ಆಕಳಿಸುತ್ತಾ ಹೇಳಿದಾಗ ಎಲ್ಲರೂ ನಕ್ಕರು. ಗೌರಿಯ ನೀಳ ಬೆರಳುಗಳ ಸುಂದರ ಕೈಗಳು ಚೌಕಾಬರೆಯ ಕಾಯಿಗಳನ್ನು ಆಯ್ದು ಎಸೆಯುವುದನ್ನೇ ಭರತನ ಕಣ್ಣುಗಳು ನೋಡುತ್ತಿದ್ದವು. ಆಟದ ಕೊನೆಗೆ ತನ್ನ ಅಜ್ಜ ಗೆದ್ದಾಗ ಭರತ 'ಅಜ್ಜ.. ಇನ್ನೊಂದೇ ಒಂದು ಆಟ.. ಪ್ಲೀಸ್..ಪ್ಲೀಸ್' ಎಂದು ಮಕ್ಕಳಂತೆ ರೋಧಿಸುತ್ತಾನೆ.ಅಲ್ಲಿಯವರೆಗೂ ಒಬ್ಬ ಜೆಂಟಲ್ ಮ್ಯಾನ್ ಥರ ವರ್ತಿಸುತ್ತಿದ್ದೂ, ಈಗ ಅಜ್ಜನ ತೊಡೆಯ ಮೇಲೆ ಮಗುವಿನಂತೆ ಹಠವಿಡಿಯುತ್ತಿದ್ದ ಭರತನನ್ನು ನೋಡಿ ಗೌರಿ ನಗುತ್ತಾಳೆ. ಭರತನ ರೋಧನೆಗೆ ಮಣಿದು ಎಲ್ಲರು ಮತ್ತೊಮ್ಮೆ ಆಡಲು ಶುರು ಮಾಡುತ್ತಾರೆ. ಆದರೆ ಈ ಬಾರಿ ಗೆದ್ದದ್ದು ಮಾತ್ರ ದೊಡ್ಡೇಗೌಡರು.
ಹಿರಿಯರಿಬ್ಬರು ಆಟವನ್ನು ಗೆದ್ದು ಮಲಗಲು ಹೋದಮೇಲೆ ಗೌರಿ ಹಾಗು ಭರತ ಮನೆಯ ಜಗುಲಿಯ ಮೇಲೆ ತಿಂಗಳ ಬೆಳಕಿನ ತಂಪಾದ ಆಗಸವನ್ನು ನೋಡುತ್ತಾ ಕೂರುತ್ತಾರೆ.

'ಅದೆಷ್ಟ್ ವರ್ಷ ಆದ್ಮೇಲೆ ನನ್ಗೆ ಇಷ್ಟ್ ಖುಷಿ ಆಗಿದೆ ಗೊತ್ತಾ...' ಎಂದು ಭರತ ಗೌರಿಯನ್ನೊಮ್ಮೆ ನೋಡುತ್ತಾನೆ.

'ನಿಮ್ಮ್ ಅಜ್ಜನ ತೊಡೆ ಮೇಲೆ ಮಗುತರ ಹಠ ಪಡ್ಬೇಕಾದ್ರೇನೇ ಅನ್ಕೊಂಡೆ. ಅಲ್ಲ ಭರತ್, ಅಜ್ಜನ್ನ ಇಷ್ಟೊಂದು ಇಷ್ಟ ಪಡೋನು ಅದ್ ಹೇಗೆ ಇಷ್ಟ್ ವರ್ಷ ಅವ್ರಿಂದ ದೂರ ಇದ್ದೆ? ಒಮ್ಮೆನೂ ಅವ್ರನ್ನ ನೋಡ್ಬೇಕು ಅನ್ನಿಸ್ಲ್ಲೆ ಇಲ್ವಾ?! ಅಜ್ಜಿ ಹೋದ್ ಮೇಲಂತೂ ತುಂಬಾನೇ ಮಂಕಾಗಿದ್ರು ಅವ್ರು.. ನಿಮ್ಮ್ ತಂದೆಯವ್ರ ಹೆಸ್ರು ಹೇಳ್ತಾ ರಾತ್ರಿ ಎಲ್ಲ ಕನವರಿಸ್ತಿದ್ರು.. ನಿಮ್ಮ್ ತಂದೆಗೆ ತುಂಬಾ ಸರಿ ನಮ್ಮ್ ತಾತ ಫೋನ್ ಮಾಡೂ ಹೇಳಿದ್ರು.. ಯಾಕೆ ನಿಂಗೆ ಹೇಳ್ಲಿಲ್ವ ಅವ್ರು' ಎಂದಾಗ ಭರತನಿಗೆ ದಿಗ್ಭ್ರಮೆಯಾಯಿತು. ಪ್ರತಿ ಬಾರಿಯೂ ಅಜ್ಜ ಚೆನ್ನಾಗಿದ್ದರೆ ಅನ್ನೊದನ್ನ ಅಮ್ಮನ ಮಾತಲ್ಲಿ ಮಾತ್ರ ಕೇಳಿದ್ದ ಭರತ, ಅಜ್ಜನ ಬಗ್ಗೆ ಅಷ್ಟೇನೂ ಯೋಚಿಸಿರಲಿಲ್ಲ. ಆದರೆ ಈಗ ಗೌರಿಯ ಮಾತುಗಳು ಭರತನಿಗೆ ತೀವ್ರ ಕಳವಳವನ್ನುಂಟುಮಾಡುತ್ತವೆ. ನಾವೆಲ್ಲ ಇದ್ದರೂ ಅಜ್ಜನಿಗೆ ಯಾರೂ ಇಲ್ಲವಾದೆವ.? ಎಂದನಿಸುತ್ತದೆ. ಅಪ್ಪ-ಅಮ್ಮರ ಮೇಲೆ ಸಿಟ್ಟೂ ಬರುತ್ತದೆ.

'ನಮ್ಮಪ್ಪಂಗೆ ಅಜ್ಜ ಇಲ್ಲಿರೋ ಆಸ್ತಿನ ಎಲ್ಲಾ ಮಾರಿ, ಬಂದ ದುಡ್ಡಿಂದ ಒಂದು ದೊಡ್ಡ ಫ್ಯಾಕ್ಟರಿ ಕಟ್ಟೋ ಆಸೆ. ಆದ್ರೆ ಅಜ್ಜಂಗೆ ಈ ಹಳ್ಳಿ ಬಿಟ್ಟ್ ಬರೋ ಮನ್ಸಿಲ್ಲ.. ಒಂದ್ ಸಾರಿ ಅಪ್ಪ ಫೋನ್ ಮಾಡಿ ನಿನ್ನ್ ದುಡ್ಡು ಬೇಡ, ಆಸ್ತಿನೂ ಬೇಡ, ಎಲ್ಲಾ ನೀನೆ ಹಿಡ್ಕೋ ಎಂದು ಅರಚಿ ಫೋನ್ ಇಟ್ರು.. ಅವತ್ತಿನಿಂದ ಅಜ್ಜನ ಬಗ್ಗೆ ಅಷ್ಟಕ್ಕಷ್ಟೇ ಅವ್ರಿಗೆ.. ನಂಗೂ ಇಲ್ಲಿಗೆ ಬರೋಕ್ಕೆ ಬಿಡ್ಲಿಲ್ಲ' ಎನ್ನುತ್ತಾನೆ.

'ನಿಮ್ಮ್ ಅಜ್ಜ ಇಡೀ ಊರಿಗೆ ಮಾರ್ಗದರ್ಶಕರು ಭರತ್. ಅವ್ರು ಸಿಟಿಗ್ ಹೋಗ್ತೀನಿ ಅಂದ್ರು ಈ ಊರಿನವ್ರು ಅವ್ರುನ್ನ ಹೋಗಕ್ಕೆ ಬಿಡಲ್ಲ.. ಸ್ಕೂಲು, ಆಸ್ಪತ್ರೆ ಎಲ್ಲ ಅವ್ರೆ ಕಟ್ಸಿರೋದು.. ಆದ್ರೆ ಅಪ್ಪನಂತೆ ಮಗ ಆಗ್ಲಿಲ್ಲ ಅಂತ ಎಲ್ರು ಇವಾಗ್ಲೂ ಅನ್ಕೊಂಡು ಬೇಜಾರ್ ಮಾಡ್ಕೊಂತ್ತಾರೆ' ಎಂದು ಗೌರಿ ಹೇಳಿದಾಗ ಭರತನಿಗೆ ಅಜ್ಜನ ಬಗ್ಗೆ ಹೆಮ್ಮೆ ಎನಿಸುತ್ತದೆ.

'ಅದ್ಸರಿ ಇಷ್ಟ್ ದಿನ ಆದ್ಮೇಲೆ ನೀನ್ ಹೇಗ್ ಬಂದೆ?' ಎಂದ ಗೌರಿಗೆ, ತಾನು ಮಾಡುತ್ತಿರುವ ಅರ್ಥಹೀನ ಕೆಲಸ, ಅದರಿಂದ ಉಂಟಾಗಿರುವ ಖಿನ್ನತೆ, ಮನೆಯಲ್ಲಿನ ಅಪ್ಪ ಅಮ್ಮಂದಿರ ದೈನಂದಿನ ಅರಚಾಟ, ಸ್ವಾರ್ಥತೆ, ತಾನು ಅಂತಹ ಸಮಾಜದಲ್ಲಿ ಒಬ್ಬನಾಗಿ ಬಿಡುವೆನೆಂಬ ಭಯ ಎನ್ನುತ ಎಲ್ಲವನ್ನೂ ಮನಸ್ಸು ಬಿಚ್ಚಿ ಹೇಳಿಕೊಳ್ಳುತ್ತಾನೆ.. ತುಸು ಸಮಯದ ನಂತರ 'ಅವಳೂ ಸಹ ನನ್ನ ಬಿಟ್ಟು ಹೋದಳು' ಎನ್ನುತ್ತಾನೆ. ಭರತನ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಿದ್ದ ಗೌರಿ ‘ಅವಳು’ ಯಾರೆಂದೂ ಸಹ ಕೇಳುವುದಿಲ್ಲ. ಭರತ ಮುಂದುವರೆಸಿ 'ಪ್ರೀತಿಯೂ ಸಹ ಇಂದು ಹಣ ಹಾಗು ಚರ್ಮದ ಬಣ್ಣಗಳ ಮೇಲೆ ಡಿಪೆಂಡ್ ಆಗಿರುತ್ತೆ ಗೌರಿ' ಎಂದಾಗ ಅವಳು ನಗುತ್ತಾಳೆ. ನೋಡಲು ಸಾದಾರಣವಾಗಿದ್ದರೂ, ಬಣ್ಣ ತುಸು ಕಪ್ಪಿದ್ದರೂ ಗೌರಿ ಭರತನಿಗೆ ತೀರಾ ಸನಿಹದವಳೆನಿಸುತ್ತಾಳೆ. ‘ಅವಳು’ ಅದೆಷ್ಟೇ ತೆಳ್ಳಗೆ ಬೆಳ್ಳಗಿದ್ದರೂ ಈ ಬಗೆಯ ಭಾವ ಅವಳಲ್ಲಿ ಎಂದಿಗೂ ಮೂಡಿರಲಿಲ್ಲ ಎಂದುಕೊಳ್ಳುತ್ತಾನೆ.

'ನಿನ್ನ್ ಪ್ರಾಬ್ಲಮ್ ಏನಂತ ನಂಗೆ ಗೊತ್ತಾಯಿತು ಬಿಡು. ಒಂದ್ ಕೆಲ್ಸ ಮಾಡು.. ನಾಳೆ ಪೂರ್ತಿ ದಿನ ನನ್ನೊಟ್ಟಿಗೆ ಇರು. ನಿಂಗೆ ನಿಜವಾದ ಹಳ್ಳಿನ ತೋರಿಸ್ತಿನಿ.' ಎಂದು ಮೇಲೇಳುತ್ತಾಳೆ. ಭರತನಿಗೆ ಇನ್ನೂ ತುಸು ಹೊತ್ತು ಮಾತಾಡಬೇಕೆನಿಸಿದರೂ ಅವಳನ್ನು ಒತ್ತಾಯ ಮಾಡುವುದು ಸರಿಯಲ್ಲವೆಂದೆನಿಸುತ್ತದೆ.

ಮನೆಗೆ ಬಂದ ಭರತ ಮಲಗಿದ್ದ ಅಜ್ಜನನ್ನು ಒಮ್ಮೆ ನೋಡುತ್ತಾನೆ. ತಲೆಗೆ ಕೈಯನ್ನು ಆಧಾರವಾಗಿಸಿ ಮಗ್ಗುಲು ಮಾಡಿ ಮಲಗಿಗೊಂಡಿದ್ದ ಅಜ್ಜನನ್ನು ಕಂಡು ದುಃಖ ಉಕ್ಕಿ ಬರುತ್ತದೆ. ಅವರ ಬಳಿಗೆ ಹೋಗಿ, ಪಕ್ಕದಲ್ಲಿದ್ದ ಕಂಬಳಿಯನ್ನು ಬಿಡಿಸಿ ಹೊದಿಸಿ, ತನ್ನ ಕೋಣೆಗೆ ಹೋಗಿ ಮಲಗುತ್ತಾನೆ.

