Friday, December 9, 2016

ಪ್ರಸ್ತುತ : ‘ಮೇಕ್-ಇನ್-ಇಂಡಿಯ’ ಬಂದಾಯ್ತು ಆದರೆ, ‘ಮೇಡ್-ಇನ್-ಇಂಡಿಯಾ’ಗಳ ಕತೆ ಏನಾಯ್ತು..?


Bharathi Shipyard

HMT (Watch Division)

UB Groups

BPL

Sahara Housing Corporation

And many more…




ಒಂದು ಕಾಲದಲ್ಲಿ ದೇಶದ ಟಾಪ್ ರೇಟೆಡ್ ಕಂಪನಿಗಳ ಪಟ್ಟಿಯಲ್ಲಿ ಈ ಎಲ್ಲಾ ಹೆಸರುಗಳಿದ್ದಿದ್ದನ್ನು ಗಮನಿಸಿರಬಹುದು. ಕೆಲವು ಹೆಸರುಗಳು ಪಟ್ಟಿಯಲ್ಲಿ ಕೆಲದಿನಗಳು ಮಾತ್ರ ಕಂಡರೆ, ಕೆಲವು ದಶಕಗಳವರೆಗೂ ರಾರಾಜಿಸಿದ್ದವು. ಅಂದು ದೇಶದ ಪ್ರತಿಯೊಬ್ಬ ಪ್ರಜೆಯೂ ಹೆಮ್ಮೆಯಿಂದ ಹೇಳುತ್ತಿದ್ದ ಹಾಗೂ ಇರುವುದರಲ್ಲೇ ಇಲ್ಲದಿರುವುದನ್ನು ಸಾಧಿಸಿ ತೋರಿಸಿದ ಕಂಪನಿಗಳಿವು. ಇವುಗಳಲ್ಲಿ ಕೆಲವು ದೇಶದ 'ಸಮಯವನ್ನು ಕಾಯುವ' ಕಂಪನಿಗಳೆಂದು ಪ್ರಸಿದ್ದಿ ಹೊಂದಿದರೆ ಮತ್ತು ಕೆಲವು ಸ್ವದೇಶೀ ತಂತ್ರಜ್ಞಾನದಿಂದ ಏನೆಲ್ಲಾ ಸಾಧಿಸಬಹುದು ಎಂದು ತೋರಿಸಿಕೊಟ್ಟವು. ಅಂದು ಟಿವಿ, ವಾಚು, ವಿಮಾನ ಪ್ರಯಾಣ ಇತ್ಯಾದಿ ಅಂದಾಗಲೆಲ್ಲ ಮೇಲಿನ ಹೆಸರುಗಳೇ ಹೆಚ್ಚಾಗಿ ಜನರ ಗಮನ ಸೆಳೆಯುತ್ತಿದ್ದವು. ಅದೃಷ್ಟ ಲಕ್ಷ್ಮಿ ಒಲಿದರೆ, ನಮಗೆ ಕೊಳ್ಳಲು ಸಾದ್ಯವಾದರೆ, ಅಥವಾ ಕೊನೆ ಪಕ್ಷ ಸಾಲ ಮಾಡಿಯಾದರೂ ಇಂತ ಒಂದು ಪ್ರಾಡಕ್ಟ್ ಅನ್ನೇ ಖರೀದಿಸಬೇಕು ಎಂದು ಜನಸಾಮಾನ್ಯ ಅಂದುಕೊಳ್ಳುತ್ತಿದ್ದ. ಇಷ್ಟೆಲ್ಲಾ ಬೇಡಿಕೆ, ಹೆಮ್ಮೆ, ಮೇಲಾಗಿ ದೇಶಕ್ಕೆ ಆದಾಯವನ್ನು ತಂದು ಕೊಟ್ಟದ್ದು ಯಾವುದೇ ವಿದೇಶಿ ಬಹುರಾಷ್ಟೀಯ ಕಂಪನಿಗಳಲ್ಲ. ನಮ್ಮ ನೆಲದಲ್ಲೇ ಬೆಳೆದು ಇತಿಹಾಸ ಸೃಷ್ಟಿಸಿ ಇಂದು ಅವನತಿಯ ಹಾದಿ ಹಿಡಿದು ಅಥವಾ ಹಿಡಿಯುತ್ತಿರುವ ಸ್ವದೇಶೀ ಕಂಪನಿಗಳು!

ಅಂದು 1991. ಚಂದ್ರಶೇಖರ್ ಸರ್ಕಾರ ಬಿದ್ದು ಮತ್ತೊಮ್ಮೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸನ ಮುಂದಿದ್ದದ್ದು ಅವನತಿಯ ಹಾದಿ ಹಿಡಿದ್ದಿದ್ದ ದೇಶದ ಅರ್ಥವ್ಯವಸ್ಥೆ. ಆಗ ಮನಮೋಹನ್ ಸಿಂಗ್ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಿ ದೇಶದ ಆರ್ಥಿಕ ಅವನತಿಯನ್ನು ತಪ್ಪಿಸಿದ ಕೀರ್ತಿ P.V ನರಸಿಂಹರಾವ್ ಸರ್ಕಾರಕ್ಕೆ ಸೇರುತ್ತದೆ. Economic Policy Reform, ಎಫ್.ಡಿ.ಐ ಹಾಗು ಮತ್ತಿತರ ಸುದಾರಣೆಗಳೊಂದಿಗೆ ತಯಾರಾದ ಯೋಜನೆ ದೇಶದ ಅರ್ಥವ್ಯವಸ್ಥೆ ಹೊರದೇಶದ ಕಂಪನಿಗಳಿಗೊಸ್ಕರ ಆತುರದಿಂದ ಕಣ್ಣರಳಿಸಿ ನೋಡುವಂತೆ ಮಾಡಿತ್ತು. ಆಗ ನಿಜವಾದ ಪೀಕಲಾಟ ಶುರುವಾದದ್ದು ನಮ್ಮ ದೇಶಿಯ ಕಂಪನಿಗಳಿಗೆ. ಅಲ್ಲಿಯವರೆಗೂ ದೇಶದ ಟಾಪ್ ರೇಟೆಡ್ ಕಂಪನಿಗಳಲ್ಲಿ ಒಂದಾಗಿದ್ದ ಕಂಪನಿಗಳು, ವಿದೇಶಿ ರಂಗು ರಂಗಿನ ವಸ್ತುಗಳ ಮುಂದೆ ಮಂಕಾದದ್ದು ಮಾತ್ರ ಸುಳ್ಳಲ್ಲ. ದೇಶದ ಆರ್ಥಿಕ ಸುದಾರಣೆಯ ಜವಾಬ್ದಾರಿ ಹೊತ್ತ ಸರ್ಕಾರ ಆಗ ದೇಶಿಯ ಕಂಪನಿಗಳಿಗೆ ಆಗಬಹುದಾಗಿದ್ದ ವ್ಯತಿರಿಕ್ತ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳುವಾಗ ಸ್ವಲ್ಪ ಎಡವಟ್ಟು ಮಾಡಿತು. ದೇಶಿಯ ಅದೆಷ್ಟೋ ಉದ್ಯಮಗಳನ್ನು ಮತ್ತು ಅವುಗಳ ಪ್ರಾಡಕ್ಟ್ಗಳನ್ನು ಭಾರತೀಯರೇ ಕೇಳದಂತಾದರು. ತಮ್ಮ ದೇಶದಲ್ಲಿ ಒಬ್ಬ ನೌಕರನಿಗೆ ಕೊಡುವ ಸಂಬಳದಲ್ಲಿ ಇಲ್ಲಿ 10 ನೌಕರರನ್ನು ಕೊಳ್ಳುವ ಅವಕಾಶ ಯಾರು ತಾನೆ ಬಿಟ್ಟಾರು? ಫಲಿತಾಂಶವಾಗಿ ರಾಶಿ ರಾಶಿ ವಿದೇಶಿ ಕಂಪನಿಗಳು ಇಲ್ಲಿಯ ನೆಲದಲ್ಲಿ ಗೋಚರಿಸತೊಡಗಿದವು. ದೇಶದ ಅರ್ಥವ್ಯವಸ್ಥೆ ಆಗ ಅದೆಷ್ಟು ಬಲಿಯಿತೋ ಅದರ ನೂರು ಪಟ್ಟು ವಿದೇಶಿ ಕಂಪನಿಗಳು ತಮ್ಮ ಲಾಭವನ್ನು ಗಳಿಸಿಕೊಂಡವು ಎಂಬುದು ಸುಳ್ಳಲ್ಲ. ಹಾಗೆಯೆ, ನಮ್ಮ ಎಲ್ಲಾ ದೇಶಿಯ ಕಂಪನಿಗಳು ಈ ನೀತಿಯಿಂದ ಉನ್ನತಿ ಒಂದಿದವು ಅನ್ನುವ ಮಾತೂ ನಿಜವಲ್ಲ.

UB Groups. ಹೆಸರು ಕೇಳುತ್ತಲೇ ಅದೇನೋ ಒಂಥರಾ ಥ್ರಿಲ್! UB Groups ಒಂದು ಸಂಘಟಿತ ವ್ಯಾಪಾರಿ ಸಂಸ್ಥೆ (Conglomerate). ವಿಧ-ವಿಧವಾದ ಮಧ್ಯವನ್ನು ಪ್ರಪಂಚಕ್ಕೆ ಪರಿಚಹಿಸಿದ ಖ್ಯಾತಿ, ಭಾರತವನ್ನು 'ಫೋರ್ಸ್ ಇಂಡಿಯಾ' ಎಂಬ ಹೆಸರಲ್ಲಿ F1 ಟ್ರ್ಯಾಕ್ಗೆ ಇಳಿಸಿ ಭಾರತೀಯರು ಇಲ್ಲೂ ಹಿಂದಿಲ್ಲ ಎಂದು ತೋರಿ, ಭಾರತದ ಏವಿಯೇಷನ್ ಇಂಡಸ್ಟ್ರಿ ಅಂದರೆ ‘ಅಯ್ಯೋ ಅದೇ ಏರ್ ಇಂಡಿಯಾ, ಜೆಟ್ ಏರ್ವೇಸ್’ ಎಂದು ಮೂಗು ಮುರಿಯುತ್ತಿದ್ದ ಕಾಲದಲ್ಲಿ 'Fly The Good Times' ಎಂಬ ಸ್ಲೋಗನ್ನೊಂದಿಗೆ ಐಷಾರಾಮಿ ಕಿಂಗ್ ಫಿಷರ್ ಏರ್ಲೈನ್ಸ್ ಅನ್ನು ಸ್ಥಾಪಿಸಿ ವಿದೇಶಿಯರ ಉಬ್ಬನ್ನು ಮೇಲೇರಿಸಿದ ಕೀರ್ತಿ ಈ UB Groupsನದು. ಒಂದು ಕಾಲಕ್ಕೆ ವಿಶ್ವದಲ್ಲೇ ಟಾಪ್ ಸ್ಪಿರಿಟ್ಸ್ ಕಂಪನಿ ಅನ್ನಿಸಿಕೊಂಡಿದ್ದ UB Groupsನ ಮುಖ್ಯ ಶಾಖೆ ಇರುವುದು ಬೆಂಗಳೊರಿನಲ್ಲಿ. ಬಹುರಾಷ್ಟ್ರಿಯ ಕಂಪನಿಯಾಗಿ ವಿಶ್ವದಾದ್ಯಂತ ಸುಮಾರು 60 ಇತರೆ ಕಂಪನಿಗಳನ್ನು ತೆಕ್ಕೆಗೆ ಹಾಕಿಕೊಂಡು 1983 ರಿಂದ 1998ರ ವರೆಗೆ ಅಂದರೆ ಕೇವಲ 15 ವರ್ಷದಲ್ಲೇ ವಾರ್ಷಿಕ ವಹಿವಾಟನ್ನು 64% ಜಾಸ್ತಿ ಮಾಡಿ ತೋರಿಸಿತು. ಈ ಪರಿ ಬೆಳೆದು ಅಚ್ಚರಿ ಮೂಡಿಸಿದ UB Groups ಇಂದು ಪರಕೀಯರ ಪಾಲಾಗಿದೆ!

ಹಾಗೆಯೇ..

ಒಂದು ಕಾಲಕ್ಕೆ ದೇಶದ No.1 ಹಡಗು ನಿರ್ಮಾಣ ಕಂಪನಿಗಳಲ್ಲಿ ಒಂದಾಗಿದ್ದ ಭಾರತೀ ಶಿಪ್ಯಾರ್ಡ್ ದೇಶಿಯ ಹಡಗು ನಿರ್ಮಾಣ ವಲಯಕ್ಕೆ ಒಂದು ಹೊಸ ದಿಕ್ಕನ್ನೇ ತೋರಿಸಿತ್ತು. 1973ರಲ್ಲಿ ಯುವ ಇಂಜಿನಿಯರ್ಗಳಾಗಿದ್ದ ಪ್ರಕಾಶ್ ಸಿ ಕಪೂರ್ ಹಾಗು ವಿಜಯ್ ಕುಮಾರ್ ಅವರುಗಳು ಶುರು ಮಾಡಿದ ಈ ಸಂಸ್ಥೆ ಹಡಗು, ಟಗ್ ಬೋಟ್ಸ್, ಕಾರ್ಗೋ ಶಿಪ್ಸ್ , ಕಂಟೇನರ್ ಶಿಪ್ಸ್, ಫಿಶಿಂಗ್ ಬೋಟ್ಸ್ಗಳ ತಯಾರಿಸುವ ಪ್ರಾಜೆಕ್ಟ್ ಗಳನ್ನು ನಮ್ಮ ದೇಶದ ನೆಲದಲ್ಲೇ ಬೆಳೆಸುತ್ತಾ ಬಂದಿತು. ಅಲ್ಲದೆ ತನ್ನ ವ್ಯವಹಾರವನ್ನು ವಿಸ್ತರಿಸುತ್ತಾ ಹಲವಾರು ಸಣ್ಣ ಪುಟ್ಟ ಕಂಪನಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಮುನ್ನಿಗ್ಗಿತು. ಮರೀನ್ ಇಂಜಿನಿಯರಿಂಗ್ ಮುಗಿಸಿ ವಿದೇಶದಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಆತುರಲ್ಲಿರುವ ನಮ್ಮ ಇಂಜಿನಿಯರ್ಗಳಿಗೆ ಆಗೆಲ್ಲ ಮೊದಲು ಕಾಣುತ್ತಿದ್ದದ್ದು ಭಾರತೀ ಶಿಪ್ಯಾರ್ಡ್. ನಮ್ಮವರಲ್ಲೇ, ನಮ್ಮದೇ ತಂತ್ರಜ್ಞಾನದಿಂದ ಹಡಗುಗಳನ್ನು ನಿರ್ಮಿಸಿ ಮಾರುಕಟ್ಟೆಗೆ ಬಿಟ್ಟ ಈ ಕಂಪನಿ ಇಂದು ಅಕ್ಷರ ಸಹ ತನ್ನ ಉಳಿವಿಗೆ ಪರದಾಡುತ್ತಿದೆ!

ಇದೇ ಸಾಲಿನಲ್ಲಿ ಬರುವುದು ಮತ್ತೊಂದು ದೇಶಿಯ ಕಂಪನಿ, ಹಿಂದುಸ್ತಾನ್ ಮಷೀನರಿ ಟೂಲ್ಸ್. HMT. ಒಂದು ಕಾಲಕ್ಕೆ ದೇಶವೇ ಮೆಚ್ಚುವಂತ ವಾಚ್ಗಳನ್ನ ದೇಶದ ಮಾರುಕಟ್ಟೆಗೆ ಬಿಟ್ಟು, ಅನಲಾಗ್ ವಾಚ್ ನಿರ್ಮಾಣದಲ್ಲಿ ತನಗೆ ಸಾಟಿಯಾರು ಎಂದು ವಿಶ್ವಕ್ಕೆ ಸವಾಲೆಸೆದ ಕಂಪನಿ! Quartz ವಾಚ್ಗಳು (ಸ್ಫಟಿಕದ ಕಂಪನದಿಂದ ನೆಡೆಯುವ ವಾಚುಗಳು) ಮಾರುಕಟ್ಟೆಯಲ್ಲಿ ತಮ್ಮ ಅದಿಪತ್ಯವನ್ನು ಮೆರೆದಾಗಲೂ ತನ್ನ ಉಳಿವನ್ನು ಕಂಡ ಈ ಕಂಪನಿ ‘The Timekeeper of the Nation' ಎಂದೇ ಪ್ರಸಿದ್ದಿ. ಕೊಹಿನೂರ್, ರವಿ, ತೇಜಸ್, ಜಯಂತ್, ಚಿರಾಗ್ ಅನ್ನುವ ದೇಶೀ ಹೆಸರುಗಳ ವಾಚ್ಗಳು ಕೇವಲ ಇನ್ನು ಇತಿಹಾಸದ ಪುಟಗಳಲ್ಲಿ ಕಾಣಲು ಮಾತ್ರ ಸಾದ್ಯ.



ಇದೆ ರೀತಿ 1941 ರಲ್ಲಿ ಶುರುವಾದ ಹಿಂದುಸ್ತಾನ್ ಶಿಪ್ಯಾರ್ಡ್, 1991 ರಲ್ಲಿ ಶುರುವಾದ ಅರ್ಚನ ಏರ್ವೇಸ್, 1946 ರಲ್ಲಿ ಶುರುವಾಗಿದ್ದ ಕಳಿಂಗ ಏರ್ವೇಸ್, ಸ್ವರಾಜ್ ಮಜ್ದಾ, ಸ್ಟ್ಯಾಂಡರ್ಡ್ ಮೋಟರ್ಸ್ ಹೀಗೆ ನೂರಾರು 'ಇಂಡಿಯನ್ ಮೇಡ್' ಕಂಪನಿಗಳು ಅಂದು ದೇಶದ ಆರ್ಥಿಕತೆಯ ಬೆನ್ನೆಲುಬುಗಳಾಗಿ, ಇಂದು ಹೇಳ ಹೆಸರಿಲ್ಲದಂತಾಗಿವೆ! ಒಂದು ಸರ್ವೇ ಪ್ರಕಾರ ಕೇವಲ 1992 ರಿಂದ 1998ರ ವರೆಗೆ ಸುಮಾರು ನೂರರಿಂದ ನೂರೈವತ್ತು ಪ್ರತಿಷ್ಟಿತ ಕಂಪನಿಗಳು ಮುಚ್ಚಿ ಹೋದವು.( FDI ನೀತಿಯಿಂದ ವಿದೇಶಿ ಕಂಪನಿಗಳು ದೇಶದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದ ಸಮಯವಿದು ಎಂಬುದು ಗಮನಿಸಬೇಕಾದ ವಿಚಾರ) ಇನ್ನೊಂದು ಸರ್ವೇ ಪ್ರಕಾರ, 2012 ರಲ್ಲಿ ಒಟ್ಟು 379 ತಾಂತ್ರಿಕ ಕಂಪನಿಗಳು ಶುರುವಾದವು, ಅಂದರೆ ದಿನಕೊಂದರೆಂತೆ ಹೊಸ ಕಂಪೆನಿಗಳು! ಆದರೆ ವರ್ಷ ಕಳೆಯುವುದರೊಳಗೆ ಇವುಗಳಲ್ಲಿ ಸುಮಾರು 90 ಕಂಪನಿಗಳು ನೆಲ ಕಚ್ಚಿದವು. ಉಳಿದ ಕಂಪನಿಗಳೂ ಸಹ ಇನ್ನೊಂದು ವರ್ಷ ಅನ್ನುವಾಗಲೇ ತಿಣುಕಾಡತೊಡಗಿದವು.ವಿಪರ್ಯಾಸವೆಂದರೆ ಇವುಗಳಲ್ಲಿ ಹೆಚ್ಚಿನವು ಬೆಂಗಳೂರಿನ ಕಂಪನಿಗಳು.

ಛೆ..! ಒಂದು ಕಂಪನಿ, ನೂರಾರು ಹೊಸ ಯೋಚನೆಗಳು, ಯೋಜನೆಗಳು. ಅವುಗಳನ್ನು ಹುಟ್ಟುಹಾಕುವ ನೂರಾರು ಸೃಜನಶೀಲ ನಾಯಕರು.. ಹಗಲು ರಾತ್ರಿ ಎನ್ನದೆ ಯೋಚಿಸಿ, ಅವಲೋಕಿಸಿ ಶುರು ಮಾಡುವ ಒಂದು ಕಂಪನಿ, ಯಾವುದೊ ಒಂದು ಅಲ್ಪ ಕಾನುನಿಗೋ, ಯಾರದೋ ಕಪಿಮುಷ್ಠಿಗೋ, ಕೊಂಚ ಅತಿಯಾಸೆಗೋ ಅಥವಾ ಗೆಲ್ಲುತ್ತೇವೆ ಎನ್ನುವ ಭರವಸೆ ಇದ್ದರೂ ಸಹಾಯ/ಇನ್ವೆಸ್ಟ್ ಮಾಡುವ ಕೈಗಳು ಸಿಗದೇ ಇರುವ ಕಾರಣಕ್ಕೋ ಏನೋ, ದಿನಗಳು ತಿಂಗಳುಗಳಾಗುವ ಮೊದಲೇ ಮುಚ್ಚಲ್ಪಡುತ್ತಿವೆ. ನೂರಾರು ಕಂಪನಿಗಳನ್ನು ಶುರುಮಾಡಬಲ್ಲ ಕೆಪ್ಯಾಸಿಟಿ ಇರುವ ಭಾರತೀಯರು, ಅದೇ ಕಂಪೆನಿಗಳನ್ನು ಮುನ್ನೆಡುಸುವಲ್ಲಿ ಎಡವುತಿರುವುದೇಕೆ?



ಇಷ್ಟೆಲ್ಲಾ ಮುಚ್ಚಲ್ಪಡುತಿರುವ ಅಥವಾ ಮುಚ್ಚಿರುವ ಕಂಪನಿಗಳು ಮತ್ತೊಮೆ ಜೀವ ಪಡೆದರೆ ಅಥವಾ ಅವಕ್ಕೆ ಜೀವವನ್ನು ತುಂಬಿದರೆ ದೇಶದ ಅಭಿವೃದ್ಧಿಯ ಹಾದಿ ಇನ್ನೂ ಸುಗಮವಾಗಬಹುದೇ?


ಬೀಳುತ್ತಿರುವ ದೇಶಿಯ ಕಂಪೆನಿಗಳನ್ನು ಉಳಿಸಲು ಎಷ್ಟು ಕಷ್ಟಕರವಾದ ಮಾರ್ಗಗಳಿವೆಯೋ, ಅಷ್ಟೇ ಸುಲಬವಾದ ಮಾರ್ಗಗಳು ಅವುಗಳನ್ನು ಮುಚ್ಚಲು ಇವೆ. 'Closure of Sick PSUs' ಎಂಬ ಹಣೆಬರಹದೊಂದಿಗೆ ಒಂದು ನೋಟೀಸ್ ಹೊರಡಿಸಿ ದಶಕಗಳಿಂದ ಬೆಳೆದುಬಂದ ಕಂಪೆನಿಗಳನ್ನು ನಿಮಿಷಗಳಲ್ಲಿ ಮುಚ್ಚಬಲ್ಲ ಕಾನೂನು ಇರುವಾಗ ಬೀಳುತ್ತಿರುವ ಕಂಪನಿಗಳ ರಕ್ಷಣೆ ಕಷ್ಟವೇ ಎನ್ನಬಹುದು. ಒಮ್ಮೆ ಯೋಚಿಸಿ ನೋಡಿ, ಒಂದು ಕುಂಟುತ್ತಿರುವ ಕಂಪನಿಯನ್ನು ಮುಚ್ಚುವುದರಿಂದ ದೇಶಕ್ಕೆ ಆಗುವ ಅರ್ಥಿಕ ನಷ್ಟಕ್ಕೆ ಕಡಿವಾಣ ಹಾಕಿದಂತಾಗುವುದೇನೋ ನಿಜ. ಆದರೆ, ಪುನ್ಹ ಅಂತಹದೊಂದು ಕಂಪನಿಯನ್ನು, ಅಂತಹ ನಾಯಕರನ್ನು ಅಲ್ಪಸಮಯದಲ್ಲಿ ಮತ್ತೆ ಹುಟ್ಟುಹಾಕಲು ಸಾದ್ಯವಿದೆಯೇ? ಭಾರತೀ ಶಿಪ್ಯಾರ್ಡ್ನನ್ನು ಮುಚ್ಚಿಸಿ ನಾಳೆ ಕ್ಷಣಮಾತ್ರದಲ್ಲಿ ಅಂತಹ ಮತ್ತೊಂದು ಕಂಪನಿಯನ್ನು ಕಟ್ಟಲು ಸಾದ್ಯವೇ? ಯಾರ ಸಹಾಯವಿಲ್ಲದೆ ಶಿಪ್ ಬಿಲ್ಡಿಂಗ್ ಯಾರ್ಡ್ಗಳನ್ನು ನಿರ್ಮಿಸಿ, ಕೊನೆ ಪಕ್ಷ ಸಣ್ಣ ಪುಟ್ಟ ಹಡಗುಗಳಿಗಾದರೂ ಬೇರೆ ದೇಶವನ್ನೇ ನೆಚ್ಚಿ ಕೂರುವ ವಿಪರ್ಯಾಸವನ್ನು ತಪ್ಪಿಸಿದ್ದ ಪ್ರಕಾಶ್ ಹಾಗು ವಿಜಯ್ ಅವರಂತ ನಾಯಕರನ್ನು ಮತ್ತೆ ಸೃಷ್ಟಿಸಬಹುದೇ? ವಾಚ್ ಎಂದರೆ HMT, ಟೆಲಿವಿಷನ್ ಅಂದರೆ BPL ಎನ್ನುವಂತಹ ಜನಮನ್ನಣೆ ಗಳಿಸಿದ್ದ ಮೊತ್ತೊಂದು ಕಂಪನಿಯನ್ನು ನಾವು ಸೃಷ್ಟಿಸಬಲ್ಲೆವ? ಅಳಿಸಿಹಾಕುವ ಮೈಂಡ್ ಸೆಟ್ ಅನ್ನು ಬಿಟ್ಟರೆ ಉಳಿಸಿಕೊಳ್ಳುವ ಯೋಚನೆ ನಮ್ಮಲ್ಲಿ ಬರಲಿಲ್ಲ. ಈ ‘ಡಿಲೀಟ್’ ಎನ್ನುವ ಹೊಸ ಜಮಾನದಲ್ಲಿ, ಕಣ್ಣು ಮಿಟುಕಿಸುವಲ್ಲಿ ಕೈಗೆ ಬಂದು ಸೇರುವ ವಸ್ತುಗಳಿರುವಾಗ, ಹಾಳಾದದನ್ನು ಅಥವಾ ಸ್ವಲ್ಪ ಬಿರುಕು ಬಿಟ್ಟಿದ್ದರೂ ಸಹ ಆ ವಸ್ತು ತಮಗೆ ಬೇಡವೆಂದು ಬಿಸಾಡಿ ಹೊಸದರ ಅನ್ವೇಷಣೆಯಲ್ಲಿ ತೊಡಗುತ್ತೇವೆ. ಆದರೆ ಅಂದೆಲ್ಲ ಇದ್ದದ್ದು ಬಡತನ, ಜೊತೆಗೆ ಅನಿವಾರ್ಯತೆ. ಮುರಿದ ಹಾಗು ಬಿರಿದ ಕಂಪನಿಗಳಿಗೆ, ಬಿರುಕು ಮುಚ್ಚಿ, ಉಳಿಯಲು ಬೆಂಬಲ ಕೊಟ್ಟ ಕಾರಣಕ್ಕೆ ಅಂದು ಕೆಲವು ಕಂಪನಿಗಳು ದಶಕಗಳ ವರೆಗೂ ದೇಶದ ಬೆನ್ನೆಲುಬುಗಳಾದವು.



