Friday, February 8, 2019

ಮೆಹ್ತಾ Killed ಮೆಹ್ತಾ! - Part 3

Continued..


ಹಣೆಗೆ ಗುರಿಯಿಟ್ಟು ಹೊಡೆದ ಆ ಹೊಡೆತ ಕ್ಷಣಮಾತ್ರದಲ್ಲೇ ದೇಹವನ್ನು ಹೆಣವನನ್ನಾಗಿಸುತ್ತದೆ! ಆತನ ಕೈ ಮಾತ್ರ ಒಂದೇ ಸಮನೆ ನಡುಗಹತ್ತುತ್ತದೆ.

ಆ ದಿನ ಕಂಪನಿಯ ಪ್ರತಿಯೊಬ್ಬರನ್ನೂ ಆಫೀಸಿನ ಒಳಗೆಯೇ ಇರುವಂತೆ ಸೂಚಿಸಲಾಗಿದ್ದಿತು. ಸತ್ತು ಬಿದ್ದಿದ್ದ ಭುಜಂಗ್ ರಾವಿನ ಹೆಣವನ್ನು ತೆಗೆದ ನಂತರ ಪೊಲೀಸರು ದೀಪಕ್ ಮೆಹ್ತಾನನ್ನೂ ಅರೆಸ್ಟ್ ಮಾಡಿ ಕರೆದೊಯ್ದರು. ಆ ವಿಚಿತ್ರ ಘಟನೆಯನ್ನು ಕಂಡು ನಾಲ್ಕೈದು ಜನರು ಮೂರ್ಛೆ ತಪ್ಪಿ ಆಸ್ಪತ್ರೆ ತಲುಪಿದ್ದೂ ಉಂಟು! ನಂತರ ಒಬ್ಬೊಬ್ಬರನ್ನೇ ಕರೆದು ಇನ್ವೆಸ್ಟಿಗೇಷನ್ ಶುರುಮಾಡಿದ ಪೊಲೀಸರು ಅದನ್ನು ಮುಗಿಸುವಷ್ಟರಲ್ಲಿ ರಾತ್ರಿ ಹತ್ತಾಗಿದ್ದಿತು. ಆಗ ತಿಳಿದ ಮಹತ್ವದ ವಿಷಯವೇನೆಂದರೆ ಕಳೆದ ಎರಡು ವಾರಗಳಿಂದ ಸಿಸಿಟಿವಿ ಕ್ಯಾಮರಗಳೆಲ್ಲವೂ ಆಫ್ ಆಗಿದ್ದೂ ವಿಷಯವನ್ನು ಬುಜಂಗ್ರಾವಿನ ಗಮನಕ್ಕೆ ಹಲವು ಬಾರಿ ತಂದರೂ ಆತ ಬೇಕಂತಲೇ ಅದನ್ನು ಸರಿಪಡಿಸದಿದ್ದದು.

ಘಟನೆ ನೆಡೆದು ಎರಡು ದಿನಗಳ ನಂತರ ಜಡ್ಜಿನ ಆದೇಶದಂತೆ ಕಂಪನಿಯ ಎಲ್ಲರನ್ನೂ ಮತ್ತೊಂದು ಸುತ್ತಿನ ವಿಚಾರಣೆಗೆ ಕೋರ್ಟಿಗೆ ಬರುವಂತೆ ಹೇಳಲಾಗುತ್ತದೆ. ಹಲವಾರು ಸಾಕ್ಷಿಗಳನ್ನು ನ್ಯಾಯಮೂರ್ತಿಗಳ ಮುಂದೆಯೇ ವಿಚಾರಿಸಬೇಕೆಂದು ಆಜ್ಞೆಯಾಗಿರುತ್ತದೆ. ಜೀವ ಹೋದರೂ ನಾ ಕೋರ್ಟ್ ಗೆ ಬರೆನು ಎಂದು ಕೂತ ಮಹೇಶನನ್ನು ಮಕ್ಕಳನ್ನು ಮೊದಲ ಬಾರಿಗೆ ಶಾಲೆಗೆ ಸೇರಿಸುವ ಹಾಗೆ ಅಜಯ್ ಕಾಡಿ ಬೇಡಿ ಕರೆತಂದಿದ್ದ . ವಿಚಾರಣೆ ಶುರುವಾಗಿ ಬಹಳ ಸಮಯ ಕಳೆದರೂ ಯಾರೊಬ್ಬರಿಗೂ ಕೊಲೆಯ ಹಾಗು ಸಾವಿನ ಹಿಂದಿದ್ದ ನಿಖರ ಉತ್ತರ ತಿಳಿಯಲಿಲ್ಲ. ಅತ್ತ ಕಡೆ ಮೆಹ್ತಾ ಒಂದೂ ಪದವನ್ನು ಮಾತನಾಡದೆ ಕಲ್ಲುಗುಂಡಿನಂತೆ ನಿಂತಿದ್ದ. ಅಲ್ಲದೆ ಆತ ಮಾನವನೋ ಅಥವ ಸತ್ತ ಹೆಣಕ್ಕೆ ಆತ್ಮ ಸೇರಿ ನೆಡೆಸುತ್ತಿರುವ ಕೃತ್ಯವೋ ಎಂಬ ಭಯದೊಂದಿಗೆ ಯಾರೊಬ್ಬರೂ ಅವನ ವಿರುದ್ಧವಾಗಿ ಒಂದಿನಿತೂ ಕೆಟ್ಟದಾಗಿ ಹೇಳಿಕೆಯನ್ನು ಕೊಡಲಿಲ್ಲ. ಹತ್ತಿರವೂ ಸುಳಿಯಲಿಲ್ಲ. 'ತುಂಬಾ ಒಳ್ಳೆಯ ವ್ಯಕ್ತಿ', 'ಯಾರಿಗೂ ನಿಂದಿಸುತ್ತಿರಲಿಲ್ಲ', 'ಎಲ್ಲರನ್ನೂ ಸಮನಾಗಿ ಕಾಣುತ್ತಿದ್ದರು' ಎಂಬ ಗೌರವ ಸೂಚಕಗಳೇ ಎಲ್ಲರ ಹೇಳಿಕೆಗಳಲ್ಲೂ!

ತನ್ನ ಸರದಿ ಬರುತ್ತದೆ ಎಂದು ಕಾದು- ಕಾದು ಹೈರಾಣಾದ ಅಜಯ್ ಯಾವಾಗ ತನ್ನ ಹೆಸರನ್ನು ಕರೆಯಲಿಲ್ಲವೋ ಆಗ ಕೊಂಚ ಕುಪಿತಗೊಂಡವಂತೆ ಕೂಡಲೇ ಎದ್ದು ನಿಂತು ಅರಚಿತ.

'Would you please stop this Nonsense?!!'

ಗುಜುಗುಜುಗುಡುತ್ತಿದ್ದ ಸದ್ದು ಒಮ್ಮೆಲೇ ತಣ್ಣಗಾಗುತ್ತದೆ. ತಲೆತಗ್ಗಿಸಿಕೊಂಡು ನಿಂತಿದ್ದ ಮೆಹ್ತಾ ಕೂಡ ಅಜಯ್ ನನ್ನು ಒಮ್ಮೆ ನೋಡಿದ.

'ರೀ ಮಿಸ್ಟರ್, ಯಾರ್ರೀ ನೀವು? ನಿಮಗೇನಾದ್ರೂ ಹೇಳೋದಿದ್ರೆ ಕಟಕಟೆಯ ಮುಂದೆ ಬಂದು ಹೇಳಿ. Its not a Fish Market!' ಎಂದ ಜಡ್ಜಿನ ಮಾತಿಗೆ ಉತ್ತರಿಸುವಂತೆ, ಸಿಟ್ಟಿನ ಚಹರೆಯಲ್ಲಿಯೇ ಕಟಕಟೆಗೆ ಬಂದು ನಿಂತ ಅಜಯ್ ಕೊಂಚ ಹೊತ್ತು ಸುಮ್ಮನಾಗಿ ದೀಪಕ್ ಮೆಹ್ತಾನನ್ನೂ ಹಾಗು ಕೆಳಗೆ ನಿಂತಿದ್ದ ಸಬ್ ಇನ್ಸ್ಪೆಕ್ಟರ್ ಒಬ್ಬನನ್ನು ನೋಡಿದ.

'Your Honor, ನಾನು ಹೀಗ ಹೇಳಹೊರಟಿರುವ ವಿಷಯದ ಬಗ್ಗೆ ನನ್ನ ಬಳಿ ಸಂಪೂರ್ಣ ಸಾಕ್ಷ್ಯಾಧಾರಗಳಿವೆ ಹಾಗು ಯಾವುದನ್ನೂ ಊಹಿಸಿಕೊಂಡಾಗಲಿ, ಕಲ್ಪಿಸಿಕೊಂಡಾಗಲಿ ನಾನು ಹೇಳುತ್ತಿಲ್ಲ' ಎನ್ನುತ್ತಾನೆ.

'For your kind Information, ಅಂದು ಕಂಪನಿಯ ಮೇಲಿಂದ ಬಿದ್ದು ಸತ್ತದ್ದು ಬೇರ್ಯಾರು ಅಲ್ಲ ಅದು ಬುಜಂಗ್ ರಾವಿನ ಒಬ್ಬನೇ ಮಗ ನಿಖಿಲ್ ರಾವ್!!’’

ಕೋರ್ಟ್ನ ತುಂಬಾ ಮತ್ತೊಮೆ ಗುಸು ಗುಸು ಶುರುವಾಯಿತು. ಮಹೇಶ ತನ್ನ ಕಣ್ಣುಗಳನ್ನು ಸಾಧ್ಯವಾದಷ್ಟು ಹಿಗ್ಗಿಸಿ ಅಜಯ್ ನನ್ನೇ ನೋಡುತ್ತಿದ್ದ. ಮಗುವೊಂದಕ್ಕೆ ಮೊದಲ ಬಾರಿಗೆ ಜಾದೂವನ್ನು ತೋರಿಸಿದಂತೆ.

‘ಅಲ್ಲದೆ ಅದು ಯಾವುದೇ ಬಗೆಯ ಆತ್ಮಹತ್ಯೆಯಾಗಲಿ ಎಂತಹದ್ದು ಇಲ್ಲ! That was a pure Murder!’

'ಸತ್ತ್ತಿದ್ದು ದೀಪಕ್ ಮೆಹ್ತಾ ಎಂಬ ಪೊಲೀಸ್ ರಿಪೋರ್ಟ್ ಇದಿಯಲ್ರಿ'

'ಹೌದು ಸಾರ್, ಪೊಲೀಸ್ ರಿಪೋರ್ಟ್ ಹೇಳಿದ್ದ ಮಾತ್ರಕ್ಕೆ ಸತ್ಯ ಸುಳ್ಳಾಗೋದಿಲ್ಲ'

ಜಡ್ಜ್ 'ಆರ್ಡರ್ .. ಆರ್ಡರ್ ' ಎಂದ ನಂತರ ಅಜಯ್ ಮುಂದುವರೆಸಿ ತಾನು ಆ ದಿನ ರಾತ್ರಿ ಚೇರಿನ ಮೇಲೆ ಮಲಗಿ ತಡವಾದರಿಂದ ಆಫೀಸಿನಲ್ಲಿಯೇ ಕಳೆಯಬೇಕಾಗಿ ಬಂದು, ಹೊರಡುವ ಸಮಯಕ್ಕೆ ಆಕೃತಿಯೊಂದು ಭುಜಂಗರಾವಿನ ಕೋಣೆಯ ಒಳಗೆ ವಿಚಿತ್ರವಾಗಿ ಸದ್ದನು ಮಾತನಾಡುತ್ತಾ ಏನನ್ನೋ ಮಾಡುತ್ತಿರುವುದ ಕಾಣುತ್ತಾನೆಂದು ಹೇಳುತ್ತಾನೆ. ಮಾರನೇ ದಿನ ಅದು ಏನೆಂದು ತಿಳಿಯಲು ಇಂದೂ ಆ ಆಕೃತಿ ಬರಬಹುದೆಂಬ ಊಹೆಯ ಮೇರೆಗೆ ಒಂದೆರೆಡು ಸಣ್ಣ ಕ್ಯಾಮೆರಾ ಹಾಗು ಮೈಕ್ರೋಫೋನನ್ನು ಭುಜಂಗರಾವ್ ಬರುವ ಮೊದಲೇ ಆತನ ಕ್ಯಾಬಿನಲ್ಲಿ ಯಾರಿಗೂ ಕಾಣಿಸದಂತೆ ಅಳವಡಿಸುತ್ತಾನೆ.

ಕೆಲದಿನಗಳ ಹಿಂದೆ ಅವನ್ನು ತಂದು ತನ್ನ ಲ್ಯಾಪ್ಟಾಪ್ ಗೆ ಹಾಕಿ ನೋಡಿದಾಗ…..

ಆ ದಿನ ಬೆಳಗ್ಗೆ ಭುಜಂಗರಾವ್ ಆಫೀಸಿಗೆ ಬಂದ ಸ್ವಲ್ಪ ಸಮಯದಲ್ಲೆ ದೀಪಕ್ ಮೆಹ್ತಾ ಕೂಡ ಆಫೀಸಿಗೆ ಬರುತ್ತಾರೆ. ಆದರೆ ಬಂದ ದೀಪಕ್ ಕೂಡಲೇ ತನ್ನ ಮುಖದ ಮೇಲಿದ್ದ ಪೌಡರು ಮೆತ್ತಿದ್ದ ಚರ್ಮದ ಮುಖವಾಡವನ್ನು ತೆಗೆದು 'ಡ್ಯಾಡ್, ನನ್ನ್ ಕೈಯಲ್ಲಿ ಆಗಲ್ಲ.. ಇನ್ನು ಎಷ್ಟ್ ದಿನ ಅಂತ ಇದೆಲ್ಲ. ಬೇಗ ಅದೇನ್ ಡಾಕ್ಯುಮೆಂಟ್ಸ್ ಇದ್ದವೊ ಎಲ್ಲ ಮುಗ್ಸು..' ಎಂದು ಹೇಳಿದಾಗ ಭುಜಂಗ ರಾವ್, ದೀಪಕ್ ಮೆಹ್ತಾ ಫಾರಿನ್ ನಿಂದ ಬರಲು ಇನ್ನೂ ಸ್ವಲ್ಪ ದಿನ ಆಗುತ್ತೆ, ಬಂದ ದಿನವೇ ಆತನನ್ನು ಮುಗಿಸಬೇಕೆಂದು ಹೇಳುತ್ತಾನೆ. ನಂತರ ಆತನ ಹೆಣವನ್ನು ತಂದು ಆದರ ಥಂಬ್ ಇಂಪ್ರೆಷನ್ ಎಲ್ಲವನ್ನು ತೆಗೆದುಕೊಂಡು ಇಡೀ ಕಂಪನಿಯ ಮಾಲೀಕತ್ವವನ್ನು ತಮ್ಮದಾಗಿಸಿಕೊಂಡು ಆ ಹೆಣವನ್ನು ಆಫೀಸಿನ ಮೇಲ್ಚಾವಣಿಯಿಂದ ದಬ್ಬುವುದಾಗಿಯೂ ಹಾಗು ಅದು ಆತ್ಮಹತ್ಯೆ ಎಂಬುವಂತೆ ತೋರಿಸುವುದಾಗಿಯೂ ಸಂಚನ್ನು ರೂಪಿಸುತ್ತಾರೆ.

ಇತ್ತಕಡೆ ತಾನು ಹೇಳಿದ ದಿನಕ್ಕಿಂತ ಮೊದಲೇ ಬಂದ ದೀಪಕ್ ಹೋಟೆಲೊಂದರಲ್ಲಿ ಉಳಿದುಕೊಳ್ಳುತ್ತಾರೆ. ದಿನ ರಾತ್ರಿ ಆಫೀಸಿಗೆ ಬರುವುದು ಹಾಗು ದೀಪಕ್ ಮೆಹ್ತಾನ ಅಕೌಂಟ್ನಿಂದ Purchase Order ಗಳನ್ನು ಅನುಮೋದಿಸಿ ಅವನ್ನು ಮಾರಿ ಬಂದ ಹಣವನ್ನೂ ಕಂಪನಿಯ ಉದ್ಯೋಗಿಗಳಿಗೇ ಬೋನಸ್ ರೂಪದಲ್ಲಿ ನೀಡತೊಡಗುತ್ತಾರೆ. ನಿಖಿಲ್ ಹೇಗೆ ಸತ್ತನೋ I Dont know. ಅಂದು ನಿಖಿಲ್ ನ ಹೆಣ ಕೆಳಗ್ಗೆ ಬಿದ್ದ ಸಮಯಕ್ಕೆ ಸರಿಯಾಗಿ ಆಫೀಸಿಗೆ ಬಂದ ಬುಜಂಗ್ ರಾವ್ ಅದು ತನ್ನ ಸ್ವಂತ ಮಗನ ಹೆಣವೆಂಬುದನ್ನೂ ಅರಿಯದೇ ಪೊಲೀಸರನ್ನು ಒಳ ಕರೆದುಕೊಂಡು ಯಾವುದೇ ಇನ್ವೆಸ್ಟಿಗೇಷನ್ ಇಲ್ಲದೆಯೆ ಸ್ಯುಸೈಡ್ ಕೇಸಿನಲ್ಲಿ ವಿಚಾರಣೆಯನ್ನು ಮುಗಿಸಬೇಕೆಂದು ಒಪ್ಪಿಸುತ್ತಾನೆ. ಭುಜಂಗ್ ರಾವ್ ಹಾಗು ಮಗ ನಿಖಿಲ್ ಕೊಲೆಯ ಸಂಚನ್ನು ರೂಪಿಸಿದರ ಬಗ್ಗೆ ದೀಪಕ್ ಮೆಹ್ತಾಗೆ ಹೇಗೆ ತಿಳಿಯಿತೋ ನಾ ಕಾಣೆ. ಅಲ್ಲದೆ ದೀಪಕ್ ಮೆಹ್ತಾ ಕೂಡ ದಿನ ರಾತ್ರಿ ಬುಜಂಗ್ ರಾವಿನ ಚಿನ್ನದ ಅಂಗಡಿಗಳಿಗೆ ಮಾರುವೇಷದಲ್ಲಿ ತೆರಳಿ ಪ್ರತಿದಿನ ಚೂರು ಚೂರೇ ಚಿನ್ನದ ಪುಡಿಯಗಳನ್ನು ಕದ್ದು ಅದರಿಂದ ಗುಂಡೊಂದನ್ನು ತಯಾರಿಸಿದನ್ನು ತಾನು ಸ್ವತಃ ಅವರನ್ನು ಹಿಂಬಾಲಿಸಿ ರೆಕಾರ್ಡ್ ಮಾಡಿದ್ದಾಗಿಯೂ ಹಾಗು ನಿನ್ನೆ ಭುಜಂಗರಾವಿನ ತಲೆಯನ್ನೊಕ್ಕಿದ್ದು ಅದೇ ಚಿನ್ನದ ಗುಂಡೆಂದು ಹೇಳಿ ಅಜಯ್ ತನ್ನ ಬಳಿ ಇದ್ದ ಎಲ್ಲ ವಿಡಿಯೋ ಕ್ಲಿಪ್ ಗಳನ್ನು, ಇತರೆ ಸಾಕ್ಷಾಧಾರಗಳನ್ನು ಕೋರ್ಟಿನಲ್ಲಿ ಹಾಜರುಪಡಿಸುತ್ತಾನೆ.

ಅಲ್ಲಿಯವರೆಗೂ ಸುಮ್ಮನೆ ನಿಂತಿದ್ದ ದೀಪಕ್ ಮೆಹ್ತಾ ಕೂಡಲೇ ಕಟಕಟನೆ ಹಲ್ಲನ್ನು ಕಡಿಯ ಹತ್ತುತ್ತಾನೆ. ಚೂರಿ ಮಸೆಯುವಂತಹ ಆ ಭಯಂಕರ ಸದ್ದನ್ನು ಕೇಳಿದ ಜನರು ಅಕ್ಷರಸಹ ಕಲ್ಲಿನ ವಿಗ್ರಹವಾಗುತ್ತಾರೆ.

'Yes….!! ನಾನೇ ಆ ಬುಜಂಗನನ್ನು ಸಾಯಿಸಿದ್ದು !!' ಎಂದು ಭಯಂಕರವಾಗಿ ಚೀರಿದಾಗ ಜಡ್ಜ್ ಕೂಡ 'ಆರ್ಡರ್ .. ಆರ್ಡರ್' ಎಂದೇಳಿ ಆತನನ್ನು ಶಾಂತವಾಗಿಸುವುದನ್ನು ಮರೆತರು. ಇಡೀ ಕೋರ್ಟಿನ ಕೋಣೆಯೇ ಪ್ರತದ್ವನಿಸುವಂತಿದ್ದ ಆ ಸದ್ದನ್ನು ಕೇಳಿ ಹೊರಗಡೆಯಿದ್ದ ಜನರೂ ಒಳಬಂದು ಜಮಾವಣೆಗೊಳ್ಳತೊಡಗಿದರು.

'ಬ್ಲಡಿ ಭುಜಂಗ .. ನಮ್ಮ ಮನೆ ಅನ್ನ ತಿಂದು ನಮ್ಮ ಮನೆಗೇ ದ್ರೋಹ ಬಗೆದ Scoundrel.. ಇಪ್ಪತ್ತು ವರ್ಷದ ಹಿಂದೆ ನಾನು ಓದಲು ಹೊರದೇಶಕ್ಕೆ ಹೋದಾಗ ನಮ್ಮ ಮನೆಯ ಮ್ಯಾನೇಜರ್ ಆಗಿದ್ದ ಈತ ಸಿಗ್ನೇಚರ್ ಫೋರ್ಜರಿ ಮಾಡಿ ನಮ್ಮ ಮನೆ, ತೋಟ ಹಾಗು ಕಂಪನಿಯನ್ನೂ ತನ್ನ ಹೆಸರಿಗೆ ಮಾಡಿಕೊಂಡು, ಅಪ್ಪನನ್ನು ಕೊಂದು ಅಮ್ಮನಿಗೂ ಚೂರಿ ಹಾಕಿದ.. ಆ ನೋವಿನಲ್ಲೂ ಅಮ್ಮ ಮೈಕ್ ರೆಕಾರ್ಡರ್ ಅನ್ನು ಆನ್ ಮಾಡಿ ಎಲ್ಲ ವಿಷಯವನ್ನು ರೆಕಾರ್ಡ್ ಮಾಡಿ ಆ ಕ್ಯಾಸೆಟ್ ಅನ್ನು ಬಚ್ಚಿಟ್ಟಳು. ಆಕೆಯನ್ನು ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಿದರೂ ಅದು ಪ್ರಯೋಜನವಾಗದೇ ಮಾರ್ಗ ಮಧ್ಯದಲ್ಲಿಯೇ ಆಕೆ ಕೊನೆಯುಸಿರೆಳೆದಳು. ಯಾರೊಬ್ಬರಿಗೂ ಆ ಕೊಲೆಯನ್ನು ಮಾಡಿದ್ದು ಭುಜಂಗನೇ ಎಂದು ತಿಳಿಯಲೇ ಇಲ್ಲ. ಅಪ್ಪಅಮ್ಮರ ಅಂತ್ಯ ಸಂಸ್ಕಾರಕ್ಕೆ ಬಂದು ಎದೆಬಡಿಕೊಂಡು ಅಳುತ್ತಿದ್ದ ನನಗೆ ಆ ಕ್ಯಾಸೆಟ್ ದೊರೆತರೂ ಅದನ್ನು ನಾನು ತಿಂಗಳುಗಳ ನಂತರ ವಿದೇಶಕ್ಕೆ ತೆರಳಿದ ಮೇಲೆಯೆ ಹಾಕಿ ಕೇಳಿದೆ. ಕೇಳಿ ರಕ್ತ ಕುದಿಯತೊಡಗಿತು. ಜೊತೆಗೆ ಅಮ್ಮನ ಕೊನೆಯ ಪದಗಳ ತೊದಲು ನುಡಿಗಳು. ದುಃಖ ಸಿಟ್ಟನ್ನು ಹುಟ್ಟುಹಾಕಿತು. ಆದರೆ ಸಿಟ್ಟು ಬೇಕಾಬಿಟ್ಟಿಯಾಗಿರದೆ ಗುರಿಯನ್ನು ಸ್ಪಷ್ಟವಾಗಿಸಿತು. ಆಗ ಒಂದು ವಿಷಯವನ್ನು ತೀರ್ಮಾನಿಸಿದೆ. ಇದನ್ನು ಪೊಲೀಸರಿಗೆ ತಿಳಿಸಿ ಆತನನ್ನು ಜೈಲಿಗೆ ಅಟ್ಟುವುದ ಬಿಟ್ಟು ಅಪ್ಪಅಮ್ಮರ ಮಗನಾಗಿ ಆತನನ್ನು ಕೊಂದೇ ನನ್ನ ಸೇಡನ್ನು ತೀರಿಸಿಕೊಳ್ಳುತ್ತೀನಿ ಹಾಗು ಅಪ್ಪ ಮಾಡಿಟ್ಟ ಅಷ್ಟೂ ಆಸ್ತಿಯನ್ನು ಹಾಗೆಯೆ ವಾಪಸ್ಸು ಪಡೆಯುತ್ತೀನಿ ಎಂದುಕೊಂಡು. ಅಂದು ಅಂತ್ಯಸಂಸ್ಕಾರಕ್ಕೆ ಹೋಗಿದ್ದಾಗ ತನ್ನ ಸ್ವಂತ ಪೋಷಕರನ್ನೇ ಕಳೆದುಕೊಂಡ ಮಕ್ಕಳಂತೆ ಅತ್ತು ನಟಿಸುತ್ತಿದ್ದ ಭುಜಂಗರಾವನ್ನು ಕಂಡು ಅಯ್ಯೋ ಎಂದುಕೊಂಡಿದ್ದೆ ಅಲ್ಲದೆ ಆತ ಹೇಳಿದ ಕಾಗದ ಪತ್ರಗಳೆಲ್ಲ ಮೇಲೆಯೂ ಸಹಿ ಹಾಕಿದೆ. ನಂತರವೇ ತಿಳಿದದ್ದು ಆತ ನಮ್ಮ ಅಷ್ಟೂ ಆಸ್ತಿಯ ಪಾಲುದಾರನಾಗಿದ್ದನೆಂದು ! ಆದರೆ ಆತ ಅದನ್ನು ಎಲ್ಲಿಯೂ ಹೇಳದೆ ಇಲ್ಲಿಯವರೆಗೂ ಗೌಪ್ಯವಾಗಿಟ್ಟುಕೊಂಡು ಬಂದಿದ್ದ. ಊರ ಆಸ್ತಿಗೆ ಮತ್ತೊಬ್ಬ ಮ್ಯಾನೇಜರ್ ಅನ್ನು ನೇಮಿಸಿ ಸಿಟಿಯ ಈ ಕಂಪನಿಯನ್ನು ತಾನೇ ಖುದ್ದಾಗಿ ನೆಡೆಸತೊಡಗಿದ. ನಾನೂ ಕಾದೆ. ಹತ್ತು ಕೋಟಿ ಬೆಲೆಬಾಳುವ ಕಂಪನಿಯಯನ್ನು ನೂರು ಕೋಟಿಗೆ ತಂದು ನಿಲ್ಲಿಸಿದ ಆತನ ಚತುರತೆಯನ್ನು ಮಾತ್ರ ಮೆಚ್ಚಲೇಬೇಕು. ನಾನು ಎಲ್ಲಿಯವರೆಗು ಬದುಕಿರುತ್ತೇನೆಯೋ ಅಲ್ಲಿಯವರೆಗೂ ಅರ್ಧ ಆಸ್ತಿಯ ಒಡೆಯನಾಗಿಯೇ ಇರದನ್ನು ಸಹಿಸಲಾರದ ಆತ ನನ್ನನ್ನು ಭಾರತಕ್ಕೆ ಕರೆಸಿ ಮುಗಿಸಿಬಿಡುವ ನಾಟಕವನ್ನು ಆಡುತ್ತಾನೆ. ಆದರೆ ನಾನು ಇಪ್ಪತ್ತು ವರ್ಷದಿಂದ ಈತನ ಒಂದೊಂದು ನಡೆಯನ್ನೂ ಕೂಲಂಕುಷವಾಗಿ ಗಮನಿಸಲು ಒಂದು ನೆಟ್ವರ್ಕ್ ಅನ್ನೇ ಸೃಷ್ಟಿಸಿಕೊಂಡಿದ್ದೆ. ಬೇಕಂತೆಲೆ ನನ್ನ ವಿದೇಶಿ ಬಿಸಿನೆಸ್ ನಷ್ಟಗೊಂಡಿದೆ ಎಂದು, ಸಾಲ ಹೆಚ್ಚಾಗಿ ಭಾರತಕ್ಕೆ ಮರಳುತ್ತಿದ್ದೇನೆಂದು ಹುಸಿ ಸುದ್ದಿಯನ್ನು ಹಬ್ಬಿಸಿದೆ. ಅದನ್ನು ನಂಬಿದ ಭುಜಂಗ ನಾನು ಬರುವ ದಿನದಂದೇ ನನ್ನನ್ನು ಮುಗಿಸುವ ಪ್ಲಾನನ್ನು ಮಗನೊಟ್ಟಿಗೆ ಸೇರಿ ಮಾಡಿಕೊಳ್ಳುತ್ತಾನೆ. ಆದರೆ ನಾನು ಬರುವ ಮೊದಲೇ ವಿದೇಶದಲ್ಲಿದ್ದ ಹೆಚ್ಚು ಕಡಿಮೆ ನನ್ನದೇ ವಯಸ್ಸಿನ ಆತನ ಮಗನನ್ನು ಕರೆಸಿ ಆತನಿಗೆ ನನ್ನನ್ನು ಹೋಲುವ ಮುಖವಾಡವನ್ನು ಹಾಕಿ ಪ್ರತಿದಿನ ಆಫೀಸಿಗೆ ಕರೆಸಿ ಆತನೇ ದೀಪಕ್ ಮೆಹ್ತಾ ಎಂದು ಎಲ್ಲರಲ್ಲೂ ನಂಬಿಕೆ ಹುಟ್ಟಿಸುತ್ತಾನೆ. ಅಂತಹ ಹತ್ತಾರು ನನ್ನನ್ನು ಹೋಲುವ ಮುಖವಾಡಗಳನ್ನು ಮಾಡಿಸಿ ಇಟ್ಟುಕೊಂಡಿರುತ್ತಾನೆ. ಹಾಗು ಬೋರ್ಡ್ ಮೀಟಿಂಗ್ ನಲ್ಲಿ ನಾನು ಕಂಪನಿಯ ಎಲ್ಲ ಷೇರನ್ನು ಮೆಹ್ತಾನಿಗೆ ಮಾರಿ ಹಣವನ್ನು ವಿದೇಶದಲ್ಲಿರುವ ಸಾಲವನ್ನು ತೀರಿಸಲು ವಿನಿಯೋಗಿಸುವುದಾಗಿ ಹೇಳಿಸುತ್ತಾನೆ. ಅಂತೆಯೇ ನನ್ನ ಸಹಿಯನ್ನು ನಕಲು ಮಾಡಿ ಕಾಗದ ಪತ್ರವನ್ನೆಲ್ಲವನ್ನೂ ತಯಾರಿಸಿದ. ಆಗ ಹೆಚ್ಚುಕಡಿಮೆ ಕಂಪನಿ ಭುಜಂಗಾರವಿನದ್ದೆ ಆಗಿದ್ದಿತು. ನಾನು ಬರುವ ದಿನ ಏರ್ಪೋರ್ಟಿನಿಂದ ರಾತ್ರಿಯೇ ಏನಾದರು ಕಾರಣ ಹೇಳಿ ಆಫೀಸಿಗೆ ಕರೆಸಿ, ಸಾಯಿಸಿ, ಮುಂದಕ್ಕೆ ಬೇಕಾಗುವ ಬೆರಳ ಗುರುತು ಇತ್ಯಾದಿಗಳೆಲ್ಲವನ್ನು ಕಾಗದ ಪತ್ರಗಳ ಮೇಲೆ ಹಾಕಿಸಿ ಕೊನೆಗೆ ಸತ್ತ ಹೆಣವನ್ನೇ ಕೆಳಗೆ ತಳ್ಳಿ ಆತ್ಮಹತ್ಯೆಯ ಪಟ್ಟಿಯನ್ನು ಕಟ್ಟುವುದು ಅವರುಗಳ ಪ್ಲಾನ್ ಆಗಿದ್ದಿತು! ಆದರೆ ನಾನು ಅದಾಗಲೇ ಭಾರತಕ್ಕೆ ಬಂದಿರುವುದಾಗಲಿ, ಹೋಟೆಲಿನಲ್ಲಿ ತಂಗಿ ಅವರನ್ನು ಇಂಚಿಂಚ್ಚು ನಡೆಯನ್ನು ಗಮನಿಸುತ್ತಿರುವುದಾಗಲಿ ಅವರಿಗೆ ತಿಳಿದಿರಲಿಲ್ಲ. ನಾನೇ ವೇಷಮರೆಸಿ ಪ್ರತಿದಿನ ಆಫೀಸಿಗೆ ರಾತ್ರಿಯ ಸಮಯದಲ್ಲಿ ನುಗ್ಗಿ ಭುಜಂಗನ ಕಂಪ್ಯೂಟರನ ಒಳಹೊಕ್ಕು ಅಷ್ಟೂ ದಾಖಲೆಗಳನ್ನು ನಕಲು ಮರುಸೃಷ್ಟಿಸಿದೆ. ಎಲ್ಲಿಯವರೆಗೂ ಎಂದರೆ ಇಂದು ಇಡೀ ಕಂಪನಿಯ ಒಡೆಯನ ಹೆಸರು ನನ್ನದೇ ಆಗಿದೆ. ಪಾಪ ಭುಜಂಗನಿಗೆ ಸಾಯುವಾಗಲೂ ಆ ವಿಷಯ ತಿಳಿಯಲಿಲ್ಲ ಎಂದು ಗಹಗಹನೇ ನಗುತ್ತಾನೆ.

ನಂತರ ಮುಂದುವರೆಸಿ, ನಮ್ಮ ತಂದೆ ಮಹಾ ತ್ಯಾಗಮಯಿ. ಅಂದು ತಿನ್ನಲು ಕೂಳಿಲ್ಲದೆ ಹಳ್ಳಿಯಲ್ಲಿ ಅಲೆಯುತ್ತಿದ್ದ ಭುಜಂಗನನ್ನು ಕರೆಸಿ ಕೆಲಸಕೊಟ್ಟು ಮ್ಯಾನೇಜರ್ನ ಹುದ್ದೆಯನ್ನು ಕೊಟ್ಟರೂ ತನ್ನ ನಾಯಿಬುದ್ಧಿಯನ್ನು ತೋರಿಸಿದ ಆತ. ಆದರಿಂದ ನಾನೇ ಖುದ್ದಾಗಿ ಕಂಪನಿಯ ಹಣದಲ್ಲೇ ಉದ್ಯೋಗಿಗಳಿಗೆ ಎರಡು ವರ್ಷದ ಬೋನಸ್ ಅನ್ನು ಒಮ್ಮೆಲೇ ಬರುವಂತೆ ಮಾಡಿದೆ.

ಅಂದು ನಾನು ವಿದೇಶದಿಂದ ಬರುತ್ತೇನೆ ಎಂಬುದನ್ನು ತಿಳಿಸಿ ಭೇಟಿಯಾಗೋಣ ಎಂದು ಕಳಿಸಿದ ಮೆಸೇಜ್ಗೆ ಸೀದಾ ಆಫೀಸ್ಸೆ ಹೋಗೋಣ ನಾನೇ ಪಿಕ್ ಮಾಡ್ತೀನಿ ಎಂದ ಭುಜಂಗನ ಮಗ. ಅಪ್ಪ ಸೇರಾದರೆ ಮಗ ಸವಾ ಸೇರು. ಕಾರಿನಲ್ಲೇ, 'ನೋಡ್ರಿ ನಮ್ಮಪ್ಪ ಕಷ್ಟ ಪಟ್ಟು ಮಾಡಿದ ಕಂಪನಿ ಇದು.. ಅವ್ರ್ ಇಲ್ದೆ ಇದ್ರೆ ಇಷ್ಟೆಲ್ಲಾ ಬೆಳೀತಾನೆ ಇರ್ತಿರ್ಲಿಲ್ಲ..' ಎನುತ ಪರೋಕ್ಷವಾಗಿ ಹೆದರಿಸತೊಡಗಿದ. ಅಂದುಕೊಂಡಂತೆಯೇ ಕೊಲ್ಲಲು ಸಿದ್ದವಾಗಿ ಬಂದಿದ್ದನಾತ! ರಾತ್ರಿ ಹತ್ತುವರೆಗೆ ಆಫೀಸಿಗೆ ಬಂದ ಕೂಡಲೇ ಗನ್ ಒಂದನ್ನು ತೆಗೆದು ನನ್ನ ಹಣೆಯ ಮೇಲಿಟ್ಟು ಟೇಬಲ್ಲಿನಲ್ಲಿದ ಕಾಗದ ಪತ್ರಗಳ ಮೇಲೆ ಸಹಿ ಮಾಡುವಂತೆ ಹೇಳಿದ. ಅಂತೆಯೇ ನಾನು ನನ್ನ ನಕಲಿ ಸಹಿಯನ್ನು ಮಾಡಿ ಇನ್ನೇನು ತಲೆಯೆತ್ತಬೇಕುವನ್ನುವಷ್ಟರಲ್ಲಿ ಆತನ ಗನ್ನನ್ನು ತಳ್ಳಿ ಆಣೆಯ ನೇರಕ್ಕೆ ಒಂದು ಬಲವಾದ ಗುದ್ದನು ಕೊಟ್ಟೆ. ಸೇಫ್ಟಿಗೆಂದು ತಂದಿದ್ದ ವಿಷ ಸಿಂಪಡಿಸಿದ ಕರ್ಚಿಫನ್ನು ಆತನ ಮೂಗಿನ ನೇರಕ್ಕೆ ಇರಿಸಿ ಪ್ರಜ್ಞೆ ತಪ್ಪಿಸಿದೆ. ಆದರೆ ವಿಷದ ಮತ್ತೊ ಅಥವ ಆತನ ಕೆಟ್ಟ ಗಳಿಗೆಯೋ ನಿಮಿಷಮಾತ್ರದಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಯಿತು!! ಅಪ್ಪನನ್ನು ಸಾಯಿಸಲು ಹೋಗಿ ಮಗನನ್ನೇ ಪರಲೋಕಕ್ಕೆ ಕಳುಯಿಸಿದ ನನ್ನ ಎದೆ ನಡುಗತೊಡಗಿತು. ಕೆಲನಿಮಿಷಗಳಲ್ಲೇ ಇಹಸ್ಥಿತಿಗೆ ಬಂದ ನಾನು ಆತನ ಹೆಣವನ್ನು ಕಟ್ಟಿ ಊರೇ ಮಲಗಬಹುದಾದಷ್ಟು ದೊಡ್ಡದಾದ ಫ್ರಿಡ್ಜ್ ನ ಕೆಳ ಕಂಪಾರ್ಟ್ ಮೆಂಟ್ನ ಒಳಗೆ ತೂರಿಸಿ, ಗಟ್ಟಿಯಾದ ಕಲ್ಲಿನಂತೆ ಅಂಟುವ ಲಿಕ್ವಿಡ್ ನಿಂದ ನನ್ನದೇ ನಕಲಿ ಮುಖ ಚಹರೆಯನ್ನು ಆತನ ಮುಖಕ್ಕೆ ಅಂಟಿಸಿ ಫ್ರಿಡ್ಜ್ ನ ಕೀಲಿಯನ್ನು ಹಾಕಿದೆ.


ಆತನ ಮೊಬೈಲಿಂದ ಭುಜಂಗನಿಗೆ ಮೆಸೇಜ್ ಮಾಡಿದೆ.

Will be Continued...
 