ಮುಂಜಾನೆ ಆರರ ಸುಮಾರಿಗೆ ಗೌರಿ ಭರತನನ್ನು ಏಳಿಸುತ್ತಾಳೆ. ಎದ್ದು ರೆಡಿಯಾಗಿ ಬಂದ ಭರತನನ್ನು ಊರ ಗುಡ್ಡದ ಮೇಲೆ ಕರೆದೊಯ್ಯುತ್ತಾಳೆ. ಮುಂಜಾವಿನ ಸೂರ್ಯನ ಕಿರಣಗಳ ಶಾಖಕ್ಕೆ ಊರಿಗೆ ಆವರಿಸಿದ ದಟ್ಟ ಮಂಜಿನ ಕವಚ ನಿಧಾನವಾಗಿ ಮರೆಯಾಗುತ್ತಿರುತ್ತದೆ. ಚಿಲಿ-ಪಿಲಿ ಹಕ್ಕಿಗಳ ಸದ್ದು, ಹಸಿರು ಪರ್ವತಗಳು, ಮುಂಜಾವಿನ ನಿರ್ಮಲ ಆಕಾಶ ಭರತನಿಗೆ ಮಾತೇ ಹೊರಡದಂತೆ ಮಾಡುತ್ತವೆ. ಗೌರಿ ಭರತನನ್ನು ಬೆಟ್ಟದ ಮೇಲಿನ ಆಲದ ಮರದ ಬುಡದಲ್ಲಿ ಪದ್ಮಾಸನದಲ್ಲಿ ಕೂರಲು ಹೇಳುತ್ತಾಳೆ. ತಾನೂ ಕೂರುತ್ತಾಳೆ. ಇದು ಊರಿನ ಎತ್ತರವಾದ ಶಾಂತವಾದ ಜಾಗವೆಂದೂ, ಕೆಲಸ, ಹಣ, ಕಾರು, ಮೊಬೈಲು, ಸಂಬಂಧ ಎಲ್ಲವನ್ನು ಅರೆಕ್ಷಣ ಮರೆತು ಕಣ್ಣು ಮುಚ್ಚಿ ಪ್ರಕೃತಿಯ ಸೊಬಗನ್ನು ಆಸ್ವಾದಿಸಬೇಕೆಂದೂ ಹಾಗು ದೀರ್ಘವಾಗಿ ಉಸಿರನ್ನು ಒಳಗೆಳೆದು ಹೊರಬಿಡಬೇಕೆಂದು ಹೇಳುತ್ತಾಳೆ. ಅಂತೆಯೇ ಭರತ ನಿಧಾನವಾಗಿ ಕಣ್ಣನು ಮುಚ್ಚುತ್ತಾನೆ. ತಲೆಯನ್ನು ಕೊರೆಯುತ್ತಿದ್ದ ಒಂದೊಂದೇ ವಿಷಯವನ್ನು ಮರೆಯುತ್ತ ಹೋಗುತ್ತಾನೆ. ಕೆಲ ಸಮಯದ ನಂತರ ಗಾಳಿಯ ಸದ್ದು ಕೇಳತೊಡಗುತ್ತದೆ. ನಿಧಾನವಾಗಿ ಓಂಕಾರವನ್ನು ಗುನುಗ ತೊಡಗುತ್ತಾನೆ. ಮನಸ್ಸು ಬೇರೆಲ್ಲೂ ಸುಳಿಯದೆ ನಿಶ್ಚಲವಾಗುತ್ತದೆ. ಹೀಗೆ ಸುಮಾರು ಅರ್ಧ ತಾಸು ಧ್ಯಾನದಲ್ಲಿ ತಲ್ಲೀನನಾಗಿ ನಿಧಾನವಾಗಿ ಕಣ್ಣು ತೆರೆದಾಗ ಭರತನಿಗೆ ಒಂದು ಹೊಸ ಅನುಭವವಾಗುತ್ತದೆ. ಎಲ್ಲಿಲ್ಲದ ಒಂದು ಹರುಷ ಮನದಲ್ಲಿ ಮೂಡುತ್ತದೆ. ಗೌರಿ ಅಷ್ಟರಲ್ಲಾಗಲೇ ಎದ್ದು ಕೂತು ಭರತನನ್ನೇ ನೋಡುತ್ತಿರುತ್ತಾಳೆ.
'ಹೌ ವಾಸ್ ಇಟ್..?' ಎಂದು ಗೌರಿ ಕೇಳಿದಾಗ,
'ಅಧ್ಭುತ..!! ಇಲ್ಲಿಂದ ಹೊರಡಲು ಮನಸ್ಸೇ ಬರುತ್ತಿಲ್ಲ ಗೌರಿ' ಎನ್ನುತಾನೆ.

ನಂತರ ಭರತನನ್ನುಊರ ದೇವಸ್ಥಾನಕ್ಕೆ ಕರೆದೊಯ್ದು, ಆ ದೇವಾಲಯದ ಮಹಿಮೆ, ಅದರ ಕೆತ್ತನೆ, ಆ ಕೆತ್ತನೆಯ ಹಿಂದಿನ ಕುಶಲತೆ, ಎಲ್ಲವನ್ನೂ ತಿಳಿಸುತ್ತಾಳೆ. ದೇವಸ್ಥಾನದ ದೇವರ ಮೂರ್ತಿಗೆ ನಮಸ್ಕರಿಸಿ, ಹಣ್ಣು ಕಾಯಿಯನ್ನು ಮಾಡಿಸಿ ಪಕ್ಕದ ನದಿಯ ಬಳಿ ಬಂದು ಕೂರುತ್ತಾರೆ.
'ಇಂದೆಲ್ಲ ಮನುಷ್ಯ ಮಷೀನ್ ಗಳ ಸಹಾಯದಿಂದ ಕೆತ್ತಿ ಮಾಡೋ ದೇವಸ್ಥಾನಕ್ಕೂ, ಕೈಯಲ್ಲೇ ಕೆತ್ತಿ ಮಾಡಿರೋ ದೇವಸ್ಥಾನಕ್ಕೂ ಎಷ್ಟ್ ವ್ಯತ್ಯಾಸ ಇದೆ ನೋಡು ಭರತ್. ನಮ್ಮ್ ಹಿರೀಕರನ್ನ ನಾವು ಅಜ್ಞಾನಿಗಳೆಂದರೆ ಅದು ನಮ್ಮ ಮೂರ್ಖತನ. ಇಂದಿನ ಅದೆಷ್ಟೋ ಸೈಂಟಿಫಿಕ್ ರಿಸರ್ಚ್ಗಳನ್ನ ನಮ್ಮ ಹಿರಿಕರು ಅದೆಷ್ಟೋ ವರ್ಷಗಳ ಹಿಂದೇನೆ ಕಂಡು ಹಿಡಿದಿದ್ರು...' ಎಂದು ಸುಮ್ಮನಾಗುತ್ತಾಳೆ. ನಂತರ ಮುಂದುವರೆಸಿ '..ಜಗತ್..' ಎಂಬ ಪದದ ಅರ್ಥ ನೋಡು. ಈ ಪದವನ್ನು ಅದೆಷ್ಟೋ ಸಾವಿರ ವರ್ಷಗಳ ಹಿಂದೆ ನಮ್ಮ ಪುರಾಣಗಳಲ್ಲಿ ಸಂಸ್ಕೃತ ಭಾಷೆಯಲ್ಲಿ ಬಳಸಿದ್ದಾರೆ. ಜಗತ್ತ್ ಅಂದರೆ 'ಜಿಸ್ಕ ಗತಿ ಹೊ'.. ಅಂದ್ರೆ ಚಲಿಸುತ್ತಿರುವ ವಸ್ತು. ಅಲ್ಲದೆ ಗರುಡಪುರಾಣದಲ್ಲಿ ವಿಷ್ಣುವಿನ ಅವತಾರವನ್ನು ಅದರ ಮುಖಪುಟದ ಮೇಲೆ ಚಿತ್ರಿಸಿದ್ದಾರೆ. ಅದರಲ್ಲಿ ವಿಷ್ಣು ತನ್ನ ವರಹ ಅವತಾರದಲ್ಲಿ ಕೋರೆಗಳಿಂದ ಗೋಲಾಕಾರದ ಭೂಮಿಯನ್ನು ಮೇಲೆತ್ತಿ ನಿಂತಿರುವ ಚಿತ್ರವಿದೆ' ಎನ್ನುತ್ತಾಳೆ.
'ನೌ ಥಿಂಕ್.. ಅದೆಷ್ಟೋ ಸಾವಿರ ವರ್ಷಗಳ ಹಿಂದೆಯೇ ನಮ್ಮ ಪೂರ್ವಿಕರಿಗೆ ಭೂಮಿ ಗೋಲವಾಗಿದೆ ಎಂದೂ ಅಲ್ಲದೆ ಅದು ಚಲಿಸುತ್ತಿದೆ ಎಂದು ತಿಳಿದ್ದಿತ್ತು ಅಂದ್ರೆ ಅವ್ರು ವೈಜ್ಞಾನಿಕವಾಗಿ ಅದೆಷ್ಟು ಮುಂದುವರ್ದಿದ್ರು ಅನ್ಸಲ್ವಾ? ಆಧುನಿಕ ವಿಜ್ಞಾನ ಇತ್ತೀಚೆಗಷ್ಟೇ ಅದನ್ನು ಸಾಬೀತು ಪಡಿಸಿದೆ ಅಷ್ಟೇ' ಎನ್ನುತ್ತಾಳೆ. ಭರತನಿಗೂ ಹೌದೆನಿಸುತ್ತದೆ. ಗೌರಿಯ ಅವಲೋಕನಕ್ಕೆ ಖುಷಿಪಡುತ್ತಾನೆ.

ಅಷ್ಟರಲ್ಲಾಗಲೇ ಅಜ್ಜ ಎದ್ದು, ರೊಟ್ಟಿಯನ್ನು ಮಾಡಿ ಕಾಯುತ್ತಿರುತ್ತಾರೆ.

'ಅರ್ರೆ ನೀವ್ಯಾಕೆ ಮಾಡೋಕೆ ಹೋದ್ರಿ.. ನಾನ್ ಬಂದ್ ಮಾಡ್ತಿದ್ದನಲ್ಲ..' ಎಂದು ಗೌರಿ ಹೇಳಿದಾಗ

'ಭರತ ಸಣ್ಣವನಿದ್ದಾಗ ಅವರಜ್ಜಿ ಮಾಡೋ ರೂಟ್ಟಿ ಚಟ್ನಿ ಅಂದ್ರೆ ಅವ್ನಿಗೆ ಬಾಳ ಇಸ್ಟ' ಎಂದು ರೊಟ್ಟಿನ ಮುರಿದು ಭರತನ ಬಾಯಿಗೆ ಇಡುತ್ತಾರೆ.

ತಿಂಡಿ ಮುಗಿಸಿದ ನಂತರ ಗೌರಿ ಭರತನನ್ನು ಗದ್ದೆಗೆ ಕರೆದುಕೊಂಡು ಹೋಗುತ್ತಾಳೆ. ಕೆಲಸ ಮಾಡುತ್ತಿದ್ದ ಮಂಜನನ್ನು ನೋಡಿ 'ಮಂಜ ಇವನ್ಯಾರು ಗುರ್ತ್ ಸಿಕ್ತ?' ಎಂದು ಕೇಳಿದಾಗ ಮಂಜ, ಭರತ ನೆನ್ನೆ ಹಾಡುತ್ತಾ ಗದ್ದೆಯ ಬದುವಿನ ಮೇಲೆ ಹೋದದ್ದು, ಇವನು ಅವನನ್ನು ಕರೆದಿದ್ದೂ, ಅವನಿಗದು ಕೇಳದೆ ಹೋದದ್ದು, ಎಲ್ಲವನ್ನೂ ಹೇಳುತ್ತಾನೆ.
'ಭರತ್.. ನೀನು ಸಣ್ಣವನಿದ್ದಾಗ ನನ್ನೊಟ್ಟಿಗೆ ಕುಂಟೆಪಿಲ್ಲೆ ಆಡುವಾಗ ನಿನ್ನ ಹುಡ್ಗಿ ಅಂತ ರೇಗುಸ್ತಿದ್ದಿದ್ದು, ಮರಕೋತಿ ಆಡ್ವಾಗ ನಿನ್ನನ್ನ ಬೇಕು ಅಂತಾನೆ ಮರದ್ ಮೇಲೆ ಬಿಟ್ಟು ಕೆಳಗಿಳಿತಾ ಇದ್ನಲ್ಲಾ ಮಂಜ, ಇವ್ನೆ ಅವ್ನು' ಎನ್ನುತ್ತಾಳೆ. ಭರತ ನಗುತ್ತಾ ಅವನ ಬಳಿ ಹೋಗಿ, ಯೋಗಕ್ಷೇಮವನ್ನು ವಿಚಾರಿಸುತ್ತಾನೆ. ಹೆಗಲ ಮೇಲೆ ಭರತನ ಕೈ ಇರುವುದು ಕೊಂಚ ಮುಜುಗರವೆನಿಸಿದರೂ ಮಂಜ ಸುಮ್ಮನಾಗುತ್ತಾನೆ.

