Friday, August 17, 2018

ಆಟವೆಂಬುದು ಕ್ರೀಡೆಯಾಗಬೇಕಾದರೆ ..

ಕತ್ತಿಮಸೆಯುವ ದೇಶಗಳ ಎದೆಯಲ್ಲಿ ನಡುಕಹುಟ್ಟಿಸಿ ದೇಶದ ತಲೆಯನೆತ್ತಿ ನಿಲ್ಲುವಂತೆ ಮಾಡಿದ ದೇಶದ ಮಾಜಿ ಪ್ರಧಾನಿ, ಭಾರತರತ್ನ, ದೇಶದ ರಾಜಕೀಯ ಇತಿಹಾಸದ ಅಜಾತಶತ್ರು ಅಟಲ್ ಬಿಹಾರಿ ವಾಜಿಪೇಯಿ, ವೆಸ್ಟ್ ಇಂಡೀಸ್ ವಿರುದ್ಧ ಅವರದ್ದೇ ನೆಲದಲ್ಲಿ ಮೊದಲ ಟೆಸ್ಟ್ ಸರಣಿಯ ಸಿಹಿಯನ್ನು ಗಳಿಸಿಕೊಟ್ಟ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್, ಮಾಜಿ ಲೊಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ, ದ್ರಾವಿಡ ಚಳುವಳಿಯ ಅಸ್ಮಿತೆಯ ಪ್ರತೀಕ ಹಾಗು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಹಾಗು ಶತಮಾನದ ಮಹಾ ಜಲಪ್ರಳಯದ ರೌದ್ರಾವತಾರಕ್ಕೆ ಕೇರಳ ಹಾಗು ದೇಶದ ಹಲವೆಡೆ ಬಲಿಯಾದ ಎಲ್ಲ ಜೀವಗಳಿಗೂ ಶಾಂತಿಯನ್ನು ಕೋರುತ್ತಾ....

ಕೆಲದಿನಗಳ ಹಿಂದೆ ಹಿಮಾದಾಸ್ ಎಂಬ ಹೆಸರೊಂದು ಎಲ್ಲಡೆ ಸದ್ದು ಮಾಡಿತ್ತು. 46 ವರ್ಷಗಳ ಇತಿಹಾಸವಿರುವ ‘IAAF ವಿಶ್ವ ಚಾಂಪಿಯನ್ ಶಿಪ್’ ನಲ್ಲಿ 51.46 ಸೆಕೆಂಡುಗಳಲ್ಲಿ 400 ಮೀಟರ್ ಓಟವನ್ನು ಜಿಂಕೆಯಂತೆ ಕ್ರಮಿಸಿ ಭಾರತಕ್ಕೆ ಮೊಮ್ಮದಲ ಚಿನ್ನದ ಪದಕವನ್ನು ಗಳಿಸಿ ಇತಿಹಾಸವನ್ನು ಬರೆದ ಈಕೆ ಕತ್ತಲು ಕಳೆಯುವ ಮುನ್ನ ಅರಳಿದ ತಾವರೆಯಂತಾಗಿದ್ದಳು. ಭಾರತೀಯ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ವಿಜೃಂಭಿಸುವಂತೆ ಮಾಡಿದ ಆಕೆಯ ಸಾಧನೆಯ ಗುಣಗಾನವನ್ನು ಮಾಡದಿರುವವರಿಲ್ಲ. ರಾಶಿ ರಾಶಿ ಶೇರು, ಲೈಕು ಹಾಗು ಕಾಮೆಂಟುಗಳು, ಇತರ ನಟ ನಟಿಯರನ್ನು ಈಕೆಗೆ ಹೋಲಿಸಿ ಅವರನ್ನು ಜರಿಯುವ ಪೋಸ್ಟುಗಳು, ಸೋತರೂ, ಗೆದ್ದರೂ ರಾಜಕಾರಣಿಗಳಿಗೆ ಹಾಗು ಸರ್ಕಾರಗಳಿಗೆ ನೆಡೆಯುವ ಮಂಗಳಾರತಿಗಳು, ಚಿನ್ನ ಬಂದರೂ ಜಾತಿ ಬಿಡದ ಸರ್ಚುಗಳು, ಅವುಗಳಿಂದ ವಿಶ್ವಮಟ್ಟದಲ್ಲಿ ತಲೆಕೆಳಗು ಮಾಡುವಂತಾದ ಕಾಮೆಂಟುಗಳು, ಒಂದೇ ಎರಡೇ. ಬಿರುಗಾಳಿಯಂತೆ ಎತ್ತಲಿಂದಲೋ ಬಂದು ಅಲ್ಲೊಲ್ಲ ಕಲ್ಲೋಲವಾಗಿಸಿ ಧೂಳೆಬ್ಬಿಸಿಬಿಟ್ಟಿತು ಈ ಸುದ್ದಿಯೊಂದು.

ಈಗ ಆ ಸುದ್ದಿ ಶಾಂತವಾಗಿದೆ. ಭೋರ್ಗರೆಯುವ ನದಿಯ ಸಿಹಿ ನೀರು ಸಮುದ್ರ ಸರೋವರಗಳನ್ನು ಸೇರಿ ತನ್ನ ಸಿಹಿತನವನ್ನು ಕಳೆದುಕೊಳ್ಳುವಂತೆ ಆ ಸುದ್ದಿಯ ವಿಶಿಷ್ಟತೆಯೂ ಇಂದೂ ಗೌಣವಾಗಿದೆ. ಅರೆಹೊಟ್ಟೆಯಲ್ಲೇ ಆಕೆ ಬೆವರು ಸುರಿಸಿ ಓಡಲತ್ತಿದಾಗ ಆಕೆಯ ಕಷ್ಟಗಳನ್ನು ಕಾಣದ ಕೈಗಳಿಗೆ ಇಂದು ಚಿನ್ನದ ಬಿಲ್ಲೆಯೊಂದು ಆ ಎಳೆಯ ಕೊರಳಮೇಲೆ ರಾರಾಜಿಸಿದ ಕೂಡಲೇ ಜ್ಞಾನೋದಯವಾಗುತ್ತದೆ. ಆ ಸ್ಕಾಲರ್ಶಿಪ್ಗಳೇನು, ಆ ಕೋಟಿ ಕೋಟಿ ರೂಪಾಯಿಗಳ ಜಾಹಿರಾತುಗಳ ಒಪ್ಪಂದಗಳೇನು, ಸರ್ಕಾರಗಳ ಪ್ರೋತ್ಸಹ ಧನಗಳೇನು ಹಾಗು ಸರ್ಕಾರೀ ಹುದ್ದೆಗಳೇನು! ಇಲ್ಲಿ ಕ್ರೀಡೆ, ದೇಶ ಹಾಗು ಹೆಮ್ಮೆ ಎನ್ನುವ ಅಭಿಮಾನಕ್ಕಿಂತ ಹೆಚ್ಚಾಗಿ ತಮ್ಮ ತಮ್ಮ ಒಂದಿಷ್ಟು ಬೇಳೆಯನ್ನು ಬೇಯಿಸಿಕೊಳ್ಳುವ ಚತುರತೆಯನ್ನು ಬಿಟ್ಟರೆ ಇಲ್ಲಿ ಬೇರೇನು ಕಾಣುವುದಿಲ್ಲ.ಈಕೆಯ ಸಾಧನೆಗೆ ನೀಡಿದ ಅಷ್ಟೇ ಕೋಟಿಗಳನ್ನು ಅಲ್ಲಿ ಬಿಸಿಲ ಧಗೆಯಲ್ಲಿ 'ಕುಟುಂಬವೋ ಅಥವಾ ದೇಶವೋ' ಎಂಬ ದ್ವಂದ್ವದಲ್ಲಿ ಕಾಲ ತಳ್ಳುವ ಇತರೆ ಮಕ್ಕಳಿಗೂ ನೀಡಲಾಗುವುದಿಲ್ಲವೇ? ಅಷ್ಟಿಲ್ಲದಿದ್ದರೂ ಇಷ್ಟಾದರೂ ಕ್ರೀಡಾ ಸ್ಕಾಲರ್ಶಿಪ್ಗಳು ಇಂದು ಅದೆಷ್ಟು ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ? ಅಲ್ಲೊಬ್ಬ ಐಎಎಸ್ ಆಕಾಂಕ್ಷಿಯ ಹುದ್ದೆಯನ್ನು ಕ್ಷಣಮಾತ್ರದಲ್ಲಿ ಕಿತ್ತು ಪದಕವನ್ನು ಪಡೆಯುವ ಇವರಿಗೆ ಕೊಟ್ಟು 'ಅತ್ತ ಕ್ರೀಡೆಯೂ ಇಲ್ಲ, ಇಲ್ಲಿ ಅಧಿಕಾರಿಯೂ ಅಲ್ಲ' ಎಂಬ ಗೊಂದಲದ ಗೋಜಲಿಗೆ ತಳ್ಳುವ ವಿಪರ್ಯಾಸವಾದರೂ ಏತಕ್ಕೆ? ಪದಕಗಳ ನಂತರ ಹರಿಯುವ ಹಣದ ಹೊಳೆ ಆಟದ ಮೊದಲೇ ಹುಟ್ಟುವುದಿಲ್ಲವೇಕೆ?

ಇದೇ ಬೈಗುಳಗಳು ಮತ್ತದೇ ಮಾತುಗಳು. ಹೇಳಿ ಕೇಳಿ ‘ಸಾಕಾಗಿದೆ’ ಎಂಬುದು ಮಾತ್ರ ಕಹಿಸತ್ಯ. ಹೇಳುವ ನಾವುಗಳೂ ಮಿಲ್ಕಾ ಸಿಂಗ್ ಗಳೇನಲ್ಲ ಅಥವಾ ಪಿ ವಿ ಸಿಂಧುಗಳೂ ಅಲ್ಲ. ಸರ್ಕಾರ ಅಥವಾ ಸಂಸ್ಥೆಗಳಿಗೆ ಹಾಗಲ್ಲ ಹೀಗೆ ಮಾಡಿ ಎನ್ನುವ ನೈತಿಕ ಹಕ್ಕು ನಮಗಿಲ್ಲದಿದ್ದರೂ ನಮ್ಮ ನಮ್ಮ ಮನೆಯಲ್ಲೇ ನೆಡೆಯುವ ತಿರುಗುದಾರಿಗಳನ್ನು ಸರಿಪಡಿಸಿಕೊಳ್ಳಬಲ್ಲೆವು. ಉದಾಹರಣೆಗೆ ಇಂದು ಎಲ್ಲಾ ಸೌಲಭ್ಯಗಳೂ ಇದ್ದೂ ಅದರ ಒಂತಿಷ್ಟೂ ಸದುಪಯೋಗ ಮಾಡಿಕೊಳ್ಳದ ನಾವುಗಳೇ 'ಸರ್ಕಾರಗಳ ನಿರ್ಲಕ್ಷ್ಯತನದಿಂದ' ಇಂದು ದೇಶದ ಕ್ರೀಡೆಗಳು ನೆಲಕಚ್ಚಿವೆ ಎನ್ನುತ್ತೀವಿ. ಆದರೆ ನಮ್ಮದೇ ಮಕ್ಕಳನ್ನು ಡಿಗ್ರಿ ಮುಗಿದ ಕೂಡಲೇ ಅಥವಾ ಮುಗಿಯುವ ಮೊದಲೇ ಉನ್ನತ ವ್ಯಾಸಂಗಕ್ಕೆ ಎಂದು ವಿದೇಶಗಳಿಗೆ ಹಾರಲು ವಿಮಾನಗಳ ಟಿಕೆಟ್ಟುಗಳನ್ನು ಕಾಯ್ದಿರಿಸುತ್ತೀವಿ! ಆಕೆಯ ಅಥವಾ ಆತನ ಆಟವನ್ನು ನೋಡಿ 'ಛೆ..ಥು' ಎಂದು ಜರಿಯುತ್ತೀವಿ. ಆದರೆ ಕ್ರೀಡೆ ದೂರದ ಮಾತು ಕನಿಷ್ಠ ಪಕ್ಷ ಎದ್ದು ಅತ್ತಿಂದಿತ್ತ ನೆಡೆಯಲೂ ಆಗದೆ ಕೂತ ಸ್ಥಳಕ್ಕೆ ದೇಹವನ್ನು ಅಂಟಿಸಿಕೊಂಡು ಕೈಕಾಲುಗಳಿದ್ದೂ ಅಂಗವಿಕಲರಾಗುತ್ತೀವಿ. ಏನೂ ಇಲ್ಲದೆ ಆಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದನ್ನು ನೋಡಿ ಕೊಂಡಾಡುತ್ತಿವಿ. ಆದರೆ ಸಾಧಿಸಲು ಸಕಲವೂ ಇದ್ದೂ ಕೇವಲ ನ್ಯೂನ್ಯತೆಗಳನ್ನೇ ದೊಡ್ಡದಾಗಿಸಿ ಕೊಂಡು ಕುಯಿಂಗುಡುತ್ತಿವಿ.

ಆಟ ನನಗೋ, ದೇಶಕ್ಕೋ ಅಥವಾ ಹಣಕ್ಕೋ ಎಂಬ ಅಸ್ಪಷ್ಟ ಗುರಿಗಳಿಂದಲೆಯೇ ಅರಳುವ ಕ್ರೀಡಾಪಟುಗಳು ಇಂದು ಘಮಿಕರಿಸುವ ಮೊದಲೇ ಕಮರುವುದು. ಅಲ್ಲಿ ಆಟವೆಂಬುದು ಪ್ಯಾಶನ್ ಅಥವಾ ಇಚ್ಛಿಸಿ ಪಡೆಯುವ ಪ್ರೊಫೆಶನ್. ಇಲ್ಲಿ ಆಟವೆಂಬುದು ಒಂದೋ ಹಣ ಇಲ್ಲವೆಂದರೆ ರೆಕ್ಕೆ ಕತ್ತರಿಸಿದ ನೊಣ! ಇಲ್ಲಿ ಎರಡು ಮುಖ್ಯ ವಿಚಾರಗಳನ್ನು ಗಮನಿಸಬೇಕು. ಒಂದು ದೇಶಕ್ಕೆ ಕೀರ್ತಿಯನ್ನು ಗಳಿಸಿಕೊಡಬೇಕೆಂಬ ಅಥವಾ ಹೆಸರು ಗಿಟ್ಟಿಸಿಕೊಳ್ಳಬೇಕೆಂಬ ಹಪಾಹಪಿ. ಎರಡನೆಯದು ನಿಖರತೆಯಿಲ್ಲದ ಕ್ರೀಡಾ ಹಾದಿಯಲ್ಲಿ ಆರ್ಥಿಕವಾಗಿ ಮುಗ್ಗರಿಸಿ ಮಕಾಡೆ ಬಿದ್ದು ಎದ್ದೇಳಲೇ ಆಗದೇನೋ ಎಂಬ ಭಯ. ಭಾರತದಂತಹಃ ಅಭಿವೃದ್ಧಿಶೀಲ ರಾಷ್ಟ್ರದ ಬಹುಸಂಖ್ಯೆಯ ಮಾಧ್ಯಮವರ್ಗದ ಜನರು ಎರಡನೆಯ ವಿಚಾರದ ತೂಕದಲ್ಲಿ ಮೊದಲನೇ ಸಂಗತಿಯನ್ನು ಹತ್ತಿಕ್ಕಿಕೊಳ್ಳುತ್ತಾರೆ. ಭಯ. ನನ್ನದೇಗೋ ಆಯಿತು ನನ್ನ ಮಗುವಿನ ಭವಿಷ್ಯ ಸುಭದ್ರವಾಗಿರಬೇಕೆಂಬ ಕನಸ್ಸನ್ನು ಕಾಣುವ ಮಾಧ್ಯಮವರ್ಗದ ಪೋಷಕರಿಗೆ ಆ ಸುಭದ್ರತೆಯ ಕಲ್ಪನೆಯೆಯೆಂದರೆ ಮಗ ಅಥವಾ ಮಗಳು ಬೆಳಗ್ಗೆ ಒಂಬತ್ತಕ್ಕೆ ಮನೆ ಬಿಟ್ಟು ಸಂಜೆ ಆರಕ್ಕೆ ಮನೆ ತಲುಪಿ, ತಿಂಗಳ ಕೊನೆಯಲ್ಲಿ ತಮಗಿಲ್ಲದಿದ್ದರೂ ಸರಿಯೇ ಅವರುಗಳು ಮಾತ್ರ ಒಳ್ಳೆಯ ಸಂಬಳವನ್ನು ಪಡೆದು, ಮದುವೆಯೊಂದಾಗಿ, ಮಕ್ಕಳು ಮರಿಗಳನ್ನು ಬೆಳೆಸಿ ಆ ನೆಮ್ಮದಿಯಲ್ಲೇ ತಾವು ಕಣ್ಣು ಮುಚ್ಚಿಕೊಂಡರೆ ಎಂಬ ಕನಸ್ಸಿನಲ್ಲಿಯೇ ಇರುತ್ತದೆ. ಅಲ್ಲದೆ ಭಾಗಶಃ ಜನರು ಇಂದು ಈ 'ಸಾಧನೆ'ಯನ್ನು ಸಾಧಿಸಿಯೇ ತೀರುತ್ತಾರೆ. ಇದರಲ್ಲಿ ಎಳ್ಳಷ್ಟೂ ತಪ್ಪಿಲ್ಲ. ಸ್ವಾಭಾವಿಕವಾಗಿ ಚಿಂತಿಸುವವರ ಸ್ವಾಭಾವಿಕ ಸ್ವಭಾವವಿದು. ಇಂತಹ ಸ್ವಾಭಾವಿಕತೆಯಲ್ಲಿ ಕ್ರೀಡೆ, ದೇಶ, ದೇಶಪ್ರೇಮವೆಂಬುದು ಅಸ್ವಾಭಾವಿಕವಾಗಿಯೇ ಅವರಲ್ಲಿ ಮೂಡಬೇಕು. ಮೋಡಕವಿದ ಆಗಸದಲ್ಲಿ ಇದ್ದಕ್ಕಿದಂತೆ ರವಿಯ ಕಿರಣಗಳು ಹೊಳೆದಂತೆ.



ಇಂತಹ ಮನಸ್ಥಿತಿಯ ಸಮಾಜದಲ್ಲಿ ಪ್ರತಿಭಾರಿಯ ಒಲಿಂಪಿಕ್ಸ್ ನಲ್ಲಿ ಕೇವಲ ಬೆರಳೆಣಿಕೆಯ ಪದಕಗಳನ್ನು ಗಳಿಸಿಬರುವ ನಮ್ಮವರ ಜರಿಯುವ ಹಕ್ಕು ನಮಗೆ ಎಳ್ಳಷ್ಟೂ ಇರುವುದಿಲ್ಲ ಎಂಬುದನ್ನು ನಾವು ಮನಗಾಣಬೇಕು. ಹಿಮಾದಾಸ್ ಗೆದ್ದರೆ ಅದು ಹೆಮ್ಮೆಯ ವಿಚಾರ. ಆದರೆ ಆ ಹೆಮ್ಮೆಯನ್ನು ಇತರೆ ನಟ ನಟಿಯರಿಗೆ ಹೋಲಿಸಿ ಜರಿಯುವುದು ಮಾತ್ರ ನಮ್ಮ ಕಮ್ಮಿ ಬುದ್ದಿಯ ಸಂಕೇತ. ಒಂದೂ ಮಾಡಿ ತೋರಿಸೋಣ ಅಥವ ಮಾಡುವವರಿಗೆ ಪ್ರೋತಾಹಿಸೋಣ. ಎರಡನ್ನೂ ಬಿಟ್ಟು ಕೇವಲ ಫೇಸ್ಬುಕ್ ಪೋಸ್ಟ್ಗಳನ್ನು ಶೇರ್ ಮಾಡುತ್ತಾ, ಆಟದ ಹಿರಿಮೆಯನ್ನು ಮರೆತು ಜಾತಿಯ ಹಿರಿಮೆಯನ್ನು ತಿಳಿಯಬಯಸಿದರೆ ಅದು ಕೇವಲ ಆಟವಾಗಿ ಉಳಿಯುತ್ತದೆಯೇ ವಿನಃ ಕ್ರೀಡೆಯಾಗಲು ಹೇಗೆ ತಾನೆ ಸಾಧ್ಯ?!

Friday, August 10, 2018

ಬಾಡದ ಹೂವು...

ಹತ್ತು ವರ್ಷದ ಮೊಮ್ಮಗನಿಂದ ಇಂದು ಬೆಳ್ಳಂಬೆಳಗ್ಗೆ ಬಂದ ಸುದ್ದಿಯನ್ನು ಕೇಳಿ ಜೀವ ಹಿಂಡಿಹೋದಂತಾಯಿತು. ಹಿಡಿದಾದ ಒಂದು ನಿಟ್ಟಿಸಿರು. ಆ ಉಸಿರಿನಲ್ಲಿ ದಶಕಗಳ ಕಾಲ ಎದೆಯಾಳದಲ್ಲಿ ಅವಿತು ಕಲೆತು ಪಳೆಯುಳಿಕೆಯಾದಂತಹ ಪ್ರೀತಿ, ಸಿಟ್ಟು, ಕೋಪ, ದುಃಖ ದುಮ್ಮಾನಗಳು ಒಮ್ಮೆಲೇ ಒಟ್ಟೊಟ್ಟಿಗೆ ಮೂಡಿದ್ದವು. ಕೆಲಕಾಲ ಕಣ್ಣು ಮುಚ್ಚಿ ಮೌನಿಯಾದೆ. ಮನವನ್ನೂ ಮಾತಾಡಲು ಬಿಡದೆ ಸುಮ್ಮನಿರಿಸಿದೆ.

ಜೀವನ. ಎಪ್ಪತ್ತೇಳು ವರ್ಷಗಳ ಈ ಜೀವನ ಮೊದಲು ಏಳು ವರ್ಷಗಳಷ್ಟೇ ಆಕೆಯನ್ನು ಗುರುತಿಸದು. ಅದು ಮೂರನೇ ತರಗತಿಯ ಮೊದಲ ಸಾಲ ಕೊನೆಯ ಸೀಟು. ಎಣ್ಣೆಯಚ್ಚಿದ ಕೂದಲ ನೀಳವಾದ ಜಡೆಯೆರಡನ್ನು ಅಂದವಾಗಿ ಕಟ್ಟಿ, ಹಿಂದಿನ ದಿನವೇಳಿದ ಮನೆಗೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಬಂದಿರುವಳೋ ಎಂಬ ಧಾಟಿಯಲ್ಲಿ ಕಿಟಕಿಯ ಪಕ್ಕಕ್ಕೆ ಆಕೆ ಕುಳಿತಿದ್ದಾಳೆ. ಮೊಣಕೈಯೆರಡು ಆಕೆಯ ಮಂಡಿಗಳ ಮೇಲೆ, ಕೈಯ ಅಸ್ತಗಳೆರೆಡು ಎಳೆಯ ಕೆನ್ನೆಗಳ ಮೇಲೆ. ಯಾರೊಟ್ಟಿಗೂ ತುಟಿಕ್ ಪಿಟಿಕ್ ಅನ್ನದೆ ಏನೋ ಒಂದು ಆಲೋಚನೆಯಲ್ಲಿ ಮಗ್ನಳಾಗಲಿದ್ದಾಳೆ. ತರಗತಿಯ ಮಕ್ಕಳೆಲ್ಲ ಜೀವವನ್ನೇ ಪಣಕ್ಕಿಟ್ಟು ಅರಚಿ ಗುಂಡಾಂತರ ಮಾಡುತ್ತಿರುವಾಗ ಈಕೆ ಮೌನಗೌರಿಯ ಮುಖವಾಡವನ್ನು ಹಾಕಿಕೊಂಡಿದ್ದಾಳೆ. ಚೋಟುದ್ದದ ಕಾಲುಗಳ್ನು ನಿಧಾನವಾಗಿ ಇಡುತ್ತಾ ಆಕೆಯ ಹಿಂಬದಿಗೆ ಬಂದು 'ಹೂ...' ಎಂದು ಕೂಗಿದ ಸದ್ದಿಗೆ ಆಕೆ ತನ್ನ ಕೈಗಳೆರಡನ್ನು ಕಿವಿಯ ಮೇಲಿರಿಸಿ ಭಯದಿಂದ ನನ್ನ ಮೊದಲ ಬಾರಿಗೆ ನೋಡಿದ್ದನ್ನ ನಾನು ಇಂದಿಗೂ ಮರೆತಿಲ್ಲ. ಎಂದೆಂದಿಗೂ ಮರೆಯುವುದಿಲ್ಲ.

'ತಾತ, ಅಪ್ಪ ತಿಂಡಿಗೆ ಆನ್ಲೈನ್ ಆರ್ಡರ್ ಮಾಡಿ ಆಗಿದೆ ಅಂತೇ. ಪಾಸ್ತಾ.. ಬೇಗ ತಿನ್ನು, ನಾನು ಲಂಚ್ ಬ್ರೇಕ್ ಗೆ ವಿಡಿಯೋ ಕಾಲ್ ಮಾಡ್ತೀನಿ' ಎಂದ ಮೊಮ್ಮಗನ ಮೆಸೇಜುಗಳು ಗೋಡೆಯ ಮೇಲೆ ಒಂದೊಂದಾಗೆ ಮೂಡತೊಡಗಿದವು.ಎಲ್ಲರೂ ಇದ್ದೂ ಯಾರೂ ಇಲ್ಲದ ಇಂದಿನ ಮುದಿ ಜೀವಗಳಿಗೆ ಓಲ್ಡ್ ಏಜ್ ಹೋಮುಗಳೇ ಜೀವನದ ಕೊನೆಯ ಛಾವಣಿ. ನಾನಿಲ್ಲಿಗೆ ಬಂದು ಅದಾಗಲೇ ಏಳು ವರ್ಷಗಳಾಗಿವೆ. ಇನ್ನೆಷ್ಟು ದಿವಸ ಈ ಜೀವನದ ಬಂಡಿಯನ್ನು ಸವೆಸಬೇಕೋ. ಆಕೆಯೊಟ್ಟಿಗೆ ನಾನೂ ಹೊರಟಿದ್ದರೆ? ಆ ಮಧುರ ಯಾನದಲ್ಲಿ ನಾನು ಹಾಗು ಆಕೆ. ಇಬ್ಬರೇ. ಸೂರ್ಯ. ಚಂದ್ರ, ನಕ್ಷತ್ರಾದಿಗಳಾಚೆಗೆ ಚಲಿಸುತ್ತ ಗೊತ್ತಿರದ ಗುರಿಯನ್ನು ಅನ್ವೇಷಿಸುತ್ತಾ ಆ ಅನಂತ ನಡಿಗೆಯಲ್ಲಿ.. ನಾನು ಹಾಗು ಅವಳು….

ಕಲ್ಲಾಟ. ಬಿಡುವು ಸಿಕ್ಕಾಗೆಲ್ಲ ಆಕೆ, ನಾನು ಜೊತೆಗೆ ಹತ್ತಾರು ಕಲ್ಲುಗಳು. ಕರ ಕರ ಸದ್ದನ್ನು ಮಾಡುತ್ತಾ, ಒಂದೊಂದೇ ಕಲ್ಲನ್ನು ಗಾಳಿಗೆ ಎಸೆಯುತ್ತಾ, ಕೈ ಬೆವತು ನೆಲದ ಮೇಲಿದ್ದ ದೂಳೆಲ್ಲ ಸೇರಿ ಕೊಳಕು ಕೊಳಕುಗೊಂಡ ಕೈಗಳಲ್ಲೇ ಆಡಿದ ಆಟಗಳು ಅದೆಷ್ಟೋ! ಅಂದಿನ ಒಂದೆರೆಡು ಕಲ್ಲುಗಳನ್ನು ನಾನು ಇಂದಿಗೂ ಕಾಪಾಡಿಕೊಂಡು ಬರಬೇಕಿತ್ತು. ಆಕೆಯ ನೆನಪಿಗೆ. ಅಲ್ಲ, ಅಲ್ಲ, ಆ ನೆನಪಿನ ಬಯಕೆಗೆ….

ಎಳೆಯ ವಯಸ್ಸಿನ ಗೆಳೆತನವೇ ಹಾಗೆ. ಹುಡುಗಿ ಅಂದವಾಗಿದ್ದು ಹಲವು ವರ್ಷಗಳ ನಂತರ ಕಾಲೇಜಿನಲ್ಲೋ, ಆಫೀಸಿನಲ್ಲೋ ಮಗದೊಮ್ಮೆ ಸಿಕ್ಕರೆ ಮುಗ್ದ ಗೆಳೆತನದ ನೆನಪಿನ ಗೂಡು ಪ್ರೀತಿ ಪ್ರೇಮ ಎಂಬ ಹಲವಾರು ಸಂಬಂಧಗಳಿಗೆ ದಾರಿಮಾಡಿಕೊಡುತ್ತದೆ. ಅದು ವಯಸ್ಸಿನ ಮಾಹೆಯೋ ಅಥವಾ ತಿಳಿದೇ ಜರುಗುವ ತಪ್ಪೋ ಗೊತ್ತಿಲ್ಲ. ಆದರೆ ಪ್ರಾಥಮಿಕ ಶಾಲೆಯ ನಂತರ ಆಕೆಯ ನೆನಪು ಅದೆಷ್ಟು ಕಾಡಿತು ನನಗೆ. ಆಕೆಯೆಲ್ಲೋ, ನಾನೆಲ್ಲೋ. ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯ ನಂತರ ಮಾರ್ಕ್ಸ್ ಶೀಟ್ಗಳನ್ನು ತೆಗೆದುಕೊಳ್ಳಲು ಕೊನೆಯಬಾರಿ ಹೋದಾಗ ಕಾಕತಾಳೀಯವೆಂಬಂತೆ ಆಕೆಯೂ ಅದೇ ಸಮಯಕ್ಕೆ ಬಂದಿದ್ದಳು. ಕಪ್ಪು ಬಣ್ಣದ ಬಟ್ಟೆಯ ಮೇಲೆ ಹರಿಶಿನ ಬಣ್ಣದ ನಕ್ಷತ್ರಗಳೂ ಅಥವಾ ಹರಿಶಿನ ಬಣ್ಣದ ಬಟ್ಟೆಯ ಮೇಲೆ ಕಪ್ಪು ಬಣ್ಣದ ಚಿಟ್ಟೆಗಳೋ ನೆನಪಿಗೆ ಬರುತ್ತಿಲ್ಲ. ಆದರೆ ಆ ಕೊನೆ ಕ್ಷಣವನ್ನು ಮುಂದೆ ನಾನು ಪ್ರತಿದಿನ ನೆನೆದುಕೊಳ್ಳುತ್ತಿದ್ದೆ. ಆದದ್ದಾಗಲಿ ಆಕೆ ಇರುವ ಶಾಲೆ ಯಾವುದೆಂದು ತಿಳಿದು ನಾನೂ ಅಲ್ಲಿಗೆ ಸೇರಿಕೊಂಡರೆ? ಆಕೆ ಎಲ್ಲಿದ್ದಾಳೆ? ಆಕೆ ಸಿಕ್ಕರೂ ಶಾಲೆಗೆ ಸೇರಿಸಲು ಮನೆಯವರು ಒಪ್ಪುವರೇ? ಗೊತ್ತಿರಲಿಲ್ಲ. ಆದರೂ ಹುಡುಕಿದೆ! ಸ್ಥಳಗುರುತ್ತಿದ್ದ ಆಕೆಯ ಮನೆಯನ್ನು ಹುಡುಕಿ ಹೋಗಿ ಕೇಳಿದರೆ ಅಂದು ಆಕೆ ಮನೆಯಲ್ಲಿರಲಿಲ್ಲ. ಮತ್ತೊಮೆ ಹೋಗಲು ಧೈರ್ಯವೇ ಸಾಲಿರಲಿಲ್ಲ! ನೆನಪುಗಳು ಚಟಪಟಗುಡುತ್ತಿದ್ದವು. ಕಾಲ ಓಡತೊಡಗಿತ್ತು. ಮಾರ್ಕ್ ಝುಕರ್ಬರ್ಗ್ ಕೂಡ ಕೊಂಚ ಲೇಟಾಗೆ ಫೇಸ್ಬುಕ್ಕನ್ನು ಅನ್ವೇಷಿಸಿದ. ಅದೆಷ್ಟು ಬೇಗ ಆತನೂ ಮುದುಕನಾದ! ಕಲಿಯುಗದ ಪ್ರೇಮದೇವತೆಗಳ ಸಾಲಿಗೆ ಸೇರುವ ಆತನ ಅನ್ವೇಷಣೆಯ ಐದಾರು ವರ್ಷಗಳ ನಂತರ ಆಕೆ ಮತ್ತೊಮೆ ನನಗೆ ಸಿಕ್ಕಳು ಅಥವಾ ನಾನು ಆಕೆಗೆ ಸಿಕ್ಕನೆ? ಇಲ್ಲ, ಆಕೆಯೇ ನನಗೆ ಸಿಕ್ಕಳು. ಅದೆಂತಹ ಆನಂದ! ಸಣ್ಣವನಿದ್ದಾಗ ಕಳೆದುಕೊಂಡ ಆಟಿಕೆಯೊಂದು ಪುನ್ಹ ಸಿಕ್ಕಂಥ, ಅಂಗನವಾಡಿಗೆ ಸೇರಿಸಿದ ಮೊದಲನೇ ದಿನ ಅಮ್ಮನ ದಾರಿಯನ್ನೇ ವರುಷಗಳಂತೆ ಕಾದು, ಅತ್ತು, ಬೇಸತ್ತು ಕೊನೆಗೆ ದೂರದಿಂದ ಆಕೆ ಬರವುದ ಕಂಡಾಗ ಮೂಡುತ್ತಿದ್ದ ಸಂತೋಷದ ಬುಗ್ಗೆಗಳ ಅನುಭವದಂತೆ ಅಂದು ಈಕೆಯೊಟ್ಟಿಗೆ ಮೊದಲ ಬಾರಿಗೆ ಫೋನಿನಲ್ಲಿ 'ಹಲೋ' ಎಂದಾಗ ಆಗಿದ್ದಿತು.