Wednesday, January 23, 2019

ಮೆಹ್ತಾ Killed ಮೆಹ್ತಾ! - Part 2

ಶೌಚಾಲಯದ ಪೈಪುಗಳ ಮೂಲಕ ಮೇಲೇರಿದ ಅದು ಕಿಟಕಿಯ ಮುಖೇನ ಸೀದಾ ಆಫೀಸಿನೊಳಗೆ ನುಗ್ಗಿತು. ಆ ಕಡು ಕತ್ತಲೆಯಲ್ಲೂ ಒಂದಿನಿತೂ ದಾರಿ ತಪ್ಪದೆ ಕೂಡಲೇ ಭುಜಂಗರಾವ್ನ ಕೋಣೆಯಳೊಗೆ ಹೋಗಿ ಕಂಪ್ಯೂಟರ್ ಅನ್ನು ಆನ್ ಮಾಡಿ ಬಹಳದಿನಗಳಿಂದ ಕಾಯುತ್ತಿದ್ದ ಕೆಲಸವನ್ನು ಅದು ಮುಗಿಸಿಕೊಂಡಿತು. ನಕಲಿ Purchase Order ಗಳನ್ನು ಭುಜಂಗರಾವ್ ನ ಐಡಿಯಿಂದ ಅನುಮೋದಿಸಿ ಅದರ ಒಂದು ಕಾಪಿಯನ್ನು ಇಮೇಲ್ ಮೂಲಕ ತನ್ನ ಐಡಿಯೊಂದಕ್ಕೆ ಕಳಿಸಿಕೊಂಡಿತು. ನಕಲಿ Purchase Orderಗಳನ್ನು ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ವ್ಯಾಪಾರಿಗಳೊಟ್ಟಿಗೆ ಚಲಾವಣೆಗೊಳಿಸಿ ಅವರಿಂದ ಕ್ರೆಡಿಟ್ ನಲ್ಲಿ ಸಿಗುವ ಮಾಲುಗಳನು ಮತ್ತೊಬ್ಬ ವ್ಯಾಪಾರಿಗೆ ಅದರ ಅರ್ಧದಷ್ಟು ಹಣದಲ್ಲಿ ಮಾರಿ ಹಣವನ್ನು ಗಳಿಸಿಕೊಳ್ಳುತ್ತಿತ್ತು ಆ ಕ್ರಿಮಿನಲ್ ಆಕೃತಿ. 'ಭುಜಂಗ ..' ಎಂದು ಕಟಕಟನೆ ಹಲ್ಲು ಕಡಿದ ಅದು ತನ್ನ ಕೆಲಸ ಮುಗಿದ ನಂತರ ಚಂಗನೆ ಕಿಟಕಿಯ ಬಳಿಗೆ ಹಾರಿತಾದರೂ ಕೂಡಲೇ ಏನೋ ಅದಕ್ಕೆ ನೆನಪಾಯಿತು. ಪುನಃ ಭುಜಂಗ್ರಾವಿನ ಕೊಣೆಯೊಳಗೆ ಬಂದು ಟೇಬಲ್ಲಿನ ಕೆಳಗೆ ಏನೋ ಕಂಡಂತಾದ ವಸ್ತುವನ್ನು ಎಳೆದು ತೆಗೆಯಿತು. ಬೆಳಕು ಬಿಟ್ಟು ನೋಡಿದರೆ, ತಲೆಸುತ್ತು ಬೀಳುವಂತಹ ದೃಶ್ಯ ಆ ಕಪ್ಪು ಕೈಗಳ ಮೇಲೆ!!

**

'ಅಜಯ್..! ಏನ್ರಿ ನಿಮ್ದು. ಡೆಲಿವರಿ ಡೇಟ್ ಮುಗಿದ್ ಹೋದ್ರೂ ಯಾಕ್ರೀ ಇನ್ನು ಶಿಪಿಮೆಂಟ್ ಕಸ್ಟಮರ್ ಗೆ ಮುಟ್ಟಿಲ್ಲ..?' ಸಹಜವಾದ ಸಿಡುಕಿನ ಧ್ವನಿಯಲ್ಲಿ ಕೇಳಿದ ಭುಜಂಗರಾವ್. ಬಿಳಿಕೂದಲಿನ ಅರ್ವತ್ತು ವಯಸ್ಸಿನ ಆತನ ಆ ಬೆಕ್ಕಿನ ಕಣ್ಣುಗಳು ಭಯಾನಕ ಭಯವನ್ನುಂಟುಮಾಡುತ್ತಿದ್ದವು. ಅಜಯ್ ಏನನ್ನೂ ಮಾತನಾಡದೆ ತಲೆ ತಗ್ಗಿಸಿಕೊಂಡು ನಿಂತಿದ್ದ. ಭುಜಂಗರಾವ್ರ ಪಕ್ಕದಲ್ಲಿ ಕೂತಿದ್ದ ದೀಪಕ್ ಮೆಹ್ತಾ, 'ಲುಕ್ ಮಿಸ್ಟರ್, ನಾವೇನ್ ಇಲ್ಲಿ ಚಾರಿಟಿ ವರ್ಕ್ ಮಾಡ್ತಾ ಇಲ್ಲ. ನಿಮ್ಮ್ ಒಂದೊಂದು ತಪ್ಪು ನಾವ್ ಕಷ್ಟ ಪಟ್ಟು ಕಟ್ಟಿದ ಕಂಪನಿಗೆ ಹೊರೆಯಾಗುತ್ತೆ. ದಿಸ್ ಇಸ್ ದಿ ಫೈನಲ್ ವಾರ್ನಿಗ್!’ ಎಂದ ಧ್ವನಿಯಲ್ಲಿ ಏನೋ ಒಂದು ಬಗೆಯ ಅಸಹಜತೆ…ಕಳೆದ ತಿಂಗಳವರೆಗೂ ಕಂಪನಿಯ ಸ್ಲೀಪಿಂಗ್ ಪಾರ್ಟರ್ ಆಗಿದ್ದ ದೀಪಕ್ ಮೆಹ್ತಾರನ್ನು ಕಂಪನಿಯ ಯಾರೊಬ್ಬರೂ ಅಷ್ಟಾಗಿ ನೋಡಿಯಾಗಲಿ ಮಾತಾಡಿಯಾಗಿ ಬಲ್ಲವರಾಗಿರಲಿಲ್ಲ. ಹೊರದೇಶದಲ್ಲೆಲ್ಲೋ ಒಬ್ಬ ದೀಪಕ್ ಮೆಹ್ತಾ ಎಂಬ ವ್ಯಕ್ತಿ ನಮ್ಮ ಕಂಪನಿಯ ಇಂತಿಷ್ಟು ಷೇರುಗಳ ಒಡೆಯ ಎಂದಷ್ಟೇ ಅಲ್ಲಿನ ಉದ್ಯೋಗಿಗಳಿಗೆ ತಿಳಿದ್ದಿತ್ತು. ಈಗ ತನ್ನ ಹೊರದೇಶದ ಬಿಸಿನೆಸ್ ನಷ್ಟ ಕಂಡ ಪರಿಣಾಮ ಆತ ಇಲ್ಲಿಗೆ ಬಂದಿದ್ದೂ ದಿನೇ ದಿನೇ ಕಂಪನಿಯ ಒಂದೊಂದೇ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳತೊಡಗಿದ.. ಬುಜಂಗ್ರಾವಿನ ಸಿಟ್ಟಿನ ಆ ರಣ ಕಣ್ಣುಗಳು ಆತ ಡೋರನ್ನು ದಾಟುವವರೆಗೂ ನೋಡುತ್ತಲೇ ಇದ್ದವು.

ಅಜಯ್ ನಿಂತ ಅಷ್ಟೂ ಸಮಯವನ್ನು ದೀಪಕ್ ಮೆಹ್ತಾರವರ ಚಹರೆಯನ್ನೇ ಇಣುಕಿಣುಕಿ ನೋಡತೊಡಗಿದ್ದ. ಹೊರಬಂದವನೇ ಮಹೇಶನನ್ನು ಕುರಿತು 'ಆ ಮೆಹ್ತಾ ಹೇಳೋಕ್ಕಷ್ಟೇ ನಲವತ್ತು ವರ್ಷ ರೀ , ಮೇಕ್ ಅಪ್ ಮಾತ್ರ ಒಳ್ಳೆ ಟೀನೇಜ್ ಹುಡ್ಗೀರ್ ತರ ಮಾಡ್ಕೊಂತಾರೆ. ಅದೆಷ್ಟು ಪೌಡರ್ ಮುಖಕ್ಕೆ ಆಕೊಂಡ್ಡಿದ್ದಾರೆ ನೋಡಿದ್ರ.. ಒಳ್ಳೆ ಕಾರ್ಟೂನ್ ಕ್ಯಾರೆಕ್ಟರ್ ನೋಡ್ದ ಹಾಗೆ ಆಗುತ್ತೆ' ಎಂದು ಗಹಗಹನೇ ನಗಹತ್ತಿದ್ದ. ಕೆಲ ನಿಮಿಷಗಳಲ್ಲಿಯೇ ‘ನಿದ್ರೆ ಇಲ್ಲ ರೀ’ ಎನುತ ತೂಕಡಿಸತೊಡಗಿದ,'ರೀ ಅಜಯ್, ಭುಜಂಗ ಬಂದ್ರೆ ಇವತ್ತ್ ನಿಮ್ ಕಥೆ ಮುಗ್ದ್ ಹಾಗೆ..ಏಳ್ರಿ' ಎಂದ ಮಹೇಶನ ಮಾತನ್ನೂ ಲೆಕ್ಕಿಸದೆ ಕುರ್ಚಿಯನ್ನು ಸಾಧ್ಯವಾದಷ್ಟು ಕೆಳಗೊಳಿಸಿ ನಿದ್ರೆಗೆ ಜಾರಿದ.

ಕುರ್ಚಿಯ ಮೇಲೆಯೇ ಘಾಡ ನಿದ್ರೆಗೆ ಜಾರಿದ ಅಜಯ್ ಕಣ್ಣು ಬಿಡುವಷ್ಟರಲ್ಲಿ ಆಫೀಸಿನ ತುಂಬಾ ಕತ್ತಲೆಯದೆಯೇ ಕಾರುಬಾರು. ಅಲ್ಲೊಂದು ಇಲ್ಲೊಂದು ಎಮರ್ಜೆನ್ಸಿ LED ಲೈಟುಗಳನ್ನು ಬಿಟ್ಟರೆ ಆತನ ಕಣ್ಣುಗಳಿಗೆ ಏನೇನೂ ಗೋಚರಿಸದು. ಸಂಜೆ ಮಹೇಶ ‘ಏಳ್ರಿ ಹೋಗಣ’ ಎಂದಾಗಲೂ ಹೊರಳಾಡಿ ಮಲಗಿದ ತುಸು ನೆನಪು ಬಿಟ್ಟರೆ ಬೇರೇನೂ ಸಹ ಆತನ ನೆನೆಪಿಗೆ ಬರುತ್ತಿಲ್ಲ. ಮೊಬೈಲನ್ನು ಜೇಬಿನಿಂದ ತೆಗೆದು ನೋಡುತ್ತಾನೆ. ಘಂಟೆ ಆಗಲೇ ಹನ್ನೆರಡರ ಸಮೀಪ! ಆಕ್ಸೆಸ್ ಕಾರ್ಡ್ ಇದ್ದಿದ್ದರಿಂದ ಬಚಾವು ಎಂದುಕೊಂಡು ಎದೆಯ ಜೇಬಿನಿಂದ ಆಕ್ಸೆಸ್ ಕಾರ್ಡ್ ನ್ನು ತೆಗೆದು ಇನ್ನೇನು ಎದ್ದು ಹೊರಡಬೇಕು ಎನ್ನುವಷ್ಟರಲ್ಲಿ ಭುಜಂಗ್ ರಾವ್ನ ಕ್ಯಾಬಿನಿಂದ ಏನೋ ನೆಡೆದಾಡುವ ಸದ್ದು!! ನಿಂತಿದ್ದ ಅಜಯ್ ಕೂಡಲೇ ಕುಕ್ಕರುಗಾಲಿನಲ್ಲಿ ಕೆಳಗೆ ಕೂರುತ್ತಾನೆ. ಬೆಂಕಿಪೊಟ್ಟಣದಂತಿದ್ದ ಆ ಹತ್ತಾರು ಕ್ಯಾಬಿನುಗಳ ನಡುವೆ ಕೂತ ಅಜಯ್ ಮೆಲ್ಲಗೆ ಆ ಸದ್ದನ್ನು ಅಳಿಸತೊಡಗಿದ. ಏನೇನೋ ಪದಗಳ ಉಚ್ಚಾರಣೆಯಿಂದ ಅತ್ತಿಂದಿತ್ತ ಇತ್ತಿಂದಂತ್ತ ನೆಡೆಯುತ್ತಿದ್ದ ಅದು ಬುಜಂಗ್ರಾವ್ ನ ಧ್ವನಿಯಂತೂ ಅಲ್ಲವೇ ಅಲ್ಲ! ಕೊಂಚ ಕಿವಿಯಿಟ್ಟು ಆಲಿಸಹೋದಗ ಕೂಡಲೇ ಕಟಕಟನೆ ಹಲ್ಲುಕಡಿಯುವ ಸದ್ದು ಭಾರಿ ಗಾತ್ರದ ಕಲ್ಲನ್ನು ಅಷ್ಟೇ ಗಾತ್ರದ ಇನ್ನೊಂದು ಕಲ್ಲಿಗೆ ಉಜ್ಜಿದಾಗ ಮೂಡುವ ಸದ್ದಿನಂತೆ ಮೂಡುತ್ತದೆ! ಆ ಭಯಾನಕ ಸದ್ದಿಗೆ ಎದೆ ಜಲ್ ಎಂದ ಅಜಯ್ ಕುಕ್ಕರುಗಾಲಿನಿಂದ ಒಮ್ಮೆಲೇ ಹಿಂದಕ್ಕೆ ಬೀಳುತ್ತಾನೆ. ಆಗ ಆತನ ಬೆನ್ನು ತನ್ನ ಕುರ್ಚಿಗೆ ತಾಗಿ, ಕುರ್ಚಿ ಕ್ಯಾಬಿನ್ನ ಚೌಕಕ್ಕೆ ತಾಗಿ ನಿಶ್ಯಬ್ಧವಾಗಿದ್ದ ಆಫೀಸಿನ ತುಂಬಾ ಒಮ್ಮೆಲೆ ಸದ್ದು ಮೂಡುತ್ತದೆ. ಅಲ್ಲಿಯವರೆಗೂ ಬುಜಂಗ್ ರಾವಿನ ಕ್ಯಾಬಿನಿಂದ ಒಂದೇ ಸಮನೆ ಮೂಡುತ್ತಿದ್ದ ಸದ್ದು ಕುರ್ಚಿಯ ಸದ್ದುಕೇಳಿ ನಿಂತುಬಿಡುತ್ತದೆ. ಪುನ್ಹ ಮತ್ತೊಂದು ಮಹಾಮೌನ! ಅಜಯ್ ನ ಎದೆ ಡವ-ಡವ ಬಡಿದುಕೊಳ್ಳುತ್ತಿರುತ್ತದೆ. ಅದರ ಸದ್ದು ಕಿವಿಗೆ ಕೇಳುವಷ್ಟು ಜೋರು. ಹಣೆಯಲ್ಲಿ ಬೆವರಿನ ನದಿಯೇ ಹರಿದು ನೆಲದಮೇಲೆ ಹನಿಗೂಡುತ್ತಿರುತ್ತದೆ. ಕೆಲಕ್ಷಣಗಳಲ್ಲೇ ಕ್ಯಾಬಿನಿನ ಬಾಗಿಲನ್ನು ತೆರೆದ ಆ ಸದ್ದು ತನ್ನ ಬೂಟುಗಾಲಿನಿಂದ ಆಫೀಸಿನ ತುಂಬೆಲ್ಲ ನೆಡೆಯುತ್ತದೆ. ಆ ರಾಜನೆಡಿಗೆಯ ಹೆಜ್ಜೆಗಳ ನಡುವಿನ ಅಂತರ ಅದರಲ್ಲಿ ಯಾವುದೇ ಭಯವಿರದ ಭಾವವನ್ನು ತಿಳಿಸುತ್ತಿರುತ್ತದೆ. ಅಜಯ್ ತನ್ನ ಕಣ್ಣು ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಂಡು ತಲೆಕೆಳಗು ಮಾಡಿ ಕೂತಿರುತ್ತಾನೆ. ಕೆಲನಿಮಿಷಗಳ ನಂತರ ಆ ಸದ್ದು ಆಫೀಸಿನ ಕಿಟಕಿಯನ್ನು ಇಳಿದು ಮರೆಯಾಗದಿದ್ದರೆ ಅಜಯ್ ಕೂತಲ್ಲಿಯೇ ಎದೆಯೊಡೆದು ಸಾಯುವುದು ಖಚಿತವಾಗಿದ್ದಿತು....!

**

'ಅರ್ರೆ!! ಏನ್ರಿ ಇದು .. ದೀಪಾವಳಿ ಬೋನಸ್ ಮೂರ್ ತಿಂಗ್ಳು ಮೊದ್ಲೇ ಬಂತರ್ಲಿ..' ಎಂದು ಮೊಬೈಲನ್ನು ನೋಡಿ ಕೂಗಹತ್ತಿದ ಮಹೇಶ. ಆತ ಹೇಳಿದಂತೆಯೇ ಆಫೀಸಿನ ಎಲ್ಲರ ಸ್ಯಾಲರಿ ಅಕೌಂಟಿಗೆ ಒಂದೇ ಸಮನಾದ ಹಣ ಜಮಾವಣೆಯಾಗಲ್ಪಟ್ಟಿರುತ್ತದೆ. ಎದ್ದು ನಿಂತ ಎಲ್ಲರು ಮಿಕ ಮಿಕ ಕಣ್ಣುಗಳನ್ನು ಬಿಟ್ಟು ಒಬ್ಬರನ್ನೊಬ್ಬರು ನೋಡತೊಡಗಿದರು. 'ಬುಜಂಗ್ ರಾವ್ ಯಾವಾಗ ಇಷ್ಟು ಬದಲಾದ?' ಎಂಬ ಪ್ರೆಶ್ನೆಯೊಂದೇ ಆ ಎಲ್ಲ ನೋಟಗಳಲ್ಲೂ.

**

ಆ ದಿನ ರಾತ್ರಿ ಪುನ್ಹ ತನ್ನ ಹೋಟೆಲಿನ ಕೋಣೆಯಿಂದ ಹೊರಟ ಆ ಆಕೃತಿ ಸಿಟಿಯ ಮೂಲೆಯಲ್ಲಿದ್ದ ಭುಜಂಗ್ ರಾವಿನ ಮತ್ತೊಂದು ಚಿನ್ನದ ಅಂಗಡಿಗೆ ನೆಡೆಯಿತು. ಎಂದಿನಂತೆ ಹತ್ತಾರು ಚಿನ್ನದ ಆಭರಣಗಳನ್ನು ಪಡೆದ ಅದು ಸಾದ್ಯವಾದಷ್ಟು ತನ್ನ ಕೈಗಳ ಮೇಲೆ ಹರಿದಾಡಿಸಿ ಇನ್ನೇನು ಹೊರನೆಡೆಯಬೇಕು ಎನ್ನುವಷ್ಟರಲ್ಲಿ ಅಲ್ಲಿ ಕೆಲಸಕ್ಕಿದ್ದ ಒಬ್ಬ ಹುಡುಗ 'ನಮಸ್ಕಾರ ಸಾರ್' ಎಂದು ಸಲಾಂ ಮಾಡಿದ. ಕಕ್ಕಾಬಿಕ್ಕಿಯಾದ ಆ ಆಕೃತಿ ಒಂದು ಕ್ಷಣವೂ ಅಲ್ಲಿ ನಿಲ್ಲದೆ, ಏನನ್ನೂ ಮಾತನಾಡದೆ ಬಿರಬಿರನೆ ಹೊರಬಂದಿತು. ರೂಮಿಗೆ ಬಂದ ಕೂಡಲೇ ಕೈಗೆ ಅಂಟಿಕೊಂಡಿದ್ದ ಚಿನ್ನದ ಪುಡಿಯನ್ನು ತೊಳೆದು ಫೋಟೋವಿನ ಮುಂದಿದ್ದ ಪೊಟ್ಟಣದ ಒಳಗೆ ಸುರಿಯಿತು. ಹೆಚ್ಚುಕಡಿಮೆ ಆ ಸಣ್ಣ ಪೊಟ್ಟಣದ ಅರ್ಧದಷ್ಟು ತುಂಬಿದ ಚಿನ್ನದ ಪುಡಿಯನ್ನು ಇಂದು ಒಂದು ದಪ್ಪ ಕಬ್ಬಿಣದ ಸಣ್ಣ ಪಾತ್ರೆಯಲ್ಲಿ ಸುರಿದು ಗ್ಯಾಸಿನ ಮೇಲಿಟ್ಟು ಕಾಯಿಸತೊಡಗಿತು. ಹೆಚ್ಚುಕಡಿಮೆ ಒಂದೆರಡು ತಾಸಿನ ಚಟುವಟಿಕೆಯ ನಂತರ ತನ್ನ ಬಹುದಿನದ ಕನಸ್ಸನ್ನು ನನಸ್ಸಾಗಿಸಿದ ಖುಷಿಯಲ್ಲಿ ಸಣ್ಣ ಬುಲೆಟ್ ಆಕಾರದ ಚಿನ್ನದ ಗುಂಡನ್ನು ತಯಾರಿಸಿ ಆ ಫೋಟೋವಿನ ಮುಂದಿರಿಸಿ ಅದರ ಪಕ್ಕಕ್ಕೆ ತನ್ನ ಜೇಬಿನಲ್ಲಿದ್ದ ಪಿಸ್ತೂಲನ್ನೂ ಇಟ್ಟು ಒಂದೇ ಸಮನೆ ಬಿಕ್ಕಿ ಬಿಕ್ಕಿ ಅಳತೊಡಗಿತು. ಕೂಡಲೇ ಹೊರಗಿನ ಹಾಲಿನಿಂದ ಬಂದ ಸದ್ದು ಆಕೃತಿಯನ್ನು ಜಾಗೃತಗೊಳಿಸಿತು. ಆದರೆ ಹೊರಬಂದು ನೋಡಿದರೆ ಅಲ್ಲಿ ಏನೇನೂ ಕಾಣದು. ನಂತರ ಪುನ್ಹ ಎಂದಿನಂತೆ ತನ್ನ ಹೋಟೆಲು ಕೋಣೆಯಿಂದ ಹೊರನೆಡೆದು ಭುಜಂಗರಾವಿನ ಆಫೀಸ್ಸಿನ ಹಿಂಬಾಗಿಲನ್ನು ಅದು ತಲುಪಿತು. ಆತನ ಕಂಪ್ಯೂಟರ್ ಅನ್ನು ತೆರೆದು ತನ್ನ ಕೆಲಸವನ್ನು ಪ್ರಾರಂಭಿಸಿತು.



******************



                                                              Present Day.. 


ದೀಪಕ್ ಮೆಹ್ತಾ ಸತ್ತು ಅಲ್ಲಿಗೆ ಹತ್ತು ದಿನಗಳು ಕಳೆದಿದ್ದವು. ಪೊಲೀಸರ ಖಾಸಾವಾಗಿದ್ದ ಭುಜಂಗರಾವ್ ಅದು ಆತ್ಮಹತ್ಯೆ ಎಂದು ರಿಪೋರ್ಟ್ ಕೊಡುವಂತೆ ಅವರುಗಳಿಗೆ ತಿಳಿಸುತ್ತಾನೆ! ಅಂತೆಯೇ ವಿದೇಶದ ಬಿಸಿನೆಸ್ ಅಲ್ಲಿ ಸೋತು, ತನ್ನ ಇಲ್ಲಿಯ ಕಂಪನಿಯ ಅಷ್ಟೂ ಷೇರನ್ನು ಬುಜಂಗ್ ರಾವಿಗೆ ಮಾರಿಬಂದ ಹಣದಿಂದ ಅಲ್ಲಿಯ ಸಾಲವನ್ನು ತೀರಿಸಲು ಪ್ರಯತ್ನಿಸಿದರೂ ಇನ್ನೂ ಬೆಟ್ಟದಷ್ಟು ಬಾಕಿ ಉಳಿದಿದ್ದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಕೊನೆಯ ರಿಪೋರ್ಟ್ ನಲ್ಲಿ ಪೋಸ್ಟ್ ಮಾರ್ಟಮ್ ರಿಪೋರ್ಟ್ ನ ಕೆಲ ಅಂಶಗಳನ್ನು ಬೇಕಂತಲೇ ತೆಗೆದು ಹಾಕಲಾಗಿತ್ತು. ಅದರಲ್ಲಿದ್ದ ಪ್ರಮುಖ ಅಂಶವೇನೆಂದರೆ ಘಟನೆ ನೆಡೆದ ದಿನದಿಂದ ಎರಡು ವಾರಗಳ ಮೊದಲೇ ದೀಪಕ್ ಮೆಹ್ತಾನ ಜೀವ ಹೋಗಿದೆ ಎಂಬ ಎದೆಯೊಡೆಯುವ ವಿಷಯ. ಅಲ್ಲದೆ ವಿದೇಶದಲ್ಲಿ ಮದುವೆಯಾಗಿ ನಂತರ ಡೈವೋರ್ಸ್ ಆದದ್ದರಿಂದ ಹಾಗು ಪೋಷಕರು ಮೊದಲೇ ತೀರಿಕೊಂಡಿದ್ದರಿಂದ ಆ ಬಗ್ಗೆ ಪ್ರೆಶ್ನಿಸುವುದಾಗಲಿ, ವಿಚಾರಿಸಲಾಗಲಿ ದೀಪಕ್ ರಾವ್ಗೆ ಯಾರೊಬ್ಬರೂ ಇರಲಿಲ್ಲ. ಬರಲಿಲ್ಲ.

**

'ನಿಖಿಲ್..!! Shit.. Shit..Shit!!' ಎಂದು ಸಿಟ್ಟಿನಿಂದ ಅರಚುತ್ತಾ ತಾನು ಕೂತಿದ್ದ ಟೇಬಲ್ಲನ್ನು ಒಂದೇ ಸಮನೆ ಬಡಿಯತೊಡಗಿದ ಭುಜಂಗರಾವ್. ತನ್ನ ಮಗನ ಫೋನು ಕಳೆದ ಎರಡು ವಾರದಿಂದ ನಾಟ್ ರೀಚ್ಯೆಬಲ್.. ಎಲ್ಲ ಪ್ಲಾನ್ನಂತೆ ನೆಡೆದಿದ್ದರೆ ಇಂದು ಆತ ಇಲ್ಲಿ ಬರಲೇಬೇಕಿತ್ತಲ್ಲ, ಎಲ್ಲಿ ಹೋದ ಆಸಾಮಿ ಎನುತ ಒಳಗೊಳಗೇ ಯೋಚಿಸತೊಡಗಿದ.

ಅದು ಬೆಳಗ್ಗೆ ಹತ್ತರ ಆಸುಪಾಸು. ಎಂದಿನಂತೆಯೇ ಲೇಟಾಗಿ ಕೆಲಸಕ್ಕೆ ಬಂದ ಅಜಯ್ ನನ್ನು ಕಂಡು ಮಹೇಶ,

'ರೀ ಅಜಯ್ , ಇವತ್ತು ಭುಜಂಗ ನಿಮಗಿಂತ ಬೇಗ ಬಂದಿದ್ದಾನೆ. ನೀವ್ ಎಲ್ಲಿ ಅಂತಾನೂ ಕೇಳ್ದ..!'

'ಕೇಳ್ಲಿ ಬಿಡ್ರಿ.. ಅವ್ನ್ ಯಾಕೆ ಬೇಗ ಬರೋದು, ಲೇಟಾಗಿ ಹೋಗೋದು ನಂಗೆ ಎಲ್ಲ ಗೊತ್ತು, ಅಪ್ಪ ಮಕ್ಳ ಬಿಸಿನೆಸ್.. '

'ಅಪ್ಪ ಮಗನ ?.. ಯಾರಿ ಅಪ್ಪ, ಮಗ ಯಾರ್ರೀ?'

'ಜಸ್ಟ್ ವೇಟ್ ಅಂಡ್ ವಾಚ್ ಮಹೇಶ್.. ಇನ್ ಕೆಲ್ವೇ ದಿನಗಳಲ್ಲಿ ಎಲ್ಲ ಕ್ಲಿಯರ್ ಆಗುತ್ತೆ' ಎಂದು ಹೇಳಿ ತನ್ನ ಲ್ಯಾಪ್ಟಾಪ್ ಬ್ಯಾಗನ್ನು ಟೇಬಲ್ಲಿನ ಮೇಲೆ ಇಟ್ಟನಷ್ಟೇ

'ಪಟಾರ್..!' ಎಂಬ ಪಟಾಕಿ ಸಿಡಿದಂತ ಭಯಂಕರ ಸದ್ದು ಭುಜಂಗ್ ರಾವಿನ ಕ್ಯಾಬಿನ್ ಒಳಗಡೆಯಿಂದ ಬಂದಿತು! ಉದ್ಯೋಗಿಗಳೆಲ್ಲ ಕೂಡಲೇ ಎದ್ದು ನಿಂತು ಒಳಗೇನಾಯಿತೆಂದು ಬಾಗಿಲು ತೆರೆದು ನೋಡುತ್ತಾರೆ, ಬೆಚ್ಚಿ ಬೀಳಿಸುವಂತಹಃ ದೃಶ್ಯ ಅಲ್ಲಿದವರೆಲ್ಲರ ನಿಂತ ನೆಲವನ್ನೇ ಕಂಪಿಸುವಂತೆ ಮಾಡುತ್ತದೆ. 'ಹೂ..!' ಎನುತ ವಿಕಾರವಾಗಿ ಕೂಗುತ್ತಾ ಅರಚುತ್ತಾ ಹಲವರು ಅಲ್ಲಿಂದ ಓಟ ಕಿತ್ತರೆ ಕೆಲವರು ಆ ದೃಶ್ಯವನ್ನು ನೋಡಿ ನಿಂತಲ್ಲೇ ತಲೆಸುತ್ತು ಬಂದು ಕೆಳಗೆ ಬಿದ್ದರು.ಕೆಲದಿನಗಳ ಹಿಂದಷ್ಟೇ ತನ್ನ ಕಣ್ಣ ಗುಡ್ಡೆ ಹೊರಬಂದು ವಿಕಾರವಾಗಿ ಸತ್ತು, ಚಿತೆಯಲ್ಲಿ ಸುಟ್ಟು ಭಸ್ಮವಾಗಿದ್ದ ದೀಪಕ್ ರಾವ್ ಭುಜಂಗರಾವಿನ ಕ್ಯಾಬಿನ್ನೊಳಗೆ ಪ್ರತ್ಯಕ್ಷನಾಗಿದ್ದಾನೆ!! ದೀಪಕ್ ಮೆಹ್ತಾನ ಕೈ ಗಳು ಗನ್ ಒಂದನ್ನು ಹಿಡಿದು ರಕ್ತದ ಮಡುವಿನಲ್ಲಿ ಮಲಗಿದ್ದ ಬುಜಂಗ್ ರಾವಿನ ಕಡೆಗೆ ಬೊಟ್ಟುಮಾಡಿರುತ್ತದೆ!

**

Friday, January 18, 2019

ಮೆಹ್ತಾ Killed ಮೆಹ್ತಾ! - Part 1

ಇದ್ದಕ್ಕಿಂದಂತೆ ಶುಭ್ರ ನೀಲಾಕಾಶವನ್ನು ಕರಿಮೋಡಗಳ ಹಿಂಡು ಮುಗಿಬಿದ್ದು ಅವರಿಸತೊಡಗಿದವು. ಅಲ್ಲಿಯವರೆಗೂ ಚಿಲಿಪಿಲಿಗುಡುತ್ತಿದ್ದ ಹಕ್ಕಿಗಳೂ ಸಹ ತಮ್ಮ ತಮ್ಮ ಗೂಡನ್ನು ಸೇರುವ ನೆಪದಲ್ಲಿ ಒಂದೊಂದಾಗಿಯೇ ಕಣ್ಮರೆಯಾಗತೊಡಗಿದವು. ಹೊಂಚು ಹಾಕಿ ಅಡಗಿ ಕೂತಂತಿದ್ದ ಗಾಳಿ ಎಲ್ಲಿಂದಲೋ ರಭಸವಾಗಿ ಬೀಸತೊಡಗಿತು.

ನಂತರದ ಕೆಲ ಕ್ಷಣ ಒಂದು ಮಹಾ ಮೌನ.

'ಇದೆಂತಾ ಕ್ಲೈಮೇಟ್ ಅಜಯ್.. ಪಕ್ಕಾ ಮಳೆ.. ಆಫೀಸ್ನಿಂದ ಬೇಗ ಹೊರ್ಟ್ವೋ, ಬದ್ಕೋತೀವಿ.. ಇಲ್ಲ ಅಂದ್ರೆ ನಾಳೆ ಮೋರಿಲೋ ಕೆರೀಲೋ ಬಿದ್ದಿರ್ತಿವಿ ನೋಡಿ'

'ರೀ , ಯಾಕ್ರೀ ಮಳೆ ಅಂದ್ರೆ ಅಷ್ಟ್ ಎದ್ರುತ್ತಿರ ನೀವು.. ಏನ್ ಒಂಚೂರು ಮಳೆ ಬಂದ್ ಮಾತ್ರಕ್ಕೆ ಊರೇ ಮೂಳ್ಗೋಗುತ್ತಾ.. ಒಳ್ಳೆ ಮಕ್ಳ್ ತರ ಆಡ್ಬೇಡಿ, ತಗೋಳಿ' ಏನುತಾ ಮಹೇಶನ ತುಟಿಯ ಮೇಲಿದ್ದ ಸಿಗರೇಟಿನ ತುದಿಗೆ ಲೈಟರ್ರನ್ನು ಹಿಟ್ಟು ತಾನೂ ಒಂದು ಸಿಗರೇಟನ್ನು ಹೊತ್ತಿಸುತ್ತಾನೆ ಅಜಯ್ ರಾವ್.

'ಹಾಗೇನಿಲ್ಲ ಅಜಯ್, ಈ ಬೇವರ್ಸಿ ಮಳೆ ಬಂದು ಮಾಡೋ ಅನಾಹುತ ಒಂದೋ ಎರಡೂ ಹೇಳಿ. ಆ ಕಡೆ ಹಳ್ಳಿ-ಗಿಳ್ಳಿ ಕಡೆ ಬಂದ್ರೆ ಅದೊಂತರ. ಅದ್ ಬಿಟ್ಟು ಈ ಕಾಂಕ್ರೀಟ್ ಸಿಟಿಗ್ ಬಂದು ಮಾಡೋದು ಏನಿದೆ ಇದ್ರ ಪಿಂಡ' ಏನುತಾ ನಾಲ್ಕೇ ದಮ್ಮಿನಲ್ಲಿ ಎರಡಿಂಚಿನ ಸಿಗರೇಟನ್ನು ಎಳೆದು ಬಿಸಾಕಿದ.

'ತತ್, ರೀ ಅದು ಸಿಗರೇಟ್ ಕಣ್ರೀ .. ಹೆಲ್ತ್ ಮೇಲೆ ನಿಗಾ ಇರ್ಲಿ'

'ಗೊತ್ತು ಬಿಡ್ರಿ ಕಂಡಿದ್ದಾರೆ.. ಏನ್ ಇವತ್ತ್ ಎಳೀತಿಲ್ಲ.. ಬನ್ನಿ ಆಕಡೆ ಹೋಗಿ ಒಂದೆರ್ಡು ಕಪ್ಪ್ ಕಾಫಿ ಕುಡ್ಕೊಂಡ್ ಬರೋಣ.. ಬಂದು ಹೋರ್ಡನ..' ಎಂದು ಇಬ್ಬರೂ ಕಂಪನಿಯ ಗ್ರೌಂಡ್ ಫ್ಲೋರ್ ನಿಂದ ಕೆಲವೇ ಮೀಟರ್ ದೂರದಲ್ಲಿದ್ದ ಗೂಡಂಗಡಿಯ ಕಡೆಗೆ ನೆಡೆಯುತ್ತಾರೆ.

ಗಾಳಿಯ ಬಿರುಸಿಗೆ ಅಜಯ್ ತಾನು ಎಳೆದು ಬಿಡುತ್ತಿದ್ದ ಸಿಗರೇಟಿನ ಹೊಗೆ ಬಾಯಿಂದ ಹೊರಬಾರದೆಯೇ ಎದೆಯೊಳಗೆಯೇ ಅಂತರ್ದಹನವಾಗುತ್ತಿತ್ತು. ಕಪ್ಪು ಮೋಡಗಳ ರಾಶಿ ಮಳೆಗಾಲದ ದಿನಗಳನ್ನು ನೆನೆಸುವಂತಿದ್ದವು. ಗೂಡಂಗಂಡಿಯ ಕಡೆಗೆ ನೆಡೆಯುತ್ತಾ ಎರಡೆಜ್ಜೆ ಹಿಟ್ಟಿರಬಹದಷ್ಟೇ, ಆರು ಅಂತಸ್ತಿನ ಆಫೀಸಿನ ಕಟ್ಟಡದಿಂದ ಒಮ್ಮೆಲೇ ಏನೋ ಕೆಳಗೆ ಬೀಳುತ್ತಿರುವ ಹಾಗೆ ಅಜಯ್ ಗೆ ಅನಿಸುತ್ತದೆ. ಇನ್ನೇನು ಆತ ತಲೆ ಮೇಲೆತ್ತಿ ನೋಡಬೇಕು ಅನ್ನುವಷ್ಟರಲ್ಲಿ ದೊಪ್ಪನೆ ಬಿದ್ದ ಆ ದೇಹ ಛಿದ್ರ ವಿಛಿದ್ರವಾಗಿ ಮುರುಟಿಗೊಂಡಿತು! ಬಿದ್ದ ರಭಸಕ್ಕೆ ಅದರ ಧೈತ್ಯ ಕಣ್ಣಗುಡ್ಡೆಯೊಂದು ಹೊರಬಂದಿದ್ದರೆ ಕೈಕಾಲುಗಳೆಲ್ಲವೂ ಅಷ್ಟ ದಿಕ್ಕುಗಳಿಗೆ ತಿರುಚಿಗೊಂಡಿದ್ದವು. ಕ್ಷಣಮಾತ್ರದಲ್ಲಿ ಜರುಗಿದ ಈ ಘಟನೆಯನ್ನು ಕಂಡ ಮಹೇಶ ಅಕ್ಷರ ಸಹ ಮಾತಿಗೆಟ್ಟವನಂತೆ ವಿಕಾರವಾಗಿ ಅರಚುತ್ತಾ ಆಫೀಸಿನ ಒಳಗೋಡಿದ. ಅಜಯ್ ಮಾತ್ರ ನಿಂತ ನೆಲದಿಂದ ಕದಲಲಿಲ್ಲ. ತನ್ನ ತುಂಡು ಸಿಗರೇಟಿನ ಕೊನೆಯ ಧಮ್ಮನ್ನು ಎಳೆಯುತ್ತಾ ಆರನೇ ಅಂತಸ್ತಿನಿಂದ ಬಿದ್ದರೂ ಒಂದು ತೊಟ್ಟು ರಕ್ತ ಬಾರದ ತನ್ನ ಕಂಪನಿಯ ಮಾಲೀಕನ ಶವವನ್ನು ಸಂಶಯಗಣ್ಣಿನಿಂದ ನೋಡತೊಡಗಿದ!

ಚಿಟಪಟ ಮಳೆಯ ಸದ್ದು ಹೆಚ್ಚಾಗುತ್ತಿದ್ದಂತೆ ಅಜಯ್ ನ ಮೊಗದ ಮೇಲೊಂದು ವಿಚಿತ್ರವಾದೊಂದು ಮಂದಹಾಸ ಮೂಡಿತು. ಅದಾಗಲೇ ಕಂಪನಿಯ ಜಂಟಿ ಮಾಲೀಕ ಮಿಸ್ಟರ್ ದೀಪಕ್ ಮೆಹ್ತಾರ ಸಾವಿನ ಸುದ್ದಿಯನ್ನು ಕೇಳಿ ನೂರಾರು ತಲೆಗಳು ಅಲ್ಲಿ ಬಂದು ಅವರಿಸಿದವು. ''ಅಯ್ಯೋ ದೇವರೇ', 'ಛೆ', 'ಪಾಪ' ಎಂಬ ಆಶ್ಚರ್ಯ ಸೂಚಕಗಳನ್ನು ಬಿಟ್ಟರೆ ಛಿದ್ರಗೊಂಡಿದ್ದ ಆ ದೇಹದ ಬಳಿಗೆ ಮಾತ್ರ ಯಾರೊಬ್ಬರೂ ಸುಳಿಯಲಿಲ್ಲ. ಕಪ್ಪು ಬಣ್ಣದ ಕೋಟಿನ ಮೇಲೆ ಮೊಡವೆ ಒಡೆದಂತೆ ಆ ನಲವತ್ತು ವರ್ಷದ ಕೇಶರಹಿತ ತಲೆ ನೋಡುಗರಿಗೆ ಗೋಚರಿಸುತ್ತಿತ್ತು. ಭಯ ಹುಟ್ಟಿಸುವಂತಿತ್ತು.

'ಎಂಥಾ ಬಾಸ್ ಸರ್ ಇವ್ರು.. ಕಂಪನಿಯ ಅಷ್ಟೋ ಷೇರನ್ನು ಭುಜಂಗರಾವ್ ರಿಗೆ ಮಾರಿ ಸಾಯೋ ಅಂಥದ್ದು ಏನು ಬಂದಿತ್ತೋ ನಾ ಕಾಣೆ ' ಅಳುವ ಧ್ವನಿಯಲ್ಲಿ ಎಂದ ಮಹೇಶನ ಮಾತಿಗೆ ಏನನ್ನೂ ಉತ್ತರಿಸದೆ ನಿಂತ ಅಜಯ್. ಆತನ ತಲೆಯಲ್ಲಿ ಅದಾಗಲೇ ಮುಂದಿನ ಹಾಗುಹೋಗುಗಳು ಗೋಚರಿಸತೊಡಗಿದ್ದವು. ಅವುಗಳಲ್ಲಿ ತನ್ನ ಪಾತ್ರವನ್ನು ಆತ ಗಟ್ಟಿಯಾಗಿಸಿಕೊಳ್ಳತೊಡಗಿದ! ಕೆಲಸಮಯದಲ್ಲೇ ಬಂದ ಪೊಲೀಸ್ ನೆರೆದಿದ್ದ ಜನರನ್ನು ದೂರ ಸರಿಸಿ ಅಲ್ಲಿದ್ದ ಕೆಲವರನ್ನು ವಿಚಾರಿಸತೊಡಗಿದರು.