'ಭರತ್ ನೀನು ಗದ್ದೆ ಕೆಲ್ಸ ಮೊದ್ಲು ಎಂದೂ ಮಾಡಿಲ್ಲ ಅಲ್ಲ? ಮಂಜನೊಟ್ಟಿಗೆ ಕೆಸ್ರು ಗದ್ದೇಲಿ ಗುದ್ದಲಿ ತಗೊಂಡು ಕೆಲ್ಸ ಮಾಡಿ ನೋಡು' ಎನ್ನುತ್ತಾಳೆ. ದಿನವೆಲ್ಲ ಅವಳಿಗಾಗೇ ಮುಡಿಪಾಗಿಟ್ಟಿರುವ ಭರತ ಎದುರು ಹೇಳದೆ ಗದ್ದೆಗೆ ಇಳಿದೇ ಬಿಡುತ್ತಾನೆ. ಕೆಸರಿನ ತಂಪಿಗೆ ಕೊಂಚ ನಡುಗಿದ ಭರತನ ಕಾಲುಗಳು ನಿಧಾನವಾಗಿ ಅವಕ್ಕೆ ಒಗ್ಗಿಕೊಳ್ಳುತ್ತವೆ. 'ಬೇಡ ಬುದ್ದಿ.. ಇದ್ಯಾಕೆ ನಿಮ್ಗೆಲ್ಲಾ' ಎಂದು ಹೇಳುತ್ತಿದ್ದ ಮಂಜನನ್ನು, ತನಗೆ ಭರತನೆಂದು ಕರೆಯಬೇಕೆಂದೂ, ಅಲ್ಲದೆ ಸದ್ಯಕ್ಕೆ ಒಂದು ಗುದ್ದಲಿಯನ್ನೂ ಕೊಡಬೇಕೆಂದು ಹೇಳುತ್ತಾನೆ. ಬದುವಿಗೆ ಮಣ್ಣು ಕೊಡುವುದು, ನೀರು ಹರಿಯಲು ಚರಂಡಿ ಮಾಡುವುದು, ಕಳೆ ಕೀಳುವುದು ಎಲ್ಲವನ್ನು ಮಂಜನಿಂದ ಕೇಳಿ ಮಾಡುವಷ್ಟರಲ್ಲಿ ಸೂರ್ಯ ನತ್ತಿಗೆ ಬಂದಿರುತ್ತಾನೆ. ಅಷ್ಟರಲ್ಲಿ ಗೌರಿ ಬುತ್ತಿಯಲ್ಲಿ ಊಟವನ್ನು ತರುತ್ತಾಳೆ. ಜೊತೆಗೆ ದೊಡ್ಡೇಗೌಡರೂ ಬಂದಿರುತ್ತಾರೆ. ಭರತ ಮಂಜನೊಟ್ಟಿಗೆ ಮಾಡುತ್ತಿದ್ದ ಗದ್ದೆ ಕೆಲಸವನ್ನು ಅವರು ಪ್ರಶಂಸಿಸುತ್ತಾರೆ.
'ನಮ್ಮ್ ಅನ್ನನ ನಾವೇ ಬೆಳ್ಕಬೇಕು, ನಾವೇ ಮಾಡ್ಕಬೇಕು, ನಾವೇ ತಿನ್ಬೇಕು ಮಗ.. ಈ ಕೈ ಕಾಲು ಇರೋದು ಅದಕ್ಕಾಗೇ’ ಎನ್ನುತ್ತಾರೆ. ಎಲ್ಲರೂ ಮರದ ಕೆಳಗೆ ಕೂತು ಊಟ ಮಾಡುತ್ತಾರೆ. ದೇಹ ದಣಿದಾಗ ಊಟದ ರುಚಿ ಎಷ್ಟು ಸೊಗಸಾಗಿರುತ್ತದೆ ಎಂದು ಭರತನಿಗನಿಸುತ್ತದೆ. ಊಟವಾದ ನಂತರ ದೊಡ್ಡೇಗೌಡರು,
'ಇನ್ನು ಈ ಬಿಸಿಲಲ್ಲಿ ಕೆಲ್ಸ ಮಾಡ್ಬೇಡ.. ಬೇಕಾದ್ರೆ ಇಲ್ಲೇ ವಂಗೆ ಮರದ ನೆರಳಲ್ಲಿ ವಿಶ್ರಾಂತಿ ಮಾಡ್ಕೋ.. ಆದ್ರೆ ಈ ಪುಸ್ತಕಾನು ಓದು' ಎನ್ನುತ ಶಿವರಾಮ ಕಾರಂತರ 'ಮರಳಿ ಮಣ್ಣಿಗೆ' ಕಾದಂಬರಿಯನ್ನು ನೀಡುತ್ತಾರೆ. ಅವರೆಲ್ಲ ಹೋದ ನಂತರ ಭರತ ಮರದ ಬುಡಕ್ಕೆ ಬೆನ್ನು ಕೊಟ್ಟು ಪುಸ್ತಕವನ್ನು ಓದಲಾರಂಭಿಸುತ್ತಾನೆ. ದೇಹ ದಣಿದಿದ್ದರಿಂದ ಬೇಗನೆ ನಿದ್ರೆಯ ಜೋಂಪು ಹತ್ತುತ್ತದೆ. ತುಸು ಹೊತ್ತು ಮಲಗಿ ಎದ್ದಾಗ ಬಿಸಿಲಿನ ದಗೆ ಕೊಂಚ ಕಡಿಮೆಯಾಗಿರುತ್ತದೆ. ಮಂಜ ಅಷ್ಟರಲ್ಲಾಗಲೇ ಕೆಲಸ ಮುಗಿಸಿ ಹೊರಟು ಹೋಗಿರುತ್ತಾನೆ.

ಮನೆಗೆ ಬಂದು, ಸ್ನಾನ ಮುಗಿಸಿ ಹೊರಬಂದಾಗ ಗೌರಿ ಅವನಿಗಾಗಿ ಕಾಯುತ್ತಿರುತ್ತಾಳೆ. 'ಮುಂದಿನ ಪಯಣ..?' ಎಂದು ನಗುತ್ತಾ ಕೇಳಿದ ಭರತನ ಪ್ರೆಶ್ನೆಗೆ 'ಹಕ್ಕಿಮ್ ಸಾಹೇಬ್ರ ಚಹಾದ ಅಂಗಡಿ' ಎನ್ನುತ್ತಾಳೆ. ಊರ ಶಾಲೆಯ ಬಳಿಯಿದ್ದ ಚಹಾದ ಅಂಗಡಿ ಸಣ್ಣ ಮಡಿಕೆಯ ಲೋಟಗಳಲ್ಲಿ ಮಾರುವ ಸ್ಪೆಷಲ್ ಚಹಾಕ್ಕೆ ಹೆಸರುವಾಸಿ. 'ಗೌರಿ ಬೇಟಿ ಹೇಗಿದ್ದೀಯ.?' ಎಂದು ಕೇಳಿದ ಹಕ್ಕಿಮ್ ಸಾಹೇಬರಿಗೆ ಭರತನನ್ನು ಪರಿಚಯ ಮಾಡಿಕೊಡುತ್ತಾಳೆ. ನಂತರ ಬಂದ ಚಹಾದ ಘಮಕ್ಕೆ ಭರತ ತಲೆದೂಗುತ್ತಾನೆ. ನಿಧಾನವಾಗಿ ಒಂದೊಂದೇ ಗುಟುಕನ್ನು ಹೀರುತ್ತಾ,
'ಬೆಸ್ಟ್ ಮೆಡಿಸಿನ್ ಫಾರ್ ಹೆಡ್ ಏಕ್ .. ' ಎನ್ನುತ್ತಾನೆ.
'ಟೂರಿಸ್ಟ್ಸ್ ನಮ್ಮೂರಿಗೆ ಬಂದ್ರೆ, ಚಹಾ ಕುಡಿಲಿಕ್ಕೆ ಇದೆ ಅಂಗಡಿಗೆ ಬರುವುದು'. ಎನ್ನುತ್ತಾಳೆ ಗೌರಿ.

ಚಹ ಕುಡಿದು ಊರ ಹೊರವಲದಲ್ಲಿದ್ದ ಹಕ್ಕಿಗಳನ್ನು ಮಾರುವ ಅಂಗಡಿಗೆ ಹೋಗುತ್ತಾರೆ. ಅಲ್ಲಿ ಬಣ್ಣ ಬಣ್ಣದ ವಿವಿಧ ಬಗೆಯ ಹಕ್ಕಿಗಳನ್ನು ಪಂಜರದೊಳಗೆ ಇಟ್ಟು ಮಾರುತ್ತಿರುತ್ತಾರೆ. 'ಭರತ್ ನಿಂಗೆ ಇಷ್ಟ ಆದ ಯಾವದಾದ್ರು ಒಂದು ಪಂಜರನ ತಗೋ' ಎಂದು ಗೌರಿ ಹೇಳಿದಾಗ ಭರತ ಏತಕ್ಕೆ ಎಂದು ಕೇಳುತ್ತಾನೆ. 'ತಗೋಳಪ್ಪಾ ಹೇಳ್ತೀನಿ' ಎನ್ನುತ್ತಾಳೆ. ನಂತರ ಇಬ್ಬರು ಬೆಳಗ್ಗೆ ಬಂದಿದ್ದ ಬೆಟ್ಟದ ತಪ್ಪಲಿಗೆ ಬರುತ್ತಾರೆ. ಬೆಳಗ್ಗೆ ಪೂರ್ವದಲ್ಲಿ ಕಂಡ ಸ್ವರ್ಗ ಈಗ ಪಶ್ಚಿಮದಲ್ಲಿ ಕೆಂಪಾಗಿ ಮೂಡಿದೆ ಎಂದನಿಸುತ್ತದೆ ಭರತನಿಗೆ.

'ಭರತ್, ನೋಡು ಎಲ್ಲ ಹಕ್ಕಿಗಳು ತಮ್ಮ-ತಮ್ಮ ಗೂಡುಗಳನ್ನು ಸೇರ್ತಿವೆ. ತಗೋ, ಈ ಪಂಜರದಲ್ಲಿರೋ ಹಕ್ಕಿಗಳನ್ನ ಹಾರಿಬಿಡು.. ಇವೂ ಗೂಡು ಸೇರಲಿ' ಎಂದು ಹೇಳಿದಾಗ, ಚಿಯ್ಗುಡುತ್ತಿದ್ದ ಪುಟ್ಟ ಹಕ್ಕಿಗಳನ್ನು ಒಂದೊಂದೇ ಹೊರತೆಗೆದು ಹಾರ ಬಿಡುತ್ತಾನೆ. ಹಕ್ಕಿಗಳು ಹಾರುತ್ತಾ ದೂರ ಸಾಗಿ ಕಣ್ಮರೆಯಾದ ಮೇಲೆ, 'ಭರತ್ ನೀನೂ ಹೀಗೆ ನಿನ್ನ ಪಂಜರದ ಜೀವನವನ್ನು ಬಿಟ್ಟು ಮುಕ್ತವಾಗಿ ಹಾರಾಡು' ಎನ್ನುತ್ತಾಳೆ. ಇಬ್ಬರೂ ಹಾರಿಹೋಗುತ್ತಿದ್ದ ಹಕ್ಕಿಗಳನ್ನೇ ನೋಡುತ್ತಾರೆ.

ಆ ದಿನ ಭರತನಿಗೆ ಜೀವನದ ಅತಿ ಮುಖ್ಯವಾದ ದಿನವಾಗುತ್ತದೆ. ನಂತರದ ಎರಡು ವಾರ ಅದೇ ದಿನಚರಿಯನ್ನು ಮುಂದುವರೆಸುತ್ತಾನೆ. ಬೆಳಗ್ಗೆ ಬೇಗ ಏಳುವುದು, ಬೆಟ್ಟದ ತಪ್ಪಲಿನಲ್ಲಿ ಧ್ಯಾನ, ಮಂಜನೊಟ್ಟಿಗೆ ಗದ್ದೆಯ ಕೆಲಸ, ಮರಳಿ ಮಣ್ಣಿಗೆ ಪುಸ್ತಕ, ಸಂಜೆ ಗೌರಿಯೊಟ್ಟಿಗೆ ಊರ ಸುತ್ತಾಟ, ಭಜನೆ, ಅಡಿಗೆ, ಅಲ್ಲದೆ ದಿನಕ್ಕೊಂದರಂತೆ ಪಂಜರವನ್ನು ಕೊಂಡು ಅದರಲ್ಲಿನ ಹಕ್ಕಿಯನ್ನು ಗುಡ್ಡದ ತಪ್ಪಲಿನಿಂದ ಹಾರ ಬಿಡುವುದು, ಅದು ಹಾರಿ ಕಣ್ಮರೆಯಾಗುವವರೆಗೂ ನೋಡುವುದು. ಭರತನ ಜೀವನ ಒಂದು ಹೊಸ ದಿಕ್ಕನ್ನು ಪಡೆಯುತ್ತಿತ್ತು. ಅರ್ಥಪೂರ್ಣವಾಗಿದೆ ಎಂದೆನಿಸುತ್ತಿತ್ತು. 'ನಾಳೆ' ಎಂಬುವ ಹುಸಿಭಯ ಮನಸ್ಸಿಂದ ಮರೆಯಾಗಿ ಹೋಗಿತ್ತು.

ದಿನಗಳು ಕಳೆದವು. ಅಷ್ಟರ ಲ್ಲಾಗಲೇ ಭರತನಿಗೆ ಆಫೀಸ್ಸಿನಿಂದ ಫೋನುಗಳು ಬರತೊಡಗಿದ್ದವು. ಅವುಗಳಲ್ಲಿ ಕೆಲವನ್ನು ಉತ್ತರಿಸಿದರೆ ಕೆಲವನ್ನು ಹಾಗೆಯೇ ಬಿಡುತ್ತಿದ್ದ. ಕೊನೆಯ ದಿನ ಸಂಜೆ ಭರತ ಹಾಗು ಗೌರಿ ಬೆಟ್ಟದ ಮೇಲೆ ಬಂದಿರುತ್ತಾರೆ. ಹಕ್ಕಿಯ ಅಂಗಡಿಯ ಕೊನೆಯ ಪಂಜರದ ಹಕ್ಕಿಯನ್ನೂ ಹಾರಿ ಬಿಡುತ್ತಾರೆ. 'ಹಕ್ಕಿ ಅಂಗಡಿಯವನಿಗೆ ಇಡೀ ವರ್ಷದ್ ಬಿಸಿನೆಸ್ ಕೊಟ್ಟೆ ನೋಡು ನೀನು' ಎನ್ನುತ ಭರತನನ್ನು ನೋಡಿ ಗೌರಿ ನಗುತ್ತಾಳೆ. ಸ್ವಲ್ಪ ಹೊತ್ತು ಸುಮ್ಮನಿದ್ದ ಭರತ 'ನಾಳೆ ನಾನು ಹೊರಡ್ಬೇಕು ಗೌರಿ' ಎನ್ನುತ್ತಾನೆ. ನಗುತ್ತಿದ್ದ ಗೌರಿ ಒಮ್ಮೆಲೇ ಮೌನವಾಗುತ್ತಾಳೆ. ಭರತನೂ ಸುಮ್ಮನಾಗುತ್ತಾನೆ. 'ಅಲ್ಲಿ ಹೋಗಿ ಏನ್ ಮಾಡ್ತಿಯಾ' ಎಂದು ತುಸು ಕೋಪದಿಂದ ಕೇಳಿದಾಗ ಭರತನಿಗೆ ಏನೆನ್ನಬೇಕೆಂದು ತಿಳಿಯುವುದಿಲ್ಲ. 'ಊರು, ಈ ಜಾಗ, ಅಜ್ಜ, ದೊಡ್ಡೆಗೌಡ್ರು, ಹಕ್ಕಿಮ್ ಸಾಹೇಬ್ರ ಚಹಾ, ಗದ್ದೆ, ಮಂಜ, ಈ ಹಕ್ಕಿಗಳು, ನೀನು ಎಲ್ಲರನ್ನು ಮಿಸ್ ಮಾಡ್ಕೊಂತೀನಿ ' ಎನ್ನುತಾನೆ. ಗೌರಿ ಏನನ್ನೂ ಉತ್ತರಿಸದೆ ಗುಡ್ಡದಿಂದಿಳಿದು ಹೋಗುತ್ತಾಳೆ. ಅವಳ ಕೋಪದ ಹಿಂದಿದ್ದ ಅರ್ಥವನ್ನು ಅರಿತರೂ ಅರಿಯದಾಗುತ್ತಾನೆ.