Happened Is Happened. ಈಗ ಹೋದ ಸಮಯದ ಬಗ್ಗೆ ಚಿಂತಿಸಿ ಪ್ರಯೋಜನವಿಲ್ಲ. ಆದರೆ ಇವುಗಳೆಲ್ಲದರಿಂದ ನಮ್ಮ ದೇಶಿಯ ಕೈಗಾರಿಗ ವಲಯ ಹಲವಾರು ಪಾಠಗಳನ್ನೂ ತಿಳಿಸಿದೆ. ಸಂಸ್ಥೆಯ ಶೇರ್ ವ್ಯಾಲ್ಯೂವನ್ನು ಹೆಚ್ಚಿಸಲು ಕಂಪನಿಯ ಆದಾಯವನ್ನು ಇರುವುದಕ್ಕಿಂತ ಹೆಚ್ಚು ತೋರಿ ದೇಶದ ಕಳಂಕಿತ ಕಂಪನಿಗಳ ಸಾಲಿನಲ್ಲಿ ನಿಂತ ಸತ್ಯಂ, ಇಂದು ವಂಚಿಸುವ ಕಂಪನಿಗಳಿಗೆ ಒಂದು ನೀತಿಪಾಠದಂತೆ ಗೋಚರಿಸುತ್ತದೆ. 2G ಸ್ಪೆಕ್ಟ್ರಮ್ ಹಗರಣ ಇನ್ನು ಮುಂದೆ ರಾಜಕಾರಣಿಗಳಲ್ಲದೆ ಕಂಪನಿಗಳೂ ತಪ್ಪೆಸಗುವ ಮುನ್ನ ಎದೆಯಲ್ಲಿ ಡವ-ಡವ ಹುಟ್ಟು ಹಾಕುತ್ತದೆ! ಹಾಗಾಗಿ ಇಂದು ತನ್ನ ಕಂಪನಿ ಮುಚ್ಚಲ್ಪಟ್ಟಿದೆ ಎಂದರೆ ಅದರಲ್ಲಿ ತನ್ನ ನೇರ ಹೊಣೆ ಎಷ್ಟಿದೆ ಎಂಬ ಪ್ರೆಶ್ನೆಯನ್ನು ಅದರ ನಾಯಕರು/ಮಾಲೀಕರು ಹಾಕಿಕೊಳ್ಳಬೇಕು. ಆದರೆ ಈ ರೀತಿ ಪ್ರತಿಷ್ಟಿತ ಕಂಪನಿಗಳು ನಮ್ಮ ದೇಶದಲ್ಲಿ ಕಾರಣಾಂತರಗಳಿಂದ ಮುಚ್ಚುತ್ತಿರುವುದರಿಂದ ಆಗುತ್ತಿರುವ ಪರಿಣಾಮ ದೇಶದ ಬೆಳವಣಿಗೆಗೆ ಬಹಳ ವ್ಯತಿರಿಕ್ತವಾದುದು. ಹೂಡಿಕೆದಾರರು ಇಂದು ಪಬ್ಲಿಕ್ ಸೆಕ್ಟರ್ ಕಂಪನಿಗಳಲ್ಲಿ ಹಣ ಹೂಡಲು ಇಂದು ಮುಂದು ನೋಡುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಿಯ ಕಂಪನಿಗಳ ಬಗೆಗಿನ ಗ್ರಹಿಕೆ (Perception) ಹಾಳಾಗುತ್ತಿದೆ. ಅಂದು ಕೇವಲ ಸತ್ಯಂ ಕಂಪನಿ ಮುಚ್ಚಲ್ಪಟ್ಟಾಗ ಅದರ ಸಾವಿರಾರು ನೌಕರರು ಬೀದಿಗೆ ಬಂದಿದ್ದರು. ಇಂದು ಅದೇ ರೀತಿ ಅದೆಷ್ಟು ಸತ್ಯಂಗಳು ಮುಚ್ಚುತ್ತಿವೆ?! ಇನ್ನೆಷ್ಟು ಜನ ಬೀದಿಗೆ ಬೀಳಬಹುದು? ಅಲ್ಲದೆ ನಮ್ಮ ಸರ್ಕಾರಗಳೇನೋ ಮುಚ್ಚುತಿರುವ ಕಂಪನಿಗಳನ್ನು ಪುನರುಜ್ಜೀವಗೊಳಿಸಲು ಆದಷ್ಟು ಕಾರ್ಯಕ್ರಮಗಳನ್ನು ತಂದಿದೆಯಾದರೂ ಅವೆಲ್ಲ ಕಾರ್ಯಗತಗೊಂಡಿರೋ ಸುದ್ದಿಗಳು ತೀರಾ ವಿರಳ. ಮೇಲಾಗಿ ಕಂಪನಿಗಳ ಲಾಭದ ಅರ್ಧಕಿಂತ ಜಾಸ್ತಿ ವಿವಿಧ ಬಗೆಯ ತೆರಿಗೆಗಳೇ ಇರುವಾಗ ಸೋಲುತ್ತಿರುವ ಕಂಪನಿಗಳು ಮೇಲೆ ಏಳುವುದು ಹೇಗೆ?
ಮೊನ್ನೆ ಮೊನ್ನೆಯಷ್ಟೇ ಬ್ಯಾನ್ ಆದ ನೆಸ್ಲೆ ಅವರ ಮ್ಯಾಗಿ, ದೇಶದ ತರ್ಕರಹಿತ ಕೆಲವು ಕಾನೂನುಗಳಿಗೆ ಒಂದು ಉದಾಹರಣೆ ಅಷ್ಟೇ. ಸೀಸದ /Lead (ಸಾಮಾನ್ಯವಾಗಿ ಎಲ್ಲ ಆಹಾರ ಪದಾರ್ಥಗಳಲ್ಲಿ ಕಂಡು ಬರುವ ಒಂದು ಬಗೆಯ ಲೋಹ) ಪ್ರಮಾಣ ಜಾಸ್ತಿಯಿದೆ ಎಂದು ಉತ್ಪಾದನೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ, ರಾಶಿ ರಾಶಿ ಪ್ಯಾಕ್ ಗಳನ್ನು ಸುಟ್ಟುಹಾಕಿಸಿದ ಕಾನೂನು ಇದೆ ಪ್ರಮಾಣ UK, ಸಿಂಗಾಪುರ್ ಹಾಗು ಕೆನಡಾದಂತ ಅಭಿವೃದ್ಧಿ ಹೊಂದಿದ್ದ ರಾಷ್ಟ್ರಗಳಲ್ಲಿ 'This Limit Is Completely Alright' ಎನ್ನುವ ಸುದ್ದಿಯನ್ನು ಕೇಳಿ ತೆಪ್ಪಗಾಯಿತು. ನಮ್ಮಲ್ಲಿ ಬೇಕಾದ ಕಡೆ ಇರಬೇಕಾದ ಕಾನೂನುಗಳು ಬೇಡವೆಂದೆಡೆ ತುಸು ಜಾಸ್ತಿಯೇ ಇವೆ ಎಂದನಿಸುತ್ತದೆ. ಇಂತಹದರಲ್ಲಿ ಯಾರು ತಾನೇ ಹಣ ಹೂಡಲು ನಾ ಮುಂದು, ತಾ ಮುಂದು ಎಂದು ಬರುವರು ಹೇಳಿ.


ಅಂದು ಅವನತಿಯ ಹಾದಿಯಲ್ಲಿದ್ದ ಕಂಪನಿಗಳು ಎದ್ದು ನಿಲ್ಲಲು ಬೇಕಾಗಿದ್ದದ್ದುಬೇಕಾದದ್ದು ಕೆಲವು ಕೋಟಿಗಳು ಮಾತ್ರ. ಸರ್ಕಾರವನ್ನು ಬಿಡಿ, ಲಕ್ಷ-ಲಕ್ಷ ಕೋಟಿ ಖರ್ಚು ಮಾಡಿ ಪಕ್ಷದ ಗೆಲುವಿಗೆ ಹವಣಿಸುವ ನಮ್ಮ ರಾಜಕೀಯ ಬಣಗಳಾದರೂ ದೇಶದ ಹಿತದೃಷ್ಟಿಯಿಂದ ಇಂತಹ ಕಂಪನಿಗಳಿಗೆ ಸಾಲದ ರೂಪದಲ್ಲಾದರೂ ಸಹಾಯ ಮಾಡಿ ಪುಣ್ಯ ಕಟ್ಟಿಕೊಳ್ಳಬಹುದಾಗಿತ್ತು.ಇಂದು ನಾವುಗಳು ಮೇಕ್ ಇನ್ ಇಂಡಿಯಾ ಎನ್ನುತ ಹೆಮ್ಮೆಯಿಂದ ಮಾತಾಡುತ್ತೇವೆ. 'ಮೇಕ್ ಇನ್ ಇಂಡಿಯ ಬಂದಾಯ್ತು ಆದರೆ, ಮೇಡ್ ಇಂಡಿಯಾಗಳ ಕತೆ ಏನಾಯ್ತು..?' ಎಂಬುದನ್ನು ಸಹ ನಾವು ಕೇಳಿಕೊಳ್ಳಬೇಕು. ಇಂದು ಹೊಸತನ್ನು ಸೃಷ್ಟಿಸಿ, ಅದನ್ನು ಪರಿಕ್ಷಿಸುವುದರ ಬದಲು/ಜೊತೆಗೆ ಈಗಾಗಲೇ ಬೀಳುತ್ತಿರುವ ಕಂಪನಿಗಳ ಪುನರುಜ್ಜಿವದ ಕಡೆಗೂ ಹೆಚ್ಚಾಗಿ ಚಿಂತಿಸಬೇಕು. ಇಲ್ಲವಾದರೆ ನಮ್ಮ ಈ ‘ಡಿಲೀಟ್ ಜಮಾನ’ದಲ್ಲಿ ಮತ್ತೊಮ್ಮೆ ಡಿಲೀಟ್ ಬಟನ್ ಕಡೆ ಮುಖ ಮಾಡಬೇಕಾದೀತು, ಎಚ್ಚರಿಕೆ!


PC : 1971 THE HINDU ARCHIVES

ಪ್ರಸ್ತುತ : ಎಕ್ಸ್ ಬಾಕ್ಸ್, ಪ್ಲೇ ಸ್ಟೇಷನ್ಗಳ ಯುಗದಲ್ಲಿ ಮೂಡಬಲ್ಲರೇ ನಾಳಿನ ನಮ್ಮ ನಾಯಕರು?

ಬೆಳೆಯುವ ಸಸಿ ಮೊಳಕೆಯಲ್ಲಿ. ನಾಳಿನ ನಾವು ಇಂದಿನ ಗ್ರಹಿಕೆಯಲ್ಲಿ!

ಕೆಲ ತಿಂಗಳ ಹಿಂದಷ್ಟೇ ಅಮೇರಿಕಾದ ಒರ್ಲ್ಯಾಂಡೊದಲ್ಲಿ ನೆಡೆದ ಶೂಟೌಟ್ ಗೆ ಕಾರಣೀಕರ್ತನಾದ ಯುವಕನಾಗಲಿ ಅಥವಾ ಶಾಲೆಯೊಳಗೆ ಗನ್ ಅನ್ನು ತಂದು ತನ್ನ ಸಹಪಾಠಿಗಳ ಮೇಲೇ ಗುಂಡಿನ ಸುರಿಮಳೆಗೈದ ಹುಡುಗನೇ ಆಗಲಿ ಅಥವಾ ಪ್ರಪಂಚದ ಮತ್ಯಾವುದೇ ಮೂಲೆಯಲ್ಲಿ ಹಿಂಸಾತ್ಮಕ ಕೃತ್ಯಗಳು ಜರುಗಿದಾಗ ಖೇದನೀಯವೆಂಬಂತೆ ಯುವಕರ ಹೆಸರುಗಳೇ ಹೆಚ್ಚಾಗಿ ಕೇಳಿ ಬಂದಾಗಲೆಲ್ಲ ಮೇಲಿನ ವಾಕ್ಯ ಚಿತ್ತದ ಸುತ್ತ ಸುತ್ತುತ್ತದೆ. ಉಜ್ವಲ ಭವಿಷ್ಯದ ಕನಸನ್ನು ಹೊತ್ತು ಬದುಕನ್ನು ಕಟ್ಟಿಕೊಳ್ಳಬೇಕಾದ ಕಾಲದಲ್ಲಿ ಇಂತಹ ವಿದ್ವಂಸಕ ಕೃತ್ಯಗಳನ್ನು ಮಾಡಹೊರಟಿರುವ ಯುವಕರ ಮನಸ್ಥಿತಿಯು ಅದೆಷ್ಟರ ಮಟ್ಟಿಗೆ ಅಲ್ಲೊಲ್ಲ ಕಲ್ಲೋಲವಾಗಿರಬಹುದು ಎಂದನಿಸುತ್ತದೆ. ಜೀವನವೇ ಏನೆಂದು ಪಕ್ವವಾಗಿ ಅರಿತಿರದ ವಯಸ್ಸಿನಲ್ಲಿ ಇನ್ನೊಂದು ಜೀವವನ್ನು/ಜೀವಗಳನ್ನು ಕಡ್ಡಿ ಮುರಿದಂತೆ ಮುರಿದು ಬಿಸಾಡುವ ಮನೋಭಾವನೆ ಯುವಕರಲ್ಲಿ ಅದೇಗೆ ಮೂಡುತ್ತದೆ? ಆಧುನಿಕ ಜೀವನ ಶೈಲಿಯೇ ಇದಕ್ಕೆ ಪ್ರತ್ಯಕ್ಷ ಕಾರಣವೆ?
ಇಂದಿನ ಯುವಕರೇ ನಾಳಿನ ನಾಯಕರು. ದೇಶ ಕಟ್ಟುವವರು. ದಿನದ ಇಪ್ಪತ್ನಾಲ್ಕೂ ಘಂಟೆಯೂ ಬಾಂಬು ಮಚ್ಚುಗಳಿಂದ ಆವಿಷ್ಕರಿಸಿದ ಆನ್ಲೈನ್ ಆಟಗಳನ್ನೇ ಆಡುತ್ತಾ ಕೂರುವ ನಾವುಗಳು (ಯುವಕರು) ನಾಳಿನ ದೇಶವನ್ನು ಕಟ್ಟುವ ಜವಾಬ್ದಾರಿಯನ್ನು ಹೊರಬಲ್ಲೆವಾ? ನಾಯಕರಿಗಿರಬೇಕಾದ ಅಂತಹ ಶಾಂತಿ, ತಾಳ್ಮೆ, ಸಂಯಮ ಇಂತದ ವಾತಾವರದಲ್ಲಿ ಬೆಳೆಯುವ ನಮ್ಮಲ್ಲಿ ಮೂಡಬಲ್ಲದೆ?

ಮಾನವ ಸಂಪೂರ್ಣ ಯಾಂತ್ರಿಕತೆಯ ಜಗತ್ತನ್ನು ಸೃಷ್ಟಿಸುವ ಸನ್ನಿಹದಲ್ಲಿದ್ದಾನೆ. ಆಟ-ಪಾಠಗಳಿಂದಿಡಿದು ಊಟ-ನಿದ್ರೆಗಳಿಗೂ ಇಂದು ಯಂತ್ರಗಳು ಬಂದಿವೆ. ಕೆಸರುಗದ್ದೆಯಲ್ಲಿ ಕುಣಿದು ಕುಪ್ಪಳಿಸಿ ಬಂದು, ಅಮ್ಮನ ಕೈತುತ್ತು ತಿಂದು, ಮನೆಯ ಮಾಳಿಗೆಯ ಮೇಲೆ ಚಂದಮಾಮನನ್ನು ನೋಡುತ್ತಾ ತಂಪಾದ ರಾತ್ರಿಯಲ್ಲಿ ಮಲಗುವ ದಿನಗಳು ಮುಗಿದು ಅದೆಷ್ಟೋ ದಿನಗಳಾಗಿವೆ. ಅದ್ಯಾವುದೋ ದೇಶದಲ್ಲಿ ಅದೆಷ್ಟೋ ದಿನಗಳ ಹಿಂದೆ ಸುತ್ತಿ ಕೊಟ್ಟ ಒಣ ರೊಟ್ಟಿಯನ್ನು ಖರೀದಿಸಿ ತಂದು, ಓವನ್ನಲ್ಲಿ ಇಟ್ಟು ಹೊಟ್ಟೆ ಕೆಟ್ಟು, ನಾಳೆ ಅದನ್ನು ಬಿಟ್ಟು ಮತ್ತೊಂದು ದೇಶದ ಮತ್ಯಾವುದೋ ರೊಟ್ಟಿಗೆ ಹಣವನ್ನು ಹೆಚ್ಚಾಗಿ ಕೊಟ್ಟು ಎಸಿ ರೂಮುಗಳಲ್ಲಿ ಜೀವನ ತಳ್ಳುವ ಮಂದಿಗಳು ಇಂದು ಹೇರಳವಾಗುತ್ತಿದ್ದಾರೆ. ಕೆಲಸದ ಕಾರಣಕ್ಕಾಗಿ ಹೆಚ್ಚಾಗಿ ಮನೆಯಿಂದ ದೂರವಿದ್ದು ನಗರಗಳಲ್ಲಿ ಬದುಕುವ ಇಂದಿನ ಯುವಜನತೆ ಅಮ್ಮನ ತುತ್ತಾಗಲಿ ಅಥವಾ ತುಂಬು ಕುಟುಂಬದ ಪರಿಸರವನ್ನಾಗಲಿ ಆಸ್ವಾದಿಸದೆ ಬೆಳೆಯುತ್ತಿದ್ದಾರೆ. ಹೆಚ್ಚೆಂದರೆ ವರ್ಷಕ್ಕೆ ಒಮ್ಮೆಯೊ ಅಥವಾ ಎರಡು ಬಾರಿ ಊರಿಗೆ ಹೋಗಿಬಂದರೆ ಸಾಕೆನ್ನುವ ಮನೋಭಾವ. ಬಂದರೂ ಊರಿನ ಸಮಸ್ಯೆಗಳಿಗೆ ಬೇಸತ್ತು ಆದಷ್ಟು ಬೇಗ ಕಾಲು ಕೀಳುವ ಹುನ್ನಾರದಲ್ಲಿರುತ್ತಾರೆ. ಒಮ್ಮೆ ಊರು ಬಿಟ್ಟು ನಗರ ಸೇರಿದರೆ ಮುಂದಿನ ಆರು ತಿಂಗಳೋ ಅಥವಾ ವರ್ಷವೋ ಊರ ಕಡೆ ತಲೆ ಹಾಕರು. 'ಬೇಕಾದ್ರೆ ನೀವೇ ಬನ್ನಿ ಎನ್ನುತ' ಪೋಷಕರನ್ನು ಕೆಲದಿನಗಳ ಮಟ್ಟಿಗೆ ನಗರಕ್ಕೆ ಕರೆಸಿಕೊಳ್ಳುತ್ತಾರೆ. ಹೀಗೆ ನಗರವಾಸಿಯಾಗಿ ಕೆಲದಿನಗಳಲ್ಲೇ ಮದುವೆ. ಮದುವೆಯ ಕೆಲ ವರ್ಷಗಳಲ್ಲೇ ಮಗು ಅಥವಾ ಮಕ್ಕಳು.

ಈ ಮಕ್ಕಳೇ ಯಾಂತ್ರಿಕತೆಯ ಲೋಕಕ್ಕೆ ತಮ್ಮನ್ನು ದಬ್ಬಿಸಿಕೊಳ್ಳುವ ನಾಳಿನ ಪ್ರಜೆಗಳು!

ಒಂದು ಜೀವಕ್ಕೆ ಜನ್ಮವಿತ್ತ ಮಾತ್ರಕ್ಕೆ ಪೋಷಕರಿಗೆ ಮಕ್ಕಳ ಮೇಲೆ, ಅವರ ಭವಿಷ್ಯದ ಮೇಲೆ ಮೂಡುವ ಕಾಳಜಿ ಅತಿಸಹಜ. ಆದರೆ ಇದು ಇತ್ತೀಚಿನ ದಿನಗಳಲ್ಲಿ ತೀರಾ ಅತಿರೇಕವಾಗಿದೆ. 'ಅಮ್ಮಾ ' ಎಂಬ ಪದವನ್ನೇ ಸರಿಯಾಗಿ ಉಚ್ಚರಿಸಲಾಗದ ವಯಸ್ಸಿಗೆ ಬೇಬಿ ಸಿಟ್ಟಿಂಗ್ಸ್ ಎಂಬ ಕೊಪಕ್ಕೆ ಕಳುಹಿಸಿ ತೂಕಡಿಸುವ ತಲೆಯೊಳಗೆ ನೂರಾರು ಹೊಸ ಪದಗಳನ್ನು ತುಂಬಲು ಹೇಳಿ ಆಫೀಸಿಗೆ ಹೊರಟರೆ ಪೋಷಕರ ಕರ್ತ್ಯವ ಮುಗಿದಂತೆ. ಸುಖಾ-ಸುಮ್ಮನೆ ದುಂದುವೆಚ್ಚಗಳನ್ನು ಹೆಚ್ಚಾಗಿಸಿಕೊಂಡಿರುವ ಇಂದಿನ ಪೋಷಕರು ‘ಅನಿವಾರ್ಯತೆ’ಯ ನೆಪವೊಡ್ಡಿ ಮಕ್ಕಳಿಂದ ದೂರ ಉಳಿಯುತ್ತಾರೆ. ಹೊಸಲೋಕವನ್ನು ವಿಸ್ಮಯ ಕಣ್ಣುಗಳಿಂದ ನೋಡುವ ಆ ಕಂದಮ್ಮಗಳು ಇನ್ಯಾರದ್ದೋ ತೊಡೆಯ ಮೇಲೆ ಆಡಿ ಬೆಳೆಯುತ್ತವೆ. ಅಮ್ಮನ ಸೀರೆಯ ಸೆರಗನ್ನು ಬಾಯೊಳಗೆ ತೂರಿಕೊಂಡು ಮೆನೆಯ ಸುತ್ತೆಲ್ಲ ಆಕೆಯ ಹಿಂದೆ ಓಡುತ್ತಾ, ಬಿದ್ದು ಎದ್ದು, ಮತ್ತು ಹೆದರಿ ಅತ್ತರೆ, ಅಮ್ಮ ಮಗುವನ್ನು ಎದೆಗವುಚಿಕೊಂಡು ಸಮಾಧಾನ ಮಾಡಿದರೆ, ಆಹಾ..ಮಗುವಿಗೆ ಅಲ್ಲೇ ಒಂದು ಧೈರ್ಯ. ಮನದೊಳಗಿನ ಅಂಜಿಕೆ ಭಯವೆಲ್ಲ ಮಾಯಾ! ಆದರೆ ಅದು ಇಂದಿನ ಎಳೆಯ ಕಂದಮ್ಮಗಳಿಗೆ ಸಿಗದಾಗುತ್ತಿದೆ. ಮುಕ್ತವಾಗಿ ಅಳಲೂ ಅವಕ್ಕೆ ಭಯ. ಎಳೆಯ ವಯಸ್ಸಿನಲ್ಲಿ ಮೂಡುವ ಎಳೆಯ ಭಾವನೆಗಳಿಗೆ ಇನ್ಯಾರೋ ಒಬ್ಬರು ಬ್ರೇಕ್ ಹಾಕುತ್ತಾರೆ. ಡಿಸಿಪ್ಲಿನ್ನನ್ನ ಕಲಿಸುವ ಸಾಹಸದಲ್ಲಿ ಹೀಗೆ ದಿನವೆಲ್ಲಾ ಹೊರಗಿಟ್ಟು ಮಕ್ಕಳನ್ನು ಒಳಗೊಳಗೇ ಒಂಟಿಗಾರನನ್ನಾಗಿ ಮಾಡುತ್ತಿದ್ದಾರೆ ಆಧುನಿಕ ಪೋಷಕರು. ಒಂದು ತುಂಬು ಸಂಸಾರವಾದರೆ ಮಕ್ಕಳಿಗೆ ಅಜ್ಜಿಯ ಕಥೆಯೋ ಅಥವಾ ಅಜ್ಜನ ಅಂಬಾರಿಯೋ ಮನರಂಜನೆಯನ್ನು ನೀಡುತ್ತದೆ. ಹಿರಿಯ ಮನಗಳ ಹಾರೈಕೆ ಮಕ್ಕಳಿಗೆ ನೀತಿ ಪಾಠಗಳೊಟ್ಟಿಗೆ ಕೂಡಿ ಬಾಳುವುದನ್ನೂ ಹೇಳಿಕೊಡುತ್ತದೆ. ಆದರೆ ಆಧುನಿಕ ಜೀವನ ಶೈಲಿ ಇಂದಿನ ಮಕ್ಕಳಿಗೆ ಇವೆಲ್ಲವನ್ನೂ ಮರೀಚಿಕೆಯನ್ನಾಗಿಸಿದೆ.

ಇಂತಹ ಸಮಯದಲ್ಲಿ ಮಕ್ಕಳಿಗೆ ಪ್ರಿಯವಾಗಿ ಕಾಣುವುದು ಅಪ್ಪನ ಅಥವಾ ಅಮ್ಮನ ಮೊಬೈಲ್ ಫೋನುಗಳು. ಸಂಜೆ ಮನೆಗೆ ಬಂದು ಮೊಬೈಲ್ ಫೋನ್ ಅನ್ನು ಕೈಯಲ್ಲಿಟ್ಟುಕೊಂಡರೆ ಅವಕ್ಕೆ ಜಗತ್ತೇ ಬೇಡವಾಗುತ್ತದೆ. 'ನನ್ನ್ ಮಗು ಇಷ್ಟ್ ವಯಸ್ಸಿಗೆ ಫೋನ್ ಹೇಗೆ ಆಪರೇಟ್ ಮಾಡುತ್ತೆ ನೋಡಿ' ಎಂದು ಕೆಲವರು ಹುಬ್ಬಿದರೆ, ಇನ್ನೂ ಕೆಲವರು ಅದರ ಕೈಯಿಂದ ಫೋನ್ ಅನ್ನು ಕಸಿದುಕೊಂಡರೆ ಎಲ್ಲಿ ಅತ್ತು ಬಿಡುವುದೋ ಎಂದು ಅಂಜಿ ಅದರ ಪಾಡಿಗೆ ಅದನ್ನು ಬಿಡುತ್ತಾರೆ. ಸಂಜೆ ಶಾಲೆಯಿಂದ ಮನೆಗೆ ಬಂದು ಆಟೋಟದಲ್ಲಿ ಬಾಗಿಯಾಗುವ ಬದಲು ಮಗು ಮೊಬೈಲ್ ಫೋನು, ವಿಡಿಯೋ ಗೇಮ್ ಗಳಲ್ಲಿ ಮಗ್ನವಾಗುತ್ತದೆ. ಆ ಗೇಮ್ ಗಳೋ, ಕ್ರೌರ್ಯತೆಯ ಉತ್ತುಂಗದಲ್ಲಿರುತ್ತವೆ. ಬಾಂಬು, ಮಚ್ಚು, ಗನ್ ಗಳೇ ಹೆಚ್ಚಿನ ಗೇಮ್ಗಳ ಸಾಧನಗಳಾಗಿರುತ್ತವೆ. ಒಂದು ಸಿಟಿಯೊಳಗೆ ಜಿಗಿಯುವುದು, ಅಲ್ಲಿ ಕೆಲವರನ್ನು ಕೊಲ್ಲುವುದು, ಕೊಂದು ಪೋಲಿಸರಿಂದ ತಪ್ಪಿಸಿಕೊಂಡು ಓಡುವುದು. ಹೀಗೆ ಬೆಳೆಯುವ ಮನಗಳು ವಿಕೃತ ಕೃತ್ಯಗಳನ್ನು ಅತಿ ಸಾಮನ್ಯವಂತೆ ಗ್ರಹಿಸುತ್ತವೆ. ಎಲ್ಲಿಂದಲೋ ನಿಜವಾದ ಗನ್ ಗಳನ್ನು ತಂದು ಮೀನಾ-ಮೇಷ ಎಣಿಸದೆ ಜನರ ಮೇಲೆ ಗುಂಡಿನ ಸುರಿಮಳೆಗೈಯುವ ಎಳೆಯ ಮನಗಳ ತರಬೇತಿ ಇಲ್ಲಿಂದಲೇ ಶುರುವಾಗುವುದೆ!? ಇದು ಯೋಚಿಸಬೇಕಾದ ವಿಷಯ. ಅಲ್ಲದೆ ಇದು ದೈಹಿಕ ಅಸಮತೋಲನವಲ್ಲದೆ ಮಾನಸಿಕ ಅಸ್ವಸ್ಥೆಯ ಉಗಮಕ್ಕೂ ನಾಂದಿಯಾಗುತ್ತವೆ. ವಿಪರ್ಯಾಸವೆಂದರೆ ಈ ‘ಚಟ’ ಇತ್ತೀಚಿನ ದಿನಗಲ್ಲಿ ವಯಸ್ಸಿಗೆ ಮೀಸಲಾಗದಿರುವುದು! ವಯಸ್ಸು ಮೂವತ್ತಾದರೂ ತಲೆ ಕೂದಲು ಗಡ್ಡವನ್ನು ಮಾನಸಿಕ ರೋಗಿಗಳಂತೆ ವಿಕೃತ ವಾಗಿ ಬಿಟ್ಟು Xbox, PS4 ಹಾಗು ಇನ್ನಿತರ ಗೇಮಿಂಗ್ ಉಪಕರಣಗಳ ಮುಂದೆ ಸಿಕ್ಕ ಕಾಲವನ್ನೆಲ್ಲಾ ಹರಣ ಮಾಡುವ ಯುವಜನತೆ ಹೆಚ್ಚಾಗುತ್ತಿದೆ. ತಮ್ಮ ತಿಂಗಳ ದುಡಿಮೆಯನ್ನೆಲ್ಲವನ್ನೂ ಕೇವಲ ಒಂದು ವಿಡಿಯೋ ಗೇಮ್ಗೆ ಸುರಿಯುವರೂ ಇದ್ದಾರೆ! ಹೀಗೆ ಒಂದು ಭಯಾನಕವಾದ ವರ್ಚುಯಲ್ ಲೋಕವೊಂದು ಅರಿಯದಂತೆ ಮಕ್ಕಳು ಹಾಗು ಯುವಕರರನ್ನು ತನ್ನ ಬಿಗಿದಾದ ತೆಕ್ಕೆಗೆ ಹಾಕಿಕೊಂಡಿದೆ.