ವರುಷಗಳ ತಪ್ಪಸ್ಸಿಗೆ ಏನೋ ಎಂಬಂತೆ ದೊರೆತ ಆಕೆಯ ಮಾತುಗಳ ಮುಂದೆ ಏನೇನೂ ಬೇಡವಾಯಿತು. ಸ್ಕೂಲು, ಕಾಲೇಜು, ಪ್ರೀತಿ, ಗೆಳೆತನ, ಇಷ್ಟ ಕಷ್ಟಗಳಿಂದಿಡಿದು, ಸಾವು, ನೋವು, ಜೀವ ಜನ್ಮಜನ್ಮಾಂತರಗಳವರಗೆ ಘಂಟೆಗಟ್ಟಲೆ ಮಾತು, ನೂರಾರು ಮೆಸೇಜುಗಳು, ಆಗೊಮ್ಮೆ ಈಗೊಮ್ಮೆ ವಿನಿಮಯ ಮಾಡಿಕೊಳ್ಳುತ್ತಿದ್ದ ಗಿಫ್ಟುಗಳು ಏನೋ ಒಂದು ಅಕಲ್ಪಿತ ಲೋಕವನ್ನೇ ನನ್ನಲ್ಲಿ ಸೃಷ್ಟಿಸಿಬಿಟ್ಟಿದ್ದವು. ಕೆಲವೊಮ್ಮೆ ಪ್ರತಿಭಾರಿಯ ಕನಸ್ಸಿನಂತೆ ಇದೂ ಕೂಡ ಕನಸ್ಸಿರಬಹುದೇ ಎಂದನಿಸಿದ್ದು ಮಾತ್ರ ಸುಳ್ಳಲ್ಲ. ಆದರೂ ಅದೆಷ್ಟೋ ಭಾರಿ ಅದು ನಿಜವಾಗದಿರಲೆಂದು ಬೇಡಿಕೊಂಡು ಪರಿತಪಿಸುತ್ತಿದ್ದೆ. ಎಲ್ಲಿಯೂ ತೋರ್ಪಡಿಕೆಗೆ ಅವಕಾಶವಿಯಲಿಲ್ಲ. ನಟಿಸಿ ಭ್ರಮಿಸಿ ಗಳಿಸುವ ಜರೂರು ನನಗೆ ಅಂದಿಗೂ ಇರಲಿಲ್ಲ. ಇಂದೂ ಬೇಕಿಲ್ಲ! ಹೆಚ್ಚು ಕಡಿಮೆ ನನ್ನ ಗುಣಸ್ವಭಾವ ಅಂದು ಹೇಗಿದ್ದಿತೋ ದಶಕಗಳ ನಂತರ ಇಂದಿಗೂ ಹಾಗೆಯೇ ಇದೆ. ಮಾತಿನ ವಕ್ಕಣಿಯಲ್ಲೋ, ಮುಖಪುಟಗಳಲ್ಲೋ ಮತ್ತೆಲ್ಲೋ ತಾನೊಬ್ಬ ಸುಂದರಾಂಗ, ಸಾತ್ವಿಕ, ಸ್ನೇಹಿತರಿಂದ ಸುತ್ತುವರೆದ ಸೊಗಸುಗಾರನೆಂದು ತೋರ್ಪಡಿಸಿಕೊಂಡು ಪ್ರೀತಿಯನ್ನು ಗಿಟ್ಟಿಸಿಕೊಳ್ಳುವುದು ಕಷ್ಟದ ವಿಚಾರವಾಗಿರಲಿಲ್ಲ. ಆದರೆ ನಾನೆಂದೂ ಆ ಹಾದಿಯನ್ನು ಹಿಡಿಯಲಿಲ್ಲ. ಹಾಗಂತ ನನ್ನಲ್ಲಿ ನ್ಯೂನ್ಯತೆಗಳೇನು ಇರಲಿಲ್ಲ ಎಂದಲ್ಲ. ಆದರೆ ಪಡೆದುಕೊಳ್ಳುವ ಆಸೆಗೆ ಬಲಿಯಾಗಿ ನಾನೆಂದು ಅವುಗಳನ್ನು ಬಚ್ಚಿಡಲಿಲ್ಲ. ಹೀಗೆ ತಂತ್ರಜ್ಞಾನದ ನೆರಳಲ್ಲೇ ಅರಳಿದ ನಮ್ಮಿಬ್ಬರ ಸಂವಹನ ಕೇವಲ ಕಾಣದೆ ಆಡದ ಮಾತುಗಳು ಹಾಗು ಟಕಟಕ ಕುಟ್ಟುವ ಮೆಸೇಜುಗಳಿಗೆ ಸೀಮಿತವಾಗಿದ್ದವು. ಪ್ರತಿದಿನ ರಾತ್ರಿ ಹತ್ತರ ಸುಮಾರಿಗೆ ಶಬರಿಯಂತೆ ಕಾದು ಮನೆಯ ಮೇಲ್ಚಾವಣಿಯ ಮೇಲೆ ತಂಪಾದ ಗಾಳಿಗೆ ಮುಖವೊಡ್ಡಿ ಆಕೆಯ ನಂಬರಿಗೆ ರಿಂಗಾಯಿಸಿದಾಗ ನನ್ನ ಮನದಲ್ಲಿ ಮೂಡುತ್ತಿದ್ದ ಸಂತೋಷದ ಅಲೆಗಳನ್ನಾಗಲಿ, ನಂತರ ಆಕೆಯ 'ಹಲೋ' ಎಂಬ ಉದ್ವೇಗಭರಿತ ಎರಡಕ್ಷರವನ್ನು ಕೇಳಿ ದಿನದ ಜಂಜಾಟವೆಲ್ಲ ಮರೆಯಾಗಿ ಮಂದಹಾಸದಿಂದ ಅರಳುತ್ತಿದ್ದ ನನ್ನ ಮುಖಭಾವವನ್ನಾಗಲಿ ಆಕೆ ಕಾಣಲಿಲ್ಲ. ಆಕೆಯ ಮಾತುಗಳನ್ನು ಅರೆಕಿವುಡನಿಗೆ ಕೇಳುವ ಅಮೂಲ್ಯ ಪದಗಳಂತೆ ಅಷ್ಟನ್ನೂ ನನ್ನ ಮನದೊಳಗೆ ಇಳಿಸಿ ರಾಶಿಯಾಕಿಕೊಳ್ಳುತ್ತಿದ್ದೆ. ಆ ಮಾತುಗಳ ರಾಶಿ ಇಂದಿಗೂ ಹಾಗೆಯೆ ಇವೆ. ಆಗೊಮ್ಮೆ ಈಗೊಮ್ಮೆ ತೀರಾ ಒಬ್ಬಂಟಿ ಎನಿಸಿದಾಗ ಬಂದು ಮಾತಾಡಿಸುತ್ತವೆ. ಭಾರವಾದ ಎದೆಯನ್ನು ಹಗುರಾಗಿಸುತ್ತವೆ. ನನ್ನನು ಆಕೆ ಹೆಚ್ಚಾಗಿ ಇತ್ಯರ್ಥಿಸಿದ್ದು ಈ ತಂತ್ರಜ್ಞಾನದ ಕೊಂಡಿಗಳಲ್ಲಿಯೇ. ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸಲಾಗದ, ಹಾಗೆ ವ್ಯಕ್ತಪಡಿಸಲೊಗಿ ದ್ವಂದ್ವರ್ಥವನ್ನು ಹುಟ್ಟು ಹಾಕಿಕೊಂಡು ಪೇಚಾಡುತ್ತಿದ್ದ ನನ್ನನ್ನು ಆಕೆ ಬಹುವಾಗಿಯೇ ತಪ್ಪು ತಿಳಿದಳು.

ಅಷ್ಟರಲ್ಲಾಗಲೇ ಗಿರ್ರನೆ ತೇಲಿಬಂದ ಜೇಡದ ದೇಹದಂತಿದ್ದ ಡ್ರೋನ್ ಒಂದು ಕಾಗದದ ಪೊಟ್ಟಣವನ್ನು ಹಿಡಿದು ತಂದಿತು. ಅದರ ಕೈಯಿಂದ ಪಡೆದ ಪಾಸ್ತಾವನ್ನು ಪ್ಲೇಟೊಂದಕ್ಕೆ ಸುರಿದುಕೊಂಡೆ. ತಿನ್ನಲ್ಲು ಮಾತ್ರ ಮನಸ್ಸಾಗಲ್ಲಿಲ್ಲ. ಸಣ್ಣವನಿದ್ದಾಗ ದಿನಕ್ಕೆ ನಾಲ್ಕು ಅಕ್ಕಿರೊಟ್ಟಿ, ತುಪ್ಪ ಹಾಗು ಸಾರನ್ನು ಕಲಸಿ ಭಾರಿಸುತ್ತಿದ್ದ ನನಗೆ ಇಂದು ಒಂದು ಗುಕ್ಕೂ ಒಳಗೆ ಸೇರಿಸಲು ಹೆಣಗಾಡುವಂತಾಗಿದೆ. ಇಂದು ಅಂತಹ ಅಕ್ಕಿರೊಟ್ಟಿಯನ್ನು ಮಾಡಿ ಮುದ್ದಿಸಿ ತುಪ್ಪವನ್ನು ಸುರಿದುಕೊಡುವವರ್ಯಾರು. ನನ್ನವರು ಯಾರು. ಕಾಲ ಎಲ್ಲರನ್ನು ಏಕೆ ಅನಂತವಾಗಿಸಲಿಲ್ಲ. ಏಕೆ ಹುಟ್ಟು, ಅದ್ಯಾಕೆ ಸಾವು?

ಆಕೆ ನನ್ನೋಟ್ಟಿಗೆ ಮುನಿಸಿಕೊಳ್ಳತೊಡಗಿದ್ದು ಏಕಿರಬಹದು? ಇಂದಿಗೂ ಉತ್ತರ ತಿಳಿದಿಲ್ಲ. ನನ್ನ ತಳಬುಡ ಇಲ್ಲದ ಮಾತಿಗೂ ಅಥವ ವಿಪರೀತ ಸಲುಗೆಗೋ, (ಸ್ನೇಹದಲ್ಲಿ ಕಡಿಮೆ ವಿಪರೀತ ಎಂಬುವ ಮಾತೆಲ್ಲಿ, ನಾನು ಇದನ್ನು ಒಪ್ಪೆನು), ಅಥವ ನನ್ನ ಜಾತಿಗೋ ಅಥವ ಏಳಿಗೆಗೂ. ಗೊತ್ತಿಲ್ಲ! ಆದರೆ ನನ್ನ ಮೇಲಿನ ಆಕೆಯ ಮುನಿಸು ತಿಳಿಯದಂತೆ ಬೆಳೆಯಿತು. ಅದೊಂದು ದಿನ ತಲೆಗೆಟ್ಟವನಂತೆ ಮೊದಲ ಬಾರಿಗೆ ಆಕೆಯ ಪರೀಕ್ಷಾದಿನವೆಂದೂ ತಿಳಿಯದೆ ತಡರಾತ್ರಿ ಪ್ರೀತಿಯ ನಿವೇಧನೆಯನ್ನು ಮಾಡಿದೆ. ಪಾಪದ ಜೀವಕ್ಕೆ ಸಿಡಿಲು ಬಂದೆರಗಿದ ಅನುಭವವಾಗಿರಬೇಕು! ಅಲ್ಲಿಯವರೆಗೂ ಒಬ್ಬ ಅತ್ಯಾಪ್ತ ಗೆಳೆಯನೆಂಬ ಸಲುಗೆಯಿಂದಿದ್ದ ಆಕೆ ನನ್ನಿಂದ ಇಂತಹ ಕೀಳುಮಟ್ಟದ ಭಾವನೆಯನ್ನು ನಿರೀಕ್ಷಿಸಿರುವುದಕ್ಕೆ ಸಾಧ್ಯವಿಲ್ಲ (ಆದರೆ ನನ್ನ ಮನಮಾತ್ರ ಆ ಮಧುರ ಭಾವನೆಯನ್ನು ಕೀಳುಮಟ್ಟದ್ದು ಎಂದು ಇಂದಿಗೂ ಒಪ್ಪಿಕೊಂಡಿಲ್ಲ, ಅದೆಷ್ಟೇ ಪ್ರಯತ್ನಪಟ್ಟರೂ!) ಆ ಸಂಧಿಘ್ನ ಘಳಿಗೆಯಲ್ಲೂ ಆಕೆ ಕೋಪಗೊಳ್ಳದೆ ನನ್ನನ್ನು ನಯವಾಗಿ ಸಮಾಧಾನಪಡಿಸಿದಳು. ಎದೆಯೊಳಗೆ ನೋವಿನ ಜ್ವಾಲಾಮುಖಿಯೇ ಸ್ಪೋಟಿಸುತ್ತಿದ್ದಾರೂ ನಾನು ಸುಮ್ಮನೆ ಆಕೆಯ ಮಾತನ್ನು ಆಲಿಸತೊಡಗಿದೆ. ಆದರೆ ಯಾವೊಂದು ಮಾತುಗಳೂ ನನಗೆ ಸಾಂತ್ವನವನ್ನು ನೀಡಲಿಲ್ಲ. ಕೊನೆಗೆ 'ಗೆಳೆಯರಾಗಿರುವ' ಎಂಬ ಮಾತನ್ನು ಹೇಳಿ ಫೋನನ್ನು ತುಂಡರಿಸಿದಳು! ಆಕೆ ಒಪ್ಪಿಕೊಳ್ಳದಿದ್ದರೂ ಸರಿ ಆಕೆಯ ಮಾತುಗಳು ಹೀಗೆಯೇ ನನ್ನ ಕಿವಿಯ ಮೇಲೆ ಬೀಳುತ್ತಿರಲಿ ಎಂದು ಮನವು ಚೀರಾಡತೊಡಗಿತು. ಆ ನಡುರಾತ್ರಿಯಲ್ಲೂ ನಾ ಇತ್ತಕಡೆಯಿಂದ ಫೋನಾಯಿಸಿದೆ. ಆಕೆ ಉತ್ತರಿಸಲಿಲ್ಲ. ಅಲ್ಲಿನ ನಂತರದ ಮೂರುದಿನಗಳ ಕಾಲ ಆ ಚಿಗುರು ಜೀವನದ ಮೊಮ್ಮೊದಲ ನೋವಿನ ದಿನಗಳನ್ನು ಕಂಡೆ. ಅಲ್ಲಿಯವರೆಗೂ ಪರೀಕ್ಷೆಯಲ್ಲಿ ಕಡಿಮೆ ಅಂಕವನ್ನು ಪಡೆಯುವುದು ಅಥವ ಕ್ರಿಕೆಟ್ ಆಡುವಾಗ ಶೂನ್ಯ ರನ್ನಿಗೆ ಔಟ್ ಆಗುವುದು ಅಥವಾ ಹಣದ ಅಭಾವದಿಂದ ಸ್ನೇಹಿತರೊಟ್ಟಿಗೆ ಪ್ರವಾಸಕ್ಕೆ ಹೋಗಲಾಗದಿರುವುದೇ ದುಃಖವೆಂದು ತಿಳಿದವನಿಗೆ ತೀರಾ ಹಚ್ಚಿಕೊಂಡ ವ್ಯಕ್ತಿಯೊಬ್ಬರ ದೂರಾಗುವಿಕೆ ಈ ಮಟ್ಟಿನ ನೋವನ್ನು ತಂದುಕೊಡುತ್ತದೆ ಎಂದು ತಿಳಿದಿರಲಿಲ್ಲ. ಎದೆಯ ಮಧ್ಯಭಾಗದಲ್ಲಿ ಮೂಡುತ್ತಿದ್ದ ಆ ಸಂಕಟ ಎಳೆಯ ವಯಸ್ಸಿಗೆ ಸಾಕು ಸಾಕಾಗಿದ್ದಿತು. ಎಣಿಸಿದಂತೆ ಕೆಲದಿನಗಳ ನಂತರ ಆಕೆಯ ಮೆಸ್ಸೇಜು ಬಂದಿತು. 'ಹೇಗಿದ್ದೀಯ' ಎಂಬ ಆ ನಾಲ್ಕಕ್ಷರದ ಪದಗಳನ್ನು ಕಂಡು ಕಣ್ಣು ತುಂಬಿ ಬಂದಿತು. ಅದ್ಯಾವ ಜನ್ಮದ ಮೈತ್ರಿಯೋ ಕಾಣೆ, ಆಕೆಯೆಂದರೆ ಅದೇನೋ ಒಂದು ವರ್ಣಿಸಲಾಗದ ನವಿರಾದ ಅನುಭವ.

ನಂತರದ ಆಕೆಯ ಮಾತಿನ ವರಸೆ ಬಹುವಾಗಿಯೇ ಬದಲಾಗಿದ್ದಿತು. ಗೆಳೆಯನೆಂಬ ಆಪ್ತತೆ ಮಾತ್ರ ಎಂದಿನಂತೆಯೇ ಇದ್ದರೂ ಆಕೆ ನಮ್ಮ ಸಂಭದಕ್ಕೆ ಇಂತಿಷ್ಟೇ ಎಂಬೊಂದು ಬೇಲಿಯನ್ನು ಹಾಕಲು ಬಯಸಿದಂತೆ ಕಾಣುತ್ತಿದ್ದಳು. ನಾನು ಅವಳನ್ನು ಇಷ್ಟಪಟ್ಟಂತೆ ಆಕೆಯೂ ಒಬ್ಬನನ್ನು ಇಷ್ಟ ಪಡುತ್ತಿರುವಳೆಂದೂ ಹೇಳತೊಡಗಿದಳು. 'ನಿನ್ನನು ಪ್ರೀತಿಸೆನು' ಎಂದಾಗ ಆದ ದುಃಖಕ್ಕಿಂತ 'ನಾನು ಇನ್ನೊಬ್ಬನ್ನನ್ನು ಇಷ್ಟಪಡುತ್ತಿರುವೆ' ಎಂಬ ಮಾತಿನಿಂದ ಆದ ನೋವು ಮಾತ್ರ ಚೂರಿಯಿಂದ ಎದೆಗೆ ಚುಚ್ಚಿದಂತಿತ್ತು. ಆದರೂ ಸಂಬಾಳಿಕೊಂಡೇ. ನನ್ನ ಪ್ರೀತಿಯಷ್ಟೇ ಆಕೆಯದೂ ಅಮೂಲ್ಯವಾದದು. ಮಧುರವಾದುದು. ಆತ ಆಕೆಗೆ ಸಿಕ್ಕಿ ಇಬ್ಬರು ಸಂತೋಷವಾಗಿರಲಿ ಎಂದುಕೊಂಡು ಸಮಾಧಾನ ತಂದುಕೊಂಡೆ. ಆದರೆ ಆಕೆಯದೂ ನನ್ನ ಪಾಡೇ! ಅವಳಿಷ್ಟ ಪಡುವ ಹುಡುಗನೂ ಬೇರೊಬ್ಬಳನ್ನು ಇಷ್ಟ ಪಡುತ್ತಿರುವನೆಂದು ಆಕೆ ನೊಂದಿದ್ದಳು. ಜಾತಿಯಲ್ಲಿ ಆಕೆಯದೇ ಆದ ಅವನನ್ನು ಆಕೆ ಇಷ್ಟ ಪಟ್ಟಿದ್ದೇ ಯಾಕೋ ನನಗೆ ಒಂದು ಆಶ್ಚರ್ಯಕರ ಸಂಗತಿ. 'ನಿಜವಾದ ಪ್ರೀತಿ ಎಂದೂ ಸೋಲದು, ಸಮಾಧಾನ ತಂದುಕೊ' ಎಂದು ತಿಳಿಹೇಳತೊಡಗಿದೆ. ಆಕೆಯ ನೋವಿನಲ್ಲಿ ಭಾಗಿಯಾಗಲು ಪ್ರಯತ್ನಿಸಿದೆ. ಅಳುತ್ತಲೇ ನಗತೊಡಗಿದೆ. ಆದರೆ ಮೊದಲ ಬಾರಿಗೆ ನನಗೆ ಆಕೆಯ ಮೇಲೆ ಮುನಿಸು ಬರತೊಡಗಿದ್ದು ಕೆಲತಿಂಗಳ ಅಂತರದಲ್ಲಿಯೇ ಆಕೆ ಈತನನ್ನು ಮರೆತು ಮತ್ತೊಬ್ಬನ್ನನ್ನು ಇಷ್ಟಪಡುತ್ತಿರುವೆನೆಂದು ಹೇಳಿದಾಗ! ತನ್ನ ಮೊದಲ ಪ್ರೀತಿಯನ್ನು ಇಷ್ಟು ಬೇಗ ಮರೆತು ಮತೊಬ್ಬ ತನ್ನನು ಪ್ರಪೋಸ್ ಮಾಡಿದ ಎಂದಾಗ ನನ್ನ ಮೈಯೆಲ್ಲ ಹುರಿದುಹೋಯಿತು. ಸಿಕ್ಕರೂ ಸಿಗದಿದ್ದರೂ ತಾವು ಮೊದಲ ಪ್ರೀತಿಯನ್ನು ಅಷ್ಟು ಸುಲಭವಾಗಿ ಬಿಟ್ಟುಗೂಡಕೂಡದು ಎಂಬ ನನ್ನ ತರ್ಕರಹಿತ ನೀತಿಗೆ ಅವಳನ್ನೂ ಒಳಪಡಿಸಿದೆ. ಸಿಟ್ಟು ಜಗಳಕ್ಕೆ ಹಾದಿಯಾಯಿತು. ಮನಸ್ತಾಪ ವಿಪರೀತವಾಯಿತು. ಅಷ್ಟಾದರೂ ನಾನೇ ಆಕೆಯ ಹಿಂದೋಗಿ ಕ್ಷಮೆಯಾಚಿಸುತ್ತಿದ್ದೆ. ಹಲವು ಭಾರಿಯ ನಂತರ ಅದು ನನ್ನ ಸ್ವಾಭಿಮಾನಕ್ಕೆ ಧಕ್ಕೆ ತರುವಂತಿತ್ತು. ಮುಂಗಾರು ಮಳೆಯಂತೆ ಬಿಡದಂತೆ ಉದುರುತ್ತಿದ್ದ ನಮ್ಮ ಮಾತುಗಳು ಕ್ಷೀಣಿಸತೊಡಗಿದವು.

ಬೇಕಂತಲೇ ಏನೋ ಇಂದು ಸೆಕೆ ಕಡಿಮೆಯಾಗಿದೆ. ಮೋಡಗಳೂ ಕನೆ ಮೊಸರಂತೆ ಅಲ್ಲಲಿ ಚಲ್ಲಿವೆ. ಆಕೆಯ ಮನೆಯೂ ನಾನಿರುವ ಜಾಗದಿಂದ ಹೆಚ್ಚೇನು ದೂರವಿರಲಿಲ್ಲ. ಜೀವಮಾನದಲ್ಲೇ ಒಮ್ಮೆಯೂ ಹೋಗದ ಅಲ್ಲಿಗೆ ಇಂದು ಏಕೋ ಹೋಗುವ ಮನಸ್ಸಾಯಿತು. ಸ್ವಯಂಚಾಲಿತ ಕುರ್ಚಿಯಿಂದ ನಿಧಾನವಾಗಿ ಆಕೆಯ ಮನೆಯ ಹಾದಿಯನ್ನಿಡಿದೆ. ಊರಿನಲ್ಲಿದ್ದ ಮನೆಯಿಂದ ಬೈಕಿನಲ್ಲಿ ಪೇಟೆಗೆ ಬಂದರೆ ಸುತ್ತಿ ಬಳಸಿ ಅದೆಷ್ಟು ಸಾರಿ ಈಕೆಯ ಮನೆಯ ಮುಂದೆ ಹಾದು ಹೋಗುತ್ತಿರಲಿಲ್ಲ. ಇಳಿಸಂಜೆಯ ಕಣ್ತುಂಬಿಕೊಳ್ಳಲು ಬೆಟ್ಟದ ಬಳಿಗೆ ಹೋಗುವಾಗ, ಅಲ್ಲಿಂದ ವಾಪಸ್ಸು ಬರುವಾಗ, ಯಾವುದೊ ಮೂಲೆಯಲ್ಲಿರುವ ಮಾರ್ಕೆಟಿನ ಹಾದಿಯನ್ನು ಹಿಡಿದಾಗ, ದೇವಸ್ಥಾನಕ್ಕೆ ಹೋಗುವಾಗ ಅಥವಾ ಆಕೆಯ ನೆನೆಪು ಅತಿಯಾಗಿ ಕಾಡಿದಾಗ ಹೀಗೆ ಇಲ್ಲದ ಸಲ್ಲದ ಕಾರಣಗಳನಿಟ್ಟುಕೊಂಡು ನಾನು ಆಕೆಯ ಮನೆಯ ಮುಂದೆ ಅಗಣಿತ ಸಂಖ್ಯೆಯಲ್ಲಿ ಹಾದುಹೋಗಿರುವೆ. ಬಹುತೇಕ ನನ್ನೊಟ್ಟಿಗೆ ಮಾತನ್ನು ನಿಲ್ಲಿಸೇಬಿಟ್ಟಿದ್ದ ನನ್ನ ಪ್ರಾಣಸ್ನೇಹಿತೆಯನ್ನು ಕಾಣಲು ಕಣ್ಣುಗಳು ಹಾತೊರೆಯುತ್ತಿದ್ದವು. ಆದರೆ ವಿಧಿಯಾಟವೋ ಏನೋ ಒಮ್ಮೆಯೂ ಅದು ಸಾಧ್ಯವಾಗಲ್ಲಿಲ್ಲ. ಅಲ್ಲದೆ ಟ್ರಾಫಿಕ್ ರೂಲ್ಸ್ ಎನ್ನುತ ತಲೆಯ ತುಂಬಾ ISI ಮಾರ್ಕಿನ ಹೆಲ್ಮೇಟುಗಳೇ ಮುಖದ ತುಂಬಾ ಅಂಟಿಸಿಕೊಂಡಿರುವಾಗ ಒಂದು ಪಕ್ಷ ಆಕೆಯೇ ನನ್ನ ಕಂಡರೂ ಗುರುತಿಸಿಲಾರಳು!

ಒಂದೇ ಒಂದು ದಿನವೂ ತಪ್ಪದೆ ವರ್ಷಗಳ ಕಾಲ ಹರಟಿದ್ದ ನಾವುಗಳು ವರ್ಷಕೊಂದು ಹುಟ್ಟುಹಬ್ಬಕ್ಕೆ ಹಾರೈಸುವ ಗೆಳೆಯರೇನೋ ಎಂಬ ಮಟ್ಟಿಗೆ ಬದಲಾದೆವು. ಕಾಲದ ಮಾಹೆಯೇ ಹಾಗೆ! ಯಾರನ್ನು ಎಂತವರನ್ನಾಗಿಯೂ ಬದಲಾಗಿಸುತ್ತದೆ. ಆದರೆ ನನ್ನ ಮನದಲ್ಲಿ ಮೊದಲ ಪ್ರೀತಿಯ ಚಿಗುರು ಕೊನೆಯುಸಿರನ್ನೆಳೆಯದಿದ್ದರೂ ನನ್ನ ಕೆಲವೇ ಕೆಲವು ಅತ್ಯಾಪ್ತ ಸ್ನೇಹಿತರಲ್ಲಿ ಆಕೆಯೂ ಒಬ್ಬಳು ಎಂಬುದ ಅದು ಮರೆತಿರಲಿಲ್ಲ. ನನ್ನ ಕಷ್ಟ ದುಃಖಗಳಿಗೆ ಸಾಂತ್ವನ ಹೇಳಲು, ಸುಖ ಸಂತೋಷಗಳನ್ನು ಹಂಚಿಕೊಳ್ಳಲು, ವಿಪರೀತವಾಗಿ ಕಾಡಿದ ಖಿನ್ನತೆ ಹಾಗು ಆತಂಕವನ್ನು ನಿವಾರಿಸಿಕೊಳ್ಳಲು ನನಗೆ ನನ್ನ ಗೆಳತಿಯ ಜರೂರು ಇದ್ದಿತು. ಪ್ರತಿದಿನ ಬಿಡುವು ದೊರೆತಾಗಲೆಲ್ಲ ಅದು ನೆನೆನೆದು ಮರುಗುತ್ತಿತ್ತು. ತನ್ನ ಪ್ರೀತಿ ಪ್ರೇಮವೆಂಬ ಎಲ್ಲಾ ತರಹದ ಭಾವನೆಗಳನ್ನು ಅತ್ತಿಕ್ಕಿಕೊಂಡು ಕೊನೆಯ ಪಕ್ಷ ಕೇವಲ ಸ್ನೇಹಿತರಾಗಿಯೇ ಇರಲು ಅದು ಬಯಸತೊಡಗಿತು. ಜೀವದ ಗೆಳತಿಯನ್ನು ಅದು ಪರಿತಪಿಸುತ್ತಿತ್ತು. ಆದರೆ ಆಕೆಗೆ ಅದ್ಯಾವುದೂ ಗೊತ್ತಿರಲೇ ಇಲ್ಲ. ಕೊನೆಕೊನೆಗೆ ವರ್ಷಕ್ಕೊಮ್ಮೆ ಬರುವ ನನ್ನ ಹುಟ್ಟುಹಬ್ಬಕ್ಕೂ ಸಂದೇಶವನ್ನು ಕಳಿಸುವುದನ್ನ ನಿಲ್ಲಿಸಿದಳಾಕೆ. ಅಷ್ಟಾಗಿ ಬೇಡವಾದನೆ ಆಕೆಗೆ ನಾನು?

ವರುಷಗಳು ಕಳೆದವು. ಆಕೆಯೊಟ್ಟಿಗಿನ ಕೆಲದಿನಗಳ ನೆನಪು ನನ್ನಲ್ಲಿ ಹೆಮ್ಮರವಾಗಿ ಬೆಳೆದು ನಿಂತಿತ್ತು. ಅದೊಂದು ದಿನ ತಟ್ಟನೆ ಬಂದ ಆಕೆಯ ಮೆಸೇಜೊಂದನ್ನು ತೆರೆಯುವ ಮೊದಲೇ ಮನಸ್ಸು ಅದೇನೆಂದು ಊಹಿಸಿತು! ಆಕೆಯ ಮದುವೆಯ ಆಮಂತ್ರಣ ಪ್ರತಿಯ ಫೋಟೋ. ಸಂತೋಷದ ಸಂಗತಿಯೆಂದರೆ ಹುಡುಗ ಆಕೆಯ ಎರಡನೆಯ ಪ್ರೀತಿ. ಯಾವುದೊ ಆನ್ಲೈನ್ ವೆಬ್ಸೈಟಿನಲ್ಲಿ ತಯಾರು ಮಾಡಿ ಕಳಿಸಿದ್ದ ಆ ಫೋಟೋ ನನ್ನ ವರುಷಗಳ ತುಮುಲಗಳಿಗೆ ಕೊನೆಗೂ ಪೂರ್ಣವಿರಾಮವೊಂದನ್ನು ಜಡಿದಿತ್ತು. ಕಡೆ ಪಕ್ಷ ಖುದ್ದಾಗಿಯೇ ಒಂದೆರೆಡು ಪದಗಳನ್ನು ಟೈಪ್ ಮಾಡಿ ಕಳಿಸಲಾಗದ ಆಕೆ ನನ್ನ ಅದೆಷ್ಟು ದೂರವಾಗಿಸಿದ್ದಾಳೆ ಎನ್ನುವುದು ಅರಿವಾಯಿತು. ಅದಾದೆಲ್ಲ ಆಯಿತು, ನನ್ನ ಪರಮಾಪ್ತ ಗೆಳತಿಯವಳು. ಒಂದೆರೆಡು ದಿನ ಮೊದಲೇ ಹೋಗಿ ಮದುವೆಯ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಈ ನೆನಪುಗಳ ಬುತ್ತಿಗೆ ಇನ್ನಷ್ಟು ಸವಿನೆನಪುಗಳ ರಾಶಿಗಳನ್ನು ಸುರಿದುಕೊಳ್ಳಬೇಕೆನ್ನುವ ಆಸೆಗೂ ತಣ್ಣೀರೆರಚಲಾಯಿತು. ಒಂದು ಫೋನಾಯಿಸಿ ಅಥವಾ ತುಸುದೂರದಲ್ಲೇ ಇದ್ದ ಮನೆಗೊ ಬಂದು ಆಮಂತ್ರಣ ಪ್ರತಿಯನ್ನು ಕೊಡಲಾಗದ ಆಕೆಯ ಮದುವೆಗೆ ನಾನ್ಯಾಕೆ ಹೋಗಲಿ!? ಸ್ವಾಭಿಮಾನ ಹೆಚ್ಚೆತ್ತಿತು.

ಸರ್ವವೂ ಯಂತ್ರಮಯವಾಗಿರುವ ಈ ಕಾಲದಲ್ಲಿ ಮೆನೆಯ ವಿಳಾಸವನ್ನು ಹೇಳಿದರೇನೇ ತಂದು ಬಿಡುವ ವೀಲ್ಚೇರು ನನ್ನನ್ನು ಆಕೆಯ ಮನೆಯ ಮುಂದೆ ತಂದು ನಿಲ್ಲಿಸಿದ್ದೆ ತಿಳಿಯಲಿಲ್ಲ. ಮೆನೆಯ ಹೊರಗೊಳಗೆ ಓಡಾಡುತ್ತಿದ್ದ ಅಲ್ಲಿನ ಯಾರೊಬ್ಬರಲ್ಲೂ ದುಃಖದ ಛಾಯೆಯಾಗಲಿ, ಅಗಲಿಕೆಯ ನೋವಾಗಲಿ ಕಾಣುತ್ತಿರಲಿಲ್ಲ. ಬದಲಾಗಿ ಯಾವುದೊ ಕಾರ್ಯಕ್ರಮಕ್ಕೂ ಏನೋ ಎಂಬಂತೆ ಸಂತೋಷದ ತಯಾರಿ ನೆಡೆಯುತ್ತಿತು. ಮಾನವ ಜೀವಿಗಳಿಗಿಂತ ಹೆಚ್ಚಾಗಿ ಡ್ರೋನ್ಗಳೇ ಝುಯಿಂಗುಡುತ್ತಾ ಹಾರಾಡುತ್ತಿದ್ದವು. ಓಲ್ಡ್ ಏಜ್ ಹೋಮಿನಲ್ಲಿದ್ದರೂ ಸಮಾಜದಲ್ಲಿ ತುಸುವಾಗಿ ಗುರುತಿಸಿಕೊಂಡಿದ್ದ ನನ್ನನು ಹೆಣ್ಣುಮಗಳೊಬ್ಬಳು ಮನೆಯೊಳಗೇ ಬರಮಾಡಿಕೊಂಡಳು. ಒಂದೆರೆಡು ಮಾತಿನ ನಂತರ ಈಕೆ ಆಕೆಯ ಮೊಮ್ಮಗಳೆಂಬುದು ತಿಳಿಯಿತು. ತುಸು ಸಮಯದಲ್ಲಿ ಆಕೆ ಬೇರೇನೋ ಕೆಲಸದ ನಿಮಿತ್ತಾ ಅಲ್ಲಿಂದ ಎದ್ದುಹೋದಳು. ನಾನು ನನ್ನ ವೀಲ್ಚೇರಿನಿಂದ ಎದ್ದು ಪಕ್ಕದಲ್ಲಿದ್ದ ಸೋಫಾದ ಮೇಲೆ ಆಸೀನನಾದೆ. ಮೊದಲ ಬಾರಿ ಆಕೆಯ ಮನೆಗೆ ಬಂದರೆ ಇಂದು ಆಕೆಯೇ ಇಲ್ಲ. ಇದ್ದಿದ್ದರೆ ಸಂತೋಷಪಡುತ್ತಿದ್ದಳೋ, ಮುನಿದುಕೊಳ್ಳುತ್ತಿದ್ದಳೋ ಅಥವಾ ಗುರುತೇ ಹಿಡಿಯದಿರುತ್ತಿದ್ದಳೋ ತಿಳಿಯದು. ಹಾಲಿನ ಒಂದು ಮೂಲೆಯಲ್ಲಿದ್ದ ರೂಮಿನ ಬಾಗಿಲಿಗೆ ಒರಗಿ ಐದಾರು ವರ್ಷದ ಹೆಣ್ಣುಮಗುವೊಂದು ನನ್ನನ್ನೇ ನೋಡುತ್ತಾ ನಿಂತಿತ್ತು. ಮೊದಲಬಾರಿಗೆ ಆಕೆಯನ್ನು ಕಂಡ ಚಿತ್ರ ಒಮ್ಮೆಲೇ ನನ್ನ ಕಣ್ಣ ಮುಂದೆ ಹಾದುಹೋದಂತಾಯಿತು. ಅದೇ ಬಣ್ಣ, ಅದೇ ಕಣ್ಣು, ಅದೇ ಮೂಗು, ಅದೇ ಘಾಡ ಕಪ್ಪುಬಣ್ಣದ ಕೂದಲು! ಕೈಬೀಸಿ ಆಕೆಯನ್ನು ನನ್ನ ಬಳಿಗೆ ಬರುವಂತೆ ಕರೆದೆ. ಮೊದಲು ಬರಲೊಲ್ಲೆ ಎಂದು ತಲೆಯಾಡಿಸಿದ ಆಕೆ ನಂತರ ನಿಧಾನವಾಗಿ ಒಂದೊಂದೇ ಹೆಜ್ಜೆಯನ್ನು ಪೋಣಿಸುತ ನನ್ನ ಬಳಿಗೆ ಬಂದಳು. ಆಕೆಯನ್ನು ಬಳಿಗೆ ಕರೆದು ಕೂರಿಸಿಕೊಂಡು ವಿಚಾರಿಸಿದೆ. ಈಕೆ ಆಕೆಯ ಮರಿಮಗಳು! ಕೆಲಕ್ಷಣಗಳ ಮೊದಲು ಮಾತಾಡಿದ ಹೆಣ್ಣುಮಗಳ ಮಗಳಿವಳು. 'ನೀನು ನಿನ್ನ ದೊಡ್ಡಜ್ಜಿಯಂತೆಯೇ ಇದ್ದೀಯ' ಎಂದು ಇಂಗ್ಲೀಷಿನಲ್ಲಿ ಹೇಳಿದಾಗ ನಾಚಿದ ಆಕೆ ನಾನು ಯಾರು, ನನ್ನ ಹೆಸರೇನೆಂದು ಕೇಳಿದಳು.