ಸ್ವಲ್ಪ ಸಮಯ ಗುಡ್ಡದ ಮೇಲೆ ಕೂತು ದೊಡ್ಡೇಗೌಡರ ಮನೆಗೆ ಬಂದ ಭರತ 'ಮರಳಿ ಮಣ್ಣಿಗೆ' ಪುಸ್ತಕವನ್ನು ಹಿಂದಿರುಗಿಸಲು ಅವರ ಕೋಣೆಯೊಳಗೆ ಹೋಗುತ್ತಾನೆ. ದೊಡ್ಡದ್ದಾದ ಎರಡು ಗಾಜಿನ ಕಪಾಟಿನಲ್ಲಿ ಜೋಡಿಸಿದ್ದ ನೂರಾರು ಪುಸ್ತಕಗಳನ್ನು ಕಂಡು ಭರತನಿಗೆ ಆಶ್ಚರ್ಯವಾಗುತ್ತದೆ. ದೊಡ್ಡೇಗೌಡರ ಅನುಭವದ ಮಾತುಗಳ ಹಿಂದಿನ ರಹಸ್ಯ ಅರಿಯುತ್ತದೆ. 'ಬಾರಪ್ಪ ಬಾ... ಓದಿದ ಪುಸ್ತಕ? ಹೇಗಿದೆ? ಎಂದು ಪುಸ್ತಕವನ್ನು ಓದುತ್ತಾ ಕುರ್ಚಿಯ ಮೇಲೆ ಒರಗಿದ್ದ ಗೌಡರು ಕೇಳುತ್ತಾರೆ.

'ಈ ಪುಸ್ತಕ ನನ್ನ ಜೀವನದ ದಿಕ್ಕನೇ ಬದಲಿಸುತ್ತದೆ ಅನ್ಸುತ್ತೆ' ಎಂದ ಭರತನನ್ನು ಉದ್ದೇಶಿಸಿ,
'ನೀನೊಬ್ಬನೇ ಅಲ್ಲ ಮಗ.. ಅದೆಷ್ಟೋ ಜನರ ಜೀವನದ ಹಾದಿನೇ ಬದಲಿಸಿದೆ ಈ ಪುಸ್ತಕ' ಎನ್ನುತ್ತಾರೆ. ‘ಇಂತಹ ಪುಸ್ತಕಗಳೇ ನನ್ನ ಆಸ್ತಿ’ ಎಂದ ಅವರು ಕಪಾಟಿನಿಂದ ಸುಧಾ ಮೂರ್ತಿಯವರ 'How I Taught My Grandmother to Read' ಎಂಬ ಇಂಗ್ಲಿಷ್ ಪುಸ್ತಕವನ್ನೂ ಕೊಡುತ್ತಾರೆ.

ಅಷ್ಟರಲ್ಲಿ ಕೋಣೆಯ ಹೊರಗಿಂದ ತಂಬೂರಿಯ ನಾದವೊಂದು ಮೂಡುತ್ತದೆ. ಪೂರವಿಕಲ್ಯಾಣಿ ರಾಗ ನೋವಿನ ಭಾವವನ್ನು ಸ್ಪುರಿಸುತ್ತಿರುತ್ತದೆ. ಇದು ಗೌರಿಯ ಧ್ವನಿಯೆಂದೇ ಕ್ಷಣಮಾತ್ರದಲ್ಲಿ ಅರಿತ ಭರತ 'ಗೌರಿ ಹಾಡುತ್ತಾಳೆಯೇ.?' ಎಂದು ದೊಡ್ಡೇಗೌಡರನ್ನು ಆಶ್ಚರ್ಯದಿಂದ ಕೇಳುತ್ತಾನೆ. ದೊಡ್ಡೇಗೌಡರು ಹೌದೆಂದೂ, ಗೌರಿ ಹಲವು ಸಂಗೀತ ಕಛೇರಿಗಳನ್ನೂ ನೆಡೆಸಿಕೊಡುವಳೆಂದೂ ಹೇಳುತ್ತಾರೆ. ಗೌಡರ ಮಾತನ್ನು ಕೇಳುತ್ತಲೇ ತಕ್ಷಣ ಹೊರಬಂದ ಭರತ, ತಂಬೂರಿಯನ್ನು ಎದೆಗವುಚಿಕೊಂಡು ಹಾಡುತ್ತಿದ್ದ ಗೌರಿಯನ್ನು ನೋಡುತ್ತಾನೆ. ಕಣ್ಣು ಮುಚ್ಚಿ ರಾಗದ ಆರೋಹಣವನ್ನು ಮಾಡುತ್ತಿದ್ದ ಗೌರಿ ಅಕ್ಷರಸಹ ದೇವತೆಯಂತೆ ಭರತನಿಗೆ ಕಾಣುತ್ತಾಳೆ. ಅಷ್ಟೊಂದು ಆಳವಾದ ಸ್ವರವಿಸ್ತಾರವನ್ನು ಭರತ ಎಂದಿಗೂ ಪ್ರತ್ಯಕ್ಷವಾಗಿ ಕೇಳಿರಲಿಲ್ಲ. ಗೌರಿ ಹಾಡುತ್ತಾ ಮೈ ಮರೆತಿರುತ್ತಾಳೆ. ದುಃಖದ ಭಾವಗಳೆಲ್ಲ ಅವಳ ಕಣ್ಣ ಹುಬ್ಬುಗಳ ಮೇಲೆ ಮೂಡುತ್ತಿರುತ್ತವೆ. ನೋಡುತ್ತಲೇ ಕಣ್ಣೀರ ಧಾರೆ ಅವಳ ಕಣ್ಣುಗಳಿಂದ ಹರಿಯತೊಡಗುತ್ತದೆ. ಆದರೆ ರಾಗ ಒಂದಿಂಚೂ ತಪ್ಪುವುದಿಲ್ಲ. ಕೆಲ ಸಮಯದ ನಂತರ ರಾಗವನ್ನು ಮಂದ್ರದಲ್ಲಿ ತಂದು ನಿಲ್ಲಿಸುತ್ತಾಳೆ. ಶಾಂತವಾಗುತ್ತಾಳೆ. ಆಕೆಯ ಕಣ್ಣೀರಿನ ಅರ್ಥವನ್ನು ಅರಿತ ಭರತ, ಆಕೆ ಕಣ್ಣು ಬಿಡುವ ಮೊದಲೇ 'ಬರ್ತೀನಿ' ಎಂದೇಳಿ ಹೊರನಡೆಯುತ್ತಾನೆ.

ಗೌರಿಯನ್ನು ನೋಡಿದರೆ ಹೊರಡಲು ಮನಸ್ಸು ಬರುವುದಿಲ್ಲ. ಆದರೆ ಏನು ಮಾಡಬೇಕೆಂದೂ ತೋರುತ್ತಿಲ್ಲ.ರಾತ್ರಿಯೆಲ್ಲ ಭರತನಿಗೆ ನಿದ್ರೆಯೇ ಬರುವುದಿಲ್ಲ. ಇಂದು ಮತ್ತೊಮ್ಮೆ ಮನಸ್ಸು ತಳಮಳಗೊಂಡಿರುತ್ತದೆ.

ಮುಂಜಾವಿನ ರೈಲನ್ನು ಹಿಡಿಯಲು ಭರತ ಬೇಗನೆ ಏಳುತ್ತಾನೆ. ಹೊರಡುವ ಮೊದಲು ಗೌರಿಯನೊಮ್ಮೆ ನೋಡಬೇಕೆನಿಸಿದರೂ, ಬೇಡವೆಂದು ಅಲ್ಲಿಂದ ಹೊರಡುತ್ತಾನೆ. ಹೊರಡುವ ಮೊದಲು ಅಜ್ಜನ ಕಾಲಿಗೆ ಬಿದ್ದು, ಆಶ್ರಿವಾದವನ್ನು ಪಡೆದು, ದೊಡ್ಡೇಗೌಡರಿಗೆ ಹೇಳಿ ಹೊರಡುತ್ತಾನೆ.'ಗೌರಿ ಮಲಗಿದ್ದಾಳೆ, ಅವಳನ್ನೂ ಎಳಸ್ತಿನಿ' ಎಂದ ದೊಡ್ಡೇಗೌಡರಿಗೆ 'ಅವಳು ಮಲಗಲಿ ಬಿಡಿ, ನೆನ್ನೆ ರಾತ್ರಿಯೇ ಅವಳಿಗೆ ಹೇಳಿದ್ದೀನಿ' ಎನ್ನುತ್ತಾನೆ. ಆದರೂ ಗೌರಿ ನನ್ನ ಕಳಿಸಿಕೊಡಲು ಬರಲಿಲ್ಲವೇಕೆಂದು ಕಳವಳಗೊಳ್ಳುತ್ತಾನೆ.

ನನ್ನ ನೆನಪಿಗಾಗಿ ಏನಾದರೊಂದು ಭರತನಿಗೆ ಕೊಡಲೆಂದು ತಡರಾತ್ರಿಯವರೆಗೂ ಉಣ್ಣೆಯ ಶಾಲೊಂದನ್ನು ಗೌರಿ ಹಣೆಯುತ್ತಾಳೆ. ಬೆಳಗ್ಗೆ ತುಸು ನಿಧಾನವಾಗಿ ಎದ್ದು ನೋಡಿದಾಗ ಘಂಟೆ ಏಳಾಗಿರುತ್ತದೆ. ಎದ್ದು ರೆಡಿಯಾಗಿ ಹೊರಬಂದು 'ಭರತ್ ಬಂದಿದ್ನ?' ಎಂದು ದೊಡ್ಡೇಗೌಡರಲ್ಲಿ ಕೇಳುತ್ತಾಳೆ. ಅವರು ಹೌದೆಂದೂ, ನಿನ್ನ ಏಳಿಸಲು ಬೇಡವೆಂದು ಅವನು ಹೇಳಿದನೆಂದೂ, ಬೆಳಗ್ಗಿನ ರೈಲಿಗೆ ಅವನು ಹೊರಟನೆಂದು ಹೇಳುತ್ತಾರೆ. ನಂಬಲಾಗದ ಗೌರಿ ಭರತನಿಗಾಗಿ ಮಾಡಿದ್ದ ಶಾಲನ್ನು ಹಿಡಿದು ಪಟೇಲರ ಮನೆಯಡೆ ಬೇಗನೆ ಹೋಗುತ್ತಾಳೆ. ಬಾಗಿಲು ತೆರೆದಿದ್ದ ಮನೆಯೊಳಗೇ ಯಾರೂ ಇರುವುದಿಲ್ಲ. 'ಭರತ್.. ತಾತ' ಎನ್ನುತ ಗದ್ಗದಿತ ಸ್ವರದಲ್ಲಿ ಕೂಗುತ್ತಾಳೆ.
'ಅಯ್ಯರು ರೈಲ್ವೆ ಸ್ಟೇಷನ್ ಕಡೆ ಹೋದ್ರು' ಎಂದು ಯಾರೋ ಹೊರಗಿನಿಂದ ಹೇಳಿದಾಗ ಗೌರಿ ನಿಂತಲ್ಲೇ ಕುಸಿಯುತ್ತಾಳೆ. ಅಲ್ಲಿಯವರೆಗೂ 'ಭರತ ಹೊರಡುವುದಿಲ್ಲ' ಎಂದು ಮನದ ಎಲ್ಲೋ ಒಂದೆಡೆ ಮೂಡುತ್ತಿದ್ದ ಸಂದೇಶ ಒಮ್ಮೆಲೇ ನಿಂತುಬಿಡುತ್ತದೆ. ಭರತ ಇಷ್ಟೊಂದು ಕಟು ಹೃದಯಿಯೇ ಎಂದುಕೊಳ್ಳುತ್ತಾಳೆ. ಶಾಲನ್ನು ಎದೆಗವುಚಿಕೊಂಡು ಬಿಕ್ಕಿ ಅಳುತ್ತಾಳೆ. ಸ್ವಲ್ಪ ಸಮಯದ ನಂತರ ಹೊರಬಂದು ರೈಲು ಬರುವ ಸಮಯವನ್ನು ಕೇಳಿ, ಗದ್ದೆಯ ಮಾರ್ಗದಲ್ಲಿ ಹೋದರೆ ಹತ್ತಿರವಾಗಬಹುದೆಂದು ಬದುಗಳನ್ನು ಇಳಿದು ಬೇಗ-ಬೇಗನೆ ಹೋಗುತ್ತಾಳೆ.
'ಒಂದು ಮಾತು ಹೇಳಿಯೂ ಹೋಗಲಿಲ್ಲವಲ್ಲ' ಎಂದು ಅವಳಿಗೆ ಭರತನ ಮೇಲೆ ಕೊಂಚ ಸಿಟ್ಟೂ ಬಂದರೂ ಕೆಲ ಕ್ಷಣಗಳ ನಂತರ ದುಃಖ ಉಕ್ಕಿ ಬರುತ್ತಿತ್ತು. ದುಃಖವನ್ನು ತಡೆಯಲಾಗದೆ ಶಾಲಿನಿಂದ ಕಣ್ಣುಗಳನ್ನು ಅದ್ದುತ್ತಾ ನೆಡೆಯುತ್ತಾಳೆ.ಅಷ್ಟರಲ್ಲಿ ರೈಲು ಹೊರಡುವ ಸದ್ದೊಂದು ಮೂಡುತ್ತದೆ. ಬದುಗಳ ಮೇಲೆ ಸಂಬಾಲಿಸಿಕೊಂಡು ಓಡುತ್ತಿದ್ದ ಆಕೆ ರೈಲು ಹೊರಟ ಸದ್ದಿಗೆ ಒಮ್ಮೆಲೇ ನಿಲ್ಲುತ್ತಾಳೆ. ಕಳ್ಳಿಯ ಹಾಲಿನಂತೆ ಕಣ್ಣೀರ ಹನಿಗಳು ಒಮ್ಮೆಲೇ ಪಟಪಟನೆ ಉದುರುತ್ತವೆ. ರೈಲು ಸದ್ದು ಮಾಡುತ್ತಾ ದೂರದಲ್ಲಿ ಮರೆಯಾಗುತ್ತದೆ.