ಕಂಪನಿಯ ಇನ್ನೋರ್ವ ಮಾಲೀಕ ಭುಜಂಗರಾವ್. ಬಿಸಿನೆಸ್ ಟ್ರಿಪ್ ಗೆ ಹೊರದೇಶಕ್ಕೆ ಹೋಗಿ ಸೀದಾ ಏರ್ಪೋರ್ಟ್ ನಿಂದ ಆಫೀಸಿಗೆ ಬಂದಿದ್ದ. ಕಳೆದ ಎರಡು ತಾಸಿನಿಂದ ತದೇಕಚಿತ್ತದಿಂದ ಕತ್ತಲೆಯ ಮಳೆಯಲ್ಲಿ ತೋಯುತ್ತಿದ್ದ ಶವವನ್ನೇ ನೋಡುತ್ತಿದ್ದ ಆತನನ್ನು ಯಾರೊಬ್ಬರೂ ಮಾತನಾಡಿಸುವ ಧೈರ್ಯವನ್ನು ಮಾಡಲಿಲ್ಲ. ಆದರೆ ಅಲ್ಲಿ ಬಿದ್ದಿದ್ದ ಆ ಶವಕ್ಕೂ ತನಗೂ ಇರುವ ಸಂಬಂಧದ ನಿಜಸತ್ಯವನ್ನೇನಾದರೂ ತಿಳಿದಿದ್ದರೆ ನಿಂತಲ್ಲಿಯೇ ಆತನ ಪ್ರಾಣಪಕ್ಷಿ ಹಾರಿಹೋಗಿದ್ದರೂ ಆಶ್ಚರ್ಯವಾಗುತ್ತಿರಲಿಲ್ಲ!! ಆ ಸಿಡುಕು ಮೊಗದ ಮೇಲೆ ಸಿಟ್ಟಿನ ಛಾಪೊಂದನ್ನು ಬಿಟ್ಟರೆ ಬೇರ್ಯಾವ ಭಾವವನ್ನೂ ಎಂದೂ ಯಾರೊಬ್ಬರೂ ಕಂಡಿರಲಿಲ್ಲ. ಇಂದೂ ಸಹ ಅದೇ ಸಿಡುಕು ಮೊರೆ ಶವವನ್ನು ತೀಕ್ಷ್ಣ ದೃಷ್ಟಿಯಿಂದ ನೋಡುತ್ತಿತ್ತು. ಪೋಲಿಸಿನವರು ಎಲ್ಲರನ್ನು ವಿಚಾರಿಸಿ ಕೊನೆಗೆ ಆತನ ಬಳಿಗೆ ಬಂದರು. ಆತ ಅವರನ್ನು ಕರೆದುಕೊಂಡು ಆಫೀಸಿನೊಳಗೆ ನೆಡೆದ. ಆಂಬುಲೆನ್ಸ್ ಬಂದು ಶವವನ್ನು ಹೊತ್ತೊಯ್ಯುವಷ್ಟರಲ್ಲಿ ರಾತ್ರಿ ಹತ್ತಾಗಿದ್ದಿತು.

ಅದಾದ ಕೆಲದಿನಗಳ ನಂತರ ಮಹೇಶ ಆಫೀಸಿಗೆ ಬಂದವನೇ ರೋಧಿಸತೊಡಗಿದ.

'ಸಾರ್.. ಸಾರ್' ಅಕ್ಷರಸಹ ಅಳುತ್ತಾ ಬಂದ ಮಹೇಶನನ್ನು ಕಂಡು ಕೋಪಗೊಂಡ ಅಜಯ್,

'ತತ್ತ್ ನಿಮ್ಮ.. ರೀ ಏನ್ರಿ ನಿಮ್ದು ಪ್ರಾಬ್ಲಮ್ಮು.. ಮೂವತ್ತು ವರ್ಷ ಆದ್ರೂ ಒಳ್ಳೆ ಮಕ್ಳ್ ತರ ಆಡ್ತೀರಾ..'

'ಸಾರ್ .. ಸಾ.. ರ್..'

'ರೀ! ನನ್ನ ಸರ್ ಅಂತ ಕರಿಯೋಕ್ಕೆ ಯಾರ್ರೀ ಹೇಳಿದ್ದು ನಿಮ್ಗೆ.. ಮುಚ್ಚ್ಕೊಂಡು ಹೆಸ್ರಿಟ್ಟು ಕರೀರಿ' ಎಂದ ಕೂಡಲೇ ಹೆಚ್ಚು ಕಡಿಮೆ ತನ್ನ ಅಣ್ಣನ ವಯಸ್ಸಿನ ವ್ಯಕ್ತಿಗೆ ಹೀಗೆನ್ನಬಾರದಿತ್ತು ಎನಿಸಿತು ಅಜಯನಿಗೆ. ತನ್ನ ಜೂನಿಯರ್ ಆಗಿ ಬಂದು ಇಂದು ತನಗೆ ಮುಚ್ಚ್ಕೊಂಡಿರ್ರಿ ಎಂದ ಮಾತಿಗೆ ಜಾಗೃತನಾದ ಮಹೇಶನೂ ಆಗ ಕೊಂಚ ಅಳುವುದ ನಿಲ್ಲಿಸಿದ. ಆದರೆ ನಂತರದ ಕೆಲವೇ ಕೆಲಕ್ಷಣದಲ್ಲಿ ಪುನ್ಹ ಅಳಲು ಶುರುವಿಟ್ಟುಕೊಂಡ. ಆತನಿಗೆ ಏನೇಳಿದರೂ ಅದು ತನ್ನ ಶಕ್ತಿಪೋಲು ಎಂದುಕೊಂಡು ಅಜಯ್ ತನ್ನ ಕೆಲಸದಲ್ಲಿ ಮಗ್ನನಾದ.

'ರೀ ಅಜಯ್.. ದೀಪಕ್ ಮೆಹ್ತಾ ಸರ್ ಅವ್ರ ಪೋಸ್ಟ್ ಮೊರ್ಟಮ್ ರಿಪೋರ್ಟ್ ಬಂತಂತೆ ರೀ…'

'ಸರಿ ಏನಿವಾಗ?'

'ಏನು ಅಂತೀರಾ , ಮೊನ್ನೆ ತಾನೇ ಅವ್ರು ಬಿದ್ದು ಸತ್ತೋಗಿದ್ದು?'

'ರೀ .. ಅದ್ ನಿಮ್ಗೆನು ಗೊತ್ತಿಲ್ವ?!'

'ಆದ್ರೆ ಪೋಸ್ಟ್ ಮಾರ್ಟಮ್ ರಿಪೋರ್ಟ್ ಪ್ರಕಾರ ಜೀವ ಹೋಗಿ ಕನಿಷ್ಠ ಅಂದ್ರೂ 2 ವಾರ ಆಗಿದೆಯಂತೆ ಸಾರ್!!' ಎಂದು ಮತ್ತೆ ಅಳುತ್ತ ಇಹಲೋಕವನ್ನೇ ಮರೆತ. ಯಾವುದೇ ಭಾವಗಳೂ ಸಹ ಅಜಯ್ನ ಮೊಗದ ಮೇಲೆ ಮೂಡಲಿಲ್ಲ. ಕೀಲಿಮಣೆಗಳ ಟಕಗುಡುವ ಸದ್ದು ಮಾತ್ರ ವಿಪರೀತವಾಯಿತು.

ಕೆಲವಾರಗಳ ಕೆಳಗೆ….

ಮಧ್ಯರಾತ್ರಿಯಾದರೂ ಮಲಗದ ಆ ಸಿಟಿಯ ಹೋಟೆಲೊಂದರಿಂದ ವ್ಯಕ್ತಿಯ ಆಕೃತಿಯೊಂದು ಹೊರಬರುತ್ತದೆ. ತಲೆಯ ತುಂಬಾ ಕಪ್ಪಾದ ಕವರ್ ಆಲ್ ಒಂದನ್ನು ತೊಟ್ಟು, ಕಣ್ಣಿಗೆ ದೊಡ್ಡ ಗಾಜಿನ ವೃತ್ತಾಕಾರದ ಕನ್ನಡಕದ ಜೊತೆಗೆ ಕೈಗಳೆರಡನ್ನು ತನ್ನ ಜೇಬಿನೊಳಗೆ ತೂರಿಸಿ ನೆಡೆಯುವ ಆ ಆಕೃತಿ ಪ್ರತಿದಿನ ಭುಜಂಗರಾವ್ ನ ಚಿನ್ನದ ಅಂಗಡಿಗಳ ಒಳಗೆ ಬರುತ್ತದೆ. ಒಂದಿನಿತೂ ಚಿನ್ನವನ್ನು ಖರೀದಿಸದೆ ಪ್ರತಿಬಾರಿಯೂ ಹತ್ತಾರು ಚಿನ್ನದ ಆಭರಣಗಳನ್ನು ಪಡೆದು ಮುಟ್ಟಿ ಇಟ್ಟು ಕೈಗೆ ಕೊರಳಿಗೆ ಹಾಕಿಕೊಂಡು ಒಂದರ್ಧ ತಾಸಿನ ನಂತರ ಏನನ್ನೂ ಕೊಳ್ಳದೆ ಮರೆಯಾಗುತ್ತಿತು. ನಂತರ ರೂಮಿಗೆ ವಾಪಸ್ಸಾಗುತ್ತಿದ್ದ ಅದು ಜೇಬಿನೊಳಗೆ ಮುಷ್ಠಿ ಮಾಡಿ ಇರಿಸಿಕೊಂಡಿದ್ದ ಕೈಗಳನ್ನು ಹೊರತೆಗೆದು ಪಾತ್ರೆಯೊಂದರಲ್ಲಿ ಇರಿಸಿದ್ದ ನೀರಿನಂತಿದ್ದ ಕೆಮಿಕಲ್ ನೊಳಗೆ ತೊಳೆಯುತ್ತದೆ. ನೋಡ ನೋಡುತ್ತಲೇ ಮಿರಿ ಮಿರಿ ಮಿರುಗುವ ಸಣ್ಣ ಸಣ್ಣ ಚಿನ್ನದ ಕಣಗಳು ಆ ಪಾತ್ರೆಯ ತಳ ಸೇರುತ್ತವೆ! ಸಿಟಿಯ ಎಲ್ಲೆಡೆ ಇದ್ದ ಭುಜಂಗರಾವ್ ನ ಹತ್ತಾರು ಅಂಗಡಿಗಳಿಗೂ ಪ್ರತಿದಿನ ಒಂದರಂತೆ ಹೋಗಿ ದಿನಕ್ಕೆ ಕೆಮಿಕಲ್ ಮೆತ್ತಿದ ತನ್ನ ಕೈಗಳಿಂದ ಕನಿಷ್ಠವೆಂದರೂ ಕಾಲು ಗ್ರಾಂ ಚಿನ್ನವನ್ನು ಲಪಟಾಯಿಸುತ್ತಿತ್ತು ಆ ಆಕೃತಿ. ಹೀಗೆ ಸೋಸಿ ತೆಗೆಯಿತ್ತಿದ್ದ ಚಿನ್ನವನ್ನು ಒಂದು ಸಣ್ಣ ಪೊಟ್ಟಣದೊಳಗೆ ತುಂಬಿ ಆ ಪೊಟ್ಟಣವನ್ನು ದಂಪತಿಗಳಿಬ್ಬರ ಫೋಟೋವಿನ ಮುಂದಿರಿಸುತಿತ್ತು ಮತ್ತು ಕೆಲಕಾಲ ಮೌನವಾಗುತ್ತಿತ್ತು. ನಂತರದ ಕೆಲಹೊತ್ತಿನಲ್ಲಿಯೇ ಬೇರೋದು ಕಾರ್ಯದ ನಿಮಿತ್ತ ರಾತ್ರಿಯೇ ಬುಜಂಗ್ ರಾವಿನ ಆಫೀಸಿನ ಹಿಂಬಾಗಿಲನ್ನು ತಲುಪುತ್ತಿತ್ತು!

Continued ....

Tuesday, January 1, 2019

ಹಸಿರ ಪಯಣ …

ಶಾಂತ ಸಂಜೆಯ ತಿಳಿತಂಪಿನ ಹಿತಕ್ಕೆ ಭಂಗ ತರುವಂತೆ ಬಿಸಿಯಾದ ಗಾಳಿ ಒಮ್ಮೆಲೇ ಬೀಸತೊಡಗಿತ್ತು. ಗಾಳಿಯ ಬೀಸುವಿಕೆಯ ದಿಕ್ಕನ್ನು ಪರಿಗಣಿಸದೆಯೆ ಹಕ್ಕಿಗಳ ಗುಂಪು ತಮ್ಮ ತಮ್ಮ ಗೂಡುಗಳೆಡೆಗೆ ಮುಖಮಾಡಿ ಹಾರತೊಡಗಿದ್ದವು. ಕಪ್ಪು ಬಣ್ಣದ ಟ್ರ್ಯಾಕ್ ಪ್ಯಾಂಟ್, ಅದೇ ಬಣ್ಣದ ಟಿ ಶರ್ಟ್ ಹಾಗು ಅತಿ ಧುಬಾರಿಯಾದೊಂದು ಸ್ಪೋರ್ಟ್ಸ್ ಶೋವನ್ನು ಧರಿಸಿ ಮೋಹನ ಜಾಗಿಂಗ್ ಗೆ ಇಳಿದಿದ್ದ. ವಾಹನಗಳಿಗೆ ಪಾರ್ಕ್ ಮಾಡಲೂ ಸರಿಯಾದ ಸ್ಥಳ ಸಿಗದಿರುವ ಸಿಟಿಯಲ್ಲಿ ಆಟೋಟ, ವ್ಯಾಯಾಮಗಳಿಗೆ ಜಾಗವನ್ನು ಕೊಡುವವರ್ಯಾರು? ವಾಹನಗಳೊಟ್ಟಿಗೆಯೇ ರಸ್ತೆಯ ಪಾದಚಾರಿ ಮಾರ್ಗದ ಮೇಲೆಯೇ ಈತನ ಪ್ರತಿದಿನದ ಓಟ. ಹೃದಯ ಸಿಡಿದು ಹೊರಬರುವವರೆಗೂ ಓಡುವುದ ನಿಲ್ಲಿಸಲಾರೆ ಎಂಬುವಂತಿರುತ್ತದೆ ಈತನ ಓಟದ ಧಾಟಿ. ಸುಮಾರು ಮೂರ್ನಾಲ್ಕು ಕಿಲೋಮೀಟರ್ನಷ್ಟು ಓಡಿದ ನಂತರ ಕಾಫಿ ಶಾಪೊಂದರ ಮುಂದೆ ಕೂತು ಕೊಂಚ ದಣಿವಾರಿಸಿಕೊಳ್ಳುತ್ತಾನೆ. ಅಲ್ಲೂ ತನ್ನ ಮೊಬೈಲನ್ನು ಹೊರಗೆಳೆದು ಆಫೀಸಿನ ಇಮೇಲ್ ಗಳನ್ನು ನೋಡತೊಡಗುತ್ತಾನೆ. ಆಗಷ್ಟೇ ಡವಡವ ಬಡಿದು ಶಾಂತವಾಗಿದ್ದ ಹೃದಯ, ಕ್ಲೈಂಟ್ ಒಬ್ಬನ ಇಮೇಲ್ ಅನ್ನು ಕಂಡು ಪುನಃ ಬಡಿಯಹತ್ತಿತು. ಇನ್ನೊಂದು ಸುತ್ತು ಓಡಲು ಬಾಕಿ ಇದ್ದರೂ ತನ್ನ ರೂಮಿನೆಡೆ ಧಾಪುಗಾಲು ಹಾಕುತ್ತಾನೆ ಮೋಹನ. ರೂಮಿಗೆ ಬಂದವನೆ ಬೆವರಿನ ದಸೆಯಿಂದ ಅಂಟು-ಅಂಟಾಗಿದ್ದ ಬಟ್ಟೆಯನ್ನೂ ಲೆಕ್ಕಿಸದೆ ತನ್ನ ಆಫೀಸಿನ ಲ್ಯಾಪ್ಟಾಪ್ ಅನ್ನು ಹೊರಗೆಳೆದು ಕೆಲಸದಲ್ಲಿ ನಿರತನಾಗುತ್ತಾನೆ. ನೆಟ್ಟ ದೃಷ್ಟಿಯನ್ನು ಒಂತಿಷ್ಟೂ ಕದಲಿಸದೆ, ಕೀಲಿಮಣೆಗಳ ಮೇಲೆ ಸುಮಾರು ಎರಡು ಗಂಟೆಗಳ ಕಾಲ ಟಕಟಕ ಕುಟ್ಟಿದ ನಂತರ ಗಡಿಯಾರವನ್ನು ನೋಡುತ್ತಾನೆ, ಸಮಯ ಅದಾಗಲೇ ರಾತ್ರಿ ಹನ್ನೊಂದು! ಕೂಡಲೇ ಎದ್ದು ಪಕ್ಕದ ಹೋಟೆಲಿನಿಂದ ಊಟವೊಂದಕ್ಕೆ ಆರ್ಡರ್ ಕೊಟ್ಟು, ಸ್ನಾನಾದಿಗಳನ್ನು ಮುಗಿಸಿ ಹೊರಬಂದು ಊಟವನ್ನು ಮುಗಿಸುವಷ್ಟರಲ್ಲಿ ಮಧ್ಯರಾತ್ರಿ 12! ಒಂತಿಷ್ಟು ಸುದ್ದಿ ಸಮಾಚಾರಗಳನ್ನು ನೋಡಲು ಟಿವಿಯನ್ನು ಆನ್ ಮಾಡಿದ ಕೂಡಲೇ ಕಣ್ಣುಗಳ ರೆಪ್ಪೆಗಳು ಒಂದನ್ನೊಂದು ತಬ್ಬಿಕೊಳ್ಳತೊಡಗುತ್ತವೆ. ಅದೆಷ್ಟೋ ಬಾರಿ ಹೀಗೆಯೇ ಸೋಫಾದ ಮೇಲೆಯೇ ಬೆಳಗಿನವರೆಗೂ ಕೂತೇ ನಿದ್ರಿಸಿರುವುದುಂಟು! ಬೆಳಗೆದ್ದು ಮತ್ತದೇ ಓಟದ ಜೀವನ. ವಾರ, ವಾರಾಂತ್ಯ ಎಂಬ ಯಾವುದೇ ವ್ಯತ್ಯಾಸಗಳಿಲ್ಲದೆ 24X7 ಕಾಲದ ಕೆಲಸ. ಮೊದ ಮೊದಲು ಕಿರಿಕಿರಿಗುಡುತ್ತಿದ್ದ ಮೋಹನ ಕಾಲ ಕಳೆದಂತೆ ಇದೆ ಜೀವನಕ್ಕೆ ಒಗ್ಗಿಕೊಂಡಿದ್ದಾನೆ. ಅದೆಷ್ಟರ ಮಟ್ಟಿಗೆಂದರೆ ಆಗೊಮ್ಮೆ ಈಗೊಮ್ಮೆ ಸಿಗುವ ರಜೆಯ ಸಮಯವನ್ನೂ ಮನೆಯಲ್ಲಿ ಕಳೆಯಲಾಗದೆ ಆಫೀಸಿಗೆ ಬಂದು ಒಬ್ಬನೇ ಕೆಲಸ ಮಾಡುವುದುಂಟು!

ಇಂದು ಟಿವಿಯಲ್ಲಿ ಸುದ್ದಿಯನ್ನು ನೋಡುವಾಗ ನಟನೊಬ್ಬ ಕೃಷಿಕನಾದುದರ ಬಗ್ಗೆ ಕಾರ್ಯಕ್ರಮವೊಂದು ಬರುತ್ತಿರುತ್ತದೆ. ನಿದ್ದೆಗಟ್ಟುತ್ತಿದ್ದ ಕಣ್ಣುಗಳೂ ಒಮ್ಮೆಲೇ ತದೇಕಚಿತ್ತದಿಂದ ಎಂಬಂತೆ ಆ ಸುದ್ದಿಯನ್ನು ನೋಡತೊಡಗುತ್ತವೆ. ವೃತ್ತಿಜೀವನದ ಉತ್ತುಂಗದಲ್ಲಿದ್ದ ಆತ ನಟನೆಯನ್ನು ಬಹುವಾಗಿ ಕಡಿಮೆಗೊಳಿಸಿ ಸಿಟಿಯಿಂದ ತುಸು ದೂರದೊಂದು ಊರಿನಲ್ಲಿ ಜಮೀನನ್ನು ಖರೀದಿಸಿ ಪಕ್ಕಾ ಸಾವಯವ ಕೃಷಿಯನ್ನು ಮಾಡುತ್ತಾ, ಕೊಂಚ ಆನ್ಲೈನ್ ಮಾರುಕಟ್ಟೆಯ ಲಾಭವನ್ನೂ ಬಳಸಿಕೊಂಡು ಬೆಳೆದ ಬೆಳೆಗಳನ್ನು ಮಾರುತ್ತಿರುವ ವಿವರಣೆಯನ್ನು ಎಳೆಎಳೆಯಾಗಿ ಬಿತ್ತರಿಸಲಾಗುತ್ತಿತ್ತು. ಜಮೀನಿನಲ್ಲಿ ನಿಂತು ಕ್ಯಾಮೆರಾದ ಮುಂದೆ ತನ್ನ ಕತೆಯನ್ನು ಹೇಳಿಕೊಳ್ಳುತ್ತಿದ್ದ ಆ ನಟನ ಮುಖದಲ್ಲಿ ನೆಮ್ಮದಿಯ ಛಾಯೆ ಎದ್ದುಕಾಣುತ್ತಿತ್ತು.

ಆ ಪ್ರೋಗ್ರಾಮಿನ ಬಹಳ ದಿನಗಳವರೆಗೂ ಮೋಹನ ಆ ನಟನ ಬಗ್ಗೆ ಹಾಗು ಆತನ ಕೃಷಿಜೀವನದ ಬಗ್ಗೆಯೇ ಯೋಚಿಸತೊಡಗಿದ. ವರ್ಷಕ್ಕೆ ಕೋಟ್ಯಂತರ ರೂಪಾಯಿಗಳ ಜೊತೆಗೆ ಲಕ್ಷಕೊಬ್ಬರಿಗೂ ಸಿಗದ ಸ್ಟಾರ್ಡಮ್ ಅನ್ನು ತಂದುಕೊಡುವ ವೃತ್ತಿಯನ್ನು ಬಿಟ್ಟು ಆತ ಕೃಷಿಕನಾಗಲು ಮನಸ್ಸು ಮಾಡಿದಾದರೂ ಹೇಗೆ? ಜಮೀನಿನಲ್ಲಿ ದಿನವಿಡೀ ದುಡಿದು ದಣಿದರೂ ಆತನ ಮುಖದಲ್ಲಿದ್ದ ಆ ನೆಮ್ಮದಿ ಭರಿತ ಮಂದಹಾಸ ತನ್ನ ಗೆಳೆಯರಲ್ಲಿ, ಸಹೋದ್ಯೋಗಿಗಳಲ್ಲಿ ಅಷ್ಟೇ ಏಕೆ ಇಡೀ ಸಿಟಿಯಲ್ಲೇ ಯಾರೊಬ್ಬರ ಮುಖದಲ್ಲೂ ಆತ ಕಂಡಿರುವುದಿಲ್ಲ! ಅಂತಹ ಏನನ್ನು ಆ ಜಮೀನಿನಲ್ಲಿ ಆತ ಪಡೆದಿರಬಹುದು? ಕೃಷಿ ಅರ್ಧ ಘಂಟೆಯ ಆ ಪ್ರೋಗ್ರಾಮಿನಲ್ಲಿ ತೋರಿಸಿದಷ್ಟು ಸುಲಭವೆ? ಪ್ರೆಶ್ನೆ ಮೋಹನನ ತಲೆಯನ್ನು ಕೊರೆಯಲಾರಂಭಿಸಿತು.

ಗೊತ್ತುಗುರಿ ಇಲ್ಲದೆಯೇ ಎಂಬಂತೆ ಓಡುತ್ತಿತ್ತು ಮೋಹನನ ಜೀವನ. ಸುಂದರ ಬದುಕಿನ ಒಂತಿಷ್ಟೂ ರಸಾಸ್ವಾಧನೆಯನ್ನೂ ಮಾಡದೆಯೇ ಅರ್ಥಹೀನ ಬದುಕಿನ ಬಂಡಿಯನ್ನು ಸವೆದ ಅದೆಷ್ಟೋ ಮಂದಿಯ ಸಾಲಿನಲ್ಲಿ ನಾನೂ ನಿಲ್ಲುತ್ತೇನೆಯೇ?! ಎಂಬ ಭಯದ ಪ್ರೆಶ್ನೆಯೊಂದು ಆತನನ್ನು ಬಾಧಿಸತೊಡಗಿತು. ಹಾಗಾದರೆ ಏನು ಮಾಡುವುದು? ಎಲ್ಲಕ್ಕೂ ಒಂದು ಅಲ್ಪವಿರಾಮವನ್ನು ಜಡಿದು ತಿಂಗಳುಗಳ ಕಾಲ ಪ್ರಪಂಚಪರಿಹಟನೆ ಮಾಡುವುದೆಂದು ಯೋಚಿಸುತ್ತಾನೆ. ಆದರೆ ತದಾನಂತರ ಮತ್ತದೇ ಖೈದಿಯ ಜೀವನದ ಪಾಡು. ಈ ಸಮಸ್ಯೆಗೆ ಪರಿಹಾರ ಪೂರ್ಣಾವಧಿಯದ್ದಾಗಿರಬೇಕು. ಜೊತೆಗೆ ಬದುಕೂ ಆರ್ಥಮಯವಾಗಿದ್ದಿರಬೇಕು. ಆದರೆ ಬೆಂಬಿಡದ ನೆರಳಿನಂತಾಗಿರುವ ಕೆಲಸದ ಗೀಳು ಅಷ್ಟು ಸುಲಭವಾಗಿ ಜಾರಬಲ್ಲದೇ! ಇಂದು ಸರಿಯೆನಿಸಿದರೂ ನಾಳೆ ಒಂದಲ್ಲ ಒಂದು ಕಾರಣಕ್ಕೆ ನನ್ನ ನಿರ್ಧಾರವನ್ನು ನಾನು ಜರಿದುಕೊಳ್ಳಬಾರದು ಎಂದುಕೊಳ್ಳುತ್ತಾನೆ.

ಆರೋಗ್ಯದ ಬಗ್ಗೆ ಅತ್ಯಧಿಕ ಕಾಳಜಿಯನ್ನು ವಹಿಸುವ ಮೋಹನ ಆಹಾರಾದಿಗಳನ್ನು ಸೇವಿಸುವ ಮುನ್ನ ತುಂಬಾನೇ ಜಾಗರೂಕನಾಗಿರುತ್ತಾನೆ. ಅಂದೊಮ್ಮೆ ದೇಶದಲ್ಲಿ ಕ್ರಿಮಿನಾಶಕಗಳ ಬಗ್ಗೆ ಸರ್ಕಾರಗಳಿಗಿರುವ ಅಸಡ್ಡೆಯ ಬಗ್ಗೆ ಚರ್ಚೆಯಾಗುತ್ತಿದ್ದದ್ದನು ಟಿವಿಯಲ್ಲಿ ನೋಡುತ್ತಾನೆ. ಮುಂದುವರೆದ ಅದೆಷ್ಟೋ ದೇಶಗಳಲ್ಲಿ ಇಂದು ಯಾವುದೇ ರಾಸಾಯನಿಕಗಳಿಲ್ಲದೆ ಶುದ್ಧ ಜೈವಿಕ ಕೃಷಿಯನ್ನು ಅನುಸರಿಸಿ ಮಿಕ್ಕಿ ಉಳಿಯುವಷ್ಟು ಆರೋಗ್ಯಕರ ಆಹಾರವನ್ನು ಬೆಳೆಯುವ ಉದಾಹರಣೆಗಳಿದ್ದರೂ ಜೈವಿಕ ಕೃಷಿಯ ತವರೂರಾದ ನಮ್ಮಲ್ಲೇ ಅದರ ಬಗ್ಗೆ ಆಸಕ್ತಿ ಇಲ್ಲದಿರುವುದು, ಜೊತೆಗೆ ಇಂದಿನ ಬಹುತೇಕ ''ಆಧುನಿಕ' ರೈತರೆಂದೆನಿಸಿಕೊಂಡವರು ಕೇವಲ ಹಣದ ಉದ್ದೇಶದ ವಿನಃ ಯಾವುದೇ ಪರಿಸರ ಕಾಳಜಿ ಇಲ್ಲದೆಯೇ ಮಾಡುವ ಕೃಷಿ, ಅಲ್ಲದೆ ಇಂದು ಸಸಿಯಿಂದಿಡಿದು ಪೈರಿನವರೆಗೂ ಬೆಳೆಸುವ ಕೀಟನಾಶಕಗಳು ರೈತರಷ್ಟೇ ಅಲ್ಲದೆ ಗ್ರಾಹಕರ ಆರೋಗ್ಯವನ್ನೂ ಹಾಳುಗೆಡವುತ್ತಿದ್ದರೂ ಸರ್ಕಾರಗಳು ಅಂತಹ ಕೀಟನಾಶಕಗಳನ್ನು ರದ್ದುಪಡಿಸುವ ಬದಲು ಅಂತಹ ಕಂಪನಿಗಳನ್ನು ಬೆಳೆಸಿಕೊಂಡು ಬರುತ್ತಿವೆ ಎಂಬ ವಿಷಯಗಳ ಬಗ್ಗೆ ಗಹನವಾಗಿ ಚರ್ಚೆಯಾಗುತ್ತಿತ್ತು. ಹೀಗೆ ಪರೋಕ್ಷವಾಗಿ ದೇಹವನ್ನು ಸೇರುತ್ತಿರುವ ವಿಷಪೂರಿತ ಆಹಾರವನ್ನು ನಾವು ದಿನನಿತ್ಯ ಸೇವಿಸುತ್ತಿದ್ದೇವೆ ಎಂದು ಕೇಳಿದಾಗ ಮೋಹನನಿಗೆ ತಳಮಳವಾಗತೊಡಗಿತು. ದೇಹಕ್ಕೆ ಸೇರುವ ವಿಷವನ್ನೇ ಗುರುತಿಸಲಾಗದ ಮೇಲೆ ನಾವು ಆಧುನಿಕರೆಂದು ಕರೆಸಿಕೊಂಡರೂ ಏನು ಪ್ರಯೋಜನ? ಬಹುದಿನಗಳಿಂದ ಪಕ್ವಗೊಳ್ಳುತ್ತಿದ್ದ ನಿರ್ಧಾರ ಇಂದು ದೃಢವಾಯಿತು. ಏನಾದರಾಗಲಿ ಜಮೀನೊಂದನ್ನು ಖರೀದಿಸಿ ನನ್ನ ಆಹಾರವನ್ನು ನಾನೇ ಬೆಳೆದುಕೊಳ್ಳಬೇಕು. ಉತ್ಕೃಷ್ಟ ಮಟ್ಟದ ಜೈವಿಕ ಕೃಷಿಯನ್ನು ಅನುಸರಿಸಿ ಇತರರಿಗೆ ಮಾದರಿಯಾಗಬೇಕು. ಕೂಡಲೇ ಪೋಷಕರಿಗೆ ಫೋನಾಯಿಸಿ ಊರಿನ ಬಳಿ ಯಾವುದಾದರೊಂದು ಸಾಧಾರಣ ಬೆಲೆಯ ಜಮೀನನ್ನು ನೋಡಲು ಹೇಳುತ್ತಾನೆ.

ದಾರಿ ಕಷ್ಟಕರವಾಗಿದೆಯೆನಿಸಿದರೂ ನಡೆ ಆತನಿಗೆ ಸ್ಪಷ್ಟವಾಗಿತ್ತು. ಆ ಸ್ಪಷ್ಟತೆಯಲ್ಲಿಯೇ ವರ್ಣಾತೀತವಾದೊಂದು ನೆಮ್ಮದಿ ಮನೆಮಾಡಿತ್ತು.ಮೋಹನ ಕೆಲಸ ಬಿಡುತ್ತಿರುವ ಕಾರಣವನ್ನು ಕೇಳಿ ದಂಗಾದ ಕಂಪನಿಯ ಮಾಲೀಕ ಆತನಿಗೆ ಮನೆಯಿಂದ ಕೂತೆ ಕೆಲಸವನ್ನು ಮಾಡುವಂತೆ ಕೇಳಿಕೊಳ್ಳುತ್ತಾನೆ ಹಾಗು ಆತನ ನೆಡೆಗೆ ಮೆಚ್ಚುಗೆಯನ್ನೂ ಸೂಚಿಸುತ್ತಾನೆ. ನೋಡನೋಡುತ್ತಲೇ ಮೋಹನ ಸಿಟಿಯ ಒತ್ತಡದ ಜೀವನಕ್ಕೆ ಪೂರ್ಣವಿರಾಮವನ್ನು ಜಡಿದು ತನ್ನ ಊರನ್ನು ಸೇರುತ್ತಾನೆ. ಅಮ್ಮನ ಕೈಯಡುಗೆಯ ಊಟ, ಬೇಸಿಗೆಯಲ್ಲೂ ತಂಪು ಗಾಳಿಯನ್ನು ಬೀಸುವ ಪರಿಸರ, ಅಲ್ಲೊಂದು ಇಲ್ಲೊಂದು ಮೂಡುವ ವಾಹನಗಳ ಸದ್ದನ್ನೂ ಹತ್ತಿಕ್ಕುವ ಹಕ್ಕಿಗಳ ಚಿಲಿಪಿಲಿ ನಾದ, ಅಷ್ಟ ದಿಕ್ಕುಗಳಿಗೂ ಹರಡಿರುವ ಹಸಿರ ನೇಸರ ಮನಸ್ಸಿಗೆ ಮಹಾನೆಮ್ಮದಿಯನ್ನು ನೀಡುತ್ತಿದ್ದವು. ಕೆಲದಿನಗಲ್ಲೇ ಮನೆಯಿಂದ ಕೊಂಚದೂರದಲ್ಲಿ ಮೂರೆಕರೆ ಗದ್ದೆಯನ್ನು ಖರೀದಿಮಾಡಿದ. ಜಮೀನು ಖಾಲಿಯಾಗಿದ್ದರಿಂದ ಮೋಹನ ತನಗೆ ಬೇಕೆನಿಸಿದ ಹಾಗೆ ಕೃಷಿಯನ್ನು ಶುರುವಿಟ್ಟುಕೊಳ್ಳಬಹುದೆಂಬ ಲೆಕ್ಕಾಚಾರ.

ನಿಸರ್ಗದ ಸಹಜ ಸುಂದರತೆಯನ್ನು ಸವಿಯಲು ಎಂಬಂತೆ ಮೂಡಣದಲ್ಲಿ ಬೆಳಕು ಮೂಡುವುದರೊಳಗೆ ಎದ್ದು ರೆಡಿಯಾಗಿ, ಯೋಗಾದಿಗಳನ್ನು ಮಾಡಿ, ಕೈಯಲ್ಲಿ ಕಾಫಿಯ ಕಪ್ಪೊಂದನ್ನು ಹಿಡಿದು ಹಕ್ಕಿಗಳ ಇಂಚರ ಹಾಗು ಮುಂಜಾವಿನ ಹಿಂದೂಸ್ತಾನಿ ರಾಗಗಳ ಹಿನ್ನಲೆಯಲ್ಲಿ ಸೂರ್ಯದೇವ ನಿಧಾನವಾಗಿ ವಿಸ್ತರಿಸುವುದನ್ನು ನೋಡುತ್ತಾ ನಿಂತರೆ ಆ ನಯನ ಮನೋಹರ ದೃಶ್ಯದಲ್ಲಿ ಅಕ್ಷರ ಸಹ ನಿಂತ ಕಲ್ಲಾಗಿಬಿಡುತ್ತಾನೆ ಮೋಹನ. ಅದೆಷ್ಟೋ ಹೊತ್ತಿನ ನಂತರ ಅಮ್ಮನ ಕೂಗುವಿಕೆಗೆ ಓಗೊಟ್ಟು, ಕೆಳಗಿಳಿದು ಬಂದು ತಿಂಡಿಯನ್ನು ತಿಂದು, ಆಫೀಸಿನ ಇಮೇಲ್ ಗಳ ಮೇಲೆ ಹಾಗೆಯೇ ಒಮ್ಮೆ ಕಣ್ಣಾಯಿಸಿ, ಗುದ್ದಲಿಯನ್ನಿಡಿದು ಗದ್ದೆಗೆ ಹೊರಟರೆ ವಾಪಸ್ಸು ಬರುತ್ತಿದ್ದದ್ದು ಮದ್ಯಾಹ್ನದ ಊಟಕ್ಕೆ. ಗದ್ದೆಯ ಸುತ್ತಲೂ ಬೇಲಿಯನ್ನು ಹಾಕಿ, ನೆಲವನು ಹಗೆದು 'ಕಾವೇರಿ' ತಳಿಯ ಕಾಫಿ ಗಿಡಗಳನ್ನು ಮತ್ತು ಪಕ್ಕದ ಒಂದೆಕರೆ ಜಮೀನಿನಲ್ಲಿ ಭತ್ತವನ್ನು ಹಾಗು ಮನೆಗೆ ಸಾಕಾಗುವಷ್ಟು ಸೊಪ್ಪು ತರಕಾರಿಗಳನ್ನು ಬೆಳೆಯುವುದಾಗಿಯೂ ಯೋಜನೆಯನ್ನು ಹಾಕಿಕೊಂಡಿರುತ್ತಾನೆ. ಅಷ್ಟರಲ್ಲಾಗಲೇ ಜೈವಿಕ ಕೃಷಿ ಹಾಗು ಅದಕ್ಕೆ ಬಳಸುವ ನೈಸರ್ಗಿಕ ಗೊಬ್ಬರಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದ ಆತ ಗಿಡಗಳನ್ನು ನೆಡುವ ಮೊದಲು ನೆಲವನ್ನು ಪೋಷಕಾಂಶಭರಿತ ನೆಲವನ್ನಾಗಿ ಪರಿವರ್ತಿಸಲು ಯೋಜಿಸಿರುತ್ತಾನೆ. ಇಂದು ಬೆಳಗ್ಗೆ ಜಮೀನಿಗೆ ಬಂದವನೇ ಪಕ್ಕದ ಊರಿನಿಂದ ಬಂದ ಕೆಲಸಗಾರರೊಡಗೂಡಿ ಸಗಣಿ ಹಾಗು ಇತರೆ ನೈಸರ್ಗಿಕ ವಸ್ತುಗಳಿಂದ ಮಾಡಿದ್ದ ಕಾಂಪೋಸ್ಟ್ ಗೊಬ್ಬರವನ್ನು ಜಮೀನಿನ ಪೂರಾ ಚೆಲ್ಲತೊಡಗುತ್ತಾನೆ. ಗೊಬ್ಬರದ ನಾತ ಮೂಗಿಗೆ ದೊಪ್ಪನೆ ಬಡಿಯುತ್ತಿದ್ದರೂ ಮೋಹನ ಅವುಗಳಿಗೆಲ್ಲ ಒಗ್ಗಿಕೊಂಡಿರುವಂತೆ ಕಾಣುತ್ತದೆ. ಒಂದೆರೆಡು ಹದದ ಬೇಸಿಗೆಯ ಮಳೆಯೂ ಬಂದ್ದಿದ್ದರಿಂದ ಮಣ್ಣು ಗೊಬ್ಬರವನ್ನೆಲ್ಲ ಚೆನ್ನಾಗಿ ತನ್ನಲ್ಲಿ ಬೆರೆಸಿಕೊಂಡಿತು.