ಕೇವಲ ಗೇಮಿಂಗ್ ಗಳಿಗೆ ಸೀಮಿತವಾಗಿದ್ದ ಮೊಬೈಲ್ ಫೋನುಗಳು, ಇಂಟರ್ನೆಟ್ ನ ಟಚ್ ನಿಂದ ಮಕ್ಕಳಿಗೆ ಇನ್ನೂ ಆತ್ಮೀಯವಾಗುತ್ತದೆ. ಹತ್ತು ತುಂಬುವುದರೊಳಗೆ ಫೇಸ್ಬುಕ್ ಯುಟ್ಯೂಬ್ ಅನ್ನುವ ವಿವಿಧ ಹೊಸ ಲೋಕಗಳು ಮಕ್ಕಳಿಗೆ ತೆರೆಯಲ್ಪಡುತ್ತವೆ. ಒಮ್ಮೆ ಇದರ ರುಚಿ ತಿಳಿದರೆ ಅವರಿದ ಮೊಬೈಲ್ ಫೋನ್ ಗಳನ್ನು ಬೇರ್ಪಡಿಸುವುದು ಆಗದಿರುವ ವಿಷಯ. ಏಕೆಂದರೆ ಈ ಹೊಸ ಲೋಕಗಳು ಎಷ್ಟು ನೋಡಿದರೂ ಮುಗಿಯದವು. ಒಂದು ರೀತಿ ಅನಂತವಾದವು ಎನ್ನಬಹುದು! ವಯಸ್ಸು ಹದಿನೈದು ತುಂಬುವುದರೊಳಗೆ ಪೊರ್ನ್ ವೆಬ್ಸೈಟ್ಗಳಿಂದಿಡಿದು ಡೇಟಿಂಗ್ ಆಪ್ ಗಳ ಸರಮಾಲೆಯನ್ನೇ ಮೊಬೈಲ್ನ ಲೋಕದಲ್ಲಿ ಕಾಣುತ್ತಾರೆ. ವ್ಯಸನಿಗಳಂತೆ ವರ್ತಿಸುತ್ತಾರೆ. ಸದಾ ಕಿವಿಗೊಂದು ಹಿಯರ್ ಫೋನ್ ಅನ್ನು ತೂರಿಸಿ, ಮಿಕ್ಕಿ ಉಳಿಯುವಷ್ಟು ಡೇಟಾ ಪ್ಯಾಕೇಜ್ ಗಳನ್ನು ಅತ್ತು ಕಾದಾಡಿ ಪೋಷಕರಿಂದ ಹಾಕಿಸಿಕೊಂಡು ,ಸರ್ಕಸ್ನ ಜೋಕೆರ್ ಗಳಂತೆ ವೇಷಭೂಷಣಗಳನ್ನು ಮಾಡಿಕೊಂಡು ಹೊರಟರೆ ಜಗತ್ತೇ ಬೇಡವಾಗಿ ಬಿಡುತ್ತದೆ ಇಂದಿನ ಯುವಕರಿಗೆ. ನಾಳಿನ ನಮ್ಮ ನಾಯಕರಿಗೆ!!

ಕೇಳಿದನ್ನು ಪಡೆಯುವ ತನಕ ಬಿಡದ ಹಠ ಇಂದಿನ ಮಕ್ಕಳಲ್ಲಿ ಕಾಣಬಹುದು. ಕೇಳಿದೆಲ್ಲವನ್ನು ಕೊಡಿಸಲು ಶಕ್ತವಾಗಿರುವ ಪೋಷಕರೂ ಅವರ ಈ ಅಧೋಗತಿಗೆ ಕಾರಣವೆನ್ನಬಹುದು. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ನಾಳೆಗಳನ್ನು ಭಯಸುವುದು ಎಷ್ಟು ಸಹಜವೋ ಹಾಗೆಯೇ ನಾಳಿನ ದಿನಗಳಿಗೆ (ಸಮಾಜಕ್ಕೆ) ತಮ್ಮ ಒಳ್ಳೆಯ ಮಕ್ಕಳನ್ನು ಕೊಡಬೇಕು ಎಂದರಿಯಲು ವಿಫಲರಾಗುತ್ತಿದ್ದಾರೆ. ಒಂದು ಪೆಟ್ಟು ಕೊಟ್ಟು ಸುಮ್ಮನಿರಿಸುವ ಕಾಲವೂ ಈಗಿಲ್ಲ. ಪೆಟ್ಟಿಗೆ ಹೆದರುವ ಮನಸ್ಥಿಯ ಮಕ್ಕಳೂ ಈಗಿನವರಲ್ಲ. ಅಂದೆಲ್ಲ ಅಪ್ಪ ಗದರಿಸಿದರೆ ಓಡಿ ಅಡಗಿ ಕೂರುತ್ತಿದ್ದ ಅಥವಾ ಹೇಳಿದ ಕೆಲಸವನ್ನು ಚಾಚುತಪ್ಪದೆ ಮಾಡುತ್ತಿದ್ದ ಮಕ್ಕಳಿಗೆ ಇಂದು ಅಪ್ಪಂದಿರೇ ಗೋಗರೆದು, ಕಾಡಿ ಬೇಡಿ ಕೆಲಸವನ್ನು ಹೇಳಿ ಮಾಡಿಸಿಕೊಳ್ಳಬೇಕಾಗಿದೆ. ಪೋಷಕರು ಮಕ್ಕಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕಿಂತ ಹೆಚ್ಚಾಗಿ ಮಕ್ಕಳೇ ಪೋಷಕರನ್ನು ನಿಯಂತ್ರಿಸುತ್ತಿದ್ದಾರೆ.

ಅತಿಯಾದ ಇಂಟರ್ನೆಟ್ ಬಳಕೆಯಿಂದ ಬಂದೊದಗುವ ವ್ಯತಿರಿಕ್ತ ಪರಿಣಾಮ ಒಂದೆರಡಲ್ಲ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರೆ ಸಿಗುವ ಮೊಬೈಲ್ಗಾಗಿ ಮಾತ್ರ ಓದುವ ಮಕ್ಕಳು ಗಳಿಸುವ ಜ್ಞಾನ ಕೇವಲ ಕ್ಷಣಿಕವಾಗಿರುತ್ತದೆ. ಅವರ ಆಸಕ್ತಿ ಏನಿದ್ದರೂ ಕೇವಲ ಮೊಬೈಲ್ ಫೋನು ಹಾಗು ಇಂಟರ್ನೆಟ್ನ ಒಳಗಿರುತ್ತದೆ. ಇಂಟರ್ನೆಟ್ನಲ್ಲಿ ಎಲ್ಲವೂ ಕ್ಷಣಮಾತ್ರದಲ್ಲಿ ಕೈಗೆಟಕುವಾಗ ಸಹನೆ ಹಾಗು ತಾಳ್ಮೆಯಿಂದ ಕಾಯುವ ಮನಸ್ಥಿತಿ ಇಂದಿನವರಲ್ಲಿ ಇಲ್ಲವಾಗಿದೆ. ಮಕ್ಕಳ ಕ್ರಿಯಾಶೀಲತೆಯ ಮೇಲೂ ಇದು ದುಷ್ಪರಿಣಾಮವನ್ನು ಬೀರುತ್ತಿದೆ. ಅಲ್ಲದೆ ಶಾರೀರಿಕ ವ್ಯಾಯಾಮಗಳಿಲ್ಲದೆ ದೈಹಿಕವಾಗಿಯೂ ಮಕ್ಕಳು ಕುಂದುತ್ತಾರೆ. ಪರೀಕ್ಷೆಗಳಲ್ಲಿ ನಕಲು ಮಾಡುವುದರಿಂದ ಶುರುವಾಗುವ ಗುಣಗಳು ಸೈಬರ್ ಕ್ರೈಂ ಗಳೆಂಬ ಕುಕೃತ್ಯಗಳ ತನಕ ಬೆಳೆಯುತ್ತವೆ. ನಗಲು, ಅಳಲು, ಪ್ರೀತಿಸಲು ಹಾಗು ಮಾನವನ ಎಲ್ಲ ಸಹಜ ಭಾವನೆಗಳಿಗೂ ಇಂದು ಇಂಟರ್ನೆಟ್ ಅನಿವಾರ್ಯವಾಗಿದೆ. ಅಲ್ಲದೆ ಅಂತರ್ಜಾಲದಲ್ಲಿ ಕಾಣುವ ವಿಷಯಗಳನ್ನೇ ನಿಜವೆಂದು ನಂಬಿ ನಡೆಯುವ ಇಂದಿನ ಯುವಜನತೆ ವಿದ್ಯಾವಂತರೆಂದು ಕರೆಸಿಕೊಳ್ಳಲು ನಿಜವಾಗಿಯೂ ಅರ್ಹರೆ ಎಂಬ ಸಂಶಯ ಮೂಡುತ್ತದೆ. ಪ್ರಚಾರಪ್ರಿಯತೆಯ ಅಮಲಿನಲ್ಲಿ ಪರಾಮರ್ಶಿಸುವ ಗುಣಗಳೂ ಇಲ್ಲವಾಗುತ್ತಿದೆ!

ಇಂತಹ ವಾತಾವರಣದಲ್ಲಿ ಬೆಳೆಯುವ ಮಗುವೊಂದು ನಾಳಿನ ಮುಖ್ಯಮಂತ್ರಿಯೋ ,ಪ್ರಧಾನಿಯೊ ಅಥವಾ ರಾಷ್ಟಪತಿಯೋ ಆದರೆ ಆ ದೇಶದ ಪ್ರಜೆಗಳ ಗತಿಯೇನು? ದೇಶದ ರಕ್ಷಣಾ ವ್ಯವಸ್ಥೆಯೇ ಇಂತಹ ಒಬ್ಬ ನಾಯಕನ ಕೈಗೆ ಸಿಕ್ಕರೆ ಆ ದೇಶದ ನಾಳೆಗಳನ್ನು ಊಹಿಸಲಾಗುತ್ತದೆಯೇ? ಒಬ್ಬ ನಾಯಕನೆನಿಸಿದವನು ಜನಗಳ ಒಳಗೆ ಅವರ ಕಷ್ಟ ಕಾರ್ಪಣ್ಯಗಳ ಅರಿತು ಬೆಳೆದವನಾಗಿರಬೇಕು. ಬಿದ್ದು ಎದ್ದು ಜೀವನವನ್ನು ಅರಿತವನಾಗಿರಬೇಕು. ಕಷ್ಟಗಳಿಗೆ ಇಂಟರ್ನೆಟ್ ನಲ್ಲದೆ ತಮ್ಮ ಸ್ವಂತ ಜೀವನದಲ್ಲೇ ಉತ್ತರವನ್ನು ಕಾಣಿಸುವನಾಗಬೇಕು. ಇಂತಹ ಒಬ್ಬ ನಾಯಕನನ್ನು ಇಂದಿನ ಆಧುನಿಕ (ಇಂಟರ್ನೆಟ್) ಯುಗ ಗಳಿಸಿಕೊಡಬಲ್ಲದೆ? ಒಂದು ದೇಶ ಬರಿ ಬಾಯಿ ಮಾತಿನಲ್ಲೇ ಪ್ರಚೋದನೆ ಕೊಟ್ಟರೆ ತಾಳ್ಮೆಯಿಂದ ಆಲಿಸಿ ಅದನ್ನು ಅವಲೋಕಿಸುವ ನಾಯಕರು ನಮ್ಮಲ್ಲಿ ಮೂಡುವರೆ? ಅಥವಾ ಆಗಿದ್ದು ಆಗಲಿ.ಆದರೆ ಆದ ಮೇಲೆ ನೋಡಿದರಾಯಿತು ಎಂದು ದೇಶವನ್ನೇ ರಣರಂಗವನ್ನಾಗಿ ಮಾಡಿಬಿಡುವ ಮಂದಿಯೇ ಹೆಚ್ಚಾಗುವರೆ?

ಒಟ್ಟಿನಲ್ಲಿ ಪ್ರಸ್ತುತ ಇಂಟರ್ನೆಟ್ನ ಲೋಕವೆಂಬುದು ಒಂದು ಹೊಸ ಪೀಳಿಗೆಯನ್ನೇ ಜಗತ್ತಿಗೆ ಕೊಡುತ್ತಿದೆ ಹಾಗು ಕೊಟ್ಟಿದೆ. ಆದ ಮಾತ್ರಕ್ಕೆ ಇಂಟರ್ನೆಟ್, ಮೊಬೈಲ್ ಫೋನ್ ಹಾಗು ಇನ್ನಿತರ ಆಧುನಿಕ ತಂತ್ರಜ್ಞಾನಗಳು ಕೇವಲ ದುಷ್ಪರಿಣಾಮಗಳನ್ನೇ ಯುವಜನರ ಮೇಲೆ ಬೀರಿದೆ ಎಂದರೆ ಸುಳ್ಳಾಗುತ್ತದೆ. ಆದರೆ ಅರ್ಥವರಿಯದೆ ಬಳಸುವುದಕ್ಕೂ ಹಾಗು ಅರ್ಥವರಿತು ವ್ಯಸನಿಗಳಾಗುವುದಕ್ಕೂ ವ್ಯತ್ಯಾಸವಿದೆ. 'ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು' ಎಂಬುದರಿತು ಇಂದಿನ ಪೋಷಕರು ಜಾಗೃತರಾಗಬೇಕು. ಲಕ್ಷ ಸುರಿದು ಯಾವುದೊ ಒಂದು ಭಾಷೆಯ ಉಚ್ಚಾರವನ್ನು ಕಲಿಸುವ ಬದಲು ಪ್ರೀತಿ ಸುರಿದು ‘ಅಮ್ಮ’ ಎಂಬ ಪದವನ್ನು ಮನೆಯಲ್ಲೇ ಕಲಿಸಿದರೆ ಸಾಕು. ಮಗು ಬಿದ್ದರೆ ಎತ್ತಿ ಅಳುತ್ತಾ ಮುತ್ತಿಕ್ಕುವ ಬದಲು ಅದು ತನಗೆ ತಾನೇ ಎದ್ದು ನಿಲ್ಲಲು ಬಿಡಬೇಕು. ಬರಿ ಸುಖವನ್ನೇ ಧಾರೆ ಎಳೆಯುವ ಬದಲು ಕೆಲ ಕಷ್ಟಗಳಿಗೂ ಮಕ್ಕಳನ್ನು ಸಜ್ಜಾಗಿಸಬೇಕು. 'ಇಲ್ಲ' ಎಂಬುದನ್ನು ಅರಗಿಸಿಕೊಳ್ಳುವ ಮತ್ತು ಅದಕ್ಕೆ ಒಗ್ಗಿಕೊಳ್ಳುವ ಗುಣಗಳನ್ನು ಮಕ್ಕಳಲ್ಲಿ ಬಿತ್ತಬೇಕು. ಇಂಟರ್ನೆಟ್ವನ ಮೂಲಕ ವಯಸ್ಸಿಗೆ ತಕ್ಕ ವಿಷಯಗಳು ಸಿಗುವಂತೆ ಮಾತ್ರ ಮಾಡಬೇಕು. ವಿಷಯಗಳನ್ನು ಅನುಕರಣೆ ಮಾಡುವ ಬದಲು ತನ್ನದೇ ನೆಲೆಗಟ್ಟಿನಲ್ಲಿ ಪರಮಾರ್ಶಿಸುವ ವ್ಯಕಿತ್ವವನ್ನು ಬೆಳೆಸಬೇಕು. ಇಲ್ಲವಾದರೆ ನಾಳಿನ ನಾಯಕರನ್ನು ನೋಡಲು ನಮಗೆ ನಾಳೆಗಳೇ ಉಳಿಯದಾಗಬಹುದು. ಶಾಂತ ನಿರ್ಮಲ ಜಗತ್ತಿನ ನಿರ್ಮಾಣಕ್ಕೆ ಹೆತ್ತವರ ಕೆಲವು ಕಠಿಣ ನಿರ್ಧಾರಗಳೂ ಅತ್ಯವಶ್ಯಕ.

ಹಾಗೆಯೆ ಪೋಷಕರೆನಿಸಿಕೊಂಡವರು ಮಕ್ಕಳಿಗೆ ಕೇವಲ ಬುದ್ದಿವಾದ ಹೇಳದರೆ ಸಾಲದು. ತಾವೂ ಸಹ ಪರಿವರ್ತನೆಗೊಳ್ಳಲು ಇಚ್ಚಿಸಬೇಕು. ಏಕೆಂದರೆ ಇಂದಿನ ಮಕ್ಕಳು ಓದಿ ಅರಿವುದಕ್ಕಿಂತ, ಕೇಳಿ ಕಲಿಯುವದಕ್ಕಿಂತ ಹೆಚ್ಚಾಗಿ ‘ನೋಡಿ’ ಬೆಳೆಯುತ್ತಾರೆ, ಅಲ್ಲವೇ?

Image Credit : Paul Rogers

ವ್ಯಕ್ತಿಗತ : ಭಾವಗಳೂ ಚೆಲುವನ್ನು ಬೀರುತ್ತಿದ್ದವು ಈಕೆಯ ಅಂದದ ಮೊಗದ ಮೇಲೆ...


ಹುಣ್ಣಿಮೆಯ ಚಂದ್ರನ ಹೊಳಪಿನ ಕಿರಣ, ಅದು ಆಕೆಯ ನಯನ. ಅದು ಮಲ್ಲಿಗೆಯೇ ನಾಚುವಂತಹ ಅಂದ. ಆಕೆ ನಕ್ಕರೆ ಮುತ್ತು ಸುರಿದಂತೆ . ಮುನಿದರೆ ಮುನಿಸೂ ನಾಚುವಂತೆ. ಅತ್ತರೆ ನೋಡುಗನೂ ಜೊತೆಗೆ ಅತ್ತಂತೆ. ನಲಿದರಂತೂ ನವಿಲೇ ಕುಣಿದಂತೆ. ಆಕೆ ಪರದೆಯ ಮೇಲಿನ ಪ್ರಜ್ವಲಿಸುವ ಕಮಲ. ಹೆಸರು ಮಧುಬಾಲ.

ಮಧುಬಾಲ. ನಲವತ್ತು ಹಾಗು ಐವತ್ತನೇ ದಶಕದ ಅದೆಷ್ಟೋ ಯುವಕರ ಡ್ರೀಮ್ ಗರ್ಲ್. ಹಿಂದಿ ಚಿತ್ರರಂಗದ ತಾರೆಗಳಲ್ಲಿ ಆಗ್ರಗಣ್ಯಳು. ಈಕೆಯ ಅಂದಕ್ಕೆ ಹಾಗು ನಟನೆಗೆ ಮನಸೋತವರಿಲ್ಲ. ಮೈಮರೆತವರಿಲ್ಲ. ವೀನಸ್ ಕ್ವೀನ್ (ವೀನಸ್ : ಪ್ರೀತಿ ಹಾಗು ಸೌಂದರ್ಯದ ರೋಮನ್ ದೇವತೆಯಾದ ಶುಕ್ರ ಗ್ರಹ) ಎಂದೇ ಅಭಿಮಾನಿಗಳಲ್ಲಿ ಚಿರಪರಿಚಿತಳು. ಹೆಚ್ಚೆಂದರೆ ಎರಡು ದಶಕಗಳಷ್ಟೇ ತೆರೆಯ ಮೇಲೆ ಕಂಡರೂ ಇಂದಿಗೂ ಜನಮನಗಳಲ್ಲಿ ಮಧುಬಾಲಳ ಹೆಸರು ಚಾಲ್ತಿಯಲ್ಲಿದೆ ಎಂದರೆ ಅದು ಆಕೆಯ ಪ್ರಸಿದ್ದಿ ಛಾಪು ಎನ್ನಬಹುದು. ದಶಕಗಳ ನಂತರವೂ ಅಭಿಮಾನಿಗಳ ಮನೆಮಾತಾಗಿರುವ ಈಕೆಯ ಒಳ-ಹೊರಗಿನ ಜೀವನದ ಬಗ್ಗೆ ಒಂದು ಸಣ್ಣ ಇಣುಕು ನೋಟ.

ಪ್ರೇಮಿಗಳ ದಿನವೆಂದು ಆಚರಿಸಲಾಗುವ ಫೆರ್ಬ್ರವರಿ ೧೪ ರಂದು(೧೯೩೩) ದೆಹಲಿಯಲ್ಲಿ ಜನಿಸಿದ ಮಧುಬಾಲಳ ಮೂಲ ಹೆಸರು ಮುಮ್ತಾಜ್ ಜಿಹಾನ್ ದೇಹ್ಲವ್. ಇತರ ಅನೇಕ ನಟ-ನಟಿಯರಂತೆ ಈಕೆಗೂ ಚಿತ್ರರಂಗ ತನ್ನದೇ ಆದ ಮುದ್ದಾದ ಹೆಸರನ್ನು ನಾಮಕರಣ ಮಾಡಿತು. ಅತಿ ಕಷ್ಟದ ದಿನಗಳನ್ನೇ ಕಂಡು ಬೆಳೆದ ಮಧುಬಾಲ ಪೋಷಕರ ಹನ್ನೊಂದು ಮಕ್ಕಳಲ್ಲಿ ಒಬ್ಬಳು. ಕೆಲಸವನ್ನು ಅರಸುತ್ತಾ ತಂದೆ ಅತಾವುಲ್ಲಾ ಖಾನ್ ಮುಂಬೈಗೆ ಬಂದು ನೆಲೆಸುತ್ತಾರೆ. ಕಷ್ಟದಿಂದ ಬೇಸತ್ತಿದ್ದ ಕುಟುಂಬಕ್ಕೆ ಆಧಾರವವಾಗಿ ಮಧುಬಾಲ ತನ್ನ ಒಂಬತ್ತನೇ ವಯಸ್ಸಿಗೆ ಕೆಲಸಕ್ಕಾಗಿ ಬಾಂಬೆ ಫಿಲಂ ಸ್ಟುಡಿಯೋವನ್ನು ಸೇರಬೇಕಾಗುತ್ತದೆ. ೧೯೪೨ರಲ್ಲಿ ತೆರೆಗಂಡ ‘ಬಸಂತ್’ ಚಿತ್ರ ಬೇಬಿ ಮಧುಬಾಲಳ ಮೊದಲ ಚಿತ್ರ. ಅಲ್ಲಿಂದ ಮುಂದೆ ಒಂದರ ಮೇಲೊಂದು ಚಿತ್ರಗಳು ಸಿಗತೊಡಗುತ್ತವೆ. ಮಧುಬಾಲಾಳ ಹೆಸರು ಸಿನಿಮಾ ವಲಯದಲ್ಲಿ ಸದ್ದು ಮಾಡತೊಡಗುತ್ತದೆ. ನೋಡ ನೋಡುತ್ತಿದ್ದಂತೆ ಒಂದು ದಿನ ಚಿತ್ರದ ನಾಯಕ ನಟಿಯ ಪ್ರಸ್ತಾಪವೂ ಬಂದೆ ಬಿಡುತ್ತದೆ. ಆಕೆಗೆ ಆಗ ಕೇವಲ ಹದಿನಾಲ್ಕು ವರ್ಷ. ಚಿತ್ರ ‘ನೀಲ್ ಕಮಲ್’ ಹಾಗು ಅದರ ನಾಯಕ ನಟ ‘ದಿ ಶೋ ಮ್ಯಾನ್’ ರಾಜ್ ಕಪೂರ್!

ಅಲ್ಲಿಂದ ಮುಂದೆ ಮಧುಬಾಲಳ ಹೆಸರು ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಾ ಹೋಗುತ್ತದೆ. ಮಹಲ್, ದುಲಾರಿ, ಹೌರಾ ಬ್ರಿಡ್ಜ್, ಕಾಲ ಪಾನಿ, ದೊ ಉಸ್ತಾದ್, ಅಮರ್, ಮಿಸ್ಟರ್ & ಮಿಸೆಸ್ 55, ಚಲ್ತಿ ಕ ನಾಮ್ ಗಾಡಿ, ಬರ್ಸಾತ್ ಕಿ ರಾತ್ ಹಾಗು ಮುಘಲ್-ಎ-ಅಜಮ್ ಹೀಗೆ ಸಾಲು ಸಾಲು ಹಿಟ್ ಚಿತ್ರಗಳಲ್ಲಿ ಅಭಿನಯಿಸಿ ಜನರ ಮನಸೂರೆಗೊಳಿಸುತ್ತಾಳೆ. ಐವತ್ತನೇ ಶತಮಾನದಲ್ಲಿ ಮಧುಬಾಲಳ ಪ್ರಸಿದ್ದಿ ಇತರ ನಾಯಕ ನಟಿಯರಿಗೆ ಹೋಲಿಸಿದರೆ ಅತಿ ಉತ್ತುಂಗದಲ್ಲಿರುತ್ತದೆ. ಕೆಲ ವರ್ಷಗಳಿಂದೆಯಷ್ಟೇ ಪುಟ್ಟ ಹುಡುಗಿಯೊಬ್ಬಳು ಬಾಂಬೆ ಫಿಲಂ ಸ್ಟುಡಿಯೋದ ಹೊರಗೆ ನಿಂತು ನಟನಟಿಯರನ್ನು ತನ್ನ ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದ್ದವಳು ಇಂದು ಅದೇ ನಟ ನಟಿಯರ ಸಾಲಿನಲ್ಲಿ ನಿಂತಿರುತ್ತಾಳೆ. ಅಭಿಮಾನಿಗಳ ದೊಡ್ಡ ಸಾಲು ಈಕೆಯ ಒಂದು ನೋಟಕ್ಕೆ ಅದೇ ಜಾಗದಲ್ಲಿ ಸಾಲುಗಟ್ಟಿ ನಿಲ್ಲತೊಡಗಿರುತ್ತದೆ! ಮಧುಬಾಲಾಳ ಪ್ರಸಿದ್ದಿ ಕೇವಲ ದೇಶವಲ್ಲದೆ ವಿದೇಶಗಳಲ್ಲೂ ಕೇಳಿಬರುತ್ತದೆ. ಅಮೇರಿಕಾದ ಬಹು ಪ್ರಸಿದ್ಧಿಯ ಫಿಲ್ಮಿ ಮ್ಯಾಗಜಿನ್ನ ೧೯೫೨ ರ ಆಗಸ್ಟ್ ಸಂಚಿಕೆಯಲ್ಲಿ ಮಧುಬಾಲಳನ್ನು ಉಲ್ಲೇಖಿಸುತ್ತಾ 'ಪ್ರಪಂಚದ ಅತಿ ದೊಡ್ಡ ತಾರೆ' ಎಂಬ ಶೀರ್ಷಿಕೆಯೊಂದಿಗೆ ಒಂದು ಪುಟ ಪೂರ್ತಿ ಬರೆಯಲಾಗಿರುತ್ತದೆ!
ಅವಳ ಪ್ರಸಿದ್ದಿ ಅದೆಷ್ಟಿತ್ತೆಂದು ಇಲ್ಲೇ ಅಂದಾಜಿಸಬಹುದು. ಇದಾದ ನಂತರ ಆಕೆಗೆ ಹಾಲಿವುಡ್ ಆಫರ್ಗಳೂ ಅರಸಿ ಬರತೊಡಗುತ್ತವೆ. ಆದರೆ ತಂದೆ ಅತಾವುಲ್ಲಾ ಖಾನ್ರ ನಿರಾಕರಣೆಯ ಮೇರೆಗೆ ಅದು ಮುಂದುವರೆಯುವುದಿಲ್ಲ.