ಹಾಗೆಯೆ ಮಾತಾಡುವಾಗ ನನ್ನ ದೃಷ್ಟಿ ಗೋಡೆಯ ಮೇಲೆ ತೂಗುಹಾಕಿದ ಮರದ ಪೇಂಟಿಂಗ್ ಒಂದರ ಮೇಲೆ ಬಿದ್ದಿತು. ಕೆಲಕಾಲ ಅದನ್ನೇ ನೋಡುತ್ತಿದ್ದ ನನ್ನ ಕಣ್ಣುಗಳಲ್ಲಿ ಇದ್ದಕ್ಕಿಂದಂತೆ ನೀರು ಗಳಗಳನೆ ಹರಿಯತೊಡಗಿತು! ಆಕೆಯ ಮರಿಮಗಳ ಪುಟ್ಟ ಕೈಗಳು ನನ್ನ ಕಣ್ಣುಗಳನ್ನು ಒರೆಸತೊಡಗಿದವು. ಆಕೆಯೇ ಬಂದು ನನ್ನ ಸಮಾಧಾನಮಾಡಿದ ಅನುಭವವಾಯಿತು. ಗೋಡೆಯಲ್ಲಿ ನೇತಾಕಿದ್ದ ಪಟ ನಾನು ಆಕೆಗೆ ಕೊನೆಯ ಬಾರಿಗೆ ಕೊಟ್ಟ ಉಡುಗೊರೆಯಾಗಿದ್ದಿತು. ನನ್ನ ಕಂಡರೂ ಗುರುತಿಡಿಯಲಾರಳು ಎಂದುಕೊಂಡಿದ್ದ ನಾನು ಐವತ್ತು ವರ್ಷಗಳಿಗೂ ಮಿಗಿಲಾದ ನನ್ನ ಉಡುಗೊರೆಯನ್ನು ಹಾಗೆಯೆ ಸಂರಕ್ಷಿಸಿಕೊಂಡು ಬಂದಿದ್ದಾಳೆ ಎಂಬುದ ಕಂಡು ದುಃಖ ಉಮ್ಮಳಿಸಿ ಬಂದಿತು. ತಕ್ಷಣ ಏನೋ ನೆನಪಾಗಿ ಆ ಮಗುವಿಗೆ ಪಟವನು ಬಿಚ್ಚಿ ತರಲು ಕೇಳಿದೆ. ದಶಕಗಳ ಹಳೆಯ ಪಟ ನನ್ನ ಕೈಸೇರಿತು. ಅಂದು ಈ ಉಡುಗೊರೆಯನ್ನು ಆಕೆಗೆ ಕೊಡುವ ಮುನ್ನ ಒಂದಿಷ್ಟು ಸಾಲುಗಳನ್ನು ಆಕೆಗಾಗಿ ಬರೆದು ಯಾರಿಗೂ ಕಾಣದಂತೆ ಅದರ ಹಿಂದಕ್ಕೆ ಇರಿಸಿದ್ದೆ. ನಿಧಾನವಾಗಿ ಪಟವನ್ನು ಬಿಚ್ಚಿ, ಮಡಚಿ ಇಟ್ಟಿದ್ದ ಆ ಕಾಗದದ ಚೂರನ್ನು ದಶಗಳಗಳ ನಂತರ ಮೊದಲ ಭಾರಿಗೆ ಹೊರತೆಗೆದೆ. ಅದು ಕಂದು ಬಣ್ಣಕ್ಕೆ ತಿರುಗಿ ಒಣಗಿದ ಹಪ್ಪಳದಂತಾಗಿದ್ದಿತು. ನಿಧಾನವಾಗಿ ಅದನ್ನು ಬಿಡಿಸಿ ಓದ ತೊಡಗಿದೆ...

'ಹಲೋ.. ಎಂಬ ಉದ್ವೆಗಭರಿತ ನಿನ್ನ ಆ ಎರಡಕ್ಷರದ ಛಾಯೆ ನನ್ನ ಮೇಲೆ ಅದೆಷ್ಟಿದೆ ಎಂದರೆ ಇಡೀ ಜೀವಮಾನಪೂರ್ತಿ ನಿನಗೆ ಫೋನಾಯಿಸಬೇಕೆಂಬ ಹೆಬ್ಬಯಕೆ ನನ್ನದು. ನನ್ನ ಸರ್ವ ದುಃಖದುಮ್ಮಾನಗಳಿಗೂ ನಿನ್ನ ಹಲೋ ಎಂಬ ಆ ಎರಡಕ್ಷರದ ಪದವೇ ಔಷಧ ಎಂಬುದು ನಿನಗೆ ತಿಳಿದಿರುವುದಿಲ್ಲ. ಇದು ಉತ್ಪ್ರೇಕ್ಷೆಯಲ್ಲ. ತೋರ್ಪಡಿಕೆಯ ಪ್ರೀತಿಯೂ ಅಲ್ಲ. ಸೂರ್ಯಕಾಂತಿ ಹೂವಿಗೆ ಸೂರ್ಯನ ದರ್ಶನವಾದಂತೆ, ಹಸಿದ ಕರುವಿಗೆ ಅಮ್ಮನ ಕೊರಳಘಂಟೆಯ ಸದ್ದು ಕೇಳಿಸಿದಂತೆ, ಬಿರಿದ ನೆಲಕ್ಕೆ ಮಳೆಯ ಸಿಹಿಸಿಂಚನವಾದಂತೆ, ನೀನು ನನಗೆ. ಇದು ಮಾನವ ಸಂಬಂಧದ ಯಾವ ಕೆಟಗರಿಯೂ ಅಲ್ಲ. ಇದು ಕೇವಲ ಭಾವಸಂಭಂದದ ವರ್ಣನಾತೀತವಾದ ಬೆಸುಗೆ. ಇದು ನಿನಗೆ ಅರಿಯದು. ನಿನ್ನ ಉಪಸ್ಥಿತಿಯಿಂದ ನನ್ನಲ್ಲಿ ಹೀಗೆ ಮೂಡುತಿದ್ದ ಜೀವನೋತ್ಸಹದ ಅಲೆಗಳಿಂದಾಗಿಯೇ ನೀನು ನನಗೆ ಇಷ್ಟವಾಗುತ್ತೀಯ ವಿನಃ ಪ್ರೀತಿ ಪ್ರೇಮ ಅಂದ ಚೆಂದಗಳೆಂಬ ಮಾಹೆಗಳಿಂದಲ್ಲ... ' ಎಂದು ಬರೆದಿದ್ದ ನಾಲ್ಕಾರು ಸಾಲುಗಳನ್ನು ಓದುವಷ್ಟರಲ್ಲಿ ನನ್ನ ಕಪೋಲಗಳೆರಡೂ ಒದ್ದೆಯಾಗಿದ್ದವು.

ಎಲ್ಲಿಂದಲೋ ಬೀಸಿದ ತಂಗಾಳಿ ನನ್ನ ಬಂದು ಅಪ್ಪಳಿಸಿತು. ಆರು ವರ್ಷದ ಆಕೆಯ ಮರಿಮಗಳು ಅಷ್ಟರಲ್ಲಾಗಲೇ ನನ್ನ ಎದೆಯ ಮೇಲೆ ತಲೆಯೊರಗಿ ನಿದ್ರೆಗೆ ಜಾರಿದ್ದಳು.......

Friday, August 3, 2018

ದೇಶಕಟ್ಟುವ ಫ್ಯಾಂಟಸಿ...

ಇತಿಹಾಸದ ಕಾಲಘಟ್ಟದಲ್ಲಿ ಐವತ್ತು ವರ್ಷಗಳ ಸಮಯ ತೀರಾ ಚಿಕ್ಕದು. ಅರ್ದ ತಲೆಮಾರಿನ ಈ ಐದು ದಶಕಗಳಲ್ಲಿ ಹೆಚ್ಚೆಂದರೆ ಏನೆಲ್ಲಾ ಜರುಗಬಹುದು? ಸಾಮಾಜಿಕ ಬೆಳವಣಿಗೆಯ ದೃಷ್ಟಿಯಲ್ಲಿ ನೋಡುವುದಾದದರೆ ದಾರಿಕಾಣದ ಹಳ್ಳಿಗಳಿಗೆ ರಸ್ತೆಗಳ ಮೇಣವೊಂದಿಷ್ಟು ಅಂಟಿಕೊಳ್ಳಬಹುದು, ಸೂರು ಕಾಣದ ತಲೆಗಳ ಮೇಲೆ ಸ್ವಂತ ಮನೆಯೊಂದರ ನೆರಳು ಮೂಡಬಹುದು, ಬೆಳಕು ಕಾಣದ ಮನೆಗಳು LED ಬಲ್ಬುಗಳ ಕಾಂತಿಯಿಂದ ಮಿನುಗಬಹುದು ಅಥವಾ ಅಷ್ಟೂ ಸರ್ಕಾರೀ ಸ್ಕೂಲುಗಳ ಜಾಗದಲ್ಲಿ ತಕಿದಿಮಿತ ಕುಣಿಯುವ ಕಷ್ಟಪಟ್ಟು ಇಷ್ಟಪಡುವ ಪ್ರೈವೇಟ್ ಸ್ಕೂಲುಗಳು ತಲೆಯೆತ್ತಬಹುದು, ಎಲ್ಲವೂ ಗೂಗಲ್ ಇಂಟರ್ನೆಟ್ಮಯವಾಗುವ ಹಾದಿಯಲ್ಲಿ ಮಾನವ ಓದು ಬರಹಗಳನ್ನೇ ಮರೆತು ಕೇವಲ ಮಾಂಸದ ಮುದ್ದೆಯಂತಾಗಲೂಬಹುದು. ಒಟ್ಟಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸರ್ವೋತೋಮುಖ ಅಭಿವೃದ್ಧಿ ಎಂದರೆ ಇವಿಷ್ಟೇ ಎಂದರೂ ಅದು ಉತ್ಪ್ರೇಕ್ಷೆಯಾಗದು! ಆದರೆ ಅಲ್ಲೊಂದು ದೇಶವಿತ್ತು. ದೇಶವೆನ್ನುವುದಕ್ಕಿಂತ ಮರಳುಗಾಡಿನ ರಾಶಿ ರಾಶಿ ಗುಡ್ಡೆಗಳ ಪ್ರದೇಶವೆನ್ನಬಹುದು. ಸುಟ್ಟು ಕರಕಲಾಗುವ ಉರಿಬಿಸಿಲಿಗೆ ಅಲ್ಲಿ ಮಾನವರೋಗಲಿ ಕನಿಷ್ಠ ಒಂದೆರೆಡು ಪ್ರಾಣಿಗಳೂ ಕಾಣಲು ಸಿಗುತ್ತಿರಲಿಲ್ಲ.ನಮ್ಮ ರಾಜ್ಯಕ್ಕಿಂತಲೂ ಸಣ್ಣದಾದ ಆ ಭೂಪ್ರದೇಶ ಅಕ್ಷರ ಸಹ ಮರಳುಗಾಡಿನ ಆಗರ. ಅಲ್ಲೊಂದು ಇಲ್ಲೊಂದು ಗುಂಪು ಜನಗಳು ನೇಸರರಾಜನೊಟ್ಟಿಗೆ ಸೆಣೆಸುತ್ತಾ ವಾಸಿಸುತ್ತಿದ್ದದ್ದು ಬಿಟ್ಟರೆ ಉಳಿದಷ್ಟೂ ಜಾಗ ಬಟಬಯಲಿನ ಜನವಿರಳ ಪ್ರದೇಶವಾಗಿತ್ತು. ದಿನಕೊಂದು ಮುಡಿಯಷ್ಟು ಅನ್ನವನ್ನು ಬಿಟ್ಟರೆ ಖರ್ಜೂರದ ಹಣ್ಣುಗಳೇ ಇವರಿಗೆ ಮೂರೊತ್ತಿನ ಆಹಾರ! ವರ್ಷಕೊಮ್ಮೆ ಅಥವಾ ಕೆಲವೊಮ್ಮೆ ಒಮ್ಮೆಯೂ ಬಾರದ ಮಳೆರಾಯನಂತೂ ಇಲ್ಲಿ ಒಂದು ನರಪಿಳ್ಳೆಯೂ ನಂಬಿ ಬದುಕುತ್ತಿರಲಿಲ್ಲ. ಇನ್ನು ನೀರನಂತೂ ಕೇಳಬೇಕೆ, ಅದು ಜಗತ್ತಿನ ಅತಿ ಕೊನೆಯ ಹನಿಯೊ ಎಂಬಂತೆ ಕಾಪಾಡಿಕೊಂಡು ಬರುತ್ತಿದ್ದರು. ಅದೆಷ್ಟೇ ಬಾಯಾರಿದರೂ ದಿನಕೊಂದು ಸಣ್ಣ ಲೋಟದ ನೀರನಷ್ಟೇ ಕುಡಿಯಲು ಶಕ್ತರಾಗಿದ್ದರು! ಇಂತಹ ಬರಬಿದ್ದ ಮರಳು ರಾಶಿಯಲ್ಲಿ ಮೇಲೆ ಹೇಳಿದ ಐವತ್ತು ವರ್ಷಗಳಲ್ಲೇ ಏನೆಲ್ಲಾ ಜರುಗಿರಬಹದು? ಹಳ್ಳಿಯೊಂದು, ಊರೊಂದು ಹುಟ್ಟಿರಬಹುದು. ಹುಟ್ಟಿದರೂ ಈ ಬೆಂಕಿಯ ನೆಲದಲ್ಲಿ ಜೀವ ಪಣಕ್ಕಿಟ್ಟು ಬದುಕುವುದಕ್ಕಿಂತ ಮೂರ್ಖತನ ಮತ್ತೊಂದಿರದು. ಅಥವಾ ಅಕ್ಕಪಕ್ಕದ ಯಾವುದಾದರೊಂದು ಸದೃಢ ದೇಶ ನ್ಯೂಕ್ಲಿಯರ್ ಪ್ಲಾಂಟ್ಗಳನ್ನೋ ಅಥವಾ ಪವನಶಕ್ತಿ ಕೇಂದ್ರಗಳನ್ನೂ ನಿರ್ಮಿಸಿದ್ದಿರಬಹುದು. ಅಥವಾ ಇದ್ದ ಮೂರು ಮತ್ತೊಂದು ಕುಟುಂಬಗಳೂ ಕಣ್ಮರೆಯಾಗಿ ಕೇವಲ ಬಿಸಿಲಿನ ಮೊರೆತವೇ ಸರ್ವವ್ಯಾಪ್ತಿಯಾಗಿದ್ದಿರಬಹುದು, ಅಲ್ಲವೇ?

ಬಿಲ್ಲಕುಲ್ ಇಲ್ಲ!

ಹೌದು. ಶತಮಾನಗಳಿಂದ ರಣಬೆಂಕಿಯ ಶಾಖದಲ್ಲಿ ಬಾಡಿ ಬೆಂದ ಆ ದೇಶದ ಇಂದಿನ ಸ್ಥಿತಿಯನ್ನು ನೋಡಿದರೆ ನಾವು ಅಕ್ಷರ ಸಹ ಮೂಖವಿಸ್ಮಿತರಾಗುವುದರಲ್ಲಿ ಸಂಶಯವೇ ಬೇಡ. ಇಂದು ತಲವಾರು ಜಿಡಿಪಿಯಲ್ಲಿ ಅಮೇರಿಕ, ಕೆನಡಾ, ಜರ್ಮನಿಯಂತಹ ಸಬಲ ದೇಶಗಳನ್ನೇ ಹಿಂದಿಕ್ಕಿ, ಮಾನವ ಅಭಿವೃದ್ಧಿ ಸೂಚ್ಯಂಕ (HDI) ದಲ್ಲಿ ಮುಂಚೂಣಿ ದೇಶಗಳ ಸಾಲಿನಲ್ಲಿ ಬರುವ, ವಿಶ್ವದಲ್ಲೇ ಅತಿ ಹೆಚ್ಚಿನ ಗಗನಚುಂಬಿ ಕಟ್ಟಡಗಳ ನಗರಗಳ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದ್ದು (ದುಬೈ), ವಿಶ್ವದ ಅತಿ ಎತ್ತರವಾದ ಕಟ್ಟಡ, ಅತಿ ದೊಡ್ಡದಾದ ಮಾನವನಿರ್ಮಿತ ದ್ವೀಪ, ಅತಿ ದೊಡ್ಡ ಶಾಪಿಂಗ್ ಮಾಲ್ (ವಿಸ್ತೀರ್ಣವಾರು), ಅತಿ ದೊಡ್ಡ ಅಕ್ವೇರಿಯಂ ಗಳ ನಿರ್ಮಾಣದ ಹೆಗ್ಗಳಿಕೆಯನ್ನೂ ಗಿಟ್ಟಿಸಿಕೊಂಡು, ದೇಶದ ಜನಸಂಖ್ಯೆಯಲ್ಲಿ ಶೇಕಡಾ 80 ರಷ್ಟು ಪರದೇಶದವರೇ ಬಂದು ಮುಗಿಬೀಳುವಂತೆ ಮಾಡಿಕೊಂಡಿದೆ ಎಂದರೆ ನಾವು ನಂಬಲೇ ಬೇಕು. ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್). ಅಬುಧಾಬಿ, ದುಬೈ, ಶಾರ್ಜಾ ಎಂಬ ಒಟ್ಟು ಏಳು ಸಂಸ್ಥಾನಗಳು ಸೇರಿ ಮೂಡಿದ ದೇಶವಿದು. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದ ಇಂದಿಗೂ ರಾಜರುಗಳ ಗಟ್ಟಿ ಆಳ್ವಿಕೆಯಲ್ಲಿಯೇ ಇರುವ ದೇಶ. ಅಬುಧಾಬಿ ದೇಶದ ರಾಜಧಾನಿ. ಇಂದು ಜಗತ್ತಿನ ಮೂಲೆ ಮೂಲೆಯ ಗಲ್ಲಿ ಗಲ್ಲಿಗಳಲ್ಲಿಯೂ ತನ್ನ ಹೆಸರನ್ನು ಗುರುತಿಸಿಕೊಳ್ಳಬಲ್ಲ ಯುಎಇ ಒಂದು ಕಾಲಕ್ಕೆ ಯಾರಿಗೂ ಬೇಡವಾಗಿದ್ದ ಬಂಜರು ಭೂಮಿಯೆಂದೇ ಹೇಳಬಹುದು. ಕೇವಲ ದಶಕ ಒಂದೆರಡರಲ್ಲೇ ಅಭಿವೃದ್ಧಿ ಹಾಗು ಬೆಳವಣಿಗೆಯ ಮಹಾಬದಲಾವಣೆಯನ್ನು ಕಂಡ ಈ ದೇಶದ ಇತಿಹಾಸವನ್ನು ಕೇಳುವುದೇ ಒಂದು ರೋಮನಂಚಕಾರಿ ಅನುಭವ.

ಶತಕಗಳ ಕಾಲ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಇಲ್ಲಿನ ಪ್ರಾಂತ್ಯಗಳು ಜಗತ್ತಿನ ಭೂಪಟದಲ್ಲಿ ಗುರುತಿಸಲ್ಪಡುತ್ತಿದ್ದದ್ದು ಮುತ್ತುಗಳ ವಹಿವಾಟಿಗೆ. ಬಿಸಿಲಿನ ತಾಪಕ್ಕೆ ಕುದಿಯುವಂತಹ ಉಪ್ಪುನೀರಿನ ತಳದಲ್ಲಿ ಸಿಗುತ್ತಿದ್ದ ರಾಶಿ ರಾಶಿ ಮುತ್ತುಗಳನ್ನು ಬ್ರಿಟಿಷರು ಅವಿರತವಾಗಿ ಬಗೆದು, ತುಂಬಿ ವಿಶ್ವದ ಎಲ್ಲೆಡೆಗೆ ಮಾರುತ್ತಾ ಹಣವನ್ನು ಗಳಿಸಿಕೊಳ್ಳುತ್ತಿದ್ದರು. ಸುತ್ತಮುತ್ತಲಿನ ಜನರು ಹಾಗು ಭಾರತದಿಂದಲೂ ಉತ್ತಮ ಈಜುಗಾರರನ್ನು ಕರೆತಂದು ಅಕ್ಷರ ಸಹ ಜಲಚರ ಪ್ರಾಣಿಗಳಂತೆ ಮೂಗಿದೊಂದು ಸುತ್ತುವರಿ (Clip)ಯನ್ನು ಕೊಟ್ಟು ನಿಮಿಷಗಳ ಕಾಲ ನೀರಿನಲ್ಲಿ ಮುಳುಗಿಸಿ ಬಿಡುತ್ತಿದ್ದರು. ತಮ್ಮ ಜೋಳಿಗೆಯ ತುಂಬ ಸಾಗರದ ತಳದಲ್ಲಿ ಅಂಟಿಕೊಂಡಿರುವ ಕಪ್ಪೆಚಿಪ್ಪುಗಳನ್ನು ಹೆಕ್ಕಿ ತಂದು ಕೊಡುವುದೇ ಈ ಈಜುಗಾರರ ಕಾಯಕವಾಗಿತ್ತು. ದಿನಕೊಂದು ಲೋಟ ನೀರು ಹಾಗು ಒಂದಿಡೀ ಅನ್ನವನ್ನಷ್ಟೇ ತಿಂದು ಜಗತ್ತಿನ ಐಷಾರಾಮತೆಯ ಸಂಕೇತಕ್ಕೆ ತಮ್ಮ ಪರೋಕ್ಷವಾದ ಕಾಣಿಕೆಯನ್ನು ನೀಡುತ್ತಿದ್ದರು ಇಲ್ಲಿನ ಜನ. ಆದರೆ 1920 ರಷ್ಟರಲ್ಲಿ ಜಪಾನಿನ ಹಲವೆಡೆ ಇಂತಹ ನೈಸರ್ಗಿಕ ಮುತ್ತುಗಳಿಗೆ ಸರಿಸಮನಾದ ಅಥವಾ ನೋಡಲು ಇನ್ನೂ ಅಂದವಾಗಿ ಕಾಣುವ ಕೃತಕ ಮುತ್ತುಗಳು ಮಾರುಕಟ್ಟೆಗೆ ಬಂದ ಕೂಡಲೇ ಇಲ್ಲಿನ ಮುತ್ತುಗಳಿಗೆ ಮುತ್ತಿಡುವವರೇ ಇಲ್ಲರಾದರು. ಪರಿಣಾಮ ಜಗತ್ತಿನ ಭೂಪಟದಲ್ಲಿ ಕನಿಷ್ಠ ಕಾರಣಕ್ಕಾದರೂ ಒಂತಿಷ್ಟು ಗುರುತಿಸಲ್ಪಡುತ್ತಿದ್ದ ಈ ಮರಳುಗಾಡು ಪ್ರದೇಶ ಕ್ರಮೇಣ ಕಣ್ಮರೆಯಾಗತೊಡಗಿತು. ಮೀನುಗಾರಿಕೆ ಹಾಗು ಖರ್ಜುರದ ಹಣ್ಣುಗಳ ವಹಿವಾಟಷ್ಟೆ ಮುಂದಿನ ದಿನಗಳ ಆಧಾರವಾಯಿತು. 1947 ರಲ್ಲಿ ಭಾರತ ಸ್ವಾತಂತ್ರ್ಯವನ್ನು ಗಳಿಸಿಕೊಂಡಮೇಲೆ ಬ್ರಿಟಿಷರ ಹಿಡಿತ ಇಲ್ಲಿಯೂ ಕಡಿಮೆಯಾಗತೊಡಗಿತು. ಅಲ್ಲದೆ ಐಶ್ವರ್ಯವಿದ್ದಾಗ ಅನಾಗರೀಕರಂತೆ ದುಡಿಸಿಕೊಂಡು ಎಲ್ಲವೂ ಹೋದಾಗ ನಾಗರಿಕರನ್ನಾಗಿ ಮಾಡುವ ನಾಟಕದಂತೆ ಇಲ್ಲಿನ ಸ್ಥಳೀಯ ನಾಯಕರನ್ನು ಒಟ್ಟುಗೂಡಿಸಿ ಒಕ್ಕೂಟವೊಂದನ್ನು ನಿರ್ಮಿಸಿ ದೇಶ ವಿದೇಶಗಳ ಸಂಪರ್ಕವನ್ನು ಸಾಧಿಸುವುದನ್ನು ಕಲಿಸಿ ಕೈತೊಳೆದುಕೊಳ್ಳತೊಡಗಿದರು, ಬ್ರಿಟಿಷ್ ಪ್ರಭುಗಳು. ಆದರೆ ಮುಂದೆ ಈ ತಪ್ಪಿನಿಂದ ಅವರು ಪಟ್ಟ ಪಶ್ಚಾತಾಪ ಮಾತ್ರ ಯಾವುದೇ ಇತಿಹಾಸದ ಪುಟಕಳಲ್ಲಿಯೂ ದಾಖಲೆಯಾಗುವುದಿಲ್ಲ! ಹೀಗೆ ಸುಮಾರು 1950ರ ವರೆಗೂ ಆಟಕುಂಟು ಲೆಕ್ಕಕಿಲ್ಲದಂಥ ನೆಲವಾಗಿದ್ದ ಪ್ರದೇಶ ನಂತರದ ಕೆಲ ವರ್ಷಗಳೆಲ್ಲೆ ಶತಮಾನಗಳಿಂದ ಅನುಭವಿಸಿದ ಕಡುಕಷ್ಟಗಳ ಪರಿಣಾಮವೋ ಏನೋ ಎಂಬಂತೆ ನೇಸರರಾಜನಿಂದ ಯಾರೊಬ್ಬರೂ ಊಹಿಸಲಾರದಂತಹ ವರವೊಂದನ್ನು ಪಡೆಯಿತು.

ಅಮೇರಿಕಾದಲ್ಲಿ ಮೊದಲುಗೊಂಡ (1859) ಪೆಟ್ರೋಲಿಯಂ ನ ಅವಿಷ್ಕಾರ ನಂತರ ವಿಶ್ವದೆಲ್ಲೆಡೆ ಕಾಡ್ಗಿಚ್ಚಿನಂತೆ ಹರಡತೊಡಗಿತು. ಬಗೆದರೆ ಕನಿಷ್ಠ ಒಂದು ತೊಟ್ಟು ನೀರೇ ಸಿಗದ ಇಲ್ಲಿನ ನೆಲದಲ್ಲಿ ಇನ್ನೇನು ದೊರೆತೀತು ಎನ್ನುತ್ತಿದ್ದ ಪರಕೀಯರಿಗೆ 1908 ರ ಪರ್ಷಿಯಾದ ತೈಲ ಸಂಶೋಧನೆ ನುಂಗಲಾರದ ಬಿಸಿ ತುತ್ತಾಗಿ ಪರಿಣಮಿಸಿತು. ಅಲ್ಲಿಂದ ಮುಂದೆ ಶುರುವಾದ ತೈಲದ ಆವಿಷ್ಕಾರ ಮರಳುಭೂಮಿಯ ಕೆಳಗೆ ಅಡಗಿರುವ ಕಪ್ಪುಚಿನ್ನದ ಅಕ್ಷಯ ಪಾತ್ರೆಯನ್ನೇ ವಿಶ್ವಕ್ಕೆ ಪರಿಚಯಿಸಿತು. ಹೀಗೆ ಮುಂದುವರೆಯುತ್ತಿದ್ದ ತೈಲನಿಕ್ಷೇಪಗಳ ಆವಿಷ್ಕಾರ ಯುಎಇ ಯನ್ನು ತಲುಪಲು ದಶಕಗಳೇ ಹಿಡಿದವು. ಐವತ್ತನೇ ದಶಕದ ಕೊನೆಯ ವರ್ಷಗಳಲ್ಲಿ ಮೊದಲುಗೊಂಡ ಆವಿಷ್ಕಾರ ನಂತರದ ಕೆಲವೇ ದಿನಗಳಲ್ಲಿ ದೇಶವನ್ನು ಚಿನ್ನದ ತಟ್ಟೆಯಲ್ಲಿ ತಂದು ಕೂರಿಸಿತು. ಅಷ್ಟರಲ್ಲಾಗಲೇ ಇಲ್ಲಿಂದ ಭಾಗಶಃ ಕಣ್ಮರೆಯಾಗಿದ್ದ ಬ್ರಿಟಿಷ್ ಪ್ರಭುಗಳು ಕೈ ಕೈ ಹಿಸುಕಿಕೊಳ್ಳುತ್ತಾ 1971 ರಲ್ಲಿ ಇಲ್ಲಿನ ರಾಜರುಗಳಿಗೆ ತಮ್ಮ ಸಂಪೂರ್ಣ ಅಧಿಕಾರವನ್ನು ಅಸ್ತಾಂತರಿಸಿದರು. ಅಭುದಾಭಿ, ದುಬೈ, ಶಾರ್ಜಾ, ಫುಜೆರಾ, ರಸ್-ಅಲ್-ಕೈಮಾ, ಅಜ್ಮಾನ್ ಹಾಗು ಉಮ್-ಅಲ್-ಕ್ವೆನ್ ಎಂಬ ಏಳು ಸಂಸ್ಥಾನಗಳು ಒಟ್ಟುಗೂಡಿ ಯುಎಇ ಯನ್ನು ಕಟ್ಟಿಕೊಂಡವು. ಅಲ್ಲಿಂದ ಮುಂದೆ ಅಂಬೆಗಾಲಿಡುತ್ತಾ ಬೆಳೆದ ದೇಶ ಯಾವುದೇ ಪ್ರಜಾಪ್ರಭುತ್ವವ್ಯವಸ್ಥೆಗಳಿಲ್ಲದೆಯೇ ಮುಂದೊಂದು ದಿನ ಉತ್ತುಂಗಕ್ಕೆ ಏರುವ ಪರಿಯಂತೂ ಹಲವಾರು ದೇಶಗಳಿಗೆ ಮಾದರಿಯಾಯಿತು.



ಇಂದು ಯುಎಇ ಉತ್ಪಾದಿಸುತ್ತಿರುವ ತೈಲದ ಪ್ರಮಾಣ 'ಪ್ರತಿದಿನ' ಸುಮಾರು 40 ಲಕ್ಷ ಬ್ಯಾರೆಲ್ಗಳು! ಇದು ಹೆಚ್ಚು ಕಡಿಮೆ ನಮ್ಮ ದೇಶದ 130 ಕೋಟಿ ಜನರ ಪ್ರತಿದಿನದ ಬಳಕೆಯ ಪ್ರಮಾಣ! ಇಷ್ಟು ಅಗಾಧ ಪ್ರಮಾಣದ ತೈಲವನ್ನು ಭೂಮಿಯಾಳದಿಂದ ಹೊರತೆಗೆದು ಇಟ್ಟರೆ ವಿಶ್ವಮಾರುಕಟ್ಟೆಯಲ್ಲಿ ಕಣ್ಮುಚ್ಚಿ ಬಿಡುವಷ್ಟರಲ್ಲಿ ಖರೀದಿಸಿಬಿಡುವ ಗ್ರಾಹಕರಿಗೇನು ಕಡಿಮೆ ಇಲ್ಲ. ಪರಿಣಾಮ ಹಣದ ರಾಶಿಯೇ ಸಾಗರೋಪಾದಿಯಲ್ಲಿ ಇಲ್ಲಿನ ಖಜಾನೆಗಳನ್ನು ಬಂದು ಸೇರುತ್ತದೆ. ಇಂದು ಯುಎಇಯ ಬೆಳವಣಿಗೆ ಹೀಗೆ ತೈಲದ ನಿಕ್ಷೇಪಗಳು ಒದಗಿಸಿಕೊಟ್ಟ ಹಣದ ಹೊಳೆಯಿಂದ ಎಂಬುದನ್ನು ಅಲ್ಲಗೆಳೆಯಲಾಗುವುದಿಲ್ಲ. ಆದರೆ, ಹಣವೊಂದಿದ್ದ ಮಾತ್ರಕ್ಕೆ ಲಕ್ಷಾಂತರ ಜನರ ದೇಶವೊಂದನ್ನು ಚಿಟಿಕೆ ಹೊಡೆಯುವ ಕಾಲದಲ್ಲಿ ಬದಲಾಗಿಸಲಾದೀತೇ? ಮೊಟ್ಟಮೊದಲು ದೇಶವೊಂದರ ಸ್ಪಷ್ಟ ಕಲ್ಪನೆ ಹಾಗು ಆ ಕಲ್ಪನೆಗೆ ಬೇಕಾದ ದೂರದೃಷ್ಟಿ ಇಲ್ಲದೆ ಹೋದರೆ ರಾಜರುಗಳದ್ದೇ ಎಲ್ಲವೂ ಆಗಿರುವ ದೇಶ ಕೇವಲ ರಾಜಕುಟುಂಬಗಳನ್ನಷ್ಟೇ ಅಭಿವೃದ್ಧಿಪಡಿಸುತ್ತದೆ. ಆದರೆ ಯುಎಇ ಅಂದು ಸ್ವತಂತ್ರ ದೇಶವಾದಾಗ ದೇಶದ ಅಧಿಕಾರದ ಚುಕ್ಕಾಣಿ ಹಿಡಿದದ್ದು ಇಂದು ಎಲ್ಲರಿಂದ ರಾಷ್ಟ್ರಪಿತನೆಂದು ಕರೆಸಿಕೊಳ್ಳುವ ಶೇಖ್ ಝಯಾದ್ ನಿಂದ. ಯಾವುದೇ ಅತ್ಯುನ್ನತ ಮಟ್ಟದ ಶಿಕ್ಷಣವನ್ನು ಪಡೆದುಕೊಂಡಿರದಿದ್ದರೂ ತನ್ನ ಜನಗಳ ನಡುವೆಯೇ ಬೆಳೆದ ಈತನ ದೂರದೃಷ್ಟಿಯನ್ನು ವಿಶ್ವವೇ ಕಂಡು ಬೆರಗಾಯಿತು. ಯಾವೊಂದು ಕಾಮರ್ಸ್, ಇಂಜಿನಿಯರಿಂಗ್ ಅಥವಾ ಡಾಕ್ಟರೇಟ್ ಡಿಗ್ರಿಗಳಿಲ್ಲದೆಯೇ ಈತ ದೇಶವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸದೃಢವಾಗಿ ಕಟ್ಟಿ ಬೆಳೆಸಿದ. ಆ ಯಶೋಗಾಥೆ ಮುಂಬಂದ ನಾಯಕರುಗಳಿಗೆ ಪ್ರೇರಣಾದಾಯಕವಾದದಲ್ಲದೆ ಹೆಮ್ಮೆಯ ವಿಚಾರವೂ ಆಗಿದ್ದಿತು. ಏಕೆಂದರೆ ಇಂದು ಡಿಗ್ರಿಯೊಂದರ ಮುಖವಾಡ ಅದೆಷ್ಟು ಜರೂರಿಯಾಗಿದೆ ಎಂದರೆ ನೀನು ಕಳ್ಳನಾದರೂ ಸರಿಯೇ ಡಿಗ್ರಿಯನ್ನೊಂದಿರುವ ಕಳ್ಳನಾಗು ಎಂಬಂತಾಗಿದೆ ಪರಿಸ್ಥಿತಿ. ಸಮಾಜವನ್ನು ಕಟ್ಟಬೇಕು, ನಾಳೆಯ ದಿನಗಳು ಇಂದಿನದಕ್ಕಿಂತ ಚೆನ್ನಾಗಿರಬೇಕು ಎಂಬ ಸಾತ್ವಿಕ ಗುರಿಯಿದ್ದರೆ ಹಾಗು ಆ ಗುರಿಯನ್ನು ಸಾಧಿಸುವ ಕಲೆ ಕರಗತಗೊಂಡಿದ್ದರೆ ನಾಡನ್ನು ಕಟ್ಟಲು ಯಾವ ಡಿಗ್ರಿಗಳ ಡಂಗೂರಗಳ ಅವಶ್ಯಕೆ ಇರುವುದಿಲ್ಲ ಎಂಬುದಕ್ಕೆ ಶೇಖ್ ಝಯಾದ್ನ ಕಾರ್ಯವೈಖರಿ ಒಂದು ಉತ್ತಮ ಉದಾಹರಣೆ.