ಊರ ಮೇಲ್ಮನೆಯ ದೊಡ್ಡೇಗೌಡ ಮೋಹನ ಊರಿಗೆ ವಾಪಸ್ಸಾಗಿನಿಂದಲೂ ಈತನ ಚಲನವಲನಗಳನ್ನೇ ಗಮನಿಸುತ್ತಿರುತ್ತಾನೆ. ಸಣ್ಣವನಿಂದಲೂ ಊರ ಹೊರಗೆಯೇ ಬೆಳೆದ ಮೋಹನನನ್ನು ಅಷ್ಟಾಗಿ ಬಲ್ಲದ ಆತ ಪ್ರತಿಬಾರಿಯೂ ಮಾತನಾಡಲು ಅಂಜಿಕೆ ಪಡುತ್ತಿರುತ್ತಾನೆ. ಊರಿಗೆ ಹಿರಿಕನಾದ ಆತ ಪ್ರತಿದಿನ ಬೆಳಗೆದ್ದು ತನ್ನ ಮನೆಯ ದನಕರುಗಳನ್ನು ಊರಿನ ಗೋಮಾಳಕ್ಕೆ ತಂದು ಬಿಡುವುದು ನಂತರ ಮಧ್ಯಾಹ್ನದವರೆಗೂ ಇತರೆ ರೈತರ ಕಷ್ಟ ಸುಖಗಳನ್ನು ಆಲಿಸುವುದು, ತನ್ನ ಅನುಭವದ ವಿಚಾರಧಾರೆಯನ್ನು ಅವರಲ್ಲಿ ಅಂಚಿಕೊಳ್ಳುವುದು ಮಾಡುತ್ತಿರುತ್ತಾನೆ. ಭಾಗಶಃ ಸಿಟಿಯಲ್ಲೇ ಬೆಳೆದಿದ್ದ ಮೋಹನನ ಕೃಷಿಯಾಸಕ್ತಿಗೆ ಖುಷಿಪಟ್ಟ ದೊಡ್ಡೇಗೌಡ ಇಂದು ಏನಾದರಾಗಲಿ ಆತನನ್ನು ಮಾತನಾಡಿಸಲೇಬೇಕೆಂಬ ಹಠದಿಂದ ಉಳುಮೆ ಮಾಡುತ್ತಿದ್ದ ಗದ್ದೆಯ ಬಳಿ ಬಂದು ನಿಲ್ಲುತ್ತಾನೆ. ಬಿಳಿಯಾದ ಧೋತಿ ಕಪ್ಪು ಕೋಟು ಹಾಗೆ ತಲೆಗೊಂದು ಹತ್ತಿಯ ಟೋಪಿಯನ್ನು ಧರಿಸಿ ಊರುಗೋಲನ್ನು ಕಾಟಾಚಾರಕ್ಕೆ ಎಂಬಂತೆ ಹಿಡಿದುಕೊಂಡಿದ್ದ ದೊಡ್ಡೇಗೌಡನನ್ನು ನೋಡಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಬಳಿಗೆ ಬರುತ್ತಾನೆ ಮೋಹನ.

'ಹ್ಯಾಗಿದ್ದೀಯಪ್ಪ.. ಮೋನಾ.. ನಾ ಯಾರ್ ಗೊತ್ತೈತ' ಎಂದು ದೊಡ್ಡೇಗೌಡರು ಕೇಳಿದಾಗ,

'ಗೊತ್ತು ಗೌಡ್ರೆ.. ನಮ್ಮಪ್ಪ ನಿಮ್ ಬಗ್ಗೆ ಬಹಳಾನೇ ಹೇಳ್ತಿರ್ತಾರೆ.. ರೈತ್ರ ಪರವಾಗಿ ಮಾಡಿದ ಕೆಲ್ಸಕ್ಕೆ ಸರ್ಕಾರ ನಿಮ್ಗೆ ಸನ್ಮಾನವನ್ನು ಮಾಡಿದೆಯಂತೆ' ಎನ್ನುತ್ತಾನೆ.

'ಹೊ, ಅದಾಗಿ ಆಗ್ಲೇ ಏಟ್ ವರ್ಷ ಆತೋ. ಅದೂ ಒಂದ್ ಕಾಲನೇ ಬಿಡು.' ಎಂದು ನಿಟ್ಟುಸಿರು ಬಿಡುತ್ತಾ ಮೋಹನನ ಬಗ್ಗೆ, ಆತನ ಈ ನಿರ್ಧಾರದ ಬಗ್ಗೆ, ಕೃಷಿಗೆ ಅನುಸರಿಸುತ್ತಿರುವ ವಿಧಾನಗಳ ಬಗ್ಗೆ ಅವರು ತಿಳಿಯತೊಡಗುತ್ತಾರೆ. ಎಲ್ಲವನ್ನೂ ಕೂಲಂಕುಷವಾಗಿ ಕೇಳಿ ತಿಳಿದ ಮೇಲೆ ಗೌಡರು ಹೆಮ್ಮೆಯಿಂದ ಮೋಹನನ್ನು ಹೊಗಳುತ್ತಾರೆ. ಈತನ ಆಸಕ್ತಿಯ ಕಿಂಚಿತ್ತಾದರೂ ಊರ ಯುವಕರಿಗೆ ಇದ್ದಿದ್ದರೆ ರಾಶಿ ರಾಶಿಯಷ್ಟು ಜಮೀನು ಹೀಗೆ ಹಾಳುಬಿಳುತ್ತಿರಲಿಲ್ಲ ಅಲ್ಲದೆ ಅವರಿಗೆಲ್ಲ ಇಂದು ಜಮೀನೆಂದರೆ ಕೇವಲ ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯುವುದು ಹಾಗು ಮುಂದಿನ ವರ್ಷ ಆ ಸಾಲ ಮನ್ನವಾಗುವುದನ್ನೇ ಕಾಯುಯುವುದಷ್ಟೇ ಆಗಿದೆ ಎಂದು ತಮ್ಮ ಹತಾಶೆಯನ್ನು ವ್ಯಕ್ತಪಡಿಸುತ್ತಾರೆ.

ತಾವು ಅಟ್ಟಿಕೊಂಡು ಬಂದಿದ್ದ ದನಗಳೆಲ್ಲ ಅದಾಗಲೇ ದೂರ ಸಾಗಿದ್ದರೂ ಕಪ್ಪು ಬಣ್ಣದ ಮೇಲೆ ಬಿಳಿಯ ಕಲೆಗಳಿದ್ದ ಹಸುವೊಂದು ಮೋಹನ ದಾಟಿ ಬಂದ ಬೇಲಿಗಂಡಿಯ ಬಳಿಗೂಗಿ ನಿಂತಿತ್ತು. ಅತ್ಯಂತ ಶಿಸ್ತಿನ ಬಂಗಿಯಲ್ಲಿ ನಿಂತಿದ್ದ ಅದು ಮೋಹನನ ಗದ್ದೆಯ ಏರಿಯ ಮೇಲಿದ್ದ ಹಸಿರು ಹುಲ್ಲನ್ನೇ ನೋಡುತ್ತಾ ತನ್ನ ಕೊರಳ ಘಂಟೆಯನ್ನು ಅಲುಗಾಡಿಸುತಿತ್ತು. ಹಸುವನ್ನು ನೋಡಿದ ಗೌಡರು 'ನೋಡಪ್ಪ, ನಿಮ್ಮನೆಗೆ ದಿನ ಹಾಲು ಕೊಟ್ಟು ಇವಾಗ ಹುಲ್ಲ್ ಬೇಕು ಅಂತ ನಿಂತಿದೆ' ಎಂದು, ಜಿನ್ನಿ ಎಂದು ಕರೆಯುತ್ತಿದ್ದ ಆ ಹಸುವನ್ನು ತೋರಿಸುತ್ತಾರೆ. ಅದು ಹಾಲಿನ ಸ್ವಾದವೋ ಅಥವಾ ಕಾಫಿಯ ಮಹಿಮೆಯೋ ಒಟ್ಟಿನಲ್ಲಿ ಮುಂಜಾವಿನಲ್ಲೊಂದು ಹಾಲಿನ ಕಾಫಿಯನ್ನು ಬಿಡಲಾರದೇನೋ ಎಂಬಂತಾಗಿದ್ದ ಮೋಹನ ಜಿನ್ನಿಯ ಬಳಿಗೋಗಿ ಆಕೆಯ ತಲೆಯನೊಮ್ಮೆ ಸವರುತ್ತಾನೆ. ತನ್ನ ಕಿವಿ ಚಟ್ಟೆಗಳೆರಡನ್ನೂ ಸರ್ರನೆ ಹಿಂದಕ್ಕೆ ಸರಿಸಿ ಬಾಲವನ್ನು ಅತ್ತಿಂದಿತ್ತಾ ಇತ್ತಿಂದತ್ತ ಅಲುಗಾಡಿಸಿದ ಸೂಚನೆಯನ್ನು ಅರಿತ ಮೋಹನ ಕೂಡಲೇ ಗದ್ದೆಗಿಳಿದು ಎತೇಚ್ಚವಾಗಿ ಬೆಳೆದಿದ್ದ ಎಳೆಯ ಹಸಿರು ಹುಲ್ಲನ್ನು ಒಂದು ಹೊರೆಯಷ್ಟಾಗುವಷ್ಟು ತಂದು ಆಕೆಗೆ ತಿನ್ನಿಸತೊಡಗುತ್ತಾನೆ. ಉಲ್ಲಾಸದಿಂದ ಹುಲ್ಲನ್ನು ತಿಂದ ಜಿನ್ನಿ ಪಕ್ಕದ ಹಳ್ಳದಲ್ಲಿ ನೀರೊಂದಿಷ್ಟನ್ನು ಹೀರಿ ಪುನ್ಹ ಇತರೆ ದನಗಳ ಹಾದಿಯನ್ನು ಹಿಡಿದಳು.

ಅಂದಿನಿಂದ ಪ್ರತಿದಿನವೂ ಗೌಡರ ಬಳಿ ಒಂದಿಷ್ಟು ಲೋಕಾರೂಢ ಮಾತು, ಜಿನ್ನಿಗೆ ಹುಲ್ಲು ತಿನ್ನಿಸುವುದು ಮೋಹನನ ದಿನಚರಿಯಲ್ಲಿ ಸೇರಿಕೊಂಡಿತ್ತು. ಹೊಸ ಗಿಡಗಳಿಗೆ ಬೇಕಾದ ಹಾರೈಕೆ ಹಾಗು ಗದ್ದೆಯ ನಾಟಿ ಹಾಗು ಇನ್ನಿತರ ಕೆಲಸಗಳಿಗೆ ಗೌಡರ ಮಾರ್ಗದರ್ಶನ ಮೋಹನನಿಗೆ ವಿಪರೀತವಾಗಿ ಇಷ್ಟವಾಯಿತು. ಜೊತೆಗೆ ಮೋಹನನೂ ಗೌಡರನ್ನು ಆಗಿಂದಾಗೆ ಮನೆಗೆ ಕರೆದುಕೊಂಡು ಹೋಗಿ ಜೈವಿಕ ಕೃಷಿ, ಹನಿ ನೀರಾವರಿ ಪದ್ಧತಿ, ಮಳೆ ನೀರಿನ ಸಂಗ್ರಹಣೆ ಹಾಗು ಇನ್ನಿತರ ವಿಷಯಗಳ ಬಗ್ಗೆ ತನ್ನ ಲ್ಯಾಪ್ಟಾಪಿನ ಮೂಲಕ ತೋರಿಸುತ್ತಿದ್ದ. ಅಲ್ಲದೆ ಅವರ ಕಲಿಕಾ ಸಾಮರ್ಥ್ಯವನ್ನು ಹಾಗು ಅವರ ತರ್ಕಬದ್ಧ ಪ್ರೆಶ್ನೆಗಳ ಚೂಬಾಣಗಳಿಗೆ ವಿಸ್ಮಿತನೂ ಆಗುತ್ತಿದ್ದ. ಅದೆಷ್ಟೋ ಭಾರಿ ಆಧುನಿಕ ಕೃಷಿಯೆಂದು ವಿವರಿಸುತ್ತಿದ್ದ ವಿಷಯಗಳಿಗೆ ತದ್ವಿರುದ್ದವಾಗಿ ಮೂಡುತ್ತಿದ್ದ ಗೌಡರ ಪ್ರೆಶ್ನೆಗಳಿಗೆ ಮೋಹನನಲ್ಲಿ ಉತ್ತರವೇ ಇರುತ್ತಿರಲಿಲ್ಲ! ಆಗ ಘಂಟೆಗಳ ಕಾಲ ಅವರ ವಾದಸರಣಿ ಜರುಗುತ್ತಿತ್ತು. ಹೀಗೆ ಒಂದು ದಿನವೂ ಗೌಡರನ್ನಾಗಲಿ ಜಿನ್ನಿಯನ್ನಾಗಲಿ ಕಾಣದೆ, ಅವರೊಟ್ಟಿಗೆ ಮಾತನಾಡಿಸದೆ ಇರಲಾಗುತ್ತಿರಲಿಲ್ಲ ಮೋಹನನಿಗೆ. ಜಿನ್ನಿಗೆ ಒಂದಿಷ್ಟು ಹುಲ್ಲನ್ನು ತಿನ್ನಿಸಿ ಆಕೆಯ ತಲೆಯನ್ನೊಮ್ಮೆ ಸವರದಿದ್ದರೆ ಅದೇನೋ ಒಂದು ಅಮೂರ್ತ ಭಾವದ ಕೊರತೆ ಆತನಿಗೆ ಕಾಡುತ್ತಿತ್ತು. ಒಂದೊಮ್ಮೆ ಗೌಡರೇನಾದರೂ ಇತ್ತ ಕಡೆ ಬಾರದಿದ್ದರೆ ಈತನೇ ಖುದ್ದಾಗಿ ಅವರ ಮನೆಯ ಬಳಿಗೋಗಿ ಅವರನ್ನು ವಿಚಾರಿಸಿಕೊಂಡು ಬರುತಿದ್ದ. ಆ ಹಿರಿಯ ಹಾಗು ಕಿರಿಯ ಗೆಳೆಯರಿಬ್ಬರನ್ನು ಕಂಡು ಊರಿನವರಿಗಂತೂ ಮಹದಾಶ್ಚರ್ಯ!

ದಿನ ಕಳೆದಂತೆ ಮೋಹನನ ಜಮೀನು ಹಸಿರಿನಿಂದ ಕಂಗೊಳಿಸತೊಡಗಿತ್ತು. ಒಂದೆಡೆ ತಮ್ಮ ಪುಟ್ಟಪುಟ್ಟ ಎಲೆಗಳನ್ನು ಹೊರಬಿಡುತ್ತಾ ಚಿಗುರುತ್ತಿದ್ದ ಎಳೆಯ ಕಾಫಿ ಸಸಿಗಳು, ಮತ್ತೊಂದೆಡೆ ತಿಳಿಹಸಿರ ಚಿನ್ನದಂತಹ ಭತ್ತದ ಪೈರು ನಯನಗಳಷ್ಟೇ ಅಲ್ಲದೆ ಮನಸ್ಸಿಗೂ ಮುದವನ್ನು ನೀಡುತ್ತಿದ್ದವು. ಕೆಲತಿಂಗಳ ಹಿಂದಷ್ಟೇ ಕಾಂಕ್ರೀಟ್ ನಾಡಿನಲ್ಲಿ ಗಾಳಿ ಬೆಳಕಿರದ ಜೈಲಿನೊಳಗೆ ತಳ್ಳುವಂತಹ ಜೀವನವನ್ನು ಸಾಗಿಸುತ್ತಿದ್ದ ಮೋಹನ ಇಂದು ಅಕ್ಷರ ಸಹ ಹಾರುವ ಹಕ್ಕಿಯಂತಾಗಿದ್ದಾನೆ. ಪೈರುಗಳು ಆತನಿಗೆ ಇಳುವರಿಯನ್ನು ತಂದುಕೊಡುವ ಸರಕೆನಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ತಾನೇ ಹೆತ್ತು ಹೊತ್ತು ಬೆಳೆಸಿದ ಮಕ್ಕಳೇನೋ ಎಂಬ ಭಾವ ಆತನಿಗೆ ಬೆಳೆದಿರುತ್ತದೆ. ಅಲ್ಲದೆ ಅಷ್ಟೊಂದು ಪ್ರೀತಿ ಕಾಳಿಜಿಯಿಂದ ಬೆಳೆಸಿದ ಭತ್ತದ ಪೈರನ್ನು ಕೇವಲ ಒಂತಿಷ್ಟು ಅಕ್ಕಿಯ ಕಾಳುಗಳ ಆಸೆಯಲ್ಲಿ ಕತ್ತನು ಕತ್ತರಿಸುವುದೇ?! ಏನಾದರಾಗಲಿ, ಯಾರಾದರು ಏನನ್ನನಾದರೂ ಮಾತಾಡಿಕೊಳ್ಳಲ್ಲಿ, ಈ ಬಾರಿ ಭತ್ತದ ಪೈರ ಕಟಾವು ಮಾಡಲೇ ಬಾರದೆಂದು ಆತ ತನ್ನಲ್ಲೇ ತೀರ್ಮಾನಿಸಿರುತ್ತಾನೆ! ಆ ನಿಶ್ಚಯ ಆತನಲ್ಲಿ ದೃಢವಾಗಿರುತ್ತದೆ. ಇತ್ತೀಚಿಗೆ ಅತ್ತಕಡೆಯಿಂದ ಇತರ ದನಕರುಗಳೊಡಗೂಡಿ ಬರುವ ಜಿನ್ನಿಯೂ ಸಹ ಮೋಹನನ ಆರೈಕೆಗೋ ಏನೋ ಎಂಬಂತೆ ಆತನ ಜಮೀನಿನ ಮುಂದಿನ ಹಾದಿಯನು ಹಿಡಿಯುತ್ತಿರಲೇ ಇಲ್ಲ. ಅದೆಷ್ಟೇ ಹುಲ್ಲನ್ನು ತಂದು ಹಾಕಿದರೂ ಎಲ್ಲವನ್ನು ತಿಂದು ಮೋಹನನ ಕೈಗಳೆನ್ನೆ ನೆಕ್ಕುತ್ತಾ ಅಲ್ಲೇ ಒಂದು ಮರದ ನೆರಳಿನಲ್ಲಿ ದಣಿವಾರಿಸಿಕೊಂಡು ಸಂಜೆ ಬರುವ ಮತ್ತದೇ ದನಕರುಗಳ ಸಾಲಿಗೆ ಸೇರಿಕೊಳ್ಳುತ್ತದೆ. ಮೋಹನನಿಗೂ ತನ್ನ ಮಾತುಗಳನ್ನು ಪ್ರೆಶ್ನಿಸದೆ ಸುಮ್ಮನೆ ಕೇಳುವ ಯಾರೊಬ್ಬರಾದರೂ ಬೇಕಿದ್ದರಿಂದ ಆಕೆಯನ್ನು ಜಮೀನಿನೊಳಗೆಯೆ ಹುಲ್ಲನ್ನು ಮೇಯಲು ಬಿಡುತ್ತಿದ್ದ.

ಮಧ್ಯಾಹ್ನದ ಬಿಸಿಲಿಗೆ ಪಕ್ಕದಲ್ಲಿ ಮಲಗಿದ್ದ ಜಿನ್ನಿಯ ಕುತ್ತಿಗೆಯನ್ನು ಸವರುತ್ತಾ, ಮತ್ತೊಂದು ಕೈಯಲ್ಲಿ ಪುಸ್ತಕವೊಂದನ್ನು ಹಿಡಿದು ಓದುತ್ತಾ ದಣಿವಾರಿಸಿಕೊಳ್ಳುತ್ತಿದ್ದ ಮೋಹನನಿಗೆ ಜನರ ಮಿಜಿಗುಡುವ ಸದ್ದು ಕೇಳಿತು. ಹತ್ತರಿಂದ ಹದಿನೈದು ಜನರ ಗುಂಪು ತಮ್ಮ ತಮ್ಮಲ್ಲೇ ಏನನ್ನೋ ಮಾತಾನಾಡಿಕೊಳ್ಳುತ್ತಾ ಮೋಹನ ಕೂತಿರುವೆಡೆಗೇ ಬರತೊಡಗಿತ್ತು. ಪುಸ್ತಕವನ್ನು ಕೂಡಲೇ ಮಡಚಿಟ್ಟು ಎದ್ದು ನಿಂತ ಮೋಹನನ ಬಳಿಗೆ ಬಂದ ಗುಂಪಿನ ಎಲ್ಲರೂ ಆತನಿಗೆ ನಮಸ್ಕರಿಸಿದರು ಹಾಗು ತಾವು ಬಂದ ವಿಚಾರವನ್ನು ಹೇಳತೊಡಗಿದರು. ವರ್ಷಾನುವರ್ಷದಿಂದ ಕೃಷಿಯನ್ನು ಮಾಡಿಕೊಂಡು ಬರುತ್ತಿರುವ ಅವರುಗಳು ಮೋಹನನ ಜಮೀನಿನಲ್ಲಿ ಬೆಳೆದ ಕೀಟರಹಿತ, ರೋಗರಹಿತ ಸಮೃದ್ಧ ಗಿಡಗಳನ್ನು ನೋಡಿಯೇ ಇರಲಿಲ್ಲವಂತೆ. ಅಲ್ಲದೆ ಹಳ್ಳಿಯ ರೈತರು ಬಳಸುವ ಯಾವುದೇ ಕೆಮಿಕಲ್ ಪೂರಿತ ಗೊಬ್ಬರಗಳನ್ನು ಬಳಸದೆಯೇ ಅವರುಗಳ ಖರ್ಚಿನ ಅರ್ಧಕ್ಕಿಂತ ಕಡಿಮೆ ಹಣದಲ್ಲಿ ಈತ ಜಮೀನನ್ನು ನಿರ್ವಹಿಸುತ್ತಿರುವುದರ ಬಗ್ಗೆ ಕೇಳಿ ತಿಳಿದುಕೊಳ್ಳಬೇಕೆಂಬ ಕೂತುಹಲದಿಂದ ಬಂದಿರುವೆವು ಎನ್ನುತ್ತಾರೆ. ರೈತರ ಆಸಕ್ತಿಯನ್ನು ಕಂಡು ಸಂತೋಷಗೊಂಡ ಮೋಹನ ಸಾವಯವ ಕೃಷಿ, ಜೈವಿಕ ಕೃಷಿ, ಹನಿ ನೀರಾವರಿ, ಮಣ್ಣಿನಲ್ಲಿ ನೀರಿನ ಸಾಂಧ್ರತೆಯನ್ನು ಹೆಚ್ಚಿಸುವ ಬಗೆ, ಗಿಡಗಳ ನಡುವಿನ ನಿಖರವಾದ ಅಂತರ ಅಲ್ಲದೆ ಕ್ರಿಮಿನಾಶಕ ಹಾಗು ರಾಸಾಯನಿಕಪೂರಿತ ಗೊಬ್ಬರಗಳಿಂದ ಪ್ರಾಣಿ ಪಕ್ಷಿಗಳಿಗೆ, ಜಮೀನಿನ ನೆಲಕ್ಕೆ, ಮಾನವರಿಗೆ ಆಗುತ್ತಿರುವ ದುಷ್ಪರಿಣಾಮಗಳ ಬಗೆಗೆ ತನಗೆ ಗೊತ್ತಷ್ಟು ವಿಚಾರವನ್ನು ತಿಳಿಸುತ್ತಾನೆ. ಇಂದು ಜೈವಿಕ ಇಂಧನದಿಂದ ಏರೋಪ್ಲೇನುಗಳನ್ನೇ ಓಡಿಸುತ್ತಿರುವಾಗ ಕೃಷಿಕರಾದ ನಾವುಗಳು ಏಕೆ ಇಂತಹ ಪರಿಸರ ಸ್ನೇಹಿ ವಿಧಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬಾರದು? ಎಂದಾಗ ರೈತರಲ್ಲಿ ಉತ್ತರವೇ ಇರುವುದಿಲ್ಲ. ಹಲವರು ಈತನ ವಿವರಣೆಯನ್ನು ಮೆಚ್ಚಿದರೆ ಇನ್ನು ಕೆಲವರು ಇವೆಲ್ಲ ಹಾಗಿಹೋಗುವ ವಿಚಾರವಲ್ಲ ಎಂಬಂತೆ ಮುಗುಳ್ನಗುತ್ತಿರುತ್ತಾರೆ. ಗುಂಪಲ್ಲಿ ಯಾರೋ ಒಂದಿಬ್ಬರು 'ಈ ಬಾರಿ ಸರ್ಕಾರ ಎಷ್ಟ್ ಸಾಲ ಮಾಡುತ್ತೆ ಸಾಮಿ, ಅಷ್ಟ್ ಹೇಳಿ ನಮಿಗೆ ಸಾಕು' ಎನ್ನುತ್ತಾ ಗೊಳ್ ಎಂದು ನಗುತ್ತಾರೆ.

ಇವರ ವಿಚಾರಸರಣಿಯನ್ನೇ ದೂರದಲ್ಲಿ ನಿಂತು ಕೇಳುತ್ತಿದ್ದ ದೊಡ್ಡೇಗೌಡರು 'ಥು ನಿಮ್ ಮಕುಕ್ಕೆ, ಸಾಲಮನ್ನಕ್ಕ್ ಕಾಯೋ ಸೋಂಬೇರಿಗಳ, ಹೋಗಿ ಪಕ್ಕದ್ ಊರಲ್ಲಿ ಕಾಳ ಈ ಸಾರಿ ಸರ್ಕಾರ ಸಾಲ ಮನ್ನಾ ಮಾಡಲ್ಲ ಅನ್ನೋದ ಕೇಳಿ ಕೆರೆಗ್ ಹಾರಿ ಸತ್ತೋಗ್ಯಾವ್ನಂತೆ! ಸಾಲ ಮನ್ನಾ ಬೇಕಾ ನಿಮುಗೆ, ಹೋಗಿ ಆ ಎಳೆ ಮಕ್ಳ ಅಳೋದ ನೋಡಿ. ಮೈ ಬಗ್ಸಿ ದುಡಿದ್ರೆ ಭೂಮವ್ವ ಕೊಟ್ಟೆ ಕೊಡ್ತಾವ್ಲೇ. ಬ್ಯಾಸಾಯ ಮಾಡೋದು ಬರಿ ದುಡ್ಡ್ ಮಾಡೋ ಗ್ಯಾಮೆ ಆಗಿರ್ವಾಗ ನಿಮ್ಗೆ ಕೃಷಿ ಅಂದ್ರೆ ಸಾಲ ಮನ್ನಾ ಅನ್ನೋದ್ ಬಿಟ್ರೆ ಬ್ಯಾರೇನು ಅಲ್ಲ!' ಎನ್ನುತ್ತಾರೆ. ಪಕ್ಕದೂರಿನ ಕಾಳನನ್ನು ಬಲ್ಲ ಕೆಲವರು ಆತನ ಸಾವಿನ ಸುದ್ದಿಯನ್ನು ಕೇಳಿ ದಬದಬನೆ ಆ ಕಡೆ ಓಡತೊಡಗುತ್ತಾರೆ. ಅವರುಗಳೆಲ್ಲ ಅಲ್ಲಿಂದ ಹೋದನಂತರ ಗೌಡರು ಕಾಳನ ಬಗ್ಗೆ ಹೇಳುತ್ತಾ, ಆತ ಸರ್ಕಾರ ಪೂರಾ ಸಾಲವನ್ನು ಮನ್ನಾ ಮಾಡೇ ಮಾಡುತ್ತದೆ ಎಂಬ ಹುಮ್ಮಸ್ಸಿನಲ್ಲಿ ತೀರಿಸಲು ಅಸಾಧ್ಯವಾದ ಹಣವನ್ನು ಬ್ಯಾಂಕುಗಳಿಂದ ಪಡೆದದ್ದಾಗಿಯೂ ನೆನ್ನೆ ಸರ್ಕಾರ ಕೇವಲ ಅಲ್ಪಪ್ರಮಾಣದ ಸಾಲವನ್ನು ಬಿಟ್ಟು ಉಳಿದ ಎಲ್ಲಾ ಬಗೆಯ ಸಾಲವನ್ನು ಮನ್ನಾ ಮಾಡುವುದಿಲ್ಲವೆಂದು ಘೋಷಿಸಿದಾಗ ಹುಚ್ಚನಂತೆ ಚೀರಿಕೊಳ್ಳುತ್ತಾ ಕೆರೆಗೆ ಹಾರಿ ಜೀವ ಕಳೆದುಕೊಂಡ ಎನ್ನುತ್ತಾರೆ. ಅಲ್ಲದೆ ಇನ್ನೊಬ್ಬ ರೈತನ ಉದಾಹರಣೆಯನ್ನು ನೀಡುತ್ತಾ ಬ್ಯಾಂಕು ವಹಿವಾಟುಗಳ ಅರಿವಿಲ್ಲದ ಆತ ತನ್ನ ಹೆಚ್ಚಿನ ಸಾಲವನ್ನು ಬರಿ ಅವರಿವರಲ್ಲಿ ಕೈಸಾಲವಾಗೇ ಮಾಡಿದ್ದರಿಂದ ಕಳೆದ ಬಾರಿ ಸರ್ಕಾರ ರಾಷ್ಟ್ರೀಕೃತ ಹಾಗು ಸಹಕಾರಿ ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡಿದರೂ ಈತನಿಗೆ ಅದು ಪ್ರಯೋಜನವಾಗದೇ ಅದೇ ಖಿನ್ನತೆಯಲ್ಲಿ ಪ್ರಾಣವನ್ನು ಕಳೆದುಕೊಂಡ ಎನ್ನುತ್ತಾರೆ. 'ಈಗೆಲ್ಲ ಕೃಷಿ ಹೊಂಡ, ಇತರ ನೀರಾವರಿ ವ್ಯವಸ್ಥೆ, ಕೃಷಿ ಮಾಡೋ ಹತಾರಗಳನ್ನು ಬಾಡಿಗೆಗೆ ನೀಡುವುದು, ಬೆಂಬಲ ಬೆಲೆ, ಮುಕ್ತ ಮಾರುಕಟ್ಟೆ, ಎಪಿಎಂಸಿ, ಅಲ್ಲದೆ ಸಾಲದ ಜೊತೆಗೆ ಆ ಸಾಲಕ್ಕೆ ಇನ್ಶೂರೆನ್ಸ್ ಅನ್ನೂ ಸರ್ಕಾರ ಮಾಡಿ ಕೊಡ್ತಿದ್ರೂ ಇವ್ರುಗಳಿಗೆ ಕೃಷಿ ಅಂದ್ರೆ ಅಸಡ್ಡೆ. ಅಲ್ಲ ಮಗ, ನಮ್ಮಜ್ಜ ನಮ್ಮಪ್ಪನೂ ಕೃಷಿ ಮಾಡೇ ಜೀವನ ಸಾಗ್ಸ್ಡೂರು, ಏನೇ ಮಳೆ ಬರ್ಲಿ, ಅದೆಂತದೆ ರೋಗ ಬರ್ಲಿ, ಅವಾಗೆಲ್ಲ ಅವ್ರು ಬ್ಯಾಸಾಯನ ಮಾಡ್ಲಿಲ್ವಾ? ನಮ್ಮ್ನೆಲ್ಲಾ ಸಾಕ್ಲಿಲ್ವ? ಅವಾಗೆಲ್ಲ ಅದ್ಯಾವ ಸರ್ಕಾರ ಸಾಲ ಕೊಡಕ್ಕ್ ಬರೋದು ಹೇಳು. ' ಎಂದಾಗ ಮೋಹನನಿಗೆ ಉತ್ತರ ಕಾಣದಾಯಿತು.

ಇನ್ನೂ ಕೆಲ ದಿನಗಳು ಕಳೆದವು. ಈ ಬಾರಿಯ ಮಳೆ ಅದೇಕೋ ಊರನ್ನೇ ಮುಳುಗಿಸಿಬಿಡುತ್ತದೆಯೋ ಎಂಬ ರೀತಿಯಲ್ಲಿ ಸುರಿಯತೊಡಗಿತ್ತು. ಮಳೆಯಲ್ಲಿ ಕೆಲಸ ಮಾಡಬೇಡೆಂದು ಮನೆಯವರು ಅದೆಷ್ಟು ಹೇಳಿದರೂ ಮೋಹನ ಯಾರ ಮಾತನ್ನು ಕೇಳದೆ ಜಮೀನಿಗೆ ಹೋಗುತ್ತಿರುತ್ತಾನೆ. ಒಂದೇ ಸಮನೆ ಬೀಳುತ್ತಿದ್ದ ಆ ಮೆಳೆಯಲ್ಲಿ ಕೆಲಸ ಮಾಡುವುದೆಂದರೆ ಆತನಿಗೆ ಬಲು ಇಷ್ಟದ ಕಾಯಾಕ. ಆದರೆ ಇಂದು ರಾತ್ರಿ ಬಂದ ಮಹಾಮಳೆಗೆ ಮೋಹನನ ಮನೆಯ ಸುತ್ತಲ ಗಿಡಮರಗಳೆಲ್ಲ ಚಿತ್ರ ವಿಚಿತ್ರವಾಗಿ ತಿರುಗಿ ಮುರುಟಿಗೊಂಡಿದ್ದವು. ಬೆಳಗಿನ ಮುಂಜಾವಿನ ಚಿಲಿಪಿಲಿ ಸದ್ದುಗಳೂ ಮೌನವಾಗಿದ್ದವು. ಮೋಡ ಕವಿದ ಮಂಕಾದ ಆ ಮುಂಜಾವು ಏನೋ ಒಂದು ಬಗೆಯ ಆಘಾತದ ಮುನ್ಸೂಚನೆಯನ್ನು ನೀಡುವಂತಿತ್ತು. ರಾತ್ರಿ ಸುರಿದ ಮಳೆಗೆ ಊರಿನ ಹಲವಾರು ಮನೆಗಳು ಬಿದ್ದವೆಂದು ಊರ ಹೊರಗೆ ಅಲ್ಲಲ್ಲಿ ಭೂಕುಸಿತವಾಗಿದೆ ಎಂಬ ಮಾತನ್ನು ಅಮ್ಮನಿಂದ ತಿಳಿದ ಕೂಡಲೇ ಗಾಬರಿಕೊಂಡ ಮೋಹನ ಬರಿಗಾಲಿನಲ್ಲಿಯೇ ಜಮೀನಿನೆಡೆಗೆ ಓಡುತ್ತಾನೆ. ಕೊಂಚ ತಗ್ಗು ಪ್ರದೇಶದಲ್ಲಿದ್ದ ತನ್ನ ಜಮೀನನ್ನು ಬಂದು ನೋಡಿದರೆ ಅಕ್ಷರ ಸಹ ಗುರುತು ಹಿಡಿಯದ ಭೂಮಿಯಾಗಿ ಅದು ಮಾರ್ಪಾಡಾಗಿರುತ್ತದೆ! ಗದ್ದೆಗೆ ಅಂಟಿಕೊಂಡಿದ್ದ ಗುಡ್ಡದ ಒಂದು ಪಾರ್ಶ್ವ ಮಳೆಯ ಹೊಡೆತಕ್ಕೆ ಜರಿದು ಕಾಫಿ ಸಸಿಗಳು ಹಾಗು ಭತ್ತದ ಪೈರನ್ನು ಸಂಪೂರ್ಣವಾಗಿ ಮುಚ್ಚಿ ಹಾಕಿರುತ್ತದೆ! ಮೋಹನ ತಾನು ನಿಂತಲ್ಲಿಯೇ ಕುಸಿಯುತ್ತಾನೆ. ತನ್ನ ಒಡಲಲ್ಲಿ ಹುಟ್ಟಿದ ಮಕ್ಕಳೇನೋ ಎಂಬಂತೆ ಬೆಳೆಸಿದ್ದ ಗಿಡಗಳ ಶವವನ್ನು ಕಂಡು ದುಃಖ ಉಲ್ಬಣಿಸಿ ಬಂದು ಜೋರಾಗಿ ಅಳತೊಡಗುತ್ತಾನೆ. ಗೊಂಚಲು ಭತ್ತದ ಸಮೇತ ನೀರಿನಲ್ಲಿ ಮುಳುಗಿಹೋಗಿದ್ದ ಸಸಿಯೊಂದನ್ನು ಕಂಡು ಆತನ ಸಂಕಟ ಇನ್ನೂ ವಿಪರೀತವಾಯಿತು. ಅದು ತನ್ನ ಅತ್ಯಾಪ್ತರೊಬ್ಬರನ್ನು ಕಳೆದುಕೊಂಡಾಗ ಉಂಟಾಗುವ ದುಃಖವಾಗಿದ್ದಿತು. ಜಗತ್ತೇ ಬೇಡವೆನಿಸುತ್ತದೆ ಆತನಿಗೆ.