ಸಿನಿಜಗತ್ತಿಗೆ ಬಂದ ಮೇಲೆ ಬೇಡವೆಂದರೂ ತಮ್ಮ ಹೆಸರುಗಳನ್ನು ಇತರ ನಟ-ನಟಿಯರೊಂದಿಗೆ ಕಟ್ಟಿ ಸುದ್ದಿಯನ್ನು ಮಾಡಲಾಗುತ್ತದೆ. ಇವಗಳಲ್ಲಿ ಕೆಲವು ನಿಜವಾದರೆ ಕೆಲವು ಅಕ್ಷರ ಸಹ ಸುಳ್ಳಾಗಿರುತ್ತವೆ. ಮಧುಬಾಲಾಳ ಹೆಸರೂ ಹೀಗೆ ಹಲವು ನಟ ನಿರ್ದೇಶಕರೊಟ್ಟಿಗೆ ಕಂಡು ಬಂದು ಅಂದಿನ ಸಿನಿವಲಯದಲ್ಲಿ ಚರ್ಚೆಯ ವಿಷಯವಾಗಿದಂತೂ ಸುಳ್ಳಲ್ಲ. ಆದರೆ ಅದು ಸಾಬಿತ್ತಾಗಿದ್ದು ಕೆಲವೇ ವ್ಯಕ್ತಿಗಳ ನಡುವೆ ಮಾತ್ರ. ಅವರಲ್ಲಿ ಪ್ರಮುಖರು ದಿ ಟ್ರಾಜಿಡಿ ಕಿಂಗ್ ದಿಲೀಪ್ ಕುಮಾರ್. ೧೯೪೪ ರಲ್ಲಿ 'ಜ್ವಾರ್ ಬಟ್ಟಾ' ಚಿತ್ರದ ಮೂಲಕ ಪರಿಚಯಗೊಂಡ ಈ ಜೋಡಿ ಮುಂದೆ ನಾಲ್ಕೈದು ಚಿತ್ರಗಳಲ್ಲಿ ಒಟ್ಟಾಗಿ ನಟಿಸುತ್ತಾರೆ. ಅಷ್ಟರಲ್ಲಾಗಲೇ ಒಬ್ಬರನೊಬ್ಬರು ಮೆಚ್ಚಿಯೂ ಇರುತ್ತಾರೆ. ಆದರೆ ಇಲ್ಲೂ ಸಹ ಮಧುಬಾಲಳ ತಂದೆಯೇ ಅಡ್ಡಿಯಾಗುತ್ತಾರೆ. ದಿಲೀಪ್ ಕುಮರೊಟ್ಟಿಗನ ಸಂಬಂಧಕ್ಕೆ ಅವರು ಮೊದಲಿಂದಲೇ ಆಕ್ಷೇಪ ವ್ಯಕ್ತಪಡಿಸಿರುತ್ತಾರೆ. ಕೆಲ ಸಣ್ಣ ಪುಟ್ಟ ವೈಮನಸ್ಸಿಂದ ಬೇರಾದ ಈ ಜೋಡಿ ಮತ್ತೆಂದೂ ಒಟ್ಟುಗೂಡುವುದಿಲ್ಲ. ಇದಾದ ನಂತರ ಪ್ರಸಿದ್ಧ ಹಾಡುಗಾರ ಕಿಶೋರ್ ಕುಮಾರ್ ಈಕೆಯನ್ನು ವರಿಸಲು ಇಚ್ಛಿಸುತ್ತಾರೆ. ಆದರೆ ಮಧುಬಾಲಳ ಮನ ಇನ್ನೂ ದಿಲೀಪ್ ಕುಮಾರ್ರನ್ನೇ ಬಯಸುತ್ತಿರುತ್ತದೆ. ಕೊನೆಗೆ ಮಧುಬಾಲ ಕಿಶೋರ್ರ ವಿವಿಧ ಬಗೆಯ ಪ್ರಸ್ತಾವನೆಗೆ ಮಣಿಯಲೇ ಬೇಕಾಗುತ್ತದೆ. ಅಲ್ಲದೆ ಇದಕ್ಕಾಗಿ ಕಿಶೋರ್ ತಾವು ಇಸ್ಲಾಂ ಗೆ ಮತಾಂತರಗೊಂಡು ಹೆಸರನ್ನು ಅಬ್ದುಲ್ ಕರೀಂ ಎಂದೂ ಬದಲಿಸಿಕೊಂಡಿದ್ದೂ ಇದೆ! ಒಟ್ಟಿನಲ್ಲಿ ೧೯೬೦ ರಲ್ಲಿ ಮಧುಬಾಲ ಕಿಶೋರ್ರನ್ನು ವರಿಸುತ್ತಾಳೆ.

ತನ್ನ ಅಂದ ಹಾಗು ನಟನೆಯಿಂದ ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದ ಈಕೆಗೆ ತನ್ನ ಹೃದಯವೇ ಕೊನೆಗೊಂದು ದಿನ ಕಂಠಕಪ್ರಾಯವಾಗುತ್ತದೆ ಎಂದು ಭಾವಿಸಿರಲಿಲ್ಲ. ೧೯೫೪ರ ಹೊತ್ತಿಗಾಗಲೇ ಈಕೆಯ ಹೃದ್ಯದಲ್ಲಿ ರಂಧ್ರವೊಂದು ಪತ್ತೆಯಾಗಿರುತ್ತದೆ. ಹಾಗು ಆಗಿನ ಕಾಲಕ್ಕೆ ಅದು ವಾಸಿಮಾಡಲಾಗದ ಖಾಯಿಲೆ! ಹೆಚ್ಚು ಕ್ರಿಯಾಶೀಲವಾದಷ್ಟೂ ರಕ್ತವು ಮೂಗು ಹಾಗು ಬಾಯಿಯ ಮೂಲಕ ಹೊರ ಹೋಗುತ್ತಿರುತ್ತದೆ. ದೇಹದಲ್ಲಿ ನೋವು ಅಷ್ಟಿದ್ದರೂ ಈಕೆ ಆ ನೋವಿನಲ್ಲೇ ಹಲವು ಚಿತ್ರಗಳನ್ನು ಮಾಡುತ್ತಾಳೆ. ‘ಮೊಗಲ್-ಎ-ಅಜಮ್’ ಚಿತ್ರದ ಕೊನೆಯ ದೃಶ್ಯಗಳಲ್ಲಿ ಅಕ್ಷರ ಸಹ ಬಳಲಿದ್ದ ದೇಹದಲ್ಲೇ ಈಕೆ ಕ್ಯಾಮೆರಾದ ಮುಂದೆ ಬಂದು ನಿಲ್ಲುತ್ತಾಳೆ. ತನ್ನ ಎಲ್ಲವನ್ನೂ ನಟನೆಗೆ ಒಪ್ಪಿಸುತ್ತಾಳೆ. ಆ ಚಿತ್ರದ 'ಅನಾರ್ಕಲಿ' ಪಾತ್ರಕ್ಕೆ ಈಕೆಯ ವಿನಃ ಮತ್ಯಾರು ಒಗ್ಗರು ಎಂಬ ಮಟ್ಟಿಗೆ ನಟಿಸುತ್ತಾಳೆ. ಇಂದಿಗೂ ಆ ಪಾತ್ರ ಚಿತ್ರಪ್ರಿಯರ ಕಣ್ಣಿಗೆ ಕಟ್ಟಿದಂತಿದೆ. ಮನೆಮಾತಾಗಿದೆ. ೧೯೬೧ ರ ಹೊತ್ತಿಗಾಗಲೇ ಕಾಯಿಲೆ ಉಲ್ಬಣಿಸಿ ಹಾಸಿಗೆಯನ್ನು ಹಿಡಿದ ಮಧುಬಾಲ ಸುಮಾರು ಒಂಬತ್ತು ವರ್ಷಗಳ ಕಾಲ ಮೇಲೇಳುವುದೇ ಇಲ್ಲ! ಚರ್ಮವು ಎಲುಬಿಗೆ ಅಂಟಿದಂತ ದೇಹಸ್ಥಿತಿ ಈ ಸುಂದರಿಗೆ ಬರುತ್ತದೆಂದು ಯಾರು ಸಹ ಊಹಿಸಿರಲಿಲ್ಲ. 'ನಾನು ಸಾಯಲು ಇಚ್ಛಿಸುವುದಿಲ್ಲ.. ಬದುಕಬೇಕು.. ನಾನು ಬದುಕಬೇಕು' ಎನ್ನುತ್ತಲೇ ಫೆಬ್ರವರಿ ೨೩, ೧೯೬೯ ರಂದು ಇಹ ಲೋಕ ತ್ಯೆಜಿಸುತ್ತಾಳೆ. ಆಗ ಆಕೆಗಿನ್ನೂ ಮೂವತ್ತಾರು ವರ್ಷಗಳು!



ಮಧುಬಾಲ ತನ್ನ ಅಂದದಷ್ಟೇ ನಟನೆಯಲ್ಲೂ ಮಿಗಿಲು. ಆದರೆ ಅವಳ ಅಂಧದ ವರ್ಣನೆಯ ಮುಂದೆ ನಟನೆಗೆ ಸಿಗಬೇಕಾಗಿದ್ದ ಮಾನ್ಯತೆ ಕೊಂಚ ಕಡಿಮೆಯಾಯಿತು ಎನ್ನಬಹುದು. ಚಿತ್ರದ ಸೆಟ್ ಒಂದರಲ್ಲಿ ಮೊದಲ ಬಾರಿಗೆ ಈಕೆಯನ್ನು ಪ್ರತ್ಯಕ್ಷವಾಗಿ ಕಂಡ ಶಮ್ಮಿ ಕಪೂರ್ ಇವಳ ಅಂದಕ್ಕೆ ಬೆರಗಾಗಿ ಮೂರ್ಛೆ ಹೋಗಿರುವುದು ಇದೆ! ‘ಇಂತಹ ಅಂದಕ್ಕೆ ಅದೆಷ್ಟು ಜನರ ದೃಷ್ಟಿ ತಾಗಿತ್ತೋ’ ಎಂದು ಕೆಲವರೆಂದರೆ ‘ಎಲ್ಲ ಅವನ ಇಚ್ಛೆ’ ಎಂದು ಕೆಲವರು ಈಕೆಯ ಅಭಿಮಾನಿಗಳು ಈಕೆಯ ಅಗಲಿಕೆಯಿಂದ ನೊಂದಿರುವುದು ಉಂಟು.ಇಷ್ಟೊಂದು ಸುಂದರ ಚೆಲುವನ್ನು ಪಡೆದ ಮಧುಬಾಲ ಕೊಂಚ ಕಾಲವನ್ನೂ ತನ್ನ ಜೊತೆಗೆ ಪಡೆದುಬರಬೇಕಿತ್ತು. ಚಿತ್ರಪ್ರಿಯರಿಗೆ ಇನ್ನೂ ಹೆಚ್ಚು ಹೆಚ್ಚು ಚಿತ್ರಗಳನ್ನು ನೀಡಬೇಕಿತ್ತು. ಆ ಮಿಂಚಿನ ಹೊಳಪಿನ ಕಣ್ಣುಗಳು, ಮನಮೋಹಕಗೊಳಿಸುವ ನಗು ಹಾಗು ಮನಸೂರೆಗೊಳಿಸುವ ಆ ನಟನೆ ಇಂದು ಕೇವಲ ನೆನಪಾಗಿ ಉಳಿದಿವೆ. ಅಂದಕ್ಕೆ ಅನ್ವರ್ಥನಾಮವೆಂದು ಹೇಳಬಹುದಾದ ಮಧುಬಾಲಳ ಬಗ್ಗೆ ಚರ್ಚಿಸುವ ಪೀಳಿಗೆಯೂ ಇಂದು ಉಳಿದಿಲ್ಲ. ಮರೆಯಾಗುತ್ತಿರುವ ಪೀಳಿಗೆಯಲ್ಲಿ ಮರೆಯಾಗದೆ, ಮುಂಬರುವ ಪೀಳಿಗೆಯ ಮನಗಳಲ್ಲೂ ಈಕೆ ಮನೆಮಾಡಲಿ ಎಂಬುದೇ ಆಶಯ.

Photo Courtesy : Madhubala II in Painting by Sunanda Puneet

Friday, November 11, 2016

ಜಗತ್ತನೇ ಬದಲಿಸಿದ ಆ ಹತ್ತು ಅನ್ವೇಷಣೆಗಳು!!

ಅನ್ವೇಷಣೆ ಹಾಗು ಸಂಶೋಧನೆ. ಬುದ್ದಿಜೀವಿ ಎನಿಸಿಕೊಂಡಿರುವ ಮಾನವನ ವಿಕಸನದ ಎರಡು ಮೆಟ್ಟಿಲುಗಳು. ಗಿಡ ಬಳ್ಳಿಗಳನ್ನು ದೇಹಕ್ಕೆ ಸುತ್ತಿಕೊಂಡು, ಹಸಿ ಹಸಿ ಮಾಂಸವನ್ನು ಗಬಗಬನೆ ತಿಂದು ಎಲ್ಲೆಂದರಲ್ಲಿ ಇದ್ದು ಬಿದ್ದು ಎದ್ದು ವಾಸಿಸುತ್ತಿದ್ದ ಜೀವಿಯೊಂದು ಇಂದು ಮೈಯ ತುಂಬೆಲ್ಲ ವಿವಿಧ ವಸ್ತುಗಳಿಂದ ಮಾಡಿದ ಬಟ್ಟೆಗಳನ್ನು ಹೊತ್ತು, ಸಾವಿರಾರು ಬಗೆಯ ಆಹಾರವನ್ನು ಆಸ್ವಾದಿಸುತ್ತಾ, ಮೊಬೈಲು ಇಂಟರ್ನೆಟ್ಗಳೆಂಬ ವಸ್ತುಗಳನ್ನು ತನ್ನ ಜೀವನದ ಬಹುಮುಖ್ಯ ಅಂಗವನ್ನಾಗಿ ಮಾಡಿಕೊಂಡಿದೆ ಎಂದರೆ ಅದಕ್ಕೆ ಅನ್ವೇಷಣೆ ಹಾಗು ಸಂಶೋಧನೆ ಎಂಬ ಕ್ರಿಯೆಗಳು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಅದು ಕಲ್ಲನ್ನು ಜಜ್ಜಿ ಬೆಂಕಿ ಹೊತ್ತಿಸುವುದರಿಂದ ಹಿಡಿದು ಸಹಸ್ರ ಲಕ್ಷ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಯಾವುದೊ ಒಂದು ನಕ್ಷತ್ರದ ಬಗ್ಗೆ ಅಧ್ಯಯಾನ ಮಾಡುವ ವರೆಗೂ ವಿಸ್ತರಿಸಿದೆ ಎಂದರೆ ಅದಕ್ಕೆ ಮಾನವನ ಕೊತುಹಲ ಹಾಗು ಆ ಕುತೂಹಲದ ವ್ಯಕ್ತ ರೂಪ ಅನ್ವೇಷಣೆ ಹಾಗು ಸಂಶೋಧನೆಗಳೇ ಕಾರಣ ಎನ್ನಬಹುದು.


'ಕಾರು ಅದೆಷ್ಟೇ ಶ್ರೀಮಂತವಾಗಿದ್ದರೂ ತಲುಪುವ ಗುರಿ ಬದಲಾಗದು' ಎಂಬಂತೆ ಇಂದಿನ ನಾವುಗಳು ಉಪಯೋಗಿಸುವ ಎಲ್ಲಾ ವಸ್ತುಗಳು ಮಹತ್ತರವಾದ ಅನ್ವೇಷಣೆಗಳು ಎನ್ನಲಾಗದು. ಉದಾಹರಣೆಗೆ ಮಾರುಕಟ್ಟೆಯಲ್ಲಿ ನಾವಿಂದು ನೂರಾರು ಬಗೆಯ ಮೊಬೈಲ್ ಫೋನುಗಳನ್ನು ನೋಡುತ್ತೇವೆ. ಅವುಗಳ್ಲಲಿ ಕೆಲವು ಕೆಲವೇ ನೂರು ರೂಪಾಯಿಗಲ್ಲಿ ದೊರೆತರೆ ಕೆಲವು ಲಕ್ಷ ತೆತ್ತರೂ ಸಿಗವು. ಹಾಗಾದರೆ ಲಕ್ಷ ತೆತ್ತ ಮಾತ್ರಕ್ಕೆ ಆ ಫೋನಿನ ಮುಖೇನ ನಾವು ಸೌರಮಂಡಲದ ನೆರೆಯ ಗ್ರಹಗಳೊಟ್ಟಿಗೇನು ಸಂವಹಿಸಲಾಗುವುದಿಲ್ಲ. ಅಲ್ಲೂ ಸಹ ಒಂದು ಸಾಮಾನ್ಯ ಫೋನಿನಂತೆ ಶಬ್ದ ತರಂಗಗಳನ್ನು ವಿನಿಮಯ ಮಾಡಿಕೊಳ್ಳ ಬಹುದು ಅಷ್ಟೇ. ನಿಜವಾದ ಅನ್ವೇಷಣೆ ಎಂದು ಕರೆಯಲ್ಪಡುವುದು ಶಬ್ದತರಂಗಗಳೇ ಏನೆಂಬುದು ಸರಿಯಾಗಿ ಅರಿಯದ ಕಾಲದಲ್ಲಿ ಒಂದು ಸಾಧನದಿಂದ ಮತ್ತೊಂದು ಸಾಧನಕ್ಕೆ ಆಡುವ ಪದಗಳನ್ನು ಕಳಿಸಿ ಜಗತ್ತನೇ ನಿಬ್ಬೆರಾಗಾಗಿಸಿದಾಗ. ಸಂವಹನದ ಒಂದು ಹೊಸ ಮಾಧ್ಯಮವನ್ನೇ ಸೃಷ್ಟಿಸಿದಾಗ!


ಹೀಗೆ ಇಂದಿನ ನಮ್ಮ ಆದುನಿಕ ಜೀವನ ಶೈಲಿ ಎಂಬುದು ಹಲವಾರು ಸಂಶೋಧನೆ ಹಾಗು ಅನ್ವೇಷಣೆಗಳ ಫಲವಾಗಿದೆ. ಹಾಗಾದರೆ ಪ್ರಾಣಿಗಳಂತಿದ್ದ ಮಾನವ ನಾಗರೀಕನಾಗಿ, ನಾಗರೀಕತೆಯಿಂದ ವೈಜ್ಞಾನಿಕನಾಗಿ ಬೆಳೆಯಲು ಕಾರಣವಾದ 'ಮಹತ್ತರವಾದ' ಅನ್ವೇಷಣೆಗಳಾದರೂ ಯಾವುವು?



1.ಬೆಂಕಿಯ ಸೃಷ್ಟಿ ಹಾಗು ನಿಯಂತ್ರಣ :

ಬೆಂಕಿಯ ಉಪಯೋಗ ಮಾನವನ ಸಂತತಿಯ ಮೊಟ್ಟ ಮೊದಲ ಅನ್ವೇಷಣೆ ಎನ್ನಬಹುದು. ನೈಸರ್ಗಿಕವಾಗಿ ಬೆಂಕಿಯೇನೊ ಕಾಣುತ್ತಿತ್ತು ಆದರೆ ಅದನ್ನು ಸೃಷ್ಠಿಸುವುದಾಗಲಿ ಅಥವಾ ನಿಯಂತ್ರಿಸುವುದಾಗಲಿ ಮಾನವನಿಗೆ ತಿಳಿದಿರಲಿಲ್ಲ. ಹಸಿ ಮಾಂಸವನ್ನು ಸುಡುವುದರಿಂದ ಹಿಡಿದು ಪ್ರಾಣಿಗಳಿಂದ ರಕ್ಷಣೆಗಾಗಿ, ರಾತ್ರಿಯ ಕತ್ತಲೆಯನ್ನು ಹೋಗಲಾಡಿಸಲು ಹಾಗು ಚಳಿಯಿಂದ ರಕ್ಷಿಸಿಕೊಳ್ಳಲು ಬೆಂಕಿ ಸಹಕಾರಿಯಾಯಿತು. ಇಂದಿನ ಸಿಡಿಮದ್ದುಗಳಿಂದ ಹಿಡಿದು ನಭೋಮಂಡಲಕ್ಕೆ ಉಪಗ್ರಹಗಳನ್ನು ಚಿಮ್ಮಿಸುವವ ತಂತ್ರಜ್ಞಾನಕ್ಕೂ ಅಡಿಪಾಯ ಹಾಕಿಕೊಟ್ಟಿತು. ಬೆಂಕಿಯ ಸೃಷ್ಟಿ ಹಾಗು ನಿಯಂತ್ರಣ ಮಾನವ ಇತಿಹಾಸದ ಅತಿ ಮಹತ್ವವಾದ ಹಾಗು ಅಷ್ಟೇ ಪರಿಣಾಮಕಾರಿಯಾದ ಮೊದಲ ಅನ್ವೇಷಣೆ. ಅಲ್ಲದೆ ನಂತರದ ಎಲ್ಲಾ ಅನ್ವೇಷಣೆಗಳಿಗೂ ಅಡಿಪಾಯವನ್ನು ಹಾಕಿಕೊಟ್ಟಿತು.



2. ಮಾತು ಹಾಗು ಬರಹ :

ಮಾನವನ ಮೆದುಳಿನ ರಚನೆ ಆತನನ್ನು ಇತರೆ ಪ್ರಾಣಿಗಳಿಗಿಂತ ಭಿನ್ನವಾಗಿಸಿತು. ಮಾತು ಸಹ ಆ ಭಿನ್ನತೆಯ ಪರಿಣಾಮವೇ. ಆದರೆ ಇಲ್ಲಿ ಗಮನಿಸಬೇಕಾದ ವಿಚಾರವೇನೆಂದರೆ ಮಾನವ ಶಬ್ದಗಳ ಉಚ್ಚಾರಣೆಯನ್ನೇನೋ ನೈಸರ್ಗಿಕವಾಗೇ ಕಲಿತಿರಬಹುದು ಆದರೆ ಆ ಶಬ್ದಗಳಿಗೆ ಒಂದು ಆಕಾರವನ್ನು ನೀಡಿ ಅದನ್ನು ಪರಸ್ಪರರ ನಡುವೆ ಸಂಭಾಷಿಸಲು ಬಳಸಿದ ಜಾಣ್ಮೆಯನ್ನು ಶ್ಲಾಘಿಸಲೆ ಬೇಕು. ಕೇವಲ ನಗುವುದು, ಅಳುವುದು ಹಾಗು ಕೋಪಿಸಿಕೊಳ್ಳುವುದುದೇ ಭೂಮಿಯ ಮೇಲಿನ ಭಾಗಶಃ ಜೀವಿಗಳ ಅಭಿವ್ಯಕ್ತಿ ಗುಣಗಳಾಗಿದ್ದರೆ, ಮಾನವ ತನ್ನ ಅನ್ವೇಷಣೆಯ ಮೂಲಕ ಪದಗಳೆಂಬ ಹೊಸ ಮಾಧ್ಯಮವನ್ನೇ ಸೃಷ್ಟಿಸಿ ಮುನ್ನಡೆದ. ಅಲ್ಲದೆ ಕಾಲಾಂತರದಲ್ಲಿ ತನ್ನ ಆಗು ಹೋಗುಗಳನ್ನು ತನ್ನ ಮುಂದಿನ ಪೀಳಿಗೆಗೆ ತಿಳಿಸಲು ಕಲ್ಲು ಬಂಡೆಗಳ ಮೇಲೆ ಕೆತ್ತನೆಯಯನ್ನು ಶುರುಮಾಡಿದ. ಕೆತ್ತನೆಯ ಕೆಲಸವೇ ಮುಂದೆ ಚಿತ್ರಗಳಾಗಿ, ಚಿತ್ರ ಗಳು ಪದಗಳಾಗಿ, ಕೊನೆಗೆ ಆಡುವ ಮಾತಿಗೆ ಬರಹವೆಂಬ ಒಂದು ಹೊಸ ಮೂರ್ತರೂಪವನ್ನೇ ಕೊಟ್ಟ. ಮಾನವ ಅಂದೇನಾದರೂ ಸ್ವರಗಳ ಉಚ್ಚಾರಣೆಯನ್ನು ಸಂವಹನ ಮಾದ್ಯಮವಾಗಿಸದಿದ್ದರೆ ಹಾಗು ಆ ಸ್ವರಗಳಿಂದ ಬರಹವೆಂಬ ಅನ್ವೇಷಣೆಯ ಫಲವನ್ನು ಗಳಿಸದಿದ್ದರೆ ನಾವಿಂದು ಸಾವಿರ ಸಾವಿರ ಮಾತುಗಳನು ಕಂಪ್ಯೂಟರಿನ ಕೀಬೋರ್ಡ್ ನ ಮುಖೇನ ಕುಕ್ಕಲು ಆಗದಿತ್ತು! ಜಗತ್ತನ್ನು ಇಷ್ಟು ಸುಲಭವಾಗಿ ಅರಿಯಲಾಗದಾಗುತ್ತಿತ್ತು.


3.ಕೃಷಿ :

ಕೃಷಿಯ ಅನ್ವೇಷಣೆ ಸುಮಾರು ೧೦ ಸಾವಿರ ವರ್ಷಗಳ ಹಿಂದೆ ಆಗಿರಬಹುದೆಂದು ಅಂದಾಜಿಸಲಾಗಿದೆ. ಪರಿಸರದಲ್ಲಿ ಸಿಗುವ ಹಣ್ಣು ಹಂಪಲುಗಳು, ಗೆಡ್ಡೆ ಗೆಣೆಸುಗಳು ಹಾಗು ಪ್ರಾಣಿ ಪಕ್ಷಿಗಳನ್ನೇ ಆಹಾರವನ್ನಾಗಿಸಿಕೊಂಡ್ಡಿದ್ದ ಮಾನವವನಿಗೆ ಕೃಷಿಯ ಅನ್ವೇಷಣೆ ವರದಾನವಾಯಿತು. ನೈಸರ್ಗಿಕವಾಗಿ ಸಿಗುತ್ತಿದ್ದ ಆಹಾರವನ್ನು ತಿಂದು ಮುಗಿಸಿದ ನಂತರ ನಾಳಿನ ಆಹಾರಕ್ಕಾಗಿ ಮಾನವ ಅಲೆಯಬೇಕಿತ್ತು. ಹೀಗೆ ಅಲೆಮಾರಿಯಾಗಿದ್ದ ಮಾನವ ಕೃಷಿಯ ಸಲುವಾಗಿ ಒಂದೆಡೆ ನೆಲೆಸಲು ಪ್ರಾರಂಭಿಸುತ್ತಾನೆ. ಆಹಾರ ಸಂಗ್ರಹಣೆಯನ್ನು ಶುರು ಮಾಡುತ್ತಾನೆ. ಕೃಷಿ, ನಾಳಿನ ಹಸಿವನ್ನು ನೀಗಿಸಿತಲ್ಲದೆ ಊರು ನಗರಗಳು ಬೆಳೆಯಲು ಲೂ ಸಹ ಸಹಕಾರಿಯಾಯಿತು.