ಇಂದು ಮುಸ್ಲಿಂ ರಾಷ್ಟ್ರಗಳೆಂದರೆ ಯುದ್ಧ, ಹೊಡೆದಾಟ, ದ್ವೇಷ, ಅಸೂಯೆ ಎನ್ನುವ ಕಾಲದಲ್ಲಿ ಯುಎಇ ಯ ಏಳೂ ಸಂಸ್ಥಾನಗಳು ಸುಮಾರು ನಾಲ್ಕು ದಶಕಗಳಿಗೂ ಹೆಚ್ಚಾಗಿ ಇಂದಿಗೂ ಯಾವುದೇ ವೈಮನಸ್ಸಿಲ್ಲದೇ ಒಟ್ಟಿಗೆ ಇವೆ. ಈ ಒಗ್ಗಟ್ಟಿಗೆ ಅಂದು ಶೈಖ್ ಝಯಾದ್ ಹಾಕಿಕೊಟ್ಟ ಅಡಿಪಾಯದ ಗಟ್ಟಿತನವೇ ಆಧಾರವೆನ್ನಬಹುದು. ಒಡೆದು ಛಿದ್ರವಾಗಬೇಕಿದ್ದ ಏಳು ಸಂಸ್ಥಾನಗಳನ್ನು ನಮ್ಮ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲರಂತೆಯೇ ಒಟ್ಟುಗೂಡಿಸಿ ದೇಶವೊಂದನ್ನು ಕಟ್ಟಿದ್ದ ಸಾಧನೆ ಮೊದಲುಗೊಂಡು, ಮಣ್ಣಿನ ರಾಶಿಯ ನೆಲದಲ್ಲಿ ಸ್ಕೂಲು, ಆಸ್ಪತ್ರೆ, ಬ್ರಿಡ್ಜು, ಬಂಧರುಗಳನ್ನು ನಿರ್ಮಿಸತೊಡಗಿದನಾತ. ಅಂದು ಬೆರಳೆಣಿಕೆಗೂ ಸಿಗದಿದ್ದ ಸ್ಕೂಲು ಕಾಲೇಜುಗಳು ಇಂದು ಹತ್ತಾರು ನೂರಾರು ಸಂಖ್ಯೆಯಲ್ಲಿ ವಿಶ್ವಮಟ್ಟಕ್ಕೆ ಬೆಳೆದು ಹೆಸರುಮಾಡುತ್ತಿವೆ. ದುಬೈ ನಗರದಲ್ಲಿರುವ 'ಜಬೆಲ್ ಅಲಿ' ಬಂಧರು ಇಂದು ವಿಶ್ವದಲ್ಲೇ ಅತಿದೊಡ್ಡ ಮಾನವ ನಿರ್ಮಿತ ಬಂಧರೆಂದು ಹೆಸರು ಮಾಡಿದೆ ಅಲ್ಲದೆ ದೇಶದ ಪ್ರಗತಿಗೂ ತನ್ನ ಗಜಬಲವನ್ನು ತುಂಬಿದೆ. ಇಂದು ದೇಶವಿದೇಶಗಳಿಂದ ಬರುವ ನೂರಾರು ಹಡಗುಗಳು ಪ್ರತಿದಿನ ಈ ಬಂಧರನ್ನು ಹಾದು ಹೋಗುತ್ತವೆ. ಅಲ್ಲದೆ ಅಂದು ತಿನ್ನಲು ಒಪ್ಪೂತ್ತು ಊಟಕ್ಕೂ ಪರದಾಡುವಂತಹ ಸ್ಥಿತಿಯಲ್ಲಿದ್ದ ದೇಶ ಇಂದು ಕೋಟಿ ಕೋಟಿ ಹಣವನ್ನು ವಿದೇಶಿನೆರವಾಗಿ ಅಗತ್ಯವಿರುವ ದೇಶಗಳಿಗೆ ನೀಡುವ ಸ್ಥಿತಿಗೆ ಬೆಳೆದು ನಿಂತಿದೆ. ಇಲ್ಲಿಯವರೆಗು ಯುಎಇ ವಿದೇಶಿನೆರವಿನ ರೂಪದಲ್ಲಿ ನೀಡಿರುವ ಹಣದ ಮೊತ್ತ ಸುಮಾರು 175 ಬಿಲಿಯನ್ ದಿರ್ಹಾಂಗಳು.( ದಿರ್ಹಾಂ ಇಲ್ಲಿನ ಅಧಿಕೃತ ಕರೆನ್ಸಿ. ಸೋಜಿಗದ ಸಂಗತಿಯೆಂದರೆ 1973 ರ ವರೆಗೂ ಭಾರತದ ರೂಪಾಯಿ ಇಲ್ಲಿ ಚಲಾವಣೆಯಲ್ಲಿದ್ದ ಬಹುಸಂಖ್ಯೆಯ ಕರೆನ್ಸಿ. ಎರಡೂ ದೇಶಗಳು ಬ್ರಿಟಿಷರ ಆಳ್ವಿಕೆಯಲ್ಲಿದ್ದ ಕಾರಣ ಭಾರತದ ಕರೆನ್ಸಿಯನ್ನೇ ಇಲ್ಲಿಯೂ ಬಳಸಲಾಗುತ್ತಿತ್ತು.) ಇದು ಆರು ಕೋಟಿ ಜನಸಂಖ್ಯೆಯ ನಮ್ಮ ರಾಜ್ಯದ ಹೆಚ್ಚುಕಡಿಮೆ ಎರಡು ವರ್ಷಗಳ ಆಯವ್ಯಯದ ಹಣವೆನ್ನಬಹುದು! ಹೀಗೆ ತನ್ನ ತಟ್ಟೆಯಿಂದ ಹಸಿದವನ ತಟ್ಟೆಗೂ ಒಂತಿಷ್ಟು ನೀಡಿ ಸುಖಪಡುವ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದವನು ಶೈಖ್ ಝಯಾದ್. ಅಲ್ಲದೆ ಮುಸ್ಲಿಂ ಮಹಿಳೆಯರೆಂದರೆ ಸಾಲಿನಲ್ಲಿ ಕಡೆಯವರು ಎಂಬಂತಿದ್ದ ಕಾಲದಲ್ಲಿ ಈತ ಮಹಿಳೆಯರ ಸಬಲೀಕರಣ, ಶಿಕ್ಷಣ ಹಾಗು ಅವರುಗಳ ಮುನ್ನೆಲೆಗೆ ಶ್ರಮಿಸಿದನಲ್ಲದೆ ಸರ್ಕಾರಿ ಕೆಲಸಗಳಲ್ಲೂ ಇಂತಿಷ್ಟು ಮೀಸಲಾತಿಯನ್ನು ನೀಡುತ್ತಾನೆ. ಕಟ್ಟಾ ಇಸ್ಲಾಂ ಸಂಪ್ರದಾಯದ ಪರಿಸರದಲ್ಲಿ ಈತನ ನಡೆ ಅಂದು ಬಹುಮಂದಿಯ ಹುಬ್ಬನ್ನು ಏರುವಂತೆ ಮಾಡಿದರೂ ಯಾರೊಬ್ಬರು ತುಟಿಕ್ ಪಿಟಿಕ್ ಅನ್ನಲ್ಲಿಲ. ಇವೆಲ್ಲದರ ಪರಿಣಾಮ ಇಲ್ಲಿನ ಜನರ ಮೇಲೆ ಅದೆಷ್ಟರ ಮಟ್ಟಿಗೆ ಬೀರಿತೆಂದರೆ ಅತಿ ಕನಿಷ್ಠವಾಗಿದ್ದ (0.55-0.60) ಮಾನವ ಅಭಿವೃದ್ಧಿ ಸೂಚ್ಯಂಕ (HDI) ಕೇವಲ ಮೂರು ದಶಕಗಳಲ್ಲೆಯೇ ಆಸ್ಟ್ರೇಲಿಯಾ, ಜರ್ಮನಿ, ಫ್ರಾನ್ಸ್ ಅನ್ನು ಮೀರಿಸುವ ಮಟ್ಟಕ್ಕೆ (0.80-0.85) ಬಂದು ನಿಂತಿತು. ಕಾರಣ ಆತನ ಹೂಡಿಕೆ ಅಂದು ಕೇವಲ ನಗರ ಪಟ್ಟಣಗಳ ಬ್ರಿಡ್ಜು ಬಂದರುಗಳಷ್ಟೇ ಅಲ್ಲದೆ ಅದು ನೇರವಾಗಿ ಅಲ್ಲಿನ ಜನರ ಮೇಲೆಯೇ ಆಗಿದ್ದಿತು.

2004 ರಲ್ಲಿ ಶೈಖ್ ಝಯಾದ್ ನ ಮರಣಾ ನಂತರ ಬಂದ ಇತರ ದೊರೆಗಳೂ ಸಹ ಆತನ ನಾಯಕತ್ವವನ್ನೇ ಮಾದರಿಯಾಗಿಸಕೊಂಡರು. 'The race for excellence has no finish line' (ಉತ್ಕೃಷ್ಟತೆಯ ಓಟಕ್ಕೆ ಅಂತ್ಯವೆಂಬುದೇ ಇಲ್ಲ) ಎನ್ನುತ ಮುನ್ನೆಡುತ್ತಿರುವ ಮತ್ತೋರ್ವ ನಾಯಕ ಪ್ರಸ್ತುತ ಯುಎಇ ಪ್ರಧಾನಿ ಹಾಗು ದುಬೈನ ದೊರೆ ಶೈಖ್ ಮುಹಮ್ಮದ್. ಈತ ದುಬೈ ನಗರವನ್ನು ಮಧ್ಯಪ್ರಾಚ್ಯದ, ಅಷ್ಟೇಕೆ ಇಡೀ ವಿಶ್ವದ ಉತ್ಕೃಷ್ಟ ನಗರವನ್ನಾಗಿ ಸಜ್ಜುಗೊಳಿಸಿದ್ದಾನೆ. ತೈಲವೊಂದಿದೆ ಎಂಬ ಮಾತ್ರಕ್ಕೆ ಕುಡಿಯುವುದರಿಂದ ಹಿಡಿದು ಮೀಯುವುದಕ್ಕೂ ಅದನ್ನೇ ಬಳಸಿ ಮೂರೇ ದಿನದಲ್ಲಿ ಗುಡಿಸಿ ಗುಂಡಾತರವಾಗಿಸಬಹುದಾದ ಸಂಪತ್ತನ್ನು ಇಲ್ಲಿನ ನಾಯಕರುಗಳು ಅತ್ತಕಡೆ ಅತಿಯೂ ಆಗದೆ ಇತ್ತಕಡೆ ಮಿತಿಯೂ ಎನಿಸದೆ ಕಾಪಾಡಿಕೊಂಡು ಬಂದಿದ್ದಾರೆ. ಎಷ್ಟಾದರೂ ನವೀಕರಿಸಲಾಗದ ಸಂಪತ್ಮೂಲವನ್ನು ಸಾಯುವವರೆಗೂ ನೆಚ್ಚಿಕೊಂಡು ಕೂರಲಾಗದು ಎಂಬುದನ್ನು ಅರಿತ ಇಲ್ಲಿನ ನಾಯಕರು ದೇಶದ ಬೊಗಸೆಯನ್ನು ತುಂಬಿಸಲು ಸಾಧ್ಯವಾಗಬಹುದಾದ ಇತರೆ ವಲಯಗಳನ್ನು ಸಂಶೋದಿಸತೊಡಗಿದರು. ಆಗ ಚಿಗುರೊಡೆದದ್ದೇ ಪ್ರವಾಸೋದ್ಯಮ, ಸರಕು ವ್ಯಾಪಾರ ಹಾಗು ಬಹುಬಗೆಯ ಸೇವೆಗಳು. ಪರಿಣಾಮ ಇಂದು ದುಬೈ ನಗರ ಅಷ್ಟೆಲ್ಲ ಹೆಸರು ಮಾಡಿದ್ದರೂ ದೇಶದ ಅಭಿವೃದ್ಧಿಗೆ ಅದು ಪೆಟ್ರೋಲಿಯಂ ವಲಯದಿಂದ ಗಳಿಸುತ್ತಿರುವ ಆದಾಯ ಶೇಕಡಾ 5 ಕಿಂತಲೂ ಕಡಿಮೆ! ಆ ಮಟ್ಟಿನ ಬೆಳವಣಿಗೆ ಮರುಭೂಮಿಯ ಉರಿಬಿಸಿಲಲ್ಲೂ ಇತರ ವಲಯಗಳಿಗೆ ಸಾಧ್ಯವಾಗಿದೆ. ಇಂದು ಇಡೀ ವಿಶ್ವದ ಟಾಪ್ 10 ಪ್ರವಾಸಿ ತಾಣಗಳಲ್ಲಿ ಒಂದೆನಿಸಿರುವ ದುಬೈ ಇಂತಹ ಹಲವಾರು ನಾಯಕರುಗಳ ದೂರದೃಷ್ಟಿಯ ಫಲವಂದರೆ ಸುಳ್ಳಾಗದು. ಜಗತ್ತಿನ ಅತಿ ಎತ್ತರವಾದ ಕಟ್ಟಡ (ಬುರ್ಜ್ ಖಲೀಫಾ 828 ಮೀಟರ್!), ಅತಿ ಎತ್ತರವಾದ ಹೋಟೆಲು (ಬುರ್ಜ್ ಅಲ್ ಅರಬ್), ಅತಿ ದೊಡ್ಡ ಮಾನವ ನಿರ್ಮಿತ ದ್ವೀಪ (ಪಾಮ್ ಜುಮೇರಾ), ವಿಸ್ತೀರ್ಣವಾರು ಅತಿ ದೊಡ್ಡ ಶಾಪಿಂಗ್ ಮಾಲ್ (ದುಬೈ ಮಾಲ್) ಹಾಗು ಅದರೊಳಗಿರುವ ವಿಶ್ವದ ಅತಿ ದೊಡ್ಡ ಅಕ್ವೇರಿಯಂ, ಹೀಗೆ ದುಬೈ ಎಂದರೆ ಸಾಲು ಸಾಲು ಮಾನವ ನಿರ್ಮಿತ ವಿಸ್ಮಯಗಳ ಒಂದು ಪೊಟ್ಟಣವೆಂದೇ ಹೇಳಬಹುದು. ಇಂತಹ ಕೃತಕ ವಿಸ್ಮಯಗಳನ್ನು ನೋಡಿ ಆನಂದಿಸಲು ದುಬೈ ನಗರವೊಂದಕ್ಕೆ ಇಂದು ಬರುವ ಪ್ರವಾಸಿಗರ ಸಂಖ್ಯೆ ವರ್ಷಕ್ಕೆ ಸುಮಾರು ನೂರೈವತ್ತು ಲಕ್ಷಕ್ಕೂ ಮಿಗಿಲು!

ತೈಲವೊಂದಷ್ಟೇ ಅಲ್ಲದೆ ಇತರ ವಲಯಗಳ ಪೋಷಣೆಯಲ್ಲಿಯೂ ತೊಡಗಿದ ದೇಶ ನಿಧಾನವಾಗಿ ವಿಧೇಶಿ ಬಂಡವಾಳ ಹೂಡಿಕೆಯ ಬರಮಾಡಿಕೊಡುವೆಡೆಗೆ ಮುಖಮಾಡತೊಡಗಿತು. ಆದರೆ ಇಂತಹ ಹೂಡಿಕೆಗೆ ಬೇಕಾದ ಮಾರುಕಟ್ಟೆಯ ಸಾಮರ್ಥ್ಯ ಅಂತೇನೂ ಹೇಳಿಕೊಳ್ಳುವ ಮಟ್ಟಿಗಿರಲಿಲ್ಲ. ಪ್ರತಿಯೊಂದು ವಸ್ತುಗಳಿಗೂ ಇತರೆ ದೇಶಗಳನ್ನೇ ನೆಚ್ಚಿಕೊಂಡು ಬದುಕುವ ನೆಲದಲ್ಲಿ ಸ್ಥಳಿಯದಲ್ಲದ ವಸ್ತುಗಳ ವಿನಃ ಯಾವೊಂದು ಫ್ಯಾಕ್ಟರಿಯನ್ನೂ ಸ್ಥಾಪಿಸುವುದು ತಿಳಿದೇ ಅಪಾಯವನ್ನು ಮೈಮೇಲೆಳೆದುಕೊಂಡಂತೆ ಆಗುತ್ತದೆ. ಆದರೆ ದಿನೇ ದಿನೇ ಕೊಂಚ ಕೊಂಚವಾಗಿ ಬೆಳೆಯತೊಡಗಿದ ಮಾರುಕಟ್ಟೆಯ ಲಾಭವನ್ನು ಪಡೆದ ಇಲ್ಲಿನ ಆಡಳಿತ, ಕಂಪನಿಗಳನ್ನು ಸ್ಥಾಪಿಸಲು ಸುವರ್ಣಾವಕಾಶವೊಂದನ್ನು ಒದಗಿಸಿಕೊಟ್ಟಿತು. ಯಾವುದೇ ಬಗೆಯ ತೆರಿಗೆ ಸುಂಕವಿಲ್ಲದೆಯೇ ಅಲ್ಲದೆ ವರಮಾನ ತೆರಿಗೆಯೂ ಇಲ್ಲದ ದೇಶದ ಬಾಗಿಲನ್ನು ವಿಶ್ವಕ್ಕೆ ತೆರೆಯಿತು. ಅಲ್ಲಿಯವರೆಗೂ ಇತ್ತಕಡೆ ತಿರುಗಿಯೂ ಮಲಗದ ಕಂಪನಿಗಳು ಇತರೆ ದೇಶಗಳಲ್ಲಿ ತಮ್ಮ ಆಧಾಯದ ಸುಮಾರು ಅರ್ಧದಷ್ಟು ಹಣವನ್ನು ತೆರಿಗೆಯ ರೂಪದಲ್ಲಿ ಸ್ಥಳ್ಳಿಯ ಸರ್ಕಾರಗಳಿಗೆ ನೀಡುವ ಹೊರೆಯನ್ನು ತಪ್ಪಿಸಿಕೊಂಡು ಕೂಡಲೇ ತಮ್ಮ ಒಂದೊಂದು ಶಾಖೆಯನ್ನು ಇಲ್ಲಿ ತೆರೆದುಕೊಳ್ಳತೊಡಗಿದವು. (ಇಂದು ಕಾರ್ಪೊರೇಟ್ ಟ್ಯಾಕ್ಸ್ ಹಾಗು ವ್ಯಾಲ್ಯೂ ಆಡೆಡ್ ಟ್ಯಾಕ್ಸ್ ಗಳು ಜಾರಿಯಾಗಿರುವುದು ಸುಸ್ಥಿತಿಯಲ್ಲಿರುವ ದೇಶ ತೆಗೆದುಕೊಳ್ಳಬಹುದಾದ ಧೈರ್ಯದ ನಡೆಯ ಸಂಕೇತ)ವಿಶ್ವದ ಪೂರ್ವ ಹಾಗು ಪಶ್ಚಿಮ ದೇಶಗಳು ಸಂಧಿಸುವ ಈ ಪ್ರದೇಶ ಕಾಲಾನುಕ್ರಮದಲ್ಲಿ ಎಲ್ಲ ಬಗೆಯ ಹೂಡಿಕೆಗೂ ಅನುಕೂಲವಾಯಿತು. ಆದರೆ ಈ ನಿರ್ಧಾರ ಸ್ಥಳೀಯ ಜನರ ಹಿತಾಸಕ್ತಿಯನ್ನು ಕಾಯುವಲ್ಲಿ ಮಾತ್ರ ಇಂತಿಷ್ಟೂ ಎಡವಲಿಲ್ಲ. ದೇಶಕ್ಕೆ ಏನೇ ಮಾಡಿದರೂ ಅದು ನಮ್ಮ ಜನರಿಗಾಗಿಯೇ ಎನ್ನುವ ಇಲ್ಲಿನ ದೊರೆಗಳು ಇಲ್ಲಿ ಬಂದು ತೆರೆದುಕೊಳ್ಳುವ ಕಂಪೆನಿಗಳಲ್ಲಿ ಶೇಕಡ ಅರ್ಧದಷ್ಟು ಹೂಡಿಕೆಯನ್ನು ದೇಶದ ಪ್ರಜೆಗಳಿಂದಲೇ ಮಾಡಿಸಬೇಕೆನ್ನುವ (Local Sponsor ) ನಿಯಮವನ್ನು ಜಾರಿಮಾಡಿದರು. ಇಲ್ಲವಾದರೆ ಅಂತಹ ಕಂಪನಿಗಳಿಗೆ ಪರವಾನಿಗೆಯೇ ಸಿಗದಂತೆ ಕಾನೂನನ್ನು ತರಲಾಯಿತು. ಪರಿಣಾಮವಾಗಿ ಇಂದು ಇಲ್ಲಿನ ನೆಲದಲ್ಲಿ ತೆರೆದುಕೊಳ್ಳುವ ಪ್ರತಿಯೊಂದು ಕಂಪನಿಗಳಿಗೂ ಒಬೊಬ್ಬ ಸ್ಥಳೀಯ ಪ್ರಾಯೋಜಕನಿದ್ದೆ ಇರುತ್ತಾನೆ. ಪ್ರತಿಯೊಂದು ಕಂಪನಿಯ 51% ಮಾಲೀಕತ್ವ ಒಬ್ಬ ಎಮರಾತಿ ಪ್ರಜೆಯದ್ದೇ ಆಗಿರುತ್ತದೆ. ಅಲ್ಲದೆ ಕಾಗದ ಪತ್ರ, ವಿಪರೀತ ನಿಯಮಗಳ ಜಂಜಾಟ ಬೇಡವೆನ್ನುವರಿಗೆ ನಮ್ಮ ಬೆಂಗಳೂರಿನ ಇಂಟರ್ನ್ಯಾಷನಲ್ ಟೆಕ್ ಪಾರ್ಕ್ ನಂತಹ ತೆರೆಗೆ ರಹಿತ ವಲಯಗಳು (Free Zones), ಯುಎಇ ವಿಪರೀತ ದುಭಾರಿ ಎನ್ನುವವರಿಗೆ ಇನ್ಕಮ್ ಟ್ಯಾಕ್ಸ್ ರಹಿತ ಆಧಾಯ, ಸುಸಜ್ಜಿತ ಮೂಲಸೌಕರ್ಯಗಳು, ಯಾವುದೇ ಬಗೆಯ ಬ್ಯುಸಿನೆಸ್ಸ್ಗಳನ್ನು ಮಾಡಲು ಇರುವ ವಿಪುಲ ಅವಕಾಶಗಳು, ವಿಶ್ವದಲ್ಲೇ ಅತಿ ಕಡಿಮೆಯಲ್ಲಿರುವ ಇಲ್ಲಿನ ಅಪರಾಧ ದರ (Crime Rate) ಹೀಗೆ ಇನ್ನು ಹಲವು ಸಂಗತಿಗಳು ಇಂದು ಈ ಪುಟ್ಟ ದೇಶವನ್ನು ಜಗತ್ತಿನ ಅಗ್ರಮಾನ್ಯ ದೇಶಗಳ ಪಟ್ಟಿಯಲ್ಲಿ ತಂದು ನಿಲ್ಲಿಸಿವೆ.

ಸಾಧಿಸುವ ಛಲ ಹಾಗು ಆ ಹಾದಿಯ ಸ್ಪಷ್ಟಗುರಿಯೊಂದಿದ್ದರೆ ಎಂಥಹ ವಿಘ್ನಗಳೇ ಎದುರಾದರೂ ಜಯಿಸಿ ಮುನ್ನಡೆಯಬಲ್ಲವು ಎಂಬುದಕ್ಕೆ ಯುಎಇ ಇಂದು ಜ್ವಲಂತ ಉದಾಹರಣೆಯಾಗಿ ನಮ್ಮ ಮುಂದಿದೆ. ಒಂದು ಬಾಟಲಿ ನೀರಿಗಿಂತಲೂ ಕಡಿಮೆ ದುಡ್ಡಿನಲ್ಲಿ ಪೆಟ್ರೋಲ್ ಡಿಸೇಲ್ಗಳು ಸಿಗುವಾಗ ಯಾವ ದೇಶ ತಾನೇ ಮುನ್ನೆಡೆಯುವುದಿಲ್ಲ ಹೇಳಿ ಎನ್ನುವವರಿಗೆ ಇಡೀ ವಿಶ್ವವನ್ನೇ ಕೊಳ್ಳೆಯೊಡೆದು ದೇಶದ ದೊಡ್ಡ ದೊಡ್ಡ ಗೋದಾಮುಗಳನ್ನು ಭರಪೂರ ತುಂಬಿಸಿದರೂ ನಾಳಿನ ಸ್ಪಷ್ಟ ಚಿತ್ರಣವಿಲ್ಲದೇ ಮಕಾಡೆ ಮಲಗುವಂತಹ ಸ್ಥಿತಿ ಇಂದು ಬ್ರಿಟನ್ ದೇಶಕ್ಕೆ ಬಂದೊದಗಿರುವುದನ್ನು ಮರೆಯಬಾರದು. ದೇಶ ಕಟ್ಟುವ ಹಾಗು ಕಟ್ಟಿ ನೆಡೆಸುವ ಕೈಗಳ ಶಕ್ತಿಯಷ್ಟೇ ಅಲ್ಲದೆ ಅವುಗಳನ್ನು ಪ್ರೆಪರೇಪಿಸುವ ಮನಗಳ ಯುಕ್ತಿಯೂ ಇಲ್ಲಿ ಮಹತ್ವವನ್ನು ಪಡೆಯುತ್ತದೆ ಎಂಬುದು ತಿಳಿದಿರಬೇಕು. ಅಂತಹ ನಾಯಕರ ಜನ್ಮಭೂಮಿಯಾದ ಈ ದೇಶ ಒಂದು ಪಕ್ಷ ಅಂದೊಮ್ಮೆ ಇಲ್ಲಿನ ತೈಲ ನಿಕ್ಷೇಪಗಳು ಪತ್ತೆಯಾಗದಿದ್ದರೂ ಮತ್ತೊಂದು ಯಾವುದಾದರು ದಿಸೆಯಲ್ಲಿ ಸಾಧನೆ ಮಾಡಿಯೆ ಮುನ್ನೆಡೆಯುತ್ತಿತ್ತು ಎಂಬುದರಲ್ಲಿ ಸಂಶಯವೇ ಬೇಡ. ಇಂದು ವಿಶ್ವದ ಏಳನೇ ಅತಿಹೆಚ್ಚು ತೈಲ ಹಾಗು ನೈಸರ್ಗಿಕ ಅನಿಲದ ಸಂಗ್ರಹವನ್ನು ಹೊಂದಿರುವ ದೇಶ ಮುಖ ಮಾಡುತ್ತಿರುವದು ಸೌರ ಫಲಕಗಳ ಮೂಲಕ ಪಡೆಯಬಹುದಾದ ಶಕ್ತಿಯೆಡೆಗೆ ಎಂದರೆ ಇಲ್ಲಿನ ನಾಯಕರ ದೂರದೃಷ್ಟಿ ಅದೆಷ್ಟರ ಮಟ್ಟಿಗಿದೆ ಎಂದು ತಿಳಿಯುತ್ತದೆ. ಕುಡಿಯಲು ನೈಸರ್ಗಿಕವಾಗಿ ಸಿಗದ ನೀರಿಲ್ಲದ, ಸರಾಸರಿ ತಾಪಮಾನ 40 ರಿಂದ 50 ಡಿಗ್ರಿಗಳವರೆಗೆ ಹೋಗುವ, ಯಾವೊಂದು ಬೆಳೆಯನ್ನು ಹೆಚ್ಚಾಗಿ ಬೇರೆ ದೇಶಗಳಿಂದ ಆಮದುಮಾಡಿಕೊಳ್ಳುವ ದೇಶ ಇಂದು ಕೋಟ್ಯಾನುಕೋಟಿ ಜನರನ್ನು ತನ್ನ ಒಡಲಲ್ಲಿ ಹಾಕಿಕೊಂಡು ಬೆಳೆಸುತ್ತಿದ್ದೆ. ಇಷ್ಟೆಲ್ಲ ಇತಿ ಮಿತಿಗಳ ನಡುವೆಯೇ ನೋಡುಗರ ಕಣ್ಣು ಕುಕ್ಕುವಂತೆ ಬೆಳೆದ ನಗರ ಹಾಗು ಅದನ್ನು ಬೆಳೆಸಿದ ನಾಯಕರುಗಳು ಇಂದು ನಮ್ಮಲ್ಲಿ ಪ್ರತ್ಯೇಕ ರಾಜ್ಯಬೇಕೆಂದು ಅರಚುತ್ತಾ ಅಲೆಯುವವರಿಗೆ ಮಾದರಿಯಾಗಬಲ್ಲರು.





Friday, July 20, 2018

ಬಾಡುಟವೊಂದರ ಐತಿಹ್ಯ - II

ಭಯದ ತೀಕ್ಷ್ಣತೆಗೆ ಇಟ್ಟ ಕಾಲನ್ನು ಎತ್ತಿ ಮೇಲಿಡಲೂ ಆಗುತ್ತಿಲ್ಲ. ಇನ್ನೇನು ಪ್ರೇತಾತ್ಮವೊಂದು ನನ್ನ ಬಂದು ಅವರಿಸಿಬಿಟ್ಟಿತು ಎಂದು ಗಡಗಡ ನಡುಗುತ್ತಿರುವಾಗಲೇ ಅತ್ತ ಕಡೆಯಿಂದ ಸೈನಿಕನೊಬ್ಬ ಕಾಡುಕೋಳಿಯ ಕಾಲುಗಳೆರಡನ್ನು ಇಡಿದುಕೊಂಡು ಖುಷಿಯಿಂದ ಡೇರೆಯ ಕಡೆ ಓಡಿ ಬರುತ್ತಿದ್ದಾನೆ. ಕೋಳಿಯ ಕತ್ತು ಅದಾಗಲೇ ಜೋತುಬಿದ್ದು ನೇತಾಡುತಿದ್ದರಿಂದ ರಾತ್ರಿಗೆ ಕೋಳಿಮಾಂಸದ ಏನಾದರೊಂದನ್ನು ಮಾಡಲೇಬೇಕಾದ ಅನಿವಾರ್ಯತೆ ಬಂದೊದಗಿತು ಎಂದುಕೊಂಡೆ. ಓಡೋಡಿ ಬರುತ್ತಿದ್ದ ಆತ ನನ್ನ ನೋಡಿ ಒಮ್ಮೆಲೇ ಅವಕ್ಕಾಗಿ ನಿಂತುಬಿಟ್ಟ. ಬಹುಷಃ ಭಯದ ಸ್ಫೋಟ ಗರಬಡಿದವನಂತೆ ನಿಂತ ನನ್ನನು ಕಂಡು ಆತನೊಳಗೂ ಆಗ ಜರುಗಿರಬೇಕು! ಕೆಲಕಾಲ ದೂರದಲ್ಲೇ ಅಲುಗಾಡದೆ ನಿಂತು 'ಯಾರದು' ಎಂದು ಕಾತ್ರಿಪಡಿಸಿಕೊಂಡು, ನಿಂತಿರುವುದು ನಾನೆಂದು ತಿಳಿದ ಮೇಲೆ ಖುಷಿಯಿಂದ ನನ್ನೆಡೆಗೆ ಕೋಳಿಯನ್ನು ತಂದು ನೀಡಿದ. ನೆನ್ನೆ ಬಲೆಯನ್ನು ಹಾಕುವಾಗ ನನ್ನೊಟ್ಟಿಗೆ ಬಂದು ನೋಡಿದ ಆತ ಇಂದು ಅದೇ ದಿಕ್ಕಿನಿಂದ ರೆಕ್ಕೆಗಳ ಶಬ್ದ ಬಂದಕೂಡಲೇ ನನಗಿಂತ ಮೊದಲೇ ಓಡೋಡಿ ಹೋಗಿ ಕೋಳಿಯನ್ನು ಹಿಡಿದು ಸಂಹರಿಸಿ ತಂದಿದ್ದ.