ಮುನಿದು ಅಕ್ಷರಸಹ ರುದ್ರಕಾಳಿಯಂತಾಗಿದ್ದ ಪರಿಸರವನ್ನು ತನ್ನ ಅಳುವ ಕಣ್ಣುಗಳಲ್ಲೇ ನೋಡುತ್ತಾ ನಿಂತಿದ್ದ ಮೋಹನನಿಗೆ ಪಕ್ಕದ ಹಳ್ಳವು ತನ್ನ ಮಿತಿಯನ್ನು ಮೀರಿ ನದಿಯಂತೆ ಹರಿಯುತ್ತಿದ್ದದ್ದು ತಿಳಿಯುವುದಿಲ್ಲ. ಕಾಲುಜಾರಿ ದೊಪ್ಪನೆ ನೀರಿನೊಳಗೆ ಬಿದ್ದುಬಿಡುತ್ತಾನೆ. ನೀರಿನ ರಭಸ ಕೂಡಲೇ ಆತನನ್ನು ದೂರಕ್ಕೆ ಎಳೆದುಕೊಂಡು ಹೋಗುತ್ತದೆ. ಒಂತಿಷ್ಟು ಈಜು ಬರುತ್ತಿದ್ದರೂ ಆ ರಭಸಭರಿತ ನೀರಿನಲ್ಲಿ ಏನೂ ಮಾಡಲೂ ಆಗುವುದಿಲ್ಲ. ಮೋಹನ ಜೋರಾಗಿ ಕೂಗಿಕೊಳ್ಳುತ್ತಾನೆ. ಯಾರೊಬ್ಬರೂ ಕಾಣುವುದಿಲ್ಲ! ಅಡ್ಡಡ್ಡ ಬಿದ್ದಿದ್ದ ಮರದ ಕಾಂಡಗಳು, ಕಲ್ಲಿನ ಚೂರುಗಳು ಕೈಕಾಲುಗಳಿಗೆ ತಗುಲಿ ಅಲ್ಲಲ್ಲಿ ರಕ್ತ ಸುರಿದು ನೋವು ಹೆಚ್ಚಾಗತೊಡಗುತ್ತದೆ. ತನ್ನ ಜಮೀನಿನೊಟ್ಟಿಗೆ ತನ್ನ ಅಂತ್ಯಗಾಲವೂ ಬಂತೆಂದು, ಬರುವ ಮುನ್ನ ಪೋಷಕರಿಗಾದರೂ ಒಮ್ಮೆ ಹೇಳಿ ಬರಬೇಕಿತ್ತೆಂದುಕೊಳ್ಳುತ್ತಾನೆ. ನೀರು ಮೂಗಿನ ಮೂಲಕ ತಲೆಗೆ ಏರಿ ಕಮ್ಮು ಬರತೊಡಗಿ ಸಂಕಟ ವಿಪರೀತವಾಗುತ್ತದೆ. ನಾಲ್ಕೈದು ಕಿಲೋಮೀಟರ್ ದೂರದಲ್ಲಿರುವ ನದಿಗೆ ಸೇರುವ ಹಳ್ಳ ಹೆಚ್ಚಾಗಿ ಕಾಡಿನೊಳಗೆಯೇ ಹರಿಯುವುದರಿಂದ ಯಾರೊಬ್ಬ ಮಾನವರೂ ಅದರ ಪಾತ್ರದಲ್ಲಿ ಕಾಣಸಿಗರು…

ಜೀವ ಭಯದಿಂದ ತತ್ತರಿಸಿ ಹೋಗಿದ್ದ ಮೋಹನನಿಗೆ ಒಮ್ಮೆಲೇ ಘಂಟೆಯ ಸದ್ದೊಂದು ಆ ಹರಿವಿನ ರಭಸದ ಸದ್ದಿನಲ್ಲೂ ಕೇಳತೊಡಗುತ್ತದೆ. ಕ್ಷಣಮಾತ್ರದಲ್ಲಿ ಅದು ಜಿನ್ನಿಯ ಕೊರಳಘಂಟೆಯ ಸದ್ದೆಂದು ಗುರುತಿಸಿದ ಮೋಹನನಿಗೆ ಮೈಯ ತುಂಬೆಲ್ಲ ಶಕ್ತಿಸಂಚಯನವಾದಂತಹ ಅನುಭವವಾಯಿತು. 'ಅಂಬಾ..' ಎಂಬ ಸದ್ದಿನೊಂದಿಗೆ ಕೂಗಿಕೊಳ್ಳುತ್ತಾ ಬಂದ ಜಿನ್ನಿ ಮೋಹನ ತೇಲುತ್ತಿದ್ದ ದಿಕ್ಕಿನೆಡೆಗೆ ಜೋರಾಗಿ ಓಡತೊಡಗಿದಳು. ಮೋಹನನ ಜಮೀನಿನ ಬೇಲಿಯನ್ನು ರಭಸವಾಗಿ ಹಾರಿ ಬಂದಿದ್ದರಿಂದ ಆಕೆಯ ಮೈಯ ಒಂದೆಡೆ ಸಿಗಿದು ಕೆಂಪಾಗಿರುತ್ತದೆ. ಕೊರಳ ಹಗ್ಗದೊಟ್ಟಿಗೆ ಮರದ ಕುಣಿಕೆಯನ್ನೂ ಕಿತ್ತುಕೊಂಡು ಬಂದಿದ್ದ ಜಿನ್ನಿ ಮೋಹನನಿಗಿಂತ ತುಸು ಮುಂದೋಗಿ, ಹಳ್ಳದ ನೀರು ತನ್ನ ಆಕೆಯ ಕುತ್ತಿಗೆಯ ಮಟ್ಟಕ್ಕೆ ತಲುಪವರೆಗೂ ಮುಂದೆ ಚಲಿಸಿ 'ಅಂಬಾ..' ಎಂದು ಕೂಗುತ್ತಾ ಮೋಹನ ತೇಲಿ ಬರುವುದನ್ನೇ ನೋಡುತ್ತಾ ನಿಂತಳು. ಕೊರಳ ಹಗ್ಗ ಕೊಂಚ ಉದ್ದವಾಗಿದ್ದರಿಂದ ಅದು ನೀರಿನಲ್ಲಿ ಬಹು ದೂರದವರೆಗೂ ತೇಲತೊಡಗಿತು. ಅಲ್ಲದೆ ಅದರ ಒಂದು ತುದಿಗೆ ಮರದ ಕುಣಿಕೆಯೂ ತೇಲುತ್ತಿದ್ದರಿಂದ ಮೋಹನನಿಗೆ ಹಗ್ಗವನ್ನು ಹಿಡಿದುಕೊಳ್ಳುವುದು ಕಷ್ಟಕರವಾಗಲಿಲ್ಲ. ಕೂಡಲೇ ಹಗ್ಗವನ್ನು ಹಿಡಿದುಕೊಂಡು ಎಳೆದುಕೊಳ್ಳುತ್ತಾ ದಡಕ್ಕೆ ಬಂದ ಮೋಹನ ಜಿನ್ನಿಯನ್ನು ತಬ್ಬಿ ಬಿಕ್ಕಿ ಬಿಕ್ಕಿ ಅಳತೊಡಗುತ್ತಾನೆ. ಅದು ಮೂಕಪ್ರಾಣಿಯ ಪ್ರೀತಿಯ ಮಹಿಮೆಯೋ ಅಥವಾ ನಿಸರ್ಗದ ಚಮತ್ಕಾರವೋ ಏನೋ ಮೋಹನ ನೀರಿಗೆ ಬೀಳುವದ ಮೊದಲೇ ಅರಿತಿತ್ತೇನೋ ಎಂಬಂತೆ ಜಿನ್ನಿ ಆತನನ್ನು ಕಾಪಾಡಲು ಓಡೋಡಿ ಬಂದಿರುತ್ತದೆ! ಅಷ್ಟರಲ್ಲಾಗಲೇ ಛತ್ರಿಯೊಂದನ್ನಿಡಿದುಕೊಂಡು 'ಅಂಬಾ.. ಜಿನ್ನಿ..' ಎಂದು ಕೂಗುತ್ತಾ ಜಿನ್ನಿಯ ಹುಡುಕಿಕೊಂಡು ಬಿರಬಿರನೆ ಬಂದ ಗೌಡರು, ಮೋಹನನ ಸ್ಥಿತಿಯನ್ನು ಕಂಡು ಹೌಹಾರಿದರು. ನೆಡೆದ ಘಟನೆಯನ್ನು ಕೇಳಿ ಕೊಂಚ ಕಾಲ ಸುಮ್ಮನಿದ್ದು 'ನೋಡಪ್ಪ ಮೋನ, ಎಲ್ಲಾನು ಕಳ್ಕೊಂಡ್ವು ಅನ್ನೋರಿಗೆ ಈ ನಿಸರ್ಗ ಮಾತೇನೇ ಮತ್ತೊಂದು ಅವ್ಕಾಶ ಕೊಡ್ತಳೇ. ಈಗ ನಿನ್ನ ಬದ್ಕಸೋಕೆ ಜಿನ್ನಿನೆ ನಿನ್ನ್ ಬಳಿ ಕಳ್ಸಿದ್ದಾಳೆ ನೋಡು. ಅಂತ ಭೂಮಾತೆ ನೀನ್ ಬೆಳ್ದ ಗದ್ದೇನ ಅಷ್ಟ್ ಸುಲಬಾಗಿ ಮುಚ್ಚಾಕಲ್ಲ ಕಣಪ್ಪ. ಮರಳಿ ಯತ್ನ ಮಾಡು ಮಗ. ಆಕೆ ಹಿಂಗ್ ಮಾಡಿರೋ ಹಿಂದೇನೂ ಏನೋ ಒಂದು ಕಾರ್ಣ ಇರುತ್ತೇ. ನಮ್ಮಂತ ಮಂಕ್ ಜೀವಗಳಿಗೆ ಅದು ಅರ್ಥ ಆಗಕಿಲ್ಲ. ಕೃಷಿ ಮಾಡೋರು ಈವೆಲ್ಲ ಕಷ್ಟ ನಷ್ಟಗಳಿಗೆ ತಯಾರಾಗಿರ್ಬೇಕು..ನಾವಾದ್ರೂ ಹೇಗೂ ನಡಿಯುತ್ತೆ. ಪಾಪ ಗದ್ದೆ ಒಳಗೇ ಗುಡಿಸಲನ್ನ ಕಟ್ಟಿಕೊಂಡು ಇರೋ ಒಂದೆಕ್ರೆ ಜಮೀನನಲ್ಲೇ ಗಂಜಿ ಕಣೋರ ಕಷ್ಟ ನೋಡಾಕ್ ಆಗಲ್ಲ ಕಾಣಪ್ಪಾ’ ಎನ್ನುತ್ತಾ ಆತನನ್ನು ಸಮಾಧಾನಿಸಿ ಹಿಂದಕ್ಕೆ ಕರೆದುಕೊಂಡು ಹೋಗುತ್ತಾರೆ.

ಅಷ್ಟ ದಿಕ್ಕುಗಳಿಂದಲೂ ರಭಸವಾದ ಗಾಳಿ ಛೇಡಿಸುವಂತೆ ಒಂದೇ ಸಮನೆ ಬೀಸುತ್ತಿರುತ್ತದೆ.ಅಷ್ಟರಲ್ಲಾಗಲೇ ಮೋಹನನ ಜಮೀನು ಬರುತ್ತದೆ.ಸಮಾಧಿಯಂತಾಗಿದ್ದ ಜಮೀನನ್ನು ಕಂಡು ದುಃಖ ಮತ್ತೊಮ್ಮೆ ಉಲ್ಬಣಿಸಿ ಬಂದರೂ ತಡೆದುಕೊಂಡು ಆತ ಗದ್ದೆಯ ಮೂಲೆಯಲ್ಲಿ ಇಟ್ಟಿದ್ದ ಹಾರೆಯನ್ನು ಕೈಗೆತ್ತಿಕೊಳ್ಳುತ್ತಾನೆ. ಅದು ತನ್ನೊಬ್ಬನ ಜಮೀನನ್ನು ಮರುನಿರ್ಮಿಸುವ ನಡೆಗಿಂತ ಹೆಚ್ಚಾಗಿ ಅವೈಜ್ಞಾನಿಕ ಕೃಷಿಯಿಂದ ಭೂಮಿಯನ್ನು ಹಾಳುಗೆಡವಿದ ಇಡೀ ಊರ ಜಮೀನುಗಳನ್ನೇ ಮರುನಿರ್ಮಿಸುವ ಸಂಕಲ್ಪವಾಗಿರುತ್ತದೆ…

Sunday, December 23, 2018

ಕನ್ನಡಿಗನೊಬ್ಬನ ಕ್ಲಾಸಿಕ್ ವಿಮಾನಗಳು ಆಗಸದಲ್ಲಿ ಹಾರುವುದನ್ನು ನೋಡಲು ಇನ್ನೆಷ್ಟು ದಶಕಗಳು ಕಾಯಬೇಕೋ?!

'ಈತ ನಮ್ಮ ನೂರು ಬಿಲಿಯನ್ ಕಂಪನಿಯ ಚೇರ್ಮ್ಯಾನ್. ಅಪ್ಪನ ಕಂಪನಿಯನ್ನು ಮುನ್ನೆಡಿಸಿಕೊಂಡು ಬಂದು ಎದ್ವಾ ತದ್ವಾ ಸಾಲವನ್ನು ಮಾಡಿ ತೀರಿಸಲಾಗದೆ ಇಂದು ವಿದೇಶದಲ್ಲಿ ಅಡಗಿ ಕೂತಿದ್ದಾನೆ. ಆತ ಮಾಡಿರುವ ಸಾಲದ ಮೊತ್ತ ಹೆಚ್ಚು ಕಡಿಮೆ ನಮ್ಮ ಇಡೀ ಕಂಪನಿಯ ರೆವೆನ್ಯೂ ಮೊತ್ತಕ್ಕೆ ಸಮ. ನಮ್ಮ ಕಂಪನಿಯನ್ನಷ್ಟೇ ಅಲ್ಲದೆ ನಮ್ಮನ್ನು ನಂಬಿಕೊಂಡು ಕೂತಿರುವ ಇನ್ನೂ ಹತ್ತಾರು ಕಂಪನಿಗಳ ಭವಿಷ್ಯದೊಟ್ಟಿಗೆ ಚೆಲ್ಲಾಡಿ ಮರೆಯಾದವನಿವ' ಎಂಬಮಾತುಗಳಿಗೆ ಪೂರಕವಾಗಿರುವ ಹಾಗು ಅದೇ ಪೇಜಿನಲ್ಲಿ ಕಂಪನಿಯ ಇತರ ಉದ್ಯೋಗಿಗಳನ್ನು Mr. ಅಥವ Mrs. ಎಂಬ ಗೌರವ ಸೂಚಕಗಳನ್ನು ಬಳಸಿ ಸಂಭೋದಿಸಿ ಆದರೆ ಕಂಪನಿಯ ಚೇರ್ಮ್ಯಾನ್ ನನ್ನು ಕೇವಲ ಹೆಸರಿನಿಂದಷ್ಟೇ ಕರೆಯುವ ಕಂಪನಿಯ ವೆಬ್ಸೈಟ್ ಅನ್ನು ಎಲ್ಲಿಯಾದರೂ ಕಂಡಿರುವಿರಾ? ಇಲ್ಲವಾದರೆ ಒಂದು ಕಾಲಕ್ಕೆ ಇಡೀ ವಿಶ್ವದಲ್ಲೇ ಟಾಪ್ ಸ್ಪಿರಿಟ್ ಕಂಪನಿಗಳಲ್ಲಿ ಒಂದಾಗಿ ಇಂದು ಅಕ್ಷರ ಸಹ ತನ್ನ ಉಳಿವಿಗಾಗಿ ಪರದಾಡುತ್ತಿರುವ ಯುಬಿ.ಗ್ರೋಪ್ಸ್ ನ ವೆಬ್ಸೈಟ್ ಗೆ ಒಮ್ಮೆ ಭೇಟಿ ಕೊಡಿ. ತನಗೆ ಅನ್ನ ಕೊಟ್ಟ ಒಡೆಯನಾದರೂ, ತಪ್ಪು ಮಾಡಿದಾಗ ಆತನನ್ನು ಕಳ್ಳನೆಂದೇ ಕರೆಯುತ್ತೀವಿ ಎಂಬಂತಿದ್ದೆ ಅಲ್ಲಿಯ ಬೋರ್ಡ್ ಆಫ್ ಡೈರೆಕ್ಟರ್ ಗಳ ಮಾತುಗಳು.

ಯುಬಿ.ಗ್ರೋಪ್ಸ್. ವಿಠ್ಠಲ್ ಮಲ್ಯರಿಂದ ಹಿರಿದಾಗುತ್ತಾ ಬೆಳೆದುಬಂದ ಮದ್ಯದ ಈ ಸಂಸ್ಥೆ ಎಂಬತ್ತರ ದಶಕದಷ್ಟೊತ್ತಿಗೆ ದೇಶದ ಅತ್ಯುನ್ನತ ಸ್ಪಿರಿಟ್ ಕಂಪೆನಿಗಳಲ್ಲಿ ಒಂದೆನಿಸಿಕೊಂಡಿತ್ತು. ತಾನು ಕಟ್ಟಿದ ಭವ್ಯ ಕೋಟೆಯನ್ನು ಇನ್ನೂ ಹಿರಿದಾಗಿಸುವ ಕನಸ್ಸು ವಿಠ್ಠಲ್ ಮಲ್ಯರದು. ಆ ಕನಸ್ಸಿನ ಮೂಲಬೇರು ತನ್ನ ಏಕೈಕ ಸುಪುತ್ರ. ವಿದೇಶದಲ್ಲೇ ನೆಲೆಯೂರಿದ್ದ ಆತನನ್ನು ಇಲ್ಲಿಗೆ ಕರೆತರುವ ಮೊದಲು ಆತನ ಚಿಗುರು ಮೀಸೆಯ ಕಾಲದಲ್ಲೇ ತನ್ನದಲ್ಲದ ಬೇರೊಂದು ಕಂಪನಿಯಲ್ಲಿ (Hoechst Corporation ) ಕೆಲಸಮಾಡಲು ಸೂಚಿಸುತ್ತಾರೆ. ಕಾರಣ ವ್ಯವಹಾರಗಳ ಹಾಗು ಮಾರುಕಟ್ಟೆಯ ಹಾಗುಹೋಗುಗಳ ತಿಳುವಳಿಕೆ. ಇದು ಒಬ್ಬ ಕೋಟ್ಯಧಿಪತಿ ಅಪ್ಪನಿಗೆ ಇರುವ ಸಹಜ ತುಮುಲಾ. ತಾನು ಬೆಳೆಸಿಕೊಂಡು ಬಂದ ಸಾಮ್ರ್ಯಾಜ್ಯವನ್ನು ಮುನ್ನೆಡೆಸಿಕೊಂಡು ಒಯ್ಯುವ ಒಬ್ಬ ಸಾರಥಿ ನನ್ನ ಮಗನಾದರೆ ಸಾಕೆಂದು ಅವರ ಆಶಯವಿತ್ತೇನೋ. ಆದರೆ ಇತ್ತಕಡೆ ಖಾಸಗಿ ಕಂಪನಿಯಲ್ಲಿ ಸಾಮಾನ್ಯ ನೌಕರನಾಗಿ (ಊಹೆಯಷ್ಟೇ!) ದುಡಿಯುತ್ತಿದ್ದ ಬಿಸಿರಕ್ತದ ಆ ಮಗನಿಗೆ ವಯೋಸಹಜವಾದ ಅದೇನೇ ಶೋಕಿಗಳಿದ್ದರೂ ಕಂಪನಿಯನ್ನು ವಿಶ್ವಮಟ್ಟದಲ್ಲಿ ಮಿಂಚುವಂತೆ ಮಾಡುವ ಮಹಾದಾಸೆಯಿದ್ದಿತು. ಅಂತೆಯೇ 1983 ರಲ್ಲಿ ವಿಠ್ಠಲ್ ಮಲ್ಯರ ಕಾಲವಾದ ನಂತರ ಸಂಸ್ಥೆಯ ಆಡಳಿತ ಚುಕ್ಕಾಣಿಯನ್ನು ಹಿಡಿದ ಮಗ ನೋಡ ನೋಡುತ್ತಲೇ ದೇಶವೇ ಬೆರಗಾಗುವಂತಹ ಸಾಮ್ರಾಜ್ಯನು ಕಟ್ಟಿದ. ಕೇವಲ ಸ್ಪಿರಿಟ್ ಉದ್ಯಮವೊಂದೇ ಅಲ್ಲದೆ, ಇಂಜಿನಿಯರಿಂಗ್, ಟ್ರೇಡಿಂಗ್, ಕೆಮಿಕಲ್ಸ್, ಫಾರ್ಮುಲಾ ಒನ್ ರೇಸ್, ಐಪಿಎಲ್, IT Consulting ನಂತಹ ಹತ್ತಾರು ವಲಯಗಳನ್ನು ಆಕ್ರಮಿಸಿಕೊಳ್ಳುತ್ತಾ, ನಷ್ಟ ಹೊಂದುತ್ತಿದ್ದ ಕೆಲ ಸಂಸ್ಥೆಗಳನ್ನು ಮಾರುತ್ತಾ, ಅಪ್ಪನಿಂದ ಬಂದ ಸಂಸ್ಥೆಯ ವಹಿವಾಟನ್ನು ಒಂದಲ್ಲ ಎರಡಲ್ಲ ಬರೋಬ್ಬರಿ 64% ನಷ್ಟು ಹೆಚ್ಚಿಸಿ ತೋರಿಸುತ್ತಾನೆ. ಅದೂ ಸಹ ಕೇವಲ 15 ವರ್ಷಗಳ ಅಂತರದೊಳಗೆ. ಮುಂದೆ ಯುಬಿ.ಗ್ರೋಪ್ಸ್ ಕೇವಲ ಸ್ಪಿರಿಟ್ ಸಂಸ್ಥೆಯಂದಷ್ಟೇ ಅಲ್ಲದೆ ದೇಶದ ಅತ್ಯುನ್ನತ ಸಂಘಟಿತ ಸಂಸ್ಥೆಗಳಲ್ಲಿ ಒಂದಾಯಿತು.

ಹೆಸರು ವಿಜಯ್ ವಿಠ್ಠಲ್ ಮಲ್ಯ. ಬ್ರಾಹ್ಮಣನೆಂಬ ಗರಿ ಹೆಸರಿಗೆ ಮಾತ್ರ. ಉಳಿದಂತೆ ಮನುಷ್ಯ ಏಕ್ದಂ ಮಾಸ್ ವಿಥ್ ಕ್ಲಾಸ್. ಆ ರಂಗು ರಂಗಿನ ಬಟ್ಟೆಗಳೇನು, ಕೋಟಿ ಬೆಲೆಬಾಳುವ ವಾಚು ಶೆಡ್ಗಳೇನು, ಕೈಯಲೊಂದು ಎಣ್ಣೆಯ ಬಾಟಲು, ಸೊಂಟದ ಪಕ್ಕಕೊಬ್ಬಳು ರಂಬೆಯಂತಹ ಬೆಡಗಿ. 'ಕಿಂಗ್ ಆಫ್ ಗುಡ್ ಟೈಮ್ಸ್' ಎಂಬ ಮಾತಿಗೆ ಪಕ್ಕಾ ಅನ್ವರ್ಥ ನಾಮವಾಗಿದ್ದಿತು ಆತನ ವಿಲಾಸಿ ಜೀವನ. Hopefully ಹೀಗಲೂ ಹೆಚ್ಚು ಕಡಿಮೆ ಹಾಗೆಯೆ ಇದೆ. ಆತ ತೆರೆಯ ಹಿಂದೆ ಅದೇನೇ ಮಾಡಲಿ, ಆದರೆ ಮಾರುಕಟ್ಟೆಯ ತೆರೆಯ ಮುಂದೆ ಆತನೊಬ್ಬ ಪಕ್ಕಾ ಬಿಸಿನೆಸ್ ಮ್ಯಾನ್. ಜನ ಯಾವುದನ್ನು ಆತನ ಶೋಕಿ ಎಂದು ಕರೆಯುತ್ತಿದರೋ ಅವುಗಳೆಲ್ಲವೂ ಇಂದು ವಿಶ್ವಪ್ರಖ್ಯಾತ ಬ್ರಾಂಡ್ ಗಳಾಗಿ ಕೋಟ್ಯಂತರ ಜನರ ಮನೆಮಾತಾಗಿವೆ. ಬ್ರಾಂಡ್ ಎಂಬ ಪದದ ನಿಜ ಅರ್ಥ ತಿಳಿದವರಿಗಷ್ಟೇ ಗೊತ್ತು ಒಂದು ಬ್ರಾಂಡನ್ನು ಕಟ್ಟುವುದೆಷ್ಟು ಕಷ್ಟವೆಂದು. ಈಗಂತೂ ಕಟ್ಟುವುದೆಂದರೆ ಪಂಚೆ ಉಡುವ ಮೇಸ್ಟ್ರಿಯೂ ಕಟ್ಟುತ್ತಾನೆ. ಆದರೆ ಕಟ್ಟಿದ ಆ ಬ್ರಾಂಡನು ಜಗತ್ತಿನ ಮೂಲೆ ಮೂಲೆ ಗಳ ಕೋಟಿ ಕೋಟಿ ಜನರ ನೆಚ್ಚಿನ ಪ್ರಾಡಕ್ಟ್ ಆಗಿ ಪರಿವರ್ತಿಸುವ ಕಾರ್ಯದಲ್ಲಿರುವ ಆ ಚಾಣಾಕ್ಷತನ ಕೇವಲ ಕುಡಿದು ತಿಂದು ತೇಗುವ ಡೊಳ್ಳೊಟ್ಟೆಗಳಿಗಳಿಗೆ ಬರುವಂತಹದಲ್ಲ. ಮಲ್ಯ ಈ ಮಾತಿಗೆ ಅಪವಾದ! ಅರ್ತಾಥ್ ಅಪ್ಪನಿಂದ ಬಳುವಳಿಯಾಗಿ ಪಡೆದ ಕೋಟೆಯೊಂದು ಇದ್ದಿದಂತೂ ನಿಜ. ಆದರೆ ಆ ಕೋಟೆಯನ್ನು ಸಾಮ್ರಾಜ್ಯವನ್ನಾಗಿ ಮಾಡಿ ತೋರಿಸಿದ ನಡೆಯಲ್ಲಿ ಆತನ ಮೋಜು ಮಸ್ತಿಯ ಆಟಗಳೆಲ್ಲವೂ ಗೌಣವಾಗುತ್ತವೆ. ಇಲ್ಲಿ ಮುಖದ ಮೇಲಿರುವ ಕಲೆಯೊಂದರಿಂದಷ್ಟೇ ಆ ವ್ಯಕ್ತಿತ್ವವನ್ನು ಅಳೆಯಾಲಾಗುತ್ತದೆಯೇ ವಿನಃ ಆದರ ಸುತ್ತಿರುವ ಆಕರ್ಷಕ ವ್ಯಕ್ತಿತ್ವದಿಂದಲ್ಲ.. ದೇಶವೆಂದರೆ ಟಾಟಾ, ಬಿರ್ಲಾ, ಅಂಬಾನಿ ಎಂದುಕೊಂಡವರಿಗೆ ಠಕ್ಕರ್ ಕೊಡುವ ಖಾಸಗಿ ಕಂಪನಿಯಾಗಿ ಯುಬಿ.ಗ್ರೋಪ್ಸ್ ಮಾರ್ಪಾಡಾಗತೊಡಗಿತು. ಅದು ಕೇವಲ ಕೊಟ್ಟು ಗಳಿಸುವ ವ್ಯವಹಾರವಷ್ಟೇ ಅಲ್ಲದೆ 'ವಾವ್' ಎಂಬ ಹ್ಯಾಪಿ ಫೀಡ್ಬ್ಯಾಕ್ ಗಳನ್ನು ಗ್ರಾಹಕರಿಂದ ಪಡೆಯುವ ಕಂಪೆನಿಯಾಯಿತು. ಎಲ್ಲ ಅಂದುಕೊಂಡಂತೆಯೇ ನೆಡೆಯುತ್ತಿತ್ತು. ಆಗ ಎಲ್ಲವೂ ಸರಿಯಾಗಿದ್ದಿತು.

ಅದು ವರ್ಷ 2003. ತನ್ನ ಬಹುವರ್ಷದ ಕನಸ್ಸೊಂದು ನನಸಾಗಿದ ದಿನವದು. ಮದ್ಯದ ಬಾಟಲಿಗಳ ಮೇಲೆ ಮೂಡಿ ಜಗತ್ಪ್ರಸಿದ್ದಿ ಹೊಂದಿದ ಅಕ್ಷರಗಳು ಈಗ ವಿಮಾನಯಾನ ವಲಯಕ್ಕೆ ಕಾಲಿರಿಸಿದವು. KFA (ಕಿಂಗ್ ಫಿಷರ್ ಏರ್ಲೈನ್ಸ್). ಆದರೆ ಸಂಸ್ಥೆ ತನ್ನ ವಿಮಾನವನ್ನು ಗಗನಕ್ಕೆ ಚಿಮ್ಮಿಸಲು ಬರೋಬ್ಬರಿ ಎರಡು ವರ್ಷ ಕಾಯಬೇಕಾಯಿತು. ಕೊನೆಗೂ ಮೇ 9, 2005 ರಲ್ಲಿ ಮುಂಬೈಯಿಂದ ಹೊರಟ Airbus A-320 ದೆಹಲಿ ವಿಮಾನ ನಿಲ್ದಾಣವನ್ನು ತಲುಪಿದಾಗ ಮಲ್ಯನ ಖುಷಿಗೆ ಪಾರವೇ ಇರಲಿಲ್ಲ. ಆದರೆ ಆ ಆಸಾಮಿಯ ಕನಸ್ಸು ಅಲ್ಲಿಗೆ ನಿಲ್ಲಲಿಲ್ಲ. ತನ್ನ ಕಂಪು ಬಿಳಿಪಿನ ಸೂಪರ್ ಕೂಲ್ ವಿಮಾನಗಳು ದೇಶವಿದೇಶಗಳ ನೆಲವನ್ನೂ ತಲುಪಬೇಕೆಂಬ ಮಹದಾಸೆ ಆತನದು. ಆದರೆ ನಮ್ಮ ದೇಶದ ಕಾನೂನಿನ ಪ್ರಕಾರ ಯಾವುದೇ ವಿಮಾನ ರಾಷ್ಟ್ರ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ಹಾರಲು ಇಚ್ಛಿಸಿದರೆ ಆ ಸಂಸ್ಥೆಯ ಆಯುಷ್ಯ ಕಡಿಮೆ ಎಂದರೂ 5 ವರ್ಷಗಳಾಗಿರಬೇಕು.

ಮಲ್ಯ ಯೋಚಿಸಿದ. ಯೋಜಿಸಿದ. ಅದು ಬಡಜನರ ಏರ್ಲೈನ್ ಎಂದೇ ಪ್ರಸಿದ್ದಿ ಹೊಂದಿದ್ದ, ಸಾಮಾನ್ಯರಲ್ಲಿ ಅತಿ ಸಾಮನ್ಯನೊಬ್ಬನೂ ಮನಸ್ಸು ಮಾಡಿದರೆ ವಿಮಾನಯಾನ ಸಂಸ್ಥೆಯನ್ನೇ ಹುಟ್ಟುಹಾಕಬಹುದೆಂಬುದನ್ನು ತೋರಿಸಿಕೊಟ್ಟಿದ್ದ ಕ್ಯಾಪ್ಟನ್ ಗೋಪಿನಾಥ್ ರವರ ಡೆಕ್ಕನ್ ಏವಿಯೇಷನ್ ಸಂಸ್ಥೆ ನಷ್ಟದಲ್ಲಿ ಸಾಗುತ್ತಿದ್ದ ಕಾಲ. ಧುಬಾರಿ ತೈಲ ಬೆಲೆ ಹಾಗು ಅಷ್ಟೇ ಧುಬಾರಿಯಾದ ನಿರ್ವಹಣ ವೆಚ್ಚವನ್ನು ಭರಿಸಲಾಗದೆ ಕುಂಟುತ್ತಿದ್ದ ಡೆಕ್ಕನ್ ಏವಿಯೇಷನ್ ಮಲ್ಯನ ಕಣ್ಣಿಗೆ ಚಿನ್ನದ ಕೋಳಿಯಾಗಿ ಕಾಣತೊಡಗಿತು. ಕಾರಣ ಒಂದು ಪಕ್ಷ ತಾನೇನಾದರೂ ಆ ಸಂಸ್ಥೆಯ ಬಹುಪಾಲು ಷೇರನ್ನು ಖರೀದಿಸಿದರೆ ಅದಾಗಲೇ ಹತ್ತು ವರ್ಷಗಳನ್ನು ಪೂರೈಸಿದ್ದ ಡೆಕ್ಕನ್ ಏವಿಯೇಷನ್ ಕಿಂಗಫಿಶರ್ ಏರ್ಲೈನ್ಸ್ ನ ವಿಮಾನಗಳಿಗೆ ವಿದೇಶದ ಟಿಕೆಟ್ ಆಗಿ ಪರಿಣಮಿಸುತ್ತಿತ್ತು. ಹುಮ್ಮಸ್ಸಿನ ವಿಜಯ್ ಅಂದು ಹಿಂದೂ ಮುಂದೂ ನೋಡದೆ ಡೆಕ್ಕನ್ ಏವಿಯೇಷ ನ್ನಿನ 26% ಷೇರುಗಳನ್ನು ಖರೀದಿಸಿದ. ಕಿಂಗ್ ಫಿಷರ್ ಪರದೇಶದ ನೆಲವನ್ನೂ ಸ್ಪರ್ಶಿಸಿತು.

ಗುರಿಯೇನೋ ಸ್ಪಷ್ಟವಾಗಿದ್ದಿತು. ಆತನ ಆ ಸಾಧನೆ ಆತನೊಬ್ಬನದೇ ಅಲ್ಲದೆ ಇಡೀ ಕಂಪನಿಯನ್ನು, ಒಂದು ಕೋನದಲ್ಲಿ ದೇಶವನ್ನೂ ಹೆಮ್ಮೆ ಪಡುವಂತೆ ಮಾಡಿತ್ತು. ಆದರೆ ಈ ಬಾರಿ ಕಾಲ ಮಾತ್ರ ಕೈಕೊಟ್ಟಿತ್ತು. ವಿಮಾನಯಾನ ಶುರುವಾದ ಮೊದಲ ವರ್ಷದಿಂದಲೂ ಕೇವಲ ನೆಗೆಟಿವ್ ನಿವ್ವಳ ಲಾಭವಷ್ಟೇ ಕಂಪನಿಯ ಪಾಲಾಗತೊಡಗಿತು. ಒಂದು ಸಮಯದಲ್ಲಿ ದೇಶದ ಎರಡನೇ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿ ಬೆಳೆದರೂ ಗುಡ್ಡದಂತೆ ಬೆಳೆಯುತ್ತಿದ್ದ ನಷ್ಟವನ್ನು ಮಾತ್ರ ಯಾರೊಬ್ಬರಿಂದಲೂ ತಪ್ಪಿಸಲಾಗಲಿಲ್ಲ. ಸಂಸ್ಥೆಯ ಉಳಿವಿಗಾಗಿ ರಾಶಿ ರಾಶಿ ಸಾಲದ ಹೊರೆ. ಕಿಂಗ್ ಆಫ್ ಗುಡ್ ಟೈಮ್ಸ್ ನ ಬ್ಯಾಡ್ ಟೈಮ್ ಶುರುವಾಯಿತು.

ಮುಂದೆ ನೆಡೆದ ವಿಷಯಗಳೆಲ್ಲ ನಮ್ಮ ಮಾಧ್ಯಮಗಳು ನಮ್ಮೆಲ್ಲರ ತಲೆಯಲ್ಲಿ ಅಳಿಸದಂತೆ ಹಚ್ಚೋತ್ತಿವೆ. ಕಳ್ಳ, ಸುಳ್ಳ, ಮೋಸಗಾರ, ಬಂಡ, ಪುಕ್ಕಲ etc etc. ಅಲ್ಲಿಯವರೆಗೂ ತನ್ನ ಅಣ್ತಮ್ಮ ಎಂದು ಹೆಮ್ಮೆಯಿಂದ ಹೆಸರಿಸಿಕೊಳ್ಳುತ್ತಿದ್ದ ಪಕ್ಷಗಳೂ 'ನಂದಲ್ಲ ನಿಂದು, ನಿಂದಲ್ಲ ನಂದು' ಏನುತಾ ಕೆಸರಾಟವನ್ನು ಆಡತೊಡಗಿದವು. ಅತ್ತ ಕಡೆ ನೋಡಿದರೆ ಅಸಲಿನ ಮೇಲೆ ಬಡ್ಡಿಯ ತೂಕ ಹೆಚ್ಚಾಗತೊಡಗಿತು. ನೌಕರರಿಗೆ ತಿಂಗಳ ಸಂಬಳ ಕೊಡಲು ಹಣವಿರಲಿಲ್ಲ. ನೌಕರರು ಮುಷ್ಕರಕ್ಕೆ ಕೂತರು. ವಿಮಾನಗಳ ಹಾರಾಟ ಕ್ಷೀಣಿಸತೊಡಗಿತು. ಇತ್ತ ಕಡೆ ನೌಕರರು ಅತಂತ್ರರಾಗಿ ಪರದಾಡುತ್ತಿದ್ದರೆ ಅತ್ತ ಕಡೆ ಮಲ್ಯ ಕೋಟಿ ಕೋಟಿ ಹಣವನ್ನು ಐಪಿಎಲ್ ಹಾಗು ತನ್ನ ಬರ್ತ್ಡೇಯ ವಿಜೃಂಭಣೆಯಲ್ಲಿ ಸುರಿಯತೊಡಗಿದ. ಭವ್ಯ ಭಾರತದ MP ಯಾಗಿ ತನ್ನ ನೌಕರರನ್ನು ನಡುನೀರಿನಲ್ಲಿ ಬಿಟ್ಟು ಮೋಜು ಮಸ್ತಿ ಮಾಡಿದನ್ನು ಮಾತ್ರ ಯಾರು ಕೂಡ ಕ್ಷಮಿಸಲಾರರು. ಬಹುಷಃ ಇದೆ ಶಾಪ ‘ರಿಚರ್ಡ್ ಬ್ರಾನ್ಸನ್ ಆಫ್ ಇಂಡಿಯ’ ಎಂದೆನಿಸಿಕೊಂಡಿದ್ದ ಮಲ್ಯನನ್ನು ಬಲವಾಗಿ ತಟ್ಟಿರಬೇಕು.

ಸರಿ ಸುಮಾರು ಮೂರು ದಶಕಗಳ ತನ್ನ ಬಿಸಿನೆಸ್ ಮಂತ್ರವನ್ನು ಮಲ್ಯ ಕಿಂಗ್ಫಿಷರ್ ಏರ್ಲೈನ್ಸ್ ಅನ್ನು ಮುನ್ನೆಡುಸುವಲ್ಲಿ ಏಕೋ ಮರೆತಿದ್ದ. ಅಲ್ಲ ಸ್ವಾಮಿ, ಒಂದಲ್ಲ ಎರಡಲ್ಲ ಬರೋಬ್ಬರಿ 8 ವರ್ಷಗಳಾದರೂ ಒಂದು ನಯಾ ಪೈಸೆ ಲಾಭವನ್ನು ಸಂಸ್ಥೆ ಗಳಿಸುತ್ತಿಲ್ಲವೆಂದರೆ ಅಲ್ಲಿ ಏನೋ ತೊಡಕಿದೆ ಎಂದರ್ಥ. ಆಗ ಮಾಲೀಕನಾಗಿ ಸಂಸ್ಥೆಯ ಮಾಡೆಲ್ ಅಥವಾ ಸ್ಟ್ರಾಟರ್ಜಿಯನ್ನು ಬದಲಿಸುವುದ ಬಿಟ್ಟು ಮತ್ತೂ ರಾಶಿ ರಾಶಿ ಹಣವನ್ನು ತಂದು ಸುರಿಯತೊಡಗಿದರೆ ಏನಾದೀತು?. ಅದು ಬ್ಯಾಂಕುಗಳ ಮರ್ಮವೊ ಅಥವಾ ಕರ್ಮವೋ, ಇಂದಲ್ಲ ನಾಳೆ ಏರ್ಲೈನ್ಸ್ ನ ಟೈಮ್ ಬದಲಾಗುತ್ತದೆ ಎಂದು ಕಾದು ಕುಳಿತದಷ್ಟೇ ಬಂತು ಅವುಗಳ ಪಾಲಿಗೆ. ಆತನ ಸಾಲದ ಮೊತ್ತ ಸಚಿನ್ ತೆಂಡುಲ್ಕರ್ನ ರನ್ನುಗಳಂತೆ ಬೆಳೆಯುತ್ತಲೇ ಹೋಯಿತು. ಅತ್ತ ಕಡೆ ಸಚಿನ್ ರನ್ ಗಳ ರಾಶಿಯನ್ನು ಹೊತ್ತು ನೆಮ್ಮದಿಯಿಂದ ನಿವೃತ್ತಿ ಹೊಂದಿದರೆ ಇತ್ತ ಕಡೆ ಮಲ್ಯ ಸಾಲದ ಹೊರೆಯನ್ನು ಹೊರಲಾರದೆ ಏರ್ಲೈನ್ ಬಿಸಿನೆಸ್ ನಿಂದ ನಿವೃತ್ತಿ ಹೊಂದತೊಡಗಿದ.

ತಾನು ಕಟ್ಟಿ ಬೆಳೆಸಿದ ಸಂಸ್ಥೆ ಹುಟ್ಟಿಸಿದ ಮಕ್ಕಳಿಗಿಂತಲೂ ಬಲು ಹತ್ತಿರ. ಆದರಿಂದಲೇನೋ ಅಂದು ಇತರೆ ವಿದೇಶಿ ಏರ್ಲೈನ್ ಸಂಸ್ಥೆಗಳು KFA ಯನ್ನು ಖರೀದಿಸಲು ಬಂದಾಗಲೂ ಮಲ್ಯ ಒಂತಿಷ್ಟೂ ಮನಸು ಮಾಡಲಿಲ್ಲ. ಒಂದು ಪಕ್ಷ ಆತ ಸಂಸ್ಥೆಯನ್ನು ಮಾರಿ ಸುಮ್ಮನಾಗಿದ್ದರೂ ಸಾಲವೆಲ್ಲ ತೀರಿ ಇನ್ನೂ ರಾಶಿ ಕೋಟಿಗಳು ಆತನ ಬ್ಯಾಂಕಿನ ಖಾತೆಯಲ್ಲಿ ಉಳಿಯುತ್ತಿತೇನೋ. ಆದರೆ ಆತ ಸೋಲೊಪ್ಪಿಕೊಳ್ಳಲಿಲ್ಲ. ನಡೆ ತಪ್ಪಾಗಿದ್ದಿತು, ಆದರೆ ಗುರಿ ಸಂಸ್ಥೆಯನ್ನು ಉಳಿಸಿಕೊಳ್ಳುವುದಾಗಿದ್ದಿತು. ಸಾಲ ಮಾಡಿ ಮನೆ ಕಟ್ಟಿ ಕೊನೆಗೆ ಹಣಹೊಂದಿಸಲಾಗದೆ ಮನೆಯನ್ನೇ ಮಾರಬೇಕೆಂದಾಗ ಎದುರಾಗುವ ಸ್ಥಿತಿಯೇ ಅಂದು ಆತನದು. ಉದ್ಯಮಿಗಳಿಗೆ ತಮ್ಮ ಜೀವಮಾನದ ಒಂದಿಲ್ಲೊಂದು ಘಳಿಗೆಯಲ್ಲಿ ಈ ಸ್ಥಿತಿ ಎದುರಾಗುತ್ತದೆ. ಕನಸ್ಸು ಬಿತ್ತಿ ಕಟ್ಟಿದ ಮನೆಯನ್ನು ಮಾರಬೇಕೋ ಅಥವ ಬೇರೆ ದಾರಿ ಕಾಣದೆ ಮರುಗಬೇಕೋ ಆಗ ಅದರ ಉತ್ತರ ಮಾತ್ರ ಪ್ರರಿಸ್ಥಿತಿಯ ಹತ್ತಿರ! ಅಂದಹಾಗೆ ಮಲ್ಯ ವಿದೇಶಕ್ಕೆ ಹಾರಿ ಹೋದರೂ ಈ ವರ್ಷದ ಶುರುವಿನಲ್ಲಿ ಸುಮಾರು 6000 ಕೋಟಿ ರೂಪಾಯಿಗಳ ಸಾಲವನ್ನು ಮೊದಲ ಕಂತಿನಲ್ಲಿ ತೀರಿಸುವೆನು ಎಂದದ್ದೂ ಉಂಟು. ಆದರೆ ಬ್ಯಾಂಕುಗಳು ಕೇಳಲಿಲ್ಲ. ಕೊಟ್ಟರೆ ಅಸಲು ಬಡ್ಡಿ ಸಮೇತ ಎಲ್ಲವೂ ಬೇಕೆನುತ ಹಠಹಿಡಿದವು.