4.ಚಕ್ರ :

ಸಂಶೋಧಕರ ಪ್ರಕಾರ ಚಕ್ರದ ಅನ್ವೇಷಣೆ ಸುಮಾರು ೫೦೦೦ ವರ್ಷಗಳ ಹಿಂದೆ ಆಗಿರಬಹುದು ಎಂದು ಊಹಿಸಲಾಗಿದೆ. ಆ ಹೊತ್ತಿಗಾಗಲೇ ಮಾನವ ಕೃಷಿ ಹಾಗು ಹೈನುಗಾರಿಕೆಯನ್ನು ಕಲಿತಿರುತ್ತಾನೆ. ಅದು ಕೃಷಿಯಿಂದ ಬಂದ ಪೈರಾಗಲಿ ಅಥವಾ ವಾಸಸ್ಥಳವನ್ನು ನಿರ್ಮಿಸಿಕೊಳ್ಳಲು ಕಲ್ಲು ಬಂಡೆಗಳಾಗಲಿ ಎಲ್ಲವನ್ನೂ ಮಾನವ ತನ್ನ ಬೆನ್ನ ಮೇಲೆ ಹೊತ್ತು ಸಾಗಬೇಕಿತ್ತು. ಹೆಚ್ಚೆಂದರೆ ದನಕರುಗಳ ಮುಖೇನ ಕೆಲಸವನ್ನು ಮಾಡಿಕೊಳ್ಳುತ್ತಿದ್ದ. ಹಾಗಾಗಿ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದು ಶಕ್ತಿ ಹಾಗು ಸಮಯ ವ್ಯರ್ಥ ಕೆಲಸವಾಗಿದ್ದಿತ್ತು. ಚಕ್ರದ ಅನ್ವೇಷಣೆ ಈ ಎಲ್ಲ ಕೆಲಸವನ್ನು ಸರಾಗವಾಗಿಸಿತು. ವಸ್ತುಗಳನ್ನು ಸಾಗಿಸುವಾಗ ಎದಿರಾಗುತ್ತಿದ್ದ ಎಲ್ಲ ಸವಾಲುಗಳಿಗೂ ಪರಿಹಾರವನ್ನು ಒದಗಿಸಿತು. ವಸ್ತುಗಳನ್ನು ಹೊತ್ತೋಯ್ಯುವ ಗಾಡಿಗಳು ಶುರುವಾಯಿತು. ನಾಗರಿಕತೆಯ ಭದ್ರ ಆಡಿಪಾಯವಾಯಿತು. ಚಕ್ರದ ವಿನಃ ಪ್ರಸ್ತುತ ಜಗತ್ತನ್ನು ಊಹಿಸಿಕೊಳ್ಳಲೂ ಸಾಧ್ಯವಾಗದು. ಚಕ್ರದ ಅನ್ವೇಷಕ ಯಾರೆಂದು ನಮಗೆ ತಿಳಿಯದಿರಬಹುದು ಆದರೆ ಆತನ ಅಂದಿನ ಆ ಸಂಶೋಧನೆಗೆ ಇಂದಿನ ನಾವೆಲ್ಲರೂ ತಲೆಬಾಗಲೇಬೇಕು.



5.ಮುದ್ರಣಾಲಯ (Printing Press) :

ನಾಗರಿಕತೆಯ ಹಾದಿಯಲ್ಲಿ ಮಾನವ ಬರಹವನ್ನು ಕಲಿತು ಅದನ್ನು ಹಾಳೆಗಳ ಮೇಲೆ ಮೂಡಿಸುವುದ ಅರಿತ. ಹಲವಾರು ಹಾಳೆಗಳನ್ನು ಜೋಡಿಸಿ ಪುಸ್ತಕವೆಂಬ ಮಹಾ ಚೈತನ್ಯವನ್ನು ಹುಟ್ಟು ಹಾಕಿದ. ಇಂದು ನಾವುಗಳು ಇತಿಹಾಸವನ್ನು ಕೊಂಚ ಸರಾಗವಾಗಿ ಅರಿಯಬಲ್ಲೆರೆಂದರೆ ಅದು ಪುಸ್ತಕಗಳ ಜಾದು ಎನ್ನಬಹುದು. ಸರಿ ಸುಮಾರು ಹದಿನೈದನೆಯ ಶತಮಾನದ ಮಧ್ಯದವರೆಗೂ ಪುಸ್ತಕಗಳು ಮಾನವನ ಕೈಯ ಬರವಣಿಗೆಯಲ್ಲೇ ಮೂಡುತ್ತಿದ್ದವು. ೧೪೪೮ ರಲ್ಲಿ ಜೋಹಾನ್ಸ್ ಗುಟೆನ್ಬರ್ಗ್ ಎಂಬಾತ ಜೆರ್ಮನಿಯಲ್ಲಿ ಪ್ರಿಂಟಿಂಗ್ ಪ್ರೆಸ್ ಯಂತ್ರವನ್ನು ಸಂಶೋದಿಸುತ್ತಾನೆ. ಆತನ ಈ ಸಂಶೋಧನೆ ಮುದ್ರಣಾಲಯದ ಒಂದು ಹೊಸ ಲೋಕವನ್ನೇ ಸೃಷ್ಟಿಸುತ್ತದೆ. ಅದು ಹಲವು ಬಗೆಯ ಧಾರ್ಮಿಕ ಪುಸ್ತಕಗಳಾಗಲಿ ಅಥವಾ ಯಾರೊಬ್ಬ ವ್ಯಕ್ತಿಯ ವಯ್ಯಕ್ತಿಕ ವಿಚಾರವಾಗಿರಲಿ ಅಥವಾ ಒಂದು ಕಾರ್ಯಕ್ರಮದ ಕಿರುಹೊತ್ತಿಗೆಯಾಗಿರಲಿ(ಪಾಂಪ್ಲೆಟ್) ಅವುಗಳನ್ನೆಲಾ ಸಾವಿರಾರು ಜನರಿಗೆ ಕನಿಷ್ಠ ಸಮಯದಲ್ಲಿ ಅಚ್ಚುಕಟ್ಟಾಗಿ ಮುದ್ರಿಸಿ ವಿತರಿಸಬಲ್ಲ ಯಂತ್ರವನ್ನು ಹುಟ್ಟು ಹಾಕಿದ ಶ್ರೇಯ ಜೋಹಾನ್ಸ್ ಗುಟೆನ್ಬರ್ಗ್ನಿಗೆ ಸೇರುತ್ತದೆ. ದಿನಪತ್ರಿಕೆ, ಮ್ಯಾಗಜಿನ್ ಹಾಗು ಇಂದಿನ ದೃಶ್ಯ ಮಾಧ್ಯಮಗಳ ಉಗಮಕ್ಕೂ ಒಂದು ನಿಟ್ಟಿನಲ್ಲಿ ಮುದ್ರಣಾಲಯದ ಅವಿಷ್ಕಾರವೇ ಕಾರಣವೆಂದರೆ ಸುಳ್ಳಾಗದು.



6.ಸ್ಟೀಮ್ ಎಂಜಿನ್ :

ಕೈಗಾರೀಕರಣದ ಹರಿಕಾರಕವೆಂದೇ ಕರೆಯಲ್ಪಡುವ ಸ್ಟೀಮ್ ಎಂಜಿನ್/ಉಗಿಯಂತ್ರ ದ ಸಂಶೋಧನೆಯ ಕೀರ್ತಿ ಇಂಗ್ಲೆಂಡಿನ ಸಂಶೋದಕರಾಗಿದ್ದ ಎಡ್ವರ್ಡ್ ಸೊಮರ್ಸೆಟ್ ಹಾಗು ಥಾಮಸ್ ಸಾರ್ವೆಯವರಿಗೆ ಸಲ್ಲುತ್ತದೆ. ಶಾಖ ಶಕ್ತಿಯಿಂದ ಯಾಂತ್ರಿಕ ಶಕ್ತಿಯನ್ನು ಸೃಷ್ಟಿಸಬಲ್ಲ ಈ ಹೊಸ ಆವಿಷ್ಕಾರ ಜಗತ್ತಿನ ಬೆಳವಣಿಗೆಯ ದಿಕ್ಕನೇ ಬದಲಾಯಿಸಿತು. ಮೊದಲು ಗಣಿಗಳಲ್ಲಿ ಅಡಗಿರುವ ನೀರನ್ನು ಹೊರ ಹಾಕಲು ಬಳಕೆಯಾದ ಎಂಜಿನ್ ಮುಂದೆ ಜಗತ್ತನೇ ಜೋಡಿಸಬಲ್ಲ ಕಾರು, ರೈಲು, ವಿಮಾನ ಅಲ್ಲದೆ ಭಾಗಶಃ ಕಾರ್ಖಾನೆಗಳ ಹುಟ್ಟಿಗೂ ಕಾರಣವಾಯಿತು. ಎಂಜಿನ್ಗಳ ಆವಿಷ್ಕಾರವೇನಾದರೂ ಆಗದೆ ಹೋಗಿದ್ದರೆ ಅಥವಾ ಕೊಂಚ ವಿಳಂಬವಾಗಿದ್ದರೂ ಸಹ ನಮ್ಮ ಇಂದಿನ ಬೆಳವಣಿಗೆಯ ದಿಶೆ ಯಾವ ಹಾದಿಯಲ್ಲಿ ಸಾಗಿರುತ್ತಿತ್ತು ಎಂಬುದ ಊಹಿಸಲಾಗದು. ಅಂದು ಎಂಜಿನ್ನ ಆವಿಷ್ಕಾರವಾಗದಿದ್ದರೆ ಸೈಕಲ್ಲೋ, ಎತ್ತಿನ ಬಂಡಿಗಳೋ ಅಥವಾ ಕುದುರೆ ಗಾಡಿಗಳೋ ಇಂದಿಗೂ ಚಲನೆಯ ಮೂಲವಾಗಿರುತ್ತಿದ್ದವು.



7.ಲಸಿಕೆ (ವ್ಯಾಕ್ಸಿನೇಷನ್) :

ಯಾವುದೇ ಒಂದು ಕಾಯಿಲೆ ಬಾರದ ಹಾಗೆ ಆ ರೋಗಾಣುವಿನ ವಿರುದ್ಧ ಹೋರಾಡಲು ಜೀವಿಯ ದೇಹವನ್ನು ಪೂರ್ವಭಾವಿಯಾಗಿ ಸಜ್ಜಾಗಿಸುವ ಪ್ರಕ್ರಿಯೆಯನ್ನು ವ್ಯಾಕ್ಸಿನೇಷನ್ ಎನ್ನಬಹುದು. ಸಿಡುಬು ಜಗತ್ತನ್ನು ಕಾಡಿದ ಅತ್ಯಂತ ಕ್ರೂರ ಕಾಯಿಲೆ. ಸಿಡುಬು ಬಂತೆಂದರೆ ಸಾವು ಖಚಿತವೆಂದು ಭಾವಿಸಲಾಗುತ್ತಿತ್ತು. ಊರಿಗೆ ಊರೇ ಪಲಾಯನವಾಗಬೇಕಿತ್ತು! ಕ್ರಿ.ಶ 1876ರ ವರೆಗೂ ಕೋಟ್ಯಾನುಕೋಟಿ ಜನರು ಮಾರಣಾಂತಿಕ ಸಿಡುಬಿಗೆ ಬಲಿಯಾದರು. ಶತಕಗಳು ಕಳೆದರೂ ಮಾನವ ಸಿಡುಬೆಂಬ ದೈತ್ಯಕ್ಕೆ ಔಷದಿಯನ್ನು ಕಂಡುಹಿಡಿಯಲಾಗಲಿಲ್ಲ.
ಎಡ್ವರ್ಡ್ ಜೆನ್ನರ್. ಶಾಲೆಗಳ ಪಠ್ಯಪುಸ್ತಕಗಳಲ್ಲಿ ಒಮ್ಮೆಯಾದರೂ ಈತನ ಹೆಸರನ್ನು ಕೇಳಿರುತ್ತೇವೆ. 'ಫಾದರ್ ಆಫ್ ವ್ಯಾಕ್ಸಿನೇಷನ್' ಎಂಬ ಅನ್ವರ್ಥ ನಾಮದ ಮೂಲಕ. ಜಗತ್ತೇ ಸಿಡುಬಿನ ವೈರಾಣುವನ್ನು ಕೊಲ್ಲಲು ವಿವಿಧ ಬಗೆಗಳನ್ನು ಪ್ರಯತ್ನಿಸಿ ಕೈಕಟ್ಟಿ ಕುಳಿತಾಗ ಎಡ್ವರ್ಡ್ ಜೆನ್ನರ್ 'ಥಿಂಕ್ ಔಟ್ ಆಫ್ ದಿ ಬಾಕ್ಸ್' ಎಂಬುವಂತೆ ಒಂದು ವೈರಾಣುವಿನ ವಿರುದ್ಧ ಮತ್ತೊಂದು ವೈರಾಣುವನ್ನು ಬಳಸಿ ಅದು ಬಾರದೆ ಇರುವ ಹಾಗೆ ತಡೆಗಟ್ಟುವ ಒಂದು ಹೊಸ ಬಗೆಯನ್ನೇ ಆವಿಷ್ಕರಿಸಿದ! ಸಿಡುಬಿಗೆ ಈ ಬಗೆಯನ್ನು ಪರೀಕ್ಷೆ ಮಾಡಿ ಯಶಸ್ವೀಯೂ ಆದ. ಜಗತ್ತನೇ ಸಿಡುಬೆಂಬ ಮಾರಣಾಂತಿಕ ಕಾಯಿಲೆಯಿಂದ ರಕ್ಷಿಸಿದ. ಜೆನ್ನರ್ ನ ಆವಿಷ್ಕಾರ ಮುಂದಿನ ಹಲವಾರು ಲಸಿಕೆಗಳ ಉಗಮಕ್ಕೆ ಕಾರಣವಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಹೊಸ ಕ್ರಾಂತಿಯೇ ಆಯಿತು.



8. ದೂರವಾಣಿ :

ದೂರವಾಣಿ ಅಥವಾ ಟೆಲಿಫೋನ ಆವಿಷ್ಕಾರದ ಮೊದಲು ದೂರ ದೂರದ ಸ್ಥಳಗಳಿಗೆ ಅತಿ ಕಡಿಮೆ ಅವಧಿಯಲ್ಲಿ ಸಂದೇಶವನ್ನು ರವಾನಿಸಲು ಇದ್ದ ವ್ಯವಸ್ಥೆ ಟೆಲಿಗ್ರಾಫ್ ಅಥವಾ ಅಂಚೆತಂತಿ. ಟೆಲಿಗ್ರಾಪ್ನಲ್ಲಿ ಕಳುಹಿಸಲಾಗುತಿದ್ದ ಸಂದೇಶ ಕೇವಲ ಸಂಕೇತದ ರೂಪವಾಗಿರುತ್ತಿದ್ದವು. ಅಂತಹ ಕಾಲದಲ್ಲಿ ಮಾನವ ಮಾತನಾಡುವ ಸಾಮಾನ್ಯ ಪದಗಳನ್ನೇ ಒಂದು ತಂತಿಯ ಮುಖೇನ ಏತಾವತ್ತಾಗಿ ದೂರ ದೂರದ ಜಾಗಕ್ಕೆ ರವಾನಿಸಬಲ್ಲನಾದನೆಂದರೆ ಅದು ನಂಬಲಸಾಧ್ಯವಾಗಿತ್ತು. ಹೀಗೆ ದೂರವಾಣಿಯ ಆವಿಷ್ಕಾರ ದೂರಸಂಪರ್ಕ ಕ್ಷೇತ್ರದಲ್ಲಿ ಒಂದು ಕ್ರಾಂತಿಯನ್ನೇ ಮೂಡಿಸಿತು. ಹಲವಾರು ವಿಜ್ಞಾನಿಗಳ ಸಂಶೋಧನೆಯ ಬಳಿಕ ಟೆಲಿಫೋನ್ ನ ಪೇಟೆಂಟ್ 1876 ರಲ್ಲಿ ವಿಜ್ಞಾನಿ ಅಲೆಕ್ಸಾಂಡರ್ ಗ್ರಹಾಂ ಬೆಲ್ ನ ಪಾಲಾಗುತ್ತದೆ. ಇಂದು ನಾವು ಕಾಣುವ ಮೊಬೈಲ್ ಫೋನ್, ಟೆಲಿವಿಷನ್ ಹಾಗು ಇನ್ನು ಹಲವು ತಂತ್ರಜ್ಞಾನಗಳು ದೂರವಾಣಿಯ ಉಪ ಉತ್ಪನ್ನಗಳೇ ಬಿಟ್ಟರೆ ಅವುಗಳು ಹೊಸ ಆವಿಷ್ಕಾರಗಳೆಂದು ಕರೆಸಿಕೊಳ್ಳುವುದಿಲ್ಲ





9. ವಿದ್ಯುತ್ :

ನಮ್ಮ ದೈನಂದಿನ ಜೀವನದ ಅದಷ್ಟೂಇಲೆಕ್ಟ್ರಾನಿಕ್ ವಸ್ತುಗಳಿಗೆ ವಿದ್ಯುತ್ತೇ ಜೀವ. ವಿದ್ಯುತ್ನ ವಿನಃ ಮಾನವನ ಉಪಯೋಗದ ಅಷ್ಟೆಲ್ಲಾ ವಸ್ತುಗಳು ಸತ್ತು ಬಿದ್ದ ಕಟ್ಟಿಗೆಯಾಗುತ್ತವೆ. ವಿದ್ಯುತ್ತು ನೈಸರ್ಗಿಕವಾಗೇ ಸಿಗುತ್ತಿದ್ದರೂ ಮಾನವನ ಅರಿವಿಗೆ ಬರಲು ಶುರುವಾಗಿದ್ದು ಸುಮಾರು ಹದಿನೆಂಟನೆಯ ಶತಮಾನದ ಆಸುಪಾಸಿನಲ್ಲಿ. ಬೆಂಜಮಿನ್ ಫ್ರಾಂಕ್ಲಿನ್ ನಿಂದಿಡಿದು ನಿಕೋಲಸ್ ಟೆಸ್ಲಾರ ವರೆಗೂ ನೆಡೆದ ವಿವಿಧ ಬಗೆಯ ಪ್ರಯೋಗದ ಮೂಲಕ ವಿದ್ಯುತ್ತ್ ಜನರ ಮನೆಮಾತಾಯಿತು. ಆದರೆ ವಿದುತ್ಥ್ನ ವ್ಯಾಪಕ ಬಳಕೆ ಸಾಧ್ಯವಾದದ್ದು ಥಾಮಸ್ ಎಡಿಸನ್ ನ ವಿದ್ಯುತ್ ಬಲ್ಬ್ ನ ಆವಿಷ್ಕಾರದ ಮೂಲಕ. ವಿದ್ಯುತ್ತ್ ಬಲ್ಬ್ಗಳು ಜನರ ಜೀವನದ ಅಂಗಗಳಾದವು. ಶತಮಾನಗಳ ಅಂಧಕಾರವನ್ನು ಕ್ಷಣಮಾತ್ರದಲ್ಲಿ ಹೋಗಲಾಡಿಸಿದವು. ವಿದ್ಯುತ್ತ್ ಇಂದು ಮಾನವನ ಒಂದು ಮೂಲಭೂತ ಅವಶ್ಯಕತೆಗಳಲ್ಲೊಂದಾಗಿದೆ.



10. ಕಂಪ್ಯೂಟರ್ ಹಾಗು ಇಂಟರ್ನೆಟ್ :

ಆಧುನಿಕ ಜಗತ್ತಿನ ದಿ ಗ್ರೇಟೆಸ್ಟ್ ಆವಿಷ್ಕಾರಗಳಲ್ಲಿ ಕಂಪ್ಯೂಟರ್ ಹಾಗು ಇಂಟರ್ನೆಟ್ ಗಳು ಮಹತ್ತರವಾದವು. ಕೆಲವೇ ದಶಕಗಳ ಹಿಂದಷ್ಟೇ ಸಂಶೋದಿಸಲ್ಪಟ್ಟ ಇವುಗಳು ಆಧುನಿಕ ಮಾನವನ ಅವಿಬಾಜ್ಯ ಅಂಗಗಳಾಗುತ್ತಾವೆಂದು ಯಾರು ಸಹ ಭಾವಿಸಿರಲಿಲ್ಲ. ಇಂದು ಜೋತಿಷ್ಯಾತ್ರದಿಂದಿಡಿದು ವಧು-ವರರು ಮದುವೆಯಾಗುವವರೆಗೂ ಇವುಗಳು ಎಲ್ಲರ ಬೇಡಿಕೆಯಾಗಿವೆ ಎಂದರೆ ಇವುಗಳ ಅವಶ್ಯಕತೆ ನಮಗೆ ಎಷ್ಟಿದೆ ಎಂದು ಊಹಿಸಬಹುದು. ಜಗತ್ತು ವಿಜ್ಞಾನ, ತಂತಜ್ಞಾನ, ವೈದ್ಯಕೀಯ, ಕೃಷಿ, ಶಿಕ್ಷಣ ಹಾಗು ಇನ್ನು ಹಲವು ಕ್ಷೇತ್ರಗಳಲ್ಲಿ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಂಡಿದೆ ಎಂದರೆ ಅದಕ್ಕೆ ಕಂಪ್ಯೂಟರ್ ಹಾಗು ಇಂಟರ್ನೆಟ್ ಗಳ ಕೊಡುಗೆ ಅಪಾರವಾದದ್ದು. ಕಂಪ್ಯೂಟರ್ ನ ಆವಿಷ್ಕರಿಸಿದ ಶ್ರೇಯ ಚಾರ್ಲ್ಸ್ ಬ್ಯಾಬೇಜ್ನದಾದರೆ ಇಂಟರ್ನೆಟ್ ಹಲವಾರು ಸಂಶೋಧಕರ ಫಲ. ವಿನ್ಟ್ ಸರ್ಫ್ ಹಾಗು ರಾಬರ್ಟ್ E ಖಾಹ್ನ್ ರ ಕೆಲಸವನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕು.




ಹೀಗೆ ಗಿಡಮರಗಳಲ್ಲಿ ವಾಸಿಸುತ್ತಿದ್ದ ಪ್ರ್ರಾಣಿಯೊಂದು ಮಾನವನಾಗಿ, ನಾಗರೀಕನಾಗಿ, ವೈಜ್ಞಾನಿಕನಾಗಿ ಹಾಗು ಮುಂದೊಂದು ದಿನ ಯಾಂತ್ರಿಕನಾದರೂ ಅವುಗಳಿಗೆಲ್ಲ ಇಂತಹ ಪಾತ್ ಬ್ರೇಕಿಂಗ್ ಅನ್ವೇಷಣೆ ಹಾಗು ಸಂಶೋಧನೆಗಳೇ ಕಾರಣವಾದವು ಎನ್ನಬಹುದು. ಅದು ಗೆಲಿಲಿಯೋನ ಅಭಿವೃದ್ಧಿ ಪಡಿಸಿದ ದೂರದರ್ಶಕವಾಗಲಿ ಅಥವಾ ರೈಟ್ ಸಹೋದರರ ವಿಮಾನವಾಗಲಿ ಅಥವಾ ಪೆನಿಸಿಲಿನ್ ಪ್ರತಿಜೀವಕವನ್ನು (Antibiotic) ಕಂಡು ಹಿಡಿದು ವೈದ್ಯಕೀಯ ಕ್ಷೇತ್ರವನ್ನೇ ಪುಳಕಗೊಳಿಸಿದ ಅಲೆಕ್ಸಾನ್ದಾರ್ ಪ್ಲೇಮಿಗ್ ನ ಅವಿಷ್ಕಾರವಾಗಲಿ ಅಥವಾ ರೆಫ್ರಿಜಿರೇಟರ್, ಕ್ಯಾಮೆರಾ, ಮೊಬೈಲ್ ಫೋನುಗಳಾಗಲಿ ಹೀಗೆ ಸಾಲು ಸಾಲು ಆವಿಷ್ಕಾರಗಳು ನಮ್ಮ ಇಂದಿನ ಬದುಕನ್ನು ರೂಪಿಸಿವೆ. ಆದರೆ 'ಗಡಿಯಾರ ಚಿನ್ನದಾದರೂ ಸಮಯವನ್ನು ಹಿಡಿಯಲಾಗದು' ಎಂಬಂತೆ ಇತ್ತೀಚಿನ ಆವಿಷ್ಕಾರಗಳು ಹೆಚ್ಚಾಗಿ ಕೇವಲ ಮೂಲ ವಸ್ತುವಿಗೆ ಬಣ್ಣ ಲೇಪಿಸಿದಂತೆ ಆಗುತ್ತಿದೆ. ಒಂದು ಮೊಬೈಲ್ ಫೋನನ್ನು ‘ಅಭಿವೃದ್ಧಿ’ ಪಡಿಸಿದಾಗ ನಾವುಗಳು ತೋರುವ ಸಂತಸ ಒಂದು ಹೊಸ ತಳಿಯ ಭತ್ತವನ್ನು ‘ಆವಿಷ್ಕರಿಸಿದಾಗ’ ತೋರದಿರುವುದು ಖೇದನೀಯ. ಈ ನಿಟ್ಟಿನಲ್ಲಿ ನಮ್ಮ ಪೂರ್ವಜರ ಇಂತಹ ಅಭೂತಪೂರ್ವ ಸಂಶೋಧನೆ ಹಾಗು ಆವಿಷ್ಕಾರಗಳಿಂದ ಪ್ರೇರಿತರಾಗಿ ಇಂತಹದೇ ಹಲವನ್ನು ಮುಂದಿನ ದಿನಗಳಲ್ಲಿ ತರಲು ನಾವೆಲ್ಲರೂ ಶಕ್ತರಾಗಬೇಕು. ಯುಕ್ತರಾಗಬೇಕು.

Friday, October 28, 2016

ಅಳುತ್ತಾ ಬಂದಳು…ಅಳುತ್ತಲೇ ಹೋದಳು…ಈಕೆ ನಟನ ಜಗತ್ತಿನ ಶಿರೋಮಣಿ!


Chand tanha hai asman tanha

Dil mila hai kahan kahan tanha

Bujh gai aas chup gaya tara

Thartharata raha dhuan tanha


ಸುಂದರ ಚಂದಿರ, ಶಾಂತ ಅಂಬರ, ಜೊತೆಗೆ ಪ್ರೀತಿಸುವ ಹೃದಯ. ಇವಿಷ್ಟೂ ಇದ್ದರೂ ಒಂಟಿತನವನ್ನು ಕಾಣುವ ಮನ.

ಬೆಳದಿಂಗಳ ಶಾಂತ ರಾತ್ರಿಯಲ್ಲಿ ಅಗಣ್ಯ ತಾರಾರಾಶಿಗಳ ನಡುವೆ ಸವಿ ಮಧುರ ಸ್ವರದಲ್ಲಿ ಹಾಡಿರುವ ಈ ಹಾಡನ್ನು ಕೇಳುತ್ತಾ ಕುಳಿತರೆ ಬೆನ್ನತ್ತಿದ ಏಕಾಂತವನ್ನೂ ಶೃಂಗಾರ ಕಾವ್ಯವನ್ನಾಗಿ ಬಣ್ಣಿಸಿರುವ ಚಿತ್ರಣ ತಿಳಿಯುತ್ತದೆ. ವರ್ಣಿಸಿರುವ ಪ್ರತಿ ಸಾಲಿನಲ್ಲೂ ಏಕಾಂತ, ಹಾಡಿರುವ ಪ್ರತಿ ಪದಗಳಲ್ಲೂ ವೇದನೆ. ಇಂತಹ ಹಲವಾರು ಕವಿತೆಗಳನ್ನು ಬರೆದು ಹಾಡಿರುವವರು ನಾಯಕ ನಟಿ, ಕವಿಯತ್ರಿ, ಹಾಡುಗಾರ್ತಿ, ನೃತ್ಯಗಾರ್ತಿ ಹಾಗು ಹಿಂದಿ ಚಿತ್ರರಂಗದ ದಂತಕಥೆ, ಟ್ರಾಜಿಡಿ ಕ್ವೀನ್, ಮ್ಹಜಾಮೀನ್ ಬಾನು ಉರ್ಫ್ ಮೀನಾ ಕುಮಾರಿ. 'ನಾಜ್' ಎಂಬ ಕಾವ್ಯನಾಮದೊಂದಿಗೆ ಇಂತಹ ಹಲವಾರು ಕವಿತೆಗಳನ್ನು ಬರೆದು ಹಾಡಿರುವ ಮ್ಹಜಾಮೀನ್ ಬಾನು ಪರದೆಯ ಹಿಂದೂ ಹಾಗು ಪರದೆಯ ಮುಂದೂ ಕಂಡ ತನ್ನ ನೋವಿನ ಸಂಘರ್ಷಣೆಯನ್ನು ಕವಿತೆಗಳಲ್ಲಿ ಸೊಗಸಾಗಿ ಬಣ್ಣಿಸಿದ್ದಾರೆ. ಚಿತ್ರಪ್ರಿಯರ ಹೃದಯಗಳಲ್ಲಿ ಇಂದಿಗೂ ಚಿರಸ್ತಾಯಿಯಾಗಿದ್ದಾರೆ.