ಡೇರೆಯ ಬಳಿಗೆ ಬರುವಷ್ಟರಲ್ಲೇ ವಾಯುದೇವ ಹಚ್ಚಿಬಂದಿದ್ದ ಎರಡೂ ಒಲೆಗಳನ್ನು 'ಕೆಡಿಸಿ' ತನ್ನ ಅಧಿಪತ್ಯವನ್ನು ಸಾಬೀತುಪಡಿಸಿದ್ದ! ಮೊದಲು ಹೋಗಿ ಅನ್ನದ ಅಗುಳುಗಳನ್ನು ಹಿಸುಕಿ ನೋಡಿದೆ. ಅರೆಬರೆ ಬೆಂದಂತಿದ್ದ ಅಗುಳುಗಳು ಇನ್ನೂ ಸಹ ಪಾತ್ರೆಯ ತಳದಲ್ಲೇ ಉಳಿದಿದ್ದವು. ಕೆಟ್ಟು ಬಿದ್ದಿದ ಓಲೆ, ಅರೆಬರೆ ಹೆಚ್ಚಿದ್ದ ತರಕಾರಿಗಳು, ಅಲ್ಲಲ್ಲಿ ಚದುರಿಕೊಂಡಿದ್ದ ಮಸಾಲಾ ಪದಾರ್ಥಗಳನ್ನು ಕಂಡ ಸೈನಿಕ ಆತನ ಖಡ್ಗವೊಂದನ್ನು ತಂದು ತಾನಾಗಿಯೇ ಕೋಳಿಯನ್ನು 'ಶುಚಿ'ಗೊಳಿಸಿ ತರುವೆ ಎನುತ ಝರಿಯ ಬಳಿಗೆ ಹೋಗುತ್ತಾನೆ. ಕೊಂಚ ನಿರಾಳನಾದ ನಾನು ಪುನಃ ಬೆಂಕಿಯನ್ನು ಹಚ್ಚುವ ಮುನ್ನ ಬೇಕಾದ ಎಲ್ಲ ಪದಾರ್ಥಗಳನ್ನು ಜೋಡಿಸಿಕೊಳ್ಳತೊಡಗಿದೆ.ಸೊಂಟಕ್ಕೆ ಕಟ್ಟಿಕೊಂಡಿದ್ದ ಬಟ್ಟೆಯನ್ನು ನೆಲದ ಮೇಲೆ ಹರವಿ ಚೆಕ್ಕೆ, ಲವಂಗ, ಏಲಕ್ಕಿಗಳನ್ನು ನಾಲ್ಕೈದರಂತೆ ಒಂದೊಂದು ಗುಂಪಾಗಿ ಮಾಡಿ ಇಟ್ಟೆ. ಕೊಯ್ದುಕೊಂಡಿದ್ದ ಈರುಳ್ಳಿ ಹಾಗು ಹುಳಿಹಣ್ಣುಗಳನ್ನು ಒಂದು ಗಂಗಾಳದಲ್ಲಿ ಹಾಕಿ ಬದಿಗೆ ಇರಿಸಿಕೊಂಡೆ. ಕೆಂಪು ಕೆಂಪಾದ ತ್ರಿಕೋನಾಕಾರದ ಹುಳಿಹಣ್ಣಿನ ಹೋಳುಗಳು, ಕಾಮನಬಿಲ್ಲಿನಂತೆ ಬಾಡಿಕೊಂಡಿರುವ ಈರುಳ್ಳಿಯ ಎಸಳುಗಳು ಹಾಗು ಅವುಗಳ ಸುಂದರ ಮೈಬಣ್ಣ ಏನೋ ಒಂದು ಬಗೆಯ ಖುಷಿಯ ಸೆಲೆಯನ್ನು ತಾವಿರುವಲ್ಲಿ ಸೃಷ್ಟಿಸಿಕೊಂಡಿದ್ದವು. ಬರುವಾಗ ಡೇರೆಯ ಪಕ್ಕಕೆ ಬೆಳೆದು ನಿಂತಿದ್ದ ಹಸಿರುಮೆಣಸಿನ ಗಿಡದಿಂದ ಏಳೆಂಟು ಕಾಯಿಗಳನ್ನು ಕಿತ್ತು ತರಲು ಮರೆತಿರಲಿಲ್ಲ. ಇನ್ನೇನು ಎಲ್ಲವು ಸಿದ್ದವಾದವು ಎನ್ನುವಷ್ಟರಲ್ಲೇ ಕೋಳಿಯನ್ನು ಶುಚಿಗೊಳಿಸಲು ಹೋಗಿದ್ದ ಸೈನಿಕ ದೊಡ್ಡದೊಂದು ಎಲೆಯಲ್ಲಿ ಮಾಂಸದ ತುಂಡುಗಳನ್ನು ತುಂಬಿಕೊಂಡು ನಾಟಕದ ಯಾವುದೊ ಒಂದು ಸಂಭಾಷಣೆಯನ್ನು ಹೇಳಿಕೊಳ್ಳುತ್ತಾ ಪ್ರಶಾಂತ ರಾತ್ರಿಯ ಘಾಡಮೌನವನ್ನು ಸೀಳಿಕೊಳ್ಳುತ್ತಾ ಡೇರೆಯ ಬಳಿಗೆ ಬರತೊಡಗಿದ.

ನಾಲ್ಕೈದು ಪಾವು ಅಕ್ಕಿ ಹಿಡಿಯುವಷ್ಟು ದೊಡ್ಡದಾದ ಪಾತ್ರೆಯೊಂದನ್ನು ತೆಗೆದುಕೊಂಡು ಹೊಸದಾಗಿ ಪಕ್ಕದಲ್ಲಿ ನಿರ್ಮಿಸಿದ ಒಲೆಯನ್ನು ಹಚ್ಚಿಸಿ ಇಟ್ಟೆ. ಚೊರ್ರ್...ಎಂಬ ಸದ್ದಿನೊಂದಿಗೆ ನೀರು ಆವಿಯಾಗುವುದನ್ನು ಖಾತ್ರಿಪಡಿಸಿಕೊಂಡು ಮಡಿಕೆಯಲ್ಲಿ ಕಾಯಿಸಿದ್ದ ತುಪ್ಪವನ್ನು ಒಂದು ಸೌಟಿನ ತುಂಬ ಬರುವಷ್ಟು ಹಾಕಿದೆ. ಹಿತವಾದ ತುಪ್ಪದ ಕನುವು ಮೂಗಿಗೆ ಬಂದು ಬಡಿಯುವಷ್ಟರಲ್ಲೇ ಹೆಚ್ಚಿದ ಈರುಳ್ಳಿಗಳ ಅಷ್ಟೂ ರಾಶಿಯನ್ನು ಅದರ ಮೇಲೆ ಸುರಿದೆ. ಕಾದ ಖಡ್ಗವನ್ನು ಶಾಂತ ನೀರಿನೊಳಗೆ ಅದ್ದಿದಂತೆ ವಿಪರೀತ ಪ್ರತಿರೋಧ ಒಡ್ಡಿದ ತುಪ್ಪ ಕ್ಷಣಕ್ಷಣಕ್ಕೂ ಸದ್ದನ್ನು ಕಡಿಮೆಗೊಳಿಸುತಾ ಕ್ರಮೇಣ ಈರುಳ್ಳಿಯ ರಾಶಿಯನ್ನು ತನ್ನೊಳಗೆ ಬೆರೆಸಿಕೊಂಡಿತು. ನಂತರ ಏನನ್ನು ಹಾಕುವುದು ಎಂದು ಯೋಚಿಸುತ್ತಿರುವಾಗಲೇ ಡೇರೆಯಿಂದ ತುಸು ದೂರದಿಂದ ಏನೋ ಓಡಿದ ಸದ್ದು ಕೇಳಿಸಿತು! ಹಿತವಾಗ ಗಾಳಿಯ ಅಲೆಗಳನ್ನು ಬೀಸುತ್ತಿದ್ದ ಶಾಂತ ರಾತ್ರಿಗೆ ಆ ಹೆಜ್ಜೆಗಳ ಸದ್ದು ಒಮ್ಮೆಲೇ ನನ್ನ ಎದೆಯನ್ನು ಝಲ್ಲೆನಿಸಿತು! ಅಷ್ಟರಲ್ಲಾಗಲೇ ಸ್ನಾನವನ್ನು ಮುಗಿಸಿಕೊಂಡು ಬಂದು ಊಟಕ್ಕೆ ಅಣಿಯಾಗುತ್ತಿದ್ದ ಸೈನಿಕರೂ ಸಹ ಸದ್ದನ್ನು ಕೇಳಿ ಕೂಡಲೇ ಡೇರೆಯಿಂದ ಹೊರಬಂದರು. ಎಲ್ಲರು ಸದ್ದು ಬಂದ ಕಡೆಗೆ ಕಿವಿನಿಮಿರಿಸಿ ಆಲಿಸತೊಡಗಿದರು. ಶತ್ರು ಸೈನಿಕರು ಹೀಗೆಯೇ ರಾತ್ರೋ ರಾತ್ರಿ ನಾಲ್ಕೈದು ಸೈನಿಕರಿರುವ ಡೇರೆಗಳ ಮೇಲೆ ಧಾಳಿ ನೆಡೆಸಿ ಧವಸ ದಾನ್ಯಗಳನ್ನು ಲೂಟಿಮಾಡುವುದಲ್ಲದೆ ಹಿಂದಿನಿಂದ ಬಂದು ಚಾಕು ಚೂರಿಯಿಂದ ತಿವಿದು ಸಾಯಿಸುವುದೂ ಉಂಟು ಎಂಬುದನ್ನು ಕೇಳಿದ್ದೆ. ಹಾಗಾದ ಕಾರಣ ಇಂತಹ ಸದ್ದುಗಳನ್ನು ಅಷ್ಟಾಗಿ ನಿರ್ಲಕ್ಷಿಸಲು ಸಾಧ್ಯವಿಲ್ಲ. ಎಲ್ಲರೂ ಕೆಲನಿಮಿಷಗಳ ಕಾಲ ನಿಂತ ಜಾಗದಿಂದ ಅಲುಗಾಡಲಿಲ್ಲ. ಸೈನಿಕರ ಕೈಗಳಲ್ಲಾಗಲೆ ಖಡ್ಗಗಳು ಬಡಿದಾಟಕ್ಕೆ ಅಣಿಯಾಗಿದ್ದವು. ಕೆಲಸಮಯದ ನಂತರ ಒಬ್ಬ ಸೈನಿಕ ತುಸುದೂರ ಹೋಗಿ ವಾಪಸ್ಸು ಬಂದ. ತಾನು ಕಂಡ ಹಂದಿಗಳ ಗುಂಪನ್ನು ವರ್ಣಿಸುತ್ತಾ ಮರಿದಡ್ಡೆಯೊಂದು ತನ್ನ ಮರಿಗಳ ಸಮೇತ ಮರದ ಬುಡವೊಂದನ್ನು ಕೊರೆದು ತಿನ್ನುತ್ತಿದ್ದದ್ದನು ಹೇಳಿದ. ಹಂದಿಯ ಹೆಸರನ್ನು ಕೇಳಿ ನಾವೆಲ್ಲ ಒಮ್ಮೆಲೇ ನಿಟ್ಟುಸಿರು ಬಿಟ್ಟೆವು.

ಸೈನಿಕರು ಅಡುಗೆ ನೆಡೆಯುತ್ತಿರುವುದು ‘ಇಂದಿಗೂ ಅಥವಾ ನಾಳೆಗೂ’ ಎಂದಾಗಲೇ ಒಲೆಯ ಮೇಲೆ ತುಪ್ಪಕ್ಕೆ ಈರುಳ್ಳಿಯನ್ನು ಸುರಿದ ನೆನಪಾಯಿತು. ಚಂಗನೆ ಒಲೆಯ ಬಳಿಗೆ ನೆಗೆದು ನೋಡುತ್ತೀನಿ, ಕೆಂಬಿಳುಪು ಬಣ್ಣದ ಈರುಳ್ಳಿಯ ಎಸಳುಗಳು ಚಿನ್ನದ ಬಣ್ಣಕ್ಕೆ ತಿರುಗಿ ಇನ್ನೇನು ಸುಟ್ಟು ಕರಕಲಾಗಿ ಹೋಗಲು ಅಣಿಯಾಗಿದ್ದವು! ನನ್ನ ಮಂಕುಬುದ್ಧಿಗೆ ಶಪಿಸಿಕೊಳ್ಳುತ್ತ, ಕೂಡಲೇ ಕರಿದಂತೆ ಕಾಣುತ್ತಿದ್ದ ಅಷ್ಟೂ ಈರುಳ್ಳಿಗಳನ್ನು ಒಂದು ಪಾತ್ರೆಗೆ ಸುರಿದುಕೊಂಡು ಪುನ್ಹ ಮತ್ತೊಂದು ಸೌಟು ತುಪ್ಪವನ್ನು ಅದೇ ಪಾತ್ರೆಗೆ ಹಾಕಿದೆ. ಕೆಲಕ್ಷಣಗಳ ನಂತರ ಅಷ್ಟೂ ಮಸಾಲಾ ಪದಾರ್ಥಗಳನ್ನು ತುಪ್ಪದ ಮೇಲೆ ಸುರಿದದ್ದೇ ತಡ , ಸುಗಂಧ ಭರಿತ ಕಾಡುಗಳ ಕಿಕ್ಕಿರಿದ ಪೊದೆಗಳೊಳಗೆ ಹೊಕ್ಕ ಅನುಭವ! ಘಮಘಮಿಸುವ ಮತ್ತಿನಲ್ಲೇ ಕೆಲಕ್ಷಣ ಕಳೆದ ಮೇಲೆ ಮತ್ತೊಂದು ಹಸಿ ಈರುಳ್ಳಿಯನ್ನು ಹೆಚ್ಚಿ ಹಾಕಿದೆ. ಮಸಾಲ ಪದಾರ್ಥಗಳ ಪ್ರವೇಶದಿಂದ ಮುನಿಸಿಕೊಂಡು ಸಿಡಿಮಿಡಿಗೊಳ್ಳುತ್ತಿರುವಂತೆ ಆಡುತ್ತಿದ್ದ ತುಪ್ಪದ ಮತ್ತೊಮ್ಮೆ ಎಲ್ಲವನ್ನು ಬೆರೆಸಿಕೊಂಡು ವಟಗುಡತೊಡಗಿತು.

ಅಷ್ಟರಲ್ಲಾಗಲೇ ಸೈನಿಕರು ಎರೆಡೆರೆಡು ಬಾರಿ ಬಂದು ನಾನು ಏನು ಮಾಡುತ್ತಿರುವೆನೆಂದು ಕೇಳಿಕೊಂಡು ಹೋದರು. ನಾ ಮಾಡುತ್ತಿರುವ ಬಾಡೂಟದ ಹೆಸರಾದರೂ ಏನು? ಉತ್ತರ ದೊರೆಯಲಿಲ್ಲ. ಮೊದಲು ತಯಾರಿಸಿ ನಂತರ ಹೆಸರಿಡುವ ಕಾರ್ಯಕ್ರಮವನ್ನು ಮಾಡುವ ಎಂದುಕೊಂಡು ಹಸಿರುಮೆಣಸಿನ ಕಾಯಿ ಹಾಗು ಹುಳಿಹಣ್ಣುಗಳ ಕೆಂಪುರಾಶಿಯನ್ನು ಪಾತ್ರೆಗೆ ಸುರಿದೆ. ಕಾದ ತುಪ್ಪದ ಸಿಟ್ಟು ತನ್ನ ಎಲ್ಲ ಎಲ್ಲೆಯನ್ನು ಮೀರಿ ನನ್ನನೇ ಸುಡುವ ಮಟ್ಟಕ್ಕೆ ಹೋಯಿತು. ಆದದರಿಂದಲೋ ಏನೋ ಒಂದೆರೆಡು ಹನಿಗಳು ಕೈಮೇಲೆ ಹಾರಾರಿ ಬಿದ್ದವು! ಕಾದ ತುಪ್ಪದ ಸಿಟ್ಟಿನ ಭಯ ಕ್ಕೆ ಎನ್ನುವಂತೆ ಹುಳಿಹಣ್ಣುಗಳು ಶರವೇಗದಲ್ಲಿ ಕರಗತೊಡಗಿದವು. ಇವುಗಳ ಮದ್ಯೆ ಕೆಂಪು ಮೆಣಸಿನ ಕಾಯಿ, ಶುಂಠಿ, ಬೆಳ್ಳುಳ್ಳಿ, ಹರಿಶಿಣದ ಕೊಂಬು ಹಾಗು ಸಂಬಾರ ಬೀಜಗಳನ್ನು ಪುಡಿಮಾಡಲು ಬದಿಗೆ ಇರಿಸಿಕೊಂದ್ದ ನೆನಪಾಗಿ, ಎಲ್ಲ ದೋಷವನ್ನು ಮತ್ತೊಮ್ಮೆ ನನ್ನ ಬುದ್ದಿಯ ಮೇಲೆಯೇ ಹೊರಿಸಿ, ಕುಟ್ಟುವ ಕಲ್ಲನ್ನು ಬಳಿಗೆ ತಂದು, ನೋಡಿದರೇನೇ ಕರುಣೆ ಬರುವಂತೆ ಒಣಗಿ ಬೆಂಡಾಗಿದ್ದ ಕೆಂಪು ಮೆಣಸಿನಕಾಯಿ, ವಕ್ರ ವಕ್ರವಾಗಿ ನಾನಿರುವುದೇ ಹೀಗೆ ಎಂಬಂತೆ ಬೆಳೆದುಕೊಂಡಿದ್ದ ಹರಿಶಿಣದ ಕೊಂಬು ಹಾಗು ಗಂಡು ಹೆಣ್ಣು, ಮೇಲು ಕೀಳು, ಬಡವ ಬಲ್ಲಿದನೆಂಬ ಯಾವೊಂದು ತಾರತಮ್ಯವಿಲ್ಲದೆ ಎಲ್ಲವೂ ಒಂದೇ ಎಂಬಂತೆ ಕಾಣುತ್ತಿದ್ದ ಸಂಬಾರ ಬೀಜಗಳನ್ನು ಒಟ್ಟಿಗೆ ಬೆರೆಸಿ ಕುಟ್ಟತೊಡಗಿದೆ. ಒಂದೆಡೆ ಹಸಿ ಕೋಳಿಮಾಂಸದ ರಾಶಿ, ಪಕ್ಕದಲ್ಲಿ ಅರೆಬರೆ ಬೆಂದ ಅಕ್ಕಿಯ ಕಾಳುಗಳು, ಇತ್ತಕಡೆ ಬೆಂಕಿಯ ಹಾಗು ತುಪ್ಪದ ಶಾಖದಲ್ಲಿ ವಿಲೀನರಾಗಿ ಸುತ್ತಲ ಪರಿಸರವನ್ನು ಘಮಮಯವಾಗಿಸಿರುವ ಮಸಾಲಾ ಪದಾರ್ಥಗಳು.... ಸಮುದ್ರದ ಮರಳಿಗಿಂತಲೂ ನಯವಾದ ಮೆಣಸು, ಹರಿಶಿಣದ ಕೊಂಬು ಹಾಗು ಸಂಬಾರಬೀಜಗಳ ಪುಡಿಯನ್ನು ಒಲೆಯ ಮೇಲೆ ಬೇಯುತ್ತಿದ್ದ ಮಸಾಲಾ ಪದಾರ್ಥಗಳ ಮೇಲೆ ಸುರಿದೆ. ತದಾನಂತರ ಶುಂಠಿ ಬೆಳ್ಳುಳ್ಳಿಗಳನ್ನು ಒಟ್ಟಿಗೆ ಜಜ್ಜಿ ಬೆರೆಸಿದಾಗ ಬಂದ ಘಮ ನನ್ನ ನಾಲಿಗೆಯನ್ನು ಒದ್ದೆ ಮಾಡಿದಂತೂ ಸುಳ್ಳಲ್ಲ! ಕೂಡಲೇ ಅಷ್ಟೂ ಮಾಂಸದ ಚೂರುಗಳನ್ನು ಹಾಕಿ ಹುರಿದು ಜೊತೆಗೆ ಒಂದು ಹಿಡಿಯಷ್ಟು ಉಪ್ಪನ್ನು ಹುದುರಿಸಿ ಕೊನೆಗೆ ಎಂಟತ್ತು ಪಾವು ನೀರನ್ನು ಹಾಕಿ ಎಲ್ಲವನ್ನು ಬೆರೆಸಿದೆ. ಗಡಿಬಿಡಿಯಲ್ಲಿ ಅಚಾತುರ್ಯವೊಂದು ನೆಡೆದದ್ದು ನನ್ನ ಅರಿವಿಗೆ ಬಂದದ್ದು ತುಸು ಸಮಯದ ನಂತರವೇ! ಮಸಾಲೆ ಪದಾರ್ಥಗಳನ್ನು ಹಾಕುವ ಭರದಲ್ಲಿ ಸಣ್ಣ ಮಡಕೆಯಲ್ಲಿ ಊಟದ ಕೊನೆಗೆ ಬಡಿಸಲು ಇಟ್ಟುಕೊಂಡಿದ್ದ ಗಟ್ಟಿ ಮೊಸರನ್ನೂ ಅದರೊಳಗೆ ಸುರಿದಿದ್ದೆ. ಅಡಿಗೆ ಕೆಟ್ಟಿತು ಎನುತ ಕೆಲ ಕ್ಷಣಗಳ ಕಾಲ ಅವಕ್ಕಾಗಿ ನಿಂತ ನನ್ನಲ್ಲಿ ಆತ್ಮವಿಶ್ವಾಸ ಮಾತ್ರ ಒಂದಿನಿತು ಕ್ಷೀಣಿಸಲಿಲ್ಲ. ಆದದ್ದು ಆಗಲಿ ಎನುತ ಸುಮ್ಮನಿದ್ದೆ. ಕೆಲನಿಮಿಷಗಳಲ್ಲಿಯೇ ಕುದಿಯತೊಡಗಿದ ಕಡುಕೆಂಪುಬಣ್ಣದ ಮಸಾಲಾನೀರಿಗೆ ಅರೆಬರೆ ಬೆಂದ ಅಕ್ಕಿಯನ್ನು ಬಸಿದು ಸುರಿಯತೊಡಗಿದೆ. ಅರ್ಧದಷ್ಟು ಅಕ್ಕಿಯನ್ನು ಸುರಿಯುವಷ್ಟರಲ್ಲಿ ತುಪ್ಪದಲ್ಲಿ ಬೆಂದು ಕರಕಲಾದ ಈರುಳ್ಳಿಗಳ ರಾಶಿಗಳು ನೆನಪಾಗಿ, ಸುರಿಯುವ ಕಾಯಕವನ್ನು ಅಲ್ಲಿಗೆ ನಿಲ್ಲಿಸಿ, ಅವುಗಳನ್ನು ಬಳಿಗೆ ತಂದು ಒಂದೆರೆಡು ಎಸಳುಗಳನ್ನು ಬಾಯಲ್ಲಿ ಇರಿಸಿದೆ. ಕರಕಲಾಗದರೂ ಏನೋ ಒಂದು ಬೇಗೆಯ ರುಚಿ ಅವುಗಳಲ್ಲಿ ಕಾಣಿಸಿತು. ಅದಾದ್ದಾಗಲಿ ಎನುತ ಬೆಳ್ಳನೆ ಹರಡಿಕೊಂಡಿದ್ದ ಅನ್ನದ ರಾಶಿಯ ಮೇಲೆ ಒಂದೇ ಸಮನಾಗಿ ಅವುಗಳನ್ನು ಹುದುರಿಸಿ ಉಳಿದ ಅನ್ನವನ್ನೂ ಅದರ ಮೇಲೆ ಪದರವಾಗಿ ಹರಡಿದೆ.

ಅಷ್ಟರಲ್ಲಾಗಲೇ ಸೈನಿಕರ ಕೋಪ ಅವರ ನತ್ತಿಯನ್ನು ಮುಟ್ಟಿರಬೇಕು. ಒಬ್ಬರಿಂದೊಬ್ಬರು ಬಂದು ನನ್ನ ಹೆಸರನ್ನು ಹಿಡಿದು ಅರಚತೊಡಗಿದರು. ದಿನಗಳ ಕಾಲ ಹಸುವೆಯನ್ನು ಬೇಕಾದರೆ ನೀಗಿಕೊಂಡು ಬದುಕಬಹುದು ಆದರೆ ಹಸಿವಿನಿಂದ ಕೆಂಗೆಟ್ಟ ಸೈನಿಕನ ಕೋಪವನ್ನು ಕ್ಷಣಮಾತ್ರವೂ ಸಹಿಸಲು ಆಗದು. ಅನ್ನವನ್ನು ಬೇಗ ಹರಳಿಸಬೇಕು ಎಂದುಕೊಂಡು ಪಾತ್ರೆಗೆಂದೇ ಮಾಡಿದ್ದ ಮಣ್ಣಿನ ಮುಚ್ಚನ್ನು ತಂದು ಮುಚ್ಚಿ ಅದರ ಮೇಲೆ ಒಂತಿಷ್ಟು ಕೆಂಡವನ್ನೂ ಸುರಿದೆ! ಇಲ್ಲೇ ನಿಂತರೆ ಬೈಗುಳದಲ್ಲೇ ನನ್ನ ಜೀವವನ್ನು ತೆಗೆದಾರು ಎಂದುಕೊಂಡು ಒಂತಿಷ್ಟು ಬಾಳೆಯ ಎಲೆಗಳನ್ನು ಕೊಯ್ದು ತರಲು ಹೊರಟೆ. ಅಲ್ಲೊಂದು ಇಲ್ಲೊಂದು ಬೆಳೆದ ಬಾಳೆಗಿಡಗಳನ್ನು ಹುಡುಕಿ ಎಲೆಗಳನ್ನು ಕೊಯ್ದು ಬಂದು ನೋಡುತ್ತೇನೆ, ನಾಲ್ವರು ಸೈನಿಕರು ಅದಾಗಲೇ ಒಲೆಯ ಮೇಲಿಟ್ಟಿದ್ದ ಪಾತ್ರೆಯನ್ನು ನೆಲದ ಮೇಲಿರಿಸಿ, ಪಾತ್ರೆಯ ತಳ ಸೇರಿದ್ದ ಮಸಾಲಾಪದಾರ್ಥಗಳನ್ನು ಹದವಾಗುವಂತೆ ಮಿಶ್ರಿಸಿ, ಒಂದೊಂದು ಹಿಡಿ ಅನ್ನವನ್ನೂ ಬಾಯೊಳಗೆ ಹಾಕಿಕೊಂಡು 'ಇಂಶಾಲ್ಲ...!' ಎನುತ ಕಣ್ಣು ಮುಚ್ಚಿ ರುಚಿಯನ್ನು ಆಸ್ವಾದಿಸುತ್ತಿದ್ದರು. ನನ್ನನು ಕಂಡ ಕೂಡಲೇ 'ಶಹಭಾಷ್ ಮೇರೇ ಶೇರ್..' ಎನುತ ನನ್ನನು ಮುತ್ತುವರೆದು ಕೈಲಿದ್ದ ಬಾಳೆಯ ಎಲೆಗಳನ್ನು ಕಸಿದುಕೊಂಡು ಅನ್ನ ಹಾಗು ಕೋಳಿಯ ಚೂರುಗಳನ್ನು ಒಟ್ಟಿಗೆ ಹಾಕಿಕೊಂಡು ಗಬಗಬನೆ ತಿನ್ನತೊಡಗಿದರು. ಅಡುಗೆ ಅಷ್ಟು ಚೆನ್ನಾಗಿದಿರುವುದರ ಬಗ್ಗೆ ನನಗೆ ನಂಬಿಕೆಯೇ ಬರಲಿಲ್ಲ.

ಈ ಜನ್ಮಕ್ಕಿಷ್ಟು ಸಾಕು.. ಎಂಬ ಆತ್ಮತೃಪ್ತಿಯಿಂದ ಸೈನಿಕರು ನಾ ಮಾಡಿರುವ ಅಡುಗೆಯನ್ನು ತಿನ್ನುವುದನ್ನೇ ನೋಡತೊಡಗಿದೆ. ಏನೋ ಒಂದು ಹೊಸದಾದ ಖಾದ್ಯವನ್ನು ಪರಿಚಯಿಸಿದ ಹೆಮ್ಮೆ. ಅಡುಗೆಯ ರುಚಿಯೋ ಅಥವಾ ಹಸಿವಿನ ವೇದನೆಯೋ ಸೈನಿಕರಂತೂ ನಿಂತೇ ತಿನ್ನತೊಡಗಿದರು. ಸ್ವಲ್ಪ ಅತ್ತ ಕಡೆ ಕಣ್ಣೊರಳಿಸಿ ನೋಡುತ್ತನೆ, ನಮ್ಮ ಸೈನಿಕರು ನಿಂತ ಸ್ಥಳದಿಂದ ತುಸುದೂರದಲ್ಲಿ ಇನ್ನೂ ನಾಲ್ಕು ಸೈನಿಕರ ಗುಂಪು ಕೈಕಟ್ಟಿ ಊಟವನ್ನು ತಿನ್ನುತ್ತಿದ್ದ ಸೈನಿಕರನ್ನೇ ನೋಡುತ್ತಾ ನಿಂತಿದೆ. ಕೆಲಕ್ಷಣದಲ್ಲೇ ಅವರನ್ನು ನೋಡಿದ ನಮ್ಮ ಸೈನಿಕರು ಅವರ ವೇಷಭೂಷಣಗಳಿಂದ ಅದು ವೈರಿಪಡೆಯೆಂದು ಖಾತ್ರಿಪಡಿಸಿಕೊಂಡು ಕೂಡಲೇ ತಮ್ಮ ತಮ್ಮ ಖಡ್ಗಗಳನ್ನು ತಂದು ಕಾದಾಡಲು ಅಣಿಯಾಗಿ ನಿಂತರು. ಕೂಡಲೇ ಆ ಗುಂಪಿನ ಒಬ್ಬ ಸೈನಿಕ ಮಾತನಾಡಿ 'ಸಾಹೇಬ್, ತಾಳ್ಮೆ ತಂದುಕೊಳ್ಳಿ. ನಿಮ್ಮ ಡೇರೆಯನ್ನು ನಾಶಮಾಡಿ ನಿಮ್ಮ ಒಬ್ಬೊಬ್ಬರನ್ನು ಕೊಂದು ಬನ್ನಿ ಎಂಬ ಆಜ್ಞೆ ನಮ್ಮ ಸೈನ್ಯಾಧಿಪತಿಯಿಂದ ಆಗಿರುವುದೇನೋ ನಿಜ. ಆದರಂತೆ ನಾವುಗಳು ಸರ್ವಸನ್ನದ್ಧರಾಗಿ ನಿಮ್ಮ ಮೇಲೆ ಆಕ್ರಮಣ ಮಾಡಲು ಬಂದೆವು. ನಮ್ಮ ಸದ್ದನ್ನು ಕೇಳಿ ನೀವುಗಳು ಹೊರಬಂದು ದೂರದಲ್ಲೆಲೋ ಇದ್ದ ಹಂದಿಯ ಸದ್ದೆಂದು ಸುಮ್ಮನಾದಿರಿ. ಅದೇ ಸುಸಮಯವೆಂದು ಇನ್ನೇನು ನಾವುಗಳು ನಿಮ್ಮ ಹಿಂದಿನಿಂದ ಬಂದು ಆಕ್ರಮಣ ಮಾಡಬೇಕು ಎನ್ನುವಷ್ಟರಲ್ಲಿ ಹಿಂದೆಂದೂ ಆಸ್ವಾದಿಸಿರದ ಸುವಾಸನೆಯೊಂದು ನಮ್ಮ ಮೂಗನ್ನು ಬಂದು ಬಡಿಯಿತು. ಎಷ್ಟೇ ಪ್ರಯತ್ನ ಪಟ್ಟರೂ ನಮ್ಮನು ನಾವು ನಿಯಂತ್ರಿಸಲೇ ಆಗಲಿಲ್ಲ. ಪರಿಣಾಮವಾಗಿ ಅಡುಗೆ ಪೂರ್ತಿಯಾಗಲು ಕಾಯತೊಡಗಿದೆವು. ಗಂಟಲಲ್ಲಿ ಅನ್ನ ಇಳಿಯುತ್ತಿರುವಾಗ ನಿಮ್ಮ ಮೇಲೆ ಆಕ್ರಮಣ ಮಾಡಿ ಆಹಾರವನ್ನು ಕಸಿದು ತಿನ್ನುವುದು ಪಾಪದ ಕಾರ್ಯ. ಅಲ್ಲಾವು ಅದನ್ನು ಮೆಚ್ಚನು. ಆದರಿಂದ ನಿಮ್ಮಿಂದ ಬೇಡಿಯೇ ಸರಿ, ಆ ಅಮೂಲ್ಯ ಭಕ್ಶ್ಯದ ಸವಿಯನ್ನು ಸವಿಯಬೇಕೆಂದು ನಿಮ್ಮೆದುರಿಗೆ ಬಂದೆವು. ನೀವಿಲ್ಲಿರುವುದಾಗಲಿ, ನಿಮ್ಮ ಅಸ್ತ್ರ ಶಸ್ತ್ರಗಳ ಬಗೆಯಾಗಲಿ ನಾವುಗಳು ಯಾರಿಗೂ ತಿಳಿಸೆವು. ದಯೆಮಾಡಿ ನಮ್ಮ ಹೊಟ್ಟೆಗೊಂದಿಷ್ಟು ಆ ಅನ್ನವನ್ನು ಕೊಟ್ಟು ಕರುಣಿಸಿ' ಎಂಬ ಮಾತನ್ನು ಕೇಳಿದ ನಮ್ಮ ಸೈನಿಕರು ತೆರದ ಬಾಯನ್ನು ಮುಚ್ಚದೆಯೇ ನನ್ನೆಡೆ ತಿರುಗಿದರು. ಖಡ್ಗ ಚೂರಿಗಳಿಲ್ಲದೆಯೇ ಕೇವಲ ಅಡುಗೆಯೆಂಬ ಅಸ್ತ್ರದಿಂದ ವಿರೋಧಿ ಸೈನಿಕರನ್ನು ಕೆಡವಿದ ಗರ್ವದ ನೋಟದಿಂದ ನಾನೂ ಕೂಡ ಅವರನ್ನು ಧಿಟ್ಟಿಸತೊಡಗಿದೆ.....!