ಮೊನ್ನೆ ಮೊನ್ನೆಯಷ್ಟೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ 'ದಶಕಗಳಿಂದ ಸಾಲವನ್ನು ಮರುಪಾವತಿ ಮಾಡಿಕೊಂಡು ಬಂದು ಇಂದು ಬ್ಯುಸಿನೆಸ್ ನಲ್ಲಿ ನಷ್ಟವನ್ನು ಅನುಭವಿಸಿ ಸಾಲತೀರಿಸಲಾಗದಿದ್ದ ಮಾತ್ರಕ್ಕೆ ಅವರನ್ನು ಮೋಸಗಾರರು ಎಂಬುವುದು ತಪ್ಪಾಗುತ್ತದೆ' ಎಂದರು. ಇದೇ ಮಾತನ್ನು ಒಂದು ಪಕ್ಷ ಐದಾರು ವರ್ಷಗಳ ಹಿಂದೆ ದೇಶದ ಹೆಮ್ಮೆಯ ಪ್ರತೀಕವಾಗಿದ್ದ ವಿಮಾನಸಂಸ್ಥೆಯೊಂದು ಮುಚ್ಚುವಾಗ ಹೇಳಿದ್ದರೆ ಬಹುಶಃ ಚೆನ್ನಾಗಿರುತ್ತಿತ್ತು. ಅರ್ಥಪೂರ್ಣವಾಗಿರುತ್ತಿತು. ಅಲ್ಲ ಸರ್, ಇಂದು ಸರ್ಕಾರವೇ ತನ್ನ ಉಮೇದುವಾರಿಕೆಯಲ್ಲಿ ನೆಡೆಸುವ ದೇಶದ ಅತಿ ದೊಡ್ಡ ವಿಮಾನ ಸಂಸ್ಥೆಯೇ ಪ್ರತಿಕೂಲ ಮಾರುಕಟ್ಟೆಯ ಹೊಡೆತಕ್ಕೆ ಸಿಕ್ಕಿ ಡೋಲಾಯಮಾನವಾಗುವ ಸ್ಥಿತಿಯಲ್ಲಿರುವಾಗ ನಷ್ಟದಲ್ಲಿದ್ದ ಉದ್ಯಮಿಗಳ ಸಂಸ್ಥೆಗಳ ಕತೆ ಇನ್ನು ಹೇಗಿರಬಹುದು? ಕಿಂಗ್ ಫಿಷರ್ ಏರ್ಲೈನ್ಸ್ ಮುಚ್ಚಲು ಮಲ್ಯನ ಪೆದ್ದುತನ ಎಷ್ಟಿದ್ದಿತೋ ಅಷ್ಟೇ ಹುಂಬತನ ಸರ್ಕಾರದ್ದೂ ಇದ್ದಿತು. ಸಂಸ್ಥೆಯೊಂದನ್ನು ಮುಚ್ಚಿಸುವಾಗ ಸಿಗುವ ಖುಷಿ ಅದನ್ನು ಉಳಿಸಿ ಕೊಡುವುದರಿರಲಿಲ್ಲ. ಯಾರೋ ಮಾಡಿದ್ದ ತಪ್ಪಿಗೆ ಸರಕಾರವೇಕೆ ದಂಡ ತೆತ್ತಬೇಕು ಎಂಬ ಮಾತು ಸರಿಯೇ. ಆದರೆ ಮುಚ್ಚಿದ ಒಂದು ಬ್ರಾಂಡಿನ ಸರಿಸಮನಾದ ಮತ್ತೊಂದು ಬ್ರಾಂಡನ್ನು ಕಟ್ಟಲು, ಸಾವಿರಾರು ಜನರಿಗೆ, ದೇಶಕ್ಕೆ ಪರೋಕ್ಷವಾಗಿಯಾದರೂ ಆದಾಯವನ್ನು ಗಳಿಸಿಕೊಡುವ ಮತ್ತೊಂದು ಸಂಸ್ಥೆಯೊಂದನ್ನು ನಿಮಿಷಮಾತ್ರದಲ್ಲಿ ಕಟ್ಟಲ್ಲಂತೂ ಸಾಧ್ಯವೇ ಇಲ್ಲ. ಅದರಲ್ಲೂ ಕಿಂಗ್ ಫಿಷರ್ ಎಂಬ ಕನ್ನಡಿಗನೊಬ್ಬನ ಕ್ಲಾಸಿಕ್ ವಿಮಾನಗಳು ಆಗಸದಲ್ಲಿ ಹಾರಾಡುವುದನ್ನು ನೋಡಲು ಇನ್ನೆಷ್ಟು ದಶಕಗಳು ಬೇಕೋ ಯಾರು ಬಲ್ಲರು?


Saturday, December 15, 2018

820 ಗುಳಿಗೆಗಳನ್ನು ತಿನ್ನಿಸಿ ಪರಾರಿಯಾದ 420 ಅಮಾಯಕ!

ತಿಹಾರ್ ಜೈಲು. ಬಹುಷಃ ಈ ಹೆಸರನ್ನಿಂದು ಕೇಳಿರದವರಿರಲು ಸಾಧ್ಯವೇ ಇಲ್ಲ. ದೇಶ-ವಿದೇಶದ ಹೈ ಪ್ರೊಫೈಲ್ ನಟೋರಿಯಸ್ ಕ್ರಿಮಿನಲ್ ಗಳನ್ನು ಬಂಧಿಸುವ ಈ ಕಾರಾಗೃಹ ದೇಶದ ಅಷ್ಟೂ ಜೈಲುಗಳಲ್ಲಿಯೂ ಅತಿ ಹೆಚ್ಚಿನ ಭದ್ರತೆಯನ್ನೊಳಗೊಂಡ ಚಕ್ರವ್ಯೂಹವೆಂದೇ ಹೇಳಬಹುದು! ಅಪ್ಪಿ-ತಪ್ಪಿ ಒಂದು ಇಲಿಮರಿಯೂ ಸಹ ಒಳಹೊಕ್ಕರೆ ಹೊರಬಾರಲು ಪೇಚಾಡುವಂತಹ ಭದ್ರತೆಯ ಈ ಜೈಲಿನಿಂದ ಎಸ್ಕೇಪ್ ಆಗುವುದೆಂದರೆ ಆತ ಒಬ್ಬ ದೇವದೂತನಾಗಿರಬೇಕೇ ವಿನಃ ಸಾಮಾನ್ಯ ವ್ಯಕ್ತಿಯಾಗಿರಲಂತೂ ಸಾಧ್ಯವೇ ಇಲ್ಲ! ಆದರೂ, ಅಲ್ಲೊಬ್ಬಇಲ್ಲೊಬ್ಬ ಕೋಟಿಗೊಬ್ಬನಂತಹ ಕಿಲಾಡಿಗಳು ಇಲ್ಲೂ ಸಹ ತಮ್ಮ ಕೈಚಳಕವನ್ನು ತೋರಿ ಅಂತಹ ಭಾರಿ ಭದ್ರತೆಯ ಕೋಟೆಯನ್ನೇ ಮೀಟಿ ಪರಾರಿಯಾದದ್ದುಂಟು. ಇಂತಹ ಪ್ರತಿಭಾನ್ವಿತ ದೇಹದೂತರ ಕೆಲ ರೋಚಕ ಕತೆಗಳು ದೇಶದ ಇತಿಹಾಸದಲ್ಲಿ ಇಂದು ಹಚ್ಚಳಿಯಾಗಿ ಉಳಿದುಕೊಂಡಿವೆ. ಆ ಪ್ರತಿಭಾನ್ವಿತ ಕ್ರಿಮಿನಲ್ಗಳ ದೇಶೀ / ವಿದೇಶಿ ಕ್ಯಾರೆಕ್ಟರ್ ಗಳು ಇಂದು ದೇಶ ವಿದೇಶದ ಹಲವಾರು ಚಿತ್ರಗಳಲ್ಲಿ ನಾಯಕನಟರಾಗಿ ನಟಿಸಿ ಹಲವೆಡೆ 'ಸ್ಫೂರ್ತಿ'ದಾಯಕವೂ ಆಗಿವೆ ಎಂದರೆ ಅದು ನಮ್ಮೆಲ್ಲರ ವಿಪರ್ಯಾಸವೇ ಸರಿ!

ಹೆಸರು ಚಾರ್ಲ್ಸ್ ಶೋಭ್ರಾಜ್. ಸೈಕೋಪಾಥ್ , ಸೀರಿಯಲ್ ಕಮ್ ಬಿಕಿನಿ ಕಿಲ್ಲರ್, ವಂಚಕ, ದಿ ಸರ್ಪೆಂಟ್ , ಚತುರ ಸುಳ್ಳುಗಾರ ಹಾಗು ಒಬ್ಬ ಭಯಾನಕ ಎಸ್ಕೇಪಿಸ್ಟ್ etc etc ಎಂಬುದೆಲ್ಲ ಈತ ಕಷ್ಟಪಟ್ಟು ಗಳಿಸಿಕೊಂಡ ಅನ್ವರ್ಥನಾಮಗಳು! ವಿಯೆಟ್ನಾಂ ನಲ್ಲಿ ಹುಟ್ಟಿ ಫ್ರಾನ್ಸ್ನಲ್ಲಿ ಬೆಳೆದು, ತನ್ನ ಕುಕೃತ್ಯಗಳಿಂದ ವಿಶ್ವದಾದ್ಯಂತ ಪ್ರಸಿದ್ದಿ ಪಡೆದು ಸದ್ಯಕ್ಕೆ ನೇಪಾಳದ ಜೈಲಿನಲ್ಲಿ ಶಿಕ್ಷೆಯನ್ನನುಭವಿಸುತ್ತಿರುವ ಈತನ ಹೆಸರನ್ನು ಕೇಳಿದ್ದರೆ ಅಂದು ವಯಸ್ಸಿನ ಹುಡುಗಿಯರಷ್ಟೇ ಅಲ್ಲದೆ ಕಲ್ಲುಗುಂಡಿನಂತ ಪೊಲೀಸರೂ ಬೆಚ್ಚಿಬೀಳುತ್ತಿದ್ದರು. 1944 ರಲ್ಲಿ ಭಾರತೀಯ ಸಿಂಧಿ ಮೂಲದ ಅಪ್ಪನಿಗೆ (ಶೋಬ್ರಾಜ್) ಜನಿಸಿದ ಚಾರ್ಲ್ಸ್ ನ ಬಾಲ್ಯ ಇತರೆ ಎಲ್ಲ ಮಕ್ಕಳಂತಿರಲಿಲ್ಲ. ಈತನ ಅಮ್ಮನೊಟ್ಟಿಗೆ ಲಿವಿಂಗ್ ರಿಲೇಶನ್ಶಿಪ್ ನಲ್ಲಿದ್ದ ಅಪ್ಪ ಅದೊಂದು ದಿನ ಕುಟುಂಬವನ್ನು ಬಿಟ್ಟು ಬೇರೊಂದು ಸಂಸಾರವನ್ನು ಹೂಡಿದಾಗ ಚಾರ್ಲ್ಸ್ ಗೆ ಐದಾರು ವರ್ಷಗಳಿರಬಹುದು. ನಂತರ ಅಮ್ಮ ಮತ್ತೊಬ್ಬ ಬಾಯ್ ಫ್ರೆಂಡನ್ನು ಮಾಡಿಕೊಂಡು ಸುತ್ತತೊಡಗುವುದನ್ನು ನೋಡಿ ಸಹಿಸಲಾರದೆಯೋ ಅಥವಾ ಹೇಳುವವರು ಕೇಳುವವರಿಲ್ಲದಿದ್ದರಿಂದೇನೊ ಚಾಲ್ಸ್ ಮನಬಂದ ಕುಕೃತ್ಯಗಳನ್ನು ರಾಜಾರೋಷವಾಗಿ ಮಾಡತೊಡಗಿದ. ಅದು ಆತನ ಜೀವನದ ದಿಕ್ಕನ್ನೇ ಬುಡಮೇಲು ಮಾಡಿತು. ಪರಿಣಾಮ ಎಳೆಯ ವಯಸ್ಸಿನಲ್ಲಿಯೇ ಜೈಲು ಸೇರಿ ಶಿಕ್ಷೆಯನ್ನನುಭವಿಸುತ್ತಾನೆ. ಇಷ್ಟೆಲ್ಲದರ ನಡುವೆಯೂ ಆ ಹುಡುಗನಿಗೆ ಒಂದು ಹವ್ಯಾಸ ಮಾತ್ರ ವಿಪರೀವಾಗಿದ್ದಿತು. ಪುಸ್ತಕಗಳ ಓದು. ಎಲ್ಲ ಬಗೆಯ ಪುಸ್ತಕಗಳನ್ನು ಅದರಲ್ಲೂ ಮನಶಾಸ್ತ್ರದ ಬಗೆಗಿನ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಿದ್ದ ಚಾಲ್ಸ್ ತನ್ನ ಮುಂದಿರುವವರ ಗುಣನಡತೆ ಇಷ್ಟ ಕಷ್ಟಗಳಿಂದಿಡಿದು ಸೂಕ್ಷ್ಮತೆ ಹಾಗು ನ್ಯೂನ್ಯತೆಗಳೆಲ್ಲವನ್ನು ಕೂಡಲೇ ಅರಿತು ಅದಕ್ಕೆ ಪೂರಕವಾದೊಂದು ಏನಾದರು ತಂತ್ರವನ್ನು ಹೂಡಿ ಅವರ ವಿಶ್ವಾಸ ಗಿಟ್ಟಿಸಿಕೊಂಡು ಅವರಿಗೇ ದ್ರೋಹ ಬಗೆಯುವ ಕಲೆಯನ್ನು ನಿಧಾನವಾಗಿ ಈತ ಕರಗತಮಾಡತೊಡಗಿದ.

ಜೈಲಿನಿಂದ ಹೊರಬಂದ ಬಿಸಿರಕ್ತದ ಚಾಲ್ಸ್ ಕೋಟ್ಯಧಿಪತಿ ಕುಳಗಳೇ ತುಂಬಿ ತುಳುಕುತ್ತಿದ್ಧ ಫ್ರಾನ್ಸ್ ಗೆ ತೆರಳಿ ತಾನು ಅಲ್ಲಿಯವರೆಗೂ ಸಂಪಾದಿಸಿದ್ದ ಜ್ಞಾನವನ್ನೆಲ್ಲ ಧಾರೆಯೆರೆದು ವಿಶ್ವವನ್ನೇ ಲೂಟಿದ ಪ್ರೆಂಚರನ್ನು ನಿರಾಯಾಸವಾಗಿ ಲೂಟಿಮಾಡತೊಡಗುತ್ತಾನೆ. ಆದರೆ ಆತನ ಹಾವಳಿ ಹೆಚ್ಚು ಕಾಲ ನಡೆಯಲಿಲ್ಲ. ಅಲ್ಲಿನ ಪೊಲೀಸರಿಗಾಗಲೇ ಆ ಬಗ್ಗೆ ಸುಳಿವು ಸಿಕ್ಕು ಆತನನ್ನು ಹಿಡಿಯಲು ಬಲೆಯನ್ನು ಬೀಸುತ್ತಾರೆ. ಏತನ್ಮದ್ಯೆ ಪರ್ಷಿಯಾದ ಒಬ್ಬಾಕೆಯನ್ನು ಮದುವೆಯೂ ಆಗಿದ್ದ ಆತ ಪೊಲೀಸರಿಂದ ಸಂಸಾರ ಸಮೇತ ಪರಾರಿಯಾಗತೊಡಗಿದ. ಸಾಮನ್ಯದ ಕಳ್ಳಕಾಕರಾದರೆ ಸಿಟಿಯ ಅಥವಾ ಹಳ್ಳಿಯ ಅಲ್ಲೋ ಇಲ್ಲೋ ತಲೆಮರೆಸಿಕೊಂಡು ಕೆಲಕಾಲದ ನಂತರ ಹೊರಬಂದು ಬದುಕುತ್ತಿದ್ದರು. ಆದರೆ ಈ ಪ್ರಚಂಡ ವಂಚಕ ಮಾತ್ರ ತಾನು ಮಾಡಿರುವ ಕುಕೃತ್ಯಗಳ ಸಲುವಾಗಿಯೋ ಅಥವ ವಿಶ್ವವನ್ನೇ ದೋಚಿ ಮೆರೆಯುವ ಆಸೆಯಿಂದಲೋ ಏನೋ ಫ್ರಾನ್ಸ್ ಅನ್ನು ಬಿಟ್ಟು ಪರಾರಿಯಾದದ್ದು ಸೀದಾ ಮುಂಬೈಯಿಗೆ. ಪೋಲೀಸರ ಸರ್ಪಗಾವಲಿನಲ್ಲಿಯೂ ಅದೇಗೆ ಈತ ಎಸ್ಕೇಪ್ ಆತ ಎಂಬುದು ಆತನೊಬ್ಬನಿಗೆ ಮಾತ್ರ ಗೊತ್ತು! ಅದು 1970. ದೇಶದ ರಾಜಕೀಯ ಸ್ಥಿತಿ ಅಲ್ಲೊಲ್ಲ ಕಲ್ಲೋಲವಾಗುವ ಎಲ್ಲಾ ಮುನ್ಸೂಚನೆಗಳು ಮೂಡುತ್ತಿದ್ದ ಸಂಧಿಘ್ನ ಕಾಲ. ಮುಂಬೈಗೆ ಬಂದಿಳಿದ ಚಾಲ್ಸ್ ಕೆಲಸಮಯದಲ್ಲಿ ಹೆಣ್ಣುಮಗಳೊಬ್ಬಳ ತಂದೆಯೂ ಆಗುತ್ತಾನೆ. ಆದರೆ ಊರು ಬಿಟ್ಟ ಸಂಸಾರಿ ಹೊರ ಊರಿನಲ್ಲಿ ಕುಟುಂಬವನ್ನು ಪೊರೆಯುವದ ಬಿಟ್ಟು ಮತ್ತದೇ ದೋಚುವ ಚಾಳಿಗೆ ಮೈಯೊಡ್ಡುತ್ತಾನೆ. ಕ್ರಮೇಣವಾಗಿ ಆತನ ಪತ್ನಿಯೂ ಒಲ್ಲದ ಮನಸ್ಸಿನಿಂದ ಆತನ ದುಷ್ಕೃತ್ಯಗಳಿಗೆ ಸಾಥ್ ನೀಡಬೇಕಾಗುತ್ತದೆ. ಇನ್ನು 2008 ರಲ್ಲೇ ಮುಂಬೈಯ ಭದ್ರತೆ ಹಾಗಿರುವಾಗ ಮೂವತ್ತು-ನಲ್ವತ್ತು ವರ್ಷಗಳ ಹಿಂದೆ ಹೇಗಿದ್ದಿರಬಹದು?! ಚಾಲ್ಸ್ ನಂತ ಖದೀಮರಿಗೆ ಅದು ಸ್ವರ್ಗದ ತಾಣವಾಗಿದ್ದಿತೇನೋ. ಅಂತಹ ಸ್ವರ್ಗದಲ್ಲಿ ಸ್ಮಗ್ಲಿಂಗ್, ಗ್ಯಾಂಬ್ಲಿಂಗ್ ಹಾಗು ಟೂರಿಸ್ಟ್ ಗಳಾಗಿ ಬರುತ್ತಿದ್ದ ವಿದೇಶಿಗರನ್ನು ಲೂಟುತ್ತಿದ್ದ ಈ ಆಸಾಮಿ ಕೊನೆ ಕೊನೆಗೆ ಹಾಡ ಹಗಲೇ ಬ್ಯಾಂಕ್ಗಳ ದರೋಡೆಗೆ ಹ ಇಳಿಯುತ್ತಾನೆ. ಕೊನೆಗೂ ನಮ್ಮ ಪೊಲೀಸ್ ಮಹಾಶಯರ ಕೈಗೆ ಸಿಕ್ಕಿಕೊಂಡ ಈತ ಅಲ್ಲೂ ಸಹ ಪವಾಡಸದೃಶ್ಯ ರೀತಿಯಲ್ಲಿ ಪಾರಾಗುತ್ತಾನೆ. ನಂತರದ ಈತನ ಲೂಟಿಯಾತ್ರೆ ಉತ್ತರದ ಆಫ್ಘಾನಿಸ್ತಾನದೆಡೆಗೆ. ಕಾಬುಲ್ ನಲ್ಲಿ ಪ್ರವಾಸಿಗರ ವಿಪರೀತ ಲೂಟಿ ಕೂಡಲೇ ಅಲ್ಲಿನ ಅಧಿಕಾರಿಗಳನ್ನೂ ಜಾಗೃತಗೊಳಿಸಿತು. ಅಲ್ಲಿಯೂ ಸಿಕ್ಕಿಹಾಕಿಕೊಂಡ ಈತ ಮತ್ತೊಮ್ಮೆ ಅಧಿಕಾರಿಗಳಿಗೆ ಚಳ್ಳೆಹಣ್ಣನು ತಿನ್ನಿಸಿ ಇರಾನ್ ಗೆ ಪರಾರಿಯಾಗುತ್ತಾನೆ. ಆದರೆ ಈ ಬಾರಿ ಕೇವಲ ಜೈಲಿನಿಂದಷ್ಟೇ ಪರಾರಿಯಾಗುವುದಲ್ಲದೆ ತನ್ನ ಪುಟ್ಟ ಸಂಸಾರವನ್ನು ನಡುನೀರಿನಲ್ಲಿ ಬಿಟ್ಟು ಪಲಾಯನಗೈದಿರುತ್ತಾನೆ. ಕೆಲ ಸಮಯದ ನಂತರ ಅಣ್ಣನ ಹಿರಿಮೆಯ ಸುದ್ದಿಗೆ ಮನಸೋತು ಇದ್ದೂ ಸತ್ತಂತಿದ್ದ ಆತನ ತಮ್ಮ ಎಲ್ಲಿಂದಲೋ ಅಣ್ಣನನ್ನು ಅರಸಿಕೊಂಡು ಹೋಗಿ ಆತನ ಪಾದಾರವಿಂದಗಳಿಗೆರಗಿ ತನ್ನನೂ ಈ ಮಾರ್ವೆಲಸ್ ಬಿಸಿನೆಸ್ಗೆ ಸೇರಿಸಿಕೊಳ್ಳಬೇಕೆಂದು ಬೇಡಿಕೊಳ್ಳುತ್ತಾನೆ. ಅಣ್ಣ ತಥಾಸ್ತು ಎನ್ನುತ್ತಾನೆ! ಮುಂದೆ ಶುರುವಾದ ಅಣ್ಣ ತಮ್ಮಂದಿರ ಕೈಚಳಕ ಹೆಚ್ಚು ಕಡಿಮೆ ಅಷ್ಟೂ ಮಧ್ಯಪ್ರಾಚ್ಯಾದೇಶಗಳನ್ನು ಒಳಹೊಕ್ಕು ದೂರದ ಗ್ರೀಸ್ನ ವರೆಗೂ ವ್ಯಾಪಿಸುತ್ತದೆ. ಕೊನೆಗೆ ಸಹೋದರರ ಸವಾಲನ್ನು ಸ್ವೀಕರಿಸಿದ ಅಥೆನ್ಸ್ ನ ಅಧಿಕಾರಿಗಳು ಜೋಡಿಯನ್ನು ಹಿಡಿದು ಜೈಲಿನೊಳಗೆ ದಬ್ಬುತ್ತಾರೆ. ಆದರೆ ಅವರಿಗೇನು ಗೊತ್ತಿತ್ತು ತಾವು ಹಿಡಿದ ವ್ಯಕ್ತಿ ಕಟ್ಟಿ ಕೂರಿಸಲಾಗದ ಗಾಳಿಯಂತವನೆಂದು! ಅಲ್ಲಿನ ಅಧಿಕಾರಿಗಳೇ ಕಕ್ಕಾಬಿಕ್ಕಿಯಾಗುವಂತೆ ಅಣ್ಣ, ತಮ್ಮನ ಐಡೆಂಟಿಯನ್ನೇ ಬದಲಿಸುತ್ತಾನೆ. ಅರ್ಥಾತ್ ತಾನೇ ಸಣ್ಣವನೆಂದು ಹಾಗು ಅಸಲಿಯ ತಮ್ಮನೇ ಚಾರ್ಲ್ಸ್ ಎಂದು ಅಧಿಕಾರಿಗಳಿಗೆ ಮಣ್ಣು ಮುಕ್ಕಿಸುತ್ತಾನೆ. ಅದೂ ಸಹ ಒಂದು ಕಲೆ. ಒಟ್ಟಿನಲ್ಲಿ ಒಳಗಿದ್ದ ಆತನ ತಮ್ಮನಿಗೆ 18 ವರ್ಷದ ಕಾರಾಗೃಹ ಶಿಕ್ಷೆಯಾದಾಗಲೇ ಜಗತ್ತಿಗೆ ತಿಳಿದಿದ್ದು ಅಣ್ಣ ಚಾಲ್ಸ್ ಅದಾಗಲೇ ದೇಶವನ್ನು ಬಿಟ್ಟು ಪರಾರಿಯಾಗಿದ್ದನೆಂದು!

ದೇಶವಿದೇಶಗಳ ಹಲವಾರು ಭಾಷೆಗಳಲ್ಲಿ ನಿಪುಣನಾಗಿದ್ದ ಈತನ ಹೆಚ್ಚಿನ ಟಾರ್ಗೆಟ್ 20-25 ರ ವಯಸ್ಸಿನ ಪ್ರವಾಸಿ ಹುಡುಗಿಯರು. ತನ್ನ ಅಂದವಾದ ಮೈಮಾಟದಿಂದ ಹುಡುಗಿಯರನ್ನು ಸೆಳೆದು ಡ್ರಗ್ಸ್ ನ ನಶೆಯನ್ನು ಹತ್ತಿಸಿ ಅವರನ್ನು ಲೂಟಿ ಮಾಡುತ್ತಿದ್ದನಲ್ಲದೆ ವಿಚಿತ್ರ ರೀತಿಯಲ್ಲಿ ಅವರನ್ನು ಕೊಂದು ಸಾಯಿಸಿರುವುದೂ ಉಂಟು! ಎಪ್ಪತನೆ ದಶಕದ ಮೊದಲಾರ್ದದಲ್ಲೇ ಸುಮಾರು 15 ರಿಂದ 20 ಕೊಲೆಗಳನ್ನು ಮಾಡಿದ್ದ ಕೀರ್ತಿ ಈತನ ಹೆಸರಿನಲ್ಲಿದ್ದಿತು! ಡಜನ್ ಗಟ್ಟಲೆ ದೇಶಗಳಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎಂಬ ಪಟ್ಟವೂ ಈತನದೇ ಆಗಿದ್ದಿತು.

ಎತನ್ಮದ್ಯೆ 1976 ರಲ್ಲಿ ಈತ ಭಾರತದ ಅಧಿಕಾರಿಗಳ ಬಲೆಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಅದು ಪೊಲೀಸ್ ಅಧಿಕಾರಿಗಳು ಆತನಿಗಾಗಿ ಬೀಸಿದ ಬಲೆಯೊ ಅಥವ ಆತನೇ ತನಗಾಗಿ ರಚಿಸಿದ ತಂತ್ರವೋ, ಉತ್ತರ ಕಾಣಲು ಪೊಲೀಸರಿಗೆ ಎರಡು ದಶಕಗಳು ಬೇಕಾಯಿತು! ದೆಹಲಿಯ ಹೈ ಪ್ರೊಫೈಲ್ ಪಾರ್ಟಿಯೊಂದಲ್ಲಿ ನೆರೆದಿದ್ದ ಹಲವಾರು ಪ್ರೆಂಚ್ ಪ್ರಜೆಗಳಿಗೆ ಡ್ರಗ್ಸ್ ಕೊಟ್ಟು ಲೂಟಿಮಾಡಲು ಪ್ರಯತ್ನಿಸಿ ಪೊಲೀಸರಿಗೆ ಸಿಕ್ಕಿಹಾಕಿಕೊಂಡ ಈತ ತನ್ನ ಹಳೆಯ ಅಳಿದುಳಿದ ಕರ್ಮಕಾಂಡಗಳೆಲ್ಲದರ ಫಲವಾಗಿ ಬರೋಬ್ಬರಿ 11 ವರ್ಷ ಕಾರಾಗೃಹ ಶಿಕ್ಷೆಯನ್ನು ‘ವಿಧಿಸಿಕೊಳ್ಳುತ್ತಾನೆ’. ಅದಾಗಲೇ ಭಾರತದಲ್ಲಿ ಎರಡೆರಡು ಭಾರಿ ಜೈಲ್ ಬ್ರೇಕ್ಗಳ ಹೆಗ್ಗಳಿಕೆಗೆ ಹೆಸರುವಾಸಿಯಾಗಿದ್ದ ಈತನನ್ನು ಇಟ್ಟರೆ ತಿಹಾರ್ ಜೈಲೇ ಬೇಕೆಂದು ಅಧಿಕಾರಿಗಳು ಅಂದು ತೀರ್ಮಾನಿಸಿದರು. ಅಲ್ಲಿಗೆ 1976 ರಿಂದ 1986 ರ ವರೆಗಿನ ಜೈಲುವಾಸ ಆತನಿಗೆ ಫಿಕ್ಸ್ ಆಗುತ್ತದೆ. ಆದರೆ ಈ ಆಸಾಮಿಗೆ ತಿಹಾರ್ ಜೈಲುವಾಸ ಅದೆಷ್ಟು ಪ್ರಿಯವಾಗಿತೆಂದರೆ 1986 ರಿಂದ ಮತ್ತೂ 10 ವರ್ಷ ಅಲ್ಲೇ ಇರಬೇಕೆಂದು ತೀರ್ಮಾನಿಸುತ್ತಾನೆ! ದಿನ ಅದೇ ಕಂಬಿಗಳು, ಅದೇ ಗೋಡೆಗಳು, ಅದೇ ಪರಿಸರ ಮತ್ತದೇ ಊಟವನ್ನು ತಿಂದು ಜೀವನವೇ ನರಕವೆನಿಸುವ ಜೈಲಿನಂತಹ ಜಾಗದಲ್ಲೂ ದಶಕಗಳ ಕಾಲ ಜೀವನ ನೆಡೆಸಿ ಮತ್ತದೇ ಜಾಗಕ್ಕೆ ಬರಲಿಚ್ಛಿಸುವ ವ್ಯಕ್ತಿ ಹುಚ್ಚನೇ ಸರಿ. ಆದರೆ ಚಾಲ್ಸ್ ಒಂಥರಾ ಬುದ್ದಿವಂತ ಹುಚ್ಚ. ಆತನ ಈ ಎಕ್ಸ್ಟೆಂಡೆಡ್ ಜೈಲುವಾಸದ ಪ್ಲಾನ್ ಶತಾಯ ಗತಾಯ ಸಾಧಿಸಿಯೇ ತೀರಬೇಕಾಗಿರುತ್ತದೆ. ಕಾರಣ ಮಾತ್ರ ಬಹುಷಃ ಅಲ್ಲಿನ ಯಾರೊಬ್ಬರಿಗೂ ತಿಳಿದಿರಲು ಸಾಧ್ಯವಿಲ್ಲ! ಅದಕ್ಕಾಗಿ ಆತ ಮಾಡಿದ ಪ್ಲಾನ್ ಪ್ರಿಸನ್ ಬ್ರೇಕ್ ಅರ್ಥಾತ್ ಜೈಲಿನಿಂದ ಎಸ್ಕೇಪ್ ಆಗುವುದು! ಇಲ್ಲಿ ಕೊಂಚ ದ್ವಂದ್ವಕ್ಕೊಳಗಾಗುವುದು ಅತಿ ಸಹಜವೇ. ಆದರೆ ಮೊದಲೇ ಹೇಳಿದಂತೆ ಈತ ಬುದ್ದಿವಂತ ಹುಚ್ಚ.

ಇಡೀ ಭೂಮಂಡಲವನ್ನೇ ತನ್ನ ಕ್ರೈಂ ಅಡ್ಡವಾಗಿಸಿಕೊಂಡಿದ್ದ ಈತನಿಗೆ ಹೊದಡೆಯಲ್ಲ ಪೋಲೀಸರ ಹಾಗು ಕೋರ್ಟುಗಳ ‘ರಾಜಾತಿಥ್ಯ’ ದೊರೆಯುತ್ತಿತ್ತು. ಹಾಗೆಯೆ ಥೈಲ್ಯಾಂಡಿನ ಸರ್ಕಾರ ಕೊಲೆ ಕೇಸೊಂದರಲ್ಲಿ ಈತನನ್ನು ವಿಚಾರಣೆಗೊಳಿಸಬೇಕಿತ್ತು. ಒಂದು ವೇಳೆ ಈತನ ವಿರುದ್ದದ ಅಲ್ಲಿಯ ಅಪರಾದಗಳೆಲ್ಲ ಸಾಬೀತಾದಾರೆ ಅಲ್ಲಿನ ಸರ್ಕಾರ ಈತನಿಗೆ ಮರಣದಂಡಣೆಯನ್ನು ನೀಡಿದರೂ ಆಶ್ಚರ್ಯಪಡಬೇಕಾಗಿರಲಿಲ್ಲ. ಆದರೆ ಆ ದೇಶದಲ್ಲಿ ಒಂದು ಕಾನೂನಿದೆ. ಒಂದು ವೇಳೆ ಕೇಸೊಂದರ ಕುರಿತು ಅಧಿಕಾರಿಗಳು ಮೂಲ ಅಪರಾಧಿಯನ್ನು 20 ವರ್ಷಗಳ ಒಳಗೆ ವಿಚಾರಣೆಗೆ ಒಳಪಡಿಸದಿದ್ದರೆ, ಅಥವ ಆ ಕೇಸಿನ ಬಗ್ಗೆ ಒಂದಿಷ್ಟೂ ವಿಚಾರಣೆ ನೆಡೆಯದಿದ್ದರೆ ಆ ಕೇಸನ್ನು ಮುಚ್ಚಿಹಾಕಲಾಗುತ್ತದೆ. ಎಲ್ಲವನ್ನೂ ಪಕ್ಕ ಲೆಕ್ಕಾಚಾರದಲ್ಲಿ ಮಾಡುವ ಚಾರ್ಲ್ಸ್ ಈ ವಿಷಯವನ್ನು ಚೆನ್ನಾಗಿ ಅರಿತಿದ್ದ. 1975 ರಲ್ಲಿ ಆರಂಭವಾದ ಆ ಕೇಸು ಒಂದು ವೇಳೆ 1995ರ ವರೆಗೂ ಯಾವುದೇ ಆಂತ್ಯವನ್ನು ಕಾಣದಿದ್ದರೆ ಅದು ಮುಚ್ಚಲ್ಪಡುತ್ತಿತ್ತು. ಅದಾಗಲೇ ಹನ್ನೊಂದು ವರ್ಷಗಳ ಜೈಲುವಾಸವನ್ನು ಅನುಭವಿಸದ ಚಾಲ್ಸ್ ನಮ್ಮ ದೇಶದ ಅಧಿಕಾರಿಗಳು ಆತನನ್ನು ಥೈಲ್ಯಾಂಡಿನ ಅಧಿಕಾರಿಗಳಿಗೆ ವರ್ಗಾವಣೆ ಮಾಡುವ ಮೊದಲೇ ಈತ ಭಾರತದಲ್ಲೇ ಮತ್ತೊಂದು ಕ್ರೈಂ ಅನ್ನು ಮಾಡಬೇಕು ಹಾಗು ಅದರ ಶಿಕ್ಷೆಯ ಅವಧಿ ಕನಿಷ್ಠ ಹತ್ತು ವರ್ಷಕ್ಕೂ ಮಿಗಿಲಾಗಿರಬೇಕು! ಜೈಲಿನಲ್ಲಿದ್ದೇ ಮತ್ತೆ ಜೈಲು ಸೇರುವ ಸಾಹಸವನ್ನು ಮಾಡಬೇಕೆಂದರೆ ಇರುವ ಒಂದೇ ಉಪಾಯ ಜೈಲಿನಿಂದ ಕದ್ದು ಓಡುವುದು ಹಾಗು ಕೆಲದಿನಗಳ ನಂತರ ಪುನಃ ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳುವುದು. ಕ್ರಿಮಿನಲ್ ಮೈಂಡ್ ಎಂದರೆ ಇದಕ್ಕೆ ಹೇಳುವುದೇನೋ. ಹೀಗೆ ಮಾರ್ಚ್ 16, 1986 ರ ರಾತ್ರಿ ಏಷ್ಯಾದಲ್ಲೇ ಅತಿ ಹೆಚ್ಚಿನ ಭದ್ರತೆಯ ಜೈಲೊಂದರಿಂದ ಪುಟಗೋಸಿಯಂತಿದ್ದ ಚಾರ್ಲ್ಸ್ ಓಟ ಕಿತ್ತಿರುತ್ತಾನೆ. ಆದರೆ ಅಂತಹ ಭದ್ರತೆಯ ಜೈಲಿಂದ ನೈಟ್ ವಾಕಿಗೆ ಹೋಗುವಂತೆ ನಿರಾಯಾಸವಾಗಿ ಈತ ಹೊರಬಂದಿದ್ದಾದರೂ ಹೇಗೆ?!

ಜೈಲೆಂದರೆ ಹೆಚ್ಚಾಗಿ ಪಾಪಿ ಜೀವಗಳೇ ತುಂಬಿ ತುಳುಕುವ ಭಯಾನಕ ಅಡ್ಡ. ಅಂತಹ ಜಾಗದಲ್ಲಿ ಹುಟ್ಟು ಗುಣ ಸತ್ತರೂ ಹೋಗದಂತಹ ಅಸಾಮಿಗಳನ್ನೇನು ಹುಡುಕುವುದು ಕಷ್ಟವೇ? ಇದನ್ನು ಅರಿತಿದ್ದ ಚಾರ್ಲ್ಸ್ , ಜೈಲಿನೊಗಳೇ ಡ್ರಗ್ಸ್ ಸಾಗಾಣಿಕೆಯಿಂದ ಸಿಕ್ಕಿಬಿದ್ದು ಕೊಳೆಯುತ್ತಿದ್ದ ಬಿಳಿಯನೊಬ್ಬನ ಪರಿಚಯವನ್ನು ಮಾಡಿಕೊಳ್ಳುತ್ತಾನೆ. ಹೆಸರು ಡೇವಿಡ್ ಹಾಲ್. ಮೊದಲೇ ಪಕ್ಕ ಮನಶಾಸ್ತ್ರವನ್ನು ಅರೆದು ಕುಡಿದವನಾಗಿದ್ದ ಚಾರ್ಲ್ಸ್ ಡೇವಿಡ್ ನ ಸಂಪೂರ್ಣ ಗುಣನಡತೆಯನ್ನು ತಿಳಿಯುತ್ತಾನೆ. ಎಲ್ಲೆಲ್ಲಿ ಆತನ ವೀಕ್ ಪಾಯಿಂಟ್ ಗಳಿದ್ದವೊ ಅಲ್ಲೆಲ್ಲ ತನ್ನ ನರಿ ಬುದ್ದಿಯನ್ನು ಬಳಸಿ ಆತನನ್ನು ಒಂತರ ಎಮೋಷನಲ್ ಬ್ಲಾಕ್ ಮೇಲ್ಗೆ ಒಳಪಡಿಸುತ್ತಾನೆ. ಕೆಲ ಸಮಯದ ನಂತರ ಆತನನ್ನು ತನ್ನ ಆಟಿಕೆಯಂತಾಗಿ ಮಾಡಿಕೊಂಡು ಮೊದಲು ಆತನನ್ನು ಜೈಲಿನಿಂದ ಹೊರಕಳಿಸಿ ನಂತರ ಅವನ ಮೂಲಕ ತನ್ನ ಕಾರ್ಯವನ್ನು ಸಿದ್ಧಿಸಿಕೊಳ್ಳುವ ಪ್ಲಾನ್ ಈತನದ್ದು. ಡೇವಿಡ್ ಎಂಬ ಮಂಕನೂ ಈತನ ಮಾತಿಗೆ ಬೆಲೆಕೊಟ್ಟು ಹೇಳಿದಂತೆಯೇ ನೆಡೆದುಕೊಳ್ಳುತ್ತಾನೆ. ಅದೇಗೆ ಮಾನವನ ಅಂಗಾಗಗಳ ಬಗ್ಗೆ ತಿಳಿದಿದ್ದನೋ ಏನೋ ಆಸ್ಪತ್ರೆಗೆ ಬಂದ ಡಾಕ್ಟರ್ ರಿಂದಲೇ ಡೇವಿಡ್ ಗೆ ಕಿಡ್ನಿ ಸಮಸ್ಯೆ ಇದೆ ಎಂದು ನಂಬುವಂತೆ ಮಾಡಿ ಅವರಿಂದಲೇ ಈತನನ್ನು ಜಾಮೀನಿನ ಮೇಲೆ ಬಿಡುವಂತೆ ಮಾಡುತ್ತಾನೆ ಚಾರ್ಲ್ಸ್! ಜೈಲಿನಿಂದ ಹೊರಬಂದ ಡೇವಿಡ್ ಸೀದಾ ತನ್ನ ದೇಶದ ವಿಮಾನವನ್ನು ಹತ್ತುವುದನ್ನು ಬಿಟ್ಟು ಕೀಲುಗೊಂಬೆಯಂತೆ ಚಾಲ್ಸ್ ನ ಎಸ್ಕೇಪ್ ಪ್ಲಾನ್ ಗೆ ಕಾರ್ಯೋನ್ಮುಖನಾಗುತ್ತಾನೆ.