ಎಲ್ಲಿಗೋಗಬೇಕೆಂದು ಗೌರಿಗೆ ಅರಿಯುವುದಿಲ್ಲ. ಓಡಿಹೋಗಿ ರೈಲನ್ನು ಹಿಡಿಯಬೇಕನಿಸುತ್ತದೆ. ಭರತನನ್ನು ಕೆಳಗಿಳಿಸಿ ಕೇಳಬೇಕೆನಿಸುತ್ತದೆ. ಕೆಲಹೊತ್ತು ರೈಲಿನ ಹಾದಿಯನ್ನೇ ನೋಡುತ್ತಾ ನಿಂತ ಗೌರಿಗೆ ದೂರದಿಂದ ಯಾರೊ ಆಕೆಯನ್ನು ಕರೆದ ಹಾಗನಿಸುತ್ತದೆ. ಹಿಂದಿರುಗಿ ನೋಡಿದರೆ ಗದ್ದೆಯ ಮದ್ಯದಲ್ಲಿ ಇಬ್ಬರು ಕೆಲಸ ಮಾಡುತ್ತಿರುವುದು ಕಾಣುತ್ತದೆ. ತಡಮಾಡದೆ ಗೌರಿ ಅವರಲ್ಲಿಗೆ ಹೋಗುತ್ತಾಳೆ. ಅತ್ತ ಕಣ್ಣುಗಳನ್ನು ಶಾಲಿನಿಂದ ಒರೆಸಿಕೊಳ್ಳುತ್ತಾಳೆ. 'ಲೇ ಮಂಜ.. ಈ ಬದಿನ ನೀರಾ ಇನ್ನೂ ಯಾಕ್ ಬಿಟ್ಟಿಲ್ಲ.. ಗುದ್ದಲಿ ತಾ.. ನೀರ್ ಜಾಸ್ತಿ ಆಯಿತು ಗದ್ದೆಗೆ' ಎನ್ನುತ ಭರತ ಕೂಗು ತ್ತಿರುತ್ತಾನೆ. ಭರತನನ್ನು ನೋಡಿದ ಗೌರಿಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. 'ಏನ್ ಗೌರಿ, ಯಾವ್ ಕಡೆ ಹೊರಟೆ' ಎಂದು ಚೇಷ್ಟೆಯಿಂದ ಮುಗುಳ್ನಗುತ್ತಾ ಕೇಳುತ್ತಾನೆ. ಫ್ರೆಂಚ್ ಕಟ್ನ ಮೇಲೆ ಗದ್ದೆಯ ಕೆಸರು ಮೆತ್ತಿಕೊಂಡು ಭಿನ್ನವಾಗಿ ಕಾಣುತ್ತಿದ್ದ ಭರತನ್ನು ನೋಡಿ ನಗುತ್ತಾ, ತಾನು ತಂದಿದ್ದ ಕೆಂಪು ಶಾಲನ್ನು ಗೌರಿ ಅವನಿಗೆ ಎಸೆಯುತ್ತಾಳೆ. ರೈಲು ಹೋದ ದಿಕ್ಕಿನಿಂದ ಕೋಗಿಲೆಯೊಂದು ಕೂಗುತ್ತಿರುತ್ತದೆ.

ಪೋಲಿಯೋ ಮುಕ್ತ ದೇಶದ ಮುಂದಿರುವ ಮತ್ತೊಂದು ದೊಡ್ಡ ಸವಾಲು....!

ಅದು ಅತಿ ವಿಕಾರವಾದ ಮುಖ. ಮುಖದ ತುಂಬೆಲ್ಲ ನೀರು ತುಂಬಿ ಹುಬ್ಬಿರುವ ಬೊಬ್ಬೆಗಳು. ಒಣ ಮೀನಿನಂತೆ ಸುಕ್ಕಾದ ಮೈಯ ಚರ್ಮ. ಹೆಬ್ಬೆರಳು ತೋರ್ಬೆರಳುಗಳ ವ್ಯತ್ಯಾಸ ಗುರುತಿಡಿಯಲಾಗದ ಕೈ ಬೆರಳುಗಳು. ಕಾಲಿನ ಪಾಡು ಭಾಗಶ ಹಾಗೆಯೇ! ಇಂತಹ ಒಬ್ಬ ವ್ಯಕ್ತಿ ಬೀದಿಯಲ್ಲಿ ನೆಡೆದುಕೊಂಡು ಹೋಗುತ್ತಿದ್ದರೆ ಜನರೆಲ್ಲ ಇವನಿಂದ ದೂರ ಓಡುತ್ತಿದ್ದರು. ಹಿಡಿ-ಹಿಡಿ ಶಾಪವನ್ನು ಹಾಕುತ್ತಿದ್ದರು. ಯಾರಾದರೂ ಈ ವಿಕಾರಿ ಮಾನವನನ್ನು ಹೇಗಾದರೂ ಮಾಡಿ ಊರ ಹೊರಗೆ ದಬ್ಬಿ ಬರಲು ಹೇಳುತಿದ್ದರು. ಇಂತಹ ಶಾಪ, ಕೋಪ, ದಿಕ್ಕಾರಗಳನ್ನು ಸಹಿಸುತಿದ್ದ ಆ ಜೀವ ನಿಧಾನವಾಗಿ ಮುನ್ನೆಡೆಯುತ್ತಿತ್ತು. ತನ್ನ ಗುಡಿಸಲನ್ನು ಸೇರುತಿತ್ತು. ಆ ಗುಡಿಸಲೋ, ಯಾರು ಬಾರದ ನಿರ್ಜನ ಪ್ರದೇಶದಲ್ಲಿರುತಿತ್ತು. ನಾಯಿಗಳು ಬಿಟ್ಟರೆ ಅಲ್ಲಿಗೆ ಯಾರೊಬ್ಬರೂ ಸುಳಿಯರು. ಎಲ್ಲಿಂದಲೋ ಸಿಕ್ಕಿದ ಅನ್ನದಲ್ಲೇ ತುಸು ತಿಂದು ಮಲಗಬೇಕಿತ್ತು. ಹೀಗೆ ಕೊರಗಿ, ನೊಂದು-ಬೆಂದ ಜೀವ, ಕೆಲದಿನಗಳ ನಂತರ ಅಸುನೀಗುತ್ತಿತ್ತು. ಆ ಜೀವ ಹಾರಿ ಹೋದಾಗಲಂತೂ ಇಡೀ ಊರಿಗೆ ಊರೇ ಸಂತಸ ಪಡುತ್ತಿತ್ತು. ನೆಮ್ಮದಿಯ ನಿಟ್ಟುಸಿರು ಬಿಡುತ್ತಿತ್ತು! ಮೂಢನಂಬಿಕೆಯ ಎಲ್ಲಾ ತರ್ಕಗಳಿಂದ ಆ ಜೀವವನ್ನು ಶಪಿಸಿ ಸುಮ್ಮನಾಗಬಿಡುತ್ತಿತು.

ಇದು ಯಾವುದೇ ಕರುಣಾಜನಕ ಕಥೆಯ ಆಯ್ದ ಭಾಗವಂತೂ ಅಲ್ಲ. ಹಲವು ದಶಕಗಳ ಹಿಂದೆ ಕಾರಣಾಂತರಗಳಿಂದ ಬರುತಿದ್ದ ಕುಷ್ಠರೋಗವೆಂಬ ಮಹಾಮಾರಿಗೆ ಸಿಲುಕಿ, ಮರುಗಿ ಕೊನೆಯಾಗುತಿದ್ದ ಅದೆಷ್ಟೋ ಜೀವಗಳ ನೋವಿನ ವ್ಯಥೆ. ಉಸಿರಾಡಲಾಲೂ ಹೆದರಿ, ಮುದುಡಿ ಕೂರಬೇಕಿದ್ದ ಬಹುಜನರ ಕಥೆ.

ಕುಷ್ಠರೋಗ. ಇತಿಹಾಸದುದ್ದಕ್ಕೂ ಮಾನವನನ್ನು ಬಿಡದೆ ಕಾಡಿದ ಮಾರಕ ರೋಗ. ಇದಕ್ಕೆ ಸಾಕ್ಷಿ ಎಂಬಂತೆ ಪುರಾವೆಗಳು ಕ್ರಿಸ್ತ ಪೂರ್ವದಿಂದಲೂ ನಮಗೆ ದೊರಕಿವೆ. ಆದರೆ ಮೂಢನಂಬಿಕೆಯ ಪರಮಾವಧಿಯಲ್ಲಿ ನಮ್ಮಲ್ಲಿ ಈ ರೋಗವನ್ನು ಹೆಚ್ಚಾಗಿ ತಪ್ಪಾಗಿಯೇ ಅರಿಯಲಾಯಿತು. ಇದರಿಂದ ಒಂದು ಸೂಕ್ತ ಮದ್ದನು, ಸೂಕ್ತ ಸಮಯದಲ್ಲಿ, ಕಂಡುಹಿಡಿಯಲಾಗಲಿಲ್ಲ ಎನ್ನಬಹುದು. ಕೋಟಿ-ಕೋಟಿ ಜನರನ್ನು ಬಲಿ ತೆಗೆದುಕೊಂಡ ಈ ಕುಷ್ಠರೋಗಕ್ಕೆ 'ಮೈಕೋಬ್ಯಾಕ್ಟಿರಿಯಮ್ ಲೆಪ್ರಯ್' ಎಂಬ ಬ್ಯಾಕ್ಟಿರಿಯವೇ ಕಾರಣವೆಂದು 1873 ರಲ್ಲಿ ನಾರ್ವೆಯ ವಿಜ್ಞಾನಿ ಹೆನ್ಸನ್ ಎಂಬಾತ ಕಂಡುಹಿಡಿದ ಮೇಲೆ ಸಹಸ್ರ ವರ್ಷಗಳ ಜನರ ಮೂಢನಂಬಿಕೆ ಒಂದು ಮಟ್ಟಿಗೆ ಕಡಿಮೆಯಾಗತೊಡಗಿತು. ಇದು ಯಾವುದೇ ದುಷ್ಟ ಶಕ್ತಿಯಾಗಲಿ, ಅನುವಂಶೀಯವಾಗಲಿ ಅಥವಾ ಮತ್ಯಾವುದೇ ಪಾಪ ಪುಣ್ಯಗಳ ಫಲವಲ್ಲ ಎಂಬುದು ಮಂದಗತಿಯಲ್ಲಿ ಹಲವರಿಗೆ ಅರಿವಾಗತೊಡಗಿತು. ಒಮ್ಮೆ ಈ ಬ್ಯಾಕ್ಟೀರಿಯ ದೇಹದ ಒಳಗೆ ಸೇರಿ ಕುಷ್ಠ ರೋಗದ ಮೊದಲ ಲಕ್ಷಣಗಳು ಕಾಣತೊಡಗಲು ಒಂದು ವರ್ಷದಿಂದ ಇಪ್ಪತ್ತು ವರ್ಷಗಳೂ ತೆಗೆದುಕೊಳ್ಳಬಹುದು .ಅಲ್ಲಿಯವರೆಗೂ ಈ ಬ್ಯಾಕ್ಟೀರಿಯಾ ದೇಹವನ್ನು ಹಂತ ಹಂತವಾಗಿ ವ್ಯಾಪಿಸುತ್ತಲೇ ಇರುತ್ತದೆ. ಈ ಸಮಯವನ್ನು 'ಇನ್ಕ್ಯುಬೇಷನ್ ಪಿರಿಯಡ್' ಎಂದು ಕರೆಯಲಾಗುತ್ತದೆ. ಅಲ್ಲದೆ ರೋಗಿಯ ಕೆಮ್ಮು ಹಾಗು ಸೀನುವುದರ ಮೂಲಕ ಇದು ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಹೆಚ್ಚಾಗಿ ಉಷ್ಣವಲಯದ ದೇಶಗಳಲ್ಲಿ ಕಂಡು ಬರುವ ಈ ಬ್ಯಾಕ್ಟಿರಿಯಾದ ವಿರುದ್ಧ ಬಹಳಷ್ಟು ಪ್ರಯೋಗಗಳು ನಡೆದವು. ಹಲವಾರು ಪ್ರಯೋಗಗಳ ಪರಿಣಾಮ ಅಂತಿಮವಾಗಿ ಇಪ್ಪತ್ತನೇ ಶತಮಾನದದ ಎಪ್ಪತ್ತನೇ ದಶಕದಲ್ಲಿ ಯಶಸ್ವಿಯಾದ ಮಲ್ಟಿ-ಡ್ರಗ್-ಟ್ರೀಟ್ಮೆಂಟ್ (MTD) ಚಿಕಿತ್ಸೆಯನ್ನು ಕಂಡುಹಿಡಿಯಲಾಯಿತು. ಇದು ಇಂದಿಗೂ ಕುಷ್ಠ ರೋಗಕ್ಕೆ ಇರುವ ಅತಿ ಪರಿಣಾಮಕಾರಿಯಾದ ಚಿಕಿತ್ಸೆ.