ಆಗಸ್ಟ್ 1, 1933 ರಲ್ಲಿ ಅಲಿ ಬಕ್ಸ್ ಹಾಗು ಇಕ್ಬಲ್ ಬೇಗಮ್ ಬಡ ದಂಪತಿಗೆ ಜನಿಸಿದ ಮೀನಾ ,ಬಾಲ್ಯದಿಂದಲೇ ಕಷ್ಟದ ಸರಮಾಲೆಯ ಜೊತೆಗೆ ಬೆಳೆದಳು. ನಾಟಕ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿ ಕಷ್ಟದಿಂದ ಜೀವನ ಸಾಗಿಸುತ್ತಿದ್ದ ತಂದೆ ಅಲಿ ಬಕ್ಸ್ ಗಂಡು ಮಗುವೊಂದನ್ನು ಅಪೇಕ್ಷಿಸಿದ್ದರು. ಮೀನಾಳ ಜನನ ತಂದೆಗೆ ಅದೆಷ್ಟು ನೋವುಂಟು ಮಾಡಿತ್ತೆಂದರೆ ಕೆಲ ಸಮಯದ ಕಾಲ ಅನಾಥಾಲಯದ ಬಳಿ ಮಗುವನ್ನು ಬಿಟ್ಟು ಹೋದರು. ಆತ್ಮಸಾಕ್ಷಿಯ ಕರೆಗೆ ಕರಗಿದ ತಂದೆ ಪುನಃ ಹಿಂದಕ್ಕೆ ಬಂದು ಅಳುತಿದ್ದ ಮಗಳನ್ನು ಎತ್ತಿಕೊಳ್ಳಲು ಹೋದರೆ ಮಗುವಿನ ಮೈಯ ಮೇಲೆಲ್ಲಾ ಇರುವೆಗಳು ತುಂಬಿಕೊಂಡಿರುತ್ತವೆ! ಹೀಗೆ ಹುಟ್ಟಿಸಿದ ತಂದೆಗೆ ಬೇಕು-ಬೇಡವಾದ ಮೀನಾ ತನ್ನ ಬಾಲ್ಯದಲ್ಲೇ ನಾಟಕ ಶಾಲೆಗೆ ದುಡಿಯಲು ಹೋಗಬೇಕಾಗುತ್ತದೆ. ಗಂಡನ್ನು ಅಪೇಕ್ಷಿಸಿದ್ದ ಅಪ್ಪ ಆಕೆಯನ್ನು ಒಬ್ಬ ಹೆಣ್ಣು ಎಂಬುದನ್ನೇ ಮರೆಯುತ್ತಾರೆ. ಇತರ ಮಕ್ಕಳೆಲ್ಲ ಶಾಲೆಗೆ ಹೊಗುವುದ ಕಂಡು ತಾನು ಓದಬೇಕೆಂದು ಪುಟಾಣಿ ಮೀನಾ ಅತ್ತರೆ ಆಕೆಯನ್ನು ನಾಟಕ ಸಂಸ್ಥೆಯಲ್ಲಿ ಕೆಲಸ ಮಾಡೆಂದು ತಂದು ನಿಲ್ಲಿಸುತ್ತಿದ್ದರು ಅಪ್ಪ. ಹೀಗೆ ಬಾಲ್ಯದಿಂದಲೇ ಮೀನಾಳಿಗೆ ನಾಟಕ ಹಾಗು ಚಿತ್ರಗಳ ನಂಟು ಹತ್ತುತ್ತದೆ.

ಮ್ಹಜಾಮೀನ್ ಬಾನುವಿನಿಂದ ಬೇಬಿ ಮೀನಾಳಾಗಿ, ತನ್ನ ಹದಿನಾಲ್ಕನೇ ವಯಸ್ಸಿಗೆ 1946 ರಲ್ಲಿ 'ಬಚ್ಚೋ ಕ ಖೇಲ್' ಎನ್ನುವ ಚಿತ್ರ ದಲ್ಲಿ ಮೀನಾ ಕುಮಾರಿ ಎಂಬ ಹೆಸರಿನೊಟ್ಟಿಗೆ ನಾಯಕ ನಟಿಯಾಗಿ ತೆರೆಯ ಮೇಲೆ ಮೂಡುತ್ತಾಳೆ. ಮುಂದೆ ನಡೆಯುವುದೆಲ್ಲ ಅಮೋಘ ಇತಿಹಾಸ. ನಟನೆಯನ್ನು ಅದೆಷ್ಟು ಕರಗತ ಮಾಡಿಕೊಳ್ಳುತ್ತಾಳೆಂದರೆ ಅಂದಿನ ದಿನಗಳ ಹೆಣ್ಣಿನ ಬವಣೆಯ ನಾನಾ ಮುಖಗಳನ್ನು, ಆಕೆಯ ನೂರಾರು ಭಾವನೆಗಳನ್ನು ನೋಡುಗರ ಮನ ಮುಟ್ಟುವಂತೆ, ನೋಡುಗ ಕಣ್ಣು ಮಿಟುಕಿಸದಂತೆ ನಟಿಸುತ್ತಾಳೆ. ದೇಶದ ಮನೆಮಾತಾಗುತ್ತಾಳೆ. ಹೀಗೆ ತೊಂಬತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಮೀನಾ ನಾಲ್ಕು ಬಾರಿ ಫಿಲಂ ಫೆರ್ ನ ಅತ್ತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿರುವುದಲ್ಲದೆ ಎಂಟು ಬಾರಿ ನಾಮನಿರ್ದೇಶನಗೊಂಡಿರುತ್ತಾಳೆ! ಫಿಲಂ ಫೆರ್ ನ ಮೊದಲ ಅತ್ಯುತ್ತಮ ನಟಿ ಪ್ರಶಸ್ತಿ ಕೂಡ ಮೀನಾ ಕುಮಾರಿಯದೆ ಆಗಿದೆ.

ಚಿತ್ರರಂಗಕ್ಕೆ ಬಂದು ದೇಶದಲ್ಲೇಲ ಪ್ರಸಿದ್ದಿ ಪಡೆದಿದ್ದರೂ ಮನೆಯ ಗೋಳೇನು ಈಕೆಗೆ ತೀರಲಿಲ್ಲ. ಅಪ್ಪನಿಗೆ ಇವಳು ನೋಟನ್ನು ಸುರಿಯುವ ಯಂತ್ರದಂತಾಗುತ್ತಾಳೆ. ಚಿತ್ರಗಳ ಆಯ್ಕೆ, ಸಂಭಾವನೆ ಎಲ್ಲವೂ ಅಪ್ಪನ ಆಯ್ಕೆ. ಈಕೆ ಏನಿದ್ದರೂ ಕ್ಯಾಮರಾದ ಮುಂದೆ ತನ್ನ ಮುಗ್ದ ಮುಖವನ್ನು ತಂದು ನಟಿಸಿ ಪುನ್ಹ ಸಂಜೆ ಮನೆಯನ್ನು ಸೇರಬಕು. ಆದ ಕಾರಣಕ್ಕೆ ಈಕೆಯನ್ನು ಏಕಾಂತ ಸದಾ ಕಾಡಿತು. ರವೀಂದ್ರನಾಥ ಠಾಗೂರರ ವಂಶಸ್ಥಳಾಗಿದ್ದರಿಂದಲೋ (ಮೀನಾಳ ಅಜ್ಜಿ ರವೀಂದ್ರನಾಥ ಠಾಗೂರರ ತಮ್ಮನ ಮಗಳು) ಏನೋ ನಟನೆಯ ಜೊತೆ-ಜೊತೆಗೆ ಬರಹಗಳಲ್ಲೂ ಮೀನಾ ಕುಮಾರಿಗೆ ಆಸಕ್ತಿ ಮೂಡುತ್ತದೆ. ತನ್ನ ನೋವು ಸಂಕಟವನ್ನೆಲ್ಲ ಬರೆದಿಡುವ ಬಯಕೆ ಮೂಡುತ್ತದೆ. ಆದರೆ ತನ್ನ ಜೀವನದಲ್ಲಿ ಒಮ್ಮೆಯೂ ಶಾಲೆಯ ಹಾದಿ ಕಾಣದ ಮೀನಾ ಬರೆಯುವುದೇಗೆ? ಯಾರೊಟ್ಟಿಗೂ ಹಂಚಿಕೊಳ್ಳಲಾಗದ ಸಾವಿರ ಭಾವಗಳು ಕಣ್ಣ ಅಂಚಿನಲ್ಲಿ ಬಂದು, ಕರಗಿ ಜಾರಿ ಹೋಗುವ ಮುನ್ನ ಹಿಡಿದು ಕೂರಿಸಬೇಕು. ಬರೆಯಬೇಕು. ದೃತಿ ಗೆಡುವುದಿಲ್ಲ. ಮನೆಯಲ್ಲೇ ಉರ್ದು ಪಾಠವನ್ನು ಹೇಳಿಸಿಕೊಳ್ಳುತ್ತಾಳೆ. ಕಲಿತ ಚೂರು ಪಾರು ಪದಗಳಲ್ಲೇ ಬರಹವನ್ನು ಶುರುಮಾಡುತ್ತಾಳೆ.

ಏತನ್ಮದ್ಯೆ ಚಿತ್ರನಿರ್ದೇಶಕ ಕಮಲ್ ಆರೋಹಿಯೊಟ್ಟಿಗೆ ಪ್ರೇಮಾಂಕುರವಾಗಿ ಮನೆಯವರ ತೀವ್ರ ವಿರೋಧದ ನಡುವೆಯೂ ಅವರನ್ನು ವರಿಸುತ್ತಾಳೆ. ಕೆಲ ವರ್ಷಗಳ ಕಾಲ ತನ್ನ ಜೀವನದ ಸುಮಧುರ ದಿನಗಳನ್ನು (ಇವೆಷ್ಟೇ ದಿನಗಳು ಮಾತ್ರ ಆಕೆಯ ನೆಮ್ಮದಿಯ ದಿನಗಳೆನ್ನಬಹುದು) ಪತಿಯೊಟ್ಟಿಗೆ ಕಳೆಯುತ್ತಾಳೆ. ಎಲ್ಲವೂ ಸಾಂಗಾವಾಗಿ, ನೆಮ್ಮದಿಯಿಂದ ನಡೆಯುತ್ತಿದೆ ಅನ್ನುವಾಗಲೇ ಎಲ್ಲ ಸಂಸಾರದಂತೆ ಇಲ್ಲೂ ಬಿರುಕು-ಕೊರಕುಗಳು ಮೂಡುತ್ತವೆ. ತುಂಬ ಭಾವಜೀವಿಯಾಗಿದ್ದ ಮೀನಾ ನೊಂದು ಪತಿಯಿಂದ ದೂರವಾಗುತ್ತಾಳೆ. ಆದರೆ ವಿಚ್ಛೇದನವನ್ನು ಬಯಸುವುದಿಲ್ಲ! ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಪತಿಯಿಂದ ದೂರದ ಮೀನಾ ಮತ್ತೊಮ್ಮೆ ಏಕಾಂತದ ಕೂಪಕ್ಕೆ ಬೀಳುತ್ತಾಳೆ. ಮುಂದೆದೂ ಏಳದ ರೀತಿ. ಆಗಲೇ ಇಂತಹ ಹಲವಾರು ಕತೆ, ಕವನಗಳು ಅವಳಿಂದ ಮೂಡುವುದು.

ಪತಿಯಿಂದ ದೂರದ ವೇದನೆ, ಮತ್ತೆಲ್ಲೋ ಆ ಬಗೆಯ ಪ್ರೇಮಾನ್ವೇಷಣೆ ಹಾಗು ಸೋಲು, ಜೊತೆಗೆ ಬೆಂಬಿಡದ ಏಕಾಂತ. ಮೀನಾ ಮಾನಸಿಕ ಖಿನ್ನತೆಗೆ ಒಳಗಾಗುತ್ತಾಳೆ. ನಿದ್ರಾವಂಚಿತಳಾಗುತ್ತಾಳೆ. ಕೊನೆಗೆ ಆಕೆಯ ಡಾಕ್ಟರ್ನ ಸಲಹೆಯ ಮೇರೆಗೆ, ನಿದ್ರಾಹೀನತೆಯಿಂದ ಕೊಂಚ ಮುಕ್ತಿ ಪಡೆಯಲು ಕೆಲವೇ ಮಿಲಿಯಷ್ಟು ಬ್ರಾಂಡಿಯ ಸೇವನೆಗೆ ಮುಂದಾಗುತ್ತಾಳೆ. ಆದರೆ ಅಭ್ಯಾಸ ಚಟವಾಗುತ್ತದೆ. ಮನಸ್ಸಿನ ನೋವಿಗೆ ಮದ್ಯದ ಕಹಿಯೇ ಔಷಧಿಯೆಂದು ಭಾವಿಸುತ್ತಾಳೆ. ನಂತರದ ದಿನಗಳಲ್ಲಿ ಮೀನಾ ಮದ್ಯಕ್ಕೆ ಅದೆಷ್ಟು ಅವಲಂಬಿತಳಾಗಿದ್ದಳೆಂದರೆ ಮನೆಯವರು ಹರಸಾಹಸ ಮಾಡಿ ಆಕೆಯಿಂದ ಮದ್ಯವನ್ನು ಕಾಣದಂತೆ ಮುಚ್ಚಿಡಬೇಕಿತ್ತು. ಆಕೆಯ ಅರಿವಿಗೆ ಬಾರದಂತೆ ದೇಹ ಹದಗೆಡುತ್ತಾ ಹೋಯಿತು. ಆದರೆ ಮೀನಾ ಬರೆಯುವುದ ಬಿಡಲಿಲ್ಲ. ಮದ್ಯದ ನಶೆಯಲ್ಲೂ ತನ್ನ ಜೀವನವನ್ನು ಕಥೆ-ಕವನಗಳ ಮೂಲಕ ಹಾಳೆಗಳ ಮೇಲೆ ಗೀಜುತ್ತಿದ್ದಳು. ಗೀಜಿ ಅಳುತ್ತಿದ್ದಳು. ಅತ್ತು ಮತ್ತೆ ಬರೆಯುತ್ತಿದ್ದಳು. ಇದೆ ಸಮಯದಲ್ಲಿ ' I write, I recite ' ಎಂಬ ಕವನ ಸಂಕಲವನ್ನು ಖಯ್ಯಾಮ್ ರ ಸಂಗೀತದ ಸಹಾಯದಿಂದ 1971 ರಲ್ಲಿ ಸ್ವತಹಃ ತಾನೆ ಹಾಡಿ ಹೊರತಂದಳು.

ಇವೆಲ್ಲದರ ನಡುವೆ ಮೀನಾ ನಟಿಸುವುದ ಮಾತ್ರ ಬಿಟ್ಟಿರಲಿಲ್ಲ. ಜೀವನ ನೋಯಿಸಿದಷ್ಟು ಅವಳ ಚಿತ್ರಗಳು ಆಕೆಯನ್ನು ನೋಯಿಸಲಿಲ್ಲ. ಒಂದರ ಮೇಲೊಂದು ಚಿತ್ರಗಳು ನೋಡುಗರ ಮನಗೆಲ್ಲತೊಡಗಿದವು. ಕರುಣಾಜನಕ, ರೋದನೆಗಳೊಡಪಡುವ ಪಾತ್ರಗಳೇ ಹೆಚ್ಚಾಗಿ ಮೀನಾಳ ಪಾಲಾಗುತ್ತಿದ್ದವು. ಆಕೆಯ ನಿಜಜೀವನವೂ ಇಂತಹ ಪಾತ್ರಗಳೊಟ್ಟಿಗೆ ವ್ಯತಿರಿಕ್ತವಾಗಿಲ್ಲದ್ದಿದರಿಂದ ನೋಡುಗನ ಕಣ್ಣುಗಳು ತೇವವಾಗುವಂತೆ ಸರಾಗವಾಗಿ ನಟಿಸುತ್ತಿದ್ದಳು. ಆಜಾದ್, ಕೊಹಿನೂರ್, ಫುಟ್ ಪಾತ್, ಗಜಲ್, ಕಾಜಲ್, ಸಾಹಿಬ್ ಬೀವಿ ಔರ್ ಗುಲಾಮ್, ಹೀಗೆ ಸಾಲು ಸಾಲು ಚಿತ್ರಗಳು ಆಕೆಯನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸತೊಡಗಿದವು. ಈ ಮದ್ಯೆ ವಿಪರೀತ ಮದ್ಯ ಸೇವನೆಯಿಂದ ಆರೋಗ್ಯ ತೀವ್ರ ಹದಗೆಡುತ್ತದೆ. ೧೯೬೮ ರಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್ಗೆ ಹೋಗಬೇಕಾಗುತ್ತದೆ. ಸತತ ಮೂರು ತಿಂಗಳ ಚಿಕಿತ್ಸೆಯ ಪರಿಣಾಮ ಮೀನಾ ಚೇತರಿಸಿಕೊಳ್ಳುತ್ತಾಳೆ ಅಲ್ಲದೆ ಮುಂದೆಂದೂ ಮದ್ಯದ ಒಂದು ಹನಿಯನ್ನು ಸಹ ಸೇವಿಸುವುದಿಲ್ಲ. ಆದರೆ ಒಳಗೊಳಗೇ ಕ್ಷಿಣಿಸುತ್ತಿದ್ದ ಆರೋಗ್ಯ ಯಾರ ಅರಿವಿಗೂ ಸಹ ಬರುವುದಿಲ್ಲ!



ಚಿತ್ರ 'ಪಾಕೀಝ' :

1958 ರಲ್ಲಿ ಶುರುವಾದ ಪಾಕಿಝ ಚಿತ್ರ ಪೂರ್ಣಗೊಂಡಿದ್ದು 1972 ರಲ್ಲಿ! ಇದರ ನಿರ್ದೇಶಕ ಮೀನಾಳ ಪತಿ ಕಮಲ್ ಆರೋಹಿ. ಚಿತ್ರ ಶುರುವಾಗಿ ಮುಂದುವರೆಯುತಿದ್ದಾಗ ಮೀನಾ ಹಾಗು ಕಮಲ್ರ ನಡುವಿನ ಮನಸ್ಥಾಪ ಚಿತ್ರವನ್ನು ಇನ್ನೂ ಕೆಲ ವರ್ಷಗಳ ಕಾಲ ಮುಂದೂಡುತ್ತದೆ. ಪರಸ್ಪರ ವೈಮನಸ್ಸಿನಿಂದ ದೂರವಿದ್ದ ಇಬ್ಬರನ್ನೂ ಈ ಚಿತ್ರವೇ ಮತ್ತೊಮ್ಮೆ ಒಂದುಗೂಡಿಸಿತು ಎಂದರೆ ಸುಳ್ಳಾಗದು. ಬಾಗಶಃ ಪೂರ್ಣಗೊಂಡಿದ್ದ ಚಿತ್ರವನ್ನು ಪೂರ್ಣಗೊಳಿಸಲು, ಚಿತ್ರದ ಕಥೆ ಹಾಗು ಅದರ ಪ್ರಾಮುಖ್ಯತೆಯನ್ನು ಅರಿತಿದ್ದ ನರ್ಗಿಸ್ ಹಾಗು ಸುನಿಲ್ ದತ್ತ್ ಜೋಡಿಯ ಸಂಧಾನ ಮೀನಾ ಚಿತ್ರವನ್ನು ಪೂರ್ಣಗೊಳಿಸಲು ಮತ್ತೆ ಕರೆತಂದಿತು. ಮೀನಾ ಚಿತ್ರವನ್ನು ಪೂರ್ಣಗೊಳಿಸಲು ಸಜ್ಜಾದಳು. ಆದರೆ ಅಷ್ಟರಲಾಗಲೇ ಆಕೆಯ ಕಾಯಿಲೆ ಉಲ್ಬಣಿಸಿ ಹೋಗಿತ್ತು. ಲಿವರ್ನ Cirrhosis ಕಾಯಿಲೆ ಆಕೆಯನ್ನು ಆವರಿಸಿತ್ತು. ಬೇರೆ ಇತರರಿಗಿಂತ ಮೀನಾಳಿಗೆ ತಾನು ಬದುಕುಳಿಯುವ ಅಸಾಧ್ಯತೆಯ ಬಗ್ಗೆ ಹೆಚ್ಚಿನ ಅರಿವಿತ್ತು! ಚಿತ್ರಕ್ಕಾಗಿ ಕೇವಲ ಒಂದು ರೂಪಾಯಿ ಸಂಭಾವನೆಯನ್ನು ಪತಿಯಿಂದ ಪಡೆದ ಮೀನಾ ನಗು ನಗುತ್ತಲೇ ಚಿತ್ರದ ಶೂಟಿಂಗ್ಗೆ ಬಂದಳು. ದೇಹ ಪೂರ್ಣವಾಗಿ ನಿಷ್ಕ್ರಿಯವಾಗುವ ಮುನ್ನ ಚಿತ್ರವನ್ನು ಮುಗಿಸಬೇಕೆಂದು ಬೇಗ ಬೇಗನೆ ನಟಿಸಿದಳು. ಅತ್ತು ಬೇಸತ್ತ ಕಣ್ಣುಗಳು, ಅವುಗಳನ್ನೂ ಸೊಗಸಾಗಿಸುವ ಕಾಡಿಗೆ, ನಗುವ ಮರೆತ ಮುಖದಲ್ಲಿ ಹತಾಶೆಯ ಸ್ವರಗಳು, ಇವಕ್ಕೆ ಸರಿದೂಗುವಂತೆ ಆಕೆಯ ವಸ್ತ್ರಾಭರಣಗಳು ಜೊತೆಗೆ ಆಕೆಯ ಅಮೋಘ ನಟನೆ. ಸಾವಿನ ಬಾಗಿಲಲ್ಲಿ ನಿಂತು ಹೊರಡುವ ಮುನ್ನ ಮೀನಾ ನೋಡುಗರಿಗೆ ಒಂದು ಅದ್ಬುತ ಚಿತ್ರವನ್ನು ನೀಡಿದಳು. ಪಾಕೀಝ ಚಿತ್ರ ಇಂದಿಗೂ ದೇಶದ ಅತ್ಯುತ್ತಮ ಕ್ಲಾಸಿಕ್ ಚಿತ್ರಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತದೆ. ಅಲ್ಲದೆ ಚಿತ್ರ ಮುಗಿಯುವಷ್ಟರಲ್ಲಿ ಕಮಲ್ ಹಾಗು ಮೀನಾರ ನಡುವಿನ ಮನಸ್ತಾಪ ಮುರಿದು ಬಿದ್ದಿರುತ್ತದೆ. ಆದರೆ ಚಿತ್ರ ಬಿಡುಗಡೆಗೊಂಡ ಮೂರು ತಿಂಗಳಲ್ಲೇ ಮೀನಾ ಕೊನೆಯುಸಿರೆಳೆದ್ದಿರುತ್ತಾಳೆ. ಹೀಗೆ ಹೋಗುವಾಗ ಮೀನಾಳಿಗೆ ಕೇವಲ ಮೂವತ್ತೆಂಟು ವರ್ಷಗಳು!



ಇಂದು ಮೀನಾ ಕುಮಾರಿಯೆಂದರೆ ಬಲ್ಲವರು ತೀರಾ ವಿರಳ. ಆದರೆ ಆಕೆ ತನ್ನ ಕೆಲವೇ ವರ್ಷಗಳ್ಲಲಿ ನಟಿಸಿ ಚಿತ್ರಪ್ರಿಯರ ಮನ ತುಂಬಿದ ಪಾತ್ರಗಳು ಇಂದಿನ ಅದೆಷ್ಟೋ ನಟ ನಟಿಯರಿಗೆ ಪ್ರೇರಕವಾಗಿವೆ. ಮೀನಾ ಕುಮಾರಿ ತನ್ನ ನಟನೆಗೆ ಅಲ್ಲದೆ ಆಕೆಯ ಉದಾರಿ ಗುಣದಿಂದಲೂ ಹೆಸರು ಮಾಡಿದ್ದಳು. ಜೀವನ ಅರಿತಾಗಿನಿಂದ ಆಕೆ ಇತರರಿಗಾಗೇ ದುಡಿದಳು. ಮನೆಯವರಿಗಂತೂ ಈಕೆಯೇ ಹಸಿವು ನೀಗಿಸುವ ಸಾಧನ ವಾಗಿದ್ದಳು. ತಾನು ಸಾಯುವುದು ಖಚಿತವೆಂದರಿತ್ತಿದ್ದ ಆಕೆ ನಟಿ ಮುಮ್ತಾಜ್ ಳ ಹಣವನ್ನು ಹಿಂದಿರುಗಿಸಲು ಸಾಧ್ಯವಾಗದಿದ್ದಾಗ ತನ್ನ ಬಂಗಲೆಯನ್ನೇ ಆಕೆಗೆ ಕೊಟ್ಟಳು. ಕೊನೆ ಕ್ಷಣಗಳಲ್ಲಿ ಮನೆಯಿಂದ ಆಸ್ಪತ್ರೆಗೆ ಹೋಗುವಾಗ ಅಡ್ಡ ಬಂದು ತಬ್ಬಿ ಆಳಲಾರಂಭಿಸಿದ ಕಸ ಗುಡಿಸುವಳನ್ನೂ ಸಹ ಸಮಾಧಾನ ಮಾಡಿ ತನ್ನ ಬಳಿ ಇದ್ದ ಪರ್ಸನ್ನೂ ಆಕೆಗೆ ನೀಡಿ 'ಖುದಾಹಾಫೀಜ್' ಎನ್ನುತ ಹೊರಟು ಹೋದಳು. ಇಷ್ಟೊಂದು ಹೃದಯ ವೈಶಾಲ್ಯತೆಯ ಮೀನಾಳನ್ನು ಜೀವನ ವಿಪರೀತವಾಗಿ ಕಾಡಿತು. ಆಕೆ ತಾನು ಬದುಕಿದ ಸಣ್ಣ ಜೀವನದಲ್ಲಿ ಅರಸಿದ್ದು ಕೇವಲ ಪ್ರೀತಿ ಹಾಗು ಮಮತೆ. ಜೀವನ ಆಕೆಗೆ ಅದನ್ನೂ ಕರುಣಿಸದಾಯಿತು. ಅಳುತ್ತಾ ಯಾರಿಗೂ ಬೇಡವಾಗಿ ಬಂದ ಮೀರಾ ಅಳುತ್ತಲೇ ಯಾರಿಗೂ ಬೇಡವಾಗೇ ಹೋದಳೆನ್ನಬಹುದು. ಕೊನೆ ಯ ದಿನಗಳಲ್ಲಿ ಆಸ್ಪತ್ರೆಗೆ ಸೇರಲೂ ಸಹ ಮೀನಾ ಕುಮಾರಿಯ ಬಳಿಯಲ್ಲಿ ಹಣವಿಲ್ಲದಿದ್ದದ್ದು ವಿಪರ್ಯಾಸ.



ಇಂದು ಮೀನಾ ಕುಮಾರಿ ಬದುಕ್ಕಿದ್ದರೆ ಆಕೆಗೆ ಎಂಬತ್ನಾಲ್ಕು ವರ್ಷಗಳಾಗಿರುತ್ತಿದ್ದವು. ಆದರೆ ಎಂಬತ್ನಾಲ್ಕರ ಮೀನಾ ಇಂದಿಗೂ ಮೂವತ್ತೆಂಟರ ಸುಂದರಿಯಾಗಿ ಚಿತ್ರಪ್ರಿಯರ ಹೃದಯಗಳಲ್ಲಿ ಬದುಕಿದ್ದಾಳೆ. ಆ ಮುದ್ದಾದ ಮೌನ ಆವರಿಸಿದ ಮುಖ, ಸಾವಿರ ಮಾತಾನಾಡುವ ಆಕೆಯ ಕಣ್ಣುಗಳು, ಆ ಮಾತುಗಳಿಗೆ ಬಣ್ಣ ತುಂಬುವ ಆಕೆಯ ಕವನಗಳು ಇಂದಿಗೂ ಹಸಿರಾಗಿವೆ. ಹೆಸರಾಗಿವೆ.

Wednesday, October 19, 2016

ವಿಸ್ಮಯ : ಮಿಂಚು ಹುಳು

ಮಾನವ ಅದೆಷ್ಟೇ ವೈಜ್ಞಾನಿಕವಾಗಿ ಮುಂದುವರೆದೆನೆಂದು ಭಾವಿಸಿಕೊಂಡರೂ ಪ್ರಕೃತಿ ಹಾಗು ಅದರ ಸೃಷ್ಟಿಕರ್ತನ ಮುಂದೆ ಕೇವಲ ಕನಿಷ್ಠ ಎಂಬುದನ್ನು ಎಲ್ಲರೂ ಒಪ್ಪಲೇಬೇಕಾದ ವಿಷಯ. ಇನ್ನೊಂದು ದೃಷ್ಟಿಕೋನದಲ್ಲಿ ಹೇಳುವುದಾದರೆ ಮಾನವನಿಗೆಂದೇ ಈ ಪ್ರಕೃತಿ ಮೊಗೆದಷ್ಟು ಮಿಕ್ಕುವಂತೆ ಇನ್ನಷ್ಟು ಮತ್ತಷ್ಟು ಸಂಶೋಧನೆ, ಆವಿಷ್ಕಾರಗಳನ್ನು ಮಾಡಲು ವಿಪುಲ ಅವಕಾಶವನ್ನು ಮಾಡಿಕೊಟ್ಟಂತಿದೆ. 