ಅದಕ್ಕಾಗಿ ಬೇಕಾಗಿದ್ದ ಜನರನ್ನು ಉಪಕರಣಗಳನ್ನು ಡೇವಿಡ್ ಒಟ್ಟುಗೂಡಿಸತೊಡಗುತ್ತಾನೆ. ಇತ್ತ ಕಡೆ ಖದೀಮ ಚಾರ್ಲ್ಸ್ ಜೈಲಿನೊಳಗೇ ಇನ್ನೂ ಮೂವರ ಗುಂಪೊಂದನ್ನು ಕಟ್ಟಿಕೊಂಡು, ಅವರನ್ನೂ ಜೈಲಿನಿಂದ ಪರಾರಿಯಾಗಿಸುವ ಮಾತನ್ನು ಕೊಟ್ಟು ಅವರ ಮೂಲಕ ಡೇವಿಡ್ ಗೆ ಪ್ರಿಸನ್ ಬ್ರೇಕ್ ನ ಬಗ್ಗೆ ನಿರ್ದೇಶನವನ್ನು ನೀಡುತ್ತಿರುತ್ತಾನೆ. ಇವೆಲ್ಲ ಈತನ ಪ್ಲಾನ್ ಬಿ. ಆತನ ಪ್ಲಾನ್ ಎ ಬೇರೆಯೇ ಇರುತ್ತದೆ! ಅಲ್ಲದೆ ಅದು ಸಿಕ್ಕಾಬಟ್ಟೆ 'ಸ್ವೀಟ್' ಹಾಗು ವೆರಿ ವೆರಿ ಸಿಂಪಲ್ ಕೂಡ ಆಗಿರುತ್ತದೆ. ಎಸ್ಕೇಪ್ ಪ್ಲಾನಿನ ಕೆಲವು ತಿಂಗಳುಗಳ ಮೊದಲಿಂದಲೇ ಇಲ್ಲಸಲ್ಲದ ಕಾರಣಗಳನ್ನು ಹೇಳಿ ತಿಂಡಿ ಹಣ್ಣುಗಳನ್ನು ತರಿಸಿ ಜೈಲಿನವರಿಗೆಲ್ಲವೂ ಸಾಕೆನಿಸುವಷ್ಟು ಹಂಚುತ್ತಿದ್ದ ಚಾರ್ಲ್ಸ್. ಅಂದ ಹಾಗೆ ಈತ ಆ ಕಾಲದ ದಿ ಮೋಸ್ಟ್ ರಿಚ್ಚೆಸ್ಟ್ ಕ್ರಿಮಿನಲ್! ತನ್ನ ಬಗೆಗೆ ಪುಸ್ತಕ ಬರೆಯುವರಿಗೆ, ಚಲನಚಿತ್ರಗಳನ್ನು ಮಾಡುವವರಿಗೆ, ಇಂಟರ್ವ್ಯೂ ಮಾಡಲು ಬರುವ ಟಿವಿ ಚಾನೆಲ್ ಗಳಿಗೆ ಎರ್ರಾಬಿರಿ ಚಾರ್ಜ್ ಮಾಡುತ್ತಿದ್ದ ಚಾರ್ಲ್ಸ್ ಆಗಿನ ಕಾಲಕ್ಕೆ ಒಬ್ಬ ಕೋಟ್ಯಧಿಪತಿ. ಮೇಲಾಗಿ ದೊಡ್ಡ ದೊಡ್ಡ ಕುಳಗಳನೆಲ್ಲ ದೋಚಿ ಈತ ಮಾಡಿಟ್ಟಿರುವ ಹಣವೇ ಎಷ್ಟಿದೆಯೆಂದು ಇಂದಿಗೂ ಸಹ ಯಾರಿಗೂ ತಿಳಿದಿಲ್ಲ. ಒಟ್ಟಿನಲ್ಲಿ ಅನಾಮಿಕವಾಗಿದ್ದ ತನ್ನ ಅಕೌಂಟಿನಿಂದ ಈ ಎಲ್ಲ ಕಾರುಬಾರುಗಳು ಈತನಿಗೆ ಜೈಲಿನೊಳಗಿಂದಲೇ ಸಾದ್ಯವಾಗುತ್ತಿದ್ದವು. ಮಾರ್ಚ್ 16 ರ ಭಾನುವಾರ ತನ್ನ ಹುಟ್ಟುಹಬ್ಬವೆಂದು ಭರ್ಫಿ ಹಾಗು ದ್ರಾಕ್ಷಿಯನ್ನು ತರಿಸಿದ ಈತ ಎಲ್ಲರಿಗೂ ಬಾಯಿ ತುಂಬುವಷ್ಟು ನೀಡಿ ಖುಷಿಪಡತೊಡಗಿದ. ಜೈಲಿನ ಗಾರ್ಡುಗಳೂ ಯಾವುದೇ ಸಂಶಯವಿಲ್ಲದೆ ಆತ ನೀಡಿದ ಸಿಹಿಯನ್ನು ತಿಂದು ತೇಗಿದರು. ಆದರೆ ಆ ತೇಗು ಸಾಮನ್ಯದ ತೇಗಾಗಿರಲಿಲ್ಲ. ತಿಂದ ಕೆಲ ಹೊತ್ತಿನಲ್ಲಿಯೇ ಎಲ್ಲಿಲ್ಲದ ನಿದ್ರೆ ಅವರನ್ನು ಆವರಿಸತೊಡಗಿತು. ಕಾರಣ ಈತ 'ಲಾರ್ಪೊಸ್' ಎಂಬ ನಿದ್ರೆ ಮಾತ್ರೆಯ ಒಟ್ಟು 820 ಸಣ್ಣ ಸಣ್ಣ ಗುಳಿಗೆಗಳನ್ನು ಆ ಸಿಹಿಗಳಲ್ಲಿ ಸೇರಿಸಿದ್ದನ್ನು! ತಿಂದು ನಿದ್ರೆಹೋಗುವುದು ಹಾಗಿರಲಿ ಬಹುಷಃ ಆ ಮಟ್ಟಿನ ಡೋಸ್ಗೆ ವಾಸನೆ ಕುಡಿದೇ ಹಲವರು ಮೂರ್ಛೆ ಹೋಗಿರಬಹುದು. ಆದರೆ ಗುಳಿಗೆಗಳು 820 ಆಗಿದ್ದರೆ ಚಾರ್ಲ್ಸ್ ಮಾತ್ರ ಪಕ್ಕಾ 420! ಅಷ್ಟು ಗುಳಿಗೆಗಳಿದ್ದರೂ, ಅದೆಷ್ಟೇ ಅವುಗಳನ್ನು ತಿಂದರೂ ಬರೋಬ್ಬರಿ ಮೂವತ್ತು ನಿಮಿಷಗಳವರೆಗೂ ಯಾವುದೇ ಪರಿಣಾಮ ಬೀರದಂತೆ ಡೋಸ್ ಗಳನ್ನು ಮಾಡಿದ್ದ ಈ ಡ್ರಗ್ ಪರಾಕ್ರಮಿ. ಮುಂದಿನ್ನೇನು. ಸರಿಯಾಗಿ ಮೂವತ್ತು ನಿಮಿಷಗಳ ನಂತರ ಗೇಟಿನ ದ್ವಾರಪಾಲಕರೆಲ್ಲರೂ ತಮ್ಮ ಬಾಯಿಗಳನ್ನು ತೆರೆದುಕೊಂಡು ಗನ್ನುಗಳನ್ನು ತಬ್ಬಿಕೊಂಡು ಸುಖ ನಿದ್ರೆಗೆ ಜಾರಿದ್ದರು. ರಾಜಾರೋಷವಾಗಿ ಹೊರನೆಡೆದರು ಚಾರ್ಲ್ಸ್ ಹಾಗು ಆತನ ದೇಸಿ ಸಂಗಡಿಗರು.

ಇದು ಭಾರತದ ಕಳ್ಳ ಪೋಲೀಸರ ಇತಿಹಾಸದಲ್ಲಿ ಹಚ್ಚಳಿಯಾಗಿ ಉಳಿದ ಬೆಚ್ಚಿಬೀಳಿಸುವ ಕಥನ. ನಮ್ಮ ವ್ಯವಸ್ಥೆ ಅದೆಷ್ಟೇ ಉತ್ಕೃಷ್ಟವಾಗಿದ್ದರೂ ಜೈಲುಗಳು ಅದೆಂತಹದ್ದೇ ಭದ್ರತೆಯನ್ನು ಒಳಗೊಂಡಿದ್ದರೂ ಕಳ್ಳನನ್ನು ಕೂಡಿಡುವಾಗ ಕಳ್ಳನಂತೆಯೇ ಯೋಚಿಸಬೇಕೆಂಬ ಪಾಠವನ್ನು ಇದು ಅಧಿಕಾರಿಗಳಿಗೆ ನೀಡಿತು. ಅಲ್ಲಿಂದ ಮುಂದೆ ಚಾರ್ಲ್ಸ್ ತನಗಾದ ಎಲ್ಲ ಬಗೆಯ ಸುಳಿವುಗಳನ್ನು ನೀಡುತ್ತಾ ಪೊಲೀಸರೇ ಅವನ ಬಳಿಗೆ ಬರುವಂತೆ ಮಾಡಿಕೊಳ್ಳುತ್ತಾನೆ. ಗೋವಾದ ಹೋಟೆಲೊಂದರಲ್ಲಿ ಬಂದಿಯಾದ ಆತ ಅಂದುಕೊಂಡಂತೆ ಪ್ರಿಸನ್ ಬ್ರೇಕಿನ ಸಲುವಾಗಿ ಮುಂದಿನ 10 ವರ್ಷ ಅಂದರೆ 1997 ರ ವರೆಗೂ ಜೈಲುವಾಸವನ್ನನುಭವಿಸಿ ಕೊನೆಗೂ ಥೈಲ್ಯಾಂಡಿನ ಅಧಿಕಾರಿಗಳಿಗೆ ಸಿಗದಂತೆ ಬಚಾವಾಗುತ್ತಾನೆ. ಇಂತಹ ಒಬ್ಬ ಕೊಲೆಪಾತಕೀಗೂ ನಮ್ಮಲ್ಲಿ ಆತ್ಮಸ್ಟ್ರೈರ್ಯ ವನ್ನು ತುಂಬಿ ಆತನ ಪರವಾಗಿ ಕಾಯ-ವಾಚಾ-ಮನಸಾ ವಾದಿಸುತ್ತಾ ಹೋರಾಟ ನೆಡೆಸಿ ದೇಶಕ್ಕಾಗಿ ಕಾದಾಡಿದ ಯೋಧನೊಬ್ಬನ್ನು ಬೀಳ್ಕೊಡುವಂತೆ ವಿಮಾನ ಹಚ್ಚುವ ನಮ್ಮ ಲಾಯರುಗಳಿಗೂ ಪ್ರಶಸ್ತಿಯನ್ನು ತಂದು ನೀಡಬೇಕು! ಭಾರತದಿಂದ ಪ್ಯಾರಿಸ್ ಗೆ ಹಾರಿದ ಚಾರ್ಲ್ಸ್ ತಾನು ದೋಚಿದ ಹಣದಿಂದ ಅಲ್ಲಿ ಒಬ್ಬ ಸೆಲೆಬ್ರಿಟಿಯ ಐಷಾರಾಮಿ ಜೀವನವನ್ನು ನೆಡೆಸುತ್ತಾನೆ. ಆದರೆ ವಿಧಿಯಾಟದ ಮುಂದೆ ಯಾರು ದೊಡ್ಡವರು? ಅಲ್ಲಿಂದ 5 ವರ್ಷದ ನಂತರ ನೇಪಾಳದಲ್ಲಿ ಸೆರೆಸಿಕ್ಕ ಚಾರ್ಲ್ಸ್ ಅಲ್ಲಿನ ಯಾವುದೊ ಹಳೆಯ ಕೊಲೆಕೇಸಿನಲ್ಲಿ ಪುನ್ಹ ಬಂಧಿತನಾಗಿ ಜೀವಾವಧಿ ಶಿಕ್ಷೆಯನ್ನನುಭವಿಸುತ್ತಾನೆ. ಆದರೆ ಅರ್ವತ್ತು ವರ್ಷದ ಮುದುಕ ಚಾರ್ಲ್ಸ್ ಪೆನ್ನಿನ ನಿಬ್ ಗಳ ಮೂಲಕ ಡ್ರಗ್ಸ್ ಗಳನ್ನು ತರಿಸಿ ಅಲ್ಲಿಯೂ ಪರಾರಿಯಾಗುವ ಖತರ್ನಾಕ್ ಸ್ಕೆಚನ್ನು ಮತ್ತೊಮ್ಮೆ ರೂಪಿಸುತ್ತಾನೆ. ಆದರೆ ಈ ಭಾರಿ ಅಲ್ಲಿನ ಪೊಲೀಸರಿಗೆ ರೆಡ್ ಹ್ಯಾಂಡಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ ಹಾಗು ಇಂದಿಗೂ ಅಲ್ಲಿಯೇ ಕೊಳೆಯುತ್ತಿದ್ದಾನೆ..

ಬರೆಯುತ್ತ ಹೋದರೆ ಇಂಥ ಸಮಾಜಘಾತುಕ ವ್ಯಕ್ತಿತ್ವಗಳು ಅಗಣಿತ ಸಂಖ್ಯೆಯ ಸರಕುಗಳನ್ನು ನೀಡುತ್ತಾ ಹೋಗುತ್ತವೆ. ಆದರೆ ಇದರಿಂದ ಸಮಾಜಕ್ಕೆ ಒಳಿತಾಗುವ ವಿಚಾರಗಳಂತೂ ಎಳ್ಳಷ್ಟೂ ಇರುವುದಿಲ್ಲ. ಆದರೆ ಒಂದು ವಿಷಯ ಮಾತ್ರ ಧಿಟ. ಪ್ರತಿಭೆಯೆಂಬ ಮಾಯಕುದುರೆಗೆ ಲಂಗು ಲಗಾಮೆಂಬ ಮೂಗುದಾರವನ್ನು ತೊಡಿಸದಿದ್ದರೆ ಅದರ ಓಟ ಅದೆಷ್ಟೇ ಥ್ರಿಲ್ಲಿಂಗಾದರೂ ಅಂತ್ಯ ಮಾತ್ರ ಅಷ್ಟೇ ಘೋರವಾಗಿರುತ್ತದೆ.

Friday, November 30, 2018

ಬಾರ್ಡರ್-ಗವಾಸ್ಕರ್ ಸರಣಿ : ಅಂದು - ಇಂದು!


ಸ್ಥಳ : ಕೊಲ್ಕತ್ತಾ. ಮಾರ್ಚ್ 15, 2001.

ಮೊದಲ ಇನ್ನಿಂಗ್ಸ್
:
ಆಸ್ಟ್ರೇಲಿಯ : 445/10
ಭಾರತ : 212/10

ಎರಡನೇ ಇನ್ನಿಂಗ್ಸ್ : (ಫಾಲೋ ಆನ್)
ಭಾರತ : 657/7 (D)
ಆಸ್ಟ್ರೇಲಿಯ : 171/10



ಆ ದಿನದ ಸೂರ್ಯ ಪಶ್ಚಿಮದಲ್ಲಿ ಮರೆಯಾಗುತ್ತಾ ಕ್ರಿಕೆಟ್ ಲೋಕದ ಮಹಾ ಅಚ್ಚರಿಯೊಂದಕ್ಕೆ ಸಾಕ್ಷಿಯಾದನು. ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದ ಆ ಟೆಸ್ಟ್ ಭಾರತದ ಪಾಲಿಗಂತೂ ವಿಶ್ವಕಪ್ನನ್ನೇ ಗೆದ್ದು ಬೀಗಿದ ಅನುಭವವನ್ನು ನೀಡಿತು. ಅಂದು ಕೋಲ್ಕತ್ತದ ಆಗಸ ರಂಗು ರಂಗಿನ ಪಟಾಕಿಗಳಿಂದ ಶೃಂಗಾರಗೊಳ್ಳುತ್ತಿದ್ದರೆ ಇತ್ತ ಕಡೆ ಇಡೀ ದೇಶವೇ ಹಬ್ಬದ ವಾತಾವರಣವೇನೋ ಎಂಬ ಸಂಭ್ರಮದಲ್ಲಿ ನಲಿಯಿತು. VVS ಲಕ್ಷ್ಮಣ್, ಹರ್ಭಜನ್ ಸಿಂಗ್ ಹಾಗು ರಾಹುಲ್ ದ್ರಾವಿಡ್ ಅಂದು ಖಾನ್, ರೋಷನ್ ಹಾಗು ಬಚ್ಚನ್ ರೆಲ್ಲರನ್ನೂ ಹಿಂದಿಕ್ಕಿ ದೇಶದ ಜನಮಾನಸದಲ್ಲಿ ಹೀರೋಗಳಾಗಿಬಿಟ್ಟರು. ಒಟ್ಟು 557 ರನ್ಗಳು ಹಾಗು 13 ವಿಕೆಟ್ಗಳ ಈ ಮೂವರ ಆಟ ಅಂದು ವಿಶ್ವ ಕ್ರಿಕೆಟ್ನಲ್ಲಿ ಮ್ಯಾಚ್ ಫಿಕ್ಸಿಂಗ್ ಎಂಬ ಸ್ಲೋ ಪಾಯಿಸನ್ನಿಂದ ನೇಪಥ್ಯಕ್ಕೆ ಸೇರುತ್ತಿದ್ದ ಭಾರತೀಯ ಕ್ರಿಕೆಟ್ನ ಪುನರ್ಜನ್ಮಕ್ಕೆ ಕಾರಣವಾಯಿತು. ಹೈಡೆನ್, ಲ್ಯಾಂಗರ್, ಪಾಂಟಿಂಗ್, ವಾ ಬ್ರದರ್ಸ್, ಗಿಲ್ಕ್ರಿಸ್ಟ್, ವಾರ್ನ್, ಗಿಲ್ಲೆಸ್ಪಿ, ಮೆಗ್ರಾತ್ ಎಂಬ ಕ್ರಿಕೆಟ್ ದಂತಕತೆಗಳೇ ತುಂಬಿದ್ದ ತಂಡವೊಂದನ್ನು ಫಾಲೋ ಆನ್ ನ ಹೊರತಾಗಿಯೂ ಸಿನಿಮೀಯ ರೀತಿಯಲ್ಲಿ ಸೋಲಿಸುವುದು ಅಂದಿನ ಕಾಲಕಷ್ಟೆ ಅಲ್ಲದೆ ಇಂದಿಗೂ ಸಹ ಸಾಮಾನ್ಯದ ಮಾತಲ್ಲ. ಮೊದಲ ಟೆಸ್ಟ್ ನಲ್ಲಿ ಸೋತು ಎರಡನೇ ಟೆಸ್ಟನ್ನು ಇಲ್ಲಿ ದಾಖಲೆಯ ಅಂಕಿ ಅಂಶಗಳೊಟ್ಟಿಗೆ ಗೆದ್ದ ಭಾರತ ಅದೇ ಆತ್ಮವಿಶ್ವಾಸದಲ್ಲಿ ಮೂರನೆಯ ಹಾಗು ಅಂತಿಮ ಟೆಸ್ಟನ್ನು ಗೆದ್ದು ಸರಣಿಯನ್ನು ವಶಪಡಿಸಿಕೊಂಡಿತು. ಆ ಮೂಲಕ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕಾಂಗರೂಗಳ ಮೂರು ದಶಕದ ಕನಸಿಗೆ ತಣ್ಣಿರೆರಚಿತು!

ಹೆಸರು 'ಬಾರ್ಡರ್-ಗವಾಸ್ಕರ್' ಸರಣಿ. ಇಂಗ್ಲೆಂಡ್ ಹಾಗು ಆಸ್ಟ್ರೇಲಿಯಾ ಟೆಸ್ಟ್ ಪಂದ್ಯಗಳು ಎಂದಾಕ್ಷಣ ಹೇಗೆ 'ASHES' ನ ಹೆಸರು ಬರುತ್ತದೆಯೋ ಅಂತೆಯೇ ಭಾರತ ಹಾಗು ಆಸ್ಟ್ರೇಲಿಯಾ ಟೆಸ್ಟ್ ಎಂದಾಕ್ಷಣ ಕಣ್ಣ ಮುಂದೆ ಬರುವ ಹೆಸರೇ 'ಬಾರ್ಡರ್-ಗವಾಸ್ಕರ್' ಸರಣಿ. ಟೆಸ್ಟ್ ಕ್ರಿಕೆಟ್ ನಲ್ಲಿ ಹತ್ತುಸಾವಿರ ರನ್ ಗಳ ಕಿರೀಟವನ್ನು ಮೊದಲು ತೊಟ್ಟ ಸುನಿಲ್ ಗವಾಸ್ಕರ್ (1987) ಹಾಗು ಆಸ್ಟ್ರೇಲಿಯಾದ ಅಲನ್ ಬಾರ್ಡರ್ (1993) ದಿಗ್ಗಜದ್ವಯರ ಹೆಸರಿನಲ್ಲಿ ಕ್ರಮವಾಗಿ ಎರೆಡೆರೆಡು ವರ್ಷಕ್ಕೊಮ್ಮೆ ಭಾರತ ಹಾಗು ಆಸ್ಟ್ರೇಲಿಯಾ ತಂಡಗಳ ನಡುವೆ ನೆಡೆಯುವ ಹಣಾಹಣಿ. 1996 ರಲ್ಲಿ ಮೊದಲುಗೊಂಡು ಇಲ್ಲಿಯವರೆಗೂ ಒಟ್ಟು 13 ಸರಣಿಗಳನ್ನು ಆಡಿರುವ ಎರಡು ತಂಡಗಳಲ್ಲಿ ಭಾರತ 7 ಬಾರಿ, ಆಸ್ಟ್ರೇಲಿಯ 5 ಹಾಗು ಒಮ್ಮೆ (2003) ಸರಣಿ ಡ್ರಾ ನಲ್ಲಿ ಅಂತ್ಯ ಕಂಡಿದೆ. ಅಲ್ಲದೆ ಅತಿ ಹೆಚ್ಚು ರನ್ಗಳು (ಸಚಿನ್ ತೆಂಡೂಲ್ಕರ್) ಹಾಗು ಅತಿ ಹೆಚ್ಚಿನ ವಿಕೆಟ್ ಗಳ (ಅನಿಲ್ ಕುಂಬ್ಳೆ) ದಾಖಲೆಯೂ ಭಾರತೀಯರ ಹೆಸರಿನಲ್ಲಿಯೇ ಇದೆ ಎಂಬುದು ಹೆಮ್ಮೆಯ ವಿಷಯ.

2000-01ರ ಆಸ್ಟ್ರೇಲಿಯದ ಭಾರತ ಪ್ರವಾಸ ಹಾಗು 2003-04ರ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ. ಈ ಎರಡೂ ಸರಣಿಗಲ್ಲಿದ್ದ ರೋಚಕತೆ, ಹಠ ಹಾಗು ಉಭಯ ತಂಡಗಳ ಸಾಬೀತುಪಡಿಸುವಿಕೆಯ ಹಪಾಹಪಿ ಬಹುಷಃ ಬೇರ್ಯಾವ ಸರಣಿಯಲ್ಲಿಯೂ ಕಾಣಸಿಗದು. ಕಾರಣ ವಿಶ್ವವನ್ನೇ ಬಗ್ಗುಬಡಿದು ಮೆರೆಯುತ್ತಿದ್ದ ಆಸ್ಟ್ರೇಲಿಯಕ್ಕೆ ಕಬ್ಬಿಣದ ಕಡಲೆಯಾಗಿ ಅಂದು ಭಾರತ ತಂಡ ಮಾರ್ಪಾಡಾಗುತ್ತಿತ್ತು. ಹೋದಲೆಲ್ಲಾ ವಿಜಯಪತಾಕೆಯನ್ನು ಹಾರಿಸಿಯೇ ಬರುತ್ತಿದ್ದ ಧೈತ್ಯ ಕಾಂಗರು ಬಳಗದ ಎದುರು ಸಟೆದು ನಿಲ್ಲಬಲ್ಲ ತಂಡವೊಂದಿತ್ತೆಂದರೆ ಅದು ಭಾರತ ತಂಡ. ಈ ಎರಡೂ ಸರಣಿಗಳು ಟೆಸ್ಟ್ ಕ್ರಿಕೆಟ್ನಲ್ಲಿ ಕುಸಿಯುತ್ತಿದ್ದ ಭಾರತದ ವರ್ಚಸ್ಸನ್ನು ಮೇಲೆತ್ತಿ ನಿಲ್ಲಿಸಿದವಲ್ಲದೆ ವಿದೇಶಿ ನೆಲದಲ್ಲಿ ತಂಡವನ್ನು ಪಳಗಿಸುವ ಕಲೆಯನ್ನು ಪ್ರತಿಯೊಬ್ಬ ಆಟಗಾರನಲ್ಲೂ ಮೂಡಿಸಿದವು. ಇದರ ಸಂಪೂರ್ಣ ಕೀರ್ತಿ ಅಷ್ಟೂ ತಂಡಕ್ಕೂ ಸಲ್ಲಬೇಕಾದರೂ ಅದರ ಬಹುಪಾಲು ಕ್ರೆಡಿಟ್ ಡೇರಿಂಗ್ ಅಂಡ್ ಡ್ಯಾಶಿಂಗ್ ನಾಯಕನಾದ ಸೌರವ್ ಗಂಗೂಲಿಗೆ ಸೇರಬೇಕು ಎಂಬುದು ಹಲವರ ಅನಿಸಿಕೆ. ನಾಯಕನ ಹೆಚ್ಚಿನ ಹೊರೆಯ ನಂತರ 2000 ವರ್ಷದಿಂದಾಚೆಯ ಮ್ಯಾಚುಗಳಲ್ಲಿ ತನ್ನ ಬ್ಯಾಟಿಂಗ್ ನ ಹೊಳಪನ್ನು ಆತ ಕೊಂಚ ಕಳೆದುಕೊಂಡನಾದರೂ ನಾಯಕತ್ವದ ನೆಡೆಯಲ್ಲಿ ಮಾತ್ರ ನಿಸ್ಸಿಮನಾಗಿದ್ದ. ದೇಶೀ ನೆಲದಲ್ಲಿ ಭಾರತ ಅದೇನೇ ಸಾಧನೆ ಮಾಡಿದ್ದರೂ ವಿದೇಶಿ ನೆಲದಲ್ಲಿ ಅದರ ಸಾಧನೆ ಸೊನ್ನೆ ಎನ್ನುವ ಬಿಳಿಯರ ಮುಖ ಕೆಂಪಾಗುವಂತೆ ಅದೇ ನೆಲದಲ್ಲಿ ಅವರನ್ನೇ ಚಚ್ಚಿಕೆಡವಿ NatWest ಏಕದಿನ ಸರಣಿಯನ್ನು ವಶಪಡಿಸಿಕೊಂಡ ಗಂಗೂಲಿ ವಿಶ್ವವನ್ನೇ ಗೆಲ್ಲಲು ಬೇಕಾದ ತಂಡವನ್ನು ಕಟ್ಟಿದ್ದ. ಸೌತ್ ಆಫ್ರಿಕಾದ ನೆಲದಲ್ಲಿ 2003 ರ ವಿಶ್ವಕಪ್ ನ ಫೈನಲ್ ವರೆಗೂ ಬಂದು ಸರಣಿಯ ಪೂರ್ತಿ ಆಸ್ಟ್ರೇಲಿಯ ಒಂದನ್ನು ಹೊರತುಪಡಿಸಿ ಬೇರ್ಯಾವ ತಂಡಕ್ಕೂ ಮಣಿಯದ ಭಾರತ ತಂಡದ ಆ ಸಾಧನೆ ವಿಶ್ವದ ಹುಬ್ಬೇರುವಂತೆ ಮಾಡಿತ್ತು. ಇಂದಿಗೂ ವಿದೇಶಿ ನೆಲದಲ್ಲಿ ಭಾರತದ ಸಾಧನೆಯ ವಿಷಯ ಬಂದಾಗ ಗಂಗೂಲಿ ಹಾಗು ಆತನ ತಂಡದ ಸಾಹಸಗಳೇ ಮೊದಲ ಸಾಲಿನಲ್ಲಿ ಬರುತ್ತವೆ.

2001ರ ಬಾರ್ಡರ್-ಗವಾಸ್ಕರ್ ಸರಣಿ ಭಾರತದ ಪಾಲಿಗೆ ಗೆಲುವಿನ ನಗೆಯನ್ನು ತಂದಿತಾದರೂ ಆಸ್ಟೇಲಿಯ ನೆಲದ ಫಾಸ್ಟ್ ಪಿಚ್ ಗಳಲ್ಲಿ ತಮ್ಮ ತಾಕತ್ತನ್ನು ಒರೆಹಚ್ಚಿಕೊಳ್ಳುವ ಕೆಲಸ 2003ರ ತಂಡದ ಅಷ್ಟೂ ಆಟಗಾರರಿಗಿದ್ದಿತ್ತು. ಅಲ್ಲದೆ ಅದು ಆಸ್ಟ್ರೇಲಿಯಾದ ಲೆಜೆಂಡರಿ ಆಟಗಾರ ಸ್ಟೀವ್ ವಾ ನ ಕೊನೆಯ ಸರಣಿಯೂ ಆದದ್ದರಿಂದ ಕಾಂಗರೂ ಬಳಗ ಆತನ ಬೀಳ್ಕೊಡಿಗೆಯ ಕಾಣಿಕೆಯಾಗಿ ಶತಾಯ ಗತಾಯ ಟ್ರೋಫಿಯನ್ನು ಗೆದ್ದು ಕೊಡುವ ತವಕದಲ್ಲಿದ್ದಿತು. ಆಸ್ಟ್ರೇಲಿಯ ನೆಲದಲ್ಲಿ ಭಾರತದ ಗೆಲುವಿನ ಸಾಧನೆ ಕೇವಲ 11%. ಅರ್ಥಾತ್ 70 ವರ್ಷಗಳ ಉಭಯತಂಡಗಳ ಮುಖಾಮುಖಿಯಲ್ಲಿ ಭಾರತ ಆಸ್ಟ್ರೇಲಿಯವನ್ನು ಅದರದ್ದೇ ನೆಲದಲ್ಲಿ ಸೋಲುಣಿಸಿರುವುದು ಕೇವಲ 5 ಟೆಸ್ಟ್ ಗಳಲಷ್ಟೇ! 2003-04 ರ ಸರಣಿಯ ಹೊತ್ತಿಗೆ ಆ ಸಂಖ್ಯೆ ಕೇವಲ 3 ಮಾತ್ರವಾಗಿದ್ದಿತ್ತು! ಆದ ಕಾರಣ ಸರಣಿ ಭಾರತ ತಂಡಕ್ಕೆ ಆತ್ಮಗೌರವದ ಪ್ರತೀಕವಾಗಿತ್ತಷ್ಟೆ ಅಲ್ಲದೆ ಗೆದ್ದೇ ಬೀಗಬೇಕೆಂದು ಹಠಕ್ಕೆ ಬಿದ್ದಿದ್ದ ಆಸೀಸ್ ವೇಗಿಗಳ ಬಲಿಷ್ಠ ಆಕ್ರಮಣವ ದ ಜೊತೆಗೆ ಸ್ಲೆಡ್ಗಿಂಗ್ ಚಾಳಿಯನ್ನೂ ದಿಟವಾಗಿ ಎದುರಿಸುವುದಾಗಿದ್ದಿತು. ಗಾಯದ ಸಮಸ್ಯೆಯಿಂದ ಮೆಗ್ರಾಥ್ ಹಾಗು ಶೆರ್ನ್ ವಾರ್ನ್ ಸರಣಿಯಿಂದ ಹೊರಗುಳಿದದ್ದೂ ಸಹ ಭಾರತಕ್ಕಂದು ಪ್ಲಸ್ ಪಾಯಿಂಟ್.


ಮೊದಲ ಪಂದ್ಯ : ದ ಗಬ್ಬಾ ಕ್ರಿಕೆಟ್ ಮೈದಾನ, ಬ್ರಿಸ್ಬೈನ್. (4-8 Dec 2003)

ಮೋಡಗಳ ಕರಿಛಾಯೆಯಲ್ಲೇ ಶುರುವಾದ ಆಟ ಮೊದಲು ಆಸ್ಟ್ರೇಲಿಯಾದ ಬಿಗಿ ಹಿಡಿತದಲ್ಲಿಯೇ ಸಾಗಿತು. ನಂತರ 323 ರನ್ ಗಳ ಆಸೀಸ್ ನ ಮೊತ್ತವನ್ನು ಬೆನ್ನಟ್ಟಿದ ಭಾರತ 63 ರನ್ಗಳಿಗೆ 3 ವಿಕೆಟ್ ಗಳನ್ನು ಕಳೆದುಕೊಂಡು ಪರದಾಡತೊಡಗಿತ್ತು. ಇನ್ನೊಂದೆರೆಡು ವಿಕೆಟ್ಗಳು ಉರುಳಿದರೆ ಇಡೀ ಸರಣಿಗೆ ಬೇಕಿದ್ದ ಆರಂಭಿಕ ಆತ್ಮಸೈರ್ಯವೂ ಉರುಳುತ್ತಿತ್ತು. ಇನ್ನಿಂಗ್ಸ್ ಲೀಡ್ ಕೊಡಲಾಗದಿದ್ದರೂ ಟಪಟಪನೆ ಉದುರುತ್ತಿದ್ದ ವಿಕೆಟ್ಗಳನ್ನಾದರೂ ಕೂಡಲೇ ತಡೆದು ನಿಲಿಸಬೇಕಿತ್ತು. ಆಗ ಜೊತೆಯಾದ ಗಂಗೂಲಿ ಹಾಗು ಲಕ್ಷ್ಮಣ್ ಜೋಡಿ ಶೀತಬರೀತ ಆ ನೆಲದಲ್ಲೂ ಕಾಂಗರೂಗಳ ಬೆವರನ್ನು ಇಳಿಸಿದರು. ಆ ಇನ್ನಿಂಗ್ಸ್ ನ ಅದ್ಭುತ ಹೈಲೈಟ್ ಸೌರವ್ ಗಂಗೂಲಿಯ 196 ಎಸೆತಗಳ 144 ರನ್ಗಳು. ತಮ್ಮ ಬೌನ್ಸರ್ ಹಾಗು ಯಾರ್ಕ್ ರ್ ಗಳಿಂದ ವಿಸಿಟಿಂಗ್ ತಂಡದ ನಾಯಕನನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುವ ಆಸ್ಟ್ರೇಲಿಯನ್ನರ ತಂತ್ರಗಾರಿಕೆಯನ್ನು ಬುಡಮೇಲು ಮಾಡಿದ ಗಂಗೂಲಿ ಆಸೀಸ್ ನೆಲದಲ್ಲಿ ಶತಕವನ್ನು ಸಿಡಿಸಿದ ಭಾರತದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಾನೆ. ಜೊತೆಗೆ ಆಸ್ಟ್ರೇಲಿಯನ್ನರೆಂದರೆ ರನ್ಗಳ ಸುರಿಮಳೆಗೈಯುವ ಲಕ್ಷ್ಮಣ್ 75 ರನ್ ಗಳಿಸಿ ಭಾರತದ ಮೊತ್ತವನ್ನು 400 ರ ಗಡಿಯನ್ನು ದಾಟಿಸಲು ನಿರ್ಣಾಯಕ ಪಾತ್ರವನ್ನು ವಹಿಸಿದ. ಅಷ್ಟರಲ್ಲಾಗಲೇ ಮಳೆಯ ಕಾರಣ ಪಂದ್ಯದ ನಾಲ್ಕು ದಿನಗಳು ಮುಗಿದ್ದಿದ್ದವು. ಯಾವ ಆಟವನ್ನೂ ಆಡಿದರೂ ಸಹ ಪಂದ್ಯ ಡ್ರಾನಲ್ಲಿ ಅಂತ್ಯ ಕಾಣುವುದರಲ್ಲಿ ಸಂಶಯವೇ ಇರಲಿಲ್ಲ. ಆದರೆ ಆಸೀಸ್ ನೆಲದಲ್ಲಿ ಭಾರತದ ಬ್ಯಾಟಿಂಗ್ ಹಾಗು ಬೌಲಿಂಗ್ ನ ಪರೀಕ್ಷೆಯ ಮೊದಲ ಪಂದ್ಯ ಅದಾಗಿದ್ದಿತು. ನಾಲ್ಕೈದು ಆಟಗಾರರನ್ನು ಬಿಟ್ಟರೆ ಉಳಿದೆಲ್ಲ ಚಿಗುರು ಮೀಸೆಯ ಆಟಗಾರರಿಗೆ ಅದು ಚೊಚ್ಚಲ ಆಸೀಸ್ ಪ್ರವಾಸ ಬೇರೆ. ಪಂದ್ಯದಲ್ಲಿ ಭಾರತದ ದಿಟ್ಟ ಉತ್ತರ ಸರಣಿ ರೋಚಕವಾಗುವ ಎಲ್ಲ ಮುನ್ಸೂಚನೆಯನ್ನೂ ಪ್ರೇಕ್ಷಕರಿಗೆ ನೀಡಿದವು. ಅಂದುಕೊಂಡಂತೆಯೇ ಮ್ಯಾಚ್ ಡ್ರಾ ನಲ್ಲಿ ಅಂತ್ಯಕಂಡಿತು.