(ಇಂದು ವಿಶ್ವದೆಲ್ಲೆಡೆ ಸುಪ್ರಸಿದ್ಧವಾಗಿರುವ ಬಿರಿಯಾನಿಯ 'ಐತಿಹ್ಯ'ವಿದು . ಬಿರಿಯಾನಿಯ ಉಗಮಕ್ಕೆ ಇಂತಹ ಹಲವಾರು ಐತಿಹ್ಯ/ಕತೆಗಳಿವೆ. ಆದರೆ ಹೆಚ್ಚು ಕಡಿಮೆ ಎಲ್ಲವೂ ಬಿರಿಯಾನಿಯ ಉಗಮ ಭಾರತದ ಉತ್ತರ ಭಾಗ ಅಥವ ಮದ್ಯಪ್ರಾಚ್ಯ ದೇಶಗಳೆಂದೇ ಹೇಳುತ್ತವೆ. ಈ ಕತೆಯನ್ನೂ ಸುಮಾರು ಸಾವಿರ ವರ್ಷಗಳ ಕಾಲ ಹಿಂದೆ ಜರುಗಿರಬಹುದಾದ ಘಟನೆಯೆಂದು ಕಲ್ಪಿಸಿ ಹೆಣೆಯಲಾಗಿದೆ. ಟೊಮೊಟೊ ಹಣ್ಣುಗಳು ಆಗಷ್ಟೇ ಜನರಿಗೆ ಪರಿಚಯವಾಗುತ್ತಿದ್ದರಿಂದ ಅವುಗಳನ್ನು ಹುಳಿಹಣ್ಣುಗಳೆಂದು ಹೇಳಲಾಗಿದೆ. ಹಾಗು ಪುದೀನ ಹಾಗು ಕೊತ್ತಂಬರಿ ಸೂಪ್ಪುಗಳು ನಂತರದ ಕಾಲಘಟ್ಟದಲ್ಲಿ ಬಿರಿಯಾನಿ ತಯಾರಿಯಲಿ ಅಳವಡಿಸಿಕೊಂಡಿರಬಹುದಾದರಿಂದ ಅವುಗಳನ್ನು ಇಲ್ಲಿ ಕೈಬಿಡಲಾಗಿದೆ. ಇದು ಮೊದಲ ಬಾರಿಗೆ ಮಾಡಿರಬಹುದಾದ ಬಿರಿಯಾನಿಯಾದರಿಂದ ಬಾದಾಮಿ, ಕೇಸರಿ ಹಾಗು ಇನ್ನೂ ಹಲವು ಪದಾರ್ಥಗಳನ್ನು ಇಲ್ಲಿ ಸೇರಿಸಲಾಗಿಲ್ಲ. ಒಂದು ವೇಳೆ ಇದೇ ರೀತಿಯೇ ಬಿರಿಯಾನಿಯನ್ನು ಮಾಡಲೋಗಿ ವಾರಾಂತ್ಯವೇನಾದರೂ ಕೆಟ್ಟರೆ ಅದಕ್ಕೆ ಅವರವರೇ ನೇರ ಹೊಣೆಯಾಗುತ್ತಾರೆ! :)... )

ಬಾಡುಟವೊಂದರ ಐತಿಹ್ಯ - I

ಹೊತ್ತು ಮುಳುಗಿ ಅದಾಗಲೇ ಕಪ್ಪು ಆಗಸದಲ್ಲಿ ತುಂತುರು ಚುಕ್ಕಿಗಳು ಮಿನುಗತೊಡಗಿವೆ. ತನ್ನೊಟ್ಟಿಗಿದ್ದ ನಾಲ್ವರು ಸೈನಿಕರು ತಮ್ಮ ತಮ್ಮ ಖಡ್ಗಗಳಿಂದ ಖಣಖಣ ಶಬ್ದವನ್ನು ಹೊಮ್ಮಿಸುತ್ತಾ ಯುದ್ಧಕ್ಕೆ ತಯಾರಿ ನೆಡೆಸುತ್ತಿದ್ದಾರೆ. ಯುದ್ಧದ ಸ್ಥಳ ತಾನಿರುವ ಜಾಗದಿಂದ ಸುಮಾರು ಐವತ್ತು ಕ್ರೋಶ ದೂರದ್ಲಲಿದೆ. ಆನೆ, ಕುದುರೆ, ಒಂಟೆಗಳ ಜೊತೆಗೆ ಎರಡೂ ಕಡೆಯ ಲಕ್ಷಾಂತರ ಸೈನಿಕರ ರೋಷ, ಭಯ, ಧೈರ್ಯ, ಚೀರುವಿಕೆ, ರೋಧನೆ, ರಕ್ತ, ಬಳಲಿಕೆ, ದುಃಖ, ಸಾವು.. ಅಬ್ಬಬ್ಬಾ ಎಷ್ಟೆಲ್ಲಾ ಭಾವಸ್ಥಿತಿಗಳುಗಳು! ನಾನೊಬ್ಬ ಅಡುಗೆಯವ. ಡೇರೆಯಲ್ಲಿರುವ ದಿನಸಿಗಳನ್ನು ಕಾಪಾಡುವ ಸಲುವಾಗಿ ಇರುವ ಈ ನಾಲ್ಕು ಸೈನಿಕರ ರಣೋನ್ಮಾದ ಭಾವಗಳನ್ನು ಕಂಡೇ ಮೈಕೈಗಳೆಲ್ಲ ನಡುಗುತ್ತಿವೆ, ಇನ್ನು ಯುದ್ಧವನ್ನು ಸಾಕ್ಷಾತ್ ಕಣ್ಣುಗಳಿಂದ ನೋಡುವ ಧೈರ್ಯವಿದೆಯೇ? ಯಾ ಅಲ್ಲಾ… ನನ್ನನು ಜೀವಮಾನವಿಡೀ ಒಬ್ಬ ಅಡುಗೆಯುವನಾಗಿಯೇ ಇರಿಸು. ಯುದ್ಧದಲ್ಲಿ ಸಾಧ್ಯವಾಗದ್ದನ್ನು ನನ್ನೀ ಪಾಕಜ್ಞಾನದಲ್ಲಿ ಗಳಿಸಿಕೊಳ್ಳುವೆ. ಸಾಧಿಸುವೆ. ಮರುಭೂಮಿಯ ನೆಲಕ್ಕೆ ನೀರನ್ನು ಸುರಿದಂತೆ ಕಣ್ಮುಚ್ಚಿ ಬಿಡುವಷ್ಟರಲ್ಲಿ ತಟ್ಟೆಯನ್ನೇ ಖಾಲಿ ಮಾಡುವ ದೇಹಗಳಿಗೆ ರುಚಿಕಟ್ಟಾದ ಊಟವನ್ನು ಮಾಡಿ ತಣಿಸುವುದು ಸಹ ಏನು ಸುಲಭದ ಕೆಲಸವೇ? ಅದೇನೇ ಆಗಲಿ. ನನ್ನ ಅಡುಗೆಯ ಕೈಚಳಕದಿಂದ ಸೈನಿಕರೆಲ್ಲರ ವಿಶ್ವಾಸವನ್ನು ಗಳಿಸಕೊಳ್ಳಬೇಕು. ಮುಂದೊಂದು ದಿನ ರಾಜರಮನೆಯ ಮುಖ್ಯ ಅಡುಗೆಯ ಭಟ್ಟನಾಗಿ ನಾಲ್ಕಾರು ಜನರಿಂದ ಸಲಾಂಗಳನ್ನು ಗಿಟ್ಟಿಸಿಕೊಳ್ಳಬೇಕು ಎನ್ನುತ್ತಿರುವಾಗಲೇ ಒಬ್ಬ ಸೈನಿಕ ಏದುಸಿರು ಬಿಡುತ್ತ ನಾನಿರುವಲ್ಲಿಗೆ ಓಡಿ ಬಂದು 'ರಣರಂಗದಲ್ಲಿ ಯುದ್ಧ ತೀವ್ರಗೊಂಡಿದ್ದು ಅದು ಬೇಗನೆ ಮುಗಿಯುವ ಹಾಗೆ ಕಾಣುತ್ತಿಲ್ಲವಂತೆ. ನಾಳೆಯ ಅಪರಾಹ್ನದ ಹೊತ್ತಿಗೆ ಗಾಯಗೊಂಡ ಹತ್ತಿಪ್ಪತ್ತು ಸೈನಿಕರು ನಮ್ಮ ಡೇರೆಗೆ ವಿಶ್ರಾಂತಿಗೆ ಬರಲಿದ್ದಾರಂತೆ.ಅತಿ ರುಚಿಕಟ್ಟಾದ ಮಾಂಸದ ಊಟವನ್ನು ಮಾಡಿ ಬಡಿಸಿ ಅವರ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಜ್ಞೆ ಸ್ವತಃ ಶೆಹನ್ ಶಾ ರಿಂದ ಬಂದಿದೆ..' ಪಾರಿವಾಳದ ಕಾಲಿಗೆ ಕಟ್ಟಿದ್ದ ಬಟ್ಟೆಯ ಮೇಲೆ ಬರೆದಿದ್ದ ಅಕ್ಷರಗಳನ್ನು ಓದುತ್ತಾ ನನಗೆ ಕೇಳುವಂತೆ ಹೇಳಿದನಾತ.

ಶೆಹನ್ ಶಾರ ಹೆಸರು ಕೇಳಿಯೇ ಅರ್ಧ ಅಧೀರನಾದ ನಾನು ಮುಂದೇನು ಮಾಡಬೇಕೆಂದು ತೋಚಲಿಲ್ಲ. ಗೋಧಾಮಿನಲ್ಲಿ ಹೇಳಿಕೊಳ್ಳುವಂತಹ ವಿಶಿಷ್ಟ ಪದಾರ್ಥಗಳೇನೂ ಇರಲಿಲ್ಲ. ದೇಶದ ಉತ್ತರ ಪ್ರಾಂತ್ಯದಿಂದ ತರಿಸಿರುವ, ರಾಜಮನೆಯಲ್ಲಿ ಮಾಡುವ ವಿಶಿಷ್ಟವಾದ ಅಕ್ಕಿಯೇನೋ ಇದೆ. ಜೊತೆಗೆ ಒಂತಿಷ್ಟು ಈರುಳ್ಳಿ, ಶುಂಠಿ, ಕೆಂಪುಮೆಣಸು, ತುಪ್ಪ, ಸಂಬಾರ, ಹಸಿರುಮೆಣಸು, ಬೆಳ್ಳುಳ್ಳಿ, ಚಕ್ಕೆ, ಲವಂಗಗಳಿಂದ ಹಾಗು ಇತರೆ ಮಸಾಲ ಪದಾರ್ಥಗಳಿಂದ ಕೂಡಿದ ಒಂದೆರೆಡು ಗಂಟುಗಳಿವೆ. ತುಸು ಹೊತ್ತು ಸುಮ್ಮನಾದ ನಾನು ನನ್ನೊಳಗೆ ಜರುಗುತ್ತಿದ್ದ ಗೊಂದಲದ ಅಲೆಗಳನ್ನು ಮುಖದ ಮೇಲೆ ವ್ಯಕ್ತಪಡಿಸಲಾಗದೆ ಕೂತೆ. ಸೈನಿಕ ಅತ್ತ ಹೋದಮೇಲೆ ಮತ್ತದೇ ಚಿಂತೆ ಕಾಡತೊಡಗಿತು. ಹಸಿರು ಬಾಳೆಎಲೆಯ ಮೇಲೆ ಅಚ್ಚಬಿಳಿಯ ಹಬೆಯಾರುವ ಬಿಸಿಬಿಸಿಯಾದ ಅನ್ನದ ರಾಶಿಯೊಂದಿದ್ದರೆ ಒಂದಿನಿತು ಉಪ್ಪಿನ ಕಾಯಿಯೂ ಮುಷ್ಟಾನ್ನ ಭೋಜನದ ಸವಿಯನ್ನು ಒದಗೀಸಿತು. ಜೊತೆಗೆ ಮಡಕೆಯಲ್ಲಿ ತುಂಬಿ ಹಸಿ ಮಣ್ಣಿನಲ್ಲಿ ಹುದುಗಿಸಿರುವ ಮೊಸರೆನೋ ಇದೆ. ಒಂದೆರೆಡು ಸೌಟು ಗಟ್ಟಿ ಮೊಸರು, ಬೆಂಕಿಯ ಕೆಂಡಕ್ಕೆ ಒಡ್ಡಿ ಬಾಡಿಸಿದ ಒಂದು ಸಣ್ಣ ಗಾತ್ರದ ಈರುಳ್ಳಿ, ಒಂದೆರೆಡು ಎಳೆಯ ಹಸಿರುಮೆಣಸಿನ ಕಾಯಿ ಜೊತೆಗೆ ತುರಿತುರಿಯಾದ ಬಿಸಿಮಾಡಿದ ತುಪ್ಪ... ಇಷ್ಟು ಸಾಕು ಸೈನಿಕರ ನಾಲಿಗೆಯನ್ನು ತಣಿಸಲು. ಮೇಲಾಗಿ ಸೈನಿಕರು ಪೆಟ್ಟು ತಿಂದು ಧಣಿದು ಬಂದವರು. ಹಸಿದು ಬರಬಿದ್ದ ಹೊಟ್ಟೆಗೆ ಏನಾದರೇನು? ಎಂದು ಸಮಾಧಾನ ತಂದುಕೊಳ್ಳಲು ಪ್ರಯತ್ನಿಸಿದರೂ ರಾಜನ ಕಟ್ಟಾಜ್ಞೆಯನ್ನು ಅಷ್ಟು ಹಗುರವಾಗಿ ಪರಿಗಣಿಸಲು ಸಾಧ್ಯವಾಗಲಿಲ್ಲ. ತುಸು ಹೊತ್ತು ಆಕಾಶವನ್ನು ಧಿಟ್ಟಿಸತೊಡಗಿದೆ. ಕೂಡಲೇ ಉಪಾಯವೊಂದು ಹೊಳೆಯಿತು. ಪರಿಣಾಮ ರಾತ್ರಿಯ ಊಟಕ್ಕೆ ಮಾಡುವ ಅಡುಗೆಯಲ್ಲಿ ಆ ಪ್ರಯೋಗವನ್ನು ಮಾಡಬಯಸಿದೆ. ಆದರೆ ಗುರಿ ಗೊತ್ತಿಲ್ಲದ ಕವಲೊಡೆದ ಹಲವು ದಾರಿಗಳ ಕೇಂದ್ರಬಿಂದುವಿನಲ್ಲಿ ನಿಂತಂತಾಯಿತು. ಊಟ ರುಚಿಯಾಗದಿದ್ದರೆ ನಾಲ್ವರು ಸೈನಿಕರನ್ನು ಹೇಗೋ ಸಂಭಾಳಿಸಬಹುದು. ಆದರೆ ಹತ್ತಾರು ಗಜಕಾಯದ ದಾಂಡಿಗರ ಮುನಿಸು ನನ್ನ ಪ್ರ್ರಾಣಕ್ಕೇ ಕುತ್ತು ತರುವುದಂತೂ ಸುಳ್ಳಲ್ಲ!

ನಾವುಗಳು ಜನ ಐದಾದ್ದರಿಂದ ರಾತ್ರಿಯ ಊಟಕ್ಕೆ ಪದಾರ್ಥದ ಪರಿಮಾಣವೂ ಅಷ್ಟೇನೂ ಹೆಚ್ಚಾಗಿ ಬೇಕಾಗಿರಲಿಲ್ಲ. ಯೋಚನೆಯಲ್ಲೇ ಮುಳುಗಿದ್ದ ನನಗೆ ಸೈನಿಕರು ನಾನಿದ್ದಲಿಗೆ ಬಂದ ಸದ್ದು ಅರಿವಿಗೆ ಬಾರದಾಯಿತು. ಒಂದರ ಮೇಲೊಂದು ಖಡ್ಗವನ್ನು ಎಸೆದ ಅವರು ‘ಊಟಕ್ಕೆಟಕ್ಕೆ ಏನು ತಯಾರಿ?' ಎಂಬಂತೆ ನನ್ನನ್ನೇ ಗುರಾಹಿಸತೊಡಗಿದರು! ಕೂಡಲೇ ಎಚ್ಚೆತ್ತುಕೊಂಡ ನಾನು ಏನನ್ನೂ ಉತ್ತರಿಸಲಾಗದೆ ಅವಸರವಸರವಾಗಿ ಕಾರ್ಯೋನ್ಮುಖನಾದೆ. ಹಿಂದೆಂದೂ ಈ ಬಗೆಯ ಮೈಮರೆಯುವಿಕೆ ಬಂದಿರಲಿಲ್ಲ. ರಾಜರ ಕಟ್ಟಪ್ಪಣೆಯೋ ಏನೋ ಇಂದು ಮನಸ್ಸು ಬಹಳಾನೇ ಬೆದರಿದೆ. ಆದರೆ ಈ ಕ್ಷಣಕ್ಕೆ ನನಗೆ ಬಂದೊದಗಿರುವ ಸವಾಲೆಂದರೆ ಮಧವೇರಿದ ಆನೆಗಳಂತೆ ಘೀಳಿಡುವ ನಾಲ್ವರು ಸೈನಿಕರ ಹಸಿವನ್ನು ನೀಗಿಸುವುದು. ಇನ್ನೇನು ಇವರು ತುಸು ಹೊತ್ತಿನಲ್ಲಿ ಪಕ್ಕದಲ್ಲೇ ಇರುವ ಕೆರೆಗೆ ಹೋಗಿ ಸ್ನಾನಾದಿಗಳನ್ನು ಮಾಡಿ ವಾಪಸ್ಸಾಗುತ್ತಾರೆ. ಬೆವತು ದಣಿದ ದೇಹ ಬಯಸಿದರೆ ಒಂದಷ್ಟು ಕಾಲ ಈಜಾಡುವುದೂ ಉಂಟು. ಆದರೆ ಬಂದ ಕೂಡಲೇ ಘಮಘಮಿಸುವ ಭೀಮಹಾರವೊಂದು ಸಿದ್ಧವಿರಬೇಕು. ಇಂದು ಯಾವುದೇ ಶಿಕಾರಿಯಾಗದಿದ್ದ ಕಾರಣ ಮಾಂಸದ ಅಡಿಗೆ ಇರುವುದಿಲ್ಲವೆಂಬುದು ಅವರುಗಳಿಗೆ ತಿಳಿದಿರುತ್ತದೆ. ಸಮಯ ಓಡತೊಡಗಿತು.

ಅಲ್ಲಿಯವರೆಗೂ ಒಂದೇ ಒಲೆಯಲ್ಲಿ ಅಡುಗೆಯನ್ನು ಮಾಡುತ್ತಿದ್ದ ನಾನು ಸಮಯ ಸಾಧನೆಗಾಗಿ ಎಂಬಂತೆ ತುಸು ಪಕ್ಕದಲ್ಲಿಯೇ ಮೂರು ಕಲ್ಲುಗಳಿಂದ ಮತ್ತೊಂದು ಒಲೆಯನ್ನು ಮಾಡಿಕೊಂಡೆ. ಅಡುಗೆ ಏನೇ ಆದರೂ ಅನ್ನವೆಂಬ ಮೂಲಧಾತು ಅದರಲ್ಲಿ ಇದ್ದಿರಲೇಬೇಕು. ಹಾಗಾಗಿ ಎಲ್ಲಕಿಂತ ಮೊದಲು ಅನ್ನವನ್ನು ಮಾಡೋಣವೆಂದು ನಾಲ್ಕು ಪಾವು ಅಕ್ಕಿಯನ್ನು ಮಡಿಕೆಯ ಪಾತ್ರೆಯೊಂದಕ್ಕೆ ಸುರಿದು ಪಕ್ಕದಲ್ಲೇ ಇದ್ದ ಸಣ್ಣ ಝರಿಯ ಬಳಿಹೋಗಿ ತೊಳೆದು, ಜಾಲಾಡಿಸಿ, ನೀರನ್ನು ತುಂಬಿಕೊಂಡು ತಂದೆ. ಹಳೆಯ ಒಲೆಯ ಮೇಲೆ ಮಣ್ಣಿನ ಮಡಕೆಯನ್ನು ಆಸೀನಪಡಿಸಿ ಬೆಂಕಿಯೊತ್ತಿಸಿದ ಮೇಲೆ ಅರ್ಧ ಕೆಲಸವೇ ಮುಗಿಯಿತು ಎನ್ನುವಷ್ಟು ನೀರಾಳಭಾವ ಮನಸ್ಸನ್ನು ತುಂಬಿತು. ಬೆಂಕಿಯ ಕಾವು ಹಸಿವನ್ನು ನೀಗಿಸುವ ಪುಣ್ಯಕಾರ್ಯಕ್ಕೆ ಎಡೆಬಿಡದೆ ದುಡಿಯುವಂತೆ ಹುರಿಯತೊಡಗಿತು. ತಾನು ಸುಟ್ಟು ಇತರರ ಹೊಟ್ಟೆಯನ್ನು ತುಂಬುವ ತ್ಯಾಗಮಯಿ ಜೇವವೇನೋ ಅದು ಎಂಬಂತೆ ಅದು ನನಗೆ ಭಾಸವಾಹಿತು.ಲೋಕಾರೂಢ ಚಿಂತನೆಗೆ ಅದು ಸಮಯವಲ್ಲ. ಅನ್ನವೇನೋ ಇನ್ನು ಕೆಲನಿಮಿಷಗಳಲ್ಲಿಯೇ ಆಗಿಬಿಡುತ್ತದೆ. ರಾಜಧಾನಿಯಿಂದ ಸೊಪ್ಪು ತರಕಾರಿಗಳನ್ನೊತ್ತು ಬರುವ ಒಂಟೆಗಳ ಸಾಲು ಬೇರೆ ವಿಳಂಬವಾಗಿದೆ.

ಕಳೆದ ಕೆಲದಿನಗಳಿಂದ ಇಲ್ಲಿಯೇ ತಂಗಿ ಸ್ಥಳಪರಿಚವಿದ್ದ ನಾನು ಕಾಡಿನ ಅಲ್ಲಲಿ ಬೆಳೆದ್ದಿದ್ದ ಭಕ್ಷಿಸಲು ಯೋಗ್ಯವಾದ ಹಸಿರು ತರಕಾರಿ, ಸೊಪ್ಪು ಹಾಗು ಗೆಡ್ಡೆ ಗೆಣೆಸುಗಳನ್ನು ಗಮನಿಸಿದ್ದೆ. ಅನಿವಾರ್ಯವಿದ್ದ ಕಾರಣ ಒಂದು ಅಂದಾಜಿನ ಮೇಲೆ ತಿಂಗಳಬೆಳಕಿನ ಮಬ್ಬಿನಲ್ಲಿಯೇ ಕಟ್ಟಿಗೆಯ ಬೆಳಕೊಂದನ್ನು ಹಿಡಿದು ಸ್ಥಳವನ್ನು ಗುರುತುಮಾಡಿಕೊಂಡು ಹೆಜ್ಜೆ ಹಾಕಿದೆ. ಡೇರೆಯಿಂದ ಹೆಚ್ಚು ದೂರಹೋಗಬಾರದೆಂಬ ಹೆಚ್ಚರಿಕೆಯ ಕರೆಘಂಟೆ ತಲೆಯೊಳಗೆ ಸದ್ದುಮಾಡುತ್ತಲೇ ಇದ್ದಿತು. ದೇಶದ ಅಲ್ಲಲಿ ಇತ್ತೀಚಿಗೆ ಚಾಲ್ತಿಯಲ್ಲಿ ಬಂದಿರುವ ಹಸಿರಾದ ಹುಳಿಹಣ್ಣನ್ನು ಹಲವೆಡೆ ಅಡುಗೆಗೆ ಬಳಸುವುದನ್ನು ನೋಡಿದ್ದೇನೆ. ಹಸಿರಿರುವ ಇದನ್ನು ಕಿತ್ತು ಇಟ್ಟರೆ ಕೆಲದಿನಗಳಲ್ಲೇ ಕಡುಕೆಂಪುಬಣ್ಣಕ್ಕೆ ತಿರುಗುತ್ತದೆ. ಮೃದುವಾಗುತ್ತದೆ. ಊರಿನ ಗಲ್ಲಿಯ ಮಕ್ಕಳಂತೂ ಹೊಟ್ಟೆ ಬಿರಿಯುವಂತೆ ಇದನ್ನು ಕಾಪುತ್ತ ತಿಂದು ಹೊಟ್ಟೆ ನೋವೆನುತ ಬಿದ್ದು ಹೊರಳಾಡುವುದುಂಟು. ಈಗ ಅದೇ ಹಣ್ಣಿನ ಗಿಡವನ್ನು ನನ್ನ ಕಾಲ ಬಳಿಯೇ ಕಂಡೆ. ಎರಡಡಿ ಉದ್ದದ ಗಿಡದ ಎಲೆಗಳು ತುಂಬೆ ಗಿಡಗಳ ಎಲೆಗಳಂತೆಯೇ ಕಾಣುತ್ತವೆ. ಹೆಸರಿಡದ ಆ ಹಸಿರು ಗಿಡಗಳು ಹಣ್ಣುಗಟ್ಟಿವೆಯೇ ಎಂದು ಪರೀಕ್ಷಿಸಿದರೆ ಅದಾಗಲೇ ಕಾಡ ಇಲಿ ಅಳಿಲುಗಳು ಕಾಯಿಯ ತೊಟ್ಟಷ್ಟನ್ನೇ ಬಿಟ್ಟು ಪೂರಾ ಗೊಂಚಲ್ಲನ್ನು ತಿಂದು ಜಾಗ ಕಿತ್ತಿವೆ. ಆದರೆ ಛಲ ಬಿಡಲಿಲ್ಲ. ಈ ಜಾತಿಯ ಕಾಯಿ ಒಂದೋ ಎರಡು ಮಾತ್ರವಷ್ಟೇ ಬೆಳೆಯವು. ತಮ್ಮ ಸಂಸಾರದ ಕನಿಷ್ಠ ಹತ್ತಿಪ್ಪತ್ತು ಇತರೆ ಗಿಡಗಳಿಗೆ ಜೊತೆಗೆ ಜನ್ಮನೀಡುವವು. ಕೊಂಚ ಅತ್ತಿಂದಿತ್ತ ಅಲೆದಾಡಿದ ಮೇಲೆ ಮುಳ್ಳು ಆವರಿಸಿದ ಪೊದೆಗಳ ಹಿಂದೆ ಇಂಥದ್ದೇ ಮತ್ತೊಂದು ಗಿಡ ಕಂಡಿತು. ಹಣ್ಣು ಹಣ್ಣಾಗಿದ್ದ ಆ ಗಿಡದ ತುಂಬೆಲ್ಲ ಕೆಂಪು ಕಾಯಿಗಳ ರಾಶಿ ರಾಶಿ ಗೊಂಚಲುಗಳು! ಕೂಡಲೇ ಕವಚದಂತೆ ಆವರಿಸಿದ ಪೊದೆಯನ್ನು ಪಕ್ಕಕ್ಕೆ ಸರಿಸಿ ಕಳೆತ ಮಾವಿನಹಣ್ಣುಗಳಂತೆ ಬಾಡಿ ಬತ್ತಿದ ಹಣ್ಣುಗಳನ್ನು ಒಂದೊಂದಾಗಿಯೇ ಕೀಳತೊಡಗಿದೆ. ಪೂರಾ ಕಲೆತಿದ್ದ ಹಣ್ಣೊಂದನ್ನು ಅದರ ಲೋಳೆಯಾದ ಸಣ್ಣ ಸಣ್ಣ ಬೀಜಗಳು ಹೊರಬರುವಂತೆ ಕೈಯಲ್ಲಿ ಹಿಸುಕಿ ಹಾಕಿದೆ. ಆಗೊಮ್ಮೆ ಈಗೊಮ್ಮೆ ಬರುವ ಮಳೆಯ ಮಹಿಮೆಗೆ ಇವುಗಳ ಸಂಸಾರ ಇನ್ನೂ ವೃದ್ಧಿಸಲಿ ಎಂಬ ಆಶಯದೊಂದಿಗೆ..

ಡೇರೆಗೆ ಬಂದವನೇ ಮೀಯಲು ಹೋದ ಸೈನಿಕರು ಇನ್ನು ಬಂದಿರಲಿಲ್ಲವೆಂಬ ಖಾತ್ರಿಯನ್ನು ಮಾಡಿಕೊಂಡು ಬತ್ತಳಿಕೆಯಲ್ಲಿ ತುಂಬಿಕೊಂಡು ಬಂದಿದ್ದ ಕೆಂಪು ಕಾಯಿಗಳನ್ನು ಅಥವಾ ಹಣ್ಣುಗಳನ್ನು ಮತ್ತದೇ ಝರಿಯ ಬಳಿಗೋಗಿ ತೊಳೆದು ತಂದೆ. ಸಾಂಬಾರ ಪದಾರ್ಥಗಳ ಗಂಟುಗಳನ್ನು ಬಿರಬಿರನೆ ತಂದು ಒಂದೊಂದಾಗಿಯೇ ಬಿಚ್ಚತೊಡಗಿದೆ. ಏನು ಮಾಡಹೋಗುತ್ತಿರುವನೆಂದು ತಿಳಿಯುತ್ತಿಲ್ಲ. ಆದರೂ ಯಾರೋ ಅಣಿಮಾಡಿ ಮಾಡಿಸುತ್ತಿರುವಂತೆ ಕೈಗಳು ತಮ್ಮ ಪಾಡಿಗೆ ಬೇಕೆನಿಸಿದ ವಸ್ತುಗಳನ್ನು ಜೋಡಿಸಿಕೊಳ್ಳತೊಡಗಿದವು. ಗಂಟಿನಿಂದ ನಾಲ್ಕೈದು ಈರುಳ್ಳಿಗಳನ್ನು ಹೊರಗೆಳೆದು ಹೆಚ್ಚತೊಡಗಿದೆ. ಕಣ್ಣೀರು ಬಾರದಿರಲಿ ಎನುತ ಅವುಗಳ ಒಂದೆರೆಡು ಸಿಪ್ಪೆಗಳನ್ನು ತಲೆಗೂದಲಿನ ಮದ್ಯಕ್ಕೆ ತುರುಕಿಸಿದರೆ ಕಣ್ಣೀರು ಒಮ್ಮಿಂದೊಮ್ಮೆಗೆ ಮಂಗಮಾಯಾ! ಅರ್ಧಚಂದ್ರಾಕೃತಿಯ ಹತ್ತಾರು ಹೋಳುಗಳ ನಂತರ ತೊಳೆದು ತಂದಿದ್ದ ಕೆಂಪು ತರಕಾರಿಯನ್ನು ಮೃದುವಾಗಿ ತುಂಡರಿಸತೊಡಗಿದೆ. ಹುಳಿಹುಳಿಯಾದ ವಾಸನೆ ಮೂಗನ್ನು ಬಡಿಯುತ್ತಲೇ ಬೇಡವೆನಿಸಿದರೂ ಮೂಗು ಕ್ರಮೇಣ ಅದಕ್ಕೆ ಹೊಗ್ಗಿಕೊಳ್ಳತೊಡಗಿತು. ನಾಲ್ಕೈದು ಕೆಂಪು ಹಣ್ಣುಗಳನ್ನು ಕೊಯ್ದು ಇನ್ನೇನು ಮಸಾಲಾ ಪದಾರ್ಥಗಳಿಗೆ ಕೈಹಾಕಬೇಕು ಎನ್ನುವಷ್ಟರಲ್ಲಿ ಕಾಡುಕೋಳಿಗೆ ಹಾಕಿದ್ದ ಬಲೆಯ ದಿಕ್ಕಿನಿಂದ ಪಟಪಟನೆ ಬಡಿದುಕೊಳ್ಳುತ್ತಿದ್ದ ರೆಕ್ಕೆಗಳ ಸದ್ದು ಕೇಳಿತೊಡಗಿತು….

ಒಣಗಿದ ಬಳ್ಳಿಯೊಂದಕ್ಕೆ ಸರಗುಣಿಕೆಯನ್ನಾಕಿ ಒಂದು ಬದಿಯನ್ನು ಪೊದೆಯೊಂದಕ್ಕೆ ಬಿಗಿದು ಕಟ್ಟಿ ನೆಲದ ಅಲ್ಲಲ್ಲಿ ಅಕ್ಕಿಯ ಕಾಳುಗಳನ್ನು ಚೆಲ್ಲಿ ಬಂದಿದ್ದೆ. ಇಂತಹ ಕನಿಷ್ಠ ಪಂಜರಕ್ಕೆ ಯಾವ ತಲೆಕೆಟ್ಟ ಹಕ್ಕಿಯೂ ಸಹ ಬಂದು ಬೀಳುವುದಿಲ್ಲವೆಂಬುದು ಗೊತ್ತಿದ್ದರೂ ಗ್ರಹಚಾರ ಕೆಟ್ಟ ಜೀವಕ್ಕೆ ಹನಿನೀರೂ ಪ್ರವಾಹವಾಗಬಹುದೆಂದುಕೊಂಡು ಬಂದಿದ್ದೆ. ಈಗ ರೆಕ್ಕೆಗಳ ಚಟಪಟ ಸದ್ದು ಅದೇ ದಿಕ್ಕಿನಿಂದ ಬಂದ ಕಾರಣ ಮಸಾಲೆ ಪದಾರ್ಥಗಳ ಘಂಟನ್ನು ಅಲ್ಲಿಯೇ ಬಿಟ್ಟು ಸದ್ದು ಬರುತ್ತಿದ್ದ ದಿಕ್ಕಿನಲ್ಲಿ ಬಿರಬಿರನೆ ಹೆಜ್ಜೆಹಾಕಿದೆ. ಕೆಲಕ್ಷಣದವರೆಗೂ ಒಂದೇ ಸಮನೆ ಕೇಳುತ್ತಿದ್ದ ರೆಕ್ಕೆಗಳ ಸದ್ದನ್ನು ಇದ್ದಕ್ಕಿದಂತೆ ಯಾರೋ ತಡೆದು ನಿಲ್ಲಿಸಿದಂತಾಯಿತು. ಒಂದಿಷ್ಟು ತಿಂಗಳ ಬೆಳಕು ಆಕಾಶದಲ್ಲಿ ಮಿನುಗುತ್ತಿದ್ದಾರೂ ಅದು ಕರಾಳ ಕಾಡಿನ ಕಪ್ಪು ಧೈತ್ಯವನ್ನು ಕರಗಿಸಲಾಗಿರಲಿಲ್ಲ. ರೆಕ್ಕೆಗಳ ಶಬ್ದ ನಿಂತಕೂಡಲೇ ಮಹಾಮೌನವೊಂದು ನಾನಿಂತಿರುವ ಜಾಗವನ್ನು ಆವರಿಸಿತು. ಏಕೋ ಎದೆ ಒಮ್ಮೆಲೇ ಬಡಿದುಕೊಳ್ಳತೊಡಗಿತು. ಏನಾದರಾಗಲಿ ಹುಳಿಹಣ್ಣು ಹಾಗು ಅನ್ನವನು ಬೆರೆಸಿ ಏನಾದರೊಂದು ಆಹಾರವನ್ನು ಮಾಡಬಹುದು. ಹೇಗೋ ಇಂದು ಮಾಂಸಾಹಾರವಿಲ್ಲವೆಂಬುದು ಸೈನಿಕರಿಗೆ ತಿಳಿದೇ ಇದೆ. ಸುಮ್ಮನೆ ಏಕೆ ಮುನ್ನೆಡೆದು ಅಪಾಯವನ್ನು ಎದೆಯ ಮೇಲೆಳೆದುಕೊಳ್ಳಲಿ? ಜನನಿಬಿಡ ಇಂತಹ ಪ್ರದೇಶಗಳಲ್ಲಿ ಭೂತ ಪ್ರೇತಗಳ ಉಪಟಳವೇನು ಕಡಿಮೆ ಇರುವುದಿಲ್ಲ! ಎಂದುಕೊಂಡು ಇನ್ನೇನು ಹೆಜ್ಜೆಯನ್ನು ಹಿಂದಿಡಬೇಕು ಎನ್ನುವಷ್ಟರಲ್ಲಿ ದಬದಬ ಸದ್ದನ್ನು ಮಾಡುತ್ತಾ ಏನೋ ನನ್ನೆಡೆಗೆ ಓಡಿಬರುವ ಸದ್ದು ಕೇಳಿತು…!

Will be Continued ...

Thursday, July 5, 2018

ನಾಯಕರುಗಳಿಗೇ ಇಲ್ಲದ 'ಮುಲಾಜು' ಇಂಥ ಬಯೋಪಿಕ್ ಗಳನ್ನು ಮಾಡಹೋಗುವ ನಿಮಗ್ಯಾಕೆ ಹಿರಾನಿ?