ಯಾವ ಕ್ಷಣದಲ್ಲೂ , ಯಾವ ದಿಕ್ಕಲ್ಲೂ ಬೇಕಾದರೂ ಚಿಮ್ಮಿ ಚಲಿಸಬಲ್ಲ, ನೀರಾಗಲಿ ನೆಲವಾಗಲಿ ಎಲ್ಲೆಂದರಲ್ಲಿ ಇಳಿದು ಹಾರಬಲ್ಲ ಹಕ್ಕಿಗಳ ಸೃಷ್ಟಿಗೆ ಮಾನವನ ಅನ್ವೇಷಣೆಯ ಅದ್ಯಾವ ವಿಮಾನ ಸರಿಸಾಟಿಯಾದಿತು ಹೇಳಿ? ಸಾವಿರಾರು ಕೋಟಿ ಖರ್ಚುಮಾಡಿ ಅತಿ ಕಡಿಮೆ ಅವಧಿಯಲ್ಲಿ(fastest) ವೀಕ್ಷಣವನ್ನು (sight) ಕೇಂದ್ರೀಕರಿಸಬಲ್ಲ ಮಸೂರ(lens) ವನ್ನು ಆವಿಷ್ಕರಿಸಿದರೂ, ಸೃಷ್ಟಿಕರ್ತನ ಸೂಕ್ಶ್ಮ ಹಾಗು ಅಷ್ಟೇ ಕ್ಲಿಷ್ಟವಾದ ನಮ್ಮ ಕಣ್ಣುಗಳ ಮಸೂರಗಳಿಗೆ ಮಾನವನ ಅನ್ವೇಷಣೆಯ ಯಾವ ಮಸೂರ ಸರಿಸಾಟಿಯಾಗಬಲ್ಲದು? ಜಲಚಾಲಿತ (Hydraulic) ಯಂತ್ರಗಳ ಅಭಿವೃದ್ಧಿಯಲ್ಲಿ ಮಾನವ ಅದೆಷ್ಟೇ ಮುಂದುವರೆದರೂ ಜಗತ್ತೇ ಒಪ್ಪುವ ಮಾನವನ ದೇಹದ ಮಾದರಿಯ ಜಲಚಾಲಿತ ವ್ಯವಸ್ಥೆಯನ್ನು ಸೃಷ್ಟಿವುದು ಕಷ್ಟಸಾಧ್ಯವೇ ಸರಿ..! ಹೀಗೆ ನಮ್ಮ ಸುತ್ತಮುತ್ತಲಿನ ದೈನಂದಿನ ಅತಿ ಸಣ್ಣ-ಪುಟ್ಟ ವಿಷಯಗಳಲ್ಲೇ ಅಗಾಧವಾದ ವಿಜ್ಞಾನ ಅಡಗಿರುತ್ತದೆ. ಜಗತ್ತು ವೈಜ್ಞಾನಿಕವಾಗಿ ಅದೆಷ್ಟೇ ಮುಂದುವರೆದಿದೆ ಎಂದು ಭಾವಿಸಿದರೂ ಸಹ ಇಂತಹ ಸಣ್ಣ-ಪುಟ್ಟ ವಿಷಯಗಳೆ ಕೆಲವೊಮ್ಮೆ ವಿಜ್ಞಾನಿಗಳಿಗೂ ಆಶ್ಚರ್ಯ ಮೂಡಿಸುವ ವಿಷಯಗಳಾಗಿ ಪರಿಣಮಿಸುತ್ತವೆ. ಮಾನವ ವಿದ್ಯುತ್ತನ್ನು ಕಂಡುಹಿಡಿದು ಜಗತ್ತನೇ ಬೆಳಗಿಸಿದ ನಿಜ. ಆದರೆ ಅದಕ್ಕೂ ಅನೇಕ ವರ್ಷಗಳ ಹಿಂದೆಯೆ, ಆತ ಕಲ್ಲನ್ನು ಜಜ್ಜಿ ಬೆಂಕಿಯನ್ನು ಹೊತ್ತಿಸುವುದಕ್ಕೂ ಮೊದಲೆ ನಿಸರ್ಗದಲ್ಲಿ ಜೀವಿಯೊಂದು ಬೆಳಕನ್ನು ಹೊತ್ತಿಸಿ ಮಿನುಗುತ್ತಿತ್ತು. ಅದೂ ಸಹ ಬಣ್ಣ ಬಣ್ಣದ ಬೆಳಕು!!

ಯಸ್, ಮಿಂಚು ಹುಳು. ಇದನ್ನು ಕೆಲವರು ಪಂಪು ಹುಳು, ಮಿಣುಕು ಹುಳು ಎಂದೂ ಕರೆಯುವುದುಂಟು. ಹೆಸರಲ್ಲೇ ಇರುವಂತೆ ಕತ್ತಲು ಕವಿದ ಮೇಲೆ ಆಕಾಶದ ನಕ್ಷತ್ರಗಳಂತೆ ಮಿನುಗುತ್ತಾ, ಹಾರುತ್ತ ಬೆಳಕನ್ನು 'ಸೃಷ್ಟಿಸಿ', ಪಸರಿಸಿ, ಘಾಡ ಕತ್ತಲೆಯ ರಾತ್ರಿಯನ್ನೂ ರಮಣೀಯವಾಗಿ ಮಾಡಬಲ್ಲವು ಈ ಮಿಂಚು ಹುಳುಗಳು . ವಿದೇಶಗಳಲ್ಲಿ ಇಂತಹ ರಮಣೀಯ ರಾತ್ರಿಯನ್ನು ಆಸ್ವಾದಿಸಲು ಟಿಕೇಟು ಪಡೆದು ಕಾಡಿನೊಳಗೆ ಧಾವಿಸಿ ಕಾದು ಕೂರುವುದು ಉಂಟು!

ಆಹಾರಕ್ಕಾಗಿ ಬೇಟೆಯನ್ನು ತನ್ನ ಬಳಿ ಸೆಳೆಯಲು ಅಥವಾ ತಾನು ಬೇಟೆಯಾಗಿ ಇತರ ಪ್ರಾಣಿ-ಪಕ್ಷಿಗಳ ಆಹಾರವಾಗದೆ ಇರಲು ಅಥವಾ ಸಂಭೋಕಕ್ಕಾಗಿ ಮತ್ತೊಂದು ಹುಳುವನ್ನು ತನ್ನೆಡೆ ಆಕರ್ಷಿಸಲು ಮಿಂಚುಹುಳುಗಳು ತಮ್ಮ ಬೆಳಕನ್ನು ಉಪಯೋಗಿಸಿಕೊಳ್ಳುತ್ತವೆ. ಮಿಂಚುಹುಳುಗಳ ಅಂಗದಲ್ಲಿ ಕಿಣ್ವಗಳು (Enzymes) ಹಾಗು ಪ್ರೋಟೀನ್ ಒಟ್ಟುಗೂಡಿ ಬೆಳಕು ಹೊರ ಚಿಮ್ಮುತದೆ. ಈ ರಾಸಾಯನಿಕ ಕ್ರಿಯೆಯ ಮೂಲಕ ಬೆಳಕು ಉತ್ಪತಿಯಾಗುವುದಕ್ಕೆ ಜೈವದೀಪ್ತಿಯ (Bioluminescence) ಎಂದು ಕರೆಯುತ್ತಾರೆ. ನಾವು ಯಾಂತ್ರಿಕವಾಗಿ ಉತ್ಪಾದಿಸುವ ಬೆಳಕಲ್ಲಿ ಶಾಖಶಕ್ತಿಯೂ ಜೊತೆಗೆ ಉತ್ಪತಿಯಾಗುತ್ತದೆ. ಬೆಳಕಿನ ಗುಣಮಟ್ಟ ಅದನ್ನು ಒಮ್ಮಿಸುವ ಸಾಧನದ ಶಾಖೋತ್ಪತ್ತಿಗೆ ಪರೋಕ್ಷವಾಗಿರುತ್ತದೆ. ಅಂದರೆ ಶಾಖೋತ್ಪನ್ನ ಕಡಿಮೆ ಇದ್ದಷ್ಟೂ ಬೆಳಕಿನ ಗುಣಮಟ್ಟ ಹೆಚ್ಚಿರುತ್ತದೆ. ಈ ಹೋಲಿಕೆಯಲ್ಲಿ ಮಿಂಚುಹುಳುಗಳಿಂದ ಹೊರಹೊಮ್ಮುವ ಬೆಳಕು ನೂರಕ್ಕೆ ನೂರರಷ್ಟು ಶಾಖರಹಿತವಾದ ಪೂರ್ಣ ಪ್ರಮಾಣದ ಶುದ್ಧ ಬೆಳಕಾಗಿರುತ್ತದೆ! ನಾವು ಕಾಣುವ ಬೆಳಕಿನ ಯಾವುದೇ ರೂಪವಾಗಿರಲಿ, ಅದು ಸೂರ್ಯನಾಗಿರಲಿ ಅಥವಾ ಉರಿಯುವ ಕಟ್ಟಿಗೆಯಾಗಿರಲಿ ಅಥವಾ ಎಲೆಕ್ಟ್ರಿಕ್ ಬಲ್ಬ್ ಗಳಾಗಿರಲಿ, ಒಟ್ಟಿನಲ್ಲಿ ಒಂದಲ್ಲೊಂದು ಮೊಲಧಾತು ಹೊತ್ತಿ ಉರಿಯಲೇ ಬೇಕು. ಅಂತಹದರಲ್ಲಿ ಒಂದು ಜೀವಿ ತನ್ನ ಒಡಲಾಳದಿಂದ ‘ಶುದ್ಧ ಬೆಳಕ’ನ್ನು ಒಮ್ಮಿಸಿ ಬೆಳಗುತ್ತದೆಯಂದರೆ ನಾವು ಆಶ್ಚರ್ಯಚಕಿತರಾಗಲೇ ಬೇಕು ಅಲ್ಲವೇ?

ಹಾಗಾದರೆ ಮಿಂಚುಹುಳುಗಳ ಈ ಮಿಂಚಿನ ಆಟ ಏತಕ್ಕೆ ಎಂದು ಕೇಳಿದರೆ, ಅದು ಹೆಚ್ಚಾಗಿ ಸಂಭೋಕ್ಕಾಗೆ ಆಗಿರುತ್ತದೆ. ಗಂಡು ಹುಳುಗಳು ತಮಗೆ ಅರಿವಿರುವ ಒಂದು ನಿರ್ದಿಷ್ಟ ಮಾದರಿಯ (Pattern) ಬೆಳಕ್ಕನ್ನು ಸೂಸುತ್ತಾ ಹಾರುತ್ತವೆ. ಈ ಮೂಲಕ ಹೆಣ್ಣು ಹುಳುಗಳಿಗೆ ತನ್ನ ಲಬ್ಯತೆಯನ್ನು ರವಾನಿಸುತ್ತವೆ! ಆ ಮಾದರಿಯ ಬೆಳಕ್ಕನ್ನು ಅರಿಯುವ ಹಾಗು ಆಸಕ್ತಿಯಿರುವ ಹೆಣ್ಣು ಹುಳುಗಳು ಮರುತ್ತರವಾಗಿ ಮತ್ತೊಂದು ಬಗೆಯ ಬೆಳಕಿನ ಮಾದರಿಯ ಮೂಲಕ ಉತ್ತರವನ್ನು ರವಾನಿಸಿ ತನ್ನ ಇರುವಿಕೆಯನ್ನು ಖಚಿತಪಡಿಸುತ್ತವೆ. ಒಟ್ಟಿನಲ್ಲಿ ಬೆಳಕಿನ ಮೂಲಕವೇ ಮಿಂಚು ಹುಳುಗಳು ಸಂವಹನ ನೆಡೆಸುತ್ತವೆ ಅರ್ಥಾತ್ ಮಾತಾಡಿಕೊಳ್ಳುತವೆ!

ವಿಜ್ಞಾನ ‘ಲ್ಯೂಸಿಫೆರಿನ್’ ಎಂಬ ಕಿಣ್ವವೇ ಇವುಗಳ ದೇಹದಲ್ಲಿ ಉತ್ಪತಿಯಾಗುವ ಬೆಳಕಿಗೆ ಕಾರಣವೆಂದು ಹೇಳುತ್ತದೆ. ಹಾಗಾದರೆ ನಮ್ಮ ನಿಸರ್ಗದಲ್ಲಿ ಬೆಳಕನ್ನು ಉತ್ಪದಿಸಬಲ್ಲ ಕಿಣ್ವಗಳು ಅಥವ ಆ ಬಗೆಯ ವಸ್ತುಗಳು ಇವೆಯೆಂಬುದು ಸುಳ್ಳಲ್ಲ. ಹಾಗಾದರೆ ಬೆಳಕನ್ನುನೈಸರ್ಗಿಕವಾಗಿ ಸೃಷ್ಟಿಸಲು ಸಾಧ್ಯವಿದೆ ಯೆ? ನಾಲಿಗೆಯಿದ್ದ ಮಾತ್ರಕ್ಕೆ ಪ್ರಬುದ್ಧ ಜೀವಿಗಳು, ಇಲ್ಲದ ಮಾತ್ರಕ್ಕೆ ಮೂಕಜೀವಿಗಳು ಅನ್ನುವ ನಾವುಗಳು ಮಿಂಚುಹುಳುಗಳಂತೆ ಅದೆಷ್ಟೋ ಸಾವಿರ ಕೋಟಿ ಮೂಕಜೀವಿಗಳ ನಡುವೆ ನಾಲಿಗೆಯ ವಿನಃ ನಡೆಯಬಹುದಾದ ಸಂಭಾಷಣೆಯನ್ನು ಅರಿವಿಗೆ ತಂದುಕೊಳ್ಳಲು ವಿಪಲರಾಗುತ್ತೇವೆ. ಸಂವಹನದ ಈ ಹೊಸ ಬಗೆ ಹಾಗು ಪ್ರಾಣಿ ಪಕ್ಷಿಗಳ ನಡುವಿನ ಮೂಕ ಸಂಭಾಷಣೆಯ ನ್ನು ಅರಿಯದಾಗುತ್ತೇವೆ. ಇಷ್ಟೆಲ್ಲಾ ವಿಷಯಗಳನ್ನು ಮಿಂಚು ಹುಳುಗಳು ಹಂಚಿಕೊಳ್ಳುವಾಗ ಮಾನವನೆಂಬ ಜೀವಿ ಕೊಂಚವೂ ಕದಲದೆ ಕೈಯ ಅಂಚಿನಲ್ಲಿ ಕ್ಯಾಮರವಂಬ ಕಪ್ಪು ಪೆಟ್ಟಿಗೆಯನ್ನು ಹಿಡಿದು ಹೊಂಚಿ ಕೂತಿರುತ್ತಾನೆ!


ಹೀಗೆ ಮಿಂಚುಹುಳುಗಳು ಬೆಳಕಿನ ಉತ್ಪಾದನೆಯ ಸಾಧ್ಯತೆ ಬಗ್ಗೆ ಹಾಗೂ ಅವುಗಳ ನಡುವೆ ನಡೆಯಬಹುದಾದ ಸಂವಹನ ಬಗ್ಗೆಯೂ ನಮಗೆ ಒಂದು ಹೊಸ ಬಗೆಯ ಸಂಶೋಧನ ಕ್ಷೇತ್ರವನ್ನು ಮಾಡಿಕೊಡಬಲ್ಲದೆ?! Who Knows..ಹೀಗೆ ಮುಂದೊಂದು ದಿನ ನಾವು ಬೆಳಕನ್ನು ಉತ್ಪಾದಿಸಿ ಇನ್ನಷ್ಟು ಬಲ್ಬುಗಳನ್ನು ಉರಿಸುತ್ತೇವೆಯೋ ಅಥವಾ ಸಂವಹನದ ಒಂದು ಹೊಸ ಬಗೆಯನ್ನು ಕಲಿತು ಪ್ರಾಣಿ ಪಕ್ಷಿಗಳ ಮಾತುಗಳನ್ನು ಅರಿಯುತ್ತೇವೆಯೋ, ಒಟ್ಟಿನಲ್ಲಿ ಜಗತ್ತೇ ನನ್ನದೆಂದು ಕುಣಿದು ನಡೆಯುವ ನಾವುಗಳು ಸದ್ಯಕ್ಕೆ ಇಂತಹ ಜೀವಿಗಳಿಂದ ವಿಸ್ಮಯರಾಗಿ, ಬದುಕಿ, ಅವುಗಳನ್ನೂ ಬದುಕಲು ಬಿಡುವುದೇ ಲೇಸು. ಏನಂತೀರಾ?

Saturday, October 8, 2016

ಪ್ರಸ್ತುತ : ದೇಶದ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಗಳೇನು?

ನೀರು. ಸಕಲ ಜೀವರಾಶಿಗಳಿಗೂ ಅರಿಯುವ ಏಕಮಾತ್ರ ಪದ. ಅದು ಚಿಗುರವ ಸಸ್ಯವಾಗಿರಲಿ ಅಥವಾ ಬಲಿತ ಮರವಾಗಿರಲಿ, ಮಾನವನಾಗಿರಲಿ ಅಥವಾ ಪ್ರಾಣಿ ಪಕ್ಷಿಗಳಾಗಿರಲಿ, ಶಾಕಾಹಾರಿ, ಮಾಂಸಾಹಾರಿ ಹೀಗೆ ಭೂಮಿಯ ಪ್ರತಿಯೊಂದು ಜೀವಕ್ಕೂ ಬೇಕಾಗಿರುವ ಜೀವನಾದಾರ ಈ ನೀರು. ನೀರಿನ ವಿನಃ ಎಲ್ಲವೂ ಅಸ್ತಿರ. ಜೀವನವೇ ದುಸ್ಥರ!


ನವೀಕರಿಸಬಹುದಾದ ಸಂಪನ್ಮೂಲಗಳಲ್ಲೊಂದಾಗಿದ್ದ ಜಲ ಇತ್ತೀಚಿನ ಜಾಗತಿಕ ತಾಪಮಾನ ಏರಿಕೆ, ಕೈಗಾರೀಕರಣ, ಜಲ ಮಾಲಿನ್ಯಗಳೆಂಬ ವಿವಿಧ ಕಾರಣಗಳಿಂದ ಕ್ಷೀಣಿಸುತ್ತಾ ನವೀಕರಿಸಲಾಗದ ಸಂಪನ್ಮೂಲಗಳಲ್ಲೊಂದಾಗುತ್ತಿದೆ. ಭಾರತದಲ್ಲಿ ಅದಾಗಲೇ ಸುಮಾರು ಅರ್ಧದಷ್ಟು ರಾಜ್ಯಗಳು ವಿಪರೀತವಾದ ನೀರಿನ ಅಭಾವವನ್ನು ಎದುರಿಸುತ್ತಿವೆ. ಪ್ರಸ್ತುತ ಕಾಲಮಾನಕ್ಕೆ ಇದು ಒಂದು ಸಮಸ್ಯೆಯಷ್ಟೇ. ಆದರೆ ಇದೆ ಮುಂದುವರೆದರೆ ನಂತರದ ತಲೆಮಾರಿಗೆ ಇದು ಕಂಟಕಪ್ರಾಯವಾಗುವುದರಲ್ಲಿ ಸಂಶಯವೇ ಇರುವುದಿಲ್ಲ! ಈ ನಿಟ್ಟಿನಲ್ಲಿ ನಮ್ಮ ತಾರ್ಕಿಕ ದೂರದೃಷ್ಟಿತ್ವ ನಮಗೂ ಹಾಗು ನಮ್ಮ ನಂತರದವರಿಗೂ ಮಹತ್ತರವಾದ ಪಾತ್ರ ವಹಿಸುತ್ತದೆ.

ಭಾರತ ಕೃಷಿ ಪ್ರದಾನ ದೇಶ. ಒಟ್ಟು ನೀರಿನಲ್ಲಿ ಶೇಕಡ 70-80 ರಷ್ಟು ನೀರು ಕೃಷಿಗಾಗೇ ಬೇಕಾಗುತ್ತದೆ. ಉಳಿದಂತೆ ಅತಿ ಹೆಚ್ಚಾಗಿ ನೀರನ್ನು ಕುಡಿಯಲು, ಕಾರ್ಖಾನೆಗಳಿಗೆ ,ವಿದ್ಯುತ್ ಉತ್ಪಾದನ ಘಟಕಗಳು ಹಾಗು ಇತರೆ ಕ್ಷೇತ್ರಗಳಿಗೆ ಬಳಸಲಾಗುತ್ತದೆ. ದೇಶದಲ್ಲಿ 1997 ರಲ್ಲಿ ಸುಮಾರು 600 CBM (ಬಿಲಿಯನ್ ಕ್ಯೂಬಿಕ್ ಮೀಟರ್) ನಷ್ಟಿದ್ದ ನೀರಿನ ಬೇಡಿಕೆ 2050 ರ ವೇಳೆಗೆ 1500 CBM, ಅಂದರೆ ಕೇವಲ ಐದು ದಶಕಗಳಲ್ಲೇ ಅದು ತ್ರಿಗುಣವಾಗುವ ಸನಿಹದಲ್ಲಿದೆ ಎಂದು ಅಂದಾಜಿಸಲಾಗಿದೆ! (Source :Central water commission)ಇಲ್ಲಿ ನೋಡಬೇಕಾದ ಗಮನಾರ್ಹ ವಿಷಯವೆಂದರೆ, 1997 ರಲ್ಲಿ ಇದ್ದ ಭಾರತದ ಜನಸಂಖ್ಯೆ ಸುಮಾರು 100 ಕೋಟಿ. 2050 ಕ್ಕೆ ಇದು 160 ಕೋಟಿ ತಲುಪಬಹುದೆಂದು ಅಂದಾಜಿಸಲಾಗಿದೆ. ಇಂದಿನ ಬೇಡಿಕೆಯ ದರದಲ್ಲೇ ಒಂದು ಪಕ್ಷ ನೀರನ್ನು ಪೂರೈಸಲಾದರೆ 2050 ಕ್ಕೆಅಗತ್ಯಕ್ಕಿಂತ ಸುಮಾರು 500 CBM ನಷ್ಟು ನೀರಿನ ಕೊರತೆ ಕಾಡುತ್ತದೆ!
ಇತ್ತಕಡೆ ನದಿನೀರಿನ ವಿಚಾರದಲ್ಲೂ ಸಮಸ್ಯೆ ತೀರಾ ಭಿನ್ನವೇನಲ್ಲ. ಒಟ್ಟು ಲಭ್ಯವಿರುವ ನೀರಿನಲ್ಲಿ ಕೇವಲ ಮೂರನೇ ಒಂದು ಬಾಗದಷ್ಟು ಮಾತ್ರ ಉಪಯೋಗಿಸಲಾಲಾಗುತ್ತದೆ. ಉಳಿದ ಅಷ್ಟೂ ನೀರು ಸಹ ಪೋಲಾಗಿ ಸಮುದ್ರವನ್ನು ಸೇರುತ್ತಿದೆ. (Source :Central water commission) ಅಲ್ಲದೆ ಅತಿ ಹೆಚ್ಚಿನ ಅಂತರ್ಜಲ ಬಳಕೆಯಿಂದ ಮುಂದಿನ ಕೆಲ ವರ್ಷಗಳಲ್ಲೇ ಅದರ ಮಟ್ಟವೂ ಗಣನೀಯವಾಗಿ ಕ್ಷೀಣಿಸಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ ನಗರೀಕರಣ, ಹೆಚ್ಚುತ್ತಿರುವ ಕಾರ್ಖಾನೆಗಳು, ಜನಸಂಖ್ಯಾ ಸ್ಫೋಟ ಹೀಗೆ ಇನ್ನೂ ಹತ್ತು ಹಲವು ಕಾರಣಗಳಿಂದ ನೀರಿನ ಅಭಾವದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತಿದೆ.

ಹಾಗಾದರೆ ಲಭ್ಯತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮುಂದಿನ ದಿನಗಳಲ್ಲಿ ಬರುವ ನೀರಿನ ಅವಶ್ಯಕತೆಯನ್ನು ನೀಗುವುದಾದರೂ ಹೇಗೆ? ಲಭ್ಯವಿರುವ ನೀರಿನಲ್ಲೇ ಪರಿಸ್ಥಿತಿಯನ್ನುನಿಬಾಯಿಸುವ ಬಗೆಯಾದರೂ ಎಂತಹದ್ದು? ನದಿ ತಟದಿಂದ ಸಾವಿರಾರು ಮೈಲುಗಳು ದೂರವಿರುವ ಬರಪೀಡಿತ ಸ್ಥಳಗಳಿಗೆ ನೀರಿನ ಸರಬರಾಜಿಗೆ ಇರುವ ಸೂಕ್ತ ಕ್ರಮಗಳು ಯಾವುವು? ಆಣೆಕಟ್ಟು ನಿರ್ಮಾಣ, ಡಿಸಾಲೆನೇಷನ್ , ನದಿ ಜೋಡಣೆ? ನದಿ ಜೋಡಣೆಗಾಗಿ ನೀರಿನ ದಿಕ್ಕನ್ನು ಬದಲಿಸುವುದರಿಂದ ನಿಸರ್ಗಕ್ಕೆ, ಜೀವ ಸಂಕುಲಕ್ಕೆ ಆಗುವ ಹಾನಿ ಎಂತಹದ್ದು? ಡಿಸಾಲಿನಶನ್ ಅಷ್ಟೊಂದು ಸುಲಭವಾಗಿದ್ದಲ್ಲಿ ಅದನ್ನು ಕಾರ್ಯಗತಗೊಳಿಸಲು ಇರುವ ಅಡೆತಡೆಗಳೇನು? ದೇಶದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಗಳೇನು ಮತ್ತು ಎಂದು? ಹೀಗೆ ಸಾಲು ಸಾಲು ಪ್ರೆಶ್ನೆಗಳು ನಮ್ಮನು ಕಾಡುತ್ತವೆ.

ದೇಶದಲ್ಲಿ ಶೇಕಡಾವಾರು ಮಳೆಯ ಪ್ರಮಾಣ ವರ್ಷಕ್ಕೆ ಸುಮಾರು ೧೦೦೦ ಮಿಲಿಮೀಟರ್ನಷ್ಟಿದೆ (Source data.gov by Government Of India ). ಇದು ಕೆಲವೆಡೆ ಹೆಚ್ಚಾಗಿಯೂ ಕೆಲವೆಡೆ ವಿಪರೀತ ಕಡಿಮೆಯೂ ಇರಬಹುದು. ಆದರೆ ನಮ್ಮಲ್ಲಿ ಏನಿಲ್ಲವೆಂದರೂ ಜೂನ್-ಜುಲೈ ನಿಂದಿಡಿದು ಸೆಪ್ಟೆಂಬರ್-ಅಕ್ಟೋಬರ್ವರೆಗೂ ಮಳೆ ಬರುವುದು ಕಂಡಿತ. ಆದರೆ ಇಲ್ಲೂ ಕೂಡ ಕೆಲವೆಡೆ ತುಸು ಹೆಚ್ಚು ಅಥವಾ ಕೆಲವೆಡೆ ತುಸು ಕಡಿಮೆ. ಬೇಸಿಗೆಯ ಬಿಸಿಲಲ್ಲಿ ಬೆಂದು ಬೆಂಡಾಗುವ ನಮಗೆ ಜೂನ್ ತಿಂಗಳಲ್ಲಿ ಮಳೆಯ ಆಗಮನ ಅದೇನೋ ಒಂದು ಬಗೆಯ ಪುಳಕವನ್ನುಟ್ಟಿಸುತ್ತದೆ. ಮೊದಲ ಮಳೆಯ ಹನಿಗಳು ಭೂಮಿಯನ್ನು ಸ್ಪರ್ಷಿಸುವುದನ್ನು ಸಡಗರದಿಂದ ನೋಡುತ್ತೇವೆ ವಿನಃ ರಾಶಿ ರಾಶಿ ನೀರು ಹರಿದು ಪೋಲಾಗುವುದನ್ನು ಕಂಡು ಮರುಗುವವರು ತುಂಬ ವಿರಳ. ಮಳೆಗಾಲ ಕಳೆದು ಮುಂದಿನ ಬೇಸಿಗೆಗೆ ಆಣೆಕಟ್ಟುಗಳೆಲ್ಲ ಖಾಲಿಯಾಗಿ ನೀರಿನ ಅಭಾವ ಎದುರಾದಾಗ ಮಾತ್ರ ಚಡಪಡಿಸುತ್ತೇವೆ. ಸರ್ಕಾರಕ್ಕೆ ದೂರುತ್ತೇವೆ. ದೊಡ್ಡ ದೊಡ್ಡ ಪೈಪುಗಳಲ್ಲಿ ಹೆಚ್ಚಿನ ಸಾಮರ್ಥ್ಯವಿರುವ ಪಂಪುಗಳಿಂದ ದೂರದ ಸ್ಥಳಗಳಿಂದ ಕಷ್ಟಪಟ್ಟು ದಬ್ಬುತಾ ಬರುವ ನೀರಿಗೆ ಇಷ್ಟೊಂದು ಹಾತೊರೆಯುವ ನಾವುಗಳು ಮಳೆರಾಯ ಮನೆಯ ಬಾಗಿಲಿಗೆ ಬಂದು ಎಥೇಚ್ಛಾವಾಗಿ ಸುರಿಸುವ ನೀರನ್ನು ಅಷ್ಟೇ ಕಾಳಜಿಯಿಂದ ಸಂರಕ್ಷಿಸದೇ ವ್ಯರ್ಥ ಮಾಡುತ್ತೇವೆ.