ಕುಷ್ಠ ರೋಗವೆಂಬುದು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಯಾರ ಹಂಗಿಲ್ಲದೆ ಕಾಡುವ ರೋಗ. ಇತ್ತೀಚಿನ ದಿನಗಳಲ್ಲಿ ಇದರ ಬಗ್ಗೆ ಸಾಕಷ್ಟು ಮಾಹಿತಿಗಳಿದ್ದರೂ ಸಹ ಒಮ್ಮೆ ಕುಷ್ಠ ರೋಗಿಯಾದರೆ ಆತ ಯಾರಿಗೂ ಬೇಡದಂತಾಗುತ್ತಾನೆ. ವಿಕಾರವಾದ ಅವನ ದೇಹ ಸ್ಥಿತಿಯೇ ಇದಕ್ಕೆ ಹೆಚ್ಚಿನ ಕಾರಣವಾಗಿರುತ್ತದೆ. ಅದು ಮಕ್ಕಳಿಗಾದರೆ ಅವುಗಳಿಗೆ ಶಾಲೆಗೇ ಹೋಗಲಾಗದ, ಇತರ ಮಕ್ಕಳೊಟ್ಟಿಗೆ ಆಡಲಾಗದ ಬವಣೆ. ದೊಡ್ಡವರಾದರೆ ಸಂಸಾರದ ದೋಣಿಯನ್ನು ಸಾಗಿಸಲು ಬೇಕಾದ ಕೆಲಸಕ್ಕೆ ಕುತ್ತು. ಇಂದು ಕುಷ್ಠ ರೋಗ ಸಂಪೂರ್ಣವಾಗಿ ಗುಣಮುಖವಾಗಬಲ್ಲದು ಎಂದು ಅರಿತಿದ್ದರೂ ಜನರಲ್ಲಿ ಭಯವೊಂದು ಮನೆಮಾಡಿದೆ. ಎಲ್ಲಿ ನಮ್ಮನ್ನು ಕೊಂದು ಬಿಡುತ್ತಾರೋ ಎಂಬಂತೆ ಕುಷ್ಠ ರೋಗಿಗಳನ್ನು ಕಾಣುವವರಿದ್ದಾರೆ. ಕುಷ್ಠರೋಗಿಗಳಿಗೆ ಸಿಗಬೇಕಾದ ತಕ್ಕ ಮಟ್ಟಿನ ಮೂಲಭೂತ ಸೌಕರ್ಯಗಳಾಗಲಿ, ಪ್ರೀತಿ ಸಾಂತ್ವಾನಗಳಾಗಲಿ, ಉತ್ಸಾಹ ಭರಿತ ಮಾತುಗಳಾಗಲಿ ಇತ್ತೀಚಿನ ದಿನಗಳಲ್ಲೂ ಹಲವೆಡೆ ದೊರಕದಾಗಿದೆ. ಕುಷ್ಠರೋಗವು ಔಷಧಿಗಳಿಂದ ಸಂಪೂರ್ಣವಾಗಿ ಗುಣಮುಖಗೊಂಡರೂ ಒಮ್ಮೆ ಜರ್ಜರಿತವಾದ ದೇಹ ಹಿಂದಿನ ಕಳೆಯನ್ನು ಪಡೆಯದು. ಹಚ್ಚೆ ಹೊತ್ತಿದಂತಹ ಕಲೆಗಳ ಕುರುಹುಗಳನ್ನು ಹೊತ್ತು ಇವರುಗಳು ಹೋದಡೆಯಲ್ಲ ನೋಡುಗರಿಗೆ ವಸ್ತುಸಂಗ್ರಹಾಲಯದ ಪ್ರದರ್ಶನದ ವಸ್ತುಗಳಾಗಿ ಬಿಡುತ್ತಾರೆ. ಜೀವನವಿಡಿ. ತಾನು ಮಾಡದ ತಪ್ಪಿಗೆ ಬಲಿಯಾಗಿ ನರಳುತ್ತಾರೆ. ಜೀವನವಿಡಿ!

ಈ ನಿಟ್ಟಿನಲ್ಲಿ ನಮ್ಮೆಲ್ಲರ ನಡುವೆಯೇ ಬಂದು, ಕುಷ್ಠ ರೋಗಿಗಳ ಶತ್ರುಷೆಯನ್ನು ಮಾಡಿ, ಇವರಿಗಾಗೇ ಹಲವಾರು ಸಂಸ್ಥೆಗಳನ್ನು ನಿರ್ಮಿಸಿ, ಇವರ ಒಳಿತಿಗೆ ದಾರಿ ತೋರಿಕೊಟ್ಟ ಮಹಾತ್ಮ ಗಾಂಧೀಜಿ, ಮದರ್ ಥೆರೆಸಾ ಹಾಗು ಬಾಬಾ ಆಮ್ಟೆಯವರಂತಹ ಹಲವರ ಕಾರ್ಯ ಬಹಳ ಮಹತ್ತರವಾದುದು. ಮಹಾತ್ಮ ಗಾಂಧೀಜಿಯವರು ಕುಷ್ಠ ರೋಗದ ವಿರುದ್ಧ, ಕುಷ್ಠರೋಗಿಗಳ ಪಾಲನೆಯಲ್ಲಿ ತೋರುವ ತಾರತಮ್ಯದ ವಿರುದ್ಧ ಸಾಕಷ್ಟು ಹೋರಾಡಿದರೆ, ಮದರ್ ತೆರೇಸಾರವರು 'ನಿರ್ಮಲ್ ಹೃದಯ್' ಹಾಗು ಬಾಬಾ ಆಮ್ಟೆಯವರು 'ಆನಂದವನ' ಎಂಬ ಶುಶ್ರುಷಾ ಕೇಂದ್ರವನ್ನು ಕ್ರಮವಾಗಿ ಪಶ್ಚಿಮ ಬಂಗಾಲ ಹಾಗು ಮಹಾರಾಷ್ಟ್ರದಲ್ಲಿ ತೆರೆದು ಕುಷ್ಠರೋಗಿಗಳಿಗಾಗಿ ಶ್ರಮಿಸಿದರು.ಇದು ದೇಶದಲ್ಲಲ್ಲದೆ ವಿದೇಶಗಳಲ್ಲೂ ಹಲವಾರು ಕುಷ್ಠರೋಗ ನಿರ್ಮೂಲನ ಸಂಸ್ಥೆಗಳ ಸ್ಥಾಪನೆಗೆ ಕಾರಣವಾಯಿತು. ಈ ದಿಸೆಯಲ್ಲಿ WHO (World Health Organization) ಸಹ 2020ರ ವರೆಗೂ ಕುಷ್ಠ ರೋಗಿಗಳಿಗೆ ಔಷಧಗಳನ್ನು ಉಚಿತವಾಗಿ ಹಂಚುತ್ತಿರುವುದು ಸಹ ಶ್ಲಾಘನೀಯ ವಿಚಾರ. ಹೀಗೆ ಇನ್ನೂ ಹೆಚ್ಚು ಹೆಚ್ಚು ಸಂಸ್ಥೆಗಳು, ಸರ್ಕಾರಗಳು, ಹೆಚ್ಚಾಗಿ ನಾಗರೀಕರಾದ ನಾವುಗಳು ಕುಷ್ಠ ರೋಗಿಗಳ ಶ್ರೇಯಾಭಿವೃದ್ದಿಗೆ ನಮ್ಮ ಅಲ್ಪವನ್ನಾದರೂ ಮಾಡಬೇಕು. ಮಾನವರಾಗಿ ಮಾನವೀಯತೆಯ ತನವನ್ನು ಉಳಿಸಿಕೊಳ್ಳಬೇಕು.

ಒಂದು ಕಾಲದಲ್ಲಿ (ಸುಮಾರು ೧೫ ನೆಯ ಶತಮಾನದ ಆಸುಪಾಸಿನಲ್ಲಿ) ಯುರೋಪಿನಲ್ಲಿ ಕುಷ್ಠರೋಗ ಅತಿ ವಿಪರೀತವಾಗಿದ್ದಿತ್ತು. ಆದರೆ ಕ್ರಮೇಣ ಇದ್ದಕ್ಕಿದಂತೆ ಇದು ಕ್ಷೀಣಿಸತೊಡಗುತ್ತದೆ. ಮುಂದೊಂದು ದಿನ ಅದು ಮರೆಯಾಗಿಯೂ ಬಿಡುತ್ತದೆ. ಆದರೆ ಇದಕ್ಕೆ ಕಾರಣವೇನೆಂಬುದು ಇಂದಿಗೂ ರಹಸ್ಯದ ಅಂಚಿನಲ್ಲೆ ಉಳಿದಿದೆ. ಹೀಗೆ ಯುರೋಪಿನಲ್ಲಿ ಕುಷ್ಠ ರೋಗ ಒಮ್ಮೆಲೇ ಕಡಿಮೆಯಾದದ್ದು ಇಂದಿಗೂ ಹಲವಾರು ವಿಜ್ಞಾನಿಗಳ ತಲೆಯನ್ನು ಕೊರೆಯುತ್ತಿದೆ ಅಲ್ಲದೆ ಇದು ಇನ್ನೂ ಹೆಚ್ಚಿನ ಪರಿಣಾಮಕಾರಿಯಾದ ಚಿಕಿತ್ಸೆಯನ್ನು ಕಂಡುಹಿಡಿಯಲು ಅವಕಾಶವನ್ನೂ ಕಲ್ಪಿಸಿಕೊಟ್ಟಿದೆ. ಕುಷ್ಠ ರೋಗದಿಂದ ಬಳಲುತ್ತಿರುವ ಅದೆಷ್ಟೋ ದೇಶಗಳಿಗೆ ಇಂತಹ ಸಂಶೋಧನೆಗಳು ಅತಿ ಸಹಾಯಕಾರಿಯಾಗಬಲ್ಲದು.

ಇಂದು ಪ್ರಪಂಚದ ಒಟ್ಟು ಕುಷ್ಠರೋಗ ಪ್ರಕರಣಗಳಲ್ಲಿ ಪ್ರತಿಶತ ಅರ್ಧದಷ್ಟು ಪ್ರಕರಣಗಳು ಭಾರತದಲ್ಲೇ ಕಾಣಸಿಗುವುದು ಅತಿ ಶೋಚನೀಯ ವಿಚಾರ. 2013-14 ರ ಒಂದು ವರ್ಷದಲ್ಲೇ ಸುಮಾರು ಒಂದುವರೆ ಲಕ್ಷ ಹೊಸ ಪ್ರಕರಣಗಳು ಬೆಳಕಿದೆ ಬಂದಿವೆ! ಇಲ್ಲಿನ ಹವಾಗುಣ ಹಾಗು ಜನರಿಗೆ ಕುಷ್ಠ ರೋಗದ ಬಗ್ಗೆ ಇರುವ ಅತ್ಯಲ್ಪ ತಿಳುವಳಿಕೆಯೇ ಇದಕ್ಕೆಲ್ಲ ಹೆಚ್ಚಿನ ಕಾರಣವೆನ್ನಬಹುದು. ‘ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮದ’ (NLEP) ಮೂಲಕ ದೇಶದಲ್ಲಿ ಇಂದು ಕುಷ್ಠ ರೋಗದ ವಿರುದ್ಧ ಸಮರವನ್ನೇ ಸಾರಲಾಗಿದೆ, ಪರಿಣಾಮವಾಗಿ 1981 ರಲ್ಲಿ ದೇಶದಲ್ಲಿ 57/1೦,೦೦೦ರಷ್ಟಿದ್ದ (10,000 ಮಂದಿಯಲ್ಲಿ 57 ಜನರಿಗೆ) ಕುಷ್ಠರೋಗದ ಪ್ರಕರಣಗಳು ಇಂದು 0.6/1೦,೦೦೦ ರಷ್ಟಾಗಿದೆ. ಕರ್ನಾಟಕದಲ್ಲಿ ಇದರ ಪ್ರಮಾಣ ೦.42/1೦,೦೦೦ ರಷ್ಟಿದೆ. ಆದರೆ ಭಾರತದಂತಹ ದೊಡ್ಡ ದೇಶದಲ್ಲಿ ಇಂತಹ ಸಣ್ಣ ಅಂಕೆ-ಅಂಶಗಳೂ ಕೆಲವೊಮ್ಮೆ ಬೆಚ್ಚಿಬೀಳಿಸುವಂತಿರುತ್ತವೆ. ಹೀಗೆ ಲಕ್ಷ-ಲಕ್ಷ ಪ್ರಕರಣಗಳು ಬೆಳಕಿಗೆ ಬಂದು ಭಯವನ್ನು ಮೂಡಿಸಿದರೆ ಇನ್ನೂ ಹಲವು ಪ್ರಕರಣಗಳು ಕಾಣದೆಯೆ ದೇಶವನ್ನು ಕಾಡುತ್ತಿವೆ. ಪರಿಣಾಮ ಕಾರ್ಯಗಳು ಮತ್ತಷ್ಟು ಹೆಚ್ಚುಗೊಳ್ಳಬೇಕಾಗಿದೆ. ಕುಷ್ಠರೋಗವನ್ನು ಬುಡಸಮೇತ ಕಿತ್ತೊಗೆಯುವವರೆಗೂ ನಾವುಗಳು ಕಾರ್ಯನಿರತರಾಗಬೇಕಿದೆ. ದಶಕಗಳ ಶ್ರಮದ ಪ್ರತಿಫಲವಾಗಿ ಇಂದು ಭಾರತ ಪೋಲಿಯೋ ಮುಕ್ತ ದೇಶವಾದಂತೆ ಮುಂದೊಂದು ದಿನ ಕುಷ್ಠರೋಗ ಮುಕ್ತ ದೇಶವಾಗಿಯೂ ಬೆಳೆಯಬೇಕಿದೆ. ಮಹಾತ್ಮಗಾಂಧಿಯವರ ಸ್ಮರಣೆಯಲ್ಲಿ ಹಾಗು ಕುಷ್ಠ ರೋಗಿಗಳ ಪರವಾದ ಅವರ ಅವಿರತ ಶ್ರಮದ ಪ್ರತೀಕವಾಗಿ ಪ್ರತಿ ವರ್ಷ ಜನವರಿಯ ಕೊನೆಯ ಭಾನುವಾರವನ್ನು ವಿಶ್ವದಾದ್ಯಂತ ಕುಷ್ಠರೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಇಂದು 64 ನೇ ವರ್ಷದ ಆಚರಣೆ. ಇದು ಕೇವಲ ಕುಷ್ಠ ರೋಗಿಗಳನ್ನು ಗುರುತಿಸುವ ಹಾಗು ಅವರನ್ನು ವಿಚಾರಿಸುವ ದಿನವಾಗದೆ ಅವರುಗಳ ಶ್ರೇಯಾಭಿವೃದ್ದಿ ಹಾಗು ಕುಷ್ಠರೋಗದ ಸಂಪೂರ್ಣ ನಿರ್ಮೂಲನೆ ಮಾಡಲು ಪಣತೊಡುವ ದಿನವಾಗಿದೆ. ದೇಶದ ಪ್ರಗತಿಯ ಬಯಸುವವರು ಈ ಮೂಲಕ ಪರೋಕ್ಷವಾಗಿಯೂ ಶ್ರಮಿಸಬೇಕಿದೆ.