ಈ ವರ್ಷದ ದಿ ಮೋಸ್ಟ್ ಎಕ್ಸ್ಪೆಕ್ಟೆಡ್ ಚಿತ್ರಗಳಲ್ಲಿ ಒಂದಾದ 'ಸಂಜು' ಕೊನೆಗೂ ತೆರೆಯ ಮೇಲೆ ಬಂದಿದೆ. ಚಿತ್ರ ಜನಮಾನಸದಲ್ಲಿ ಕುತೂಹಲವನ್ನು ಮೂಡಿಸಲು ಹಲವಾರು ಕಾರಣಗಳಿದ್ದಿರಬಹುದು. ಮೊತ್ತಮೊದಲನೆಯದಾಗಿ ನಿರ್ದೇಶಕ ರಾಜ್ಕುಮಾರ್ ಹಿರಾನಿ. ಹಿರಾನಿ ಸದ್ಯಕ್ಕಂತೂ ಬಾಲಿವುಡ್ ನಲ್ಲಿ ಪಕ್ಕ 'ಹೀರಾ' ರೆಂದೇ ಹೇಳಬಹುದು. ತಾನು ನಿರ್ದೇಶನ ಮಾಡಿರುವ ಅಷ್ಟೂ ಚಿತ್ರಗಳು ಸೂಪರ್ ಡೂಪರ್ ಹಿಟ್ ಗಳಾಗಿ ಪ್ರತಿ ಬಾರಿಯೂ ಸೆಂಚೂರಿಯನ್ನು ಭಾರಿಸುತ್ತಿದರೆ ಆತ ಅದ್ಯಾವ ಹೀರೊ ಅಥವಾ ಹೀರೋಯಿನ್ ಗಳಿಗೂ ಕಮ್ಮಿ ಇರುವುದಿಲ್ಲ. ಮೇಲಾಗಿ ಹಿರಾನಿ ಕೇವಲ ನಿರ್ದೇಶನವಲ್ಲದೆ ಕಥೆ, ಚಿತ್ರಕತೆ, ಎಡಿಟಿಂಗ್ ಹಾಗು ಪ್ರೊಡಕ್ಷನ್ ಗಳಲ್ಲೂ ತಮ್ಮ ಕೈಯಾಡಿಸಿದವರು. ಇಂತಹ ಒಬ್ಬ ಕಲಾಸಾಮ್ರಾಟ್ ಬರೆದು, ನಿರ್ದೇಶಿಸಿ ನಿರ್ಮಿಸಿರುವ ಚಿತ್ರವೊಂದು ಬರುತ್ತಿದೆ ಎಂದರೆ ನಿನಿಪ್ರಿಯರ ಹಪಾಹಪಿ ಹೆಚ್ಚಾಗದೇ ಇರದು. ಇದು ಅತಿ ಸಹಜವಾದ ವಿಷಯ. ಆದರೆ ಈ ಬಾರಿ ಸಂಜು ಚಿತ್ರ ಇನ್ನೂ ಹೆಚ್ಚಿನ ಗುಲ್ಲೆಬ್ಬಿಸಲು ಇರುವ ಕಾರಣ ಬೇರೆಯೇ ಇದೆ. ಅದು ಸರಿಸುಮಾರು ಇಪ್ಪತ್ತೈದು ವರ್ಷಗಳ ಕಾಲ ಪ್ರತಿ ದಿನ ಒಂದಿಲ್ಲೊಂದು ಬಗೆಯಲ್ಲಿ ಸುದ್ದಿಯಾಗುತ್ತಿದ್ದ ಸುದ್ದಿಯೊಂದರಿಂದ ಹಾಗು ಆ ಸುದ್ದಿಯ ಕೇಂದ್ರಬಿಂಧುವಾದ ವ್ಯಕ್ತಿಯೊಬ್ಬನಿಂದ. ಸಂಜಯ್ ದತ್ತ್. ದೇಶದಲ್ಲಿ ಇಂದು ಸಿನಿಮಾಗಳನ್ನು ನೋಡದಿರದ ಮಂದಿ ಕೇವಲ ಬೆರಳಣಿಕೆಯಷ್ಟಿರಬಹುದು. ಅಂತಹ ಬೆರಳೆಣಿಕೆಯ ಮಂದಿಗೂ ಈ ಒಂದು ಹೆಸರು ಚಿರಪರಿಚಿತ! ನಟನಾಗಿ, ನಾಯಕನಾಗಿ ಅನ್ನುವುದಕ್ಕಿಂತ ಹೆಚ್ಚಾಗಿ 1993 ರ ಮುಂಬೈ ಸರಣಿ ಬಾಂಬಿನ ವಿಚಾರಣೆಯ ಸಲುವಾಗಿ. 50% ನಷ್ಟು ಚಿತ್ರ ಆತನ ಆತ್ಮಕತೆಯಾದರೆ ಉಳಿದರ್ದ ಭಾಗ ಚಿತ್ರದ ಕಲ್ಪಿತ ಚಿತ್ರಕತೆಯೆಂದೇ ಹೇಳಬಹುದು! ಚಿತ್ರವನ್ನು ಚಿತ್ರಗಳಾಗಿಯೇ ನೋಡಭಯಸುವವರಿಗೆ ಸಿಗುವ ಮತ್ತೊಂದು ರೋಮಾಂಚನಕಾರಿ ವ್ಯಕ್ತಿ ರಣಬೀರ್ ಕಪೂರ್. ನಟನೆಯಲ್ಲೇನಾದರೂ ಭಾರತಕ್ಕೆ ಆಸ್ಕರ್ ತಂದುಕೊಡಬಲ್ಲ ನಟರಿದ್ದಾರೆಂದರೆ ಆದರಲ್ಲಿ ರಣಬೀರ್ ಕಪೂರ್ನ ಹೆಸರು ಇರದಿರಲು ಸಾಧ್ಯವೇ ಇಲ್ಲ, ಈ ಮಾತಿಗೆ ಮತ್ತಷ್ಟು ಪುಷ್ಟಿಕೊಟ್ಟಿದ್ದಾನೆ ಚಿತ್ರದಲ್ಲಿ ಸಂಜಯ್ ದತ್ತ್ ನ ಪಾತ್ರವನ್ನು ಕಣ್ಣಿಗೆ ಕಟ್ಟುವಂತೆ ನಿಭಾಹಿಸಿ. ಈ ಎಲ್ಲ ಕಾರಣಗಳಿಂದ ಚಿತ್ರ ತೆರೆಯಮೇಲೆ ಧೂಳೆಬ್ಬಿಸುತ್ತಿದೆ. ನೋಡುಗರನ್ನು ಎರಡೂವರೆ ಘಂಟೆಗಳ ಕಾಲ ರಂಜಿಸುತ್ತಿದೆ. ಆದರೆ ಚಿತ್ರಕತೆಯ ಸತ್ಯಾಸತ್ಯತೆಯನ್ನುಅರಿಯಬಯಸುವವರಿಗೆ, ಹಿಂದಿನ ಇತಿಹಾಸವನ್ನು ಅರೆಬರೆ ಮರೆತಿರುವವರಿಗೆ ಎರಡೂವರೆ ದಶಕಗಳ ವಿಧ್ಯಮಾನಗಳನ್ನು ಕೇವಲ ಎರಡೂವರೆ ಘಂಟೆಯಷ್ಟೇ ನೋಡಿ ಇದು ಸರಿ ಅದು ತಪ್ಪೆಂದು ಖಡಾಖಂಡಿತವಾಗಿ ನಿರ್ಧರಿಸುವುದು ದುಡುಕುತನವಾದೀತು. ಚಿತ್ರ ಮಾಡಿದ್ದು ನಿಜವನ್ನು ಬಿಚ್ಚಿಡಲೂ ಅಥವಾ ಮುಖ್ಯವಾದ ಸಂಗತಿಯನ್ನು ಮುಚ್ಚಿಡಲೊ ಎಂಬೊಂದು ಪ್ರೆಶ್ನೆ ಮಾತ್ರ ಚಿತ್ರಮಂದಿರದಿಂದ ಹೊರಬರುವ ಒಂದಿಷ್ಟು ಮಂದಿಗಂತೂ ಕಾಡದಿರದು!

1993 ರ ಮುಂಬೈ ಸರಣಿ ಸ್ಫೋಟಗಳ ನೋವು ಆಕ್ರಂಧನಗಳು ಭಾಗಶಃ ಭಾರತೀಯರಿಗೆ ತಿಳಿದಿರುವ ವಿಷಯವೇ. 1992 ರಲ್ಲಿ ಬಾಬ್ರಿ ಮಸೀದಿಯ ಕೆಡಹುವಿಕೆಯಿಂದ ಹುಟ್ಟಿಕೊಂಡ ಸಂಘರ್ಷ ಇಂದಿಗೂ ಒಂದು ತಾರ್ಕಿಕ ನೆಲೆಯನ್ನು ಮುಟ್ಟದಿರುವುದು ನಮ್ಮೆಲ್ಲರ ವಿಪರ್ಯಾಸವೇ ಸರಿ. ಸ್ಪೋಟದಲ್ಲಿ ಪ್ರತ್ಯಕ್ಷವಾಗಿ ಭಾಗಿಗೊಂಡ ಹಲವಾರು ತೆಲೆಮರೆಸಿಕೊಂಡು ಬದುಕುದ್ದಿದ್ದರೆ ಪರೋಕ್ಷವಾಗಿ ಭಾಗಿಗೊಂಡ ಹಲವರು ಇಂದಿಗೂ ಸಾವು ಬದುಕಿನ ಹೋರಾಟವನ್ನು ನೆಡೆಸುತ್ತಿದ್ದಾರೆ. ಈ ಮಾತಿನ ಒಂದಿಷ್ಟು ಪ್ರಭಾವಳಿ ಹಿಂದಿ ಚಿತ್ರರಂಗದ ಖ್ಯಾತ ಜೋಡಿ ಸುನಿಲ್ ದತ್ತ್ ಹಾಗು ನರ್ಗೀಸರ ಮಗನಾದ ಸಂಜಯ್ ದತ್ತ್ ನಿಗೂ ಅನ್ವಹಿಸುತ್ತದೆ. ಹುಟ್ಟಿನಿಂದಲೇ 'ಅಮೀರ್ ಬಾಪ್ ಕ ಬಿಗ್ದಾ ಹೂಹ ಓಲಾತ್' ಎಂಬಂತೆ ಬೆಳೆದ ಸಂಜಯ್ಗೆ ಸಹಜವಾಗಿಯೇ ಚಿತ್ರರಂಗದ ಆಕರ್ಷಣೆ ಮೂಡತೊಡಗಿತು. ಕಾಲೇಜಿನ ವಯಸ್ಸಿನಲ್ಲಿಯೇ ಕುಡಿತ, ಸಿಗರೇಟು ಹಾಗು ವಿಪರೀತವೆಂಬಂತೆ ಡ್ರಗ್ ಸ್ನ ದಾಸನಾಗಿದ್ದ ಈತ ಬಯಸದೆ ಸಿಗುವ ಸ್ಟಾರ್ ಡಮ್ ಅನ್ನು ಜೊತೆಜೊತೆಗೆ ಎಂಜಾಯ್ ಮಾಡುತ್ತಾನೆ. ಚಿತ್ರದ ಸೆಟ್ಟಿಗೂ ಡ್ರಗ್ಸ್ ನ ಮತ್ತಿನಲ್ಲಿ ಬಂದಿರುವುದುಂಟು. ಅಪ್ಪನಿಂದ ಬೈಗುಳ ತಿಂದಿರುವುದುಂಟು. ಸಾಲದಕ್ಕೆ ಸಾಲು ಸಾಲು ಹುಡುಗಿಯರ ನಂಟು. ಒಟ್ಟಿನಲ್ಲಿ ಮೀಸೆಚುಗುರಿವ ವೇಳೆಗಾಗಲೇ ವ್ಯಸನಿ ಎಂಬೊಂದು ಹಣೆಪಟ್ಟಿಯನ್ನು ಕಟ್ಟಿಕೊಂಡು ಅಲೆಯುತ್ತಿರುತ್ತಾನೆ. ಒಂದೆಡೆ ಈತನ ರಂಪಾಟನ್ನು ಹತೋಟಿಗೆ ತರಲಾಗದೆ ಕೊರಗುತ್ತಿದ್ದ ಅಪ್ಪ ಮತ್ತೊಂದೆಡೆ ಇಂದೋ ನಾಳೆಯೋ ಎಂಬಂತೆ ಕಾಲವನ್ನು ತಳ್ಳಿಕೊಂಡು ಕ್ಯಾನ್ಸರಿನೊಟ್ಟಿಗೆ ಬದುಕುತ್ತಿದ್ದ ಅಮ್ಮ. ತಂಗೀಯರಿಬ್ಬರೂ ಅಣ್ಣನ ಪಾಡನ್ನು ಕಂಡು ಸೊರಗಿಕೊಂಡಿದ್ದರು. ಕೆಲದಿಗಳಲ್ಲೇ ನರ್ಗೀಸ್ ಳ ಸಾವು. ತದಾನಂತರ ಕಾಡಿ ಬೇಡಿಯೋ ಅಮೆರಿಕದೊಂದು ರಿಹ್ಯಾಬಿಟೇಷನ್ ಕ್ಯಾಂಪ್ಗೆ ಸೇರ್ಪಡೆ. ಹೀಗೆ ಹೇಗೋ ಒದ್ದಾಡಿ ಗುದ್ದಾಡಿ ತನ್ನ ವ್ಯಸನವನ್ನು ಬಿಟ್ಟು ಬಂದ ಈತನಿಗೆ ಸಿನಿಮಾರಂಗಕ್ಕೆ ಮತ್ತೊಮ್ಮೆ ಎಂಟ್ರಿ ಕೊಡುವುದೇನು ಕಷ್ಟವಿರಲಿಲ್ಲ. ಪೋಷಕರ ಹೆಸರು. ಇನ್ನೇನು ಬೇಕು. ಸರಿ, ಎಲ್ಲ ಆಯಿತು, ಬಿಸಿ ರಕ್ತ. ಚಟಗಳು ಸಾಮಾನ್ಯ. ಇನ್ನು ಮುಂದೆಯಾದರೂ ತಿಳಿದು ಅರಿತು ಹೆಜ್ಜೆಯಿಡಬೇಕು ಎಂಬಂತ ಅರಿವು ಇಪ್ಪತೈದು ವರ್ಷದ ಈತನಿಗೆ ಬಂದಿರಬೇಕಿತ್ತು. ಆದರೆ ಈತ ಮಾಡಿದ್ದೇನು? ಡ್ರಗ್ಸ್ ಎಂಬೊಂದು ಚಟವನ್ನು ಬಿಟ್ಟು ಬೇರೆಲ್ಲ ವ್ಯಸನಗಳು ಮೊದಲಿನಂತೆಯೇ ಸರಾಗವಾಗಿ ಮುಂದುವರೆಸಿದ. ಆದರೆ ಈ ಬಾರಿ ಅವುಗಳೊಟ್ಟಿಗೆ ಮತ್ತೊಂದು ಹೊಸ ಸೇರ್ಪಡೆ. ಅಂಡರ್ ವರ್ಲ್ಡ್! ತೆರೆಯ ಮೇಲಷ್ಟೇ ಅಲ್ಲದೆ ನಿಜಜೀವನದಲ್ಲೂ ಹೀರೋಗಿರಿಯ ಶೋಕಿಗೋ ಅಥವ ತನ್ನ ಅರೆಪುಕ್ಕಲುತನವನ್ನು ಮರೆಮಾಚಿಕೊಳ್ಳಲೋ ಅಥವಾ 'ಸಂಜು ಬಾಬಾ' ಎಂಬ ಬಾಬಾನಾಗುವ ಕನಸಿಗೂ ಅಥವಾ ಚಿತ್ರದಲ್ಲಿ ‘ಮಾರ್ಮಿಕ’ವಾಗಿ ತೋರಿಸಿರುವಂತೆ ತನ್ನ ಹಾಗು ತನ್ನ ಕುಟುಂಬದ ರಕ್ಷಣೆಗೋಸ್ಕರ ಮುಂಬೈ ಅಂಡರ್ ವರ್ಲ್ಡ್ ಡಾನ್ಗಳ ಸಾಂಗತ್ಯ ಈತನಿಗೆ ಹೆಚ್ಚಾಗತೊಡಗಿತು. ಆ ಡಾನ್ ಗಳೋ ಇಂತಹ ಶೋಕಿಲಾಲರನ್ನೇ ಕಾದುಕುಳಿತು ಸಮಯ ಬಂದಾಗ ತಮ್ಮ ಕೈಚಳಕವನ್ನು ತೋರಿಸಿಬಿಡುತ್ತಾರೆ. 93 ರ ಮುಂಬೈ ಅಟ್ಯಾಕ್ ಮಾಡುವ ಸಮಯದಲ್ಲಿ ಮೂರು AK47, ಒಂಬತ್ತು ಮ್ಯಾಗಜಿನ್ಗಳು, ನೂರಾರು ಗುಂಡುಗಳು ಹಾಗು ಹತ್ತಾರು ಹ್ಯಾಂಡ್ ಗ್ರಾನೈಟ್ಗಳನ್ನು ಈತನ ಮನೆಯಲ್ಲಿ ಅಡಗಿಸಿ ಇಟ್ಟಿರುತ್ತಾರೆ. ದಂಗೆಯ ಉತ್ತುಂಗದ ಕಾಲದಲ್ಲಿ ಹೀಗೆ ರಾಶಿಗಟ್ಟಲೆ ಶಸ್ತ್ರಾಸ್ತಗಳನ್ನು ಮನೆಯಲ್ಲಿರಿಸಿಕೊಂಡಿದ್ದ ಏನೂ ಅರಿಯದ ಮುಗ್ದ ಸಂಜು ಕೊನೆಗೂ ಸಿಕ್ಕಿಬೀಳುತ್ತಾನೆ. ಅಷ್ಟೇ. ಅಲ್ಲಿಂದ ಶುರುವಾದ ಆತನ ಜೈಲು, ಕೋರ್ಟು ಕಚೇರಿಗಳ ಪರದಾಟ ತನ್ನ ಮುಪ್ಪಿನ ವಯಸ್ಸಿಗೂ ಮುಂದುವರೆಯಿತು. (ಸಂಜಯ್ ಗೀಗ ಆಲ್ಮೋಸ್ಟ್ 60 ವರ್ಷಗಳು!).

ಇದು ನಿಜಕಥೆ. ಇಂತಹ ವ್ಯಕ್ತಿಯ ಒಬ್ಬ ಆಪ್ತಮಿತ್ರ ಕಮ್ ಡೈರೆಕ್ಟರ್ ಏನಾದರೂ ಈತನ ಜೀವನವನ್ನು ಕುರಿತು ಕತೆಯನ್ನು ಬರೆದರೆ ಅದು ಸಹಜವಾಗಿಯೇ ತನ್ನ ಗೆಳೆಯನ ಪರವಾಗಿಯೇ ವಾಲಿಕೊಂಡಿರುತ್ತದೆ. ಅದು ಗೆಳೆತನಕ್ಕೆ ಕೊಡುವ ಒಂದು ಕಾಣಿಕೆ ಎನ್ನಬಹುದು. ಆದರೆ ಹಿರಾನಿ ಈ ಬಾರಿ ಕೈಗೆತ್ತಿಕೊಂಡ ಕಥೆ ಕೇವಲ ಗೆಳೆತನಕ್ಕೆ ಸಮರ್ಪಿಸಬಹುದಾದ ಕಾಣಿಕೆಯಾಗಿರಲಿಲ್ಲ. ಬದಲಾಗಿ ಅದು ಸಮಾಜದ ಮೂಲ ಅಡಿಪಾಯಕ್ಕೆ ಆನೆಯೊಡೆತವನ್ನು ಕೊಡುವ ಕಾರ್ಯವಾಗಿತ್ತು. ದೇಶದ ಅತ್ಯುನ್ನತ ನಿರ್ದೇಶಕನಾದ ಆತ ಚಿತ್ರವೊಂದರ ಮೂಲಕ ಸಮಾಜಕ್ಕೆ ಹೇಳಹೊರಟಿರುವುದಾದರೂ ಏನನ್ನು? ಮನಸ್ಸು ಮಾಡಿದ್ದರೆ ನೂರಾರು ಜನರ ಜೀವವನ್ನು ರಕ್ಷಿಸಬಲ್ಲ ಅವಕಾಶವನ್ನು ಕೈಚೆಲ್ಲಿ ಬದಲಾಗಿ ಆ ಕುಕೃತ್ಯಕ್ಕೆ ಕಾರಣರಾದ ವ್ಯಕ್ತಿಗಳಿಗೇ ಶಸ್ತ್ರಾಸ್ತಗಳನ್ನು ಬಚ್ಚಿಡಲು ಸಹಕಾರಿಯಾದ ವ್ಯಕ್ತಿಯೊಬ್ಬನನ್ನು ಬಿಂಬಿಸಲು ಹೋಗಿ ಹಿರಾನಿ ಎಲ್ಲೋ ಒಂದೆಡೆ ತಪ್ಪು ಮಾಡಿದ್ದಾರೆ ಎಂದನಿಸದಿರದು. ಮೇಲಾಗಿ ಕೋರ್ಟಿನಲ್ಲಿ ನೆಡೆದ ವಾದವಿವಾದಗಳನ್ನಾಗಲಿ, ಸುಪ್ರೀಂ ಕೋರ್ಟಿನ ತೀರ್ಪಿನ ಪ್ರತಿಯಾಗಲಿ ನೂರಕ್ಕೆ 99 ಜನ ಕಂಡೇ ಇರುವುದಿಲ್ಲ. ಅಂತವರಿಗೆಲ್ಲ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಕತೆ ಹೇಳಿದಂತೆ ಘಟನೆಗಳನ್ನು ಬರೆಯಬಾರದಿತ್ತು. ಟ್ರಿಪಲ್ ಸೆಂಚೂರಿ ಯಷ್ಟು ಹುಡುಗಿಯರ ಸಹವಾಸ ಒಂದುಪಕ್ಷ ಒಂದಿಷ್ಟು ಜಿಗರಿ ದೋಸ್ತಿಗಳು ಸೇರಿದಾಗ ಹೇಳಿ ಕಿಚಾಯಿಸುವ ವಿಷಯವಾಗಬಹುದೇ ವಿನಃ ಕೋಟ್ಯಾನುಕೋಟಿ ಜನಮಾನಸದ ಮುಂದೆ ಹೇಳಿ ನಗಲು ಅಣಿಮಾಡಿಕೊಡುವ ವಿಷಯವಂತು ಅಲ್ಲವೇ ಅಲ್ಲ. 'ಅದು ಹಾಗಲ್ಲ ಸಾರ್, ನಮ್ಮ್ ಸಂಜು ಬಾಬಾ ಎಷ್ಟು ಓಪನ್ ಅಂತ ಅದು ತೋರ್ಸಕೊಡುತ್ತೆ ಆ ಡೈಲಾಗು. ಯಾರ್ ತಾನೇ ಇಷ್ಟೆಲ್ಲಾ ಪ್ರೈವೇಟ್ ವಿಷಯಗಳನ್ನ ಹಿಂಗೇ ಖುಲ್ಲಂ ಖುಲ್ಲಾ ಹೇಳ್ತಾರೆ .. ಹೇಳಿ ನೋಡನ?' ಎಂದು ಅನ್ನುವವರೂ ಇದ್ದಾರೆ. ಅಲ್ಲಾ ಸ್ವಾಮಿ. ಈ ಮಾತನ್ನು ಒಬ್ಬ ಗಂಡಸು ಹೇಳ್ತಾ ಇದ್ದಾನೆ ಅಂತ ಇಷ್ಟೆಲ್ಲಾ ವಾದಮಾಡ್ತಾ ಇದ್ದೀರಾ. ಅವನನ್ನು ಅಪರಂಜಿಯಂತಹ ನಾಯಕನೇನೋ ಎಂಬ ಮಟ್ಟಿಗೆ ಏರಿಸಿ ಕೂರಿಸುತ್ತೀರಾ. ಇದೆ ಕೆಲಸವನ್ನು ಒಬ್ಬ ನಟಿ ಏನಾದರು ಮಾಡಿ ಹೇಳಿದ್ದರೆ ಹೇಗಿರುತ್ತಿತ್ತು? ಆಕೆಯ ಹಿಂದೆ ಮುಂದೆ ಅದೆಷ್ಟು ನೀಚ ಕತೆಗಳು ಹುಟ್ಟಿ ಆ ಹೆಸರನ್ನು ಪಾತಾಳ ಮುಟ್ಟಿಸುತ್ತಿತ್ತು? ಅಲ್ಲವೇ? ಅದನ್ನೇ ಹೇಳೋದು ಪರ್ಸೆಪ್ಷನ್ ! ನಮ್ಮಲ್ಲಿ ‘ಆತ’ನಿಗೊಂದು ನೀತಿ ‘ಈಕೆ’ಗೆ ಬೇರೆಯೇ ರೀತಿ!

ಚಿತ್ರದಲ್ಲಿ ಕಾಣಸಿಗುವ ಮತ್ತೊಂದು ಮಹತ್ವದ ವಿಷಯ ಮಾಧ್ಯಮಗಳ ಬಗೆಗೆ. ಸಹಜವಾಗಿಯೇ ಮಾಧ್ಯಮಗಳನ್ನು ಜರಿಯಬಯಸುವವನಿಗೆ ಅಕ್ಷಯ ಪಾತ್ರೆಯಂತೆ ವಿಷಯಗಳು ಒಂದರಿಂದೊಂದು ಸಿಗುತ್ತವೆ. ಒಬ್ಬ ವ್ಯಕ್ತಿಯ, ವ್ಯಕ್ತಿ ಅನ್ನುವುದಕ್ಕಿಂತ ಸೆಲೆಬ್ರಿಟಿಯ, ಪರ್ಸನಾಲಿಟಿ ಸಮಾಜದಲ್ಲಿ ಹೇಗೆ ನೆಲೆಯುರುತ್ತದೆ ಎಂಬುದರಲ್ಲಿ ಮಾಧ್ಯಮಗಳ ಅಡಿಪಾಯ ಬಹುವಾಗಿಯೇ ಇರುತ್ತದೆ. ಪ್ರಸ್ತುತ ಪೈಡ್ ಮೀಡಿಯಾಗಳಂತೂ ಇಂತಹ ಕಾರ್ಯಗಳಿಗೆ ಹೇಳಿಮಾಡಿಸಿರುವವು. ಸಂಜಯ್ ದತ್ತ್ ನಾದರೂ ತಪ್ಪುಮಾಡಿ ಬೆಪ್ಪಾದವ, ಆದರೆ ಇನ್ನೂ ಅದೆಷ್ಟೋ ವ್ಯಕ್ತಿತ್ವಗಳು ಕಡ್ಡಿಯನ್ನು ಮುರಿಯದೆಯೇ ಮರಕೆಡವಿದ ಅಪಾದನೆಯನ್ನೊರುತ್ತವೆ. ಎಲ್ಲೋ ಕೂತು ಆತ ಹೀಗೆ, ಈಕೆ ಹಾಗೆ ಎಂದು ಬರೆಯುವ, ಅರಚುವ ಮಾಧ್ಯಮಗಳು ಇಂದು ತಮ್ಮ 'ಮೂಲ'ಗಳ ಮಾತಿಗೆ ಬೆಲೆಕಟ್ಟುತ್ತಾವೋ ಅಥವಾ ಧ್ಯಾನಶಕ್ತಿಯಿಂದ ತಾವು ಕಣ್ಣುಮುಚ್ಚಿಯೇ ಎಲ್ಲವನ್ನು ಗ್ರಹಿಸಿ ಬಿತ್ತರಿಸುತ್ತಾವೆಯೋ ತಿಳಿಸಬೇಕು. ಹಾಗಾಗಿ ಇಂದು ಸಂಜಯ್ ದತ್ತ್ ನಮಗೆ ಹೀರೋವಾಗಿ ಅಥವಾ ವಿಲನ್ನಾಗಿ ಕಾಣಲು ಇಂತಹ ಮಾಧ್ಯಮಗಳ ಮಾತುಗಳೇ ಅಡಿಪಾಯವಲ್ಲವೆ? ಹಾಗಾದರೆ ಆ ಅಡಿಪಾಯ ಅದೆಷ್ಟರ ಮಟ್ಟಿಗೆ ದೃಢವಾಗಿದೆ? ಈ ಅಂಕಣವನ್ನು ಬರೆಯುವಾಗಲೂ, ಅಲ್ಲೊಂದು ಇಲ್ಲೊಂದು ವಿಷಯಗಳನ್ನು ಹುಡುಕುವಾಗಲೂ ಇದೇ ಪ್ರೆಶ್ನೆ ಬಹುವಾಗಿ ಕಾಡುತ್ತದೆ! ಸುದ್ದಿ ನಿಜವೋ, ಸುಳ್ಳೋ, ಕಲ್ಪಿತವೋ, ಕುಚೇಷ್ಠೆಯೋ .. ಪರಾಮರ್ಶಿಸಿ ಹೇಳುವವರ್ಯಾರು?! ಹಿರಾನಿ ಚಿತ್ರದಲ್ಲಿ ಈ ಅಂಶವನ್ನು ಬಿತ್ತರಿಸಿರುವ ರೀತಿ ಸರಿಯಾಗಿಯೇ ಇದೆ. ಆದರೆ ಹೀಗೆ ಬಿತ್ತರಪಡಿಸುತ್ತಿರುವ ತನ್ನ ಚಿತ್ರವೂ ಸಹ ಒಂದು ಬಗೆಯ ಮಾಧ್ಯಮದ ಕೆಟಗರಿಗೆ ಬರುತ್ತದೆ, ತಾನು ಬರೆದಿರುವ ಕತೆಯ ಸತ್ಯಾಸತ್ಯತೆಯನ್ನು ನೋಡುಗ ಯಾರಲ್ಲಿ ಕೇಳಿ ಪರಾಮರ್ಶಿಸಿಕೊಳ್ಳಬೇಕು? ಎಂಬೊಂದು ಪ್ರೆಶ್ನೆಯನ್ನೂ ತಾವಾಗಿಯೇ ಕೇಳಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು.

ಅಲ್ಲದೆ ಮುಂಬೈನ ಕಳಪೆ ರೌಡಿಗಳನ್ನು, ಆಟಕುಂಟು ಲೆಕ್ಕಕ್ಕಿಲ್ಲದ ಡಾನ್ ಗಳನ್ನು ಜರಿಯುವುದರಲ್ಲಿ ತೋರಿರುವ ಧೈರ್ಯ ಅದೇ ವಿದೇಶಗಳಲ್ಲಿ ಕೂತು ಬಾಂಬ್ ಬ್ಲಾಸ್ಟ್ನ ಕುಕೃತ್ಯಕ್ಕೆ ನೇರವಾಗಿ ಕಾರಣರಾದ ಹಲವು ಮಾಸ್ಟರ್ಮೈಂಡ್ಗಳ ವಿರುದ್ಧ ತೋರಲು ಹೋಗಿಲ್ಲ. ಧೈರ್ಯ ಸಾಲಲಿಲ್ಲವೋ ಅಥವ ಅವರೂ ಸಹ ಸಂಜೂವಿನತೆ ಮಾಡದ ತಪ್ಪಿಗೆ ಹೊಣೆಯಾಗಿ ಆರೋಪಿಗಳೆಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದಾರೆಯೋ ತಿಳಿಸಿ ಹೇಳಬೇಕು. ಕೆಲ ಸಮುದಾಯಗಳ ಭಾವನೆಗಳಿಗಷ್ಟೇ ಧಕ್ಕೆ ತರುವಂತೆ ಮೂಡುತ್ತಿರುವ ಇತ್ತೀಚಿನ ಇವರ ಕೆಲಚಿತ್ರಗಳೂ ಸಹ ಆತಂಕಕಾರಿಯಾದ ಸಂಗತಿಯೇ. ಸಾಮಾಜಿಕ ಕಾಳಜಿ ಎಂಬ ನೈತಿಕ ಕಲೆ ಪ್ರತಿಯೊಬ್ಬ ಕಲಾಕಾರನಿಗೆ ಇರಲೇಬೇಕಾದದ್ದು. ಮೇಲಾಗಿ ರಾಜ್ಕುಮಾರ್ ಹಿರಾನಿಯಂತಹ ಪ್ರಭುದ್ದ ಕ್ರಿಯಾಶೀಲ ನಿರ್ದೇಶಕರೇ ಹೀಗೆ ಎಡವಿದರೆ ಕಾಲ ಕೆಟ್ಟಂತೆಯೇ ಸರಿ. ಮುನ್ನಾಭಾಯಿ, 3 ಈಡಿಯಟ್ಸ್, ಪಿ.ಕೆ ಯಂತಹ ಮಾಸ್ಟರ್ ಪೀಸ್ ಗಳನ್ನು ಕೊಟ್ಟ ಹಿರಾನಿ ಈ ಬಾರಿ ತನ್ನ ಸ್ನೇಹಿತನ ಎಲ್ಲಾ ಕಾರುಬಾರುಗಳಿಗೂ ಕ್ಲಿನ್ ಚಿಟ್ ಕೊಡಲು ಹೋಗಿ ಮುಜುಗರಕ್ಕೀಡಾಗಿದ್ದರೆ.

ಕಥೆಯೊಂದನ್ನು ಹೊರತುಪಡಿಸಿ ಚಿತ್ರ ಮಾತ್ರ ಎಕ್ಸಲೆಂಟ್ ಎಂಬೊಂದು ಕೆಟಗರಿಗೆ ಸೇರಲ್ಪಡುತ್ತದೆ. ಯಾವ ದೃಶ್ಯವೂ ನೋಡುಗರನ್ನು ಕೂತ ಕುರ್ಚಿಯಿಂದ ಅಲುಗಾಡಿಸುದಿಲ್ಲ. ಒಂದು ಪಕ್ಷ ಖುದ್ದು ಸಂಜಯ್ ದತ್ತೇ ಚಿತ್ರದಲ್ಲಿ ನಟಿಸಿದ್ದರೂ ರಣಬೀರ್ನ ನಟನ ಚಾತುರ್ಯಕ್ಕೆ ಸಮದೂಗಿಸಲಾಗುತ್ತಿರಲಿಲ್ಲ. ಆ ಮಟ್ಟಿನ ನಟನೆಯನ್ನು ಚಿತ್ರದಲ್ಲಿ ನಾವು ಕಾಣಬಹುದು. ಇದು ರಾಜ್ಕುಮಾರ್ ಹಿರಾನಿಯ ಸತತ ಐದನೇ ಸೂಪರ್ಹಿಟ್ ಚಿತ್ರ ಎಂಬುದರಲ್ಲಿ ದೂಸರಾ ಮಾತೆ ಇಲ್ಲ. ಆದರೆ ಮುಂದೆಯಾದರೂ ಇಂತಹ ಒಬ್ಬ ಕ್ರಿಯಾಶೀಲ ನಿರ್ದೇಶಕ ಸಮಾಜಕ್ಕೆ ಮಾದರಿಯಾಗದ್ದಿದರೂ ಸರಿಯೇ ಕನಿಷ್ಠ ಪಕ್ಷ ಒಂದಿಷ್ಟು ಸಾಧನೆಮಾಡಿರುವ ವ್ಯಕ್ತಿತ್ವಗಳನ್ನು ನಮಗೆ ಪರಿಚಯಿಸಲಿ. ನಮ್ಮ ನಾಯಕರುಗಳಿಗೇ ಇಲ್ಲದ 'ಮುಲಾಜು' ಇಂಥ ಬಯೋಪಿಕ್ ಗಳನ್ನು ಮಾಡಹೋಗುವ ನಿಮಗ್ಯಾಕೆ ಹಿರಾನಿ?