ಎರಡನೇ ಪಂದ್ಯ : ಓವಲ್ ಕ್ರಿಕೆಟ್ ಮೈದಾನ, ಅಡಿಲೇಡ್. ( 12-16 Dec 2003)

ಭಾರತದ ಟೆಸ್ಟ್ ಇತಿಹಾಸದ ಮತ್ತೊಂದು ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಗುವುದರಲಿತ್ತು ಓವಲ್. ಹೆಚ್ಚುಕಡಿಮೆ 2001ರ ಕೋಲ್ಕತ್ತಾ ಟೆಸ್ಟ್ ಪಂದ್ಯವೇ ಮರುಕಳಿಸುವಂತಹ ಪ್ರದರ್ಶನ ಅಂದು ಆಸೀಸ್ ನೆಲದಲ್ಲಿ ಕಂಡಿತು. ಅಂದಿನಂತೆಯೇ ಇಂದೂ ಸಹ ಲಕ್ಷ್ಮಣ್ ಹಾಗು ದ್ರಾವಿಡ್ ಮುಳುಗುತಿದ್ದ ತಂಡವನ್ನು ಗೆಲುವಿನ ದಡ ತಲುಪಿಸಿದರು. ಹಾಗು ಅದು ಇರ್ಫಾನ್ ಪಠಾಣ್ ಎಂಬ ಸ್ವಿಂಗ್ ಮಾಂತ್ರಿಕನ ಡೆಬ್ಯು ಮ್ಯಾಚ್ ಕೂಡ. ಬೌಲರ್ಗಳಿಗೆ ಅಷ್ಟೇನೂ ನೆರವಾಗದ ಫ್ಲಾಟ್ ಪಿಚ್ ನಲ್ಲಿ ಪಠಾಣ್ ತನ್ನ ಚೊಚ್ಚಲ ವಿಕೆಟ್ ರೂಪದಲ್ಲಿ ಹಡೆನ್ ನನ್ನು ಹೊರಗಟ್ಟಿದ ಆ ಕ್ಷಣವಂತೂ ವಿಶ್ವದ ಯಾವುದೇ ಮೂಲೆಗೊದರೂ ಸಾವಿರ ಸಾವಿರ ಸಂಖ್ಯೆಯಲ್ಲಿ ಜಮಾವಣೆಗೊಂಡು ತಂಡವನ್ನು ಹುರಿದುಂಬಿಸುವ ಭಾರತೀಯರ ಸಂತಸ ಮುಗಿಲು ಮುಟ್ಟುವಂತೆ ಮಾಡಿತು. ಆದರೆ ಆ ಸಂತಸ ಬಹಳಷ್ಟು ಹೊತ್ತು ಉಳಿಯಲಿಲ್ಲ. ಆ ವರ್ಷದ ತನ್ನ ಎರಡನೇ ಡಬಲ್ ಸೆಂಚೂರಿಯನ್ನು ಪೂರ್ತಿಗೊಳಿಸಲು ಆಡಲಿಳಿದ್ದಿದ್ದ ರಿಕ್ಕಿ ಪಾಂಟಿಂಗ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿ ಭಾರತದ ಬೌಲರ್ಗಳ ಗಟ್ಟಿ ತೋಳುಗಳನ್ನು ಸೋಲಿಸಿದ. ಆತ ಗಳಿಸಿದ ಸ್ಕೋರ್ 242 ರನ್ನುಗಳು. ತಂಡದ ಮೊತ್ತ 556! ನಂತರ ಇನ್ನಿಂಗ್ಸ್ ಆರಂಭಿಸಿದ ಭಾರತದ ಪಾಲಿಗೆ ಉತ್ತಮ ಆರಂಭವವೇ ದೊರೆಯಿತು. ಏಕದಿನ ಪಂದ್ಯಗಳಂತೆ ಬ್ಯಾಟ್ ಬೀಸಿದ ಸೆಹ್ವಾಗ್ ತನ್ನ ಹಾಫ್ ಸೆಂಚೂರಿ ತಲುಪುವ ಕ್ಷಣಮಾತ್ರದಲ್ಲಿ ಬಿಚೆಲ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದ. ಅತ್ತ ಕಡೆಯಿಂದ ಬಂದ ಗಂಗೂಲಿ ಹಾಗು ಸಚಿನ್ ತಮ್ಮ ಸ್ಕೋರು ಎರಡಂಕಿ ತಲುಪುವ ಮೊದಲೇ ಅದೇ ಹಾದಿಯನ್ನು ಹಿಡಿದರು. ಆಗ ತಂಡದ ಮೊತ್ತ 84/4. ಆಸ್ಟ್ರೇಲಿಯನ್ನರ ರನ್ ಗಡಿ ದಾಟಿ ಮುನ್ನುಗ್ಗಲು ಇನ್ನು ೪೭೨ ರನ್ ಗಳು ಬೇಕಿದ್ದಿತು. ಭಾರತದ ಬಳಿ ಉಳಿದ ವಿಕೆಟ್ಗಳು ಕೇವಲ ಆರೇ ಆರು. ಅಷ್ಟರಲ್ಲಾಗಲೇ ಫಾಲೋ ಆನ್ ತಪ್ಪಿಸಿಕೊಳ್ಳುವ, ಟೆಸ್ಟ್ ಡ್ರಾ ಮಾಡಿಕೊಳ್ಳುವ ಮಾತುಗಳು ಕಾಮೆಂಟರಿ ಕ್ಯಾಬಿನ್ ಇಂದ ಬರತೊಡಗಿದವು. ಸ್ಕ್ರೀಸ್ ನಲ್ಲಿ ಇದ್ದವರು ಭಾರತ ತಂಡದ ರಾಮಲಕ್ಷ್ಮಣ ಜೋಡಿಯಂದೆನ್ನಬಹುದಾದ ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ಹಾಗು ದ ವಾಲ್ ದ್ರಾವಿಡ್. ಜೋಡಿ ಆಸ್ಟ್ರೇಲಿಯ ನೆಲದಲ್ಲಿ ಮಗದೊಂದು ಇತಿಹಾಸ ಬರೆಯಲು ಅಣಿಯಾಗತೊಡಗಿತು. ಭಾರತದ ನಿಜವಾದ ಟೆಸ್ಟ್ ಶುರುವಾದದ್ದು ಆಗೆನ್ನಬಹುದು. ಬೆಣ್ಣೆಯ ಮೇಲಿನ ಕಸವನ್ನು ತೆಗೆದಂತೆ ನಿರಾಯಾಸವಾಗಿ ಬೌಂಡರಿಗಳಿಗೆ ಚೆಂಡನ್ನು ಅಟ್ಟುತ್ತಾ ಮೋಹಕ ಇನ್ನಿಂಗ್ಸ್ ಕಟ್ಟಿದ್ದ ಜೋಡಿ ಬರೋಬ್ಬರಿ 303 ರನ್ ಗಳ ಸ್ಮರಣೀಯ ಜೊತೆಯಾಟವನ್ನು ನೀಡಿತು. ದ್ರಾವಿಡ್ ಟೆಸ್ಟ್ ಕ್ರಿಕೆಟ್ನ ದಿ ಬೆಸ್ಟ್ 233 ರನ್ಗಳನ್ನು ಸಿಡಿಸಿದರೆ, VVS ತಮ್ಮ ಸ್ಪೆಷಲ್ 148 ರನ್ಗಳನ್ನು ಕಲೆಹಾಕಿ ವಿಕೆಟನ್ನು ಒಪ್ಪಿಸಿದರು. ಈ ಜೊತೆಯಾಟ ಇಂದಿಗೂ ಟೆಸ್ಟ್ ಇತಿಹಾಸದಲ್ಲಿ ಗ್ರೇಟೆಸ್ಟ್ ಜೊತೆಯಾಟಗಳ ಸಾಲಿನಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತದೆ. ಪಿಚ್ ನಿಧಾನವಾಗಿ ಬೌಲಿಂಗ್ಗೆ ಪೂರಕವಾಗತೊಡದಿದ್ದರೆ ಆತ್ತ ಕಡೆ ಭಾರತದ ಸ್ಕೋರು 500 ರ ಗಡಿಯನ್ನು ದಾಟಿತ್ತು. 33 ರನ್ ಗಳ ಲೀಡ್ ನೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಆಸೀಸನ್ನು ತನ್ನ ಮಾರಕ 6 ವಿಕೆಟ್ಗಳ ದಾಳಿಯಿಂದ 196 ರನ್ಗಳಿಗೆ ಹೆಡೆಮುರಿಕಟ್ಟಿದ ಅಗರ್ಕರ್ ಆ ದಿನದ ಹೀರೊ ನಂಬರ್ ಒನ್. ನಂತರ ದೊರೆತ 229 ರನ್ಗಳ ಮೊತ್ತ ದ ಗುರಿಯನ್ನು ಭಾರತ ಆಯಾಸಪಡುತ್ತಲೇ ಆರು ವಿಕೆಟ್ ಗಳನ್ನು ಕಳೆದುಕೊಂಡು ತಲುಪಿತು. ಗೆಲುವು ಖಚಿತವಾಗುವವರೆಗೂ ಆಗಲೂ ವಿಕೆಟ್ನ ಇನ್ನೊಂದೆಡೆ ಗಟ್ಟಿಗಲ್ಲಿನಂತೆ ನಿಂತ ವ್ಯಕ್ತಿ ಮತ್ತದೇ ರಾಹುಲ್ ದ್ರಾವಿಡ್. ಟೆಸ್ಟ್ ನ ಗೆಲುವು ಆಸೀಸ್ ನೆಲದಲ್ಲಿ ಭಾರತದ 22 ವರ್ಷಗಳ ಗೆಲುವಿನ ಬರವನ್ನು ನೀಗಿಸಿತಲ್ಲದೆ ಸರಣಿ ಗೆಲುವನ್ನೂ ಸಾಧಿಸಲೇಬೇಕೆಂಬ ಹುರುಪಿನಲ್ಲಿ ನಂತರದ ಟೆಸ್ಟ್ ಅನ್ನು ಎದುರುನೋಡಿತು.


ಮೂರನೇ ಪಂದ್ಯ : ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (26-30 Dec 2003)

ಟಾಸ್ ಗೆದ್ದು ಬ್ಯಾಟಿಂಗನ್ನು ಆಯ್ದುಕೊಂಡ ಗಂಗೂಲಿಯ ನಿರ್ಧಾರವನ್ನು ಅಕ್ಷರ ಸಹ ಸದುಪಯೋಗ ಮಾಡಿಕೊಂಡ ಚೋಪ್ರಾ ಹಾಗು ಸೆಹ್ವಾಗ್ ಜೋಡಿ ಕಳೆದ ಹತ್ತು ವರ್ಷಗಳಲ್ಲೇ ಮೊದಲ ಬಾರಿಗೆ ಆಸೀಸ್ ನೆಲದಲ್ಲಿ ಭಾರತೀಯ ಓಪನರ್ಗಳು ಗಳಿಸದ ಅತ್ಯಧಿಕ ಪಾರ್ಟ್ನರ್ ಶಿಪನ್ನು ಕಲೆಹಾಕಿದರು. 141 ರನ್ ಗಳ ಮೆಗಾ ಪಾರ್ಟರ್ಶಿಪ್ನ ನಂತರ ದ್ರಾವಿಡ್ನ ಜೊತೆಗೂಡಿದ ಸೆಹ್ವಾಗ್ ಬಿರುಸಿನ ಆಟವಾಡಿದನು. ಚೆಂಡನ್ನು ಬೌಂಡರಿ ಗೆರೆಗೆ ಅಟ್ಟುವ ಮೂಲಕ ಆಸ್ಟ್ರೇಲಿಯನ್ನರ ವಿರುದ್ಧ ತನ್ನ ಚೊಚ್ಚಲ ಸೆಂಚೂರಿಯನ್ನು ಪೂರೈಸಿದ. ಮುಂದಿನ್ನೇನು, ಸ್ಪಿನ್ ಹಾಗು ಪಾಸ್ಟ್ ದಾಳಿಗಳೆರಡೂ ಕಕ್ಕಾಬಿಕ್ಕಿಯಾಗುವಂತೆ ಬ್ಯಾಟ್ ಬೀಸಿ ತಂಡದ ಮೊತ್ತ 278/1 ತಲುಪುವಂತೆ ಮಾಡಿದ. ಆದರೆ ಅಲ್ಲಿಂದ ಮುಂದೆ ಒಂದರಿಂದೊಂದು ವಿಕೆಟ್ಗಳು ಉರುಳತೊಡಗಿದವು. ಸೆಹ್ವಾಗ್ 195 ರಲ್ಲಿ ಆಡುತ್ತಿದ್ದಾಗ ಬೌಂಡರಿಯ ಮೂಲಕ ತನ್ನ ಮೊದಲ ದ್ವಿಶತಕವನ್ನು ಪೂರೈಸುವ ಜೋಶಿನಲ್ಲಿ ಕ್ಯಾಟಿಚ್ ನ ಕೈಗೆ ಕ್ಯಾಚಿತ್ತು ಪೆವಿಲಿಯನ್ ನೆಡೆಗೆ ಹೆಜ್ಜೆ ಹಾಕುತ್ತಿದ್ದರೆ ಅಲ್ಲಿಯವರೆಗೂ ಕುಣಿದು ಕುಪ್ಪಳಿಸುತ್ತಿದ್ದ ಭಾರತೀಯ ಪ್ರೇಕ್ಷಕರು ಘಾಡ ಮೌನಕ್ಕೆ ಜಾರಿದರು. ಅಲ್ಲಿಗೆ ಭಾರತದ ಮೊದಲ ಇನ್ನಿಂಗ್ಸ್ ಕ್ಷೀಣಿಸಿತೆಂದೇ ಹೇಳಬೇಕು. ಕಾರಣ 278 ರನ್ಗಳಿಗೆ ಒಂದು ವಿಕೆಟ್ಗಳನ್ನು ಕಳೆದುಕೊಂಡಿದ್ದ ಭಾರತ ನಂತರದ 88 ರನ್ ಗಳಿಗೆ ಸರ್ವಪತನವನ್ನು ಕಂಡಿತು! ಎಲ್ಲೋ ಒಂದೆಡೆ ಈ ಪತನ ಸರಣಿಯ ಫಲಿತಾಂಶ ಭಾರತದ ಪರ ವಾಲಾಡಿರಲು ಪ್ರಮುಖ ಪರಿಣಾಮ ಬೀರಿತೆಂದೇ ಹೇಳಬಹುದು. ಸೊಗಸಾದ ಆರಂಭವನ್ನು ಪಡೆದು ಮೊದಲ ದಿನದ ಮೇಲುಗೈ ಸಾಧಿಸಿದ ಭಾರತ ಕೆಲವೇ ತಾಸುಗಳ ಹಾದಿಯಲ್ಲಿ ಮುಗ್ಗರಿಸಿತು. ಅಲ್ಲಿಂದ ಮುಂದೆ ಆಸೀಸ್ ಆಟಗಾರ ಘರ್ಜನೆ ಆರಂಭಗೊಂಡಿತು. ವೇಗವಾಗಿ ಬ್ಯಾಟ್ ಬೀಸಿದ ಹೈಡೆನ್ 136 ರನ್ ಗಳನ್ನು ಮಾಡಿದರೆ ಮಗದೊಂದು ದ್ವಿಶತಕವನ್ನು ಭಾರಿಸಿ ದಾಖಲೆ ಸೃಷ್ಟಿಸಿದ ಪಾಂಟಿಂಗ್ 257 ರನ್ಗಳ ಅದ್ಭುತ ಆಟವನ್ನು ಆಡಿದ. ಮೊದಲ ಇನ್ನಿಂಗ್ಸ್ ನ ಬಿರುಸುತನ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ಆಟದಲ್ಲಿ ಕಾಣಲಿಲ್ಲ. 286 ರನ್ ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 94 ರನ್ ಗಳ ಸಾಧಾರಣ ಟಾರ್ಗೆಟ್ ಅನ್ನು ಆಸೀಸ್ ಬಳಗಕ್ಕೆ ನೀಡಿ ಅದು ಸೋಲಿನ ಕಹಿಯನ್ನನುಭವಿಸಿತು. ಆದರೆ ಟೆಸ್ಟ್ ಸೋತರೂ ಭಾರತದ ಮೊದಲ ಇನ್ನಿಂಗ್ಸ್ ಅದರಲ್ಲೂ ಆ ಮೊದಲ ದಿನದಾಟ ನಮ್ಮವರ ಹುಮ್ಮಸ್ಸನ್ನು ಹೆಚ್ಚಿಸಿತು. ಅದರಲ್ಲೂ ಸೆಹ್ವಾಗ್ ಎಂಬ ರೋರಿಂಗ್ ಓಪನರ್ ನ ಭಯ ಅಲ್ಲಿಂದ ಮುಂದೆ ಆಸೀಸ್ ಬೌಲರ್ಗಳಿಗೆ ಕಾಡತೊಡಗಿತು.


ನಾಲ್ಕನೇ ಹಾಗು ಅಂತಿಮ ಪಂದ್ಯ : ಸಿಡ್ನಿ ಕ್ರಿಕೆಟ್ ಗ್ರೌಂಡ್ ( 2-6 Jan 2004 )

ಹೊಸವರ್ಷವನ್ನು ಆಸ್ಟ್ರೇಲಿಯಾದ ಅಂಗಳದಲ್ಲಿ ಆಚರಿಸಿಕೊಂಡ ಭಾರತೀಯ ಪಡೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಹಣಾಹಣಿಗೆ ಸಜ್ಜಾಗಿದ್ದಿತು. ಸರಣಿ 1-1 ರಲ್ಲಿ ಸಮಭಲಗೊಂಡಿದ್ದರಿಂದ ಎರಡೂ ತಂಡಗಳಿಗೂ ಅದು ನಿರ್ಣಾಯಕ ಟೆಸ್ಟ್. ಆಸ್ಟ್ರೇಲಿಯನ್ನರಿಗೆ ತಮ್ಮ ಹೀರೋ ಸ್ಟೀವ್ ವಾ ನ ಅಂತಿಮ ಸರಣಿಯ ಬಿಳ್ಕೊಡುಗೆಯ ಕಾಣಿಕೆಯಾಗಿ ಪ್ರಶಸ್ತಿಯನ್ನು ಗೆದ್ದುಕೊಡಬೇಕೆಂಬ ಹಠವಿದ್ದರೆ ಭಾರತೀಯರಿಗೆ ತಮ್ಮ ಚೊಚ್ಚಲ ಟೆಸ್ಟ್ ಸರಣಿಯನ್ನು ಆಸೀಸ್ ಅಂಗಳದಲ್ಲಿ ಗೆದ್ದು ಇತಿಹಾಸ ಸೃಷ್ಟಿಸುವ ತವಕ. ವಾ ನ ಕೊನೆಯ ಪಂದ್ಯಕ್ಕಾಗಿ ಭರ್ಜರಿ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಹೋಂ ಕ್ರೌಡ್ ನ ಭರಪೂರ ಸಪೋರ್ಟ್ ಆಸ್ಟ್ರೇಲಿಯನ್ನರಿಗೆ. ಇವೆಲ್ಲವೂ ಭಾರತಕ್ಕೆ ಪ್ರತಿಕೂಲ ವಾತಾವರಣೆವನ್ನೇ ಸೃಷ್ಟಿಸಿದ್ದವು. ಆದರೆ ಪ್ರತೀ ಪಂದ್ಯದಲ್ಲೂ ಒಂದಿಲ್ಲೊಬ್ಬ ಭಾರತೀಯ ಆಟಗಾರರು ಮಿಂಚುತಿದ್ದರೂ ದಿ ಗ್ರೇಟ್ ಸಚಿನ್ ನ ಪಾಲಿಗೆ ಸರಣಿ ಏಕೋ ರನ್ ಗಳಿಲ್ಲದ ಮರುಭೂಮಿಯಾಗಿದ್ದಿತು. ಸರಣಿಯ ಆರು ಇನ್ನಿಂಗ್ಸ್ ನಲ್ಲಿ ಆತ ಗಳಿಸಿದ್ದು ಕೇವಲ 83 ರನ್ ಗಳು. ಜೊತೆಗೆ ಎರೆಡೆರಡು ಡಕ್ ! ಆಸ್ಟ್ರೇಲಿಯಾದ ಲೋವರ್ ಆರ್ಡರ್ ಬ್ಯಾಟ್ಸ್ಮನ್ಗಳಿಗಿಂತಲೂ ಕನಿಷ್ಠ ರನ್ ಗಳನ್ನು ಗಳಿಸಿದ್ದ ಸಚಿನ್ಗೆ ತನ್ನ ಅಗಾಧತೆಯನ್ನು ತೋರಿಸಿಕೊಳ್ಳಲು ಉಳಿದದ್ದು ಕೇವಲ ಸಿಡ್ನಿ ಟೆಸ್ಟ್ ಮಾತ್ರ. ವಿಶ್ವದಾದ್ಯಂತ ಬೌಲರ್ಗಳ ನಿದ್ದೆ ಕೆಡಿಸುತ್ತಿದ್ದ ಮಾಸ್ಟರ್ ಬ್ಲಾಸ್ಟರ್ ಆಸ್ಟ್ರೇಲಿಯಾದ ನೆಲದಲ್ಲಿ ಮಿಂಚದೆ ಬರುವುದುಂಟೇ? ಬಹುಷಃ ಆತನ ಆಷ್ಟೂ ಆಟವೂ ಈ ಒಂದು ಟೆಸ್ಟ್ ಗಾಗಿಯೇ ಮೀಸಲಿತ್ತೇನೋ. ಕಾರಣ, ಟೆಸ್ಟ್ ಮುಗಿಯುವುದರೊಳಗೆ ಆತನ ಜೋಳಿಗೆಯಲ್ಲಿ ಒಂದು ಡಬಲ್ ಸೆಂಚೂರಿ ಹಾಗು ಒಂದು ಫಿಫ್ಟಿಯೊಟ್ಟಿಗೆ ಇದ್ದ ಒಟ್ಟು ರನ್ ಗಳು ಮುನ್ನೂರರ ಗಡಿಯನ್ನು ದಾಟಿದ್ದವು!

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಓಪನರ್ ಗಳು ಸ್ವಿಂಗ್ ಹಾಗು ಬೌನ್ಸರ್ ಗಳ ಹೊರತಾಗಿಯೂ ಮಗದೊಂದು ಉತ್ತಮ ಓಪನಿಂಗನ್ನು ನೀಡಿದರು. 194ಕ್ಕೆ ಮೂರು ವಿಕೆಟ್ ಗಳನ್ನು ಕಳೆದುಕೊಂಡಿದ್ದ ಭಾರತದ ನಾಲ್ಕನೇ ವಿಕೆಟ್ ಉರುಳಿದಾಗ ಪರದೆಯ ಮೇಲೆ ಮೂಡಿದ್ದ ಸ್ಕೋರ್ 547 ರನ್ಗಳು! ಸಚಿನ್ ಹಾಗು ಲಕ್ಷ್ಮಣ್ ಜೋಡಿ ಬರೋಬ್ಬರಿ 303 ರನ್ ಗಳ ಜೊತೆಯಾಟವನ್ನು ಅಲ್ಲಿ ನೀಡಿತು. ಲಕ್ಷ್ಮಣ್ 178 ರನ್ ಗಳನ್ನು ಮಾಡಿ ಔಟಾದರೆ ಸಚಿನ್ ಇನ್ನಿಂಗ್ಸ್ ನ ಕೊನೆಯವರೆಗೂ ತಂಡವನ್ನು ಮುನ್ನೆಡೆಸುತ್ತಾ 241 ರನ್ ಗಳನ್ನು ಗಳಿಸಿ ಅಜೇಯನಾಗಿ ಉಳಿದ. ಆಗ ತಂಡದ ಮೊತ್ತ 7 ವಿಕೆಟ್ ನಷ್ಟಕ್ಕೆ 705 ರನ್ ಗಳು. ಅದು ಇಂದಿಗೂ ಆಸ್ಟ್ರೇಲಿಯ ನೆಲದಲ್ಲಿ ಇನ್ನಿಂಗ್ಸ್ ಒಂದರ ಭಾರತದ ಅತ್ಯಧಿಕ ಮೊತ್ತ.

ಸರಣಿಗೂ ಮೊದಲು ಆಯ್ಕೆದಾರರ ಜೊತೆಗೆ ವಾಗ್ವಾದ ನೆಡೆಸಿದ್ದ ಗಂಗೂಲಿ ತಾನು ಬಯಸಿದ ಟೀಮನ್ನು ಕೊಡದಿದ್ದಲ್ಲಿ ತಾನೇ ತಂಡದಿಂದ ಹೊರಗುಳಿಯುವೆನು ಎಂದು ಹಠಹಿಡಿದಿದ್ದ. ಆ ಹಠದ ಹಿಂದಿದ್ದ ಏಕಮಾತ್ರ ಹೆಸರು ಅನಿಲ್ ಕುಂಬ್ಳೆ. ಆಸ್ಟ್ರೇಲಿಯಾದ ಫಾಸ್ಟ್ ಪಿಚ್ ಗಳಿಗೆ ಸ್ಪಿನ್ ಬೌಲಿಂಗ್ ಅಷ್ಟೇನೂ ಸೂಕ್ತವಲ್ಲವಾದರೂ ಒಂದೆರೆಡು ಸ್ಪಿನ್ನರ್ ಗಳು ತಂಡಕ್ಕೆ ಬೇಕಾಗಿಯೇ ಇದ್ದರು ಬಹಳಷ್ಟು ಯುವ ಸ್ಪಿನ್ನರ್ಗಳು ಅಂದು ಗಂಗೂಲಿಯ ಆಪ್ತವಲಯದಲ್ಲಿ ಕಾಣಿಸಿಕೊಂಡರೂ ನಾಯಕ ಮೊಗಮಾಡಿದ್ದು ಮಾತ್ರ ಜಂಬೊ ಕುಂಬ್ಳೆಯಡೆಗೆ. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ನ ಒಟ್ಟು ಎಂಟು ವಿಕೆಟ್ ಗಳನ್ನು ಕಬಳಿಸಿದ ಕುಂಬ್ಳೆ ತನ್ನ ಆಯ್ಕೆಯನ್ನು ದಾಖಲೆಯ ಅಂಕಿ ಅಂಶಗಳೊಟ್ಟಿಗೆ ಸಮರ್ಥಿಸಿಕೊಂಡ. ಅಲ್ಲದೆ ಇಡೀ ಸರಣಿಯಲ್ಲಿ ಅತಿಹೆಚ್ಚು ವಿಕೆಟ್ ಗಳನ್ನು(24) ಉರುಳಿಸಿ ಗಂಗೂಲಿಯ ನಂಬಿಕೆಯನ್ನು ಉಳಿಸಿಕೊಂಡ.

ಎರಡನೇ ಇನ್ನಿಂಗ್ಸ್ ನಲ್ಲಿ ಲ್ಯಾಂಗರ್ ಹಾಗು ಕ್ಯಾಟಿಚ್ನ ಸೆಂಚೂರಿಗಳ ಹೊರತಾಗಿಯೂ 474 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡ ಆಸ್ಟ್ರೇಲಿಯ ಭಾರತಕ್ಕೆ 231 ರನ್ಗಳ ಮುನ್ನಡೆಯನ್ನು ನೀಡಿತ್ತು. ನಂತರ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಭಾರತ ದ್ರಾವಿಡ್ ಹಾಗು ತೆಂಡೂಲ್ಕರ್ರ ಶತಕದ ಜೊತೆಯಾಟದ ನೆರವಿನಿಂದ ಹೆಚ್ಚು ಕಡಿಮೆ 5 ರನ್ ಗಳ ಸರಾಸರಿಯಲ್ಲಿ 211 ರನ್ ಗಳನ್ನು ಕಲೆಹಾಕಿತು. ನಾಲ್ಕನೇ ದಿನದಾಟದ ಇನ್ನು ನಾಲ್ಕು ಓವರ್ಗಳು ಬಾಕಿ ಇರುವಂತೆ ಡಿಕ್ಲೆರ್ ಮಾಡಿಕೊಂಡು ಆಸ್ಟ್ರೇಲಿಯನ್ನರಿಗೆ 443 ರನ್ ಗಳ ಬೃಹತ್ ಟಾರ್ಗೆಟನ್ನು ನೀಡಿತು. ತಮ್ಮ ತವರು ನೆಲದಲ್ಲೇ ಕೊನೆಯ ಟೆಸ್ಟ್ ನ ಕೊನೆಯ ಇನ್ನಿಂಗ್ಸ್ ನ ವರೆಗೂ ಆಸ್ಟ್ರೇಲಿಯನ್ನರನ್ನು ಈ ಮಟ್ಟಿಗೆ ಕಾಡಿರುವ ತಂಡ ಅಂದಿಗೆ ಬಹುಷಃ ಬೇರೊಂದಿರಲು ಸಾಧ್ಯವಿಲ್ಲ. ಅಲ್ಲಿದ್ದ ಆಟಗಾರರಿಂದಿಡಿದು ನೆರೆದಿದ್ದ ಪ್ರತಿಯೊಬ್ಬ ಪ್ರೇಕ್ಷಕನಿಗೂ ಭಾರತದ ಈ ಮಟ್ಟಿನ ಹೋರಾಟ ಸಹಜವಾಗಿಯೇ ದಿಗ್ಬ್ರಮೆಯನ್ನುಂಟುಮಾಡಿತ್ತು. ಭಾರತಕ್ಕು ಸರಣಿ ಗೆಲುವಿಗೂ ಇದ್ದ ಅಂತರ ಕೇವಲ ಹತ್ತು ವಿಕೆಟ್ಗಳಷ್ಟೇ. ಆದರೆ ಆಸ್ಟ್ರೇಲಿಯನ್ನರಿಗೆ ಅದು 443 ರನ್ಗಳ ದೂರದ ಪಯಣ. ಮೇಲಾಗಿ ಟೆಸ್ಟ್ ಇತಿಹಾಸದಲ್ಲೇ ಈವೊಂದು ಬೃಹತ್ ಮೊತ್ತವನ್ನು ನಾಲ್ಕನೇ ಇನ್ನಿಂಗ್ಸ್ ನಲ್ಲಿ ಗಳಿಸಿದ್ದ ಪುರಾವೆಗಳೇ ಇಲ್ಲ. ಆದರೇನಂತೆ. ಅಷ್ಟು ಸಲೀಸಾಗಿ ಸೋಲೊಪ್ಪಿಕೊಳ್ಳುವ ಜಾಯಮಾನ ಆಸ್ಟ್ರೇಲಿಯನ್ನರದಲ್ಲ. ಈಗಿನ ತಂಡ ಅದೇನೇ ಇರಬಹದು ಆದರೆ ಅಂದಿನ ಸ್ಟೀವ್ ವಾ ಬಳಗಗಂತೂ ಅದನ್ನು ಅರಗಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಮೇಲಾಗಿ ಅದು ಪ್ರತಿಷ್ಠೆಯ ಪ್ರೆಶ್ನೆ. ವಿಶ್ವಕಪ್ ಅನ್ನು ಗೆದ್ದ ತಂಡ ತನ್ನದೇ ನೆಲದಲ್ಲಿ ವಿದೇಶಿ ತಂಡದಿಂದ ಸರಣಿ ಸೋಲನ್ನು ಕಾಣುವುದು ಕಾಂಗರೂಗಳಿಗೆ ಕಲ್ಪನೆಗೂ ಮೀರಿದ ಸಂಗತಿಯಾಗಿದ್ದಿತು. ಆದ ಕಾರಣ ಏಕದಿನ ಪಂದ್ಯದಂತೆ ಬ್ಯಾಟ್ ಬೀಸಿದ ಆಸೀಸ್ ಪಡೆ ಶತಾಯಗತಾಯ ಗೆದ್ದೇ ತೀರುತ್ತೇವೆಂಬ ಅಚಲ ವಿಶ್ವಾಸದಿಂದ ಮುನ್ನೆಡಿಯಿತು. ಮೊದಲ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ಗಳನ್ನು ಕಬಳಿಸಿದ ಕುಂಬ್ಳೆ ಎರಡನೇ ಇನ್ನಿಂಗ್ಸ್ ನಲ್ಲೂ ಅದೇ ಬಗೆಯ ಪ್ರದರ್ಶನವನ್ನು ತೋರಿ ಒಟ್ಟು 4 ವಿಕೆಟ್ಗಳನ್ನು ಒಡೆದುರುಳಿಸಿದ.

ಒತ್ತಡದ ಸ್ಥಿತಿಯಲ್ಲೂ ಮನೋಜ್ಞವಾಗಿ ಬ್ಯಾಟ್ ಬೀಸತೊಡಗಿದ ಆಸೀಸ್ ಬ್ಯಾಟ್ಸಮನ್ಗಳ ಆಟವನ್ನು ನೋಡಿದವರಿಗೆ ಅದು ಗೆಲುವಿನ ಓಟವೆಂದೇ ಎನಿಸಿತು. ಆದರೆ ಪಂದ್ಯದ ಕೊನೆಯ 30 ಓವರ್ ಗಳು ಬಾಕಿ ಇರುವಾಗ ಪಾಂಟಿಂಗ್ ನ ರೂಪದಲ್ಲಿ 4ನೇ ವಿಕೆಟ್ ಯಾವಾಗ ಬಿದ್ದಿತೋ ಆಗ ಮಾತ್ರ ಭಾರತೀಯ ಪಡೆಯಲ್ಲಿ ಗೆಲುವಿನ ವಿಶ್ವಾಸ ಚಿಗುರೊಡೆಯತೊಡಗಿದ್ದು. ಪಾಂಟಿಂಗ್ ಪೆವಿಲಿಯನ್ ಗೆ ಸೇರಿದ ಕೆಲಕ್ಷಣ ಮೌನವಾದ ಸಿಡ್ನಿ ಮೈದಾನ ಅಷ್ಟೂ ಜನರನ್ನು ಎದ್ದು ನಿಲುವಂತೆ ಮಾಡಿತು. ಕೂಡಲೇ ಚಟಚಟ ಸದ್ದಿನ ಚಪ್ಪಾಳೆಯ ರಣಕಹಳೆ ಮೊಳಗಿ ಮಾರ್ಧನಿಸತೊಡಗಿತು. ಕಾರಣ ತಮ್ಮ ಹೀರೊ, ಹೆಚ್ಚು ಕಡಿಮೆ 20 ವರ್ಷಗಳ ಕಾಲ ದೇಶಕ್ಕಾಗಿ ಆಡಿದ ದಂತಕತೆ ಸ್ಟೀವ್ ವಾ ಕೊನೆಯ ಬಾರಿಗೆ ಆಸೀಸ್ ಜೆರ್ಸಿಯನ್ನು ತೊಟ್ಟು ಆಡಲು ಇಳಿಯುತಿದ್ದ. ನೋಡುಗರ ಮೈ ರೋಮಾಂಚನಗೊಳ್ಳುವಂತೆ ಮೂಡಿದ ಆ ಸ್ವಾಗತದ ಮೊರೆತ ಆತ ಸ್ಕಿರ್ಸ್ ನ ಮೇಲೆ ಬಂದು ನಿಂತರೂ ಸಹ ನಿಲ್ಲಲಿಲ್ಲ. ಅಂತಹ ಒಂದು ಸೂಪರ್ ಮ್ಯಾನ್ ನಾಯಕನ ಕೊನೆಯ ಪಂದ್ಯದ ಫಲಿತಾಂಶವೂ ಆತನ ಹೆಗಲ ಮೇಲೆಯೇ ಕುಳಿತಿತ್ತು. ಮೂವತ್ತು ಓವರ್ಗಳು. ಇನ್ನೊಂದೆರೆಡು ವಿಕೆಟ್ ಉರುಳಿದರೆ ಭಾರತದ ದಶಕಗಳ ಕನಸು ನನಸು. 242 ರನ್ ಗಳನ್ನು ಗಳಿಸಿದರೆ ಆಸ್ಟ್ರೇಲಿಯನ್ನರ ಕನಸು ನನಸು. ಇಂತಹ ಸಂಧಿಘ್ನ ಪರಿಸ್ಥಿಯಲ್ಲಿ ಆಡಲತ್ತಿದ ವಾ ಹಾಗು ಕ್ಯಾಟಿಚ್ ಜೋಡಿ ಪಂದ್ಯವನ್ನು ಗೆದ್ದೇ ತೀರಬೇಕೆಂಬ ದೃಢ ನಿರ್ಧಾರದಲ್ಲಿ ಮುನ್ನುಗ್ಗಿದಂತಿತ್ತು. ಭಾರತದ ಬೌಲರ್ ಗಳ ಯಾವ ತಂತ್ರಮಂತ್ರಕ್ಕೂ ಬಗ್ಗದ ವಾ, ಕ್ಯಾಟಿಚ್ನ ಜೊತೆಗೂಡಿ ಬರೊಬ್ಬರಿ 142 ರನ್ ಗಳ ಜೊತೆಯಾಟವನ್ನು ನೀಡಿದ. ತನ್ನ 80 ರನ್ ಗಳ ಅಮೋಘ ಆಟದಿಂದ ಕೊನೆಯ ಟೆಸ್ಟ್ ಪಂದ್ಯವನ್ನು ಸೋಲಿನ ದವಡೆಯಿಂದ ಪಾರುಮಾಡಿ ಆಸ್ಟ್ರೇಲಿಯನ್ನರ ಸರಣಿ ಸೋಲನ್ನು ತಡೆದನಾತ. ಸರಣಿಯ ಕೊನೆಯ ಟೆಸ್ಟ್ ನ ಕೊನೆಯ ಓವರ್ನನಲ್ಲಿ ಕುಂಬ್ಳೆಯ ಬೌಲಿಂಗ್ ಗೆ ಕ್ಯಾಚನಿತ್ತು ಆತ ಔಟಾದಾಗ ನೆರೆದಿದ್ದ ಅಷ್ಟೂ ಜನರು ಕೆಲಕ್ಷಣ ಮೌನವಾದರು. ಸಿಡ್ನಿ ಮೈದಾನ ಮತ್ತೊಮ್ಮೆ ಚಪ್ಪಾಳೆಯ ಸದ್ದಿನಲ್ಲಿ ಮುಳಿಗಿತು. ಸೂರ್ಯ ಪಶ್ಚಿಮದ ಆಗಸದಲ್ಲಿ ಕಣ್ಮರೆಯಾಗತೊಡಗಿದ್ದ. ಸರಣಿ ಸೋಲನ್ನು ತಪ್ಪಿಸಿದ ಆತ್ಮತೃಪ್ತಿಯೊಂದಿಗೆ ತನ್ನ ಕೊನೆಯ ಹೆಜ್ಜೆಗಳನ್ನು ಇಡುತ್ತಾ ಸ್ಟೀವ್ ವಾ ಡ್ರೆಸ್ಸಿಂಗ್ ರೂಮಿನೆಡೆ ಸಾಗಿದ. 90 ನೇ ಓವರ್ನ ಕೊನೆಯ ಒಂದು ಎಸೆತ ಬಾಕಿ ಇರುವಾಗ ಗಿಲ್ಕ್ರಿಸ್ಟ್ ವಿಕೆಟ್ ಅನ್ನು ಉರುಳಿಸಿದ ಭಾರತಕ್ಕೆ ಟೆಸ್ಟ್ ಗೆಲ್ಲಲು ಬಾಕಿ ಉಳಿದ ಒಂದು ಎಸೆತದದಲ್ಲಿ 4 ವಿಕೆಟ್ಗಳನ್ನು ಉರುಳಿಸಬೇಕಿದ್ದರೆ ಆಸ್ಟ್ರೇಲಿಯನ್ನರಿಗೆ 86 ರನ್ಗಳ ಅವಶ್ಯಕತೆ ಇದ್ದಿತು. ಸರಿಯಾಗಿ 90 ಓವರ್ಗಳಿಗೆ ಮುಗಿಯಬೇಕಿದ್ದ ಮ್ಯಾಚು ಇನ್ನೂ 4 ಓವರ್ಗಳಿಗೆ ವಿಸ್ತರಿಸಲ್ಪಟ್ಟಿತ್ತಾದರೂ ಫಲಿತಾಂಶ ಅಂದುಕೊಂಡಂತೆಯೇ ಡ್ರಾ ನಲ್ಲಿ ಕೊನೆಗೊಂಡಿತು. ಕಳೆದ ಸರಣಿ (2001) ಭಾರತದ ಪಾಲಾದರಿಂದ ಪ್ರಸ್ತುತ ಟ್ರೋಫಿ ಭಾರತದ ಬಳಿಯೇ ಉಳಿಯಿತು. ಸರಣಿ ಸಮಬಲದಲ್ಲಿ ಅಂತ್ಯಕಂಡರೂ ಗೆದ್ದಷ್ಟೇ ಖುಷಿ ಮಾತ್ರ ಭಾರತದ ಪಾಳಯದಲ್ಲಿ ಮನೆ ಮಾಡಿತ್ತು. ಕಾರಣ ಆ ಫಲಿತಾಂಶ ಆಸೀಸ್ ನೆಲದಲ್ಲಿ ಭಾರತದ ಅಲ್ಲಿಯವರೆಗಿನ ದಿ ಬೆಸ್ಟ್ ಆಗಿದ್ದಿತು. ಇಂದಿಗೂ ಕೂಡ! ಒಂದುಪಕ್ಷ ಉತ್ತಮ ಆರಂಭವನ್ನು ಪಡೆದಿದ್ದ ಮೂರನೇ ಟೆಸ್ಟ್ ಅನ್ನು ಗೆದ್ದಿದ್ದರೆ ಅಥವಾ ಡ್ರಾ ಮಾಡಿಕೊಂಡಿದ್ದರೂ ಸರಣಿ ಗೆಲುವಿನ ಹಿರಿಮೆ ಅಂದು ಭಾರತದಾಗಿರುತ್ತಿತ್ತು. ರಾಹುಲ್ ದ್ರಾವಿಡ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಬಾಜನನಾದರೆ ಕುಂಬ್ಳೆ ಸರಣಿಯ ಅತಿ ಹೆಚ್ಚು ವಿಕೆಟನ್ನು (24) ಬರೆದು ದಾಖಲೆ ಬರೆದ. ಸೆಹ್ವಾಗ್, ದ್ರಾವಿಡ್, ಸಚಿನ್, ಗಂಗೂಲಿ. ಲಕ್ಷ್ಮಣ್ ಹಾಗು ಕುಂಬ್ಳೆ ಇಂದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅಜರಾಮರರಾಗಲು ಈ ಸರಣಿ ಪ್ರಮುಖ ಪಾತ್ರವನ್ನು ವಹಿಸಿತು.

ಇಂದು ಆ ಸರಣಿ ಮುಗಿದು ಒಂದೂವರೆ ದಶಕಗಳೇ ಕಳೆದಿವೆ. ಪ್ರಸ್ತುತ 10 ಓವರ್ಗಳ ಕ್ರಿಕೆಟ್ ಪಂದ್ಯಗಳಲ್ಲಿ ಟೆಸ್ಟ್ ಕ್ರಿಕೆಟ್ ನ ಹೊಳಪು ಕಾಣೆಯಾಗುತ್ತಿರುವುದು ಒಂದೆಡೆಯಾದರೆ ನೆಡೆಯುವ ಟೆಸ್ಟ್ ಪಂದ್ಯಗಳ ಹೆಚ್ಚಿನ ಆಯುಷ್ಯ ಹೆಚ್ಚೆಂದರೆ ಮೂರುದಿನಗಳಿಗಷ್ಟೇ ಕೊನೆಯಾಗುತ್ತಿದೆ. ಟೆಸ್ಟ್ ರಾಂಕಿಂಗ್ನಲ್ಲಿ ಇಂದು ಭಾರತ ನಂಬರ್ 1 ಸ್ತಾನದಲ್ಲಿದ್ದರೂ, ನಂಬರ್ 1 ಬ್ಯಾಟ್ಸಮನ್ಗಳೆಲ್ಲರೂ ನಮ್ಮವರೇ ಆದರೂ, ಎದುರಾಳಿ ಪಾಳಯಗಳಲ್ಲಿ ದಂತಕತೆಗಳೆನ್ನುವ ಅಂದಿನ ಆಟಗಾರರ್ಯಾರು ಇರದಿದ್ದರೂ ಆಸ್ಟ್ರೇಲಿಯಾ ಹಾಗು ಸೌತ್ ಆಫ್ರಿಕಾದ ನೆಲಗಳಲ್ಲಿ ಟೆಸ್ಟ್ ಸರಣಿ ಗೆಲ್ಲುವ ಭಾರತದ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಪ್ರಸ್ತುತ ಬಾರ್ಡರ್-ಗವಾಸ್ಕರ್ ಸರಣಿ ಸೊರಗಿ ಸುಣ್ಣವಾಗಿರುವ ಆಸ್ಟ್ರೇಲಿಯ ತಂಡವನ್ನು ಬಗ್ಗು ಬಡಿದು ಭಾರತ ಆ ಮೈಲಿಗಲ್ಲನ್ನು ತಲುಪುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಆದರೆ ದೇಸಿ ಪಿಚ್ ಗಳಲ್ಲಿ ಅದೇನೇ ಕುಣಿದರು ತನ್ನ ಸಾಮರ್ಥ್ಯ ಹಾಗು ಬಂಡವಾಳವನ್ನು ವಿದೇಶಿ ನೆಲದಲ್ಲಿ ತೋರಿಸುವ ಚಾಲೆಂಜ್ ತಂಡದ ಅಷ್ಟೂ ಆಟಗಾರರ ಮುಂದಿದೆ.