ಮಳೆ ನೀರಿನ ಸಂಗ್ರಹ ಹಾಗು ಅಂತರ್ಜಲ ವೃದ್ಧಿ:
ಒಂದು ಮನೆ. ಅದರ ಛಾವಣಿಯ ವಿಸ್ತೀರ್ಣ 500 ಚದರ ಮೀಟರ್ ಎಂದಿಟ್ಟುಕೊಳ್ಳೋಣ. ಆ ಮನೆಯಿರುವ ಊರಿನಲ್ಲಿ ಮಳೆಗಾಲದಲ್ಲಿ ಆಗುವ ಮಳೆಯ ಪ್ರಮಾಣ 800 mm. ಚಾವಡಿಯ ಮೇಲೆ ಸುರಿಯುವ ಅಷ್ಟೂ ಮಳೆಯ ನೀರನ್ನು ಸಂಗ್ರಹಿಸಿದರೆ (1 mm of rain = 1 liter of water ) ಆಗುವ ನೀರಿನ ಪ್ರಮಾಣ 350000 ಲೀಟರ್! ಛಾವಣಿಯಿಂದ ಬೀಳುವ ನೀರನ್ನು ಇದ್ದಿಲು ಹಾಗು ಮರಳಿನ ಮುಖಾಂತರ ಹಾಲಾಯಿಸಿದಾಗ ಬಾಗಶಃ ನೀರು ಶುದ್ಧಿಯಾಗುತ್ತದೆ. ಪರೀಕ್ಷೆಯ ವಿನ್ಹಾಕುಡಿಯಲು ಅಷ್ಟೊಂದು ಯೋಗ್ಯವಲ್ಲದಿದ್ದರೂ ಮನೆಯ ಇತರ ಕೆಲಸಗಳಿಗೆ ಹೀಗೆ ಸಂಗ್ರಹಿಸಿಟ್ಟ ನೀರನ್ನು ಉಪಯೋಗಿಸಬಹುದು. ಒಂದು ಕುಟುಂಬದ ದೈನಂದಿಂದ ಬಳಕೆ 1000 ಲೀಟರ್ ಆದರೂ (350000/1000) ಉತ್ತಮ ಮಳೆಯಾಗುವ ಪ್ರದೇಶದಲ್ಲಿ ಮಳೆನೀರಿನಲ್ಲೇ ವರ್ಷಪೂರ್ತಿ ಜೀವನ ಸಾಗಿಸಬಹುದೆಂಬ ಸಾಧ್ಯತೆಯ ಮಾತು ಸುಳ್ಳಲ್ಲ!! ಮೆನೆ ಮುಂದೆಯೇ ನಿರ್ಮಿಸುವ ನೀರಿನ ಟ್ಯಾಂಕ್ಗೇ ಈ ರೀತಿಯ ವ್ಯವಸ್ಥೆ ಬಾರಿ ಪ್ರಯೋಜನವನ್ನು ನೀಡಬಲ್ಲದು. ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ಇದೆ ವ್ಯವಸ್ಥೆಯನ್ನು ಕೆಲ ಮನೆಗಳು ಒಟ್ಟಾಗಿ ಸೇರಿ ಹತ್ತಿರದ ಜಲಾಶಯಕ್ಕೆ ಅಥವಾ ಅಣೆಕಟ್ಟಿಗೆ ನೀರಿನ ಪೈಪುಗಳನ್ನು ಜೋಡಿಸಿದರೆ ಅದರ ಇದರ ಪ್ರಯೋಜನ ಇನ್ನೂ ಹೆಚ್ಚು! ಈ ಬಗ್ಗೆ ನಮ್ಮಲ್ಲಿ ಸಾಕಷ್ಟು ಮಾಹಿತಿ ಇದ್ದರೂ ಅನುಷ್ಠಾನದ ಮನೋಭಾವನೆ ಪ್ರತಿಯೊಬರಲ್ಲೂ ಬರಬೇಕು. ಮಳೆ ನೀರಿನ ಸಂರಕ್ಷಣೆ ಪ್ರಸ್ತುತ ಕಾಲಮಾನಕೆ ಒಂದು ಉತ್ತಮ ಪರಿಹಾರವಾಗಬಲ್ಲದು.
ಲಕ್ಷ್ಮಣ್ ಸಿಂಗ್. ರಾಜಸ್ಥಾನದ ಬರಡು ಭೂಮಿಯಲ್ಲೂ ಎಥೇಚ್ಚವಾಗಿ ಹಸಿರನ್ನು ಹೊತ್ತಿಸಿದ ಈತ ಕೆಲ ವರ್ಷದ ಹಿಂದೆ ಮಾದ್ಯಮದಲ್ಲಿ ಬಹಳ ಸುದ್ದಿ ಮಾಡಿದ್ದ ವ್ಯಕ್ತಿ. ಅಲ್ಲಿನ ಬರಡು ನೆಲದ ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು ಆತ ಕೈಗೊಂಡ 'ಚೌಕ' ಪದ್ದತಿ ದೇಶದಲ್ಲೆಲ್ಲ ಹೆಸರು ಮಾಡಿತು. ಹಳ್ಳಿಯ ಸುತ್ತ ಮುತ್ತ ಚೌಕಾಕಾರದ ಗುಂಡಿಗಳನ್ನು ತೆಗೆದು ಮಳೆಯ ನೀರು ಅದರಲ್ಲಿ ಇಂಗುವಂತೆ ಮಾಡಿ ಊರಿನ ಅಂತರ್ಜಲದ ಮಟ್ಟವನ್ನು ಸಾಕಷ್ಟು ಹೆಚ್ಚಿಸಿ ಹೊಲಗದ್ದೆಗಳ್ಳಲ್ಲಿ ಹಸಿರನ್ನು ಬೆಳೆಸಿದ ಈತನ ಶ್ರಮವನ್ನು ದೇಶವೇ ಕೊಂಡಾಡಿತು. ಅಂತರ್ಜಲವನ್ನು ಹೆಚ್ಚಿಸುವ ಇಂತಹ ಸುಲಭ ಸರಳ ಮಾರ್ಗವನ್ನು ಅನುಸರಿಸಿ, ಪೋಲಾಗುವ ನೀರಿನಿಂದ ಕ್ಷೀಣಿಸುತ್ತಿರುವ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಅರಿವು ನಮ್ಮಲ್ಲಿ ಹಾಗು ನಮ್ಮ ರೈತರಲ್ಲಿ ಮೂಡಬೇಕು. ಹಳ್ಳಿ ಹಳ್ಳಿಯಲ್ಲೂ ಒಬ್ಬ ಲಕ್ಷ್ಮಣ್ ನಿಂಗ್ ಹುಟ್ಟಬೇಕು.


ಡಿಸಾಲೆನೇಷನ್ :
ಇತ್ತೇಚೆಗೆ ಎಲ್ಲೆಲ್ಲೂ ಚರ್ಚೆಯಲ್ಲಿರುವ ವಿಷಯ ಸಮುದ್ರದ ನೀರಿನ ಡಿಸಾಲೆನೇಷನ್. ಅಂದರೆ ಸಮುದ್ರದ ನೀರಿನ ಉಪ್ಪಿನ ಅಂಶವನ್ನು ತೆಗೆದು ಅದನ್ನು ಉಪಯೋಗಿಸಲು ಯೋಗ್ಯವಾದ ನೀರನ್ನಾಗಿ ಮಾಡುವ ಪ್ರಕ್ರಿಯೆ. 'ಹೌದಲ್ಲ, ಸಮುದ್ರದ ಅಷ್ಟೂ ನೀರನ್ನು ಡಿಸಾಲೆನೇಷನ್ ಮಾಡಿದರೆ ಸಮಸ್ಯೆ ಬಗೆಹರಿದೆ ಹೋಯಿತಲ್ಲ, ಇದರ ಅನುಷ್ಠಾನಕ್ಕೆ ಇನ್ನೂಏಕೆ ಮೀನಾ-ಮೇಶ?' ಎಂದು ಮೂಗಿನ ಮೇಲೆ ಬೆರೆಳಿಟ್ಟುಕೊಂಡರೆ ಅದು ತಪ್ಪೇನಿಲ್ಲ. ನಿಜ, ಡಿಸಾಲಿನೇಶನ್ ಎಂಬುದು ಪ್ರಸ್ತುತ ನೀರಿನ ಸಮಸ್ಯೆಗೆ ಒಂದು ಪರಿಣಾಮಕಾರಿ ಹಾಗು ಸರಳ ಪರಿಹಾರ. ಆದರೆ ಅದು ಎಷ್ಟೇ ಸರಳವಾದರೂ ಇಂತಹ ಒಂದು ಘಟಕದ ನಿರ್ಮಾಣಕ್ಕೆ ತಗುಲುವ ವೆಚ್ಚ ಬಲು ಹೆಚ್ಚು. ಕೇವಲ ಹಣದ ವಿಚಾರವಾಗಿದ್ದರೆ ಆಗಬುಹುದಿತ್ತೇನೋ ಆದರೆ ಇದಕ್ಕೆ ಅಷ್ಟೇ ಪ್ರಮಾಣದಲ್ಲಿ ಇಂಧನ ಅಥವಾ ವಿದ್ಯುತ್ನ ಅವಶ್ಯಕತೆಯೂ ಇದೆ. ಇಷ್ಟೆಲ್ಲಾ ಹೂಡಿಕೆ ಮಾಡಿ ನೀರನ್ನು ಉತ್ಪಾದಿಸಿದರೂ ಕೊನೆಗೆ ಅದಕ್ಕೆ ತಗುಲುವ ವೆಚ್ಚ ಬೇರೆ ವಿಧಾನದಲ್ಲಿ ತಗುಲುವ ವೆಚ್ಚಕ್ಕಿಂತ ಎಷ್ಟೋ ಪಟ್ಟು ಹೆಚ್ಚಿರುತ್ತದೆ. ಹಾಗಾಗಿ ಎಥೇಚ್ಚವಾಗಿ ಹಣ ಹಾಗು ಇಂಧನದ ಲಭ್ಯವಿರುವ ದೇಶಗಳಲ್ಲೇ ಈ ಪದ್ದತಿ ಹೆಚ್ಚಾಗಿ ಚಾಲ್ತಿಯಲ್ಲಿರುವುದನ್ನು ಕಾಣಬಹುದು. ಆದ ಕಾರಣ ಡಿಸಾಲೆನೇಷನ್ ಘಟಕಗಳು ನಮ್ಮ ದೇಶದಲ್ಲಿ ತೀರಾ ವಿರಳ. ಆದ ಮಾತ್ರಕ್ಕೆ ಈ ಪ್ರಕ್ರಿಯೆ ನಮ್ಮಲ್ಲಿ ಸಾದ್ಯವೇ ಇಲ್ಲವೆನೆಂದಲ್ಲ. ಸೌರ ಶಕ್ತಿ ಹಾಗು ನಮ್ಮ ವಿಜ್ಞಾನಿಗಳ ಯುಕ್ತಿ ಮುಂದಿನ ದಿನಗಳಲ್ಲಿ ಇದಕೊಂಡು ಸರಳ ಪರಿಹಾರವನ್ನು ಕಂಡುಹಿಡಿಯುವ ಸನಿಹದಲ್ಲಿದೆ. ಒಂದು ಪಕ್ಷ ಪರಿಹಾರ ಲಭಿಸಿದ್ದೇ ಆದಲ್ಲಿ ದೇಶದ ಭಾಗಶಃ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ.

ಅರಣ್ಯಕರಣ :
ಕಾಡು. ಸಕಲ ಜೀವರಾಶಿಗಳಿಗೂ ಆಶ್ರಯತಾಣವಾಗಿರುವ ಕಾಡು, ಮಳೆಯ  ಆಗಮನಕ್ಕೂ ಹಾಗು ಮಳೆನೀರ ಸಂರಕ್ಷಣೆಗೂ ಇರುವ ಏಕ ಮಾತ್ರ ಆಧಾರ. ದ್ಯುತಿಸಂಶ್ಲೇಷಣೆಯ (Photosynthesis) ಪ್ರಕ್ರಿಯೆಯಿಂದ ಗಿಡಮರಗಳ ಎಲೆಗಳಿಂದ ಆವಿಯಾಗುವ ನೀರು ಘನೀಕರಣಗೊಂಡು ಮೋಡವಾಗಿ ಪುನ್ಹ ಧರೆಗೆ ಬೀಳುತ್ತದೆ. ಅಲ್ಲದೆ ಹೆಚ್ಚು ಮರಗಳಿದ್ದ ಕಡೆ ಬಿದ್ದ ನೀರು, ನೆಲದೊಳಗೆ ಬಸಿದು ಅಂತರ್ಜಲದ ಮಟ್ಟ ಕೂಡ ಹೆಚ್ಚುತ್ತದೆ. ಪುನ್ಹ ಇದೆ ನೀರು ಎಲೆಗಳವರೆಗೂ ತಲುಪಿ ಪುನಃ ಆವಿಯಾಗಿ ಮೋಡವಾಗಿ ಮಳೆಯಾಗುತ್ತದೆ. ಇದೆ ಮಳೆಯ ಚಕ್ರ.
ಹೆಚ್ಚುತಿರುವ  ಅರಣ್ಯನಾಶ  ಪ್ರಕಿಯೆಗೆ ವ್ಯತಿರಿಕ್ತವಾಗಿ ಪರಿಣಮಿಸಿದೆ. ಒಂದೆಡೆ ಮಳೆಯ ಪ್ರಮಾಣ ಕಡಿಮೆಯಾದರೆ ಇನ್ನೊಂದೆಡೆ ಮರಗಿಡಗಳ ಅಭಾವವದಿಂದ ಧರೆಗೆ ಬೀಳುವ ಮಳೆನೀರು ಒಂದೆಡೆ ನಿಲ್ಲದೆ,ಹರಿದು ಸಮುದ್ರವನ್ನುಸೇರುತ್ತದೆ. ಹೀಗೆ ಅಂತರ್ಜಲದ ಮಟ್ಟವೂ ಕ್ಷೀಣಿಸತೊಡಗುತ್ತದೆ. ಧರೆಗೆ ಉರುಳುವ ಪ್ರತಿಯೊಂದು ಮರವೂ ಮುಂಬರುವ ನೀರಿನ ಅಭಾವಕ್ಕೆ ಸಾಕ್ಷಿಯಾಗುತ್ತದೆ.   'ಕಾಡು ಬೆಳೆಸಿ ನಾಡು ಉಳಿಸಿ' ಎಂಬ ಶಾಲೆಯಲ್ಲಿ ಹೇಳಿಕೊಟ್ಟ ನಾಣ್ಣುಣಿಯನ್ನು ಮರೆತು ಕಾಡು ಕಡಿದು ನಾಡು ಮಾಡುತ್ತೇವೆ ಆದರೆ ನಾಡ ಮಾಡಿ ನೀರು ಅರೆಸುತ್ತೇವೆ! ಕುಟುಂಬಕೊಂಡು ಮನೆಯಂತೆ, ಮನೆಗೊಂದು ಮರವಿರಬೇಕು. ಅರಣ್ಯಕರಣ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ದೇಶದ ನೀರಿನ ಸಮಸ್ಯೆಗೆ ಇದು ಉತ್ತಮ ಪರಿಹಾರವಾಗಬೇಕು.


ನದಿ ಜೋಡಣೆ ಹಾಗು ಆಣೆಕಟ್ಟು ನಿರ್ಮಾಣ :
ನದಿ ಜೋಡಣೆ ಹಾಗು ಆಣೆಕಟ್ಟು ನಿರ್ಮಾಣ. ನಮ್ಮ ಉತ್ತರ ಭಾರತದಲ್ಲಿ ಪ್ರತಿವರ್ಷಅತಿವೃಷ್ಟಿಯಿಂದ ಸಂಭವಿಸುವ ಸಾವು-ನೋವು, ಬೆಳೆ ಹಾನಿ ತುಂಬ ಸಾಮನ್ಯ. ಅಲ್ಲದೆ ಅದಷ್ಟೂ ನೀರು ಉಪಯೋಗಿಸಲಾಗದೆ ಪೋಲಾಗುತ್ತಾ ಸಮುದ್ರವನ್ನು ಸೇರುತ್ತದೆ. ಉತ್ತರದಲ್ಲಿ ಅತಿವೃಷ್ಟಿಯಾದರೆ ದಕ್ಷಿಣದಲ್ಲಿ ಅನಾವೃಷ್ಟಿ! ಇದೆ ಅಂಶಗಳನಿಟ್ಟುಕೊಂಡು ಕೆಲವರ್ಷಗಳ ಹಿಂದೆ ಗಂಗಾ ಕಾವೇರಿ ನದಿ ಜೋಡಣೆ ಎಂಬ ಮಹತ್ತರವಾದ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಗಾಗಿತ್ತು. ಉತ್ತರ ಭಾರತದ ನದಿಗಳನ್ನು ದಕ್ಷಿಣ ಭಾರತದ ನದಿಗಳೊಟ್ಟಿಗೆ ಸೇರಿಸಿ ದಕ್ಷಿಣದ ನೀರಿನ ಅಭಾವಕ್ಕೆ ಒಂದು ಸೂಕ್ತ ಪರಿಹಾರವನ್ನು ಕೊಡುವುದಲ್ಲದೆ ಜೋಡಣೆಯ ಹಾದಿಯ ಸೂಕ್ತ ಸ್ಥಳಗಳಲ್ಲಿ ಅಣೆಕಟ್ಟು ನಿರ್ಮಿಸುವ ಉದ್ದೇಶವೂ ಈ ಯೋಜನೆಯದಾಗಿತ್ತು. ಹೀಗೆ ಆಣೆಕಟ್ಟು ನಿರ್ಮಿಸಿ ನೀರನ್ನು ಶೇಖರಿಸಿ ವ್ಯವಸಾಯ ಹಾಗು ಕುಡಿಯುವ ನೀರಿಗೆ ಒಂದು ಶಾಶ್ವತ ಪರಿಹಾರವನ್ನು ಒದಗಿಸುವುದಲ್ಲದೇ ಸಾಕಷ್ಟುವಿದ್ಯುತ್ ಉತ್ಪಾದನೆಯೂ ಸಹ ಇದರಿಂದ ಸಾಧ್ಯವಿತ್ತು. ಇಂದು ನಾವು ಕಾಣುವ ಕಾವೇರಿ, ಮಹದಾಯಿ, ಕೃಷ್ಣಾ ಹಾಗು ಇನ್ನು ಹಲವು ಜಲವಿವಾದಗಳಿಗೆ ಈ ಯೋಜನೆ ಪರಿಹಾರವಾಗುತ್ತಿತ್ತು. ಆದರೆ ಅರ್ಥವಿಲ್ಲದ ಪೊಳ್ಳುವಾದ ಹಾಗು ಇದರ ನಿಜವಾದ ಸದುದ್ದೇಶವನ್ನು ರಾಜ್ಯಸರ್ಕಾರಗಳಿಗೆ ಮನವರಿಕೆ ಮಾಡಿಕೊಡದ ಕೇಂದ್ರಸರ್ಕಾರಗಳು ಆರ್ಥಿಕಬಿಕ್ಕಟ್ಟು, ಪರಿಸರ ನಾಶವೆಂಬ ಸಬೂಬುಗಳನ್ನು ಕೊಟ್ಟು ಈ ಯೋಜನೆಯ ಅನುಷ್ಠಾನವನ್ನು ಮರೀಚಿಕೆಯಾಗಿಸಿದವು. ಇಂದು ಇದೆ ಬಗೆಯ ಹಲವು ನದಿ ಜೋಡಣೆ ಯೋಜನೆಗಳು ಯಶಸ್ವೀಯಾಗಿ ನಿರ್ಮಾಣಗೊಂಡು ಸಾಕಷ್ಟು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿವೆ. ಹಾಗಾಗಿ ನಮ್ಮ ಸರ್ಕಾರಗಳು ಇಂಥಹ ಬಹುಪಯೋಗಿ ಯೋಜನೆಗಳ ಬಗ್ಗೆ ತಾರ್ಕಿಕವಾದ ಗಮನ ಹರಿಸುವುದು ಹೆಚ್ಚು ಸೂಕ್ತ.


ಹನಿ ನೀರಾವರಿ ಪದ್ದತಿ:
ಮೊದಲೇ ಹೇಳಿದಂತೆ ಭಾರತದ ಒಟ್ಟು ಲಭ್ಯವಿರುವ ನೀರಿನಲ್ಲಿ ಸುಮಾರು 70 ರಿಂದ 80 ರಷ್ಟು ನೀರನ್ನು ಕೃಷಿಗಾಗೇ ಉಪಯೋಗಿಸಲಾಗುತ್ತದೆ. ಇಷ್ಟೊಂದು ಪ್ರಮಾಣದ ನೀರನ್ನು ಉಪಯೋಗಿಸಿಯೂ ಕೃಷಿಯಲ್ಲಿ ನೀರಿನ ಕೊರತೆ ಕಾಡುತಿರುವುದು ವಿಷಾದನೀಯ. ಹಾಗಾದರೆ ಬಳಸುವ ಅಷ್ಟೂ ನೀರು ಕೃಷಿಗೆ ಸಾಕಾಗದೆ ಹೋಗುತ್ತದೆಯೋ ಅಥವಾ ಇಲ್ಲೂ ಸಹ ಹೆಚ್ಚಿನ ಪ್ರಮಾಣದ ನೀರು ಪೋಲಾಗಿ ಹೋಗುತ್ತದೆಯೋ ಅನ್ನುವುದೇ ಪ್ರೆಶ್ನೆ. ನಮಗೆ ತಿಳಿದಿರುವಂತೆ ಹನಿ ನೀರಾವರಿ ಪದ್ದತಿ ಕೃಷಿಯಲ್ಲಿ ಕಂಡ ಅದ್ಬುತ ಸುಧಾರಣೆಗಲ್ಲೊಂದು. ಈ ಪದ್ದತಿಯಿಂದ ಮಣ್ಣಿನ ಸವಕಳಿಯನ್ನೂ ತಡೆಗಟ್ಟಬಹುದಲ್ಲದೆ ಸಾಮಾನ್ಯ ನೀರಾವರಿ ಪದ್ಧತಿಗಿಂತ ಹೆಚ್ಚಿನ ಇಳುವರಿ ಸಾದ್ಯವಿದೆ. ಸಾಂಪ್ರದಾಯಿಕ ಪದ್ದತಿಯ ನೀರಾವರಿಗಿಂತ ಕೇವಲ ಅರ್ದದಷ್ಟು ನೀರಿನಲ್ಲೇ ಉತ್ತಮ ಫಸಲನ್ನು ಬೆಳೆಯಬಹುದಾದ ವಿಧಾನ. ಒಂದು ಪಕ್ಷ ದೇಶದ ಪ್ರತಿಯೊಬ್ಬ ಕೃಷಿಕನೂ ಹನಿ ನೀರಾವರಿ ಪದ್ದತಿಯನ್ನು ಅಳವಡಿಸಿಕೊಂಡನೆಂದರೆ ಅದೆಷ್ಟು ನೂರು ಬಿಲಿಯನ್ ಕ್ಯೂಬಿಕ್ ಮೀಟರ್ನಷ್ಟು ನೀರನ್ನು ಉಳಿಸಬಹುದು ಎಂಬುದು ಗಮನಾರ್ಹ ವಿಷಯ! ಇಂತಹ ಸರಳ ಬಹುಪಯೋಗಿ ನೀರಾವರಿ ವಿಧಾನವನ್ನೂ ಅಳವಡಿಸ್ಕೊಳ್ಳಲು ಹಿಂದೇಟೇಕೆ?? ಈ ನಿಟ್ಟಿನಲ್ಲಿ ನಮ್ಮ ರೈತರು ಜಾಗೃತರಾಗಿ ಇಂತಹ ಪರಿಣಾಮಕಾರಿ ಪದ್ದತಿಯನ್ನು ಅಳವಡಿಕೊಳ್ಳುವುದು ಅವಶ್ಯಕವಾಗಿದೆ.

ಒಟ್ಟಿನಲ್ಲಿ ನಮ್ಮಲ್ಲಿ ನೀರಿನ ಸಮಸ್ಯೆ ಇರುವುದಂತು ನಿಜ. ಆದ ಮಾತ್ರಕ್ಕೆ ಕೊಂಚ ಹೆಚ್ಚಿರುವ ಅಥವಾ ಬೇರ್ಯಾರೊ ಸಂಗ್ರಹಿಸಿಟ್ಟ ನೀರಿನ ಮೇಲೆ ಕಣ್ಣಾಕುವುದು ಶೋಭೆ ತರುವ ವಿಚಾರವಲ್ಲ. ಇಪ್ಪತ್ತೊಂದನೇ ಶತಮಾನದಲ್ಲಿರಿವ ನಾವುಗಳು ನಮ್ಮ ಬೊಗಸೆಯ ನೀರನ್ನು ಕಾಪಾಡಿಕೊಳ್ಳುವಷ್ಟಾದರೂ ವೈಜ್ಞಾನಿಕರಾಗಬೇಕು. ಪ್ರಸ್ತುತ ಜಾಗತಿಕ ಮಟ್ಟದ ಹವಾಮಾನವನ್ನು ಅರಿತು ನೀರನ್ನು ಮಿತಿಯಾಗಿ ವ್ಯಹಿಸಬೇಕು. ಆ ಮನೋಭಾವನೆ ನಮ್ಮಲ್ಲಿ ಮೂಡಬೇಕು ಹಾಗು ಮೂಡಿಸಬೇಕು. ಅತಿವೃಷ್ಟಿಯ ಜಾಗಗಳಲ್ಲಿನ ನೀರನ್ನು ಬರಪೀಡಿತ ಪ್ರದೇಶಗಳಿಗೆ ಸಾಗಿಸುವ 'ವೈಜ್ಞಾನಿಕ' ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು. ತುಂಬ ಸರಳ ಹಾಗು ಅಷ್ಟೇ ಪರಿಣಾಮಕಾರಿಯಾದ ನೀರಾವರಿ ಪದ್ದತಿಗಳನ್ನುರೈತರು ಅರಿತು ಅಳವಡಿ ಸಿಕೊಳ್ಳಬೇಕು .ಈ ನಿಟ್ಟಿನಲ್ಲಿ ಪಾರದರ್ಶಕ ಚರ್ಚೆಯಾಗಬೇಕು .ಇಲ್ಲವೆಂದರೆ ಮುಂದೊಂದು ದಿನ ಅದೆಷ್ಟೇ ಹಣ ಸುರಿದರೂ, ಬಡಿದಾಡಿಕೊಂಡರೂ ಸಹ ಒಂದು ತೊಟ್ಟು ನೀರು ಉತ್ಪತಿಯಾಗದಿರಬಹುದು. ಈ ನಿಟ್ಟಿನಲ್ಲಿ ನಮ್ಮ ನಾಯಕರ, ರೈತರ, ಹೆಚ್ಚಾಗಿ ನಮ್ಮ ನಿಮ್ಮೆಲ್ಲರ ಚಿಂತನೆ ತುಂಬಾ ಮಹತ್ವವಾದುದು.