PC : Internet 

Thursday, January 12, 2017

ಸುದ್ದಿವಾಹಿನಿಗಳೂ, ಚರ್ಚಾಕೂಟಗಳೂ, ನಿರೂಪಕರುಗಳೂ, TRP ಅಂಕೆಗಳೂ ಹಾಗು ವೀಕ್ಷಕರುಗಳೂ ಜೊತೆಗೆ ಸಮಾಜಗಳು...!!

ಅದು ದೇಶದ ಅತಿ ಪ್ರಸಿದ್ಧ ಸುದ್ದಿವಾಹಿನಿ. ಪ್ರತಿದಿನ ಸಂಜೆ ಎಂಟು ಘಂಟೆಗೆ ಸರಿಯಾಗಿ ಒಂದಲ್ಲೊಂದು ವಿಷಯದ ಕುರಿತು ಅಲ್ಲಿ ಚರ್ಚಾಕೂಟವಿರುತ್ತದೆ. ಕರಿಕೋಟನ್ನು ಧರಿಸಿ ಕೂತಿರುವ ನಿರೂಪಕ ಮೊದಲು ಒಂದೆರೆಡು ಲೈನುಗಳನ್ನು ಸಾವಕಾಶದಿಂದ ಹೇಳಿ ಕೊನೆಗೆ ಪ್ಯಾನೆಲ್ ನ ಒಬ್ಬರನ್ನು ತಮ್ಮ ಅಭಿಪ್ರಾಯವನ್ನು ಮುಂದಿಡಲು ಹೇಳುತ್ತಾನೆ. ಆದರೆ ಅವರು ಬಾಯಿತೆರೆದು ಒಂದೆರೆಡು ವಾಕ್ಯಗಳನ್ನು ಹೇಳಿ ಮುಗಿಸುವುದರೊಳಗೆ ಅವರನ್ನು ಅಲ್ಲಿಗೇ ತಡೆದು, ಅವರಂದ ವಿಚಾರಗಳಿಗೆ ವ್ಯತಿರಿಕ್ತವಾಗಿ ತನ್ನ ಒಂದೆರೆಡು ಸೊ ಕಾಲ್ಡ್ ದುಬಾರಿ ಇಂಗ್ಲಿಷ್ ಪದಗಳನ್ನು ಸೇರಿಸಿ ಒಮ್ಮೆಲೇ ಅರಚುತ್ತಾನೆ. ಕಿರುಚುತ್ತಾನೆ. ಮಧ್ಯದಲ್ಯಾರೋ ಒಬ್ಬರು ತಮ್ಮ ವಿಚಾರವನ್ನು ಹೇಳ ಹೊರಟರೆ ಅವರನ್ನೂ ತಬ್ಬಿಬ್ಬಾಗುವಂತೆ ಅರಚಿ ಬಾಯಿ ಮುಚ್ಚಿಸುತ್ತಾನೆ. ನೋಡ ನೋಡುತ್ತಲೇ ಚರ್ಚೆ ಯಂಡಕುಡುಕರ ಅಂಗಡಿಯಂತಾಗಿ ಬಿಡುತ್ತದೆ. ಹೀಗೆ ಸುಮಾರು ಒಂದು ಘಂಟೆಗಳ ಕಾಲ ನೆಡೆಯುವ ಈ ಚರ್ಚಾ ಕೂಟ ಅಥವಾ ಕಿತ್ತಾಟ, ಆ ನಿರೂಪಕ ನ ವಿಚಾರಧಾರೆಯ ಹಿನ್ನುಡಿಗಳೊಂದಿಗೇ ಮುಕ್ತಾಯಗೊಳ್ಳುತ್ತದೆ! ನೋಡುಗ ಇದು ಚರ್ಚಾ ಕೂಟವೊ, ಊರ ಸಂತೆಯೋ ಅಥವಾ ಹನಿ ಸಿಂಗ್ ನ ರ್ಯಾಪ್ ಪದ್ಯವೋ ಎಂಬ ಗೊಂದಲದಲ್ಲಿ ಮುಳುಗುತ್ತಾನೆ. ಸ್ವಲ್ಪ ಕಾಲ ಏಕಾಂತದ ಮೊರೆ ಹೋಗುತ್ತಾನೆ.



ಅದೊಂದು ಕಾಲವಿತ್ತು. ಅಲ್ಲಿ ಬರುತ್ತಿದ್ದದ್ದು ಒಂದೇ ಚಾನಲ್ಲು. ಸಂಜೆ ಟಿವಿಯ ಮುಂದೆ ಮಕ್ಕಳು ಕಾಣೆಯಾಗಿವೆ ಅಂದುಕೊಂಡರೆ ಅದು ಬಹುಪಾಲು ವಾರ್ತೆಗಳ ಸಮಯ. ಹದಿನೈದು ನಿಮಿಷದ ಅಥವಾ ಅರ್ಧ ತಾಸಿನ ಆ ಸುದ್ದಿ ಸಮಾಚಾರಗಳು ಆದಷ್ಟು ವಿಷಯಗಳನ್ನು ಸಂಕ್ಷಿಪ್ತವಾಗಿ, ಎಥಾವತ್ತಾಗಿ ಬಿತ್ತರಿಸುತ್ತಿದ್ದವು. ಒಮ್ಮೆ ವಾರ್ತೆಗಳನ್ನು ನೋಡಿದರೆ ನೋಡುಗನಿಗೆ ಮತ್ತೆಲ್ಲೋ ಅದರ ಆಧಾರವನು ಹುಡುಕುವ ಅವಶ್ಯಕತೆಯಿರಲಿಲ್ಲ. ದಿನಪತ್ರಿಕೆಗಳನ್ನು ಒಂದು ಪಕ್ಷ ಓದದೇ ಇದ್ದರೂ ಪರವಾಗಿಲ್ಲ, ಆದರೆ ದೂರದರ್ಶನದ ವಾರ್ತೆಗಳನ್ನು ಮಾತ್ರ ತಪ್ಪದೆ ನೋಡಬೇಕು. ಇಲ್ಲವಾದರೆ ದಿನವೇ ಅಪೂರ್ಣವಾದಂತಿತ್ತು ಅಂದಿನ ನೋಡುಗನಿಗೆ.

ನಂತರ ಬಂದ ಕೇಬಲ್ ಹಾಗು ಸ್ಯಾಟಲೈಟ್ ಗಳ ತಂತ್ರಜ್ಞಾನಕ್ಕೆ ಮೊಬೈಲು ಹಾಗು ಇಂಟರ್ನೆಟ್ಗಳೆಂಬ ಅದ್ಬುತ ಟಚ್ ಗಳಿಂದ ಟಿವಿ ಚಾನೆಲ್ಗಳ ಸಂಖ್ಯೆ ಕಾಡ್ಗಿಚ್ಚಿನಂತೆ ಹಬ್ಬುತ್ತದೆ. (ತೊಂಬತ್ತರ ದಶಕದಲ್ಲಿ ದೇಶದಲ್ಲಿ ದೂರದರ್ಶನವು ಆರ್ಥಿಕವಾಗಿ ಸುಧಾರಣೆ ಹೊಂದಲು ಇತರ ಖಾಸಗಿ ಚಾನೆಲ್ ಗಳಿಗೆ ಅವಕಾಶ ನೀಡಿದ್ದೂ ಒಂದು ಕಾರಣವೆಂಬುದನ್ನ ಇಲ್ಲಿ ನೆನಸಿಕೊಳ್ಳಬೇಕು) ಹೀಗೆ ಒಂದರಿದೊಂದು, ರಾಜಕೀಯ ಪಕ್ಷಗಳಿಂದ, ಉದ್ಯಮಿಯಿಂದ, ನಟ-ನಟಿಯರಿಂದ, ಇನ್ನೂ ಹುಟ್ಟದೇ ಇರುವ ಮೊಮ್ಮಕ್ಕಳಿಗೆ ಆಸ್ತಿಯನ್ನು ಮಾಡಿಡುವ ಹಾಗೆ ಉಳ್ಳವರು ಟಿವಿ ಚಾನೆಲ್ ಗಳನ್ನ ಶುರುಮಾಡಿದರು. ಕಾಲಾಂತರದಲ್ಲಿ ಇವುಗಳ ನಡುವಿನ ಪೈಪೋಟಿ ಹಿಂದೆಂದೂ ಕಂಡರಿಯದಂತೆ ಹೆಚ್ಚಿತು. ಪರಿಣಾಮವಾಗಿ ಸುದ್ದಿಗಳು ಬಣ್ಣ ಮೆತ್ತಿದ ವ್ಯಾಪಾರದ ಸರಕುಗಳಾಗ ತೊಡಗಿದವು. ಆದರೆ ಈ ಸರಕುಗಳು ಊರು, ನಾಡು, ಗಡಿಗಳಿಗನುಗುಣವಾಗಿ ತಮ್ಮ ಬಣ್ಣವನ್ನು ಬದಲಿಸತೊಡಗಿದವು!

ಅಂದು ಸೀರೆಯನ್ನು ತೊಟ್ಟು, ಮುಖದ ಮೇಲೊಂದು ಅಂದದ ಬೊಟ್ಟನ್ನು ಇಟ್ಟು, ವಾರ್ತೆಗಳನ್ನು ಓದುತ್ತಿರುವವರ ಜಾಗದಲ್ಲಿ ಇಂದು, ಯಾವುದೊ ಫ್ಯಾಷನ್ ಷೋ ಗೆ ಹೋಗುವ ಹಾದಿಯಲ್ಲಿ ದಾರಿತಪ್ಪಿ ಕ್ಯಾಮೆರಾದ ಮುಂದೆ ಬಂದಂತೆ, ತಳುಕುತ್ತ, ಬಳುಕುತ್ತ, 'ಅ'ಕಾರಗಳಿಗೆ 'ಹ'ಕಾರವನ್ನೂ, 'ಹ'ಕಾರ ಗಳಿಗೆ 'ಅ'ಕಾರವನ್ನು ಸೇರಿಸಿ ಸುದ್ದಿಗಳು 'ಇಂಪಾಗಿ' ಕೇಳಲಿ ಎಂಬಂತೆ, ತಮ್ಮ ಪರದೆಯ ಮುಂದೆ ಬರುವ ಪದಗಳನ್ನು ಅವರುಗಳು ಎಥಾವತ್ತಾಗಿ ಓದುತ್ತಾ ಹೋದರೆ ನೋಡುಗ ಸುದ್ದಿಯನ್ನು ಕೇಳಬೇಕೋ ಅಥವಾ ಅವ(ಳ)ರನ್ನು ನೋಡಬೇಕೋ ಎಂಬ ಪೇಚಾಟದಲ್ಲಿ ಸಿಲುಕಿಕೊಳ್ಳುತ್ತಾನೆ! ಅಲ್ಲದೆ ಸುದ್ದಿಗಳು ಅದೆಷ್ಟೇ ಸೂಕ್ಷ್ಮವಾಗಿದ್ದರೂ, ಕೋಮುಗಳಲ್ಲಿ ಗಲಭೆಯನ್ನು ಹೊತ್ತಿಸುವಂತಿದ್ದರೂ, 'ದಿ ನೇಷನ್ ವಾಂಟ್ಸ್ ಟು ನೋ' ಎಂದು ಅರಚಿ, ಮುಂದೊದಗುವ ಪರಿಣಾಮಗಳ ಬಗ್ಗೆ ಕ್ಯಾರೇ ಎನ್ನದ ಇವರಿಗೆ ಪಕ್ವವಾಗದ ಜನಪರ ಕಾಳಜಿ ಎಷ್ಟಿದೆ ಎಂದು ತಿಳಿಯುತ್ತದೆ. ಒಂದು ಚರ್ಚೆ ಎಂದರೆ ಪ್ರತಿಯೊಬ್ಬ ಪ್ಯಾನಾಲಿಸ್ಟಿಗೂ ಸಮಾನ ಅವಕಾಶವನ್ನು ಕೊಟ್ಟು, ಅವರ ವಿಚಾರಧಾರೆಯನ್ನು ಸಾಮಾನ್ಯನಿಗೂ ತಿಳಿಯುವಂತೆ ಹೇಳಬೇಕು. ಆದರೆ ಇಂದು ನಾನೇ ದೊರೆ ಎಂಬಂತೆ ಪ್ಯಾನಾಲಿಸ್ಟ್ ಗಳೇ ತಬ್ಬಿಬ್ಬಾಗುವಂತ ದುಬಾರಿ ಇಂಗ್ಲಿಷ್ ಪದಗಳನ್ನು ಬಳಸಿ ಮನೆಯೊಳಗಿನ ಹುಲಿಯಂತೆ ಅರಚಿ, ನಟಿಸಿದರೆ ಏನು ಬಂತು ಸ್ವಾಮಿ? ಅಷ್ಟಾಗ್ಯೂ ತನ್ನ ನಿಲುವನ್ನೇ ಮುಂದಿಡುವುದೇ ಅಂತಿಮ ಗುರಿಯಾದರೆ ಅದು ಚರ್ಚಾಕೂಟಕ್ಕೆ ಅವಮಾನ ಮೆತ್ತಿದಂತಾಗುವುದಿಲ್ಲವೇ? ನಿರೂಪಕ ಗಳೇ ತಮ್ಮ ವಿಚಾರಗಳು ಸರಿ ಎಂದು ತೋರ್ಪಡಿಸುವುದಾದರೆ ಅದಕ್ಕೆ ಚರ್ಚಾಕೂಟವೇ ಏತಕ್ಕೆ ಬೇಕು? ಹೀಗೆ ಕೇವಲ ತೋರ್ಪಡಿಕೆಯೇ ಹೆಚ್ಚಾಗಿಸಿ ನೋಡುಗನ ಸಾಮನ್ಯ ಅರಿವಿಗೆ ಬಾರದಂತಾಗಿವೆ ಇಂದಿನ ಹೆಚ್ಚಿನ ಸುದ್ದಿ ವಾಹಿನಿಗಳು.