Sunday, July 1, 2018

ಮರುಭೂಮಿಯ ಮಲೆನಾಡು…

ರಣಬಿಸಿಲ ಹೊಡೆತಕ್ಕೆ ಇದ್ದೆನೋ ಬಿದ್ದೆನೋ ಎನುತ ಎಲುಬುಗಟ್ಟಿದ ಹಕ್ಕಿಯೊಂದು ಕಷ್ಟಪಟ್ಟು ಹಾರತೊಡಗಿತ್ತು. ಕಾದ ನೀಲಾಕಾಶದಲ್ಲಿ ಜ್ವಲಿಸುತ್ತಿರುವ ಸೂರ್ಯದೇವನ ಶಕ್ತಿ ವಾತಾವರಣದ ತಾಪಮಾನವನ್ನು 50 ಡಿಗ್ರಿಗಳವರೆಗೂ ತಲುಪಿಸಿದೆ! ಕೆಳನೊಡಿದರೆ ಕಾದ ಮರಳ ದೊಡ್ಡ ದೊಡ್ಡ ರಾಶಿಗಳು ಕಳ್ಳ ನೆಪವನ್ನು ವೊಡ್ಡಿ ಶಿಕಾರಿಗೆ ಕದ್ದು ಅಣಿಯಾಗಿವೇಯೇನೋ ಎಂದನಿಸುತ್ತಿದೆ. ಬೀಸುವ ಗಾಳಿಯೂ ಮುನಿಸಿಕೊಂಡೋ ಎಂಬಂತೆ ಬಿಸಿ ಬಿಸಿಯಾಗಿ ಆ ಪುಟ್ಟ ದೇಹಕ್ಕೆ ಬಂದು ಅಪ್ಪಳಿಸಿ ಹಿಂಸಿಸುತ್ತಿದೆ. ಹಕ್ಕಿಗೆ ಯಾವ ದಿಕ್ಕಿನಲ್ಲಿ ಹಾರಬೇಕೆಂದು ತಿಳಿಯಲಿಲ್ಲ. ಗಂಟಲು ಒಣಗಿ ಮರದ ಚಕ್ಕೆಯಂತಾಗಿದೆ. ಕೂಗಿಕೊಳ್ಳಲೂ ಧ್ವನಿಯಲ್ಲಿ ಶಕ್ತಿಯಿಲ್ಲ! ಇನ್ನೇನು ತನ್ನ ಕೊನೆಘಳಿಗೆ ಸಮೀಪಿಸಿತು, ಮರುಭೂಮಿಯ ಕೆನ್ನಾಲಿಗೆಗೆ ತನ್ನೀ ದೇಹ ಸಮರ್ಪಣೆಯಾಯಿತು ಎನ್ನುವಷ್ಟರಲ್ಲಿ ದೂರದಲ್ಲೆಲ್ಲೋ ಮೋಡ ಕವಿದ ಆಕಾಶ ಅದಕ್ಕೆ ಗೋಚರಿಸಿದಂತನಿಸುತ್ತದೆ. ಬರಡುಭೂಮಿಯ ಈ ಕಾನನದಲ್ಲಿ ಮೋಡವೇ? ಕಣ್ಣಿಗೂ ಕೊನೆಗಾಲ ಸಮೀಪಿಸಿರಬಹುದು ಎಂದುಕೊಂಡರೂ, ಪ್ರವಾಹದಲ್ಲಿ ಕರಗುವವನಿಗೆ ಒಂದು ಗರಿಕೆ ಹುಲ್ಲೂ ಆಶ್ರಯವಾದಂತೆ ಹಕ್ಕಿಗೆ ಬತ್ತತೊಡಗಿದ್ದ ಜೀವನೊತ್ಸಾಹ ಒಮ್ಮೆಲೇ ಕಾರಂಜಿಯಂತೆ ಚಿಮ್ಮತೊಡಗಿತು. ಮೋಡಗಳು ಕಂಡ ದಿಕ್ಕಿಗೆ ತನ್ನ ಶಕ್ತಿಯನ್ನೆಲ್ಲ ಬಿಟ್ಟು ಅದು ಹಾರತೊಡಗಿತು. ಕೆಲನಿಮಿಷಗಳ ಕಾಲ ಅದೇ ದಿಕ್ಕಿನಲ್ಲಿ ಹಾರಿದ ಹಕ್ಕಿಗೆ ತನ್ನ ಊಹೆ ಸುಳ್ಳೆನಿಸಲಿಲ್ಲ! ಹಸಿಮಣ್ಣಿನ ಕನುವು ಚೂರು ಚೂರಾಗಿಯೇ ಮುಖಕ್ಕೆ ಬಡಿಯತೊಡಗಿತು. ಜೀವ ಒಮ್ಮೆಲೇ ಖುಷಿಯಿಂದ ಸಂಭ್ರಮಿಸತೊಡಗಿತು. ರೆಕ್ಕೆಗಳ ವೇಗ ತಾನಾಗಿಯೇ ಹೆಚ್ಚಾಯಿತು. ನೂರಾರು ಕಿಲೋಮೀಟರ್ಗಳ ವರೆಗೂ ಮೈಚಾಚಿ ಮಲಗಿರುವ ದೈತ್ಯ ಮರಳುಗಾಡಿನ ಮೂಲೆಯಲ್ಲಿ ವಿಸ್ಮಯವೊಂದು ಎದುರಾಯಿತು ಹಕ್ಕಿಗೆ. ದೂರದಿಂದ ಹಾರಾರಿ ಬಂದ ಅದಕ್ಕೆ ಸಿಕ್ಕ ಹಸಿಮಣ್ಣಿನ ವಾಸನೆಯ ಮೂಲ ಝರಿ ತೊರೆಗಳಿಂದ ಕೂಡಿದ, ಮೋಡಗಳಿಂದ ತುಂತುರುಗೈಯತೊಡಗಿ ಹಸಿರು ಹೊದಿಕೆಯನ್ನು ಹೊದೆದುಕೊಂಡ ಒಂದು ಭಿನ್ನ ಲೋಕವೇ ಎನ್ನಬಹುದಾದ ನೆಲದಿಂದ. ಹಕ್ಕಿಗೆ ಸ್ವರ್ಗದ ಬಾಗಿಲು ತೆರೆದಂತಾಯಿತು. ತಾನು ಕಾಣತೊಡಗಿದ ವಿಸ್ಮಯಕ್ಕೆ ಪ್ರತಿಕ್ರಿಯೆ ನೀಡಲೂ ಶಕ್ತವಿರದ ಅದು ಕೂಡಲೇ ಝರಿಯೊಂದರ ಬಳಿಗೆ ಹೋಗಿ ದೊಪ್ಪನೆ ಬಿದ್ದಿತು.

ಅದು ದಿನದ 24 ಘಂಟೆಯೂ ಒಣಗಾಳಿ ಬೀಸುವ ಮರುಭೂಮಿಯ ಸುಡುನಾಡು. ಸರಾಸರಿ ತಾಪಮಾನವೇ ಸುಮಾರು 40 ರಿಂದ 50 ಡಿಗ್ರಿಗಳು!! ಎಸಿ, ಫ್ರಿಜ್ಡ್ ಹಾಗು ಫ್ಯಾನ್ ಗಳೆಂಬ ಆಧುನಿಕ ಆಪತ್ಬಾಂಧವರೇನಾದರು ಇಲ್ಲದೆ ಹೋಗಿದ್ದರೆ ಇಲ್ಲಿನ ದೇಶಗಳು ಇಂದಿಗೂ ಬರಡು ಮರುಭೂಮಿಗಳಾಗಿಯೇ ಉಳಿಯುತ್ತಿದ್ದವೇನೋ? ಇಂತಹ ಬೆಂಕಿಯಂತಹ ಬಿಸಿಲಗೆ ಸವಾಲು ಹಾಕುವಂತೆ ಬೆಳೆದು ಇಂದು ಇಡೀ ವಿಶ್ವದಲ್ಲೇ ಮುಂಚೂಣಿಯಲ್ಲಿವೆ ಇಲ್ಲಿನ ಹತ್ತು ಹಲವು ದೇಶಗಳು. ವರ್ಷಕ್ಕೊಮೆ ಅಥವಾ ಎರಡು ಬಾರಿ ಅಥವಾ ಒಮ್ಮೆಯೂ ಬಾರದ ಮಳೆಯನ್ನಂತು ಇಲ್ಲಿನ ನರಪಿಳ್ಳೆಯೂ ನಂಬಿಕೊಂಡು ಬದುಕುವುದಿಲ್ಲ. ದಿನಬಳಕೆ ಹಾಗು ಇತರೆ ಏನೇ ಕೆಲಸಕ್ಕೂ ಸಮುದ್ರದ ನೀರೇ ಜೀವಾಳ. ಡಿಸಾಲೆನೇಷನ್ (ಸಮುದ್ರದ ನೀರಿನಿಂದ ಉಪ್ಪನ್ನು ಬೇರ್ಪಡಿಸಿ ಕುಡಿಯಲು ಯೋಗ್ಯವಾದ ನೀರನ್ನಾಗಿ ಮಾಡುವ ವಿಧಾನ) ಎಂಬ ಮತ್ತೊಬ್ಬ ಆಪತ್ಬಾಂಧವನೆಂಬ ಪ್ರಕ್ರಿಯೆಯನ್ನು ನಂಬಿ ಬದುಕಲಾಗುತ್ತದೆ ಇಲ್ಲಿನ ಜೀವನ. ಮಧ್ಯಪ್ರಾಚ್ಯ ದೇಶಗಳೆಂದು ಕರೆಯುವ ಇಲ್ಲಿನ ಜನಜೀವನ ಬಿಸಿಲಿನ ರಣಹೊಡೆತಕ್ಕೆ ಮನೆ, ಆಫೀಸ್, ಎಸಿ ತುಂಬಿದ ಕಾರು ಹಾಗು ಶಾಪಿಂಗ್ಮಾಲುಗಳ ಒಳಗೆಯೇ ಕಳೆಯಲ್ಪಡುತ್ತದೆ. ಅದೂ ಸಹ ಸೂರ್ಯ ಮರೆಯಾದ ರಾತ್ರಿಯ ಘಳಿಗೆಯಲ್ಲಿಯೇ! ಒಂದು ತರಹ ನಿಶಾಚರಿಗಳ ಜೀವನವೆಂದೇ ಹೇಳಿದರೂ ತಪ್ಪಾಗಲಾರದು. ಇನ್ನು ಕಾಡು ಮೇಡು ನದಿ ಜಲಪಾತಗಳೆಂದರೆ ಇವರುಗಳಿಗೆ ಕಾಣದ ಸ್ವರ್ಗದ ಕನಸ್ಸೆ ಸರಿ! ಹಸಿರು ಹೊದಿಸಿದಂತಿರುವ ಕೃತಕ ಹುಲ್ಲಿನ ನೆಲ ಹಾಗು ಸಮುದ್ರದ ನೀರನ್ನೇ ಪಂಪು ಮೋಟಾರುಗಳ ಮೂಲಕ ಮೇಲಕ್ಕೂ ಕೆಳಕ್ಕೂ ಹರಿಬಿಟ್ಟು ಗುಡ್ಡಗಾಡು ಹಾಗು ನದಿ ಜಲಪಾತಗಳ ಅನುಭವವನ್ನು ಪಡೆಯಲಾಗುತ್ತದೆ. ಹೀಗೆ ಸಕಲ ನೈಸರ್ಗಿಕ ಜೀವನವನ್ನು ಇಲ್ಲಿನ ಜನತೆ ಟೆಕ್ನಾಲಜಿ ಎಂಬ ನಾಲ್ಕಕ್ಷರದ ಪದವೊಂದರಿಂದಲೇ ಪಡೆದುಕೊಳ್ಳುತ್ತದೆ. ಎಲ್ಲಿಯವರೆಗೂ ಎಂದರೆ ಮಂಜುಗೆಡ್ಡೆಗಳ ಒಂದು ಮಿನಿ ಅಂಟಾರ್ಟಿಕಾವೇ ಇಲ್ಲಿನ ಶಾಪಿಂಗ್ಮಾಲುಗಳ ಒಳಗೆ ಕಾಣಸಿಗುತ್ತದೆ.
ಇಂತಹ ಒಂದು ಕೃತಕ ಕಾಂಕ್ರೀಟು ನಾಡಿನಲ್ಲಿ ಕಿಲೋಮೀಟರು ಗಟ್ಟಲೆ ವಿಸ್ತೀರ್ಣದ ಪ್ರದೇಶವೊಂದು ವರ್ಷಕ್ಕೆ ನಾಲ್ಕು ತಿಂಗಳು ಮಧುವನಗಿತ್ತಿಯ ಹಸಿರು ಸೀರೆಯ ಹೊಳಪನ್ನು ಧರಿಸಿ ನಲಿಯುತ್ತದೆ ಎಂದರೆ ನೀವು ನಂಬಲೇಬೇಕು. ತುಂತುರು ಮಳೆಯ ಚಿಟಪಟ ಸದ್ದು ಹಗಲು ರಾತ್ರಿಯೆನ್ನದೆ ಆಗಲ್ಲಿ ಕಿವಿಯನ್ನು ಬಡಿಯುತ್ತಿರುತ್ತದೆ. ಬೆಟ್ಟದ ಮೇಲಿನಿಂದ ಇಳಿಯುವ ಸಣ್ಣ ಪುಟ್ಟ ಜಲಧಾರೆಗಳೆಲ್ಲ ಒಂದಾಗಿ ಹೆಚ್ಚು ಕಡಿಮೆ ಒಂದು ನದಿಯ ಆಕಾರವನ್ನೇ ಪಡೆದುಕೊಳ್ಳುತ್ತದೆ! ದೂರ ದೂರದ ದೇಶಗಳಿಂದ ಹಕ್ಕಿ ಪಕ್ಷಿಗಳು ಹಾರಾರೀ ಬಂದು ತಮ್ಮ ವಿಧವಿಧವಾದ ರಾಗಗಳಿಂದ ಮೈದುಂಬಿರುವ ಹಸಿರು ಸಿರಿಗೆ ಒಂದು ಹೊಸ ಮೆರುಗನ್ನೇ ಕೊಡುತ್ತವೆ. ತುಸು ದೂರದ ಮರಳುಗಾಡಿನಲ್ಲಿ ಅಡ್ಡಾದಿಡ್ಡಿ ಅಲೆಯುವ ಒಂಟೆಗಳೂ ಈ ಒಂದು ಲೋಕಾತೀತವಾದ ಜಾಗಕ್ಕೆ ಓಡೋಡಿ ಬಂದು ಹಸಿರ ಕಾನನದಲ್ಲಿ ಮಿಂದು ನಲಿದೇಳುವುದುಂಟು! ಸಮುದ್ರದ ನೀರನ್ನು ತಡೆದಿವೆಯೋ ಎಂಬಂತಿರುವ ಎತ್ತರದ ಬೆಟ್ಟಗುಡ್ಡಗಳ ಒಂದುಬದಿಗೆ ಹೀಗೆ ಹೊಗೆಯಂತೆ ಆವರಿಸಿರುವ ಮೋಡಗಳ ಕೆಳಗೆ ಒಂದು ಹಸಿರು ಸ್ವರ್ಗವೇ ಹರವಿಕೊಂಡರೆ ಬೆಟ್ಟದ ಇನ್ನೊಂದು ಬದಿಗೆ ಮರಳುಗಾಡಿನ ದೊಡ್ಡ ದೊಡ್ಡ ಮರಳ ದಿಬ್ಬಗಳು ತಮಗಾದ ಅನ್ಯಾಯವನ್ನು ಚೀರಿ ಚೀರಿ ಹೇಳಿಕೊಳ್ಳುತ್ತಿವೆಯೋ ಎಂಬಂತೆ ಭಾಸವಾಗುತ್ತದೆ. ಅದೊಂದು ಮರುಭೂಮಿಯ ನಿಗೂಢ ವಿಸ್ಮಯ!

ಗಂಟಲು ಒಣಗಿ ಇನ್ನೇನು ಸತ್ತೇ ಹೋದೆನೆಂಬ ಘಳಿಗೆಯಲ್ಲಿ ಕಷ್ಟಪಟ್ಟು ಹಾರಾರೀ ಬಂದ ಹಕ್ಕಿಯೂ ಈಗ ಬಂದು ಬಿದ್ದಿರುವುದು ಇದೇ ಜಾಗಕ್ಕೆ. ಅಲ್ಲೊಂದು ಇಲ್ಲೊಂದು ಮರಗಿಡಗಳನ್ನು ಬಿಟ್ಟರೆ ಹೀಗೆ ಅಷ್ಟದಿಕ್ಕುಗಳಿಗೂ ಒಂದೇ ಸಮನಾದ ಹಸಿರನ್ನು ಅದು ತನ್ನ ಜೀವಮಾನದಲ್ಲೇ ಕಂಡಿರಲು ಸಾಧ್ಯವಿಲ್ಲ.ಹತ್ತಾರು ಜಾತಿಯ ಹಕ್ಕಿ, ಚಿಟ್ಟೆ, ಹುಳ ಹುಪ್ಪಟೆ, ಬಣ್ಣ ಬಣ್ಣದ ಹಣ್ಣುಗಳು, ಸಾಲದಕ್ಕೆ ಕತ್ತುದ್ದದ ಹರೆಬರೆ ನೆನೆದ ಒಂಟೆಗಳು.. ಅಹಃ ಎಂದನಿಸಿರಬೇಕು ಹಕ್ಕಿಗೆ. ಸಾಯುವ ಜೀವಕ್ಕೆ ಒಮ್ಮಿದೊಮ್ಮಲೆ ಜೀವಪ್ರೀತಿ ಉಕ್ಕಿದಂತಹ ಅನುಭವ. ಸರಸರನೆ ಹೊಟ್ಟೆಯ ಕಟ್ಟೆ ಒಡೆಯುವಷ್ಟು ನೀರನ್ನು ಹೀರಿ ಹತ್ತಿರದಲ್ಲಿದ್ದ ಯಾವುದೊ ಮರವೊಂದರ ಮೇಲೆ ಕುಳಿತು ಹಾಯಾಗಿ ಸಿಳ್ಳೆಯಾಕತೊಡಗಿ ನೋಡುತ್ತದೆ, ಎಲ್ಲೆಂದರಲ್ಲಿ ಗಂಡು ಹಕ್ಕಿಗಳು ಹಳ್ಳದಂತಿರುವ ನೀರಿಗೆ ಜೋತುಬಿದ್ದಿರುವ ಬಳ್ಳಿಗಳಿಗೆ ವಿಧವಿಧವಾದ ಗೂಡನ್ನು ಹೆಣೆಯುತ್ತಾ ಹೆಣ್ಣು ಹಕ್ಕಿಗಳನ್ನು ಸೆಳೆಯುವಲ್ಲಿ ಮಗ್ನವಾಗಿವೆ! ದೂರದಲೆಲ್ಲೋ ರಣ ಹದ್ದೊಂದು ಆಹಾರಾನ್ವೇಷಣೆಯಲ್ಲಿ ಭಾರಿ ದೂರದ ನೆಲವನ್ನು ಎಳೆಎಳೆಯಾಗಿ ಪರೀಕ್ಷಿಸುತ್ತಿದ್ದರೆ ಇತ್ತ ಕಡೆ ಅದರ ನಡುಕಹಿಟ್ಟಿಸುವ ಭಯಾನಕ ಸಿಳ್ಳೆಗೆ ಮೊಲ, ಅಳಿಲು, ಇಲಿಗಳು ತಮ್ಮ ತಮ್ಮ ಗೂಡನ್ನು ಸೇರಿ ಮರೆಯಾಗುತ್ತಿವೆ. ನೀರಿನ ಒಳಗೆ ಮರಿಮೀನುಗಳು ಅಡ್ಡಾ ದಿಡ್ಡಿ ಆಟವಾಡುತ್ತಿದ್ದರೆ ಇತ್ತಕಡೆ ಕೊಕ್ಕುದ್ದದ ಹಕ್ಕಿಯೊಂದು ಮಿಂಚಿನ ವೇಗದಲ್ಲಿ ಅತ್ತಕಡೆಗೆ ಚಿಮ್ಮಿ ಮರಿಮೀನೊಂದನು ಕಿಡಿದು ಕ್ಷಣಮಾತ್ರದಲ್ಲಿ ನುಂಗಿಬಿಡುತ್ತದೆ! ಗೊಂದಲಗೊಂಡ ನಮ್ಮ ಹಕ್ಕಿ ಆ ಉದ್ದಕೊಕ್ಕಿನ ಹಕ್ಕಿಯನ್ನೇ ಅರ್ಧಚಂದ್ರಾಕೃತಿಯಲ್ಲಿ ತನ್ನ ತಲೆಯನ್ನು ತಿರುಗಿಸುತ್ತಾ ನೋಡುತ್ತದೆ.

ಸ್ಥಳದ ಹೆಸರು ಸಲಾಲ್ಹ. ಓಮನ್ ದೇಶದ ಧೋಫಾರ್ ಪ್ರಾಂತ್ಯದ ರಾಜಧಾನಿ. ವರ್ಷದ ಉಳಿದಷ್ಟೂ ದಿನಗಳು ಸರ್ವೇಸಾಮಾನ್ಯವಾದ ಬರಡುಭೂಮಿ. ಅಲ್ಲೊಂದು ಇಲ್ಲೊಂದು ಕುರುಚಲು ಮರಗಿಡಗಳನ್ನು ಬಿಟ್ಟರೆ ಉಳಿದೆಲ್ಲ ಜಾಗ ಒಣಗಿ ಕಮರಿದ ನೆಲದಂತೆಯೇ ಸರಿ. ಆದರೆ ವರ್ಷದ ಜೂನ್ ತಿಂಗಳಿಂದ ಸೆಪ್ಟೆಂಬರ್ ವರೆಗೆ ಅರಬ್ಬೀ ಸಮುದ್ರದಿಂದ ಬೀಸುವ ಗಾಳಿ ತನ್ನೊಡಲಲ್ಲಿ ನೀರಿನ ಬುಗ್ಗೆಗಳನ್ನೂ ಹಿಡಿದುಕೊಂಡು ಬರುವುದುಂಟು. ಹೀಗೆ ಬೀಸುವ ಶೀತ ಮಾರುತಗಳೇ ಈ ಒಂದು ಪ್ರಾಂತ್ಯದಲ್ಲಿ ನೀರಿನ ಸಿಂಚನವನ್ನು ಮೂಡಿಸುವ ಕಾಣದ ಕೈಗಳು. ಭಾಗಶಃ ನಮ್ಮ ಉತ್ತರಕನ್ನಡ, ಕೇರಳ ಪ್ರಾಂತ್ಯಗಳಂತೆಯೇ ಮಲೆನಾಡ ಸಿರಿ ಒಮ್ಮೆಲೇ ಅಲ್ಲಿ ಆವರಿಸಿಬಿಡುತ್ತದೆ. ಅಲ್ಲಿಯವರೆಗೂ ಕೇವಲ ಮರಳುಗಾಡಿನ ಸುಡುಬಿಸಿಲಲ್ಲೆ ಕಣ್ತಂಪುಮಾಡಿಕೊಳ್ಳುವ ಇಲ್ಲಿನ ಜನ ಒಮ್ಮೆಲೇ ಶೀತಗಾಳಿ ಹಾಗು ಚಿಗುರೊಡೆಯುವ ಮರಗಿಡಗಳನ್ನು ನೋಡಿ ಮೂಕವಿಸ್ಮಿತರಾಗುತ್ತಾರೆ. ದಂಡುಕಟ್ಟಿಕೊಂಡು ವಾರಗಳ ಕಾಲ ಇಲ್ಲಿಗೆ ಬಂದು ಹಾಯಾಗಿ ಕಳೆಯುತ್ತಾರೆ. ಇತ್ತೀಚಿನ ಕೆಲವರ್ಷಗಳಲಂತೂ ಜೂಲೈ ಹಾಗು ಆಗಸ್ಟ್ ತಿಂಗಳಿನಲ್ಲಿ ಇಲ್ಲಿನ ಸರ್ಕಾರವೇ ಮುಂದಾಗಿ ‘ಸಲಾಲ್ಹ ಫೆಸ್ಟಿವಲ್’ ಎಂಬ ಪ್ರವಾಸಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಂಗೀತ, ನೃತ್ಯ, ಚಿತ್ರಕಲಾ ಪ್ರದರ್ಶನಗಳನ್ನು ಹಮ್ಮಿಕೊಳ್ಳುತ್ತದೆ. ಕೆಂಡದ ಮೇಲಿನ ನಡಿಗೆಯನ್ನು ನೆಡೆದು ಒಮ್ಮೆಲೇ ಮಂಜುಗೆಡ್ಡೆಯ ಹಾಸಿಗೆಯ ಮೇಲೆ ಬೀಳುವ ಅನುಭವದ ಜೊತೆಗೆ ಒಂದು ಮಿನಿ ಹಬ್ಬದ ವಾತಾವರಣವೆನ್ನೆ ಸೃಷ್ಟಿಸುವ ಇಲ್ಲಿನ ಪರಿಸರ ಪ್ರವಾಸಿಗರನ್ನು ಆಕರ್ಷಿಸದೇ ಇರಲಾರದು.

ಮುಂದಿನ ಕೆಲತಿಂಗಳು ನಮ್ಮ ಹಕ್ಕಿಗೂ ಹಬ್ಬದ ವಾತಾವರಣವೇ ಸರಿ. ಹೊಟ್ಟೆಬಿರಿಯುವಷ್ಟು ಆಹಾರ, ಮುಳುಗೆದ್ದು ಬಿದ್ದು ಒದ್ದಾಡುವಷ್ಟು ನೀರಿನ ಝರಿ, ತಂಪಾದ ಹಿತವಾದ ನೆಮ್ಮದಿಯ ವಾತಾವರಣ. ಕೆಲದಿನಗಳಲ್ಲೇ ಹಕ್ಕಿಯೂ ಗೂಡೊಂದನ್ನು ಕಟ್ಟಲು ಕಲಿತಿತು. ಮುಂದೆ ಇನ್ನೇನು, ಗೂಡು ನಿರ್ಮಿಸಿ ಹೆಣ್ಣಕ್ಕಿಯೊಂದನ್ನು ತನ್ನತ್ತ ಸೆಳೆಯುವುದು. ಒಂದಲ್ಲ ಎರಡಲ್ಲ ಸುಮಾರು ಇಪ್ಪತ್ತು ಇಪ್ಪತೈದು ಗೂಡನ್ನು ನಿರ್ಮಿಸಿದ ಹಕ್ಕಿ ತನ್ನ ಒಂದು ಜಂಟಿ ಕುಟುಂಬವನ್ನೇ ಅಲ್ಲಿ ಸ್ಥಾಪಿಸಿತು. ದಿನಕಳೆದಂತೆ ಹಚ್ಚಹರಿದ್ವರ್ಣದ ಕಾಡಿನಂತೆ ಹುಬ್ಬಿಕೊಂಡ ಹಸಿರ ಸಿರಿ ಪಕ್ಕದ ತುಸು ದೂರದಲ್ಲಿಯೇ ಸುಟ್ಟು ಕರಕಲಾಗಿಸುವ ಬಿಸಿಲ ರೌದ್ರತಾಂಡವಾಡುವದನ್ನೇ ಮರೆಸಿಬಿಡುತ್ತದೆ.. ಇತ್ತೀಚಿಗೆ ಕೆಲದಿನಗಳಿಂದ ನೋಡ ನೋಡುತ್ತಲೇ ಚಿತ್ರ ವಿಚಿತ್ರವಾದ ಜನರ ಗುಂಪು ಕಾರು ಜೀಪುಗಳಿಂದ ದಂಡು ದಂಡಾಗಿ ಬಂದು ಅಲ್ಲಲಿ ಬಣ್ಣಬಣ್ಣದ ಗುಡಿಸಲನ್ನು ಹಾಕಿ ಗಿಜಿಗಿಜಿಗುಡುತ್ತಾರೆ. ಅವರುಗಳ ಚೀರಾಟ ಕೂಗಾಟಗಳಿಂದ ಕಂಗಾಲಾದ ಹಕ್ಕಿಗಳು ಎಲ್ಲೆಂದರಲ್ಲಿ ಮನಸ್ಸಾಇಚ್ಛೆ ಹಾರಲೂ ಭಯಪಡುತ್ತಿವೆ. ಸಾಲದಕ್ಕೆ ಅವರು ತಿಂದು ಬಿಸುಟುವ ತಿಂಡಿ ತಿನಿಸುಗಳ ಜೊತೆಗೆ ಪ್ಲಾಸ್ಟಿಕ್ ಪದಾರ್ಥಗಳನ್ನೂ ಸೇವಿಸಿ ಅದಾಗಲೇ ಹತ್ತಾರು ಜೀವಗಳು ಅಸುನೀಗಿವೆ. ದೂರದಲ್ಲಿ ಗಡ್ಡ ಮೀಸೆಯನ್ನು ಉದ್ದುದ್ದ ಬಿಟ್ಟಿದ್ದ ಪ್ರಾಣಿಯಂತಿದ್ದ ಮಾನವನೊಬ್ಬ ಬಾಯಲ್ಲಿ ಸಿಗರೇಟಿನ ತುಂಡೊಂದನ್ನು ತೂರಿಸಿಕೊಂಡು ತನ್ನ ಕೈಲಿದ್ದ ಉದ್ದವಾದ ಕ್ಯಾಮರಾದಿಂದ ನಮ್ಮ ಹಕ್ಕಿಯ ಹಾವಭಾವಗಳನ್ನು ಸೆರೆಯಿಡಿಯುದ್ದಿದ್ದಾನೆ. ಹಕ್ಕಿಯೂ ಈಗ ಗಡತ್ತಾಗಿ ತಿಂದು ಹುಬ್ಬಿಕೊಂಡಿರುವುದಲ್ಲದೆ ಬಣ್ಣ ಬಣ್ಣದ ಪುಕ್ಕಗಳೂ ದೇಹದ ಅಲ್ಲಲಿ ಮೂಡಿರುತ್ತವೆ.

ದಿನಗಳು ಕಳೆದವು...

ಹೊಗೆಯಂತೆ ಆವರಿಸಿದ ಮಂಜಿನ ಕವಚ ಮರೆಯಾಗುವ ಮುನ್ಸೂಚನೆ ಹಕ್ಕಿಗೆ ಸಿಗಲು ಶುರುವಾಗುತ್ತದೆ. ದಂಡುಕಟ್ಟಿಬಂದ ಜನರ ಸಂತೆಯೂ ವಿರಳವಾಗುತ್ತಾ ಒಂದು ದಿನ ಕಣ್ಮರೆಯಾಗಿಬಿಡುತ್ತದೆ. ತಮ್ಮ ಸವಿ ನೆನಪಿಗಾಗಿ ಕೊಟ್ಟ ಕಾಣಿಕೆಯೋ ಎಂಬಂತೆ ಕಸದ ರಾಶಿಯ ಒಂದು ದೊಡ್ಡ ಗುಡ್ಡವನ್ನೇ ನಿರ್ಮಿಸಿ ಹೊರಟಿರುತ್ತಾರೆ! ತಿಂಗಳುಗಳ ಕಾಲ ಕಣ್ಮರೆಯಾಗಿದ್ದ ಸೂರ್ಯದೇವ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಾ ನಮ್ಮ ಹಕ್ಕಿಗೆ ಭಯದ ನಡುಕವನ್ನು ಹುಟ್ಟಿಸುತ್ತಾನೆ. ತಮ್ಮ ಉದ್ದ ಕತ್ತಿನಿಂದ ತುತ್ತತುದಿಯ ಚಿಗುರೆಲೆಗಳನ್ನೇ ಕತ್ತರಿಸಿ ಜಗಿಯುತ್ತಿದ್ದ ಒಂಟೆಗಳೂ ಸಹ ಸಾಲಾಗಿ ಮರುಭೂಮಿಯೆಡೆ ಈಗ ಹೆಜ್ಜೆ ಹಾಕಿವೆ. ತಮ್ಮ ಬುಜದ ಮೇಲಿನ ಕುಂಭದಲ್ಲಿ ಸಾಕಾಗುವಷ್ಟು ನೀರನ್ನು ಸಂಗ್ರಹಿಸಿಟ್ಟಿವೆ. ಅರಬ್ಬೀ ಸಮುದ್ರದಿಂದ ತಣ್ಣನೆಯ ಹನಿಗಳನ್ನು ಹೊತ್ತುತರುತ್ತಿದ್ದ ಗಾಳಿಯೂ ಈಗ ಕಾಣೆಯಾಗತೊಡಗಿದೆ. ಹಸಿರುಗಟ್ಟಿದ್ದ ಮರಗಿಡಗಳು ರೋಗಬಡಿದಂತೆ ಬರಿದುಬರಿದಾಗುತ್ತಿವೆ. ಪರಿಸರದ ಉಷ್ಣಾಂಶ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ತನ್ನದೊಂದು ಸಂಸಾರ ಎಂದುಕೊಂಡು ನಲಿಯುತ್ತಿದ್ದ ಹಕ್ಕಿ, ಮರಿಗಳು ಯಾವಾಗ ರೆಕ್ಕೆ ಬಲಿತು ಹಾರಲು ಶುರುಮಾಡಿದವೋ ಅಂದೇ ಅವುಗಳೆಲ್ಲವೂ ಕಾಣದ ದಿಕ್ಕುಗಳಿಗೆ ಎಲ್ಲ ಬಗೆಯ ಸಂಭಂದಗಳನ್ನು ಕಳೆದು ಕೊಂಡು ಹಾರಿವೆ. ಹಸಿರಿದ್ದಾಗ ಮುತ್ತಿಕೊಳ್ಳುತ್ತಿದ್ದ ಜೀವಗಳು ಇಂದು ಹಸಿರು ಕಳೆದಂತೆ ಬೆನ್ನುಮಾಡಿ ಜಾಗಕಿತ್ತಿವೆ. ಎಲ್ಲರ ಹಸಿವು, ಧಾಹ, ಚಿಂತೆ, ದುಃಖ ದುಮ್ಮಾನಗಳನ್ನು ದೂರವಾಗಿಸಿದ ನೆಲ ಇಂದು ಯಾರಿಗೂ ಬೇಡವಾಗಿದೆ. ನಮ್ಮ ಹಕ್ಕಿಯೊಂದನ್ನು ಬಿಟ್ಟು!!

ಈಗ ಹಕ್ಕಿ ಒಂಟಿಯಾಗಿದೆ. ತನಗೆ ಜೀವಕರುಣಿಸಿದ ನೆಲವನ್ನು ಒಬ್ಬಂಟಿಯಾಗಿ ಬಿಟ್ಟು ಹೊರಡಲು ಅದಕ್ಕೆ ಮನಸ್ಸಿಲ್ಲ. ಬಿಸಿಲಿನ ಪ್ರಖರತೆಗೆ ಝರಿ ತೊರೆಗಳೆಲ್ಲ ಬರಿದಾಗಿವೆ. ಹಕ್ಕಿಯ ಗಂಟಲು ಪುನ್ಹ ಒಣಗತೊಡಗಿದೆ... ಹಕ್ಕಿ ಕಾಯುತ್ತದೆ. ಬರಿದ ನೆಲಕ್ಕೂ ಜೀವಕೊಡುವ ಶೀತಗಾಳಿ ಬೀಸುವವರೆಗೆ. ನಿನ್ನೊಟ್ಟಿಗೆ ನಾನಿರುವೆ ಎಂಬ ಭರವಸೆಯ ಭಾವದೊಂದಿಗೆ...