ಇಂದು ನಮ್ಮ ದೇಶವೊಂದರಲ್ಲೇ ಸುಮಾರು ಒಂಬೈನೂರು ಟಿವಿ ಚಾನೆಲ್ ಗಳಿವೆ. ಅಂದರೆ ವೀಕ್ಷಕ ಪ್ರತಿ ಎರಡು ನಿಮಿಷಕೊಂದರಂತೆ ಒಂದೊಂದು ಚಾನೆಲ್ ಗಳನ್ನು ಬದಲಿಸುತ್ತಾ ದಿನಪೂರ್ತಿ ನೋಡಿದರೂ ಮಿಕ್ಕಿ ಉಳಿಯುವಷ್ಟು ಚಾನೆಲ್ ಗಳು! ಇಷ್ಟು ದೊಡ್ಡ ಚಾನೆಲ್ ಗಳ ಸಾಗರದಲ್ಲಿ ಪ್ರತಿಯೊಂದು ಚಾನೆಲ್ಗಳು ಪೈಪೋಟಿ ಗೆ ಬಿದ್ದು ನಾ ಮುಂದು, ತಾ ಮುಂದು ಎನ್ನುತಾ ಸುದ್ದಿಯನ್ನು ತಿರುಚಿ, ಮುರುಚಿ, 'ಅಳಿಯ ಅಲ್ಲ, ಮಗಳ ಗಂಡನಂತೆ' ಮಾಡಿ, ಸಿಕ್ಕಿದ್ದನ್ನೆಲ್ಲ ಹಾಗೆಯೇ ವಾಕರಿಸಿ, ಗಬ್ಬೆಬ್ಬಿಸಿ, ಕಿತ್ತಾಡಿಸಿ, ಕೊನೆಗೆ TRP ಎಂಬುವ ಮಹಾ ಅಣೆಕಟ್ಟೆಯ ಮಟ್ಟ ಎಷ್ಟಿದೆ ಎಂದು ಪಿಳಿ-ಪಿಳಿ ಕಣ್ಣನ್ನು ಬಿಟ್ಟು ನೋಡುವುದು ಸಾಮನ್ಯದ ಸಂಗತಿ. ಪ್ರತಿಶತ 80 ರಷ್ಟು ಹಳ್ಳಿಗಳಿರುವ ಒಂದು ದೇಶದಲ್ಲಿ, ಅಲ್ಪ ಸಮಯವನ್ನಷ್ಟೇ ವಾರ್ತೆಗಳನ್ನು ನೋಡಲು ವ್ಯಹಿಸಬಹುದಾದ ಸಾಮನ್ಯ ಜನಗಳ ಮುಂದೆ, ಇಷ್ಟೆಲ್ಲಾ ಸರ್ಕಸ್ ಗಳ ತೋರ್ಪಡಿಕೆಗೆ ಈ TRP ಎಂಬುವ ನಶೆಯೇ ಹೆಚ್ಚಾಗಿ ಕಾರಣವಾಗಿರುತ್ತದೆ. TRP (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಅಂದರೆ ದೃಶ್ಯಮಾಧ್ಯಮದ ಒಂದು ಕಾರ್ಯಕ್ರಮವನ್ನು ವೀಕ್ಷಿಸುವ ಒಟ್ಟು ಜನರ ಸಂಖ್ಯೆಯನ್ನು ನಿರ್ಧರಿಸುವ ವಿಧಾನ. ಇದಕ್ಕಾಗಿ ಎಲೆಕ್ಟ್ರಾನಿಕ್ಸ್ ಸಾಧನವೊಂದನ್ನು ಪ್ರದೇಶಗಳಿಗನುಗುಣವಾಗಿ ಹಲವಾರು ಮನೆಗಳಲ್ಲಿ ಅಳವಡಿಸಲಾಗಿರುತ್ತದೆ. ಇವುಗಳ ಮೂಲಕ ಆ ಮನೆಯಲ್ಲಿ ಯಾವ ಕಾರ್ಯಕ್ರಮವನ್ನು ಎಷ್ಟು ಬಾರಿಗೆ, ಯಾವ ಪ್ರಮಾಣದಲ್ಲಿ ವೀಕ್ಷಿಸಲಾಗುತ್ತದೆ ಎಂದು ಅಂದಾಜಿಸಲಾಗುತ್ತದೆ. ಹೀಗೆ ಹಲವಾರು ಪ್ರದೇಶಗಳ ಸರಾಸರಿ ಅನುಪಾತದ ಮೇಲೆ ಒಂದು ಕಾರ್ಯಕ್ರಮದ TRP ನಿಗದಿತವಾಗುತ್ತದೆ. ಒಟ್ಟಾರೆ, ಹೆಚ್ಚಿನ TRP ಸಿಗಲು ಹೆಚ್ಚಿನ ವೀಕ್ಷಣೆ ಅಗತ್ಯ. ಹೆಚ್ಚಿನ ವೀಕ್ಷಣೆಗೆ ಹೆಚ್ಚಿನ ವೀಕ್ಷಕರು ಹಾಗಾಗಿ ಹೆಚ್ಚಿನ ವೀಕ್ಷಕರ ಸೆಳೆಯುವಿಕೆಯೇ ಕೋಟಿ ಸುರಿದು ಕಟ್ಟುವ ಅಷ್ಟೂ ಟಿವಿ ಚಾನೆಲ್ ಗಳ ಬಾಗಶಃ ಗುರಿಯಾಗಿರುತ್ತದೆ.

ಹಾಗಾದರೆ TRP ಎಂಬುದರ ಅವಶ್ಯಕತೆ ನಿಜವಾಗಿಯೂ ನಮಗೆ ಎಷ್ಟರ ಮಟ್ಟಿಗಿದೆ? TRP ಎಂಬೊಂದರ ಅಗೋಚರ ಅಂಖ್ಯೆಯ ಸ್ಪರ್ಧೆಗೆ ಬೀಳುವ ಒಂದೇ ಕಾರಣಕ್ಕೆ ಇಂದು ಹೆಚ್ಚಾಗಿ ವಿಷಯಗಳು ಮಾರ್ಪಾಡಾಗುತ್ತಿವೆ. ಸುದ್ದಿ ವಾಚಕರು ಕ್ಯಾಮೆರಾದ ಮುಂದೆ ನಟರಾಗಿ, ಅಧಿಕಾರಿಗಳಾಗಿ, ನ್ಯಾಯಾಧೀಶರೂ ಆಗುತ್ತಿದ್ದಾರೆ! ಒಂದು ಪಕ್ಷ TRP ಎಂಬುದರ ಕಲ್ಪನೆಯನ್ನೇ ಈ ವ್ಯವಸ್ಥೆಯಿಂದ ತೆಗೆದೊಗೆದರೆ ಚಾನೆಲ್ ಗಳು ತೆಪ್ಪಗೆ ನೈತಿಕತೆಯ ಚೌಕಟ್ಟಿನ ಒಳಗೆ ತಮ್ಮ ಕಾರ್ಯವನ್ನು ನಿರ್ವಹಿಸಬಹುದೆ? ತಾನು ಇನ್ನೊಬ್ಬನಿಗಿಂತ ಹಿಂದಿದ್ದೇನೋ, ಮುಂದಿರುವೆನೋ ಎಂಬುದನ್ನು ಅರಿಯಲೇ ಸಾಧ್ಯವಾಗದಿದ್ದರೆ ಸುದ್ದಿಗಳು ಸರಕಾಗುವುದನ್ನು ತಪ್ಪಿಸಬಹುದಲ್ಲವೇ? ಅಷ್ಟಾಗ್ಯೂ ಭಾರತದಂತ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ನೋಡುಗ TRPಯ ಆಧಾರದ ಮೇಲೆ ಯಾವ ಸುದ್ದಿ ಸಮಾಚಾರಗಳನ್ನು ನೋಡಿಯಾನು? ವಿಷಯಗಳು ಒಳ್ಳೆಯದಾಗಿದ್ದರೆ ನೋಡುಗ ಎಂದಿಗೂ ಒಲ್ಲೆ ಎಂದಾನು.

ಆದ ಮಾತ್ರಕ್ಕೆ ದೃಶ್ಯ ಮಾಧ್ಯಮಗಳ ಕಾರ್ಯ ಎಲ್ಲ ಬಗೆಯಲ್ಲೂ ಘಾತಕವಾಗಿದೆ ಹಾಗು ಕೇವಲ TRP ಗಾಗಿಯೇ ಇವೆ ಎಂದು ಹೇಳಲಾಗುವುದಿಲ್ಲ. ದೇಶದ ಅತಿ ಪ್ರಭಾವಿ ವ್ಯಕ್ತಿಗಳಿಂದ ಹಿಡಿದು ಒಬ್ಬ ಸಾಮನ್ಯನನ್ನೂ ಒಂದೇ ದೃಷ್ಟಿಯಿಂದ ನೋಡುವ ಮಾಧ್ಯಮಗಳೂ ಇಂದು ಸಾಕಷ್ಟಿವೆ. ಆದರೆ ಸೀದಾ-ಸಾದಾ ಸುದ್ದಿಗಳಿಗಿಂತ ಕೇವಲ ರಂಜನೀಯ ಸುದ್ದಿಗಳನ್ನೇ ಇಷ್ಟ ಪಟ್ಟು ನೋಡುವ ವೀಕ್ಷಕರಿಗೆ ಇಂತಹ ಮಾಧ್ಯಮಗಳು ರಸದೌತಣವನ್ನು ನೀಡಲಾಗುತ್ತಿಲ್ಲ. ಪರಿಣಾಮವಾಗಿ ಮುಂದೊಂದು ದಿನ ಇವುಗಳು ಮರೆಯಾಗಲ್ಪಡುತ್ತಿರುವುದು ಶೋಚನೀಯ ವಿಷಯ. ವಿಷಯವನ್ನು ವಿಶೇಷಣವಾಗಿಸದೆ ನೆಡೆಯುತ್ತಿರುವ ದೂರದರ್ಶನದ ನೋಡುಗರು ಇಂದು ಎಷ್ಟಿದ್ದಾರೆ ಹೇಳಿ?

ದೃಶ್ಯ ಮಾಧ್ಯಮಗಳ ಮೂಲಕ ಜನರನ್ನು ತಲುಪುವ ವಿಚಾರಗಳು ಪಕ್ಷಾತೀತವಾಗಿರದೆ ವಿಚಾರಪೂರಿತವಾಗಿರಬೇಕು. ದಿನವೆಲ್ಲ ಯಾರೋ ಒಬ್ಬರು ಅನ್ನುವ ಬಾಯಿಮಾತಿನ ವಿಚಾರವನ್ನೇ ನಿಜವೆಂದು ನಂಬುವ ಸಾಮನ್ಯ ಜನರ ಆಧಾರ ಇತ್ತೀಚೆಗೆ ಹೆಚ್ಚಾಗಿ ಟಿವಿ ಚಾನೆಲ್ ಗಳೇ ಆಗಿರುತ್ತದೆ. ಇವುಗಳಲ್ಲಿ ಬರುವ ವಿಚಾರಗಳ ಸತ್ಯಾಸತ್ಯತೆಯನ್ನು ಅರಿಯಲು ಬೇರ್ಯಾವ ಮಾರ್ಗವೂ ಹೆಚ್ಚಾಗಿ ಸಾಮಾನ್ಯನಿಗೆ ಇರುವುದಿಲ್ಲ. ಅದೇನೇ ಇದ್ದರೂ ಪುಸ್ತಕವನ್ನು ಎದೆಗವುಚಿಕೊಂಡು ಬಾಯಿಪಾಠ ಮಾಡಿ ಪರೀಕ್ಷೆಯಲ್ಲಿ ಉತೀರ್ಣರಾಗಲು ಬಯಸುವ ವಿದ್ಯಾರ್ಥಿಗಳಂತೆ. ಇಂದು ಸುದ್ದಿವಾಹಿನಿಗಳೆಂಬ ಪುಸ್ತಕಗಳ ಶುದ್ದಿ ಕಾರ್ಯ ಶುರುವಾಗಬೇಕಿದೆ. ನೋಡುಗನನನ್ನು ಕೇವಲ ಆಸಕ್ತದಾಯಕನಾಗಿ ಮಾಡುವುದಲ್ಲದೆ ವಿಚಾರಭರಿತನಾಗೂ ಮಾಡುವ ಕಾರ್ಯ ಇಂದು ಸುದ್ದಿ ವಾಹಿನಿಗಳಿಂದ ಆಗಬೇಕಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಅಭಿವೃದ್ಧಿ ಹೊಂದಿದ ಆರೋಗ್ಯಕರ ಚಿತ್ತಗಳ ಅವಶ್ಯಕತೆ ಹೆಚ್ಚಿದೆ. ಅದಕ್ಕೆ ಪೂರಕವಾಗಿ ನಮ್ಮ ಮಾಧ್ಯಮಗಳು ಕೆಲಸಮಾಡಬೇಕಿದೆ. ಪಾರದರ್ಶಕ ಪ್ರಸಾರದ ಮುಖೇನ ಸಮಾಜದ ಅಭ್ಯುದಯವೂ ಇದರಿಂದ ಸಾರ್ಥಕವಾಗಬೇಕಿದೆ.